ಕಾಲ ಮತ್ತು ನಿತ್ಯತೆ—ಅವುಗಳ ಕುರಿತು ನಮಗೆ ನಿಜವಾಗಿಯೂ ತಿಳಿದಿರುವುದೇನು?
“ಮಾನವನ ಅತ್ಯಂತ ರಹಸ್ಯಮಯ ಅನುಭವಗಳಲ್ಲಿ ಕಾಲವು ಒಂದಾಗಿರುವಂತೆ ತೋರುತ್ತದೆ” ಎಂದು ಎನ್ಸೈಕ್ಲೊಪೀಡಿಯ ಹೇಳುತ್ತದೆ. ಕಾಲವನ್ನು ಸರಳವಾದ ಪದಗಳಲ್ಲಿ ವ್ಯಾಖ್ಯಾನಿಸುವುದು ಅಸಾಧ್ಯವೇ ಸರಿ. ಕಾಲವು “ಕಳೆದುಹೋಗುತ್ತದೆ,” “ಚಲಿಸುತ್ತದೆ,” “ಹಾರಿಹೋಗುತ್ತದೆ,” ಮತ್ತು ನಾವು “ಕಾಲದ ಪ್ರವಾಹದಲ್ಲಿ” ಕೊಚ್ಚಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಬಹುದು. ಆದರೆ, ನಾವು ನಿಜವಾಗಿಯೂ ಯಾವುದರ ಬಗ್ಗೆ ಮಾತಾಡುತ್ತಾ ಇದ್ದೇವೆಂದು ನಮಗೆ ತಿಳಿದಿರುವುದಿಲ್ಲ.
ಕಾಲವನ್ನು “ಎರಡು ಘಟನೆಗಳ ನಡುವಿನ ಅಂತರ” ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಆದರೆ ಕಾಲವು ಘಟನೆಗಳ ಮೇಲೆ ಅವಲಂಬಿಸಿರುವುದಿಲ್ಲವೆಂದು ಅನುಭವವು ನಮಗೆ ತೋರಿಸುತ್ತದೆ. ಏಕೆಂದರೆ ಘಟನೆಯೊಂದು ಸಂಭವಿಸಲಿ ಸಂಭವಿಸದಿರಲಿ, ಕಾಲವು ಮಾತ್ರ ಗತಿಸುತ್ತಾ ಇರುತ್ತದೆ. ಕಾಲಕ್ಕೆ ಅಸ್ತಿತ್ವವಿಲ್ಲ, ಅದು ಕೇವಲ ಒಂದು ಕಲ್ಪನೆಯಾಗಿದೆ ಎಂದು ಒಬ್ಬ ತತ್ವಜ್ಞಾನಿಯು ಹೇಳುತ್ತಾನೆ. ಯಾವುದರ ಮೇಲೆ ನಮ್ಮ ಹೆಚ್ಚಿನ ಅನುಭವವು ಅವಲಂಬಿಸಿದೆಯೊ, ಅದು ಕೇವಲ ನಮ್ಮ ಕಲ್ಪನೆಯಾಗಿರಸಾಧ್ಯವೊ?
ಕಾಲದ ಕುರಿತು ಬೈಬಲಿನ ನೋಟ
ಬೈಬಲು ಕಾಲದ ವ್ಯಾಖ್ಯಾನವನ್ನು ನೀಡುವುದಿಲ್ಲ. ಅದನ್ನು ಗ್ರಹಿಸಿಕೊಳ್ಳುವುದು ಮನುಷ್ಯನಿಂದ ಸಾಧ್ಯವಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಇದು ನಮಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರುವ ಅಪರಿಮಿತ ಅಂತರಿಕ್ಷದಂತಿದೆ. ದೇವರು ಮಾತ್ರ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ವಿಷಯಗಳಲ್ಲಿ ಕಾಲವೂ ಒಂದು ಎಂಬುದು ತೀರ ಸ್ಪಷ್ಟವಾಗಿದೆ. ಏಕೆಂದರೆ ಆತನೊಬ್ಬನೇ “ಯುಗಯುಗಾಂತರಗಳಲ್ಲಿ” ಜೀವಿಸುವಾತನಾಗಿದ್ದಾನೆ.—ಕೀರ್ತನೆ 90:2.
ಬೈಬಲು ಕಾಲದ ವ್ಯಾಖ್ಯಾನವನ್ನು ನೀಡದಿದ್ದರೂ, ಅದನ್ನೊಂದು ವಾಸ್ತವಿಕತೆಯಾಗಿ ತಿಳಿಸುತ್ತದೆ. ದೇವರು ಕಾಲದ ಗುರುತುಗಳಾಗಿ ಸೂರ್ಯ, ಚಂದ್ರ, ಹಾಗೂ ನಕ್ಷತ್ರಗಳನ್ನು, ಅಂದರೆ “ಬೆಳಕು”ಗಳನ್ನು ಸೃಷ್ಟಿಸಿ, ಅವುಗಳನ್ನು “ಗುರುತುಗಳಾಗಿ . . . ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸ”ಲಿಕ್ಕಾಗಿ ಸ್ಥಾಪಿಸಿದನು. ಬೈಬಲಿನಲ್ಲಿ ದಾಖಲಿಸಲ್ಪಟ್ಟ ಅನೇಕ ಘಟನೆಗಳು ಕಾಲದ ಪ್ರವಾಹದಲ್ಲಿ ದೃಢವಾಗಿ ಸ್ಥಾಪಿಸಲ್ಪಟ್ಟಿವೆ. (ಆದಿಕಾಂಡ 1:14; 5:3-32; 7:11, 12; 11:10-32; ವಿಮೋಚನಕಾಂಡ 12:40, 41) ದೇವರಿಂದ ನಿತ್ಯತೆಯ ಆಶೀರ್ವಾದವನ್ನು, ಅಂದರೆ ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ಪಡೆದುಕೊಳ್ಳಲಿಕ್ಕಾಗಿ ನಾವು ಕಾಲವನ್ನು ವಿವೇಕಯುತವಾಗಿ ಬಳಸಬೇಕೆಂದೂ ಬೈಬಲು ತಿಳಿಸುತ್ತದೆ.—ಎಫೆಸ 5:15, 16.
ನಿತ್ಯಜೀವ—ತರ್ಕಬದ್ಧವೊ?
ಕಾಲವು ನಿಜವಾಗಿ ಏನಾಗಿದೆಯೆಂದು ತಿಳಿದುಕೊಳ್ಳಲು ಪ್ರಯತ್ನಿಸುವುದು ತಾನೇ ಆಶಾಭಂಗಪಡಿಸುವ ಸಂಗತಿಯಾಗಿರುವಾಗ, ನಿತ್ಯಜೀವ ಅಥವಾ ಸದಾಕಾಲ ಜೀವಿಸುವ ವಿಚಾರವು ಅನೇಕರಿಗೆ ದಿಗ್ಬ್ರಮೆ ಉಂಟುಮಾಡುವಂತಹದ್ದಾಗಿದೆ. ನಮ್ಮ ಅನುಭವವು, ಕಾಲವನ್ನು ಜನನ, ಬೆಳವಣಿಗೆ, ವೃದ್ಧಾಪ್ಯ ಮತ್ತು ಮರಣದ ಚಕ್ರದೊಂದಿಗೆ ಸಂಬಂಧಿಸುವುದೇ ಇದಕ್ಕೆ ಒಂದು ಕಾರಣವಾಗಿದೆ. ಹೀಗೆ, ನಾವು ಕಾಲಗತಿಯನ್ನು ವಯಸ್ಸಾಗುವಿಕೆಯ ಜೊತೆಗೇ ಗುರುತಿಸುತ್ತೇವೆ. ಕಾಲದ ಬಗ್ಗೆ ಭಿನ್ನವಾದ ಆಲೋಚನೆಯು ತಾನೇ ಅದರ ಪರಿಕಲ್ಪನೆಯ ಉಲ್ಲಂಘನೆಯಾಗಿ ಅನೇಕರಿಗೆ ತೋರುತ್ತದೆ. ‘ವಯಸ್ಸಾಗುವಿಕೆಯ ಸಂಬಂಧದಲ್ಲಿ ಬೇರೆ ಎಲ್ಲ ಜೀವಿಗಳಿಗಿಂತ ಮನುಷ್ಯನು ಏಕೆ ಭಿನ್ನವಾಗಿರಬೇಕು?’ ಎಂಬುದಾಗಿ ಅವರು ಕೇಳಬಹುದು.
ಮಾನವರು ಬೇರೆಲ್ಲ ಸೃಷ್ಟಿಜೀವಿಗಳಿಗಿಂತ ಅನೇಕ ವಿಧಗಳಲ್ಲಿ ಭಿನ್ನರು ಎಂಬ ವಾಸ್ತವಾಂಶವನ್ನು ಈ ರೀತಿಯ ವಾದದಲ್ಲಿ ಅನೇಕ ವೇಳೆ ಕಡೆಗಣಿಸಲಾಗುತ್ತದೆ. ಉದಾಹರಣೆಗೆ, ಮಾನವರಲ್ಲಿರುವ ಬೌದ್ಧಿಕ ಸಾಮರ್ಥ್ಯಗಳು ಪ್ರಾಣಿಗಳಲ್ಲಿಲ್ಲ. ಪ್ರಾಣಿಗಳಿಗೆ ಬೌದ್ಧಿಕ ಸಾಮರ್ಥ್ಯಗಳು ಇವೆಯೆಂಬ ಪ್ರತಿಪಾದನೆಗಳು ಕೇಳಿಬರುವುದಾದರೂ, ಅವುಗಳ ಸಹಜಪ್ರವೃತ್ತಿಯು ಅನುಮತಿಸುವುದಕ್ಕಿಂತಲೂ ಹೆಚ್ಚು ಸೃಜನಶೀಲವಾಗಿರಲು ಅವುಗಳಿಗೆ ಸಾಧ್ಯವಿಲ್ಲ. ಮಾನವರಲ್ಲಿರುವ ಕಲಾತ್ಮಕ ವರಗಳಾಗಲಿ ಇಲ್ಲವೆ ಪ್ರೀತಿ ಹಾಗೂ ಗಣ್ಯತೆಯನ್ನು ತೋರಿಸುವ ಸಾಮರ್ಥ್ಯವಾಗಲಿ ಪ್ರಾಣಿಗಳಲ್ಲಿಲ್ಲ. ಜೀವಿತವನ್ನು ಅರ್ಥಭರಿತವಾಗಿ ಮಾಡುವಂತಹ ಗುಣಗಳು ಹಾಗೂ ಸಾಮರ್ಥ್ಯಗಳ ವಿಷಯದಲ್ಲಿ ಮಾನವರಿಗೆ ಹೆಚ್ಚನ್ನು ನೀಡಿರುವಾಗ, ಸ್ವತಃ ಜೀವಿತದ ವಿಷಯದಲ್ಲೇ ಅವರಿಗೆ ಹೆಚ್ಚನ್ನು ನೀಡಿರಲು ಏಕೆ ಸಾಧ್ಯವಿಲ್ಲ?
ಮತ್ತೊಂದು ಕಡೆಯಲ್ಲಿ, ಯೋಚಿಸುವ ಸಾಮರ್ಥ್ಯವಿಲ್ಲದ ಮರಗಳು ಕೆಲವು ಸಂದರ್ಭಗಳಲ್ಲಿ ಸಾವಿರಾರು ವರ್ಷಗಳು ಜೀವಿಸುವಾಗ, ಬುದ್ಧಿವಂತ ಮಾನವರು ಸರಾಸರಿಯಾಗಿ ಕೇವಲ 70 ಇಲ್ಲವೆ 80 ವರ್ಷ ಬಾಳಸಾಧ್ಯವಿದೆ ಎಂಬುದು ವಿಚಿತ್ರವಾದ ಸಂಗತಿಯಲ್ಲವೊ? ಯಾವುದೇ ಸೃಜನಾತ್ಮಕ ಇಲ್ಲವೆ ಕಲಾತ್ಮಕ ಸಾಮರ್ಥ್ಯಗಳಿಲ್ಲದ ಆಮೆಗಳು 200 ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕುವಾಗ, ಈ ಸಾಮರ್ಥ್ಯಗಳು ಹೇರಳವಾಗಿರುವ ಮಾನವರು ಆ ಆಮೆಗಳ ಜೀವಿತದಲ್ಲಿ ಅರ್ಧಕ್ಕಿಂತಲೂ ಕಡಿಮೆ ಕಾಲ ಬದುಕುವುದು ಅಸಮಂಜಸವಲ್ಲವೊ?
ಕಾಲ ಮತ್ತು ನಿತ್ಯತೆಯ ಪರಿಕಲ್ಪನೆಯನ್ನು ಮನುಷ್ಯನು ಪೂರ್ಣವಾಗಿ ಗ್ರಹಿಸಿಕೊಳ್ಳದಿದ್ದರೂ, ನಿತ್ಯಜೀವದ ವಾಗ್ದಾನವು ಈಗಲೂ ಬೈಬಲಿನ ಸುಸ್ಥಾಪಿತ ನಿರೀಕ್ಷೆಯಾಗಿದೆ. ಅದರಲ್ಲಿ “ನಿತ್ಯಜೀವ” ಎಂಬ ಪದವು ಸುಮಾರು 40 ಬಾರಿ ಕಾಣಿಸಿಕೊಳ್ಳುತ್ತದೆ. ಆದರೆ ಮಾನವರು ಸದಾಕಾಲ ಬದುಕಬೇಕೆಂಬುದು ದೇವರ ಉದ್ದೇಶವಾಗಿದ್ದರೆ, ಅದು ಇನ್ನೂ ಏಕೆ ಪೂರ್ಣಗೊಂಡಿಲ್ಲ? ಈ ಪ್ರಶ್ನೆಯು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವುದು.