ಯೆಹೋವನು ‘ಅನುದಿನವೂ ನನ್ನ ಭಾರವನ್ನು ಹೊರುತ್ತಾನೆ’
ಸಹಿಸಿಕೊಳ್ಳಲು ಆಗದಂಥ ಆರೋಗ್ಯ ಸಮಸ್ಯೆ. ಯಾವಾಗ ಏನಾಗುತ್ತೆ ಅಂತ ಗೊತ್ತಿಲ್ಲ. ಇಂಥ ಸಂದರ್ಭದಲ್ಲೂ ಪ್ರೀತಿಯ ತಂದೆಯಾಗಿರುವ ಯೆಹೋವನ ಕಾಳಜಿಯನ್ನು ಜೀವನ ಪೂರ್ತಿ ಅನುಭವಿಸುತ್ತಾ ಬಂದಿದ್ದೇನೆ. ಕಳೆದ 20ಕ್ಕಿಂತ ಹೆಚ್ಚು ವರ್ಷಗಳಿಂದ ಪಯನೀಯರ್ ಸೇವೆಯಲ್ಲಿನ ವಿಶೇಷ ಆನಂದ ನನ್ನದಾಗಿದೆ.
ನಾನು ಹುಟ್ಟಿದ್ದು 1956ರಲ್ಲಿ. ಹುಟ್ಟಿದಾಗಲೇ ಮೆದುಳುಬಳ್ಳಿ ಬೆನ್ನುಮೂಳೆಗಳ ಮಧ್ಯೆ ಸರಿಯಾಗಿ ಮುಚ್ಚಿರಲಿಲ್ಲ. ಈ ಸಮಸ್ಯೆಯನ್ನು ಸ್ಪೈನಾ ಬೈಫಿಡಾ ಎನ್ನುತ್ತಾರೆ. ನರದ ಸಮಸ್ಯೆಯಿಂದಾಗಿ ನನಗೆ ಸರಿಯಾಗಿ ನಡೆಯಲು ಆಗಲ್ಲ, ಜೊತೆಗೆ ಬೇರೆ ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಇವೆ.
ನಾನು ಹುಟ್ಟುವ ಮುಂಚೆಯೇ ನನ್ನ ಹೆತ್ತವರನ್ನು ಮಿಷನರಿ ದಂಪತಿ ಭೇಟಿಮಾಡಿ ಬೈಬಲ್ ಕಲಿಸಿದರು. ನಾನು ಚಿಕ್ಕವಳಿದ್ದಾಗ ನಮ್ಮನೆ ನಮೀಬಿಯದ ಊಸಾಕೋಸ್ ಪಟ್ಟಣದಲ್ಲಿತ್ತು. ಅಲ್ಲಿ ಕೆಲವೇ ಪ್ರಚಾರಕರು ಇದ್ರು. ಆದ್ದರಿಂದ ಕೂಟದ ವಿಷಯಗಳನ್ನ ಕುಟುಂಬವಾಗಿ ಚರ್ಚಿಸುತ್ತಿದ್ದೆವು. ನನಗೆ 7 ವರ್ಷವಾದಾಗ ಯುರೊಸ್ಟಮಿ ಶಸ್ತ್ರಚಿಕಿತ್ಸೆ (ಮೂತ್ರವಿಸರ್ಜನೆ ಮಾಡಲಾಗುವಂತೆ ದೇಹದಲ್ಲಿ ಕೃತಕ ರಂಧ್ರ ಮಾಡುವುದು) ಮಾಡಲಾಯಿತು. 14ನೇ ವರ್ಷದಲ್ಲಿ ಮೂರ್ಛೆ ರೋಗ ಬಂತು. ಮನೆಯಿಂದ ಶಾಲೆ ದೂರದಲ್ಲಿದ್ದರಿಂದ ಮತ್ತು ನನ್ನನ್ನ ನೋಡಿಕೊಳ್ಳಕ್ಕೆ ಅಪ್ಪ ಅಮ್ಮ ಇರಲೇಬೇಕಾದ್ದರಿಂದ ಶಾಲೆಯನ್ನು ಸಹ ಪೂರ್ತಿ ಮುಗಿಸಲು ಆಗಲಿಲ್ಲ.
ನಾನು ಯೆಹೋವನೊಟ್ಟಿಗಿನ ಸಂಬಂಧವನ್ನು ಗಟ್ಟಿಗೊಳಿಸಲು ನಿರ್ಧರಿಸಿದೆ. ನನ್ನ ಮಾತೃಭಾಷೆ ಆಫ್ರಿಕಾನ್ಸ್. ಆದರೆ ಈ ಭಾಷೆಯಲ್ಲಿ ಪ್ರಕಾಶನ ಲಭ್ಯವಿರಲಿಲ್ಲ. ಆದ್ದರಿಂದ ನಮ್ಮ ಸಾಹಿತ್ಯವನ್ನು ಓದಲು ಇಂಗ್ಲಿಷ್ ಕಲಿತೆ. ಅಸ್ನಾತ ಪ್ರಚಾರಕಳಾದೆ. 19ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದೆ. ನಂತರದ 4 ವರ್ಷಗಳಲ್ಲಿ ನನ್ನ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಭಾವನಾತ್ಮಕ ತೊಂದರೆಗಳಿಂದ ಸೊರಗಿದೆ. ಅದೂ ಅಲ್ಲದೆ ನಮ್ಮ ಸಮುದಾಯದವರು ಒಟ್ಟೊಟ್ಟಿಗೆ ಇರುತ್ತಿದ್ದರಿಂದ ಅವರ ಹತ್ತಿರ ಸತ್ಯದ ಬಗ್ಗೆ ಮಾತಾಡಲು ತುಂಬ ಭಯ ಆಗುತ್ತಿತ್ತು. ಹುರುಪಿನಿಂದ ಸೇವೆ ಮಾಡಲು ಆಗುತ್ತಿರಲಿಲ್ಲ.
ನನಗೆ 20 ವರ್ಷ ದಾಟಿದ ನಂತರ ನಾವು ನಮೀಬಿಯದಿಂದ ದಕ್ಷಿಣ ಆಫ್ರಿಕಾಗೆ ಬಂದೆವು. ಮೊದಲ ಬಾರಿಗೆ ಸಭೆಯ ಜೊತೆ ಸಹವಸಿಸಲು ಸಾಧ್ಯವಾಯ್ತು. ಆ ಕ್ಷಣ ಯಾವತ್ತೂ ಮರೆಯಲ್ಲ. ಅನಂತರ ಕೊಲೊಸ್ಟಮಿ ಶಸ್ತ್ರಚಿಕಿತ್ಸೆಗೆ (ಕೃತಕ ಮಲದ್ವಾರವನ್ನು ಒದಗಿಸಲು ದೊಡ್ಡ ಕರುಳಿನ ಕೊನೆಯ ಭಾಗವಾದ ಕೊಲನ್ನಿನಲ್ಲಿ ಮಾಡುವ ರಂಧ್ರ) ಒಳಗಾದೆ.
ಸ್ವಲ್ಪ ಸಮಯದ ನಂತರ ಸರ್ಕಿಟ್ ಮೇಲ್ವಿಚಾರಕರು ಪಯನೀಯರ್ ಸೇವೆ ಬಗ್ಗೆ ಭಾಷಣ ಕೊಟ್ಟಿದ್ದನ್ನು ನಾನು ಕೇಳಿಸಿಕೊಂಡೆ. ಅವರು ಹೇಳಿದ ವಿಷಯ ನನ್ನ ಮನಮುಟ್ಟಿತು. ನನ್ನ ಆರೋಗ್ಯ ಯಾವ ಸ್ಥಿತಿಯಲ್ಲಿದೆ ಅನ್ನೋದು ತಿಳಿದಿತ್ತಾದ್ರೂ, ಯೆಹೋವನು ನನ್ನನ್ನು ಬಹು ಜತನದಿಂದ ರಕ್ಷಿಸುತ್ತಿರುವ ಪರಿಯೂ ನನಗೆ ಗೊತ್ತಿತ್ತು. ಆದ್ದರಿಂದ ರೆಗ್ಯುಲರ್ ಪಯನೀಯರ್ ಫಾರ್ಮ್ ಭರ್ತಿ ಮಾಡಿದೆ. ಆದರೆ ನನಗಿದ್ದ ಆರೋಗ್ಯ ಸಮಸ್ಯೆಯಿಂದ ಅದಕ್ಕೆ ಸಮ್ಮತಿ ಕೊಡಲು ಹಿರಿಯರು ಹಿಂಜರಿದರು.
ಆದರೂ ನಾನು ಕುಗ್ಗಲಿಲ್ಲ. ಸುವಾರ್ತೆ ಸಾರಲು ನನ್ನಿಂದಾದಷ್ಟು ಹೆಚ್ಚು ಪ್ರಯಾಸ ಹಾಕಿದೆ. ಇತರರ ಮತ್ತು ಅಮ್ಮನ ಸಹಾಯದಿಂದ ಆರು ತಿಂಗಳು ಪಯನೀಯರ್ ತಾಸುಗಳನ್ನು ಮುಟ್ಟಿದೆ. ನನ್ನ ಹದಗೆಟ್ಟ ಆರೋಗ್ಯದ ಮಧ್ಯೆಯೂ ಪಯನೀಯರ್ ಸೇವೆಯನ್ನು ಮಾಡಕ್ಕಾಗುತ್ತೆ ಅನ್ನೊ ತೀರ್ಮಾನ ಇನ್ನಷ್ಟು ದೃಢವಾಯ್ತು. ಮತ್ತೆ ಫಾರ್ಮ್ ಭರ್ತಿ ಮಾಡಿದೆ. ಸೆಪ್ಟೆಂಬರ್ 1, 1988ರಲ್ಲಿ ರೆಗ್ಯುಲರ್ ಪಯನೀಯರ್ ಆದೆ.
ಪಯನೀಯರ್ ಆಗಿರುವುದರಿಂದ ಯೆಹೋವನ ಸಹಾಯವನ್ನು ಪ್ರತಿ ಕ್ಷಣ ಅನುಭವಿಸಿದ್ದೇನೆ. ನನ್ನ ಪರಿಸ್ಥಿತಿ ಬಗ್ಗೆನೇ ಯಾವಾಗಲೂ ಯೋಚನೆ ಮಾಡದೆ ಇತರರಿಗೆ ಸತ್ಯವನ್ನು ಕಲಿಸುವುದು ನನ್ನ ಭಾವನೆಗಳನ್ನು ಹಿಡಿತದಲ್ಲಿಡಲು ಸಹಾಯ ಮಾಡಿದೆ. ಯೆಹೋವನ ಜತೆ ಸಂಬಂಧವನ್ನು ಗಟ್ಟಿ ಮಾಡಿದೆ. ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವಂತೆ ಅನೇಕರಿಗೆ ಸಹಾಯಮಾಡಿರುವುದೇ ನನಗೆ ಮಹದಾನಂದ.
ನನ್ನ ಆರೋಗ್ಯ ಯಾವಾಗ ಏನು ಬೇಕಾದ್ರೂ ಆಗಬಹುದು. ಆದರೆ ಯೆಹೋವನು ‘ಅನುದಿನವೂ ನನ್ನ ಭಾರವನ್ನು ಹೊರುತ್ತಿದ್ದಾನೆ.’ (ಕೀರ್ತ. 68:19) ಸಮಸ್ಯೆಗಳನ್ನು ನಿಭಾಯಿಸುತ್ತಾ ಬದುಕಲು ಮಾತ್ರ ಅಲ್ಲ, ಬದುಕನ್ನು ಆನಂದಿಸಲು ಸಹಾಯಮಾಡಿದ್ದಾನೆ!