ಜೀವನ ಕಥೆ
ಯೆಹೋವನು ತನ್ನ ಚಿತ್ತವನ್ನು ಮಾಡುವಂತೆ ನನಗೆ ಕಲಿಸಿದನು
ಮ್ಯಾಕ್ಸ್ ಲಾಯ್ಡ್ ಹೇಳಿದಂತೆ
1955ರ ಒಂದು ರಾತ್ರಿ. ದಕ್ಷಿಣ ಅಮೆರಿಕದ ಪರಾಗ್ವೆಯ ದೂರದ ಹಳ್ಳಿಯೊಂದಕ್ಕೆ ನಾನು ಇನ್ನೊಬ್ಬ ಮಿಷನರಿ ಸಹೋದರನೊಂದಿಗೆ ಹೋಗಿದ್ದೆ. ನಾವಿದ್ದ ಮನೆಯನ್ನು ರೊಚ್ಚಿಗೆದ್ದ ಜನರ ಗುಂಪೊಂದು ಸುತ್ತುವರಿದಿತ್ತು. ಅವರು ಸಿಟ್ಟಿನಿಂದ “ನಮ್ಮ ದೇವರು ರಕ್ತಪಿಪಾಸೆಯ ದೇವರು, ಅವನಿಗೆ ಗ್ರಿಂಗೊಗಳ ರಕ್ತ ಕುಡಿಯಬೇಕು” ಎಂದು ಕೂಗುತ್ತಿದ್ದರು. ಗ್ರಿಂಗೊಗಳಾದ (ವಿದೇಶಿಯರಾದ) ನಾವು ಇಲ್ಲಿಗೆ ಬಂದದ್ದಾದರೂ ಹೇಗೆ?
ನಾನು ಹುಟ್ಟಿಬೆಳೆದದ್ದು ಆಸ್ಟ್ರೇಲಿಯದಲ್ಲಿ. ಆಗಿನಿಂದಲೇ ಯೆಹೋವನು ನನಗೆ ತನ್ನ ಚಿತ್ತದಂತೆ ಮಾಡಲು ಕಲಿಸಲಾರಂಭಿಸಿದನು. 1938ರಲ್ಲಿ ನನ್ನ ತಂದೆ ಸಾಕ್ಷಿಯೊಬ್ಬಳಿಂದ ಎನಿಮೀಸ್ ಎಂಬ ಪುಸ್ತಕವನ್ನು ಸ್ವೀಕರಿಸಿದ್ದರು. ಸ್ಥಳೀಯ ಪಾದ್ರಿ ಬೈಬಲ್ ಭಾಗಗಳನ್ನು ಕಟ್ಟುಕಥೆಗಳೆಂದು ಬೋಧಿಸುತ್ತಿದ್ದ ಕಾರಣ ಅವರ ಮೇಲೆ ಅಪ್ಪಅಮ್ಮ ಈಗಾಗಲೇ ವಿಶ್ವಾಸ ಕಳಕೊಂಡಿದ್ದರು. ಸತ್ಯವನ್ನು ಕಲಿತು ಅವರಿಬ್ಬರು ಒಂದು ವರ್ಷದ ನಂತರ ಯೆಹೋವನಿಗೆ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡಕೊಂಡರು. ಅಲ್ಲಿಂದ ಹಿಡಿದು ಯೆಹೋವನ ಚಿತ್ತವನ್ನು ಮಾಡುವುದೇ ನಮ್ಮ ಕುಟುಂಬದ ಮುಖ್ಯ ಧ್ಯೇಯವಾಯಿತು. ಅನಂತರ ನನಗಿಂತ ಐದು ವರ್ಷ ದೊಡ್ಡವಳಾದ ಲೆಸ್ಲೀ ದೀಕ್ಷಾಸ್ನಾನ ಪಡೆದುಕೊಂಡಳು. ನಾನು 1940ರಲ್ಲಿ ದೀಕ್ಷಾಸ್ನಾನ ಪಡೆದೆ. ನನಗಾಗ ಒಂಬತ್ತು ವರ್ಷ.
ಎರಡನೇ ಮಹಾಯುದ್ಧ ಆರಂಭವಾದ ಕೂಡಲೆ ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳ ಬೈಬಲ್ ಸಾಹಿತ್ಯದ ಮುದ್ರಣ ಹಾಗೂ ವಿತರಣೆಯನ್ನು ನಿಷೇಧಿಸಲಾಗಿತ್ತು. ಆದ್ದರಿಂದ ಆಗ ಚಿಕ್ಕ ಹುಡುಗನಾಗಿದ್ದ ನಾನು ಬೈಬಲನ್ನು ಮಾತ್ರ ಉಪಯೋಗಿಸಿ ನನ್ನ ನಂಬಿಕೆಯನ್ನು ವಿವರಿಸಲು ಕಲಿತೆ. ಬೈಬಲನ್ನು ದಿನಾಲೂ ಶಾಲೆಗೆ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡೆ. ನಾನ್ಯಾಕೆ ಧ್ವಜವಂದನೆ ಮಾಡುವುದಿಲ್ಲ, ಯುದ್ಧ ಸಂಬಂಧಿತ ವಿಷಯಗಳನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಬೈಬಲ್ನಿಂದ ತಿಳಿಸುತ್ತಿದ್ದೆ.—ವಿಮೋ 20:4, 5; ಮತ್ತಾ 4:10; ಯೋಹಾ 17:16; 1 ಯೋಹಾ 5:21.
ಶಾಲೆಯಲ್ಲಿ ನನ್ನನ್ನು “ಜರ್ಮನ್ ಗೂಢಚಾರಿ” ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಹಾಗಾಗಿ ಅನೇಕ ಸಹಪಾಠಿಗಳು ನನ್ನನ್ನು ಅವರೊಂದಿಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಆಗೆಲ್ಲಾ ಶಾಲೆಗಳಲ್ಲಿ ಚಲನಚಿತ್ರಗಳನ್ನು ತೋರಿಸುತ್ತಿದ್ದರು. ಚಲನಚಿತ್ರ ಆರಂಭವಾಗುವ ಮುಂಚೆ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಯನ್ನು ಹಾಡಬೇಕಿತ್ತು. ಎಲ್ಲರೂ ನಿಂತುಕೊಳ್ಳುತ್ತಿದ್ದರು. ನಾನು ಮಾತ್ರ ಕುಳಿತೇ ಇರುತ್ತಿದ್ದೆ. ಇಬ್ಬರು ಮೂವರು ಹುಡುಗರು ನಾನು ಎದ್ದುನಿಲ್ಲುವಂತೆ ನನ್ನ ಕೂದಲನ್ನು ಹಿಡಿದು ಎಳೆಯುತ್ತಿದ್ದರು. ನನ್ನ ಬೈಬಲ್ ಆಧಾರಿತ ನಂಬಿಕೆಗಾಗಿ ಕೊನೆಗೆ ನನ್ನನ್ನು ಶಾಲೆಯಿಂದಲೇ ಹೊರಹಾಕಲಾಯಿತು. ಅನಂತರ ನಾನು ಕರೆಸ್ಪಾಂಡೆನ್ಸ್ ಕೋರ್ಸ್ ಮೂಲಕ ಓದು ಮುಂದುವರಿಸಿದೆ.
ಕೊನೆಗೂ ಸಾಧಿಸಿದ ಗುರಿ
14 ವರ್ಷದವನಾದಾಗ ಪಯನೀಯರ್ ಸೇವೆ ಆರಂಭಿಸುವ ಗುರಿಯನ್ನಿಟ್ಟೆ. ಆದರೆ ಮೊದಲು ಕೆಲಸಕ್ಕೆ ಹೋಗುವಂತೆ ಅಪ್ಪಅಮ್ಮ ಹೇಳಿದಾಗ ನನಗೆ ತುಂಬಾ ಬೇಸರವಾಯಿತು. ನನ್ನ ಊಟದ ಖರ್ಚು ಮತ್ತು ಮನೆಯಲ್ಲಿ ಉಳುಕೊಂಡಿರುವುದಕ್ಕಾಗಿ ಹಣ ಕೊಡುವಂತೆ ಹೇಳಿದರು. 18 ವರ್ಷ ಆದ ಮೇಲೆ ಪಯನೀಯರ್ ಸೇವೆ ಆರಂಭಿಸಬಹುದೆಂಬ ಭರವಸೆ ಕೊಟ್ಟರು. ನನ್ನ ಸಂಪಾದನೆಯ ಬಗ್ಗೆ ಯಾವಾಗಲೂ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಪಯನೀಯರ್ ಸೇವೆಗಾಗಿ ಹಣವನ್ನು ಕೂಡಿಡುತ್ತೇನೆ ಎಂದು ನಾನು ಹೇಳಿದರೂ ಅವರು ಹಣವನ್ನು ತಕ್ಕೊಳ್ಳುತ್ತಿದ್ದರು.
ಪಯನೀಯರ್ ಸೇವೆ ಆರಂಭಿಸುವ ಸಮಯ ಬಂದಾಗ ಅಪ್ಪಅಮ್ಮ ನನ್ನೊಂದಿಗೆ ಕೂತು ಮಾತಾಡಿ ನನ್ನಿಂದ ತಕ್ಕೊಂಡ ಹಣವನ್ನೆಲ್ಲ ಬ್ಯಾಂಕ್ನಲ್ಲಿ ಇಟ್ಟಿರುವುದಾಗಿ ವಿವರಿಸಿದರು. ಬಟ್ಟೆ ಮತ್ತು ಪಯನೀಯರ್ ಸೇವೆ ಮಾಡಲು ಅಗತ್ಯವಿದ್ದ ವಸ್ತುಗಳನ್ನು ಖರೀದಿಸಲು ಅಷ್ಟೂ ಹಣವನ್ನು ಹಿಂದಿರುಗಿಸಿದರು. ಹೀಗೆ ನನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇತರರ ಮೇಲೆ ಅವಲಂಬಿಸದಂತೆ ತರಬೇತಿ ಕೊಟ್ಟರು. ಇದು ನನ್ನ ಜೀವನದುದ್ದಕ್ಕೂ ಪ್ರಯೋಜನ ತಂದಿತು.
ನಾನು ಮತ್ತು ಅಕ್ಕ ಚಿಕ್ಕವರಿದ್ದಾಗಿನಿಂದಲೂ ಪಯನೀಯರರು ಅನೇಕ ಬಾರಿ ನಮ್ಮ ಮನೆಯಲ್ಲಿ ತಂಗುತ್ತಿದ್ದರು. ನಾವು ಅವರೊಂದಿಗೆ ಸೇವೆಗೆ ಹೋಗಿ ಆನಂದಿಸುತ್ತಿದ್ದೆವು. ಪ್ರತಿ ವಾರಾಂತ್ಯ ಮನೆ ಮನೆ ಸೇವೆ, ಬೀದಿ ಸಾಕ್ಷಿಕಾರ್ಯ, ಬೈಬಲ್ ಅಧ್ಯಯನಗಳನ್ನು ನಡೆಸುವುದರಲ್ಲಿ ಕಾರ್ಯಮಗ್ನರಾಗಿರುತ್ತಿದ್ದೆವು. ಆಗ ಪ್ರಚಾರಕರು ತಿಂಗಳಿಗೆ 60 ತಾಸುಗಳನ್ನು ಸೇವೆಯಲ್ಲಿ ಕಳೆಯುವ ಗುರಿಯನ್ನು ಇಡುತ್ತಿದ್ದರು. ಅಮ್ಮ ಯಾವಾಗಲೂ ಆ ಗುರಿಯನ್ನು ಮುಟ್ಟುತ್ತಿದ್ದರು. ಇದು ನನಗೂ ಅಕ್ಕನಿಗೂ ಉತ್ತಮ ಮಾದರಿಯಾಯಿತು.
ಟಾಸ್ಮೇನಿಯದಲ್ಲಿ ಪಯನೀಯರ್ ಸೇವೆ
ನಾನು ಪಯನೀಯರನಾಗಿ ಪ್ರಥಮ ನೇಮಕ ಪಡೆದಿದ್ದು ಆಸ್ಟ್ರೇಲಿಯದ ಟಾಸ್ಮೇನಿಯ ದ್ವೀಪಕ್ಕೆ. ಅಕ್ಕ ಮತ್ತು ಭಾವ ಈಗಾಗಲೇ ಅಲ್ಲಿ ಪಯನೀಯರ್ ಸೇವೆ ಮಾಡುತ್ತಿದ್ದರು. ಅವರೊಟ್ಟಿಗೆ ಸೇವೆ ಮಾಡಿದ್ದು ಸ್ವಲ್ಪ ಸಮಯವಷ್ಟೆ. ಅವರು ಗಿಲ್ಯಡ್ ಶಾಲೆಯ 15ನೇ ತರಗತಿಗೆ ಹಾಜರಾಗಲು ಅಲ್ಲಿಂದ ತೆರಳಬೇಕಾಯಿತು. ನಾನು ಬಹಳ ನಾಚಿಕೆ ಸ್ವಭಾವದವನಾಗಿದ್ದೆ. ಮನೆಯಿಂದ ದೂರ ಇದ್ದು ಅಭ್ಯಾಸವೇ ಇರಲಿಲ್ಲ. ನಾನು ಮೂರೇ ತಿಂಗಳಿಗೆ ಇಲ್ಲಿಂದ ಓಡಿಹೋಗುತ್ತೇನೆಂದು ಕೆಲವರು ನೆನಸಿದರು. ಆದರೆ ಅಲ್ಲಿದ್ದುಕೊಂಡೇ ಸೇವೆ ಮುಂದುವರಿಸಿದೆ. ಒಂದೇ ವರ್ಷದಲ್ಲಿ ಅಂದರೆ 1950ರಲ್ಲಿ ಕಂಪನಿ ಸರ್ವೆಂಟ್ (ಹಿರಿಯ ಮಂಡಳಿಯ ಸಂಯೋಜಕ) ಆಗಿ ನೇಮಕಗೊಂಡೆ. ಅನಂತರ ವಿಶೇಷ ಪಯನೀಯರ್ ನೇಮಕ ಸಿಕ್ಕಿತು. ನನ್ನ ಜೊತೆಗಾರನಾಗಿ ಒಬ್ಬ ಯುವ ಪಯನೀಯರ್ ಸಹೋದರನನ್ನು ನೇಮಿಸಲಾಯಿತು.
ನಮ್ಮ ನೇಮಕ ದೂರದ ತಾಮ್ರದ ಗಣಿಗಾರಿಕೆಯ ಊರಾಗಿತ್ತು. ಅಲ್ಲಿ ಸಾಕ್ಷಿಗಳು ಯಾರೂ ಇರಲಿಲ್ಲ. ಬಸ್ಸಿನಲ್ಲಿ ಅಲ್ಲಿಗೆ ಬಂದಿಳಿದಾಗ ನಡುಮಧ್ಯಾಹ್ನವಾಗಿತ್ತು. ಆ ರಾತ್ರಿಯನ್ನು ಹಳೇ ಹೋಟೆಲೊಂದರಲ್ಲಿ ಕಳೆದೆವು. ಮರುದಿನ ಮನೆ ಮನೆ ಸೇವೆಗಾಗಿ ಹೋದೆವು. ಮನೆಯವರ ಹತ್ತಿರ ಎಲ್ಲಿಯಾದರೂ ಮನೆ ಖಾಲಿ ಇದೆಯಾ ಎಂದು ವಿಚಾರಿಸಿದೆವು. ಸಾಯಂಕಾಲದಷ್ಟಕ್ಕೆ ಒಬ್ಬನು ಪ್ರೆಸ್ಬಿಟೇರಿಯನ್ ಚರ್ಚ್ ಪಕ್ಕದಲ್ಲಿ ಪಾದ್ರಿಯ ಮನೆಯೊಂದು ಖಾಲಿ ಇದೆ ಎಂದು ತಿಳಿಸಿ ಚರ್ಚ್ನ ಅಧಿಕಾರಿಯ ಬಳಿ ಮಾತಾಡುವಂತೆ ಸೂಚಿಸಿದನು. ಸ್ನೇಹಶೀಲನಾಗಿದ್ದ ಆ ಅಧಿಕಾರಿ ನಮಗೆ ಮನೆ ಕೊಟ್ಟನು. ಪಾದ್ರಿಯ ಮನೆಯಲ್ಲಿ ಇದ್ದುಕೊಂಡು ಸಾರಲು ಹೋಗುವುದು ವಿಶೇಷ ಅನುಭವವಾಗಿತ್ತು!
ನಿಜವಾಗಿಯೂ ಅದು ಫಲಭರಿತ ಕ್ಷೇತ್ರವಾಗಿತ್ತು. ಜನರೊಂದಿಗೆ ಆಸಕ್ತಿದಾಯಕ ಚರ್ಚೆಗಳನ್ನು ನಡೆಸಿದೆವು. ಅನೇಕ ಬೈಬಲ್ ಆಧ್ಯಯನಗಳನ್ನು ಆರಂಭಿಸಿದೆವು. ಇದರ ಕುರಿತು ಚರ್ಚಿನ ಮೇಲಧಿಕಾರಿಗಳಿಗೆ ಗೊತ್ತಾದಾಗ ಅದರಲ್ಲೂ ಯೆಹೋವನ ಸಾಕ್ಷಿಗಳು ಪಾದ್ರಿಯ ಮನೆಯಲ್ಲಿಯೇ ಬಾಡಿಗೆಗೆ ಇದ್ದಾರೆಂದು ತಿಳಿದಾಗ ಕೂಡಲೇ ಚರ್ಚಿನ ಅಧಿಕಾರಿಯ ಮೂಲಕ ನಮ್ಮನ್ನು ಹೊರಹಾಕಿಸಿದರು. ಪುನಃ ಮನೆ ಹುಡುಕಬೇಕಾದ ಪರಿಸ್ಥಿತಿ!
ಮರುದಿನ ಮಧ್ಯಾಹ್ನದವರೆಗೂ ಸೇವೆ ಮಾಡಿದ ಮೇಲೆ ರಾತ್ರಿ ಕಳೆಯಲು ಜಾಗಕ್ಕಾಗಿ ಹುಡುಕಾಡಿದೆವು. ನಮಗೆ ಸಿಕ್ಕಿದ ಜಾಗವೆಂದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳ. ಅಲ್ಲಿ ನಮ್ಮ ಸೂಟ್ಕೇಸ್ಗಳನ್ನು ಅಡಗಿಸಿಟ್ಟು ಸೇವೆಯನ್ನು ಮುಂದುವರಿಸಿದೆವು. ಕತ್ತಲಾಗುತ್ತಿತ್ತಾದರೂ ಇನ್ನೂ ಸ್ವಲ್ಪ ಮನೆಯನ್ನು ಮಾಡಿ ಆ ಬೀದಿಯನ್ನು ಪೂರ್ಣಗೊಳಿಸುವ ಎಂದು ನಿರ್ಧರಿಸಿದೆವು. ನಮ್ಮ ಆಶ್ಚರ್ಯಕ್ಕೆ ಮನೆಯವನೊಬ್ಬನು ಹಿತ್ತಲಿನಲ್ಲಿದ್ದ ಎರಡು ಕೊಠಡಿಗಳ ಚಿಕ್ಕ ಮನೆಯನ್ನು ನಮಗೆ ವಾಸಕ್ಕೆ ಕೊಟ್ಟನು!
ಸರ್ಕಿಟ್ ಕೆಲಸ ಮತ್ತು ಗಿಲ್ಯಡ್ ಶಾಲೆ
ವಿಶೇಷ ಪಯನೀಯರನಾಗಿ 8 ತಿಂಗಳು ಸೇವೆ ಮಾಡಿದ ನಂತರ ಆಸ್ಟ್ರೇಲಿಯ ಬ್ರಾಂಚ್ ಆಫೀಸಿನಿಂದ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆ ಮಾಡಲಿಕ್ಕೆ ಆಮಂತ್ರಣ ಪಡೆದೆ. ಅದು ನನ್ನ ಮೈನವಿರೇಳಿಸಿತು. ಏಕೆಂದರೆ ನನಗಾಗ 20 ವರ್ಷವಷ್ಟೇ. ಕೆಲವು ವಾರಗಳ ತರಬೇತಿ ಪಡೆದ ನಂತರ ಸಭೆಗಳನ್ನು ಭೇಟಿ ಮಾಡಿ ಉತ್ತೇಜಿಸತೊಡಗಿದೆ. ಸಭೆಗಳಲ್ಲಿ ಹೆಚ್ಚಿನವರು ನನಗಿಂತ ದೊಡ್ಡವರಾಗಿದ್ದರು. ಆದರೂ ಅವರು ನನ್ನ ವಯಸ್ಸನ್ನು ನೋಡದೆ ನನ್ನ ಸೇವೆಗೆ ಗೌರವ ತೋರಿಸಿದರು.
ಸಭೆಯಿಂದ ಸಭೆಗೆ ಪ್ರಯಾಣಿಸುವುದು ಸ್ವಾರಸ್ಯಕರ ಅನುಭವ! ಒಂದು ವಾರ ಬಸ್ಸಿನಲ್ಲಿ ಹೋದರೆ ಇನ್ನೊಂದು ವಾರ ರೈಲು. ಮತ್ತೆ ಕಾರು ನಂತರ ಬೈಕಿನ ಹಿಂದೆ ಕೂತು ಪ್ರಯಾಣ. ಹೀಗೆ ಪ್ರಯಾಣಿಸುವಾಗ ಕೈಯಲ್ಲಿ ಸೂಟ್ಕೇಸ್ ಮತ್ತು ಕ್ಷೇತ್ರಸೇವೆಯ ಬ್ಯಾಗನ್ನು ಹಿಡಿದು ಬ್ಯಾಲೆನ್ಸ್ ಮಾಡಬೇಕಾಗುತ್ತಿತ್ತು. ಸಾಕ್ಷಿಗಳ ಮನೆಯಲ್ಲಿ ಉಳುಕೊಳ್ಳುವುದು ನಿಜವಾಗಿಯೂ ಆನಂದದಾಯಕವಾಗಿತ್ತು. ಒಬ್ಬ ಕಂಪನಿ ಸರ್ವೆಂಟ್ನ ಮನೆ ಪೂರ್ಣವಾಗಿ ಕಟ್ಟಿರದಿದ್ದರೂ ನಾನು ಅವನ ಜೊತೆಯಲ್ಲಿ ಉಳುಕೊಳ್ಳಬೇಕೆಂದು ಬಹಳ ಆಸೆಪಟ್ಟನು. ಅವನ ಮನೆಯಲ್ಲಿದ್ದಾಗ ಆ ವಾರ ಪೂರ್ತಿ ಬಾತ್ಟಬ್ನಲ್ಲಿ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ಆ ವಾರ ನಾವಿಬ್ಬರೂ ಆಧ್ಯಾತ್ಮಿಕವಾಗಿ ಸಂತೋಷಿಸಿದೆವು.
1953ರಲ್ಲಿ ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಗಿಲ್ಯಡ್ ಶಾಲೆಯ 22ನೇ ತರಗತಿಗಾಗಿ ಅರ್ಜಿ ನನ್ನ ಕೈ ಸೇರಿತ್ತು. ಆದರೆ ನನಗೆ ಸಂತೋಷದೊಂದಿಗೆ ಕಳವಳವೂ ಆಯಿತು. ಕಾರಣ 1950ರ ಜುಲೈ 30ರಂದು ಗಿಲ್ಯಡ್ ಶಾಲೆಯಿಂದ ಪದವೀಧರರಾದ ಅಕ್ಕ-ಭಾವ ಪಾಕಿಸ್ತಾನದಲ್ಲಿ ಸೇವೆ ಮಾಡುವ ನೇಮಕವನ್ನು ಪಡೆದರು. ಅಲ್ಲಿಗೆ ಹೋದ ಕೇವಲ ಒಂದು ವರ್ಷದೊಳಗೆ ಅಕ್ಕ ಅಸ್ವಸ್ಥಳಾಗಿ ತೀರಿಕೊಂಡಳು. ಇದು ಸಂಭವಿಸಿ ಬಹಳ ಸಮಯ ಕಳೆದಿರಲಿಲ್ಲ. ಈಗ ನಾನು ಕೂಡ ಬೇರೆ ದೇಶಕ್ಕೆ ಹೋಗುವುದಾದರೆ ಅಪ್ಪಅಮ್ಮನಿಗೆ ದುಃಖವಾಗಬಹುದೆಂದು ಚಿಂತಿತನಾದೆ. ಆದರೆ ಅವರು “ಹೋಗು, ಯೆಹೋವನು ನಿನ್ನನ್ನು ಎಲ್ಲಿಗೆ ಕಳುಹಿಸುತ್ತಾನೊ ಅಲ್ಲಿ ಸೇವೆ ಮಾಡು” ಎಂದು ಹೇಳಿದರು. ದುಃಖದ ವಿಷಯವೇನೆಂದರೆ ನಾನು ಅಪ್ಪನ ಮುಖವನ್ನು ಮತ್ತೆ ನೋಡಲೇ ಇಲ್ಲ. ಅವರು 1957ರಲ್ಲಿ ತೀರಿಕೊಂಡರು.
ಗಿಲ್ಯಡ್ ಶಾಲೆಯ ಅರ್ಜಿ ಸಿಕ್ಕಿದ ಸ್ವಲ್ಪ ಸಮಯದಲ್ಲೇ ನಾನು ಆಸ್ಟ್ರೇಲಿಯದ ಇತರ ಐದು ಮಂದಿ ಸಹೋದರ ಸಹೋದರಿಯರೊಂದಿಗೆ ನ್ಯೂ ಯಾರ್ಕ್ ನಗರಕ್ಕೆ ಹಡಗಿನಲ್ಲಿ ಆರು ವಾರಗಳ ಪ್ರಯಾಣವನ್ನು ಬೆಳೆಸಿದೆ. ಪ್ರಯಾಣಿಸುತ್ತಿರುವಾಗ ನಾವೆಲ್ಲರು ಬೈಬಲ್ ಓದುತ್ತಿದ್ದೆವು. ಅಧ್ಯಯನ ಮಾಡುತ್ತಿದ್ದೆವು. ಸಹಪ್ರಯಾಣಿಕರೊಂದಿಗೆ ಸತ್ಯವನ್ನು ಹಂಚಿಕೊಳ್ಳುತ್ತಿದ್ದೆವು. ನ್ಯೂ ಯಾರ್ಕ್ಗೆ ಬಂದಿಳಿದಾಗ ಗಿಲ್ಯಡ್ ಶಾಲೆಯಿರುವ ಸೌತ್ ಲಾನ್ಸಿಂಗ್ಗೆ ಹೋಗುವ ಮುನ್ನ ಯಾಂಕೀ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ (1953, ಜುಲೈ) ಹಾಜರಾದೆವು. ಅಲ್ಲಿನ ಹಾಜರಿಯ ಉಚ್ಚಾಂಕ 1,65,829!
ಗಿಲ್ಯಡ್ ತರಬೇತಿಗೆ ಪ್ರಪಂಚದ ಮೂಲೆ ಮೂಲೆಯಿಂದ 120 ವಿದ್ಯಾರ್ಥಿಗಳು ಬಂದಿದ್ದರು. ನಮಗೆ ಯಾವ ದೇಶದಲ್ಲಿ ಸೇವೆ ಮಾಡುವ ನೇಮಕ ಸಿಗತ್ತದೆಂದು ಪದವಿ ಕೊಡುವ ದಿನದವರೆಗೂ ಹೇಳಿರಲಿಲ್ಲ. ಪದವಿಯ ದಿನ ಅದನ್ನು ಹೇಳಿದ ಕೂಡಲೇ ನಾವೆಲ್ಲರೂ ಗಿಲ್ಯಡ್ನ ಗ್ರಂಥಾಲಯಕ್ಕೆ ಧಾವಿಸಿ ನಾವು ನೇಮಕ ಹೊಂದಿದ ದೇಶಗಳ ಕುರಿತ ಮಾಹಿತಿಯನ್ನು ಹುಡುಕಿದೆವು. ನಾನು ಪರಾಗ್ವೆಗೆ ನೇಮಕಗೊಂಡಿದ್ದೆ. ಅದು ರಾಜಕೀಯ ಕ್ರಾಂತಿಗಳ ಇತಿಹಾಸವಿದ್ದ ದೇಶವಾಗಿತ್ತು. ಅಲ್ಲಿಗೆ ತಲುಪಿದ ಮೇಲೆ ಒಂದು ದಿನ ಬೆಳಗ್ಗೆ ಬೇರೆ ಮಿಷನರಿಗಳ ಹತ್ತಿರ ರಾತ್ರಿಯೆಲ್ಲ ಏನೋ ಗಲಾಟೆ ನಡೆಯುತ್ತಿತ್ತಲ್ಲ ಎಂದು ಕೇಳಿದೆ. ಅವರು ನಸುನಕ್ಕು “ನಿನಗದು ಕ್ರಾಂತಿ ಹೇಗಿರುತ್ತೆ ಅನ್ನೋದರ ಮೊದಲ ಅನುಭವವಷ್ಟೆ. ಸ್ವಲ್ಪ ಹೊರಗೆ ನೋಡು” ಎಂದು ಹೇಳಿದರು. ನೋಡಿದರೆ ಅಬ್ಬಾ! ಎಲ್ಲ ಕಡೆ ಸೈನಿಕರು!
ಮರೆಯಲಾಗದ ಅನುಭವ
ಒಮ್ಮೆ ಸರ್ಕಿಟ್ ಮೇಲ್ವಿಚಾರಕರು ದೂರದ ಸಭೆಯೊಂದನ್ನು ಭೇಟಿ ಮಾಡಲಿದ್ದಾಗ ನಾನು ಅವರ ಜೊತೆ ಹೋದೆ. ಅಲ್ಲಿ ದ ನ್ಯೂ ವರ್ಲ್ಡ್ ಸೊಸೈಟಿ ಇನ್ ಆ್ಯಕ್ಷನ್ ಎಂಬ ಚಲನಚಿತ್ರ ತೋರಿಸಲಿಕ್ಕಿತ್ತು. ಹಾಗಾಗಿ ಜನರೇಟರ್ ಮತ್ತು ಚಲನಚಿತ್ರ ಪ್ರೊಜೆಕ್ಟರ್ ತಕ್ಕೊಂಡು ಹೋದೆವು. ಎಂಟು ಒಂಭತ್ತು ತಾಸು ಪ್ರಯಾಣ. ಮೊದಲು ರೈಲು ನಂತರ ಕುದುರೆ ಮೇಲೆ, ಕುದುರೆಬಂಡಿಯಲ್ಲಿ ಕೊನೆಗೆ ಎತ್ತಿನಗಾಡಿಯಲ್ಲಿ ಪ್ರಯಾಣಿಸಿದೆವು. ಹಾಗೂ ಹೀಗೂ ಅಲ್ಲಿಗೆ ತಲುಪಿದೆವು. ಮರುದಿನ ಫಾರ್ಮ್ಗಳಿಗೆ ಹೋಗಿ ಎಲ್ಲರನ್ನು ಚಲನಚಿತ್ರ ನೋಡಲು ಆಮಂತ್ರಿಸಿದೆವು. ಆ ರಾತ್ರಿ ಸುಮಾರು 15 ಜನ ಬಂದರು.
ಚಲನಚಿತ್ರ ಆರಂಭವಾಗಿ ಹೆಚ್ಚುಕಡಿಮೆ 20 ನಿಮಿಷವಾಗಿತ್ತು. ಇದ್ದಕ್ಕಿದ್ದಂತೆ ಅಲ್ಲಿದ್ದವರು ನಮ್ಮನ್ನು ಮನೆಯೊಳಗೆ ಓಡಿಹೋಗುವಂತೆ ಹೇಳಿದರು. ಪ್ರೊಜೆಕ್ಟರನ್ನು ಎತ್ತಿಕೊಂಡು ನಾವು ತಡಮಾಡದೆ ಒಳಕ್ಕೆ ನುಗ್ಗಿದೆವು. ರೊಚ್ಚಿಗೆದ್ದ ಜನರ ಗುಂಪೊಂದು ಮನೆಯನ್ನು ಸುತ್ತುವರಿದಿತ್ತು. ಬಂದೂಕಿನಿಂದ ಗುಂಡು ಹಾರಿಸುತ್ತಾ ಜೋರಾಗಿ “ನಮ್ಮ ದೇವರು ರಕ್ತಪಿಪಾಸೆಯ ದೇವರು, ಅವನಿಗೆ ಗ್ರಿಂಗೊಗಳ ರಕ್ತ ಕುಡಿಯಬೇಕು” ಎಂದು ಕೂಗುತ್ತಿದ್ದದ್ದು ಈ ಸಂದರ್ಭದಲ್ಲೇ. ಅಲ್ಲಿದ್ದದ್ದು ಕೇವಲ ಇಬ್ಬರು ಗ್ರಿಂಗೊಗಳು. ಅವರಲ್ಲಿ ನಾನು ಒಬ್ಬ! ಆ ಗುಂಪು ನಾವಿದ್ದ ಮನೆಯೊಳಗೆ ನುಗ್ಗಲು ಪ್ರಯತ್ನಿಸಿದಾಗ ಚಲನಚಿತ್ರ ನೋಡಲು ಬಂದಿದ್ದವರು ಅವರನ್ನು ತಡೆದರು. ಆದರೆ ಆ ಗುಂಪು ಬೆಳಗ್ಗಿನ ಜಾವ ಮೂರು ಗಂಟೆಯಷ್ಟಕ್ಕೆ ಪುನಃ ಹಿಂದಿರುಗಿ ಬಂದರು. ಬಂದೂಕುಗಳಿಂದ ಗುಂಡು ಹಾರಿಸುತ್ತಾ ‘ನೀವು ಅದು ಹೇಗೆ ನಿಮ್ಮೂರಿಗೆ ಜೀವಸಹಿತ ಹೋಗ್ತೀರಿ ಅಂತ ನೋಡ್ತೇವೆ’ ಎಂದು ಬೆದರಿಕೆ ಹಾಕಿದರು.
ಸಹೋದರರು ಅಲ್ಲಿನ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸಹಾಯ ಕೋರಿದರು. ಮಧ್ಯಾಹ್ನದ ಹೊತ್ತಿಗೆ ಆ ಅಧಿಕಾರಿ ನಮ್ಮನ್ನು ಕರೆದುಕೊಂಡು ಹೋಗಲು ಎರಡು ಕುದುರೆಗಳೊಂದಿಗೆ ಬಂದರು. ನಾವು ದಾರಿಯಲ್ಲಿ ಸಾಗುತ್ತಿದ್ದಾಗ ಪೊದೆಗಳು ಮತ್ತು ಮರಗಳು ದಟ್ಟವಾಗಿದ್ದ ಸ್ಥಳಗಳಲ್ಲಿ ಆ ಅಧಿಕಾರಿ ತನ್ನ ಬಂದೂಕನ್ನು ಹೊರತೆಗೆದು ಅತ್ತ ಇತ್ತ ನಿಗಾವಹಿಸುತ್ತಾ ನಮ್ಮ ಮುಂದೆ ಹೋಗುತ್ತಿದ್ದರು. ಸಾರಿಗೆಗೆ ಕುದುರೆ ಬಹಳ ಮುಖ್ಯವಾಗಿದ್ದ ಕಾರಣ ನಂತರ ನಾನೂ ಒಂದು ಕುದುರೆಯನ್ನು ಖರೀದಿಸಿದೆ.
ಹೆಚ್ಚಿನ ಮಿಷನರಿಗಳ ಆಗಮನ
ಪಾದ್ರಿಗಳ ಸತತ ವಿರೋಧದ ಮಧ್ಯೆಯೂ ಪರಾಗ್ವೆಯಲ್ಲಿ ಸಾರುವ ಕೆಲಸ ಉತ್ತಮ ಫಲಿತಾಂಶಗಳನ್ನು ತಂದಿತು. 1955ರಲ್ಲಿ ಐದು ಹೊಸ ಮಿಷನರಿಗಳು ಆಗಮಿಸಿದರು. ಅವರಲ್ಲಿ ಕೆನಡದ ಯುವ ಸಹೋದರಿಯಾದ ಎಲ್ಸೀ ಸ್ವಾನ್ಸನ್ ಒಬ್ಬಳು. ಈಕೆ ಗಿಲ್ಯಡ್ ಶಾಲೆಯ 25ನೇ ತರಗತಿಯಲ್ಲಿ ಪದವಿ ಪಡೆದಿದ್ದಳು. ಆಕೆ ಬೇರೆ ನಗರಕ್ಕೆ ನೇಮಕಗೊಳ್ಳುವ ಮೊದಲು ಸ್ವಲ್ಪ ಸಮಯ ಬ್ರಾಂಚ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ ನಾನೂ ಕೂಡ ಅಲ್ಲೇ ಇದ್ದೆ. ಸತ್ಯದಲ್ಲಿಲ್ಲದ ಅವಳ ತಂದೆತಾಯಿ ಅವಳಿಗೇನೂ ಸಹಾಯ ಮಾಡುತ್ತಿರಲಿಲ್ಲ. ಆದರೂ ಅವಳ ಗುರಿ ಯೆಹೋವನ ಸೇವೆ ಮಾಡುವುದಾಗಿತ್ತು. 1957ರ ಡಿಸೆಂಬರ್ 31ರಂದು ಎಲ್ಸೀ ಮತ್ತು ನಾನು ಮದುವೆಯಾದೆವು. ಅನಂತರ ಪರಾಗ್ವೆಯ ದಕ್ಷಿಣ ಭಾಗದಲ್ಲಿದ್ದ ಮಿಷನರಿ ಹೋಮ್ನಲ್ಲಿದ್ದು ಸೇವೆ ಮುಂದುವರಿಸಿದೆವು.
ಮನೆಯೊಳಗೆ ನೀರು ಬರುವ ವ್ಯವಸ್ಥೆ ಇರಲಿಲ್ಲ. ಹಿತ್ತಲಿನಲ್ಲಿ ಬಾವಿಯಿತ್ತು. ಆದ್ದರಿಂದ ಬಚ್ಚಲುಮನೆ ಮತ್ತು ಶೌಚಾಲಯ ಮನೆಯ ಹೊರಗಿತ್ತು. ಮಾತ್ರವಲ್ಲ ವಾಷಿಂಗ್ ಮಷೀನ್, ಫ್ರಿಡ್ಜ್ ಕೂಡ ಇರಲಿಲ್ಲ. ಒಂದು ದಿನಕ್ಕೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಮಾತ್ರ ತರುತ್ತಿದ್ದೆವು. ಆದರೂ ಸರಳ ಜೀವನ ಮತ್ತು ಸಹೋದರ ಸಹೋದರಿಯರೊಂದಿಗಿದ್ದ ಪ್ರೀತಿಯ ಬಂಧದಿಂದಾಗಿ ಆ ಸಮಯ ನಮ್ಮ ವೈವಾಹಿಕ ಜೀವನದಲ್ಲೇ ಅವಿಸ್ಮರಣೀಯವಾಗಿತ್ತು.
1963ರಲ್ಲಿ ನನ್ನ ಅಮ್ಮನನ್ನು ನೋಡಲು ಆಸ್ಟ್ರೇಲಿಯಕ್ಕೆ ಹೋದೆವು. ಕೆಲ ದಿನಗಳಲ್ಲಿ ಅಮ್ಮನಿಗೆ ಹೃದಯಾಘಾತವಾಯಿತು. ಬಹುಶಃ ಹೆತ್ತ ಮಗನನ್ನು ಹತ್ತು ವರ್ಷಗಳ ಬಳಿಕ ನೋಡಿದ ಸಂತೋಷದಿಂದ ಆಗಿರಬೇಕು. ರಜೆ ಮುಗಿಯುತ್ತಿದ್ದಂತೆ ಒಂದು ಪ್ರಾಮುಖ್ಯ ನಿರ್ಣಯ ಮಾಡಬೇಕಾದ ಸಂದರ್ಭ ಎದುರಾಯಿತು. ಯಾರಾದರೂ ಅಮ್ಮನನ್ನು ಆರೈಕೆ ಮಾಡಬಹುದೆಂದು ನಂಬಿ ಅಮ್ಮನನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾವು ಬಹಳ ಇಷ್ಟಪಡುತ್ತಿದ್ದ ಪರಾಗ್ವೆಯ ನೇಮಕಕ್ಕೆ ಹಿಂದಿರುಗುವುದೋ ಬೇಡವೋ ಎಂದು ನಿರ್ಧರಿಸಬೇಕಿತ್ತು. ಅನೇಕ ಬಾರಿ ಪ್ರಾರ್ಥಿಸಿದ ಬಳಿಕ ಎಲ್ಸೀ ಮತ್ತು ನಾನು ಅಮ್ಮನೊಂದಿಗೆ ಇದ್ದು ಅವರನ್ನು ಆರೈಕೆ ಮಾಡಲು ನಿರ್ಧರಿಸಿದೆವು. ಅಮ್ಮನ ಜೊತೆ ಕೊನೆ ವರೆಗೂ ಇದ್ದು ಅವರನ್ನು ನೋಡಿಕೊಳ್ಳುತ್ತಾ ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿದೆವು. 1966ರಲ್ಲಿ ಅಮ್ಮ ತೀರಿಕೊಂಡರು.
ಆಸ್ಟ್ರೇಲಿಯದಲ್ಲೇ ಇದ್ದು ಅನೇಕ ವರ್ಷಗಳ ವರೆಗೆ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಕೆಲಸದಲ್ಲಿ ಭಾಗಿಯಾಗುವ ಸುಯೋಗದಲ್ಲಿ ಆನಂದಿಸಿದೆ. ಸಭಾ ಹಿರಿಯರಿಗಾಗಿರುವ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ಬೋಧಕನಾಗಿಯೂ ಸೇವೆ ಮಾಡಿದೆ. ತದನಂತರ ನಮ್ಮ ಜೀವನದಲ್ಲಿ ಇನ್ನೊಂದು ಹೊಂದಾಣಿಕೆ ಮಾಡಬೇಕಾಯಿತು. ಆಸ್ಟ್ರೇಲಿಯದ ಪ್ರಥಮ ಬ್ರಾಂಚ್ ಕಮಿಟಿಯ ಸದಸ್ಯನಾಗಿ ಸೇವೆ ಮಾಡುವ ನೇಮಕ ನೀಡಲಾಯಿತು. ಹೊಸ ಬ್ರಾಂಚ್ ಆಫೀಸಿನ ನಿರ್ಮಾಣಕಾರ್ಯ ಯೋಜಿಸಿದಾಗ ನನ್ನನ್ನು ಬಿಲ್ಡಿಂಗ್ ಕಮಿಟಿಯ ಅಧ್ಯಕ್ಷನಾಗಿ ನಿಯೋಜಿಸಲಾಯಿತು. ಅನುಭವಿ, ಸಹಕಾರ ಮನೋಭಾವದ ಕೆಲಸಗಾರರ ಶ್ರಮದಿಂದ ಸುಂದರವಾದ ಬ್ರಾಂಚ್ ನಿರ್ಮಾಣವಾಯಿತು.
ನನ್ನ ಮುಂದಿನ ನೇಮಕ ಸಾರುವ ಚಟುವಟಿಕೆಯ ಉಸ್ತುವಾರಿಯನ್ನು ವಹಿಸುವ ಸರ್ವಿಸ್ ಡಿಪಾರ್ಟ್ಮೆಂಟ್ನಲ್ಲಿ. ಮಾತ್ರವಲ್ಲ ಝೋನ್ ಮೇಲ್ವಿಚಾರಕನಾಗಿ ಪ್ರಪಂಚದಾದ್ಯಂತ ಇರುವ ಬ್ರಾಂಚ್ಗಳನ್ನು ಭೇಟಿಮಾಡಿ ಸಹಾಯ, ಉತ್ತೇಜನ ಕೊಡುವ ಸುಯೋಗ ದೊರಕಿತು. ಯೆಹೋವನಿಗೆ ನಿಷ್ಠೆಯಿಂದ ವಿಧೇಯತೆ ತೋರಿಸಿದ ಕಾರಣ ಸೆರೆಮನೆ, ಸೆರೆಶಿಬಿರಗಳಲ್ಲಿ ದಶಕಗಳನ್ನೇ ಕಳೆದಿದ್ದ ಸಹೋದರ ಸಹೋದರಿಯರನ್ನು ಕೆಲವು ದೇಶಗಳಲ್ಲಿ ಭೇಟಿಮಾಡಿದೆ. ಇದು ನನ್ನ ನಂಬಿಕೆಯನ್ನು ಬಲಗೊಳಿಸಿತು.
ನಮ್ಮ ಈಗಿನ ನೇಮಕ
2001ರಲ್ಲಿ ಒಂದು ಬ್ರಾಂಚನ್ನು ಸಂದರ್ಶಿಸಿ ಹಿಂದಿರುಗಿದಾಗ ಪ್ರಯಾಣದಿಂದ ದಣಿದಿದ್ದ ನಮಗೆ ಒಂದು ಪತ್ರ ಸಿಕ್ಕಿತು. ಅದು ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿ ಹೊಸದಾಗಿ ಆರಂಭವಾದ ಬ್ರಾಂಚ್ ಕಮಿಟಿಯ ಭಾಗವಾಗಿ ಸೇವೆ ಮಾಡಲು ಆಮಂತ್ರಣವಾಗಿತ್ತು. ಎಲ್ಸೀ ಮತ್ತು ನಾನು ತುಂಬ ಪ್ರಾರ್ಥಿಸಿ ಸಂತೋಷದಿಂದ ಆ ನೇಮಕವನ್ನು ಸ್ವೀಕರಿಸಿದೆವು. ಕಳೆದ ಹನ್ನೊಂದು ವರ್ಷಗಳಿಂದ ಬ್ರೂಕ್ಲಿನ್ನಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.
ಯೆಹೋವನು ಏನೇ ಕೇಳಿಕೊಳ್ಳಲಿ ಅದನ್ನು ಸಂತೋಷದಿಂದ ಮಾಡುವ ಬಾಳಸಂಗಾತಿ ಸಿಕ್ಕಿದ್ದಕ್ಕಾಗಿ ನಾನು ಧನ್ಯ. ನಾವಿಬ್ಬರೂ ಈಗ 80ರ ಹೊಸ್ತಿಲಲ್ಲಿರುವುದಾದರೂ ತಕ್ಕಮಟ್ಟಿಗೆ ಒಳ್ಳೇ ಆರೋಗ್ಯ ಇದೆ. ಯೆಹೋವನ ಬೋಧನೆಯನ್ನು ನಿತ್ಯನಿರಂತರ ಪಡೆದು ಸಂತೋಷಿಸಲು ಮತ್ತು ಸದಾ ಆತನ ಚಿತ್ತವನ್ನು ಮಾಡುವವರಿಗೆ ಸಿಗಲಿರುವ ಹೇರಳ ಆಶೀರ್ವಾದಗಳನ್ನು ಪಡೆಯಲು ನಾವು ತವಕದಿಂದ ಎದುರುನೋಡುತ್ತಿದ್ದೇವೆ.
[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಂದು ವಾರ ಬಸ್ಸಿನಲ್ಲಿ ಹೋದರೆ ಇನ್ನೊಂದು ವಾರ ರೈಲು. ಮತ್ತೆ ಕಾರು ನಂತರ ಬೈಕಿನ ಹಿಂದೆ ಕೂತು ಪ್ರಯಾಣ. ಹೀಗೆ ಪ್ರಯಾಣಿಸುವಾಗ ಕೈಯಲ್ಲಿ ಸೂಟ್ಕೇಸ್ ಮತ್ತು ಕ್ಷೇತ್ರಸೇವೆಯ ಬ್ಯಾಗನ್ನು ಹಿಡಿದು ಬ್ಯಾಲೆನ್ಸ್ ಮಾಡಬೇಕಾಗುತ್ತಿತ್ತು
[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೆಹೋವನ ಬೋಧನೆಯನ್ನು ನಿತ್ಯನಿರಂತರ ಪಡೆದು ಸಂತೋಷಿಸಲು ನಾವು ತವಕದಿಂದ ಎದುರುನೋಡುತ್ತಿದ್ದೇವೆ
[ಪುಟ 18ರಲ್ಲಿರುವ ಚಿತ್ರಗಳು]
ಎಡ: ಆಸ್ಟ್ರೇಲಿಯದಲ್ಲಿ ಸರ್ಕಿಟ್ ಸೇವೆಯಲ್ಲಿರುವಾಗ
ಬಲ: ಅಪ್ಪಅಮ್ಮನೊಂದಿಗೆ
[ಪುಟ 20ರಲ್ಲಿರುವ ಚಿತ್ರ]
ನಮ್ಮ ವಿವಾಹದ ಸವಿನೆನಪು (1957, ಡಿಸೆಂಬರ್ 31)