ನಿಮ್ಮ ತಾಳ್ಮೆಗೆ ಭಕ್ತಿಯನ್ನು ಕೂಡಿಸಿರಿ
“ನಿಮ್ಮ ನಂಬಿಕೆಗೆ ತಾಳ್ಮೆಯನ್ನೂ . . . ತಾಳ್ಮೆಗೆ ಭಕ್ತಿಯನ್ನೂ . . . ಕೂಡಿಸಿರಿ.”—2 ಪೇತ್ರ 1:5, 6.
1, 2. (ಎ) ಒಂದು ಮಗುವಿನ ಸಂಬಂಧದಲ್ಲಿ ಯಾವ ರೀತಿಯ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತದೆ? (ಬಿ) ಆತ್ಮಿಕ ಬೆಳವಣಿಗೆಯು ಎಷ್ಟು ಪ್ರಾಮುಖ್ಯ?
ಒದು ಮಗು ದೊಡ್ಡದಾಗಿ ಬೆಳೆಯುತ್ತಾ ಹೋಗುವುದು ಪ್ರಾಮುಖ್ಯವಾಗಿದೆಯಾದರೂ, ಕೇವಲ ಶರೀರದ ಬೆಳವಣಿಗೆ ಮಾತ್ರ ಸಾಲದು. ಮಾನಸಿಕ ಹಾಗೂ ಭಾವಾತ್ಮಕ ಬೆಳವಣಿಗೆಯನ್ನೂ ನಿರೀಕ್ಷಿಸಲಾಗುತ್ತದೆ. ಸಕಾಲದಲ್ಲಿ ಆ ಮಗು ತನ್ನ ಅಪಕ್ವ ರೀತಿಗಳನ್ನು ತ್ಯಜಿಸಿ, ಪ್ರಾಯಸ್ಥ ಪುರುಷನಾಗಿಯೋ ಸ್ತ್ರೀಯಾಗಿಯೋ ಬೆಳೆಯುತ್ತದೆ. ಅಪೊಸ್ತಲ ಪೌಲನು, “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು,” ಎಂದು ಹೇಳಿದಾಗ ಇದನ್ನೇ ಸೂಚಿಸಿದನು.—1 ಕೊರಿಂಥ 13:11.
2 ಪೌಲನ ಆ ಮಾತುಗಳು ಆತ್ಮಿಕ ಬೆಳವಣಿಗೆಯ ವಿಷಯದಲ್ಲಿ ಒಂದು ಪ್ರಮುಖಾಂಶವನ್ನು ಒತ್ತಿಹೇಳುತ್ತವೆ. ಅದೇನಂದರೆ, ಕ್ರೈಸ್ತರು ಆತ್ಮಿಕವಾಗಿ ಶಿಶುಗಳಾಗಿರುವ ಸ್ಥಿತಿಯಿಂದ ಪ್ರಗತಿಯನ್ನು ಹೊಂದಿ “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥ”ರಾಗಬೇಕು. (1 ಕೊರಿಂಥ 14:20) ಅವರು ಪ್ರಯಾಸಪಡುತ್ತಾ, “ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟಲು” ಪ್ರಯತ್ನಿಸಬೇಕು. ಆಗ ಅವರು “ಕೂಸು”ಗಳಾಗಿರದೆ, “ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋಗುವವರಾಗಿರುವುದಿಲ್ಲ.—ಎಫೆಸ 4:13, 14, NW.
3, 4. (ಎ) ಆತ್ಮಿಕವಾಗಿ ಪ್ರಾಯಸ್ಥರಾಗಬೇಕಾದರೆ ನಾವೇನು ಮಾಡತಕ್ಕದ್ದು? (ಬಿ) ನಾವು ಯಾವ ದೈವಿಕ ಗುಣಗಳನ್ನು ಪ್ರದರ್ಶಿಸಬೇಕು, ಮತ್ತು ಅವೆಷ್ಟು ಪ್ರಾಮುಖ್ಯ?
3 ನಾವು ಆತ್ಮಿಕ ರೀತಿಯಲ್ಲಿ ಹೇಗೆ ಪ್ರಾಯಸ್ಥರಾಗಬಲ್ಲೆವು? ಮಾಮೂಲು ಪರಿಸ್ಥಿತಿಗಳಲ್ಲಿ ಶಾರೀರಿಕ ಬೆಳವಣಿಗೆಯು ತನ್ನಷ್ಟಕ್ಕೇ ಆಗುತ್ತದಾದರೂ, ಆತ್ಮಿಕ ಬೆಳವಣಿಗೆಗಾದರೊ ಜಾಗರೂಕ ಪ್ರಯತ್ನವು ಅಗತ್ಯ. ದೇವರ ವಾಕ್ಯದ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದು ನಾವು ಕಲಿತುಕೊಂಡಿರುವುದಕ್ಕನುಸಾರ ವರ್ತಿಸುವುದರಿಂದ ಇದು ಆರಂಭವಾಗುತ್ತದೆ. (ಇಬ್ರಿಯ 5:14; 2 ಪೇತ್ರ 1:3) ಸರದಿಯಾಗಿ, ನಾವು ದೇವರು ಮೆಚ್ಚುವ ಗುಣಗಳನ್ನು ಪ್ರದರ್ಶಿಸುವಂತೆ ಇದು ಸಾಧ್ಯಗೊಳಿಸುತ್ತದೆ. ಶಾರೀರಿಕ ಬೆಳವಣಿಗೆ ಮತ್ತು ಅದಕ್ಕೆ ಸಂಬಂಧಿಸಿರುವ ಸ್ಥಿತಿಗಳಂತೆ, ವಿವಿಧ ದೈವಿಕ ಗುಣಗಳ ಬೆಳವಣಿಗೆಯು ಏಕಕಾಲಿಕವಾಗಿ ಸಂಭವಿಸುತ್ತದೆ. ಅಪೊಸ್ತಲ ಪೇತ್ರನು ಬರೆದುದು: “ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರಸ್ನೇಹವನ್ನೂ ಸಹೋದರಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.”—2 ಪೇತ್ರ 1:5-7.
4 ಪೇತ್ರನು ಇಲ್ಲಿ ಪಟ್ಟಿಮಾಡಿರುವ ಪ್ರತಿಯೊಂದು ಗುಣವೂ ಆವಶ್ಯಕವಾಗಿರುವುದರಿಂದ, ಇದರಲ್ಲಿ ಯಾವುದನ್ನೂ ಬಿಟ್ಟುಬಿಡಸಾಧ್ಯವಿಲ್ಲ. ಅವನು ಕೂಡಿಸಿ ಹೇಳುವುದು: “ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ನಿಮ್ಮನ್ನು ಆಲಸ್ಯಗಾರರೂ ನಿಷ್ಫಲರೂ ಆಗದಂತೆ ಮಾಡುತ್ತವೆ.” (2 ಪೇತ್ರ 1:8) ಆದುದರಿಂದ, ನಮ್ಮ ತಾಳ್ಮೆಗೆ ದೇವಭಕ್ತಿಯನ್ನು ಕೂಡಿಸುವ ಆವಶ್ಯಕತೆಯ ಮೇಲೆ ನಾವು ಲಕ್ಷ್ಯವನ್ನು ಕೇಂದ್ರೀಕರಿಸೋಣ.
ತಾಳ್ಮೆಯ ಆವಶ್ಯಕತೆ
5. ನಮಗೆ ತಾಳ್ಮೆಯು ಏಕೆ ಅಗತ್ಯ?
5 ಪೇತ್ರ ಮತ್ತು ಪೌಲ—ಇವರಿಬ್ಬರೂ ದೇವಭಕ್ತಿಯನ್ನು ತಾಳ್ಮೆಗೆ ಜೋಡಿಸುತ್ತಾರೆ. (1 ತಿಮೊಥೆಯ 6:11) ತಾಳ್ಮೆಯ ಅರ್ಥವು ಕಷ್ಟಗಳನ್ನು ಸಹಿಸಿಕೊಂಡು ಸ್ಥಿರವಾಗಿ ನಿಲ್ಲುವುದು ಎಂದಷ್ಟೇ ಆಗಿರುವುದಿಲ್ಲ. ಅದರಲ್ಲಿ ಪರೀಕ್ಷೆಗಳು, ತಡೆಗಳು, ಶೋಧನೆಗಳು ಅಥವಾ ಹಿಂಸೆಯು ಬರುವಾಗ ನಿರೀಕ್ಷೆಯನ್ನು ಕಳೆದುಕೊಳ್ಳದೆ ಸಹಿಷ್ಣುತೆ, ಧೈರ್ಯ, ಮತ್ತು ನಿಶ್ಚಲರಾಗಿ ನಿಲ್ಲುವುದು ಸೇರಿದೆ. “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವ” ಜನರು ನಾವಾಗಿರುವುದರಿಂದ, ಹಿಂಸಿಸಲ್ಪಡುವುದನ್ನು ನಿರೀಕ್ಷಿಸುತ್ತೇವೆ. (2 ತಿಮೊಥೆಯ 3:12) ಆದುದರಿಂದ, ನಮಗೆ ಯೆಹೋವನ ಮೇಲಿರುವ ಪ್ರೀತಿಯನ್ನು ರುಜುಪಡಿಸಿ, ರಕ್ಷಣೆಗೆ ಅಗತ್ಯವಿರುವ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕಾದರೆ ನಾವು ತಾಳಿಕೊಳ್ಳಲೇ ಬೇಕು. (ರೋಮಾಪುರ 5:3-5; 2 ತಿಮೊಥೆಯ 4:7, 8; ಯಾಕೋಬ 1:3, 4, 12) ತಾಳ್ಮೆಯಿಲ್ಲದಿರುವಲ್ಲಿ ನಾವು ನಿತ್ಯಜೀವವನ್ನು ಪಡೆಯಲಾರೆವು.—ರೋಮಾಪುರ 2:6, 7; ಇಬ್ರಿಯ 10:36.
6. ಕಡೇ ವರೆಗೆ ತಾಳುವುದೆಂದರೆ ಏನು ಮಾಡುವುದೆಂದರ್ಥ?
6 ನಾವು ಎಷ್ಟೇ ಉತ್ತಮವಾಗಿ ಓಡತೊಡಗಿರಲಿ, ಅಂತಿಮವಾಗಿ ಅತಿ ಪ್ರಾಮುಖ್ಯವಾಗಿರುವ ವಿಷಯವು ತಾಳ್ಮೆಯೇ ಆಗಿದೆ. ಯೇಸು ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಹೌದು, ನಾವು ನಮ್ಮ ಮರಣದ ತನಕ ತಾಳಿಕೊಳ್ಳಬೇಕಾಗಿರಲಿ, ಇಲ್ಲವೆ ಈ ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ವರೆಗೆ ತಾಳಿಕೊಳ್ಳಬೇಕಾಗಿರಲಿ, ಅಂತ್ಯದ ವರೆಗೆ ತಾಳ್ಮೆಯು ಬೇಕೇ ಬೇಕು. ಈ ಎರಡು ಸಂದರ್ಭಗಳಲ್ಲಿಯೂ ನಾವು ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು. ಆದರೆ, ನಮ್ಮ ತಾಳ್ಮೆಗೆ ದೇವಭಕ್ತಿಯನ್ನು ಕೂಡಿಸದೆ ಇರುವಲ್ಲಿ, ಯೆಹೋವನನ್ನು ನಾವು ಮೆಚ್ಚಿಸಲು ಸಾಧ್ಯವಿಲ್ಲ ಮತ್ತು ನಾವು ನಿತ್ಯಜೀವವನ್ನು ಪಡೆಯೆವು. ಆದರೆ ದೇವಭಕ್ತಿ ಎಂದರೇನು?
ದೇವಭಕ್ತಿಯ ಅರ್ಥ
7. ದೇವಭಕ್ತಿಯೆಂದರೇನು, ಮತ್ತು ನಾವು ಏನು ಮಾಡುವಂತೆ ಅದು ಪ್ರೇರಿಸುತ್ತದೆ?
7 ದೇವಭಕ್ತಿಯು ಯೆಹೋವನ ವಿಶ್ವ ಪರಮಾಧಿಕಾರಕ್ಕೆ ತೋರಿಸುವ ನಿಷ್ಠೆಯ ಕಾರಣ ಆತನಿಗೆ ನಾವು ಸಲ್ಲಿಸುವ ವ್ಯಕ್ತಿಪರವಾದ ಪೂಜ್ಯಭಾವ, ಆರಾಧನೆ ಮತ್ತು ಸೇವೆಯಾಗಿದೆ. ಯೆಹೋವನ ಸಂಬಂಧದಲ್ಲಿ ದೈವಿಕ ಭಕ್ತಿಯನ್ನು ನಾವು ತೋರಿಸುತ್ತಾ ಹೋಗಬೇಕಾದರೆ, ನಮಗೆ ಆತನ ಮತ್ತು ಆತನ ಮಾರ್ಗಗಳ ನಿಷ್ಕೃಷ್ಟ ಜ್ಞಾನ ಅಗತ್ಯ. ನಾವು ದೇವರನ್ನು ವ್ಯಕ್ತಿಪರವಾಗಿ, ಅನ್ಯೋನ್ಯವಾಗಿ ತಿಳಿದುಕೊಳ್ಳಬೇಕು. ಇದು ನಾವು ಆತನೊಂದಿಗೆ ಹೃತ್ಪೂರ್ವಕವಾದ ಅಂಟಿಕೆಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು ಮತ್ತು ಇದು ನಮ್ಮ ವರ್ತನೆ ಹಾಗೂ ಜೀವನ ರೀತಿಯಿಂದ ತೋರಿಸಲ್ಪಡುವುದು. ಸಾಧ್ಯವಿರುವಷ್ಟರ ಮಟ್ಟಿಗೆ ನಾವು ಯೆಹೋವನಂತೆ ಆಗಲು ಅಂದರೆ ಆತನ ಮಾರ್ಗಗಳನ್ನು ಅನುಕರಿಸಿ, ಆತನ ಗುಣಗಳನ್ನು ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಅಪೇಕ್ಷಿಸಬೇಕು. (ಎಫೆಸ 5:1) ಹೌದು, ದೇವಭಕ್ತಿಯು, ನಾವು ಮಾಡುವ ಸಕಲ ವಿಷಯಗಳಲ್ಲಿ ನಾವು ದೇವರನ್ನು ಮೆಚ್ಚಿಸಲು ಬಯಸುವಂತೆ ಪ್ರಚೋದಿಸುತ್ತದೆ.—1 ಕೊರಿಂಥ 10:31.
8. ದೇವಭಕ್ತಿ ಮತ್ತು ಅನನ್ಯ ಭಕ್ತಿಗೆ ಒತ್ತಾದ ಸಂಬಂಧವಿರುವುದು ಹೇಗೆ?
8 ನಾವು ನಿಜ ದೇವಭಕ್ತಿಯನ್ನು ಕಾರ್ಯರೂಪಕ್ಕೆ ಹಾಕಬೇಕಾದರೆ, ಯೆಹೋವನನ್ನು ಅನನ್ಯವಾಗಿ ಆರಾಧಿಸಿ, ನಮ್ಮ ಹೃದಯಗಳಲ್ಲಿ ಇನ್ನಾವುದೂ ಆ ಸ್ಥಾನವನ್ನು ಅತಿಕ್ರಮಿಸದಂತೆ ನೋಡಿಕೊಳ್ಳಬೇಕು. ನಮ್ಮ ಸೃಷ್ಟಿಕರ್ತನು ಆತನಾಗಿರುವುದರಿಂದ, ನಮ್ಮ ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ಹಕ್ಕು ಆತನಿಗಿದೆ. (ಧರ್ಮೋಪದೇಶಕಾಂಡ 4:24; ಯೆಶಾಯ 42:8) ಆದರೂ, ತನ್ನನ್ನು ಆರಾಧಿಸುವಂತೆ ಯೆಹೋವನು ನಮ್ಮನ್ನು ಒತ್ತಾಯಿಸುವುದಿಲ್ಲ. ನಮ್ಮ ಇಷ್ಟಪೂರ್ವಕವಾದ ಭಕ್ತಿಯನ್ನು ಆತನು ಬಯಸುತ್ತಾನೆ. ನಮ್ಮ ಜೀವನವನ್ನು ಶುದ್ಧೀಕರಿಸಿ, ಆತನಿಗೆ ಷರತ್ತುರಹಿತವಾದ ಸಮರ್ಪಣೆಯನ್ನು ಮಾಡಿ, ಅದಕ್ಕನುಸಾರವಾಗಿ ಬದುಕುವಂತೆ ನಮ್ಮನ್ನು ಪ್ರಚೋದಿಸುವಂಥದ್ದು, ನಿಷ್ಕೃಷ್ಟ ಜ್ಞಾನದ ಮೇಲೆ ಹೊಂದಿಕೊಂಡಿರುವ ದೇವರಿಗಾಗಿ ನಮಗಿರುವ ಪ್ರೀತಿಯೇ.
ದೇವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಿರಿ
9, 10. ದೇವರೊಂದಿಗೆ ನಾವು ಹೇಗೆ ನಿಕಟ ಸಂಬಂಧವನ್ನು ಬೆಳೆಸಿ ಅದನ್ನು ಕಾಪಾಡಿಕೊಳ್ಳಬಲ್ಲೆವು?
9 ದೀಕ್ಷಾಸ್ನಾನದ ಮೂಲಕ ದೇವರಿಗೆ ನಮ್ಮ ಸಮರ್ಪಣೆಯನ್ನು ಸೂಚಿಸಿದ ಬಳಿಕವೂ ನಾವು ಆತನೊಂದಿಗೆ ವ್ಯಕ್ತಿಪರವಾದ ಸಂಬಂಧವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಇದನ್ನು ಮಾಡುವ ಮತ್ತು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವ ನಮ್ಮ ಬಯಕೆಯು, ನಾವು ಆತನ ವಾಕ್ಯವನ್ನು ಅಧ್ಯಯನ ಮಾಡುತ್ತಾ ಹೋಗುವಂತೆಯೂ ಅದನ್ನು ಧ್ಯಾನಿಸುತ್ತಿರುವಂತೆಯೂ ನಮ್ಮನ್ನು ಪ್ರಚೋದಿಸುತ್ತದೆ. ದೇವರಾತ್ಮವು ನಮ್ಮ ಹೃದಮನಗಳನ್ನು ಪ್ರಭಾವಿಸುವಂತೆ ನಾವು ಬಿಡುವಾಗ, ಯೆಹೋವನಿಗಾಗಿ ನಮಗಿರುವ ಪ್ರೀತಿಯು ಗಾಢವಾಗುತ್ತದೆ. ನಮ್ಮ ಜೀವನಗಳಲ್ಲಿ, ಆತನೊಂದಿಗೆ ನಮಗಿರುವ ಸಂಬಂಧವು ಅತಿ ಪ್ರಾಮುಖ್ಯ ವಿಷಯವಾಗಿ ಮುಂದುವರಿಯುತ್ತದೆ. ಆಗ ನಾವು ಯೆಹೋವನನ್ನು ನಮ್ಮ ಅತ್ಯಂತ ಮೆಚ್ಚಿನ ಸ್ನೇಹಿತನಾಗಿ ಕಂಡು, ಆತನನ್ನು ಸದಾ ಮೆಚ್ಚಿಸಲು ಬಯಸುತ್ತೇವೆ. (1 ಯೋಹಾನ 5:3) ದೇವರೊಂದಿಗೆ ನಮಗಿರುವ ರಮ್ಯ ಸಂಬಂಧದಲ್ಲಿ ನಮಗಿರುವ ಆನಂದವು ಬೆಳೆಯುತ್ತದೆ ಮತ್ತು ಆಗ, ನಮಗೆ ಅಗತ್ಯವಿರುವಾಗಲೆಲ್ಲ ಆತನು ನಮಗೆ ಪ್ರೀತಿಯಿಂದ ಉಪದೇಶ ನೀಡಿ ನಮ್ಮನ್ನು ತಿದ್ದುವುದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ.—ಧರ್ಮೋಪದೇಶಕಾಂಡ 8:5.
10 ಯೆಹೋವನೊಂದಿಗೆ ನಮಗಿರುವ ಅಮೂಲ್ಯ ಸಂಬಂಧವನ್ನು ಬಲಗೊಳಿಸುವ ಕ್ರಮಗಳನ್ನು ನಾವು ಕೈಕೊಳ್ಳದಿರುವಲ್ಲಿ, ಅದು ಕ್ಷೀಣಿಸಬಲ್ಲದು. ಹಾಗಾಗುವಲ್ಲಿ, ಅದು ದೇವರ ತಪ್ಪಾಗಿರದು, ಏಕೆಂದರೆ “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ಅ. ಕೃತ್ಯಗಳು 17:27) ತನ್ನನ್ನು ಸಮೀಪಿಸುವುದನ್ನು ಯೆಹೋವನು ಕಷ್ಟಕರವಾಗಿ ಮಾಡದೆ ಇರುವುದಕ್ಕಾಗಿ ನಾವೆಷ್ಟು ಸಂತುಷ್ಟರು! (1 ಯೋಹಾನ 5:14, 15) ಹೌದು, ದೇವರೊಂದಿಗೆ ನಿಕಟವಾದ ವ್ಯಕ್ತಿಪರ ಸಂಬಂಧವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಪ್ರಯಾಸಪಡಬೇಕೆಂಬುದು ನಿಶ್ಚಯ. ಆದರೂ, ದೈವಿಕ ಭಕ್ತಿಯನ್ನು ಬೆಳೆಸಿ ಕಾಪಾಡಿಕೊಳ್ಳಲು ನಮಗೆ ಅಗತ್ಯವಿರುವ ಎಲ್ಲ ಒದಗಿಸುವಿಕೆಗಳನ್ನೂ ಆತನು ನಮಗೆ ದಯಪಾಲಿಸಿ, ನಾವು ಆತನ ಸಮೀಪಕ್ಕೆ ಬರುವಂತೆ ಆತನು ನಮಗೆ ಸಹಾಯಮಾಡುತ್ತಾನೆ. (ಯಾಕೋಬ 4:8) ಈ ಎಲ್ಲ ಪ್ರೀತಿಯ ಒದಗಿಸುವಿಕೆಗಳ ಪೂರ್ಣ ಉಪಯೋಗವನ್ನು ನಾವು ಹೇಗೆ ಮಾಡಬಲ್ಲೆವು?
ಆತ್ಮಿಕವಾಗಿ ಬಲವುಳ್ಳವರಾಗುತ್ತಾ ಹೋಗಿರಿ
11. ನಮ್ಮ ದೇವಭಕ್ತಿಯ ಕೆಲವು ವ್ಯಕ್ತಪಡಿಸುವಿಕೆಗಳಾವುವು?
11 ನಮ್ಮಲ್ಲಿ ದೇವರಿಗಾಗಿರುವ ಆಳವಾಗಿ ಬೇರೂರಿದಂಥ ಪ್ರೀತಿಯು, ಪೌಲನ ಈ ಸಲಹೆಗನುಸಾರವಾಗಿ ನಮ್ಮ ದೇವಭಕ್ತಿಯ ಗಾಢತೆಯನ್ನು ತೋರಿಸುವಂತೆ ನಮ್ಮನ್ನು ಪ್ರಚೋದಿಸುವುದು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.” (2 ತಿಮೊಥೆಯ 2:15) ಇದನ್ನು ಮಾಡಬೇಕಾದರೆ ಕ್ರಮದ ಬೈಬಲ್ ಅಧ್ಯಯನ, ಕೂಟಗಳಲ್ಲಿ ಉಪಸ್ಥಿತಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಿಕೆಯ ಉತ್ತಮ ನಿಯತ ಕ್ರಮವನ್ನು ನಾವು ಪಾಲಿಸಬೇಕು. ‘ಎಡೆಬಿಡದೆ ಪ್ರಾರ್ಥಿಸುವ’ ಮೂಲಕವೂ ನಾವು ಯೆಹೋವನಿಗೆ ನಿಕಟವಾಗಿರಬಲ್ಲೆವು. (1 ಥೆಸಲೊನೀಕ 5:17) ಇವು ನಮ್ಮ ದೇವಭಕ್ತಿಯ ಅರ್ಥವತ್ತಾದ ವ್ಯಕ್ತಪಡಿಸುವಿಕೆಗಳಾಗಿವೆ. ಇವುಗಳಲ್ಲಿ ಒಂದನ್ನಾದರೂ ನಾವು ಅಸಡ್ಡೆಮಾಡುವಲ್ಲಿ ಅದು ನಮಗೆ ಆತ್ಮಿಕ ಕಾಯಿಲೆಯನ್ನು ಬರಮಾಡಬಹುದು ಮತ್ತು ನಾವು ಸೈತಾನನ ತಂತ್ರಗಳಿಗೆ ಬಲಿಬೀಳುವಂತೆ ಮಾಡಬಹುದು.—1 ಪೇತ್ರ 5:8.
12. ನಾವು ಪರೀಕ್ಷೆಗಳನ್ನು ಹೇಗೆ ಜಯಪ್ರದವಾಗಿ ನಿಭಾಯಿಸಬಲ್ಲೆವು?
12 ನಮ್ಮನ್ನು ಆತ್ಮಿಕವಾಗಿ ಬಲವುಳ್ಳವರೂ ಕ್ರಿಯಾಶೀಲರೂ ಆಗಿ ಇಟ್ಟುಕೊಳ್ಳುವುದು, ನಮಗೆ ಮುಂದೆ ಬರುವಂಥ ಅನೇಕ ಪರೀಕ್ಷೆಗಳನ್ನು ನಾವು ಎದುರಿಸುವಂತೆಯೂ ಸಹಾಯ ಮಾಡುವುದು. ಇಂತಹ ಪರೀಕ್ಷೆಗಳು ನಮ್ಮನ್ನು ಬಹಳವಾಗಿ ಶೋಧಿಸುವಂಥ ಮೂಲಗಳಿಂದ ಬರಬಹುದು. ನಿರಾಸಕ್ತಿ, ವಿರೋಧ, ಮತ್ತು ಹಿಂಸೆಗಳು ನಮ್ಮ ಹತ್ತಿರದ ಕುಟುಂಬ ಸದಸ್ಯರಿಂದ, ಸಂಬಂಧಿಗಳಿಂದ ಅಥವಾ ನೆರೆಹೊರೆಯವರಿಂದ ಬರುವಾಗ ಅವನ್ನು ತಾಳಿಕೊಳ್ಳುವುದು ಹೆಚ್ಚು ಪ್ರಯಾಸಕರವಾಗಿರಬಲ್ಲದು. ನಮ್ಮ ಕ್ರೈಸ್ತ ಮೂಲತತ್ತ್ವಗಳ ಸಂಬಂಧದಲ್ಲಿ ಒಪ್ಪಂದ ಮಾಡಿಕೊಳ್ಳುವಂತಹ ಕುಯುಕ್ತಿಯ ಒತ್ತಡಗಳು ನಮ್ಮ ಕೆಲಸದ ಸ್ಥಳಗಳಲ್ಲಿ ಅಥವಾ ಶಾಲೆಯಲ್ಲಿ ಬರಬಹುದು. ನಿರುತ್ತೇಜನ, ಕಾಯಿಲೆ ಮತ್ತು ಖಿನ್ನತೆಯು ನಮ್ಮನ್ನು ಶಾರೀರಿಕವಾಗಿ ಕ್ಷೀಣಿಸಿ, ನಂಬಿಕೆಯ ಪರೀಕ್ಷೆಗಳನ್ನು ನಿಭಾಯಿಸುವುದನ್ನು ಹೆಚ್ಚು ಕಷ್ಟಕರವಾಗಿ ಮಾಡಬಹುದು. ಆದರೆ ‘ನಾವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿ’ ಇರುವಲ್ಲಿ, ಇವೆಲ್ಲ ಪರೀಕ್ಷೆಗಳನ್ನು ನಾವು ಜಯಪ್ರದವಾಗಿ ನಿಭಾಯಿಸಬಲ್ಲೆವು. (2 ಪೇತ್ರ 3:11, 12) ಮತ್ತು ಹಾಗೆ ಮಾಡುವುದರಲ್ಲಿ ನಮ್ಮ ಆನಂದವನ್ನು ಕಾಪಾಡಿಕೊಳ್ಳುತ್ತಾ, ದೇವರ ಆಶೀರ್ವಾದವನ್ನು ಪಡೆಯುವ ದೃಢಭರವಸೆಯಿಂದ ಇರಬಲ್ಲೆವು.—ಜ್ಞಾನೋಕ್ತಿ 10:22.
13. ನಾವು ದೇವಭಕ್ತಿಯನ್ನು ಅಭ್ಯಸಿಸುತ್ತಾ ಇರಬೇಕಾದರೆ ಏನು ಮಾಡತಕ್ಕದ್ದು?
13 ದೇವಭಕ್ತಿಯನ್ನು ಅಭ್ಯಸಿಸುವವರು ಸೈತಾನನ ಗುರಿಹಲಗೆಗಳಾಗುತ್ತಾರಾದರೂ, ನಾವು ಭಯಪಡುವ ಅಗತ್ಯವಿಲ್ಲ. ಏಕೆ? ಯೆಹೋವನು “ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ.” (2 ಪೇತ್ರ 2:9) ಪರೀಕ್ಷೆಗಳನ್ನು ತಾಳಿಕೊಂಡು, ಅಂತಹ ಬಿಡುಗಡೆಯನ್ನು ಅನುಭವಿಸಬೇಕಾದರೆ, “ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕು.” (ತೀತ 2:12) ಕ್ರೈಸ್ತರೋಪಾದಿ ನಾವು, ಶಾರೀರಿಕ ಅಪೇಕ್ಷೆಗಳು ಮತ್ತು ಚಟುವಟಿಕೆಗಳ ಸಂಬಂಧದಲ್ಲಿ ಯಾವುದೇ ಬಲಹೀನತೆಯು ನಮ್ಮ ದೇವಭಕ್ತಿಯನ್ನು ಅತಿಕ್ರಮಿಸಿ ಅದನ್ನು ನಾಶಗೊಳಿಸದಂತೆ ಎಚ್ಚರಿಕೆಯಿಂದಿರಬೇಕು. ಈ ಕೇಡುಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.
ದೇವಭಕ್ತಿಗೆದುರಾಗಿ ಬರುವ ಕೇಡುಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ
14. ಪ್ರಾಪಂಚಿಕತೆಯ ಬೋನಿನಿಂದ ಸೆಳೆಯಲ್ಪಡುವಲ್ಲಿ, ನಾವು ಏನನ್ನು ಜ್ಞಾಪಿಸಿಕೊಳ್ಳಬೇಕು?
14 ಅನೇಕರಿಗೆ ಪ್ರಾಪಂಚಿಕತೆಯು ಒಂದು ಬೋನಾಗಿದೆ. ‘ದೇವಭಕ್ತಿಯನ್ನು [ಪ್ರಾಪಂಚಿಕ] ಲಾಭಸಾಧನವೆಂದೆಣಿಸುತ್ತಾ’ ನಮ್ಮನ್ನು ನಾವೇ ವಂಚಿಸಿಕೊಳ್ಳಬಹುದು. ಈ ಕಾರಣದಿಂದ, ನಮ್ಮ ಜೊತೆವಿಶ್ವಾಸಿಗಳು ನಮ್ಮಲ್ಲಿಟ್ಟಿರುವ ಭರವಸೆಯ ಅಹಿತಕರವಾದ ಪ್ರಯೋಜನವನ್ನು ಪಡೆದುಕೊಳ್ಳಲು ನಾವು ಧೈರ್ಯಮಾಡಬಹುದು. (1 ತಿಮೊಥೆಯ 6:5) ನಮಗೆ ಸಾಲವನ್ನು ಹಿಂತೆರುವ ಸಾಮರ್ಥ್ಯ ಇಲ್ಲದಿರುವುದಾದರೂ, ಒಬ್ಬ ಐಶ್ವರ್ಯವಂತ ಕ್ರೈಸ್ತನ ಮೇಲೆ ಒತ್ತಡವನ್ನು ಹಾಕಿ ಸಾಲವನ್ನು ಪಡೆಯುವುದು ಅನ್ಯಾಯವಲ್ಲವೆಂದು ನಾವು ತಪ್ಪಾಗಿ ತೀರ್ಮಾನಿಸಲೂ ಬಹುದು. (ಕೀರ್ತನೆ 37:21) ಆದರೆ “ಇಹಪರಗಳಲ್ಲಿಯೂ ಜೀವವಾಗ್ದಾನ” ಇರುವುದು ಪ್ರಾಪಂಚಿಕ ವಸ್ತುಗಳ ಸಂಪಾದನೆಯಲ್ಲಲ್ಲ, ಬದಲಾಗಿ ದೇವಭಕ್ತಿಯಲ್ಲಿಯೇ. (1 ತಿಮೊಥೆಯ 4:8) “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು.” ಈ ಕಾರಣದಿಂದ, ನಾವು “ಸಂತುಷ್ಟಿಸಹಿತವಾದ ಭಕ್ತಿ”ಯನ್ನು ಬೆನ್ನಟ್ಟಿ, “ಅನ್ನವಸ್ತ್ರ”ಗಳಲ್ಲಿ ತೃಪ್ತರಾಗಲು ಹೆಚ್ಚು ದೃಢವಾದ ನಿಶ್ಚಯವನ್ನು ಮಾಡೋಣ.—1 ತಿಮೊಥೆಯ 6:6-11.
15. ಸುಖಾನ್ವೇಷಣೆಯು ನಮ್ಮ ದೇವಭಕ್ತಿಯ ಸ್ಥಾನವನ್ನು ಆಕ್ರಮಿಸುವ ಅಪಾಯಸೂಚನೆಯಿರುವಲ್ಲಿ ನಾವೇನು ಮಾಡಬಲ್ಲೆವು?
15 ಸುಖಾನ್ವೇಷಣೆಯು ನಮ್ಮ ದೇವಭಕ್ತಿಯ ಸ್ಥಾನವನ್ನು ಆಕ್ರಮಿಸಬಲ್ಲದು. ಈ ವಿಷಯದಲ್ಲಿ ನಾವು ಕೂಡಲೇ ಹೊಂದಾಣಿಕೆಗಳನ್ನು ಮಾಡುವ ಅಗತ್ಯವಿದೆಯೊ? ದೇಹಸಾಧನೆ ಮತ್ತು ಮನೋರಂಜನೆಗಳಿಂದ ತುಸು ಪ್ರಯೋಜನಗಳು ಸಿಗುತ್ತವೆಂಬುದು ಒಪ್ಪತಕ್ಕ ವಿಷಯವಾಗಿದೆ. ಆದರೂ, ನಿತ್ಯಜೀವಕ್ಕೆ ಹೋಲಿಸುವಾಗ ಈ ಪ್ರತಿಫಲಗಳು ಅಲ್ಪವೇ. (1 ಯೋಹಾನ 2:25) ಅನೇಕರು ಇಂದು, “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ” ಆಗಿದ್ದಾರೆ ಮತ್ತು ಅಂತಹ ಜನರಿಂದ ನಾವು ದೂರವಿರುವುದು ಆವಶ್ಯಕ. (2 ತಿಮೊಥೆಯ 3:4, 5) ದೇವಭಕ್ತಿಗೆ ಪ್ರಮುಖತೆ ಕೊಡುವವರು, ‘ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟು’ಕೊಳ್ಳುತ್ತಾರೆ.—1 ತಿಮೊಥೆಯ 6:19.
16. ಪಾಪಕರವಾದ ಯಾವ ಆಶೆಗಳು ಕೆಲವರನ್ನು ದೇವರ ಆವಶ್ಯಕತೆಗಳಿಗನುಸಾರ ನಡೆಯದಂತೆ ಮಾಡುತ್ತವೆ, ಮತ್ತು ಈ ಆಶೆಗಳ ಮೇಲೆ ನಾವು ಹೇಗೆ ಜಯಪಡೆಯಬಲ್ಲೆವು?
16 ಮದ್ಯ ಮತ್ತು ಅಮಲೌಷಧದ ಅಪಪ್ರಯೋಗ, ಲೈಂಗಿಕ ದುರಾಚಾರ ಮತ್ತು ಪಾಪಕರವಾದ ಅಪೇಕ್ಷೆಗಳು ನಮ್ಮ ದೇವಭಕ್ತಿಯನ್ನು ನಾಶಪಡಿಸಬಲ್ಲವು. ಇವುಗಳಿಗೆ ಬಲಿಯಾಗುವಲ್ಲಿ, ನಾವು ದೇವರ ನೀತಿಯ ಆವಶ್ಯಕತೆಗಳಿಗನುಸಾರ ನಡೆಯುವುದನ್ನು ಇವು ತಡೆಯಬಲ್ಲವು. (1 ಕೊರಿಂಥ 6:9, 10; 2 ಕೊರಿಂಥ 7:1) ಪಾಪವಶವಾಗಿದ್ದ ತನ್ನ ದೇಹದೊಂದಿಗಿನ ಸತತವಾದ ಹೋರಾಟವನ್ನು ಪೌಲನೂ ತಾಳಿಕೊಳ್ಳಬೇಕಾಗಿತ್ತು. (ರೋಮಾಪುರ 7:21-25) ದುರಿಚ್ಛೆಗಳನ್ನು ಇಲ್ಲದಂತೆ ಮಾಡಲು ಕಟ್ಟುನಿಟ್ಟಾದ ಕ್ರಿಯೆಗಳು ಆವಶ್ಯಕ. ಇವುಗಳಲ್ಲಿ ಒಂದು, ನಾವು ನೈತಿಕವಾಗಿ ಶುದ್ಧರಾಗಿ ಉಳಿಯುವಂತೆ ಮಾಡುವ ನಿರ್ಧಾರವೇ. ಪೌಲನು ನಮಗೆ ಹೇಳುವುದು: “ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು [“ದೇಹಾಂಗಗಳನ್ನು,” NW] ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊಸ್ಸೆ 3:5) ಇಂತಹ ಪಾಪಕರ ವಿಷಯಗಳ ಸಂಬಂಧದಲ್ಲಿ ನಮ್ಮ ದೇಹಾಂಗಗಳನ್ನು ಸಾಯಿಸುವುದು, ಅವುಗಳನ್ನು ನಿರ್ಮೂಲಮಾಡಲಿಕ್ಕಾಗಿ, ಅಳಿಸಿಬಿಡುವುದಕ್ಕಾಗಿ ದೃಢನಿರ್ಧಾರವನ್ನು ಅವಶ್ಯಪಡಿಸುತ್ತದೆ. ದೇವರ ಸಹಾಯಕ್ಕಾಗಿ ನಾವು ಮಾಡುವ ಕಟ್ಟಾಸಕ್ತಿಯ ಪ್ರಾರ್ಥನೆಯು, ನಾವು ದುರಿಚ್ಛೆಗಳನ್ನು ವಿಸರ್ಜಿಸಿ, ಈ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ನೀತಿ ಮತ್ತು ದೇವಭಕ್ತಿಯನ್ನು ಬೆನ್ನಟ್ಟುವುದನ್ನು ಸಾಧ್ಯಗೊಳಿಸುವುದು.
17. ನಾವು ಶಿಸ್ತನ್ನು ಹೇಗೆ ವೀಕ್ಷಿಸಬೇಕು?
17 ನಿರಾಶೆಯು ನಮ್ಮ ತಾಳ್ಮೆಯನ್ನು ಕ್ಷೀಣಿಸಬಲ್ಲದು ಮತ್ತು ಇದರಿಂದಾಗಿ ನಮ್ಮ ದೇವಭಕ್ತಿಯ ಮೇಲೆ ಹಾನಿಕರವಾದ ಪರಿಣಾಮವಾಗಬಲ್ಲದು. ಯೆಹೋವನ ಸೇವಕರಲ್ಲಿ ಅನೇಕರಿಗೆ ನಿರಾಶೆಯ ಅನುಭವವಾಗಿತ್ತು. (ಅರಣ್ಯಕಾಂಡ 11:11-15; ಎಜ್ರ 4:4; ಯೋನ 4:3) ಈ ನಿರಾಶೆಯು ವಿಶೇಷವಾಗಿ ವಿಪತ್ಕಾರಕವಾಗಿ ಪರಿಣಮಿಸಸಾಧ್ಯವಿರುವುದು, ನಮ್ಮ ಮನಸ್ಸನ್ನು ಯಾರೊ ನೋಯಿಸಿದ್ದಾರೆ ಅಥವಾ ನಮಗೆ ಕಟು ಗದರಿಕೆ ಅಥವಾ ಶಿಸ್ತನ್ನು ಕೊಡಲಾಗಿದೆ ಎಂದು ನೆನಸಿ ನಾವು ತೀವ್ರ ಅಸಮಾಧಾನಪಟ್ಟುಕೊಳ್ಳುವಾಗಲೇ. ಆದರೆ, ಗದರಿಕೆ ಮತ್ತು ಶಿಸ್ತು ದೇವರಿಗೆ ನಮ್ಮ ಮೇಲಿರುವ ಆಸಕ್ತಿಯ ಮತ್ತು ಪ್ರೀತಿಯ ಚಿಂತೆಯ ಪುರಾವೆಯಾಗಿದೆ. (ಇಬ್ರಿಯ 12:5-7, 10, 11) ನಾವು ಶಿಸ್ತನ್ನು ಕೇವಲ ಶಿಕ್ಷೆಯಾಗಿ ಅಲ್ಲ, ಬದಲಾಗಿ ನೀತಿಮಾರ್ಗದಲ್ಲಿ ನಮಗೆ ತರಬೇತು ನೀಡುವ ಮಾಧ್ಯಮವಾಗಿ ಎಣಿಸಬೇಕು. ನಾವು ದೈನ್ಯಭಾವದವರಾಗಿರುವಲ್ಲಿ, ಬುದ್ಧಿವಾದವನ್ನು, “ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ” ಎಂದೆಣಿಸಿ ಅದನ್ನು ಹೆಚ್ಚು ಗೌರವಿಸುವೆವು. (ಜ್ಞಾನೋಕ್ತಿ 6:23) ಇದು ದೇವಭಕ್ತಿಯನ್ನು ಬೆನ್ನಟ್ಟುವುದರಲ್ಲಿ ನಾವು ಉತ್ತಮವಾದ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಬಲ್ಲದು.
18. ವೈಯಕ್ತಿಕ ತಪ್ಪುಗಳ ವಿಷಯದಲ್ಲಿ ನಮಗಿರುವ ಜವಾಬ್ದಾರಿ ಏನು?
18 ತಪ್ಪು ತಿಳಿವಳಿಕೆ ಮತ್ತು ವೈಯಕ್ತಿಕ ತಪ್ಪುಗಳು ನಮ್ಮ ದೇವಭಕ್ತಿಗೆ ಸವಾಲೊಡ್ಡಬಹುದು. ಅವು ವ್ಯಾಕುಲತೆಯನ್ನುಂಟುಮಾಡಬಹುದು ಅಥವಾ ತಮ್ಮ ಆತ್ಮಿಕ ಸಹೋದರ ಸಹೋದರಿಯರಿಂದ ತಮ್ಮನ್ನು ಬೇರ್ಪಡಿಸಿಕೊಳ್ಳುವ ಅವಿವೇಕದ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಕೆಲವರನ್ನು ಪ್ರಚೋದಿಸಬಹುದು. (ಜ್ಞಾನೋಕ್ತಿ 18:1) ಆದರೆ, ಇತರರ ವಿರುದ್ಧ ಹಗೆಯನ್ನು ಸಾಧಿಸುವುದು ಅಥವಾ ಬದ್ಧದ್ವೇಷವನ್ನು ತೋರಿಸುವುದು, ಯೆಹೋವನೊಂದಿಗೆ ನಮಗಿರುವ ಸಂಬಂಧಕ್ಕೆ ಹಾನಿಕರವಾದ ಧಕ್ಕೆಯನ್ನು ತರಬಲ್ಲದು. (ಯಾಜಕಕಾಂಡ 19:18) ವಾಸ್ತವ ವಿಷಯವೇನಂದರೆ, “ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾನ 4:20) ಯೇಸು ತನ್ನ ಪರ್ವತ ಪ್ರಸಂಗದಲ್ಲಿ, ಇಂತಹ ವ್ಯಕ್ತಿಪರ ಸಮಸ್ಯೆಗಳನ್ನು ನಿವಾರಿಸುವರೆ ನಾವು ಕೂಡಲೇ ಹೆಜ್ಜೆಗಳನ್ನು ತೆಗೆದುಕೊಳ್ಳುವ ಆವಶ್ಯಕತೆಯನ್ನು ಒತ್ತಿಹೇಳಿದನು. ಅವನು ತನ್ನ ಕೇಳುಗರಿಗೆ ಹೇಳಿದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾಯ 5:23, 24) ಕಠಿನ ಮಾತುಗಳನ್ನು ಅಥವಾ ವರ್ತನೆಗಳನ್ನು ಗುಣಪಡಿಸಲು ಒಂದು ಕ್ಷಮಾಯಾಚನೆಯೇ ಸಹಾಯಮಾಡೀತು. ನಾವು ಕ್ಷಮೆಕೇಳಿ, ಆ ವಿಷಯದಲ್ಲಿ ತಪ್ಪಾಗಿ ವರ್ತಿಸಿದೆವೆಂಬುದನ್ನು ಒಪ್ಪಿಕೊಳ್ಳುವುದಾದರೆ, ಆ ಸಂಬಂಧದಲ್ಲಿ ಆಗಿರುವ ಬಿರುಕನ್ನು ಸರಿಪಡಿಸಿ, ಪುನಃ ಶಾಂತಿಸಂಬಂಧವನ್ನು ಸ್ಥಾಪಿಸಸಾಧ್ಯವಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಷಯಗಳಲ್ಲಿ ಯೇಸು ಬೇರೆ ಸಲಹೆಯನ್ನೂ ಕೊಟ್ಟನು. (ಮತ್ತಾಯ 18:15-17) ಸಮಸ್ಯೆಗಳನ್ನು ಬಗೆಹರಿಸಲು ನಾವು ಮಾಡುವ ಪ್ರಯತ್ನಗಳು ಸಫಲಗೊಳ್ಳುವಾಗ ನಮಗಾಗುವ ಸಂತೋಷವೊ ಅಪಾರ!—ರೋಮಾಪುರ 12:18; ಎಫೆಸ 4:26, 27.
ಯೇಸುವಿನ ಮಾದರಿಯನ್ನು ಅನುಸರಿಸಿರಿ
19. ಯೇಸುವಿನ ಮಾದರಿಯನ್ನು ಅನುಕರಿಸುವುದು ಅಷ್ಟು ಪ್ರಾಮುಖ್ಯವೇಕೆ?
19 ನಮಗೆ ಪರೀಕ್ಷೆಗಳು ಬರುವುದೇನೋ ಖಂಡಿತವಾದರೂ, ಅವು ನಮ್ಮನ್ನು ನಿತ್ಯಜೀವದ ಕಡೆಗಿನ ಓಟದಿಂದ ಅಪಕರ್ಷಿಸಬೇಕೆಂದಿಲ್ಲ. ಯೆಹೋವನು ನಮ್ಮನ್ನು ಪರೀಕ್ಷೆಯಿಂದ ಬಿಡುಗಡೆಮಾಡಬಲ್ಲನೆಂಬುದನ್ನು ನೆನಪಿನಲ್ಲಿಡಿರಿ. ನಾವು “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ . . . ತೆಗೆದಿಟ್ಟು” “ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ” ಓಡುವಾಗ, “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿ” ಇಡುವವರಾಗಿರೋಣ. (ಇಬ್ರಿಯ 12:1-3) ಯೇಸುವಿನ ಮಾದರಿಯನ್ನು ಒತ್ತಾಗಿ ಪರೀಕ್ಷಿಸುತ್ತಾ, ಅವನನ್ನು ನಮ್ಮ ನಡೆನುಡಿಗಳಲ್ಲಿ ಅನುಕರಿಸಲು ಪ್ರಯತ್ನಿಸುವುದು, ನಾವು ದೇವಭಕ್ತಿಯನ್ನು ಬೆಳೆಸಿಕೊಂಡು, ಅದನ್ನು ಅಧಿಕ ಪ್ರಮಾಣದಲ್ಲಿ ತೋರಿಸಲು ಸಹಾಯಮಾಡುವುದು.
20. ತಾಳ್ಮೆ ಮತ್ತು ದೇವಭಕ್ತಿಯನ್ನು ಬೆನ್ನಟ್ಟುವುದರಿಂದ ಯಾವ ಪ್ರತಿಫಲಗಳು ಫಲಿಸುತ್ತವೆ?
20 ನಮ್ಮ ರಕ್ಷಣೆಯನ್ನು ಖಚಿತಪಡಿಸುವುದರಲ್ಲಿ ಸಹಾಯಮಾಡಲು ತಾಳ್ಮೆ ಮತ್ತು ದೇವಭಕ್ತಿ—ಇವೆರಡೂ ನಿಕಟ ಸಂಬಂಧವುಳ್ಳವುಗಳಾಗಿವೆ. ಈ ಅಮೂಲ್ಯ ಗುಣಗಳನ್ನು ಪ್ರದರ್ಶಿಸುವ ಮೂಲಕ, ನಾವು ದೇವರ ಪವಿತ್ರ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ಮುಂದುವರಿಯಬಲ್ಲೆವು. ಪರೀಕ್ಷೆಗೊಳಗಾಗುವಾಗಲೂ, ನಾವು ಯೆಹೋವನ ಕೋಮಲವಾದ ಮಮತೆಯನ್ನೂ ಆಶೀರ್ವಾದವನ್ನೂ ಅನುಭವಿಸುವಾಗ, ಸಂತೋಷವು ನಮ್ಮದಾಗಿರುವುದು. ಏಕೆಂದರೆ, ನಾವು ತಾಳಿಕೊಂಡವರೂ ದೇವಭಕ್ತಿಯನ್ನು ಆಚರಿಸುವವರೂ ಆಗಿರುತ್ತೇವೆ. (ಯಾಕೋಬ 5:11) ಇದಲ್ಲದೆ, ಯೇಸು ತಾನೇ ನಮಗೆ ಹೀಗೆ ಆಶ್ವಾಸನೆ ನೀಡುತ್ತಾನೆ: “ನಿಮ್ಮ ಸೈರಣೆಯಿಂದ [“ತಾಳ್ಮೆಯಿಂದ,” NW] ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.”—ಲೂಕ 21:19.
ಹೇಗೆ ಉತ್ತರ ಕೊಡುವಿರಿ?
• ತಾಳ್ಮೆಯು ಏಕೆ ಪ್ರಾಮುಖ್ಯ?
• ದೇವಭಕ್ತಿಯೆಂದರೇನು, ಮತ್ತು ಅದು ಹೇಗೆ ತೋರಿಸಲ್ಪಡುತ್ತದೆ?
• ನಾವು ದೇವರೊಂದಿಗೆ ಹೇಗೆ ನಿಕಟ ಸಂಬಂಧವನ್ನು ಬೆಳೆಸಿ ಕಾಪಾಡಿಕೊಳ್ಳಬಲ್ಲೆವು?
• ನಮ್ಮ ದೇವಭಕ್ತಿಗೆದುರಾಗಿ ಬರುವ ಕೆಲವು ಕೇಡುಗಳಾವುವು, ಮತ್ತು ನಾವು ಅವುಗಳಿಂದ ಹೇಗೆ ತಪ್ಪಿಸಿಕೊಳ್ಳಬಲ್ಲೆವು?
[ಪುಟ 12, 13ರಲ್ಲಿರುವ ಚಿತ್ರಗಳು]
ದೇವಭಕ್ತಿಯು ಅನೇಕ ವಿಧಗಳಲ್ಲಿ ತೋರಿಸಲ್ಪಡುತ್ತದೆ
[ಪುಟ 14ರಲ್ಲಿರುವ ಚಿತ್ರಗಳು]
ನಿಮ್ಮ ದೇವಭಕ್ತಿಗೆದುರಾಗಿ ಬರುವ ಕೇಡುಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ