ದೀನ ಮನೋಭಾವ ಬೆಳೆಸಿಕೊಳ್ಳಿ
“ನಿಮ್ಮೆಲ್ಲರ ಮಧ್ಯದಲ್ಲಿ ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನೇ ದೊಡ್ಡವನಾಗಿದ್ದಾನೆ.” —ಲೂಕ 9:48.
ಉತ್ತರ ಹುಡುಕಿ
ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳಲು ಯಾವುದು ಸಹಾಯಮಾಡುವುದು?
ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನು ಹೇಗೆ “ದೊಡ್ಡವನಾಗಿದ್ದಾನೆ”?
ವೈವಾಹಿಕ ಜೀವನದಲ್ಲಿ, ಸಭೆಯಲ್ಲಿ ಹಾಗೂ ಇತರರ ಕಡೆ ನಾವು ಹೇಗೆ ದೀನತೆ ತೋರಿಸಬಹುದು?
1, 2. (1) ಯೇಸು ಅಪೊಸ್ತಲರಿಗೆ ಯಾವ ಬುದ್ಧಿವಾದ ಕೊಟ್ಟನು? (2) ಆ ಬುದ್ಧಿವಾದ ಕೊಡಲು ಕಾರಣವೇನು?
ಕ್ರಿಸ್ತ ಶಕ 32ರಲ್ಲಿ ನಡೆದ ಒಂದು ಘಟನೆ. ಯೇಸು ಗಲಿಲಾಯ ಪ್ರಾಂತದಲ್ಲಿದ್ದನು. ಆಗ ಅವನೊಂದಿಗಿದ್ದ ಅಪೊಸ್ತಲರಲ್ಲಿ ಒಂದು ಸಮಸ್ಯೆ ಹುಟ್ಟಿಕೊಂಡಿತು. ಅವರು ತಮ್ಮೊಳಗೆ ಯಾರು ಶ್ರೇಷ್ಠನು ಎಂದು ವಾಗ್ವಾದ ಮಾಡುತ್ತಿದ್ದರು. ಆ ಸಂದರ್ಭದ ಕುರಿತು ಲೂಕನ ವರದಿ ಹೀಗಿದೆ: “ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ ಅವರ ಮಧ್ಯೆ ತರ್ಕವುಂಟಾಯಿತು. ಯೇಸು ಅವರ ಹೃದಯದ ಆಲೋಚನೆಗಳನ್ನು ತಿಳಿದವನಾಗಿ ಒಂದು ಚಿಕ್ಕ ಮಗುವನ್ನು ಕರೆದು ತನ್ನ ಪಕ್ಕದಲ್ಲಿ ನಿಲ್ಲಿಸಿ, ‘ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನೂ ಸೇರಿಸಿಕೊಂಡಂತಾಗುವುದು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿದಾತನನ್ನೂ ಸೇರಿಸಿಕೊಂಡಂತಾಗುವುದು. ನಿಮ್ಮೆಲ್ಲರ ಮಧ್ಯದಲ್ಲಿ ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನೇ ದೊಡ್ಡವನಾಗಿದ್ದಾನೆ’ ಎಂದು ಅವರಿಗೆ ಹೇಳಿದನು.” (ಲೂಕ 9:46-48) ಅಪೊಸ್ತಲರು ದೀನತೆ ಬೆಳೆಸಿಕೊಳ್ಳಬೇಕು ಎನ್ನುವುದನ್ನು ಯೇಸು ತಾಳ್ಮೆಯಿಂದ ಅಷ್ಟೇ ದೃಢತೆಯಿಂದ ಹೇಳಿದನು.
2 ಯೇಸು ಬೆಳೆಸಿಕೊಳ್ಳಲು ಹೇಳಿದ ಮನೋಭಾವವೂ ಅಂದಿನ ಯೆಹೂದಿ ಸಮಾಜದಲ್ಲಿದ್ದ ಮನೋಭಾವವೂ ಒಂದೇ ಆಗಿತ್ತಾ? ಆ ಸಮಯದಲ್ಲಿದ್ದ ಸಾಮಾಜಿಕ ಪರಿಸ್ಥಿತಿಯನ್ನು ಹೊಸ ಒಡಂಬಡಿಕೆಯ ದೇವತಾಶಾಸ್ತ್ರದ ಶಬ್ದಕೋಶ (ಇಂಗ್ಲಿಷ್) ಹೀಗೆ ವಿವರಿಸುತ್ತದೆ: “ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮಲ್ಲಿ ಯಾರು ಪ್ರಮುಖರೆಂದು ಜನರಲ್ಲಿ ಯಾವಾಗಲೂ ಚರ್ಚೆ ನಡೆಯುತ್ತಿತ್ತು. ಸ್ಥಾನಮಾನ ಗಳಿಸುವುದೇ ಅವರ ಮುಖ್ಯ ಚಿಂತೆಯಾಗಿತ್ತು.” ಇಂಥ ಮನೋಭಾವಕ್ಕೆ ಪಕ್ಕಾ ವಿರುದ್ಧವಾದ ಮನೋಭಾವ ಬೆಳೆಸಿಕೊಳ್ಳುವಂತೆ ಯೇಸು ತನ್ನ ಅಪೊಸ್ತಲರಿಗೆ ಹೇಳಿದನು.
3. (1) ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವುದು ಅಂದರೇನು? (2) ಹೀಗೆ ನಡೆಸಿಕೊಳ್ಳುವುದು ಸುಲಭವಲ್ಲ ಏಕೆ? (3) ಇದರ ಕುರಿತು ಯಾವ ಪ್ರಶ್ನೆಗಳೇಳುತ್ತವೆ?
3 ‘ಚಿಕ್ಕವನು’ ಎಂದು ಯೇಸು ಹೇಳಿರುವ ಪದಕ್ಕೆ ಗ್ರೀಕ್ ಭಾಷೆಯಲ್ಲಿ ತಗ್ಗಿಬಗ್ಗಿ ನಡೆಯುವವನು, ದೀನನು, ಅಲ್ಪನು, ಅಮುಖ್ಯನು, ಕಡಿಮೆ ಪ್ರತಿಷ್ಠೆ-ಪ್ರಭಾವ ಇರುವವನು ಎಂಬ ಅರ್ಥವಿದೆ. ತನ್ನ ಶಿಷ್ಯರು ಇದೇ ರೀತಿ ದೀನರೂ ತಗ್ಗಿಬಗ್ಗಿ ನಡೆಯುವವರೂ ಆಗಿರಬೇಕು ಎಂಬುದನ್ನು ಚಿಕ್ಕ ಮಗುವನ್ನು ತೋರಿಸಿ ಯೇಸು ಮನಗಾಣಿಸಿದನು. ಈ ಸಲಹೆ ಇಂದು ನಮಗೂ ಅನ್ವಯಿಸುತ್ತದೆ. ಚಿಕ್ಕವರಾಗಿ ಅಂದರೆ ದೀನರಾಗಿ ನಡೆದುಕೊಳ್ಳಲು ಕೆಲವೊಮ್ಮೆ ನಮಗೆ ಕಷ್ಟವಾಗಬಹುದು. ಏಕೆಂದರೆ ಅಹಂಕಾರ ಮನುಷ್ಯನಲ್ಲಿ ಸಾಮಾನ್ಯ. ಹಾಗಾಗಿ ಪ್ರತಿಷ್ಠೆಯ ಕಡೆಗೆ ನಮ್ಮ ಮನಸ್ಸು ಸುಲಭವಾಗಿ ವಾಲುತ್ತದೆ. ಅಷ್ಟೇ ಅಲ್ಲ, ನಮ್ಮ ಸುತ್ತಮುತ್ತಲೂ ಸ್ಪರ್ಧಾತ್ಮಕತೆ ಹಾಗೂ ಲೋಕದ ಮನೋಭಾವ ತುಂಬಿದೆ. ಅದರಿಂದಾಗಿ ನಾವು ಅಹಂಕಾರಿಗಳು, ದರ್ಪ ತೋರಿಸುವವರು, ನಮ್ಮ ಇಚ್ಛೆಯಂತೆ ಇತರರು ನಡೆಯಬೇಕೆಂದು ನೆನಸುವವರು ಆಗುವ ಅಪಾಯವಿದೆ. ಹಾಗಾದರೆ ದೀನರಾಗಿರಲು ಯಾವುದು ನಮಗೆ ಸಹಾಯ ಮಾಡುತ್ತದೆ? ‘ನಮ್ಮಲ್ಲಿ ಚಿಕ್ಕವನಾಗಿ ನಡೆಸಿಕೊಳ್ಳುವವನು ದೊಡ್ಡವನಾಗಿದ್ದಾನೆ’ ಹೇಗೆ? ದೀನತೆಯ ಗುಣವನ್ನು ಜೀವನದ ಯಾವ ಕ್ಷೇತ್ರಗಳಲ್ಲಿ ತೋರಿಸಬೇಕು?
“ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ!”
4, 5. (1) ದೀನತೆ ಬೆಳೆಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ? (2) ಉದಾಹರಣೆ ಕೊಡಿ.
4 ದೀನತೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವ ಒಂದು ವಿಷಯ ಯೆಹೋವನು ನಮಗಿಂತ ಎಷ್ಟು ಮಹೋನ್ನತನು ಎನ್ನುವುದನ್ನು ಆಲೋಚಿಸುವುದೇ. “ಆತನ ವಿವೇಕವು [ನಮ್ಮ] ಪರಿಶೋಧನೆಗೆ ಅಗಮ್ಯ.” (ಯೆಶಾ. 40:28) ಯೆಹೋವನ ಮಹೋನ್ನತೆಯ ಕೆಲವು ಅಂಶಗಳಿಗೆ ಬೊಟ್ಟುಮಾಡುತ್ತಾ ಪೌಲನು ಬರೆದಿರುವ ಮಾತುಗಳನ್ನು ಗಮನಿಸಿ. “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ!” (ರೋಮ. 11:33) ಈ ಮಾತುಗಳನ್ನು ಪೌಲ ಹೆಚ್ಚುಕಡಿಮೆ 2,000 ವರ್ಷಗಳ ಹಿಂದೆ ಬರೆದನು. ಅಂದಿಗಿಂತ ಇಂದು ಮನುಷ್ಯನು ಅನೇಕ ವಿಷಯಗಳ ಕುರಿತು ಹೆಚ್ಚು ಜ್ಞಾನ ಪಡೆದುಕೊಂಡಿದ್ದಾನೆ. ಆದರೂ ಪೌಲನ ಮಾತುಗಳು ಆಗ ಎಷ್ಟು ಸತ್ಯವಾಗಿದ್ದವೋ ಈಗಲೂ ಅಷ್ಟೇ ಸತ್ಯವಾಗಿವೆ. ಏಕೆಂದರೆ ನಾವೆಷ್ಟೇ ಜ್ಞಾನ ಪಡೆದುಕೊಳ್ಳಲಿ, ಯೆಹೋವನ ಕುರಿತು, ಆತನ ಕೆಲಸ-ಮಾರ್ಗಗಳ ಕುರಿತು ಕಲಿಯಲು ಕೊನೆಯೇ ಇಲ್ಲ. ಅದಕ್ಕೆ ಕೊನೆಯೇ ಇಲ್ಲ. ಇದನ್ನು ಆಲೋಚಿಸುವಾಗ ನಮ್ಮಲ್ಲಿ ದೀನತೆ ಹೆಚ್ಚುತ್ತದೆ.
5 ಲೇಯೋa ಎಂಬ ಸಹೋದರನ ಅನುಭವ ನೋಡೋಣ. ಯೆಹೋವನ ಸೃಷ್ಟಿಕಾರ್ಯದ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಸಾಮರ್ಥ್ಯಕ್ಕೆ ಮೀರಿದ್ದೆಂಬ ವಿಷಯ ದೀನತೆಯನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯ ಮಾಡಿತು. ಯುವಕನಾಗಿದ್ದಾಗ ಲೇಯೋಗೆ ವಿಜ್ಞಾನವೆಂದರೆ ಜೀವ! ವಿಶ್ವದ ಬಗ್ಗೆ ಸಾಧ್ಯವಾದಷ್ಟು ಹೆಚ್ಚು ತಿಳಿದುಕೊಳ್ಳಬೇಕು ಎಂಬ ತೀವ್ರ ಆಸೆ ಅವನನ್ನು ಖಭೌತ ವಿಜ್ಞಾನದ ವಿದ್ಯಾರ್ಥಿಯನ್ನಾಗಿ ಮಾಡಿತು. ಅನಂತರ ಒಂದು ಪ್ರಾಮುಖ್ಯ ತೀರ್ಮಾನಕ್ಕೆ ಬಂದರು. ಅವರು ಅಂದದ್ದು: “ಮನುಷ್ಯನು ವಿಶ್ವದ ಕುರಿತು ವಿಜ್ಞಾನವೊಂದರಿಂದ ಪೂರ್ತಿಯಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನಾನಲ್ಲಿ ಕಲಿತ ವಿಷಯಗಳಿಂದ ಅರಿವಿಗೆ ಬಂತು. ಹಾಗಾಗಿ ವಿಜ್ಞಾನ ಬಿಟ್ಟು ಕಾನೂನು ಅಧ್ಯಯನ ಮಾಡಿದೆ.” ಬಳಿಕ ಅವರು ಜಿಲ್ಲಾ ವ್ಯವಹಾರ ನ್ಯಾಯವಾದಿಯಾದರಂತೆ. ಸಮಯಾನಂತರ ಕೋರ್ಟಿನ ನ್ಯಾಯಾಧೀಶ ಹುದ್ದೆ. ಸಂತೋಷದ ಸಂಗತಿಯೆಂದರೆ ಅವರೂ ಅವರ ಪತ್ನಿ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್ ಅಧ್ಯಯನ ಮಾಡಿದರು. ಸತ್ಯವನ್ನು ಸ್ವೀಕರಿಸಿ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡರು. ಮನುಷ್ಯ ದೃಷ್ಟಿಯಲ್ಲಿ ತುಂಬ ಜ್ಞಾನ ಪಡೆದುಕೊಂಡಿರುವ ಲೇಯೋಗೆ ದೀನತೆ ತೋರಿಸಲು ಯಾವುದು ಸಹಾಯಮಾಡಿತು? “ಯೆಹೋವನ ಕುರಿತು, ವಿಶ್ವದ ಕುರಿತು ನಾವೆಷ್ಟೇ ಕಲಿತರೂ ಅದು ಮುಗಿಯುವುದೇ ಇಲ್ಲ. ಕಲಿಯಲು ಇನ್ನೂ ಹೊಸ ಹೊಸ ವಿಷಯಗಳು ಎಷ್ಟೋ ಇವೆ” ಎಂದು ದೀನತೆಯಿಂದ ಹೇಳಲು ಅವರಿಗೆ ಸ್ವಲ್ಪವೂ ಮುಜುಗರವಿಲ್ಲ.
6, 7. (1) ಯೆಹೋವನ ಯಾವ ಮಾದರಿ ಬಹು ವಿಸ್ಮಯಕಾರಿ? (2) ಯೆಹೋವನ ದೀನತೆ ಹೇಗೆ ಒಬ್ಬನಿಗೆ “ದೊಡ್ಡಸ್ತಿಕೆ” ಉಂಟುಮಾಡುತ್ತದೆ?
6 ಮಹೋನ್ನತನಾದ ಯೆಹೋವನೇ ದೀನತೆ ತೋರಿಸುತ್ತಿರುವುದು ನಾವು ದೀನರಾಗಿರಲು ಸಹಾಯಮಾಡುವ ಇನ್ನೊಂದು ಅಂಶವಾಗಿದೆ. ಉದಾಹರಣೆಗೆ, ಈ ವಿಷಯದ ಕುರಿತು ಯೋಚಿಸಿನೋಡಿ: “ನಾವು ದೇವರ ಜೊತೆಕೆಲಸಗಾರರಾಗಿದ್ದೇವೆ”! (1 ಕೊರಿಂ. 3:9) ಊಹಿಸಲಿಕ್ಕೂ ಅಸಾಧ್ಯವಾದ ಸುಯೋಗವಲ್ಲವೆ!! ಅತ್ಯಂತ ಮಹೋನ್ನತನಾದ ಯೆಹೋವ ದೇವರು ತನ್ನ ಮಾತುಗಳಿರುವ ಬೈಬಲನ್ನು ನಾವು ಉಪಯೋಗಿಸಿ ಸಾರುವ ಮತ್ತು ಕಲಿಸುವ ಅವಕಾಶವನ್ನು ನಮಗೆ ಕೊಟ್ಟಿದ್ದಾನೆ. ಹೀಗೆ ನಮ್ಮನ್ನು ಮಾನ್ಯ ಮಾಡಿದ್ದಾನೆ. ನಾವು ಸತ್ಯದ ಬೀಜವನ್ನು ಬಿತ್ತಿ ನೀರುಹಾಕಿದ ಮೇಲೆ ಅದನ್ನು ಬೆಳೆಸುವಾತನು ಆತನೇ ಆಗಿರುವುದಾದರೂ ಆತನೊಂದಿಗೆ ಕೆಲಸ ಮಾಡುವ ಅವಕಾಶ ಕೊಡುವ ಮೂಲಕ ನಮ್ಮನ್ನು ಎಷ್ಟು ಗೌರವಭರಿತ ಸ್ಥಾನದಲ್ಲಿಟ್ಟಿದ್ದಾನೆ! (1 ಕೊರಿಂ. 3:6, 7) ದೇವರಾದ ಯೆಹೋವನು ಇಷ್ಟೊಂದು ದೀನತೆ ತೋರಿಸುವುದನ್ನು ನೋಡುವಾಗ ನಮಗಾಗುವ ವಿಸ್ಮಯ, ಅಚ್ಚರಿ ಹೇಳಲಸಾಧ್ಯ. ಆತನ ಈ ಒಳ್ಳೇ ಮಾದರಿ ನಾವು ಸಹ ಚಿಕ್ಕವರಾಗಿ ಅಂದರೆ ದೀನರಾಗಿ ನಡೆದುಕೊಳ್ಳಲು ಸ್ಫೂರ್ತಿ ನೀಡುತ್ತದೆ.
7 ಯೆಹೋವನ ದೀನತೆಯು ಕೀರ್ತನೆಗಾರ ದಾವೀದನನ್ನು ಗಾಢವಾಗಿ ಪ್ರಭಾವಿಸಿತು. ಆದ್ದರಿಂದಲೇ, “ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ; ನಿನ್ನ ಕೃಪಾಕಟಾಕ್ಷವು [ದೀನತೆಯು, NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ” ಎಂದು ಯೆಹೋವನಿಗೆ ಹಾಡಿದನು. (2 ಸಮು. 22:36) ಯೆಹೋವ ದೇವರು ತನ್ನನ್ನು ಗಮನಿಸಲು ಬಾಗುವುದರಿಂದ ಅಥವಾ ದೀನತೆ ತೋರಿಸುವುದರಿಂದಲೇ ಇಸ್ರಾಯೇಲಿನಲ್ಲಿ ತನಗೆ ಘನಮಾನ ದೊರೆತಿದೆ ಎಂದು ಒಪ್ಪಿಕೊಂಡನು. (ಕೀರ್ತ. 113:5-7) ಇದು ನಮ್ಮ ಕುರಿತೂ ನಿಜವಲ್ಲವೆ? ನಮ್ಮಲ್ಲಿರುವ ಗುಣ, ಸಾಮರ್ಥ್ಯ, ಸುಯೋಗ ಎಲ್ಲವನ್ನೂ ಯೆಹೋವನೇ ಕೊಟ್ಟನಲ್ಲವೆ? ದೇವರಿಂದ “ಹೊಂದದೇ ಇರುವಂಥದ್ದು” ಏನಾದರೂ ನಮ್ಮಲ್ಲಿದೆಯಾ? (1 ಕೊರಿಂ. 4:7) ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನು ದೊಡ್ಡವನಾಗಿದ್ದಾನೆ ಅಂದರೆ ಅಂಥವನು ಯೆಹೋವನಿಗೆ ಅಮೂಲ್ಯ ವ್ಯಕ್ತಿಯಾಗಿದ್ದಾನೆ. (ಲೂಕ 9:48) ಅದು ಹೇಗೆಂದು ಮುಂದೆ ನೋಡೋಣ.
‘ನಿಮ್ಮಲ್ಲಿ ಚಿಕ್ಕವನು ದೊಡ್ಡವನಾಗಿದ್ದಾನೆ’
8. ಯೆಹೋವನ ಸಂಘಟನೆಯಲ್ಲಿರುವವರಿಗೆ ದೀನತೆ ಏಕೆ ಅಗತ್ಯ?
8 ದೇವರ ಸಂಘಟನೆಯಲ್ಲಿ ನಾವು ಸಂತುಷ್ಟರಾಗಿರಲು, ಸಭೆಯ ಏರ್ಪಾಡುಗಳನ್ನು ಬೆಂಬಲಿಸಲು ನಮ್ಮಲ್ಲಿ ಇರಲೇಬೇಕಾದ ಗುಣ ದೀನತೆ. ಈ ಉದಾಹರಣೆ ಗಮನಿಸಿ. ಪೆಟ್ರಾ ಎಂಬ ಯುವತಿ ಸಾಕ್ಷಿ ಕುಟುಂಬದಲ್ಲಿ ಬೆಳೆದವಳು. ತನ್ನಿಷ್ಟದಂತೆ ಇರಲು ಬಯಸಿದ ಅವಳು ಸಭೆಗೆ ಬರುವುದನ್ನು ಬಿಟ್ಟುಬಿಟ್ಟಳು. ಆದರೆ ಅನೇಕ ವರ್ಷಗಳ ನಂತರ ಕೂಟಗಳಿಗೆ ಪುನಃ ಬರಲಾರಂಭಿಸಿದಳು. ಈಗ ಆಕೆ ಯೆಹೋವನ ಸಂಘಟನೆಯೊಳಗೆ ಸಂತೋಷದಿಂದಿದ್ದಾಳೆ. ಸಭೆಯ ಏರ್ಪಾಡುಗಳಿಗೆ ಪೂರ್ಣ ಬೆಂಬಲ ಕೊಡಲು ಉತ್ಸುಕಳಾಗಿದ್ದಾಳೆ. ಈ ಬದಲಾವಣೆಗೆ ಕಾರಣವೇನು? ಅವಳ ಮಾತುಗಳನ್ನೇ ಕೇಳಿ: “ಯೆಹೋವನ ಸಂಘಟನೆಯೊಳಗೆ ಸಂತುಷ್ಟಳಾಗಿರಲು ನಾನು ದೀನತೆ ಮತ್ತು ನಮ್ರತೆ ಎಂಬ ಎರಡು ಗುಣಗಳ ಮಹತ್ವವನ್ನು ಅರಿತು ಅವುಗಳನ್ನು ಬೆಳೆಸಿಕೊಳ್ಳಬೇಕಿತ್ತು.” ಈ ಗುಣಗಳನ್ನು ಬೆಳೆಸಿಕೊಂಡದ್ದೇ ಅವಳ ಮನೋಭಾವವನ್ನು ಬದಲಾಯಿಸಿತು.
9. (1) ದೀನ ವ್ಯಕ್ತಿಗೆ ಆಧ್ಯಾತ್ಮಿಕ ಆಹಾರದ ಬಗ್ಗೆ ಯಾವ ಮನೋಭಾವವಿರುತ್ತದೆ? (2) ಇದು ಏಕೆ ಅವನನ್ನು ಹೆಚ್ಚು ಅಮೂಲ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ?
9 ದೀನ ವ್ಯಕ್ತಿ ಯೆಹೋವನ ಒದಗಿಸುವಿಕೆಗಳಿಗಾಗಿ ಮನದಾಳದ ಕೃತಜ್ಞತೆ ತೋರಿಸುತ್ತಾನೆ. ಅಂಥ ಒದಗಿಸುವಿಕೆಗಳಲ್ಲಿ ಆಧ್ಯಾತ್ಮಿಕ ಆಹಾರವೂ ಒಂದು. ದೀನ ವ್ಯಕ್ತಿ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾನೆ. ಕಾವಲಿನಬುರುಜು, ಎಚ್ಚರ! ಪತ್ರಿಕೆಗಳನ್ನು ಅತ್ಯಾಸಕ್ತಿಯಿಂದ ಓದುತ್ತಾನೆ. ಪ್ರತಿಯೊಂದು ಹೊಸ ಸಾಹಿತ್ಯವನ್ನು ಪಡೆದುಕೊಂಡಾಗ ಅನೇಕ ನಂಬಿಗಸ್ತ ಸಹೋದರ ಸಹೋದರಿಯರು ಏನು ಮಾಡುತ್ತಾರೆ ಗೊತ್ತೆ? ಅದನ್ನು ತಮ್ಮ ವೈಯಕ್ತಿಕ ಲೈಬ್ರರಿಗೆ ಸೇರಿಸುವ ಮುಂಚೆ ಪೂರ್ಣವಾಗಿ ಓದುತ್ತಾರೆ. ನಾವು ಕೂಡ ಇದೇ ರೀತಿಯಲ್ಲಿ ನಮ್ಮ ಬೈಬಲಾಧರಿತ ಸಾಹಿತ್ಯವನ್ನು ಓದಿ ಅಧ್ಯಯನ ಮಾಡುವ ಮೂಲಕ ಯೆಹೋವನ ಒದಗಿಸುವಿಕೆಗೆ ಕೃತಜ್ಞತೆ ತೋರಿಸೋಣ. ಹಾಗೆ ಮಾಡುವಾಗ ಆಧ್ಯಾತ್ಮಿಕವಾಗಿ ಹೆಚ್ಚು ಪ್ರಗತಿ ಹೊಂದುವೆವು. ಆಗ ಯೆಹೋವನು ನಮ್ಮನ್ನು ತನ್ನ ಸೇವೆಯಲ್ಲಿ ಇನ್ನೂ ಹೆಚ್ಚೆಚ್ಚು ಉಪಯೋಗಿಸಲು ಸಾಧ್ಯವಾಗುವುದು.—ಇಬ್ರಿ. 5:13, 14.
10. ನಾವು ಸಭೆಯಲ್ಲಿ ಹೇಗೆ ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳಬಹುದು?
10 ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನು ಇನ್ನೊಂದು ವಿಧದಲ್ಲೂ ‘ದೊಡ್ಡವನಾಗಿರುವನು.’ ಹೇಗೆಂದು ಯೋಚಿಸುತ್ತಿದ್ದೀರಾ? ಪ್ರತಿಯೊಂದು ಸಭೆಯಲ್ಲೂ ಅರ್ಹ ಪುರುಷರು ಪವಿತ್ರಾತ್ಮದ ಮಾರ್ಗದರ್ಶನದಡಿಯಲ್ಲಿ ಹಿರಿಯರಾಗಿ ನೇಮಿತರಾಗಿರುತ್ತಾರೆ. ಅವರು ಸಭಾ ಕೂಟಗಳು, ಕ್ಷೇತ್ರ ಸೇವೆ, ಪರಿಪಾಲನಾ ಭೇಟಿಗಳನ್ನು ಏರ್ಪಡಿಸುತ್ತಾರೆ. ಈ ಏರ್ಪಾಡುಗಳಿಗೆ ನಾವು ಮನಸಾರೆ ಬೆಂಬಲ ಕೊಡುವ ಮೂಲಕ ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವುದಾದರೆ ಸಭೆಯಲ್ಲಿ ಸಂತೋಷ, ಶಾಂತಿ, ಐಕ್ಯವನ್ನು ಹೆಚ್ಚಿಸುತ್ತೇವೆ. (ಇಬ್ರಿಯ 13:7, 17 ಓದಿ.) ನೀವು ಸಭೆಯಲ್ಲಿ ಹಿರಿಯರೋ ಶುಶ್ರೂಷಾ ಸೇವಕರೋ ಆಗಿರುವಲ್ಲಿ ಯೆಹೋವನು ನಿಮಗೆ ದಯಪಾಲಿಸಿರುವ ಈ ಅಮೂಲ್ಯ ಸುಯೋಗಕ್ಕೆ ಕೃತಜ್ಞರಾಗಿರುವ ಮೂಲಕ ದೀನತೆಯನ್ನು ತೋರಿಸುತ್ತಿದ್ದೀರಾ?
11, 12. (1) ಯಾವ ಗುಣ ನಮ್ಮಲ್ಲಿದ್ದರೆ ನಾವು ಯೆಹೋವನ ಸಂಘಟನೆಗೆ ಹೆಚ್ಚು ಅಮೂಲ್ಯರಾಗಿರುವೆವು? (2) ಏಕೆ?
11 ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನು “ದೊಡ್ಡವನಾಗಿದ್ದಾನೆ” ಅಥವಾ ಯೆಹೋವನ ಸಂಘಟನೆಗೂ ಅಮೂಲ್ಯನಾಗಿದ್ದಾನೆ. ಏಕೆಂದರೆ ಅವನಲ್ಲಿರುವ ದೀನತೆಯಿಂದಾಗಿ ಅವನು ಒಳ್ಳೆಯ ಹಾಗೂ ಉಪಯುಕ್ತ ಸೇವಕನಾಗಿರುತ್ತಾನೆ. ಯೇಸು ಕೂಡ ತನ್ನ ಶಿಷ್ಯರಿಗೆ ದೀನತೆಯನ್ನು ಬೆಳೆಸಿಕೊಳ್ಳುವಂತೆ ಉತ್ತೇಜಿಸಿದನು. ಅವರ ಸಮಾಜದಲ್ಲಿದ್ದ ಮನೋಭಾವ ಶಿಷ್ಯರಿಗೂ ಸೋಂಕಿತ್ತು. ಆದ್ದರಿಂದಲೇ ಲೂಕ 9:46 ಹೇಳುವಂತೆ “ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ ಅವರ ಮಧ್ಯೆ ತರ್ಕವುಂಟಾಯಿತು.” ನಾವು ಇದೇ ರೀತಿ ನಮ್ಮ ಸಹೋದರ ಸಹೋದರಿಯರಿಗಿಂತ ನಮ್ಮನ್ನು ಶ್ರೇಷ್ಠರೆಂದು ಅಥವಾ ಇತರ ಜನರಿಗಿಂತ ಉತ್ತಮರೆಂದು ಭಾವಿಸಿಕೊಳ್ಳುತ್ತೇವಾ? ನಮ್ಮ ಸುತ್ತಮುತ್ತಲಿರುವ ಜನರಲ್ಲಿ ಅಹಂಕಾರ, ಸ್ವಾರ್ಥ ತುಂಬಿ ತುಳುಕುತ್ತಿದೆ. ನಾವು ದೀನರಾಗಿ ನಡೆದುಕೊಳ್ಳುವ ಮೂಲಕ ಅಹಂಕಾರವಿರುವ ಜನರಿಗಿಂತ ಭಿನ್ನರೆಂದು ತೋರಿಸಿಕೊಡೋಣ. ಹೀಗೆ ಮಾಡುವಾಗ ಮತ್ತು ಯೆಹೋವನ ಚಿತ್ತದಂತೆ ನಡೆಯುವುದಕ್ಕೆ ಪ್ರಾಶಸ್ತ್ಯ ಕೊಡುವಾಗ ನಾವು ನಮ್ಮ ಸಹೋದರ ಸಹೋದರಿಯರಿಗೆ ಚೈತನ್ಯ ತರುವ ಒಡನಾಡಿಗಳಾಗಿರುವೆವು.
12 ಚಿಕ್ಕವರಾಗಿ ನಡೆಸಿಕೊಳ್ಳುವಂತೆ ಯೇಸು ಕೊಟ್ಟ ಬುದ್ಧಿವಾದವು ದೀನರಾಗಿರಲು ನಮ್ಮನ್ನು ಉತ್ತೇಜಿಸುತ್ತದೆ. ಹಾಗಾದರೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ದೀನತೆ ತೋರಿಸಲು ನಾವು ಶ್ರಮಿಸಬೇಕಲ್ಲವೇ? ಅವುಗಳಲ್ಲಿ ಮೂರು ಕ್ಷೇತ್ರಗಳ ಕಡೆಗೆ ಕಣ್ಣಾಯಿಸೋಣ.
ಚಿಕ್ಕವರಾಗಿ ನಡೆದುಕೊಳ್ಳಲು ಶ್ರಮಿಸಿ
13, 14. (1) ಪತಿಪತ್ನಿ ತಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವುದು ಹೇಗೆ? (2) ಅದು ಅವರ ವಿವಾಹಬಂಧದ ಮೇಲೆ ಯಾವ ಪ್ರಭಾವ ಬೀರುವುದು?
13 ವೈವಾಹಿಕ ಜೀವನದಲ್ಲಿ. ಇಂದು ಜನರು ತಮ್ಮ ವೈಯಕ್ತಿಕ ಹಕ್ಕುಗಳಿಗಾಗಿ ಎಷ್ಟು ಹೋರಾಡುತ್ತಾರೆಂದರೆ ಇತರರ ಹಕ್ಕುಗಳನ್ನು ಕಿತ್ತುಕೊಳ್ಳಲೂ ಹಿಂದೆಮುಂದೆ ನೋಡುವುದಿಲ್ಲ. ಆದರೆ ತಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವವರು ಹಾಗಿರರು. ಪೌಲನು ರೋಮನ್ನರಿಗೆ ಬರೆಯುವಾಗ ಹೇಳಿದ ಈ ಮನೋಭಾವವನ್ನು ಬೆಳೆಸಿಕೊಳ್ಳಲು ಅವರು ಪ್ರಯತ್ನಿಸುವರು: “ನಾವು ಶಾಂತಿಯನ್ನು ಉಂಟುಮಾಡುವ ಮತ್ತು ಪರಸ್ಪರ ಭಕ್ತಿವೃದ್ಧಿಮಾಡುವ ವಿಷಯಗಳನ್ನು ಬೆನ್ನಟ್ಟೋಣ.” (ರೋಮ. 14:19) ಅಂದರೆ ತಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವವರು ಎಲ್ಲರೊಂದಿಗೆ ಶಾಂತಿಯಿಂದಿರಲು ಶ್ರಮಿಸುತ್ತಾರೆ. ವಿಶೇಷವಾಗಿ ತಮ್ಮ ಪ್ರೀತಿಯ ಬಾಳಸಂಗಾತಿಯೊಂದಿಗೆ.
14 ಉದಾಹರಣೆಗೆ, ಮನರಂಜನೆಯ ವಿಷಯದಲ್ಲಿ ಪತಿಪತ್ನಿಗೆ ಭಿನ್ನ ಅಭಿರುಚಿಗಳಿರಬಹುದು. ವಿರಾಮದ ಸಮಯದಲ್ಲಿ ಮನೆಯಲ್ಲೇ ಇದ್ದು ಯಾವುದಾದರೂ ಪುಸ್ತಕ ಓದಲು ಪತಿ ಇಷ್ಟಪಟ್ಟರೆ ಪತ್ನಿ ಹೊರಗೆ ಹೋಗಿ ಊಟಮಾಡಲು ಸ್ನೇಹಿತರನ್ನು ಭೇಟಿಮಾಡಲು ಬಯಸುತ್ತಾಳೆ ಎಂದಿಟ್ಟುಕೊಳ್ಳಿ. ಆಗೇನು? ಒಂದು ವೇಳೆ ಪತಿ ತನ್ನ ಇಷ್ಟವನ್ನು ಬದಿಗೊತ್ತಿ ದೀನತೆಯಿಂದ ಪತ್ನಿಯ ಇಷ್ಟಾನಿಷ್ಟಗಳಿಗೆ ಪರಿಗಣನೆ ತೋರಿಸುವಲ್ಲಿ ಅವನನ್ನು ಗೌರವಿಸಲು ಆಕೆಗೆ ಹೆಚ್ಚು ಸುಲಭವಾಗುವುದು. ಅದೇರೀತಿ ಪತ್ನಿಯು ತಾನು ಬಯಸಿದ್ದೇ ಆಗಬೇಕು ಎಂದು ಹಟಹಿಡಿಯದೆ ಪತಿಯ ಇಷ್ಟಗಳಿಗೆ ಬೆಲೆಕೊಡುವಲ್ಲಿ ಅವನು ಆಕೆಯನ್ನು ಹೆಚ್ಚು ಪ್ರೀತಿಸುವನು, ಆಕೆಯನ್ನು ಅಮೂಲ್ಯವಾಗಿ ಪರಿಗಣಿಸುವನು. ಇಬ್ಬರೂ ತಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವಾಗ ವಿವಾಹಬಂಧವು ಬಲಗೊಳ್ಳುವುದು.—ಫಿಲಿಪ್ಪಿ 2:1-4 ಓದಿ.
15, 16. (1) ನಮ್ಮಲ್ಲಿ ಯಾವ ಮನೋಭಾವ ಇರಬೇಕೆಂದು ದಾವೀದನು 131ನೇ ಕೀರ್ತನೆಯಲ್ಲಿ ಉತ್ತೇಜಿಸಿದ್ದಾನೆ? (2) ಈ ಮನೋಭಾವವು ಸಭೆಯಲ್ಲಿ ನಮ್ಮ ನಡವಳಿಕೆಯನ್ನು ಹೇಗೆ ಪ್ರಭಾವಿಸುವುದು?
15 ಸಭೆಯಲ್ಲಿ. ಬಯಸಿದ್ದು ತಕ್ಷಣ ಸಿಗಬೇಕು ಎನ್ನುವುದು ಲೋಕದಲ್ಲಿ ಅನೇಕರ ಮನೋಭಾವ. ಅವರಿಗೆ ತಾಳ್ಮೆ ಅನ್ನುವುದೇ ಇಲ್ಲ. ಕಾಯೋದೆಂದರೆ ಹಿಂಸೆ. ಆದರೆ ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವುದು ಯೆಹೋವನನ್ನು ನಿರೀಕ್ಷಿಸುವಂತೆ ಅಂದರೆ ಆತನಿಗಾಗಿ ಕಾಯುವಂತೆ ಸಹಾಯಮಾಡುತ್ತದೆ. (ಕೀರ್ತನೆ 131:1-3 ಓದಿ.) ದೀನರಾಗಿದ್ದು ಯೆಹೋವನಿಗಾಗಿ ಕಾಯುವುದಾದರೆ ಸುರಕ್ಷೆ, ಆಶೀರ್ವಾದ, ಸಾಂತ್ವನ, ಸಂತೃಪ್ತಿ ಸಿಗುವುದು. ಹಾಗಾಗಿ ದೇವರನ್ನು ನಿರೀಕ್ಷಿಸಿಕೊಂಡಿರುವಂತೆ ದಾವೀದನು ಇಸ್ರಾಯೇಲ್ಯರನ್ನು ಉತ್ತೇಜಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
16 ನೀವು ಕೂಡ ದೀನತೆಯಿಂದ ಯೆಹೋವನಿಗಾಗಿ ಕಾಯುವುದಾದರೆ ಆತನಿಂದ ಇದೇ ರೀತಿಯ ಸಾಂತ್ವನ ಪಡೆಯುವಿರಿ. (ಕೀರ್ತ. 42:5) ಹೀಗೆ ಯೋಚಿಸಿ. ಮೇಲ್ವಿಚಾರಕನಾಗಿ ಸಭೆಗೆ ಹೆಚ್ಚು ಸಹಾಯಮಾಡುವ ಅಪೇಕ್ಷೆ ನಿಮಗಿದೆ. (1 ತಿಮೊ. 3:1-7) ಒಬ್ಬ ಮೇಲ್ವಿಚಾರಕನಲ್ಲಿರಬೇಕಾದ ಗುಣಗಳನ್ನು ಪವಿತ್ರಾತ್ಮದ ಸಹಾಯದಿಂದ ಬೆಳೆಸಿಕೊಳ್ಳಲು ಎಲ್ಲ ಪ್ರಯತ್ನವನ್ನು ನೀವು ಮಾಡುತ್ತಿದ್ದೀರಿ ಸಹ. ಆದರೆ ಬೇರೆಯವರಿಗೆ ಬೇಗನೆ ಈ ಸುಯೋಗ ಸಿಕ್ಕಿ ನಿಮ್ಮ ವಿಷಯದಲ್ಲಿ ಮಾತ್ರ ತಡವಾಗುತ್ತಿರುವಂತೆ ಕಂಡರೆ. . . ? ತನ್ನನ್ನು ಚಿಕ್ಕವನಂತೆ ನಡೆಸಿಕೊಳ್ಳುವವನು ಆ ಸುಯೋಗಕ್ಕಾಗಿ ತಾಳ್ಮೆಯಿಂದ ಕಾಯುತ್ತಾನೆ. ಮಾತ್ರವಲ್ಲ ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡುವುದನ್ನು ಮುಂದುವರಿಸುತ್ತಾನೆ. ತನಗೆ ಸಿಗುವ ನೇಮಕ ಯಾವುದೇ ಆಗಿರಲಿ ಅದನ್ನು ಹರ್ಷಚಿತ್ತದಿಂದ ಮಾಡುತ್ತಾನೆ.
17, 18. (1) ಕ್ಷಮೆ ಕೇಳುವ ಹಾಗೂ ಇತರರನ್ನು ಕ್ಷಮಿಸುವ ಗುಣ ನಮ್ಮಲ್ಲಿದ್ದರೆ ಯಾವ ಪ್ರಯೋಜನ ಸಿಗುವುದು? (2) ನಾವು ಏನು ಮಾಡಬೇಕೆಂದು ಜ್ಞಾನೋಕ್ತಿ 6:1-5ರಲ್ಲಿ ತಿಳಿಸಲಾಗಿದೆ?
17 ಇತರರೊಂದಿಗೆ. ಹೆಚ್ಚಿನ ಜನರಿಗೆ ಕ್ಷಮೆ ಕೇಳುವುದೆಂದರೆ ಕಷ್ಟ. ಆದರೆ ದೇವಜನರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೋರಬೇಕು. ಹೀಗೆ ತಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳಬೇಕು. ಜೊತೆಗೆ ಇತರರನ್ನು ಕ್ಷಮಿಸಲೂ ಸಿದ್ಧರಿರಬೇಕು. ಒಂದುವೇಳೆ ಅವರಲ್ಲಿ ಗರ್ವ ಇರುವಲ್ಲಿ ಅದು ಒಡಕು, ಜಗಳಗಳನ್ನು ಹೆಚ್ಚಿಸುತ್ತದೆ. ಆದರೆ ಕ್ಷಮಿಸುವ ಗುಣ ಸಭೆಯಲ್ಲಿ ಶಾಂತಿಯನ್ನು ವರ್ಧಿಸುತ್ತದೆ.
18 ಕೆಲವು ಸಂದರ್ಭಗಳಲ್ಲಿ ನಾವು ನಮ್ಮನ್ನು “ತಗ್ಗಿಸಿಕೊಂಡು” ಕ್ಷಮೆ ಕೇಳಬೇಕಾಗಬಹುದು. ನಾವು ಯಾವುದೋ ಒಂದು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ನೆನಸಿ. ಆದರೆ ಪರಿಸ್ಥಿತಿ ಕೈಮೀರಿ ಹೋದ ಕಾರಣ ನಾವದನ್ನು ಪೂರೈಸಲು ಆಗಲಿಲ್ಲ. ಹೀಗಾಗಲು ಇನ್ನೊಬ್ಬನೂ ಕಾರಣನಾಗಿರಬಹುದು. ಆದರೂ ನಾವು ನಮ್ಮ ತಪ್ಪನ್ನು ಮನಗಂಡು ಅದನ್ನು ಒಪ್ಪಿಕೊಳ್ಳಬೇಕು.—ಜ್ಞಾನೋಕ್ತಿ 6:1-5 ಓದಿ. b
19. ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳಬೇಕೆಂಬ ಬೈಬಲ್ ಸಲಹೆಗೆ ನಾವೇಕೆ ಕೃತಜ್ಞರಾಗಿರಬೇಕು?
19 ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವಂತೆ ಸಿಕ್ಕಿದ ಬೈಬಲಾಧರಿತ ಉತ್ತೇಜನಕ್ಕಾಗಿ ನಾವು ಕೃತಜ್ಞರು. ದೀನಭಾವ ತೋರಿಸುವುದು ಯಾವಾಗಲೂ ಸುಲಭವಲ್ಲ. ಆದರೆ ಸೃಷ್ಟಿಕರ್ತ ದೇವರಿಗೆ ಹೋಲಿಸುವಾಗ ನಮ್ಮ ಸ್ಥಾನ ಎಂಥದ್ದು ಎಂದು ಯೋಚಿಸುವುದು ಹಾಗೂ ದೇವರು ತೋರಿಸುವ ದೀನತೆಯನ್ನು ಮನನಮಾಡುವುದು ಈ ಒಳ್ಳೇ ಗುಣ ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ದೀನತೆ ತೋರಿಸುವಲ್ಲಿ ನಾವು ಯೆಹೋವನಿಗೆ ಅಮೂಲ್ಯರು! ಹಾಗಾಗಿ ನಾವೆಲ್ಲರೂ ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳೋಣ.
[ಪಾದಟಿಪ್ಪಣಿಗಳು]
a ಹೆಸರುಗಳನ್ನು ಬದಲಾಯಿಸಲಾಗಿದೆ.
b ಜ್ಞಾನೋಕ್ತಿ 6:3 (ಪವಿತ್ರ ಗ್ರಂಥ ಭಾಷಾಂತರ): “ನನ್ನ ಮಗನೇ, ನಿನ್ನ ನೆರೆಯವನ ಕೈಗೆ ಸಿಕ್ಕಿದಾಗ ನಿನ್ನನ್ನು ನೀನು ತಪ್ಪಿಸಿಕೊಳ್ಳಲು ಇದನ್ನು ಮಾಡು. ಹೋಗಿ ನಿನ್ನನ್ನು ನೀನು ತಗ್ಗಿಸಿಕೊಂಡು ನಿನ್ನ ನೆರೆಯವನೊಂದಿಗೆ ನಿನ್ನ ಬೇಡಿಕೆಯನ್ನು ಸಾಧಿಸು.”
[ಪುಟ 16ರಲ್ಲಿರುವ ಚಿತ್ರ]
ಸುವಾರ್ತೆ ಸಾರುವ ಸುಯೋಗ ಕೊಟ್ಟು ಯೆಹೋವನು ನಮ್ಮನ್ನು ಗೌರವಿಸಿದ್ದಾನೆ
[ಪುಟ 19ರಲ್ಲಿರುವ ಚಿತ್ರಗಳು
ನಿಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳಲು ಇಂಥ ಸಂದರ್ಭಗಳನ್ನು ಉಪಯೋಗಿಸಿಕೊಳ್ಳುತ್ತೀರಾ?