ನಾವೆಂದಿಗೂ ಹಿಂದೆಗೆದವರಾಗಿ ನಾಶವಾಗದಿರೋಣ!
“ನಾವಾದರೋ ಹಿಂದೆಗೆದವರಾಗಿ ನಾಶವಾಗುವಂತಹ ಜನರಲ್ಲ.”—ಇಬ್ರಿಯ 10:39, NW.
1. ಯಾವ ಸನ್ನಿವೇಶಗಳಲ್ಲಿ ಅಪೊಸ್ತಲ ಪೇತ್ರನು ಭಯಕ್ಕೆ ವಶನಾದನು?
ಅಪೊಸ್ತಲರೆಲ್ಲರೂ ತನ್ನನ್ನು ಬಿಟ್ಟು ಓಡಿಹೋಗುವರೆಂದು ಅವರ ಪ್ರಿಯ ಯಜಮಾನನಾದ ಯೇಸು ಹೇಳಿದಾಗ, ಆ ಮಾತುಗಳನ್ನು ಅವರು ನಂಬಲಿಲ್ಲ. ಯೇಸುವಿಗೆ ಅವರ ಬೆಂಬಲದ ಅಗತ್ಯ ಹೆಚ್ಚಾಗಿದ್ದಂತಹ ಒಂದು ಸಮಯದಲ್ಲಿ, ಅವನನ್ನು ಬಿಟ್ಟುಹೋಗುವುದರ ಕುರಿತು ಅವರು ಮನಸ್ಸಿನಲ್ಲಿಯಾದರೂ ನೆನಸಸಾಧ್ಯವಿತ್ತೊ? ಪೇತ್ರನು ಒತ್ತಿಹೇಳಿದ್ದು: “ಎಲ್ಲರೂ ದಿಗಿಲುಪಟ್ಟು ಹಿಂಜರಿದರೂ ನಾನು ಹಿಂಜರಿಯುವದಿಲ್ಲ.” ನಿಜ, ಪೇತ್ರನು ಒಬ್ಬ ಧೈರ್ಯವಂತ ವ್ಯಕ್ತಿಯಾಗಿದ್ದನು. ಆದರೆ, ಕುತಂತ್ರದಿಂದ ಯೇಸುವನ್ನು ಸೆರೆಹಿಡಿದಾಗ, ಪೇತ್ರನನ್ನು ಸೇರಿಸಿ ಎಲ್ಲ ಅಪೊಸ್ತಲರು ಅಲ್ಲಿಂದ ಚೆದುರಿಹೋದರು. ತರುವಾಯ, ಮಹಾ ಯಾಜಕನಾದ ಕಾಯಫನ ಮನೆಯಲ್ಲಿ ಯೇಸುವಿನ ವಿಚಾರಣೆ ನಡೆಯುತ್ತಿದ್ದಾಗ, ಪೇತ್ರನು ಅಂಗಳದಲ್ಲಿ ಕಳವಳದಿಂದ ಚಡಪಡಿಸುತ್ತಿದ್ದನು. ಆದರೆ ಆ ತಣ್ಣನೆಯ ರಾತ್ರಿಯು ಕಳೆದಂತೆ, ಯೇಸು ಮತ್ತು ಅವನೊಂದಿಗೆ ಸಹವಾಸಿಸುವ ಯಾವನಾದರೂ ಕೊಲ್ಲಲ್ಪಡುವನೆಂಬ ವಿಚಾರದಿಂದಲೇ ಪೇತ್ರನು ದಿಗಿಲುಗೊಂಡನು. ಅಂಗಳದಲ್ಲಿ ನಿಂತಿದ್ದವರಲ್ಲಿ ಕೆಲವರು, ಪೇತ್ರನನ್ನು ಯೇಸುವಿನ ನಿಕಟ ಸಂಗಾತಿಗಳಲ್ಲಿ ಒಬ್ಬನೆಂದು ಗುರುತಿಸಿದಾಗ, ಅವನು ಭಯದಿಂದ ತತ್ತರಿಸಿಹೋದನು. ಯೇಸುವಿನೊಂದಿಗೆ ಯಾವ ಸಂಬಂಧವೂ ಇಲ್ಲವೆಂದು ಪೇತ್ರನು ಮೂರು ಬಾರಿ ಹೇಳಿದನು. ತನಗೆ ಅವನ ಪರಿಚಯವಿದೆಯೆಂಬುದನ್ನೂ ಅವನು ಅಲ್ಲಗಳೆದನು!—ಮಾರ್ಕ 14:27-31, 66-72.
2. (ಎ) ಯೇಸುವನ್ನು ಸೆರೆಹಿಡಿದ ರಾತ್ರಿಯಂದು ಪೇತ್ರನು ಭಯಭೀತನಾಗಿ ನಡೆದುಕೊಂಡದ್ದು ಅವನನ್ನು ‘ಹಿಂದೆಗೆಯುವಂತಹ’ ವ್ಯಕ್ತಿಯನ್ನಾಗಿ ಏಕೆ ಮಾಡಲಿಲ್ಲ? (ಬಿ) ನಮ್ಮ ದೃಢನಿರ್ಧಾರವು ಏನಾಗಿರತಕ್ಕದ್ದು?
2 ಅದು ಪೇತ್ರನ ಜೀವಿತದಲ್ಲಿ ತೀರ ಹತಾಶೆಯ ಸಮಯವಾಗಿತ್ತು. ಆ ಕ್ಷಣಕ್ಕಾಗಿ ಅವನು ತನ್ನ ಜೀವಮಾನದುದ್ದಕ್ಕೂ ಪರಿತಪಿಸಿದನೆಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ಪೇತ್ರನು ಆ ರಾತ್ರಿ ನಡೆದುಕೊಂಡ ರೀತಿಯಿಂದ ಒಬ್ಬ ಹೇಡಿಯಾಗಿ ಪರಿಗಣಿಸಲ್ಪಟ್ಟನೋ? “ನಾವಾದರೋ ಹಿಂದೆಗೆದವರಾಗಿ ನಾಶವಾಗುವಂತಹ ಜನರಲ್ಲ” ಎಂಬುದಾಗಿ ಅಪೊಸ್ತಲ ಪೌಲನು ತದನಂತರ ಬರೆದಾಗ ವರ್ಣಿಸಿದ ‘ಅಂತಹ’ ಜನರಲ್ಲಿ ಪೇತ್ರನು ಒಬ್ಬನಾದನೋ? (ಇಬ್ರಿಯ 10:39, NW) ಪೌಲನ ಮಾತುಗಳು ಪೇತ್ರನಿಗೆ ಅನ್ವಯಿಸುವುದಿಲ್ಲವೆಂದು ನಮ್ಮಲ್ಲಿ ಅನೇಕರು ಒಪ್ಪಿಕೊಳ್ಳುವೆವು. ಏಕೆ? ಏಕೆಂದರೆ ಪೇತ್ರನ ಭಯವು ತಾತ್ಕಾಲಿಕವಾಗಿತ್ತು, ಅಂದರೆ ಎದ್ದುಕಾಣುವ ಧೈರ್ಯ ಹಾಗೂ ನಂಬಿಕೆಯಿಂದ ಕೂಡಿದ ಒಂದು ಜೀವಿತದಲ್ಲಿ ನಡೆದಂತಹ ಒಂದು ಸಣ್ಣ ತಪ್ಪು ಅದಾಗಿತ್ತು. ತದ್ರೀತಿಯಲ್ಲಿ, ಇಂದು ನಮ್ಮಲ್ಲಿ ಅನೇಕರು ಜೀವಿತದ ಗತಕಾಲದಲ್ಲಿ ನಡೆದಂತಹ ಕೆಲವು ಘಟನೆಗಳ ಕುರಿತು, ಮತ್ತು ಅನಿರೀಕ್ಷಿತವಾಗಿ ಭಯಗೊಂಡ ಕಾರಣ ಸತ್ಯದ ಪರವಾಗಿ ನಾವು ಬಯಸಿದಷ್ಟು ಧೈರ್ಯದಿಂದ ಹೋರಾಡದೆ ಇದ್ದಂತಹ ಸಮಯಗಳ ಕುರಿತು ಜ್ಞಾಪಿಸಿಕೊಂಡು ಒಂದಿಷ್ಟು ದೋಷಿ ಮನೋಭಾವವುಳ್ಳರಾಗಿರಬಹುದು. (ಹೋಲಿಸಿ ರೋಮಾಪುರ 7:21-23.) ಕೆಲವೊಮ್ಮೆ ಮಾಡಲ್ಪಡುವ ಇಂತಹ ಚಿಕ್ಕಪುಟ್ಟ ತಪ್ಪುಗಳು ನಮ್ಮನ್ನು ನಾಶನಕ್ಕೆ ಹಿಂದಿರುಗುವಂತಹ ಜನರನ್ನಾಗಿ ಮಾಡುವುದಿಲ್ಲ ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ. ಹಾಗಿದ್ದರೂ, ನಾವು ಅಂತಹ ಜನರಂತೆ ಆಗದಿರಲು ಸದಾ ನಿಶ್ಚಯಿಸಿಕೊಳ್ಳಬೇಕು. ಏಕೆ? ಮತ್ತು ಅಂತಹ ವ್ಯಕ್ತಿಯಾಗುವುದರಿಂದ ನಾವು ಹೇಗೆ ದೂರವಿರಬಹುದು?
ಹಿಂದೆಗೆದು ನಾಶಕ್ಕೆ ಗುರಿಯಾಗುವುದರ ಅರ್ಥ
3. ಪ್ರವಾದಿಗಳಾದ ಎಲೀಯ ಮತ್ತು ಯೋನರು ಭಯಕ್ಕೆ ವಶವಾದದ್ದು ಹೇಗೆ?
3 ಪೌಲನು ‘ಹಿಂದೆಗೆಯುವಂತಹ ಜನರ’ ಕುರಿತು ಬರೆದಾಗ ಕ್ಷಣಿಕವಾಗಿ ಧೈರ್ಯವನ್ನು ಕಳೆದುಕೊಳ್ಳುವವರ ವಿಷಯವಾಗಿ ಅವನು ಮಾತಾಡುತ್ತಿರಲಿಲ್ಲ. ಪೇತ್ರನ ಅನುಭವ ಮತ್ತು ತದ್ರೀತಿಯ ಇತರ ಅನುಭವಗಳನ್ನು ಹೊಂದಿದ್ದವರ ಕುರಿತು ಪೌಲನಿಗೆ ಖಂಡಿತವಾಗಿಯೂ ಗೊತ್ತಿತ್ತು. ಧೈರ್ಯವಂತನೂ ಮುಚ್ಚುಮರೆಯಿಲ್ಲದೆ ಮಾತಾಡುವಂತಹವನೂ ಆಗಿದ್ದ ಪ್ರವಾದಿಯಾದ ಎಲೀಯನು, ದುಷ್ಟ ರಾಣಿಯಾದ ಈಜೆಬೆಲಳ ಮರಣ ಬೆದರಿಕೆಯಿಂದ ಭಯಭೀತನಾಗಿ ತನ್ನ ಪ್ರಾಣರಕ್ಷಣೆಗೋಸ್ಕರ ಅಲ್ಲಿಂದ ಓಡಿಹೋದನು. (1 ಅರಸು 19:1-4) ಪ್ರವಾದಿಯಾದ ಯೋನನು ಮತ್ತಷ್ಟು ಗಂಭೀರವಾದ ರೀತಿಯ ಭಯವನ್ನು ಅನುಭವಿಸಿದನು. ಅವನು ಹಿಂಸಾಚಾರಕ್ಕೆ ಹೆಸರುವಾಸಿಯಾಗಿದ್ದ ದುಷ್ಟ ನಗರವಾದ ನಿನೆವೆಗೆ ಹೋಗುವಂತೆ ಯೆಹೋವನಿಂದ ನೇಮಿಸಲ್ಪಟ್ಟನು. ಆದರೆ ಯೋನನು ಹಡಗೊಂದನ್ನು ಏರಿ ತಾರ್ಷೀಷಿಗೆ, ಅಂದರೆ ನಿನೆವೆಯ ವಿರುದ್ಧ ದಿಕ್ಕಿನಲ್ಲಿ 3,500 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಒಂದು ಪಟ್ಟಣಕ್ಕೆ ಪಲಾಯನಗೈದನು! (ಯೋನ 1:1-3) ಆದರೂ, ಈ ನಂಬಿಗಸ್ತ ಪ್ರವಾದಿಗಳಲ್ಲಿ ಒಬ್ಬರನ್ನೂ ಇಲ್ಲವೆ ಅಪೊಸ್ತಲ ಪೇತ್ರನನ್ನು, ಹಿಂದೆಗೆಯುವಂತಹ ಜನರೆಂದು ವರ್ಣಿಸಸಾಧ್ಯವಿಲ್ಲ. ಏಕೆ?
4, 5. (ಎ) ಇಬ್ರಿಯ 10:39ರಲ್ಲಿರುವ “ನಾಶ” ಎಂಬ ಪದವನ್ನು ಪೌಲನು ಯಾವ ಅರ್ಥದಲ್ಲಿ ಉಪಯೋಗಿಸಿದನೆಂಬುದನ್ನು ನಿರ್ಧರಿಸಲು ಅದರ ಪೂರ್ವಾಪರ ವಚನವು ನಮಗೆ ಹೇಗೆ ಸಹಾಯಮಾಡುತ್ತದೆ? (ಬಿ) “ನಾವು ಹಿಂದೆಗೆದು ನಾಶವಾಗುವಂತಹ ಜನರಲ್ಲ” ಎಂದು ಹೇಳುವ ಮೂಲಕ ಪೌಲನು ಏನನ್ನು ಅರ್ಥೈಸಿದನು?
4 ಪೌಲನು ಬರೆದಂತಹ ಇಡೀ ವಾಕ್ಸರಣಿಯನ್ನು ಪರೀಕ್ಷಿಸಿರಿ: “ನಾವಾದರೋ ಹಿಂದೆಗೆದವರಾಗಿ ನಾಶವಾಗುವಂತಹ ಜನರಲ್ಲ.” (ಓರೆ ಅಕ್ಷರಗಳು ನಮ್ಮವು.) “ನಾಶ” ಎಂಬ ಪದದಿಂದ ಅವನು ಏನನ್ನು ಅರ್ಥೈಸಿದನು? ಅವನು ಉಪಯೋಗಿಸಿದಂತಹ ಗ್ರೀಕ್ ಪದವು ಕೆಲವೊಮ್ಮೆ ನಿತ್ಯ ನಾಶನವನ್ನು ಸೂಚಿಸುತ್ತದೆ. ಈ ಅರ್ಥನಿರೂಪಣೆಯು ಪೂರ್ವಾಪರ ವಚನಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಪೌಲನು ತುಸು ಮುಂಚೆ ಎಚ್ಚರಿಕೆ ನೀಡಿದ್ದು: “ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ; ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪೂ ದೇವರ ವಿರೋಧಿಗಳನ್ನು ದಹಿಸುವ ತೀಕ್ಷ್ಣವಾದ ಅಗ್ನಿಯೂ ಇವೇ ನಮ್ಮ ಮುಂದೆ ಇರುವವು.”—ಇಬ್ರಿಯ 10:26, 27.
5 “ನಾವಾದರೋ ಹಿಂದೆಗೆದವರಾಗಿ ನಾಶವಾಗುವಂತಹ ಜನರಲ್ಲ” ಎಂಬುದಾಗಿ ಪೌಲನು ತನ್ನ ಜೊತೆ ವಿಶ್ವಾಸಿಗಳಿಗೆ ಹೇಳಿದಾಗ, ಅವನೂ ಅವನ ನಂಬಿಗಸ್ತ ಕ್ರೈಸ್ತ ಓದುಗರೂ ಯೆಹೋವನಿಂದ ವಿಮುಖರಾಗದಿರಲು ಮತ್ತು ಆತನಿಗೆ ಸೇವೆಸಲ್ಲಿಸುವುದನ್ನು ನಿಲ್ಲಿಸದಿರಲು ನಿಶ್ಚಯಿಸಿದರು ಎಂಬುದನ್ನು ಅರ್ಥೈಸಿದನು. ಹಾಗೆ ನಿಶ್ಚಯಿಸದೆ ಇರುತ್ತಿದ್ದಲ್ಲಿ, ಅದು ಅವರನ್ನು ನಿತ್ಯ ನಾಶನಕ್ಕೆ ಗುರಿಮಾಡಲಿತ್ತು. ಹಿಂದೆಗೆದು ಇಂತಹ ನಾಶನಕ್ಕೆ ಗುರಿಯಾದವರಲ್ಲಿ ಒಬ್ಬನು ಇಸ್ಕರಿಯೋತ ಯೂದನಾಗಿದ್ದನು. ಮತ್ತು ಯೆಹೋವನ ಆತ್ಮಕ್ಕೆ ವಿರುದ್ಧವಾಗಿ ಬೇಕುಬೇಕೆಂದೇ ಪಾಪಮಾಡಿದ ಸತ್ಯದ ಇತರ ವೈರಿಗಳು ಕೂಡ ಇಂತಹ ನಾಶನಕ್ಕೆ ಗುರಿಯಾದರು. (ಯೋಹಾನ 17:12; 2 ಥೆಸಲೊನೀಕ 2:3) ಇಂತಹವರು “ಹೇಡಿ”ಗಳಲ್ಲಿ ಒಬ್ಬರಾಗಿದ್ದು, ಸಾಂಕೇತಿಕ ನರಕಾಗ್ನಿಯಲ್ಲಿ ನಿತ್ಯ ನಾಶನವನ್ನು ಅನುಭವಿಸುವವರಾಗಿದ್ದಾರೆ. (ಪ್ರಕಟನೆ 21:8) ನಾವೆಂದಿಗೂ ಆ ರೀತಿಯ ಜನರಾಗಿರಲು ಬಯಸಲಾರೆವು!
6. ನಾವು ಯಾವ ಮಾರ್ಗವನ್ನು ಅನುಸರಿಸಬೇಕೆಂದು ಪಿಶಾಚನಾದ ಸೈತಾನನು ಬಯಸುತ್ತಾನೆ?
6 ನಾವು ಹಿಂದೆಗೆದು ನಾಶನಕ್ಕೆ ಗುರಿಯಾಗಬೇಕೆಂದು ಪಿಶಾಚನಾದ ಸೈತಾನನು ಬಯಸುತ್ತಾನೆ. ‘ತಂತ್ರೋಪಾಯಗಳಲ್ಲಿ’ ನಿಪುಣನಾಗಿರುವ ಇವನಿಗೆ, ಇಂತಹ ಧ್ವಂಸಕರ ಜೀವನಕ್ರಮವು ಅನೇಕ ವೇಳೆ ಚಿಕ್ಕಪುಟ್ಟ ವಿಷಯಗಳಿಂದಲೇ ಆರಂಭವಾಗುತ್ತದೆಂಬುದು ಗೊತ್ತಿದೆ. (ಎಫೆಸ 6:11) ನೇರವಾದ ಹಿಂಸೆಯಿಂದ ಅವನ ಉದ್ದೇಶಗಳು ನೆರವೇರದಿದ್ದಲ್ಲಿ, ನವಿರಾದ ವಿಧಾನಗಳ ಮೂಲಕ ಅವನು ಸತ್ಯ ಕ್ರೈಸ್ತರ ನಂಬಿಕೆಯನ್ನು ಶಿಥಿಲಗೊಳಿಸಲು ಪ್ರಯತ್ನಿಸುತ್ತಾನೆ. ಯೆಹೋವನ ಹುರುಪುಳ್ಳ ಧೈರ್ಯವಂತ ಸಾಕ್ಷಿಗಳು ಮೌನವಹಿಸುವುದನ್ನು ನೋಡಲು ಅವನು ಇಷ್ಟಪಡುತ್ತಾನೆ. ಪೌಲನು ಬರೆದಂತಹ ಇಬ್ರಿಯ ಕ್ರೈಸ್ತರ ವಿರುದ್ಧ ಅವನು ಯಾವ ತಂತ್ರಗಳನ್ನು ಉಪಯೋಗಿಸಿದನೆಂಬುದನ್ನು ನಾವು ನೋಡೋಣ.
ಹಿಂದೆಗೆಯುವಂತೆ ಕ್ರೈಸ್ತರು ಒತ್ತಾಯಿಸಲ್ಪಟ್ಟ ವಿಧ
7. (ಎ) ಯೆರೂಸಲೇಮಿನಲ್ಲಿದ್ದ ಸಭೆಯ ಇತಿಹಾಸವು ಏನಾಗಿತ್ತು? (ಬಿ) ಪೌಲನ ಓದುಗರಲ್ಲಿ ಕೆಲವರ ಆತ್ಮಿಕ ಸ್ಥಿತಿಯು ಹೇಗಿತ್ತು?
7 ಸಾ.ಶ. 61ರಲ್ಲಿ ಪೌಲನು ಇಬ್ರಿಯರಿಗೆ ತನ್ನ ಪತ್ರವನ್ನು ಬರೆದನೆಂದು ಪುರಾವೆಗಳು ಸೂಚಿಸುತ್ತವೆ. ಯೆರೂಸಲೇಮಿನಲ್ಲಿದ್ದ ಸಭೆಯು ಬಹಳಷ್ಟು ಗಲಿಬಿಲಿಯನ್ನು ಅನುಭವಿಸಿತ್ತು. ಯೇಸುವಿನ ಮರಣದ ನಂತರ, ಕ್ರೂರವಾದ ಹಿಂಸೆಯ ಅಲೆಯು ಬೀಸಿ, ಆ ನಗರದಲ್ಲಿದ್ದ ಅನೇಕ ಕ್ರೈಸ್ತರನ್ನು ಬೇರೆ ಸ್ಥಳಗಳಿಗೆ ಚೆದುರಿಹೋಗುವಂತೆ ಮಾಡಿತ್ತು. ಇದನ್ನು ಹಿಂಬಾಲಿಸಿದ ಶಾಂತಿಯ ಅವಧಿಯಲ್ಲಿ, ಕ್ರೈಸ್ತರ ಸಂಖ್ಯೆಯು ಹೆಚ್ಚಿತು. (ಅ. ಕೃತ್ಯಗಳು 8:4; 9:31) ವರ್ಷಗಳು ದಾಟಿದಂತೆ, ಸಹೋದರರು ಹಿಂಸೆಗಳನ್ನು ಮತ್ತು ಕಷ್ಟತೊಂದರೆಗಳನ್ನು ಆಗಾಗ್ಗೆ ಅನುಭವಿಸತೊಡಗಿದರು. ಪೌಲನು ಇಬ್ರಿಯರಿಗೆ ಪತ್ರವನ್ನು ಬರೆಯುವ ಸಮಯದೊಳಗಾಗಿ, ಸಭೆಯು ಪುನಃ ಒಮ್ಮೆ ತಕ್ಕಷ್ಟು ಮಟ್ಟಿಗೆ ಶಾಂತಿಯನ್ನು ಅನುಭವಿಸುತ್ತಿತ್ತೆಂದು ಕಾಣುತ್ತದೆ. ಆದರೂ ಅಲ್ಲಿ ಒತ್ತಡಗಳಿದ್ದವು. ಯೇಸು ಯೆರೂಸಲೇಮಿನ ನಾಶನವನ್ನು ಮುಂತಿಳಿಸಿ ಈಗಾಗಲೇ 30 ವರ್ಷಗಳು ಗತಿಸಿದ್ದವು. ಅಂತ್ಯವು ವಿನಾಕಾರಣ ವಿಳಂಬಿಸುತ್ತಿತ್ತೆಂದು ಮತ್ತು ಅದು ತಮ್ಮ ಜೀವಮಾನಕಾಲದಲ್ಲಿ ಬರಲಾರದೆಂದು ಕೆಲವರಿಗೆ ಅನಿಸಿದ್ದಿರಬಹುದು. ಇತರರು, ಅಂದರೆ ಸತ್ಯದಲ್ಲಿ ಹೊಸಬರಾಗಿದ್ದವರು ತೀಕ್ಷ್ಣವಾದ ಹಿಂಸೆಯಿಂದ ಪರೀಕ್ಷಿಸಲ್ಪಟ್ಟಿರದ ಕಾರಣ, ಪರೀಕ್ಷೆಯ ಸಮಯದಲ್ಲಿ ತಾಳಿಕೊಳ್ಳುವುದರ ಅಗತ್ಯದ ಕುರಿತು ಅಷ್ಟೇನೂ ತಿಳಿದವರಾಗಿರಲಿಲ್ಲ. (ಇಬ್ರಿಯ 12:4) ಇಂತಹ ಪರಿಸ್ಥಿತಿಗಳ ಲಾಭವನ್ನು ಪಡೆದುಕೊಳ್ಳಲು ಸೈತಾನನು ನಿಜವಾಗಿಯೂ ಬಯಸಿದನು. ಅವನು ಯಾವ ರೀತಿಯ “ತಂತ್ರೋಪಾಯಗಳನ್ನು” ಉಪಯೋಗಿಸಿದನು?
8. ಹೊಸದಾಗಿ ಆರಂಭವಾಗಿದ್ದ ಕ್ರೈಸ್ತ ಸಭೆಯ ಕಡೆಗೆ ಅನೇಕ ಯೆಹೂದ್ಯರು ಯಾವ ರೀತಿಯ ಮನೋಭಾವವನ್ನು ತೋರಿಸಿದರು?
8 ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದ ಯೆಹೂದ್ಯರ ಸಮುದಾಯವು, ಈ ಹೊಸ ಕ್ರೈಸ್ತ ಸಭೆಯ ಕಡೆಗೆ ತಿರಸ್ಕಾರದ ದೃಷ್ಟಿಯನ್ನು ಬೀರಿತು. ಆ ದುರಹಂಕಾರಿ ಯೆಹೂದಿ ಧರ್ಮಗುರುಗಳು ಮತ್ತು ಅವರ ಹಿಂಬಾಲಕರು, ಕ್ರೈಸ್ತರ ಕಡೆಗೆ ಎಸೆದಂತಹ ಕೆಣಕುನುಡಿಯ ಬಾಣಗಳ ಬಗ್ಗೆ ತಿಳಿದುಕೊಳ್ಳಲು, ಪೌಲನ ಪತ್ರದಲ್ಲಿರುವ ವಿಷಯಗಳಿಂದ ಸಾಧ್ಯವಾಗುತ್ತದೆ. ಅವರು ಹೀಗೆ ಹೇಳಿದ್ದಿರಬಹುದು: ‘ಶತಮಾನಗಳಿಂದ ಯೆರೂಸಲೇಮಿನಲ್ಲಿ ನೆಲೆಸಿರುವ ಆ ಮಹಾನ್ ದೇವಾಲಯವು ನಮ್ಮಲ್ಲಿದೆ! ಅಲ್ಲಿ ಜೊತೆ ಯಾಜಕರೊಂದಿಗೆ ಸೇವೆಸಲ್ಲಿಸುತ್ತಿರುವ ಮಹಾ ಯಾಜಕತ್ವವಿದೆ. ದಿನನಿತ್ಯವೂ ಬಲಿಗಳನ್ನು ಅರ್ಪಿಸಲಾಗುತ್ತದೆ. ದೇವದೂತರು ಮೋಶೆಗೆ ರವಾನಿಸಿದ ಮತ್ತು ಸೀನಾಯಿ ಪರ್ವತದ ಮೇಲೆ ಆಶ್ಚರ್ಯಚಕಿತಗೊಳಿಸುವ ಪ್ರದರ್ಶನಗಳಿಂದ ಸ್ಥಾಪಿಸಲ್ಪಟ್ಟ ಧರ್ಮಶಾಸ್ತ್ರವು ನಮ್ಮಲ್ಲಿದೆ. ಹೊಸದಾಗಿ ಪ್ರಸಿದ್ಧಿಗೆ ಬಂದಿರುವ ಈ ಗುಂಪಿನಲ್ಲಿ, ಅಂದರೆ ಯೆಹೂದಿಮತದಿಂದ ಧರ್ಮಭ್ರಷ್ಟರಾಗಿರುವ ಈ ಕ್ರೈಸ್ತರಲ್ಲಿ ಇಂತಹ ಯಾವ ವಿಶೇಷತೆಗಳೂ ಇಲ್ಲ!’ ಈ ಕೆಣಕುನುಡಿಯು ತನ್ನ ಗುರಿಯನ್ನು ಸಾಧಿಸಿತೊ? ಇಂತಹ ದಾಳಿಗಳಿಂದ ಕೆಲವು ಇಬ್ರಿಯ ಕ್ರೈಸ್ತರು ನಿಜವಾಗಿಯೂ ಗಲಿಬಿಲಿಗೊಂಡರು. ಪೌಲನ ಪತ್ರವು ಸಮಯಕ್ಕೆ ಸರಿಯಾಗಿ ಅವರ ನೆರವಿಗೆ ಬಂತು.
ಅವರು ಎಂದಿಗೂ ಹಿಂದೆಗೆದು ನಾಶವಾಗದಿರುವುದಕ್ಕೆ ಕಾರಣ
9. (ಎ) ಇಬ್ರಿಯರಿಗೆ ಬರೆದ ಪತ್ರದ ಉದ್ದಕ್ಕೂ ಯಾವ ಮುಖ್ಯ ವಿಷಯವು ಕಾಣಸಿಗುತ್ತದೆ? (ಬಿ) ಯಾವ ಅರ್ಥದಲ್ಲಿ ಕ್ರೈಸ್ತರು, ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕಿಂತಲೂ ಉತ್ತಮವಾದ ದೇವಾಲಯದಲ್ಲಿ ಸೇವೆಸಲ್ಲಿಸುತ್ತಾರೆ?
9 ಯೆಹೂದದಲ್ಲಿದ್ದ ತನ್ನ ಸಹೋದರ ಸಹೋದರಿಯರು ಎಂದಿಗೂ ಹಿಂದೆಗೆದು ನಾಶಕ್ಕೆ ಗುರಿಯಾಗದಂತೆ, ಪೌಲನು ನೀಡಿದಂತಹ ಎರಡು ಕಾರಣಗಳನ್ನು ನಾವು ಪರಿಶೀಲಿಸೋಣ. ಕ್ರೈಸ್ತ ಆರಾಧನಾ ರೀತಿಯ ಶ್ರೇಷ್ಠತೆ ಎಂಬ ಮೊದಲನೆಯ ಕಾರಣವು, ಇಬ್ರಿಯರಿಗೆ ಬರೆದ ಪತ್ರದಲ್ಲೆಲ್ಲ ಕಂಡುಬರುತ್ತದೆ. ತನ್ನ ಪತ್ರದ ಉದ್ದಕ್ಕೂ ಪೌಲನು ಈ ಮುಖ್ಯ ವಿಷಯವನ್ನು ವಿವರಿಸುತ್ತಾ ಬಂದನು. ಯೆರೂಸಲೇಮಿನಲ್ಲಿದ್ದ ದೇವಾಲಯವು ಬಹಳಷ್ಟು ವಾಸ್ತವವಾಗಿದ್ದ ಯೆಹೋವನ ಆತ್ಮಿಕ ದೇವಾಲಯದ ಕೇವಲ ಒಂದು ಪ್ರತಿರೂಪವಾಗಿತ್ತು. ಈ ಆತ್ಮಿಕ ದೇವಾಲಯವು “ಕೈಯಿಂದ ಕಟ್ಟಲ್ಪಡದಂಥ” ಕಟ್ಟಡವಾಗಿತ್ತು. (ಇಬ್ರಿಯ 9:11) ಶುದ್ಧಾರಾಧನೆಗಾಗಿದ್ದ ಆ ಆತ್ಮಿಕ ಏರ್ಪಾಡಿನಲ್ಲಿ ಸೇವೆಸಲ್ಲಿಸುವಂತಹ ಸುಯೋಗವು ಆ ಕ್ರೈಸ್ತರಿಗಿತ್ತು. ಅವರೊಂದು ಉತ್ತಮವಾದ ಒಡಂಬಡಿಕೆಯ ಕೆಳಗೆ, ಅಂದರೆ ಬಹಳ ಸಮಯದ ಹಿಂದೆಯೇ ವಾಗ್ದಾನಿಸಲ್ಪಟ್ಟಿದ್ದ ಮತ್ತು ಮೋಶೆಗಿಂತಲೂ ಶ್ರೇಷ್ಠನಾಗಿದ್ದ ಯೇಸು ಕ್ರಿಸ್ತನ ಮಧ್ಯಸ್ಥಿಕೆಯಲ್ಲಿ ಮಾಡಲ್ಪಟ್ಟಿದ್ದ ಹೊಸ ಒಡಂಬಡಿಕೆಯ ಕೆಳಗೆ ಸೇವೆಸಲ್ಲಿಸಿದರು.—ಯೆರೆಮೀಯ 31:31-34.
10, 11. (ಎ) ಯೇಸು ಆತ್ಮಿಕ ಆಲಯದ ಮಹಾ ಯಾಜಕನಾಗಿ ಸೇವೆಸಲ್ಲಿಸುವುದಕ್ಕೆ ಅವನ ವಂಶಾವಳಿಯು ಅವನನ್ನು ಅನರ್ಹನನ್ನಾಗಿ ಮಾಡಲಿಲ್ಲ ಏಕೆ? (ಬಿ) ಯಾವ ವಿಧಗಳಲ್ಲಿ ಯೇಸು ಕ್ರಿಸ್ತನು ಯೆರೂಸಲೇಮಿನ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾ ಯಾಜಕನಿಗಿಂತಲೂ ಶ್ರೇಷ್ಠನಾಗಿದ್ದನು?
10 ಯೇಸು ಕ್ರಿಸ್ತನೆಂಬ ಬಹಳ ಉತ್ತಮನಾದ ಮಹಾ ಯಾಜಕನೂ ಆ ಕ್ರೈಸ್ತರಿಗಿದ್ದನು. ಅವನು ಆರೋನನ ವಂಶದಿಂದ ಬಂದವನಾಗಿರಲಿಲ್ಲ. ಬದಲಿಗೆ, ಅವನು “ಮೆಲ್ಕಿಜೆದೇಕನ ತರಹದ” ಮಹಾ ಯಾಜಕನಾಗಿದ್ದನು. (ಕೀರ್ತನೆ 110:4) ಮೆಲ್ಕಿಜೆದೇಕನ ವಂಶಾವಳಿಯ ದಾಖಲೆಗಳಿರದಿದ್ದರೂ, ಅವನು ಪುರಾತನ ಸಾಲೇಮಿನ ರಾಜನೂ ಮಹಾ ಯಾಜಕನೂ ಆಗಿದ್ದನು. ಅವನು ಯೇಸುವಿಗೆ ಸೂಕ್ತವಾದ ಪ್ರವಾದನಾ ಪ್ರತಿರೂಪವಾಗಿದ್ದನು. ಏಕೆಂದರೆ ಯೇಸುವಿನ ಯಾಜಕತ್ವವು ಯಾವುದೇ ಅಪರಿಪೂರ್ಣ ಮಾನವ ವಂಶಾವಳಿಯ ಮೇಲೆ ಅವಲಂಬಿಸದೆ, ಬಹಳಷ್ಟು ಉನ್ನತವಾದ ಯೆಹೋವ ದೇವರ ಪ್ರತಿಜ್ಞೆಯ ಮೇಲೆ ಅವಲಂಬಿಸಿದೆ. ಮೆಲ್ಕಿಜೆದೇಕನಂತೆ ಯೇಸು ಒಬ್ಬ ಮಹಾ ಯಾಜಕನಾಗಿ ಮಾತ್ರವಲ್ಲ, ಎಂದಿಗೂ ಮರಣವನ್ನಪ್ಪದ ರಾಜನಾಗಿಯೂ ಸೇವೆಸಲ್ಲಿಸುತ್ತಾನೆ.—ಇಬ್ರಿಯ 7:11-21.
11 ಅಲ್ಲದೆ, ಯೆರೂಸಲೇಮಿನ ದೇವಾಲಯದಲ್ಲಿದ್ದ ಮಹಾ ಯಾಜಕನಿಗೆ ಅಸದೃಶವಾಗಿ, ಯೇಸುವಿಗೆ ಪ್ರತಿ ವರ್ಷವೂ ಯಜ್ಞಗಳನ್ನು ಅರ್ಪಿಸುವ ಅಗತ್ಯವಿರಲಿಲ್ಲ. ಅವನ ಯಜ್ಞಾರ್ಪಣೆಯು ಅವನ ಸ್ವಂತ ಪರಿಪೂರ್ಣ ಜೀವವಾಗಿತ್ತು ಮತ್ತು ಅದನ್ನು ಅವನು ಒಂದೇ ಸಾರಿ ಅರ್ಪಿಸಿಬಿಟ್ಟನು. (ಇಬ್ರಿಯ 7:27) ದೇವಾಲಯದಲ್ಲಿ ಅರ್ಪಿಸಲಾಗಿದ್ದ ಆ ಎಲ್ಲ ಬಲಿಗಳು, ಯೇಸು ಅರ್ಪಿಸಿದಂತಹ ಬಲಿಯ ಕೇವಲ ಛಾಯೆಯಾಗಿದ್ದವು. ಅವನ ಪರಿಪೂರ್ಣ ಯಜ್ಞಾರ್ಪಣೆಯು, ಅದರಲ್ಲಿ ನಂಬಿಕೆಯಿಟ್ಟ ಎಲ್ಲರ ಪಾಪಗಳಿಗೂ ನಿಜವಾದ ಕ್ಷಮಾಪಣೆಯನ್ನು ಒದಗಿಸಿತು. ಈ ಮಹಾ ಯಾಜಕನು ಯೆರೂಸಲೇಮಿನಲ್ಲಿದ್ದ ಕ್ರೈಸ್ತರಿಗೆ ಚಿರಪರಿಚಿತನಾಗಿದ್ದ ಅದೇ ಬದಲಾಗದ ಯೇಸುವಾಗಿದ್ದಾನೆಂಬ ಪೌಲನ ಹೇಳಿಕೆಗಳು ತುಂಬ ಹೃದಯಸ್ಪರ್ಶಿಯಾಗಿವೆ. ಯೇಸು “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪ”ವನ್ನು ಸೂಚಿಸಬಲ್ಲವನೂ ದೀನನೂ ದಯಾವಂತನೂ ಆಗಿದ್ದನು. (ಇಬ್ರಿಯ 4:15; 13:8) ಆ ಅಭಿಷಿಕ್ತ ಕ್ರೈಸ್ತರಿಗೆ, ಕ್ರಿಸ್ತನ ಉಪಯಾಜಕರಾಗಿ ಸೇವೆಸಲ್ಲಿಸುವ ಪ್ರತೀಕ್ಷೆಯಿತ್ತು! ಅವರು ಭ್ರಷ್ಟ ಯೆಹೂದಿಮತದ “ಕೆಲಸಕ್ಕೆ ಬಾರದ ದರಿದ್ರಬಾಲಬೋಧೆಗೆ” ಹಿಂದಿರುಗುವ ಯೋಚನೆಯನ್ನಾದರೂ ಹೇಗೆ ಮಾಡಸಾಧ್ಯವಿತ್ತು?—ಗಲಾತ್ಯ 4:9.
12, 13. (ಎ) ಹಿಂದೆಗೆಯದೆ ಉಳಿಯಲಿಕ್ಕಾಗಿ ಯಾವ ಎರಡನೆಯ ಕಾರಣವನ್ನು ಪೌಲನು ಕೊಟ್ಟನು? (ಬಿ) ಗತಕಾಲದಲ್ಲಿ ತಾವು ತಾಳಿಕೊಂಡದ್ದರ ದಾಖಲೆಯು, ಹಿಂದೆಗೆದು ನಾಶವಾಗದಂತೆ ಇಬ್ರಿಯ ಕ್ರೈಸ್ತರಿಗೆ ಏಕೆ ಉತ್ತೇಜನ ನೀಡಸಾಧ್ಯವಿತ್ತು?
12 ಒಂದು ಕಾರಣವು ಸಾಲದೋ ಎಂಬಂತೆ, ಇಬ್ರಿಯರು ಹಿಂದೆಗೆದು ನಾಶಕ್ಕೆ ಗುರಿಯಾಗದೆ ಇರುವಂತೆ ಪೌಲನು ಅವರಿಗೆ ಎರಡನೆಯ ಕಾರಣವನ್ನು ಕೊಡುತ್ತಾನೆ. ಅದು ಕಷ್ಟತೊಂದರೆಗಳನ್ನು ಆ ಕ್ರೈಸ್ತರು ತಾಳಿಕೊಂಡದ್ದರ ದಾಖಲೆಯಾಗಿತ್ತು. ಅವನು ಬರೆದುದು: “ನೀವು ಜ್ಞಾನಪ್ರಕಾಶದಲ್ಲಿ ಸೇರಿ ಕಷ್ಟಾನುಭವವೆಂಬ ಬಲು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.” ಅವರು ‘ರಂಗಮಂಚದಲ್ಲಿ ಬಯಲುಗೊಳಿಸಲ್ಪಟ್ಟಂತೆ’ (NW) ನಿಂದೆಗಳಿಗೂ ಸಂಕಟಗಳಿಗೂ ಗುರಿಯಾಗಿದ್ದರೆಂಬುದನ್ನು ಪೌಲನು ಅವರಿಗೆ ಜ್ಞಾಪಕ ಹುಟ್ಟಿಸುತ್ತಾನೆ. ಕೆಲವರು ಸೆರೆವಾಸವನ್ನು ಅನುಭವಿಸಿದ್ದರು, ಇತರರು ಸೆರೆಯಲ್ಲಿದ್ದವರಿಗೆ ಸಹಾನುಭೂತಿಯನ್ನು ತೋರಿಸಿದರಲ್ಲದೆ ಅವರಿಗೆ ಬೆಂಬಲವನ್ನೂ ನೀಡಿದರು. ಹೌದು, ಅವರು ಆದರ್ಶಪ್ರಾಯ ನಂಬಿಕೆ ಹಾಗೂ ಪಟ್ಟುಹಿಡಿಯುವಿಕೆಯನ್ನು ಪ್ರದರ್ಶಿಸಿದ್ದರು. (ಇಬ್ರಿಯ 10:32-34) ಆದರೂ, ಇಂತಹ ವೇದನಾಮಯ ಅನುಭವಗಳನ್ನು “ನೆನಪಿಗೆ ತಂದುಕೊಳ್ಳಿರಿ” ಎಂದು ಪೌಲನು ಅವರಿಗೆ ಏಕೆ ಹೇಳುತ್ತಾನೆ? ಅದು ಅವರಿಗೆ ನಿರಾಶಾಜನಕವಾಗಿರುವುದಿಲ್ಲವೊ?
13 ‘ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳು’ವುದರಿಂದ, ಸಂಕಷ್ಟದ ಸಮಯದಲ್ಲಿ ಯೆಹೋವನು ಅವರನ್ನು ಹೇಗೆ ಕಾಪಾಡಿದನೆಂಬುದು ಆ ಇಬ್ರಿಯರ ಜ್ಞಾಪಕಕ್ಕೆ ಬರಸಾಧ್ಯವಿತ್ತು. ಆತನ ಸಹಾಯದಿಂದ ಅವರು ಈಗಾಗಲೇ ಸೈತಾನನ ದಾಳಿಗಳಲ್ಲಿ ಹೆಚ್ಚಿನವುಗಳನ್ನು ಪ್ರತಿರೋಧಿಸಿದ್ದರು. ಪೌಲನು ಬರೆದುದು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” (ಇಬ್ರಿಯ 6:10) ಹೌದು, ಯೆಹೋವನು ಅವರ ಎಲ್ಲ ನಂಬಿಗಸ್ತ ಕ್ರಿಯೆಗಳನ್ನು ತನ್ನ ಅಪರಿಮಿತ ಜ್ಞಾಪಕಶಕ್ತಿಯಲ್ಲಿ ಸಂಗ್ರಹಿಸಿಟ್ಟುಕೊಂಡನಲ್ಲದೆ ಅವುಗಳನ್ನು ಸ್ಮರಿಸಿಕೊಂಡನು. ಹೀಗೆ, ಸ್ವರ್ಗದಲ್ಲಿ ಗಂಟುಮಾಡಿ ಇಟ್ಟುಕೊಳ್ಳುವುದರ ಬಗ್ಗೆ ಯೇಸು ನೀಡಿದ ಉತ್ತೇಜನವು ನಮ್ಮ ಜ್ಞಾಪಕಕ್ಕೆ ಬರುತ್ತದೆ. ಯಾವ ಕಳ್ಳನೂ ಅದನ್ನು ಕದಿಯಸಾಧ್ಯವಿಲ್ಲ ಮತ್ತು ನುಸಿಹಿಡಿದು ಕಿಲುಬು ಹತ್ತಿ ಅದು ಕೆಟ್ಟುಹೋಗುವುದೂ ಇಲ್ಲ. (ಮತ್ತಾಯ 6:19-21) ಒಬ್ಬ ಕ್ರೈಸ್ತನು ಹಿಂದೆಗೆದು ನಾಶಕ್ಕೆ ಗುರಿಯಾದರೆ ಮಾತ್ರ ಈ ಗಂಟುಗಳು ಇಲ್ಲದೇ ಹೋಗಬಲ್ಲವು. ಅವನು ಸ್ವರ್ಗದಲ್ಲಿ ಕೂಡಿಸಿಟ್ಟಂತಹ ಎಲ್ಲ ಗಂಟುಗಳನ್ನು ಅದು ಪೋಲುಮಾಡಿಬಿಡುವುದು. ಇಂತಹ ಮಾರ್ಗಕ್ರಮವನ್ನು ಇಬ್ರಿಯ ಕ್ರೈಸ್ತರು ಎಂದಿಗೂ ಬೆನ್ನಟ್ಟದಿರುವಂತೆ ಪೌಲನು ಎಂತಹ ಪರಿಣಾಮಕಾರಿಯಾದ ಕಾರಣವನ್ನು ಕೊಟ್ಟನು! ನಂಬಿಗಸ್ತ ಸೇವೆಯ ಇಷ್ಟೆಲ್ಲ ವರ್ಷಗಳನ್ನು ಅವರು ಏಕೆ ಅನಾವಶ್ಯಕವಾಗಿ ಹಾಳುಮಾಡಬೇಕು? ತಾಳಿಕೊಂಡಿರುವುದೇ ಯೋಗ್ಯವಾದ ಹಾಗೂ ಉತ್ತಮವಾದ ಮಾರ್ಗವಾಗಿರುವುದು.
ನಾವು ಎಂದಿಗೂ ಹಿಂದೆಗೆದು ನಾಶವಾಗದಿರುವುದಕ್ಕೆ ಕಾರಣ
14. ಪ್ರಥಮ ಶತಮಾನದ ಕ್ರೈಸ್ತರು ಎದುರಿಸಿದಂತಹ ಯಾವ ಪಂಥಾಹ್ವಾನಗಳನ್ನು ನಾವು ಇಂದು ಎದುರಿಸುವವರಾಗಿದ್ದೇವೆ?
14 ಇಂದು ಸತ್ಯ ಕ್ರೈಸ್ತರಿಗೆ ಸಹ, ಹಿಂದೆಗೆಯದೆ ಇರಲು ಪ್ರಬಲವಾದ ಕಾರಣಗಳಿವೆ. ಮೊದಲನೆಯದಾಗಿ, ಯೆಹೋವನು ನಮಗೆ ಕೊಟ್ಟಿರುವಂತಹ ಶುದ್ಧ ಆರಾಧನಾ ರೀತಿಯು ನಮಗೆಂತಹ ಆಶೀರ್ವಾದವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳೋಣ. ಪ್ರಥಮ ಶತಮಾನದ ಕ್ರೈಸ್ತರು ಜೀವಿಸಿದಂತಹ ಪರಿಸ್ಥಿತಿಗಳಲ್ಲೇ ನಾವೂ ಜೀವಿಸುತ್ತಾ ಇದ್ದೇವೆ. ನಮಗಿಂತಲೂ ಹೆಚ್ಚು ಜನಪ್ರಿಯವಾಗಿರುವ ಧರ್ಮದ ಸದಸ್ಯರು, ತಮ್ಮ ಧಾರ್ಮಿಕ ಭವನಗಳ ಭವ್ಯತೆಯ ಕಡೆಗೆ ಮತ್ತು ತಾವು ಅನುಸರಿಸುವ ಸಂಪ್ರದಾಯಗಳ ಪ್ರಾಚೀನತೆಯ ಕಡೆಗೆ ಸೂಚಿಸುತ್ತಾ ನಮ್ಮನ್ನು ಹೀಯಾಳಿಸುತ್ತಾರೆ. ಆದರೆ ನಮ್ಮ ಆರಾಧನಾ ರೀತಿಯನ್ನು ತಾನು ಮೆಚ್ಚುವೆನೆಂಬ ಆಶ್ವಾಸನೆಯನ್ನು ಯೆಹೋವನು ನಮಗೆ ನೀಡುತ್ತಾನೆ. ವಾಸ್ತವದಲ್ಲಿ, ಪ್ರಥಮ ಶತಮಾನದ ಕ್ರೈಸ್ತರು ಅನುಭವಿಸಿದಂತಹ ಆಶೀರ್ವಾದಗಳನ್ನೇ ನಾವು ಇಂದು ಅನುಭವಿಸುವವರಾಗಿದ್ದೇವೆ. ‘ಹೇಗೆ?’ ಎಂದು ನೀವು ಯೋಚಿಸಬಹುದು. ಎಷ್ಟೆಂದರೂ, ಪ್ರಥಮ ಶತಮಾನದ ಕ್ರೈಸ್ತರು ಆತ್ಮಿಕ ದೇವಾಲಯವು ಕಾರ್ಯನಡಿಸಲಾರಂಭಿಸಿದ ಸಮಯದಲ್ಲಿ ಜೀವಿಸಿದರು. ಸಾ.ಶ. 29ರಲ್ಲಿ ತನ್ನ ದೀಕ್ಷಾಸ್ನಾನವಾದ ಮೇಲೆ ಯೇಸು ಅದರ ಮಹಾ ಯಾಜಕನಾದನು. ಆ ಕ್ರೈಸ್ತರಲ್ಲಿ ಕೆಲವರು, ಅದ್ಭುತಕಾರ್ಯಗಳನ್ನು ಮಾಡುವ ಈ ದೇವಕುಮಾರನನ್ನು ನೋಡಿದ್ದರು. ಅವನ ಮರಣಾನಂತರವೂ ಕೆಲವೊಂದು ಅದ್ಭುತಕಾರ್ಯಗಳು ನಡೆದವು. ಆದರೆ, ಮುಂತಿಳಿಸಲ್ಪಟ್ಟಂತೆಯೇ ಅಂತಹ ವರಗಳು ಕಾಲಕ್ರಮೇಣ ನಿಂತುಹೋದವು.—1 ಕೊರಿಂಥ 13:8.
15. ಇಂದು ಸತ್ಯ ಕ್ರೈಸ್ತರು ಯಾವ ಪ್ರವಾದನೆಯ ನೆರವೇರಿಕೆಯ ಸಮಯದಲ್ಲಿ ಜೀವಿಸುತ್ತಿದ್ದಾರೆ ಮತ್ತು ಇದು ನಮಗೆ ಏನನ್ನು ಅರ್ಥೈಸುತ್ತದೆ?
15 ಆದರೆ, ಯೆಹೆಜ್ಕೇಲ 40-48ನೇ ಅಧ್ಯಾಯಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿವರಣಾತ್ಮಕವಾದ ದೇವಾಲಯದ ಪ್ರವಾದನೆಯು ಮಹತ್ತರವಾಗಿ ನೆರವೇರುವಂತಹ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ.a ಹೀಗೆ, ಶುದ್ಧಾರಾಧನೆಗಾಗಿರುವ ದೇವರ ಏರ್ಪಾಡಿನ ಪುನಸ್ಸ್ಥಾಪನೆಯನ್ನು ನಾವು ನೋಡಿದ್ದೇವೆ. ಆ ಆತ್ಮಿಕ ಆಲಯದಿಂದ, ಎಲ್ಲ ರೀತಿಯ ಧಾರ್ಮಿಕ ಮಾಲಿನ್ಯ ಹಾಗೂ ಮೂರ್ತಿಪೂಜೆಯು ತೆಗೆದುಹಾಕಲ್ಪಟ್ಟಿದೆ. (ಯೆಹೆಜ್ಕೇಲ 43:9; ಮಲಾಕಿಯ 3:1-5) ಈ ಶುದ್ಧೀಕರಣದಿಂದ ನಮಗಾದ ಪ್ರಯೋಜನಗಳನ್ನು ತುಸು ಯೋಚಿಸಿ ನೋಡಿರಿ.
16. ಯಾವ ನಿರಾಶೆಯ ಪರಿಸ್ಥಿತಿಯನ್ನು ಪ್ರಥಮ ಶತಮಾನದ ಕ್ರೈಸ್ತರು ಎದುರಿಸಿದರು?
16 ಪ್ರಥಮ ಶತಮಾನದ ಕ್ರೈಸ್ತರಿಗೆ, ಸಂಘಟಿತ ಕ್ರೈಸ್ತ ಸಭೆಯ ಭವಿಷ್ಯತ್ತು ಕರಾಳವಾಗಿ ತೋರಿತು. ಅದು, ಆಗ ತಾನೇ ಗೋದಿಯನ್ನು ಬಿತ್ತಿದ್ದ ಹೊಲದಲ್ಲಿ ಹಣಜಿಯನ್ನು ಬಿತ್ತಿದಂತೆ ಇರುವುದೆಂದು ಯೇಸು ಮುಂತಿಳಿಸಿದ್ದನು. ಇದರಿಂದ ಗೋದಿ ಮತ್ತು ಹಣಜಿಗಳ ನಡುವೆ ವ್ಯತ್ಯಾಸವನ್ನು ಕಾಣುವುದು ತೀರ ಕಷ್ಟಕರವಾಗುವುದೆಂದು ಅವನು ಹೇಳಿದನು. (ಮತ್ತಾಯ 13:24-30) ಮತ್ತು ಅದು ನಿಜವಾಗಿತ್ತು. ಪ್ರಥಮ ಶತಮಾನದ ಕೊನೆಯ ಭಾಗದಲ್ಲಿ, ವೃದ್ಧನಾದ ಅಪೊಸ್ತಲ ಯೋಹಾನನು ಭ್ರಷ್ಟತೆಯ ವಿರುದ್ಧ ಅಂತಿಮ ತಡೆಯಾಗಿ ಕಾರ್ಯನಡಿಸುತ್ತಿದ್ದಾಗ, ಧರ್ಮಭ್ರಷ್ಟತೆಯು ವೇಗವಾಗಿ ಎಲ್ಲೆಲ್ಲೂ ಹಬ್ಬುತ್ತಾ ಇತ್ತು. (2 ಥೆಸಲೊನೀಕ 2:6; 1 ಯೋಹಾನ 2:18) ಅಪೊಸ್ತಲರ ಮರಣಾನಂತರ ಸ್ವಲ್ಪದರಲ್ಲೇ ತಲೆಯೆತ್ತಿದ ಪ್ರತ್ಯೇಕವಾದ ವೈದಿಕ ಗುಂಪು, ಬೇರೆ ವಸ್ತ್ರವನ್ನು ಧರಿಸಿಕೊಂಡಿತು ಮತ್ತು ಹಿಂಡಿನ ಮೇಲೆ ದಬ್ಬಾಳಿಕೆ ನಡೆಸಲಾರಂಭಿಸಿತು. ಧರ್ಮಭ್ರಷ್ಟತೆಯು ವಿಷದಂತೆ ಹರಡಿಕೊಂಡಿತು. ನಂಬಿಗಸ್ತ ಕ್ರೈಸ್ತರಿಗೆ ಇದು ಎಷ್ಟೊಂದು ನಿರಾಶಾದಾಯಕವಾಗಿತ್ತು! ಶುದ್ಧಾರಾಧನೆಗಾಗಿ ಹೊಸದಾಗಿ ಸ್ಥಾಪಿಸಲ್ಪಟ್ಟ ಏರ್ಪಾಡು ಒಂದು ಭ್ರಷ್ಟ ಕಾರ್ಯವಿಧಾನದ ಕೆಳಗೆ ಪೂರ್ತಿಯಾಗಿ ಮುಳುಗಿಹೋಗುವುದನ್ನು ಅವರು ನೋಡಿದರು. ಕ್ರಿಸ್ತನು ಆ ಸಭೆಯನ್ನು ಸ್ಥಾಪಿಸಿ ಒಂದು ಶತಮಾನಕ್ಕಿಂತಲೂ ಕಡಿಮೆ ಸಮಯದೊಳಗೇ ಇದು ಸಂಭವಿಸಿತು.
17. ಯಾವ ಅರ್ಥದಲ್ಲಿ ಆಧುನಿಕ ದಿನದ ಕ್ರೈಸ್ತ ಸಭೆಯು ಅದರ ಪ್ರಥಮ ಶತಮಾನದ ಪ್ರತಿರೂಪಕ್ಕಿಂತಲೂ ಶ್ರೇಷ್ಠವಾಗಿದೆ?
17 ಈಗ ಒಂದು ವ್ಯತ್ಯಾಸವನ್ನು ಪರಿಗಣಿಸಿರಿ. ಇಂದು ಶುದ್ಧಾರಾಧನೆಯು, ಅಪೊಸ್ತಲರು ಸಾಯುವ ವರೆಗಿನ ಸಮಯಾವಧಿಗಿಂತ ಹೆಚ್ಚು ಕಾಲ ಈಗಾಗಲೇ ಬಾಳಿರುತ್ತದೆ. 1879ರಲ್ಲಿ ಈ ಪತ್ರಿಕೆಯ ಪ್ರಥಮ ಸಂಚಿಕೆಯು ಪ್ರಕಟಗೊಂಡ ಸಮಯದಂದಿನಿಂದ, ನಮ್ಮ ಆರಾಧನೆಯನ್ನು ಸ್ವಲ್ಪ ಸ್ವಲ್ಪವಾಗಿ ಶುದ್ಧೀಕರಿಸುತ್ತಾ ಇರುವ ಮೂಲಕ ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆ. ಆತ್ಮಿಕ ಆಲಯವನ್ನು ಶುಚಿಗೊಳಿಸುವ ಉದ್ದೇಶದಿಂದ, ಯೆಹೋವನು ಮತ್ತು ಯೇಸು ಕ್ರಿಸ್ತನು 1918ರಲ್ಲಿ ಅದರೊಳಗೆ ಪ್ರವೇಶಿಸಿದರು. (ಮಲಾಕಿಯ 3:1-5) 1919ರಿಂದ, ಯೆಹೋವ ದೇವರನ್ನು ಆರಾಧಿಸಲಿಕ್ಕಾಗಿರುವ ಏರ್ಪಾಡು ಪ್ರಗತಿಪರವಾಗಿ ಪರಿಷ್ಕರಿಸಲ್ಪಟ್ಟಿದೆ. ಬೈಬಲ್ ಪ್ರವಾದನೆಗಳ ಹಾಗೂ ತತ್ವಗಳ ವಿಷಯದಲ್ಲಿ ನಮಗಿದ್ದ ತಿಳಿವಳಿಕೆಯು ದಿನೇ ದಿನೇ ಸ್ಪಷ್ಟವಾಗುತ್ತಾ ಬಂದಿದೆ. (ಜ್ಞಾನೋಕ್ತಿ 4:18) ಈ ಕೀರ್ತಿಯು ಯಾರಿಗೆ ಸಲ್ಲತಕ್ಕದ್ದು? ಕೇವಲ ಅಪರಿಪೂರ್ಣ ಮಾನವರಿಗಲ್ಲ. ಬದಲಿಗೆ, ಈ ಭ್ರಷ್ಟ ಸಮಯಗಳಲ್ಲಿ ತನ್ನ ಜನರನ್ನು ಈ ಭ್ರಷ್ಟತೆಯಿಂದ ಸಂರಕ್ಷಿಸಬಲ್ಲ ಯೆಹೋವನಿಗೆ ಮತ್ತು ಸಭೆಯ ಶಿರಸ್ಸಾಗಿರುವ ಆತನ ಮಗನಿಗೆ ಮಾತ್ರ ಸಲ್ಲತಕ್ಕದ್ದು. ಇಂದು ನಾವು ಶುದ್ಧಾರಾಧನೆಯಲ್ಲಿ ಪಾಲ್ಗೊಳ್ಳುವಂತೆ ಅನುಮತಿಸಿರುವುದಕ್ಕಾಗಿ ನಾವು ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸಲು ಎಂದಿಗೂ ಮರೆಯದಿರೋಣ. ಮತ್ತು ಹಿಂದೆಗೆದು ನಾಶವಾಗದಿರಲು ನಾವು ದೃಢವಾಗಿ ನಿಶ್ಚಯಿಸಿಕೊಳ್ಳೋಣ!
18. ನಾವು ಎಂದಿಗೂ ಹಿಂದೆಗೆದು ನಾಶವಾಗದಿರಲು ಯಾವ ಕಾರಣವಿದೆ?
18 ಆ ಇಬ್ರಿಯ ಕ್ರೈಸ್ತರಂತೆ, ಹಿಂದೆಗೆಯುವ ಹೇಡಿ ಮನೋಭಾವವನ್ನು ತಿರಸ್ಕರಿಸಲು ನಮಗೆ ಎರಡನೆಯ ಕಾರಣವಿದೆ. ಅದೇನೆಂದರೆ, ಕಷ್ಟತೊಂದರೆಗಳನ್ನು ನಾವೇ ತಾಳಿಕೊಂಡದ್ದರ ದಾಖಲೆ. ನಾವು ಯೆಹೋವನ ಸೇವೆಯನ್ನು ಇತ್ತೀಚಿನ ವರ್ಷಗಳಲ್ಲಿ ಆರಂಭಿಸಿರಲಿ, ಇಲ್ಲವೆ ಅನೇಕ ದಶಕಗಳಿಂದ ನಂಬಿಗಸ್ತರಾಗಿ ಮಾಡುತ್ತಾ ಇರಲಿ, ನಾವು ಕ್ರೈಸ್ತ ಚಟುವಟಿಕೆಗಳ ಒಂದು ದಾಖಲೆಯನ್ನು ನಿರ್ಮಿಸಿದ್ದೇವೆ. ನಮ್ಮಲ್ಲಿ ಅನೇಕರು ಹಿಂಸೆಯನ್ನು ತಾಳಿಕೊಂಡಿದ್ದೇವೆ, ಅದು ಸೆರೆವಾಸ, ನಿಷೇಧ, ಕ್ರೂರತನ, ಇಲ್ಲವೆ ಆಸ್ತಿಪಾಸ್ತಿಗಳ ನಷ್ಟವಾಗಿರಬಹುದು. ಇನ್ನೂ ಅನೇಕರು ಕುಟುಂಬ ವಿರೋಧ, ಧಿಕ್ಕಾರ, ಅಪಹಾಸ್ಯ ಮತ್ತು ಉದಾಸೀನ ಮನೋಭಾವವನ್ನು ಎದುರಿಸಿದ್ದಾರೆ. ನಮ್ಮಲ್ಲಿ ಎಲ್ಲರೂ ತಾಳ್ಮೆಯನ್ನು ಪ್ರದರ್ಶಿಸಿ, ಜೀವನದ ಪಂಥಾಹ್ವಾನಗಳು ಮತ್ತು ತೊಂದರೆಗಳ ಎದುರಿನಲ್ಲೂ ಯೆಹೋವನಿಗೆ ನಂಬಿಗಸ್ತ ಸೇವೆಯನ್ನು ನಿರಂತರವಾಗಿ ಸಲ್ಲಿಸಿದ್ದೇವೆ. ಹೀಗೆ ಮಾಡುವ ಮೂಲಕ, ಪಟ್ಟುಹಿಡಿಯುವಿಕೆಯ ವಿಷಯದಲ್ಲಿ ನಾವು ಮಾಡಿರುವ ದಾಖಲೆಯನ್ನು, ಅಂದರೆ ನಾವು ಸ್ವರ್ಗದಲ್ಲಿ ಕೂಡಿಸಿಟ್ಟಿರುವ ನಿಧಿಗಳನ್ನು ಯೆಹೋವನು ಎಂದಿಗೂ ಮರೆಯಲಾರನು. ಹಾಗಾದರೆ, ನಾವು ಹಿಂದೆ ಬಿಟ್ಟುಬಂದಿರುವಂತಹ ಭ್ರಷ್ಟವಾದ ಹಳೆಯ ವ್ಯವಸ್ಥೆಗೆ ಹಿಂದಿರುಗುವ ಸಮಯವು ಖಂಡಿತವಾಗಿಯೂ ಇದಲ್ಲ! ನಾವು ನಮ್ಮ ಎಲ್ಲ ಪರಿಶ್ರಮವನ್ನು ಏಕೆ ಹಾಳುಮಾಡಬೇಕು? ಅಂತ್ಯಕ್ಕೆ “ಇನ್ನು ಸ್ವಲ್ಪಕಾಲ” ಮಾತ್ರ ಉಳಿದಿರುವಾಗ, ಇದು ವಿಶೇಷವಾಗಿ ಸತ್ಯವಾಗಿದೆ.—ಇಬ್ರಿಯ 10:37.
19. ನಮ್ಮ ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?
19 ಹೌದು, ‘ನಾವು ಹಿಂದೆಗೆದು ನಾಶವಾಗುವಂತಹ ಜನರಾಗಿ’ ಇರದಿರಲು ನಿಶ್ಚಯಿಸಿಕೊಳ್ಳೋಣ! ನಾವು “ನಂಬಿಕೆಯುಳ್ಳ” (NW) ಜನರಾಗಿರೋಣ. (ಇಬ್ರಿಯ 10:39) ನಾವು ಆ ವರ್ಣನೆಗೆ ಹೋಲುವವರಾಗಿದ್ದೇವೆಂದು ಹೇಗೆ ನಿಶ್ಚಯಿಸಿಕೊಳ್ಳಸಾಧ್ಯವಿದೆ ಮತ್ತು ಅದನ್ನೇ ಮಾಡಲು ನಾವು ಜೊತೆ ಕ್ರೈಸ್ತರಿಗೆ ಹೇಗೆ ಸಹಾಯ ಮಾಡಬಲ್ಲೆವು? ನಮ್ಮ ಮುಂದಿನ ಲೇಖನವು ಈ ವಿಷಯವನ್ನು ಪರಿಗಣಿಸುವುದು.
[ಅಧ್ಯಯನ ಪ್ರಶ್ನೆಗಳು]
a ಮಾರ್ಚ್ 1, 1999ರ ಕಾವಲಿನಬುರುಜು ಪತ್ರಿಕೆಯ, 8-23ನೇ ಪುಟಗಳನ್ನು ನೋಡಿರಿ.
ನಿಮಗೆ ಜ್ಞಾಪಕವಿದೆಯೊ?
◻ ಹಿಂದೆಗೆದು ನಾಶವಾಗುವುದರ ಅರ್ಥವೇನಾಗಿದೆ?
◻ ಇಬ್ರಿಯ ಕ್ರೈಸ್ತರಿಗೆ ಪೌಲನು ಪತ್ರವನ್ನು ಬರೆದಾಗ ಅವರು ಯಾವ ಒತ್ತಡಗಳನ್ನು ಎದುರಿಸುತ್ತಿದ್ದರು?
◻ ಹಿಂದೆಗೆದು ನಾಶವಾಗದಿರಲು ಪೌಲನು ಇಬ್ರಿಯರಿಗೆ ಯಾವ ಕಾರಣಗಳನ್ನು ಕೊಟ್ಟನು?
◻ ನಾವು ಹಿಂದೆಗೆದು ನಾಶವಾಗದಂತೆ ನಿಶ್ಚಯಿಸಿಕೊಳ್ಳಲು ಯಾವ ಸಕಾರಣಗಳಿವೆ?
[ಪುಟ 15 ರಲ್ಲಿರುವ ಚಿತ್ರಗಳು]
ಪೇತ್ರನು ಭಯಕ್ಕೆ ಒಳಗಾದದ್ದು, ಅವನನ್ನು ‘ಹಿಂದೆಗೆದು ನಾಶವಾಗುವಂತಹ’ ವ್ಯಕ್ತಿಯನ್ನಾಗಿ ಮಾಡಲಿಲ್ಲ