ನೀವು ಯೇಸುವಿನ ಸಾನ್ನಿಧ್ಯದ ಸೂಚನೆಯನ್ನು ಗ್ರಹಿಸುತ್ತೀರೋ?
ಗಂಭೀರವಾದ ಕಾಯಿಲೆಗೆ ತುತ್ತಾಗುವುದನ್ನು ಅಥವಾ ಒಂದು ದುರಂತದಲ್ಲಿ ಸಿಕ್ಕಿಕೊಳ್ಳುವುದನ್ನು ಯಾರೂ ಇಷ್ಟಪಡಲಿಕ್ಕಿಲ್ಲ. ಇಂತಹ ವಿಪತ್ತುಗಳನ್ನು ತಪ್ಪಿಸಲಿಕ್ಕಾಗಿ ವಿವೇಕಿಯಾದ ಒಬ್ಬ ಮನುಷ್ಯನು ಅಪಾಯಕ್ಕೆ ಕೈತೋರಿಸುವ ಸೂಚನೆಗಳನ್ನು ಕಂಡುಕೊಳ್ಳುವುದರಲ್ಲಿ ಜಾಗರೂಕನಾಗಿರುತ್ತಾನೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಿಯೆಗೈಯುತ್ತಾನೆ. ನಾವು ಗ್ರಹಿಸಿಕೊಳ್ಳಬೇಕಾದ ಒಂದು ನಿರ್ದಿಷ್ಟ ಸೂಚನೆಯ ಕುರಿತು ಯೇಸು ಕ್ರಿಸ್ತನು ಮಾತಾಡಿದನು. ಅವನು ಯಾವುದರ ಕುರಿತು ಮಾತಾಡುತ್ತಿದ್ದನೋ ಅದು, ಲೋಕವ್ಯಾಪಕವಾಗಿ ಪ್ರಭಾವ ಬೀರಲಿತ್ತು ಮತ್ತು ಇಡೀ ಮಾನವಕುಲವನ್ನು ಬಾಧಿಸಲಿತ್ತು. ಇದರಲ್ಲಿ ನೀವು ಮತ್ತು ನಿಮ್ಮ ಕುಟುಂಬವು ಸೇರಿದೆ.
ದುಷ್ಟತನವನ್ನು ತೆಗೆದುಹಾಕುವ ಮತ್ತು ಈ ಭೂಮಿಯನ್ನು ಒಂದು ಪರದೈಸಾಗಿ ಮಾರ್ಪಡಿಸುವ ದೇವರ ರಾಜ್ಯದ ಕುರಿತು ಯೇಸು ಮಾತಾಡುತ್ತಿದ್ದನು. ಅವನ ಶಿಷ್ಯರಿಗೆ ಇದರ ಬಗ್ಗೆ ಕುತೂಹಲವಿತ್ತು ಮತ್ತು ಆ ರಾಜ್ಯವು ಯಾವಾಗ ಬರುವುದು ಎಂಬುದನ್ನು ಅವರು ತಿಳಿಯಲು ಬಯಸಿದರು. ಅವರು ಕೇಳಿದ್ದು: “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ [ನಿನ್ನ ಸಾನ್ನಿಧ್ಯಕ್ಕೂ] ಯುಗದ [ವಿಷಯಗಳ ವ್ಯವಸ್ಥೆಯ] ಸಮಾಪ್ತಿಗೂ ಸೂಚನೆಯೇನು?”—ಮತ್ತಾಯ 24:3.
ತಾನು ವಧಿಸಲ್ಪಟ್ಟು ಪುನರುತ್ಥಾನ ಹೊಂದಿದ ನಂತರ, ಹಲವಾರು ಶತಮಾನಗಳು ಕಳೆದ ಬಳಿಕವೇ ಮಾನವಕುಲದ ಮೇಲೆ ಆಳುವಂತೆ ತಾನು ಪರಲೋಕದಲ್ಲಿ ಮೆಸ್ಸೀಯ ರಾಜನಾಗಿ ನೇಮಿಸಲ್ಪಡುವೆನು ಎಂಬುದು ಯೇಸುವಿಗೆ ತಿಳಿದಿತ್ತು. ಅವನು ಪಟ್ಟಕ್ಕೇರುವುದು ಮಾನವರಿಗೆ ಅದೃಶ್ಯವಾಗಿರಲಿರುವುದರಿಂದ, ಯೇಸು ತನ್ನ ಶಿಷ್ಯರಿಗೆ ಒಂದು ಸೂಚನೆಯನ್ನು ಕೊಟ್ಟನು. ಇದು ಅವನ ‘ಸಾನ್ನಿಧ್ಯವನ್ನು’ ಹಾಗೂ ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು’ ಗ್ರಹಿಸಿಕೊಳ್ಳುವಂತೆ ಅವನ ಹಿಂಬಾಲಕರಿಗೆ ಸಹಾಯಮಾಡಲಿಕ್ಕಿತ್ತು. ಈ ಸೂಚನೆಯಲ್ಲಿ ವಿವಿಧ ವೈಶಿಷ್ಟ್ಯಗಳುಂಟು. ಇವೆಲ್ಲವನ್ನೂ ಒಟ್ಟು ಸೇರಿಸುವಾಗ ನಮಗೆ ಒಂದು ಸಂಯೋಜಿತ ಗುರುತು ಚಿಹ್ನೆ ಅಥವಾ ಸಂಕೇತ ಸಿಗುತ್ತದೆ ಮತ್ತು ಅದು ಯೇಸುವಿನ ಸಾನ್ನಿಧ್ಯಕ್ಕೆ ಕೈತೋರಿಸುತ್ತದೆ.
ಸುವಾರ್ತಾ ಲೇಖಕರಾದ ಮತ್ತಾಯ, ಮಾರ್ಕ ಮತ್ತು ಲೂಕರು ಯೇಸುವಿನ ಉತ್ತರವನ್ನು ಜಾಗ್ರತೆಯಿಂದ ನಮೂದಿಸಿದರು. (ಮತ್ತಾಯ, ಅಧ್ಯಾಯಗಳು 24 ಮತ್ತು 25; ಮಾರ್ಕ, ಅಧ್ಯಾಯ 13; ಲೂಕ, ಅಧ್ಯಾಯ 21) ಇತರ ಬೈಬಲ್ ಲೇಖಕರು ಈ ಸೂಚನೆಗೆ ಸಂಬಂಧಿಸಿದ ಹೆಚ್ಚಿನ ವಿವರಣೆಗಳನ್ನು ನೀಡಿದರು. (2 ತಿಮೊಥೆಯ 3:1-5; 2 ಪೇತ್ರ 3:3, 4; ಪ್ರಕಟನೆ 6:1-8; 11:18) ಆ ವಿವರಣೆಗಳಲ್ಲಿ ಪ್ರತಿಯೊಂದನ್ನು ನಿಕಟವಾಗಿ ಪರಿಶೀಲಿಸಲು ಈ ಲೇಖನದಲ್ಲಿ ಸ್ಥಳ ಸಾಲದು; ಆದರೆ ಯೇಸು ನೀಡಿದ ಸೂಚನೆಯ ತಿರುಳನ್ನು ನೀಡುವ ಐದು ಮುಖ್ಯ ವೈಶಿಷ್ಟ್ಯಗಳನ್ನು ನಾವು ಪರಿಗಣಿಸೋಣ. ಈ ಪರಿಶೀಲನೆಯು ಅರ್ಥಗರ್ಭಿತವಾಗಿದೆ ಮತ್ತು ನಿಮಗೆ ವೈಯಕ್ತಿಕವಾಗಿ ಪ್ರಾಮುಖ್ಯವಾಗಿದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ.—ಪುಟ 6ರಲ್ಲಿರುವ ಚೌಕವನ್ನು ನೋಡಿ.
“ಹೊಸದೊಂದು ಯುಗವನ್ನೇ ಪ್ರಾರಂಭಿಸಿದ ಸಮಯ”
“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” (ಮತ್ತಾಯ 24:7) 1914ಕ್ಕೆ ಮುಂಚೆ, “ಹೆಚ್ಚಿನ ಸ್ವಾತಂತ್ರ್ಯ, ಪ್ರಗತಿ ಮತ್ತು ಸಮೃದ್ಧಿ ತುಂಬಿರುವ ಸುವರ್ಣ ಭವಿಷ್ಯವು ಬರಲಿದೆಯೆಂದು [ಜನರು] ನಂಬಿದರು” ಎಂದು ಡೇರ್ ಶ್ಪೀಗಲ್ ಎಂಬ ಜರ್ಮನ್ ವಾರ್ತಾಪತ್ರಿಕೆಯು ವರದಿಸುತ್ತದೆ. ಆದರೆ ಅದರ ನಂತರ ಎಲ್ಲವೂ ಬದಲಾಯಿತು. “1914ರ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿ 1918ರ ನವೆಂಬರ್ ತಿಂಗಳಿನಲ್ಲಿ ಕೊನೆಗೊಂಡ ಯುದ್ಧವು ಬೆಚ್ಚಿಬೀಳುವಂತೆ ಮಾಡಿದ ಘಟನೆಯಾಗಿತ್ತು. ಇದು ಮಾನವನ ಇತಿಹಾಸದಲ್ಲೇ ಒಂದು ಹಠಾತ್ ತಿರುವನ್ನು ತಂದಿತು ಮತ್ತು ಒಂದು ಹೊಸ ಇತಿಹಾಸವನ್ನು ರಚಿಸಲು ಆರಂಭಿಸಿತು” ಎಂದು ಗೇಓ ಎಂಬ ಪತ್ರಿಕೆಯು ತಿಳಿಸುತ್ತದೆ. ಐದು ಖಂಡಗಳ ಆರು ಕೋಟಿಗಿಂತಲೂ ಹೆಚ್ಚಿನ ಸೈನಿಕರು ನಿರ್ದಯವಾಗಿ ಒಬ್ಬರ ಮೇಲೊಬ್ಬರು ಬಿದ್ದು ಕೊಂದರು. ಸರಾಸರಿಯಾಗಿ, ಪ್ರತಿ ದಿನ ಸುಮಾರು 6,000 ಮಂದಿ ಸೈನಿಕರು ಕೊಲ್ಲಲ್ಪಟ್ಟರು. ಅಂದಿನಿಂದ, ಪ್ರತಿಯೊಂದು ಸಂತತಿಯ ಮತ್ತು ವಿವಿಧ ರಾಜಕೀಯ ನಂಬಿಕೆಗಳನ್ನು ಹೊಂದಿರುವ ಇತಿಹಾಸಕಾರರು “1914ರಿಂದ 1918ರ ಅವಧಿಯನ್ನು ಹೊಸದೊಂದು ಯುಗವನ್ನೇ ಪ್ರಾರಂಭಿಸಿದ ಸಮಯ” ಎಂದು ವೀಕ್ಷಿಸಿದ್ದಾರೆ.
ಒಂದನೇ ಲೋಕ ಯುದ್ಧವು ಮಾನವ ಸಮಾಜದ ಮೇಲೆ ಮಾರ್ಪಡಿಸಲಾಗದ ಬದಲಾವಣೆಗಳನ್ನು ತಂದಿತು ಮತ್ತು ಮಾನವಕುಲವನ್ನು ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಿಗೆ ದೂಡಿತು. ಆ ಶತಮಾನದ ಉಳಿದೆಲ್ಲ ಕಾಲವು ಹೆಚ್ಚಿನ ಯುದ್ಧಗಳು, ಶಸ್ತ್ರಸಜ್ಜಿತ ಕದನಗಳು ಮತ್ತು ಭಯೋತ್ಪಾದನೆಯಿಂದ ತುಂಬಿತ್ತು. ಪ್ರಸ್ತುತ ಶತಮಾನದ ಆರಂಭದ ವರ್ಷಗಳಲ್ಲೂ ಯಾವುದೇ ಪ್ರಗತಿಯನ್ನು ನೋಡಲು ಸಾಧ್ಯವಾಗಿಲ್ಲ. ಯುದ್ಧ ಮಾತ್ರವಲ್ಲದೆ, ಆ ಸೂಚನೆಯ ಇತರ ವೈಶಿಷ್ಟ್ಯಗಳು ಸಹ ಈಗ ತಲೆದೋರಿವೆ.
ಕ್ಷಾಮ, ರೋಗ ಮತ್ತು ಭೂಕಂಪಗಳು
“ಬರಗಳು ಬರುವವು.” (ಮತ್ತಾಯ 24:7) ಒಂದನೇ ಲೋಕ ಯುದ್ಧದ ಸಮಯದಲ್ಲಿ ಹಸಿವು ಯೂರೋಪಿನ ಜನರನ್ನು ಬಾಧಿಸಿತು ಮತ್ತು ಆ ಸಮಯದಿಂದ ಕ್ಷಾಮವು ಮಾನವಕುಲವನ್ನು ಪೀಡಿಸುತ್ತಾ ಬಂದಿದೆ. 1933ರಲ್ಲಿ ರಷ್ಯಾ ಮತ್ತು ಯೂಕ್ರೇನ್ನಲ್ಲಿ, “ಹಸಿದಿದ್ದ ಜನರ ದೊಡ್ಡ ದೊಡ್ಡ ಗುಂಪುಗಳು ಹಳ್ಳಿಗಾಡುಗಳಲ್ಲಿ ಗೊತ್ತುಗುರಿಯಿಲ್ಲದೆ ಸುತ್ತಾಡುತ್ತಿದ್ದವು . . . ರಸ್ತೆಬದಿಗಳಲ್ಲಿ ಶವಗಳನ್ನು ಕೂಡಿಹಾಕಲಾಗುತ್ತಿತ್ತು” ಎಂದು ಇತಿಹಾಸಕಾರರಾದ ಆ್ಯಲನ್ ಬುಲಕ್ ಬರೆದರು. 1943ರಲ್ಲಿ ಪತ್ರಕರ್ತರಾದ ಟಿ. ಎಚ್. ವೈಟ್ರವರು ಚೈನೀಸ್ ಪ್ರಾಂತವಾದ ಹನಾನ್ನಲ್ಲಿ ಬಂದ ಕ್ಷಾಮದ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅವರು ಬರೆದದ್ದು: “ಕ್ಷಾಮವು ಬಂತೆಂದರೆ ಹೆಚ್ಚುಕಡಿಮೆ ಯಾವ ವಸ್ತುವೂ ಆಹಾರಯೋಗ್ಯವಾಗುತ್ತದೆ. ಆಗ ಜನರು ಯಾವುದೇ ವಸ್ತುವನ್ನು ತಿನ್ನುವ ಯತ್ನಕ್ಕೆ ಕೈಹಾಕುತ್ತಾರೆ. ಆದರೆ ಇದು ವರೆಗೆ ತಿನ್ನಲಸಾಧ್ಯವಾದ ಒಂದು ವಸ್ತುವನ್ನು ತಿನ್ನುವಂತೆ ಒಬ್ಬ ವ್ಯಕ್ತಿಯನ್ನು ಪ್ರೇರಿಸುವದು ಮರಣಭಯವೇ ಆಗಿದೆ.” ಶೋಚನೀಯವಾಗಿ, ಇತ್ತೀಚಿನ ದಶಕಗಳಲ್ಲಿ ಕ್ಷಾಮವು ಆಫ್ರಿಕದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಭೂಮಿಯು ಎಲ್ಲರಿಗೋಸ್ಕರವಾಗಿ ಸಾಕಷ್ಟು ಆಹಾರವನ್ನು ಉತ್ಪಾದಿಸುವುದಾದರೂ, ಲೋಕವ್ಯಾಪಕವಾಗಿ 84 ಕೋಟಿ ಜನರಿಗೆ ತಿನ್ನಲು ಅತಿ ಸ್ವಲ್ಪ ಆಹಾರ ಮಾತ್ರ ಇದೆ ಎಂದು ‘ಯು.ಎನ್. ಆಹಾರ ಮತ್ತು ವ್ಯವಸಾಯ ಸಂಸ್ಥೆ’ (FAO) ತಿಳಿಸುತ್ತದೆ.
‘ಅಲ್ಲಲ್ಲಿ ಉಪದ್ರವ [ವ್ಯಾಧಿ]ಗಳು ಬರುವವು.’ (ಲೂಕ 21:11) “ಸ್ಪ್ಯಾನಿಷ್ ಇನ್ಫ್ಲೂಎನ್ಸಾ 1918ರಲ್ಲಿ ಎರಡರಿಂದ ಐದು ಕೋಟಿ ಜನರನ್ನು ಆಹುತಿತೆಗೆದುಕೊಂಡಿತು ಎಂದು ಅಂದಾಜುಮಾಡಲಾಗಿದೆ; ಇದು ಪ್ಲೇಗ್ ರೋಗ ಅಥವಾ ಒಂದನೇ ಲೋಕ ಯುದ್ಧದಲ್ಲಿ ಹತರಾದವರ ಸಂಖ್ಯೆಗಿಂತ ಹೆಚ್ಚಾಗಿತ್ತು” ಎಂದು ಸುಎಟ್ಡೈಚೆ ಟ್ಸೈಟುಂಗ್ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಆ ಸಮಯದಿಂದ ಎಣಿಸಲಸಾಧ್ಯವಾದ ಸಂಖ್ಯೆಯಲ್ಲಿ ಜನರು ಮಲೇರಿಯಾ, ಸಿಡುಬು, ಕ್ಷಯ, ಪೋಲಿಯೊ ಮತ್ತು ಕಾಲರ ರೋಗಗಳಿಗೆ ತುತ್ತಾಗಿದ್ದಾರೆ. ಮತ್ತು ಅನಿಯಂತ್ರಿತ ರೀತಿಯಲ್ಲಿ ಸೋಂಕನ್ನು ಹರಡಿಸುತ್ತಿರುವ ಏಡ್ಸ್ ರೋಗವನ್ನು ನೋಡಿ ಲೋಕವು ಬೆಚ್ಚಿಬಿದ್ದಿದೆ. ಆಶ್ಚರ್ಯಚಕಿತಗೊಳಿಸುವ ವೈದ್ಯಕೀಯ ಮುನ್ನಡೆಯೊಂದಿಗೆ ರೋಗವು ಸಹ ಜೊತೆ ಜೊತೆಯಾಗಿ ಹೆಜ್ಜೆಹಾಕುತ್ತಿರುವ ಈ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಇದುವರೆಗೆ ಮಾನವಕುಲಕ್ಕೆ ತಿಳಿದಿಲ್ಲದಿದ್ದ ಈ ಅಸಮಂಜಸ ಸಂಗತಿಯು, ನಾವು ಅಸಾಧಾರಣವಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ.
“ಭೂಕಂಪಗಳು.” (ಮತ್ತಾಯ 24:7) ಕಳೆದ 100 ವರ್ಷಗಳಲ್ಲಿ, ಭೂಕಂಪಗಳು ನೂರಾರು ಸಾವಿರ ಜನರ ಜೀವಗಳನ್ನು ಕಬಳಿಸಿಬಿಟ್ಟಿವೆ. ಒಂದು ಮೂಲಕ್ಕನುಸಾರ, ಕಟ್ಟಡಗಳನ್ನು ಕೆಡವಿಬಿಡುವ ಮತ್ತು ನೆಲವನ್ನು ಸೀಳಿಬಿಡುವಷ್ಟು ಶಕ್ತಿಯನ್ನು ಹೊಂದಿರುವ ಭೂಕಂಪಗಳು 1914ರಿಂದ ವರ್ಷಕ್ಕೆ 18 ಎಂಬ ಸರಾಸರಿಯಲ್ಲಿ ಸಂಭವಿಸುತ್ತಿವೆ. ಇದಕ್ಕಿಂತಲೂ ಹೆಚ್ಚು ಭೀಕರವಾದ, ಕಟ್ಟಡಗಳನ್ನು ನೆಲಸಮಮಾಡುವಷ್ಟು ಪ್ರಮಾಣದ ಕಂಪನಗಳು ಹೆಚ್ಚುಕಡಿಮೆ ವರ್ಷದಲ್ಲಿ ಒಮ್ಮೆಯಾದರೂ ಸಂಭವಿಸುತ್ತವೆ. ತಂತ್ರಜ್ಞಾನದಲ್ಲಿ ಪ್ರಗತಿ ಮಾಡಲ್ಪಟ್ಟಿರುವುದಾದರೂ ಭೂಕಂಪದಿಂದ ಸಾಯುವವರ ಪ್ರಮಾಣದಲ್ಲಿ ಯಾವುದೇ ಇಳಿತವು ಕಂಡುಬಂದಿಲ್ಲ; ಕಾರಣವೇನೆಂದರೆ, ಶೀಘ್ರವಾಗಿ ಪ್ರಗತಿಹೊಂದುತ್ತಿರುವ ಅನೇಕ ಪಟ್ಟಣಗಳು ಭೂಕಂಪ ಸಂಭಾವ್ಯ ರೇಖೆಗಳೊಳಗೆ ನೆಲೆಸಿವೆ.
ಸಂತೋಷದ ಸುದ್ದಿ!
ಕಡೇ ದಿವಸಗಳ ಸೂಚನೆಗೆ ಸಂಬಂಧಪಟ್ಟ ಹೆಚ್ಚಿನ ವೈಶಿಷ್ಟ್ಯಗಳು ದುಃಖಕರವಾಗಿವೆ ನಿಜ. ಆದರೆ ಯೇಸು ಒಂದು ಸಂತೋಷದ ಸುದ್ದಿಯ ಕುರಿತಾಗಿಯೂ ಹೇಳಿದನು.
“ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” (ಮತ್ತಾಯ 24:14) ಯೇಸು ಸ್ವತಃ ಆರಂಭಿಸಿದ ಕೆಲಸವು, ಅಂದರೆ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುವ ಕೆಲಸವು ಕಡೇ ದಿವಸಗಳಲ್ಲಿ ಅದರ ಪರಾಕಾಷ್ಠೆಯನ್ನು ಮುಟ್ಟುವುದು. ಇದು ನಿಜವಾಗಿಯೂ ಸಂಭವಿಸುತ್ತಾ ಇದೆ. ಯೆಹೋವನ ಸಾಕ್ಷಿಗಳು ಬೈಬಲಿನ ಸಂದೇಶವನ್ನು ಸಾರುತ್ತಿದ್ದಾರೆ ಮತ್ತು ತಾವು ಏನನ್ನು ಕಲಿಯುತ್ತಾರೋ ಅದನ್ನು ದಿನನಿತ್ಯದ ಜೀವಿತದಲ್ಲಿ ಅಳವಡಿಸಿಕೊಳ್ಳುವಂತೆ ಆಸಕ್ತ ಜನರಿಗೆ ಬೋಧಿಸುತ್ತಿದ್ದಾರೆ. ಸದ್ಯದಲ್ಲಿ, 60 ಲಕ್ಷಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು 235 ದೇಶಗಳಲ್ಲಿ 400ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಸಾರುತ್ತಿದ್ದಾರೆ.
ಲೋಕದ ಶೋಚನೀಯ ಪರಿಸ್ಥಿತಿಗಳಿಂದಾಗಿ ಎಲ್ಲವೂ ಅಂತ್ಯವಾಗಲಿದೆ ಎಂದು ಯೇಸು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ಅಥವಾ ಈ ಇಡೀ ಲೋಕದಲ್ಲಿ ಆ ಸೂಚನೆಯ ಒಂದೇ ಒಂದು ವೈಶಿಷ್ಟ್ಯವು ಮಾತ್ರ ಎದ್ದುಕಾಣುವುದು ಎಂದು ಸಹ ಅವನು ಹೇಳಲಿಲ್ಲ. ಆದರೆ ಒಂದು ಸಂಯೋಜಿತ ಸೂಚನೆಯ ಭಾಗವಾಗಿರುವ ಹಲವಾರು ಘಟನೆಗಳನ್ನು ಅವನು ಮುಂತಿಳಿಸಿದನು ಮತ್ತು ಇದನ್ನು ಭೂಮಿಯಲ್ಲಿ ಎಲ್ಲೇ ಇದ್ದರೂ ಗ್ರಹಿಸಲು ಸಾಧ್ಯವಿರುವುದು.
ಒಂದೊಂದೇ ಘಟನೆಗಳು ಅಥವಾ ಪ್ರತ್ಯೇಕವಾದ ಸನ್ನಿವೇಶಗಳ ಮೇಲೆ ಗಮನಹರಿಸದೆ ಎಲ್ಲವನ್ನು ಒಟ್ಟಾಗಿ ನೋಡುವಾಗ, ಅದರಲ್ಲಿ ನೀವು ಒಂದು ನಮೂನೆಯನ್ನು, ಭೌಗೋಳಿಕ ಪ್ರಮುಖತೆಯನ್ನು ಹೊಂದಿರುವ ಸಂಯೋಜಿತ ಸೂಚನೆಯೊಂದನ್ನು ಕಾಣುತ್ತೀರೋ? ಭೂಮಿಯ ಮೇಲೆ ಏನು ಸಂಭವಿಸುತ್ತಿದೆಯೋ ಅದು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಬಾಧಿಸುತ್ತದೆ. ಆದರೆ, ಯಾಕೆ ಹೆಚ್ಚು ಜನರು ಇದಕ್ಕೆ ಗಮನಕೊಡುತ್ತಿಲ್ಲ? ಎಂದು ನಾವು ಕೇಳಬಹುದು.
ವೈಯಕ್ತಿಕ ಅಭಿರುಚಿಗಳಿಗೆ ಪ್ರಾಧಾನ್ಯ
“ಈಜಬಾರದು,” “ಅಪಾಯ,” “ವೇಗವನ್ನು ಕಡಿಮೆಗೊಳಿಸಿ.” ಇವು ನಮ್ಮ ಕಣ್ಣಿಗೆ ಬೀಳುವಂಥ ಸೂಚನೆಗಳು ಮತ್ತು ಎಚ್ಚರಿಕೆಗಳು; ಇವನ್ನು ಹೆಚ್ಚಿನಾಂಶ ಅಲಕ್ಷ್ಯಿಸಲಾಗುತ್ತದೆ. ಏಕೆ? ನಮಗೆ ವೈಯಕ್ತಿಕವಾಗಿ ಯಾವುದು ಒಳ್ಳೆಯದು ಎಂದು ತೋರುತ್ತದೋ ಅದಕ್ಕೆ ನಾವು ಹೆಚ್ಚು ಪ್ರಾಧಾನ್ಯ ಕೊಡುವವರಾಗಿರುತ್ತೇವೆ. ಉದಾಹರಣೆಗೆ, ನಿಯಮವು ಅನುಮತಿಸುವುದಕ್ಕಿಂತ ಹೆಚ್ಚು ವೇಗವಾಗಿ ಚಲಿಸಬೇಕು ಎಂದು ನಮಗೆ ತೋರಬಹುದು ಅಥವಾ ಎಲ್ಲಿ ನಿಷೇಧಿಸಲ್ಪಟ್ಟಿದೆಯೋ ಅಲ್ಲಿ ಈಜುವ ಕಡುಬಯಕೆ ನಮ್ಮಲ್ಲಿ ಉಂಟಾಗಬಹುದು. ಆದರೆ ಸೂಚನೆಗಳನ್ನು ಅಲಕ್ಷ್ಯಮಾಡುವುದು ವಿವೇಕಯುತವಾಗಿರುವುದಿಲ್ಲ.
ದೃಷ್ಟಾಂತಕ್ಕೆ ಆಸ್ಟ್ರೀಯ, ಇಟಲಿ, ಫ್ರಾನ್ಸ್ ಮತ್ತು ಸ್ವಿಟ್ಸರ್ಲೆಂಡ್ನ ಆ್ಯಲ್ಪ್ಸ್ ಪರ್ವತಗಳಲ್ಲಿ ಸಂಭವಿಸುವ ಹಿಮಪ್ರವಾಹಗಳು, ಸುರಕ್ಷಿತ ಮಾರ್ಗಗಳಲ್ಲಿ ಮಾತ್ರ ಸ್ಕೀ (ಹಿಮಜಾರಾಟ) ಮಾಡುವಂತೆ ಕೋರುವ ಎಚ್ಚರಿಕೆಗಳನ್ನು ಅಲಕ್ಷ್ಯಮಾಡುವ ಪ್ರವಾಸಿಗರ ಜೀವಗಳನ್ನು ಆಹುತಿ ತೆಗೆದುಕೊಳ್ಳುತ್ತವೆ. ಸುಎಟ್ಡೈಚೆ ಟ್ಸೈಟುಂಗ್ಗನುಸಾರ, ಇಂತಹ ಎಚ್ಚರಿಕೆಗಳನ್ನು ಅಲಕ್ಷ್ಯಮಾಡುವ ಅನೇಕ ಪ್ರವಾಸಿಗರು, ‘ರಿಸ್ಕ್ ಇಲ್ಲದೆ ಮಜಾ ಸಿಗುವುದಿಲ್ಲ’ ಎಂಬ ಧ್ಯೇಯವನ್ನು ಹೊಂದಿದವರಾಗಿದ್ದಾರೆ. ವಿಷಾದಕರವಾಗಿ, ಎಚ್ಚರಿಕೆಗಳನ್ನು ಅಲಕ್ಷ್ಯಮಾಡುವುದು ದುರಂತಮಯ ಪರಿಣಾಮಗಳನ್ನು ತಂದೊಡ್ಡಸಾಧ್ಯವಿದೆ.
ಯೇಸು ವರ್ಣಿಸಿದಂಥ ಸೂಚನೆಯನ್ನು ಅಲಕ್ಷಿಸಲು ಜನರಿಗೆ ಯಾವ ಕಾರಣಗಳಿರಬಹುದು? ಅವರು ದುರಾಶೆಯಿಂದ ಕುರುಡುಗೊಳಿಸಲ್ಪಟ್ಟಿರಬಹುದು, ಜೀವಿಸುವುದರಲ್ಲಿ ಆಸಕ್ತಿಯನ್ನು ಕಳೆದುಕೊಂಡಿರಬಹುದು, ಯಾವುದೊಂದನ್ನೂ ನಿರ್ಧಾರಮಾಡಲಿಕ್ಕಾಗದೆ ಕಕ್ಕಾಬಿಕ್ಕಿಯಾಗಿರಬಹುದು, ದಿನಂಪ್ರತಿಯ ವಿಷಯಗಳಿಂದ ಕುಗ್ಗಿಹೋಗಿರಬಹುದು ಅಥವಾ ಅವರ ಅಂತಸ್ತನ್ನು ಕಳೆದುಕೊಳ್ಳುವ ಭಯದಲ್ಲಿ ಸಿಕ್ಕಿಕೊಂಡಿರಬಹುದು. ಇಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಯೇಸುವಿನ ಸಾನ್ನಿಧ್ಯದ ಸೂಚನೆಯನ್ನು ನೀವು ಅಲಕ್ಷಿಸುವಂತೆ ಮಾಡುತ್ತಿದೆಯೋ? ಸೂಚನೆಯನ್ನು ಅಲಕ್ಷಿಸುವ ಬದಲಿಗೆ, ಅದನ್ನು ಗ್ರಹಿಸಿಕೊಂಡು ತಕ್ಕ ಕ್ರಿಯೆಯನ್ನು ಕೈಗೊಳ್ಳುವುದು ವಿವೇಕಯುತವಲ್ಲವೇ?
ಪರದೈಸ್ ಭೂಮಿಯಲ್ಲಿ ಜೀವನ
ಹೆಚ್ಚು ಹೆಚ್ಚಿನ ಜನರು ಯೇಸುವಿನ ಸಾನ್ನಿಧ್ಯದ ಸೂಚನೆಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ. ಜರ್ಮನಿಯಲ್ಲಿರುವ ಕ್ರಿಸ್ಟೀಯಾನ್ ಎಂಬ ಒಬ್ಬ ಯುವ ವಿವಾಹಿತ ವ್ಯಕ್ತಿ ಬರೆಯುವುದು: “ಇವು ಅಂಧಕಾರದ ದಿನಗಳು. ನಾವು ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೆ ಎಂಬುದು ಖಂಡಿತ.” ಅವನು ಮತ್ತು ಅವನ ಹೆಂಡತಿ, ಮೆಸ್ಸೀಯ ರಾಜ್ಯದ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುತ್ತಾರೆ. ಫ್ರಾಂಕ್ ಎಂಬವನು ಅದೇ ದೇಶದಲ್ಲಿ ವಾಸಿಸುತ್ತಾನೆ. ಅವನು ಮತ್ತು ಅವನ ಹೆಂಡತಿ ಬೈಬಲಿನಿಂದ ಸುವಾರ್ತೆಯನ್ನು ನೀಡುವ ಮೂಲಕ ಇತರರನ್ನು ಪ್ರೋತ್ಸಾಹಿಸುತ್ತಾರೆ. ಫ್ರಾಂಕ್ ಹೇಳುವುದು: “ಈ ಲೋಕದಲ್ಲಿರುವ ಪರಿಸ್ಥಿತಿಯಿಂದಾಗಿ, ಅನೇಕರು ಭವಿಷ್ಯತ್ತಿನ ಬಗ್ಗೆ ಚಿಂತೆಗೀಡಾಗಿದ್ದಾರೆ. ಪರದೈಸ್ ಭೂಮಿಯ ಕುರಿತು ತಿಳಿಸುವ ಬೈಬಲ್ ಪ್ರವಾದನೆಗಳನ್ನು ಉಪಯೋಗಿಸುತ್ತಾ ನಾವು ಜನರನ್ನು ಪ್ರೋತ್ಸಾಹಿಸುತ್ತೇವೆ.” ಹೀಗೆ ಕ್ರಿಸ್ಟೀಯಾನ್ ಮತ್ತು ಫ್ರಾಂಕ್ ಯೇಸು ಕೊಟ್ಟ ಸೂಚನೆಯ ಒಂದು ವೈಶಿಷ್ಟ್ಯವಾಗಿರುವ ರಾಜ್ಯದ ಸುವಾರ್ತೆಯ ಸಾರುವಿಕೆಯನ್ನು ಪೂರೈಸುತ್ತಿದ್ದಾರೆ.—ಮತ್ತಾಯ 24:14.
ಈ ಕಡೇ ದಿವಸಗಳು ಅವುಗಳ ಪರಾಕಾಷ್ಠೆಯನ್ನು ಮುಟ್ಟುವಾಗ, ಯೇಸು ಈ ಹಳೇ ವ್ಯವಸ್ಥೆ ಮತ್ತು ಅದನ್ನು ಬೆಂಬಲಿಸುವವರನ್ನು ಅಳಿಸಿಬಿಡುವನು. ಅನಂತರ ಮೆಸ್ಸೀಯ ರಾಜ್ಯವು ಭೂಮಿಯ ಮೇಲಿನ ವ್ಯವಹಾರಗಳ ಮೇಲೆ ಉಸ್ತುವಾರಿ ವಹಿಸುವುದು. ಮತ್ತು ಆಗ, ಮುಂತಿಳಿಸಲ್ಪಟ್ಟ ಹಾಗೆ ಈ ಭೂಮಿಯು ಪರದೈಸಿಕ ಪರಿಸ್ಥಿತಿಗಳನ್ನು ತಲಪುವುದು. ಮಾನವಕುಲವು ರೋಗ ಮತ್ತು ಮರಣದಿಂದ ಬಿಡುಗಡೆ ಹೊಂದುವುದು, ಮತ್ತು ಮೃತರನ್ನು ಭೂಮಿಯ ಮೇಲಿನ ಜೀವಿತಕ್ಕೆ ಪುನರುತ್ಥಾನಗೊಳಿಸಲಾಗುವುದು. ಈ ಕಾಲದ ಸೂಚನೆಯನ್ನು ಗ್ರಹಿಸಿಕೊಳ್ಳುವ ವ್ಯಕ್ತಿಗಳಿಗೆ ಈ ಎಲ್ಲ ಆನಂದಮಯವಾದ ಪ್ರತೀಕ್ಷೆಗಳು ಕಾದಿವೆ. ಆದುದರಿಂದ, ಈ ಸೂಚನೆಯ ಕುರಿತು ಮತ್ತು ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗಲಿಕ್ಕಾಗಿ ಒಬ್ಬನು ಏನು ಮಾಡಬೇಕು ಎಂಬುದರ ಕುರಿತು ಹೆಚ್ಚನ್ನು ಕಲಿಯುವುದು ವಿವೇಕಯುತವಲ್ಲವೇ? ಇದು ಎಲ್ಲರಿಗೂ ಅತಿ ತುರ್ತಿನ ವಿಷಯವಾಗಿರತಕ್ಕದ್ದು ಎಂಬುದಂತೂ ಖಂಡಿತ.—ಯೋಹಾನ 17:3.
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಂದು ಸಂಯೋಜಿತ ಸೂಚನೆಯ ಭಾಗವಾಗಿರುವ ಹಲವಾರು ಘಟನೆಗಳನ್ನು ಯೇಸು ಮುಂತಿಳಿಸಿದನು ಮತ್ತು ಇದನ್ನು ಭೂಮಿಯಲ್ಲಿ ಎಲ್ಲೇ ಇದ್ದರೂ ಗ್ರಹಿಸಲು ಸಾಧ್ಯವಿರುವುದು
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ನೀವು ಒಂದು ನಮೂನೆಯನ್ನು, ಭೌಗೋಳಿಕ ಪ್ರಮುಖತೆಯನ್ನು ಹೊಂದಿರುವ ಸಂಯೋಜಿತ ಸೂಚನೆಯೊಂದನ್ನು ಕಾಣುತ್ತೀರೋ?
[ಪುಟ 6ರಲ್ಲಿರುವ ಚೌಕ/ಚಿತ್ರಗಳು]
ಕಡೇ ದಿವಸಗಳ ಗುರುತು ಚಿಹ್ನೆಗಳು
ಅಭೂತಪೂರ್ವ ಯುದ್ಧದ ಕಾರ್ಯಾಚರಣೆ.—ಮತ್ತಾಯ 24:7; ಪ್ರಕಟನೆ 6:4.
ಕ್ಷಾಮ.—ಮತ್ತಾಯ 24:7; ಪ್ರಕಟನೆ 6:5, 6, 8.
ವ್ಯಾಧಿಗಳು.—ಲೂಕ 21:11; ಪ್ರಕಟನೆ 6:8.
ಹೆಚ್ಚುತ್ತಿರುವ ನಿಯಮರಾಹಿತ್ಯ.—ಮತ್ತಾಯ 24:12.
ಭೂಕಂಪಗಳು.—ಮತ್ತಾಯ 24:7.
ನಿಭಾಯಿಸಲು ಕಠಿನಕರವಾದ ಸಮಯಗಳು.—2 ತಿಮೊಥೆಯ 3:1.
ಅತಿಯಾದ ಹಣದಾಸೆ.—2 ತಿಮೊಥೆಯ 3:2.
ಹೆತ್ತವರಿಗೆ ಅವಿಧೇಯತೆ.—2 ತಿಮೊಥೆಯ 3:2.
ಸ್ವಾಭಾವಿಕ ಮಮತೆಯ ಕೊರತೆ.—2 ತಿಮೊಥೆಯ 3:3.
ದೇವರನ್ನು ಪ್ರೀತಿಸದೆ ಭೋಗಗಳನ್ನು ಪ್ರೀತಿಸುವುದು.—2 ತಿಮೊಥೆಯ 3:4.
ಆತ್ಮನಿಯಂತ್ರಣದ ಕೊರತೆ.—2 ತಿಮೊಥೆಯ 3:3.
ಒಳ್ಳೇದರ ಪ್ರೀತಿಯಿಲ್ಲದಿರುವುದು.—2 ತಿಮೊಥೆಯ 3:3.
ಎದುರಾಗುತ್ತಿರುವ ಅಪಾಯಕ್ಕೆ ಲಕ್ಷ್ಯಕೊಡದಿರುವುದು.—ಮತ್ತಾಯ 24:39.
ಕುಚೋದ್ಯಗಾರರು ಕೊನೆಯ ದಿವಸಗಳ ರುಜುವಾತನ್ನು ನಿರಾಕರಿಸುವುದು.—2 ಪೇತ್ರ 3:3, 4.
ದೇವರ ರಾಜ್ಯದ ಭೌಗೋಳಿಕ ಸಾರುವಿಕೆ.—ಮತ್ತಾಯ 24:14.
[ಪುಟ 5ರಲ್ಲಿರುವ ಚಿತ್ರ ಕೃಪೆ]
WWI ಸೈನಿಕರು: From the book The World War—A Pictorial History, 1919; ಬಡ ಕುಟುಂಬ: AP Photo/Aijaz Rahi; ಪೋಲಿಯೊ ರೋಗಿ: © WHO/P. Virot