ಯೆಹೋವನ ವಾಕ್ಯವು ಸಜೀವವಾದದ್ದು
ಒಂದನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು
ಅದು ಸಾಮಾನ್ಯ ಶಕ ಪೂರ್ವ 1117ನೆಯ ಇಸವಿಯಾಗಿತ್ತು. ಯೆಹೋಶುವನು ವಾಗ್ದತ್ತ ದೇಶವನ್ನು ಜಯಿಸಿ ಸುಮಾರು ಮುನ್ನೂರು ವರ್ಷಗಳು ಕಳೆದಿವೆ. ಇಸ್ರಾಯೇಲ್ನ ಹಿರೀಪುರುಷರು ಅಸಾಮಾನ್ಯವಾದಂಥ ಒಂದು ಬೇಡಿಕೆಯೊಂದಿಗೆ ಯೆಹೋವನ ಪ್ರವಾದಿಯ ಬಳಿಗೆ ಬರುತ್ತಾರೆ. ಪ್ರವಾದಿಯು ಆ ವಿಷಯದ ಕುರಿತು ಪ್ರಾರ್ಥಿಸುತ್ತಾನೆ ಮತ್ತು ಯೆಹೋವನು ಅವರ ಬೇಡಿಕೆಯನ್ನು ಪೂರೈಸಲು ಸಮ್ಮತಿಸುತ್ತಾನೆ. ಇದು ನ್ಯಾಯಸ್ಥಾಪಕರ ಕಾಲಾವಧಿಯ ಅಂತ್ಯವನ್ನು ಮತ್ತು ಮಾನವ ಅರಸರ ಆಳ್ವಿಕೆಯ ಆರಂಭವನ್ನು ಗುರುತಿಸುತ್ತದೆ. ಬೈಬಲಿನ ಒಂದನೇ ಸಮುವೇಲ ಪುಸ್ತಕವು, ಇಸ್ರಾಯೇಲ್ ಜನಾಂಗದ ಇತಿಹಾಸದಲ್ಲಿನ ಈ ಪ್ರಮುಖ ಬದಲಾವಣೆಯ ಸಮಯಾವಧಿಯಲ್ಲಿ ನಡೆದ ರೋಮಾಂಚಕ ಘಟನೆಗಳನ್ನು ವರ್ಣಿಸುತ್ತದೆ.
ಸಮುವೇಲ, ನಾತಾನ್ ಮತ್ತು ಗಾದ್ರಿಂದ ಬರೆಯಲ್ಪಟ್ಟ ಒಂದನೇ ಸಮುವೇಲ ಪುಸ್ತಕವು 102 ವರ್ಷಗಳ ಅಂದರೆ ಸಾ.ಶ.ಪೂ. 1180ರಿಂದ 1078ರ ವರೆಗಿನ ಕಾಲಾವಧಿಯನ್ನು ಆವರಿಸುತ್ತದೆ. (1 ಪೂರ್ವಕಾಲವೃತ್ತಾಂತ 29:29, 30) ಇದು ಇಸ್ರಾಯೇಲಿನ ನಾಲ್ಕು ಮಂದಿ ನಾಯಕರ ಕುರಿತಾದ ವೃತ್ತಾಂತವಾಗಿದೆ. ಇವರಲ್ಲಿ ಇಬ್ಬರು ನ್ಯಾಯಸ್ಥಾಪಕರಾಗಿ ಮತ್ತು ಇನ್ನಿಬ್ಬರು ಅರಸರಾಗಿ ಸೇವೆಮಾಡಿದರು; ಅವರಲ್ಲಿ ಇಬ್ಬರು ಯೆಹೋವನಿಗೆ ವಿಧೇಯರಾಗಿದ್ದರು ಮತ್ತು ಇಬ್ಬರು ವಿಧೆಯರಾಗಿರಲಿಲ್ಲ. ನಾವು ಇಬ್ಬರು ಆದರ್ಶಪ್ರಾಯ ಸ್ತ್ರೀಯರೊಂದಿಗೆ ಮತ್ತು ಧೀರನಾದರೂ ಮೃದುಸ್ವಭಾವದವನಾದ ಒಬ್ಬ ಯುದ್ಧವೀರನೊಂದಿಗೆ ಸಹ ಪರಿಚಿತರಾಗುತ್ತೇವೆ. ಇಂಥ ಉದಾಹರಣೆಗಳು, ಅನುಕರಿಸಬೇಕಾದ ಮತ್ತು ದೂರವಿರಿಸಬೇಕಾದ ಮನೋಭಾವಗಳು ಹಾಗೂ ಕೃತ್ಯಗಳ ಕುರಿತು ಅಮೂಲ್ಯವಾದ ಪಾಠಗಳನ್ನು ಒದಗಿಸುತ್ತವೆ. ಹೀಗೆ, ಒಂದನೇ ಸಮುವೇಲ ಪುಸ್ತಕದಲ್ಲಿರುವ ವಿಷಯಗಳು, ನಮ್ಮ ಆಲೋಚನೆಗಳು ಮತ್ತು ನಡತೆಯ ಮೇಲೆ ಪರಿಣಾಮವನ್ನು ಬೀರಬಲ್ಲವು.—ಇಬ್ರಿಯ 4:12.
ಏಲಿಯ ಬಳಿಕ ಸಮುವೇಲನು ನ್ಯಾಯಸ್ಥಾಪಕನಾಗುತ್ತಾನೆ
ಅದು ಫಲಸಂಗ್ರಹ ಜಾತ್ರೆಯ ಕಾಲವಾಗಿತ್ತು, ಮತ್ತು ರಾಮದಲ್ಲಿ ವಾಸಿಸುತ್ತಿದ್ದ ಹನ್ನಳು ತುಂಬ ಅತ್ಯಾನಂದದಿಂದಿದ್ದಾಳೆ.a ಯೆಹೋವನು ಅವಳ ಪ್ರಾರ್ಥನೆಗಳನ್ನು ಉತ್ತರಿಸಿದ್ದಾನೆ ಮತ್ತು ಅವಳು ಒಬ್ಬ ಮಗನಿಗೆ ಜನ್ಮವಿತ್ತಿದ್ದಾಳೆ. ತನ್ನ ಹರಕೆಯನ್ನು ಸಲ್ಲಿಸಲಿಕ್ಕಾಗಿ ಹನ್ನಳು ತನ್ನ ಮಗನಾದ ಸಮುವೇಲನನ್ನು “ಯೆಹೋವನ ಮಂದಿರದಲ್ಲಿ” ಸೇವೆಸಲ್ಲಿಸಲು ಒಪ್ಪಿಸುತ್ತಾಳೆ. ಅಲ್ಲಿ ಆ ಹುಡುಗನು “ಯಾಜಕನಾದ ಏಲಿಯ ಕೈಕೆಳಗಿದ್ದುಕೊಂಡು ಯೆಹೋವನನ್ನು ಸೇವಿಸು”ವವನಾಗುತ್ತಾನೆ. (1 ಸಮುವೇಲ 1:24; 2:11) ಸಮುವೇಲನು ಇನ್ನೂ ಚಿಕ್ಕ ಪ್ರಾಯದವನಾಗಿರುವಾಗಲೇ ಯೆಹೋವನು ಅವನೊಂದಿಗೆ ಮಾತಾಡಿ, ಏಲಿಯ ಮನೆಯವರ ವಿಷಯದಲ್ಲಿ ಬರಮಾಡಲಿರುವ ನ್ಯಾಯತೀರ್ಪನ್ನು ತಿಳಿಸುತ್ತಾನೆ. ಸಮುವೇಲನು ದೊಡ್ಡವನಾಗುತ್ತಾ ಬಂದಂತೆ, ಇಸ್ರಾಯೇಲಿನ ಎಲ್ಲಾ ಜನರೂ ಅವನನ್ನು ಯೆಹೋವನ ಪ್ರವಾದಿಯನ್ನಾಗಿ ಅಂಗೀಕರಿಸತೊಡಗುತ್ತಾರೆ.
ಕಾಲಕ್ರಮೇಣ, ಫಿಲಿಷ್ಟಿಯರು ಇಸ್ರಾಯೇಲಿನ ವಿರುದ್ಧ ವ್ಯೂಹಕಟ್ಟಿ ಯುದ್ಧಕ್ಕೆ ಬರುತ್ತಾರೆ. ಅವರು ಮಂಜೂಷವನ್ನು ವಶಪಡಿಸಿಕೊಂಡು, ಏಲಿಯ ಇಬ್ಬರು ಪುತ್ರರನ್ನು ಹತಿಸುತ್ತಾರೆ. ಈ ಸುದ್ದಿಯನ್ನು ಕೇಳಿಸಿಕೊಂಡ ಮುದುಕನಾದ ಏಲಿಯು ಸಾಯುತ್ತಾನೆ; ಅವನು ಒಟ್ಟು ‘ನಾಲ್ವತ್ತು ವರುಷ ಇಸ್ರಾಯೇಲ್ಯರ’ ನ್ಯಾಯಸ್ಥಾಪಕನಾಗಿ ಕಾರ್ಯನಡಿಸಿರುತ್ತಾನೆ. (1 ಸಮುವೇಲ 4:18) ಫಿಲಿಷ್ಟಿಯರು ಮಂಜೂಷವನ್ನು ಇಟ್ಟುಕೊಂಡಿರುವುದು ವಿಪತ್ಕಾರಕವಾಗಿ ರುಜುವಾಗುತ್ತದೆ, ಆದುದರಿಂದ ಅವರು ಅದನ್ನು ಇಸ್ರಾಯೇಲ್ಯರಿಗೆ ಹಿಂದಿರುಗಿಸುತ್ತಾರೆ. ಈಗ ಸಮುವೇಲನು ಇಸ್ರಾಯೇಲ್ಯರಿಗೆ ನ್ಯಾಯಸ್ಥಾಪಕನಾಗುತ್ತಾನೆ ಮತ್ತು ದೇಶದಲ್ಲಿ ಶಾಂತಿಯಿರುತ್ತದೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು
2:10—ಇಸ್ರಾಯೇಲಿನಲ್ಲಿ ಯಾವ ಮಾನವ ಅರಸನೂ ಇಲ್ಲದಿದ್ದ ಸಮಯದಲ್ಲಿ ಹನ್ನಳು, ಯೆಹೋವನು “ತಾನು ನೇಮಿಸಿದ ಅರಸನಿಗೆ ಬಲವನ್ನು ಅನುಗ್ರಹಿಸು”ವಂತೆ ಏಕೆ ಬೇಡಿದಳು? ಮೋಶೆಯ ಧರ್ಮಶಾಸ್ತ್ರದಲ್ಲಿ, ಇಸ್ರಾಯೇಲ್ಯರಿಗೆ ಒಬ್ಬ ಮಾನವ ಅರಸನಿರುವನೆಂದು ಮುಂತಿಳಿಸಲ್ಪಟ್ಟಿತ್ತು. (ಧರ್ಮೋಪದೇಶಕಾಂಡ 17:14-18) ಯಾಕೋಬನು ತನ್ನ ಮರಣಶಯ್ಯೆಯಲ್ಲಿನ ಪ್ರವಾದನೆಯಲ್ಲಿ ಹೇಳಿದ್ದು: “ರಾಜದಂಡವನ್ನು ಹಿಡಿಯತಕ್ಕವನು [ರಾಜಾಧಿಕಾರದ ಸಂಕೇತ] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ.” (ಆದಿಕಾಂಡ 49:10) ಅಷ್ಟುಮಾತ್ರವಲ್ಲದೆ, ಇಸ್ರಾಯೇಲ್ಯರ ಪೂರ್ವಜಳಾದ ಸಾರಳ ಕುರಿತು ಯೆಹೋವನು ಹೇಳಿದ್ದು: “ಆಕೆಯಿಂದ . . . ಅರಸರೂ ಉತ್ಪತ್ತಿಯಾಗುವರು.” (ಆದಿಕಾಂಡ 17:16) ಆದುದರಿಂದ, ಹನ್ನಳು ಭವಿಷ್ಯದ ರಾಜನ ಕುರಿತು ಬೇಡುತ್ತಿದ್ದಳು.
3:3—ವಾಸ್ತವದಲ್ಲಿ ಸಮುವೇಲನು ಮಹಾ ಪವಿತ್ರಸ್ಥಾನದಲ್ಲಿ ಮಲಗಿದ್ದನೋ? ಇಲ್ಲ. ಸಮುವೇಲನು ಕೆಹಾತ್ಯರ ವಂಶವೆಂಬ ಯಾಜಕೇತರ ಕುಟುಂಬಕ್ಕೆ ಸೇರಿದಂಥ ಒಬ್ಬ ಲೇವಿಯನಾಗಿದ್ದನು. (1 ಪೂರ್ವಕಾಲವೃತ್ತಾಂತ 6:33-38) ಆದುದರಿಂದಲೇ ‘ಒಳಗೆ ಹೋಗಿ ಪರಿಶುದ್ಧವಸ್ತುಗಳನ್ನು ನೋಡುವ’ ಅನುಮತಿಯು ಅವನಿಗೆ ಕೊಡಲ್ಪಟ್ಟಿರಲಿಲ್ಲ. (ಅರಣ್ಯಕಾಂಡ 4:17-20) ಸಮುವೇಲನು ಪ್ರವೇಶಿಸಸಾಧ್ಯವಿದ್ದ ದೇವಾಲಯದ ಏಕಮಾತ್ರ ಭಾಗವು, ದೇವದರ್ಶನದ ಗುಡಾರದ ಅಂಗಣವಾಗಿತ್ತು. ಅವನು ಅಲ್ಲಿಯೇ ಮಲಗಿದ್ದಿರಬಹುದು. ಏಲಿಯು ಸಹ ಅಂಗಣದಲ್ಲೇ ಎಲ್ಲಿಯೊ ಮಲಗುತ್ತಿದ್ದನು ಎಂಬುದು ಸುವ್ಯಕ್ತ. “ದೇವರ ಮಂಜೂಷವಿದ್ದ ಸ್ಥಳ” ಎಂಬ ಅಭಿವ್ಯಕ್ತಿಯು ದೇವದರ್ಶನದ ಗುಡಾರದ ಕ್ಷೇತ್ರಕ್ಕೆ ಸೂಚಿತವಾಗಿದೆ ಎಂಬುದು ಸುವ್ಯಕ್ತ.
7:7-9, 17—ಯೆಹೋವನು ಆದುಕೊಂಡ ಸ್ಥಳದಲ್ಲಿ ಮಾತ್ರವೇ ಕ್ರಮವಾಗಿ ಯಜ್ಞಗಳು ಅರ್ಪಿಸಲ್ಪಡಬೇಕಾಗಿತ್ತಾದರೂ, ಸಮುವೇಲನು ಏಕೆ ಮಿಚ್ಪೆಯಲ್ಲಿ ಸರ್ವಾಂಗಹೋಮವನ್ನು ಸಮರ್ಪಿಸಿದನು ಮತ್ತು ರಾಮದಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು? (ಧರ್ಮೋಪದೇಶಕಾಂಡ 12:4-7, 13, 14; ಯೆಹೋಶುವ 22:19) ಶಿಲೋವಿನಲ್ಲಿದ್ದ ದೇವದರ್ಶನದ ಗುಡಾರದಿಂದ ಪವಿತ್ರ ಮಂಜೂಷವು ತೆಗೆಯಲ್ಪಟ್ಟ ಬಳಿಕ, ಯೆಹೋವನ ಸಾನ್ನಿಧ್ಯವು ಅಲ್ಲಿ ಇನ್ನೆಂದೂ ವ್ಯಕ್ತವಾಗಲಿಲ್ಲ. ಆದುದರಿಂದಲೇ ದೇವರ ಪ್ರತಿನಿಧಿಯಾಗಿದ್ದ ಸಮುವೇಲನು ಮಿಚ್ಪೆಯಲ್ಲಿ ಒಂದು ಸರ್ವಾಂಗಹೋಮವನ್ನು ಸಮರ್ಪಿಸಿದನು ಮತ್ತು ರಾಮದಲ್ಲಿ ಒಂದು ಯಜ್ಞವೇದಿಯನ್ನು ಸಹ ಕಟ್ಟಿಸಿದನು. ಈ ಕೃತ್ಯಗಳು ಯೆಹೋವನಿಂದ ಅಂಗೀಕರಿಸಲ್ಪಟ್ಟಿದ್ದವು ಎಂಬುದು ಸುವ್ಯಕ್ತವಾಗುತ್ತದೆ.
ನಮಗಾಗಿರುವ ಪಾಠಗಳು:
1:11, 12, 21-23; 2:19. ಹನ್ನಳ ಪ್ರಾರ್ಥನಾಪೂರ್ವಕ ಮನೋಭಾವ, ಅವಳ ದೀನಭಾವ, ಯೆಹೋವನ ದಯೆಗಾಗಿರುವ ಅವಳ ಗಣ್ಯತೆ ಮತ್ತು ನಿರಂತರ ಮಾತೃ ಮಮತೆಯು ದೇವಭಯವುಳ್ಳ ಎಲ್ಲಾ ಸ್ತ್ರೀಯರಿಗೆ ಆದರ್ಶಪ್ರಾಯವಾದದ್ದಾಗಿದೆ.
1:8. ಇತರರನ್ನು ಮಾತುಗಳಿಂದ ಧೈರ್ಯಗೊಳಿಸುವುದರಲ್ಲಿ ಎಲ್ಕಾನನು ಎಷ್ಟು ಒಳ್ಳೇ ಮಾದರಿಯನ್ನಿಟ್ಟನು! (ಯೋಬ 16:5) ಮೊದಲಾಗಿ ಅವನು ದುಃಖಿತಳಾಗಿದ್ದ ಹನ್ನಳಿಗೆ “ನೀನು ವ್ಯಸನಪಡುವದೇಕೆ?” ಎಂಬ ತಪ್ಪುಹೊರಿಸದಂಥ ಪ್ರಶ್ನೆಯನ್ನು ಕೇಳಿದನು. ಇದು ತನ್ನ ಅನಿಸಿಕೆಗಳ ಕುರಿತು ಮಾತಾಡುವಂತೆ ಅವಳನ್ನು ಉತ್ತೇಜಿಸಿತು. ಆಗ ಎಲ್ಕಾನನು ಅವಳಿಗೆ ತನ್ನ ಪ್ರೀತಿಯ ಪುನರಾಶ್ವಾಸನೆಯನ್ನು ನೀಡುತ್ತಾ, “ನಾನು ನಿನಗೆ ಹತ್ತು ಮಂದಿ ಮಕ್ಕಳಿಗಿಂತ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿದನು.
2:26; 3:5-8, 15, 19. ನಮ್ಮ ದೇವನೇಮಿತ ಕೆಲಸಕ್ಕೆ ಅಂಟಿಕೊಳ್ಳುವ ಮೂಲಕ, ಆಧ್ಯಾತ್ಮಿಕ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ಮತ್ತು ವಿನಯಶೀಲರೂ ಗೌರವಪೂರ್ಣರೂ ಆಗಿರುವ ಮೂಲಕ ನಾವು ದೇವರ ಹಾಗೂ ಮನುಷ್ಯರ ‘ದಯೆಗೆ ಪಾತ್ರರಾಗುತ್ತೇವೆ.’
4:3, 4, 10. ಒಡಂಬಡಿಕೆಯ ಮಂಜೂಷದಂತಹ ಪವಿತ್ರವಾದ ವಸ್ತು ಅವರ ಮಧ್ಯೆಯಿದ್ದರೂ ಅದು ಅವರಿಗೆ ಸಂರಕ್ಷಣೆ ಕೊಡುವಂಥ ತಾಯಿತಿಯಾಗಿರಲಿಲ್ಲ. ನಾವು ‘ವಿಗ್ರಹಗಳಿಗೆ ದೂರವಾಗಿರುವಂತೆ ನಮ್ಮನ್ನು ಕಾಪಾಡಿಕೊಳ್ಳಬೇಕು.’—1 ಯೋಹಾನ 5:21.
ಇಸ್ರಾಯೇಲ್ಯರ ಮೊದಲ ಅರಸನು ಸಫಲನಾಗುತ್ತಾನೊ ವಿಫಲನಾಗುತ್ತಾನೊ?
ಸಮುವೇಲನು ಜೀವನದಾದ್ಯಂತ ಯೆಹೋವನಿಗೆ ನಂಬಿಗಸ್ತನಾಗಿದ್ದಾನೆ, ಆದರೆ ಅವನ ಪುತ್ರರು ದೇವರ ಮಾರ್ಗಗಳಲ್ಲಿ ನಡೆಯುವುದಿಲ್ಲ. ಇಸ್ರಾಯೇಲಿನ ಹಿರೀಪುರುಷರು ಒಬ್ಬ ಮಾನವ ಅರಸನನ್ನು ನೇಮಿಸುವಂತೆ ಬೇಡಿಕೊಳ್ಳುತ್ತಾರೆ; ಅವರಿಗೊಬ್ಬ ಅರಸನಿರುವಂತೆ ಯೆಹೋವನು ಅನುಮತಿ ನೀಡುತ್ತಾನೆ. ಸಮುವೇಲನು ಯೆಹೋವನ ನಿರ್ದೇಶನವನ್ನು ಅನುಸರಿಸಿ, ಬೆನ್ಯಾಮೀನ್ ಕುಲದ ಅತಿ ಸುಂದರನಾದ ಸೌಲನನ್ನು ಅರಸನಾಗಿ ಅಭಿಷೇಕಿಸುತ್ತಾನೆ. ಅಮ್ಮೋನಿಯರನ್ನು ಸೋಲಿಸುವ ಮೂಲಕ ಸೌಲನು ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಾನೆ.
ಸೌಲನ ಪರಾಕ್ರಮಿ ಪುತ್ರನಾದ ಯೋನಾತಾನನು ಫಿಲಿಷ್ಟಿಯರ ಒಂದು ಠಾಣವನ್ನು ಸದೆಬಡಿಯುತ್ತಾನೆ. ಫಿಲಿಷ್ಟಿಯರು ದೊಡ್ಡ ಸೇನೆಯೊಂದಿಗೆ ಇಸ್ರಾಯೇಲ್ಯರ ವಿರುದ್ಧ ಯುದ್ಧಹೂಡುತ್ತಾರೆ. ಸೌಲನು ದಿಗಿಲುಗೊಳ್ಳುತ್ತಾನೆ ಮತ್ತು ಅವಿಧೇಯತೆಯಿಂದ ಸ್ವತಃ ತಾನೇ ಸರ್ವಾಂಗಹೋಮವನ್ನು ಅರ್ಪಿಸುತ್ತಾನೆ. ಧೀರನಾಗಿದ್ದ ಯೋನಾತಾನನು ತನ್ನ ಆಯುಧಗಳನ್ನು ಹೊರುವ ವ್ಯಕ್ತಿಯನ್ನು ಮಾತ್ರವೇ ಕರೆದೊಯ್ದು, ಫಿಲಿಷ್ಟಿಯರ ಇನ್ನೊಂದು ಕಾವಲುದಂಡಿನ ಮೇಲೆ ಆಕ್ರಮಣವೆಸಗುತ್ತಾನೆ. ಆದರೆ ಸೌಲನು ಹಿಂದೆಮುಂದೆ ಆಲೋಚಿಸದೆ ಮಾಡಿದ ಆಣೆಯು, ವಿಜಯವನ್ನು ಅಪೂರ್ಣಗೊಳಿಸುತ್ತದೆ. ಸೌಲನು ತನ್ನ ಎಲ್ಲಾ ಶತ್ರುಗಳ ವಿರುದ್ಧ ‘ಯುದ್ಧಮಾಡುತ್ತಾ’ ಹೋಗುತ್ತಾನೆ. (1 ಸಮುವೇಲ 14:47) ಆದರೂ, ಅಮಾಲೇಕ್ಯರನ್ನು ಸೋಲಿಸಿದ ಬಳಿಕ ಅವನು ಯಾವುದು “ವಿನಾಶಕ್ಕೆ ಒಪ್ಪಿಸಲ್ಪಟ್ಟಿತ್ತೋ” (NW) ಅದನ್ನು ಉಳಿಸುವ ಮೂಲಕ ಯೆಹೋವನಿಗೆ ಅವಿಧೇಯನಾಗುತ್ತಾನೆ. (ಯಾಜಕಕಾಂಡ 27:28, 29) ಇದರ ಪರಿಣಾಮವಾಗಿ ಯೆಹೋವನು ಸೌಲನ ಅರಸುತನವನ್ನು ತೆಗೆದುಹಾಕುತ್ತಾನೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು
9:9—“ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದರ್ಶಿಗಳೆಂದು ಕರೆಯುತ್ತಿದ್ದರು” ಎಂಬ ಅಭಿವ್ಯಕ್ತಿಯ ವಿಷಯದಲ್ಲಿ ಯಾವುದು ಗಮನಾರ್ಹವಾಗಿದೆ? ಸಮುವೇಲನ ದಿನಗಳಲ್ಲಿ ಪ್ರವಾದಿಗಳು ಹೆಚ್ಚು ಪ್ರಮುಖತೆಯನ್ನು ಪಡೆದಂತೆ, ಇಸ್ರಾಯೇಲಿನಲ್ಲಿ ಅರಸರ ಆಳ್ವಿಕೆಯ ಸಮಯದಲ್ಲಿ “ದರ್ಶಿ” ಎಂಬ ಪದವು “ಪ್ರವಾದಿ” ಎಂಬ ಪದದಿಂದ ಸ್ಥಳಾಂತರಿಸಲ್ಪಟ್ಟಿತು ಎಂಬುದನ್ನು ಈ ಮಾತುಗಳು ಸೂಚಿಸಬಹುದು. ಪ್ರವಾದಿಗಳ ಸರಣಿಯಲ್ಲಿ ಸಮುವೇಲನನ್ನು ಪ್ರಥಮ ಪ್ರವಾದಿಯಾಗಿ ಪರಿಗಣಿಸಲಾಗಿದೆ.—ಅ. ಕೃತ್ಯಗಳು 3:24.
14:24-32, 44, 45—ಸೌಲನ ಆಣೆಯನ್ನು ಉಲ್ಲಂಘಿಸುತ್ತಾ ಜೇನನ್ನು ತಿಂದದ್ದರಿಂದ ಯೋನಾತಾನನು ದೇವರ ಅನುಗ್ರಹವನ್ನು ಕಳೆದುಕೊಂಡನೋ? ಈ ಕೃತ್ಯವು ಯೋನಾತಾನನನ್ನು ದೇವರ ಕೋಪಕ್ಕೆ ಪಾತ್ರನನ್ನಾಗಿ ಮಾಡಿರುವಂತೆ ತೋರುವುದಿಲ್ಲ. ಮೊದಲನೆಯದಾಗಿ, ತನ್ನ ತಂದೆಯ ಆಣೆಯ ಬಗ್ಗೆ ಯೋನಾತಾನನಿಗೆ ತಿಳಿದಿರಲಿಲ್ಲ. ಅಷ್ಟುಮಾತ್ರವಲ್ಲ, ತಪ್ಪಾದ ಹುರುಪಿನಿಂದ ಅಥವಾ ರಾಜಾಧಿಕಾರದ ಕುರಿತು ತಪ್ಪಾದ ನೋಟದಿಂದ ಪ್ರಚೋದಿಸಲ್ಪಟ್ಟಂಥ ಈ ಆಣೆಯು ಜನರಿಗೆ ಸಮಸ್ಯೆಗಳನ್ನು ಉಂಟುಮಾಡಿತು. ಅಂಥ ಒಂದು ಆಣೆಯು ಹೇಗೆ ದೇವರ ಸಮ್ಮತಿಯನ್ನು ಪಡೆಯಸಾಧ್ಯವಿದೆ? ಈ ಆಣೆಯನ್ನು ಉಲ್ಲಂಘಿಸಿದ್ದರ ಶಿಕ್ಷೆಯನ್ನು ಅನುಭವಿಸಲು ಯೋನಾತಾನನು ಸಿದ್ಧನಾಗಿದ್ದನಾದರೂ, ಅವನ ಜೀವವು ಉಳಿಸಲ್ಪಟ್ಟಿತು.
15:6—ಸೌಲನು ಕೇನ್ಯರಿಗೆ ವಿಶೇಷ ಪರಿಗಣನೆಯನ್ನು ತೋರಿಸಿದ್ದೇಕೆ? ಕೇನ್ಯರು ಮೋಶೆಯ ಮಾವನ ಪುತ್ರರಾಗಿದ್ದರು. ಇಸ್ರಾಯೇಲ್ಯರು ಸೀನಾಯಿಬೆಟ್ಟವನ್ನು ಬಿಟ್ಟುಹೋದಾಗ ಕೇನ್ಯರು ಅವರಿಗೆ ಸಹಾಯಮಾಡಿದ್ದರು. (ಅರಣ್ಯಕಾಂಡ 10:29-32) ಕಾನಾನ್ ದೇಶದಲ್ಲಿ ಕೇನ್ಯರು ಸ್ವಲ್ಪ ಕಾಲಾವಧಿಯ ವರೆಗೆ ಯೆಹೂದನ ಪುತ್ರರೊಂದಿಗೆ ವಾಸಿಸಿದರು. (ನ್ಯಾಯಸ್ಥಾಪಕರು 1:16) ಸಮಯಾನಂತರ ಕೇನ್ಯರು ಅಮಾಲೇಕ್ಯರ ಹಾಗೂ ಇನ್ನಿತರ ಜನಾಂಗಗಳವರ ಮಧ್ಯೆ ನಿವಾಸಿಸಿದರೂ ಇಸ್ರಾಯೇಲ್ಯರೊಂದಿಗೆ ಸ್ನೇಹದಿಂದಲೇ ಇದ್ದರು. ಹೀಗೆ ಸಕಾರಣದಿಂದಲೇ ಸೌಲನು ಕೇನ್ಯರನ್ನು ಉಳಿಸಿದನು.
ನಮಗಾಗಿರುವ ಪಾಠಗಳು:
9:21; 10:22, 27. ಸೌಲನು ಅರಸನಾದ ಆರಂಭದಲ್ಲಿ ಅವನಲ್ಲಿದ್ದ ವಿನಯಶೀಲತೆ ಹಾಗೂ ದೀನಭಾವವು, ಕೆಲವು ಮಂದಿ “ಕಾಕಪೋಕರು” ಅವನ ರಾಜತ್ವವನ್ನು ತಿರಸ್ಕರಿಸಿದಾಗ ಮೂರ್ಖತನದಿಂದ ಕ್ರಿಯೆಗೈಯದಿರುವಂತೆ ಅವನನ್ನು ಸಂರಕ್ಷಿಸಿತು. ಅಂಥ ಮನೋಭಾವವು ವಿಚಾರಹೀನ ಕೃತ್ಯಗಳ ವಿರುದ್ಧ ಎಂಥ ಒಂದು ಸಂರಕ್ಷಣೆಯಾಗಿದೆ!
12:20, 21. ಮನುಷ್ಯರಲ್ಲಿ ಭರವಸೆಯಿಡುವುದು, ಜನಾಂಗಗಳ ಮಿಲಿಟರಿ ಶಕ್ತಿಯಲ್ಲಿ ದೃಢವಿಶ್ವಾಸವಿರಿಸುವುದು ಅಥವಾ ವಿಗ್ರಹಾರಾಧನೆಗಳಂಥ “ಅವಾಸ್ತವಿಕತೆಗಳು” (NW) ಯೆಹೋವನ ಸೇವೆಮಾಡುವುದರಿಂದ ನಿಮ್ಮನ್ನು ವಿಮುಖಗೊಳಿಸುವಂತೆ ಎಂದಿಗೂ ಅನುಮತಿಸದಿರಿ.
12:24. ಯೆಹೋವನ ಕಡೆಗಿನ ಪೂಜ್ಯ ಭಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಮತ್ತು ನಮ್ಮ ಪೂರ್ಣಹೃದಯದಿಂದ ಆತನ ಸೇವೆಮಾಡಲಿಕ್ಕಾಗಿರುವ ಒಂದು ಕೀಲಿ ಕೈ, ಪುರಾತನ ಸಮಯಗಳಲ್ಲಿ ಮತ್ತು ಆಧುನಿಕ ಕಾಲಗಳಲ್ಲಿ ಆತನು ತನ್ನ ಜನರಿಗೋಸ್ಕರ ‘ಮಾಡಿರುವ ಮಹತ್ಕಾರ್ಯಗಳನ್ನು’ ನೋಡುವುದೇ ಆಗಿದೆ.
13:10-14; 15:22-25, 30. ಅವಿಧೇಯ ಕೃತ್ಯಗಳ ಮೂಲಕವಾಗಲಿ ಅಥವಾ ಅಹಂಕಾರದ ಮನೋಭಾವದ ಮೂಲಕವಾಗಲಿ ವ್ಯಕ್ತಪಡಿಸಲ್ಪಡುವ ಹೆಮ್ಮೆ ಅಥವಾ ದುರಭಿಮಾನದ ವಿಷಯದಲ್ಲಿ ಯಾವಾಗಲೂ ಎಚ್ಚರಿಕೆಯಿಂದಿರಿ.—ಜ್ಞಾನೋಕ್ತಿ 11:2.
ಒಬ್ಬ ಕುರುಬನು ಅರಸನಾಗಿ ಆಳಲಿಕ್ಕಾಗಿ ಆಯ್ಕೆಮಾಡಲ್ಪಡುತ್ತಾನೆ
ಸಮುವೇಲನು ಯೆಹೂದಕುಲದ ದಾವೀದನನ್ನು ಭಾವೀ ಅರಸನಾಗಿ ಅಭಿಷೇಕಿಸುತ್ತಾನೆ. ತದನಂತರ ಸ್ವಲ್ಪದರಲ್ಲೇ ದಾವೀದನು ಒಂದೇ ಕವಣೆ ಕಲ್ಲಿನಿಂದ ಫಿಲಿಷ್ಟಿಯರ ದೈತ್ಯನಾದ ಗೊಲ್ಯಾತನನ್ನು ಹತಿಸುತ್ತಾನೆ. ದಾವೀದ ಮತ್ತು ಯೋನಾತಾನನ ನಡುವೆ ಸ್ನೇಹಬಂಧವು ಬೆಸೆಯಲ್ಪಡುತ್ತದೆ. ಸೌಲನು ದಾವೀದನನ್ನು ತನ್ನ ಯುದ್ಧವೀರರ ನಾಯಕನಾಗಿ ನೇಮಿಸುತ್ತಾನೆ. ದಾವೀದನ ಅನೇಕ ವಿಜಯಗಳ ಕುರಿತಾಗಿ ಇಸ್ರಾಯೇಲಿನ ಸ್ತ್ರೀಯರು “ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತುಸಾವಿರಗಟ್ಟಳೆಯಾಗಿ ಕೊಂದನು” ಎಂದು ಹಾಡುತ್ತಾರೆ. (1 ಸಮುವೇಲ 18:7) ಇದರಿಂದ ಅಸೂಯೆಗೊಂಡ ಸೌಲನು ದಾವೀದನನ್ನು ಕೊಲ್ಲಲು ಹೊಂಚುಹಾಕುತ್ತಾನೆ. ಸೌಲನಿಂದ ಮೂರು ಆಕ್ರಮಣಗಳು ನಡೆಸಲ್ಪಟ್ಟ ಬಳಿಕ ದಾವೀದನು ಪಲಾಯನಗೈಯುತ್ತಾನೆ ಮತ್ತು ಅಲೆದಾಡುತ್ತಾ ಇರುತ್ತಾನೆ.
ದಾವೀದನು ಅಲೆದಾಡುತ್ತಾ ಇದ್ದ ವರ್ಷಗಳಲ್ಲಿ ಎರಡು ಬಾರಿ ಸೌಲನನ್ನು ಕೊಲ್ಲದೆ ಉಳಿಸುತ್ತಾನೆ. ಅವನು ಸೌಂದರ್ಯವತಿಯಾದ ಅಬೀಗೈಲಳನ್ನು ಸಂಧಿಸುತ್ತಾನೆ ಮತ್ತು ತದನಂತರ ಅವಳನ್ನು ವಿವಾಹಮಾಡಿಕೊಳ್ಳುತ್ತಾನೆ. ಫಿಲಿಷ್ಟಿಯರು ಇಸ್ರಾಯೇಲಿನ ವಿರುದ್ಧ ಬಂದಾಗ ಸೌಲನು ಯೆಹೋವನನ್ನು ವಿಚಾರಿಸುತ್ತಾನೆ. ಆದರೆ ಯೆಹೋವನು ಅವನ ಪಕ್ಷದಲ್ಲಿಲ್ಲ. ಸಮುವೇಲನು ಮೃತಿಹೊಂದಿದ್ದಾನೆ. ಕಡೇ ಪ್ರಯತ್ನವಾಗಿ ಸೌಲನು ಒಬ್ಬ ಯಕ್ಷಿಣಿಯನ್ನು ಸಂಪರ್ಕಿಸುತ್ತಾನೆ ಮತ್ತು ಫಿಲಿಷ್ಟಿಯರ ವಿರುದ್ಧ ನಡೆಸಲ್ಪಡುವ ಯುದ್ಧದಲ್ಲಿ ಅವನು ಕೊಲ್ಲಲ್ಪಡುವನೆಂದು ಅವಳು ಅವನಿಗೆ ತಿಳಿಸುತ್ತಾಳೆ. ಆ ಕದನದಲ್ಲಿ ಸೌಲನು ಗುರುತರವಾಗಿ ಗಾಯಗೊಳ್ಳುತ್ತಾನೆ ಮತ್ತು ಅವನ ಗಂಡುಮಕ್ಕಳು ಹತಿಸಲ್ಪಡುತ್ತಾರೆ. ಸೌಲನು ವಿಫಲನಾದ ರಾಜನಾಗಿ ಸಾಯುವುದರೊಂದಿಗೆ ವೃತ್ತಾಂತವು ಕೊನೆಗೊಳ್ಳುತ್ತದೆ. ದಾವೀದನು ಮಾತ್ರ ಇನ್ನೂ ಅಡಗಿಕೊಂಡೇ ಇರುತ್ತಾನೆ.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು
16:14—ಸೌಲನನ್ನು ಪೀಡಿಸುತ್ತಿದ್ದ “ದುರಾತ್ಮವು” ಏನಾಗಿತ್ತು? ಸೌಲನ ಮನಶ್ಶಾಂತಿಯನ್ನು ಕಸಿದುಕೊಂಡ ದುರಾತ್ಮವು, ಅವನ ಮನಸ್ಸು ಮತ್ತು ಹೃದಯದ ಕೆಟ್ಟ ಪ್ರವೃತ್ತಿ, ಅಂದರೆ ಕೆಟ್ಟದ್ದನ್ನು ಮಾಡುವ ಅವನ ಆಂತರಿಕ ಪ್ರೇರಣೆಯೇ ಆಗಿತ್ತು. ಯೆಹೋವನು ತನ್ನ ಪವಿತ್ರಾತ್ಮವನ್ನು ಅವನಿಂದ ಹಿಂದೆಗೆದಾಗ, ಸೌಲನು ಅದರ ಸಂರಕ್ಷಣೆಯನ್ನು ಕಳೆದುಕೊಂಡನು ಮತ್ತು ತನ್ನ ಸ್ವಂತ ದುರಾತ್ಮವೇ ಅವನನ್ನು ಅಂಕೆಯಲ್ಲಿಟ್ಟಿತು. ತನ್ನ ಪವಿತ್ರಾತ್ಮದ ಸ್ಥಾನವನ್ನು ಆ ಆತ್ಮವು ತೆಗೆದುಕೊಳ್ಳುವಂತೆ ದೇವರು ಅನುಮತಿಸಿದ್ದರಿಂದ, ಈ ದುರಾತ್ಮವನ್ನು “ಯೆಹೋವನಿಂದ ಬಂದ ದುರಾತ್ಮ” ಎಂದು ಹೇಳಲಾಗಿದೆ.
17:55—ಒಂದನೇ ಸಮುವೇಲ 16:17-23ನ್ನು ಪರಿಗಣಿಸುವಾಗ, ದಾವೀದನು ಯಾರ ಮಗನೆಂದು ಸೌಲನು ಕೇಳಿದ್ದೇಕೆ? ಸೌಲನು ವಿಚಾರಿಸಿದ್ದು ಕೇವಲ ದಾವೀದನ ತಂದೆಯ ಹೆಸರನ್ನು ತಿಳಿದುಕೊಳ್ಳಲಿಕ್ಕಾಗಿ ಅಲ್ಲ. ಒಬ್ಬ ದೈತ್ಯನನ್ನು ಕೊಲ್ಲುವ ಅದ್ಭುತಕರ ಕೃತ್ಯವನ್ನು ಸಾಧಿಸಿದ ಒಬ್ಬ ಹುಡುಗನನ್ನು ಬೆಳೆಸಿದಂಥ ತಂದೆಯು ಎಂಥವನಾಗಿರಬಹುದೆಂಬುದನ್ನು ಅವನು ತಿಳಿದುಕೊಳ್ಳಲು ಬಯಸಿರುವುದು ಸಂಭವನೀಯ.
ನಮಗಾಗಿರುವ ಪಾಠಗಳು:
16:6, 7. ಇತರರ ಬಾಹ್ಯ ರೂಪದಿಂದ ಪ್ರಭಾವಿತರಾಗುವುದಕ್ಕೆ ಬದಲಾಗಿ ಅಥವಾ ಹಿಂದೆಮುಂದೆ ಆಲೋಚಿಸದೆ ಅವರ ವಿಷಯದಲ್ಲಿ ತೀರ್ಮಾನಕ್ಕೆ ಬರುವ ಬದಲಾಗಿ, ಯೆಹೋವನು ಅವರನ್ನು ಹೇಗೆ ಪರಿಗಣಿಸುತ್ತಾನೋ ಅದೇ ರೀತಿಯಲ್ಲಿ ನಾವು ಅವರನ್ನು ಪರಿಗಣಿಸಲು ಪ್ರಯತ್ನಿಸಬೇಕು.
17:47-50. “ಯುದ್ಧಫಲವು ಯೆಹೋವನ ಕೈಯಲ್ಲಿ” ಇರುವುದರಿಂದ, ಗೊಲ್ಯಾತನಂಥ ವೈರಿಗಳಿಂದ ಬರುವ ವಿರೋಧ ಅಥವಾ ಹಿಂಸೆಯನ್ನು ನಾವು ಧೈರ್ಯದಿಂದ ಎದುರಿಸಸಾಧ್ಯವಿದೆ.
18:1, 3; 20:41, 42. ಯೆಹೋವನನ್ನು ಪ್ರೀತಿಸುವವರ ನಡುವೆ ನಿಜ ಸ್ನೇಹಿತರನ್ನು ಕಂಡುಕೊಳ್ಳಸಾಧ್ಯವಿದೆ.
21:12, 13. ಜೀವನದಲ್ಲಿ ಎದುರಾಗುವ ಕಷ್ಟಕರ ಸನ್ನಿವೇಶಗಳೊಂದಿಗೆ ವ್ಯವಹರಿಸಲು ನಮ್ಮ ಆಲೋಚನಾ ಸಾಮರ್ಥ್ಯಗಳನ್ನೂ ಕೌಶಲಗಳನ್ನೂ ಉಪಯೋಗಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಆತನು ನಮಗೆ ತನ್ನ ಪ್ರೇರಿತ ವಾಕ್ಯವನ್ನು ಕೊಟ್ಟಿದ್ದಾನೆ; ಇದು ನಾವು ಜಾಣತನ, ತಿಳುವಳಿಕೆ ಮತ್ತು ಬುದ್ಧಿಯನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 1:4) ಮತ್ತು ನೇಮಿತ ಕ್ರೈಸ್ತ ಹಿರಿಯರ ಸಹಾಯವೂ ನಮಗಿದೆ.
24:6; 26:11. ಯೆಹೋವನಿಂದ ಅಭಿಷೇಕಿತನಾಗಿರುವವನಿಗೆ ನಿಜವಾದ ಗೌರವವನ್ನು ತೋರಿಸುವ ವಿಷಯದಲ್ಲಿ ದಾವೀದನು ಎಷ್ಟು ಅತ್ಯುತ್ತಮವಾದ ಮಾದರಿಯನ್ನು ಇಟ್ಟಿದ್ದಾನೆ!
25:23-33. ಅಬೀಗೈಲಳ ಬುದ್ಧಿವಂತಿಕೆಯು ಆದರ್ಶಪ್ರಾಯವಾದದ್ದಾಗಿದೆ.
28:8-19. ಜನರನ್ನು ತಪ್ಪುದಾರಿಗೆಳೆಯುವ ಅಥವಾ ಅವರಿಗೆ ಹಾನಿಮಾಡುವ ಪ್ರಯತ್ನದಲ್ಲಿ ದುರಾತ್ಮಗಳು ನಿರ್ದಿಷ್ಟ ಮೃತವ್ಯಕ್ತಿಗಳಂತೆ ತೋರಿಬರಸಾಧ್ಯವಿದೆ. ಎಲ್ಲಾ ರೀತಿಯ ಪ್ರೇತಾತ್ಮವಾದದಿಂದ ನಾವು ದೂರವಿರಬೇಕು.—ಧರ್ಮೋಪದೇಶಕಾಂಡ 18:10-12.
30:23, 24. ಅರಣ್ಯಕಾಂಡ 31:27ರ ಮೇಲಾಧಾರಿತವಾದ ಈ ನಿರ್ಣಯವು, ಸಭೆಯಲ್ಲಿ ಬೆಂಬಲಾತ್ಮಕ ಪಾತ್ರಗಳಲ್ಲಿ ಕಾರ್ಯನಿರ್ವಹಿಸುವವರನ್ನು ಯೆಹೋವನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಆದುದರಿಂದ, ನಾವೇನೇ ಮಾಡಲಿ ಅದನ್ನು ‘ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ’ ಮಾಡೋಣ.—ಕೊಲೊಸ್ಸೆ 3:23.
ಯಾವುದು ‘ಯಜ್ಞಕ್ಕಿಂತ ಉತ್ತಮವಾಗಿದೆ’?
ಏಲಿ, ಸಮುವೇಲ, ಸೌಲ ಮತ್ತು ದಾವೀದರ ಅನುಭವಗಳಿಂದ ಯಾವ ಮೂಲಭೂತ ಸತ್ಯವು ಒತ್ತಿಹೇಳಲ್ಪಟ್ಟಿದೆ? ಅದೇನೆಂದರೆ, “ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ. ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದಾಗಿರುವದು; ಹಟವು ಮಿಥ್ಯಾಭಕ್ತಿಗೂ ವಿಗ್ರಹಾರಾಧನೆಗೂ ಸಮಾನವಾಗಿರುವುದು.”—1 ಸಮುವೇಲ 15:22, 23.
ಲೋಕವ್ಯಾಪಕವಾಗಿ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳುವ ಎಂಥ ಸುಯೋಗ ನಮಗಿದೆ! ನಾವು “ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು” ಯೆಹೋವನಿಗೆ ಅರ್ಪಿಸುವಾಗ, ಆತನು ತನ್ನ ಲಿಖಿತ ವಾಕ್ಯದ ಮೂಲಕ ಮತ್ತು ತನ್ನ ಭೂಸಂಘಟನೆಯ ಮೂಲಕ ನಮಗೆ ನೀಡುವ ನಿರ್ದೇಶನಕ್ಕೆ ವಿಧೇಯರಾಗಲು ನಾವು ನಮ್ಮಿಂದಾದಷ್ಟು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಿಸಬೇಕು.—ಹೋಶೇಯ 14:2; ಇಬ್ರಿಯ 13:15.
[ಪಾದಟಿಪ್ಪಣಿ]
a ಒಂದನೇ ಸಮುವೇಲ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಬೇರೆ ಬೇರೆ ಸ್ಥಳಗಳನ್ನು ಕಂಡುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ‘ಒಳ್ಳೆಯ ದೇಶವನ್ನು ನೋಡಿ’ ಎಂಬ ಬ್ರೋಷರಿನ 18-19ನೆಯ ಪುಟಗಳನ್ನು ನೋಡಿ.
[ಪುಟ 23ರಲ್ಲಿರುವ ಚಿತ್ರ]
ದೀನಭಾವದವನೂ ವಿನಯಶೀಲನೂ ಆಗಿದ್ದ ಇಸ್ರಾಯೇಲ್ಯರ ಮೊದಲ ಅರಸನು ಕಾಲಕ್ರಮೇಣ ಅಹಂಕಾರಿಯೂ ದುರಭಿಮಾನಿಯೂ ಆದ ರಾಜನಾಗಿ ಪರಿಣಮಿಸಿದನು
[ಪುಟ 24ರಲ್ಲಿರುವ ಚಿತ್ರ]
ಗೊಲ್ಯಾತನಂಥ ವೈರಿಗಳಿಂದ ನಾವು ವಿರೋಧವನ್ನು ಎದುರಿಸುವಾಗ ಯಾವ ದೃಢವಿಶ್ವಾಸ ನಮಗಿರಸಾಧ್ಯವಿದೆ?