ನಿಮಗೊಬ್ಬ ರಕ್ಷಕ ದೂತನಿದ್ದಾನೊ?
ನಿಮಗೊಬ್ಬ ರಕ್ಷಕ ದೂತನಿದ್ದಾನೆಂದು ನೀವು ನಂಬುತ್ತೀರೊ? ಅನೇಕರು ಹೌದೆನ್ನುತ್ತಾರೆ. ಪಶ್ಚಿಮ ಕೆನಡದಲ್ಲಿ ಒಬ್ಬ ಮಹಿಳೆಗೆ, ದೇವದೂತರೊಂದಿಗೆ ಸಂಪರ್ಕವನ್ನಿಡುವ ಒಂದು ವಿಶೇಷ ವರದಾನ ಇದೆಯೆಂದು ಹೇಳಲಾಗುತ್ತದೆ. ನೀವು ಅವಳಿಗೆ 200 ಡಾಲರುಗಳೊಂದಿಗೆ ನಿಮ್ಮ ಪೂರ್ಣ ಹೆಸರನ್ನು ಕೊಡುವಲ್ಲಿ, ನಿಮ್ಮ ರಕ್ಷಕ ದೂತನ ಸಂಪರ್ಕ ಮಾಡಿಸಿಕೊಡುವೆನೆಂದು ಅವಳು ಹೇಳಿಕೊಳ್ಳುತ್ತಾಳೆ. ಮೊದಲು, ಅವಳು ಒಂದು ಮೇಣದಬತ್ತಿಯ ಬೆಳಕಿನ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ಧ್ಯಾನಮಾಡುತ್ತಾಳೆ. ನಂತರ, ನಿಮಗಾಗಿರುವ ಒಂದು ಸಂದೇಶವನ್ನು ನಿಮ್ಮ ದೇವದೂತನು ಅವಳಿಗೆ ಕೊಡುವ ದರ್ಶನ ಅವಳಿಗಾಗುತ್ತದೆ. ಒಂದು ಬೋನಸ್ ಆಗಿ, ಆ ಹೆಂಗಸು, ನಿಮ್ಮ ದೇವದೂತನು ಹೇಗೆ ಕಾಣುತ್ತಾನೆಂದು ಚಿತ್ರ ಬಿಡಿಸಿ ತೋರಿಸುತ್ತಾಳೆ.
ಕೆಲವು ಜನರಿಗೆ, ಇದು ಫ್ರೆಂಚ್ ರಾಜನಾದ IXನೆಯ ಲೂಯಿಯ ಬಗ್ಗೆ ಇರುವ ಒಂದು ಕಥೆಗೆ ಸಮಾನವಾಗಿರುವಂತೆ ತೋರಬಹುದು. ಪ್ರಧಾನ ದೇವದೂತನಾದ ಮೀಕಾಯೇಲನ ರೆಕ್ಕೆಗಳಿಂದ ಉದುರಿದಂತಹದ್ದು ಎಂದು ಹೇಳಲಾಗುವ ಅತಿ ದುಬಾರಿಯಾದ ಗರಿಗಳನ್ನು ಅವನು ಖರೀದಿಸಿದನಂತೆ. ಈ ಕಥೆಯನ್ನು ಅನೇಕರು ಸಂದೇಹಿಸಬಹುದಾದರೂ, ಅದೇ ಸಮಯದಲ್ಲಿ, ಈ ಕೆನಡದ ಸ್ತ್ರೀಯ ಮಾತುಗಳನ್ನು ಅವರು ಸ್ವಲ್ಪವೂ ಸಂದೇಹಿಸಲಿಕ್ಕಿಲ್ಲ.
ದೇವದೂತರಲ್ಲಿ ಆಕರ್ಷಣೆ
ಇತ್ತೀಚಿನ ವರ್ಷಗಳಲ್ಲಿ, ದೇವದೂತರ ಕುರಿತ ಆಸಕ್ತಿಯು ತೀರ ಹೆಚ್ಚಾಗುತ್ತಿದೆ. ಟೆಲಿವಿಷನ್, ಚಲನ ಚಿತ್ರಗಳು, ಪುಸ್ತಕಗಳು, ಪತ್ರಿಕೆಗಳು, ಮತ್ತು ವಾರ್ತಾಪತ್ರಿಕೆಗಳಲ್ಲಿ, ಗಂಭೀರವಾಗಿ ಅಸ್ವಸ್ಥರಾಗಿರುವವರನ್ನು ಮತ್ತು ವಿಯೋಗಿಗಳನ್ನು ಸಂತೈಸುವ, ವಿವೇಕವನ್ನು ದಯಪಾಲಿಸುವ, ಮತ್ತು ವ್ಯಕ್ತಿಗಳನ್ನು ಮರಣದಿಂದ ಕಾಪಾಡುವ ದೇವದೂತರ ಕುರಿತಾಗಿ ತಿಳಿಸಲಾಗುತ್ತದೆ. ಅಮೆರಿಕದಲ್ಲಿ, ಸುಮಾರು 2 ಕೋಟಿ ಪ್ರೇಕ್ಷಕರು, ಜನರ ಜೀವಿತಗಳಲ್ಲಿ ದೇವದೂತರ ಪ್ರವೇಶವನ್ನು ಚಿತ್ರಿಸುವ ಒಂದು ಸಾಪ್ತಾಹಿಕ ಟಿವಿ ಧಾರಾವಾಹಿಯನ್ನು ನೋಡುತ್ತಾರೆ. ಒಂದು ಪುಸ್ತಕದಂಗಡಿಯು, ದೇವದೂತರ ಕುರಿತಾದ 400ಕ್ಕಿಂತಲೂ ಹೆಚ್ಚು ಪುಸ್ತಕಗಳ ಪಟ್ಟಿಮಾಡುತ್ತದೆ.
ಒಂದು ಹೊಸ ಪುಸ್ತಕವು, ಯುದ್ಧದಲ್ಲಿರುವ ಸೈನಿಕರ ಜೀವಗಳನ್ನು ರಕ್ಷಕ ದೂತರುಗಳು ಕಾಪಾಡಿದ ಅನುಭವಗಳನ್ನು ತಿಳಿಸುತ್ತದೆ. ವಾಹನದ ಬಂಪರ್ನಲ್ಲಿ ಅಂಟಿಸಲ್ಪಡುವ ಸ್ಟಿಕ್ಕರ್ಗಳು, ಆ ವಾಹನದ ಚಾಲಕರು ರಕ್ಷಕ ದೂತರಿಂದ ಸಂರಕ್ಷಿಸಲ್ಪಟ್ಟಿದ್ದಾರೆಂದು ತಿಳಿಸುತ್ತವೆ. ಸಂಸ್ಥೆಗಳು, ಸಮ್ಮೇಳನಗಳು, ಮತ್ತು ಸೆಮೀನಾರ್ಗಳು, ದೇವದೂತರ ಕುರಿತಾದ ಅಧ್ಯಯನವನ್ನು ಉತ್ತೇಜಿಸುತ್ತವೆ ಮತ್ತು ದೇವದೂತರೊಂದಿಗೆ ಸಂವಾದಿಸಲು ಜನರಿಗೆ ಸಹಾಯಮಾಡುತ್ತವೆಂದು ಹೇಳಲಾಗುತ್ತದೆ.
ಐಲೀನ್ ಫ್ರೀಮ್ಯಾನ್, ದೇವದೂತರ ಕುರಿತಾದ ಮೂರು ಪುಸ್ತಕಗಳು ಮತ್ತು ಅವರಿಗಾಗಿಯೇ ಮೀಸಲಾಗಿಟ್ಟಿರುವ ಒಂದು ಪತ್ರಿಕೆಯ ಪ್ರಕಾಶಕಳಾಗಿದ್ದಾಳೆ. ಅವಳು ಪ್ರತಿಪಾದಿಸುವುದು: “ಸ್ವರ್ಗದಲ್ಲಿ ಎಷ್ಟು ದೇವದೂತರಿದ್ದಾರೊ, ಅಷ್ಟೇ ರಕ್ಷಕ ದೂತರು ಭೂಮಿಯಲ್ಲೂ ಇದ್ದಾರೆಂದು ನಾನು ನಂಬುತ್ತೇನೆ. ಸ್ವರ್ಗದಲ್ಲಿ ದೇವರನ್ನು ಸ್ತುತಿಸುವುದು ಮಾತ್ರವಲ್ಲ, ಭೂಮಿಯ ಮೇಲೆ ಮಾನವರ ಮತ್ತು ಬೇರೆಲ್ಲ ಸೃಷ್ಟಿಯ ಆರೈಕೆಯನ್ನು ಮಾಡುವುದೂ ಈ ದೇವದೂತರ ಕರ್ತವ್ಯಗಳಲ್ಲಿ ಒಳಗೂಡಿದೆ. ಗರ್ಭ ಅಂಕುರಿಸುವಾಗಲೇ ನಮ್ಮಲ್ಲಿ ಪ್ರತಿಯೊಬ್ಬರಿಗೆ ಒಬ್ಬ ರಕ್ಷಕ ದೂತನನ್ನು ನೇಮಿಸಲಾಗುತ್ತದೆ. ಅವನು, ಗರ್ಭದಲ್ಲಾಗುವ ನಮ್ಮ ಬೆಳವಣಿಗೆ, ಜನನ, ಮತ್ತು ಈ ಲೋಕದಲ್ಲಿ ನಮ್ಮ ಜೀವಿತದ ಮೇಲೆ ಕಣ್ಣಿಡುತ್ತಾನೆ. ಈ ಲೋಕದಿಂದ ನಾವು ಬಂಧಮುಕ್ತರಾದಾಗ, ಅವನು ನಮ್ಮನ್ನು ಸ್ವರ್ಗದ ಮಹಿಮೆಗೆ ಮಾರ್ಗದರ್ಶಿಸುವ ವರೆಗೂ ಇದನ್ನು ಮುಂದುವರಿಸುತ್ತಾನೆ.” ಇದು, ರಕ್ಷಕ ದೂತರ ಕುರಿತು ಇರುವ ಒಂದು ಜನಪ್ರಿಯ ನೋಟದ ಉತ್ತಮ ವರ್ಣನೆಯಾಗಿದೆ.
ಈ ಒತ್ತಡಭರಿತ ಮತ್ತು ಕಷ್ಟಕರ ಸಮಯಗಳಲ್ಲಿ, ನಮಗೊಬ್ಬ ಸ್ವಂತ ರಕ್ಷಕ ದೂತನಿದ್ದಾನೆ ಮತ್ತು ಅವನಿಗೆ ನಮ್ಮನ್ನು ಸಂರಕ್ಷಿಸುವ ಕರ್ತವ್ಯವಿದೆ ಎಂದು ನಂಬುವುದು, ಮನಸ್ಸಿಗೆ ಹಿಡಿಸುವ ಸಂಗತಿಯಾಗಿದೆ. ಆದರೆ ದೇವರ ವಾಕ್ಯವಾದ ಬೈಬಲ್ ಇದರ ಕುರಿತಾಗಿ ಏನು ಹೇಳುತ್ತದೆ? ನಾವು ದೇವದೂತರನ್ನು ಸಂಪರ್ಕಿಸಲು ಪ್ರಯತ್ನಿಸಬೇಕೊ? ನಮ್ಮ ನೈತಿಕ ಮಟ್ಟಗಳು ಮತ್ತು ಧಾರ್ಮಿಕ ನಂಬಿಕೆಗಳ ಕುರಿತು ಅವರು ಆಸಕ್ತಿವಹಿಸುತ್ತಾರೊ? ನಾವು ಅವರಿಂದ ಯಾವ ಸಹಾಯವನ್ನು ಅಪೇಕ್ಷಿಸಬಹುದು? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಉತ್ತರಿಸಲಾಗುವುದು.