ಜೀವನ ಕಥೆ
ಯೆಹೋವನು ತನ್ನನ್ನು ಕಂಡುಕೊಳ್ಳುವಂತೆ ನನಗೆ ಸಹಾಯಮಾಡಿದನು
ಫ್ಲಾರೆನ್ಸ್ ಕ್ಲಾರ್ಕ್ ಅವರು ಹೇಳಿದಂತೆ
ಆಂಗ್ಲಿಕನ್ ಚರ್ಚ್ಗೆ ಸೇರಿದವಳಾದ ನಾನು, ತೀರ ಅಸೌಖ್ಯದಲ್ಲಿದ್ದ ನನ್ನ ಗಂಡನ ಕೈಯನ್ನು ಹಿಡಿದು ಅವರು ವಾಸಿಯಾಗುವಂತೆ ದೇವರಿಗೆ ಪ್ರಾರ್ಥಿಸಿದೆ. ಒಂದುವೇಳೆ ಅವರು ಬದುಕಿ ಉಳಿದರೆ, ದೇವರು ಸಿಗುವ ವರೆಗೆ ನಾನು ಆತನನ್ನು ಹುಡುಕುತ್ತೇನೆ ಮತ್ತು ಅನಂತರ ಆತನಿಗಾಗಿಯೇ ಜೀವಿಸುತ್ತೇನೆ ಎಂದು ಮಾತುಕೊಟ್ಟೆ.
ಇಸವಿ 1937ರ ಸೆಪ್ಟೆಂಬರ್ 18ರಂದು, ಪಶ್ಚಿಮ ಆಸ್ಟ್ರೇಲಿಯದ ಒಳನಾಡು ಪ್ರದೇಶವಾದ ಕಿಂಬರ್ಲೀ ಪ್ರಸ್ಥಭೂಮಿಯ ಮೂಲ ನಿವಾಸಿಗಳ ಊಂಬುಲ್ಗರೀ ಸಮುದಾಯದಲ್ಲಿ ನಾನು ಜನಿಸಿದೆ. ನನ್ನ ಮನೆತನದ ಹೆಸರು ಫ್ಲಾರೆನ್ಸ್ ಚ್ಯೂಲನ್ ಎಂದಾಗಿತ್ತು.
ಬಾಲ್ಯದ ಚಿಂತಾರಹಿತ ಸಂತೋಷಕರ ದಿವಸಗಳ ಸವಿನೆನಪುಗಳು ಈಗಲೂ ನನ್ನ ಮನದಲ್ಲಿವೆ. ಚರ್ಚಿನ ಕ್ರೈಸ್ತ ಧರ್ಮಪ್ರಚಾರಕ ಮಂಡಲಿಯಿಂದ, ದೇವರ ಮತ್ತು ಬೈಬಲಿನ ಕುರಿತಾದ ಮೂಲಭೂತ ವಿಷಯಗಳನ್ನು ನಾನು ಕಲಿತುಕೊಂಡೆ. ಆದರೆ ಕ್ರೈಸ್ತ ಮೂಲತತ್ತ್ವಗಳನ್ನು ನನಗೆ ಕಲಿಸಿದವರು ನನ್ನ ತಾಯಿಯವರೇ ಆಗಿದ್ದರು. ಕ್ರಮವಾಗಿ ಅವರು ಬೈಬಲನ್ನು ನನ್ನೊಂದಿಗೆ ಓದುತ್ತಿದ್ದರು. ಈ ಕಾರಣದಿಂದ, ತೀರ ಚಿಕ್ಕ ಪ್ರಾಯದಲ್ಲಿಯೇ ನಾನು ಆಧ್ಯಾತ್ಮಿಕ ವಿಷಯಗಳಿಗೆ ಪ್ರೀತಿಯನ್ನು ಬೆಳೆಸಿಕೊಂಡೆ. ನನ್ನ ಒಬ್ಬ ಆಂಟಿಯು ತನ್ನ ಚರ್ಚಿನ ಪ್ರಚಾರಕಳಾಗಿದ್ದಳು. ಆದುದರಿಂದ ಅವಳನ್ನು ಸಹ ನಾನು ಬಹಳವಾಗಿ ಮೆಚ್ಚುತ್ತಿದ್ದೆ. ಅವಳ ಹೆಜ್ಜೆಜಾಡಿನಲ್ಲಿಯೇ ನಡೆಯಬೇಕೆಂಬುದು ನನ್ನ ಮನದಾಳದ ಇಚ್ಚೆಯಾಗಿತ್ತು.
ಫಾರೆಸ್ಟ್-ರಿವರ್ನ ಕ್ರೈಸ್ತ ಧರ್ಮಪ್ರಚಾರಕ ಮಂಡಲಿ ಎಂಬುದಾಗಿ ಈ ಮುಂಚೆ ಪ್ರಖ್ಯಾತವಾಗಿದ್ದ ನಮ್ಮ ಸಮುದಾಯದಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯ ವರೆಗೆ ಕಲಿಯುವ ಅವಕಾಶವಿತ್ತು. ಪ್ರತಿ ಬೆಳಗ್ಗೆ ಕೇವಲ ಎರಡು ತಾಸುಗಳು ಮಾತ್ರ ನಾನು ಶಾಲೆಗೆ ಹಾಜರಾಗುತ್ತಿದ್ದೆ. ಇದರರ್ಥ ನನ್ನ ಮೂಲ ವಿದ್ಯಾಭ್ಯಾಸವು ಕೇವಲ ಸೀಮಿತವಾಗಿತ್ತು. ಇದು ನನ್ನ ತಂದೆಗೆ ಯಾವಾಗಲೂ ಒಂದು ಚಿಂತೆಯ ಸಂಗತಿಯಾಗಿತ್ತು. ತನ್ನ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಹೊಂದಬೇಕೆಂಬುದು ಅವರ ಬಯಕೆಯಾಗಿತ್ತು. ಆದುದರಿಂದ, ಅವರು ಊಂಬುಲ್ಗರೀಯನ್ನು ಬಿಟ್ಟು ತನ್ನ ಕುಟುಂಬವನ್ನು ವಿಂಡಮ್ಗೆ ಸ್ಥಳಾಂತರಿಸುವುದಾಗಿ ನಿರ್ಧರಿಸಿದರು. ಊಂಬುಲ್ಗರೀಯನ್ನು ಬಿಟ್ಟು ಬಂದ ದಿವಸವು ನನಗೆ ಬಹಳ ದುಃಖದ ದಿವಸವಾಗಿತ್ತು, ಆದರೆ ವಿಂಡಮ್ನಲ್ಲಿ ನಾನು ಮುಂದಿನ ನಾಲ್ಕು ವರುಷಗಳ ವರೆಗೆ, ಅಂದರೆ 1949ರಿಂದ 1952ರ ವರೆಗೆ ಇಡೀ ದಿನದ ಶಾಲೆಯನ್ನು ಹಾಜರಾಗಶಕ್ತಳಾದೆ. ಈ ವಿದ್ಯಾಭ್ಯಾಸವನ್ನು ಪಡೆಯಶಕ್ತಳಾಗುವಂತೆ ಮಾಡಿದಕ್ಕೆ ನಾನು ನನ್ನ ತಂದೆಗೆ ಬಹಳ ಆಭಾರಿಯಾಗಿದ್ದೇನೆ.
ತಾಯಿಯವರು ಒಬ್ಬ ಸ್ಥಳಿಕ ಡಾಕ್ಟರ್ನೊಂದಿಗೆ ಕೆಲಸಮಾಡುತ್ತಿದ್ದರು. 15 ವರುಷ ಪ್ರಾಯದಲ್ಲಿ ನಾನು ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದಾಗ, ಅದೇ ಡಾಕ್ಟರ್ ನನಗೆ ವಿಂಡಮ್ ಆಸ್ಪತ್ರೆಯಲ್ಲಿ ನರ್ಸ್ ಕೆಲಸವನ್ನು ನೀಡಿದರು. ಆ ಸಮಯದಲ್ಲಿ ಕೆಲಸವನ್ನು ಕಂಡುಕೊಳ್ಳುವುದು ಕಷ್ಟಕರ ಸಂಗತಿಯಾಗಿದ್ದ ಕಾರಣ ನಾನು ಅದನ್ನು ಸಂತೋಷದಿಂದ ಸ್ವೀಕರಿಸಿದೆ.
ಕೆಲವು ವರುಷಗಳ ಅನಂತರ, ಜಾನುವಾರುಗಳನ್ನು ನೋಡಿಕೊಳ್ಳುವ ಶ್ವೇತವರ್ಣೀಯನಾಗಿದ್ದ ಆ್ಯಲೆಕ್ನನ್ನು ಭೇಟಿಯಾದೆ. ನಾನು ಕ್ರಮವಾಗಿ ಹಾಜರಾಗುತ್ತಿದ್ದ ಡರ್ಬೀ ನಗರದ ಆಂಗ್ಲಿಕನ್ ಚರ್ಚ್ನಲ್ಲಿ 1964ರಲ್ಲಿ ನಮಗೆ ವಿವಾಹವಾಯಿತು. ಒಂದು ದಿನ ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಭೇಟಿನೀಡಿದರು. ‘ನನಗೆ ಸ್ವಲ್ಪವೂ ಆಸಕ್ತಿಯಿಲ್ಲ, ಪುನಃ ಎಂದಿಗೂ ನನಗೆ ಭೇಟಿ ನೀಡಬೇಡಿ’ ಎಂಬುದಾಗಿ ನಾನು ಅವರಿಗೆ ತಿಳಿಸಿದೆ. ಹಾಗಿದ್ದರೂ, ದೇವರಿಗೊಂದು ವೈಯಕ್ತಿಕ ಹೆಸರಿದೆ ಮತ್ತು ಅದು ಯೆಹೋವ ಎಂದಾಗಿದೆ ಎಂದು ಅವರು ಹೇಳಿದ ಮಾತು ನನಗೆ ಕುತೂಹಲವನ್ನು ಉಂಟುಮಾಡಿತು.
“ನಿನಗೆ ಸ್ವಂತವಾಗಿ ಪ್ರಾರ್ಥಿಸಲು ಸಾಧ್ಯವಿಲ್ಲವೊ?”
ಇಸವಿ 1965ರಲ್ಲಿ ನನ್ನ ಜೀವನದ ತೀರ ಕಷ್ಟಕರ ದಿನಗಳು ಆರಂಭಗೊಂಡವು. ನನ್ನ ಗಂಡ ಅತಿ ಗಂಭೀರವಾದ ಮೂರು ಅಪಘಾತಗಳಿಗೆ ತುತ್ತಾದರು. ಇವುಗಳಲ್ಲಿ ಎರಡು ಅವರ ಕುದುರೆಯೊಂದಿಗೆ ಮತ್ತು ಇನ್ನೊಂದು ಅವರ ಕಾರಿನೊಂದಿಗಾಗಿತ್ತು. ಸಂತೋಷಕರವಾಗಿ, ಈ ಎಲ್ಲ ಅಪಘಾತಗಳಿಂದುಂಟಾದ ಹಾನಿಯಿಂದ ಅವರು ಗುಣಮುಖರಾಗಿ ಕೆಲಸಕ್ಕೆ ಹಿಂದಿರುಗಿದರು. ಆದರೆ ಸ್ವಲ್ಪ ಸಮಯದ ನಂತರ, ಅವರು ತಮ್ಮ ಕುದುರೆಯೊಂದಿಗೆ ಪುನಃ ಒಂದು ಅಪಘಾತಕ್ಕೆ ಗುರಿಯಾದರು. ಈ ಬಾರಿ ಅವರ ತಲೆಗೆ ಗಂಭೀರವಾದ ಏಟುಗಳು ತಗಲಿದ್ದವು. ನಾನು ಆಸ್ಪತ್ರೆಗೆ ಬಂದಾಗ, ನನ್ನ ಗಂಡನು ಬದುಕಿ ಉಳಿಯಸಾಧ್ಯವಿಲ್ಲ ಎಂಬುದಾಗಿ ಡಾಕ್ಟರ್ ನನಗೆ ತಿಳಿಸಿದರು. ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನನ್ನು ಬಂದು ಭೇಟಿಯಾಗುವಂತೆ ಒಬ್ಬ ನರ್ಸ್ ಸ್ಥಳಿಕ ಪಾದ್ರಿಗೆ ಕೇಳಿಕೊಂಡಾಗ, “ಇಂದು ಸಾಧ್ಯವಿಲ್ಲ, ನಾಳೆ ಬರುತ್ತೇನೆ” ಎಂದು ಅವರು ಉತ್ತರಿಸಿದರು.
ಪಾದ್ರಿಯು ಬಂದು ನನಗಾಗಿ ಪ್ರಾರ್ಥಿಸಬೇಕೆಂದು ನಾನು ಬಯಸಿದೆ ಮತ್ತು ಇದನ್ನು ನಾನು ಚರ್ಚ್ ಸಂನ್ಯಾಸಿನಿಗೆ ತಿಳಿಸಿದೆ. “ನಿನಗೇನು ತಲೆಕೆಟ್ಟಿದೆಯೊ? ನಿನಗೆ ಸ್ವಂತವಾಗಿ ಪ್ರಾರ್ಥಿಸಲು ಸಾಧ್ಯವಿಲ್ಲವೊ?” ಎಂದು ಅವಳು ಹೇಳಿದಳು. ಆದುದರಿಂದ ನಾನು ಚರ್ಚ್ ವಿಗ್ರಹಗಳ ಬಳಿ ಸಹಾಯಕ್ಕಾಗಿ ಪ್ರಾರ್ಥಿಸಿದೆ. ಆದರೆ ಯಾವುದೇ ಸಹಾಯವು ದೊರಕಲಿಲ್ಲ. ನನ್ನ ಗಂಡ ಮರಣದ ಬಾಯಿಗೆ ಹತ್ತಿರವಾಗುತ್ತಾ ಇದ್ದಂತೆ ತೋರಿತು. ‘ನನ್ನ ಗಂಡನ ನಷ್ಟವನ್ನು ನಾನು ಹೇಗೆ ನಿಭಾಯಿಸಬಲ್ಲೆ?’ ಎಂಬುದನ್ನು ನಾನು ಚಿಂತಿಸತೊಡಗಿದೆ. ನನ್ನ ಮೂವರು ಮಕ್ಕಳಾದ ಕ್ರಿಸ್ಟೀನ್, ನಾನೆಟ್ ಮತ್ತು ಜೆಫ್ರೀಯ ಬಗ್ಗೆಯೂ ನನಗೆ ಕಾಳಜಿಯಿತ್ತು. ತಂದೆಯನ್ನು ಕಳೆದುಕೊಂಡ ಅನಂತರ ಅವರಿಗೆ ಯಾವ ರೀತಿಯ ಜೀವನ ಸಿಗಲಿದೆ ಎಂದು ನಾನು ಚಿಂತಿಸಿದೆ. ಆದರೆ ಸಂತೋಷದ ಸಂಗತಿಯೇನೆಂದರೆ, ಮೂರು ದಿನಗಳ ನಂತರ ನನ್ನ ಗಂಡನಿಗೆ ಪ್ರಜ್ಞೆ ಬಂತು ಮತ್ತು 1966ರ ಡಿಸೆಂಬರ್ 6ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಹೊಂದಿದರು.
ಅವರು ಸಾಕಷ್ಟು ಮಟ್ಟಿಗೆ ವಾಸಿಯಾಗಿದ್ದರೂ, ಮಿದುಳಿಗೆ ಆದ ಹಾನಿಯ ಪರಿಣಾಮವು ಇನ್ನೂ ಇತ್ತು. ಅವರು ಜ್ಞಾಪಕಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದ್ದರು ಮತ್ತು ಕ್ರೂರವಾಗಿ ಪ್ರತಿಕ್ರಿಯಿಸುತ್ತಿದ್ದರು ಹಾಗೂ ಅವರ ಮನಸ್ಥಿತಿಯು ಆಗಾಗ ಬದಲಾಗುತ್ತಾ ಇತ್ತು. ಮಕ್ಕಳೊಂದಿಗೆ ವ್ಯವಹರಿಸುವುದು ಅವರಿಗೆ ಬಹಳ ಕಷ್ಟಕರವಾಗುತ್ತಿತ್ತು. ವಯಸ್ಕರಂತೆ ಮಕ್ಕಳು ಪ್ರತಿಕ್ರಿಯಿಸದೇ ಇದ್ದಾಗ ಅವರಿಗೆ ವಿಪರೀತ ಕೋಪ ಬರುತ್ತಿತ್ತು. ಅವರ ಆರೈಕೆ ಮಾಡುವುದು ತೀರ ಕಷ್ಟಕರ ವಿಷಯವಾಗಿತ್ತು. ಅವರಿಗಾಗಿ ಎಲ್ಲ ವಿಷಯವನ್ನು ನಾನೇ ಮಾಡಬೇಕಿತ್ತು. ಓದುಬರಹವನ್ನು ಸಹ ಪುನಃ ನಾನು ಅವರಿಗೆ ಕಲಿಸಬೇಕಿತ್ತು. ಮನೆಕೆಲಸವನ್ನು ಮತ್ತು ಅವರನ್ನು ನೋಡಿಕೊಳ್ಳುವುದು ತೀರ ಕಷ್ಟಕರವಾಗಿತ್ತು. ನಾನು ನರದೌರ್ಬಲ್ಯವನ್ನು ಅನುಭವಿಸಿದೆ. ನನ್ನ ಗಂಡನಿಗೆ ಅಪಘಾತವಾಗಿ ಏಳು ವರುಷಗಳು ಕಳೆದ ನಂತರ, ನನ್ನ ಆರೋಗ್ಯವು ಸರಿಯಾಗುವ ವರೆಗೆ ನಾವಿಬ್ಬರು ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದೆವು.
ನಾನು ಮಕ್ಕಳನ್ನು ಕರೆದುಕೊಂಡು ದಕ್ಷಿಣದಲ್ಲಿದ್ದ ಪರ್ತ್ ನಗರಕ್ಕೆ ಹೋದೆ. ಆದರೆ ನಾನು ಅಲ್ಲಿಗೆ ಹೋಗುವುದಕ್ಕೆ ಮುಂಚೆ, ನನ್ನ ತಂಗಿಯು ಪಶ್ಚಿಮ ಆಸ್ಟ್ರೇಲಿಯದ ಒಂದು ಸಣ್ಣ ಪಟ್ಟಣವಾದ ಕನನರದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದ್ದಳು. ಅವಳು ನನಗೆ ಬೈಬಲ್ ವಾಗ್ದಾನಿಸಿರುವ ಪರದೈಸ್ ಭೂಮಿಯನ್ನು ಸೂಚಿಸುವ ಚಿತ್ರವನ್ನು ನಿತ್ಯಜೀವಕ್ಕೆ ನಡೆಸುವ ಸತ್ಯa ಪುಸ್ತಕದಿಂದ ತೋರಿಸಿದಳು. ಈ ಪುಸ್ತಕದಿಂದ ಅವಳು ನನಗೆ ದೇವರ ಹೆಸರು ಯೆಹೋವ ಎಂಬುದಾಗಿಯೂ ತೋರಿಸಿದಳು ಮತ್ತು ಇದು ನನಗೆ ಆಸಕ್ತಿಯನ್ನು ಉಂಟುಮಾಡಿತು. ಈ ವಿಷಯವು ನನಗೆ ಚರ್ಚಿನಲ್ಲಿ ಎಂದೂ ತಿಳಿಸಲ್ಪಡದಿದ್ದ ಕಾರಣ, ನಾನು ಪರ್ತ್ ನಗರದಲ್ಲಿ ನೆಲೆಸಿದ ಕೂಡಲೆ ಯೆಹೋವನ ಸಾಕ್ಷಿಗಳಿಗೆ ಫೋನ್ ಮಾಡುವುದಾಗಿ ನಿರ್ಧರಿಸಿದೆ.
ಆದರೆ ಅವರನ್ನು ಭೇಟಿಯಾಗಲು ನನಗೆ ಹಿಂಜರಿಕೆಯಿತ್ತು. ಒಂದು ಸಾಯಂಕಾಲದಂದು ನಮ್ಮ ಮನೆಯ ಕರೆಗಂಟೆ ಬಾರಿಸಿತು. ನನ್ನ ಮಗನು ಅವಸರವಸರದಿಂದ ಬಾಗಿಲ ಬಳಿಗೆ ಹೋಗಿ, ನಂತರ ಹಿಂದೆ ಬಂದು, “ಅಮ್ಮ, ಯಾರಿಗೆ ನೀವು ಫೋನ್ ಮಾಡಬೇಕೆಂದಿದ್ದಿರೊ ಅವರು ಬಂದಿದ್ದಾರೆ” ಎಂದು ಹೇಳಿದನು. ನನಗೆ ಆಶ್ಚರ್ಯವಾಯಿತು. “ನಾನು ಮನೆಯಲ್ಲಿಲ್ಲ ಎಂದು ಅವರಿಗೆ ಹೇಳು” ಎಂಬುದಾಗಿ ನಾನು ಅವನಿಗೆ ತಿಳಿಸಿದೆ. “ಅಮ್ಮ, ನಾವು ಸುಳ್ಳು ಹೇಳಬಾರದಲ್ಲವಾ” ಎಂಬುದಾಗಿ ಅವನು ಉತ್ತರಿಸಿದನು. ಆದುದರಿಂದ ನಾನು ಹೋಗಿ ಅವರನ್ನು ವಂದಿಸಿದೆ. ಅವರ ಮುಖದಲ್ಲಿ ಗಲಿಬಿಲಿಯ ನೋಟವನ್ನು ನಾನು ಕಂಡುಕೊಂಡೆ. ಅವರು ನಿಜವಾಗಿ, ನಾವಿದ್ದ ಮನೆಯಲ್ಲಿ ಈ ಹಿಂದೆ ಬಾಡಿಗೆಗಿದ್ದವರನ್ನು ಭೇಟಿಯಾಗಲು ಬಂದಿದ್ದರು. ನಾನು ಅವರನ್ನು ಆಮಂತ್ರಿಸಿ, ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ ಮತ್ತು ಆ ಎಲ್ಲ ಪ್ರಶ್ನೆಗಳಿಗೆ ಅವರು ಬೈಬಲಿನಿಂದ ತೃಪ್ತಿದಾಯಕ ಉತ್ತರಗಳನ್ನು ನೀಡಿದರು.
ಮುಂದಿನ ವಾರದಿಂದ ನಿತ್ಯಜೀವಕ್ಕೆ ನಡೆಸುವ ಸತ್ಯ ಪುಸ್ತಕದಿಂದ ಸಾಕ್ಷಿಗಳೊಂದಿಗೆ ಕ್ರಮವಾಗಿ ಬೈಬಲ್ ಅಧ್ಯಯನವನ್ನು ಆರಂಭಿಸಿದೆ. ಈ ಅಧ್ಯಯನವು ಆಧ್ಯಾತ್ಮಿಕ ವಿಷಯಗಳ ಕಡೆಗಿನ ನನ್ನ ಪ್ರೀತಿಯನ್ನು ಚೇತರಿಸಿತು. ಎರಡು ವಾರಗಳ ನಂತರ ನಾನು ಕ್ರಿಸ್ತ ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾದೆ. ಪ್ರತಿ ಭಾನುವಾರ ನಾನು ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ಮತ್ತು ಬೇಗನೆ, ವಾರದ ಮಧ್ಯದ ಕೂಟಗಳಿಗೂ ಹಾಜರಾಗಲು ಆರಂಭಿಸಿದೆ. ನಾನೇನನ್ನು ಕಲಿತುಕೊಂಡೆನೊ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಸಹ ಆರಂಭಿಸಿದೆ. ಇತರರು ಬೈಬಲ್ ಸತ್ಯಗಳನ್ನು ಕಲಿತುಕೊಳ್ಳಲು ಸಹಾಯಮಾಡುವುದು ನನ್ನ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂಬುದನ್ನು ನಾನು ಕಂಡುಕೊಂಡೆ. ಆರು ತಿಂಗಳಿನ ನಂತರ ನಾನು ಪರ್ತ್ನಲ್ಲಿ ನಡೆದ ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ.
ನಾನು ಆಧ್ಯಾತ್ಮಿಕವಾಗಿ ಪ್ರಗತಿಮಾಡಿದಂತೆ ವಿವಾಹದ ಪವಿತ್ರತೆಯ ವಿಷಯದಲ್ಲಿ ಯೆಹೋವನ ನೋಟವೇನೆಂಬುದನ್ನು ಗ್ರಹಿಸಿದೆ. 1 ಕೊರಿಂಥ 7:13ರಲ್ಲಿ ಕಂಡುಬರುವ ಬೈಬಲ್ ಮೂಲತತ್ತ್ವವನ್ನು ಸಹ ನಾನು ಅರ್ಥಮಾಡಿಕೊಂಡೆ. ಅದು ತಿಳಿಸುವುದು: “ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು.” ಈ ಶಾಸ್ತ್ರವಚನವು, ನಾನು ನನ್ನ ಗಂಡನ ಬಳಿಗೆ ಪುನಃ ಹೋಗುವಂತೆ ನನ್ನನ್ನು ಉತ್ತೇಜಿಸಿತು.
ಡರ್ಬೀಗೆ ಹಿಂದಿರುಗುವಿಕೆ
ಐದು ವರುಷಗಳಿಗಿಂತಲೂ ಹೆಚ್ಚು ಸಮಯ ಗಂಡನಿಂದ ಪ್ರತ್ಯೇಕವಾಗಿದ್ದು, 1979ರ ಜೂನ್ 21ರಂದು ನಾನು ಡರ್ಬೀಗೆ ಪುನಃ ಹಿಂದಿರುಗಿದೆ. ನನಗೆ ಮಿಶ್ರ ಅನಿಸಿಕೆಗಳಿದ್ದವು. ನನ್ನ ಹಿಂದಿರುಗುವಿಕೆಗೆ ನನ್ನ ಗಂಡ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ನನ್ನ ಆಶ್ಚರ್ಯಕ್ಕೆ, ಅವರು ನನ್ನನ್ನು ಸಂತೋಷದಿಂದ ಆಮಂತ್ರಿಸಿದರು. ಆದರೆ ನಾನು ಯೆಹೋವನ ಸಾಕ್ಷಿಯಾದ ವಿಷಯದಲ್ಲಿ ತನಗೆ ಬೇಸರವಿದೆ ಎಂದು ಅವರು ತಿಳಿಸಿದರು. ನಾನು ಪರ್ತ್ ನಗರವನ್ನು ಬಿಟ್ಟುಹೋಗುವ ಮುಂಚೆ ಹಾಜರಾಗುತ್ತಿದ್ದ ಮತ್ತು ಈಗ ನನ್ನ ಗಂಡ ಹಾಜರಾಗುತ್ತಿರುವ ಚರ್ಚನ್ನು ನಾನು ಅವರೊಂದಿಗೆ ಹಾಜರಾಗುವಂತೆ ಅವರು ಹೇಳಿದರು. ನಾನದನ್ನು ಮಾಡಲಾರೆ ಎಂಬುದನ್ನು ಅವರಿಗೆ ವಿವರಿಸಿದೆ. ಅವರ ತಲೆತನಕ್ಕೆ ಗೌರವವನ್ನು ಸಲ್ಲಿಸಲು ನಾನು ಕಠಿನ ಪ್ರಯತ್ನವನ್ನು ಮಾಡಿದೆ ಮತ್ತು ಒಬ್ಬ ಕ್ರೈಸ್ತ ಪತ್ನಿಯಾಗಿ ನನ್ನಿಂದಾದ ಎಲ್ಲವನ್ನು ಮಾಡಿದೆ. ಯೆಹೋವನ ಕುರಿತು ಮತ್ತು ಭವಿಷ್ಯತ್ತಿನ ಬಗ್ಗೆ ಆತನ ಅದ್ಭುತಕರ ವಾಗ್ದಾನಗಳ ಬಗ್ಗೆ ಅವರೊಂದಿಗೆ ಮಾತಾಡಲು ಪ್ರಯತ್ನಿಸಿದೆ, ಆದರೆ ಅವರು ಅದ್ಯಾವುದರಲ್ಲೂ ಆಸಕ್ತಿ ತೋರಿಸಲಿಲ್ಲ.
ಕ್ರಮೇಣ ಆ್ಯಲೆಕ್ ನನ್ನ ಹೊಸ ಜೀವನಮಾರ್ಗವನ್ನು ಸಮ್ಮತಿಸಿದ್ದು ಮಾತ್ರವಲ್ಲದೆ, ಅಧಿವೇಶನಗಳು, ಸಮ್ಮೇಳನಗಳು ಮತ್ತು ಕೂಟಗಳನ್ನು ಹಾಜರಾಗಲು ಸಾಧ್ಯವಾಗುವಂತೆ ನನಗೆ ಹಣ ಸಹಾಯವನ್ನೂ ಮಾಡಲಾರಂಭಿಸಿದರು. ನಾನು ಕ್ರೈಸ್ತ ಶುಶ್ರೂಷೆಯಲ್ಲಿ ಉಪಯೋಗಿಸಶಕ್ತಳಾಗುವಂತೆ ಅವರು ನನಗಾಗಿ ಒಂದು ಹೊಸ ಕಾರ್ ಅನ್ನು ಖರೀದಿಸಿದಾಗ ನಾನು ಬಹಳ ಸಂತೋಷಿತಳಾದೆ. ಆಸ್ಟ್ರೇಲಿಯದ ಈ ಒಳನಾಡಿಗೆ ಇದು ನಿಜವಾಗಿಯೂ ಒಂದು ಅಮೂಲ್ಯ ಸೊತ್ತಾಗಿತ್ತು. ಸಹೋದರ ಸಹೋದರಿಯರು ಮತ್ತು ಸರ್ಕಿಟ್ ಮೇಲ್ವಿಚಾರಕರು ನಮ್ಮ ಮನೆಯಲ್ಲಿ ಹಲವು ದಿವಸಗಳ ವರೆಗೆ ಉಳುಕೊಳ್ಳುತ್ತಿದ್ದರು. ಬೇರೆ ಬೇರೆ ಸಾಕ್ಷಿಗಳನ್ನು ತಿಳಿದುಕೊಳ್ಳುವಂತೆ ಆ್ಯಲೆಕ್ಗೆ ಇದು ಸಹಾಯಮಾಡಿತು ಮತ್ತು ಸಾಕ್ಷಿಗಳೊಂದಿಗಿನ ಒಡನಾಟವನ್ನು ಅವರು ಆನಂದಿಸುತ್ತಿದ್ದರು.
ಯೆಹೆಜ್ಕೇಲನಂತೆ ನನಗನಿಸಿತು
ನಾನು ಸಹೋದರ ಸಹೋದರಿಯರ ಭೇಟಿಯನ್ನು ಆನಂದಿಸಿದೆ, ಆದರೆ ನನಗೊಂದು ಪಂಥಾಹ್ವಾನವಿತ್ತು. ಡರ್ಬೀ ನಗರದಲ್ಲಿ ನಾನು ಏಕೈಕ ಸಾಕ್ಷಿಯಾಗಿದ್ದೆ. ಹತ್ತಿರದ ಸಭೆಯು ಬ್ರೂಮ್ ನಗರದಲ್ಲಿತ್ತು ಮತ್ತು ಅದು ನಮ್ಮ ಸ್ಥಳದಿಂದ 220 ಕಿಲೋಮೀಟರ್ ದೂರದಲ್ಲಿತ್ತು. ಆದುದರಿಂದ ನಾನು ನನ್ನಿಂದಾದಷ್ಟು ಉತ್ತಮವಾಗಿ ಸುವಾರ್ತೆಯನ್ನು ಸಾರಲು ನಿರ್ಣಯಿಸಿದೆ. ಯೆಹೋವನ ಸಹಾಯದಿಂದ ಸಾರುವ ಕೆಲಸವನ್ನು ನಾನೇ ವ್ಯವಸ್ಥಾಪಿಸಿಕೊಂಡು, ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ತೊಡಗಿದೆ. ನನಗೆ ಈ ಕೆಲಸವು ಕಷ್ಟಕರವಾಗಿ ಕಂಡುಬಂತು, ಆದರೆ ನಾನು ಅಪೊಸ್ತಲ ಪೌಲನ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಇದ್ದೆ. ಅವನಂದದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.
ನನ್ನ ಚಟುವಟಿಕೆ, ಅದರಲ್ಲಿಯೂ ಮುಖ್ಯವಾಗಿ ಜೊತೆ ಮೂಲ ನಿವಾಸಿಗಳಿಗೆ ನಾನು ನೀಡುತ್ತಿದ್ದ ಸಾಕ್ಷಿಯು ಸ್ಥಳಿಕ ಪಾದ್ರಿಗಳನ್ನು ಸಂತೋಷಗೊಳಿಸಲಿಲ್ಲ. ನನಗೆ ಭಯ ಹುಟ್ಟಿಸಿ, ನನ್ನ ಸಾರುವ ಚಟುವಟಿಕೆಯನ್ನು ನಿಲ್ಲಿಸಲು ಅವರು ಪ್ರಯತ್ನಿಸಿದರು. ಆದರೆ ಅವರ ವಿರೋಧವು ನನ್ನನ್ನು ಮತ್ತಷ್ಟು ದೃಢನಿಶ್ಚಿತಳನ್ನಾಗಿ ಮಾಡಿತು ಮತ್ತು ನನಗೆ ಸಹಾಯನೀಡುವಂತೆ ನಾನು ಕ್ರಮವಾಗಿ ಯೆಹೋವನಿಗೆ ಪ್ರಾರ್ಥಿಸಿದೆ. ಯೆಹೆಜ್ಕೇಲನಿಗೆ ನೀಡಲಾಗಿದ್ದ ಉತ್ತೇಜಕ ಮಾತುಗಳನ್ನು ನಾನು ಅನೇಕವೇಳೆ ನೆನಪಿಸಿಕೊಳ್ಳುತ್ತಿದ್ದೆ: “ಇಗೋ, ಅವರ ಕಠಿನ ಮುಖಕ್ಕೆ ವಿರುದ್ಧವಾಗಿ ನಿನ್ನ ಮುಖವನ್ನು ಕಠಿನಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ. ನಿನ್ನ ಹಣೆಯನ್ನು ಕಗ್ಗಲ್ಲಿಗಿಂತ ಕಠಿನವಾದ ವಜ್ರದಷ್ಟು ಕಠಿನಪಡಿಸಿದ್ದೇನೆ; ಅವರು ದ್ರೋಹಿವಂಶದವರು, ಅವರಿಗೆ ಭಯಪಡಬೇಡ; ಅವರ ಬಿರುನೋಟಕ್ಕೆ ಬೆಚ್ಚದಿರು.”—ಯೆಹೆಜ್ಕೇಲ 3:8, 9.
ಅನೇಕ ಸಂದರ್ಭಗಳಲ್ಲಿ, ನಾನು ಖರೀದಿಗಾಗಿ ಅಂಗಡಿಗೆ ಹೋಗಿರುವಾಗ ಚರ್ಚಿನ ಇಬ್ಬರು ಪುರುಷರು ನನ್ನನ್ನು ಸಮೀಪಿಸಿ, ಗಟ್ಟಿಯಾದ ಧ್ವನಿಯಿಂದ ನನಗೆ ಕುಚೋದ್ಯಮಾಡುತ್ತಿದ್ದರು ಮತ್ತು ಕೇಕೆ ಹಾಕಿ ನಗುತ್ತಿದ್ದರು. ಇತರ ಖರೀದಿಗಾರರ ಗಮನವನ್ನು ಸೆಳೆಯುವ ಉದ್ದೇಶದಿಂದ ಅವರು ಹೀಗೆ ಮಾಡುತ್ತಿದ್ದರು. ಆದರೆ ನಾನು ಅದನ್ನು ಅಗಣ್ಯಮಾಡಿದೆ. ಒಮ್ಮೆ ನಾನು ಒಬ್ಬ ಆಸಕ್ತ ವ್ಯಕ್ತಿಯನ್ನು ಪುನರ್ಭೇಟಿ ಮಾಡುತ್ತಿದ್ದಾಗ, ಸ್ಥಳಿಕ ಚರ್ಚಿನ ಕ್ರೈಸ್ತ ಧರ್ಮಪ್ರಚಾರಕ ಮಂಡಲಿಯ ಸದಸ್ಯನು ಬಂದು ನಾನು ಯೇಸುವಿನಲ್ಲಿ ನಂಬಿಕೆಯಿಡುವುದಿಲ್ಲ ಎಂಬುದಾಗಿ ಆಪಾದಿಸಿದನು. ನನ್ನ ಕೈಯಿಂದ ಅವನು ಬೈಬಲನ್ನು ಕಸಿದುಕೊಂಡು, ನನ್ನ ಮುಖದೆದುರಿಗೆ ಅದನ್ನು ಜಾಡಿಸಿ, ಪುನಃ ನನ್ನ ಕೈಗೆ ಅದನ್ನು ತುರುಕಿಸಿದನು. ನಾನು ಅವನನ್ನು ದಿಟ್ಟಿಸಿ ನೋಡುತ್ತಾ, ಸೌಮ್ಯವಾಗಿ ಆದರೆ ದೃಢವಾಗಿ ಯೋಹಾನ 3:16ನ್ನು ಓದಿದೆ ಮತ್ತು ಯೇಸುವಿನಲ್ಲಿ ನನಗೆ ನಂಬಿಕೆಯಿದೆ ಎಂಬುದನ್ನು ಅವನಿಗೆ ತಿಳಿಸಿದೆ. ಧೈರ್ಯದಿಂದ ನಾನು ಪ್ರತಿಕ್ರಿಯಿಸಿದ್ದನ್ನು ನೋಡಿ ಅವನು ಮೂಕವಿಸ್ಮಿತನಾದನು ಮತ್ತು ಒಂದೂ ಮಾತನ್ನಾಡದೆ ಅಲ್ಲಿಂದ ಹೊರಟುಹೋದನು.
ಡರ್ಬೀ ಕ್ಷೇತ್ರದಲ್ಲಿನ ಮೂಲ ನಿವಾಸಿಗಳಿಗೆ ಸಾರುವುದರಲ್ಲಿ ನಾನು ಆನಂದವನ್ನು ಕಂಡುಕೊಂಡೆ. ಒಂದು ನಿರ್ದಿಷ್ಟ ಸಮುದಾಯದಲ್ಲಿನ ಜನರನ್ನು ಭೇಟಿಯಾಗದಂತೆ ಒಬ್ಬ ಸ್ಥಳಿಕ ಪಾದ್ರಿಯು ನನ್ನನ್ನು ತಡೆಯಲು ಪ್ರಯತ್ನಿಸಿದನು, ಆದರೆ ಅವನು ಅಲ್ಲಿಂದ ವರ್ಗಾಯಿಸಲ್ಪಟ್ಟನು. ಹಾಗಾಗಿ, ನಾನು ಆ ಸಮುದಾಯದಲ್ಲಿನ ಜನರಿಗೂ ಬೈಬಲಿನ ಸಂದೇಶವನ್ನು ತಿಳಿಸಶಕ್ತಳಾದೆ. ನನ್ನ ಆಂಟಿಯಂತೆ ಮಿಷನೆರಿಯಾಗಲು ನಾನು ಯಾವಾಗಲೂ ಬಯಸಿದ್ದೆ ಮತ್ತು ಈಗ ನಾನು, ದೇವರ ವಾಕ್ಯದ ಬಗ್ಗೆ ಇತರರು ತಿಳಿಯುವಂತೆ ಸಹಾಯಮಾಡುತ್ತಾ ಮಿಷನೆರಿ ಕೆಲಸವನ್ನೇ ಮಾಡುತ್ತಿದ್ದೇನೆ. ನನ್ನ ಸಾರುವ ವಿಷಯಕ್ಕೆ ಅನೇಕ ಮೂಲ ನಿವಾಸಿಗಳು ಉತ್ತಮ ಪ್ರತಿಕ್ರಿಯೆಯನ್ನು ತೋರಿಸಿದರು ಮತ್ತು ನಾನು ಅನೇಕ ಬೈಬಲ್ ಅಧ್ಯಯನಗಳನ್ನು ಸಹ ಆರಂಭಿಸಿದೆ.
ನನ್ನ ಆಧ್ಯಾತ್ಮಿಕ ಅಗತ್ಯದ ಅರಿವು
ಐದು ವರುಷಗಳ ತನಕ ಡರ್ಬೀ ನಗರದಲ್ಲಿ ನಾನೊಬ್ಬಳೇ ಸಾಕ್ಷಿಯಿದ್ದೆ. ಜೊತೆ ಆರಾಧಕರೊಂದಿಗೆ ಕ್ರಮದ ಕೂಟಗಳಲ್ಲಿನ ಉತ್ತೇಜನವಿಲ್ಲದೆ ಆಧ್ಯಾತ್ಮಿಕವಾಗಿ ಬಲವಾಗಿರಲು ನನಗೆ ಬಹಳ ಕಷ್ಟವಾಗಿತ್ತು. ಒಂದು ಸಂದರ್ಭದಲ್ಲಿ, ನಾನು ಬಹಳ ನಿರುತ್ತೇಜಿತಳಾಗಿದ್ದೆ. ಆದುದರಿಂದ ನನ್ನ ಕಾರನ್ನು ತೆಗೆದುಕೊಂಡು ಹೊರಗೆ ಸುತ್ತಾಡಿದೆ. ಸಂಜೆ ಮನೆಗೆ ಹಿಂದಿರುಗಿದಾಗ, ಒಬ್ಬ ಸಹೋದರಿ ಮತ್ತು ಅವಳ ಏಳು ಮಕ್ಕಳು ನನಗಾಗಿ ಕಾಯುತ್ತಿದ್ದರು. ಹಲವು ಕಿಲೋಮೀಟರ್ ದೂರದಲ್ಲಿದ್ದ ಬ್ರೂಮ್ನಲ್ಲಿನ ಸಭೆಯಿಂದ ಅವರು ನನಗಾಗಿ ಸಾಹಿತ್ಯಗಳನ್ನು ತಂದಿದ್ದರು. ಅಂದಿನಿಂದ, ಬೆಟ್ಟೀ ಬಟರ್ಫೀಲ್ಡ್ ಎಂಬ ಆ ಸಹೋದರಿ ತಿಂಗಳಿಗೊಮ್ಮೆ ಡರ್ಬೀಗೆ ಬಂದು ಒಂದು ವಾರಾಂತ್ಯ ನಮ್ಮ ಮನೆಯಲ್ಲಿ ಉಳುಕೊಳ್ಳುವ ಏರ್ಪಾಡನ್ನು ಮಾಡಿದಳು. ನಾವು ಒಟ್ಟಾಗಿ ಸಾರುವ ಕೆಲಸಕ್ಕೆ ಹೋಗುತ್ತಿದ್ದೆವು ಮತ್ತು ನಮ್ಮ ಮನೆಯಲ್ಲಿ ಒಟ್ಟಾಗಿ ಕಾವಲಿನಬುರುಜು ಅಧ್ಯಯನವನ್ನು ಮಾಡುತ್ತಿದ್ದೆವು. ತಿಂಗಳಿಗೊಮ್ಮೆ ನಾನು ಬ್ರೂಮ್ ನಗರದಲ್ಲಿದ್ದ ಸಭೆಗೆ ಹೋಗುತ್ತಿದ್ದೆ.
ಬ್ರೂಮ್ನಲ್ಲಿದ್ದ ಸಹೋದರರು ಬಹಳ ಸಹಾಯಕಾರಿಯಾಗಿದ್ದರು ಮತ್ತು ಆಗಿಂದಾಗ್ಗೆ ಕ್ಷೇತ್ರ ಸೇವೆಯಲ್ಲಿ ನನಗೆ ಸಹಾಯಮಾಡಲು ದೂರ ಪ್ರಯಾಣವನ್ನು ಮಾಡಿ ಡರ್ಬೀಗೆ ಬರುತ್ತಿದ್ದರು. ಇತರ ನಗರಗಳಲ್ಲಿರುವ ಸಹೋದರ ಸಹೋದರಿಯರು ಡರ್ಬೀ ನಗರವನ್ನು ದಾಟಿಹೋಗುವಾಗ ನನ್ನನ್ನು ಭೇಟಿಯಾಗಿ ನನ್ನೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಬ್ರೂಮ್ನಲ್ಲಿದ್ದ ಸಹೋದರರು ಅವರನ್ನು ಕೇಳಿಕೊಂಡರು. ಈ ರೀತಿಯಾಗಿ ಬರುತ್ತಿದ್ದ ಸಹೋದರ ಸಹೋದರಿಯರು ನನಗೆ ಸಾರ್ವಜನಿಕ ಭಾಷಣಗಳ ಟೇಪ್ ಅನ್ನು ಸಹ ತರುತ್ತಿದ್ದರು. ಕೆಲವರು ನನ್ನೊಂದಿಗೆ ಕಾವಲಿನಬುರುಜು ಅಧ್ಯಯನದಲ್ಲಿ ಜೊತೆಗೂಡಿದರು. ಈ ಭೇಟಿಗಳು ನಿಜವಾಗಿಯೂ ಉತ್ತೇಜನದಾಯಕವಾಗಿರುತ್ತಿತ್ತು.
ಹೆಚ್ಚಿನ ಸಹಾಯವು ಮುಂದಿತ್ತು
ಕೆಲವು ವರುಷಗಳ ವರೆಗೆ, ಚಳಿಗಾಲದಲ್ಲಿ ಮೂರು ತಿಂಗಳಿಗಾಗಿ ಪಶ್ಚಿಮ ಆಸ್ಟ್ರೇಲಿಯದ ದಕ್ಷಿಣ ಭಾಗದಿಂದ ನನಗೆ ಸಹಾಯಮಾಡಲೆಂದು ನಿವೃತ್ತಿಹೊಂದಿದ ದಂಪತಿಯಾದ ಆರ್ಥರ್ ಮತ್ತು ಮೇರಿ ವಿಲ್ಸ್ ಬರುತ್ತಿದ್ದರು. ಇವರ ಭೇಟಿಯು ನನಗೆ ಉತ್ತೇಜನದಾಯಕವಾಗಿತ್ತು. ಸಹೋದರ ವಿಲ್ಸ್ ಹೆಚ್ಚಿನ ಕೂಟಗಳನ್ನು ನಡೆಸುತ್ತಿದ್ದರು ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಮುಂದಾಳುತ್ವವನ್ನು ವಹಿಸುತ್ತಿದ್ದರು. ಒಟ್ಟಾಗಿ, ನಾವು ಕಿಂಬರ್ಲೀ ಪ್ರಸ್ಥಭೂಮಿಯ ಹೆಚ್ಚು ಒಳಗಿದ್ದ ನಾಡುಗಳಿಗೆ ಭೇಟಿನೀಡುತ್ತಿದ್ದೆವು. ಈ ದೂರದ ಪ್ರದೇಶದಲ್ಲಿದ್ದ ಪಶುಪಾಲನ ಕ್ಷೇತ್ರಗಳಿಗೂ ಭೇಟಿನೀಡುತ್ತಿದ್ದೆವು. ಪ್ರತಿ ಸಲ ಸಹೋದರ ಸಹೋದರಿಯರಾದ ವಿಲ್ಸ್ ನನ್ನನ್ನು ಬಿಟ್ಟುಹೋಗುವಾಗ ನನ್ನ ಜೀವನದಲ್ಲಿ ದೊಡ್ಡ ನಷ್ಟ ಸಂಭವಿಸಿದಂತೆ ನನಗನಿಸುತ್ತಿತ್ತು.
ಕೊನೆಗೂ 1983ರ ಅಂತ್ಯದಷ್ಟಕ್ಕೆ, ಡ್ಯಾನೀ ಮತ್ತು ಡನೀಸ್ ಸ್ಟರ್ಜನ್ ಹಾಗೂ ಅವರ ನಾಲ್ಕು ಗಂಡು ಮಕ್ಕಳು ಡರ್ಬೀಗೆ ಸ್ಥಳಾಂತರಿಸುತ್ತಾರೆ ಎಂಬ ಒಂದು ಸಂತೋಷಕರ ಸುದ್ದಿಯನ್ನು ನಾನು ಪಡೆದುಕೊಂಡೆ. ಅವರು ಆಗಮಿಸಿದ ನಂತರ, ನಾವು ಕ್ರಮವಾಗಿ ವಾರದ ಕೂಟಗಳನ್ನು ನಡೆಸಲು ಮತ್ತು ಕ್ಷೇತ್ರ ಸೇವೆಯಲ್ಲಿ ಒಟ್ಟಾಗಿ ಭಾಗವಹಿಸಲು ಶಕ್ತರಾದೆವು. 2001ರಲ್ಲಿ ಒಂದು ಸಭೆಯು ಸ್ಥಾಪನೆಯಾಯಿತು. ಇಂದು ಡರ್ಬೀಯಲ್ಲಿ, ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಒಳ್ಳೇ ರೀತಿಯಲ್ಲಿ ನೋಡಿಕೊಳ್ಳುವ ಇಬ್ಬರು ಹಿರಿಯರು ಮತ್ತು ಒಬ್ಬ ಶುಶ್ರೂಷಾ ಸೇವಕನನ್ನು ಹೊಂದಿರುವ 24 ರಾಜ್ಯ ಪ್ರಚಾರಕರ ಸುದೃಢವಾದ ಒಂದು ಸಭೆಯಿದೆ. ಕೆಲವೊಮ್ಮೆ 30 ಜನರಷ್ಟು ಕೂಟಗಳಿಗೆ ಹಾಜರಿರುತ್ತಿದ್ದರು.
ಕಳೆದ ಹಲವು ವರುಷಗಳತ್ತ ಹಿನ್ನೋಟ ಬೀರುವಾಗ, ಯೆಹೋವನು ತನ್ನನ್ನು ಸೇವಿಸುವಂತೆ ನನಗೆ ಹೇಗೆ ಸಹಾಯ ನೀಡಿದನು ಎಂಬುದನ್ನು ನೋಡುವುದು ನನ್ನ ಹೃದಯವನ್ನು ಸಂತೋಷಗೊಳಿಸುತ್ತದೆ. ಇಂದಿನ ವರೆಗೂ ನನ್ನ ಗಂಡ ನನ್ನ ನಂಬಿಕೆಯಲ್ಲಿ ಜೊತೆಗೂಡದಿದ್ದರೂ, ಇತರ ವಿಧಗಳಲ್ಲಿ ಅವರು ನನಗೆ ಸಹಾಯನೀಡುತ್ತಿದ್ದಾರೆ. ನನ್ನ ಕುಟುಂಬದ ಐದು ಸದಸ್ಯರು—ನನ್ನ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಮೊಮ್ಮಕ್ಕಳು ಮತ್ತು ತಂಗಿಯ ಮಗಳು ಸ್ನಾತ ಸಾಕ್ಷಿಗಳಾಗಿದ್ದಾರೆ. ಇದಲ್ಲದೆ, ನನ್ನ ಸಂಬಂಧಿಕರಲ್ಲಿ ಇನ್ನೂ ಕೆಲವರು ಯೆಹೋವನ ಜನರೊಂದಿಗೆ ಬೈಬಲನ್ನು ಅಧ್ಯಯನಮಾಡುತ್ತಿದ್ದಾರೆ.
ಯೆಹೋವನು ತನ್ನನ್ನು ಕಂಡುಕೊಳ್ಳುವಂತೆ ನನಗೆ ಮಾಡಿದ ಸಹಾಯಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಸದಾಕಾಲಕ್ಕೂ ನಾನು ಆತನವಳಾಗಿಯೇ ಇರಲು ದೃಢನಿಶ್ಚಿತಳಾಗಿದ್ದೇನೆ.—ಕೀರ್ತನೆ 65:2.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿದ್ದು, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.
[ಪುಟ 15ರಲ್ಲಿರುವ ಭೂಪಟ/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಆಸ್ಟ್ರೇಲಿಯ
ವಿಂಡಮ್
ಕಿಂಬರ್ಲೀ ಪ್ರಸ್ಥಭೂಮಿ
ಡರ್ಬೀ
ಬ್ರೂಮ್
ಪರ್ತ್
[ಕೃಪೆ]
ಕ್ಯಾಂಗರೂ ಮತ್ತು ಲೈರ್ ಹಕ್ಕಿ: Lydekker; ಕೋಲ: Meyers
[ಪುಟ 14ರಲ್ಲಿರುವ ಚಿತ್ರ]
1953ರಲ್ಲಿ ವಿಂಡಮ್ ಆಸ್ಪತ್ರೆಯಲ್ಲಿ ನರ್ಸ್ ಕೆಲಸವನ್ನು ಮಾಡುತ್ತಿರುವುದು
[ಪುಟ 15ರಲ್ಲಿರುವ ಚಿತ್ರ]
2005ರಲ್ಲಿ ಡರ್ಬೀ ಸಭೆ