ಯಾರಾದರೂ ನಿಮ್ಮ ಮನನೋಯಿಸಿದಾಗ
‘ಸೇಡು ತೀರಿಸಿದಾಗಲೇ ನನಗೆ ಸಮಾಧಾನ’ ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಯಾರಾದರೂ ನಮ್ಮ ಮನನೋಯಿಸಿದಾಗ ಅಥವಾ ಹಾನಿಮಾಡಿದಾಗ ಕೋಪಬರುವುದು ಸಹಜವೇ. ನಮ್ಮೊಳಗೆ ಸರಿತಪ್ಪಿನ ಪ್ರಜ್ಞೆ ಇರುವುದರಿಂದ ನಮಗಾದ ಯಾವುದೇ ಅನ್ಯಾಯವನ್ನು ಕೂಡಲೆ ಸರಿಪಡಿಸಲು ನಮ್ಮ ಮನಸ್ಸು ತುಡಿಯುತ್ತದೆ. ಆದರೆ ಸರಿಪಡಿಸುವುದು ಹೇಗೆಂಬುದೇ ಪ್ರಶ್ನೆ.
ಕೆನ್ನೆಗೆ ಏಟುಕೊಡುವುದು, ನೂಕುವುದು, ತಾತ್ಸಾರಮಾಡುವುದು, ಬೈಗುಳ, ಹಲ್ಲೆ, ಕಳ್ಳತನ—ಹೀಗೆ ಮನನೋಯಿಸುವಂಥ ಬೇರೆ ಬೇರೆ ರೀತಿಗಳಿವೆ. ಯಾರಾದರೂ ನಿಮ್ಮನ್ನು ಯಾವುದೇ ರೀತಿಯಲ್ಲಿ ಅವಮಾನಿಸಿದರೆ ಹೇಗೆ ಪ್ರತಿಕ್ರಿಯಿಸುತ್ತೀರಿ? ಇಂದು ಅನೇಕರು, ‘ನಾನು ಅವರಿಗೆ ಸರಿಯಾಗಿ ಪಾಠ ಕಲಿಸ್ತೇನೆ’ ಎಂದು ಸೇಡುತೀರಿಸಲು ಹವಣಿಸುತ್ತಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ, ಶಿಸ್ತುನೀಡಿದ ಅಧ್ಯಾಪಕರ ಮೇಲೆ ಸೇಡುತೀರಿಸಲು ಪ್ರೌಢ ಶಾಲೆಯ ಹಲವಾರು ವಿದ್ಯಾರ್ಥಿಗಳು ತಮ್ಮ ಮೇಲೆ ದೌರ್ಜನ್ಯ ನಡೆಸಲಾಯಿತೆಂಬ ದೂರು ದಾಖಲಿಸಿದ್ದಾರೆ. ಇದರ ಬಗ್ಗೆ ನ್ಯೂ ಓರ್ಲಿಯನ್ಸ್ನಲ್ಲಿರುವ ಟೀಚರ್ಸ್ ಯೂನಿಯನ್ನ ಅಧ್ಯಕ್ಷೆ ಬ್ರೆಂಡಾ ಮಿಷಲ್ ಹೇಳುವುದು: “ಶಿಕ್ಷಕರೊಬ್ಬರ ಮೇಲೆ ಒಮ್ಮೆ ದೂರು ಬಂದರೆ ಸಾಕು ಅವರ ಹೆಸರಿಗೆ ಮಸಿಬಳಿದಂತೆ.” ದೂರು ಸುಳ್ಳೆಂದು ರುಜುವಾದರೂ ಆ ಕಲೆ ಮಾಸಿಹೋಗದು.
ಉದ್ಯೋಗ ಕ್ಷೇತ್ರದಲ್ಲಿ ಧಣಿಯ ವಿರುದ್ಧ ರೊಚ್ಚಿಗೆದ್ದಿರುವ ಅಥವಾ ವಜಾಗೊಂಡ ಕೆಲಸಗಾರರು ಸೇಡುತೀರಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೆಲವರು ಕಂಪನಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಕಂಪ್ಯೂಟರ್ ನೆಟ್ವರ್ಕ್ನಿಂದ ಅಳಿಸಿಹಾಕುತ್ತಾರೆ. ಇನ್ನು ಕೆಲವರು ಕಂಪನಿಯ ಗುಪ್ತಮಾಹಿತಿಗಳನ್ನು ಕದ್ದು ಬೇರೆ ಕಂಪನಿಗಳಿಗೆ ಮಾರಿಬಿಡುತ್ತಾರೆ ಇಲ್ಲವೆ ಕೊಟ್ಟುಬಿಡುತ್ತಾರೆ. ಇಲೆಕ್ಟ್ರಾನಿಕ್ ಫೈಲುಗಳ ಕಳ್ಳತನ ಅಲ್ಲದೆ “ಕಂಪನಿಯ ಸ್ವತ್ತುಗಳನ್ನು ಕದಿಯುವ ಮೂಲಕ ಸೇಡುತೀರಿಸುವ ಹಳೆಕಾಲದ ಅಸ್ತ್ರವನ್ನು ಕೆಲಸಗಾರರು ಈಗಲೂ ಬಳಸುತ್ತಾರೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆ ವರದಿಸುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕ ಕಂಪನಿಗಳು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುತ್ತಾ, ವಜಾಗೊಂಡ ಉದ್ಯೋಗಿ ತನ್ನ ಮೇಜಿಗೆ ಹೋಗಿ ತನ್ನೆಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಕಂಪೌಂಡ್ನಿಂದ ಹೊರಗೆ ಹೋಗುವ ವರೆಗೆ ಒಬ್ಬ ಸೆಕ್ಯುರಿಟಿ ಆಫೀಸರ್ ಅವನ ಬೆನ್ನ ಹಿಂದೆಯೇ ಇರುವಂತೆ ವ್ಯವಸ್ಥೆಮಾಡುತ್ತಾರೆ.
ಸೇಡುತೀರಿಸುವ ಪ್ರಸಂಗಗಳು ಹೆಚ್ಚಾಗಿ ಅತ್ಯಾಪ್ತ ಸ್ನೇಹಿತರು, ಒಡನಾಡಿಗಳು ಮತ್ತು ಮನೆಮಂದಿಯೊಂದಿಗೆ ನಡೆಯುತ್ತವೆ. ಒಬ್ಬರ ಬಿರುನುಡಿ ಅಥವಾ ವಿಚಾರಹೀನ ವರ್ತನೆಗೆ ಇನ್ನೊಬ್ಬರು ಥಟ್ಟನೆ ಅಷ್ಟೇ ಒರಟಾಗಿ ಪ್ರತಿಕ್ರಿಯಿಸಿ ಸೇಡುತೀರಿಸ್ಯಾರು. ನಿಮ್ಮ ಸ್ನೇಹಿತರೊಬ್ಬರು ಬಿರುಸಾಗಿ ಮಾತಾಡಿದರೆ ನೀವೂ ಅವರಿಗೆ ಅದೇ ರೀತಿಯಲ್ಲಿ ಉತ್ತರಿಸುತ್ತೀರೋ? ಮನೆಯವರು ಯಾರಾದರೂ ನಿಮ್ಮ ಮನನೋಯಿಸಿದರೆ ಸೇಡುತೀರಿಸಲು ಕಾಯುತ್ತಿರುತ್ತೀರೋ? ನಮ್ಮವರೇ ನಮ್ಮ ಮನನೋಯಿಸಿದಾಗ ಈ ರೀತಿ ನಡೆದುಕೊಳ್ಳುವುದು ಎಷ್ಟು ಸುಲಭವಲ್ಲವೇ?
ಸೇಡಿನಿಂದ ಕೇಡು
ಅನೇಕವೇಳೆ ಜನರು ಸೇಡುತೀರಿಸುವ ಮೂಲಕ ಅವಮಾನದಿಂದಾದ ನೋವನ್ನು ಶಮನಮಾಡಲು ಪ್ರಯತ್ನಿಸುತ್ತಾರೆ. ಇದಕ್ಕೊಂದು ಉದಾಹರಣೆ ಬೈಬಲ್ನಲ್ಲಿ ತಿಳಿಸಲಾಗಿರುವ ಪ್ರಾಚೀನಕಾಲದ ಯಾಕೋಬನೆಂಬ ಇಬ್ರಿಯನ ಗಂಡು ಮಕ್ಕಳದ್ದು. ಅವರ ತಂಗಿ ದೀನಳನ್ನು ಕಾನಾನ್ ದೇಶದ ಶೆಕೆಮ್ ಎಂಬವನು ಕೆಡಿಸಿದನೆಂಬ ಸುದ್ದಿ ತಿಳಿದಾಗ ಅವರು “ವ್ಯಥೆಪಟ್ಟು ಬಹಳ ಕೋಪಗೊಂಡರು.” (ಆದಿಕಾಂಡ 34:1-7) ತಮ್ಮ ತಂಗಿಗಾದ ಅನ್ಯಾಯಕ್ಕೆ ಸೇಡುತೀರಿಸಲು ಯಾಕೋಬನ ಇಬ್ಬರು ಗಂಡುಮಕ್ಕಳಾದ ಸಿಮೆಯೋನ್ ಮತ್ತು ಲೇವಿ ಎಂಬವರು ಶೆಕೆಮ್ ಮತ್ತು ಅವನ ಮನೆಯವರ ವಿರುದ್ಧ ಪಿತೂರಿ ನಡೆಸಿದರು. ಇವರು ಮೋಸದಿಂದ ಶೆಕೆಮನ ಊರನ್ನು ನುಗ್ಗಿ ಅವನನ್ನೂ ಅಲ್ಲಿನ ಎಲ್ಲ ಗಂಡಸರನ್ನೂ ಹತಿಸಿದರು.—ಆದಿಕಾಂಡ 34:13-27.
ಈ ರಕ್ತದೋಕುಳಿ ಸಮಸ್ಯೆಯನ್ನು ಬಗೆಹರಿಸಿತೋ? ತನ್ನ ಪುತ್ರರ ಕುಕೃತ್ಯದ ಬಗ್ಗೆ ಯಾಕೋಬನಿಗೆ ಗೊತ್ತಾದಾಗ ಅವರನ್ನು ಖಂಡಿಸುತ್ತಾ, ‘ನೀವು ಈ ದೇಶದ ನಿವಾಸಿಗಳ ಮಧ್ಯೆ . . . ನನ್ನ ಹೆಸರು ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ . . . ಈ ದೇಶದವರು ಒಟ್ಟಾಗಿ ನನ್ನ ಮೇಲೆ ಬಂದು ನನ್ನನ್ನು ಹೊಡೆದರೆ ನಾನೂ ನನ್ನ ಮನೆಯವರೆಲ್ಲರೂ ನಾಶವಾಗುವೆವು’ ಎಂದು ಹೇಳಿದನು. (ಆದಿಕಾಂಡ 34:30) ಅವರ ಸೇಡಿನ ಕೃತ್ಯ ಸಮಸ್ಯೆಯನ್ನು ಬಗೆಹರಿಸುವ ಬದಲು ಇನ್ನಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿತು. ರೋಷಗೊಂಡ ನೆರೆಯವರು ಪ್ರತಿದಾಳಿ ಮಾಡಬಹುದೆಂಬ ಭೀತಿಯ ನೆರಳಲ್ಲೇ ಯಾಕೋಬನ ಕುಟುಂಬ ಜೀವಿಸಬೇಕಾಗಿ ಬಂತು. ಬಹುಶಃ ಇಂಥ ಆಪತ್ತಿಗೆ ತುತ್ತಾಗುವುದನ್ನು ತಪ್ಪಿಸಲಿಕ್ಕಾಗಿಯೇ ಯಾಕೋಬನು ಕುಟುಂಬ ಸಮೇತ ದೂರದ ಬೇತೇಲಿಗೆ ಸ್ಥಳಾಂತರಿಸುವಂತೆ ದೇವರು ನಿರ್ದೇಶನ ಕೊಟ್ಟನು.—ಆದಿಕಾಂಡ 35:1, 5.
ದೀನಳ ಮಾನಭಂಗದ ನಂತರ ನಡೆದ ಆ ಘಟನೆಗಳು ಒಂದು ಮಹತ್ತ್ವದ ಪಾಠವನ್ನು ಒತ್ತಿಹೇಳುತ್ತವೆ. ಅದೇನೆಂದರೆ ಸೇಡುತೀರಿಸುವುದು ಹೆಚ್ಚಿನ ಸೇಡಿನ ಕೃತ್ಯಗಳಿಗೆ ನಡೆಸುತ್ತದೆ. ಅದೊಂದು ವಿಷಚಕ್ರದಂತೆ ಮುಂದುವರಿಯುತ್ತಾ ಇರುತ್ತದೆ.
ನೋವಿನ ವಿಷಚಕ್ರ
ಅನ್ಯಾಯಮಾಡಿರುವ ವ್ಯಕ್ತಿಗೆ ತಕ್ಕಶಾಸ್ತಿ ಮಾಡುವುದರ ಬಗ್ಗೆ ನಿಂತಲ್ಲಿ ಕೂತಲ್ಲಿ ಯೋಚಿಸುತ್ತಾ ಇರುವುದು ನಮಗೇ ಹಾನಿಕರ. ಕ್ಷಮಾಶೀಲತೆ—ಹಿಂದಿನದ್ದನ್ನು ಮರೆತು ಮುಂದೆ ಸಾಗುವ ವಿಧ (ಇಂಗ್ಲಿಷ್) ಎಂಬ ಪುಸ್ತಕ ಹೇಳುವುದು: “ಸಿಟ್ಟು ನಿಮ್ಮನ್ನೇ ಸುಟ್ಟುಬಿಡುತ್ತದೆ. ನಿಮಗೆ ಹಿಂದೆ ಆಗಿರುವ ಅನ್ಯಾಯಗಳ ಬಗ್ಗೆ ಯೋಚಿಸುತ್ತಾ ಒಳಗಿಂದೊಳಗೆ ಕುದಿಯುವುದು, ನಿಮ್ಮ ಮನನೋಯಿಸಿದ ಜನರನ್ನು ಮನಸ್ಸಲ್ಲೇ ಶಪಿಸುವುದು ಮತ್ತು ಕತ್ತಿಮಸೆಯುವುದು ನಿಮ್ಮ ಸಮಯ, ಶಕ್ತಿಯನ್ನು ಕಬಳಿಸಿಬಿಡುತ್ತದೆ.” ಬೈಬಲ್ ಸ್ಪಷ್ಟವಾಗಿ ಹೇಳುವಂತೆ “ಕ್ರೋಧವು ಎಲುಬಿಗೆ ಕ್ಷಯ.”—ಜ್ಞಾನೋಕ್ತಿ 14:30.
ಮನಸ್ಸಿನಲ್ಲಿ ದ್ವೇಷ ಮತ್ತು ಹಾನಿಕರ ಭಾವನೆಗಳನ್ನು ಇಟ್ಟುಕೊಂಡಿರುವ ವ್ಯಕ್ತಿ ಸಂತೋಷದಿಂದಿರುವುದಾದರೂ ಹೇಗೆ? “‘ಸೇಡು ತೀರಿಸಿದಾಗಲೇ ಸಮಾಧಾನ’ ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ವರ್ಷಗಳಿಂದ ಹಗೆ ಸಾಧಿಸಿರುವವರ ಮುಖಗಳನ್ನು ಸ್ವಲ್ಪ ನೋಡಿ” ಎಂದು ವಿಮರ್ಶಕರೊಬ್ಬರು ಹೇಳುತ್ತಾರೆ.
ಜನಾಂಗೀಯ ಮತ್ತು ಧಾರ್ಮಿಕ ಬಿಕ್ಕಟ್ಟುಗಳು ರಾರಾಜಿಸುತ್ತಿರುವ ಅನೇಕ ಕಡೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪ ಗಮನಿಸಿ. ಒಂದು ಹತ್ಯೆಗೆ ಪ್ರತೀಕಾರದಲ್ಲಿ ಇನ್ನೊಂದು ಹತ್ಯೆ, ಹೀಗೆ ದ್ವೇಷ-ಮರಣದ ಸರಣಿ ಮುಂದುವರಿಯುತ್ತಾ ಇರುತ್ತದೆ. ಉದಾಹರಣೆಗೆ, ಭಯೋತ್ಪಾದಕರ ದಾಳಿಯಲ್ಲಿ ಬಾಂಬ್ ಸ್ಫೋಟವೊಂದು 18 ಮಂದಿಯನ್ನು ಬಲಿತೆಗೆದುಕೊಂಡಾಗ ದುಃಖತಪ್ತ ಮಹಿಳೆಯೊಬ್ಬಳು, “ನಾವಿದಕ್ಕೆ ಸಾವಿರ ಪಟ್ಟು ಹಿಂದೆಕೊಡಬೇಕು!” ಎಂದು ಬೊಬ್ಬೆಯಿಟ್ಟಳು. ಹೀಗೆ ಕ್ರೌರ್ಯವೂ ಹೆಚ್ಚಾಗುತ್ತದೆ, ಹೊಡೆದಾಟ-ಬಡಿದಾಟದಲ್ಲಿ ಸೇರುವ ಜನರ ಸಂಖ್ಯೆಯೂ ಹೆಚ್ಚಾಗುತ್ತದೆ.
“ಕಣ್ಣಿಗೆ ಪ್ರತಿಯಾಗಿ ಕಣ್ಣು”
ಸೇಡುತೀರಿಸುವುದು ಸರಿ ಎಂದು ಸಮರ್ಥಿಸಲು ಕೆಲವರು ಬೈಬಲೆಡೆಗೆ ಬೊಟ್ಟುಮಾಡುತ್ತಾರೆ. “‘ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಸಬೇಕು’ ಎಂದು ಬೈಬಲೇ ಹೇಳುತ್ತದಲ್ಲಾ” ಎಂದವರು ಹೇಳಾರು. (ಯಾಜಕಕಾಂಡ 24:20) “ಕಣ್ಣಿಗೆ ಪ್ರತಿಯಾಗಿ ಕಣ್ಣು” ಎಂಬ ನಿಯಮವು ಮೇಲ್ನೋಟಕ್ಕೆ ಸೇಡಿಗೆ ಇಂಬುಕೊಡುವಂತೆ ತೋರಬಹುದು. ಆದರೆ ವಾಸ್ತವದಲ್ಲಿ, ಆ ನಿಯಮವು ಸೇಡುತೀರಿಸುವ ಕೃತ್ಯಗಳಿಗೆ ಕಡಿವಾಣ ಹಾಕಿತು. ಹೇಗೆ?
ಇಸ್ರಾಯೇಲ್ಯನೊಬ್ಬನು ತನ್ನ ಜನಾಂಗದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಅವನ ಕಣ್ಣು ಕಿತ್ತುಹಾಕಿದರೆ ಹಲ್ಲೆನಡೆಸಿದವನಿಗೆ ಧರ್ಮಶಾಸ್ತ್ರಕ್ಕನುಸಾರ ನ್ಯಾಯವಾದ ಶಿಕ್ಷೆಯಾಗುತ್ತಿತ್ತು. ಆದರೆ ಈ ಶಿಕ್ಷೆಯನ್ನು ಹಲ್ಲೆನಡೆಸಿದವನಿಗಾಗಲಿ ಅವನ ಕುಟುಂಬದಲ್ಲೊಬ್ಬರಿಗಾಗಲಿ ವಿಧಿಸುವುದು ಅನ್ಯಾಯಕ್ಕೊಳಗಾದವನ ಕೆಲಸವಾಗಿರಲಿಲ್ಲ. ಅನ್ಯಾಯವನ್ನು ಯೋಗ್ಯ ರೀತಿಯಲ್ಲಿ ಇತ್ಯರ್ಥಮಾಡಲು ವಿಷಯವನ್ನು ಅಧಿಕಾರಿಗಳು ಅಂದರೆ ನೇಮಿತ ನ್ಯಾಯಾಧಿಪತಿಗಳ ಬಳಿಗೆ ಕೊಂಡೊಯ್ಯಬೇಕೆಂದು ಧರ್ಮಶಾಸ್ತ್ರವು ಅವಶ್ಯಪಡಿಸಿತು. ಒಬ್ಬನು ಉದ್ದೇಶಪೂರ್ವಕವಾಗಿ ಅಪರಾಧ ಅಥವಾ ಹಿಂಸಾತ್ಮಕ ಕೃತ್ಯವೆಸಗಿದರೆ ತನಗೂ ಅಂಥದ್ದೇ ಕೃತ್ಯದಿಂದ ಶಿಕ್ಷೆವಿಧಿಸಲಾಗುವುದೆಂಬ ಅರಿವು ಅಂಥ ದುಷ್ಕೃತ್ಯಗಳನ್ನು ಮಾಡದಂತೆ ತಡೆಯಸಾಧ್ಯವಿತ್ತು. ಅದಲ್ಲದೆ ಇನ್ನೂ ಹೆಚ್ಚಿನ ವಿಷಯಗಳು ಸೇರಿದ್ದವು.
ಈ ಹಿಂದೆ ತಿಳಿಸಲಾದ ಶಿಕ್ಷೆಯ ನಿಯಮವನ್ನು ಕೊಡುವ ಮೊದಲು ಯೆಹೋವ ದೇವರು ಇಸ್ರಾಯೇಲ್ ಜನಾಂಗಕ್ಕೆ, ‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳಬಾರದು’ ಎಂದು ಮೋಶೆಯ ಮೂಲಕ ಹೇಳಿದನು. (ಯಾಜಕಕಾಂಡ 19:17, 18) ಹಾಗಾದರೆ “ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಸಬೇಕು” ಎಂಬ ನಿಯಮವನ್ನು ಇಡೀ ಧರ್ಮಶಾಸ್ತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಅರ್ಥಮಾಡಿಕೊಳ್ಳಬೇಕು. ಧರ್ಮಶಾಸ್ತ್ರವನ್ನು ಯೇಸು ಈ ಎರಡು ಆಜ್ಞೆಗಳಲ್ಲಿ ಸಾರಾಂಶಿಸಿದನು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಮತ್ತು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:37-40) ಹಾಗಾದರೆ ಅನ್ಯಾಯಕ್ಕೊಳಗಾದಾಗ ಸತ್ಯ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಬೇಕು?
ಶಾಂತಿ ಮಾರ್ಗದಲ್ಲೇ ನಡೆಯಿರಿ
ಬೈಬಲ್ ಯೆಹೋವ ದೇವರನ್ನು “ಶಾಂತಿಯ ದೇವರು” ಎಂದು ವರ್ಣಿಸುತ್ತದೆ ಮತ್ತು ಆತನ ಆರಾಧಕರು ‘ಶಾಂತಿಯನ್ನು ಹುಡುಕಿ ಅದನ್ನು ಬೆನ್ನಟ್ಟುವಂತೆ’ ಪ್ರೋತ್ಸಾಹಿಸುತ್ತದೆ. (ಇಬ್ರಿಯ 13:20; 1 ಪೇತ್ರ 3:11) ಆದರೆ ಇದರಿಂದ ಏನಾದರೂ ಪ್ರಯೋಜನವಿದೆಯೋ?
ಯೇಸು ಭೂಮಿಯಲ್ಲಿದ್ದಾಗ ಶತ್ರುಗಳು ಅವನ ಮೇಲೆ ಉಗುಳಿದರು, ಚಡಿಗಳಿಂದ ಹೊಡೆದರು ಮತ್ತು ಹಿಂಸಿಸಿದರು. ಅವನ ಆಪ್ತ ಒಡನಾಡಿಯೊಬ್ಬನು ದ್ರೋಹ ಬಗೆದನು. ಅವನ ಹಿಂಬಾಲಕರೇ ಅವನನ್ನು ಬಿಟ್ಟು ಓಡಿಹೋದರು. (ಮತ್ತಾಯ 26:48-50; 27:27-31) ಆಗ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅದರ ಬಗ್ಗೆ ಅಪೊಸ್ತಲ ಪೇತ್ರನು ಬರೆದದ್ದು: “ಅವನನ್ನು ದೂಷಿಸುತ್ತಿದ್ದಾಗ ಅವನು ಪ್ರತಿಯಾಗಿ ದೂಷಿಸುತ್ತಿರಲಿಲ್ಲ. ಅವನು ಕಷ್ಟವನ್ನು ಅನುಭವಿಸುತ್ತಿದ್ದಾಗ ಯಾರನ್ನೂ ಬೆದರಿಸದೆ, ನೀತಿಯಿಂದ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಡುತ್ತಾ ಇದ್ದನು.”—1 ಪೇತ್ರ 2:23.
“ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು” ಎಂದು ಪೇತ್ರನು ವಿವರಿಸಿದನು. (1 ಪೇತ್ರ 2:21) ಹೌದು, ಕ್ರೈಸ್ತರು ಯೇಸುವನ್ನು ಅನುಕರಿಸುವಂತೆ ಉತ್ತೇಜಿಸಲಾಗಿದೆ. ಅನ್ಯಾಯಕ್ಕೊಳಗಾದಾಗ ಅವನು ಪ್ರತಿಕ್ರಿಯಿಸಿದ ವಿಧವನ್ನು ಅನುಕರಿಸುವುದೂ ಇದರಲ್ಲಿ ಸೇರಿದೆ. ಈ ಕುರಿತು ಯೇಸು ಪರ್ವತ ಪ್ರಸಂಗದಲ್ಲಿ ಹೀಗಂದನು: “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ.”—ಮತ್ತಾಯ 5:44, 45.
ಕ್ರಿಸ್ತನಂಥ ಪ್ರೀತಿಯುಳ್ಳವರು ತಮಗೆ ಅನ್ಯಾಯವಾದಾಗ ಇಲ್ಲವೆ ತಮಗೆ ಅನ್ಯಾಯವಾಗಿದೆಯೆಂದು ಭಾವಿಸುವಾಗ ಹೇಗೆ ಪ್ರತಿಕ್ರಿಯಿಸುತ್ತಾರೆ? “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ” ಎನ್ನುತ್ತದೆ ಜ್ಞಾನೋಕ್ತಿ 19:11. “ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು” ಎಂಬ ಬುದ್ಧಿವಾದವನ್ನೂ ಕ್ರೈಸ್ತರು ಅನ್ವಯಿಸುತ್ತಾರೆ. (ರೋಮನ್ನರಿಗೆ 12:21) ಇದು ಜಗತ್ತಿನಲ್ಲಿ ಮೇಲುಗೈ ಸಾಧಿಸಿರುವ ಸೇಡಿನ ಮನೋಭಾವಕ್ಕೆ ಎಷ್ಟು ತದ್ವಿರುದ್ಧ ಅಲ್ಲವೇ? ನಿಜ ಕ್ರೈಸ್ತ ಪ್ರೀತಿಯು ಸೇಡುತೀರಿಸುವ ಛಲವನ್ನು ಮೆಟ್ಟಿನಿಲ್ಲಲು ಮತ್ತು ಹೀಗೆ ‘ಪರರ ದೋಷವನ್ನು ಲಕ್ಷಿಸದಿರಲು’ ಸಹಾಯಮಾಡುತ್ತದೆ. ಯಾಕೆಂದರೆ, ಪ್ರೀತಿ “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.”—1 ಕೊರಿಂಥ 13:5.
ಹಾಗಾದರೆ ನಾವು ಯಾವುದೇ ಪಾತಕಕ್ಕೆ ಬಲಿಪಶುವಾದರೆ ಅಥವಾ ಬೆದರಿಕೆಗೊಳಗಾದರೆ ಸುಮ್ಮನಿರಬೇಕು ಎಂದಿದರ ಅರ್ಥವೋ? ಖಂಡಿತ ಇಲ್ಲ. “ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ” ಇರುವಂತೆ ಪೌಲನು ಹೇಳಿದಾಗ ಅವನ ಅರ್ಥ ಕ್ರೈಸ್ತರು ಎಲ್ಲವನ್ನು ಸಹಿಸಿಕೊಂಡು ಹುತಾತ್ಮರಾಗಬೇಕೆಂದಲ್ಲ. ಯಾರಾದರೂ ನಮಗೆ ಹಾನಿಮಾಡಲು ಪ್ರಯತ್ನಿಸಿದರೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕು ಖಂಡಿತ ನಮಗಿದೆ. ನಿಮಗೊ ನಿಮ್ಮ ಸ್ವತ್ತುಗಳಿಗೊ ಹಾನಿಯಾದರೆ ಪೊಲೀಸರ ಮೊರೆಹೋಗಬಹುದು. ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಏನಾದರೂ ಸಮಸ್ಯೆ ಎದ್ದರೆ ಅಲ್ಲಿನ ಅಧಿಕಾರಿಗಳ ಸಹಾಯ ಕೋರಬಹುದು.—ರೋಮನ್ನರಿಗೆ 13:3, 4.
ಏನೇ ಆದರೂ, ಈ ಭ್ರಷ್ಟ ಲೋಕದಲ್ಲಿ ನ್ಯಾಯ ಸಿಗುವುದು ಕನಸಿನ ಮಾತು ಎಂಬುದನ್ನು ನೆನಪಿನಲ್ಲಿಡುವುದು ಒಳ್ಳೇದು. ನ್ಯಾಯದ ಹುಡುಕಾಟದಲ್ಲಿ ತಮ್ಮ ಇಡೀ ಜೀವಮಾನವನ್ನೇ ಕಳೆದಿರುವ ಅನೇಕರಿಗೆ ಕೊನೆಯಲ್ಲಿ ದಕ್ಕಿದ್ದು ನಿರಾಸೆ, ವೇದನೆಯೇ.
ಈ ರೀತಿ ಜನರು ಸೇಡು, ದ್ವೇಷಗಳಿಂದ ವಿಭಜಿತರಾಗುವುದನ್ನು ನೋಡುವುದೇ ಸೈತಾನನ ಕಡುಬಯಕೆ ಎಂಬುದರಲ್ಲಿ ಎರಡು ಮಾತಿಲ್ಲ. (1 ಯೋಹಾನ 3:7, 8) ಆದ್ದರಿಂದ ಬೈಬಲಿನ ಈ ಮಾತುಗಳನ್ನು ಸದಾ ಮನಸ್ಸಿನಲ್ಲಿಡುವುದು ಉತ್ತಮ: “ಪ್ರಿಯರೇ ನೀವು ಮುಯ್ಯಿಗೆ ಮುಯ್ಯಿ ತೀರಿಸದೆ ದೇವರ ಕ್ರೋಧಕ್ಕೆ ಎಡೆಮಾಡಿಕೊಡಿರಿ; ‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ.’” (ರೋಮನ್ನರಿಗೆ 12:19) ಆದಕಾರಣ ವಿಷಯಗಳನ್ನು ಯೆಹೋವ ದೇವರ ಕೈಗೆ ಒಪ್ಪಿಸುವಾಗ ಕ್ರೋಧ, ಹಿಂಸಾಚಾರ, ಅತಿಯಾದ ದುಃಖದಿಂದ ಮುಕ್ತರಾಗುವೆವು.—ಜ್ಞಾನೋಕ್ತಿ 3:3-6. (w09 09/01)
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಮತ್ತು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು”
[ಪುಟ 13ರಲ್ಲಿರುವ ಚಿತ್ರಗಳು]
ಪ್ರೀತಿ “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.”—1 ಕೊರಿಂಥ 13:5