ನಾವು ಹೆದರಲಿಲ್ಲ, ಯೆಹೋವನು ನಮ್ಮೊಂದಿಗಿದ್ದನು
ಎಯೀಪ್ಟೀಯ ಪೆಟ್ರೀಡೀಸ್ ಅವರು ಹೇಳಿದಂತೆ
ಇಸವಿ 1972ರಲ್ಲಿ, ಸೈಪ್ರಸ್ನ ಎಲ್ಲ ಸಾಕ್ಷಿಗಳು, ನಿಕೋಶಿಯಾದಲ್ಲಿ ಒಂದು ವಿಶೇಷ ಭಾಷಣಕ್ಕೆ ಕೂಡಿಬಂದರು. ಭಾಷಣಕರ್ತರು ನೇತನ್ ಎಚ್. ನಾರ್ ಆಗಿದ್ದರು. ಅವರು ಬಹಳಷ್ಟು ಸಮಯದಿಂದ ಯೆಹೋವನ ಸಾಕ್ಷಿಗಳ ಕೆಲಸದ ಮುಂದಾಳುತ್ವ ವಹಿಸಿದ್ದರು. ಅವರ ಹತ್ತಿರ ಹೋಗಿ ನನ್ನ ಪರಿಚಯ ಹೇಳುವ ಮುಂಚೆ ಅವರೇ ನನ್ನ ಗುರುತುಹಿಡಿದು, “ಈಜಿಪ್ಟ್ನಿಂದ ಏನಾದರೂ ಸುದ್ದಿ ಇದೆಯಾ?” ಎಂದು ಕೇಳಿದರು. ನನಗೆ ಆಶ್ಚರ್ಯವಾಯಿತು. ನಾನವರನ್ನು 20 ವರ್ಷ ಹಿಂದೆ ನನ್ನ ತವರೂರಾದ, ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾದಲ್ಲಿ ಭೇಟಿಯಾಗಿದ್ದೆ!
ನಾನು 1914ರ ಜನವರಿ 23ರಂದು ಅಲೆಕ್ಸಾಂಡ್ರಿಯಾದಲ್ಲಿ ಹುಟ್ಟಿದೆ. ನಾಲ್ಕು ಮಂದಿ ಮಕ್ಕಳಲ್ಲಿ ನಾನೇ ಹಿರಿಯವಳು. ನಮ್ಮ ಮನೆ ಸಮುದ್ರದಿಂದ ಸ್ವಲ್ಪವೇ ದೂರದಲ್ಲಿತ್ತು. ಆಗ ಒಂದು ಸುಂದರ ಮಹಾನಗರವಾಗಿದ್ದ ಅಲೆಕ್ಸಾಂಡ್ರಿಯಾ, ಅದರ ವಾಸ್ತುಶಿಲ್ಪ ಹಾಗೂ ಇತಿಹಾಸಕ್ಕಾಗಿ ಸುಪ್ರಸಿದ್ಧವಾಗಿತ್ತು. ಯೂರೋಪಿಯನ್ನರು ಅರಬಿಯರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದದರಿಂದ ಮಕ್ಕಳಾದ ನಾವು ನಮ್ಮ ಮಾತೃಭಾಷೆಯಾದ ಗ್ರೀಕ್ ಅಲ್ಲದೆ ಅರೇಬಿಕ್, ಇಂಗ್ಲಿಷ್, ಫ್ರೆಂಚ್ ಮತ್ತು ಇಟ್ಯಾಲಿಯನ್ ಭಾಷೆಗಳನ್ನೂ ಕಲಿತೆವು.
ವಿದ್ಯಾಭ್ಯಾಸ ಮುಗಿದ ನಂತರ ಫ್ರೆಂಚ್ ಫ್ಯಾಷನ್ ಕೇಂದ್ರವೊಂದರಲ್ಲಿ ನನಗೆ ಕೆಲಸ ಸಿಕ್ಕಿತು. ಅಲ್ಲಿ, ಸಮಾಜದ ಉಚ್ಚ ಅಂತಸ್ತಿನ ಮಹಿಳೆಯರಿಗಾಗಿ ಸೊಗಸಾದ ಉಡುಗೆಗಳನ್ನು ವಿನ್ಯಾಸಮಾಡಿ ಹೊಲಿಯಲು ಹೆಮ್ಮೆಪಟ್ಟೆ. ನನಗೆ ತುಂಬ ಧಾರ್ಮಿಕ ಶ್ರದ್ಧೆಯೂ ಇತ್ತು ಮತ್ತು ಬೈಬಲ್ ಓದುವುದೆಂದರೆ ನನಗೆ ತುಂಬ ಇಷ್ಟವಾಗಿತ್ತು. ಆದರೆ ನನಗೆ ಹೆಚ್ಚೇನೂ ಅರ್ಥವಾಗುತ್ತಿರಲಿಲ್ಲ.
ಸುಮಾರು ಆ ಸಮಯದಷ್ಟಕ್ಕೇ ಅಂದರೆ 1930ರ ದಶಕದ ಮಧ್ಯಭಾಗದಲ್ಲಿ, ಸೈಪ್ರಸ್ ನಿವಾಸಿಯಾಗಿದ್ದ ಥಿಓತೊಟಾಸ್ ಪೆಟ್ರೀಡೀಸ್ ಎಂಬ ಯುವಕನ ಪರಿಚಯ ನನಗಾಯಿತು. ಒಬ್ಬ ಉತ್ತಮ ಕುಸ್ತಿಪಟುವಾಗಿದ್ದ ಅವನು, ಬೇಕರಿ ಖಾದ್ಯಗಳನ್ನು ತಯಾರಿಸುವ ಕಲೆಯನ್ನೂ ಕರಗತಮಾಡಿಕೊಂಡಿದ್ದ. ಆತನೊಂದು ಸುಪ್ರಸಿದ್ಧ ಬೇಕರಿಯಲ್ಲಿ ಕೆಲಸಮಾಡುತ್ತಿದ್ದನು. ಗಾಢಬಣ್ಣದ ಕೂದಲಿದ್ದು, ಗಿಡ್ಡವಾಗಿದ್ದ ನನ್ನಲ್ಲಿ ಥಿಓತೊಟಾಸ್ ಅನುರಕ್ತನಾದನು. ಎಷ್ಟೋ ಸಲ ಅವನು ನನ್ನ ಕೊಠಡಿಯ ಕಿಟಕಿ ಹೊರಗೆ ನಿಂತು ನನಗಾಗಿ ಗ್ರೀಕ್ ಪ್ರೇಮಗೀತೆಗಳನ್ನು ಹಾಡುತ್ತಿದ್ದನು. 1940ರ ಜೂನ್ 30ರಂದು ನಾವು ಮದುವೆಯಾದೆವು. ಆ ದಿನಗಳು ಸುಖಮಯವಾಗಿದ್ದವು. ನನ್ನ ತಾಯಿ ವಾಸವಾಗಿದ್ದ ಅಪಾರ್ಟ್ಮೆಂಟ್ನ ಕೆಳಅಂತಸ್ತಿನಲ್ಲಿ ನಮ್ಮ ಮನೆಯಿತ್ತು. 1941ರಲ್ಲಿ ನಮ್ಮ ಮೊದಲ ಮಗ ಜಾನ್ ಹುಟ್ಟಿದನು.
ಬೈಬಲ್ ಸತ್ಯಗಳನ್ನು ಕಲಿಯುವುದು
ಸ್ವಲ್ಪ ಸಮಯದಿಂದ ಥಿಓತೊಟಾಸ್ ನಮ್ಮ ಧರ್ಮದ ವಿಷಯದಲ್ಲಿ ಅತೃಪ್ತ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದರು ಮತ್ತು ಬೈಬಲ್ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯೆಹೋವನ ಸಾಕ್ಷಿಗಳು ಅವರೊಂದಿಗೆ ಬೈಬಲ್ ಅಧ್ಯಯನ ಆರಂಭಿಸಿದ್ದು ನನಗೆ ತಿಳಿದಿರಲಿಲ್ಲ. ಒಂದು ದಿನ ನಾನು ಮಗುವಿನೊಂದಿಗೆ ಮನೆಯಲ್ಲಿದ್ದಾಗ ಒಬ್ಬ ಮಹಿಳೆಯು ನಮ್ಮ ಮನೆಬಾಗಿಲಿಗೆ ಬಂದು, ಬೈಬಲ್ ಸಂದೇಶವಿದ್ದ ಒಂದು ಕಾರ್ಡನ್ನು ನನ್ನ ಕೈಗಿತ್ತಳು. ಅವಳಿಗೆ ಬೇಸರ ಆಗಬಾರದೆಂದು, ನಾನದನ್ನು ತೆಗೆದುಕೊಂಡು ಓದಿದೆ. ಅನಂತರ ಅವಳು ನನಗೆ ಕೆಲವು ಬೈಬಲ್ ಪ್ರಕಾಶನಗಳನ್ನು ನೀಡಿದಳು. ಅವುಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು ಏಕೆಂದರೆ ಅಂಥದ್ದೇ ಪುಸ್ತಕಗಳನ್ನು ಥಿಓತೊಟಾಸ್ ಮನೆಗೆ ತಂದಿದ್ದರು!
“ಈ ಪುಸ್ತಕಗಳು ನನ್ನ ಹತ್ತಿರವೂ ಇವೆ. ದಯವಿಟ್ಟು ಒಳಗೆ ಬನ್ನಿ” ಎಂದು ಆಕೆಗೆ ಹೇಳಿದೆ. ಅನಂತರ ನಾನು ಆ ಸಾಕ್ಷಿಗೆ ಅಂದರೆ ಎಲೆನೀ ನೀಕೋಲಾವ್ಗೆ ಒಂದರ ಮೇಲೊಂದು ಪ್ರಶ್ನೆಗಳನ್ನು ಕೇಳುತ್ತಾ ಹೋದೆ. ಆದರೆ ಆಕೆ ತಾಳ್ಮೆಗೆಡದೆ, ಬೈಬಲಿನಿಂದ ಉತ್ತರಕೊಟ್ಟಳು. ಇದು ನನಗೆ ಇಷ್ಟವಾಯಿತು. ತಟ್ಟನೆ ನನಗೆ ಬೈಬಲಿನ ಸಂದೇಶ ಅರ್ಥವಾಗತೊಡಗಿತು. ಈ ನಡುವೆ ಎಲೆನೀ ನನ್ನ ಗಂಡನ ಛಾಯಾಚಿತ್ರವನ್ನು ನೋಡಿ, “ನನಗೆ ಇವರ ಪರಿಚಯವಿದೆ!” ಎಂದು ಉದ್ಗರಿಸಿದಳು. ಥಿಓತೊಟಾಸ್ರ ಗುಟ್ಟು ರಟ್ಟಾಯಿತು. ನನಗೆ ಅಚ್ಚರಿಯಾಯಿತು ಏಕೆಂದರೆ ಅವರು ನನಗೆ ಹೇಳದೆಯೇ ಕ್ರೈಸ್ತ ಕೂಟಗಳಿಗೆ ಹೋಗುತ್ತಿದ್ದರು! ಅವರು ಆ ದಿನ ಮನೆಗೆ ಬಂದಾಗ, “ನೀವು ಕಳೆದ ಭಾನುವಾರ ಹೋಗಿದ್ದಲ್ಲಿಗೆ ನಾನು ಈ ವಾರ ನಿಮ್ಮೊಟ್ಟಿಗೆ ಬರುತ್ತೇನೆ” ಎಂದು ಹೇಳಿದೆ.
ನಾನು ಹಾಜರಾದ ಪ್ರಥಮ ಕೂಟದಲ್ಲಿ ಸುಮಾರು ಹತ್ತು ಜನರ ಒಂದು ಗುಂಪು, ಬೈಬಲಿನ ಮೀಕ ಪುಸ್ತಕವನ್ನು ಚರ್ಚಿಸುತ್ತಿತ್ತು. ಅಲ್ಲಿ ಕೇಳಿದ್ದೆಲ್ಲವನ್ನೂ ಅತ್ಯಾಸಕ್ತಿಯಿಂದ ಹೀರಿಕೊಂಡೆ! ಅಂದಿನಿಂದ ಪ್ರತಿ ಶುಕ್ರವಾರ ಸಂಜೆ ಜಾರ್ಜ್ ಮತ್ತು ಕಾಟೆರೀನೀ ಪೆಟ್ರಾಕೀ ಎಂಬ ದಂಪತಿಯು ನಮ್ಮೊಂದಿಗೆ ಬೈಬಲ್ ಅಧ್ಯಯನ ಮಾಡಲು ಮನೆಗೆ ಬರುತ್ತಿದ್ದರು. ನನ್ನ ತಂದೆ ಮತ್ತು ನನ್ನ ತಮ್ಮಂದಿರು ಸಾಕ್ಷಿಗಳೊಂದಿಗೆ ನಾವು ಅಧ್ಯಯನ ಮಾಡುವುದನ್ನು ವಿರೋಧಿಸಿದರು. ನನ್ನ ತಂಗಿ ಸಹನೆ ತೋರಿಸಿದರೂ ಸಾಕ್ಷಿಯಾಗಲಿಲ್ಲ. ಹಾಗಿದ್ದರೂ ನನ್ನ ತಾಯಿ ಬೈಬಲ್ ಸತ್ಯವನ್ನು ಅಂಗೀಕರಿಸಿದರು. ನಾನು, ನನ್ನ ತಾಯಿ ಮತ್ತು ಥಿಓತೊಟಾಸ್ ಯೆಹೋವನಿಗೆ ಮಾಡಿದ ಸಮರ್ಪಣೆಯ ಸಂಕೇತವಾಗಿ 1942ರಲ್ಲಿ ಅಲೆಕ್ಸಾಂಡ್ರಿಯಾದ ಸಮುದ್ರದಲ್ಲಿ ದೀಕ್ಷಾಸ್ನಾನ ಪಡೆದೆವು.
ನಮ್ಮ ಜೀವನ ಅಸ್ತವ್ಯಸ್ಥಗೊಂಡದ್ದು
ಇಸವಿ 1939ರಲ್ಲಿ ಆರಂಭವಾದ IIನೇ ವಿಶ್ವಯುದ್ಧವು ಸ್ವಲ್ಪ ಸಮಯದಲ್ಲೇ ತೀವ್ರವಾಯಿತು. 1940ನೇ ದಶಕದ ಆರಂಭದಲ್ಲಿ, ಜರ್ಮನ್ ಜನರಲ್ ಅರ್ವೀನ್ ರಾಮೆಲ್ ತಮ್ಮ ಮಿಲಿಟರಿ ಟ್ಯಾಂಕ್ ಪಡೆಗಳೊಂದಿಗೆ ಅಲೆಕ್ಸಾಂಡ್ರಿಯಾಕ್ಕೆ ಹತ್ತಿರವಿದ್ದ ಎಲ್ ಅಲಾಮೇನ್ನಲ್ಲಿ ಬೀಡುಬಿಟ್ಟಿದ್ದರಿಂದ, ನಮ್ಮ ನಗರದಲ್ಲೆಲ್ಲಾ ಬ್ರಿಟಿಷ್ ಸೈನಿಕರೇ ಕಾಣಸಿಗುತ್ತಿದ್ದರು. ಇದೆಲ್ಲವನ್ನು ನೋಡಿ, ನಾವು ಒಣ ಆಹಾರವನ್ನು ಶೇಖರಿಸಿಟ್ಟೆವು. ಅಷ್ಟರಲ್ಲಿ ಥಿಓತೊಟಾಸ್ರ ಧಣಿ, ಸೂಯೆಜ್ ಕೊಲ್ಲಿಯ ಬಳಿ ತೌಫಿಕ್ ರೇವು ಪಟ್ಟಣದಲ್ಲಿದ್ದ ತಮ್ಮ ಹೊಸ ಬೇಕರಿಯನ್ನು ನೋಡಿಕೊಳ್ಳಲು ಹೇಳಿದರು. ಹಾಗಾಗಿ ನಾವಲ್ಲಿಗೆ ಸ್ಥಳಾಂತರಿಸಬೇಕಾಯಿತು. ಆ ಸ್ಥಳದಲ್ಲಿ ಸಾಕ್ಷಿಗಳಾಗಿದ್ದ ಒಂದು ಗ್ರೀಕ್ ದಂಪತಿ ನಮ್ಮನ್ನು ಹುಡುಕಲು ಹೊರಟರು. ಅವರಿಗೆ ನಮ್ಮ ವಿಳಾಸ ಗೊತ್ತಿಲ್ಲದಿದ್ದರೂ, ಮನೆಯಿಂದ ಮನೆಗೆ ಸಾರುತ್ತಾ ಕೊನೆಗೆ ನಮ್ಮ ಮನೆ ಕಂಡುಹಿಡಿದರು.
ನಾವು ತೌಫಿಕ್ ರೇವು ಪಟ್ಟಣದಲ್ಲಿದ್ದಾಗ, ಸ್ಟಾವ್ರೋಸ್ ಮತ್ತು ಯೂಲಾ ಕಿಪ್ರೇಆಸ್ ಹಾಗೂ ಅವರ ಮಕ್ಕಳಾದ ಟೋಟೋಸ್ ಮತ್ತು ಯೊರ್ಯೀಆ ಎಂಬವರೊಂದಿಗೆ ಬೈಬಲ್ ಅಧ್ಯಯನ ಮಾಡಿದೆವು. ನಮ್ಮೆರಡೂ ಕುಟುಂಬಗಳು ತುಂಬ ಆಪ್ತವಾದವು. ಸ್ಟಾವ್ರೋಸ್ಗೆ ಬೈಬಲ್ ಅಧ್ಯಯನ ಎಷ್ಟು ಇಷ್ಟವಾಗುತ್ತಿತ್ತೆಂದರೆ, ನಮಗೆ ಹಿಂತೆರಳಲು ಇದ್ದ ಕೊನೆ ರೈಲು ತಪ್ಪಿ ನಾವು ಅವರ ಮನೆಯಲ್ಲೇ ಉಳಿಯುವಂತೆ ಅವನು ತನ್ನ ಮನೆಯಲ್ಲಿದ್ದ ಎಲ್ಲ ಗಡಿಯಾರಗಳನ್ನು ಒಂದು ತಾಸು ಹಿಂದೆ ಹಾಕಿಡುತ್ತಿದ್ದನು. ನಾವು ರಾತ್ರಿ ಬಹಳ ಹೊತ್ತಿನ ವರೆಗೆ ಬೈಬಲ್ ಚರ್ಚೆ ಮಾಡುತ್ತಿದ್ದೆವು.
ನಾವು ತೌಫಿಕ್ ರೇವು ಪಟ್ಟಣದಲ್ಲಿ ಕೇವಲ 18 ತಿಂಗಳಿದ್ದೆವು. ನನ್ನ ತಾಯಿ ಅಸ್ವಸ್ಥರಾದದ್ದರಿಂದ ನಾವು ಅಲೆಕ್ಸಾಂಡ್ರಿಯಾಕ್ಕೆ ಹಿಂದಿರುಗಬೇಕಾಯಿತು. ಅವರು ಯೆಹೋವನಿಗೆ ನಂಬಿಗಸ್ತರಾಗಿ 1947ರಲ್ಲಿ ಸಾವನ್ನಪ್ಪಿದರು. ಆ ಸಂದರ್ಭದಲ್ಲಿ, ಪ್ರೌಢ ಕ್ರೈಸ್ತ ಸ್ನೇಹಿತರ ಹುರಿದುಂಬಿಸುವ ಸಹವಾಸದ ಮೂಲಕ ಯೆಹೋವನು ನಮ್ಮನ್ನು ಹೇಗೆ ಉತ್ತೇಜಿಸುತ್ತಾನೆ ಎಂಬುದನ್ನು ಪುನಃ ಒಮ್ಮೆ ಅನುಭವಿಸಿದೆವು. ಅಲ್ಲದೆ, ಮಿಷನೆರಿಗಳು ತಮ್ಮ ವಿದೇಶೀ ನೇಮಕಗಳಿಗೆ ಹೋಗುತ್ತಿದ್ದಾಗ ಮಾರ್ಗದಲ್ಲಿ ಹಡಗುಗಳು ಸ್ವಲ್ಪ ಸಮಯ ಅಲೆಕ್ಸಾಂಡ್ರಿಯಾದಲ್ಲಿ ತಂಗುತ್ತಿದ್ದ ಕಾರಣ ಅವರಿಗೆ ಅತಿಥಿಸತ್ಕಾರ ತೋರಿಸಲೂ ನಮಗೆ ಅವಕಾಶಸಿಕ್ಕಿತು.
ಕಷ್ಟಸುಖಗಳು
ಇಸವಿ 1952ರಲ್ಲಿ ನಮ್ಮ ಎರಡನೆಯ ಮಗ ಜೇಮ್ಸ್ ಹುಟ್ಟಿದ. ಹೆತ್ತವರಾಗಿದ್ದ ನಾವು, ಆಧ್ಯಾತ್ಮಿಕತೆಗೆ ಪೂರಕವಾಗಿರುವ ಪರಿಸರದಲ್ಲಿ ಮಕ್ಕಳನ್ನು ಬೆಳೆಸುವುದು ಮಹತ್ತ್ವಪೂರ್ಣವೆಂದು ಅರಿತುಕೊಂಡೆವು. ಆದುದರಿಂದ ನಮ್ಮ ಮನೆಯಲ್ಲಿ ಕ್ರಮವಾದ ಬೈಬಲ್ ಕೂಟಗಳು ನಡೆಯುವಂತೆ ಏರ್ಪಡಿಸಿದೆವು ಮತ್ತು ಅನೇಕವೇಳೆ ಪೂರ್ಣಸಮಯದ ಶುಶ್ರೂಷಕರನ್ನು ಮನೆಗೆ ಕರೆದೆವು. ಹೀಗೆ ನಮ್ಮ ಹಿರಿಮಗ ಜಾನ್ ಬೈಬಲ್ ಸತ್ಯಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಂಡನು ಮತ್ತು ತನ್ನ ಹದಿವಯಸ್ಸಿನಲ್ಲೇ ಪಯನೀಯರ್ ಸೇವೆ ಆರಂಭಿಸಿದನು. ಅದೇ ಸಮಯದಲ್ಲಿ ತನ್ನ ಐಹಿಕ ಶಿಕ್ಷಣ ಮುಗಿಸಲು ರಾತ್ರಿ ಶಾಲೆಗೆ ಹೋಗುತ್ತಿದ್ದನು.
ಸ್ವಲ್ಪ ಸಮಯಾನಂತರ, ಥಿಓತೊಟಾಸ್ರಿಗೆ ಗಂಭೀರ ಹೃದ್ರೋಗವಿದೆಯೆಂದು ತಿಳಿದುಬಂತು. ಅವರು ತಮ್ಮ ಕೆಲಸವನ್ನು ಬಿಟ್ಟುಬಿಡಬೇಕೆಂದು ವೈದ್ಯರು ಸಲಹೆಕೊಟ್ಟರು. ಆಗ ನಮ್ಮ ಮಗ ಜೇಮ್ಸ್ಗೆ ಬರೀ ನಾಲ್ಕು ವರ್ಷ. ನಾವೇನು ಮಾಡಬಹುದಿತ್ತು? “ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು” ಎಂದು ಸ್ವತಃ ಯೆಹೋವನೇ ಮಾತುಕೊಟ್ಟಿದ್ದನಲ್ಲವೇ? (ಯೆಶಾ. 41:10) ಅದೇ ವೇಳೆಗೆ, ಸೂಯೆಜ್ ಕಾಲುವೆಯ ಹತ್ತಿರವಿರುವ ಇಸ್ಮಾಲ್ಯಾ ಎಂಬ ಸ್ಥಳಕ್ಕೆ ಪಯನೀಯರರಾಗಿ ಹೋಗಲು ಆಮಂತ್ರಣ ಸಿಕ್ಕಿದಾಗ ನಮ್ಮ ಆನಂದಾಶ್ಚರ್ಯವನ್ನು ಊಹಿಸಬಲ್ಲಿರಾ? ಮುಂದಿನ ವರ್ಷಗಳಲ್ಲಿ ಈಜಿಪ್ಟ್ನಲ್ಲಿ ಕೋಲಾಹಲ ಹೆಚ್ಚಾದದ್ದರಿಂದ ಅಲ್ಲಿನ ನಮ್ಮ ಕ್ರೈಸ್ತ ಸಹೋದರರಿಗೆ ಉತ್ತೇಜನದ ಅಗತ್ಯವಿತ್ತು.
ಇಸವಿ 1960ರಲ್ಲಿ ನಾವು ಒಂದೊಂದು ಸೂಟ್ಕೇಸ್ನೊಂದಿಗೆ ಈಜಿಪ್ಟ್ ದೇಶ ಬಿಟ್ಟು ಹೋಗಬೇಕಾಯಿತು. ನಾವು ಸೈಪ್ರಸ್ ದ್ವೀಪಕ್ಕೆ ಬಂದೆವು. ಇದು ಥಿಓತೊಟಾಸ್ರ ಹುಟ್ಟೂರಾಗಿತ್ತು. ಈ ಸಮಯದಷ್ಟಕ್ಕೆ ಅವರು ತುಂಬ ಅಸ್ವಸ್ಥರಾಗಿ, ಕೆಲಸಮಾಡಲೂ ಅಶಕ್ತರಾಗಿದ್ದರು. ಆದರೆ ಒಂದು ದಯಾಪರ ಕ್ರೈಸ್ತ ದಂಪತಿ, ನಮ್ಮ ವಾಸಕ್ಕಾಗಿ ಅವರಿಗೆ ಸೇರಿದ್ದ ಒಂದು ಮನೆಯನ್ನು ಕೊಟ್ಟರು. ಆದರೆ ದುಃಖಕರವಾಗಿ ಎರಡು ವರ್ಷಗಳ ನಂತರ ನನ್ನ ಯಜಮಾನರು ತೀರಿಕೊಂಡರು. ಜಾನ್ ಸಹ ಸೈಪ್ರಸ್ಗೆ ಸ್ಥಳಾಂತರಿಸಿದ್ದರೂ ಮದುವೆಯಾಗಿದ್ದ ಅವನಿಗೆ ತನ್ನ ಸ್ವಂತ ಕುಟುಂಬವನ್ನು ನೋಡಲಿಕ್ಕಿತ್ತು. ಹಾಗಾಗಿ, ನಾನು ಮತ್ತು ಚಿಕ್ಕವನಾಗಿದ್ದ ಜೇಮ್ಸ್ ಒಂಟಿಯಾದೆವು.
ಕಷ್ಟಕಾಲದಲ್ಲಿ ನಮ್ಮ ಆರೈಕೆ
ಅನಂತರ, ಸ್ಟಾವ್ರೋಸ್ ಮತ್ತು ಡೋರಾ ಕಈರೀಸ್ ಎಂಬ ದಂಪತಿ ತಮ್ಮ ಮನೆಯಲ್ಲಿ ನಮಗೆ ವಸತಿ ನೀಡಿದರು. ಈ ಸಲವೂ ನಮ್ಮ ಅಗತ್ಯಗಳನ್ನು ಪೂರೈಸಿದ್ದಕ್ಕಾಗಿ ನಾನು ಮೊಣಕಾಲೂರಿ ಯೆಹೋವನಿಗೆ ಧನ್ಯವಾದ ಹೇಳಿದೆ. (ಕೀರ್ತ. 145:16) ಈ ದಂಪತಿ ತಮ್ಮ ಮನೆ ಮಾರಿ, ರಾಜ್ಯ ಸಭಾಗೃಹ ಮತ್ತು ಮೇಲಂತಸ್ತಿನಲ್ಲಿ ಒಂದು ಮನೆ ಕಟ್ಟಬೇಕೆಂದಿದ್ದಾಗ ದಯೆಯಿಂದ ನನಗೂ ಜೇಮ್ಸ್ಗೂ ಎರಡು ಕೋಣೆಗಳ ಒಂದು ಚಿಕ್ಕ ಮನೆಯನ್ನು ಅದಕ್ಕೆ ಕೂಡಿಸಿದರು.
ಕಾಲಾನಂತರ ಜೇಮ್ಸ್ ಮದುವೆಯಾದನು. ಅವನೂ ಅವನ ಹೆಂಡತಿಯೂ, ಅವರ ನಾಲ್ಕು ಮಕ್ಕಳಲ್ಲಿ ಮೊದಲನೆಯವನು ಹುಟ್ಟುವ ತನಕ ಪಯನೀಯರ್ ಸೇವೆ ಮಾಡಿದರು. ಸಹೋದರ ನಾರ್ರವರ ಆ ಸ್ಮರಣೀಯ ಭೇಟಿಯ ಎರಡು ವರ್ಷಗಳ ನಂತರ ಅಂದರೆ 1974ರಲ್ಲಿ ಸೈಪ್ರಸ್ನಲ್ಲಿ ಒಂದು ರಾಜಕೀಯ ಕ್ರಾಂತಿಯಾಯಿತು.a ಸಾಕ್ಷಿಗಳ ಸಮೇತ ಅನೇಕ ಜನರು ತಮ್ಮ ಮನೆಬಿಟ್ಟು ಓಡಿಹೋಗಿ ಬೇರೆಡೆ ನೆಲೆಸಬೇಕಾಯಿತು. ಇವರಲ್ಲಿ ನನ್ನ ಮಗ ಜಾನ್ ಸಹ ಒಬ್ಬನು. ಅವನು ತನ್ನ ಪತ್ನಿ ಮತ್ತು ಮೂವರು ಮಕ್ಕಳ ಸಮೇತ ಕೆನಡಕ್ಕೆ ಸ್ಥಳಾಂತರಿಸಿದನು. ಆದರೆ ಇಂಥ ಪರಿಸ್ಥಿತಿಗಳ ಮಧ್ಯೆಯೂ ಸೈಪ್ರಸ್ನಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ಹೆಚ್ಚಳವಾದದ್ದನ್ನು ನೋಡಿ ಸಂತೋಷಪಟ್ಟೆವು.
ನನಗೆ ಪಿಂಚಣಿ ಸಿಗಲಾರಂಭಿಸಿದಾಗ, ಶುಶ್ರೂಷೆಯಲ್ಲಿ ಇನ್ನೂ ಹೆಚ್ಚು ಪಾಲ್ಗೊಳ್ಳಲು ಶಕ್ತಳಾದೆ. ಆದರೆ ಕೆಲವು ವರ್ಷಗಳ ಹಿಂದೆ ನನಗೆ ಲಘುವಾಗಿ ಲಕ್ವ ಹೊಡೆದಾಗ ನನ್ನ ಮಗ ಜೇಮ್ಸ್ ಮತ್ತವನ ಕುಟುಂಬದೊಂದಿಗೆ ವಾಸಿಸಲು ಹೋದೆ. ಹೀಗಿದ್ದರೂ ನಂತರ ನನ್ನ ಆರೋಗ್ಯ ಇನ್ನಷ್ಟು ಹದಗೆಟ್ಟದ್ದರಿಂದ ನಾನು ಹಲವಾರು ವಾರ ಆಸ್ಪತ್ರೆಯಲ್ಲಿದ್ದೆ ಮತ್ತು ಆ ಬಳಿಕ ನನ್ನನ್ನು ಒಂದು ನರ್ಸಿಂಗ್ ಹೋಮ್ಗೆ ಸೇರಿಸಲಾಯಿತು. ನನಗೆ ಯಾವಾಗಲೂ ನೋವು ಇರುವುದಾದರೂ, ಅಲ್ಲಿನ ಸಿಬ್ಬಂದಿ, ರೋಗಿಗಳು ಮತ್ತು ಸಂದರ್ಶಕರಿಗೆ ಸಾಕ್ಷಿಕೊಡುತ್ತೇನೆ. ವೈಯಕ್ತಿಕ ಅಧ್ಯಯನದಲ್ಲಿ ಹಲವಾರು ತಾಸು ಕಳೆಯುತ್ತೇನೆ ಮತ್ತು ನನ್ನ ಆಧ್ಯಾತ್ಮಿಕ ಸಹೋದರರ ದಯಾಪರ ನೆರವಿನಿಂದ ಹತ್ತಿರದಲ್ಲೇ ಇರುವ ಸಭಾ ಪುಸ್ತಕ ಅಧ್ಯಯನಕ್ಕೆ ಹಾಜರಾಗಲು ಶಕ್ತಳಾಗಿದ್ದೇನೆ.
ಬಾಳ ಮುಸ್ಸಂಜೆಯಲ್ಲಿ ಸಾಂತ್ವನ
ನಾನು ಮತ್ತು ನನ್ನ ಗಂಡ ಆಧ್ಯಾತ್ಮಿಕವಾಗಿ ಸಹಾಯಮಾಡಿದವರ ಕುರಿತು ಸುದ್ದಿ ಸಿಗುವಾಗ ನನಗೆ ಖುಷಿಯಾಗುತ್ತದೆ. ಇವರಲ್ಲಿ ಅನೇಕರ ಮಕ್ಕಳು, ಮೊಮ್ಮಕ್ಕಳು ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದು, ಕೆಲವರು ಆಸ್ಟ್ರೇಲಿಯ, ಕೆನಡ, ಇಂಗ್ಲೆಂಡ್, ಗ್ರೀಸ್ ಮತ್ತು ಸ್ವಿಟ್ಸರ್ಲೆಂಡ್ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಈಗ ನನ್ನ ಮಗ ಜಾನ್, ಹೆಂಡತಿ ಮಗನೊಂದಿಗೆ ಕೆನಡದಲ್ಲಿದ್ದಾನೆ. ಅವನ ಹಿರಿಮಗಳು ಮತ್ತು ಅಳಿಯ ಪಯನೀಯರರಾಗಿದ್ದಾರೆ. ಅವನ ಕಿರಿಮಗಳು ಲಿಂಡ ಮತ್ತು ಅಳಿಯ ಜಾಶುವಾ ಸ್ನೇಪ್ರಿಗೆ ಗಿಲ್ಯಡ್ ಶಾಲೆಯ 124ನೇ ತರಗತಿಯನ್ನು ಹಾಜರಾಗಲು ಆಮಂತ್ರಿಸಲಾಗಿದೆ.
ಜೇಮ್ಸ್ ಮತ್ತವನ ಹೆಂಡತಿ ಈಗ ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಇಬ್ಬರು ಪುತ್ರರು ಬೆತೆಲಿನಲ್ಲಿ, ಒಬ್ಬ ಗ್ರೀಸ್ನ ಅಥೆನ್ಸ್ನಲ್ಲಿ ಮತ್ತು ಇನ್ನೊಬ್ಬನು ಜರ್ಮನಿಯ ಸೆಲ್ಟರ್ಸ್ನಲ್ಲಿದ್ದಾನೆ. ಅವರ ಕಿರಿಯ ಮಗ, ಮಗಳು ಹಾಗೂ ಅಳಿಯ ಜರ್ಮನಿಯಲ್ಲಿ ಪಯನೀಯರರಾಗಿದ್ದಾರೆ.
ನನ್ನ ತಾಯಿ ಮತ್ತು ನನ್ನ ಪ್ರಿಯ ಥಿಓತೊಟಾಸ್ ಪುನರುತ್ಥಾನವಾಗಿ ಬರುವಾಗ ನಮಗೆ ಹೇಳಲು ಎಷ್ಟೊಂದು ವಿಷಯಗಳಿರುವವು! ಅವರು ತಮ್ಮ ಕುಟುಂಬಕ್ಕಾಗಿ ಎಂಥ ಉತ್ತಮ ಪರಂಪರೆ ಬಿಟ್ಟು ಹೋದರೆಂಬುದನ್ನು ನೋಡಲು ಆನಂದಪಡುವರು.b
[ಪಾದಟಿಪ್ಪಣಿಗಳು]
a 1974, ಅಕ್ಟೋಬರ್ 22ರ ಎಚ್ಚರ! (ಇಂಗ್ಲಿಷ್) ಪುಟ 12-15 ನೋಡಿ.
b ಈ ಲೇಖನವು ಪ್ರಕಾಶನಕ್ಕಾಗಿ ಸಿದ್ಧವಾಗುತ್ತಿದ್ದಾಗ, ಸಹೋದರಿ ಪೆಟ್ರೀಡೀಸ್ 93ರ ವಯಸ್ಸಿನಲ್ಲಿ ತೀರಿಕೊಂಡರು.
[ಪುಟ 24ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪ್ರೌಢ ಕ್ರೈಸ್ತ ಸ್ನೇಹಿತರ ಹುರಿದುಂಬಿಸುವ ಸಹವಾಸದ ಮೂಲಕ ಯೆಹೋವನು ನಮ್ಮನ್ನು ಹೇಗೆ ಉತ್ತೇಜಿಸುತ್ತಾನೆ ಎಂಬುದನ್ನು ಪುನಃ ಒಮ್ಮೆ ಅನುಭವಿಸಿದೆವು
[ಪುಟ 24ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಸೈಪ್ರಸ್
ನಿಕೋಶಿಯಾ
ಮೆಡಿಟರೇನಿಯನ್ ಸಮುದ್ರ
ಈಜಿಪ್ಟ್
ಕೈರೊ
ಎಲ್ ಅಲಾಮೇನ್
ಅಲೆಕ್ಸಾಂಡ್ರಿಯಾ
ಇಸ್ಮಾಲ್ಯಾ
ಸೂಯೆಜ್
ತೌಫಿಕ್ ರೇವುಪಟ್ಟಣ
ಸೂಯೆಜ್ ಕಾಲುವೆ
[ಕೃಪೆ]
Based on NASA/Visible Earth imagery
[ಪುಟ 23ರಲ್ಲಿರುವ ಚಿತ್ರ]
1938ರಲ್ಲಿ ಥಿಓತೊಟಾಸ್ರೊಂದಿಗೆ
[ಪುಟ 25ರಲ್ಲಿರುವ ಚಿತ್ರ]
ನನ್ನ ಮಗ ಜಾನ್, ಹೆಂಡತಿಯೊಂದಿಗೆ
[ಪುಟ 25ರಲ್ಲಿರುವ ಚಿತ್ರ]
ನನ್ನ ಮಗ ಜೇಮ್ಸ್, ಹೆಂಡತಿಯೊಂದಿಗೆ