ಕ್ರೈಸ್ತ ಸಭೆ—ಬಲಗೊಳಿಸುವ ನೆರವಿನ ಒಂದು ಮೂಲ
ಪಾಪೀ ಎಂಬ 20ರ ಹರೆಯದ ಸ್ತ್ರೀಯು, ತನ್ನ ಹೆತ್ತವರೊಂದಿಗೆ ಮುಕ್ತ ಮಾತುಕತೆಯ ಕೊರತೆಯಿಂದಾಗಿ ಮನೆಯಲ್ಲಿ ಉದ್ಭವಿಸಿದ ಒಂದು ದುಃಖಕರ ಸನ್ನಿವೇಶದಿಂದ ಹತಾಶಳಾಗಿದ್ದಳು.a ಒಬ್ಬ ಕ್ರೈಸ್ತ ಹಿರಿಯನು ಮತ್ತು ಅವನ ಪತ್ನಿಯೊಂದಿಗೆ ತನ್ನ ಅಂತರಂಗವನ್ನು ತೋಡಿಕೊಂಡ ಮೇಲೆ, ಅವಳು ಅವರಿಗೆ ಬರೆದುದು: “ನನ್ನೊಂದಿಗೆ ಮಾತಾಡಲು ಸಮಯ ತೆಗೆದುಕೊಂಡದ್ದಕ್ಕಾಗಿ ನಿಮಗೆ ತುಂಬ ಉಪಕಾರ. ನೀವು ನನ್ನ ಕುರಿತು ಚಿಂತಿಸುತ್ತೀರೆಂಬ ಅರಿವು ವರ್ಣಿಸಲಸಾಧ್ಯವಾದ ಅನುಭವವಾಗಿದೆ. ನಾನು ನೆಚ್ಚಬಹುದಾದ ಮತ್ತು ಮಾತಾಡಬಹುದಾದ ಜನರನ್ನು ನೀಡಿದಕ್ಕಾಗಿ ಯೆಹೋವನಿಗೆ ಆಭಾರಿಯಾಗಿದ್ದೇನೆ.”
ಇತ್ತೀಚೆಗೆ ವಿಧವೆಯಾದ ಇಬ್ಬರು ಹದಿವಯಸ್ಕ ಮಕ್ಕಳಿರುವ ಟೂಲಾ, ಭಾವನಾತ್ಮಕ ಹಾಗೂ ಆರ್ಥಿಕ ತೊಂದರೆಯಲ್ಲಿ ಸಿಲುಕಿಕೊಂಡಿದ್ದಳು. ಅವಳನ್ನು ಮತ್ತು ಅವಳ ಮಕ್ಕಳನ್ನು ಸಭೆಯ ಒಂದು ಕ್ರೈಸ್ತ ವಿವಾಹಿತ ದಂಪತಿಗಳು ಕ್ರಮವಾಗಿ ಭೇಟಿಮಾಡಿ ಬಲಗೊಳಿಸಿದರು. ತನ್ನ ಸನ್ನಿವೇಶವನ್ನು ಯಶಸ್ವಿಯಾಗಿ ಜಯಿಸಿದ ಮೇಲೆ, ಅವಳು ಅವರಿಗೊಂದು ಕಾರ್ಡನ್ನು ಕಳುಹಿಸಿ, ತಿಳಿಸಿದ್ದು: “ನಾನು ಪ್ರಾರ್ಥನೆಗಳಲ್ಲಿ ನಿಮ್ಮನ್ನು ಸದಾ ನೆನಸಿಕೊಳ್ಳುತ್ತೇನೆ. ನೀವು ನನಗೆ ಸಹಾಯ ನೀಡಿದ ಮತ್ತು ನನ್ನನ್ನು ಬೆಂಬಲಿಸಿದ ಅನೇಕ ಸಂದರ್ಭಗಳನ್ನು ನಾನು ಸದಾ ಜ್ಞಾಪಿಸಿಕೊಳ್ಳುತ್ತಿರುತ್ತೇನೆ.”
ಈ ಲೋಕದ ಹೆಚ್ಚುತ್ತಿರುವ ಒತ್ತಡಗಳ ಕಾರಣ “ಹೊರೆಹೊತ್ತವ”ರೆಂದು ಕೆಲವೊಮ್ಮೆ ನಿಮಗನಿಸುತ್ತದೊ? (ಮತ್ತಾಯ 11:28) “ಕಾಲ ಮತ್ತು ಮುಂಗಾಣದ ಸಂಭವ”ವು ನಿಮ್ಮ ಜೀವಿತವನ್ನು ವೇದನಾಮಯ ಅನುಭವಗಳಿಂದ ಕೆಡಿಸಿದೆಯೊ? (ಪ್ರಸಂಗಿ 9:11, NW) ಹಾಗಾದರೆ ನೀವು ಒಬ್ಬಂಟಿಗರಲ್ಲ. ಏಕೆಂದರೆ, ಸಂಕಟ್ಟಕ್ಕೀಡಾದ ಸಾವಿರಾರು ಜನರು ಈಗಾಗಲೇ ಕಂಡುಕೊಂಡಿರುವಂತೆ, ನೀವು ಸಹ ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯಲ್ಲಿ ಅರ್ಥಪೂರ್ಣ ಸಹಾಯವನ್ನು ಕಂಡುಕೊಳ್ಳಬಹುದು. ಸಾ.ಶ. ಒಂದನೆಯ ಶತಮಾನದಲ್ಲಿದ್ದ ಕೆಲವೊಂದು ಜೊತೆ ವಿಶ್ವಾಸಿಗಳು, ತನಗೆ ‘ಬಲಗೊಳಿಸುವ ನೆರವನ್ನು’ ನೀಡುವವರಾಗಿದ್ದರೆಂದು ಅಪೊಸ್ತಲ ಪೌಲನು ಕಂಡುಕೊಂಡನು. (ಕೊಲೊಸ್ಸೆ 4:10, 11, NW) ತದ್ರೀತಿಯ ಅನುಭವವು ನಿಮಗೂ ಆಗಬಹುದು.
ಬೆಂಬಲ ಮತ್ತು ನೆರವು
ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ, “ಸಭೆ” ಎಂಬ ಪದವು ಎಕ್ಲೀಸೀಯ ಎಂಬ ಗ್ರೀಕ್ ಪದದಿಂದ ಭಾಷಾಂತರಿಸಲ್ಪಟ್ಟಿದ್ದು, ಒಟ್ಟಿಗೆ ಕೂಡಿಬರುವ ಜನರ ಗುಂಪನ್ನು ಅರ್ಥೈಸುತ್ತದೆ. ಆ ಪದದಲ್ಲಿ ಒಕ್ಕಟ್ಟು ಮತ್ತು ಪರಸ್ಪರ ಬೆಂಬಲದ ವಿಚಾರಗಳು ಸೇರಿಕೊಂಡಿವೆ.
ಕ್ರೈಸ್ತ ಸಭೆಯು ದೇವರ ವಾಕ್ಯದ ಸತ್ಯವನ್ನು ಎತ್ತಿಹಿಡಿಯುತ್ತದೆ ಮತ್ತು ಆತನ ರಾಜ್ಯದ ಸುವಾರ್ತೆಯನ್ನು ಪ್ರಕಟಪಡಿಸುತ್ತದೆ. (1 ತಿಮೊಥೆಯ 3:15; 1 ಪೇತ್ರ 2:9) ಅಲ್ಲದೆ, ಅದರೊಂದಿಗೆ ಸಹವಸಿಸುವ ಜನರಿಗೆ ಆತ್ಮಿಕ ಬೆಂಬಲ ಹಾಗೂ ನೆರವನ್ನೂ ನೀಡುತ್ತದೆ. ಅಲ್ಲಿ ವ್ಯಕ್ತಿಯೊಬ್ಬನು, ಪ್ರೀತಿಪರ, ಚಿಂತಿಸುವ ಮತ್ತು ಕಾಳಜಿವಹಿಸುವ ಮಿತ್ರರನ್ನು ಕಂಡುಕೊಳ್ಳಬಹುದು. ಈ ಮಿತ್ರರು ಒತ್ತಡದ ಸಮಯಗಳಲ್ಲಿ ಸಹಾಯ ಮಾಡಲು ಮತ್ತು ಸಂತೈಸಲು ಸಿದ್ಧರೂ ಇಚ್ಛಿಸುವವರೂ ಆಗಿರುತ್ತಾರೆ.—2 ಕೊರಿಂಥ 7:5-7.
ಯೆಹೋವನ ಆರಾಧಕರು ಆತನ ಸಭೆಯಲ್ಲಿ ಸುರಕ್ಷೆ ಹಾಗೂ ಭದ್ರತೆಯನ್ನು ಯಾವಾಗಲೂ ಕಂಡುಕೊಂಡಿದ್ದಾರೆ. ಸಭೆಯಾಗಿ ಕೂಡಿಬರುವ ದೇವಜನರಲ್ಲಿ ತಾನು ಆನಂದವನ್ನು ಮತ್ತು ಭದ್ರತೆಯ ಅನಿಸಿಕೆಯನ್ನು ಅನುಭವಿಸಿರುವುದಾಗಿ ಕೀರ್ತನೆಗಾರನು ತಿಳಿಯಪಡಿಸಿದನು. (ಕೀರ್ತನೆ 27:4, 5; 55:14; 122:1) ತದ್ರೀತಿಯಲ್ಲಿ ಇಂದು, ಕ್ರೈಸ್ತ ಸಭೆಯು ಒಬ್ಬರನ್ನೊಬ್ಬರು ಎತ್ತಿಕಟ್ಟುವ ಮತ್ತು ಉತ್ತೇಜಿಸುವ ಜೊತೆ ವಿಶ್ವಾಸಿಗಳ ಒಂದು ಒಕ್ಕೂಟವಾಗಿದೆ.—ಜ್ಞಾನೋಕ್ತಿ 13:20; ರೋಮಾಪುರ 1:11, 12.
“ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ” ಎಂಬ ಪಾಠವನ್ನು ಸಭೆಯ ಸದಸ್ಯರಿಗೆ ಕಲಿಸಲಾಗುತ್ತದೆ. (ಗಲಾತ್ಯ 6:10) ಅವರು ಪಡೆದುಕೊಳ್ಳುವಂತಹ ಬೈಬಲಾಧಾರಿತ ಶಿಕ್ಷಣವು, ಒಬ್ಬರಿಗೊಬ್ಬರು ಸಹೋದರ ಪ್ರೀತಿ ಮತ್ತು ಕೋಮಲ ವಾತ್ಸಲ್ಯವನ್ನು ತೋರಿಸುವಂತೆ ಪ್ರಚೋದಿಸುತ್ತದೆ. (ರೋಮಾಪುರ 12:10; 1 ಪೇತ್ರ 3:8) ಸಭೆಯಲ್ಲಿರುವ ಆತ್ಮಿಕ ಸಹೋದರ ಸಹೋದರಿಯರು, ದಯಾಪರರೂ ಶಾಂತಿಪ್ರಿಯರೂ ಕೋಮಲ ಸಹಾನುಭೂತಿಯುಳ್ಳವರೂ ಆಗಿರುವಂತೆ ಪ್ರೇರಿಸಲ್ಪಡುತ್ತಾರೆ. (ಎಫೆಸ 4:3) ಅವರು ಕೇವಲ ಔಪಚಾರಿಕ ಆರಾಧಕರಾಗಿರದೆ, ಇತರರ ಕಡೆಗೆ ಪ್ರೀತಿಪರ ಚಿಂತೆಯನ್ನು ತೋರಿಸುತ್ತಾರೆ.—ಯಾಕೋಬ 1:27.
ಆದುದರಿಂದ ಕುಗ್ಗಿಹೋದವರು, ಕುಟುಂಬಸದೃಶ ಬೆಚ್ಚನೆಯ ವಾತಾವರಣವನ್ನು ಸಭೆಯಲ್ಲಿ ಕಂಡುಕೊಳ್ಳುತ್ತಾರೆ. (ಮಾರ್ಕ 10:29, 30) ಒಂದು ಅನ್ಯೋನ್ಯ ಹಾಗೂ ಪ್ರೀತಿಪರ ಗುಂಪಿಗೆ ತಾವು ಸೇರಿದವರೆಂಬ ಅನಿಸಿಕೆಯು ಅವರನ್ನು ಬಲಗೊಳಿಸುತ್ತದೆ. (ಕೀರ್ತನೆ 133:1-3) ಸಭೆಯ ಮೂಲಕ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” “ಸರಿಯಾದ ಹೊತ್ತಿಗೆ” ಪೋಷಣದಾಯಕ ಆತ್ಮಿಕ ಆಹಾರವನ್ನು ಒದಗಿಸುತ್ತಾನೆ.—ಮತ್ತಾಯ 24:45, NW.
ಪ್ರೀತಿಪರ ಮೇಲ್ವಿಚಾರಕರಿಂದ ಸಹಾಯ
ಕ್ರೈಸ್ತ ಸಭೆಯ ಸದಸ್ಯರು, ಆತ್ಮಿಕ ಬೆಂಬಲ ಹಾಗೂ ಉತ್ತೇಜನವನ್ನು ನೀಡುವ ಪ್ರೀತಿಪೂರ್ಣ, ಅರ್ಥಮಾಡಿಕೊಳ್ಳುವ, ಮತ್ತು ಅರ್ಹರಾದ ಕುರಿಪಾಲಕರನ್ನು ಕಂಡುಕೊಳ್ಳಲು ನಿರೀಕ್ಷಿಸಸಾಧ್ಯವಿದೆ. ಇಂತಹ ಗುಣಗಳುಳ್ಳ ಕುರಿಪಾಲಕರು, “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ” ಇದ್ದಾರೆ. (ಯೆಶಾಯ 32:1, 2) ಆತ್ಮನಿಂದ ನೇಮಿತರಾದ ಹಿರಿಯರು ಇಲ್ಲವೆ ಮೇಲ್ವಿಚಾರಕರು, ದೇವರ ಕುರಿಸದೃಶ ಜನರನ್ನು ನೋಡಿಕೊಳ್ಳುತ್ತಾರೆ, ರೋಗಿಗಳನ್ನು ಮತ್ತು ಖಿನ್ನರನ್ನು ಉತ್ತೇಜಿಸುತ್ತಾರೆ, ಮತ್ತು ತಪ್ಪುಮಾಡಿದವರನ್ನು ಪೂರ್ವಸ್ಥಿತಿಗೆ ತರಲು ಪ್ರಯತ್ನಿಸುತ್ತಾರೆ.—ಕೀರ್ತನೆ 100:3; 1 ಪೇತ್ರ 5:2, 3.
ಆದರೆ, ಸಭೆಯ ಹಿರಿಯರ ಮಂಡಳಿಯು, ಜೊತೆ ವಿಶ್ವಾಸಿಗಳು ಎದುರಿಸುವ ಶಾರೀರಿಕ ಇಲ್ಲವೆ ಮಾನಸಿಕ ಸಮಸ್ಯೆಗಳನ್ನು ಗುಣಪಡಿಸಲು ಶಕ್ತವಾಗಿರುವ ವೃತ್ತಿಪರ ಚಿಕಿತ್ಸಕರ ಇಲ್ಲವೆ ವೈದ್ಯರ ಸಿಬ್ಬಂದಿಯಾಗಿಲ್ಲ. ಈ ವಿಷಯಗಳ ವ್ಯವಸ್ಥೆಯಲ್ಲಿ, ಅಸ್ವಸ್ಥರಾಗಿರುವವರಿಗೆ ‘ವ್ಯೆದ್ಯನು ಬೇಕಾಗಿದ್ದಾನೆ.’ (ಲೂಕ 5:31) ಆದರೂ, ಆತ್ಮಿಕ ಅಗತ್ಯದಲ್ಲಿರುವವರಿಗೆ ಇಂತಹ ಕುರಿಪಾಲಕರು ಸಹಾಯ ಮಾಡಬಲ್ಲರು. (ಯಾಕೋಬ 5:14, 15) ಸಾಧ್ಯವಿರುವಾಗಲೆಲ್ಲ, ಈ ಹಿರಿಯರು ಬೇರೆ ರೀತಿಯ ನೆರವಿಗಾಗಿಯೂ ಏರ್ಪಾಡು ಮಾಡುತ್ತಾರೆ.—ಯಾಕೋಬ 2:15, 16.
ಇಂತಹ ಪ್ರೀತಿಪರ ಏರ್ಪಾಡಿನ ಹಿಂದೆ ಯಾರಿದ್ದಾರೆ? ಯೆಹೋವ ದೇವರಲ್ಲದೆ ಮತ್ತಾರೂ ಅಲ್ಲ! ಯೆಹೋವನು ಹೀಗೆ ಪ್ರಕಟಿಸುವುದಾಗಿ ಪ್ರವಾದಿಯಾದ ಯೆಹೆಜ್ಕೇಲನು ಚಿತ್ರಿಸುತ್ತಾನೆ: “ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಎಲ್ಲಾ ಸ್ಥಳಗಳಿಂದ . . . ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು.” ದೇವರು ದುರ್ಬಲ ಹಾಗೂ ಅಶಕ್ತ ಕುರಿಗಳ ಕುರಿತೂ ಚಿಂತಿಸುವವನಾಗಿದ್ದಾನೆ.—ಯೆಹೆಜ್ಕೇಲ 34:11, 12, 15, 16.
ಸರಿಯಾದ ಸಮಯದಲ್ಲಿ ನಿಜ ನೆರವು
ಕ್ರೈಸ್ತ ಸಭೆಯಲ್ಲಿ ನಿಜವಾದ ನೆರವು ವಾಸ್ತವವಾಗಿಯೂ ಲಭ್ಯವಿದೆಯೊ? ಹೌದು. ಸಭೆಯು ನೆರವಿನ ಮೂಲವಾಗಿ ಪರಿಣಮಿಸಿದ ವಿಭಿನ್ನ ಪರಿಸ್ಥಿತಿಗಳನ್ನು ಮುಂದಿನ ಉದಾಹರಣೆಗಳು ದೃಷ್ಟಾಂತಿಸುತ್ತವೆ.
◆ ಪ್ರಿಯ ವ್ಯಕ್ತಿಯ ಮರಣ. ದೀರ್ಘಕಾಲದ ವ್ಯಾಧಿಯ ತರುವಾಯ ಆ್ಯನಳ ಪತಿ ಮೃತಪಟ್ಟರು. “ಆ ಸಮಯದಂದಿನಿಂದ, ನಾನು ಕ್ರೈಸ್ತ ಸಹೋದರತ್ವದ ಬೆಚ್ಚನೆಯ ಪ್ರೀತಿಯನ್ನು ಹೇರಳವಾಗಿ ಅನುಭವಿಸಿದ್ದೇನೆ,” ಎಂದು ಅವಳು ಹೇಳುತ್ತಾಳೆ. “ನನ್ನ ಜೊತೆ ವಿಶ್ವಾಸಿಗಳ ಹೃತ್ಪೂರ್ವಕ ಅಪ್ಪುಗೆಗಳೊಂದಿಗೆ, ಅವರು ಸತತವಾಗಿ ನುಡಿಯುತ್ತಿದ್ದ ಬೆಂಬಲದ ಹಾಗೂ ಉತ್ತೇಜನದ ದಯಾಪರ ನುಡಿಗಳು, ಸಂಪೂರ್ಣವಾಗಿ ಖಿನ್ನಳಾಗುವ ಬದಲಿಗೆ ನನ್ನನ್ನು ಬಲಪಡಿಸಿದೆ. ಇದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞಳಾಗಿದ್ದೇನೆ. ಅವರ ಪ್ರೀತಿಯು, ನಾನು ಬಹಳವಾಗಿ ಸಮರ್ಥಿಸಲ್ಪಟ್ಟ, ಆತ್ಮೋನ್ನತಿ ಪಡೆದ, ಮತ್ತು ಕೋಮಲವಾಗಿ ಉಪಚರಿಸಲ್ಪಟ್ಟಿರುವ ಅನಿಸಿಕೆಯನ್ನು ನನ್ನಲ್ಲಿ ಉಂಟುಮಾಡಿದೆ.” ಮರಣದಲ್ಲಿ ಪ್ರಿಯರೊಬ್ಬರನ್ನು ಕಳೆದುಕೊಂಡಿರುವ ವೇದನಾಮಯ ಅನುಭವ ನಿಮಗೂ ಆಗಿರಬಹುದು. ಅಂತಹ ಸಮಯಗಳಲ್ಲಿ ಬಹಳಷ್ಟು ಆವಶ್ಯಕವಾಗಿರುವ ಸಾಂತ್ವನ ಹಾಗೂ ಭಾವನಾತ್ಮಕ ಬೆಂಬಲವನ್ನು ಸಭೆಯ ಸದಸ್ಯರು ಒದಗಿಸಬಲ್ಲರು.
◆ ಅನಾರೋಗ್ಯ. ಪೋಲೆಂಡ್ನ ಒಬ್ಬ ಸಂಚರಣ ಮೇಲ್ವಿಚಾರಕರಾದ ಆರ್ಟೂರ್, ಮಧ್ಯ ಏಷಿಯದಲ್ಲಿನ ಸಭೆಗಳನ್ನು ಕ್ರಮವಾಗಿ ಸಂದರ್ಶಿಸಿ, ಅವುಗಳನ್ನು ಆತ್ಮಿಕವಾಗಿ ಬಲಪಡಿಸಿದರು. ಇಂತಹ ಒಂದು ಸಂದರ್ಶನದ ಸಮಯದಲ್ಲಿ ಅವರು ತುಂಬ ಅಸ್ವಸ್ಥಗೊಂಡರಲ್ಲದೆ, ಅದರಿಂದ ಚೇತರಿಸಿಕೊಳ್ಳುತ್ತಿದ್ದಾಗ ಗಂಭೀರವಾದ ತೊಡಕುಗಳನ್ನು ಎದುರಿಸಿದರು. ಆಳವಾದ ಗಣ್ಯತೆಯೊಂದಿಗೆ ಆರ್ಟೂರ್ ಜ್ಞಾಪಿಸಿಕೊಳ್ಳುವುದು: “[ಕಸಕ್ಸ್ತಾನಿನ ಒಂದು ನಗರದಲ್ಲಿರುವ] ಸಹೋದರ ಸಹೋದರಿಯರು ನನಗಾಗಿ ಎಷ್ಟೊಂದು ಚಿಂತಿಸಿದರೆಂದು ನಾನು ನಿಮಗೆ ಹೇಳಬಯಸುತ್ತೇನೆ. ನನಗೆ ಪರಿಚಯವಿರದ ಅನೇಕ ಸಹೋದರ ಸಹೋದರಿಯರು ಮತ್ತು ಆಸಕ್ತಿಯಿರುವವರು ಸಹ ಹಣ, ಆಹಾರ, ಮತ್ತು ಔಷಧಿಗಳನ್ನು ತಂದರು. . . . ಮತ್ತು ಇದನ್ನು ಅವರು ಮಹಾ ಆನಂದದಿಂದ ಮಾಡಿದರು.
“ಒಂದಿಷ್ಟು ಹಣ ಮತ್ತು ಪತ್ರವೊಂದಿದ್ದ ಲಕೋಟೆ ನನಗೆ ಸಿಕ್ಕಾಗ, ನನಗಾದ ಅನಿಸಿಕೆಗಳನ್ನು ಊಹಿಸಿಕೊಳ್ಳಿರಿ: ‘ಪ್ರಿಯ ಸಹೋದರನಿಗೆ ಆದರದ ವಂದನೆಗಳು. ಐಸ್ ಕ್ರೀಮ್ಗಾಗಿ ಅಮ್ಮ ನನಗೆ ಹಣಕೊಟ್ಟಿದ್ದರು, ಆದರೆ ಔಷಧಿಗಾಗಿ ನಿಮಗದನ್ನು ಕೊಡಲು ನಾನು ನಿರ್ಧರಿಸಿದೆ. ದಯವಿಟ್ಟು ಬೇಗನೆ ಗುಣವಾಗಿರಿ. ನಾವು ದೀರ್ಘ ಕಾಲ ಜೀವಿಸಬೇಕೆಂದು ಯೆಹೋವನು ಬಯಸುತ್ತಾನೆ. ಶುಭಾಶಯಗಳು. ಮತ್ತು ನಮಗೆ ಇನ್ನಷ್ಟು ಬೋಧಪ್ರದ ಕಥೆಗಳನ್ನು ಹೇಳಿರಿ. ವಾವಾ.’” ಹೌದು, ಈ ವಿದ್ಯಮಾನದಲ್ಲಿ ತೋರಿಸಲ್ಪಟ್ಟಂತೆ, ಸಭೆಯಲ್ಲಿರುವ ಆಬಾಲವೃದ್ಧರು ಅನಾರೋಗ್ಯದ ಸಮಯಗಳಲ್ಲಿ ಬಲಗೊಳಿಸುವ ನೆರವನ್ನು ನೀಡಬಲ್ಲರು.—ಫಿಲಿಪ್ಪಿ 2:25-29.
◆ ಖಿನ್ನತೆ. ಒಬ್ಬ ಪಯನೀಯರ್ ಇಲ್ಲವೆ ಪೂರ್ಣ ಸಮಯದ ರಾಜ್ಯ ಘೋಷಕಳಾಗಿ ಸೇವಿಸುವ ಹೃತ್ಪೂರ್ವಕ ಬಯಕೆ ಟೆರಿಗೆ ಇತ್ತು. ಆದರೆ ಕಷ್ಟತೊಂದರೆಗಳ ಕಾರಣ ಅವಳು ಪಯನೀಯರ್ ಸೇವೆಯನ್ನು ನಿಲ್ಲಿಸಬೇಕಾಯಿತು. “ಪೂರ್ಣ ಸಮಯದ ಸೇವೆಯಲ್ಲಿರಲು ಪ್ರಯತ್ನಿಸಿ, ಅದರಲ್ಲಿ ಒಂದು ವರ್ಷವೂ ಇರಲು ಸಾಧ್ಯವಾಗದುದಕ್ಕೆ ನನ್ನಲ್ಲಿ ತೀವ್ರವಾದ ತಪ್ಪಿತಸ್ಥ ಅನಿಸಿಕೆ ಉಂಟಾಯಿತು” ಎಂದು ಅವಳು ಹೇಳುತ್ತಾಳೆ. ಯೆಹೋವನ ಅನುಗ್ರಹವು ಅವಳ ಸೇವೆಯ ಮೊತ್ತದ ಮೇಲೆ ಆತುಕೊಂಡಿತ್ತೆಂಬ ತಪ್ಪಾದ ಅನಿಸಿಕೆ ಟೆರಿಯಲ್ಲಿತ್ತು. (ಮಾರ್ಕ 12:41-44ರ ವ್ಯತ್ಯಾಸ ತೋರಿಸಿರಿ.) ತೀರ ಖಿನ್ನಳಾದ ಅವಳು, ತನ್ನನ್ನು ಪ್ರತ್ಯೇಕಿಸಿಕೊಂಡಳು. ಆ ಸಮಯದಲ್ಲಿ, ಸಭೆಯಿಂದ ಚೈತನ್ಯಗೊಳಿಸುವ ನೆರವು ಒದಗಿಬಂತು.
ಟೆರಿ ಜ್ಞಾಪಿಸಿಕೊಳ್ಳುವುದು: “ಹಿರಿಯ ಪಯನೀಯರ್ ಸಹೋದರಿಯೊಬ್ಬಳು ನನ್ನ ನೆರವಿಗೆ ಬಂದಳಲ್ಲದೆ, ನನ್ನ ಅಂತರಂಗವನ್ನು ನಾನು ತೋಡಿಕೊಂಡಾಗ ಅದಕ್ಕೆ ಕಿವಿಗೊಟ್ಟಳು. ಅವಳ ಮನೆಯಿಂದ ಹೊರಬಂದಾಗ, ನನ್ನ ಮೇಲಿನ ಒಂದು ದೊಡ್ಡ ಭಾರವು ಇಳಿಸಲ್ಪಟ್ಟಿದೆಯೊ ಎಂಬಂತೆ ನನಗನಿಸಿತು. ಆ ಸಮಯದಂದಿನಿಂದ, ಈ ಪಯನೀಯರ್ ಸಹೋದರಿ ಮತ್ತು ಸಭೆಯಲ್ಲಿ ಹಿರಿಯನಾಗಿರುವ ಅವಳ ಗಂಡನು ಅಮೂಲ್ಯವಾದ ನೆರವನ್ನು ನೀಡಿದರು. ಅನುದಿನವೂ ಫೋನ್ ಕರೆಯ ಮೂಲಕ ಅವರು ನನ್ನ ಯೋಗಕ್ಷೇಮದ ಕುರಿತು ವಿಚಾರಿಸಿದರು. . . . ಕೆಲವೊಮ್ಮೆ ತಮ್ಮ ಕುಟುಂಬ ಅಧ್ಯಯನದಲ್ಲಿ ಭಾಗವಹಿಸುವಂತೆ ನನ್ನನ್ನೂ ಅನುಮತಿಸಿದರು. ಇದರಿಂದ ಕುಟುಂಬಗಳು ಒಟ್ಟಿಗೆ ಸೇರಿರುವುದರ ಮಹತ್ವವನ್ನು ನಾನು ಮನಗಂಡಿದ್ದೇನೆ.”
ಸಮರ್ಪಿತ ಕ್ರೈಸ್ತರನ್ನು ಸೇರಿಸಿ ಅನೇಕರು ಖಿನ್ನರಾಗುವುದು, ನಿರುತ್ತೇಜಿತರಾಗುವುದು ಮತ್ತು ಒಬ್ಬಂಟಿಗರಾಗಿರುವುದು ತೀರ ಸಾಮಾನ್ಯ ವಿಷಯವಾಗಿದೆ. ಆದರೆ, ದೇವರ ಸಭೆಯಲ್ಲಿ ಪ್ರೀತಿಪರ ಹಾಗೂ ನಿಸ್ವಾರ್ಥ ನೆರವು ಲಭ್ಯವಿರುವುದಕ್ಕೆ ನಾವೆಷ್ಟು ಆಭಾರಿಗಳಾಗಿರಬೇಕು!—1 ಥೆಸಲೊನೀಕ 5:14.
◆ ವಿಪತ್ತುಗಳು ಮತ್ತು ಅಪಘಾತಗಳು. ತಮ್ಮ ಮನೆಯು ಬೆಂಕಿಯಲ್ಲಿ ಸುಟ್ಟುಹೋದಾಗ ಎಲ್ಲವನ್ನೂ ಕಳೆದುಕೊಂಡ, ನಾಲ್ವರು ಸದಸ್ಯರುಳ್ಳ ಒಂದು ಕುಟುಂಬದ ಸ್ಥಾನದಲ್ಲಿ ನಿಮ್ಮನ್ನು ಚಿತ್ರಿಸಿಕೊಳ್ಳಿರಿ. “ನಮ್ಮನ್ನು ನಿತ್ಯಕ್ಕೂ ಸ್ಪರ್ಶಿಸಿದ ಮತ್ತು ಯೆಹೋವನ ಜನರಲ್ಲಿರುವ ನಿಜ ಪ್ರೀತಿಯಿಂದ ಪ್ರಭಾವಿತಗೊಳಿಸಿದ ಉತ್ತೇಜನದಾಯಕ ಸಂಗತಿಯನ್ನು” ಅವರು ಬೇಗನೆ ಅನುಭವಿಸಿದರು. ಅವರು ವಿವರಿಸುವುದು: “ಕೂಡಲೇ ನಾವು ನಮ್ಮ ಆತ್ಮಿಕ ಸಹೋದರ ಸಹೋದರಿಯರ ಸಮರ್ಥನೆ ಹಾಗೂ ಸಹಾನುಭೂತಿಯ ಪ್ರಾಮಾಣಿಕ ಕರೆಗಳಿಂದ ಭಾವಪರವಶರಾದೆವು. ಫೋನ್ ಕರೆಗಳು ಸತತವಾಗಿ ಬಂದವು. ಪ್ರತಿಯೊಬ್ಬರ ಯಥಾರ್ಥವಾದ ಚಿಂತೆ ಹಾಗೂ ಪ್ರೀತಿಯಿಂದ ನಾವೆಷ್ಟು ಪ್ರಚೋದಿಸಲ್ಪಟ್ಟೆವೆಂದರೆ, ನಾವು ಕೃತಜ್ಞತೆಯ ಕಣ್ಣೀರು ಸುರಿಸಿದೆವು.”
ಆದಷ್ಟು ಬೇಗನೆ, ಸಭೆಯಲ್ಲಿದ್ದ ಹಿರಿಯರು ಸಹೋದರರ ಒಂದು ದೊಡ್ಡ ಗುಂಪನ್ನು ಸಂಘಟಿಸಿ, ಕೆಲವೇ ದಿನಗಳಲ್ಲಿ ಈ ಕುಟುಂಬಕ್ಕೆ ಒಂದು ಹೊಸ ಮನೆಯನ್ನು ಕಟ್ಟಿಸಿಕೊಟ್ಟರು. ನೆರೆಯಾಕೆಯು ಘೋಷಿಸಿದ್ದು: “ನೀವು ಆ ದೃಶ್ಯವನ್ನು ನೋಡಬೇಕಿತ್ತು! ಎಲ್ಲ ರೀತಿಯ ಜನರು, ಅಂದರೆ ಸ್ತ್ರೀಯರು, ಪುರುಷರು, ಕಪ್ಪುಜನರು, ಸ್ಪ್ಯಾನಿಷ್ ಜನರು ಅಲ್ಲಿ ಕೆಲಸಮಾಡುತ್ತಿದ್ದರು!” ಇದು ಸಹೋದರ ಪ್ರೀತಿಯ ಸ್ಪಷ್ಟವಾದ ಪ್ರಮಾಣವಾಗಿತ್ತು.—ಯೋಹಾನ 13:35.
ಜೊತೆ ಕ್ರೈಸ್ತರು ಆ ಕುಟುಂಬಕ್ಕೆ ಬಟ್ಟೆಬರೆ, ಆಹಾರ ಮತ್ತು ಹಣವನ್ನೂ ನೀಡಿದರು. ಕುಟುಂಬದ ತಂದೆಯು ಹೇಳುವುದು: “ಇದು ಎಲ್ಲರೂ ಕೊಡುಗೆಗಳನ್ನು ನೀಡುತ್ತಿದ್ದ ಕ್ರಿಸ್ಮಸ್ ಕಾಲದಲ್ಲಿ ಸಂಭವಿಸಿತು. ಆದರೆ ನಾವು ಅನುಭವಿಸಿದಂತಹ ಯಥಾರ್ಥವಾದ ಅತಿಶಯಿಸುವ ಉದಾರತೆಯನ್ನು ಯಾರೊಬ್ಬರೂ ಅನುಭವಿಸಲಿಲ್ಲವೆಂದು ನಾವು ಪ್ರಾಮಾಣಿಕವಾಗಿ ಹೇಳಬಲ್ಲೆವು.” ಅವರು ಕೂಡಿಸಿ ಹೇಳುವುದು: “ಬೆಂಕಿಯ ನೆನಪುಗಳು ನಿಧಾನವಾಗಿ ಮಾಸಿಹೋಗುತ್ತಿವೆ. ಅವುಗಳ ಸ್ಥಾನದಲ್ಲಿ ದಯಾಪರ ಕ್ರಿಯೆಗಳು ಮತ್ತು ಒಳ್ಳೆಯ ಮಿತ್ರರ ಸವಿ ನೆನಪುಗಳು ಭರ್ತಿಯಾಗುತ್ತಿವೆ. ಭೂಮಿಯ ಮೇಲೆ ಸಹೋದರರ ಇಂತಹ ಅದ್ಭುತಕರ ಹಾಗೂ ಐಕ್ಯ ಕುಟುಂಬವಿರುವುದಕ್ಕಾಗಿ ನಾವು ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಉಪಕಾರ ಸಲ್ಲಿಸುತ್ತೇವೆ. ಅದರ ಒಂದು ಭಾಗವಾಗಿರಲು ನಾವೆಷ್ಟು ಕೃತಜ್ಞರಾಗಿದ್ದೇವೆ!
ಆದರೆ, ಪ್ರತಿಯೊಂದು ದುರಂತದಲ್ಲಿ ಇಂತಹ ನೆರವು ಸಾಧ್ಯವೂ ಇಲ್ಲ, ಅದು ನಿರೀಕ್ಷಿಸಲ್ಪಡುವುದೂ ಇಲ್ಲ. ಆದರೆ ಸಭೆಯು ಒದಗಿಸಬಹುದಾದ ಬೆಂಬಲವನ್ನು ಈ ಸನ್ನಿವೇಶವು ಖಂಡಿತವಾಗಿಯೂ ದೃಷ್ಟಾಂತಿಸುತ್ತದೆ.
ಮೇಲಿನಿಂದ ಬರುವ ವಿವೇಕ
ಕ್ರೈಸ್ತ ಸಭೆಯಲ್ಲಿ ಸಹಾಯ ಹಾಗೂ ಬಲದ ಮತ್ತೊಂದು ಮೂಲವನ್ನು ಅನೇಕರು ಕಂಡುಕೊಂಡಿದ್ದಾರೆ. ಅದು ಏನಾಗಿದೆ? “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ತಯಾರಿಸುವ ಪ್ರಕಾಶನಗಳೇ. ಇವುಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಪ್ರಧಾನವಾಗಿವೆ. ಸೂಕ್ಷ್ಮದೃಷ್ಟಿಯ ಸಲಹೆ ಮತ್ತು ಪ್ರಾಯೋಗಿಕ ಉಪದೇಶವನ್ನು ನೀಡಲಿಕ್ಕಾಗಿ, ಈ ಪ್ರಕಾಶನಗಳು ಬೈಬಲಿನಲ್ಲಿರುವ ದೈವಿಕ ವಿವೇಕದ ಮೇಲೆ ಪ್ರಧಾನವಾಗಿ ಆತುಕೊಳ್ಳುತ್ತವೆ. (ಕೀರ್ತನೆ 119:105) ಶಾಸ್ತ್ರೀಯ ಮಾಹಿತಿಯ ಜೊತೆಗೆ, ಮಾನಸಿಕ ಖಿನ್ನತೆ, ಅಪಪ್ರಯೋಗದಿಂದ ಗುಣಹೊಂದುವಿಕೆ, ವಿಭಿನ್ನ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು, ಯುವ ಜನರು ಎದುರಿಸುವ ಪಂಥಾಹ್ವಾನಗಳು, ಮತ್ತು ವಿಕಾಸಶೀಲ ದೇಶಗಳಿಗೆ ಪ್ರತ್ಯೇಕವಾಗಿ ಅನ್ವಯಿಸುವ ತೊಂದರೆಗಳಂತಹ ವಿಷಯಗಳ ಮೇಲೆ ಜವಾಬ್ದಾರಿಯುತ ಹಾಗೂ ಅಧಿಕೃತ ಸಂಶೋಧನೆಯು ಸೇರಿರುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರ ಮಾರ್ಗವೇ ಅತ್ಯುತ್ತಮ ಜೀವನ ಮಾರ್ಗವೆಂದು ಈ ಪ್ರಕಾಶನಗಳು ಬಲವಾಗಿ ಸಮರ್ಥಿಸುತ್ತವೆ.—ಯೆಶಾಯ 30:20, 21.
ಪ್ರತಿ ವರ್ಷ, ಗಣ್ಯತೆಯನ್ನು ವ್ಯಕ್ತಪಡಿಸುವ ಸಾವಿರಾರು ಪತ್ರಗಳನ್ನು ವಾಚ್ ಟವರ್ ಸಂಸ್ಥೆಯು ಪಡೆಯುತ್ತದೆ. ಉದಾಹರಣೆಗೆ, ಆತ್ಮಹತ್ಯೆಯ ಕುರಿತಾದ ಒಂದು ಅವೇಕ್! ಪತ್ರಿಕೆಯ ಲೇಖನದ ಕುರಿತು, ರಷ್ಯದಲ್ಲಿರುವ ಒಬ್ಬ ಯೌವನಸ್ಥನು ಬರೆದುದು: “ನನ್ನ ಮನಸ್ಸು ಖಿನ್ನತೆಯ ಕಡೆಗೆ ಹೆಚ್ಚಾಗಿ ವಾಲುವುದರಿಂದ, . . . ಆತ್ಮಹತ್ಯೆಯ ಕುರಿತು ನಾನು ಅನೇಕ ಬಾರಿ ಆಲೋಚಿಸಿದ್ದೇನೆ. ನನ್ನ ಸಮಸ್ಯೆಗಳನ್ನು ನಿರ್ವಹಿಸುವಂತೆ ದೇವರು ನನಗೆ ಸಹಾಯ ಮಾಡುವನೆಂಬ ನನ್ನ ನಂಬಿಕೆಯನ್ನು ಈ ಲೇಖನವು ಬಲಪಡಿಸಿತು. ನಾನು ಜೀವಿಸಬೇಕೆಂದು ಆತನು ಬಯಸುತ್ತಾನೆ. ಈ ಲೇಖನದ ಮೂಲಕ ಬೆಂಬಲ ನೀಡಿದಕ್ಕಾಗಿ ನಾನು ಆತನಿಗೆ ಆಭಾರಿ.”
ಈ ಲೋಕದಲ್ಲಿ ಏಳುವ ತೊಂದರೆಯು ಬಿರುಗಾಳಿಯ ಅಲೆಗಳಂತೆ ತೀರ ಉಗ್ರವಾಗಿರುವಾಗ, ಕ್ರೈಸ್ತ ಸಭೆಯಲ್ಲಿ ಒಂದು ಸುರಕ್ಷಿತವಾದ ಆಶ್ರಯವಿದೆ ಎಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಸಾಧ್ಯವಿದೆ. ಬಂಜರು ಭೂಮಿಯಂತಿರುವ ಈ ಪ್ರೀತಿರಹಿತ ವ್ಯವಸ್ಥೆಯು ನಿಮ್ಮ ಬಲವನ್ನು ಬತ್ತಿಸುತ್ತಿರುವಾಗ, ಯೆಹೋವನ ಸಂಸ್ಥೆಯಲ್ಲಿ ನವಚೈತನ್ಯವನ್ನು ಉಂಟುಮಾಡುವ ತಂಪು ಜಾಗವಿದೆ ಎಂಬುದನ್ನು ನೀವು ಕಂಡುಕೊಳ್ಳಸಾಧ್ಯವಿದೆ. ಇಂತಹ ಬೆಂಬಲವನ್ನು ಅನುಭವಿಸಿದ ಮೇಲೆ, ತನ್ನ ಪತಿಯ ಗಂಭೀರ ಕಾಯಿಲೆಯನ್ನು ಯಶಸ್ವಿಕರವಾಗಿ ನಿಭಾಯಿಸಿದ ಒಬ್ಬ ಕ್ರೈಸ್ತ ಸ್ತ್ರೀಯ ಭಾವನೆಗಳನ್ನು ನೀವೂ ಪ್ರತಿಧ್ವನಿಸುವಿರಿ. ಆಕೆ ಬರೆದುದು: “ನಮಗೆ ತೋರಿಸಲ್ಪಟ್ಟ ಪ್ರೀತಿ ಹಾಗೂ ಅಕ್ಕರೆಯಿಂದಾಗಿ, ಯೆಹೋವನು ನಮ್ಮನ್ನು ತನ್ನ ಅಂಗೈಯಲ್ಲಿ ಇರಿಸಿಕೊಂಡು, ಈ ಸಂಕಟದ ಕಾಲದಿಂದ ಪಾರುಮಾಡಿದನೊ ಎಂಬಂತೆ ನನಗನಿಸಿತು. ಯೆಹೋವನ ಅತ್ಯುತ್ಕೃಷ್ಟವಾದ ಸಂಸ್ಥೆಯ ಭಾಗವಾಗಿರಲು ನಾನೆಷ್ಟು ಆಭಾರಿಯಾಗಿದ್ದೇನೆ!”
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 26 ರಲ್ಲಿರುವ ಚಿತ್ರ]
ನಾವು ರೋಗಗ್ರಸ್ತರಿಗೆ, ವಿಯೋಗಿಗಳಿಗೆ, ಮತ್ತು ಇತರರಿಗೆ ಬಲಗೊಳಿಸುವ ನೆರವನ್ನು ನೀಡಬಲ್ಲೆವು