“ಈಗ ದೇವರ ಜನರಾಗಿದ್ದೀರಿ”
“ಮೊದಲು ನೀವು ಜನರಾಗಿರಲಿಲ್ಲ, ಆದರೆ ಈಗ ದೇವರ ಜನರಾಗಿದ್ದೀರಿ.” —1 ಪೇತ್ರ 2:10.
1, 2. (ಎ) ಕ್ರಿ.ಶ. 33ರ ಪಂಚಾಶತ್ತಮದಂದು ಯಾವ ಬದಲಾವಣೆ ಆಯಿತು? (ಬಿ) ಯಾರು ಯೆಹೋವನ ಹೊಸ ಜನಾಂಗದ ಭಾಗವಾದರು? (ಶೀರ್ಷಿಕೆ ಚಿತ್ರ ನೋಡಿ.)
ಕ್ರಿ.ಶ. 33ರ ಪಂಚಾಶತ್ತಮವು ಭೂಮಿ ಮೇಲಿದ್ದ ಯೆಹೋವನ ಜನರ ಇತಿಹಾಸದಲ್ಲೇ ಒಂದು ಐತಿಹಾಸಿಕ ಮೈಲಿಗಲ್ಲಾಗಿತ್ತು. ಆ ದಿನದಂದು ಒಂದು ದೊಡ್ಡ ಬದಲಾವಣೆ ನಡೆಯಿತು. ಯೆಹೋವನು ಪವಿತ್ರಾತ್ಮದ ಮೂಲಕ ಒಂದು ಹೊಸ ಜನಾಂಗವನ್ನು ಅಸ್ತಿತ್ವಕ್ಕೆ ತಂದನು. ಅದು ಆಧ್ಯಾತ್ಮಿಕ ಇಸ್ರಾಯೇಲ್ ಅಂದರೆ ‘ದೇವರ ಇಸ್ರಾಯೇಲ್’ ಆಗಿತ್ತು. (ಗಲಾ. 6:16) ಅಬ್ರಹಾಮನ ದಿನಗಳಿಂದ ಹಿಡಿದು ದೇವರ ಜನರನ್ನು ಗುರುತಿಸಲಿಕ್ಕಾಗಿ ಗಂಡುಮಕ್ಕಳಿಗೆ ಶಾರೀರಿಕ ಸುನ್ನತಿ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಅದನ್ನು ಮಾಡಬೇಕಾಗಿರಲಿಲ್ಲ. ಆ ಹೊಸ ಜನಾಂಗದ ಪ್ರತಿಯೊಬ್ಬ ಸದಸ್ಯನ “ಸುನ್ನತಿಯು . . . ಪವಿತ್ರಾತ್ಮದ ಮೂಲಕವಾದ ಹೃದಯದ ಸುನ್ನತಿಯಾಗಿದೆ” ಎಂದು ಪೌಲನು ಬರೆದನು.—ರೋಮ. 2:29.
2 ಕ್ರಿಸ್ತನ ಅಪೊಸ್ತಲರು ಮತ್ತು ನೂರಕ್ಕಿಂತಲೂ ಹೆಚ್ಚು ಮಂದಿ ಶಿಷ್ಯರು ದೇವರ ಹೊಸ ಜನಾಂಗದ ಪ್ರಥಮ ಸದಸ್ಯರಾದರು. ಅವರೆಲ್ಲರೂ ಯೆರೂಸಲೇಮಿನಲ್ಲಿ ಮೇಲಂತಸ್ತಿನ ಕೋಣೆಯೊಂದರಲ್ಲಿ ಕೂಡಿಬಂದಿದ್ದರು. (ಅ. ಕಾ. 1:12-15) ಇವರೆಲ್ಲರ ಮೇಲೆ ದೇವರು ಪವಿತ್ರಾತ್ಮ ಸುರಿಸಿದನು. ಹೀಗೆ ಅವರು ಆತನ ಆತ್ಮಜನಿತ ಪುತ್ರರಾದರು. (ರೋಮ. 8:15, 16; 2 ಕೊರಿಂ. 1:21) ಅವರ ಮೇಲೆ ಪವಿತ್ರಾತ್ಮವು ಬಂದಂಥ ಸಂಗತಿಯು ಹೊಸ ಒಡಂಬಡಿಕೆಯು ಜಾರಿಗೆ ಬಂದಿದೆಯೆಂದು ತೋರಿಸಿತು. ಈ ಒಡಂಬಡಿಕೆಗೆ ಮಧ್ಯಸ್ಥ ಕ್ರಿಸ್ತನು. ಅದನ್ನು ತನ್ನ ರಕ್ತದಿಂದ ಸ್ಥಿರೀಕರಿಸಿದ್ದನು. (ಲೂಕ 22:20; ಇಬ್ರಿಯ 9:15 ಓದಿ.) ಹೀಗೆ ಈ ಶಿಷ್ಯರು ಯೆಹೋವನ ಹೊಸ ಜನಾಂಗದ ಸದಸ್ಯರಾದರು, ಆತನ ಹೊಸ ಜನರಾದರು. ರೋಮನ್ ಸಾಮ್ರಾಜ್ಯದ ಎಲ್ಲೆಡೆಯಿಂದಲೂ ವಾರಗಳ ಹಬ್ಬ ಇಲ್ಲವೆ ಪಂಚಾಶತ್ತಮ ಹಬ್ಬ ಆಚರಿಸಲು ಯೆಹೂದ್ಯರು ಹಾಗೂ ಯೆಹೂದಿ ಮತಾವಲಂಬಿಗಳು ಯೆರೂಸಲೇಮಿಗೆ ಬಂದಿದ್ದರು. ಇವರೆಲ್ಲರ ಭಾಷೆಗಳಲ್ಲಿ “ದೇವರ ಮಹೋನ್ನತ ಕಾರ್ಯಗಳ ವಿಷಯವಾಗಿ” ಸಾರಲು ಪವಿತ್ರಾತ್ಮವು ಆತ್ಮಾಭಿಷಿಕ್ತ ಕ್ರೈಸ್ತರನ್ನು ಶಕ್ತಗೊಳಿಸಿತು. ತಮ್ಮ ಮಾತೃಭಾಷೆಗಳಲ್ಲಿ ಈ ಮಾತುಗಳನ್ನು ಕೇಳಿದ ಆ ಜನರಿಗೆ ಸುವಾರ್ತೆ ಅರ್ಥವಾಯಿತು.—ಅ. ಕಾ. 2:1-11.
ದೇವರ ಹೊಸ ಜನಾಂಗ
3-5. (ಎ) ಪಂಚಾಶತ್ತಮ ದಿನದಂದು ಪೇತ್ರನು ಯೆಹೂದ್ಯರಿಗೆ ಏನಂದನು? (ಬಿ) ಯೆಹೋವನ ಹೊಸ ಜನಾಂಗವು ಅಸ್ತಿತ್ವಕ್ಕೆ ಬಂದ ಆರಂಭದ ವರ್ಷಗಳಲ್ಲಿ ಹೇಗೆ ಬೆಳೆಯಿತು?
3 ಯೆಹೂದ್ಯರು ಹಾಗೂ ಯೆಹೂದಿ ಮತಾವಲಂಬಿಗಳು ಈ ನವಜಾತ ಜನಾಂಗವಾದ ಕ್ರೈಸ್ತ ಸಭೆಯ ಸದಸ್ಯರಾಗಸಾಧ್ಯವಿತ್ತು. ಇದಕ್ಕೆ ದಾರಿ ತೆರೆಯುವುದರಲ್ಲಿ ಮುಂದಾಳತ್ವ ವಹಿಸಲು ಯೆಹೋವನು ಅಪೊಸ್ತಲ ಪೇತ್ರನನ್ನು ಬಳಸಿದನು. ಪಂಚಾಶತ್ತಮ ದಿನದಂದು ಪೇತ್ರನು ಯೆಹೂದ್ಯರಿಗೆ ಯೇಸುವನ್ನು ಅಂಗೀಕರಿಸಬೇಕೆಂದು ಧೈರ್ಯದಿಂದ ಹೇಳಿದನು. ಏಕೆಂದರೆ ಅವರು “ಶೂಲಕ್ಕೇರಿಸಿ”ದ್ದ ಯೇಸುವನ್ನು “ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ” ಮಾಡಿದ್ದನು. ನೆರೆದಿದ್ದ ಆ ಜನರು ಈಗ ತಾವೇನು ಮಾಡಬೇಕೆಂದು ಕೇಳಿದಾಗ ಪೇತ್ರನು ಉತ್ತರಿಸಿದ್ದು: “ಪಶ್ಚಾತ್ತಾಪಪಡಿರಿ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮ ಪಾಪಗಳ ಕ್ಷಮಾಪಣೆಗಾಗಿ ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಿರಿ; ಆಗ ನೀವು ಪವಿತ್ರಾತ್ಮದ ಉಚಿತ ವರವನ್ನು ಪಡೆದುಕೊಳ್ಳುವಿರಿ.” (ಅ. ಕಾ. 2:22, 23, 36-38) ಅಂದು ಆಧ್ಯಾತ್ಮಿಕ ಇಸ್ರಾಯೇಲ್ ಎಂಬ ಈ ಹೊಸ ಜನಾಂಗಕ್ಕೆ 3,000 ಜನರು ಸೇರ್ಪಡೆಯಾದರು. (ಅ. ಕಾ. 2:41) ತದನಂತರ ಅಪೊಸ್ತಲರು ಹುರುಪಿನಿಂದ ನಡೆಸಿದ ಸಾರುವ ಕೆಲಸದಿಂದ ಇನ್ನಷ್ಟು ಫಲ ಸಿಕ್ಕಿತು. (ಅ. ಕಾ. 6:7) ಈ ಹೊಸ ಜನಾಂಗ ಬೆಳೆಯುತ್ತಾ ಬಂತು.
4 ಮುಂದೆ ಸಮಾರ್ಯದವರಿಗೂ ಸುವಾರ್ತೆ ಸಾರಲಾಯಿತು. ಇದರಿಂದ ಒಳ್ಳೇ ಫಲಿತಾಂಶ ಸಿಕ್ಕಿತು. ಸೌವಾರ್ತಿಕ ಫಿಲಿಪ್ಪನು ಸಮಾರ್ಯದವರಲ್ಲಿ ಅನೇಕರಿಗೆ ದೀಕ್ಷಾಸ್ನಾನ ಕೊಟ್ಟನು. ಆದರೆ ಅವರಿಗೆ ತಕ್ಷಣವೇ ಪವಿತ್ರಾತ್ಮ ಸಿಗಲಿಲ್ಲ. ಮತಾಂತರವಾಗಿದ್ದ ಈ ಸಮಾರ್ಯದವರ ಬಳಿ ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯು ಅಪೊಸ್ತಲರಾದ ಪೇತ್ರಯೋಹಾನರನ್ನು ಕಳುಹಿಸಿದರು. “ಅಪೊಸ್ತಲರು ಅವರ ಮೇಲೆ ಕೈಗಳನ್ನು ಇಟ್ಟಾಗ, ಅವರು ಪವಿತ್ರಾತ್ಮವನ್ನು ಪಡೆದುಕೊಂಡರು.” (ಅ. ಕಾ. 8:5, 6, 14-17) ಹೀಗೆ ಸಮಾರ್ಯದವರು ಸಹ ಆಧ್ಯಾತ್ಮಿಕ ಇಸ್ರಾಯೇಲಿನ ಆತ್ಮಾಭಿಷಿಕ್ತ ಸದಸ್ಯರಾದರು.
5 ಕ್ರಿ.ಶ. 36ರಲ್ಲಿ ಪೇತ್ರನು ರೋಮನ್ ಶತಾಧಿಪತಿಯಾದ ಕೊರ್ನೇಲ್ಯ ಮತ್ತವನ ಬಂಧುಬಳಗದವರಿಗೆ ಸಾರಿದನು. ಹೀಗೆ ಆಧ್ಯಾತ್ಮಿಕ ಇಸ್ರಾಯೇಲ್ ಎಂಬ ಹೊಸ ಜನಾಂಗಕ್ಕೆ ಇತರರು ಸೇರುವಂತೆ ಸಹಾಯಮಾಡಲು ಪೇತ್ರನನ್ನು ಪುನಃ ಬಳಸಲಾಯಿತು. (ಅ. ಕಾ. 10:22, 24, 34, 35) “ಪೇತ್ರನು . . . ಇನ್ನೂ ಮಾತಾಡುತ್ತಿರುವಾಗಲೇ ವಾಕ್ಯಕ್ಕೆ ಕಿವಿಗೊಡುತ್ತಿದ್ದವರೆಲ್ಲರ [ಯೆಹೂದ್ಯರಲ್ಲದವರ] ಮೇಲೆ ಪವಿತ್ರಾತ್ಮವು ಬಂತು. ಅನ್ಯಜನಾಂಗಗಳ ಜನರ ಮೇಲೆಯೂ ಪವಿತ್ರಾತ್ಮದ ಉಚಿತ ವರವು ಸುರಿಸಲ್ಪಟ್ಟದ್ದರಿಂದ ಪೇತ್ರನೊಂದಿಗೆ ಬಂದಿದ್ದ ಸುನ್ನತಿಯಾಗಿದ್ದ ನಂಬಿಗಸ್ತರು ಆಶ್ಚರ್ಯಪಟ್ಟರು” ಎನ್ನುತ್ತದೆ ಬೈಬಲ್. (ಅ. ಕಾ. 10:44, 45) ಹೀಗೆ ಸುನ್ನತಿಯಾಗದ ಅನ್ಯಜನಾಂಗದ ವಿಶ್ವಾಸಿಗಳಿಗೂ ಆಧ್ಯಾತ್ಮಿಕ ಇಸ್ರಾಯೇಲ್ ಎಂಬ ಹೊಸ ಜನಾಂಗಕ್ಕೆ ಸೇರಲು ಸಾಧ್ಯವಾಯಿತು.
‘ತನ್ನ ಹೆಸರಿಗಾಗಿ ಜನರು’
6, 7. (ಎ) ಹೊಸ ಜನಾಂಗದ ಸದಸ್ಯರು ಯಾವ ವಿಧಗಳಲ್ಲಿ ಯೆಹೋವನ ‘ಹೆಸರಿಗಾಗಿರುವ ಜನರಾಗಿ’ ನಡೆದುಕೊಳ್ಳಬೇಕಿತ್ತು? (ಬಿ) ಅವರದನ್ನು ಎಲ್ಲಿಯ ವರೆಗೆ ಮಾಡಿದರು?
6 ಕ್ರಿ.ಶ. 49ರಲ್ಲಿ ಪ್ರಥಮ ಶತಮಾನದ ಕ್ರೈಸ್ತರ ಆಡಳಿತ ಮಂಡಲಿಯು ನಡೆಸಿದ ಒಂದು ಕೂಟದಲ್ಲಿ ಶಿಷ್ಯ ಯಾಕೋಬನು ಹೀಗಂದನು: “ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು [ಜನರನ್ನು] ಆರಿಸಿಕೊಳ್ಳಲು ಹೇಗೆ ಮೊದಲ ಬಾರಿಗೆ ಅವರ ಕಡೆಗೆ ಗಮನಹರಿಸಿದನು ಎಂಬುದನ್ನು ಸಿಮೆಯೋನನು [ಪೇತ್ರನು] ಸ್ಪಷ್ಟವಾಗಿ ವಿವರಿಸಿದ್ದಾನೆ.” (ಅ. ಕಾ. 15:14) ಯೆಹೋವನ ಹೆಸರುಳ್ಳ ಈ ಹೊಸ ಜನಾಂಗದಲ್ಲಿ ಯೆಹೂದಿ ಹಾಗೂ ಯೆಹೂದ್ಯರಲ್ಲದ ವಿಶ್ವಾಸಿಗಳು ಇರಲಿದ್ದರು. (ರೋಮ. 11:25, 26ಎ) ತದನಂತರ ಪೇತ್ರನು ಹೀಗೆ ಬರೆದನು: “ಮೊದಲು ನೀವು ಜನರಾಗಿರಲಿಲ್ಲ, ಆದರೆ ಈಗ ದೇವರ ಜನರಾಗಿದ್ದೀರಿ.” ಅವರಿಗಿರುವ ಕೆಲಸದ ಬಗ್ಗೆ ಪೇತ್ರನು ಹೀಗಂದನು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ‘ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ’ ಆಗಿದ್ದೀರಿ.” (1 ಪೇತ್ರ 2:9, 10) ಅವರು ವಿಶ್ವದ ಪರಮಾಧಿಕಾರಿಯಾದ ಯೆಹೋವನನ್ನು ಪ್ರತಿನಿಧಿಸುತ್ತಿದ್ದರು. ಹಾಗಾಗಿ ಅವರು ಆತನನ್ನು ಬಹಿರಂಗವಾಗಿ ಸ್ತುತಿಸಬೇಕಿತ್ತು, ಆತನ ಹೆಸರನ್ನು ಮಹಿಮೆಪಡಿಸಬೇಕಿತ್ತು ಮತ್ತು ಆತನ ಧೀರ ಸಾಕ್ಷಿಗಳಾಗಿರಬೇಕಿತ್ತು.
7 ಯೆಹೋವನು ಮಾಂಸಿಕ ಇಸ್ರಾಯೇಲಿನ ಸದಸ್ಯರನ್ನು “ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನ” ಎಂದು ಕರೆದನು. ಇದು ಆಧ್ಯಾತ್ಮಿಕ ಇಸ್ರಾಯೇಲಿನ ಸದಸ್ಯರ ವಿಷಯದಲ್ಲೂ ಸತ್ಯ. (ಯೆಶಾ. 43:20) ಆರಂಭದ ಕ್ರೈಸ್ತರು ಅವರ ಕಾಲದಲ್ಲಿ ಆರಾಧಿಸಲಾಗುತ್ತಿದ್ದ ಎಲ್ಲ ಸುಳ್ಳು ದೇವರುಗಳ ಬಣ್ಣ ಬಯಲುಪಡಿಸುತ್ತಾ, ಯೆಹೋವನೇ ಸತ್ಯ ದೇವರೆಂಬ ಸಂಗತಿಯನ್ನು ಧೈರ್ಯದಿಂದ ಘೋಷಿಸಿದರು. (1 ಥೆಸ. 1:9) ಅವರು “ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ” ಯೆಹೋವ ಹಾಗೂ ಯೇಸುವಿನ ಬಗ್ಗೆ ಸಾಕ್ಷಿಕೊಟ್ಟರು.—ಅ. ಕಾ. 1:8; ಕೊಲೊ. 1:23.
8. ಅಪೊಸ್ತಲ ಪೌಲನು ಮೊದಲನೇ ಶತಮಾನದ ದೇವಜನರಿಗೆ ಯಾವ ಎಚ್ಚರಿಕೆ ಕೊಟ್ಟನು?
8 ಪ್ರಥಮ ಶತಮಾನದಲ್ಲಿ ಯೆಹೋವನ ‘ಹೆಸರಿಗಾಗಿದ್ದ ಜನರಲ್ಲಿ’ ಒಬ್ಬನಾಗಿದ್ದ ಅಪೊಸ್ತಲ ಪೌಲನು ಒಬ್ಬ ಧೀರ ಸಾಕ್ಷಿಯಾಗಿದ್ದನು. ಅವನು ವಿಧರ್ಮಿ ತತ್ತ್ವಜ್ಞಾನಿಗಳ ಮುಂದೆ ನಿಂತು ಯೆಹೋವನ ಪರಮಾಧಿಕಾರವನ್ನು ಧೈರ್ಯದಿಂದ ಸಮರ್ಥಿಸಿದನು. ಆತನೇ “ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ” ಎಂದು ಹೇಳಿದನು. (ಅ. ಕಾ. 17:18, 23-25) ತನ್ನ ಮೂರನೇ ಮಿಷನರಿ ಸಂಚಾರದ ಕೊನೆಯಷ್ಟಕ್ಕೆ ಪೌಲನು ದೇವರ ಹೆಸರಿಗಾಗಿದ್ದ ಜನರಿಗೆ ಈ ಎಚ್ಚರಿಕೆ ಕೊಟ್ಟನು: “ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ಪ್ರವೇಶಿಸುವವು ಮತ್ತು ಮಂದೆಯನ್ನು ಕೋಮಲತೆಯಿಂದ ನೋಡಿಕೊಳ್ಳುವುದಿಲ್ಲ ಎಂಬುದನ್ನು ನಾನು ಬಲ್ಲೆ; ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.” (ಅ. ಕಾ. 20:29, 30) ಮುಂತಿಳಿಸಲಾಗಿದ್ದ ಈ ಧರ್ಮಭ್ರಷ್ಟತೆಯು ಮೊದಲನೆಯ ಶತಮಾನದ ಕೊನೆಯಷ್ಟಕ್ಕೆ ಸ್ಪಷ್ಟವಾಗಿ ತೋರಿಬಂತು.—1 ಯೋಹಾ. 2:18, 19.
9. ಎಲ್ಲ ಅಪೊಸ್ತಲರ ಮರಣದ ನಂತರ ಯೆಹೋವನ ‘ಹೆಸರಿಗಾಗಿರುವ ಜನರಿಗೆ’ ಏನಾಯಿತು?
9 ಚಿಗುರೊಡೆದಿದ್ದ ಧರ್ಮಭ್ರಷ್ಟತೆ ಎಲ್ಲ ಅಪೊಸ್ತಲರ ಮರಣಾನಂತರ ಹೆಮ್ಮರವಾಗಿ ಬೆಳೆಯಿತು. ಕ್ರೈಸ್ತಪ್ರಪಂಚದ ಚರ್ಚುಗಳು ಹುಟ್ಟಿಕೊಂಡವು. ಆದರೆ ಈ ಧರ್ಮಭ್ರಷ್ಟ ಕ್ರೈಸ್ತರು ಯೆಹೋವನ ‘ಹೆಸರಿಗಾಗಿರುವ ಜನರು’ ಆಗಿರುವ ಬದಲಿಗೆ ತಮ್ಮ ಹೆಚ್ಚಿನ ಬೈಬಲ್ ಭಾಷಾಂತರಗಳಿಂದ ಆತನ ಹೆಸರನ್ನೇ ತೆಗೆದುಹಾಕಿದ್ದಾರೆ. ಅವರು ಅನ್ಯಧರ್ಮಗಳ ವಿಧಿವಿಧಾನ, ಸಂಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೈಬಲಿಗೆ ವಿರುದ್ಧವಾದ ಬೋಧನೆಗಳು, ‘ಪವಿತ್ರ ಯುದ್ಧಗಳು’ ಮತ್ತು ಅನೈತಿಕ ನಡತೆಯ ಮೂಲಕ ದೇವರ ಹೆಸರಿಗೆ ಕಳಂಕ ತಂದಿದ್ದಾರೆ. ಹಾಗಾಗಿ ಹಲವಾರು ಶತಮಾನಗಳ ವರೆಗೆ ಯೆಹೋವನಿಗೆ ತನ್ನ ಹೆಸರಿಗಾಗಿ ಸಂಘಟಿತವಾದ ಜನರು ಇರಲಿಲ್ಲ. ಭೂಮಿಯ ಮೇಲೆ ಅಲ್ಲಲ್ಲಿ ಕೆಲವೇ ಮಂದಿ ನಂಬಿಗಸ್ತ ಆರಾಧಕರು ಇದ್ದರು.
ದೇವಜನರ ಮರುಹುಟ್ಟು
10, 11. (ಎ) ಗೋದಿ ಮತ್ತು ಕಳೆಗಳ ದೃಷ್ಟಾಂತದಲ್ಲಿ ಯೇಸು ಏನನ್ನು ಮುಂತಿಳಿಸಿದನು? (ಬಿ) ಯೇಸುವಿನ ದೃಷ್ಟಾಂತ 1914ರ ನಂತರ ಹೇಗೆ ನೆರವೇರಿತು ಮತ್ತು ಫಲಿತಾಂಶವೇನಾಗಿತ್ತು?
10 ಗೋದಿ ಮತ್ತು ಕಳೆಗಳ ಕುರಿತು ಯೇಸು ಕೊಟ್ಟ ದೃಷ್ಟಾಂತದಲ್ಲಿ ಧರ್ಮಭ್ರಷ್ಟತೆಯ ಕಾರಣ ಬರುವ ಆಧ್ಯಾತ್ಮಿಕ ಅಂಧಕಾರದ ಬಗ್ಗೆ ಹೇಳಿದನು. ಮನುಷ್ಯಪುತ್ರನು ಗೋದಿಯನ್ನು ಬಿತ್ತಿರುವ ಹೊಲದಲ್ಲಿ “ಜನರು ನಿದ್ರೆಮಾಡುತ್ತಿದ್ದಾಗ” ಪಿಶಾಚನು ಕಳೆಯನ್ನು ಬಿತ್ತುವನೆಂದು ಹೇಳಿದನು. ಆದರೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ ವರೆಗೆ ಗೋದಿ ಮತ್ತು ಕಳೆ ಜೊತೆಯಾಗಿ ಬೆಳೆಯಲಿತ್ತು. “ಒಳ್ಳೆಯ ಬೀಜವೆಂದರೆ ರಾಜ್ಯದ ಪುತ್ರರು; ಕಳೆಗಳೆಂದರೆ ಕೆಡುಕನ ಪುತ್ರರು” ಎಂದು ಯೇಸು ವಿವರಿಸಿದನು. ಅಂತ್ಯದ ಸಮಯದಲ್ಲಿ ಮನುಷ್ಯಪುತ್ರನು “ಕೊಯ್ಯುವವರು” ಅಂದರೆ ದೇವದೂತರನ್ನು ಕಳುಹಿಸಿ ಸಾಂಕೇತಿಕ ಗೋದಿಯನ್ನು ಕಳೆಗಳಿಂದ ಪ್ರತ್ಯೇಕಿಸುವನು. ಹೀಗೆ ರಾಜ್ಯದ ಪುತ್ರರನ್ನು ಒಟ್ಟುಗೂಡಿಸಲಾಗುವುದು. (ಮತ್ತಾ. 13:24-30, 36-43) ಇದೆಲ್ಲ ಹೇಗೆ ನೆರವೇರಿತು? ಇದರಿಂದಾಗಿ ಯೆಹೋವನಿಗೆ ಭೂಮಿಯ ಮೇಲೆ ತನ್ನ ಹೆಸರಿಗಾಗಿ ಜನರನ್ನು ಪಡೆಯಲು ಸಾಧ್ಯವಾಯಿತು ಹೇಗೆ?
11 “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಆರಂಭವಾದದ್ದು 1914ರಲ್ಲಿ. ಆಗ ಭೂಮಿಯ ಮೇಲೆ ಬರೀ 5,000ದಷ್ಟು ಅಭಿಷಿಕ್ತ ಕ್ರೈಸ್ತರಿದ್ದರು. ಆ ವರ್ಷದಲ್ಲಿ ಆರಂಭವಾದ ಯುದ್ಧದ ಸಮಯದಲ್ಲಿ ಈ “ರಾಜ್ಯದ ಪುತ್ರರು” ಮಹಾ ಬಾಬೆಲಿನ ಆಧ್ಯಾತ್ಮಿಕ ಬಂಧಿವಾಸದಲ್ಲಿದ್ದರು. 1919ರಲ್ಲಿ ಯೆಹೋವನು ಅವರನ್ನು ಅಲ್ಲಿಂದ ಬಿಡಿಸಿದನು. ಹೀಗೆ ಅವರ ಮತ್ತು “ಕಳೆಗಳ” ಅಂದರೆ ನಕಲು ಕ್ರೈಸ್ತರ ಮಧ್ಯೆ ಇರುವ ವ್ಯತ್ಯಾಸ ಸ್ಪಷ್ಟವಾಗಿ ತೋರಿಬಂತು. ಯೆಹೋವನು “ರಾಜ್ಯದ ಪುತ್ರರನ್ನು” ಒಟ್ಟುಗೂಡಿಸಿ ಸಂಘಟಿತ ಜನರನ್ನಾಗಿ ಮಾಡಿದನು. ಇದು ಯೆಶಾಯನ ಈ ಪ್ರವಾದನೆಯ ನೆರವೇರಿಕೆಯಾಗಿತ್ತು: “ಒಂದು ದಿನದಲ್ಲಿ ರಾಷ್ಟ್ರವು ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ? ಹೌದು, ಚೀಯೋನೆಂಬಾಕೆಯು ಬೇನೆತಿಂದು ತನಗಾಗಿ ಮಕ್ಕಳನ್ನು ಹಡೆದಿದ್ದಾಳೆ.” (ಯೆಶಾ. 66:8) ದೇವದೂತರಿಂದ ಕೂಡಿದ ಯೆಹೋವನ ಸಂಘಟನೆಯಾದ ಚೀಯೋನ್ ಆತ್ಮಾಭಿಷಿಕ್ತ ಪುತ್ರರನ್ನು ಹಡೆದು ಅವರನ್ನು ಒಂದು ಜನಾಂಗವನ್ನಾಗಿ ಸಂಘಟಿಸಿದಳು.
12. ಅಭಿಷಿಕ್ತರು ತಾವು ಇಂದು ಯೆಹೋವನ ‘ಹೆಸರಿಗಾಗಿರುವ ಜನರು’ ಎಂದು ಹೇಗೆ ತೋರಿಸಿಕೊಟ್ಟಿದ್ದಾರೆ?
12 ಇಂದು “ರಾಜ್ಯದ ಪುತ್ರರಾದ” ಅಭಿಷಿಕ್ತರು ಆರಂಭದ ಕ್ರೈಸ್ತರಂತೆ ಯೆಹೋವನಿಗೆ ಸಾಕ್ಷಿಗಳಾಗಿದ್ದಾರೆ. (ಯೆಶಾಯ 43:1, 10, 11 ಓದಿ.) ತಮ್ಮ ಕ್ರೈಸ್ತ ನಡತೆ ಹಾಗೂ ‘ರಾಜ್ಯದ ಈ ಸುವಾರ್ತೆಯನ್ನು ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ’ ಸಾರುವ ಮೂಲಕ ಅವರು ಎಲ್ಲರಿಗಿಂತ ಭಿನ್ನರಾಗಿ ಎದ್ದುಕಾಣುತ್ತಾರೆ. (ಮತ್ತಾ. 24:14; ಫಿಲಿ. 2:15) ಈ ಮೂಲಕ ಅವರು ಲಕ್ಷಗಟ್ಟಲೆ ಜನರು ಸದ್ಧರ್ಮಿಗಳಾಗಲು ಅಂದರೆ ಯೆಹೋವನ ಮುಂದೆ ನೀತಿಯುತ ನಿಲುವನ್ನು ಪಡೆಯಲು ಸಹಾಯಮಾಡಿದ್ದಾರೆ.—ದಾನಿಯೇಲ 12:3 ಓದಿ.
“ನಾವು ನಿಮ್ಮೊಂದಿಗೆ ಬರುವೆವು”
13, 14. (ಎ) ಆಧ್ಯಾತ್ಮಿಕ ಇಸ್ರಾಯೇಲ್ಯರಲ್ಲದ ಜನರು ಯೆಹೋವನು ಸಮ್ಮತಿಸುವ ರೀತಿಯಲ್ಲಿ ಆತನ ಆರಾಧನೆ ಹಾಗೂ ಸೇವೆಮಾಡಲು ಏನು ಮಾಡಬೇಕು? (ಬಿ) ಇದನ್ನು ಬೈಬಲ್ ಪ್ರವಾದನೆಯಲ್ಲಿ ಹೇಗೆ ಮುಂತಿಳಿಸಲಾಗಿತ್ತು?
13 ಹಿಂದಿನ ಲೇಖನದಲ್ಲಿ ಕಲಿತಂತೆ ಪರದೇಶಿಯರು ಯೆಹೋವನನ್ನು ಆರಾಧಿಸಬಹುದಿತ್ತು. ಆದರೆ ಅವರ ಆರಾಧನೆಗೆ ಆತನ ಸಮ್ಮತಿ ಸಿಗಬೇಕಾದರೆ ಆತನ ಒಡಂಬಡಿಕೆಯ ಜನರೊಂದಿಗೆ ಸೇರಿ ಅವರು ಆರಾಧಿಸಬೇಕಿತ್ತು. (1 ಅರ. 8:41-43) ಹಾಗೆಯೇ ಇಂದು ಸಹ ಆಧ್ಯಾತ್ಮಿಕ ಇಸ್ರಾಯೇಲ್ಯರಲ್ಲದವರು “ರಾಜ್ಯದ ಪುತ್ರ”ರೊಂದಿಗೆ ಅಂದರೆ ಯೆಹೋವನ ಅಭಿಷಿಕ್ತ ಸಾಕ್ಷಿಗಳೊಂದಿಗೆ ಸೇರಿಕೊಳ್ಳಬೇಕು.
14 ಈ ಅಂತ್ಯಕಾಲದಲ್ಲಿ ಯೆಹೋವನ ಜನರೊಟ್ಟಿಗೆ ಸೇರಿ ಆತನನ್ನು ಆರಾಧಿಸಲು ಬೇರೆ ಜನರು ಹಿಂಡುಹಿಂಡಾಗಿ ಬರುವರೆಂದು ಪ್ರಾಚೀನಕಾಲದ ಇಬ್ಬರು ಪ್ರವಾದಿಗಳು ಮುಂತಿಳಿಸಿದ್ದರು. ಯೆಶಾಯನು ಪ್ರವಾದಿಸಿದ್ದು: “ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.” (ಯೆಶಾ. 2:2, 3) ಅದೇ ರೀತಿಯಲ್ಲಿ ಪ್ರವಾದಿ ಜೆಕರ್ಯನೂ ಮುಂತಿಳಿಸಿದ್ದೇನೆಂದರೆ “ಬಹು ದೇಶಗಳವರೂ ಬಲವಾದ ಜನಾಂಗಗಳವರೂ ಯೆರೂಸಲೇಮಿನಲ್ಲಿ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವದಕ್ಕೂ ಯೆಹೋವನ ಪ್ರಸನ್ನತೆಯನ್ನು ಬೇಡುವದಕ್ಕೂ ಬರುವರು.” ಆತನು ಆ ಜನರನ್ನು “ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು” ಎಂದು ಕರೆದನು. ಇವರು ಸಾಂಕೇತಿಕಾರ್ಥದಲ್ಲಿ ಆಧ್ಯಾತ್ಮಿಕ ಇಸ್ರಾಯೇಲಿನ ಉಡುಪನ್ನು ಹಿಡಿದುಕೊಂಡು “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಹೇಳುವರು.—ಜೆಕ. 8:20-23.
15. “ಬೇರೆ ಕುರಿ”ಗಳು ಆಧ್ಯಾತ್ಮಿಕ ಇಸ್ರಾಯೇಲ್ಯರಿಗೆ “ನಿಮ್ಮೊಂದಿಗೆ ಬರುವೆವು” ಎಂದು ಹೇಳುವುದು ಹೇಗೆ?
15 “ಬೇರೆ ಕುರಿ”ಗಳು ಆಧ್ಯಾತ್ಮಿಕ ಇಸ್ರಾಯೇಲ್ಯರಿಗೆ “ನಿಮ್ಮೊಂದಿಗೆ ಬರುವೆವು” ಎಂದು ಹೇಳುವ ಒಂದು ವಿಧ ಅವರೊಟ್ಟಿಗೆ ರಾಜ್ಯದ ಸುವಾರ್ತೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕವೇ. (ಮಾರ್ಕ 13:10) ಇವರು ದೇವಜನರ ಭಾಗವಾಗುತ್ತಾ “ಒಳ್ಳೆಯ ಕುರುಬ”ನಾದ ಕ್ರಿಸ್ತ ಯೇಸುವಿನ ನಾಯಕತ್ವದ ಕೆಳಗೆ ಅಭಿಷಿಕ್ತರೊಂದಿಗೆ ಸೇರಿ “ಒಂದೇ ಹಿಂಡು” ಆಗುತ್ತಾರೆ.—ಯೋಹಾನ 10:14-16 ಓದಿ.
ಯೆಹೋವನ ಜನರ ಜೊತೆಗಿದ್ದು ಸಂರಕ್ಷಣೆ ಪಡೆಯಿರಿ
16. ಯೆಹೋವನು “ಮಹಾ ಸಂಕಟದ” ಕೊನೆಯ ಹಂತವನ್ನು ಹೇಗೆ ಆರಂಭಿಸುವನು?
16 ಮಹಾ ಬಾಬೆಲಿನ ನಾಶನದ ಬಳಿಕ ಯೆಹೋವನ ಜನರ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವಾಗಲಿದೆ. ಆ ಸಮಯದಲ್ಲಿ ಆತನು ತನ್ನ ಸೇವಕರಿಗೆ ಕೊಡುವಂಥ ಸಂರಕ್ಷಣೆಯಡಿಯಲ್ಲಿ ನಾವಿರಬೇಕು. ಈ ಆಕ್ರಮಣದಿಂದಾಗಿ “ಮಹಾ ಸಂಕಟದ” ಕೊನೆಯ ಭಾಗ ಶುರುವಾಗಲಿದೆ. ಹಾಗಾಗಿ ಎಲ್ಲವನ್ನೂ ಸಜ್ಜುಗೊಳಿಸಿ ಯಾವ ಕ್ಷಣದಲ್ಲಿ ಈ ಆಕ್ರಮಣ ಆರಂಭವಾಗಬೇಕೆಂದು ನಿರ್ಣಯಿಸುವವನು ಯೆಹೋವನೇ. (ಮತ್ತಾ. 24:21; ಯೆಹೆ. 38:2-4) ಆಗ ಗೋಗನು “ಜನಾಂಗಗಳೊಳಗಿಂದ ಒಟ್ಟುಗೂಡಿರುವ” ಯೆಹೋವನ ಜನರ ಮೇಲೆ ದಾಳಿಮಾಡುವನು. (ಯೆಹೆ. 38:10-12) ಈ ಆಕ್ರಮಣವು ಯೆಹೋವನು ಗೋಗ ಮತ್ತವನ ಪಡೆಗಳ ಮೇಲೆ ತೀರ್ಪನ್ನು ಜಾರಿಗೊಳಿಸುವ ಸಮಯ ಇದೇ ಎಂದು ಸೂಚಿಸುವವು. ಯೆಹೋವನು ಖಂಡಿತವಾಗಿ ತನ್ನ ಪರಮಾಧಿಕಾರವನ್ನು ತೋರ್ಪಡಿಸಿ, ತನ್ನ ಹೆಸರನ್ನು ಪವಿತ್ರೀಕರಿಸಿ ಹೀಗನ್ನುವನು: “ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.”—ಯೆಹೆ. 38:18-23.
17, 18. (ಎ) ಗೋಗನು ಯೆಹೋವನ ಜನರ ಮೇಲೆ ಆಕ್ರಮಣ ಮಾಡುವಾಗ ಅವರಿಗೆ ಯಾವ ಸೂಚನೆಗಳು ಸಿಗಲಿವೆ? (ಬಿ) ನಮಗೆ ಯೆಹೋವನ ಸಂರಕ್ಷಣೆ ಬೇಕಾದರೆ ನಾವೇನು ಮಾಡಬೇಕು?
17 ಗೋಗನು ಆಕ್ರಮಣ ಆರಂಭಿಸುವಾಗ ಯೆಹೋವನು ತನ್ನ ಸೇವಕರಿಗೆ “ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ” ಎಂದು ಹೇಳುವನು. (ಯೆಶಾ. 26:20) ಆ ಬಹುಮುಖ್ಯವಾದ ಸಮಯದಲ್ಲಿ ಯೆಹೋವನು ನಮಗೆ ಜೀವರಕ್ಷಕ ಸೂಚನೆಗಳನ್ನು ಕೊಡುವನು. ಆ ‘ಕೋಣೆಗಳು’ ನಮ್ಮ ಸ್ಥಳೀಯ ಸಭೆಗಳಿಗೆ ಸಂಬಂಧಿಸಿರುವ ಸಾಧ್ಯತೆಯಿದೆ.
18 ಹಾಗಾದರೆ ಮಹಾ ಸಂಕಟದ ಸಮಯದಲ್ಲಿ ಯೆಹೋವನ ಸಂರಕ್ಷಣೆ ನಮಗೆ ಸಿಗಬೇಕಾದರೆ ಭೂಮಿ ಮೇಲೆ ಆತನಿಗೆ ಜನರಿದ್ದಾರೆ, ಅವರು ಸಭೆಗಳಾಗಿ ಸಂಘಟಿತರಾಗಿದ್ದಾರೆಂದು ನಾವು ಅಂಗೀಕರಿಸಬೇಕು. ನಾವು ಅವರ ಜೊತೆಗಿರುವುದನ್ನು ಮುಂದುವರಿಸಬೇಕು. ಸ್ಥಳೀಯ ಸಭೆಯೊಟ್ಟಿಗೆ ನಿಕಟವಾಗಿ ಸಹವಾಸಮಾಡಬೇಕು. ಕೀರ್ತನೆಗಾರನ ಜೊತೆಗೆ ಪೂರ್ಣ ಹೃದಯದಿಂದ ನಾವು ಹೀಗೆ ಘೋಷಿಸೋಣ: “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು. ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಪ್ರಜೆಯ [“ಜನರ,” ನೂತನ ಲೋಕ ಭಾಷಾಂತರ] ಮೇಲೆ ಇರಲಿ.”—ಕೀರ್ತ. 3:8.