ಬೈಬಲನ್ನು ಪ್ರವರ್ಧಿಸಲು ಮಾಡಲ್ಪಟ್ಟ ಧೀರ ಯತ್ನ
ಅವನು ಸೈಬೀರಿಯದಲ್ಲಿ ಕೊರೆಯುವ ಚಳಿಯಿದ್ದ ವಿಶಾಲಬೈಲಿನಲ್ಲಿ ತನ್ನ ಕೊನೆಯುಸಿರೆಳೆದನು. ಅವನ ಹೆಸರನ್ನು ಕೆಡಿಸಲಾಗಿತ್ತು ಮತ್ತು ಅವನನ್ನು ಅವಮಾನಿಸಲಾಗಿತ್ತು. ತನ್ನವರಾಗಿದ್ದ ಗ್ರೀಕ್ ಜನರ ಆಧ್ಯಾತ್ಮಿಕ ಮುನ್ನಡೆಯಲ್ಲಿ ಅವನೊಬ್ಬ ಮುಖ್ಯ ವ್ಯಕ್ತಿಯಾಗಿದ್ದನು ಎಂಬುದು ಕೇವಲ ಕೆಲವರಿಗೆ ನೆನಪಿದೆ. ಅಲಕ್ಷಿಸಲ್ಪಟ್ಟಿರುವ ಈ ಮೂಲಕರ್ತನ ಹೆಸರು ಸಾರಾಫಿಮ್ ಆಗಿದೆ. ಬೈಬಲನ್ನು ಪ್ರವರ್ಧಿಸಲಿಕ್ಕಾಗಿ ಅವನು ಮಾಡಿದ ಧೀರ ಯತ್ನವೇ ಅವನ ಸಾವಿಗೆ ಒಂದು ಕಾರಣವಾಯಿತು.
ಸಾರಾಫಿಮನು ಗ್ರೀಸ್ ದೇಶವು ಆಟಮಾನ್ ಸಾಮ್ರಾಜ್ಯದ ಭಾಗವಾಗಿದ್ದ ಸಮಯದಲ್ಲಿ ಜೀವಿಸುತ್ತಿದ್ದನು. ಆ ಅವಧಿಯಲ್ಲಿ “ಒಳ್ಳೇ ಶಾಲೆಗಳು ಇರಲಿಲ್ಲ” ಮತ್ತು ಪಾದ್ರಿಗಳ ಸಮೇತ “ಹೆಚ್ಚಿನ ಜನರು ವಿದ್ಯಾಭ್ಯಾಸವಿಲ್ಲದವರು ಆಗಿದ್ದರು” ಎಂದು ಗ್ರೀಕ್ ಆರ್ತೊಡಾಕ್ಸ್ ವಿದ್ವಾಂಸರಾದ ಜಾರ್ಜ್ ಮೆಟಾಲೀನಾಸ್ ಹೇಳುತ್ತಾರೆ.
ಕಾಯ್ನೆ (ಸಾಮಾನ್ಯ) ಗ್ರೀಕ್ ಭಾಷೆಗೂ, ಆ ಸಮಯದಲ್ಲಿ ಜನರಾಡುತ್ತಿದ್ದ ಗ್ರೀಕ್ ಭಾಷೆ ಹಾಗೂ ಅದರ ಹಲವಾರು ಉಪಭಾಷೆಗಳಿಗೂ ಒಂದು ದೊಡ್ಡ ಅಂತರವಿತ್ತು. ಆ ಅಂತರವು ಎಷ್ಟು ದೊಡ್ಡದಾಯಿತೆಂದರೆ, ಶಾಲಾ ಶಿಕ್ಷಣಪಡೆದಿರದ ಯಾರಿಗೂ ಕಾಯ್ನೆ ಭಾಷೆಯನ್ನು ಅರ್ಥಮಾಡಿಕೊಳ್ಳಲಾಗುತ್ತಿರಲಿಲ್ಲ. ಅಲ್ಲದೆ ಇದೇ ಭಾಷೆಯಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳು ಬರೆಯಲ್ಪಟ್ಟಿದ್ದವು. ಭಾಷೆಗಳ ಬಗ್ಗೆ ಆರಂಭವಾದ ಈ ವಿವಾದದಲ್ಲಿ ಚರ್ಚು ಯಾರಿಗೂ ಅರ್ಥವಾಗದಿದ್ದ ಕಾಯ್ನೆ ಗ್ರೀಕ್ ಭಾಷೆಗೆ ತನ್ನ ಒಪ್ಪಿಗೆಯನ್ನು ನೀಡಿತು.
ಇಂಥ ಒಂದು ವಾತಾವರಣದಲ್ಲಿ ಸ್ಟೀಫನಾಸ್ ಇಯೊನಿಸ್ ಪೋಗೋನಾಟೋಸ್ ಎಂಬವನು ಸುಮಾರು 1670ರಲ್ಲಿ ಗ್ರೀಸ್ ದೇಶದ ಲೆಸ್ವಾಸ್ ದ್ವೀಪದಲ್ಲಿ ಒಂದು ಪ್ರಖ್ಯಾತ ಕುಟುಂಬದಲ್ಲಿ ಹುಟ್ಟಿದನು. ಈ ದ್ವೀಪದಲ್ಲಿ ಎಲ್ಲೆಡೆಯೂ ಬಡತನ ಮತ್ತು ಅನರಕ್ಷರತೆಯು ರಾರಾಜಿಸುತ್ತಿತ್ತು. ಅಲ್ಲಿ ಶಾಲೆಗಳಿಲ್ಲದ್ದರಿಂದ ಮೂಲ ಶಿಕ್ಷಣವನ್ನು ಪಡೆಯಲಿಕ್ಕಾಗಿ ಸ್ಟೀಫನಾಸ್ ಅನ್ಯಮಾರ್ಗವಿಲ್ಲದೆ ಒಂದು ಸ್ಥಳಿಕ ಕ್ರೈಸ್ತ ಸಂನ್ಯಾಸಿಮಠಕ್ಕೆ ಹೋಗಬೇಕಾಯಿತು. ತುಂಬ ಎಳೆಯ ಪ್ರಾಯದಲ್ಲೇ ಅವನನ್ನು ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಧರ್ಮಾಧಿಕಾರಿಯಾಗಿ ನೇಮಿಸಲಾಯಿತು, ಮತ್ತು ಅವನಿಗೆ ಸಾರಾಫಿಮ್ ಎಂಬ ಹೆಸರನ್ನು ಕೊಡಲಾಯಿತು.
ಸಾರಾಫಿಮ್ಗಿದ್ದ ಜ್ಞಾನದಾಹವು ಅವನು ಸುಮಾರು 1693ನೇ ಇಸವಿಯಲ್ಲಿ ಕಾನ್ಸ್ಟಾಂಟಿನೋಪಲ್ಗೆ (ಈಗ ಇಸ್ಟಾನ್ಬುಲ್, ಟರ್ಕಿ) ಹೋಗುವಂತೆ ಮಾಡಿತು. ಕಾಲಾನಂತರ ಅಲ್ಲಿ ಅವನು ತನ್ನ ಕೌಶಲಗಳಿಂದಾಗಿ ಗ್ರೀಕ್ ಗಣ್ಯವ್ಯಕ್ತಿಗಳ ಗೌರವವನ್ನು ಸಂಪಾದಿಸಿಕೊಂಡನು. ಸ್ವಲ್ಪ ಸಮಯದ ನಂತರ, ಒಂದು ಗುಪ್ತ ಗ್ರೀಕ್ ರಾಷ್ಟ್ರವಾದಿ ಚಳವಳಿಯು ಅವನನ್ನು ರಷ್ಯದ ಚಕ್ರವರ್ತಿಯಾಗಿದ್ದ ಪೀಟರ್ ದ ಗ್ರೇಟ್ನ ಬಳಿ ಒಬ್ಬ ಗುಪ್ತದೂತನನ್ನಾಗಿ ಕಳುಹಿಸಿತು. ಮಾಸ್ಕೋಗೆ ಹೋಗುವ ಮತ್ತು ಅಲ್ಲಿಂದ ತೆರಳುವ ಪ್ರಯಾಣದಲ್ಲಿ ಸಾರಾಫಿಮ್ ಯೂರೋಪಿನ ಹೆಚ್ಚಿನ ಭಾಗವನ್ನು ದಾಟಿಬಂದನು ಮತ್ತು ಹೀಗೆ ಅವನು ಧಾರ್ಮಿಕ ಹಾಗೂ ಬೌದ್ಧಿಕ ಸುಧಾರಣೆಯ ಪ್ರವೃತ್ತಿಗಳನ್ನು ಗಮನಿಸಿದನು. 1698ರಲ್ಲಿ ಸಾರಾಫಿಮ್ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದನು ಮತ್ತು ಲಂಡನ್ ಹಾಗೂ ಆಕ್ಸ್ಫರ್ಡ್ನಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡನು. ಅವನನ್ನು ಆ್ಯಂಗ್ಲಿಕನ್ ಚರ್ಚಿನ ಶಿರಸ್ಸಾಗಿರುವ ಕ್ಯಾಂಟರ್ಬರಿಯ ಆರ್ಚ್ಬಿಷಪ್ಗೆ ಪರಿಚಯಪಡಿಸಲಾಯಿತು. ಈ ಪರಿಚಯವು, ಬಲುಬೇಗನೆ ಸಾರಾಫಿಮ್ಗೆ ತುಂಬ ಉಪಯುಕ್ತವಾಗಿ ಪರಿಣಮಿಸಲಿತ್ತು.
ಬೈಬಲನ್ನು ಪ್ರಕಟಿಸುವುದು
ಇಂಗ್ಲೆಂಡ್ನಲ್ಲಿದ್ದಾಗ ಸಾರಾಫಿಮನು, ಗ್ರೀಕ್ ಜನರಿಗೆ “ಹೊಸ ಒಡಂಬಡಿಕೆಯ” (ಕ್ರೈಸ್ತ ಗ್ರೀಕ್ ಶಾಸ್ತ್ರಗಳ) ನವೀನ ಮತ್ತು ಅರ್ಥೈಸಿಕೊಳ್ಳಲು ಸುಲಭವಾದ ಭಾಷಾಂತರದ ಒಂದು ಆವೃತ್ತಿಯ ತೀವ್ರ ಅಗತ್ಯವಿದೆಯೆಂಬ ತೀರ್ಮಾನಕ್ಕೆ ಬಂದನು. ಅರ್ಧ ಶತಮಾನಕ್ಕಿಂತಲೂ ಹೆಚ್ಚು ಸಮಯದಷ್ಟು ಹಿಂದೆ ಮ್ಯಾಕ್ಸಮಸ್ ಎಂಬ ಕ್ರೈಸ್ತ ಸಂನ್ಯಾಸಿಯು ತಯಾರಿಸಿದ್ದ ಒಂದು ಭಾಷಾಂತರವನ್ನು ಉಪಯೋಗಿಸಿ ಸಾರಾಫಿಮ್ ಒಂದು ಹೊಸ, ದೋಷಮುಕ್ತ, ಸುಲಭವಾಗಿ ಅರ್ಥೈಸಬಹುದಾದ ಭಾಷಾಂತರದ ಆವೃತ್ತಿಯನ್ನು ಪ್ರಕಟಿಸಲು ಆರಂಭಿಸಿದನು. ಬಹು ಉತ್ಸಾಹದಿಂದ ಅವನು ಆ ಕೆಲಸವನ್ನಾರಂಭಿಸಿದನು. ಆದರೆ ಅವನ ಬಳಿಯಿದ್ದ ಎಲ್ಲ ಹಣವೂ ಬೇಗನೆ ಮುಗಿದುಹೋಯಿತು. ಕ್ಯಾಂಟರ್ಬರಿಯ ಆರ್ಚ್ಬಿಷಪನು ಅವನಿಗೆ ಬೇಕಾದ ಹಣಕಾಸಿನ ನೆರವನ್ನು ಕೊಡುವುದಾಗಿ ಮಾತುಕೊಟ್ಟಾಗ ಸ್ಥಿತಿಯು ಸ್ವಲ್ಪ ಸುಧಾರಿಸಿತು. ಇಂಥ ಬೆಂಬಲದಿಂದ ಉತ್ತೇಜಿತನಾದ ಸಾರಾಫಿಮ್ ಮುದ್ರಣಕ್ಕಾಗಿ ಕಾಗದವನ್ನು ಖರೀದಿಸಿ, ಒಬ್ಬ ಮುದ್ರಣಕಾರನೊಂದಿಗೆ ಬೇಕಾದ ಏರ್ಪಾಡುಗಳನ್ನು ಮಾಡಿದನು.
ಆದರೆ ಅವನಿಗೆ ಸಿಕ್ಕಿದ ಹಣದಿಂದ ಮುದ್ರಣವನ್ನು ಕೇವಲ ಲೂಕನ ಸುವಾರ್ತಾಪುಸ್ತಕದ ಅರ್ಧಭಾಗದ ವರೆಗೆ ಮುಂದುವರಿಸಲು ಸಾಧ್ಯವಾಯಿತು. ಅನಂತರ, ಇಂಗ್ಲೆಂಡಿನಲ್ಲಿ ರಾಜಕೀಯ ಬದಲಾವಣೆಗಳಾದದ್ದರಿಂದ ಕ್ಯಾಂಟರ್ಬರಿಯ ಅರ್ಚ್ಬಿಷಪನು ಹಣಕೊಡುವುದನ್ನು ನಿಲ್ಲಿಸಬೇಕಾಯಿತು. ಆದರೂ ಸಾರಾಫಿಮನು ಎದೆಗುಂದದೆ ಕೆಲವು ಧನಿಕ ವ್ಯಕ್ತಿಗಳಿಂದ ಸಹಾಯವನ್ನು ಕೋರಿ, 1703ರಲ್ಲಿ ತನ್ನ ಪರಿಷ್ಕೃತ ಭಾಷಾಂತರ ಆವೃತ್ತಿಯನ್ನು ಪ್ರಕಟಿಸುವುದರಲ್ಲಿ ಸಫಲನಾದನು. ಆ ಮುದ್ರಣ ಖರ್ಚನ್ನು, ‘ವಿದೇಶಗಳಲ್ಲಿ ಸುವಾರ್ತೆಯನ್ನು ಪ್ರಸಾರಮಾಡುವ ಸಂಘ’ ಭಾಗಶಃ ತುಂಬಿಸಿತು.
ಮ್ಯಾಕ್ಸಮಸನ ಎರಡು ಸಂಪುಟದ ಹಳೆಯ ಭಾಷಾಂತರದಲ್ಲಿ ಮೂಲ ಗ್ರೀಕ್ ಗ್ರಂಥಪಾಠವು ಒಳಗೂಡಿತ್ತು. ಆ ಗ್ರಂಥವು ತುಂಬ ದೊಡ್ಡದ್ದೂ ಭಾರವೂ ಆಗಿತ್ತು. ಆದರೆ ಸಾರಾಫಿಮ್ನ ಪರಿಷ್ಕೃತ ಆವೃತ್ತಿಯನ್ನು ಇನ್ನೂ ಚಿಕ್ಕದಾದ ಅಕ್ಷರಗಳಲ್ಲಿ ಮುದ್ರಿಸಲಾಯಿತು, ಅದರಲ್ಲಿ ಕೇವಲ ಆಧುನಿಕ ಗ್ರೀಕ್ ಭಾಷಾಂತರವಿತ್ತು ಮತ್ತು ಈ ಕಾರಣದಿಂದ ಆ ಪುಸ್ತಕವು ದಪ್ಪವಾಗಿರಲಿಲ್ಲ ಹಾಗೂ ದುಬಾರಿಯೂ ಆಗಿರಲಿಲ್ಲ.
ವಿವಾದವನ್ನು ಉಲ್ಬಣಿಸಿದ್ದು
“ಈ ಸದ್ಯೋಚಿತ ಪ್ರಕಾಶನವು ಜನರಿಗಿದ್ದ ಒಂದು ನೈಜ ಅಗತ್ಯವನ್ನು ನೀಗಿಸಿತೆಂಬುದು ನಿಶ್ಚಯ” ಎಂದು ವಿದ್ವಾಂಸ ಜಾರ್ಜ್ ಮೆಟಾಲೀನಸ್ ಹೇಳುತ್ತಾನೆ. “ಆದರೆ ಸಾರಾಫಿಮನು, [ಬೈಬಲ್] ಭಾಷಾಂತರಗಳನ್ನು ವಿರೋಧಿಸುತ್ತಿದ್ದ ಪಾದ್ರಿಗಳ ಒಂದು ಗುಂಪಿನ ಮೇಲೆ ದಾಳಿ ಮಾಡಲು ಈ ಅವಕಾಶವನ್ನು ಬಳಸಿಕೊಂಡನು.” ತನ್ನ ಈ ಅವೃತ್ತಿಯನ್ನು, ‘[ಕಾಯ್ನೆ] ಗ್ರೀಕ್ ಭಾಷೆಯನ್ನು ಅರ್ಥಮಾಡಿಕೊಳ್ಳಲಾಗದ ಒಂದು ನಿರ್ದಿಷ್ಟ ಪಾದ್ರಿಗಳ ಗುಂಪು ಹಾಗೂ ಪ್ರೆಸ್ಬಿಟೇರಿಯನ್ ಚರ್ಚಿನ ಕೆಲವು ಹಿರಿಯರು ಅತಿ ಪರಿಶುದ್ಧವಾದ ಆತ್ಮದ ಸಹಾಯದಿಂದ ಇದನ್ನು ಓದಿ ಮೂಲ ಗ್ರಂಥಪಾಠದಿಂದ ಏನಾದರೂ ಅರ್ಥಮಾಡಿಕೊಂಡು ಸಾಮಾನ್ಯ ಕ್ರೈಸ್ತರಿಗೆ ಕಲಿಸಲು ಸಾಧ್ಯವಾಗುವಂತೆ ನಿರ್ದಿಷ್ಟವಾಗಿ ಅವರಿಗೋಸ್ಕರ’ ಮುದ್ರಿಸಿದ್ದೇನೆ ಎಂದು ಸಾರಾಫಿಮನು ಪ್ರಸ್ತಾವನೆಯಲ್ಲಿ ಹೇಳಿದನು. ಅವನ ಈ ಮಾತುಗಳು ಪಾದ್ರಿಗಳ ಕೋಪವನ್ನು ಕೆರಳಿಸಿತು. (ಆಧುನಿಕ ಗ್ರೀಕ್ ಭಾಷೆಯಲ್ಲಿರುವ ಬೈಬಲ್ ಭಾಷಾಂತರ—19ನೇ ಶತಮಾನದಲ್ಲಿ) ಹೀಗೆ ಸಾರಾಫಿಮನು ಬೈಬಲ್ ಭಾಷಾಂತರದ ಕುರಿತಾಗಿ ಗ್ರೀಕ್ ಆರ್ತೊಡಾಕ್ಸ್ ಚರ್ಚಿನಲ್ಲಿದ್ದ ಸುಳಿಯಲ್ಲಿ ತನ್ನನ್ನೇ ಸಿಲುಕಿಸಿಕೊಂಡನು.
ಈ ವಿವಾದದ ಒಂದು ಪಕ್ಷದವರು, ಜನರ ಆಧ್ಯಾತ್ಮಿಕ ಹಾಗೂ ನೈತಿಕ ಬೆಳವಣಿಗೆಯು ಬೈಬಲಿನ ಕುರಿತಾದ ಅವರ ತಿಳುವಳಿಕೆಯ ಮೇಲೆ ಹೊಂದಿಕೊಂಡಿದೆ ಎಂದು ಗ್ರಹಿಸಿದವರಾಗಿದ್ದರು. ಸ್ವತಃ ಪಾದ್ರಿವರ್ಗದ ಸದಸ್ಯರೇ ಬೈಬಲಿನ ಕುರಿತಾದ ತಮ್ಮ ಸ್ವಂತ ಜ್ಞಾನವನ್ನು ಹೆಚ್ಚಿಸಬೇಕೆಂಬುದೂ ಅವರ ಅಭಿಪ್ರಾಯವಾಗಿತ್ತು. ಅಷ್ಟುಮಾತ್ರವಲ್ಲದೆ ಬೈಬಲ್ ಭಾಷಾಂತರದ ಪ್ರತಿಪಾದಕರ ಅಭಿಪ್ರಾಯಕ್ಕನುಸಾರ, ಶಾಸ್ತ್ರಾಧಾರಿತ ಸತ್ಯಗಳನ್ನು ಯಾವುದೇ ಭಾಷೆಯಲ್ಲಿ ತಿಳಿಸಬಹುದಾಗಿತ್ತು.—ಪ್ರಕಟನೆ 7:9.
ಆದರೆ ಬೈಬಲನ್ನು ಯಾವುದೇ ಭಾಷೆಗೆ ಭಾಷಾಂತರಿಸುವುದರಿಂದ ಅದರ ಒಳವಿಷಯಗಳು ಕಲಬೆರಕೆಯಾಗುವುವು ಮತ್ತು ಅದರ ಅರ್ಥವಿವರಣೆ ಹಾಗೂ ಸಿದ್ಧಾಂತಗಳ ವಿಷಯದಲ್ಲಿ ಚರ್ಚ್ಗೆ ಇರುವ ಅಧಿಕಾರವು ರದ್ದಾಗುವದೆಂಬುದು ಬೈಬಲ್ ಭಾಷಾಂತರದ ಪ್ರತಿಕಕ್ಷಿಗಳು ಬಳಸುತ್ತಿದ್ದ ನೆಪವಾಗಿತ್ತು. ನಿಜವಾಗಿ ಅವರಿಗಿದ್ದ ಭಯವೇನೆಂದರೆ, ಬೈಬಲಿನ ಭಾಷಾಂತರವನ್ನು ಬಳಸಿ ಪ್ರಾಟೆಸ್ಟಂಟರು ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಅಧಿಕಾರವನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂಬುದೇ. ಪ್ರಾಟೆಸ್ಟಂಟರ ಪರವಾಗಿರುವ ಯಾವುದೇ ಬೆಳವಣಿಗೆಯನ್ನು—ಸಾಮಾನ್ಯ ಜನರು ಬೈಬಲನ್ನು ಅರ್ಥೈಸಿಕೊಳ್ಳುವಂತೆ ಮಾಡಲಾಗುವ ಪ್ರಯತ್ನಗಳನ್ನು ಸಹ—ವಿರೋಧಿಸುವುದು ತಮ್ಮ ಕರ್ತವ್ಯವೆಂದು ಅನೇಕ ಪಾದ್ರಿಗಳು ನೆನಸುತ್ತಿದ್ದರು. ಹೀಗೆ ಬೈಬಲಿನ ಭಾಷಾಂತರವು, ಪ್ರಾಟೆಸ್ಟಂಟ್ವಾದ ಮತ್ತು ಸಂಪ್ರದಾಯಬದ್ಧ ಚರ್ಚಿನ ನಡುವಣ ಸಂಘರ್ಷದಲ್ಲಿ ಒಂದು ದೊಡ್ಡ ವಿವಾದಾಂಶವಾಯಿತು.
ಸಾರಾಫಿಮ್ಗೆ ಆರ್ತೊಡಾಕ್ಸ್ ಚರ್ಚನ್ನು ಬಿಟ್ಟುಬಿಡಲು ಸ್ವಲ್ಪವೂ ಮನಸ್ಸಿಲ್ಲದಿದ್ದರೂ, ತನ್ನ ಎದುರಾಳಿಗಳಾಗಿದ್ದ ಪಾದ್ರಿಗಳ ಅಜ್ಞಾನ ಮತ್ತು ಅಂಧಾಭಿಮಾನವನ್ನು ಅವನು ಬಟ್ಟಬಯಲುಗೊಳಿಸಿದನು. ತನ್ನ ‘ಹೊಸ ಒಡಂಬಡಿಕೆಯ’ ಪ್ರಸ್ತಾವನೆಯಲ್ಲಿ ಅವನು ಬರೆದುದು: “ಪ್ರತಿಯೊಬ್ಬ ದೇವಭೀರು ಕ್ರೈಸ್ತನು ಪವಿತ್ರ ಬೈಬಲನ್ನು ಓದಲೇಬೇಕು,” ಮತ್ತು ಹೀಗೆ ಅವನು “ಕ್ರಿಸ್ತನನ್ನು ಅನುಕರಿಸುವವನು ಮತ್ತು ಅವನ ಬೋಧನೆಗೆ ವಿಧೇಯನು” ಆಗುವನು. ಬೈಬಲ್ ಅಧ್ಯಯನವನ್ನು ನಿಷೇಧಿಸುವುದು ಪಿಶಾಚನ ವಿಚಾರವಾಗಿದೆಯೆಂದು ಸಾರಾಫಿಮನು ವಾದಿಸಿದನು.
ವಿರೋಧದ ಅಲೆ
ಸಾರಾಫಿಮನ ಆ ಬೈಬಲ್ ಆವೃತ್ತಿಯು ಗ್ರೀಸ್ ದೇಶವನ್ನು ತಲಪಿದಾಗ ಅದು ಅಲ್ಲಿನ ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಕೋಪವನ್ನು ಕೆರಳಿಸಿತು. ಆ ಹೊಸ ಭಾಷಾಂತರದ ಆವೃತ್ತಿಯನ್ನು ನಿಷೇಧಿಸಲಾಯಿತು. ಆ ಬೈಬಲ್ ಭಾಷಾಂತರದ ಆವೃತ್ತಿಯ ಪ್ರತಿಗಳನ್ನು ಸುಟ್ಟುಹಾಕಲಾಯಿತು ಮತ್ತು ಯಾರಾದರೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಲ್ಲಿ ಅಥವಾ ಅದನ್ನು ಓದುವಲ್ಲಿ ಅವರನ್ನು ಚರ್ಚ್ನಿಂದ ಹೊರಗೆ ಹಾಕುವ ಬೆದರಿಕೆಯನ್ನೊಡ್ಡಲಾಯಿತು. ಪೇಟ್ರಿಯಾರ್ಕ್ ಗೇಬ್ರಿಯೆಲ್ III, ಸಾರಾಫಿಮನ ಈ ಭಾಷಾಂತರವನ್ನು ಅನಾವಶ್ಯಕ ಹಾಗೂ ನಿಷ್ಪ್ರಯೋಜಕವೆಂದು ಕರೆದು, ಅದರ ಪ್ರಸಾರವನ್ನು ನಿಷೇಧಿಸಿದನು.
ಇದರಿಂದ ಸಾರಾಫಿಮ್ ನಿರಾಶೆಗೊಳ್ಳದಿದ್ದರೂ, ತಾನು ಹೆಚ್ಚು ಜಾಗರೂಕನಾಗಿರಬೇಕೆಂಬುದು ಅವನಿಗೆ ತಿಳಿಯಿತು. ಚರ್ಚ್ನಿಂದ ಹೇರಲ್ಪಟ್ಟ ಅಧಿಕೃತ ನಿಷೇಧದ ಮಧ್ಯೆಯೂ, ಹಲವಾರು ಪಾದ್ರಿಗಳು ಮತ್ತು ಸಾಮಾನ್ಯ ಜನರು ಅವನ ಭಾಷಾಂತರವನ್ನು ಸ್ವೀಕರಿಸಿದರು. ಆ ಭಾಷಾಂತರವನ್ನು ವಿತರಿಸುವುದರಲ್ಲಿ ಅವನು ತುಂಬ ಯಶಸ್ವಿಯಾಗಿದ್ದನು. ಆದರೂ ಇದು ಅವನ ಪ್ರಭಾವಶಾಲಿ ಪ್ರತಿಕಕ್ಷಿಗಳೊಂದಿಗಿನ ಸಂಘರ್ಷದ ಆರಂಭವಾಗಿತ್ತಷ್ಟೇ.
ಅವಸಾನದ ಆರಂಭ
ಬೈಬಲ್ ವಿತರಣೆಯನ್ನು ಪ್ರವರ್ಧಿಸುವುದಲ್ಲದೆ, ಸಾರಾಫಿಮನು ಕ್ರಾಂತಿಕಾರಿ ಹಾಗೂ ರಾಷ್ಟ್ರವಾದಿ ಚಳುವಳಿಗಳಲ್ಲೂ ಮಗ್ನನಾದನು. ಇವುಗಳನ್ನು ಬೆನ್ನಟ್ಟಲಿಕ್ಕಾಗಿ ಅವನು 1704ರ ಬೇಸಗೆಕಾಲದಲ್ಲಿ ಮಾಸ್ಕೋಗೆ ಹಿಂದಿರುಗಿದನು. ಅಲ್ಲಿ ಅವನು ಚಕ್ರವರ್ತಿಯಾದ ಪೀಟರ್ ದ ಗ್ರೇಟ್ನ ಆಪ್ತಮಿತ್ರನಾದನು ಮತ್ತು ಕೆಲ ಸಮಯ ರಷ್ಯನ್ ರಾಯಲ್ ಅಕಾಡೆಮಿಯಲ್ಲಿ ಪ್ರೊಫೆಸರನಾಗಿದ್ದನು. ಆದರೆ ತನ್ನ ಭಾಷಾಂತರಕ್ಕೆ ಏನಾಗಬಹುದೆಂಬ ಚಿಂತೆಯಿಂದಾಗಿ ಅವನು 1705ರಲ್ಲಿ ಕಾನ್ಸ್ಟೆಂಟಿನೋಪಲ್ಗೆ ಹಿಂದಿರುಗಿದನು.
ಅದೇ ವರ್ಷದಲ್ಲಿ ಸಾರಾಫಿಮ್ ತನ್ನ ಭಾಷಾಂತರದ ಆವೃತ್ತಿಯ ಒಂದು ಪುನರ್ಮುದ್ರಣದಿಂದ, ತನ್ನ ಮೂಲ ಮುದ್ರಣದಲ್ಲಿದ್ದಂಥ ಟೀಕಾತ್ಮಕ ಪ್ರಸ್ತಾವನೆಯನ್ನು ತೆಗೆದುಹಾಕಿದನು. ಬೈಬಲನ್ನು ಓದುವಂತೆ ಉತ್ತೇಜಿಸುವ ಒಂದು ಸರಳವಾದ ಮುನ್ನುಡಿಯನ್ನು ಸೇರಿಸಿದನು. ಈ ಆವೃತ್ತಿಗೆ ಬಹುವ್ಯಾಪಕವಾದ ಚಲಾವಣೆ ಇತ್ತು, ಮತ್ತು ಪೇಟ್ರಿಯಾರ್ಕನು ಪ್ರತಿಕೂಲ ಪ್ರತಿಕ್ರಿಯೆ ತೋರಿಸಿರುವ ಬಗ್ಗೆ ಯಾವುದೇ ದಾಖಲೆಯಿಲ್ಲ.
ಹಾಗಿದ್ದರೂ 1714ರಲ್ಲಿ ಒಬ್ಬ ಗ್ರೀಕ್ ಯಾತ್ರಿ ಮತ್ತು ಬೈಬಲ್ ಭಾಷಾಂತರದ ಪ್ರತಿಕಕ್ಷಿಯಾಗಿದ್ದ ಆಲಕ್ಸಾಂಡರ್ ಎಲ್ಲಾಡ್ಯಾಸ್ನಿಂದ ಒಂದು ಧ್ವಂಸಕಾರಿ ಪೆಟ್ಟು ಬಿತ್ತು. ಗ್ರೀಕ್ ಚರ್ಚಿನ ಸದ್ಯದ ಸ್ಥಾನ (ಗ್ರೀಕ್) ಎಂಬ ತನ್ನ ಪುಸ್ತಕದಲ್ಲಿ ಅವನು ಬೈಬಲ್ ಭಾಷಾಂತರಕಾರರು ಮತ್ತು ಅವರ ಭಾಷಾಂತರಗಳ ವಿರುದ್ಧ ಆವೇಶಭರಿತ ವಾಗ್ದಾಳಿಯನ್ನು ಮಾಡಿದನು. ಎಲ್ಲಾಡ್ಯಾಸನು ಒಂದು ಇಡೀ ಅಧ್ಯಾಯದಲ್ಲಿ ಸಾರಾಫಿಮ್ ಬಗ್ಗೆ ಬರೆದನು. ಅದರಲ್ಲಿ ಅವನನ್ನು ಒಬ್ಬ ಕಳ್ಳ, ಮೋಸಗಾರ, ಅನಕ್ಷರಸ್ಥ ಮತ್ತು ಅನೈತಿಕ ವಂಚಕನಾಗಿ ಸಾದರಪಡಿಸಿದನು. ಈ ಎಲ್ಲ ಆರೋಪಗಳಲ್ಲಿ ಏನಾದರೂ ಸತ್ಯಾಂಶವಿತ್ತೊ? ಅನೇಕ ಮಂದಿ ವಿದ್ವಾಂಸರ ಬೋಧಪ್ರದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಲೇಖಕನಾದ ಸ್ಟೀಲೀಆನಾಸ್ ಬೈರಾಕ್ಟಾರೀಸ್ ಹೇಳಿದ್ದೇನೆಂದರೆ, ಸಾರಾಫಿಮ್ ‘ಒಬ್ಬ ಕುಶಲಿ ಮತ್ತು ಜ್ಞಾನೋದಯವುಳ್ಳ ಅಗ್ರಗಾಮಿ’ಯಾಗಿದ್ದನು ಮತ್ತು ತನ್ನ ಸಮಕಾಲೀನರ ತಿಳಿವಳಿಕೆಗೆ ಮೀರಿದ ಜ್ಞಾನವುಳ್ಳವನಾಗಿದ್ದುದರಿಂದ ಅವನ ಮೇಲೆ ಆಕ್ರಮಣಮಾಡಲಾಗಿತ್ತು. ಆದರೆ ಎಲ್ಲಾಡ್ಯಾಸನ ಆ ಪುಸ್ತಕವೇ ಸಾರಾಫಿಮನ ಕ್ಲೇಶಭರಿತ ಅಂತ್ಯಕ್ಕೆ ನಡಿಸಿತು.
ಸಂದೇಹದ ನೆರಳಲ್ಲಿ
ಇಸವಿ 1731ರಲ್ಲಿ ಸಾರಾಫಿಮ್ ರಷ್ಯಕ್ಕೆ ಹಿಂದಿರುಗಿದಾಗ ಚಕ್ರವರ್ತಿ ಪೀಟರ್ ದ ಗ್ರೇಟ್ ಆಗಲೇ ಸಾವನ್ನಪ್ಪಿದ್ದನು. ಈಗ ಈ ಗ್ರೀಕ್ ಕ್ರೈಸ್ತ ಅಧಿಕಾರಿಗೆ ಯಾವುದೇ ರೀತಿಯ ಅಧಿಕೃತ ಸಂರಕ್ಷಣೆಯಿರಲಿಲ್ಲ. ಆ ಸಮಯದಲ್ಲಿ ರಷ್ಯಾವನ್ನು ಆಳುತ್ತಿದ್ದ ಚಕ್ರವರ್ತಿನಿ ಆ್ಯನಾ ಇವಾನವ್ನಳು ತನ್ನ ರಾಜ್ಯದಲ್ಲಿ ಗಲಭೆ ಹುಟ್ಟಿಸುವಂತೆ ತೋರುವ ಯಾವುದೇ ಚಟುವಟಿಕೆಯ ಬಗ್ಗೆ ತುಂಬ ಎಚ್ಚರಿಕೆಯಿಂದಿದ್ದಳು. 1732ರ ಜನವರಿಯಲ್ಲಿ, ರಷ್ಯನ್ ಸಾಮ್ರಾಜ್ಯದ ವಿರುದ್ಧವಾಗಿ ಒಬ್ಬ ಗ್ರೀಕ್ ಬೇಹುಗಾರನು ಕೆಲಸಮಾಡುತ್ತಿದ್ದಾನೆಂಬ ಗಾಳಿಸುದ್ದಿ ಸೆಂಟ್ ಪೀಟರ್ಸ್ಬರ್ಗ್ನಲ್ಲಿ ಹಬ್ಬಿಕೊಂಡಿತ್ತು. ಆ ವ್ಯಕ್ತಿ ಸಾರಾಫಿಮ್ ಆಗಿದ್ದನೆಂಬ ಗುಮಾನಿಯಿತ್ತು. ಅವನನ್ನು ದಸ್ತಗಿರಿಮಾಡಿ, ವಿಚಾರಣೆಗಾಗಿ ನೇವ್ಸ್ಕೈ ಸಂನ್ಯಾಸಿಮಠಕ್ಕೆ ಕಳುಹಿಸಲಾಯಿತು. ಅಲ್ಲಿ, ಸಾರಾಫಿಮನ ವಿಭಿನ್ನ ಅಪರಾಧಗಳ ಬಗ್ಗೆ ಅವನನ್ನು ಆರೋಪಿಸಿದ್ದ ಎಲ್ಲಾಡ್ಯಾಸನ ಪುಸ್ತಕದ ಪ್ರತಿಯಿತ್ತು. ಈ ಎಲ್ಲ ಆರೋಪಗಳನ್ನು ತಳ್ಳಿಹಾಕಲು ಆ ಸಂನ್ಯಾಸಿಯು ಮೂರು ಲಿಖಿತ ಸಮರ್ಥನೆ ವಾದಗಳನ್ನು ಮಂಡಿಸಿದನು. ವಿಚಾರಣೆಯು ಸುಮಾರು ಐದು ತಿಂಗಳುಗಳ ವರೆಗೆ ನಡೆಯಿತು. ಆದರೂ ಸಾರಾಫಿಮನ ಕುರಿತಾಗಿ ಇದ್ದ ಸಂದೇಹದ ನೆರಳು ದಾಟಿಹೋಗಲಿಲ್ಲ.
ಸಾರಾಫಿಮನ ವಿರುದ್ಧ ಯಾವುದೇ ಸ್ಪಷ್ಟವಾದ ಸಾಕ್ಷ್ಯ ಇಲ್ಲದಿದ್ದರಿಂದ ಅವನಿಗೆ ಮರಣದಂಡನೆ ಕೊಡಲ್ಪಡಲಿಲ್ಲ. ಆದರೆ ಎಲ್ಲಾಡ್ಯಾಸನ ಆ ಆರೋಪಗಳ ಕಾರಣ ಸಾರಾಫಿಮನನ್ನು ಬಿಟ್ಟುಬಿಡಲು ಸಹ ಅಧಿಕಾರಿಗಳು ಹಿಂಜರಿದರು. ಆದುದರಿಂದ ಈ ಗ್ರೀಕ್ ಸಂನ್ಯಾಸಿಗೆ ಜೀವಾವಧಿಯ ಸೆರೆವಾಸ ಶಿಕ್ಷೆಯನ್ನು ವಿಧಿಸಲಾಯಿತು. ಈ ದಂಡನೆಯನ್ನು “ಗ್ರೀಕ್ ಲೇಖಕನಾದ ಎಲ್ಲಾಡ್ಯಾಸನು ಪ್ರಕಟಿಸಿದ ಪ್ರಬಂಧದಲ್ಲಿ” ಕೊಡಲ್ಪಟ್ಟ ಆರೋಪಗಳ ಆಧಾರದ ಮೇಲೆ ಕೊಡಲಾಗುತ್ತಿದೆಯೆಂದು ತೀರ್ಪಿನಲ್ಲಿ ತಿಳಿಸಲಾಯಿತು. 1732ರ ಜುಲೈ ತಿಂಗಳಿನಲ್ಲಿ ಸಾರಾಫಿಮನನ್ನು, ಕೈಕಾಲುಗಳಿಗೆ ಬೇಡಿಗಳೊಂದಿಗೆ ಪೂರ್ವ ಸೈಬೀರಿಯಕ್ಕೆ ಕಳುಹಿಸಲಾಯಿತು. ಅಲ್ಲಿ ಅವನನ್ನು ಕುಖ್ಯಾತವಾದ ಅಕಾಟ್ಸ್ಕ್ ಕಾರಾಗೃಹಕ್ಕೆ ಹಾಕಲಾಯಿತು.
ಸುಮಾರು ಮೂರು ವರ್ಷಗಳ ಬಳಿಕ ಸಾರಾಫಿಮನು ಪರಿತ್ಯಕ್ತನಾಗಿ ಹಾಗೂ ಯಾರಿಗೂ ನೆನಪಿಲ್ಲದವನಾಗಿ ಸಾವನ್ನಪ್ಪಿದನು. ಅವನು ಮಾಡಿದ ನಿರ್ಣಯಗಳು ಕೆಲವೊಮ್ಮೆ ದಾರಿತಪ್ಪಿದವುಗಳೂ ವಿವೇಚನೆಯಿಲ್ಲದವುಗಳೂ ಆಗಿದ್ದವು. ಹಾಗಿದ್ದರೂ ಅವನ ಭಾಷಾಂತರದ ಆವೃತ್ತಿಯು, ಈಗ ಆಧುನಿಕ ಗ್ರೀಕ್ ಭಾಷೆಯಲ್ಲಿ ಲಭ್ಯವಿರುವ ಅನೇಕಾನೇಕ ಬೈಬಲ್ ಭಾಷಾಂತರಗಳಲ್ಲಿ ಒಂದಾಗಿದೆ.a ಈ ಆಧುನಿಕ ಗ್ರೀಕ್ ಭಾಷೆಯ ಭಾಷಾಂತರಗಳಲ್ಲಿ ಒಂದು, ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಆಗಿದೆ. ಇದು ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಎಲ್ಲೆಡೆಯೂ ಇರುವ ಜನರು ‘ಸತ್ಯದ ಜ್ಞಾನವನ್ನು’ ಪಡೆಯುವ ಅವಕಾಶವನ್ನು ಹೊಂದುವಂತೆ ಯೆಹೋವನು ತನ್ನ ವಾಕ್ಯವನ್ನು ಕಾಪಿಟ್ಟದ್ದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಸಾಧ್ಯವಿದೆ!—1 ತಿಮೊಥೆಯ 2:3, 4.
[ಪಾದಟಿಪ್ಪಣಿ]
a ಇಸವಿ 2002 ನವೆಂಬರ್ 15ರ ಕಾವಲಿನಬುರುಜು ಪತ್ರಿಕೆಯ 26-9ನೇ ಪುಟಗಳಲ್ಲಿ “ಆಧುನಿಕ ಗ್ರೀಕ್ ಭಾಷೆಯಲ್ಲಿ ಬೈಬಲನ್ನು ತಯಾರಿಸಲಿಕ್ಕಾಗಿ ತೀವ್ರ ಪ್ರಯತ್ನ” ಎಂಬ ಲೇಖನವನ್ನು ನೋಡಿ.
[ಪುಟ 12ರಲ್ಲಿರುವ ಚಿತ್ರ]
ಪೀಟರ್ ದ ಗ್ರೇಟ್
[ಪುಟ 10ರಲ್ಲಿರುವ ಚಿತ್ರ ಕೃಪೆ]
ಫೋಟೋಗಳು: Courtesy American Bible Society