ಹನೋಕನು ಭಕ್ತಿಹೀನ ಲೋಕವೊಂದರಲ್ಲಿ ದೇವರೊಂದಿಗೆ ನಡೆದನು
ದೇವರಿಂದ ಎಲ್ಲ ಮನುಷ್ಯರನ್ನು ತಾನು ದೂರಮಾಡಬಲ್ಲೆನೆಂದು ಪಿಶಾಚನು ವಾದಿಸುತ್ತಾನೆ, ಮತ್ತು ಕೆಲವೊಮ್ಮೆ ಇದರಲ್ಲಿ ಅವನು ಸಫಲನಾಗುತ್ತಿದ್ದಾನೆ ಎಂಬಂತೆ ತೋರಿರಬಹುದು. ಹೇಬೆಲನ ಮರಣದ ಸರಿಸುಮಾರು ಐದು ಶತಮಾನಗಳ ನಂತರದ ವರೆಗೂ ಯೆಹೋವನ ನಂಬಿಗಸ್ತ ಸೇವಕನು ಎಂದು ತೋರ್ಪಡಿಸಿಕೊಳ್ಳಲು ಒಬ್ಬನೂ ಇರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಪಾಪಭರಿತ ಮತ್ತು ಭಕ್ತಿಹೀನ ನಡತೆಯು ಸರ್ವಸಾಮಾನ್ಯವಾಗಿಬಿಟ್ಟಿತ್ತು.
ಆತ್ಮಿಕವಾಗಿ ಅವನತಿಹೊಂದಿದ್ದ ಆ ಸಮಯದಲ್ಲಿ ಹನೋಕನು ಭೂಮಿಯ ಮೇಲೆ ಕಾಣಿಸಿಕೊಂಡನು. ಅವನು ಸಾ.ಶ.ಪೂ. 3404ರಲ್ಲಿ ಜನಿಸಿದನು ಎಂಬುದಾಗಿ ಬೈಬಲ್ ಕಾಲಗಣನೆಯು ಸೂಚಿಸುತ್ತದೆ. ಅವನ ಸಮಕಾಲೀನರಿಗೆ ವ್ಯತಿರಿಕ್ತವಾಗಿ, ಹನೋಕನು ದೇವರಿಗೆ ಮೆಚ್ಚಿಗೆಯಾದ ಮನುಷ್ಯನಾಗಿ ಪರಿಣಮಿಸಿದನು. ಅಪೊಸ್ತಲ ಪೌಲನು, ಯಾರ ನಂಬಿಕೆಯು ಕ್ರೈಸ್ತರಿಗೆ ಮಾದರಿಯಾಗಿ ಎದ್ದುಕಾಣುವಂಥದ್ದಾಗಿದೆಯೋ ಅಂತಹ ಯೆಹೋವನ ಸೇವಕರಲ್ಲಿ ಹನೋಕನನ್ನು ಒಬ್ಬನನ್ನಾಗಿ ಸೇರಿಸಿದನು. ಹನೋಕನು ಯಾರಾಗಿದ್ದನು? ಅವನು ಎದುರಿಸಬೇಕಾಗಿದ್ದ ಪಂಥಾಹ್ವಾನಗಳಾವುವು? ಅವುಗಳನ್ನು ಅವನು ಹೇಗೆ ನಿಭಾಯಿಸಿದನು? ಮತ್ತು ಅವನ ಸಮಗ್ರತೆ ನಮಗೆ ಏಕೆ ಮಹತ್ವಪೂರ್ಣವಾಗಿದೆ?
ಎನೋಷನ ದಿನಗಳಲ್ಲಿ, ಅಂದರೆ ಹನೋಕನ ಕಾಲಕ್ಕೆ ಸುಮಾರು ನಾಲ್ಕು ಶತಮಾನಗಳ ಮುಂಚೆ, “ಜನರು ದೇವರನ್ನು ಯೆಹೋವ ಎಂದು ಕರೆಯಲಾರಂಭಿಸಿದರು.” (ಆದಿಕಾಂಡ 4:26, ಪರಿಶುದ್ಧ ಬೈಬಲ್,a ಪಾದಟಿಪ್ಪಣಿ.) ಮಾನವ ಇತಿಹಾಸದ ಆರಂಭದಿಂದ ಆ ದೈವಿಕ ನಾಮವು ಉಪಯೋಗದಲ್ಲಿತ್ತು. ಆದುದರಿಂದ, ಎನೋಷನು ಜೀವಂತವಾಗಿದ್ದ ಕಾಲದಲ್ಲಿ ಏನು ಪ್ರಾರಂಭಿಸಿತೋ ಅದು, ಯೆಹೋವನನ್ನು ನಂಬಿಕೆ ಮತ್ತು ಶುದ್ಧಾರಾಧನೆಯಿಂದ ಕರೆಯುವುದಾಗಿರಲಿಲ್ಲ. ಆದಿಕಾಂಡ 4:26, “ಅಪವಿತ್ರವಾದ ರೀತಿಯಲ್ಲಿ ಪ್ರಾರಂಭವಾಯಿತು” ಅಥವಾ “ಆಗ ಅಪವಿತ್ರಗೊಳಿಸುವಿಕೆಯು ಆರಂಭವಾಯಿತು,” ಎಂಬುದಾಗಿ ಬರೆಯಲ್ಪಟ್ಟಿರಬೇಕು ಎಂದು ಕೆಲವು ಹೀಬ್ರು ವಿದ್ವಾಂಸರು ಹೇಳುತ್ತಾರೆ. ಮನುಷ್ಯರು ಯೆಹೋವನ ಹೆಸರನ್ನು ತಮಗೇ ಅಥವಾ ಇನ್ನಿತರ ಮಾನವರಿಗೆ ಅನ್ವಯಿಸಿಕೊಂಡು ಮತ್ತು ಇಂಥವರ ಮೂಲಕವಾಗಿ ದೇವರನ್ನು ಆರಾಧನೆಯಲ್ಲಿ ಸಮೀಪಿಸುತ್ತಿರುವಂತೆ ನಟಿಸುತ್ತಿದ್ದಿರಬಹುದು. ಇಲ್ಲವೆ ಅವರು ಆತನ ಹೆಸರನ್ನು ವಿಗ್ರಹಗಳಿಗೆ ಕೊಟ್ಟಿರಬಹುದು.
‘ಹನೋಕನು ಸತ್ಯ ದೇವರೊಂದಿಗೆ ನಡೆದನು’
ಹನೋಕನ ಸುತ್ತಮುತ್ತಲೂ ಎಲ್ಲ ಕಡೆಗಳಲ್ಲಿ ಭಕ್ತಿಹೀನತೆಯಿದ್ದರೂ, ಅವನು ಯೆಹೋವನೊಂದಿಗೆ ಅಂದರೆ “ಸತ್ಯ ದೇವರೊಂದಿಗೆ ನಡೆಯುತ್ತಾ ಇದ್ದನು.” ಅವನ ಪೂರ್ವಪಿತೃಗಳು—ಸೇತ್, ಎನೋಷ್, ಕೇನಾನ್, ಮಹಲಲೇಲ್, ಮತ್ತು ಯೆರೆದ್—ದೇವರೊಂದಿಗೆ ನಡೆದರು ಎಂಬುದಾಗಿ ಹೇಳಲ್ಪಟ್ಟಿಲ್ಲ. ಅಥವಾ ಕಡಿಮೆಪಕ್ಷ ಅವರು ಹನೋಕನು ನಡೆದಿದ್ದಷ್ಟರ ಮಟ್ಟಿಗೆ ದೇವರೊಂದಿಗೆ ನಡೆಯಲಿಲ್ಲ. ಹನೋಕನ ಜೀವನರೀತಿಯು ಅವರಿಂದ ಇವನನ್ನು ಪ್ರತ್ಯೇಕಿಸಿ ತೋರಿಸಿತು.—ಆದಿಕಾಂಡ 5:3-27, NW.
ಯೆಹೋವನೊಂದಿಗೆ ನಡೆಯುವುದು ಆತನೊಂದಿಗಿನ ಚಿರಪರಿಚಿತತೆ ಮತ್ತು ಆಪ್ತತೆಯನ್ನು ಅರ್ಥೈಸುತ್ತದೆ ಮತ್ತು ಇದು, ಹನೋಕನು ದೈವಿಕ ಚಿತ್ತಾನುಸಾರವಾಗಿ ಜೀವಿಸಿದ್ದರಿಂದ ಮಾತ್ರ ಸಾಧ್ಯವಾಯಿತು. ಯೆಹೋವನು ಹನೋಕನ ಭಕ್ತಿಯನ್ನು ಅಂಗೀಕರಿಸಿದನು. ವಾಸ್ತವದಲ್ಲಿ, ಗ್ರೀಕ್ ಸೆಪ್ಟ್ಯುಅಜಿಂಟ್ ಹೇಳುವುದೇನೆಂದರೆ, ದೇವರಿಗೆ “ಹನೋಕನು ಅಚ್ಚುಮೆಚ್ಚಿನವನಾಗಿದ್ದನು.” ಇದೇ ಅನಿಸಿಕೆಯನ್ನು ಅಪೊಸ್ತಲ ಪೌಲನು ಸಹ ವ್ಯಕ್ತಪಡಿಸಿದನು.—ಆದಿಕಾಂಡ 5:22; ಇಬ್ರಿಯ 11:5.
ಹನೋಕನಿಗೆ ಯೆಹೋವನೊಂದಿಗಿದ್ದ ಒಳ್ಳೆಯ ಸಂಬಂಧಕ್ಕೆ ಮೂಲಭೂತ ಅಂಶವಾಗಿದ್ದದ್ದು ಅವನ ನಂಬಿಕೆಯೇ. ಅವನು ದೇವರ “ಸ್ತ್ರೀಯ” ವಾಗ್ದತ್ತ “ಸಂತಾನ”ದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿರಬೇಕು. ಒಂದುವೇಳೆ ಹನೋಕನು ಆದಾಮನೊಂದಿಗೆ ವೈಯಕ್ತಿಕವಾಗಿ ಪರಿಚಿತನಾಗಿದ್ದಿದ್ದರೆ, ಏದೆನಿನಲ್ಲಿ ಮೊದಲ ಮಾನವ ದಂಪತಿಯೊಂದಿಗೆ ದೇವರು ವ್ಯವಹರಿಸಿದ ವಿಧದ ಕುರಿತಾದ ಸ್ವಲ್ಪ ಮಾಹಿತಿಯನ್ನು ಅವನು ಪಡೆದುಕೊಳ್ಳಲು ಶಕ್ತನಾಗಿದ್ದಿರಬಹುದು. ದೇವರ ಕುರಿತಾಗಿ ಹನೋಕನಿಗಿದ್ದ ಜ್ಞಾನವು, ಅವನು ದೇವರನ್ನು “ಶೃದ್ಧಾಪೂರ್ವಕವಾಗಿ ಹುಡುಕುವ” ವ್ಯಕ್ತಿಯನ್ನಾಗಿ ಮಾಡಿತು.—ಆದಿಕಾಂಡ 3:15; ಇಬ್ರಿಯ 11:6, 13, NW.
ಹನೋಕನ ಮತ್ತು ನಮ್ಮ ವಿಷಯದಲ್ಲಿ ಕೂಡ, ಯೆಹೋವನೊಂದಿಗೆ ಒಳ್ಳೆಯ ಸಂಬಂಧಕ್ಕಾಗಿ ಕೇವಲ ದೇವರ ಕುರಿತಾದ ಜ್ಞಾನಕ್ಕಿಂತ ಹೆಚ್ಚಿನದ್ದು ಬೇಕಾಗುತ್ತದೆ. ನಾವು ವಿಶೇಷವಾಗಿ ಒಬ್ಬ ನಿರ್ದಿಷ್ಟ ವ್ಯಕ್ತಿಯೊಂದಿಗಿನ ಆಪ್ತತೆಯನ್ನು ಬೆಲೆಯುಳ್ಳದ್ದೆಂದು ಎಣಿಸುವುದಾದರೆ, ನಮ್ಮ ಆಲೋಚನೆಗಳು ಮತ್ತು ಕೃತ್ಯಗಳು ಅವನ ಅಭಿಪ್ರಾಯಗಳಿಂದ ಪ್ರಭಾವಿಸಲ್ಪಡುತ್ತವೆ ಎಂಬುದು ನಿಜಾಂಶವಲ್ಲವೇ? ಆ ಸ್ನೇಹವನ್ನು ಕೆಡಿಸುವಂಥ ಮಾತುಗಳನ್ನಾಡುವುದರಿಂದ ಅಥವಾ ಕೃತ್ಯಗಳಿಂದ ನಾವು ದೂರವಿರುವೆವು. ಮತ್ತು ನಾವು ನಮ್ಮ ಸ್ವಂತ ಪರಿಸ್ಥಿತಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಆಲೋಚಿಸುತ್ತಿರುವುದಾದರೆ, ಇದು ಆ ಸಂಬಂಧವನ್ನು ಹೇಗೆ ಬಾಧಿಸುವುದು ಎಂಬುದನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲವೇ?
ತದ್ರೀತಿಯಲ್ಲಿ, ದೇವರೊಂದಿಗೆ ನಿಕಟವಾದ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಎಂಬ ಆಶೆಯು ಸಹ ನಾವು ಮಾಡುವಂಥ ವಿಷಯಗಳ ಮೇಲೆ ಪ್ರಭಾವಬೀರುತ್ತದೆ. ಇದಕ್ಕಾಗಿ ಆತನು ಯಾವುದನ್ನು ಸಮ್ಮತಿಸುತ್ತಾನೆ ಮತ್ತು ಯಾವುದನ್ನು ಸಮ್ಮತಿಸುವುದಿಲ್ಲ ಎಂಬುದರ ಕುರಿತಾದ ನಿಷ್ಕೃಷ್ಟ ಜ್ಞಾನವು ಪೂರ್ವಭಾವಿ ಷರತ್ತಾಗಿದೆ. ನಂತರ, ನಾವು ಆ ಜ್ಞಾನದಿಂದ ಮಾರ್ಗದರ್ಶಿಸಲ್ಪಡುತ್ತಾ ನಮ್ಮ ಯೋಚನೆ ಮತ್ತು ಕೃತ್ಯಗಳ ಮೂಲಕ ಆತನನ್ನು ಮೆಚ್ಚಿಸಲು ಪ್ರಯಾಸಪಡಬೇಕು.
ಹೌದು, ದೇವರೊಂದಿಗೆ ನಡೆಯಬೇಕಾದರೆ ನಾವು ಆತನನ್ನು ಮೆಚ್ಚಿಸಬೇಕು. ಅದನ್ನೇ ಹನೋಕನು ನೂರಾರು ವರ್ಷಗಳ ವರೆಗೆ ಮಾಡಿದನು. ವಾಸ್ತವದಲ್ಲಿ, ಹನೋಕನು ದೇವರೊಂದಿಗೆ ‘ನಡೆದನು’ ಎಂಬುದನ್ನು ಸೂಚಿಸುವ ಹೀಬ್ರು ಕ್ರಿಯಾಪದವು, ಪುನರಾವರ್ತಿಸುವ, ನಿರಂತರವಾದ ಕೃತ್ಯವನ್ನು ಸೂಚಿಸುತ್ತದೆ. ‘ದೇವರೊಂದಿಗೆ ನಡೆದ’ ಮತ್ತೊಬ್ಬ ನಂಬಿಗಸ್ತ ಮನುಷ್ಯನು ನೋಹನಾಗಿದ್ದನು.—ಆದಿಕಾಂಡ 6:9.
ಹನೋಕನು, ಹೆಂಡತಿ ಮತ್ತು “ಗಂಡು ಹೆಣ್ಣು ಮಕ್ಕಳನ್ನು” ಪಡೆದಿದ್ದ ಕುಟುಂಬಸ್ಥನಾಗಿದ್ದನು. ಅವನ ಗಂಡುಮಕ್ಕಳಲ್ಲಿ ಒಬ್ಬನು ಮೆತೂಷೆಲಹನಾಗಿದ್ದನು. (ಆದಿಕಾಂಡ 5:21, 22) ತನ್ನ ಮನೆವಾರ್ತೆಯನ್ನು ಉತ್ತಮವಾದ ರೀತಿಯಲ್ಲಿ ನಡೆಸಲಿಕ್ಕಾಗಿ ಹನೋಕನು ತನ್ನಿಂದಾದದ್ದೆಲ್ಲವನ್ನೂ ಮಾಡಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಭಕ್ತಿಹೀನತೆಯು ಸುತ್ತಲೂ ಎಲ್ಲ ಕಡೆಗಳಲ್ಲಿ ಇರುವಾಗ, ದೇವರನ್ನು ಸೇವಿಸುವುದು ಅವನಿಗೆ ಸುಲಭದ ಸಂಗತಿಯಾಗಿರಲಿಲ್ಲ. ಅವನ ಎಲ್ಲ ಸಮಕಾಲೀನರಲ್ಲಿ, ನೋಹನ ತಂದೆಯಾದ ಲೆಮೆಕನು ಮಾತ್ರ ಯೆಹೋವನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದವನಾಗಿದ್ದಿರಬಹುದು. (ಆದಿಕಾಂಡ 5:28, 29) ಆದರೂ, ಹನೋಕನು ಧೈರ್ಯದಿಂದ ಸತ್ಯಾರಾಧನೆಯನ್ನು ಆಚರಿಸಿದನು.
ದೇವರಿಗೆ ನಂಬಿಗಸ್ತನಾಗಿ ಉಳಿಯುವಂತೆ ಹನೋಕನಿಗೆ ಯಾವುದು ಸಹಾಯಮಾಡಿತು? ಅವನು ಯೆಹೋವನ ಹೆಸರನ್ನು ಅಪವಿತ್ರಗೊಳಿಸುತ್ತಿದ್ದವರೊಂದಿಗೆ ಅಥವಾ ದೇವರ ಒಬ್ಬ ಆರಾಧಕನಿಗೆ ಸೂಕ್ತವಲ್ಲದ ಸಂಗಾತಿಗಳೊಂದಿಗೆ ಸಹವಾಸಿಸಲಿಲ್ಲ ಎಂಬುದನ್ನು ಖಂಡಿತವಾಗಿ ಹೇಳಬಹುದು. ಪ್ರಾರ್ಥನೆಯಲ್ಲಿ ಯೆಹೋವನ ಸಹಾಯವನ್ನು ಕೋರುವುದು ಕೂಡ, ತನ್ನ ಸೃಷ್ಟಿಕರ್ತನನ್ನು ಅಪ್ರಸನ್ನಗೊಳಿಸುವಂತಹ ಯಾವುದೇ ವಿಷಯವನ್ನು ತ್ಯಜಿಸುವ ಹನೋಕನ ದೃಢತೀರ್ಮಾನವನ್ನು ಬಲಪಡಿಸಿರಬೇಕು.
ಭಕ್ತಿಹೀನರ ವಿರುದ್ಧವಾದ ಪ್ರವಾದನೆ
ಭಕ್ತಿಹೀನ ಜನರಿಂದ ನಾವು ಸುತ್ತುವರಿಯಲ್ಪಟ್ಟಿರುವಾಗ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳುವುದು ಸಾಕಷ್ಟು ಕಷ್ಟಕರವಾಗಿರುತ್ತದೆ. ಆದರೆ ಇದರೊಂದಿಗೆ ಹನೋಕನು ಕಟುವಾದ ನ್ಯಾಯತೀರ್ಪಿನ ಸಂದೇಶವನ್ನೂ ದುಷ್ಟರ ವಿರುದ್ಧವಾಗಿ ಪ್ರಕಟಪಡಿಸಿದನು. ದೇವರಾತ್ಮದಿಂದ ನಿರ್ದೇಶಿಸಲ್ಪಟ್ಟವನಾಗಿ ಹನೋಕನು ಪ್ರವಾದನಾತ್ಮಕವಾಗಿ ಪ್ರಕಟಪಡಿಸಿದ್ದು: “ಇಗೋ ಕರ್ತನು ಲಕ್ಷಾಂತರ ಪರಿಶುದ್ಧದೂತರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯತೀರಿಸುವದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವದಕ್ಕೂ ಬಂದನು.”—ಯೂದ 14, 15.
ಆ ಸಂದೇಶವು ಪ್ರತಿರೋಧಿಸುವ ಅವಿಶ್ವಾಸಿಗಳ ಮೇಲೆ ಯಾವ ಪರಿಣಾಮವನ್ನು ಬೀರುವುದು? ಪ್ರಾಯಶಃ ಅಪಹಾಸ್ಯ, ಕುಚೋದ್ಯ ಮತ್ತು ಬೆದರಿಕೆಗಳನ್ನು ತರುವಂಥ ಹನೋಕನ ಮಾತುಗಳು ಅವನನ್ನು ಅಪ್ರಿಯ ವ್ಯಕ್ತಿಯನ್ನಾಗಿ ಮಾಡಿತು ಎಂದು ಭಾವಿಸಿಕೊಳ್ಳುವುದು ಸಮಂಜಸವೇ. ಅವನನ್ನು ಶಾಶ್ವತವಾಗಿ ಸುಮ್ಮನಾಗಿಸಲೂ ಕೆಲವರು ಬಯಸಿರಬಹುದು. ಆದರೂ ಹನೋಕನು ಗಾಬರಿಗೊಳ್ಳಲಿಲ್ಲ. ನಂಬಿಗಸ್ತ ಹೇಬೆಲನಿಗೆ ಏನು ಸಂಭವಿಸಿತ್ತು ಎಂಬುದು ಅವನಿಗೆ ಗೊತ್ತಿತ್ತು, ಮತ್ತು ಅವನಂತೆಯೇ, ಏನೇ ಬರಲಿ ತಾನು ದೇವರನ್ನು ಸೇವಿಸುವೆನು ಎಂಬ ದೃಢಸಂಕಲ್ಪವುಳ್ಳವನಾಗಿದ್ದನು.
‘ದೇವರು ಅವನನ್ನು ಕರೆದುಕೊಂಡನು’
‘ದೇವರು ಅವನನ್ನು ಕರೆದುಕೊಂಡಾಗ’ ಹನೋಕನು ಪ್ರಾಣಾಪಾಯದಲ್ಲಿದ್ದಿರಬೇಕು ಎಂಬುದು ಸುವ್ಯಕ್ತ. (ಆದಿಕಾಂಡ 5:24) ಯೆಹೋವನು ತನ್ನ ನಂಬಿಗಸ್ತ ಪ್ರವಾದಿಯು ಉಗ್ರ ವೈರಿಗಳಿಂದ ಹಿಂಸೆಯನ್ನು ಅನುಭವಿಸಲು ಅನುಮತಿಸಲಿಲ್ಲ. ಅಪೊಸ್ತಲ ಪೌಲನಿಗನುಸಾರ, “ಹನೋಕನು ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟ”ನು. (ಇಬ್ರಿಯ 11:5) ಹನೋಕನು ಸಾಯಲಿಲ್ಲ, ಬದಲಾಗಿ ದೇವರು ಅವನನ್ನು ಪರಲೋಕಕ್ಕೆ ಕರೆದುಕೊಂಡು ಹೋದನು ಮತ್ತು ಅಲ್ಲಿ ಅವನು ಜೀವಂತವಾಗಿ ಉಳಿದನು ಎಂಬುದಾಗಿ ಅನೇಕರು ಹೇಳುತ್ತಾರೆ. ಆದರೆ ಯೇಸು ಸರಳವಾಗಿ ತಿಳಿಸಿದ್ದು: “ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.” ಯೇಸುವೇ ಪರಲೋಕಕ್ಕೆ ಏರಿಹೋಗುವವರೆಲ್ಲರಿಗೂ ‘ಮುಂದೆ ಹೋದವನಾಗಿದ್ದಾನೆ.’—ಯೋಹಾನ 3:13; ಇಬ್ರಿಯ 6:19, 20.
ಹಾಗಾದರೆ, ಹನೋಕನಿಗೆ ಏನು ಸಂಭವಿಸಿತು? “ಹನೋಕನು ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟ”ನು ಎಂಬುದು, ದೇವರು ಅವನನ್ನು ಒಂದು ಪ್ರವಾದನಾತ್ಮಕವಾದ ದರ್ಶನದಲ್ಲಿ ಗಾಢವಾಗಿ ತಲ್ಲೀನಗೊಳಿಸಿ, ಅವನು ಈ ಸ್ಥಿತಿಯಲ್ಲಿರುವಾಗಲೇ ಅವನ ಜೀವನವನ್ನು ಅಂತ್ಯಗೊಳಿಸಿದನು ಎಂಬುದನ್ನು ಅರ್ಥೈಸಬಹುದು. ಇಂತಹ ಪರಿಸ್ಥಿತಿಗಳ ಮಧ್ಯದಲ್ಲಿ, ಹನೋಕನು ಮರಣದ ಯಾತನೆಗಳನ್ನು ಅನುಭವಿಸದೇ ಇರುತ್ತಿದ್ದನು. ನಂತರ “ಅವನು ಯಾರಿಗೂ ಸಿಕ್ಕಲಿಲ್ಲ,” ಏಕೆಂದರೆ ಯೆಹೋವನು ಮೋಶೆಯನ ದೇಹದೊಂದಿಗೆ ಹೇಗೆ ಮಾಡಿದನೋ ಹಾಗೆಯೇ ಇವನ ದೇಹವನ್ನೂ ಮರೆಮಾಡಿಬಿಟ್ಟಿರಬೇಕು.—ಧರ್ಮೋಪದೇಶಕಾಂಡ 34:5, 6.
ಹನೋಕನು 365 ವರ್ಷಕಾಲ ಜೀವಿಸಿದನು—ಅವನ ಸಮಕಾಲೀನರು ಜೀವಿಸಿದ್ದಕ್ಕಿಂತ ಇದು ಕೊಂಚವೇ ವರ್ಷಗಳಾಗಿದ್ದವು. ಆದರೆ ಯೆಹೋವನನ್ನು ಪ್ರೀತಿಸುವವರಿಗೆ ಪ್ರಾಮುಖ್ಯವಾದ ವಿಷಯವು, ಅವರು ತಮ್ಮ ಜೀವನದ ಕೊನೆ ವರೆಗೂ ಆತನನ್ನು ನಂಬಿಗಸ್ತಿಕೆಯಿಂದ ಸೇವಿಸುವುದೇ ಆಗಿದೆ. ಹನೋಕನು ಅದನ್ನು ಮಾಡಿದನು ಎಂಬುದು ನಮಗೆ ಗೊತ್ತಿದೆ, ಏಕೆಂದರೆ “ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರಿಗೆ ಮೆಚ್ಚಿಕೆಯಾದವನಾಗಿದ್ದನೆಂದು ಸಾಕ್ಷಿ ಉಂಟು.” ಇದನ್ನು ಹನೋಕನಿಗೆ ದೇವರು ಹೇಗೆ ತಿಳಿಯಪಡಿಸಿದನು ಎಂಬುದನ್ನು ಶಾಸ್ತ್ರವಚನಗಳು ತಿಳಿಸುವುದಿಲ್ಲ. ಹಾಗಿದ್ದರೂ, ಹನೋಕನು ಸಾಯುವ ಮುಂಚೆ, ಅವನಿಗೆ ದೇವರ ಅಂಗೀಕಾರದ ಆಶ್ವಾಸನೆ ಕೊಡಲ್ಪಟ್ಟಿತ್ತು ಮತ್ತು ಯೆಹೋವನು ಅವನನ್ನು ಪುನರುತ್ಥಾನದಲ್ಲಿ ಜ್ಞಾಪಿಸಿಕೊಳ್ಳುವನು ಎಂಬುದರ ಕುರಿತಾಗಿ ನಾವು ನಿಶ್ಚಿತರಾಗಿರಬಲ್ಲೆವು.
ಹನೋಕನ ನಂಬಿಕೆಯನ್ನು ಅನುಕರಿಸಿ
ಭಕ್ತಿಯುಳ್ಳ ಮಾನವರ ನಂಬಿಕೆಯನ್ನು ಅನುಕರಿಸುವುದು ಯಥೋಚಿತವಾಗಿದೆ. (ಇಬ್ರಿಯ 13:7) ನಂಬಿಕೆಯಿಂದಲೇ ಹನೋಕನು ದೇವರ ಮೊದಲ ನಂಬಿಗಸ್ತ ಮಾನವ ಪ್ರವಾದಿಯಾಗಿ ಸೇವೆ ಮಾಡಿದನು. ಹನೋಕನ ಲೋಕವು ನಮ್ಮ ಲೋಕದಂತೆಯೇ, ಹಿಂಸಾತ್ಮಕ, ಅಪವಿತ್ರ ಮತ್ತು ಭಕ್ತಿಹೀನವಾದದ್ದಾಗಿ ಇತ್ತು. ಆದರೆ ಹನೋಕನು ಭಿನ್ನನಾಗಿದ್ದನು. ಅವನಿಗೆ ನಿಜವಾದ ನಂಬಿಕೆಯಿತ್ತು ಮತ್ತು ತನ್ನ ದೈವಿಕ ಭಕ್ತಿಯಲ್ಲಿ ಅವನು ಮಾದರಿಯಾಗಿದ್ದನು. ಅವನು ಪ್ರಕಟಪಡಿಸಲಿಕ್ಕಾಗಿ ಯೆಹೋವನು ಅವನಿಗೆ ಒಂದು ಗಂಭೀರವಾದ ನ್ಯಾಯತೀರ್ಪಿನ ಸಂದೇಶವನ್ನು ಕೊಟ್ಟನು ಎಂಬುದು ನಿಜವೇ, ಆದರೆ ಅದರೊಂದಿಗೆ ಅದನ್ನು ಘೋಷಿಸುವುದಕ್ಕಾಗಿ ಯೆಹೋವನು ಅವನನ್ನು ಬಲಪಡಿಸಿದನು. ಹನೋಕನು ಧೈರ್ಯದಿಂದ ತನ್ನ ನೇಮಕವನ್ನು ಪೂರೈಸುತ್ತಿದ್ದನು, ಮತ್ತು ವೈರಿಗಳ ವಿರೋಧದ ಎದುರಿನಲ್ಲಿ ದೇವರು ಅವನನ್ನು ಕಾಪಾಡಿದನು.
ಹನೋಕನಂತೆಯೇ ನಾವು ನಂಬಿಕೆಯನ್ನು ತೋರಿಸುವುದಾದರೆ, ಈ ಕಡೇ ದಿವಸಗಳಲ್ಲಿ ತನ್ನ ಸಂದೇಶವನ್ನು ಪ್ರಕಟಪಡಿಸಲು ಯೆಹೋವನು ನಮ್ಮನ್ನು ಬಲಪಡಿಸುವನು. ನಾವು ವಿರೋಧವನ್ನು ಧೈರ್ಯದಿಂದ ಎದುರಿಸಲು ಸಹಾಯಮಾಡುವನು, ಮತ್ತು ದೈವಿಕ ಭಕ್ತಿಯು ಭಕ್ತಿಹೀನರಿಂದ ನಮ್ಮನ್ನು ತುಂಬ ಭಿನ್ನವಾಗಿಸುವುದು. ನಂಬಿಕೆಯು, ನಾವು ದೇವರೊಂದಿಗೆ ನಡೆಯಲು ಮತ್ತು ಆತನ ಹೃದಯವನ್ನು ಸಂತೋಷಪಡಿಸುವಂಥ ರೀತಿಯಲ್ಲಿ ವರ್ತಿಸಲು ನಮಗೆ ಸಾಧ್ಯಗೊಳಿಸುವುದು. (ಜ್ಞಾನೋಕ್ತಿ 27:11) ನಂಬಿಕೆಯಿಂದಾಗಿ, ಭಕ್ತಿಹೀನ ಲೋಕದಲ್ಲಿ ದೇವರೊಂದಿಗೆ ನಡೆಯುವುದರಲ್ಲಿ ನಂಬಿಗಸ್ತ ಹನೋಕನು ಸಫಲನಾದನು. ನಾವೂ ಹಾಗೆಯೇ ಮಾಡಬಹುದು.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.
[ಪುಟ 30ರಲ್ಲಿರುವ ಚೌಕ]
ಹನೋಕ ಪುಸ್ತಕದಿಂದ ಬೈಬಲ್ ಉಲ್ಲೇಖಿಸುತ್ತದೋ?
ಹನೋಕನ ಪುಸ್ತಕ ಒಂದು ಅವಿಶ್ವಾಸನೀಯ ಮತ್ತು ಖೋಟಾಬರಹಗಳ ಗ್ರಂಥಪಾಠವಾಗಿದೆ. ಅದು ಹನೋಕನಿಗೆ ಸೇರಿದ್ದೆಂದು ತಪ್ಪಾಗಿ ಹೇಳಲ್ಪಡುತ್ತದೆ. ಪ್ರಾಯಶಃ ಸುಮಾರು ಸಾ.ಶ.ಪೂ. ಎರಡನೆಯ ಮತ್ತು ಮೊದಲನೆಯ ಶತಮಾನಗಳಲ್ಲಿ ಇದು ತಯಾರಿಸಲ್ಪಟ್ಟಿತು. ಆದಿಕಾಂಡದಲ್ಲಿ ತಿಳಿಸಲ್ಪಟ್ಟಿರುವ ಹನೋಕನ ಸಂಕ್ಷಿಪ್ತವಾದ ಭಾಗದ ವಿಸ್ತೃತ ವಿವರಣೆಯ ಉತ್ಪನ್ನವಾಗಿದ್ದು, ಇದು ನ್ಯಾಯಸಮ್ಮತವಲ್ಲದ ಮತ್ತು ಐತಿಹಾಸಿಕವಲ್ಲದ ಯೆಹೂದಿ ಮತದ ಮಿಥ್ಯೆಗಳ ಶೇಖರಣೆಯಾಗಿದೆ. ದೇವರ ಪ್ರೇರಿತ ವಾಕ್ಯವನ್ನು ಪ್ರೀತಿಸುವವರು ಈ ಪುಸ್ತಕವನ್ನು ತಳ್ಳಿಬಿಡಲು ಈ ಒಂದು ವಿಚಾರವೇ ಸಾಕು.
ಬೈಬಲಿನಲ್ಲಿ, ಹನೋಕನ ಪ್ರವಾದನಾ ಮಾತುಗಳು ಯೂದನ ಪುಸ್ತಕದಲ್ಲಿ ಮಾತ್ರ ಕಂಡುಬರುತ್ತವೆ: “ಇಗೋ ಕರ್ತನು ಲಕ್ಷಾಂತರ ಪರಿಶುದ್ಧದೂತರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯತೀರಿಸುವದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವದಕ್ಕೂ ಬಂದನು.” (ಯೂದ 14, 15) ತನ್ನ ಭಕ್ತಿಹೀನ ಸಮಕಾಲೀನರ ವಿರುದ್ಧವಾದ ಹನೋಕನ ಪ್ರವಾದನೆಯು ನೇರವಾಗಿ ಹನೋಕನ ಪುಸ್ತಕದಿಂದ ಉಲ್ಲೇಖಿಸಲ್ಪಟ್ಟದ್ದಾಗಿದೆ ಎಂಬುದಾಗಿ ಕೆಲವು ವಿದ್ವಾಂಸರು ವಾದಿಸುತ್ತಾರೆ. ಯೂದನು ಒಂದು ನಂಬಲರ್ಹವಲ್ಲದ ಅವಿಶ್ವಾಸನೀಯ ಪುಸ್ತಕವನ್ನು ತನ್ನ ಮೂಲವಾಗಿ ಉಪಯೋಗಿಸಿರುವ ಸಾಧ್ಯತೆ ಇದೆಯೋ?
ಯೂದನಿಗೆ ಹನೋಕನ ಪ್ರವಾದನೆಯ ಕುರಿತಾಗಿ ಹೇಗೆ ಗೊತ್ತಿತ್ತು ಎಂಬುದು ಶಾಸ್ತ್ರವಚನಗಳಲ್ಲಿ ತಿಳಿಸಲ್ಪಟ್ಟಿಲ್ಲ. ಪ್ರಾಚೀನ ಕಾಲದಿಂದ ಬಂದಿರುವ ನಂಬಲರ್ಹವಾದ ಬಾಯುಪದೇಶದ ಒಂದು ಸಾಮಾನ್ಯವಾದ ಮೂಲದಿಂದ ಅವನು ಉಲ್ಲೇಖಿಸಿದ್ದಿರಬಹುದು. ಪೌಲನು ಸಹ ಮೋಶೆಯನ್ನು ವಿರೋಧಿಸಿದ ಫರೋಹನ ಸಭೆಯಲ್ಲಿದ್ದ ಅನಾಮಧೇಯ ಮಂತ್ರಗಾರರನ್ನು ಯನ್ನ ಯಂಬ್ರ ಎಂದು ಹೆಸರಿಸುವಾಗ ಅದನ್ನೇ ಮಾಡಿದ್ದನು. ಹನೋಕ ಪುಸ್ತಕದ ಬರಹಗಾರನಿಗೆ ಈ ರೀತಿಯ ಒಂದು ಮೂಲ ಲಭ್ಯವಿದ್ದಿದ್ದರೆ, ಅದು ಯೂದನಿಗೆ ಲಭ್ಯವಿರಲಿಲ್ಲ ಎಂದು ನಾವೇಕೆ ಹೇಳಬೇಕು?b—ವಿಮೋಚನಕಾಂಡ 7:11, 22; 2 ತಿಮೊಥೆಯ 3:8.
ಭಕ್ತಿಹೀನರಿಗಾಗಿದ್ದ ಹನೋಕನ ಸಂದೇಶದ ಮಾಹಿತಿಯನ್ನು ಯೂದನು ಹೇಗೆ ಪಡೆದುಕೊಂಡನು ಎಂಬುದು ಚಿಕ್ಕ ವಿಷಯವಾಗಿದೆ. ಆದರೆ ಅದರ ನಂಬಲರ್ಹತೆಯು, ಯೂದನು ದೈವಪ್ರೇರಿತನಾಗಿ ಬರೆದನು ಎಂಬ ವಾಸ್ತವಾಂಶದಿಂದ ದೃಢೀಕರಿಸಲ್ಪಡುತ್ತದೆ. (2 ತಿಮೊಥೆಯ 3:16) ಅವನು ಅಸತ್ಯವಾಗಿರುವ ಯಾವುದೇ ವಿಷಯವನ್ನು ಹೇಳುವುದರಿಂದ ದೇವರ ಪವಿತ್ರಾತ್ಮವು ಅವನನ್ನು ರಕ್ಷಿಸಿತು.
[ಪಾದಟಿಪ್ಪಣಿಗಳು]
b ಅಪೊಸ್ತಲನಾದ ಸ್ತೆಫನನು ಕೂಡ ಬೈಬಲಿನಲ್ಲಿ ಬೇರೆಲ್ಲಿಯೂ ಕಂಡುಬರದ ಮಾಹಿತಿಯನ್ನು ಒದಗಿಸಿದನು. ಅದು ಮೋಶೆಯ ಐಗುಪ್ತ್ಯ ಶಿಕ್ಷಣ, ಅವನು ಐಗುಪ್ತದಿಂದ ಪರಾರಿಯಾಗುವಾಗ ಅವನ 40 ವರ್ಷ ಪ್ರಾಯ, ಮಿದ್ಯಾನಿನಲ್ಲಿ 40 ವರ್ಷ ಕಾಲಾವಧಿಯ ತಂಗುವಿಕೆ, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ರವಾನಿಸುವುದರಲ್ಲಿ ದೇವದೂತರ ಪಾತ್ರ ಎಂಬ ವಿಷಯಗಳಿಗೆ ಸಂಬಂಧಿಸಿತ್ತು.—ಅ. ಕೃತ್ಯಗಳು 7:22, 23, 30, 38.
[ಪುಟ 31ರಲ್ಲಿರುವ ಚಿತ್ರ]
ಹನೋಕನು ಯೆಹೋವನ ಸಂದೇಶವನ್ನು ಧೈರ್ಯದಿಂದ ಪ್ರಕಟಪಡಿಸಿದನು