ದೇವರ ಸಮೀಪಕ್ಕೆ ಬನ್ನಿರಿ
“ಯೆಹೋವನೇ, ನೀನು ನನ್ನನ್ನು . . . ತಿಳುಕೊಂಡಿದ್ದೀ”
“ನನ್ನ ಬಗ್ಗೆ ಯಾರಿಗೂ ಚಿಂತೆಯಿಲ್ಲ, ನನ್ನನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಅನಿಸಿಕೆ ಮನ ಕುಗ್ಗಿಸುತ್ತದೆ” ಎಂದು ಸಾಹಿತಿ ಆರ್ಥರ್. ಎಚ್. ಸ್ಟೇನ್ಬ್ಯಾಕ್ ಹೇಳಿದರು. ನಿಮ್ಮ ಭಾವನೆಗಳನ್ನು, ನೀವೇನನ್ನು ಅನುಭವಿಸುತ್ತಿದ್ದೀರಿ ಎಂಬುದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಿಮಗೂ ಅನಿಸಿದೆಯೋ? ಹಾಗಿದ್ದರೆ ಕೀರ್ತನೆ 139ರಲ್ಲಿರುವ ದಾವೀದನ ಮಾತುಗಳಿಂದ ನೀವು ಸಾಂತ್ವನ ಪಡೆದುಕೊಳ್ಳಬಲ್ಲಿರಿ. ಯೆಹೋವ ದೇವರಿಗೆ ತನ್ನ ಆರಾಧಕರ ಮೇಲೆ ಅಪಾರ ಕಾಳಜಿಯಿದೆ, ಪ್ರತಿ ದಿನ ಅವರ ಜೀವನದಲ್ಲಿ ಏನೇನು ನಡೆಯುತ್ತದೋ ಅದೆಲ್ಲವನ್ನು ಅಕ್ಕರೆಯಿಂದ ಗಮನಿಸುತ್ತಿರುತ್ತಾನೆ ಎಂಬ ಖಾತ್ರಿ ದಾವೀದನಲ್ಲಿತ್ತು.
ಆ ಭರವಸೆಯನ್ನು ವ್ಯಕ್ತಪಡಿಸುತ್ತಾ ದಾವೀದನು, “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ” ಎಂದು ಹೇಳಿದನು. (ವಚನ 1) ದಾವೀದನು ಬಳಸಿರುವ ಸುಂದರ ಶಬ್ದಚಿತ್ರಣವನ್ನು ಗಮನಿಸಿ. “ಪರೀಕ್ಷಿಸಿ” ಎನ್ನುವ ಪದಕ್ಕೆ ಹೀಬ್ರುವಿನಲ್ಲಿ ಉಪಯೋಗಿಸಲಾಗಿರುವ ಪದ ಹಲವಾರು ವಿಷಯಕ್ಕೆ ಅನ್ವಯವಾಗುತ್ತದೆ. ಅದಿರು ತೆಗೆಯಲು ಅಗೆಯುವುದು (ಯೋಬ 28:3), ದೇಶವನ್ನು ಸಂಚರಿಸಿ ನೋಡುವುದು (ನ್ಯಾಯಸ್ಥಾಪಕರು 18:2) ಅಥವಾ ಕಾನೂನು ಮೊಕದ್ದಮೆಯ ನಿಜತ್ವಗಳನ್ನು ತನಿಖೆ ಮಾಡಿ ತಿಳಿಯುವುದು (ಧರ್ಮೋಪದೇಶಕಾಂಡ 13:14) ಇದಕ್ಕೆಲ್ಲ ಆ ಪದವನ್ನು ಬಳಸುತ್ತಾರೆ. ಹೌದು, ಯೆಹೋವ ದೇವರು ನಮ್ಮನ್ನು ಎಷ್ಟು ಚೆನ್ನಾಗಿ ತಿಳಿದಿದ್ದಾನೆ ಎಂದರೆ ನಮ್ಮ ಬಗ್ಗೆ ಪ್ರತಿಯೊಂದು ವಿಷಯ, ನಮ್ಮ ಜೀವನದ ಅತಿ ಸೂಕ್ಷ್ಮ ವಿಚಾರಗಳೂ ಆತನಿಗೆ ಗೊತ್ತಿದೆ. ದಾವೀದನು, “ನನ್ನನ್ನು” ಎಂಬ ಸರ್ವನಾಮ ಬಳಸುವ ಮೂಲಕ, ದೇವರಿಗೆ ತನ್ನ ಪ್ರತಿಯೊಬ್ಬ ಸೇವಕನಲ್ಲಿ ಗಾಢ ಆಸಕ್ತಿಯಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದನು. ದೇವರು ಪ್ರತಿಯೊಬ್ಬರ ಅಂತರಂಗವನ್ನು ಪರೀಕ್ಷಿಸುತ್ತಾ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಾನೆ ಎಂಬುದು ನಿಶ್ಚಯ.
ದೇವರು ನಮ್ಮನ್ನು ಎಷ್ಟು ಆಳವಾಗಿ ಪರೀಕ್ಷಿಸುತ್ತಾನೆ ಎಂಬುದನ್ನು ವಿವರಿಸುತ್ತಾ ದಾವೀದನು ಹೇಳುವುದು: “ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ.” (ವಚನ 2) ಒಂದರ್ಥದಲ್ಲಿ ಯೆಹೋವ ದೇವರು ನಮಗಿಂತ ಎಷ್ಟೋ “ದೂರ”ದಲ್ಲಿ ಇದ್ದಾನೆ. ಸ್ವರ್ಗದಲ್ಲಿ ವಾಸಿಸುತ್ತಾನೆ. ಆದರೂ, ನಾವು ಯಾವಾಗ ಏಳುತ್ತೇವೆ, ಮಲಗುತ್ತೇವೆ, ವಿಶ್ರಾಂತಿಗಾಗಿ ಕೂತುಕೊಳ್ಳುತ್ತೇವೆ ಎನ್ನುವುದು ಆತನಿಗೆ ತಿಳಿದಿದೆ. ನಮ್ಮ ಆಲೋಚನೆಗಳನ್ನು, ಅಪೇಕ್ಷೆಗಳನ್ನು ಮತ್ತು ಇರಾದೆಗಳನ್ನು ಆತನು ಬಲ್ಲನು. ಅಂಥ ನಿಕಟ ಪರೀಕ್ಷೆಗೆ ಒಳಗಾಗುವಾಗ ದಾವೀದನಿಗೆ ಭಯವೆನಿಸಿತಾ? ಇಲ್ಲ. ಬದಲಾಗಿ ಅವನು ಅದನ್ನೇ ಕೇಳಿಕೊಂಡ. (ವಚನ 23, 24) ಏಕೆ?
ಯೆಹೋವ ದೇವರು ಒಳ್ಳೇ ಕಾರಣದಿಂದಲೇ ತನ್ನ ಆರಾಧಕರನ್ನು ಪರೀಕ್ಷಿಸಿ ನೋಡುತ್ತಾನೆಂದು ದಾವೀದನಿಗೆ ತಿಳಿದಿತ್ತು. “ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ” ಎಂದು ಹೇಳಿದನು. (ವಚನ 3) ಪ್ರತಿ ದಿನ ಯೆಹೋವ ದೇವರು ನಮ್ಮ ‘ನಡತೆಯನ್ನೆಲ್ಲ’ ಗಮನಿಸುತ್ತಾನೆ. ತಪ್ಪುಗಳನ್ನೂ ನೋಡುತ್ತಾನೆ ಸತ್ಕ್ರಿಯೆಗಳನ್ನೂ ನೋಡುತ್ತಾನೆ. ಆದರೆ ಯಾವುದರಲ್ಲಿ ಆತನಿಗೆ ಆಸಕ್ತಿಯಿದೆ? ಮೂಲಭಾಷೆಯಾದ ಹೀಬ್ರುವಿನಲ್ಲಿ “ಶೋಧಿಸಿ” ಎಂಬ ಪದಕ್ಕೆ ಬಳಸಿರುವ ಪದ “ಸೋಸಿ ನೋಡು” ಅಥವಾ “ತೂರು” ಎಂಬ ಅರ್ಥ ಕೊಡುತ್ತದೆ. ಒಬ್ಬ ರೈತ ಧಾನ್ಯವನ್ನು ತೂರಿ ಹೊಟ್ಟಿನಿಂದ ಒಳ್ಳೆಯ ಕಾಳನ್ನು ಬೇರ್ಪಡಿಸುವ ಕ್ರಿಯೆಗೆ ಈ ಪದ ಬಳಸಲಾಗುತ್ತದೆ. “ಗೋಚರವಾಗಿದೆ” ಎಂಬುದಕ್ಕೆ ದಾವೀದನು ಬಳಸಿರುವ ಹೀಬ್ರು ಭಾಷೆಯ ಪದ ತುಂಬ ಅರ್ಥಗರ್ಭಿತವಾದದ್ದು. ತನ್ನ ನಡತೆಯೆಲ್ಲವೂ ಯೆಹೋವ ದೇವರಿಗೆ ತಿಳಿದಿದೆ ಮತ್ತು ಅವನ್ನು ಅತ್ಯಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬ ಭಾವನೆಯನ್ನು ದಾವೀದನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾನೆ. ತನ್ನ ಆರಾಧಕರ ದಿನದಿನದ ನಡೆನುಡಿಗಳನ್ನು ಪರೀಕ್ಷಿಸುವಾಗ ಯೆಹೋವ ದೇವರು ಅವರಲ್ಲಿರುವ ಒಳ್ಳೇದನ್ನು ಅಮೂಲ್ಯವೆಂದೆಣಿಸುತ್ತಾನೆ. ಏಕೆ? ತನ್ನನ್ನು ಮೆಚ್ಚಿಸಲು ಅವರು ಮಾಡುವ ಪ್ರಯತ್ನಗಳನ್ನು ಆತನು ನೆಚ್ಚುವುದರಿಂದಲೇ.
ಯೆಹೋವ ದೇವರಿಗೆ ತನ್ನ ಆರಾಧಕರಲ್ಲಿ ತುಂಬಾ ಕಾಳಜಿಯಿದೆ ಎಂದು ಕೀರ್ತನೆ 139 ಕಲಿಸುತ್ತದೆ. ಆತನು ಅವರನ್ನು ಪರೀಕ್ಷಿಸಿ ತಿಳಿಯುತ್ತಾನೆ, ಆತನ ಕಣ್ಗಾವಲಿನಡಿಯಲ್ಲೇ ಅವರ ಜೀವನ ಸಾಗುತ್ತದೆ. ಹೀಗಾಗಿ ಅವರು ಎದುರಿಸುವ ಸಮಸ್ಯೆಗಳೆಲ್ಲ ಆತನಿಗೆ ಗೊತ್ತಿದೆ. ಅವು ತರುವ ಮನೋವೇದನೆಯನ್ನೂ ಅರ್ಥಮಾಡಿಕೊಳ್ಳುತ್ತಾನೆ. ಅಷ್ಟು ಕಾಳಜಿ ವಹಿಸುವ ದೇವರನ್ನು ಆರಾಧಿಸಲು ನೀವು ಖಂಡಿತ ಬಯಸುವಿರಿ. ಆತನಿಗೆ ಆರಾಧನೆ ಸಲ್ಲಿಸಲು ಶ್ರಮಿಸಿದರೆ ಈ ಆಶ್ವಾಸನೆ ನಿಮಗಿರಲಿ: ನಿಮ್ಮ “ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ” ಯೆಹೋವ ದೇವರು ಎಂದಿಗೂ ಮರೆಯನು!—ಇಬ್ರಿಯರಿಗೆ 6:10. (w11-E 09/01)