ನಿರೀಕ್ಷೆಯೆಂಬ ಲಂಗರಿಂದ ಬಿಗಿಯಲ್ಪಟ್ಟು, ಪ್ರೀತಿಯಿಂದ ಪ್ರಚೋದಿತರಾಗುವುದು
“ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.” —1 ಕೊರಿಂಥ 13:13.
1. ಅಪೊಸ್ತಲ ಪೌಲನು ನಮಗೆ ಯಾವ ಎಚ್ಚರಿಕೆಯನ್ನು ಕೊಡುತ್ತಾನೆ?
ನಮ್ಮ ನಂಬಿಕೆಯು ಒಂದು ಹಡಗಿನಂತೆ ಒಡೆದುಹೋಗಸಾಧ್ಯವಿದೆ ಎಂದು ಅಪೊಸ್ತಲ ಪೌಲನು ನಮ್ಮನ್ನು ಎಚ್ಚರಿಸುತ್ತಾನೆ. ‘ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೊಳ್ಳುವುದರ’ ಕುರಿತು ಮತ್ತು ‘ಕೆಲವರು ಮನಸ್ಸಿನ ಒಳ್ಳೇ ಸಾಕ್ಷಿಯನ್ನು ತಳ್ಳಿಬಿಟ್ಟು ಕ್ರಿಸ್ತನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಡು’ವುದರ ಕುರಿತಾಗಿ ಅವನು ಹೇಳುತ್ತಾನೆ. (1 ತಿಮೊಥೆಯ 1:19) ಸಾ. ಶ. ಒಂದನೆಯ ಶತಮಾನದಲ್ಲಿ, ಸಮುದ್ರಯಾನದ ನೌಕೆಗಳನ್ನು ಮರದಿಂದ ತಯಾರಿಸಲಾಗುತ್ತಿತ್ತು. ಈ ನೌಕೆಗಳು ಸಮುದ್ರಯಾನಕ್ಕೆ ಯೋಗ್ಯವಾಗಿದ್ದವೋ ಇಲ್ಲವೋ ಎಂಬುದು, ಉಪಯೋಗಿಸಲ್ಪಟ್ಟಿರುವ ಮರದ ಗುಣಮಟ್ಟ ಮತ್ತು ಅದು ಎಷ್ಟು ನಿಪುಣತೆಯಿಂದ ತಯಾರಿಸಲ್ಪಟ್ಟಿತ್ತೋ ಅದರ ಮೇಲೆ ಹೊಂದಿಕೊಂಡಿರುತ್ತಿತ್ತು.
2. ನಮ್ಮ ನಂಬಿಕೆಯ ಹಡಗು ಚೆನ್ನಾಗಿ ಕಟ್ಟಲ್ಪಟ್ಟಿರಬೇಕು ಏಕೆ, ಮತ್ತು ಇದು ನಮ್ಮಿಂದ ಏನನ್ನು ಅಪೇಕ್ಷಿಸುತ್ತದೆ?
2 ನಾವೇನನ್ನು ನಮ್ಮ ನಂಬಿಕೆಯ ಹಡಗು ಎಂದು ಕರೆಯಬಹುದೊ ಅದು, ಮಾನವಜಾತಿಯೆಂಬ ಅಲ್ಲೋಲಕಲ್ಲೋಲವಾದ ಸಮುದ್ರದಲ್ಲೂ ತೇಲುತ್ತಾ ಮುಂದುವರಿಯಬೇಕು. (ಯೆಶಾಯ 57:20; ಪ್ರಕಟನೆ 17:15) ಆದುದರಿಂದ, ಅದು ಚೆನ್ನಾಗಿ ಕಟ್ಟಲ್ಪಟ್ಟಿರಬೇಕು. ಮತ್ತು ಇದು ನಮ್ಮ ಮೇಲೆ ಹೊಂದಿಕೊಂಡಿರುತ್ತದೆ. ಯೆಹೂದಿ ಮತ್ತು ರೋಮನ್ ಜಗತ್ತೆಂಬ ‘ಸಮುದ್ರಗಳು’ ವಿಶೇಷವಾಗಿ ಆದಿ ಕ್ರೈಸ್ತರ ವಿರುದ್ಧ ಭೋರ್ಗರೆಯುತ್ತಿದ್ದಾಗ, ಯೂದನು ಬರೆದದ್ದು: “ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 20, 21) ‘ದೇವಜನರಿಗೆ ಒಪ್ಪಿಸಲ್ಪಟ್ಟ ನಂಬಿಕೆ’ಗಾಗಿ ಹೋರಾಡುವುದರ ಕುರಿತಾಗಿಯೂ ಯೂದನು ತಿಳಿಸುತ್ತಿದದ್ದರಿಂದ, ‘ಅತಿಪರಿಶುದ್ಧವಾದ ನಂಬಿಕೆ’ ಎಂಬ ಅಭಿವ್ಯಕ್ತಿಯು, ರಕ್ಷಣೆಯ ಸುವಾರ್ತೆಯನ್ನು ಒಳಗೂಡಿಸಿ, ಕ್ರೈಸ್ತ ಬೋಧನೆಗಳ ಇಡೀ ಶ್ರೇಣಿಯನ್ನು ಸೂಚಿಸುತ್ತಿರಬಹುದು. (ಯೂದ 3) ಆ ನಂಬಿಕೆಯ ಅಸ್ತಿವಾರ ಕ್ರಿಸ್ತನಾಗಿದ್ದಾನೆ. ನಾವು ನಿಜವಾದ ಕ್ರೈಸ್ತ ನಂಬಿಕೆಗೆ ಅಂಟಿಕೊಂಡಿರಲು, ಬಲವಾದ ನಂಬಿಕೆಯು ಅತ್ಯಗತ್ಯ.
“ಪಂಥ ಭಯ” ಎಂಬ ಬಿರುಗಾಳಿಯನ್ನು ಎದುರಿಸುವುದು
3. ಕೆಲವರು “ಪಂಥ ಭಯ”ವನ್ನು ಯಾವ ರೀತಿಯಲ್ಲಿ ಬಳಸುತ್ತಿದ್ದಾರೆ?
3 ಇತ್ತೀಚಿನ ವರ್ಷಗಳಲ್ಲಿ, ನಿಗೂಢ ಪಂಥಗಳು ಒಳಗೂಡಿರುವ ಸಾಮೂಹಿಕ ಆತ್ಮಹತ್ಯೆಗಳು, ಕೊಲೆಗಳು, ಮತ್ತು ಭಯೋತ್ಪಾದಕ ಆಕ್ರಮಣಗಳಂತಹ ಹಲವಾರು ಘೋರ ಪ್ರಕರಣಗಳು ನಡೆದಿವೆ. ಆದುದರಿಂದ, ಪ್ರಾಮಾಣಿಕ ರಾಜಕೀಯ ಗಣ್ಯವ್ಯಕ್ತಿಗಳನ್ನು ಸೇರಿಸಿ ಅನೇಕ ಇತರ ವ್ಯಕ್ತಿಗಳು ಮುಗ್ಧ ಜನರನ್ನು ವಿಶೇಷವಾಗಿ ಯುವಜನರನ್ನು ಅಂತಹ ಪಂಗಡಗಳಿಂದ ಕಾಪಾಡುವ ವಿಷಯದಲ್ಲಿ ಚಿಂತಿತರಾಗಿರುವುದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ. ಈ ನೀಚ ಪಾತಕಗಳ ಹಿಂದೆ ನಿಸ್ಸಂದೇಹವಾಗಿಯೂ “ಈ ಪ್ರಪಂಚದ ದೇವರ” ಕೈವಾಡವಿದ್ದು, ಯಾವುದನ್ನು ಕೆಲವರು ಒಂದು ರೀತಿಯ ಪಂಥ ಭಯವೆಂದು ಕರೆಯುತ್ತಾರೊ ಅದನ್ನು ಅವನೇ ಉಂಟುಮಾಡಿದ್ದಾನೆ. ಮತ್ತು ಇದನ್ನು ಅವನು ಯೆಹೋವನ ಜನರ ವಿರುದ್ಧ ಉಪಯೋಗಿಸುತ್ತಿದ್ದಾನೆ. (2 ಕೊರಿಂಥ 4:4; ಪ್ರಕಟನೆ 12:12) ಕೆಲವರು ಈ ಪಂಥ ಭಯವನ್ನು, ನಮ್ಮ ಕೆಲಸಕ್ಕೆ ವಿರೋಧವನ್ನು ತರಲಿಕ್ಕಾಗಿ ಬಳಸಿದ್ದಾರೆ. ಕೆಲವೊಂದು ದೇಶಗಳಲ್ಲಿ ಅವರು ಒಂದು ಚಳುವಳಿಯನ್ನು ಆರಂಭಿಸಿದ್ದಾರೆ. ಇದರ ಗುರಿಯು, “ಅಪಾಯಕಾರಿ ಪಂಥ”ಗಳಿಂದ ಜನರನ್ನು ಸಂರಕ್ಷಿಸುವುದಾಗಿದೆಯೆಂದು ಅವರು ಹೇಳಿಕೊಳ್ಳುತ್ತಾರೆ. ಈ ಪಂಥಗಳೊಂದಿಗೆ ಅವರು ತಪ್ಪಾಗಿ ಯೆಹೋವನ ಸಾಕ್ಷಿಗಳ ಹೆಸರನ್ನೂ ಸೇರಿಸುತ್ತಾ, ಈ ರೀತಿಯಲ್ಲಿ ನಮ್ಮನ್ನು ಪರೋಕ್ಷವಾಗಿ ಆಪಾದಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಯೂರೋಪಿನ ಕೆಲವೊಂದು ದೇಶಗಳಲ್ಲಿ ಮನೆಯಿಂದ ಮನೆಗೆ ಸಾಕ್ಷಿನೀಡುವುದು ಕಷ್ಟವಾಗಿದೆ. ನಮ್ಮೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದ ಕೆಲವರು ತಮ್ಮ ಅಭ್ಯಾಸವನ್ನೂ ನಿಲ್ಲಿಸಿದ್ದಾರೆ. ಮತ್ತು ಇದು ನಮ್ಮ ಕೆಲವೊಂದು ಸಹೋದರರ ಮೇಲೆ ನಕಾರಾತ್ಮಕವಾದ ಪರಿಣಾಮವನ್ನು ಬೀರಿದೆ.
4. ವಿರೋಧವು ನಮ್ಮನ್ನು ನಿರುತ್ತೇಜಿಸಬಾರದೇಕೆ?
4 ಆದರೆ, ವಿರೋಧವು ನಮ್ಮನ್ನು ನಿರುತ್ತೇಜಿಸುವುದಕ್ಕೆ ಬದಲಾಗಿ ನಾವು ನೈಜ ಕ್ರೈಸ್ತತ್ವವನ್ನು ಆಚರಿಸುತ್ತಿದ್ದೇವೆಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ಇನ್ನಷ್ಟು ಬಲಗೊಳಿಸಬೇಕು. (ಮತ್ತಾಯ 5:11, 12) ಆದಿ ಕ್ರೈಸ್ತರ ಮೇಲೆಯೂ, ಅವರು ಒಂದು ರಾಜದ್ರೋಹಿ ಪಂಗಡವಾಗಿದ್ದಾರೆಂಬ ಆರೋಪವನ್ನು ಹೊರಿಸಲಾಯಿತು ಮತ್ತು ಅವರ ಕುರಿತಾಗಿ ಎಲ್ಲೆಡೆಯೂ ‘ವಿರುದ್ಧವಾಗಿ ಮಾತಾಡಲಾಗುತ್ತಿತ್ತು.’ (ಅ. ಕೃತ್ಯಗಳು 24:5; 28:22) ಆದರೆ, ಅಪೊಸ್ತಲ ಪೇತ್ರನು ತನ್ನ ಜೊತೆ ವಿಶ್ವಾಸಿಗಳಿಗೆ ಹೀಗೆ ಬರೆಯುತ್ತಾ ಪುನರಾಶ್ವಾಸನೆ ನೀಡಿದ್ದು: “ಪ್ರಿಯರೇ, ನೀವು ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಟ್ಟದ್ದಕ್ಕೆ ಆಶ್ಚರ್ಯಪಡಬೇಡಿರಿ; ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ. ಆದರೆ ನೀವು ಎಷ್ಟರ ಮಟ್ಟಿಗೂ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷವುಳ್ಳವರಾಗಿರ್ರಿ; ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ.” (1 ಪೇತ್ರ 4:12, 13) ಅದೇ ರೀತಿಯಲ್ಲಿ, ಪ್ರಥಮ ಶತಮಾನದ ಆಡಳಿತ ಮಂಡಲಿಯ ಒಬ್ಬ ಸದಸ್ಯನು ಬರೆದುದು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:2-4) ಒಂದು ನೌಕೆಯು ಸಮುದ್ರಯಾನಕ್ಕೆ ಯೋಗ್ಯವಾಗಿದೆಯೋ ಇಲ್ಲವೋ ಎಂಬುದನ್ನು ಬಿರುಗಾಳಿಗಳು ಪರೀಕ್ಷಿಸುವಂತೆಯೇ, ವಿರೋಧದ ಬಿರುಗಾಳಿಗಳು ನಮ್ಮ ನಂಬಿಕೆಯ ಹಡಗಿನಲ್ಲಿ ಯಾವುದೇ ಕುಂದುಕೊರತೆಗಳಿರುವಲ್ಲಿ ಅವನ್ನು ಬಯಲುಪಡಿಸುವವು.
ಸಂಕಟವು ತಾಳ್ಮೆಯನ್ನು ಉತ್ಪಾದಿಸುತ್ತದೆ
5. ನಮ್ಮ ನಂಬಿಕೆಯು ಸಂಕಟದ ಕೆಳಗೂ ಸ್ಥಿರವಾಗಿರುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?
5 ಸಂಕಟದ ಬಿರುಗಾಳಿಗಳನ್ನು ಎದುರಿಸಿ ಪಾರಾದ ನಂತರವೇ ಕ್ರೈಸ್ತರು, ತಮ್ಮ ತಾಳ್ಮೆ ಮತ್ತು ನಂಬಿಕೆಯ ಸ್ಥಿರತೆಯ ಕುರಿತಾಗಿ ಖಾತ್ರಿಯಿಂದಿರಬಲ್ಲರು. ನಮಗೆ ಬಲವಾದ ನಂಬಿಕೆಯಿದ್ದು, ನಾವು ‘ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿ’ರುವಲ್ಲಿ ಮಾತ್ರ ನಮ್ಮ ತಾಳ್ಮೆಯು ಬಿರುಗಾಳಿಯಿಂದ ಕೂಡಿದ ಸಮುದ್ರದಲ್ಲಿ ‘ಸಿದ್ಧಿಗೆ ಬರುವುದು.’ ಪೌಲನು ಬರೆದುದು: “ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗಮಾಡಿಕೊಳ್ಳುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ . . . ಬಹು ತಾಳ್ಮೆಯನ್ನು ತೋರಿಸುತ್ತೇವೆ.”—2 ಕೊರಿಂಥ 6:3-5.
6. ನಾವು ‘ಉಪದ್ರವಗಳಲ್ಲಿಯೂ ಉಲ್ಲಾಸಿಸ’ಬೇಕು ಏಕೆ, ಮತ್ತು ಇದು ನಮ್ಮ ನಿರೀಕ್ಷೆಯನ್ನು ಹೇಗೆ ಬಲಪಡಿಸುತ್ತದೆ?
6 ನಾವು ಕೆಲವೊಮ್ಮೆ ಸಂಕಟದ ಬಿರುಗಾಳಿಗೆ ಸಿಕ್ಕಿ ಕಷ್ಟಾನುಭವಿಸುತ್ತಿರುವಾಗ, ಇವು ನಮ್ಮ ನಂಬಿಕೆಯ ಹಡಗು ಭದ್ರ ಮತ್ತು ಬಾಳಿಕೆ ಬರುವಂಥದ್ದಾಗಿದೆಯೆಂದು ರುಜುಪಡಿಸುವ ಅವಕಾಶಗಳಾಗಿವೆಯೆಂದು ಪರಿಗಣಿಸಬೇಕು. ರೋಮ್ನಲ್ಲಿದ್ದ ಕ್ರೈಸ್ತರಿಗೆ ಪೌಲನು ಹೀಗೆ ಬರೆದನು: “ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ. ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.” (ರೋಮಾಪುರ 5:3-5) ಪರೀಕ್ಷೆಗಳ ಎದುರಿನಲ್ಲೂ ಸ್ಥಿರಚಿತ್ತರಾಗಿರುವುದರಿಂದ ನಮಗೆ ಯೆಹೋವನ ಮೆಚ್ಚುಗೆಯು ಲಭಿಸುವುದು. ಮತ್ತು ಇದು ನಮ್ಮ ನಿರೀಕ್ಷೆಯನ್ನು ಬಲಗೊಳಿಸುತ್ತದೆ.
ಕೆಲವರು ಹಡಗು ಒಡೆತವನ್ನು ಅನುಭವಿಸಲು ಕಾರಣಗಳು
7. (ಎ) ಪೌಲನ ಮಾತುಗಳು ತೋರಿಸುವಂತೆ ಕೆಲವರು ಆತ್ಮಿಕ ಹಡಗು ಒಡೆತವನ್ನು ಅನುಭವಿಸಿದ್ದು ಹೇಗೆ? (ಬಿ) ಇಂದು ಕೆಲವರು ಸತ್ಯದಿಂದ ಹೇಗೆ ದೂರಸರಿದಿದ್ದಾರೆ?
7 ‘ಹಡಗು ಒಡೆತ’ವನ್ನು ಅನುಭವಿಸುವುದರ ಕುರಿತಾಗಿ ಪೌಲನು ಎಚ್ಚರಿಕೆ ನೀಡಿದಾಗ, ತಮ್ಮ ಒಳ್ಳೆಯ ಮನಸ್ಸಾಕ್ಷಿಯನ್ನು “ತಳ್ಳಿಬಿಟ್ಟು,” ನಂಬಿಕೆಯನ್ನು ಕಳೆದುಕೊಂಡಿರುವ ಕೆಲವು ವ್ಯಕ್ತಿಗಳು ಅವನ ಮನಸ್ಸಿನಲ್ಲಿದ್ದರು. (1 ತಿಮೊಥೆಯ 1:19) ಅವರೊಳಗೆ, ಸತ್ಯದಿಂದ ದೂರಸರಿದು ನಿಂದೆಯ ಮಾತುಗಳನ್ನು ಆಡುತ್ತಿದ್ದು, ಧರ್ಮಭ್ರಷ್ಟರಾಗಿ ಪರಿಣಮಿಸಿದ ಹುಮೆನಾಯ ಮತ್ತು ಅಲೆಕ್ಸಾಂದರರು ಇದ್ದರು. (1 ತಿಮೊಥೆಯ 1:20, ಪಾದಟಿಪ್ಪಣಿ; 2 ತಿಮೊಥೆಯ 2:17, 18) ಇಂದು ಸತ್ಯದಿಂದ ದೂರಸರಿಯುವ ಧರ್ಮಭ್ರಷ್ಟರು, ‘ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು’ ಮಾತಿನಲ್ಲೇ ಹೊಡೆಯುತ್ತಾರೆ. ಈ ರೀತಿಯಲ್ಲಿ ಅವರು ಕಾರ್ಯತಃ, ಆತ್ಮಿಕವಾಗಿ ಉಪ್ಪು ತಿಂದ ಮನೆಗೆ ಎರಡು ಬಗೆಯುವವರಾಗಿದ್ದಾರೆ. “ನನ್ನ ಯಜಮಾನನು ತಡಮಾಡುತ್ತಾನೆ” ಎಂದು ಪರೋಕ್ಷವಾಗಿ ಹೇಳುವ ಮೂಲಕ ಕೆಲವರು ‘ಕೆಟ್ಟ ಆಳನ್ನು’ ಹೋಲುತ್ತಾರೆ. (ಮತ್ತಾಯ 24:44-49; 2 ತಿಮೊಥೆಯ 4:14, 15) ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತಿರವಿದೆಯೆಂಬ ಸಂಗತಿಯನ್ನು ಅವರು ಅಲ್ಲಗಳೆಯುತ್ತಾರೆ. ಅಷ್ಟುಮಾತ್ರವಲ್ಲದೆ ಇವರು, ಆತ್ಮಿಕವಾಗಿ ಎಚ್ಚರವಾಗಿರುವ ಆಳು ಯೆಹೋವನ ಜನರಲ್ಲಿ ತುರ್ತು ಪ್ರಜ್ಞೆಯನ್ನು ಕಾಪಾಡಿಕೊಂಡು ಹೋಗುತ್ತಿರುವುದಕ್ಕಾಗಿ ಆ ಆಳನ್ನು ಟೀಕಿಸುತ್ತಾರೆ. (ಯೆಶಾಯ 1:3) ಅಂತಹ ಧರ್ಮಭ್ರಷ್ಟರು, ಆತ್ಮಿಕ ಹಡಗು ಒಡೆತವನ್ನು ಬರಮಾಡುತ್ತಾ, “ಕೆಲವರ ನಂಬಿಕೆಯನ್ನು ಕೆಡಿಸುವ”ದರಲ್ಲಿ ಸಫಲರಾಗುತ್ತಾರೆ.—2 ತಿಮೊಥೆಯ 2:18.
8. ಕೆಲವರು ತಮ್ಮ ನಂಬಿಕೆಯ ಹಡಗನ್ನು ಒಡೆದುಹಾಕಲು ಅಥವಾ ಮುಳುಗಿಸಿಬಿಡಲು ಕಾರಣವೇನು?
8 ಇನ್ನಿತರ ಸಮರ್ಪಿತ ಕ್ರೈಸ್ತರು, ತಮ್ಮ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು, ಈ ಲೋಕದ ಅನಿಯಂತ್ರಿತ ಮೋಜುಗಾರಿಕೆ ಮತ್ತು ಲೈಂಗಿಕ ಅನೈತಿಕತೆಯಲ್ಲಿ ಧುಮುಕುವ ಮೂಲಕ ತಮ್ಮ ನಂಬಿಕೆಯ ಹಡಗನ್ನು ಒಡೆದಿದ್ದಾರೆ. (2 ಪೇತ್ರ 2:20-22) ಇನ್ನಿತರರು ತಮ್ಮ ನಂಬಿಕೆಯ ಹಡಗನ್ನು ಮುಳುಗಿಸಿಬಿಡುತ್ತಾರೆ, ಏಕೆಂದರೆ ಅವರ ದೃಷ್ಟಿಕೋನದಲ್ಲಿ ಹೊಸ ವಿಷಯಗಳ ವ್ಯವಸ್ಥೆಯೆಂಬ ಬಂದರು, ಬಾನಂಚಿನಲ್ಲಿ ಇರುವಂತೆ ಅವರಿಗೆ ತೋರುವುದಿಲ್ಲ. ನಿರ್ದಿಷ್ಟ ಪ್ರವಾದನೆಗಳು ಯಾವಾಗ ನೆರವೇರುವವು ಎಂಬುದರ ಸಮಯದ ಲೆಕ್ಕಾಚಾರವನ್ನು ಮಾಡಲು ಅಶಕ್ತರಾಗಿರುವುದರಿಂದ ಮತ್ತು ತಮ್ಮ ಮನಸ್ಸಿನಿಂದ ಅವರು “ಯೆಹೋವನ ದಿನ”ವನ್ನು ತೆಗೆದುಹಾಕಿರುವುದರಿಂದ, ಅಂಥವರು ಸತ್ಯಾರಾಧನೆಯನ್ನು ತೊರೆದುಬಿಡುತ್ತಾರೆ. (2 ಪೇತ್ರ 3:10-13; 1 ಪೇತ್ರ 1:9) ಅವರು ಪುನಃ ಒಮ್ಮೆ ಸದ್ಯದ ವಿಷಯಗಳ ವ್ಯವಸ್ಥೆಯ ಮಬ್ಬಾದ, ಅಲ್ಲೋಲಕಲ್ಲೋಲವಾಗಿರುವ ಜಲಪ್ರವಾಹದಲ್ಲಿ ಸಿಕ್ಕಿಬೀಳುತ್ತಾರೆ. (ಯೆಶಾಯ 17:12, 13; 57:20) ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುವುದನ್ನು ನಿಲ್ಲಿಸಿರುವ ಕೆಲವರು, ಅದು ಸತ್ಯ ಧರ್ಮವನ್ನು ಅನುಸರಿಸುತ್ತದೆಂದು ಈಗಲೂ ನಂಬುತ್ತಾರೆ. ಆದರೆ, ಯೆಹೋವ ದೇವರು ವಾಗ್ದಾನಿಸಿರುವ ಹೊಸ ಲೋಕಕ್ಕಾಗಿ ಕಾದುಕೊಂಡಿರಲು ಬೇಕಾಗಿರುವ ಸಹನೆ ಮತ್ತು ತಾಳ್ಮೆ ಅವರಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಮೋದವನವು, ಅವರು ಎಣಿಸಿದಷ್ಟು ಬೇಗನೆ ಬಂದಿಲ್ಲ.
9. ಕೆಲವು ಸಮರ್ಪಿತ ಕ್ರೈಸ್ತರು ಏನನ್ನು ಮಾಡುತ್ತಿದ್ದಾರೆ, ಮತ್ತು ಈ ವಾಸ್ತವಾಂಶಗಳು ನಾವೇನನ್ನು ಪರಿಗಣಿಸುವಂತೆ ನಡಿಸುತ್ತವೆ?
9 ಲೋಕದ ಕೆಲವೊಂದು ಭಾಗಗಳಲ್ಲಿ ಕೆಲವು ಸಮರ್ಪಿತ ಕ್ರೈಸ್ತರು, ತಮ್ಮ ನಂಬಿಕೆಯ ಹಡಗಿನ ಪಟಗಳನ್ನು ಮಡಿಚಿಟ್ಟಿದ್ದಾರೆ. ಇದರಿಂದಾಗಿ ಅವರ ಹಡಗು ಇನ್ನೂ ತೇಲುತ್ತಾ ಇದೆ ನಿಜ. ಆದರೆ ಪೂರ್ಣ ನಂಬಿಕೆಯಿಂದ ವೇಗವಾಗಿ ಮುಂದೊತ್ತುವ ಬದಲಿಗೆ, ಅವರು ನಿಧಾನವಾಗಿ ಚಲಿಸುವುದನ್ನು ಆರಿಸಿಕೊಂಡಿದ್ದಾರೆ. ಕೆಲವರು, “ಪ್ರಮೋದವನ ಬೇಗನೆ ಬರಲಿದೆ” ಎಂಬ ನಿರೀಕ್ಷೆಯಿಂದ ಆಕರ್ಷಿಸಲ್ಪಟ್ಟು, ಅಲ್ಲಿ ಜೀವಿಸಲಿಕ್ಕಾಗಿ ಅಗತ್ಯವಿದ್ದದೆಲ್ಲವನ್ನು ಮಾಡಲು ಸಿದ್ಧರಿದ್ದರು. ಅವರು ಹುರುಪಿನಿಂದ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದರು ಮತ್ತು ಎಲ್ಲ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ಕ್ರಮವಾಗಿ ಉಪಸ್ಥಿತರಿರುತ್ತಿದ್ದರು. ಆದರೆ ಈಗ, ತಮ್ಮ ನಿರೀಕ್ಷೆಗಳು ತಾವು ಎದುರುನೋಡುತ್ತಿದ್ದ ಸಮಯಕ್ಕಿಂತಲೂ ತೀರ ತಡವಾಗಿ ಸಕಾರಗೊಳ್ಳುವವೆಂದು ನೆನಸುತ್ತಾ, ಒಂದು ಕಾಲದಲ್ಲಿ ಅವರು ಮಾಡಲು ಸಿದ್ಧರಿದ್ದಂತಹ ಕೆಲಸವನ್ನು ಮಾಡಲು ಅವರಿಗೆ ಮನಸ್ಸಿಲ್ಲ. ಸಾರುವ ಚಟುವಟಿಕೆಯಲ್ಲಿ ಇಳಿತ, ಕೂಟಗಳಿಗೆ ಕ್ರಮವಾಗಿ ಹಾಜರಾಗದಿರುವುದು, ಮತ್ತು ಸಮ್ಮೇಳನ ಹಾಗೂ ಅಧಿವೇಶನ ಕಾರ್ಯಕ್ರಮಗಳ ಭಾಗಗಳನ್ನು ತಪ್ಪಿಸಲು ಸಿದ್ಧರಿರುವ ಸಂಗತಿಯಿಂದ ಇದು ತಿಳಿದುಬರುತ್ತದೆ. ಇನ್ನಿತರರು ಮನೋರಂಜನೆಗಾಗಿ ಮತ್ತು ಐಹಿಕ ಸುಖಸೌಕರ್ಯಗಳನ್ನು ಪಡೆಯುವುದರಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿದ್ದಾರೆ. ಈ ವಾಸ್ತವಾಂಶಗಳು, ಯೆಹೋವನಿಗೆ ನಾವು ಮಾಡಿರುವ ಸಮರ್ಪಣೆಗೆ ಹೊಂದಿಕೆಯಲ್ಲಿ ನಮ್ಮ ಜೀವಿತದಲ್ಲಿನ ಚಾಲಕ ಶಕ್ತಿಯು ಏನಾಗಿರಬೇಕೆಂಬುದನ್ನು ಪರಿಗಣಿಸುವಂತೆ ನಡೆಸುತ್ತವೆ. ಆತನ ಸೇವೆಯಲ್ಲಿನ ನಮ್ಮ ಹುರುಪು, “ಪ್ರಮೋದವನವು ಬೇಗನೆ ಬರಲಿದೆ” ಎಂಬ ನಿರೀಕ್ಷೆಯ ಮೇಲೆ ಮಾತ್ರ ಆಧಾರಿತವಾಗಿರಬೇಕೋ?
ಲಂಗರಿಗೆ ಹೋಲಿಸಲ್ಪಟ್ಟಿರುವ ನಿರೀಕ್ಷೆ
10, 11. ಪೌಲನು ನಮ್ಮ ನಿರೀಕ್ಷೆಯನ್ನು ಯಾವುದಕ್ಕೆ ಹೋಲಿಸಿದನು, ಮತ್ತು ಈ ಹೋಲಿಕೆಯು ಏಕೆ ಸೂಕ್ತವಾಗಿದೆ?
10 ಅಬ್ರಹಾಮನ ಮೂಲಕ ಬರುವ ಆಶೀರ್ವಾದಗಳ ಕುರಿತು ಯೆಹೋವನು ಒಂದು ವಾಗ್ದಾನವನ್ನು ಮಾಡಿದನೆಂದು ಪೌಲನು ಸೂಚಿಸಿದನು. ಅನಂತರ ಅಪೊಸ್ತಲನು ವಿವರಿಸಿದ್ದು: “ದೇವರು . . . ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು. . . . ಎರಡು ನಿಶ್ಚಲವಾದ ಆಧಾರಗಳು [ತನ್ನ ಮಾತು ಮತ್ತು ತನ್ನ ಆಣೆ] ಇರುವ ಕಾರಣ ಬಲವಾದ ಧೈರ್ಯವುಂಟಾಯಿತು. ಈ ಆಧಾರಗಳನ್ನು ಕೊಟ್ಟದ್ದರಲ್ಲಿ ದೇವರು ಸುಳ್ಳಾಡಿರಲಾರನು. ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ ಆಗಿದೆ.” (ಇಬ್ರಿಯ 6:17-19; ಆದಿಕಾಂಡ 22:16-18) ಅಭಿಷಿಕ್ತ ಕ್ರೈಸ್ತರ ಮುಂದೆ ಇಡಲ್ಪಟ್ಟಿರುವ ನಿರೀಕ್ಷೆಯು ಸ್ವರ್ಗದಲ್ಲಿ ಅಮರ ಜೀವನವಾಗಿದೆ. ಇಂದು, ಯೆಹೋವನ ಸೇವಕರಲ್ಲಿ ಅಧಿಕಾಂಶ ಮಂದಿಗೆ ಪ್ರಮೋದವನ ಭೂಮಿಯಲ್ಲಿ ನಿತ್ಯಜೀವದ ಅತ್ಯುತ್ಕೃಷ್ಟ ನಿರೀಕ್ಷೆಯಿದೆ. (ಲೂಕ 23:43) ಅಂತಹ ನಿರೀಕ್ಷೆಯಿಲ್ಲದೆ, ಒಬ್ಬ ವ್ಯಕ್ತಿಗೆ ನಂಬಿಕೆಯಿರಲು ಸಾಧ್ಯವಿಲ್ಲ.
11 ಒಂದು ಲಂಗರು, ಹಡಗಿಗೆ ಶಕ್ತಿಶಾಲಿಯಾದ ಸುರಕ್ಷೆಯ ಸಾಧನವಾಗಿದೆ. ಹಡಗೊಂದನ್ನು ಒಂದು ಕಡೆ ನಿಲ್ಲಿಸಿ, ಅದು ತೇಲಿಹೋಗುವುದನ್ನು ತಡೆಯಲಿಕ್ಕಾಗಿ ಇದು ಅತ್ಯಗತ್ಯ. ಯಾವ ನಾವಿಕನೂ ಲಂಗರಿಲ್ಲದೆ ಬಂದರಿನಿಂದ ಹೊರಡುವ ಸಾಹಸವನ್ನು ಮಾಡಲಾರನು. ಪೌಲನು ಪ್ರಯಾಣಿಸುತ್ತಿದ್ದಾಗ ಅನೇಕಸಲ ಹಡಗು ಒಡೆತವಾಗಿದ್ದುದರಿಂದ, ಸಮುದ್ರಯಾನಿಗಳ ಜೀವಗಳು ಅವರ ಹಡಗಿನ ಲಂಗರುಗಳ ಮೇಲೆ ಅವಲಂಬಿಸುತ್ತಿತ್ತೆಂದು ಅವನಿಗೆ ಅನುಭವದಿಂದ ತಿಳಿದಿತ್ತು. (ಅ. ಕೃತ್ಯಗಳು 27:29, 39, 40; 2 ಕೊರಿಂಥ 11:25) ಪ್ರಥಮ ಶತಮಾನದಲ್ಲಿದ್ದ ಹಡಗುಗಳಲ್ಲಿ, ಕ್ಯಾಪ್ಟನನು ತನಗೆ ಇಷ್ಟಬಂದಂತೆ ಚಲಾಯಿಸಬಹುದಾದ ಇಂಜಿನುಗಳಿರುತ್ತಿರಲಿಲ್ಲ. ಹುಟ್ಟುಹಾಕಿ ನಡೆಸಲ್ಪಟ್ಟ ಯುದ್ಧನೌಕೆಗಳನ್ನು ಬಿಟ್ಟು, ಬೇರೆಲ್ಲ ಹಡಗುಗಳು ಮುಂದೆ ಚಲಿಸಲಿಕ್ಕಾಗಿ ಪ್ರಮುಖವಾಗಿ ಗಾಳಿಯ ಮೇಲೆ ಅವಲಂಬಿಸುತ್ತಿದ್ದವು. ಹಡಗು ಬಂಡೆಗಳತ್ತ ರಭಸದಿಂದ ತಳ್ಳಲ್ಪಡುವಲ್ಲಿ, ಬಿರುಗಾಳಿಯಿಂದ ಪಾರಾಗಿ ಉಳಿಯಲು ಲಂಗರನ್ನು ಹಾಕುವುದನ್ನು ಬಿಟ್ಟು ಕ್ಯಾಪ್ಟನನಿಗೆ ಬೇರೆ ಯಾವುದೇ ಮಾರ್ಗವಿರುತ್ತಿರಲಿಲ್ಲ. ಆ ಲಂಗರು ಸಮುದ್ರತಳದಲ್ಲಿ ತನ್ನ ಹಿಡಿತವನ್ನು ಸಡಿಲಿಸುವುದಿಲ್ಲವೆಂಬ ಭರವಸೆ ಅವನಿಗಿರಬೇಕಿತ್ತು. ಆದುದರಿಂದಲೇ ಪೌಲನು ಒಬ್ಬ ಕ್ರೈಸ್ತನ ನಿರೀಕ್ಷೆಯನ್ನು ‘ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ ಆಗಿರುವ ಲಂಗರಿಗೆ’ ಹೋಲಿಸಿದನು. (ಇಬ್ರಿಯ 6:19) ವಿರೋಧದ ಬಿರುಗಾಳಿಗಳನ್ನು ಎದುರಿಸುತ್ತಿರುವಾಗ ಅಥವಾ ಇನ್ನಿತರ ಪರೀಕ್ಷೆಗಳನ್ನು ಅನುಭವಿಸುತ್ತಿರುವಾಗ, ನಮ್ಮ ಅದ್ಭುತವಾದ ನಿರೀಕ್ಷೆಯು ಜೀವಂತ ಪ್ರಾಣಗಳಾಗಿರುವ ನಮ್ಮನ್ನು ಸ್ಥಿರಗೊಳಿಸುವ ಒಂದು ಲಂಗರಿನಂತಿದೆ. ಹೀಗೆ ನಮ್ಮ ನಂಬಿಕೆಯ ಹಡಗು, ಸಂದೇಹದ ಮರಳು ದಿಬ್ಬಗಳು ಅಥವಾ ಧರ್ಮಭ್ರಷ್ಟತೆಯ ವಿಪತ್ಕಾರಕ ಬಂಡೆಗಳತ್ತ ತೇಲಿಹೋಗದು.—ಇಬ್ರಿಯ 2:1; ಯೂದ 8-13.
12. ಯೆಹೋವನಿಂದ ದೂರಸರಿಯುವುದನ್ನು ನಾವು ಹೇಗೆ ತಪ್ಪಿಸಿಕೊಳ್ಳಬಹುದು?
12 ಪೌಲನು ಇಬ್ರಿಯ ಕ್ರೈಸ್ತರನ್ನು ಎಚ್ಚರಿಸಿದ್ದು: “ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು.” (ಇಬ್ರಿಯ 3:12) ಗ್ರೀಕ್ ಗ್ರಂಥಪಾಠದಲ್ಲಿ “ಬಿಟ್ಟುಹೋಗು” ಎಂಬ ಪದದ ಅಕ್ಷರಾರ್ಥವು, “ದೂರ ಸರಿದು ನಿಲ್ಲು,” ಅಂದರೆ ಧರ್ಮಭ್ರಷ್ಟನಾಗು ಎಂದಾಗಿದೆ. ಆದರೆ, ನಾವು ಅಂತಹ ಸಂಪೂರ್ಣ ಹಡಗೊಡೆತವನ್ನು ತಪ್ಪಿಸಬಲ್ಲೆವು. ನಂಬಿಕೆ ಮತ್ತು ನಿರೀಕ್ಷೆಯು, ಪರೀಕ್ಷೆಯ ಅತ್ಯಂತ ಪ್ರಚಂಡ ಬಿರುಗಾಳಿಯ ಸಮಯದಲ್ಲೂ ನಾವು ಯೆಹೋವನಿಗೆ ಅಂಟಿಕೊಂಡಿರಲು ನಮ್ಮನ್ನು ಶಕ್ತಗೊಳಿಸುವುದು. (ಧರ್ಮೋಪದೇಶಕಾಂಡ 4:4; 30:19, 20) ನಮ್ಮ ನಂಬಿಕೆಯು, ಧರ್ಮಭ್ರಷ್ಟ ಬೋಧನೆಯ ಗಾಳಿಯಿಂದ ಅತ್ತಿತ್ತ ಹೊಯ್ದಾಡುವ ಒಂದು ಹಡಗಿನಂತೆ ಇರದು. (ಎಫೆಸ 4:13, 14) ಮತ್ತು ನಿರೀಕ್ಷೆಯು ನಮ್ಮ ಲಂಗರಾಗಿರುವುದರಿಂದ, ಯೆಹೋವನ ಸೇವಕರಾಗಿಯೇ ಮುಂದುವರಿಯುತ್ತಾ ನಾವು ಜೀವಿತದ ಬಿರುಗಾಳಿಯಿಂದ ಪಾರಾಗಿ ಹೊರಬರಲು ಶಕ್ತರಾಗಿರುವೆವು.
ಪ್ರೀತಿ ಮತ್ತು ಪವಿತ್ರಾತ್ಮದಿಂದ ಪ್ರಚೋದಿತರು
13, 14. (ಎ) ಕೇವಲ ನಿರೀಕ್ಷೆಯ ಲಂಗರು ಮಾತ್ರ ಸಾಕಾಗುವುದಿಲ್ಲ ಏಕೆ? (ಬಿ) ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸಲು ಪ್ರಚೋದಕ ಶಕ್ತಿ ಯಾವುದಾಗಿರಬೇಕು ಮತ್ತು ಏಕೆ?
13 ಒಬ್ಬ ಕ್ರೈಸ್ತನು, ಭೂಪ್ರಮೋದವನದಲ್ಲಿ ಸದಾ ಜೀವಿಸುವ ಉದ್ದೇಶಕ್ಕಾಗಿ ಮಾತ್ರ ಯೆಹೋವನನ್ನು ಸೇವಿಸುವಲ್ಲಿ, ಅವನು ಹೊಸ ವ್ಯವಸ್ಥೆಯತ್ತ ಪ್ರಗತಿಮಾಡುವುದಿಲ್ಲ. ತನ್ನ ನಿರೀಕ್ಷೆಯ ಲಂಗರನ್ನು ಅವನು ತನ್ನ ಜೀವಿತದಲ್ಲಿ ಒಂದು ಸ್ಥಿರೀಕರಿಸುವ ಶಕ್ತಿಯಾಗಿರಿಸಬೇಕು. ಆದರೆ ಅದೇ ಸಮಯದಲ್ಲಿ, ಅವನು ಆ ನಿರೀಕ್ಷೆಗೆ ಮತ್ತು ಅವನ ನಂಬಿಕೆಗೆ, ಪ್ರೀತಿಯ ಪ್ರಚೋದಕ ಶಕ್ತಿಯನ್ನೂ ಕೂಡಿಸಬೇಕು. ಪೌಲನು ಹೀಗೆ ಬರೆದಾಗ ಈ ವಾಸ್ತವಾಂಶವನ್ನು ಎತ್ತಿತೋರಿಸಿದನು: “ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.”—1 ಕೊರಿಂಥ 13:13.
14 ಯೆಹೋವನಿಗಾಗಿ ಹೃದಯದಾಳದ ಪ್ರೀತಿಯೇ, ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸಲು ನಮ್ಮನ್ನು ಪ್ರಚೋದಿಸುವ ಶಕ್ತಿಯಾಗಿರಬೇಕು. ಆತನು ನಮಗಾಗಿ ತೋರಿಸಿರುವ ಅಪರಿಮಿತವಾದ ಪ್ರೀತಿಗೆ ಸ್ಪಂದಿಸುತ್ತಾ, ನಾವು ಸಹ ಅಂತಹದ್ದೇ ಪ್ರೀತಿಯನ್ನು ತೋರಿಸಬೇಕು. ಅಪೊಸ್ತಲ ಯೋಹಾನನು ಬರೆದುದು: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು. ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾನ 4:8, 9, 19) ಯೆಹೋವನ ಕಡೆಗೆ ಕೃತಜ್ಞತೆಯಿರುವಲ್ಲಿ, ನಮ್ಮ ಮುಖ್ಯ ಚಿಂತೆಯು, ಆತನ ಪವಿತ್ರ ನಾಮದ ಪವಿತ್ರೀಕರಣ ಮತ್ತು ಆತನ ನೀತಿಯುಕ್ತ ಪರಮಾಧಿಕಾರದ ನಿರ್ದೋಷೀಕರಣವನ್ನು ನೋಡುವುದೇ ಆಗಿರಬೇಕು ಹೊರತು ನಮ್ಮ ವೈಯಕ್ತಿಕ ರಕ್ಷಣೆಯಲ್ಲ.
15. ಯೆಹೋವನಿಗಾಗಿರುವ ನಮ್ಮ ಪ್ರೀತಿಯು, ಆತನ ಪರಮಾಧಿಕಾರದ ವಾದಾಂಶದೊಂದಿಗೆ ಹೇಗೆ ಸಂಬಂಧಿಸುತ್ತದೆ?
15 ನಾವು ಕೇವಲ ಪ್ರಮೋದವನವನ್ನಲ್ಲ ಬದಲಾಗಿ ಯೆಹೋವನನ್ನು ಪ್ರೀತಿಸುವ ಕಾರಣದಿಂದಲೇ ಆತನಿಗೆ ಸೇವೆಸಲ್ಲಿಸಬೇಕೆಂದು ಆತನು ಬಯಸುತ್ತಾನೆ. ಶಾಸ್ತ್ರಗಳ ಒಳನೋಟa (ಇಂಗ್ಲಿಷ್) ಎಂಬ ಬೈಬಲ್ ವಿಶ್ವಕೋಶವು ತಿಳಿಸುವುದು: “ತನ್ನ ಪರಮಾಧಿಕಾರ ಮತ್ತು ತನ್ನ ಸೃಷ್ಟಿಜೀವಿಗಳು ಅದಕ್ಕೆ ಕೊಡುವ ಬೆಂಬಲವು ಪ್ರಮುಖವಾಗಿ ಪ್ರೀತಿಯ ಮೇಲೆ ಆಧಾರಿತವಾಗಿದೆಯೆಂಬ ವಾಸ್ತವಾಂಶದ ಕುರಿತು ಯೆಹೋವನು ಹೆಮ್ಮೆಪಡುತ್ತಾನೆ. ತನ್ನ ಉತ್ತಮ ಗುಣಗಳಿಗೋಸ್ಕರ ಮತ್ತು ತನ್ನ ಪರಮಾಧಿಕಾರವು ನೀತಿಯುಕ್ತವಾಗಿರುವುದರಿಂದಲೇ ಅದನ್ನು ಪ್ರೀತಿಸುವ ಮತ್ತು ಬೇರೆ ಯಾವುದೇ ಪ್ರಭುತ್ವಕ್ಕಿಂತಲೂ ತನ್ನ ಪರಮಾಧಿಕಾರವನ್ನು ಇಷ್ಟಪಡುವವರನ್ನು ಮಾತ್ರ ಆತನು ಅಪೇಕ್ಷಿಸುತ್ತಾನೆ. (1ಕೊರಿಂ 2:9) ಇವರು ಸ್ವತಂತ್ರರಾಗಿರುವ ಬದಲಿಗೆ ಆತನ ಪರಮಾಧಿಕಾರದ ಕೆಳಗೆ ಸೇವೆಸಲ್ಲಿಸುವ ಆಯ್ಕೆಮಾಡುತ್ತಾರೆ. ಅವರಿದನ್ನು ಮಾಡುವುದು ಏಕೆಂದರೆ, ಆತನ ಕುರಿತು ಮತ್ತು ಆತನ ಪ್ರೀತಿ, ನ್ಯಾಯ ಹಾಗೂ ವಿವೇಕದ ಕುರಿತಾದ ಜ್ಞಾನ ಅವರಲ್ಲಿದೆ. ಮತ್ತು ಇವೆಲ್ಲವೂ ತಮ್ಮಲ್ಲಿ ಇರುವ ಆ ಗುಣಗಳನ್ನು ತುಂಬ ಮೀರುತ್ತದೆಂದು ಅವರು ಗ್ರಹಿಸುತ್ತಾರೆ. (ಕೀರ್ತ 84:10, 11)”—ಸಂಪುಟ 2, ಪುಟ 275.
16. ಯೇಸುವಿಗಾಗಿರುವ ಪ್ರೀತಿಯು ನಮ್ಮ ಜೀವಿತಗಳಲ್ಲಿ ಒಂದು ಪ್ರಚೋದಕ ಶಕ್ತಿಯಾಗಿದೆ ಹೇಗೆ?
16 ಯೇಸು ನಮಗೋಸ್ಕರ ತೋರಿಸಿದ ಪ್ರೀತಿಗೆ ಸ್ಪಂದಿಸುತ್ತಾ, ಕ್ರೈಸ್ತರೋಪಾದಿ ನಾವು ಸಹ ಆತನಿಗೆ ಪ್ರೀತಿಯನ್ನು ತೋರಿಸುತ್ತೇವೆ. ಪೌಲನು ಹೀಗೆ ತರ್ಕಿಸಿದನು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡೆವು. ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಯೇಸು, ನಮ್ಮ ಆತ್ಮಿಕ ಜೀವಿತ, ನಮ್ಮ ನಿರೀಕ್ಷೆ ಮತ್ತು ನಮ್ಮ ನಂಬಿಕೆಯು ಯಾವುದರ ಮೇಲೆ ಕಟ್ಟಲ್ಪಟ್ಟಿದೆಯೊ ಆ ಅಸ್ತಿವಾರವಾಗಿದ್ದಾನೆ. ಯೇಸು ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಯು, ವಿಶೇಷವಾಗಿ ಬಿರುಗಾಳಿಯಂತಹ ಪರೀಕ್ಷೆಯ ಸಮಯಗಳಲ್ಲಿ ನಮ್ಮ ನಿರೀಕ್ಷೆಯನ್ನು ಹುರಿದುಂಬಿಸಿ ನಮ್ಮ ನಂಬಿಕೆಯನ್ನು ಸ್ಥಿರಗೊಳಿಸುತ್ತದೆ.—1 ಕೊರಿಂಥ 3:11; ಕೊಲೊಸ್ಸೆ 1:23; 2:6, 7.
17. ಯೆಹೋವನು ನಮಗೆ ಯಾವ ಬಲವತ್ತಾದ ಶಕ್ತಿಯನ್ನು ಕೊಡುತ್ತಾನೆ, ಮತ್ತು ಅ. ಕೃತ್ಯಗಳು 1:8 ಹಾಗೂ ಎಫೆಸ 3:16ರಲ್ಲಿ ಅದರ ಮಹತ್ವವನ್ನು ಹೇಗೆ ತೋರಿಸಲಾಗಿದೆ?
17 ಕ್ರೈಸ್ತರೋಪಾದಿ, ನಮ್ಮ ಜೀವಿತಗಳಲ್ಲಿ ದೇವರಿಗಾಗಿ ಮತ್ತು ಆತನ ಮಗನಿಗಾಗಿ ನಮ್ಮ ಪ್ರೀತಿಯು ಮುಖ್ಯ ಪ್ರಚೋದಕ ಶಕ್ತಿಯಾಗಿದೆ. ಇದಲ್ಲದೆ, ನಮ್ಮನ್ನು ಪ್ರಚೋದಿಸುವ, ನಮಗೆ ಶಕ್ತಿನೀಡುವ, ಮತ್ತು ಆತನ ಸೇವೆಯಲ್ಲಿ ಮುಂದೊತ್ತಲು ಬಲವನ್ನು ಕೊಡುವ ಬೇರೊಂದು ವಿಷಯವನ್ನು ಯೆಹೋವನು ನಮಗೆ ಒದಗಿಸುತ್ತಾನೆ. ಅದು ಆತನ ಕಾರ್ಯಕಾರಿ ಶಕ್ತಿ, ಅಥವಾ ಪವಿತ್ರಾತ್ಮವಾಗಿದೆ. “ಆತ್ಮ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಪದಗಳು ಮೂಲಭೂತವಾಗಿ, ಗಾಳಿಯಂತಹ ವಾಯುವಿನ ಬಲವತ್ತಾದ ಚಲನೆಯನ್ನು ಸೂಚಿಸುತ್ತವೆ. ಪೌಲನು ಪ್ರಯಾಣಿಸಿದಂತಹ ರೀತಿಯ ನೌಕಾ ಹಡಗುಗಳು, ತಮ್ಮ ಗಮ್ಯಸ್ಥಾನಕ್ಕೆ ಸೇರಲು ಗಾಳಿಯ ಅದೃಶ್ಯ ಶಕ್ತಿಯ ಮೇಲೆ ಅವಲಂಬಿಸುತ್ತಿದ್ದವು. ತದ್ರೀತಿಯಲ್ಲಿ, ನಮ್ಮ ನಂಬಿಕೆಯ ಹಡಗು ನಮ್ಮನ್ನು ಯೆಹೋವನ ಸೇವೆಯಲ್ಲಿ ಮುಂದೊತ್ತುವಂತೆ ಮಾಡಬೇಕಾದರೆ, ನಮಗೆ ಪ್ರೀತಿ ಮತ್ತು ದೇವರ ಅದೃಶ್ಯ ಕಾರ್ಯಕಾರಿ ಶಕ್ತಿಯ ಕಾರ್ಯಾಚರಣೆಯು ಅಗತ್ಯವಾಗಿದೆ.—ಅ. ಕೃತ್ಯಗಳು 1:8; ಎಫೆಸ 3:16.
ನಮ್ಮ ಗಮ್ಯಸ್ಥಾನಕ್ಕೆ ಮುಂದೊತ್ತೋಣ!
18. ನಮ್ಮ ನಂಬಿಕೆಗೆ ಭವಿಷ್ಯತ್ತಿನಲ್ಲಿ ಎದುರಾಗಬಹುದಾದ ಯಾವುದೇ ಪರೀಕ್ಷೆಗಳನ್ನು ತಾಳಿಕೊಳ್ಳಲು ನಮಗೆ ಯಾವುದು ಸಹಾಯಮಾಡುವುದು?
18 ನಾವು ಹೊಸ ವ್ಯವಸ್ಥೆಯನ್ನು ತಲಪುವ ಮುಂಚೆ, ನಮ್ಮ ನಂಬಿಕೆ ಮತ್ತು ಪ್ರೀತಿಯು ಕಠಿನವಾದ ಪರೀಕ್ಷೆಗೊಳಗಾಗಬಹುದು. ಆದರೆ ಯೆಹೋವನು ನಮಗೆ ನಮ್ಮ ಅದ್ಭುತಕರವಾದ ನಿರೀಕ್ಷೆಯೆಂಬ, ‘ಭರವಸಕ್ಕೆ ಯೋಗ್ಯವಾದ ಮತ್ತು ಸ್ಥಿರವಾದ’ ಲಂಗರನ್ನು ಒದಗಿಸಿದ್ದಾನೆ. (ಇಬ್ರಿಯ 6:19; ರೋಮಾಪುರ 15:4, 13) ನಮ್ಮ ಮೇಲೆ ವಿರೋಧ ಅಥವಾ ಇತರ ಪರೀಕ್ಷೆಗಳ ದಾಳಿಯಾಗುವಾಗ, ನಮ್ಮ ನಿರೀಕ್ಷೆಯ ಲಂಗರಿಗೆ ಭದ್ರವಾಗಿ ಬಿಗಿಯಲ್ಪಟ್ಟಿರುವಲ್ಲಿ ನಾವು ತಾಳಿಕೊಳ್ಳಬಲ್ಲೆವು. ಒಂದು ಬಿರುಗಾಳಿಯು ಶಾಂತವಾಗಿ ಇನ್ನೊಂದು ಆರಂಭವಾಗುವ ಮುಂಚೆ, ನಾವು ನಮ್ಮ ನಿರೀಕ್ಷೆಯನ್ನು ದೃಢಪಡಿಸಿ, ನಮ್ಮ ನಂಬಿಕೆಯನ್ನು ಬಲಪಡಿಸುವ ದೃಢನಿರ್ಧಾರವನ್ನು ಮಾಡೋಣ.
19. ನಮ್ಮ ನಂಬಿಕೆಯ ಹಡಗನ್ನು ನಾವು ಹೇಗೆ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತ, ದೇವರ ಹೊಸ ಲೋಕವೆಂಬ ಬಂದರನ್ನು ತಲಪಬಹುದು?
19 ‘ಪ್ರಾಣಕ್ಕೆ ಲಂಗರ’ದ ಕುರಿತಾಗಿ ತಿಳಿಸುವ ಮುಂಚೆ ಪೌಲನು ಹೇಳಿದ್ದು: “ನೀವು ಉಪಚಾರಮಾಡುವದರಲ್ಲಿ ಯಾವ ಆಸಕ್ತಿಯನ್ನು ತೋರಿಸಿದ್ದೀರೋ ನಿಮ್ಮ ನಿರೀಕ್ಷೆ ದೃಢ ಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು [“ವೇಗ ಹೆಚ್ಚಿಸಬೇಕೆಂದು,” NW ಪಾದಟಿಪ್ಪಣಿ] ಅಪೇಕ್ಷಿಸುತ್ತೇವೆ. ನೀವು ಮಂದಮತಿಗಳಾಗಿರದೆ ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳ ವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.” (ಇಬ್ರಿಯ 6:11, 12) ಯೆಹೋವನಿಗಾಗಿ ಮತ್ತು ಆತನ ಪುತ್ರನಿಗಾಗಿ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು ಮತ್ತು ಪವಿತ್ರಾತ್ಮದಿಂದ ಶಕ್ತಿಭರಿತರಾಗಿ, ದೇವರ ವಾಗ್ದತ್ತ ಹೊಸ ಲೋಕದ ಬಂದರನ್ನು ನಾವು ತಲಪುವ ತನಕ ನಮ್ಮ ನಂಬಿಕೆಯ ಹಡಗನ್ನು ಸರಿಯಾದ ದಿಕ್ಕಿನಲ್ಲಿ ಚಲಿಸೋಣ.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
ಪುನರ್ವಿಮರ್ಶೆ
◻ ನಮ್ಮ ನಂಬಿಕೆಯ ಸಂಬಂಧದಲ್ಲಿ, ಪೌಲನು ನಮಗೆ ಯಾವ ಎಚ್ಚರಿಕೆಯನ್ನು ಕೊಟ್ಟನು?
◻ ಕೆಲವರು ಆತ್ಮಿಕ ಹಡಗು ಒಡೆತವನ್ನು ಹೇಗೆ ಅನುಭವಿಸಿದ್ದಾರೆ, ಮತ್ತು ಇನ್ನಿತರರು ಹೇಗೆ ನಿಧಾನಿಸುತ್ತಿದ್ದಾರೆ?
◻ ನಮ್ಮ ನಂಬಿಕೆಯ ಜೊತೆಯಲ್ಲಿ ಯಾವ ದೈವಿಕ ಗುಣವು ಸೇರಿಸಲ್ಪಡಬೇಕು?
◻ ದೇವರ ವಾಗ್ದತ್ತ ಹೊಸ ಲೋಕದ ಬಂದರನ್ನು ತಲಪಲು ನಮಗೆ ಯಾವುದು ಸಹಾಯಮಾಡುವುದು?
[ಪುಟ 16 ರಲ್ಲಿರುವ ಚಿತ್ರ]
ಜೀವಿತದಲ್ಲಿನ ಬಿರುಗಾಳಿಗಳನ್ನು ಎದುರಿಸಲಿಕ್ಕಾಗಿ ನಮ್ಮ ನಂಬಿಕೆಯ ಹಡಗು ಚೆನ್ನಾಗಿ ಕಟ್ಟಲ್ಪಟ್ಟಿರಬೇಕು
[ಪುಟ 17 ರಲ್ಲಿರುವ ಚಿತ್ರ]
ನಮ್ಮ ನಂಬಿಕೆಯು ಹಡಗು ಒಡೆತಕ್ಕೊಳಗಾಗಸಾಧ್ಯವಿದೆ
[ಪುಟ 18 ರಲ್ಲಿರುವ ಚಿತ್ರ]
ಕ್ರೈಸ್ತರೋಪಾದಿ ನಮ್ಮ ಜೀವಿತಕ್ಕೆ ನಿರೀಕ್ಷೆಯು ಒಂದು ಲಂಗರಾಗಿದೆ