ಬೇಟೆಗಾರನ ಬಲೆಯಿಂದ ಬಿಡುಗಡೆ
“ನಿನ್ನನ್ನು ಬೇಟೆಗಾರನ ಬಲೆಯಿಂದಲೂ ಮರಣಕರವ್ಯಾಧಿಯಿಂದಲೂ ತಪ್ಪಿಸುವವನು ಆತನೇ.”—ಕೀರ್ತನೆ 91:3.
ಮಾನವಾತೀತ ಬುದ್ಧಿ ಹಾಗೂ ಕುಟಿಲತೆಯಿರುವ ಒಬ್ಬ ಪರಭಕ್ಷಕನನ್ನು ಎಲ್ಲಾ ಸತ್ಯ ಕ್ರೈಸ್ತರು ಎದುರಿಸುತ್ತಾರೆ. ಅವನನ್ನು ಕೀರ್ತನೆ 91:3ರಲ್ಲಿ “ಬೇಟೆಗಾರ” ಎಂದು ಕರೆಯಲಾಗಿದೆ. ಈ ಶತ್ರು ಯಾರು? ಅವನು ಪಿಶಾಚನಾದ ಸೈತಾನನೆಂದು ಈ ಪತ್ರಿಕೆಯು 1883ರ ಜೂನ್ 1ನೇ ಸಂಚಿಕೆಯಿಂದ ಗುರುತಿಸಿದೆ. ಒಬ್ಬ ಬೇಟೆಗಾರನು ಹಕ್ಕಿಯನ್ನು ಬಲೆಗೆ ಹಾಕಲು ಪ್ರಯತ್ನಿಸುವಂತೆಯೇ ಈ ಶಕ್ತಿಶಾಲಿ ವೈರಿಯು ಯೆಹೋವನ ಜನರನ್ನು ದಾರಿತಪ್ಪಿಸಲು ಮತ್ತು ಬಲೆಗೆ ಬೀಳಿಸಲು ಕುಟಿಲತೆಯಿಂದ ಪ್ರಯತ್ನಿಸುತ್ತಾನೆ.
2 ಹಿಂದಿನ ಕಾಲಗಳಲ್ಲಿ, ಪಕ್ಷಿಗಳನ್ನು ಅವುಗಳ ಮಧುರ ಗಾನಕ್ಕಾಗಿ, ಬಣ್ಣಬಣ್ಣದ ಗರಿಗಳಿಗಾಗಿ ಹಾಗೂ ಆಹಾರ ಮತ್ತು ಬಲಿಗಳಿಗಾಗಿ ಹಿಡಿಯಲಾಗುತ್ತಿತ್ತು. ಆದರೆ ಹಕ್ಕಿಗಳು ಸಹಜವಾಗಿಯೇ ಚುರುಕಾಗಿದ್ದು, ತಟ್ಟನೆ ಹಾರಿಹೋಗುವುದರಿಂದ ಅವು ಬಲೆಗೆ ಬೀಳುವುದು ಕಡಿಮೆ. ಆದುದರಿಂದ ಬೈಬಲ್ ಕಾಲದಲ್ಲಿ ಬೇಟೆಗಾರನು ಹಿಡಿಯಬಯಸುತ್ತಿದ್ದ ಹಕ್ಕಿಗಳ ವೈಶಿಷ್ಟ್ಯಗಳನ್ನು ಮತ್ತು ರೂಢಿಗಳನ್ನು ಜಾಗ್ರತೆಯಿಂದ ಗಮನಿಸಿ ತಿಳಿದುಕೊಳ್ಳುತ್ತಿದ್ದನು. ನಂತರವೇ ಅವುಗಳನ್ನು ಬಲೆಗೆ ಬೀಳಿಸುವ ಕುಟಿಲ ವಿಧಾನಗಳನ್ನು ರಚಿಸುತ್ತಿದ್ದನು. ಬೈಬಲು ಸೈತಾನನನ್ನು ಬೇಟೆಗಾರನಿಗೆ ಹೋಲಿಸುವಾಗ ಅವನ ಕುಟಿಲ ವಿಧಾನಗಳನ್ನು ತಿಳಿದುಕೊಳ್ಳಲು ನಮಗೆ ಸಹಾಯಮಾಡುತ್ತದೆ. ಪಿಶಾಚನು ನಮ್ಮನ್ನು ಒಬ್ಬೊಬ್ಬರಾಗಿ ಗಮನಿಸಿ ತಿಳಿದುಕೊಳ್ಳುತ್ತಾನೆ. ಅವನು ನಮ್ಮ ವೈಶಿಷ್ಟ್ಯಗಳನ್ನೂ ರೂಢಿಗಳನ್ನೂ ಗಮನಿಸಿ, ನಮ್ಮನ್ನು ಜೀವಂತವಾಗಿ ಹಿಡಿಯಲಿಕ್ಕಾಗಿ ನವಿರಾದ ಬಲೆಗಳನ್ನು ಹಾಕಿಡುತ್ತಾನೆ. (2 ತಿಮೊಥೆಯ 2:26, BSI ಪಾದಟಿಪ್ಪಣಿ) ನಾವು ಅವನ ಕೈಗೆ ಸಿಕ್ಕಿಬಿದ್ದರೆ ನಮ್ಮ ಆಧ್ಯಾತ್ಮಿಕ ಅಳಿವು ಮತ್ತು ಕಟ್ಟಕಡೆಗೆ ನಾಶನ ಖಂಡಿತ. ಆದುದರಿಂದ ನಮ್ಮ ಸಂರಕ್ಷಣೆಗಾಗಿ ಈ “ಬೇಟೆಗಾರನ” ವಿಭಿನ್ನ ತಂತ್ರೋಪಾಯಗಳನ್ನು ನಾವು ಗುರುತಿಸಲೇಬೇಕು.
3 ಕಣ್ಣಿಗೆ ಕಟ್ಟುವಂಥ ರೀತಿಯ ವರ್ಣನೆಯನ್ನು ಬಳಸುತ್ತಾ ಕೀರ್ತನೆಗಾರನು ಸೈತಾನನ ತಂತ್ರೋಪಾಯಗಳನ್ನು ಸಿಂಹ ಅಥವಾ ಸರ್ಪದ ಚತುರೋಪಾಯಗಳೊಂದಿಗೂ ಹೋಲಿಸುತ್ತಾನೆ. (ಕೀರ್ತನೆ 91:13) ಒಂದು ಸಿಂಹದಂತೆ ಸೈತಾನನು ಆಗಾಗ್ಗೆ ನೇರವಾದ, ಮುಖಾಮುಖಿ ಆಕ್ರಮಣಗಳನ್ನು ಮಾಡುತ್ತಾನೆ. ಹೇಗೆ? ಯೆಹೋವನ ಜನರ ಮೇಲೆ ಹಿಂಸೆಯನ್ನು ತರುವ ಮೂಲಕ ಇಲ್ಲವೇ ಅವರ ವಿರುದ್ಧ ಸರ್ಕಾರಿ ಕ್ರಮಕೈಗೊಳ್ಳುವ ಮೂಲಕವೇ. (ಕೀರ್ತನೆ 94:20) ಅಂಥ ಸಿಂಹಸದೃಶ ಆಕ್ರಮಣಗಳು ಕೆಲವರನ್ನು ಎಡವಿಹಾಕಬಹುದು. ಆದರೆ ಹೆಚ್ಚಾಗಿ ಈ ಆಕ್ರಮಣಗಳು ತಿರುಗಿಬೀಳುತ್ತವೆ, ಏಕೆಂದರೆ ಅವು ದೇವಜನರ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದರೆ ಸೈತಾನನ ಹೆಚ್ಚು ನವಿರಾದ, ಸರ್ಪದಂಥ ಆಕ್ರಮಣಗಳ ಕುರಿತೇನು ಹೇಳಬಹುದು?
4 ಪಿಶಾಚನು ತನ್ನ ಮಾನವಾತೀತ ಬುದ್ಧಿಯನ್ನು ಉಪಯೋಗಿಸಿ, ಮರೆಯಲ್ಲಿರುವ ಒಂದು ವಿಷಹಾವಿನಂತೆ ಮೋಸಕರ ಹಾಗೂ ಮರಣಕಾರಕ ದಾಳಿಗಳನ್ನು ಮಾಡುತ್ತಾನೆ. ಹೀಗೆ ಮಾಡಿ ಅವನು ದೇವಜನರಲ್ಲಿ ಕೆಲವರ ಮನಸ್ಸಿನಲ್ಲಿ ವಿಷತುಂಬಿಸಿದ್ದಾನೆ. ಯೆಹೋವನ ಚಿತ್ತದ ಬದಲು ತನ್ನ ಇಚ್ಛೆಯನ್ನು ಪೂರೈಸುವಂತೆ ಸೈತಾನನು ಇವರನ್ನು ಮೋಸಗೊಳಿಸಿದ್ದಾನೆ ಮತ್ತು ಇದರ ಪರಿಣಾಮ ದುರಂತಕರವಾಗಿದೆ. ಆದರೆ ಸಂತೋಷದ ಸಂಗತಿಯೇನೆಂದರೆ ನಾವು ಸೈತಾನನ ಕುತಂತ್ರಗಳನ್ನು ಅರಿಯದವರಲ್ಲ. (2 ಕೊರಿಂಥ 2:11) ಈ ‘ಬೇಟೆಗಾರನು’ ಬಳಸುವ ಮಾರಕ ಬಲೆಗಳಲ್ಲಿ ನಾಲ್ಕನ್ನು ನಾವೀಗ ಪರಿಗಣಿಸೋಣ.
ಮನುಷ್ಯನ ಭಯ
5 ‘ಬೇಟೆಗಾರನಿಗೆ’ ಈ ಸಂಗತಿ ಚೆನ್ನಾಗಿ ತಿಳಿದಿದೆ: ಮಾನವರಲ್ಲಿರುವ ಒಂದು ಸಹಜ ಬಯಕೆಯೇನೆಂದರೆ, ಇತರರು ತಮ್ಮನ್ನು ಮೆಚ್ಚಬೇಕು ಮತ್ತು ತಮಗೆ ಅವರ ಸಮ್ಮತಿ ಸಿಗಬೇಕೆಂಬುದೇ. ಕ್ರೈಸ್ತರು ಸಹ ತಮ್ಮ ಸುತ್ತಲಿರುವವರ ವಿಚಾರಗಳ ಇಲ್ಲವೇ ಭಾವನೆಗಳ ಬಗ್ಗೆ ಸಂವೇದನಾಶೂನ್ಯರಲ್ಲ. ಇದನ್ನು ತಿಳಿದವನಾದ ಪಿಶಾಚನು, ‘ಜನರು ನಮ್ಮ ಬಗ್ಗೆ ಏನು ನೆನಸುವರು?’ ಎಂದು ಅವರಲ್ಲಿರುವ ಚಿಂತೆಯನ್ನು ತನ್ನ ಸ್ವಾರ್ಥ ಉದ್ದೇಶಕ್ಕಾಗಿ ಬಳಸುತ್ತಾನೆ. ಉದಾಹರಣೆಗಾಗಿ, “ಮನುಷ್ಯನ ಭಯ” ಎಂಬ ಉರುಲನ್ನು ಉಪಯೋಗಿಸಿ ಅವನು ದೇವಜನರಲ್ಲಿ ಕೆಲವರನ್ನು ಸಿಕ್ಕಿಸಿಹಾಕಿದ್ದಾನೆ. (ಜ್ಞಾನೋಕ್ತಿ 29:25) ಒಂದುವೇಳೆ ದೇವರ ಸೇವಕರು ಮನುಷ್ಯನ ಭಯದಿಂದ ಯೆಹೋವನು ನಿಷೇಧಿಸುವ ಸಂಗತಿಗಳನ್ನು ಮಾಡುವುದರಲ್ಲಿ ಇತರರೊಂದಿಗೆ ಜೊತೆಗೂಡಿದರೆ, ಇಲ್ಲವೇ ದೇವರ ವಾಕ್ಯವು ಮಾಡಲೇಬೇಕೆಂದು ಅಪ್ಪಣೆಕೊಡುವ ವಿಷಯಗಳನ್ನು ಮಾಡದೇ ಇದ್ದರೆ, ಅದರರ್ಥ ಅವರು ‘ಬೇಟೆಗಾರನ’ ಪಾಶದಲ್ಲಿ ಸಿಕ್ಕಿಬಿದ್ದಿದ್ದಾರೆ.—ಯೆಹೆಜ್ಕೇಲ 33:8; ಯಾಕೋಬ 4:17.
6 ಉದಾಹರಣೆಗಾಗಿ, ಯುವ ವ್ಯಕ್ತಿಯೊಬ್ಬನು ತನ್ನ ಸಹಪಾಠಿಗಳ ಒತ್ತಡಕ್ಕೆ ಮಣಿದು ಸಿಗರೇಟನ್ನು ಸೇದಿಯಾನು. ಆದರೆ ಅಂದು ಅವನು ಶಾಲೆಗೆ ಹೊರಟಾಗ ಸಿಗರೇಟ್ ಸೇದುವ ಯೋಚನೆಯೇ ಅವನಲ್ಲಿ ಇದ್ದಿರಲಿಕ್ಕಿಲ್ಲ. ಈಗ, ಸಿಗರೇಟ್ ಸೇದುವ ಮೂಲಕ ಅವನ ಆರೋಗ್ಯಕ್ಕೆ ಹಾನಿಕರವಾದ ಮತ್ತು ದೇವರನ್ನು ಅಸಂತೋಷಪಡಿಸುತ್ತಿರುವಂಥ ಸಂಗತಿಯನ್ನು ಮಾಡುತ್ತಿದ್ದಾನೆ. (2 ಕೊರಿಂಥ 7:1) ಅವನು ಇದರಲ್ಲಿ ಸಿಕ್ಕಿಬಿದ್ದದ್ದು ಹೇಗೆ? ಬಹುಶಃ ಅವನು ತಪ್ಪಾದ ಸಮಾನಸ್ಥರೊಂದಿಗೆ ಸೇರಿದ್ದನು ಮತ್ತು ಸಿಗರೇಟ್ ಸೇದದಿರುವ ಮೂಲಕ ಅವರ ತಮಾಷೆಗೆ ಗುರಿಯಾಗಲು ಹೆದರುತ್ತಿದ್ದನು. ಯುವ ಜನರೇ, ‘ಬೇಟೆಗಾರನು’ ನಿಮ್ಮನ್ನು ಸೆಳೆದು ಬಲೆಗೆಬೀಳಿಸುವಂತೆ ಬಿಡಬೇಡಿ! ಅವನು ನಿಮ್ಮನ್ನು ಜೀವಂತವಾಗಿ ಹಿಡಿಯಬಾರದಾದರೆ ಚಿಕ್ಕಚಿಕ್ಕ ವಿಷಯಗಳಲ್ಲೂ ರಾಜಿಮಾಡಿಕೊಳ್ಳಬೇಡಿ! ದುಸ್ಸಹವಾಸದಿಂದ ದೂರವಿರುವಂತೆ ಬೈಬಲ್ ಕೊಡುವ ಎಚ್ಚರಿಕೆಯನ್ನು ಪಾಲಿಸಿರಿ.—1 ಕೊರಿಂಥ 15:33.
7 ಕರ್ತವ್ಯಪ್ರಜ್ಞೆಯುಳ್ಳ ಕ್ರೈಸ್ತ ಹೆತ್ತವರು ತಮ್ಮ ಕುಟುಂಬಗಳ ಭೌತಿಕ ಅಗತ್ಯಗಳನ್ನು ಪೂರೈಸಬೇಕೆಂಬ ಶಾಸ್ತ್ರಾಧಾರಿತ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (1 ತಿಮೊಥೆಯ 5:8) ಆದರೆ, ಕ್ರೈಸ್ತರು ಈ ವಿಷಯದಲ್ಲಿ ತಮ್ಮ ಸಮತೋಲನವನ್ನು ಕಳೆದುಕೊಳ್ಳುವಂತೆ ಮಾಡಬೇಕೆಂಬುದು ಸೈತಾನನ ಗುರಿ. ಕೆಲವು ಕ್ರೈಸ್ತರು ಓವರ್ಟೈಮ್ ಕೆಲಸಮಾಡಲು ತಮ್ಮ ಧಣಿಗಳು ಹಾಕುವ ಒತ್ತಡಕ್ಕೆ ಮಣಿದು ಬಹುಶಃ ಕೂಟಗಳನ್ನು ರೂಢಿಯಾಗಿ ತಪ್ಪಿಸುತ್ತಾರೆ. ತಮ್ಮ ಸಹೋದರರೊಂದಿಗೆ ಯೆಹೋವನನ್ನು ಆರಾಧಿಸಲಿಕ್ಕಾಗಿ ಜಿಲ್ಲಾ ಅಧಿವೇಶನದ ಎಲ್ಲ ಸೆಷನ್ಗಳನ್ನು ಹಾಜರಾಗಲಿಕ್ಕಾಗಿ ರಜೆ ಕೇಳಲು ಅವರು ಹೆದರುತ್ತಿರಬಹುದು. ಈ ಬಲೆಗೆ ಸಿಕ್ಕಿಬೀಳದಂತೆ ಇರುವ ಸಂರಕ್ಷಣೆಯು ‘ಯೆಹೋವನಲ್ಲಿ ಭರವಸವಿಡುವುದೇ’ ಆಗಿದೆ. (ಜ್ಞಾನೋಕ್ತಿ 3:5, 6) ಅಷ್ಟುಮಾತ್ರವಲ್ಲದೆ ನಾವೆಲ್ಲರೂ ಯೆಹೋವನ ಮನೆವಾರ್ತೆಯ ಸದಸ್ಯರಾಗಿದ್ದೇವೆ ಮತ್ತು ನಮ್ಮ ಪರಾಮರಿಕೆ ಮಾಡುವುದನ್ನು ಆತನು ತನ್ನ ಹಂಗೆಂದು ಪರಿಗಣಿಸುತ್ತಾನೆಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ನಮಗೆ ಸಮತೋಲನ ಕಾಪಾಡಿಕೊಳ್ಳಲು ಸಹಾಯಮಾಡುವುದು. ಹೆತ್ತವರೇ, ನೀವೂ ನಿಮ್ಮ ಕುಟುಂಬವೂ ಯೆಹೋವನ ಚಿತ್ತವನ್ನು ಮಾಡುವಾಗ ಆತನು ನಿಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಖಂಡಿತವಾಗಿ ಪರಾಮರಿಸುವನೆಂಬ ನಂಬಿಕೆ ನಿಮಗಿದೆಯೋ? ಅಥವಾ ಮನುಷ್ಯನ ಭಯದಿಂದ ನೀವು ಪಿಶಾಚನ ಇಚ್ಛೆಯನ್ನು ಮಾಡುವಂತೆ ನಡೆಸಿ ಅವನು ನಿಮ್ಮನ್ನು ಜೀವಂತವಾಗಿ ಹಿಡಿಯುವನೋ? ಈ ಪ್ರಶ್ನೆಗಳನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವಂತೆ ನಿಮ್ಮನ್ನು ಉತ್ತೇಜಿಸುತ್ತೇವೆ.
ಪ್ರಾಪಂಚಿಕತೆಯ ಪಾಶ
8 ನಮ್ಮನ್ನು ಸಿಕ್ಕಿಸಿಹಾಕಲು ಸೈತಾನನು ಪ್ರಾಪಂಚಿಕತೆಯ ಸೆಳೆತವನ್ನೂ ಬಳಸುತ್ತಾನೆ. ಈ ಲೋಕದ ವಾಣಿಜ್ಯ ವ್ಯವಸ್ಥೆಯು ಅನೇಕವೇಳೆ ದಿಢೀರ್-ಶ್ರೀಮಂತಿಕೆಯ ಸ್ಕೀಮ್ಗಳನ್ನು ಪ್ರವರ್ಧಿಸುತ್ತದೆ. ದೇವಜನರಲ್ಲೂ ಕೆಲವರು ಇವುಗಳ ಮೋಹಕ್ಕೆ ಒಂದುವೇಳೆ ಬಲಿಯಾದಾರು. ಕೆಲವೊಮ್ಮೆ ಕೆಲವರನ್ನು ಹೀಗೆ ಉತ್ತೇಜಿಸಲಾಗುತ್ತದೆ: “ಈಗ ಕಷ್ಟಪಟ್ಟು ದುಡಿಯಿರಿ. ಸಾಕಷ್ಟು ಹಣಮಾಡಿದ ನಂತರ ಆರಾಮದಿಂದ ಸುಖವಾಗಿ ಜೀವಿಸಿರಿ. ಆಗ ನೀವು ಪಯನೀಯರ್ ಸೇವೆಯನ್ನೂ ಮಾಡಬಹುದು.” ಇದು, ಕ್ರೈಸ್ತ ಸಭೆಯಲ್ಲಿರುವ ಸಹೋದರರಿಂದ ಹಣಕಾಸಿನ ಲಾಭಪಡೆಯುವ ಕೆಲವರ ಸಮತೋಲನರಹಿತ ತರ್ಕ ಆಗಿರಬಹುದು. ಆದರೆ ಅವರ ಆ ಮಾತುಗಳ ಕುರಿತಾಗಿ ಜಾಗ್ರತೆಯಿಂದ ಯೋಚಿಸಿರಿ. ಅವು ಯೇಸುವಿನ ಸಾಮ್ಯದ ‘ಬುದ್ಧಿಹೀನ’ ಐಶ್ವರ್ಯವಂತನ ಯೋಚನಾಧಾಟಿಯನ್ನು ಹೋಲುತ್ತವಲ್ಲವೋ?—ಲೂಕ 12:16-21.
9 ಸೈತಾನನು ತನ್ನ ದುಷ್ಟ ವ್ಯವಸ್ಥೆಯನ್ನು ನಡೆಸುವಂಥ ರೀತಿಯು ಜನರು ವಸ್ತುಗಳಿಗಾಗಿ ಆಶಿಸುವಂತೆ ಪ್ರೇರಿಸುತ್ತದೆ. ಈ ಆಶೆಯು ಕ್ರೈಸ್ತನೊಬ್ಬನ ಬದುಕನ್ನು ನಿಧಾನವಾಗಿ ಆಕ್ರಮಿಸಿ, ವಾಕ್ಯವನ್ನು ಅಡಗಿಸಿಬಿಟ್ಟು ಅದು ‘ಫಲಕೊಡದೆ’ ಇರುವಂತೆ ಮಾಡಬಲ್ಲದು. (ಮಾರ್ಕ 4:19) ನಾವು ಕೇವಲ ಅನ್ನವಸ್ತ್ರಗಳಲ್ಲಿ ಸಂತೃಪ್ತರಾಗಿರುವಂತೆ ಬೈಬಲ್ ಉತ್ತೇಜಿಸುತ್ತದೆ. (1 ತಿಮೊಥೆಯ 6:8) ಆದರೆ ಅನೇಕರು ಈ ಸಲಹೆಯನ್ನು ಸ್ವತಃ ತಮಗೆ ಅನ್ವಯಿಸಿಕೊಳ್ಳದಿರುವುದರಿಂದ “ಬೇಟೆಗಾರನ” ಬಲೆಗೆ ಬೀಳುತ್ತಾರೆ. ಇದು, ನಿರ್ದಿಷ್ಟ ಜೀವನಶೈಲಿಗೆ ತಾವು ಅಂಟಿಕೊಂಡಿರಬೇಕೆಂಬ ಹೆಮ್ಮೆಯಿಂದಾಗಿ ಇರಬಹುದೋ? ವೈಯಕ್ತಿಕವಾಗಿ ನಮ್ಮ ಕುರಿತೇನು? ಲೌಕಿಕ ವಸ್ತುಗಳನ್ನು ಹೊಂದಲೇಬೇಕೆಂಬ ಆಶೆಯು ನಾವು ಸತ್ಯಾರಾಧನೆಯ ಅಭಿರುಚಿಗಳನ್ನು ಎರಡನೇ ಸ್ಥಾನಕ್ಕೆ ತಳ್ಳುವಂತೆ ಮಾಡುತ್ತದೋ? (ಹಗ್ಗಾಯ 1:2-8) ದುಃಖದ ಸಂಗತಿಯೇನೆಂದರೆ ಹಣಕಾಸಿನ ಬಿಕ್ಕಟ್ಟು ಬಂದಾಗ ಕೆಲವರು ತಮಗೆ ರೂಢಿಯಾಗಿರುವ ಜೀವನಶೈಲಿಗೆ ಅಂಟಿಕೊಳ್ಳಲಿಕ್ಕಾಗಿ ತಮ್ಮ ಆಧ್ಯಾತ್ಮಿಕತೆಯನ್ನು ಬಲಿಕೊಟ್ಟಿದ್ದಾರೆ. ಇಂಥ ಪ್ರಾಪಂಚಿಕ ಮನೋಭಾವವು ‘ಬೇಟೆಗಾರನಿಗೆ’ ಎಂಥ ಹರ್ಷವನ್ನು ತರುತ್ತದೆ!
ಹಾನಿಕರ ಮನೋರಂಜನೆಯ ಪಾಶ
10 “ಬೇಟೆಗಾರನ” ಇನ್ನೊಂದು ತಂತ್ರೋಪಾಯವೇನೆಂದರೆ, ಒಳ್ಳೇದ್ದರ ಮತ್ತು ಕೆಟ್ಟದ್ದರ ಕುರಿತು ಜನರಿಗಿರುವ ಸಹಜ ಪ್ರಜ್ಞೆಯನ್ನು ಭ್ರಷ್ಟಗೊಳಿಸುವುದೇ. ಸೊದೋಮ್ ಗೊಮೋರಗಳಲ್ಲಿದ್ದ ಮನೋವೃತ್ತಿಯೇ ಇಂದು ಮನೋರಂಜನೆಯ ಉದ್ಯಮವನ್ನು ನಿಯಂತ್ರಿಸುತ್ತಿದೆ. ಟಿವಿ ಮತ್ತು ವಾರ್ತಾಪತ್ರಿಕೆಗಳಲ್ಲಿನ ವರದಿಗಳು ಸಹ ಹಿಂಸಾಚಾರವನ್ನು ಎತ್ತಿತೋರಿಸುತ್ತಿವೆ ಮತ್ತು ಲೈಂಗಿಕತೆಯ ವಿಷಯದಲ್ಲಿ ಈಗಿನ ವಿಕಾರ ತೃಷೆಯನ್ನು ತಣಿಸುತ್ತಿವೆ. ವಾರ್ತಾಮಾಧ್ಯಮದಲ್ಲಿ ಇಂದು ಮನೋರಂಜನೆಯಾಗಿ ತೋರುವಂಥ ಹೆಚ್ಚಿನದ್ದು, “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿ”ಯಲು ಜನರಿಗಿರುವ ಸಾಮರ್ಥ್ಯವನ್ನು ಕೆಡಿಸುತ್ತಿದೆ. (ಇಬ್ರಿಯ 5:14) ಆದರೆ ಯೆಹೋವನು ಪ್ರವಾದಿ ಯೆಶಾಯನ ಮೂಲಕ ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ . . . ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ!” (ಯೆಶಾಯ 5:20) ‘ಬೇಟೆಗಾರನು’ ಇಂಥ ಹಾನಿಕರ ಮನೋರಂಜನೆಯ ಮೂಲಕ ನಿಮ್ಮ ಯೋಚನಾಧಾಟಿಯನ್ನು ಗುಟ್ಟಾಗಿ ಪ್ರಭಾವಿಸುತ್ತಿದ್ದಾನೋ? ಇದನ್ನು ತಿಳಿಯಲು ಸ್ವಪರೀಕ್ಷೆ ಅತ್ಯಗತ್ಯ.—2 ಕೊರಿಂಥ 13:5.
11 ಟಿವಿ ಧಾರಾವಾಹಿಗಳ ಕುರಿತು ಸುಮಾರು 25 ವರ್ಷಗಳ ಹಿಂದೆಯೇ ಕಾವಲಿನಬುರುಜು ಪತ್ರಿಕೆಯು ದೇವರ ಸತ್ಯಾರಾಧಕರನ್ನು ಪ್ರೀತಿಯಿಂದ ಎಚ್ಚರಿಸಿತ್ತು.a ಜನಪ್ರಿಯ ಟಿವಿ ಧಾರಾವಾಹಿಗಳ ನವಿರು ಪ್ರಭಾವದ ಕುರಿತಾಗಿ ಈ ಹೇಳಿಕೆಯನ್ನು ಮಾಡಲಾಗಿತ್ತು: “ಪ್ರೀತಿಪ್ರೇಮಕ್ಕೋಸ್ಕರ ಒಬ್ಬನು ಏನೇ ಮಾಡಲಿ ಅದು ಸರಿಯೆಂದು ಸಮರ್ಥಿಸಲಾಗುತ್ತದೆ. ದೃಷ್ಟಾಂತಕ್ಕಾಗಿ, ಅವಿವಾಹಿತಳಾದ ಗರ್ಭಿಣಿ ಯುವತಿ ತನ್ನ ಗೆಳತಿಗೆ ಹೀಗನ್ನುತ್ತಾಳೆ: ‘ನಾನು ವಿಕ್ಟರ್ನನ್ನು ತುಂಬ ಪ್ರೀತಿಸುತ್ತೇನೆ. ಅವನಿಗಾಗಿ ಏನೂ ಮಾಡಲೂ ಸಿದ್ಧಳು. . . . ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಅವನ ಮಗುವೇ ನನ್ನ ಸರ್ವಸ್ವ!’ ಈ ಮಾತುಗಳನ್ನಾಡುವಾಗ ಹಿನ್ನೆಲೆಯಲ್ಲಿ ಕೇಳಿಬರುವ ಮಧುರ ಸಂಗೀತವು ಅವಳ ಕೃತ್ಯವು ಅನೈತಿಕತೆ ಆಗಿದೆ ಎಂಬುದನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕುತ್ತದೆ. ನೀವು ಸಹ ವಿಕ್ಟರ್ನನ್ನು ಇಷ್ಟಪಡಲಾರಂಭಿಸುತ್ತೀರಿ. ನಿಮಗೆ ಆ ಹುಡುಗಿ ಮೇಲೆ ಅನುಕಂಪ ಹುಟ್ಟುತ್ತದೆ. ನೀವು ಅವಳನ್ನು ‘ಅರ್ಥಮಾಡಿಕೊಳ್ಳುತ್ತೀರಿ.’ ಇಂಥ ಧಾರಾವಾಹಿಗಳನ್ನು ವೀಕ್ಷಿಸುತ್ತಿದ್ದ ಒಬ್ಬಾಕೆಯು ಕಾಲಾನಂತರ ತನ್ನ ತಪ್ಪನ್ನು ಅರಿತುಕೊಂಡು ಹೇಳಿದ್ದು: ‘ನಾನು ನನ್ನ ಯೋಚನಾಧಾಟಿಯನ್ನು ಹೇಗೆ ಸಮರ್ಥಿಸಿಕೊಂಡೆನೆಂದು ನೋಡಿ ಚಕಿತಳಾದೆ. ಅನೈತಿಕತೆ ತಪ್ಪೆಂದು ನನಗೆ ತಿಳಿದಿತ್ತು. . . . ಆದರೂ ಮಾನಸಿಕವಾಗಿ ನಾನು ಅದರಲ್ಲಿ ಭಾಗಿಯಾಗುತ್ತಿದ್ದೇನೆಂದು ಗ್ರಹಿಸಿದೆ.’
12 ಆ ಲೇಖನಗಳು ಪ್ರಕಾಶಿಸಲ್ಪಟ್ಟ ಸಮಯದಿಂದ ಹಿಡಿದು ಇಂದಿನ ವರೆಗೆ ಇಂಥ ಕೀಳ್ಮಟ್ಟದ ಕಾರ್ಯಕ್ರಮಗಳು ಹೆಚ್ಚೆಚ್ಚು ಸುಲಭವಾಗಿ ಲಭ್ಯವಾಗುತ್ತಿವೆ. ಅನೇಕ ದೇಶಗಳಲ್ಲಿ ಇಂಥ ಕಾರ್ಯಕ್ರಮಗಳು ದಿನದ 24 ತಾಸೂ ಪ್ರಸಾರವಾಗುತ್ತಿವೆ. ಸ್ತ್ರೀಪುರುಷರು ಮತ್ತು ಅನೇಕ ಹದಿವಯಸ್ಕರು ಪದೇಪದೇ ತಮ್ಮ ಹೃದಮನಗಳಲ್ಲಿ ಇಂಥ ಮನೋರಂಜನೆಯನ್ನು ತುಂಬಿಸುತ್ತಾರೆ. ನಾವಾದರೋ ಈ ತಪ್ಪಾದ ತರ್ಕದಿಂದ ಮೋಸಹೋಗಬಾರದು. ‘ಲೋಕದಲ್ಲಿ ಏನು ನಡೆಯುತ್ತಿದೆಯೊ ಅದನ್ನೇ ಟಿವಿಯಲ್ಲಿ ನೋಡುತ್ತಿದ್ದೇವಲ್ಲಾ’ ಎಂದು ತರ್ಕಿಸುವುದು ತಪ್ಪು. ಕ್ರೈಸ್ತನೊಬ್ಬನು ತನ್ನ ಮನೆಗೆ ಆಮಂತ್ರಿಸಲು ಕನಸ್ಸಲ್ಲೂ ನೆನಸದಂಥ ರೀತಿಯ ಜನರನ್ನು ತನ್ನ ಮನೋರಂಜನೆಗಾಗಿ ಆಯ್ದುಕೊಳ್ಳುವುದನ್ನು ನಿಜವಾಗಿ ಸಮರ್ಥಿಸಬಲ್ಲನೋ?
13 “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೊಟ್ಟ ಆ ಎಚ್ಚರಿಕೆಯನ್ನು ಪಾಲಿಸಿದಾಗ ಅನೇಕರು ಪ್ರಯೋಜನಪಡೆದರು. (ಮತ್ತಾಯ 24:45-47) ಆ ನೇರವಾದ ಬೈಬಲಾಧರಿತ ಸಲಹೆಯನ್ನು ಓದಿದ ನಂತರ, ಕೆಲವರು ಪತ್ರಬರೆದು ಅದು ತಮ್ಮನ್ನು ವೈಯಕ್ತಿಕವಾಗಿ ಹೇಗೆ ತಟ್ಟಿತ್ತೆಂದು ಈ ಪತ್ರಿಕೆಯ ಸಂಪಾದಕರಿಗೆ ತಿಳಿಸಿದರು.b ಒಬ್ಬಾಕೆ ಒಪ್ಪಿಕೊಂಡದ್ದು: “13 ವರ್ಷಗಳ ವರೆಗೆ ನಾನು ಧಾರಾವಾಹಿ-ವ್ಯಸನಿ ಆಗಿದ್ದೆ. ಕ್ರೈಸ್ತ ಕೂಟಗಳಿಗೆ ಹಾಜರಾಗಿ, ಆಗಾಗ್ಗೆ ಕ್ಷೇತ್ರ ಸೇವೆ ಮಾಡಿದರೆ ಆಧ್ಯಾತ್ಮಿಕವಾಗಿ ಸುರಕ್ಷಿತಳಾಗಿರುವೆ ಎಂದು ಎಣಿಸುತ್ತಿದ್ದೆ. ಆದರೆ, ‘ಗಂಡನು ನಿಮ್ಮನ್ನು ದುರುಪಚರಿಸುವಲ್ಲಿ ಇಲ್ಲವೆ ಅವನು ನಿಮ್ಮನ್ನು ಪ್ರೀತಿಸುವುದಿಲ್ಲವೆಂದು ಅನಿಸುವಲ್ಲಿ, ಆಗ ಹಾದರ ಮಾಡುವುದು ತಪ್ಪಲ್ಲ, ಅದಕ್ಕೆ ಗಂಡನೇ ಜವಾಬ್ದಾರನು’ ಎಂಬ ಆ ಧಾರಾವಾಹಿಗಳಲ್ಲಿನ ಲೌಕಿಕ ಮನೋಭಾವವನ್ನು ಮೈಗೂಡಿಸಿಕೊಂಡೆ. ಆದುದರಿಂದ ಹಾಗೆ ಮಾಡುವುದು ‘ಸರಿಯೆಂದು’ ನನಗನಿಸಿದಾಗ ನಾನು ಹಾದರಮಾಡಿ ಹೀಗೆ ಯೆಹೋವನಿಗೂ ನನ್ನ ವಿವಾಹ ಸಂಗಾತಿಯ ವಿರುದ್ಧವೂ ಪಾಪಮಾಡಿದೆ.” ಈ ಮಹಿಳೆಯನ್ನು ಬಹಿಷ್ಕರಿಸಲಾಯಿತು. ಕಟ್ಟಕಡೆಗೆ ಅವಳು ತನ್ನ ಪಾಪವನ್ನು ಒಪ್ಪಿಕೊಂಡು ಪಶ್ಚಾತ್ತಾಪಪಟ್ಟಳು. ಸಮಯಾನಂತರ ಅವಳನ್ನು ಪುನಸ್ಸ್ಥಾಪಿಸಲಾಯಿತು. ಟಿವಿ ಧಾರಾವಾಹಿಗಳ ವಿರುದ್ಧ ಎಚ್ಚರಿಸಿದ ಆ ಲೇಖನಗಳು, ಯೆಹೋವನು ದ್ವೇಷಿಸುವಂಥ ವಿಷಯಗಳಿಂದ ಮನರಂಜಿಸುವುದನ್ನು ನಿರಾಕರಿಸಲು ಬೇಕಾದ ಬಲವನ್ನು ಅವಳಿಗೆ ಕೊಟ್ಟವು.—ಆಮೋಸ 5:14, 15.
14 ಇನ್ನೊಬ್ಬ ವಾಚಕಳ ಜೀವನವು ಸಹ ಪ್ರಭಾವಿಸಲ್ಪಟ್ಟಿತ್ತು. ಅವಳಂದದ್ದು: “ಆ ಲೇಖನಗಳನ್ನು ಓದಿದಾಗ ನಾನು ಅತ್ತುಬಿಟ್ಟೆ. ಏಕೆಂದರೆ ನಾನು ಯೆಹೋವನನ್ನು ಸಂಪೂರ್ಣ ಹೃದಯದಿಂದ ಸೇವಿಸುತ್ತಿಲ್ಲವೆಂದು ನನಗೆ ಗೊತ್ತಾಯಿತು. ಇನ್ನು ಮುಂದೆ ನಾನು ಈ ಧಾರಾವಾಹಿಗಳಿಗೆ ದಾಸಿ ಆಗಿರುವುದಿಲ್ಲವೆಂದು ದೇವರಿಗೆ ಮಾತುಕೊಟ್ಟೆ.” ಲೇಖನಗಳಿಗಾಗಿ ಕೃತಜ್ಞತೆ ವ್ಯಕ್ತಪಡಿಸಿದ ನಂತರ ಒಬ್ಬ ಕ್ರೈಸ್ತ ಮಹಿಳೆ ತನಗಿದ್ದ ಧಾರಾವಾಹಿ-ವ್ಯಸನವನ್ನು ಒಪ್ಪಿಕೊಳ್ಳುತ್ತಾ ಹೀಗೆ ಬರೆದಳು: “ಯೆಹೋವನೊಂದಿಗಿನ ನನ್ನ ಸಂಬಂಧದ ಮೇಲೂ ಇದು ಪ್ರಭಾವಬೀರಿರಬಹುದೆಂದು . . . ನಾನು ಯೋಚಿಸಿದೆ. ನಾನು ಆ ಧಾರಾವಾಹಿ-ಪಾತ್ರಧಾರಿಗಳ ಸ್ನೇಹಿತೆಯಾಗಿದ್ದು ಅದೇ ಸಮಯದಲ್ಲಿ ಹೇಗೆ ಯೆಹೋವನ ಸ್ನೇಹಿತಳಾಗಿರಬಲ್ಲೆ?” ಅಂಥ ಟಿವಿ ಪ್ರದರ್ಶನಗಳು 25 ವರ್ಷಗಳ ಹಿಂದೆಯೇ ಹೃದಯಗಳನ್ನು ಭ್ರಷ್ಟಗೊಳಿಸಿದ್ದಲ್ಲಿ ಇಂದು ಅವು ಹೇಗಿರಬಹುದು? (2 ತಿಮೊಥೆಯ 3:13) ಅಹಿತಕರವಾದ ಮನೋರಂಜನೆ ಎಂಬ ಸೈತಾನನ ಬಲೆಯ ಎಲ್ಲ ರೂಪಗಳು, ಅವು ಟಿವಿ ಧಾರಾವಾಹಿಗಳು, ಹಿಂಸಾತ್ಮಕ ವಿಡಿಯೋ ಆಟಗಳು ಅಥವಾ ಅನೈತಿಕ ಸಂಗೀತದ ವಿಡಿಯೋಗಳೇ ಆಗಿರಬಹುದು ಅವುಗಳ ಬಗ್ಗೆ ನಮಗೆ ತಿಳಿದಿರಬೇಕು.
ವೈಯಕ್ತಿಕ ಮನಸ್ತಾಪಗಳ ಪಾಶ
15 ಯೆಹೋವನ ಜನರ ಮಧ್ಯೆ ಒಡಕನ್ನು ಹುಟ್ಟಿಸಲಿಕ್ಕಾಗಿ ಸೈತಾನನು ವೈಯಕ್ತಿಕ ಮನಸ್ತಾಪಗಳನ್ನು ಒಂದು ಪಾಶವಾಗಿ ಬಳಸುತ್ತಾನೆ. ನಮಗೆ ಯಾವುದೇ ಸುಯೋಗಗಳಿರಲಿ ನಾವು ಈ ಪಾಶದಲ್ಲಿ ಸಿಕ್ಕಿಬೀಳಬಲ್ಲೆವು. ಕೆಲವರನ್ನು ಪಿಶಾಚನು ಜೀವಂತವಾಗಿ ಹಿಡಿದಿದ್ದಾನೆ ಏಕೆಂದರೆ ಯೆಹೋವನು ಅಸ್ತಿತ್ವಕ್ಕೆ ತಂದಿರುವ ಶಾಂತಿ ಹಾಗೂ ಐಕ್ಯ ಮತ್ತು ಆಶ್ಚರ್ಯಕರ ಆಧ್ಯಾತ್ಮಿಕ ಸಮೃದ್ಧಿಯನ್ನು ತಮ್ಮ ವೈಯಕ್ತಿಕ ಮನಸ್ತಾಪಗಳು ಭಂಗಗೊಳಿಸುವಂತೆ ಅವರು ಬಿಟ್ಟಿದ್ದಾರೆ.—ಕೀರ್ತನೆ 133:1-3.
16 ಒಂದನೇ ಲೋಕ ಯುದ್ಧದ ಸಮಯದಲ್ಲಿ ಸೈತಾನನು ಯೆಹೋವನ ಸಂಘಟನೆಯ ಭೂಭಾಗದ ಮೇಲೆ ಮುಖಾಮುಖಿ ಆಕ್ರಮಣಮಾಡುವ ಮೂಲಕ ಅದನ್ನು ನಾಶಗೊಳಿಸಲು ಪ್ರಯತ್ನಿಸಿದನು. ಆದರೆ ಅವನು ವಿಫಲನಾದನು. (ಪ್ರಕಟನೆ 11:7-13) ಅಂದಿನಿಂದ ಅವನು ನಮ್ಮ ಐಕ್ಯದಲ್ಲಿ ಬಿರುಕನ್ನು ತರಲು ಕುಟಿಲತೆಯಿಂದ ಕೆಲಸಮಾಡುತ್ತಿದ್ದಾನೆ. ವೈಯಕ್ತಿಕ ಮನಸ್ತಾಪಗಳು ಒಡಕನ್ನು ಹುಟ್ಟಿಸುವಂತೆ ನಾವು ಬಿಡುವಾಗ, ಆ ‘ಬೇಟೆಗಾರನಿಗೆ’ ಎಡೆಮಾಡಿ ಕೊಡುತ್ತೇವೆ. ಈ ರೀತಿ ನಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ಸಭೆಯಲ್ಲೂ ಪವಿತ್ರಾತ್ಮವು ಸರಾಗವಾಗಿ ಹರಿಯುವುದನ್ನು ನಾವು ತಡೆಯುತ್ತೇವೆ. ಹಾಗಾಗುವಲ್ಲಿ ಸೈತಾನನಿಗೆ ಸಂತೋಷವಾಗುವುದು ಯಾಕಂದರೆ ಸಭೆಯಲ್ಲಿನ ಶಾಂತಿ ಹಾಗೂ ಐಕ್ಯದ ಭಂಗವು ನಮ್ಮ ಸಾರುವ ಕೆಲಸಕ್ಕೆ ಅಡ್ಡಿ ಆಗುವುದು.—ಎಫೆಸ 4:27, 30-32.
17 ಒಬ್ಬ ಜೊತೆ ಕ್ರೈಸ್ತನೊಂದಿಗೆ ನಿಮಗೆ ವೈಯಕ್ತಿಕ ಮನಸ್ತಾಪಗಳಿದ್ದರೆ ನೀವೇನು ಮಾಡಬಲ್ಲಿರಿ? ಪ್ರತಿಯೊಂದು ಸನ್ನಿವೇಶ ಭಿನ್ನವಾಗಿರುತ್ತದೆಂಬುದು ಒಪ್ಪತಕ್ಕದ್ದೇ. ಆದರೆ ಸಮಸ್ಯೆಗಳು ಹುಟ್ಟಲು ಅನೇಕ ಕಾರಣಗಳಿರಬಹುದಾದರೂ, ಆ ವೈಯಕ್ತಿಕ ಮನಸ್ತಾಪಗಳನ್ನು ಪರಿಹರಿಸದೇ ಇಡುವುದಕ್ಕೆ ಯಾವುದೇ ಕಾರಣವಿಲ್ಲ. (ಮತ್ತಾಯ 5:23, 24; 18:15-17) ದೇವರ ವಾಕ್ಯದಲ್ಲಿರುವ ಬುದ್ಧಿವಾದವು ಪ್ರೇರಿತವೂ ಪರಿಪೂರ್ಣವೂ ಆಗಿದೆ. ಬೈಬಲ್ ಮೂಲತತ್ತ್ವಗಳ ಅನ್ವಯವು ಎಂದಿಗೂ ನಿಷ್ಫಲವಾಗುವುದಿಲ್ಲ. ಅವು ಯಾವಾಗಲೂ ಒಳ್ಳೇ ಫಲಿತಾಂಶಗಳನ್ನು ತರುತ್ತವೆ!
18 ಯೆಹೋವನು “ಕ್ಷಮಿಸುವುದಕ್ಕೆ ಸಿದ್ಧ”ನಾಗಿದ್ದಾನೆ ಮತ್ತು ಆತನು ನಿಜವಾಗಿ ‘ಕ್ಷಮಿಸುತ್ತಾನೆ.’ (ಕೀರ್ತನೆ 86:5, NIBV; 130:4) ನಾವು ಯೆಹೋವನನ್ನು ಅನುಕರಿಸುವಾಗ, ನಾವಾತನ ಪ್ರಿಯ ಮಕ್ಕಳೆಂದು ತೋರಿಸಿಕೊಡುತ್ತೇವೆ. (ಎಫೆಸ 5:1) ನಾವೆಲ್ಲರೂ ಪಾಪಿಗಳು ಮತ್ತು ಯೆಹೋವನ ಕ್ಷಮೆಯ ತೀವ್ರ ಅಗತ್ಯ ನಮಗಿದೆ. ಹೀಗಿರುವುದರಿಂದ, ಯಾರನ್ನಾದರೂ ಕ್ಷಮಿಸಬಾರದೆಂದು ನಮಗನಿಸುವಾಗ ನಾವು ಜಾಗ್ರತೆವಹಿಸಬೇಕು. ಇಲ್ಲವಾದರೆ ನಾವು ಯೇಸುವಿನ ಸಾಮ್ಯದ ಆ ದಾಸನಂತಾದೇವು. ಅವನ ದೊಡ್ಡ ಸಾಲವನ್ನು ಒಡೆಯನು ರದ್ದುಗೊಳಿಸಿದ್ದರೂ, ಜೊತೆ ಆಳು ತನಗೆ ಹಿಂದಿರುಗಿಸಬೇಕಾಗಿದ್ದ ಒಂದು ಚಿಕ್ಕ ಮೊತ್ತದ ಸಾಲವನ್ನು ಅವನು ಬಿಟ್ಟುಬಿಡಲು ನಿರಾಕರಿಸಿದನು. ಇದರ ಬಗ್ಗೆ ಒಡೆಯನಿಗೆ ಸುದ್ದಿ ಮುಟ್ಟಿದಾಗ, ಕ್ಷಮಿಸದಿದ್ದ ಆ ಆಳನ್ನು ಅವನು ಸೆರೆಮನೆಗೆ ಹಾಕಿಸಿದನು. ಈ ಸಾಮ್ಯದ ಕೊನೆಯಲ್ಲಿ ಯೇಸು ಹೀಗಂದನು: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.” (ಮತ್ತಾಯ 18:21-35) ನಮ್ಮ ಸಹೋದರನೊಂದಿಗೆ ನಮಗಿರುವ ವೈಯಕ್ತಿಕ ಮನಸ್ತಾಪಗಳನ್ನು ಪರಿಹರಿಸಲು ನಾವು ಪ್ರಯತ್ನಿಸುವಾಗ ಆ ದೃಷ್ಟಾಂತದ ಕುರಿತಾಗಿ ಧ್ಯಾನಿಸುವುದು ಮತ್ತು ಯೆಹೋವನು ನಮ್ಮನ್ನು ಎಷ್ಟೊಂದು ಬಾರಿ ಉದಾರವಾಗಿ ಕ್ಷಮಿಸಿದ್ದಾನೆಂಬುದನ್ನು ಯೋಚಿಸುವುದು ಖಂಡಿತವಾಗಿಯೂ ಸಹಾಯಮಾಡುವುದು!—ಕೀರ್ತನೆ 19:14.
‘ಪರಾತ್ಪರನ ಮರೆಯಲ್ಲಿ’ ಸುರಕ್ಷಿತರು
19 ನಾವು ಅಪಾಯಕಾರಿ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. ಯೆಹೋವನ ಪ್ರೀತಿಯ ಸಂರಕ್ಷಣೆ ಇಲ್ಲದಿರುತ್ತಿದ್ದಲ್ಲಿ ಸೈತಾನನು ನಿಶ್ಚಯವಾಗಿ ನಮ್ಮೆಲ್ಲರನ್ನೂ ನಾಶಮಾಡಿಬಿಡುತ್ತಿದ್ದನು. ಆದುದರಿಂದ “ಬೇಟೆಗಾರನ” ಬಲೆಗೆ ಸಿಕ್ಕಿಬೀಳದಂತೆ ನಾವು ಸಂರಕ್ಷಣೆಯ ಸಾಂಕೇತಿಕ ತಾಣವಾದ ‘ಪರಾತ್ಮರನ ಮರೆಹೋಗಬೇಕು’ ಮತ್ತು “ಸರ್ವಶಕ್ತನ ಆಶ್ರಯದಲ್ಲಿ” ಇರಬೇಕು.—ಕೀರ್ತನೆ 91:1.
20 ನಾವು ಯೆಹೋವನ ಮರುಜ್ಞಾಪನಗಳು ಹಾಗೂ ನಿರ್ದೇಶನಗಳನ್ನು ನಿರ್ಬಂಧಕವೆಂದಲ್ಲ ಬದಲಾಗಿ ಸಂರಕ್ಷಣಾತ್ಮಕವೆಂದು ಯಾವಾಗಲೂ ಎಣಿಸೋಣ. ನಾವೆಲ್ಲರೂ ಜೊತೆಯಾಗಿ ಮಾನವಾತೀತ ಬುದ್ಧಿಯ ಈ ಪರಭಕ್ಷಕನನ್ನು ಎದುರಿಸೋಣ. ಯೆಹೋವನ ಪ್ರೀತಿಯ ಸಹಾಯವಿಲ್ಲದಿದ್ದರೆ ಯಾರೂ ಅವನ ಪಾಶದಿಂದ ತಪ್ಪಿಸಲಾರರು. (ಕೀರ್ತನೆ 124:7, 8) ಆದುದರಿಂದ ಯೆಹೋವನು ನಮ್ಮನ್ನು “ಬೇಟೆಗಾರನ” ಪಾಶಗಳಿಂದ ತಪ್ಪಿಸಲಿ ಎಂದು ಪ್ರಾರ್ಥಿಸೋಣ!—ಮತ್ತಾಯ 6:13. (w07 10/1)
[ಪಾದಟಿಪ್ಪಣಿಗಳು]
a ದ ವಾಚ್ಟವರ್, 1982 ಡಿಸೆಂಬರ್ 1, ಪುಟ 3-7.
b ದ ವಾಚ್ಟವರ್, 1983 ಡಿಸೆಂಬರ್ 1, ಪುಟ 23.
ನಿಮಗೆ ಜ್ಞಾಪಕವಿದೆಯೋ?
• “ಮನುಷ್ಯರ ಭಯ” ಒಂದು ಮಾರಕ ಪಾಶವಾಗಿದೆ ಏಕೆ?
• ಪಿಶಾಚನು ಪ್ರಾಪಂಚಿಕತೆಯ ಸೆಳೆತವನ್ನು ಹೇಗೆ ಉಪಯೋಗಿಸುತ್ತಾನೆ?
• ಸೈತಾನನು ಕೆಲವರನ್ನು ಅಹಿತಕರವಾದ ಮನೋರಂಜನೆಯ ಪಾಶದಲ್ಲಿ ಹೇಗೆ ಸಿಕ್ಕಿಸಿಹಾಕಿದ್ದಾನೆ?
• ನಮ್ಮ ಐಕ್ಯವನ್ನು ಭಂಗಪಡಿಸಲಿಕ್ಕಾಗಿ ಪಿಶಾಚನು ಯಾವ ಪಾಶವನ್ನು ಬಳಸುತ್ತಾನೆ?
[ಅಧ್ಯಯನ ಪ್ರಶ್ನೆಗಳು]
1. ‘ಬೇಟೆಗಾರನು’ ಯಾರು, ಮತ್ತು ಅವನು ಅಪಾಯಕಾರಿಯಾಗಿರುವುದು ಏಕೆ?
2. ಸೈತಾನನನ್ನು ಬೇಟೆಗಾರನಿಗೆ ಏಕೆ ಹೋಲಿಸಲಾಗಿದೆ?
3, 4. ಸೈತಾನನ ತಂತ್ರೋಪಾಯಗಳು ಯಾವಾಗ ಸಿಂಹ ಮತ್ತು ಸರ್ಪದ ಚತುರೋಪಾಯಗಳನ್ನು ಹೋಲುತ್ತವೆ?
5. “ಮನುಷ್ಯನ ಭಯ” ಏಕೆ ತುಂಬ ಪ್ರಭಾವಶಾಲಿ ಉರುಲಾಗಿದೆ?
6. ಒಬ್ಬ ಯುವ ವ್ಯಕ್ತಿಯನ್ನು ‘ಬೇಟೆಗಾರನು’ ಹೇಗೆ ಸಿಕ್ಕಿಸಿಹಾಕಬಲ್ಲನೆಂಬುದನ್ನು ಯಾವ ಉದಾಹರಣೆ ತೋರಿಸುತ್ತದೆ?
7. ಕೆಲವು ಹೆತ್ತವರು ತಮ್ಮ ಆಧ್ಯಾತ್ಮಿಕ ಸಮತೋಲನವನ್ನು ಕಳೆದುಕೊಳ್ಳುವಂತೆ ಸೈತಾನನು ಹೇಗೆ ಮಾಡಬಹುದು?
8. ಸೈತಾನನು ಪ್ರಾಪಂಚಿಕತೆಯ ಸೆಳೆತವನ್ನು ಯಾವ ವಿಧದಲ್ಲಿ ಬಳಸುತ್ತಾನೆ?
9. ವಸ್ತುಗಳನ್ನು ಆಶಿಸುವುದರಿಂದ ಕೆಲವು ಕ್ರೈಸ್ತರು ಸೈತಾನನ ಬಲೆಗೆ ಬೀಳುವುದು ಯಾಕೆ?
10. ಪ್ರತಿಯೊಬ್ಬ ಕ್ರೈಸ್ತನು ಯಾವ ಸ್ವಪರೀಕ್ಷೆಯನ್ನು ಮಾಡಬೇಕು?
11. ಕಾವಲಿನಬುರುಜು ಪತ್ರಿಕೆಯು ಟಿವಿ ಧಾರಾವಾಹಿಗಳ ಕುರಿತು ಯಾವ ಎಚ್ಚರಿಕೆ ಕೊಟ್ಟಿತ್ತು?
12. ನಿರ್ದಿಷ್ಟ ಟಿವಿ ಕಾರ್ಯಕ್ರಮಗಳ ಕುರಿತ ಎಚ್ಚರಿಕೆಯು ಈಗ ಎಷ್ಟು ಸೂಕ್ತವೆಂಬುದನ್ನು ಯಾವ ವಾಸ್ತವಾಂಶಗಳು ಸೂಚಿಸುತ್ತವೆ?
13, 14. ಟಿವಿ ಕುರಿತಾದ ಎಚ್ಚರಿಕೆಗಳಿಂದ ತಾವು ಪ್ರಯೋಜನಪಡೆದ ವಿಧವನ್ನು ಕೆಲವರು ಹೇಗೆ ವ್ಯಕ್ತಪಡಿಸಿದರು?
15. ಪಿಶಾಚನು ಕೆಲವರನ್ನು ಹೇಗೆ ಜೀವಂತವಾಗಿ ಹಿಡಿಯುತ್ತಾನೆ?
16. ಸೈತಾನನು ನಮ್ಮ ಐಕ್ಯವನ್ನು ಕುಟಿಲತೆಯಿಂದ ಭಂಗಪಡಿಸಲು ಪ್ರಯತ್ನಿಸುತ್ತಿರುವುದು ಹೇಗೆ?
17. ವೈಯಕ್ತಿಕ ಮನಸ್ತಾಪಗಳಿರುವವರು ಅವುಗಳನ್ನು ಪರಿಹರಿಸುವಂತೆ ಯಾವುದು ಸಹಾಯಮಾಡಬಲ್ಲದು?
18. ವೈಯಕ್ತಿಕ ಮನಸ್ತಾಪಗಳನ್ನು ಪರಿಹರಿಸುವುದರಲ್ಲಿ ಯೆಹೋವನನ್ನು ಅನುಕರಿಸುವುದು ನಮಗೆ ಹೇಗೆ ಸಹಾಯಮಾಡುವುದು?
19, 20. ಈ ಅಪಾಯಕಾರಿ ಸಮಯಗಳಲ್ಲಿ ಯೆಹೋವನ “ಮರೆ” ಮತ್ತು “ಆಶ್ರಯವನ್ನು” ನಾವು ಹೇಗೆ ದೃಷ್ಟಿಸಬೇಕು?
[ಪುಟ 28ರಲ್ಲಿರುವ ಚಿತ್ರ]
ಕೆಲವರು “ಮನುಷ್ಯರ ಭಯ” ಎಂಬ ಪಾಶಕ್ಕೆ ಬಿದ್ದಿದ್ದಾರೆ
[ಪುಟ 29ರಲ್ಲಿರುವ ಚಿತ್ರ]
ಯೆಹೋವನು ದ್ವೇಷಿಸುವಂಥ ವಿಷಯಗಳಿಂದ ನಿಮ್ಮ ಮನರಂಜಿಸುತ್ತೀರೋ?