ಯೆಹೋವನು ದೀರ್ಘಶಾಂತಿಯ ದೇವರು
“ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.”—ವಿಮೋಚನಕಾಂಡ 34:6.
1, 2. (ಎ) ಗತಕಾಲದಲ್ಲಿ ಯಾರು ಯೆಹೋವನ ದೀರ್ಘಶಾಂತಿಯಿಂದ ಪ್ರಯೋಜನ ಪಡೆದರು? (ಬಿ) “ದೀರ್ಘಶಾಂತಿ” ಎಂಬ ಪದದ ಅರ್ಥವೇನು?
ನೋಹನ ದಿನಗಳಲ್ಲಿದ್ದ ಜನರು, ಮೋಶೆಯೊಂದಿಗೆ ಅರಣ್ಯಮಾರ್ಗವಾಗಿ ಹಾದುಹೋದ ಇಸ್ರಾಯೇಲ್ಯರು, ಯೇಸು ಭೂಮಿಯ ಮೇಲೆ ನಡೆದಾಡಿದಾಗ ಬದುಕಿದ್ದ ಯೆಹೂದ್ಯರು—ಇವರೆಲ್ಲರೂ ವಿವಿಧ ಪರಿಸ್ಥಿತಿಗಳ ಕೆಳಗೆ ಜೀವಿಸಿದ್ದರು. ಆದರೆ ಅವರೆಲ್ಲರೂ ಯೆಹೋವನ ದೀರ್ಘಶಾಂತಿ ಎಂಬ ದಯಾಪರ ಗುಣದಿಂದಲೇ ಪ್ರಯೋಜನವನ್ನು ಪಡೆದರು. ಆ ಗುಣದಿಂದಾಗಿ ಕೆಲವರು ತಮ್ಮ ಜೀವಗಳನ್ನು ಉಳಿಸಿಕೊಂಡರು. ಮತ್ತು ಯೆಹೋವನ ದೀರ್ಘಶಾಂತಿಯು ನಮಗೂ ಜೀವದ ಅರ್ಥದಲ್ಲಿರಬಹುದು.
2 ದೀರ್ಘಶಾಂತಿ ಎಂದರೇನು? ಯೆಹೋವನು ಅದನ್ನು ಯಾವಾಗ ತೋರಿಸಿದನು ಮತ್ತು ಏಕೆ? ‘ದೀರ್ಘಶಾಂತಿ’ ಎಂದರೆ, ತಪ್ಪನ್ನು ಅಥವಾ ರೇಗಿಸುವಿಕೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದೆಂದರ್ಥ. ಛಿದ್ರಗೊಂಡಿರುವ ಸಂಬಂಧದಲ್ಲಿ ಸುಧಾರಣೆಯಾಗುವುದೆಂಬ ಆಶೆಯನ್ನು ಬಿಟ್ಟುಬಿಡದೆ ಇರುವುದೂ ಇದರಲ್ಲಿ ಒಳಗೂಡಿದೆ. ಆದುದರಿಂದ ಈ ಗುಣಕ್ಕೆ ಒಂದು ಉದ್ದೇಶವಿದೆ. ಅದು ವಿಶೇಷವಾಗಿ, ಭಿನ್ನಾಭಿಪ್ರಾಯದ ಪರಿಸ್ಥಿತಿಯನ್ನು ಉಂಟುಮಾಡಿರುವ ಒಬ್ಬ ವ್ಯಕ್ತಿಯ ಹಿತಚಿಂತನೆಗೆ ಗಮನಕೊಡುತ್ತದೆ. ಆದರೂ ದೀರ್ಘಶಾಂತಿಯುಳ್ಳವರಾಗಿರುವುದು ಎಂದರೆ ಕೆಟ್ಟತನವನ್ನು ಮನ್ನಿಸುವುದೆಂದರ್ಥವಲ್ಲ. ದೀರ್ಘಶಾಂತಿಯ ಉದ್ದೇಶವು ಪೂರ್ತಿಗೊಂಡಾಗ ಅಥವಾ ಆ ಪರಿಸ್ಥಿತಿಯನ್ನು ಇನ್ನು ಮುಂದೆ ಸಹಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವೂ ಇಲ್ಲದಿರುವಾಗ, ದೀರ್ಘಶಾಂತಿಯು ಕೊನೆಗೊಳ್ಳುತ್ತದೆ.
3. ಯೆಹೋವನ ದೀರ್ಘಶಾಂತಿಯ ಉದ್ದೇಶವೇನು, ಮತ್ತು ಅದರ ಇತಿಮಿತಿಯೆಷ್ಟು?
3 ಮನುಷ್ಯರು ಸಹ ದೀರ್ಘಶಾಂತಿಯಿಂದ ಇರಸಾಧ್ಯವಿದೆಯಾದರೂ, ಈ ಗುಣದ ಸರ್ವಶ್ರೇಷ್ಠ ಮಾದರಿಯು ಯೆಹೋವನೇ. ಪಾಪವು ಯೆಹೋವನ ಮತ್ತು ಮಾನವ ಸೃಷ್ಟಿಯ ನಡುವಣ ಸಂಬಂಧವನ್ನು ಛಿದ್ರಗೊಳಿಸಿದ ಸಮಯದಂದಿನಿಂದ, ನಮ್ಮ ಸೃಷ್ಟಿಕರ್ತನು ತಾಳ್ಮೆಯ ಸಹನೆಯನ್ನು ತೋರಿಸಿದ್ದಾನೆ. ಅಷ್ಟುಮಾತ್ರವಲ್ಲದೆ, ಪಶ್ಚಾತ್ತಾಪಿಗಳಾದ ಮಾನವರು ತನ್ನೊಂದಿಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ಬೇಕಾದ ಮಾಧ್ಯಮವನ್ನೂ ಒದಗಿಸಿದ್ದಾನೆ. (2 ಪೇತ್ರ 3:9; 1 ಯೋಹಾನ 4:10) ಆದರೆ ದೇವರ ದೀರ್ಘಶಾಂತಿಯ ಉದ್ದೇಶವು ಪೂರೈಸಲ್ಪಡುವಾಗ, ಆತನು ಉದ್ದೇಶಪೂರ್ವಕ ದುಷ್ಕರ್ಮಿಗಳ ವಿರುದ್ಧ ಶಿಕ್ಷಾಕ್ರಮವನ್ನು ಕೈಕೊಳ್ಳುತ್ತಾ, ಈ ಸದ್ಯದ ದುಷ್ಟ ವ್ಯವಸ್ಥೆಯನ್ನು ಅಂತ್ಯಗೊಳಿಸುವನು.—2 ಪೇತ್ರ 3:7.
ದೇವರ ಪ್ರಮುಖ ಗುಣಗಳೊಂದಿಗೆ ಹೊಂದಿಕೆಯಲ್ಲಿದೆ
4. (ಎ) ದೀರ್ಘಶಾಂತಿಯ ವಿಚಾರವು ಹೀಬ್ರು ಶಾಸ್ತ್ರಗಳಲ್ಲಿ ಹೇಗೆ ವ್ಯಕ್ತಪಡಿಸಲ್ಪಟ್ಟಿದೆ? (ಪಾದಟಿಪ್ಪಣಿಯನ್ನೂ ನೋಡಿ.) (ಬಿ) ಪ್ರವಾದಿ ನಹೂಮನು ಯೆಹೋವನನ್ನು ಹೇಗೆ ವರ್ಣಿಸುತ್ತಾನೆ, ಮತ್ತು ಅದು ಯೆಹೋವನ ದೀರ್ಘಶಾಂತಿಯ ಕುರಿತು ಏನನ್ನು ಪ್ರಕಟಿಸುತ್ತದೆ?
4 ಹೀಬ್ರು ಶಾಸ್ತ್ರಗಳಲ್ಲಿ ದೀರ್ಘಶಾಂತಿಯ ಕಲ್ಪನೆಯು ಎರಡು ಹೀಬ್ರು ಶಬ್ದಗಳಿಂದ ವ್ಯಕ್ತಪಡಿಸಲ್ಪಟ್ಟು, “ಮೂಗಿನ ಹೊಳ್ಳೆಯ ಉದ್ದ” ಎಂಬ ಅಕ್ಷರಾರ್ಥವು ಅದಕ್ಕಿದೆ. ಇದನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ “ಕೋಪಿಸುವುದರಲ್ಲಿ ನಿಧಾನಿ” ಎಂದು ಭಾಷಾಂತರಿಸಿದೆ.a ದೇವರ ದೀರ್ಘಶಾಂತಿಯ ಕುರಿತು ಮಾತಾಡುತ್ತಾ ಪ್ರವಾದಿಯಾದ ನಹೂಮನು ಹೇಳಿದ್ದು: “ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ, ಅಪರಾಧಿಗಳನ್ನು ಶಿಕ್ಷಿಸದೆ ಬಿಡನು.” (ನಹೂಮ 1:3) ಹೀಗೆ ಯೆಹೋವನ ದೀರ್ಘಶಾಂತಿಯು ಒಂದು ಬಲಹೀನತೆಯ ಚಿಹ್ನೆಯಲ್ಲ ಮತ್ತು ಅದು ಇತಿಮಿತಿಯಿಲ್ಲದ್ದೂ ಅಲ್ಲ. ಯೆಹೋವನು ದೀರ್ಘಶಾಂತನಾಗಿದ್ದರೂ, ಅದೇ ಸಮಯದಲ್ಲಿ ಅಪಾರ ಶಕ್ತಿಯುಳ್ಳವನೂ ಆಗಿದ್ದಾನೆ ಎಂಬ ನಿಜತ್ವವು, ಆತನ ದೀರ್ಘಶಾಂತಿಯು ಉದ್ದೇಶಪೂರ್ವಕವಾಗಿ ಕೋಪವನ್ನು ನಿಯಂತ್ರಿಸುವುದರ ಪರಿಣಾಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಆತನಿಗೆ ಶಿಕ್ಷಿಸುವ ಅಧಿಕಾರವಿದೆ. ಆದರೂ, ದುಷ್ಟನು ಬದಲಾಗುವಂತೆ ಅವಕಾಶವನ್ನು ಕೊಡಲಿಕ್ಕಾಗಿ ಆತನು ಬೇಕುಬೇಕೆಂದೇ ತತ್ಕ್ಷಣವೇ ಶಿಕ್ಷಿಸುವುದರಿಂದ ತನ್ನನ್ನು ತಡೆದುಹಿಡಿಯುತ್ತಾನೆ. (ಯೆಹೆಜ್ಕೇಲ 18:31, 32) ಆದುದರಿಂದ, ಯೆಹೋವನ ದೀರ್ಘಶಾಂತಿಯು ಆತನ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ ಮತ್ತು ಅದು ತನ್ನ ಶಕ್ತಿಯ ಉಪಯೋಗದಲ್ಲಿ ಆತನ ವಿವೇಕವನ್ನು ತೋರಿಸುತ್ತದೆ.
5. ಯಾವ ರೀತಿಯಲ್ಲಿ ಯೆಹೋವನ ದೀರ್ಘಶಾಂತಿಯು ಆತನ ನ್ಯಾಯದೊಂದಿಗೆ ಹೊಂದಿಕೆಯಲ್ಲಿದೆ?
5 ಯೆಹೋವನ ದೀರ್ಘಶಾಂತಿಯು ಆತನ ನ್ಯಾಯಪರತೆ ಮತ್ತು ನೀತಿಯೊಂದಿಗೂ ಹೊಂದಿಕೆಯಲ್ಲಿದೆ. ಆತನು ಮೋಶೆಗೆ ತಾನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಎಂದು ಪ್ರಕಟಿಸಿದನು. (ವಿಮೋಚನಕಾಂಡ 34:6) ವರ್ಷಗಳಾನಂತರ ಮೋಶೆಯು ಯೆಹೋವನನ್ನು ಕೊಂಡಾಡುತ್ತಾ ಹಾಡಿದ್ದು: “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಹೌದು, ಯೆಹೋವನ ಕನಿಕರ, ದೀರ್ಘಶಾಂತಿ, ನ್ಯಾಯ ಮತ್ತು ಯಥಾರ್ಥಚಿತ್ತವೆಲ್ಲವೂ ಒಂದಕ್ಕೊಂದು ಹೊಂದಿಕೊಂಡು ಹೋಗುತ್ತವೆ.
ಜಲಪ್ರಳಯಕ್ಕೆ ಮುಂಚೆ ಯೆಹೋವನ ದೀರ್ಘಶಾಂತಿ
6. ಯೆಹೋವನು ಆದಾಮಹವ್ವರ ಸಂತತಿಯ ಕಡೆಗೆ ತೋರಿಸಿರುವ ದೀರ್ಘಶಾಂತಿಯ ಯಾವ ಗಮನಾರ್ಹ ಪುರಾವೆಯಿದೆ?
6 ಏದೆನ್ ತೋಟದಲ್ಲಿ ಆದಾಮಹವ್ವರ ದಂಗೆಯೇಳುವಿಕೆಯು, ತಮ್ಮ ಪ್ರೀತಿಪರ ದೇವರಾದ ಯೆಹೋವನೊಂದಿಗಿನ ಅವರ ಅಮೂಲ್ಯ ಸಂಬಂಧವನ್ನು ಶಾಶ್ವತವಾಗಿ ಕಡಿದುಹಾಕಿತು. (ಆದಿಕಾಂಡ 3:8-13, 23, 24) ದೇವರಿಂದ ಈ ರೀತಿಯ ದೂರತೊಲಗುವಿಕೆಯು ಅವರ ಸಂತತಿಯ ಮೇಲೆ ಪ್ರಭಾವ ಬೀರಿತು. ಹೀಗೆ ಪಾಪ, ಅಪರಿಪೂರ್ಣತೆ ಮತ್ತು ಮರಣವನ್ನು ಅವರ ಸಂತತಿಯು ಪಿತ್ರಾರ್ಜಿತವಾಗಿ ಪಡೆದುಕೊಂಡಿತು. (ರೋಮಾಪುರ 5:17-19) ಮೊದಲ ಮಾನವ ದಂಪತಿಯು ಬುದ್ಧಿಪೂರ್ವಕವಾಗಿ ಪಾಪಮಾಡಿದ್ದರೂ, ಅವರು ಸಂತತಿಯನ್ನು ಹುಟ್ಟಿಸುವಂತೆ ದೇವರು ಅವರಿಗೆ ಅನುಮತಿಯನ್ನಿತ್ತನು. ತದನಂತರ, ಆದಾಮಹವ್ವರ ಸಂತತಿಯು ತನ್ನೊಂದಿಗೆ ಸಮಾಧಾನಮಾಡಿಕೊಳ್ಳುವಂತೆ ಆತನು ಒಂದು ಪ್ರೀತಿಪೂರ್ವಕ ಏರ್ಪಾಡನ್ನೂ ಮಾಡಿದನು. (ಯೋಹಾನ 3:16, 36) ಅಪೊಸ್ತಲ ಪೌಲನು ಇದನ್ನು ವರ್ಣಿಸುತ್ತಾ ಅಂದದ್ದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವದು ಮತ್ತೂ ನಿಶ್ಚಯವಲ್ಲವೇ. ದೇವರಿಗೆ ವೈರಿಗಳಾಗಿದ್ದ ನಾವು ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿರಲಾಗಿ ಆತನ ಕೂಡ ಸಮಾಧಾನವಾದ ನಮಗೆ ಆ ಮಗನಿಗಿರುವ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.”—ರೋಮಾಪುರ 5:8-10.
7. ಜಲಪ್ರಳಯಕ್ಕೆ ಮುಂಚೆ ಯೆಹೋವನು ಹೇಗೆ ದೀರ್ಘಶಾಂತಿಯನ್ನು ತೋರಿಸಿದನು, ಮತ್ತು ಪ್ರಳಯಕ್ಕೆ ಮುಂಚಿನ ಸಂತತಿಯ ನಾಶನವು ಹೇಗೆ ನ್ಯಾಯಸಮ್ಮತವಾದದ್ದಾಗಿ ಸಮರ್ಥಿಸಲ್ಪಟ್ಟಿತು?
7 ಯೆಹೋವನ ದೀರ್ಘಶಾಂತಿಯು ನೋಹನ ದಿನಗಳಲ್ಲೂ ತೋರಿಬಂತು. ಜಲಪ್ರಳಯಕ್ಕೆ ಸುಮಾರು ಒಂದು ಶತಕಕ್ಕಿಂತಲೂ ಹೆಚ್ಚು ಸಮಯಕ್ಕೆ ಮುಂಚೆ, “ದೇವರು ಲೋಕವನ್ನು ನೋಡಿದಾಗ ಅದು ಕೆಟ್ಟುಹೋಗಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.” (ಆದಿಕಾಂಡ 6:12) ಆದರೂ ಒಂದು ಸೀಮಿತ ಸಮಯದ ವರೆಗೆ ದೇವರು ಮಾನವಕುಲದ ಕಡೆಗೆ ದೀರ್ಘಶಾಂತಿಯನ್ನು ತೋರಿಸಿದನು. ಆತನಂದದ್ದು: “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು ಭ್ರಷ್ಟರಾದದರಿಂದ ಮರ್ತ್ಯರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ.” (ಆದಿಕಾಂಡ 6:3) ಆ 120 ವರ್ಷಗಳ ಅವಧಿಯು ನಂಬಿಗಸ್ತ ನೋಹನಿಗೆ ಒಂದು ಕುಟುಂಬವನ್ನು ಹುಟ್ಟಿಸಲು ಸಮಯವನ್ನು ಕೊಟ್ಟಿತು. ಮತ್ತು ದೇವರಿಂದ ಅಪ್ಪಣೆಯನ್ನು ಪಡೆದಾಗ ಒಂದು ನಾವೆಯನ್ನು ಕಟ್ಟಲು ಹಾಗೂ ಬರಲಿರುವ ಪ್ರಳಯದ ಕುರಿತು ತನ್ನ ಸಮಕಾಲೀನರನ್ನು ಎಚ್ಚರಿಸಲು ಅದು ನಂಬಿಗಸ್ತ ನೋಹನಿಗೆ ಅವಕಾಶವನ್ನು ಕೊಟ್ಟಿತು. ಅಪೊಸ್ತಲ ಪೇತ್ರನು ಬರೆದದ್ದು: “ನೋಹನು ನಾವೆಯನ್ನು ಕಟ್ಟಿಸುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಆತನಿಗೆ ಅವಿಧೇಯರಾಗಿದ್ದವರ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ಸೇರಿ ನೀರಿನ ಮೂಲಕ ರಕ್ಷಣೆಹೊಂದಿದರು.” (1 ಪೇತ್ರ 3:20) ನೋಹನ ಮನೆವಾರ್ತೆಯನ್ನು ಬಿಟ್ಟು ಹೊರಗಿನವರು ಯಾರೂ ಅವನ ಸಾರುವಿಕೆಗೆ ‘ಲಕ್ಷ್ಯಕೊಡಲಿಲ್ಲ.’ (ಮತ್ತಾಯ 24:38, 39, NW) ಆದರೆ ನೋಹನು ನಾವೆಯನ್ನು ಕಟ್ಟುವಂತೆ ಮಾಡುವ ಮೂಲಕ ಮತ್ತು ಹಲವಾರು ದಶಕಗಳ ತನಕ “ಸುನೀತಿಯನ್ನು ಸಾರುವವ”ನಾಗಿ ಕಾರ್ಯನಡೆಸುವಂತೆ ಮಾಡುವ ಮೂಲಕ ಯೆಹೋವನು, ನೋಹನ ಸಮಕಾಲೀನರು ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು, ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿಕೊಳ್ಳುವಂತೆ ಬಹಳಷ್ಟು ಸಮಯಾವಕಾಶವನ್ನು ನೀಡಿದನು. (2 ಪೇತ್ರ 2:5; ಇಬ್ರಿಯ 11:7) ಕಟ್ಟಕಡೆಗೆ ಆ ದುಷ್ಟ ಸಂತತಿಯ ನಾಶವು ಸಂಪೂರ್ಣವಾಗಿ ನ್ಯಾಯಸಮ್ಮತವಾದದ್ದಾಗಿತ್ತೆಂದು ಸಮರ್ಥಿಸಲ್ಪಟ್ಟಿತು.
ಇಸ್ರಾಯೇಲ್ಯರ ಕಡೆಗೆ ಆದರ್ಶನೀಯ ದೀರ್ಘಶಾಂತಿ
8. ಯೆಹೋವನ ದೀರ್ಘಶಾಂತಿಯು ಇಸ್ರಾಯೇಲ್ ಜನಾಂಗದ ಕಡೆಗೆ ಹೇಗೆ ತೋರಿಸಲ್ಪಟ್ಟಿತು?
8 ಇಸ್ರಾಯೇಲ್ಯರ ಕಡೆಗೆ ಯೆಹೋವನು ತೋರಿಸಿದ ದೀರ್ಘಶಾಂತಿಯು 120 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿತು. ದೇವರಾದುಕೊಂಡ ಜನರಾದ ಅವರ ಇತಿಹಾಸದ ಸುಮಾರು 1,500 ವರ್ಷಗಳಿಗಿಂತಲೂ ಹೆಚ್ಚು ಸಮಯದಲ್ಲೆಲ್ಲಾ ಇಸ್ರಾಯೇಲ್ಯರು ಯೆಹೋವನ ದೀರ್ಘಶಾಂತಿಯನ್ನು ಮಿತಿಮೀರಿ ಪರೀಕ್ಷಿಸಿದರು, ಅದೂ ದೀರ್ಘ ಕಾಲದ ವರೆಗೆ. ಐಗುಪ್ತದಿಂದ ಅದ್ಭುತಕರವಾಗಿ ಬಿಡುಗಡೆಮಾಡಲ್ಪಟ್ಟ ಕೆಲವೇ ವಾರಗಳೊಳಗೆ ಅವರು ವಿಗ್ರಹಾರಾಧನೆಗೆ ತಿರುಗಿದರು, ಮತ್ತು ತಮ್ಮ ವಿಮೋಚಕನಿಗೆ ಅತಿಯಾದ ಅಗೌರವವನ್ನು ತೋರಿಸಿದರು. (ವಿಮೋಚನಕಾಂಡ 32:4; ಕೀರ್ತನೆ 106:21) ಮುಂದಿನ ದಶಕಗಳಲ್ಲಿ, ಯೆಹೋವನು ಅರಣ್ಯದಲ್ಲಿ ಅದ್ಭುತ ರೀತಿಯಲ್ಲಿ ಒದಗಿಸಿಕೊಟ್ಟ ಆಹಾರದ ಕುರಿತು ಇಸ್ರಾಯೇಲ್ಯರು ಗುಣುಗುಟ್ಟಿದರು, ಮೋಶೆ ಮತ್ತು ಆರೋನರ ವಿರುದ್ಧವಾಗಿ ದೂರಿಟ್ಟರು, ಯೆಹೋವನ ವಿರೋಧವಾಗಿ ಮಾತಾಡಿದರು, ಅನ್ಯ ಸ್ತ್ರೀಯರೊಂದಿಗೆ ಜಾರತ್ವವನ್ನು ನಡಿಸಿದರು, ಮತ್ತು ಬಾಳನ ಆರಾಧನೆಯಲ್ಲೂ ಪಾಲ್ಗೊಂಡರು. (ಅರಣ್ಯಕಾಂಡ 11:4-6; 14:2-4; 21:5; 25:1-3; 1 ಕೊರಿಂಥ 10:6-11) ಯೆಹೋವನು ನ್ಯಾಯಸಮ್ಮತವಾಗಿ ತನ್ನ ಜನರನ್ನು ನಾಶಮಾಡಿಬಿಡಬಹುದಿತ್ತು. ಆದರೆ ಅದರ ಬದಲಿಗೆ ಯೆಹೋವನು ದೀರ್ಘಶಾಂತಿಯನ್ನು ತೋರಿಸಿದನು.—ಅರಣ್ಯಕಾಂಡ 14:11-21.
9. ನ್ಯಾಯಸ್ಥಾಪಕರ ಸಮಯದಲ್ಲಿ ಮತ್ತು ಅರಸರ ಆಳ್ವಿಕೆಯ ಸಮಯದಲ್ಲಿ ಯೆಹೋವನು ದೀರ್ಘಶಾಂತಿಯ ದೇವರಾಗಿ ರುಜುವಾದದ್ದು ಹೇಗೆ?
9 ನ್ಯಾಯಸ್ಥಾಪಕರ ಕಾಲದಲ್ಲಿ ಇಸ್ರಾಯೇಲ್ಯರು ಪದೇ ಪದೇ ವಿಗ್ರಹಾರಾಧನೆಯನ್ನು ಮಾಡಿದರು. ಅವರು ವಿಗ್ರಹಾರಾಧನೆಯನ್ನು ಮಾಡತೊಡಗಿದಾಗ, ಯೆಹೋವನು ಅವರನ್ನು ತ್ಯಜಿಸಿಬಿಟ್ಟು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿಬಿಟ್ಟನು. ಆದರೆ ಅವರು ಪಶ್ಚಾತ್ತಾಪಪಟ್ಟು ಸಹಾಯಕ್ಕಾಗಿ ಆತನಿಗೆ ಮೊರೆಯಿಟ್ಟಾಗ ಆತನು ದೀರ್ಘಶಾಂತಿಯನ್ನು ತೋರಿಸುತ್ತಾ, ಅವರನ್ನು ವಿಮೋಚಿಸಲಿಕ್ಕಾಗಿ ನ್ಯಾಯಸ್ಥಾಪಕರನ್ನು ನೇಮಿಸಿದನು. (ನ್ಯಾಯಸ್ಥಾಪಕರು 2:17, 18) ರಾಜರ ಆಳ್ವಿಕೆಯ ದೀರ್ಘಾವಧಿಯಲ್ಲಿ, ಕೇವಲ ಕೊಂಚ ಮಂದಿ ಅರಸರು ಯೆಹೋವನಿಗೆ ಅನನ್ಯ ಭಕ್ತಿಯನ್ನು ತೋರಿಸಿದರು. ಮತ್ತು ನಂಬಿಗಸ್ತ ಅರಸರ ಆಳ್ವಿಕೆಯ ಕೆಳಗೂ, ಜನರು ಅನೇಕಾವರ್ತಿ ಸತ್ಯಾರಾಧನೆಯನ್ನು ಸುಳ್ಳಾರಾಧನೆಯೊಂದಿಗೆ ಬೆರಕೆಮಾಡಿದರು. ಅವರ ಅಪನಂಬಿಗಸ್ತಿಕೆಯ ಕುರಿತು ಎಚ್ಚರಿಕೆ ನೀಡಲಿಕ್ಕಾಗಿ ಯೆಹೋವನು ಪ್ರವಾದಿಗಳನ್ನು ಕಳುಹಿಸಿದಾಗ, ಜನರು ಅವರ ಮಾತಿಗೆ ಕಿವಿಗೊಡದೆ ಭ್ರಷ್ಟ ಯಾಜಕರ ಮತ್ತು ಸುಳ್ಳು ಪ್ರವಾದಿಗಳ ಮಾತುಗಳಿಗೆ ಕಿವಿಗೊಡಲು ಇಷ್ಟಪಟ್ಟರು. (ಯೆರೆಮೀಯ 5:31; 25:4-7) ಹೌದು, ಇಸ್ರಾಯೇಲ್ಯರು ಯೆಹೋವನ ನಂಬಿಗಸ್ತ ಪ್ರವಾದಿಗಳನ್ನು ಹಿಂಸಿಸಿದರು, ಮತ್ತು ಅವರಲ್ಲಿ ಕೆಲವರನ್ನು ಕೊಂದು ಹಾಕಿದರು ಸಹ. (2 ಪೂರ್ವಕಾಲವೃತ್ತಾಂತ 24:20, 21; ಅ. ಕೃತ್ಯಗಳು 7:51, 52) ಆದರೂ ಯೆಹೋವನು ಅವರಿಗೆ ದೀರ್ಘಶಾಂತಿಯನ್ನು ತೋರಿಸುತ್ತಾ ಹೋದನು.—2 ಪೂರ್ವಕಾಲವೃತ್ತಾಂತ 36:15.
ಯೆಹೋವನ ದೀರ್ಘಶಾಂತಿಯು ಕೊನೆಗೊಳ್ಳಲಿಲ್ಲ
10. ಯೆಹೋವನ ದೀರ್ಘಶಾಂತಿಯು ಅದರ ಇತಿಮಿತಿಯನ್ನು ಮುಟ್ಟಿದ್ದು ಯಾವಾಗ?
10 ಆದರೆ ದೇವರ ದೀರ್ಘಶಾಂತಿಗೂ ಒಂದು ಮಿತಿಯಿದೆಯೆಂದು ಇತಿಹಾಸವು ತೋರಿಸುತ್ತದೆ. ಸಾ.ಶ.ಪೂ. 740ರಲ್ಲಿ ಅಶ್ಶೂರ್ಯರು ಇಸ್ರಾಯೇಲಿನ ಹತ್ತು ಕುಲಗಳ ರಾಜ್ಯವನ್ನು ಸೋಲಿಸಿ, ಅದರ ನಿವಾಸಿಗಳನ್ನು ದೇಶಭ್ರಷ್ಟರಾಗಿ ಒಯ್ಯುವಂತೆ ಯೆಹೋವನು ಬಿಟ್ಟುಕೊಟ್ಟನು. (2 ಅರಸುಗಳು 17:5, 6) ಹಿಂಬಾಲಿಸಿ ಬಂದ ಶತಮಾನದ ಕೊನೆಯಲ್ಲಿ, ಬಾಬೆಲಿನವರು ಯೆಹೂದದ ಎರಡು ಕುಲಗಳ ರಾಜ್ಯವನ್ನು ಸೋಲಿಸಿ, ಯೆರೂಸಲೇಮನ್ನೂ ಅದರ ಆಲಯವನ್ನೂ ನಾಶಗೊಳಿಸುವಂತೆ ಯೆಹೋವನು ಅನುಮತಿಸಿದನು.—2 ಪೂರ್ವಕಾಲವೃತ್ತಾಂತ 36:16-19.
11. ತನ್ನ ಶಿಕ್ಷಾತೀರ್ಪನ್ನು ಜಾರಿಗೊಳಿಸುವಾಗಲೂ ಯೆಹೋವನು ದೀರ್ಘಶಾಂತಿಯನ್ನು ತೋರಿಸಿದ್ದು ಹೇಗೆ?
11 ಆದರೆ ಇಸ್ರಾಯೇಲ್ ಮತ್ತು ಯೆಹೂದದ ವಿರುದ್ಧವಾಗಿ ತನ್ನ ಶಿಕ್ಷಾತೀರ್ಪನ್ನು ಜಾರಿಗೊಳಿಸುವಾಗಲೂ ಯೆಹೋವನು ದೀರ್ಘಶಾಂತನಾಗಿರುವುದನ್ನು ಮರೆತುಬಿಡಲಿಲ್ಲ. ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಯೆಹೋವನು ತಾನಾದುಕೊಂಡ ಜನರ ಪುನಃಸ್ಥಾಪನೆಯನ್ನು ಮುಂತಿಳಿಸಿದನು. ಆತನಂದದ್ದು: “ಬಾಬೆಲ್ ರಾಜ್ಯವು ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ ಈ ಸ್ಥಳಕ್ಕೆ ತಿರಿಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು. ನೀವು . . . ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. . . . ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತದೇಶಗಳಿಂದಲೂ ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ” ತರುವೆನು.—ಯೆರೆಮೀಯ 29:10, 13, 14.
12. ಯೆಹೂದಿ ಜನಶೇಷವು ಯೆಹೂದಕ್ಕೆ ಹಿಂದಿರುಗಿದ್ದು, ಮೆಸ್ಸೀಯನ ಆಗಮನದ ಸಂಬಂಧದಲ್ಲಿ ದೈವಿಕ ಮಾರ್ಗದರ್ಶನವಾಗಿ ರುಜುವಾದದ್ದು ಹೇಗೆ?
12 ದೇಶಭ್ರಷ್ಟರಾಗಿ ಒಯ್ಯಲ್ಪಟ್ಟ ಯೆಹೂದ್ಯರಲ್ಲಿ ಉಳಿಕೆಯವರು ನಿಶ್ಚಯವಾಗಿ ಯೆಹೂದಕ್ಕೆ ಹಿಂದಿರುಗಿದರು. ಮತ್ತು ಯೆರೂಸಲೇಮಿನ ಆಲಯವನ್ನು ಪುನಃ ಕಟ್ಟಿ ಯೆಹೋವನ ಆರಾಧನೆಯನ್ನು ಪುನಃಸ್ಥಾಪಿಸಿದರು. ಯೆಹೋವನ ಉದ್ದೇಶವನ್ನು ಪೂರೈಸುವುದರಲ್ಲಿ ಈ ಉಳಿಕೆಯವರು ಚೈತನ್ಯವನ್ನೂ ಸಮೃದ್ಧಿಯನ್ನೂ ಬರಮಾಡುವ ‘ಯೆಹೋವನ ಇಬ್ಬನಿ’ಯಂತಿರಲಿದ್ದರು. ಅವರು ‘ಕಾಡುಮೃಗಗಳನ್ನು ಹಾದುಹೋಗುವ ಸಿಂಹದಂತೆ’ ಧೀರರೂ ಬಲಾಢ್ಯರೂ ಆಗಿ ಪರಿಣಮಿಸಿದರು. (ಮೀಕ 5:7, 8) ಈ ಎರಡನೆಯ ಅಭಿವ್ಯಕ್ತಿಯು ಮಕಬೀಯರ ಕಾಲಾವಧಿಯಲ್ಲಿ ನೆರವೇರಿದ್ದಿರಬಹುದು. ಆಗ ಮಕಬೀಯರ ಮನೆತನದ ಅಧೀನದಲ್ಲಿದ್ದ ಯೆಹೂದ್ಯರು ವಾಗ್ದಾನ ದೇಶದಲ್ಲಿದ್ದ ತಮ್ಮ ಶತ್ರುಗಳನ್ನು ಹೊಡೆದೋಡಿಸಿ, ಭ್ರಷ್ಟಗೊಳಿಸಲ್ಪಟ್ಟಿದ್ದ ಆಲಯವನ್ನು ಶುದ್ಧೀಕರಿಸಿ ಪುನಃಸ್ಥಾಪಿಸಿದರು. ಹೀಗೆ ದೇಶವೂ ಅದರ ಆಲಯವೂ ಕಾಪಾಡಿ ಉಳಿಸಲ್ಪಟ್ಟದ್ದರಿಂದ, ದೇವಕುಮಾರನು ಮೆಸ್ಸೀಯನಾಗಿ ಅಲ್ಲಿ ಆಗಮಿಸಿದಾಗ ಇನ್ನೊಂದು ನಂಬಿಗಸ್ತ ಯೆಹೂದಿ ಜನಶೇಷವು ಅವನನ್ನು ಸ್ವಾಗತಿಸಲು ಅಲ್ಲಿರುವಂಥಾಯಿತು.—ದಾನಿಯೇಲ 9:25; ಲೂಕ 1:13-17, 67-79; 3:15, 21, 22.
13. ಯೆಹೂದ್ಯರು ತನ್ನ ಪುತ್ರನನ್ನು ಕೊಂದುಹಾಕಿದ ಮೇಲೂ ಯೆಹೋವನು ಹೇಗೆ ಅವರ ಕಡೆಗೆ ದೀರ್ಘಶಾಂತಿಯನ್ನು ತೋರಿಸುತ್ತಾ ಬಂದನು?
13 ಯೆಹೂದ್ಯರು ತನ್ನ ಪುತ್ರನನ್ನು ಕೊಂದುಹಾಕಿದ ಮೇಲೂ, ಯೆಹೋವನು ಇನ್ನೂ ಮೂರೂವರೆ ವರ್ಷಗಳ ತನಕ ಅವರ ಕಡೆಗೆ ದೀರ್ಘಶಾಂತಿಯನ್ನು ತೋರಿಸುತ್ತಾ ಬಂದನು. ಆ ಸಮಯದಲ್ಲಿ ಆತನು, ಅವರು ಅಬ್ರಹಾಮನ ಆತ್ಮಿಕ ಸಂತಾನದ ಭಾಗವಾಗಲು ಕರೆಯಲ್ಪಡುವ ಸಂಪೂರ್ಣ ಅವಕಾಶವನ್ನು ಕೇವಲ ಅವರಿಗೆ ದಯಪಾಲಿಸಿದನು. (ದಾನಿಯೇಲ 9:27)b ಸಾ.ಶ. 36ನೆಯ ವರ್ಷಕ್ಕೆ ಮುಂಚೆ ಮತ್ತು ಅನಂತರ ಕೆಲವು ಯೆಹೂದ್ಯರು ಈ ಕರೆಗೆ ಓಗೊಟ್ಟರು. ಮತ್ತು ಹೀಗೆ ಪೌಲನು ತರುವಾಯ ವ್ಯಕ್ತಪಡಿಸಿದ ಪ್ರಕಾರ, ‘ದೇವರು ಕೃಪೆಯಿಂದ ಆದುಕೊಂಡವರಾದ ಉಳಿದ ಕೆಲವರು’ ಇವರೇ ಆಗಿದ್ದರು.—ರೋಮಾಪುರ 11:5.
14. (ಎ) ಸಾ.ಶ. 36ರಲ್ಲಿ, ಅಬ್ರಹಾಮನ ಆತ್ಮಿಕ ಸಂತಾನದ ಭಾಗವಾಗುವ ಸುಯೋಗವು ಯಾರಿಗೆ ನೀಡಲ್ಪಟ್ಟಿತು? (ಬಿ) ಆತ್ಮಿಕ ಇಸ್ರಾಯೇಲಿನ ಸದಸ್ಯರನ್ನು ಯೆಹೋವನು ಆರಿಸಿಕೊಳ್ಳುವ ರೀತಿಯ ಕುರಿತು ಪೌಲನು ತನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಿದನು?
14 ಸಾ.ಶ. 36ರಲ್ಲಿ ಅಬ್ರಹಾಮನ ಆತ್ಮಿಕ ಸಂತಾನದ ಭಾಗವಾಗುವ ಅಮೂಲ್ಯ ಸುಯೋಗವು ಮೊತ್ತಮೊದಲ ಬಾರಿಗೆ ಯೆಹೂದ್ಯೇತರರಿಗೆ ನೀಡಲ್ಪಟ್ಟಿತು. ಅಂದರೆ ಅವರು ಯೆಹೂದ್ಯರೂ ಆಗಿರಲಿಲ್ಲ, ಯೆಹೂದಿ ಮತಾಂತರಿಗಳೂ ಆಗಿರಲಿಲ್ಲ. ಆ ಕರೆಗೆ ಪ್ರತಿಕ್ರಿಯಿಸಿದ ಯಾವನೇ ವ್ಯಕ್ತಿಯು ದೇವರ ಅಪಾತ್ರ ಕೃಪೆಗೆ ಮತ್ತು ದೀರ್ಘಶಾಂತಿಗೆ ಪಾತ್ರನಾದನು. (ಗಲಾತ್ಯ 3:26-29; ಎಫೆಸ 2:4-7) ಯಾವುದರ ಮೂಲಕ ಯೆಹೋವನು ಆತ್ಮಿಕ ಇಸ್ರಾಯೇಲ್ಯರ ಒಟ್ಟು ಸಂಖ್ಯೆಯನ್ನು ಉತ್ಪಾದಿಸಲಿದ್ದನೋ, ಆ ಕರುಣಾಭರಿತ ದೀರ್ಘಶಾಂತಿಯ ಹಿಂದಿರುವ ಆತನ ವಿವೇಕ ಮತ್ತು ಉದ್ದೇಶಕ್ಕಾಗಿ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ಪೌಲನು ಉದ್ಘೋಷಿಸಿದ್ದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ!”—ರೋಮಾಪುರ 11:25, 26, 33; ಗಲಾತ್ಯ 6:15, 16.
ತನ್ನ ಹೆಸರಿಗೋಸ್ಕರ ದೀರ್ಘಶಾಂತಿ
15. ದೈವಿಕ ದೀರ್ಘಶಾಂತಿಯ ಮುಖ್ಯ ಕಾರಣವು ಏನಾಗಿದೆ, ಮತ್ತು ಯಾವ ವಿವಾದಾಂಶವನ್ನು ಇತ್ಯರ್ಥಗೊಳಿಸಲು ಸಮಯದ ಆವಶ್ಯಕತೆಯಿತ್ತು?
15 ಯೆಹೋವನು ದೀರ್ಘಶಾಂತಿಯನ್ನು ತೋರಿಸುವುದು ಏತಕ್ಕಾಗಿ? ಮುಖ್ಯವಾಗಿ, ತನ್ನ ಪವಿತ್ರ ನಾಮವನ್ನು ಘನಪಡಿಸಲಿಕ್ಕಾಗಿ ಮತ್ತು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಲಿಕ್ಕಾಗಿಯೇ. (1 ಸಮುವೇಲ 12:20-22) ಯೆಹೋವನು ತನ್ನ ಪರಮಾಧಿಕಾರವನ್ನು ಉಪಯೋಗಿಸುವ ರೀತಿಯ ಕುರಿತು ಸೈತಾನನು ಎಬ್ಬಿಸಿದ ನೈತಿಕ ವಿವಾದಾಂಶವನ್ನು ಸಮಸ್ತ ಸೃಷ್ಟಿಯ ಮುಂದೆ ತೃಪ್ತಿಕರವಾಗಿ ಇತ್ಯರ್ಥಗೊಳಿಸಲು ಸಮಯದ ಆವಶ್ಯಕತೆಯಿತ್ತು. (ಯೋಬ 1:9-11; 42:2, 5, 6) ಆದಕಾರಣವೇ, ತನ್ನ ಜನರು ಐಗುಪ್ತದಲ್ಲಿ ದಬ್ಬಾಳಿಕೆಗೆ ಒಳಗಾಗಿದ್ದಾಗ ಯೆಹೋವನು ಫರೋಹನಿಗೆ ಅಂದದ್ದು: “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.”—ವಿಮೋಚನಕಾಂಡ 9:16.
16. (ಎ) ಆತನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು ಯೆಹೋವನ ದೀರ್ಘಶಾಂತಿಯು ಹೇಗೆ ಶಕ್ಯಗೊಳಿಸಿತು? (ಬಿ) ಯೆಹೋವನ ನಾಮವು ಪವಿತ್ರೀಕರಿಸಲ್ಪಡುವುದೂ ಆತನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವುದೂ ಹೇಗೆ?
16 ದೇವರು ತನ್ನ ಪವಿತ್ರ ನಾಮವನ್ನು ಮಹಿಮೆಗೇರಿಸುವುದರಲ್ಲಿ ಆತನ ದೀರ್ಘಶಾಂತಿಯ ಪಾತ್ರವನ್ನು ವಿವರಿಸುತ್ತಿದ್ದಾಗ, ಫರೋಹನಿಗೆ ಯೆಹೋವನು ಹೇಳಿದ ಮಾತುಗಳನ್ನು ಪೌಲನು ಉಲ್ಲೇಖಿಸಿದನು. ಆ ಮೇಲೆ ಪೌಲನು ಬರೆದದ್ದು: “ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ. ಮತ್ತು ಪ್ರಭಾವಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ. ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಹೋಶೇಯನ ಗ್ರಂಥದ ವಚನದಲ್ಲಿ ತಾನು ಸೂಚಿಸಿದಂತೆ ಅನ್ಯಜನರೊಳಗಿಂದ ಸಹ ಕರೆದನು. ಆ ವಚನವೇನಂದರೆ—ನನ್ನ ಜನವಲ್ಲದ್ದನ್ನು ನನ್ನ ಜನವೆಂದೂ . . . ಹೇಳುವೆನು.” (ರೋಮಾಪುರ 9:17, 22-25) ಯೆಹೋವನು ದೀರ್ಘಶಾಂತಿಯನ್ನು ತೋರಿಸಿದ ಕಾರಣ, ಆತನು ರಾಷ್ಟ್ರಗಳೊಳಗಿಂದ ‘ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು’ ಆರಿಸಿಕೊಳ್ಳಲು ಶಕ್ತನಾದನು. (ಅ. ಕೃತ್ಯಗಳು 15:14) ತಮ್ಮ ತಲೆಯಾದ ಯೇಸು ಕ್ರಿಸ್ತನ ಕೈಕೆಳಗೆ ಈ “ಪವಿತ್ರ ಜನರು” ರಾಜ್ಯದ ಬಾಧ್ಯಸ್ಥರು ಆಗುವರು. ಆ ರಾಜ್ಯವನ್ನೇ ಯೆಹೋವನು ತನ್ನ ಮಹಾ ನಾಮವನ್ನು ಪವಿತ್ರೀಕರಿಸಲಿಕ್ಕಾಗಿ ಮತ್ತು ತನ್ನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ಉಪಯೋಗಿಸುವನು.—ದಾನಿಯೇಲ 2:44; 7:13, 14, 27; ಪ್ರಕಟನೆ 4:9-11; 5:9-10.
ಯೆಹೋವನ ದೀರ್ಘಶಾಂತಿಯಿಂದಾಗಿ ರಕ್ಷಣೆಯು ಫಲಿಸುತ್ತದೆ
17, 18. (ಎ) ಏನನ್ನು ಮಾಡುವ ಮೂಲಕ ನಾವು ನಮಗರಿಯದೆಯೇ ಯೆಹೋವನ ದೀರ್ಘಶಾಂತಿಯನ್ನು ಟೀಕಿಸುವವರಾಗಬಹುದು? (ಬಿ) ಯೆಹೋವನ ದೀರ್ಘಶಾಂತಿಯನ್ನು ಯಾವ ದೃಷ್ಟಿಯಿಂದ ನೋಡುವಂತೆ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ?
17 ಮನುಷ್ಯರು ಆರಂಭದಲ್ಲಿ ವಿಪತ್ಕಾರಕ ಪಾಪದಲ್ಲಿ ಬಿದ್ದಂದಿನಿಂದ ಹಿಡಿದು ಇಷ್ಟರ ತನಕ, ತಾನು ದೀರ್ಘಶಾಂತನಾದ ದೇವರೆಂಬುದನ್ನು ಯೆಹೋವನು ತೋರಿಸಿಕೊಂಡಿದ್ದಾನೆ. ಜಲಪ್ರಳಯಕ್ಕೆ ಮುಂಚೆ ಆತನು ತೋರಿಸಿದ ದೀರ್ಘಶಾಂತಿಯಿಂದಾಗಿ ತಕ್ಕದಾದ ಎಚ್ಚರಿಕೆಯ ಸಂದೇಶವನ್ನು ಸಾರಲು ಮತ್ತು ಒಂದು ರಕ್ಷಣಾ ಸಾಧನವನ್ನು ಕಟ್ಟಲು ಸಮಯವು ಕೊಡಲ್ಪಟ್ಟಿತು. ಆದರೆ ಆತನ ತಾಳ್ಮೆಗೂ ಒಂದು ಮಿತಿಯಿತ್ತು. ಈ ಕಾರಣದಿಂದ ಆತನು ಜಲಪ್ರಳಯವನ್ನು ತಂದನು. ತದ್ರೀತಿಯಲ್ಲಿ ಇಂದು, ಯೆಹೋವನು ಮಹಾ ದೀರ್ಘಶಾಂತಿಯನ್ನು ತೋರಿಸುತ್ತಾ ಇದ್ದಾನೆ. ಮತ್ತು ಇದು ಕೆಲವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕಾಲ ಮುಂದುವರಿಯುತ್ತಿದೆ. ಆದರೆ ನಿರಾಶೆಯಿಂದ ಬಿಟ್ಟುಕೊಡಲು ಅದು ಕಾರಣವಲ್ಲ. ಹಾಗೆ ಮಾಡುವುದು ದೇವರು ದೀರ್ಘಶಾಂತನಾಗಿರುವುದನ್ನು ಟೀಕಿಸುವುದಕ್ಕೆ ಸಮಾನವಾಗಿರುವುದು. ಪೌಲನು ಕೇಳಿದ್ದು: “ಆತನ ಅಪಾರವಾದ ದಯಾ ಸಹನ ದೀರ್ಘಶಾಂತಿಗಳನ್ನು ಅಸಡ್ಡೆಮಾಡುತ್ತೀಯಾ? ಮನಸ್ಸನ್ನು ಬೇರೆಮಾಡಿಕೊಳ್ಳುವದಕ್ಕೆ ದೇವರ ಉಪಕಾರವು [“ದಯಾಪರ ಗುಣವು,” NW] ನಿನ್ನನ್ನು [ಪಶ್ಚಾತ್ತಾಪಕ್ಕಾಗಿ] ಪ್ರೇರಿಸುತ್ತದೆಂಬದು ನಿನಗೆ ಗೊತ್ತಿಲ್ಲವೇ?”—ರೋಮಾಪುರ 2:4.
18 ರಕ್ಷಣೆಗಾಗಿ ಆತನ ಸಮ್ಮತಿಯನ್ನು ಪಡೆದುಕೊಳ್ಳಲು ಎಷ್ಟರ ಮಟ್ಟಿಗೆ ಆತನ ದೀರ್ಘಶಾಂತಿಯು ನಮಗೆ ಬೇಕಾಗುವುದು ಎಂಬುದು ನಮಗಾರಿಗೂ ತಿಳಿಯದು. “ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ” ಎಂದು ಪೌಲನು ಬುದ್ಧಿವಾದ ನೀಡುತ್ತಾನೆ. (ಫಿಲಿಪ್ಪಿ 2:12) ಅಪೊಸ್ತಲ ಪೇತ್ರನು ಜೊತೆ ಕ್ರೈಸ್ತರಿಗೆ ಬರೆದದ್ದು: “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”—2 ಪೇತ್ರ 3:9, ಓರೆ ಅಕ್ಷರಗಳು ನಮ್ಮವು.
19. ಯಾವ ರೀತಿಯಲ್ಲಿ ನಾವು ಯೆಹೋವನ ದೀರ್ಘಶಾಂತಿಯ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
19 ಆದಕಾರಣ, ಯೆಹೋವನು ವಿಷಯಗಳನ್ನು ನಿರ್ವಹಿಸುವಂಥ ರೀತಿಯನ್ನು ನೋಡಿ ನಾವು ತಾಳ್ಮೆ ತಪ್ಪದಿರೋಣ. ಬದಲಿಗೆ ಪೇತ್ರನ ಹೆಚ್ಚಿನ ಬುದ್ಧಿವಾದವನ್ನು ಅನುಸರಿಸುತ್ತಾ ಹೋಗೋಣ ಮತ್ತು “ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿ”ಕೊಳ್ಳೋಣ. ಯಾರ ರಕ್ಷಣೆಗಾಗಿ? ನಮ್ಮ ರಕ್ಷಣೆಗಾಗಿ ಮತ್ತು ವಿಸ್ತಾರವಾದ ಅರ್ಥದಲ್ಲಿ, “ರಾಜ್ಯದ ಸುವಾರ್ತೆಯನ್ನು” ಇನ್ನೂ ಕೇಳಿಸಿಕೊಳ್ಳಬೇಕಾಗಿರುವ ಅಸಂಖ್ಯಾತ ಜನರ ರಕ್ಷಣೆಗಾಗಿ. (2 ಪೇತ್ರ 3:15; ಮತ್ತಾಯ 24:14) ಯೆಹೋವನು ಅಪಾರವಾದ ದೀರ್ಘಶಾಂತಿಯನ್ನು ತೋರಿಸಿದ್ದಾನೆಂದು ಗಣ್ಯಮಾಡಲು ಇದು ನಮಗೆ ಸಹಾಯಮಾಡುವುದು ಮತ್ತು ನಾವೂ ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ದೀರ್ಘಶಾಂತಿಯಿಂದಿರಲು ನಮ್ಮನ್ನು ಪ್ರೇರೇಪಿಸುವುದು.
[ಪಾದಟಿಪ್ಪಣಿಗಳು]
a ಹೀಬ್ರು ಭಾಷೆಯಲ್ಲಿ “ಮೂಗು” ಅಥವಾ “ಮೂಗಿನ ಹೊಳ್ಳೆಯನ್ನು” ಸೂಚಿಸುವ ಪದವು (ಏಫ್), ಸಾಂಕೇತಿಕವಾಗಿ ಕೋಪವನ್ನು ಸೂಚಿಸಲು ಹೆಚ್ಚಾಗಿ ಉಪಯೋಗಿಸಲ್ಪಟ್ಟಿದೆ. ಕುಪಿತನಾದ ವ್ಯಕ್ತಿಯ ಬಿರುಸಾದ ಉಸಿರಾಟ ಅಥವಾ ಘೊಂಕರಿಸುವಿಕೆಯಿಂದಾಗಿ ಹೀಗೆ ಉಪಯೋಗಿಸಿದ್ದಿರಬಹುದು.”
b ಈ ಪ್ರವಾದನೆಯ ಕುರಿತಾದ ಹೆಚ್ಚಿನ ವಿವರಣೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದ 191-4ನೆಯ ಪುಟಗಳನ್ನು ನೋಡಿ.
ನೀವು ವಿವರಿಸಬಲ್ಲಿರೊ?
• ಬೈಬಲಿನಲ್ಲಿ “ದೀರ್ಘಶಾಂತಿ” ಎಂಬ ಪದದ ಅರ್ಥವೇನು?
• ಯೆಹೋವನು ಜಲಪ್ರಳಯಕ್ಕೆ ಮುಂಚೆ, ಬಾಬೆಲಿನಲ್ಲಿನ ಬಂಧಿವಾಸದ ನಂತರ, ಮತ್ತು ಸಾ.ಶ. ಪ್ರಥಮ ಶತಮಾನದಲ್ಲಿ ಹೇಗೆ ದೀರ್ಘಶಾಂತಿಯನ್ನು ತೋರಿಸಿದನು?
• ಯಾವ ಮುಖ್ಯ ಕಾರಣಗಳಿಗಾಗಿ ಯೆಹೋವನು ದೀರ್ಘಶಾಂತಿಯನ್ನು ತೋರಿಸಿದ್ದಾನೆ?
• ಯೆಹೋವನ ದೀರ್ಘಶಾಂತಿಯನ್ನು ನಾವು ಹೇಗೆ ವೀಕ್ಷಿಸಬೇಕು?
[ಪುಟ 9ರಲ್ಲಿರುವ ಚಿತ್ರ]
ಜಲಪ್ರಳಯಕ್ಕೆ ಮುಂಚೆ ಯೆಹೋವನು ತೋರಿಸಿದ ದೀರ್ಘಶಾಂತಿಯು ಜನರಿಗೆ ಪಶ್ಚಾತ್ತಾಪಪಡಲು ಬಹಳಷ್ಟು ಅವಕಾಶವನ್ನು ಕೊಟ್ಟಿತು
[ಪುಟ 10ರಲ್ಲಿರುವ ಚಿತ್ರ]
ಬಾಬೆಲಿನ ಪತನದ ಅನಂತರ,ಯೆಹೂದ್ಯರು ಯೆಹೋವನ ದೀರ್ಘಶಾಂತಿಯಿಂದ ಪ್ರಯೋಜನ ಹೊಂದಿದರು
[ಪುಟ 11ರಲ್ಲಿರುವ ಚಿತ್ರ]
ಒಂದನೆಯ ಶತಮಾನದಲ್ಲಿ ಯೆಹೂದ್ಯರು ಮತ್ತು ಯೆಹೂದ್ಯೇತರರು ಯೆಹೋವನ ದೀರ್ಘಶಾಂತಿಯಿಂದ ಪ್ರಯೋಜನ ಹೊಂದಿದರು
[ಪುಟ 12ರಲ್ಲಿರುವ ಚಿತ್ರಗಳು]
ಕ್ರೈಸ್ತರು ಇಂದು ಯೆಹೋವನ ದೀರ್ಘಶಾಂತಿಯ ಸದುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ