‘ನೀವು ಬಹಳ ಫಲವನ್ನು ಕೊಡುತ್ತಾ ಇರಿ’
“ನೀವು ಬಹಳ ಫಲವನ್ನು ಕೊಡುತ್ತಾ ಇದ್ದು, ನನ್ನ ಶಿಷ್ಯರೆಂದು ರುಜುಪಡಿಸಿಕೊಳ್ಳಿರಿ.”—ಯೋಹಾನ 15:8, NW.
1. (ಎ) ಯೇಸು ತನ್ನ ಅಪೊಸ್ತಲರಿಗೆ ಶಿಷ್ಯತ್ವದ ಯಾವ ಆವಶ್ಯಕತೆಯ ಕುರಿತು ಹೇಳಿದನು? (ಬಿ) ನಾವು ಸ್ವತಃ ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು?
ತಾನು ಸಾಯುವ ಮುಂಚಿನ ಸಾಯಂಕಾಲದಂದು ಯೇಸು, ತನ್ನ ಅಪೊಸ್ತಲರನ್ನು ಹುರಿದುಂಬಿಸಲಿಕ್ಕಾಗಿ ಆತ್ಮೀಯತೆಯಿಂದ ಮಾತಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದನು. ಅಷ್ಟರೊಳಗೆ ಮಧ್ಯ ರಾತ್ರಿ ದಾಟಿ ಹೋಗಿದ್ದಿರಬೇಕು. ಆದರೂ ಯೇಸು ತನ್ನ ಆಪ್ತ ಸ್ನೇಹಿತರ ಮೇಲಿನ ಪ್ರೀತಿಯಿಂದ ಪ್ರಚೋದಿತನಾಗಿ ಮಾತನಾಡುತ್ತಾ ಹೋದನು. ಆ ಸಂಭಾಷಣೆಯ ಮಧ್ಯದಲ್ಲಿ, ಅವರು ತನ್ನ ಶಿಷ್ಯರಾಗಿ ಉಳಿಯಬೇಕಾದರೆ ಅವರು ಪೂರೈಸಬೇಕಾಗಿದ್ದ ಇನ್ನೊಂದು ಆವಶ್ಯಕತೆಯನ್ನು ಅವನು ಅವರಿಗೆ ಜ್ಞಾಪಕ ಹುಟ್ಟಿಸಿದನು. ಅವನು ಹೇಳಿದ್ದು: “ನೀವು ಬಹಳ ಫಲವನ್ನು ಕೊಡುತ್ತಾ ಇದ್ದು, ನನ್ನ ಶಿಷ್ಯರೆಂದು ರುಜುಪಡಿಸಿಕೊಳ್ಳಿರಿ. ಇದರಿಂದ ನನ್ನ ತಂದೆಗೆ ಮಹಿಮೆ ಉಂಟಾಗುತ್ತದೆ.” (ಯೋಹಾನ 15:8, NW) ಶಿಷ್ಯತ್ವದ ಈ ಆವಶ್ಯಕತೆಯನ್ನು ನಾವು ಇಂದು ಪೂರೈಸುತ್ತೇವೋ? “ಬಹಳ ಫಲವನ್ನು ಕೊಡುತ್ತಾ” ಹೋಗುವುದರ ಅರ್ಥವೇನು? ಇದನ್ನು ಕಂಡುಹಿಡಿಯಲು, ನಾವು ಆ ರಾತ್ರಿಯ ಸಂಭಾಷಣೆಗೆ ಮರಳೋಣ.
2. ಯೇಸು ತನ್ನ ಮರಣಕ್ಕೆ ಮುಂಚಿನ ರಾತ್ರಿಯಂದು ಫಲದ ಕುರಿತಾದ ಯಾವ ದೃಷ್ಟಾಂತವನ್ನು ಕೊಡುತ್ತಾನೆ?
2 ಫಲಕೊಡಬೇಕೆಂಬ ಆ ಸಲಹೆಯು, ಯೇಸು ತನ್ನ ಅಪೊಸ್ತಲರಿಗೆ ಹೇಳಿದ ಒಂದು ದೃಷ್ಟಾಂತದ ಭಾಗವಾಗಿದೆ. ಅವನು ಹೇಳಿದ್ದು: “ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು. ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ. ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನು ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; . . . ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ. ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ. . . . ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.”—ಯೋಹಾನ 15:1-10.
3. ಯೇಸುವಿನ ಹಿಂಬಾಲಕರು ಫಲಕೊಡಬೇಕಾದರೆ ಏನು ಮಾಡತಕ್ಕದ್ದು?
3 ಈ ದೃಷ್ಟಾಂತದಲ್ಲಿ ಯೆಹೋವನು ಕೃಷಿಕಾರ, ಯೇಸು ದ್ರಾಕ್ಷೇಬಳ್ಳಿ ಮತ್ತು ಯೇಸು ಯಾರೊಂದಿಗೆ ಮಾತಾಡುತ್ತಿದ್ದನೊ ಆ ಅಪೊಸ್ತಲರು ಕೊಂಬೆಗಳಾಗಿದ್ದಾರೆ. ಅಪೊಸ್ತಲರು ಎಷ್ಟರ ಮಟ್ಟಿಗೆ ಯೇಸುವಿನಲ್ಲಿ ‘ನೆಲೆಗೊಂಡಿರುತ್ತಾರೊ’ ಅಷ್ಟರ ವರೆಗೆ ಅವರು ಫಲಕೊಡುವರು. ಅಪೊಸ್ತಲರು ಈ ಮಹತ್ವದ ಐಕ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಹೇಗೆ ಜಯಹೊಂದಬಹುದೆಂದು ಯೇಸು ಬಳಿಕ ವಿವರಿಸಿದನು: “ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” ತರುವಾಯ ಅಪೊಸ್ತಲ ಯೋಹಾನನೂ ಜೊತೆ ಕ್ರೈಸ್ತರಿಗೆ ಅದೇ ರೀತಿಯ ಮಾತುಗಳನ್ನು ಬರೆದನು: “ಆತನ [ಕ್ರಿಸ್ತನ] ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ.”a (1 ಯೋಹಾನ 2:24; 3:24) ಹೀಗೆ, ಕ್ರಿಸ್ತನ ಆಜ್ಞೆಗಳನ್ನು ಪಾಲಿಸುವ ಮೂಲಕ ಅವನ ಹಿಂಬಾಲಕರು ಅವನಲ್ಲಿ ನೆಲೆಗೊಂಡಿರುತ್ತಾರೆ ಮತ್ತು ಈ ಐಕ್ಯವು ಫಲಕೊಡುವಂತೆ ಅವರನ್ನು ಶಕ್ತರನ್ನಾಗಿಸುತ್ತದೆ. ನಾವು ಯಾವ ರೀತಿಯ ಫಲವನ್ನು ಕೊಡಬೇಕು?
ಬೆಳೆಯಲು ಅವಕಾಶ
4. ಫಲಕೊಡದ ಪ್ರತಿಯೊಂದು ಕೊಂಬೆಯನ್ನು ಯೆಹೋವನು “ತೆಗೆದುಹಾಕುತ್ತಾನೆ” ಎಂಬ ನಿಜತ್ವದಿಂದ ನಾವೇನು ಕಲಿಯಬಲ್ಲೆವು?
4 ದ್ರಾಕ್ಷೇಬಳ್ಳಿಯ ದೃಷ್ಟಾಂತದಲ್ಲಿ, ಕೊಂಬೆಯು ಫಲಕೊಡದಿರುವಾಗ ಯೆಹೋವನು ಅದನ್ನು ಕಡಿದುಹಾಕುತ್ತಾನೆ, ಇಲ್ಲವೆ “ತೆಗೆದುಹಾಕುತ್ತಾನೆ.” ಅದು ನಮಗೇನನ್ನು ಸೂಚಿಸುತ್ತದೆ? ಎಲ್ಲಾ ಶಿಷ್ಯರು ಫಲಕೊಡುವ ಅಗತ್ಯವಿದೆ ಮಾತ್ರವಲ್ಲ, ಎಲ್ಲರ ಸ್ಥಿತಿಗತಿ ಅಥವಾ ಇತಿಮಿತಿಗಳು ಏನೇ ಆಗಿರಲಿ, ಅವರು ಫಲಕೊಡಲು ಸಾಮರ್ಥ್ಯವುಳ್ಳವರೂ ಆಗಿದ್ದಾರೆಂಬುದನ್ನು ಸೂಚಿಸುತ್ತದೆ. ಏಕೆಂದರೆ, ಕ್ರಿಸ್ತನ ಶಿಷ್ಯನೊಬ್ಬನು ತನ್ನ ಸಾಮರ್ಥ್ಯಕ್ಕೆ ಮೀರಿರುವಂಥದ್ದನ್ನು ಪೂರೈಸಲು ತಪ್ಪಿದ್ದಕ್ಕಾಗಿ ಅವನನ್ನು “ತೆಗೆದುಹಾಕುವುದು” ಅಥವಾ ಅನರ್ಹಗೊಳಿಸುವುದು, ಯೆಹೋವನ ಪ್ರೀತಿಯ ಮಾರ್ಗಗಳಿಗೆ ವ್ಯತಿರಿಕ್ತವಾಗಿರುವುದು.—ಕೀರ್ತನೆ 103:14; ಕೊಲೊಸ್ಸೆ 3:23; 1 ಯೋಹಾನ 5:3.
5. (ಎ) ಫಲವನ್ನು ಕೊಡುವುದರಲ್ಲಿ ನಾವು ಪ್ರಗತಿ ಮಾಡಬಲ್ಲೆವೆಂಬುದನ್ನು ಯೇಸುವಿನ ದೃಷ್ಟಾಂತವು ಹೇಗೆ ಸೂಚಿಸುತ್ತದೆ? (ಬಿ) ನಾವು ಯಾವ ಎರಡು ರೀತಿಯ ಫಲಗಳ ಕುರಿತು ಚರ್ಚಿಸುವೆವು?
5 ದ್ರಾಕ್ಷೇಬಳ್ಳಿಯ ಕುರಿತಾದ ಯೇಸುವಿನ ದೃಷ್ಟಾಂತವು, ನಮ್ಮ ಸ್ಥಿತಿಗತಿಗಳ ಪರಿಧಿಯೊಳಗೇ, ಒಬ್ಬ ಶಿಷ್ಯರೋಪಾದಿ ನಮ್ಮ ಚಟುವಟಿಕೆಗಳಲ್ಲಿ ಬೆಳೆಯಲು ಅವಕಾಶಕ್ಕಾಗಿ ಹುಡುಕಬೇಕೆಂಬದನ್ನೂ ತೋರಿಸುತ್ತದೆ. ಯೇಸು ಅದನ್ನು ಹೇಗೆ ಹೇಳಿದನೆಂಬುದನ್ನು ಗಮನಿಸಿರಿ: “ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ.” (ಓರೆ ಅಕ್ಷರಗಳು ನಮ್ಮವು.) (ಯೋಹಾನ 15:2) ಆ ದೃಷ್ಟಾಂತದ ಕೊನೆಯ ಭಾಗದಲ್ಲಿ, ತನ್ನ ಶಿಷ್ಯರು “ಬಹಳ ಫಲ” ಕೊಡಬೇಕೆಂದು ಯೇಸು ಪ್ರೋತ್ಸಾಹಿಸುತ್ತಾನೆ. (ವಚನ 8) ಇದು ಏನನ್ನು ಸೂಚಿಸುತ್ತದೆ? ಶಿಷ್ಯರೋಪಾದಿ ನಾವು ಎಂದಿಗೂ ಸ್ವಸಂತೃಪ್ತರಾಗಬಾರದು. (ಪ್ರಕಟನೆ 3:14, 15, 19) ಬದಲಿಗೆ, ಫಲಕೊಡುವುದರಲ್ಲಿ ಪ್ರಗತಿಮಾಡಲು ನಾವು ಮಾರ್ಗಗಳಿಗಾಗಿ ಹುಡುಕಬೇಕು. ಯಾವ ರೀತಿಯ ಫಲವನ್ನು ನಾವು ಹೆಚ್ಚು ಸಮೃದ್ಧವಾಗಿ ಕೊಡಲು ಪ್ರಯತ್ನಿಸಬೇಕು? ಎರಡು ರೀತಿಯ ಫಲವಿದೆ: (1) “ಆತ್ಮದ ಫಲಗಳು” ಮತ್ತು (2) ರಾಜ್ಯದ ಫಲ.—ಗಲಾತ್ಯ 5:22, 23, NW; ಮತ್ತಾಯ 24:14.
ಕ್ರೈಸ್ತ ಗುಣಗಳೆಂಬ ಫಲ
6. ಆತ್ಮದ ಫಲಗಳಲ್ಲಿ ಮೊದಲನೆಯದ್ದರ ಮೌಲ್ಯವನ್ನು ಯೇಸು ಕ್ರಿಸ್ತನು ಹೇಗೆ ಒತ್ತಿಹೇಳಿದನು?
6 “ಆತ್ಮದ ಫಲಗಳ” ಪಟ್ಟಿಯಲ್ಲಿ ಮೊದಲನೆಯದ್ದು ಪ್ರೀತಿ. ದೇವರ ಪವಿತ್ರಾತ್ಮವು ಕ್ರೈಸ್ತರಲ್ಲಿ ಪ್ರೀತಿಯನ್ನು ಫಲಿಸುತ್ತದೆ. ಏಕೆಂದರೆ ಫಲಕೊಡುವ ದ್ರಾಕ್ಷೇಬಳ್ಳಿಯ ದೃಷ್ಟಾಂತವನ್ನು ಕೊಡುವುದಕ್ಕೆ ತುಸು ಮೊದಲು ಯೇಸು ಕೊಟ್ಟ ಆಜ್ಞೆಗೆ ಅವರು ವಿಧೇಯರಾಗುತ್ತಾರೆ. ಅವನು ತನ್ನ ಅಪೊಸ್ತಲರಿಗೆ ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಯೋಹಾನ 13:34) ವಾಸ್ತವದಲ್ಲಿ, ತನ್ನ ಭೂಜೀವಿತದ ಆ ಅಂತಿಮ ರಾತ್ರಿಯಂದು ಯೇಸು ನಡೆಸಿದ ಸಂಭಾಷಣೆಯಾದ್ಯಂತ, ಅವನು ತನ್ನ ಅಪೊಸ್ತಲರಿಗೆ ಪ್ರೀತಿಯೆಂಬ ಗುಣವನ್ನು ತೋರಿಸುವ ಆವಶ್ಯಕತೆಯನ್ನು ಪದೇ ಪದೇ ಜ್ಞಾಪಕ ಹುಟ್ಟಿಸಿದನು.—ಯೋಹಾನ 14:15, 21, 23, 24; 15:12, 13, 17.
7. ಫಲಕೊಡುವುದು ಕ್ರಿಸ್ತಸದೃಶ ಗುಣಗಳನ್ನು ತೋರಿಸುವುದಕ್ಕೆ ಸಂಬಂಧಿಸಿದೆಯೆಂದು ಅಪೊಸ್ತಲ ಪೇತ್ರನು ಹೇಗೆ ತೋರಿಸಿದನು?
7 ಆ ರಾತ್ರಿ ಅಲ್ಲಿ ಉಪಸ್ಥಿತನಿದ್ದ ಪೇತ್ರನು, ಕ್ರಿಸ್ತಸದೃಶ ಪ್ರೀತಿ ಮತ್ತು ಸಂಬಂಧಿತ ಗುಣಗಳನ್ನು ಕ್ರಿಸ್ತನ ನಿಜ ಶಿಷ್ಯರು ತೋರಿಸಬೇಕೆಂಬುದನ್ನು ತಿಳಿದುಕೊಂಡನು. ವರುಷಗಳಾನಂತರ, ಪೇತ್ರನು ಕ್ರೈಸ್ತರಿಗೆ ದಮೆ, ಸಹೋದರ ಸ್ನೇಹ ಮತ್ತು ಪ್ರೀತಿಯಂತಹ ಗುಣಗಳನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದನು. ಹಾಗೆ ಮಾಡುವುದು, ನಾವು “ಆಲಸ್ಯಗಾರರೂ ನಿಷ್ಫಲರೂ” ಆಗುವುದರಿಂದ ನಮ್ಮನ್ನು ತಡೆಯುತ್ತದೆಂದು ಅವನು ಕೂಡಿಸಿ ಹೇಳಿದನು. (2 ಪೇತ್ರ 1:5-8) ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಆತ್ಮದ ಫಲಗಳನ್ನು ಪ್ರದರ್ಶಿಸುವುದು ನಮ್ಮಿಂದ ಸಾಧ್ಯವಿರುವ ಕೆಲಸವಾಗಿದೆ. ಆದುದರಿಂದ ನಾವು ಪ್ರೀತಿ, ದಯೆ, ಸಾಧುತ್ವ ಮತ್ತು ಇತರ ಕ್ರಿಸ್ತಸದೃಶ ಗುಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಲು ಪ್ರಯತ್ನಿಸೋಣ. ಏಕೆಂದರೆ, “ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ,” ಅಥವಾ ಅದಕ್ಕೆ ಪರಿಮಿತಿಯೆಂಬುದಿಲ್ಲ. (ಗಲಾತ್ಯ 5:23) ಹೌದು, ನಾವು “ಬಹಳ ಫಲ”ವನ್ನು ಕೊಡುವವರಾಗಿರೋಣ.
ರಾಜ್ಯ ಫಲವನ್ನು ಕೊಡುವುದು
8. (ಎ) ಆತ್ಮದ ಫಲಗಳ ಮತ್ತು ರಾಜ್ಯ ಫಲದ ಮಧ್ಯೆ ಇರುವ ಸಂಬಂಧವು ಯಾವುದು? (ಬಿ) ಯಾವ ಪ್ರಶ್ನೆ ನಮ್ಮ ಪರಿಗಣನೆಗೆ ಅರ್ಹವಾಗಿದೆ?
8 ವರ್ಣರಂಜಿತವಾದ ಮತ್ತು ರಸವತ್ತಾದ ಹಣ್ಣುಗಳು ಒಂದು ವೃಕ್ಷದ ಅಲಂಕಾರವನ್ನು ವರ್ಧಿಸುತ್ತವೆ. ಆದರೂ, ಆ ಹಣ್ಣುಗಳ ಮೌಲ್ಯ ಅಲಂಕಾರಕ್ಕಿಂತ ಎಷ್ಟೋ ಹೆಚ್ಚಿನದ್ದಾಗಿದೆ. ತಮ್ಮ ಬೀಜಗಳ ಮೂಲಕ ಇನ್ನೂ ಹೆಚ್ಚು ಸಸಿಗಳನ್ನು ಹರಡಿಸಲು ಸಹ ಹಣ್ಣುಗಳು ಆವಶ್ಯಕವಾಗಿವೆ. ಹಾಗೆಯೇ, ಆತ್ಮದ ಫಲಗಳು ನಮ್ಮ ಕ್ರೈಸ್ತ ವ್ಯಕ್ತಿತ್ವವನ್ನು ಅಲಂಕರಿಸುವುದಕ್ಕಿಂತ ಎಷ್ಟೋ ಹೆಚ್ಚಿನದನ್ನು ಮಾಡುತ್ತವೆ. ಪ್ರೀತಿ ಮತ್ತು ನಂಬಿಕೆಯಂತಹ ಗುಣಗಳು, ದೇವರ ವಾಕ್ಯದಲ್ಲಿ ಕಂಡುಬರುವ ಬೀಜಸದೃಶವಾದ ರಾಜ್ಯ ಸಂದೇಶವನ್ನು ಹಬ್ಬಿಸಲು ಸಹ ನಮ್ಮನ್ನು ಪ್ರಚೋದಿಸುತ್ತವೆ. ಅಪೊಸ್ತಲ ಪೌಲನು ಈ ಮಹತ್ವಪೂರ್ಣ ಸಂಬಂಧವನ್ನು ಹೇಗೆ ಒತ್ತಿಹೇಳುತ್ತಾನೆಂಬದನ್ನು ಗಮನಿಸಿರಿ. ಅವನು ಹೇಳುವುದು: “ನಂಬಿಕೆಯ [ಆತ್ಮದ ಫಲಗಳಲ್ಲೊಂದು] ಭಾವವನ್ನೇ ಹೊಂದಿ ನಾವೂ ನಂಬಿದವರು, ಆದದರಿಂದ ಮಾತಾಡುತ್ತೇವೆ.” (2 ಕೊರಿಂಥ 4:13) ಈ ರೀತಿಯಲ್ಲಿ, ಪೌಲನು ಇನ್ನೂ ವಿವರಿಸುವುದೇನಂದರೆ, ನಾವು ‘ದೇವರಿಗೆ ಸ್ತೋತ್ರಯಜ್ಞವನ್ನು ಬಾಯಿಂದ ಅರ್ಪಿಸುತ್ತೇವೆ.’ ಇದು ನಾವು ತೋರಿಸಬೇಕಾದ ಎರಡನೆಯ ರೀತಿಯ ಫಲವಾಗಿದೆ. (ಇಬ್ರಿಯ 13:15) ನಮ್ಮ ಜೀವನದಲ್ಲಿ ದೇವರ ರಾಜ್ಯದ ಘೋಷಕರೋಪಾದಿ ಹೆಚ್ಚು ಫಲಭರಿತರಾಗಿರಲು, ಹೌದು “ಬಹಳ ಫಲ”ಕೊಡಲು ಅವಕಾಶಗಳಿವೆಯೆ?
9. ಫಲಕೊಡುವುದರ ಅರ್ಥ ಶಿಷ್ಯರನ್ನಾಗಿ ಮಾಡುವುದು ಎಂದಾಗಿದೆಯೆ? ವಿವರಿಸಿ.
9 ಇದಕ್ಕೆ ಸರಿಯಾದ ಉತ್ತರವನ್ನು ಕೊಡಬೇಕಾದರೆ, ರಾಜ್ಯದ ಫಲಗಳಲ್ಲಿ ಏನೆಲ್ಲ ಒಳಗೊಂಡಿದೆ ಎಂಬುದನ್ನು ನಾವು ಪ್ರಥಮವಾಗಿ ತಿಳಿಯುವುದು ಆವಶ್ಯಕ. ಫಲಕೊಡುವುದೆಂದರೆ ಶಿಷ್ಯರನ್ನಾಗಿ ಮಾಡುವುದೆಂದು ತೀರ್ಮಾನಿಸುವುದು ಸರಿಯಾಗಿರುವುದೊ? (ಮತ್ತಾಯ 28:19) ನಾವು ಕೊಡಬಹುದಾದ ಫಲವು ಪ್ರಧಾನವಾಗಿ, ಯೆಹೋವನ ದೀಕ್ಷಾಸ್ನಾತ ಆರಾಧಕರಾಗಲು ನಾವು ಯಾರಿಗೆ ಸಹಾಯಮಾಡುತ್ತೇವೋ ಅವರನ್ನು ಸೂಚಿಸುತ್ತದೋ? ಇಲ್ಲ. ವಿಷಯವು ಹಾಗಿರುತ್ತಿದ್ದಲ್ಲಿ, ಅದು ರಾಜ್ಯದ ಸುವಾರ್ತೆಯನ್ನು ಕಡಿಮೆ ಪ್ರತಿಕ್ರಿಯೆಯಿರುವ ಕ್ಷೇತ್ರಗಳಲ್ಲಿ ವರುಷಗಟ್ಟಲೆ ಕಾಲ ನಂಬಿಗಸ್ತಿಕೆಯಿಂದ ಸಾರಿರುವ ಪ್ರಿಯ ಸಾಕ್ಷಿಗಳೆಲ್ಲರಿಗೆ ತೀರ ನಿರಾಶೆಯ ಸಂಗತಿಯಾಗಿರುವುದು. ಹೌದು, ನಾವು ಕೊಡುವ ರಾಜ್ಯ ಫಲವು ಹೊಸ ಶಿಷ್ಯರನ್ನು ಮಾತ್ರ ಪ್ರತಿನಿಧಿಸುವಲ್ಲಿ, ಪ್ರಯಾಸಪಟ್ಟು ಕೆಲಸ ಮಾಡುವ ಅಂಥ ಸಾಕ್ಷಿಗಳು ಯೇಸುವಿನ ದೃಷ್ಟಾಂತದಲ್ಲಿರುವ ಫಲಕೊಡದ ಕೊಂಬೆಗಳಂತಿದ್ದಾರೆಂದಾಗುವುದು! ಆದರೆ ಸಂಗತಿಯು ಹಾಗಿರುವುದಿಲ್ಲ. ಹಾಗಾದರೆ, ನಮ್ಮ ಶುಶ್ರೂಷೆಯ ಪ್ರಧಾನ ರಾಜ್ಯ ಫಲವು ಯಾವುದು?
ರಾಜ್ಯ ಬೀಜವನ್ನು ಹರಡಿಸುವ ಮೂಲಕ ಫಲಭರಿತರು
10. ಬಿತ್ತುವವನ ಮತ್ತು ವಿವಿಧ ರೀತಿಯ ನೆಲದ ಕುರಿತಾದ ಯೇಸುವಿನ ಸಾಮ್ಯವು, ರಾಜ್ಯದ ಫಲವು ಏನಾಗಿದೆ ಮತ್ತು ಏನಾಗಿಲ್ಲವೆಂಬುದನ್ನು ಹೇಗೆ ತೋರಿಸುತ್ತದೆ?
10 ಬಿತ್ತುವವನ ಮತ್ತು ವಿವಿಧ ರೀತಿಯ ನೆಲಗಳ ಕುರಿತಾದ ಯೇಸುವಿನ ಸಾಮ್ಯವು ಇದಕ್ಕೆ ಉತ್ತರವನ್ನು ಕೊಡುತ್ತದೆ, ಮತ್ತು ಇದು ಕಡಿಮೆ ಫಲಭರಿತವಾಗಿರುವ ಕ್ಷೇತ್ರಗಳಲ್ಲಿ ಸಾಕ್ಷಿಕೊಡುತ್ತಿರುವವರಿಗೆ ಪ್ರೋತ್ಸಾಹದಾಯಕವಾಗಿದೆ. ಆ ಬೀಜವು ದೇವರ ವಾಕ್ಯದಲ್ಲಿ ಕಂಡುಬರುವ ರಾಜ್ಯ ಸಂದೇಶವೆಂದೂ ನೆಲವು ಮನುಷ್ಯನ ಸಾಂಕೇತಿಕ ಹೃದಯವೆಂದೂ ಯೇಸು ಹೇಳಿದನು. ಕೆಲವೊಂದು ಬೀಜಗಳು “ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು . . . ಫಲವನ್ನು ಕೊಟ್ಟವು.” (ಲೂಕ 8:8) ಯಾವ ಫಲವದು? ಗೋಧಿಯ ದಂಟು ಮೊಳೆತು ಬಲಿತದ್ದಾಗುವಾಗ, ಅದು ಚಿಕ್ಕ ಗೋಧಿಯ ದಂಟುಗಳನ್ನು ಫಲಿಸದೆ, ಹೊಸ ಬೀಜವನ್ನು ಫಲಿಸುತ್ತದೆ. ಅದೇ ರೀತಿ, ಒಬ್ಬ ಕ್ರೈಸ್ತನು ಉತ್ಪಾದಿಸುವ ಫಲವು ಹೊಸ ಶಿಷ್ಯರೇ ಆಗಿರಬೇಕೆಂದಿಲ್ಲ, ಬದಲಿಗೆ ಅದು ಹೊಸ ರಾಜ್ಯ ಬೀಜವಾಗಿದೆ.
11. ರಾಜ್ಯದ ಫಲವನ್ನು ಹೇಗೆ ಅರ್ಥನಿರೂಪಿಸಬಹುದು?
11 ಆದುದರಿಂದ, ಈ ಸಂದರ್ಭದಲ್ಲಿ ಫಲವು ಹೊಸ ಶಿಷ್ಯರೂ ಆಗಿರುವುದಿಲ್ಲ, ಉತ್ತಮ ಕ್ರೈಸ್ತ ಗುಣಗಳೂ ಆಗಿರುವುದಿಲ್ಲ. ಬಿತ್ತಲ್ಪಟ್ಟಿರುವ ಬೀಜವು ರಾಜ್ಯದ ವಾಕ್ಯವಾಗಿರುವುದರಿಂದ, ಕೊಡಲ್ಪಡುವ ಫಲವು ಆ ರಾಜ್ಯದ ಕುರಿತಾದ ಇನ್ನೂ ಹೆಚ್ಚಿನ ಬೀಜಗಳು ಆಗಿರಬೇಕು. ಈ ವಿದ್ಯಮಾನದಲ್ಲಿ, ಕೊಡಲ್ಪಡುವ ಫಲವು ರಾಜ್ಯದ ವಿಷಯವಾಗಿ ಅಭಿವ್ಯಕ್ತಿಗಳನ್ನು ಮಾಡುವುದನ್ನು ಸೂಚಿಸುತ್ತದೆ. (ಮತ್ತಾಯ 24:14) ನಮ್ಮ ಪರಿಸ್ಥಿತಿಗಳು ಏನೇ ಆಗಿದ್ದರೂ, ಇಂತಹ ರಾಜ್ಯ ಫಲವನ್ನು ಕೊಡುವುದು, ಅಂದರೆ ರಾಜ್ಯದ ಸುವಾರ್ತೆಯನ್ನು ಘೋಷಿಸುವುದು ಸಾಧ್ಯವೊ? ಹೌದು, ಸಾಧ್ಯ! ಇದು ಏಕೆ ಸಾಧ್ಯವೆಂಬುದನ್ನು ಯೇಸು ಅದೇ ದೃಷ್ಟಾಂತದಲ್ಲಿ ವಿವರಿಸುತ್ತಾನೆ.
ದೇವರ ಮಹಿಮೆಗಾಗಿ ನಮ್ಮ ಕೈಲಾಗುವುದನ್ನು ಕೊಡುವುದು
12. ರಾಜ್ಯದ ಫಲವನ್ನು ಕೊಡುವ ಸಾಮರ್ಥ್ಯ ಎಲ್ಲಾ ಕ್ರೈಸ್ತರಿಗಿದೆಯೊ? ವಿವರಿಸಿ.
12 ‘ಒಳ್ಳೆಯ ನೆಲದ ಮೇಲೆ ಬಿತ್ತಲ್ಪಟ್ಟ ಬೀಜವು’ “ನೂರರಷ್ಟಾಗಲಿ ಅರವತ್ತರಷ್ಟಾಗಲಿ ಮೂವತ್ತರಷ್ಟಾಗಲಿ ಫಲವನ್ನು” ಕೊಡುತ್ತದೆಂದು ಯೇಸು ಹೇಳಿದನು. (ಮತ್ತಾಯ 13:23) ಒಂದು ಹೊಲದಲ್ಲಿ ಬಿತ್ತಲ್ಪಟ್ಟಿರುವ ಬೀಜದ ಉತ್ಪನ್ನವು, ಆಯಾ ಪರಿಸ್ಥಿತಿಗಳಿಗನುಸಾರ ಭಿನ್ನವಾಗಿರಬಹುದು. ಅದೇ ರೀತಿ, ಸುವಾರ್ತೆಯನ್ನು ಸಾರುವುದರಲ್ಲಿ ನಾವೇನನ್ನು ಮಾಡಬಹುದೊ ಅದು ನಮ್ಮ ಪರಿಸ್ಥಿತಿಗಳಿಗನುಸಾರ ಭಿನ್ನವಾಗಿರಬಹುದು. ಮತ್ತು ತಾನು ಇದನ್ನು ಒಪ್ಪಿಕೊಳ್ಳುತ್ತೇನೆಂಬುದನ್ನು ಯೇಸು ತೋರಿಸಿದನು. ಕೆಲವರಿಗೆ ಸಾರಲು ಹೆಚ್ಚು ಅವಕಾಶಗಳಿರಬಹುದು, ಇನ್ನು ಕೆಲವರಿಗೆ ಹೆಚ್ಚು ಆರೋಗ್ಯವೂ ಶಕ್ತಿಯೂ ಇರಬಹುದು. ಹೀಗೆ ನಾವೇನನ್ನು ಮಾಡಲು ಶಕ್ತರಾಗಿದ್ದೇವೊ ಅದು ಇತರರು ಮಾಡಸಾಧ್ಯವಿರುವುದಕ್ಕಿಂತ ಒಂದೇ ಹೆಚ್ಚು ಇಲ್ಲವೆ ಕಡಮೆ ಆಗಿರಬಹುದು. ಆದರೆ ನಾವೇನನ್ನು ಮಾಡಿದ್ದೇವೊ ಅದು ನಮ್ಮ ಕೈಲಾಗುವಂಥದ್ದೆಲ್ಲವೂ ಆಗಿರುವಲ್ಲಿ, ಯೆಹೋವನಿಗೆ ಅದರಲ್ಲಿ ಸಂತೋಷವಿದೆ. (ಗಲಾತ್ಯ 6:4) ಇಳಿವಯಸ್ಸು ಅಥವಾ ಶಕ್ತಿಹೀನಗೊಳಿಸುವ ಕಾಯಿಲೆಯು ನಮ್ಮ ಸಾರುವ ಕಾರ್ಯವನ್ನು ಸೀಮಿತಗೊಳಿಸಬಹುದಾದರೂ, ನಮ್ಮ ಕನಿಕರಭರಿತ ದೇವರಾದ ಯೆಹೋವನು ನಮ್ಮನ್ನು ‘ಬಹಳ ಫಲಕೊಡು’ವವರಲ್ಲಿ ಒಬ್ಬರನ್ನಾಗಿ ನೋಡುತ್ತಾನೆಂಬುದರಲ್ಲಿ ಸಂಶಯವಿಲ್ಲ. ಏಕೆ? ಏಕೆಂದರೆ ನಾವು ‘ನಮಗಿದ್ದದ್ದನ್ನೆಲ್ಲಾ’ ಕೊಡುತ್ತೇವೆ, ಅಂದರೆ ನಮ್ಮ ಪೂರ್ಣಪ್ರಾಣದ ಸೇವೆಯನ್ನು ಸಲ್ಲಿಸುತ್ತೇವೆ.b—ಮಾರ್ಕ 12:43, 44; ಲೂಕ 10:27.
13. (ಎ) ನಾವು ರಾಜ್ಯದ ಫಲವನ್ನು ಕೊಡುತ್ತಾ ‘ಇರಲು’ ನಮಗಿರುವ ಪ್ರಪ್ರಥಮ ಕಾರಣವು ಯಾವುದು? (ಬಿ) ಕಡಿಮೆ ಪ್ರತಿಕ್ರಿಯೆ ತೋರಿಸಲ್ಪಡುವ ಟೆರಿಟೊರಿಗಳಲ್ಲಿ ಫಲವನ್ನು ಕೊಡುತ್ತಾ ಹೋಗುವಂತೆ ನಮಗೆ ಯಾವುದು ಸಹಾಯಮಾಡುವುದು? (ಪುಟ 21ರಲ್ಲಿರುವ ಚೌಕವನ್ನು ನೋಡಿ.)
13 ನಾವು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಾಗ, ರಾಜ್ಯದ ಫಲವನ್ನು ಫಲಿಸಲು ಎಷ್ಟರ ಮಟ್ಟಿಗೆ ಶಕ್ತರಾಗಿರುತ್ತೇವೊ ಅಷ್ಟರ ಮಟ್ಟಿಗೆ “ಹೋಗಿ ಫಲಕೊಡು”ವಂತೆ ನಾವು ಪ್ರಚೋದಿಸಲ್ಪಡುವೆವು. (ಯೋಹಾನ 15:16) ಯೇಸು ಇದಕ್ಕಿರುವ ಪ್ರಪ್ರಥಮ ಕಾರಣವನ್ನು ತಿಳಿಸಿದನು: “ನೀವು ಬಹಳ ಫಲವನ್ನು ಕೊಡುತ್ತಾ ಇದ್ದು, ನನ್ನ ಶಿಷ್ಯರೆಂದು ರುಜುಪಡಿಸಿಕೊಳ್ಳಿರಿ. ಇದರಿಂದ ನನ್ನ ತಂದೆಗೆ ಮಹಿಮೆ ಉಂಟಾಗುತ್ತದೆ.” (ಯೋಹಾನ 15:8, NW) ಹೌದು, ನಮ್ಮ ಸಾರುವ ಕಾರ್ಯವು ಸಕಲ ಮಾನವಕುಲದ ಮುಂದೆ ಯೆಹೋವನ ನಾಮವನ್ನು ಪವಿತ್ರೀಕರಿಸುತ್ತದೆ. (ಕೀರ್ತನೆ 109:30) ಸುಮಾರು 75 ವರ್ಷ ವಯಸ್ಸಿನ ಆನರ್ ಎಂಬ ನಂಬಿಗಸ್ತ ಸಾಕ್ಷಿಯು ಹೇಳುವುದು: “ಕಡಿಮೆ ಪ್ರತಿಕ್ರಿಯೆಯಿರುವ ಕ್ಷೇತ್ರಗಳಲ್ಲಿಯೂ ಸರ್ವೋನ್ನತನನ್ನು ಪ್ರತಿನಿಧಿಸುವುದು ಒಂದು ಸನ್ಮಾನವಾಗಿದೆ.” 1974ರಂದಿನಿಂದ ಒಬ್ಬ ಹುರುಪಿನ ಸಾಕ್ಷಿಯಾಗಿರುವ ಕ್ಲಾಡಿಯೊ ಎಂಬವರನ್ನು, ಟೆರಿಟೊರಿಯಲ್ಲಿ ಕೆಲವರೇ ಪ್ರತಿಕ್ರಿಯೆ ತೋರಿಸಿದರೂ ಅವರೇಕೆ ಸಾರುತ್ತಾ ಮುಂದುವರಿಯುತ್ತಾರೆಂದು ಕೇಳಿದಾಗ, ಅವರು ಯೋಹಾನ 4:34ರಲ್ಲಿ ಯೇಸು ಹೇಳಿರುವ ಮಾತುಗಳನ್ನು ಉದ್ಧರಿಸಿದರು. ಅಲ್ಲಿ ಹೇಳುವುದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” ಕ್ಲಾಡಿಯೊ ಕೂಡಿಸಿ ಹೇಳಿದ್ದು: “ಯೇಸುವಿನಂತೆ ನಾನೂ, ರಾಜ್ಯ ಘೋಷಕನಾಗಿ ನನ್ನ ಕೆಲಸವನ್ನು ಆರಂಭಿಸಲು ಮಾತ್ರವಲ್ಲ, ಅದನ್ನು ಪೂರೈಸಲೂ ಬಯಸುತ್ತೇನೆ.” (ಯೋಹಾನ 17:4) ಈ ಮಾತನ್ನು ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು ಒಪ್ಪುತ್ತಾರೆ.—ಪುಟ 21ರಲ್ಲಿ, “‘ತಾಳ್ಮೆಯಿಂದ ಫಲವನ್ನು ಕೊಡುವ’ ವಿಧ” ಎಂಬ ಚೌಕವನ್ನು ನೋಡಿ.
ಸಾರಲು ಮತ್ತು ಬೋಧಿಸಲು
14. (ಎ) ಸ್ನಾನಿಕನಾದ ಯೋಹಾನನ ಮತ್ತು ಯೇಸುವಿನ ಕೆಲಸದಲ್ಲಿ ಯಾವ ಇಬ್ಬಗೆಯ ಉದ್ದೇಶವಿತ್ತು? (ಬಿ) ಇಂದಿನ ಕ್ರೈಸ್ತ ಚಟುವಟಿಕೆಯನ್ನು ನೀವು ಹೇಗೆ ವರ್ಣಿಸುವಿರಿ?
14 ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಥಮ ರಾಜ್ಯ ಘೋಷಕನು ಸ್ನಾನಿಕನಾದ ಯೋಹಾನನಾಗಿದ್ದಾನೆ. (ಮತ್ತಾಯ 3:1, 2; ಲೂಕ 3:18) ಅವನ ಪ್ರಧಾನ ಉದ್ದೇಶವು ‘ಸಾಕ್ಷಿಕೊಡುವುದು’ ಆಗಿತ್ತು ಮತ್ತು ಇದನ್ನು ಅವನು ಗಾಢವಾದ ನಂಬಿಕೆ ಮತ್ತು “ಎಲ್ಲಾ ವಿಧದ ಜನರು ನಂಬಬೇಕು” ಎಂಬ ನಿರೀಕ್ಷೆಯಿಂದ ಮಾಡಿದನು. (ಯೋಹಾನ 1:6, 7, NW) ಹೌದು, ಯೋಹಾನನು ಯಾರಿಗೆ ಸಾರಿದನೊ ಅವರಲ್ಲಿ ಕೆಲವರು ಕ್ರಿಸ್ತನ ಶಿಷ್ಯರಾದರು. (ಯೋಹಾನ 1:35-37) ಹೀಗೆ ಯೋಹಾನನು ಸಾರುವವನೂ ಶಿಷ್ಯರನ್ನು ಮಾಡುವವನೂ ಆಗಿದ್ದನು. ಯೇಸು ಸಹ ಸಾರುವವನೂ ಬೋಧಕನೂ ಆಗಿದ್ದನು. (ಮತ್ತಾಯ 4:23; 11:1) ಹೀಗಿದ್ದುದರಿಂದ, ತನ್ನ ಹಿಂಬಾಲಕರು ರಾಜ್ಯದ ಸಂದೇಶವನ್ನು ಸಾರುವವರಾಗಿರಬೇಕು ಮಾತ್ರವಲ್ಲ, ಆ ಸಂದೇಶವನ್ನು ಸ್ವೀಕರಿಸುವವರು ತನ್ನ ಶಿಷ್ಯರಾಗುವಂತೆ ಅವರಿಗೆ ಸಹಾಯಮಾಡಬೇಕೆಂದೂ ಯೇಸು ಆಜ್ಞಾಪಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. (ಮತ್ತಾಯ 28:19, 20) ಹೀಗೆ ನಮ್ಮ ಕೆಲಸವು ಇಂದು ಸಾರುವಿಕೆ ಮತ್ತು ಬೋಧಿಸುವಿಕೆಯ ಒಂದು ಸಂಯೋಜನೆಯಾಗಿದೆ.
15. ಸಾ.ಶ. ಒಂದನೆಯ ಶತಮಾನದಲ್ಲಿ ನಡೆಸಲ್ಪಟ್ಟ ಮತ್ತು ಇಂದು ನಡೆಸಲ್ಪಡುವ ಸಾರುವ ಕೆಲಸಕ್ಕೆ ತೋರಿಸಲ್ಪಡುವ ಪ್ರತಿಕ್ರಿಯೆಯಲ್ಲಿ ಯಾವ ಹೋಲಿಕೆಯಿದೆ?
15 ಸಾ.ಶ. ಒಂದನೆಯ ಶತಮಾನದಲ್ಲಿ, ಪೌಲನು ಸಾರಿ ಕಲಿಸುತ್ತಿರುವುದನ್ನು ಕೇಳಿದವರಲ್ಲಿ “ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು.” (ಅ. ಕೃತ್ಯಗಳು 28:24) ಇಂದು ಸಹ ಪ್ರತಿಕ್ರಿಯೆಯು ಹೆಚ್ಚುಕಡಿಮೆ ಹಾಗೆಯೇ ಇದೆ. ವಿಷಾದಕರವಾಗಿ, ರಾಜ್ಯದ ಬೀಜದಲ್ಲಿ ಹೆಚ್ಚಿನದ್ದು, ಗ್ರಹಣಾಕಾಂಕ್ಷೆಯಿಲ್ಲದ ನೆಲದ ಮೇಲೆ ಬೀಳುತ್ತದೆ. ಆದರೂ, ಯೇಸು ಮುಂತಿಳಿಸಿದಂತೆ ಕೆಲವು ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದು, ಬೇರೂರಿ, ಮೊಳಕೆಯೊಡೆಯುತ್ತವೆ. ವಾಸ್ತವವೇನಂದರೆ, ಲೋಕಾದ್ಯಂತವಾಗಿ ಒಂದು ವರುಷದಲ್ಲಿ ಪ್ರತಿ ವಾರ ಸರಾಸರಿ 5,000ಕ್ಕೂ ಹೆಚ್ಚು ಮಂದಿ ಕ್ರಿಸ್ತನ ನಿಜ ಶಿಷ್ಯರಾಗುತ್ತಾರೆ! ಹೆಚ್ಚಿನ ಇತರ ಜನರು ನಂಬದಿದ್ದರೂ ಈ ಹೊಸ ಶಿಷ್ಯರು ‘ಹೇಳಲ್ಪಟ್ಟ ಮಾತುಗಳನ್ನು ಒಪ್ಪಿಕೊಂಡು’ ನಂಬುತ್ತಾರೆ. ಹಾಗಾದರೆ ಅವರ ಹೃದಯವು ರಾಜ್ಯದ ಸಂದೇಶವನ್ನು ಅಂಗೀಕರಿಸುವಂತೆ ಯಾವುದು ಮಾಡಿತು? ಅನೇಕವೇಳೆ, ಹೊಸದಾಗಿ ಬಿತ್ತಲ್ಪಟ್ಟಿರುವ ಬೀಜಕ್ಕೆ ನೀರು ಹೊಯ್ಯುತ್ತಾರೊ ಎಂಬಂತೆ, ಸಾಕ್ಷಿಗಳು ತೋರಿಸುವ ವ್ಯಕ್ತಿಪರ ಅಭಿರುಚಿ ಗಮನಾರ್ಹವಾದ ಪರಿಣಾಮವನ್ನು ಬೀರುತ್ತದೆ. (1 ಕೊರಿಂಥ 3:6) ಇದಕ್ಕೆ ಅನೇಕ ದೃಷ್ಟಾಂತಗಳಲ್ಲಿ ಕೇವಲ ಎರಡನ್ನು ಪರಿಗಣಿಸಿರಿ.
ವ್ಯಕ್ತಿಪರ ಅಭಿರುಚಿ ಗಮನಾರ್ಹವಾದ ಪರಿಣಾಮವನ್ನು ಬೀರುತ್ತದೆ
16, 17. ನಮ್ಮ ಶುಶ್ರೂಷೆಯಲ್ಲಿ ನಾವು ಯಾರನ್ನು ಭೇಟಿಯಾಗುತ್ತೇವೋ ಅವರಲ್ಲಿ ವ್ಯಕ್ತಿಪರ ಅಭಿರುಚಿಯನ್ನು ತೋರಿಸುವುದು ಏಕೆ ಪ್ರಾಮುಖ್ಯ?
16 ಬೆಲ್ಜಿಯಮ್ನಲ್ಲಿ ಕಾರಾಲೀನ್ ಎಂಬ ಒಬ್ಬ ಯುವ ಸಾಕ್ಷಿಯು ಒಬ್ಬ ವೃದ್ಧೆಯನ್ನು ಸಂದರ್ಶಿಸಿದಾಗ, ಆಕೆ ರಾಜ್ಯದ ಸಂದೇಶದಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ಆ ಸ್ತ್ರೀಯ ಕೈಗೆ ಬ್ಯಾಂಡೆಜ್ ಕಟ್ಟಲ್ಪಟ್ಟಿದ್ದುದರಿಂದ, ಕಾರಾಲೀನ್ ಮತ್ತು ಆಕೆಯ ಸಂಗಾತಿಯು ಆ ಸ್ತ್ರೀಗೆ ಸಹಾಯದ ಅಗತ್ಯವಿದೆಯೋ ಎಂದು ಕೇಳಲಾಗಿ ಆಕೆ ಅದನ್ನು ನಿರಾಕರಿಸಿದಳು. ಎರಡು ದಿನಗಳಾನಂತರ, ಆ ಇಬ್ಬರು ಸಾಕ್ಷಿಗಳು ಆ ಸ್ತ್ರೀಯ ಮನೆಗೆ ಪುನಃ ಹೋಗಿ ಆಕೆಯ ಸ್ಥಿತಿ ಈಗ ಹೇಗಿದೆ ಎಂದು ಕೇಳಿದರು. ಕಾರಾಲೀನ್ ಹೇಳಿದ್ದು: “ಇದು ಗಮನಾರ್ಹವಾದ ಪ್ರಭಾವವನ್ನು ಬೀರಿತು. ನಮಗೆ ಆಕೆಯಲ್ಲಿ ವ್ಯಕ್ತಿಪರವಾಗಿ ನಿಜವಾಗಿಯೂ ಅಭಿರುಚಿಯಿದೆಯೆಂಬದನ್ನು ನೋಡಿ ಆಕೆ ಆಶ್ಚರ್ಯಪಟ್ಟಳು. ಆಕೆ ನಮ್ಮನ್ನು ಮನೆಯೊಳಗೆ ಕರೆದಳು ಮತ್ತು ಒಂದು ಬೈಬಲ್ ಅಧ್ಯಯನ ಪ್ರಾರಂಭವಾಯಿತು.”
17 ಅಮೆರಿಕದಲ್ಲಿನ ಒಬ್ಬ ಸಾಕ್ಷಿಯಾಗಿದ್ದ ಸ್ಯಾಂಡೀ ಸಹ ತಾನು ಸಾರುತ್ತಿರುವ ಜನರಲ್ಲಿ ವ್ಯಕ್ತಿಪರ ಅಭಿರುಚಿಯನ್ನು ತೋರಿಸುತ್ತಾಳೆ. ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ಬರುವ ಜನನ ಪ್ರಕಟನೆಗಳನ್ನು ನೋಡಿ ಆಕೆ ಬೈಬಲ್ ಕಥೆಗಳ ನನ್ನ ಪುಸ್ತಕದೊಂದಿಗೆc ಆ ಹೊಸ ಹೆತ್ತವರನ್ನು ಭೇಟಿಮಾಡುತ್ತಾಳೆ. ತಾಯಿ ಸಾಮಾನ್ಯವಾಗಿ ಮನೆಯಲ್ಲಿದ್ದು ಭೇಟಿಮಾಡುವವರಿಗೆ ತನ್ನ ಮಗುವನ್ನು ತೋರಿಸಲು ಹೆಮ್ಮೆಪಡುವುದರಿಂದ, ಅನೇಕವೇಳೆ ಒಂದು ಸಂಭಾಷಣೆಯು ಆರಂಭಿಸಲ್ಪಡುತ್ತದೆ. ಸ್ಯಾಂಡೀ ವಿವರಿಸುವುದು: “ನಾನು ಹೆತ್ತವರೊಂದಿಗೆ, ಓದುವ ಮೂಲಕ ನವಜನಿತ ಮಗುವಿನೊಂದಿಗೆ ಬಂಧವನ್ನು ರಚಿಸುವುದರ ವಿಷಯವಾಗಿ ಮಾತಾಡುತ್ತೇನೆ. ಬಳಿಕ ಇಂದಿನ ಸಮಾಜದಲ್ಲಿ ಒಂದು ಮಗುವನ್ನು ಬೆಳೆಸುವಾಗ ಏಳುವ ಸವಾಲುಗಳ ಕುರಿತು ಮಾತಾಡುತ್ತೇನೆ.” ಇಂತಹ ಒಂದು ಭೇಟಿಯ ಫಲವಾಗಿ, ಇತ್ತೀಚೆಗೆ ಒಬ್ಬ ತಾಯಿ ತನ್ನ ಆರು ಮಂದಿ ಮಕ್ಕಳೊಂದಿಗೆ ಯೆಹೋವನನ್ನು ಸೇವಿಸಲು ಆರಂಭಿಸಿದಳು. ಈ ರೀತಿಯ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದು ಮತ್ತು ವ್ಯಕ್ತಿಪರ ಅಭಿರುಚಿಯು ನಮ್ಮ ಶುಶ್ರೂಷೆಯಲ್ಲಿ ತದ್ರೀತಿಯ ಹರ್ಷಕರ ಫಲಿತಾಂಶಗಳನ್ನು ತರಬಹುದು.
18. (ಎ) ‘ಬಹಳ ಫಲಕೊಡಬೇಕೆಂಬ’ ಆವಶ್ಯಕತೆಯು ನಮ್ಮೆಲ್ಲರಿಗೆ ಸಾಧ್ಯವಿರುವ ವಿಷಯವಾಗಿರುವುದೇಕೆ? (ಬಿ) ಯೋಹಾನನ ಸುವಾರ್ತೆಯಲ್ಲಿ ತಿಳಿಸಲ್ಪಟ್ಟಿರುವ ಯಾವ ಮೂರು ಆವಶ್ಯಕತೆಗಳನ್ನು ನೀವು ಪೂರೈಸಲು ನಿರ್ಧರಿಸಿರುವಿರಿ?
18 ‘ಬಹಳ ಫಲಕೊಡುತ್ತಾ ಇರುವ’ ಈ ಆವಶ್ಯಕತೆಯನ್ನು ಪೂರೈಸುವುದು ನಮಗೆ ಸಾಧ್ಯವಿರುವ ಒಂದು ಸಂಗತಿಯಾಗಿದೆಯೆಂದು ತಿಳಿಯುವುದು ಎಷ್ಟು ಪುನರಾಶ್ವಾಸನೆಯನ್ನು ಕೊಡುತ್ತದೆ! ನಾವು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ, ಆರೋಗ್ಯವಂತರಾಗಿರಲಿ ಇಲ್ಲವೆ ಅಸ್ವಸ್ಥರಾಗಿರಲಿ, ಒಳ್ಳೇ ಪ್ರತಿಕ್ರಿಯೆ ತೋರಿಸಲ್ಪಡುವಂಥ ಪ್ರದೇಶಗಳಲ್ಲಿ ಸಾರುವವರಾಗಿರಲಿ ಇಲ್ಲವೆ ಜನರು ಕಡಮೆ ಪ್ರತಿಕ್ರಿಯೆ ತೋರಿಸುವಂಥ ಪ್ರದೇಶಗಳಲ್ಲಿ ಸಾರುವವರಾಗಿರಲಿ, ನಾವೆಲ್ಲರೂ ಬಹಳ ಫಲವನ್ನು ಕೊಡುವ ಸಾಮರ್ಥ್ಯವುಳ್ಳವರಾಗಿದ್ದೇವೆ. ಹೇಗೆ? ಆತ್ಮದ ಫಲಗಳನ್ನು ಇನ್ನೂ ಹೆಚ್ಚು ವ್ಯಾಪಕವಾಗಿ ತೋರಿಸುವ ಮೂಲಕ ಮತ್ತು ದೇವರ ರಾಜ್ಯದ ಸಂದೇಶವನ್ನು ನಮ್ಮ ಕೈಯಿಂದಾಗುವಷ್ಟು ಮಟ್ಟಿಗೆ ಹಬ್ಬಿಸುವ ಮೂಲಕವೇ. ಅದೇ ಸಮಯದಲ್ಲಿ, ‘ಯೇಸುವಿನ ವಾಕ್ಯದಲ್ಲಿ ನೆಲೆಗೊಳ್ಳಲು’ ಮತ್ತು ನಾವು ‘ಒಬ್ಬರು ಇನ್ನೊಬ್ಬರಿಗೆ ಪ್ರೀತಿ ತೋರಿಸುತ್ತಾ’ ಇರಲು ಪ್ರಯತ್ನಿಸುತ್ತೇವೆ. ಹೌದು, ಯೋಹಾನನ ಸುವಾರ್ತೆಯಲ್ಲಿ ತಿಳಿಸಲ್ಪಟ್ಟಂತೆ, ಶಿಷ್ಯತ್ವಕ್ಕಾಗಿರುವ ಈ ಪ್ರಾಮುಖ್ಯ ಮೂರು ಆವಶ್ಯಕತೆಗಳನ್ನು ಪೂರೈಸುವ ಮೂಲಕ, ನಾವು ‘ನಿಜವಾಗಿಯೂ [ಕ್ರಿಸ್ತನ] ಶಿಷ್ಯರೆಂಬದನ್ನು’ ರುಜುಪಡಿಸಿಕೊಳ್ಳುವೆವು.—ಯೋಹಾನ 8:31; 13:35.
[ಪಾದಟಿಪ್ಪಣಿಗಳು]
a ಈ ದೃಷ್ಟಾಂತದಲ್ಲಿನ ದ್ರಾಕ್ಷೇಬಳ್ಳಿಯ ಕೊಂಬೆಗಳು ದೇವರ ಸ್ವರ್ಗೀಯ ರಾಜ್ಯದಲ್ಲಿ ಭಾಗಿಗಳಾಗುವ ಯೇಸುವಿನ ಅಪೊಸ್ತಲರನ್ನು ಸೂಚಿಸುತ್ತವಾದರೂ, ಇಂದು ಕ್ರಿಸ್ತನ ಸಕಲ ಹಿಂಬಾಲಕರೂ ಪ್ರಯೋಜನ ಪಡೆಯಬಹುದಾದ ಸತ್ಯಗಳು ಆ ದೃಷ್ಟಾಂತದಲ್ಲಿ ಅಡಕವಾಗಿವೆ.—ಯೋಹಾನ 3:16; 10:16.
b ಇಳಿವಯಸ್ಸು ಅಥವಾ ರೋಗದ ಕಾರಣ ಮನೆಯಲ್ಲೇ ಇರಬೇಕಾದವರು ಪತ್ರಗಳ ಮೂಲಕ ಅಥವಾ ಅನುಮತಿಯಿರುವಲ್ಲೆಲ್ಲಾ ಟೆಲಿಫೋನಿನ ಮೂಲಕ ಸಾಕ್ಷಿ ನೀಡಬಹುದು. ಅಥವಾ ತಮಗೆ ಭೇಟಿ ಕೊಡುವವರೊಂದಿಗೆ ಅವರು ಸುವಾರ್ತೆಯನ್ನು ಹಂಚಿಕೊಳ್ಳಸಾಧ್ಯವಿದೆ.
c ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
• ನಾವು ಯಾವ ರೀತಿಯ ಫಲಗಳನ್ನು ಹೆಚ್ಚು ಸಮೃದ್ಧವಾಗಿ ಕೊಡಬೇಕಾಗಿದೆ?
• ‘ಬಹಳ ಫಲಕೊಡುವ’ ಗುರಿಯು ನಮಗೆ ಸಾಧ್ಯವಿರುವ ಸಂಗತಿಯಾಗಿರುವುದೇಕೆ?
• ಯೋಹಾನನ ಸುವಾರ್ತೆಯಲ್ಲಿ ತಿಳಿಸಲ್ಪಟ್ಟಿರುವ ಯಾವ ಮೂರು ಪ್ರಾಮುಖ್ಯ ಆವಶ್ಯಕತೆಗಳನ್ನು ನಾವು ಪರಿಗಣಿಸಿದ್ದೇವೆ?
[ಪುಟ 21ರಲ್ಲಿರುವ ಚೌಕ/ಚಿತ್ರ]
‘ತಾಳ್ಮೆಯಿಂದ ಫಲವನ್ನು ಕೊಡುವ’ ವಿಧ
ಕಡಮೆ ಪ್ರತಿಕ್ರಿಯೆ ತೋರಿಸಲ್ಪಡುವ ಟೆರಿಟೊರಿಗಳಲ್ಲಿ ರಾಜ್ಯ ಸಂದೇಶವನ್ನು ನಂಬಿಗಸ್ತಿಕೆಯಿಂದ ಸಾರುತ್ತಾ ಇರಲು ನಿಮಗೆ ಯಾವುದು ಸಹಾಯಮಾಡುತ್ತದೆ? ಈ ಪ್ರಶ್ನೆಗೆ ಇಲ್ಲಿ ಕೆಲವು ಸಹಾಯಕಾರಿ ಉತ್ತರಗಳಿವೆ.
“ಟೆರಿಟೊರಿಯಲ್ಲಿನ ಪ್ರತಿಕ್ರಿಯೆ ಏನೇ ಆಗಿದ್ದರೂ, ನಮಗೆ ಯೇಸುವಿನ ಪೂರ್ಣ ಬೆಂಬಲವಿದೆಯೆಂಬ ತಿಳಿವಳಿಕೆಯೇ, ನನ್ನಲ್ಲಿ ಆಶಾವಾದಿ ನೋಟವನ್ನು ಮತ್ತು ಪಟ್ಟುಹಿಡಿಯುವಿಕೆಯನ್ನು ಪ್ರಚೋದಿಸುತ್ತದೆ.”—ಹ್ಯಾರಿ, ವಯಸ್ಸು 72; 1946ರಲ್ಲಿ ದೀಕ್ಷಾಸ್ನಾನಪಡೆದರು.
“ಎರಡನೆಯ ಕೊರಿಂಥ 2:17 ನನ್ನನ್ನು ಯಾವಾಗಲೂ ಪ್ರೋತ್ಸಾಹಿಸುತ್ತದೆ. ನಾವು ಶುಶ್ರೂಷೆಯಲ್ಲಿ ಭಾಗವಹಿಸುವಾಗ, ‘ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿ’ ಇರುತ್ತೇವೆಂದು ಅದು ಹೇಳುತ್ತದೆ. ನಾನು ಈ ಸೇವೆಯಲ್ಲಿರುವಾಗ, ನನ್ನ ಅತಿ ಆತ್ಮೀಯ ಸ್ನೇಹಿತರ ಸಹವಾಸದಲ್ಲಿ ಆನಂದಿಸುತ್ತೇನೆ.”—ಕ್ಲಾಡಿಯೊ, ವಯಸ್ಸು 43; 1974ರಲ್ಲಿ ದೀಕ್ಷಾಸ್ನಾನಪಡೆದರು.
“ನಿಜವಾಗಿ ಹೇಳುವುದಾದರೆ, ಸಾರುವ ಕೆಲಸವು ನನಗೊಂದು ವೈಯಕ್ತಿಕ ಹೋರಾಟವೇ ಸರಿ. ಆದರೂ, ಕೀರ್ತನೆ 18:29ರಲ್ಲಿರುವ, ‘ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು’ ಎಂಬ ಮಾತುಗಳ ಸತ್ಯತೆಯ ಅನುಭವ ನನಗಾಗುತ್ತದೆ.”—ಗೆರಾಟ್, ವಯಸ್ಸು 79; 1955ರಲ್ಲಿ ದೀಕ್ಷಾಸ್ನಾನಪಡೆದರು.
“ನಾನು ಸೇವೆಯಲ್ಲಿ ಒಂದೇ ಒಂದು ವಚನವನ್ನು ಓದಿದರೂ, ಯಾರೋ ಒಬ್ಬನ ಹೃದಯವು ಬೈಬಲಿನಿಂದ ಪರೀಕ್ಷಿಸಲ್ಪಟ್ಟಿತು ಎಂಬ ತೃಪ್ತಿ ನನಗಾಗುತ್ತದೆ.”—ಎಲನರ್, ವಯಸ್ಸು 26; 1989ರಲ್ಲಿ ದೀಕ್ಷಾಸ್ನಾನಪಡೆದರು.
“ನಾನು ಬೇರೆ ಬೇರೆ ಪೀಠಿಕೆಗಳನ್ನು ಪ್ರಯೋಗಿಸುತ್ತಾ ಇರುತ್ತೇನೆ. ಎಷ್ಟೊಂದು ಪೀಠಿಕೆಗಳು ಇವೆಯೆಂದರೆ, ನನ್ನ ಉಳಿದಿರುವ ಜೀವಮಾನದಲ್ಲಿ ಅವೆಲ್ಲವನ್ನೂ ನಾನು ಉಪಯೋಗಿಸಲು ಅಶಕ್ತನು.”—ಪಾಲ್, ವಯಸ್ಸು 79; 1940ರಲ್ಲಿ ದೀಕ್ಷಾಸ್ನಾನಪಡೆದರು.
“ನಕಾರಾತ್ಮಕ ಪ್ರತಿಕ್ರಿಯೆಗಳಿಂದ ನನಗೆ ಬೇಸರವಾಗುವುದಿಲ್ಲ. ನಾನು ಜನರನ್ನು ಸ್ನೇಹಭಾವದಿಂದ ಸಮೀಪಿಸಲು ಪ್ರಯತ್ನಿಸುತ್ತೇನೆ, ಅಂದರೆ ಅವರೊಂದಿಗೆ ಸಂಭಾಷಣೆ ನಡೆಸಿ ಅವರ ಅಭಿಪ್ರಾಯಕ್ಕೆ ಕಿವಿಗೊಡುತ್ತೇನೆ.”—ಡ್ಯಾನಿಯೆಲ್, ವಯಸ್ಸು 75; ದೀಕ್ಷಾಸ್ನಾನ 1946ರಲ್ಲಿ ದೀಕ್ಷಾಸ್ನಾನಪಡೆದರು.
“ತಾವು ಸಾಕ್ಷಿಗಳಾಗುವುದರಲ್ಲಿ ನನ್ನ ಸಾರುವಿಕೆಯು ವಹಿಸಿದ ಪಾತ್ರದ ಕುರಿತು ಹೇಳಿದಂಥ ಹೊಸ ದೀಕ್ಷಾಸ್ನಾತ ವ್ಯಕ್ತಿಗಳನ್ನು ನಾನು ಭೇಟಿಯಾಗಿದ್ದೇನೆ. ತರುವಾಯ ಬೇರೆ ಯಾರೋ ಅವರೊಂದಿಗೆ ಅಧ್ಯಯನ ಮಾಡಿ, ಅವರು ಪ್ರಗತಿಯನ್ನು ಮಾಡುವಂತೆ ಸಹಾಯಮಾಡಿದ್ದದ್ದು ನನಗೆ ತಿಳಿದಿರಲಿಲ್ಲ. ನಮ್ಮ ಶುಶ್ರೂಷೆಯು ಒಂದು ತಂಡದ ಕೆಲಸವಾಗಿದೆಯೆಂಬದನ್ನು ತಿಳಿದಿರುವುದು ನನಗೆ ಸಂತೋಷವನ್ನು ಕೊಡುತ್ತದೆ.”—ಜೋನ್, ವಯಸ್ಸು 66; 1954ರಲ್ಲಿ ದೀಕ್ಷಾಸ್ನಾನಪಡೆದರು.
ನೀವು “ತಾಳ್ಮೆಯಿಂದ ಫಲವನ್ನು” ಕೊಡಲು ನಿಮಗೆ ಯಾವುದು ಸಹಾಯಮಾಡುತ್ತದೆ?—ಲೂಕ 8:15.
[ಪುಟ 20ರಲ್ಲಿರುವ ಚಿತ್ರಗಳು]
ಆತ್ಮದ ಫಲಗಳನ್ನು ತೋರಿಸುವ ಮೂಲಕ ಮತ್ತು ರಾಜ್ಯದ ಸಂದೇಶವನ್ನು ಘೋಷಿಸುವ ಮೂಲಕ ನಾವು ಬಹಳ ಫಲವನ್ನು ಕೊಡುತ್ತೇವೆ
[ಪುಟ 23ರಲ್ಲಿರುವ ಚಿತ್ರಗಳು]
‘ಬಹಳ ಫಲವನ್ನು ಕೊಡುತ್ತಾ ಇರಿ’ ಎಂದು ಯೇಸು ತನ್ನ ಅಪೊಸ್ತಲರಿಗೆ ಹೇಳಿದ್ದರ ಅರ್ಥವೇನಾಗಿತ್ತು?