ಯೆಹೋವನ ಸೇವೆಮಾಡಲು ನಿಮ್ಮ ಮಕ್ಕಳಿಗೆ ತರಬೇತಿ—ಭಾಗ 2
“ಯೇಸು ವಿವೇಕದಲ್ಲಿಯೂ ಶಾರೀರಿಕ ಬೆಳವಣಿಗೆಯಲ್ಲಿಯೂ ದೇವರ ಮತ್ತು ಮನುಷ್ಯರ ಅನುಗ್ರಹದಲ್ಲಿಯೂ ಪ್ರಗತಿಹೊಂದುತ್ತಾ ಹೋದನು.”—ಲೂಕ 2:52.
1, 2. (ಎ) ಹದಿಪ್ರಾಯದ ಮಕ್ಕಳಿರುವ ಹೆತ್ತವರಿಗೆ ಯಾವ ಚಿಂತೆ ಇದೆ? (ಬಿ) ಮಕ್ಕಳು ತಮ್ಮ ಹದಿಪ್ರಾಯದ ವರ್ಷಗಳಲ್ಲಿ ಏನು ಮಾಡಬಹುದು?
ಹೆತ್ತವರಿಗೆ ಅವರ ಮಕ್ಕಳ ದೀಕ್ಷಾಸ್ನಾನ ಆಗುವುದನ್ನು ನೋಡುವಾಗ ತುಂಬ ಖುಷಿ ಆಗುತ್ತದೆ.a (ಪಾದಟಿಪ್ಪಣಿ ನೋಡಿ.) ಬೆರನಿಸಿ ಎಂಬ ಸಹೋದರಿಯ ನಾಲ್ಕೂ ಮಕ್ಕಳಿಗೆ 14 ವರ್ಷವಾಗುವ ಮುಂಚೆಯೇ ದೀಕ್ಷಾಸ್ನಾನವಾಯಿತು. ಅವಳನ್ನುವುದು: “ನಮ್ಮ ಮಕ್ಕಳ ದೀಕ್ಷಾಸ್ನಾನವಾದಾಗ ತುಂಬ ಭಾವುಕರಾದೆವು. ಅವರು ಯೆಹೋವನ ಸೇವೆ ಮಾಡುವ ತೀರ್ಮಾನ ಮಾಡಿದ್ದು ನೋಡಿ ನಮಗೆ ತುಂಬ ಖುಷಿಯಾಯಿತು. ಆದರೆ ಹದಿಪ್ರಾಯದಲ್ಲಿದ್ದ ನಮ್ಮ ಮಕ್ಕಳು ಮುಂದೆ ಅನೇಕ ಸವಾಲುಗಳನ್ನು ಎದುರಿಸಲಿದ್ದಾರೆ ಎಂದೂ ನಮಗೆ ಗೊತ್ತಿತ್ತು.” ನಿಮ್ಮ ಮಗ/ಮಗಳು ಹದಿಪ್ರಾಯದವರಾಗಿದ್ದರೆ ಅಥವಾ ಹದಿಪ್ರಾಯದ ಹೊಸ್ತಿಲಿನಲ್ಲಿದ್ದರೆ ಖಂಡಿತ ಈ ಚಿಂತೆ ನಿಮಗೂ ಇರಬಹುದು.
2 ಮಕ್ಕಳ ಹದಿವಯಸ್ಸು ಅವರಿಗೆ ಮಾತ್ರವಲ್ಲ, ಹೆತ್ತವರಿಗೂ ಒಂದು ಸವಾಲೇ ಎನ್ನುತ್ತಾರೆ ಮಕ್ಕಳ ಮನೋವಿಜ್ಞಾನ ತಜ್ಞರೊಬ್ಬರು. ಆದರೆ ಹದಿಪ್ರಾಯದವರು ಹುಚ್ಚುಹುಚ್ಚಾಗಿ ನಡೆದುಕೊಳ್ಳುತ್ತಾರೆ, ಅವರಿಗೆ ಹುಡುಗಾಟಿಕೆ ಜಾಸ್ತಿ ಎಂದು ಹೆತ್ತವರು ನೆನಸಬಾರದು. ಹದಿಪ್ರಾಯದವರ ಯೋಚನೆಗಳಲ್ಲಿ ಹೊಸತನವಿರುತ್ತದೆ, ಅವರಿಗೆ ಗಾಢ ಭಾವನೆಗಳಿರುತ್ತವೆ ಮತ್ತು ಸ್ನೇಹಿತರೊಟ್ಟಿಗೆ ಸಮಯ ಕಳೆಯುವ ಅಗತ್ಯವು ಇರುತ್ತದೆ ಎನ್ನುತ್ತಾರೆ ಆ ತಜ್ಞರು. ಹಾಗಾಗಿ ಹದಿಪ್ರಾಯದ ಮಕ್ಕಳಿಗೆ ಯೆಹೋವನ ಜೊತೆ ಆಪ್ತ ಸ್ನೇಹಬಂಧ ಬೆಳೆಸಿಕೊಳ್ಳಲು ಆಗುತ್ತದೆ. ಯೇಸು ಕೂಡ ಯುವಪ್ರಾಯದಲ್ಲಿ ಹಾಗೇ ಮಾಡಿದನು. (ಲೂಕ 2:52 ಓದಿ.) ಹದಿಪ್ರಾಯದವರು ಸಾರುವ ಕೆಲಸಕ್ಕೆ ಸಂಬಂಧಪಟ್ಟ ಕೌಶಲಗಳನ್ನು ಕಲಿಯಬಹುದು. ದೇವರ ಸೇವೆಯಲ್ಲಿ ಇನ್ನಷ್ಟನ್ನು ಮಾಡುವ ಬಲವಾದ ಆಸೆಯನ್ನು ಬೆಳೆಸಿಕೊಳ್ಳಬಹುದು. ತಮಗಾಗಿ ಸ್ವಂತ ತೀರ್ಮಾನಗಳನ್ನು ಮಾಡಬಹುದು. ಉದಾಹರಣೆಗೆ ಯೆಹೋವನಿಗೆ ತಮ್ಮ ಜೀವನವನ್ನು ಸಮರ್ಪಿಸಿ ಆತನಿಗೆ ವಿಧೇಯರಾಗುವ ತೀರ್ಮಾನವನ್ನು ಮಾಡಲು ಅವರಿಂದಾಗುತ್ತದೆ. ಆದರೆ ಇದನ್ನು ಮಾಡಲು ಹೆತ್ತವರಾಗಿ ನೀವು ಅವರಿಗೆ ಹೇಗೆ ತರಬೇತಿ ಕೊಡಬಹುದು? ಯೇಸು ತನ್ನ ಶಿಷ್ಯರಿಗೆ ಕಲಿಸುವಾಗ ಪ್ರೀತಿ, ದೀನತೆ ಮತ್ತು ಒಳನೋಟ ತೋರಿಸಿದನು. ನೀವೂ ಇದನ್ನು ಮಾಡಬಹುದು.
ನಿಮ್ಮ ಹದಿಪ್ರಾಯದ ಮಕ್ಕಳನ್ನು ಪ್ರೀತಿಸಿ
3. ಯೇಸು ತಮ್ಮ ಸ್ನೇಹಿತನೆಂದು ಅಪೊಸ್ತಲರಿಗೆ ಹೇಗೆ ಗೊತ್ತಿತ್ತು?
3 ಯೇಸು ತನ್ನ ಅಪೊಸ್ತಲರಿಗೆ ಬರೀ ಯಜಮಾನ ಆಗಿರಲಿಲ್ಲ. ಸ್ನೇಹಿತನೂ ಆಗಿದ್ದನು. (ಯೋಹಾನ 15:15 ಓದಿ.) ಬೈಬಲ್ ಕಾಲದಲ್ಲಿ ಯಜಮಾನರು ಆಳುಗಳ ಹತ್ತಿರ ತಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಯೇಸು ತನ್ನ ಅಪೊಸ್ತಲರನ್ನು ಆಳುಗಳಂತೆ ನೋಡಲಿಲ್ಲ. ಅವರನ್ನು ಪ್ರೀತಿಸಿದನು. ಅವರೊಟ್ಟಿಗೆ ಸಮಯ ಕಳೆದನು. ಆತನ ಅಭಿಪ್ರಾಯಗಳನ್ನು, ಭಾವನೆಗಳನ್ನು ಅವರ ಜೊತೆ ಹಂಚಿಕೊಂಡನು. ಶಿಷ್ಯರು ತಮ್ಮ ಯೋಚನೆಗಳನ್ನು, ಭಾವನೆಗಳನ್ನು ವ್ಯಕ್ತಪಡಿಸಿದಾಗ ಕಿವಿಗೊಟ್ಟನು. (ಮಾರ್ಕ 6:30-32) ಇಂಥ ಮಾತುಕತೆಯಿಂದ ಯೇಸು ಮತ್ತು ಆತನ ಅಪೊಸ್ತಲರು ಆಪ್ತ ಸ್ನೇಹಿತರಾದರು. ಜೊತೆಗೆ ಇದು ಅವರನ್ನು ಭವಿಷ್ಯದ ಕೆಲಸಕ್ಕಾಗಿಯೂ ಸಿದ್ಧಪಡಿಸಿತು.
4. ಹೆತ್ತವರೇ, ನಿಮ್ಮ ಮಕ್ಕಳ ಜೊತೆ ನೀವು ಹೇಗೆ ಗೆಳೆಯರು ಆಗಿರಬಹುದು? (ಲೇಖನದ ಆರಂಭದ ಚಿತ್ರ ನೋಡಿ.)
4 ನಿಮ್ಮ ಮಕ್ಕಳ ಮೇಲೆ ನಿಮಗೆ ಅಧಿಕಾರವಿದ್ದರೂ ನೀವು ಅವರ ಸ್ನೇಹಿತರೂ ಆಗಿರಬಹುದು. ಸ್ನೇಹಿತರು ಒಟ್ಟಿಗೆ ಸಮಯ ಕಳೆಯುತ್ತಾರೆ. ನಿಮ್ಮ ಮಕ್ಕಳ ಜೊತೆ ಜಾಸ್ತಿ ಸಮಯ ಕಳೆಯಲಿಕ್ಕಾಗಿ ಬಹುಶಃ ನಿಮ್ಮ ಉದ್ಯೋಗ ಅಥವಾ ಬೇರಾವುದೇ ಕೆಲಸಕ್ಕೆ ಕೊಡುವ ಸಮಯವನ್ನು ಕಡಿಮೆ ಮಾಡಿ. ಇದರ ಬಗ್ಗೆ ಪ್ರಾರ್ಥನೆ ಮಾಡಿರಿ, ಗಂಭೀರವಾಗಿ ಯೋಚಿಸಿರಿ. ಸ್ನೇಹಿತರಿಗೆ ಕೆಲವೊಮ್ಮೆ ಒಂದೇ ರೀತಿಯ ವಿಷಯಗಳು ಇಷ್ಟವಾಗುತ್ತವೆ. ಹಾಗಾಗಿ ಹದಿಪ್ರಾಯದ ನಿಮ್ಮ ಮಕ್ಕಳಿಗೆ ಏನು ಇಷ್ಟ ಎಂದು ತಿಳಿದುಕೊಳ್ಳಿ. ಉದಾಹರಣೆಗೆ ಅವರ ಅಚ್ಚುಮೆಚ್ಚಿನ ಸಂಗೀತ, ಸಿನೆಮಾ, ಕ್ರೀಡೆ ಯಾವುದೆಂದು ತಿಳಿದುಕೊಳ್ಳಿ. ಅವರಿಗೆ ಇಷ್ಟವಿರುವುದನ್ನು ಅವರು ಆನಂದಿಸುವಾಗ ನೀವೂ ಅವರ ಜೊತೆ ಆನಂದಿಸಿ. ಇಟಲಿ ದೇಶದ ಇಲಾರಿಯ ಎಂಬ ಸಹೋದರಿ ಹೀಗನ್ನುತ್ತಾರೆ: “ನಾನು ಕೇಳುತ್ತಿದ್ದ ಸಂಗೀತದಲ್ಲಿ ಅಪ್ಪಅಮ್ಮ ಆಸಕ್ತಿ ತೋರಿಸಿದರು. ಅಪ್ಪ ನನ್ನ ಆಪ್ತ ಸ್ನೇಹಿತರಾದರು. ಸೂಕ್ಷ್ಮ ವಿಷಯಗಳ ಬಗ್ಗೆಯೂ ಅವರ ಜೊತೆ ಮುಚ್ಚುಮರೆ ಇಲ್ಲದೆ ಮಾತಾಡುತ್ತಿದ್ದೆ.” ನಿಮ್ಮ ಮಕ್ಕಳ ಸ್ನೇಹಿತರಾದಾಗ ಅವರು ಯೆಹೋವನ ಸ್ನೇಹಿತರಾಗಲು ಸಹಾಯ ಮಾಡುತ್ತೀರಿ. ಹಾಗೆಂದ ಮಾತ್ರಕ್ಕೆ ಹೆತ್ತವರಾಗಿ ನಿಮಗಿರುವ ಅಧಿಕಾರವನ್ನು ನೀವು ಕಳಕೊಳ್ಳುವುದಿಲ್ಲ. (ಕೀರ್ತ. 25:14) ನಿಮ್ಮ ಮಕ್ಕಳನ್ನು ಪ್ರೀತಿಸುವಾಗ, ಗೌರವಿಸುವಾಗ ಅವರು ನಿಮ್ಮ ಹತ್ತಿರ ಯಾವುದೇ ವಿಷಯದ ಬಗ್ಗೆ ಮಾತಾಡಲು ಹಿಂಜರಿಯುವುದಿಲ್ಲ.
5. ಸಂತೋಷದಿಂದಿರಲಿಕ್ಕಾಗಿ ಯೇಸುವಿನ ಶಿಷ್ಯರು ಯೆಹೋವನ ಕೆಲಸವನ್ನು ಹೇಗೆ ಮಾಡಬೇಕಿತ್ತು?
5 ತನ್ನ ಶಿಷ್ಯರು ಯೆಹೋವನ ಸೇವೆಯನ್ನು ಉತ್ಸಾಹದಿಂದ ಮಾಡಬೇಕು ಮತ್ತು ಸುವಾರ್ತೆ ಸಾರುವುದರಲ್ಲಿ ತಲ್ಲೀನರಾಗಿರಬೇಕೆಂದು ಯೇಸು ಬಯಸಿದನು. ಹೀಗೆ ಅವರು ನಿಜವಾಗಿಯೂ ಸಂತೋಷದಿಂದ ಇರುವರೆಂದು ಆತನಿಗೆ ಗೊತ್ತಿತ್ತು. ಹಾಗಾಗಿ ಸಾರುವ ಕೆಲಸದಲ್ಲಿ ಶ್ರಮ ಹಾಕಲು ಅವರನ್ನು ಉತ್ತೇಜಿಸಿದನು. ಅವರಿಗೆ ಸಹಾಯ ಮಾಡುತ್ತೇನೆಂದು ಮಾತು ಕೊಟ್ಟನು.—ಮತ್ತಾ. 28:19, 20.
6, 7. ಯೆಹೋವನ ಸೇವೆಯಲ್ಲಿ ಒಂದು ರೂಢಿಯನ್ನು ಪಾಲಿಸಲು ಮಕ್ಕಳಿಗೆ ಕಲಿಸುವಾಗ ಅವರ ಮೇಲಿರುವ ಪ್ರೀತಿಯನ್ನು ಹೇಗೆ ತೋರಿಸುತ್ತೀರಿ?
6 ನಿಮ್ಮ ಮಕ್ಕಳು ಯಾವಾಗಲೂ ಯೆಹೋವನಿಗೆ ಹತ್ತಿರವಿರಬೇಕೆಂದು ಬಯಸುತ್ತೀರಿ. ನೀವು ಮಕ್ಕಳಿಗೆ ತರಬೇತಿ, ಶಿಸ್ತನ್ನು ಕೊಡಬೇಕೆಂದು ಯೆಹೋವನು ಬಯಸುತ್ತಾನೆ. ಅದನ್ನು ಮಾಡಲು ನಿಮಗೆ ಅಧಿಕಾರವನ್ನು ಕೊಟ್ಟಿದ್ದಾನೆ. (ಎಫೆ. 6:4) ಹಾಗಾಗಿ ನಿಮ್ಮ ಮಕ್ಕಳಿಗೆ ಆ ತರಬೇತಿ ತಪ್ಪದೆ ಸಿಗುವಂತೆ ನೀವು ನೋಡಿಕೊಳ್ಳಬೇಕು. ಸ್ವಲ್ಪ ಯೋಚಿಸಿ, ನಿಮ್ಮ ಮಕ್ಕಳು ಶಾಲೆಗೆ ತಪ್ಪದೆ ಹೋಗುವಂತೆ ನೋಡಿಕೊಳ್ಳುತ್ತೀರಿ ತಾನೇ? ಯಾಕೆ? ಶಿಕ್ಷಣ ಮುಖ್ಯ ಅಂತ ನಿಮಗೆ ಗೊತ್ತು. ನಿಮ್ಮ ಮಕ್ಕಳು ಹೊಸಹೊಸ ವಿಷಯಗಳನ್ನು ಕಲಿಯುವುದನ್ನು ಆನಂದಿಸಬೇಕು ಎನ್ನುವುದು ನಿಮ್ಮ ಆಸೆ. ಹಾಗೇ, ಅವರು ಕೂಟಗಳನ್ನು, ಸಮ್ಮೇಳನಗಳನ್ನು, ಕುಟುಂಬ ಆರಾಧನೆಯನ್ನು ತಪ್ಪಿಸದಂತೆ ನೋಡಿಕೊಳ್ಳಿ. ಯೆಹೋವನಿಂದ ಸಿಗುವ ಆ ಶಿಕ್ಷಣವೇ ಅವರ ಜೀವ ಕಾಪಾಡಲಿದೆ. ಯೆಹೋವನ ಬಗ್ಗೆ ಕಲಿಯುವುದನ್ನು ಆನಂದಿಸಲು ಅವರಿಗೆ ಸಹಾಯ ಮಾಡಿ. ಜ್ಞಾನಿಯಾಗಿರಲು ಅಂದರೆ ನಿಜವಾಗಿ ವಿವೇಕಿಗಳಾಗಿರಲು ಆತನು ಕಲಿಸಿಕೊಡುತ್ತಾನೆಂದು ಅವರಿಗೆ ಅರ್ಥಮಾಡಿಸಿ. (ಜ್ಞಾನೋ. 24:14) ತಪ್ಪದೆ ಕ್ಷೇತ್ರ ಸೇವೆಗೆ ಹೋಗಲು ನಿಮ್ಮ ಮಕ್ಕಳಿಗೆ ತರಬೇತಿ ಕೊಡಿ. ದೇವರ ವಾಕ್ಯವನ್ನು ಇತರರಿಗೆ ಕಲಿಸುವುದನ್ನು ಆನಂದಿಸಲು ಅವರಿಗೆ ಸಹಾಯ ಮಾಡುವ ಮೂಲಕ ಯೇಸುವನ್ನು ಅನುಕರಿಸಿರಿ.
7 ಆಧ್ಯಾತ್ಮಿಕ ಚಟುವಟಿಕೆಗಳ ವಿಷಯದಲ್ಲಿ ಅಂದರೆ ಬೈಬಲ್ ಅಧ್ಯಯನ, ಕೂಟಗಳು ಮತ್ತು ಕ್ಷೇತ್ರ ಸೇವೆಯ ವಿಷಯದಲ್ಲಿ ಹೆತ್ತವರಿಗೆ ಒಳ್ಳೇ ರೂಢಿ ಇರಬೇಕು. ಇಂಥ ರೂಢಿಯನ್ನು ಪಾಲಿಸುವುದು ಹದಿಪ್ರಾಯದವರಿಗೆ ಯೆಹೋವನ ಸೇವೆ ಮಾಡಲು ಹೇಗೆ ನೆರವಾಗುತ್ತದೆ? ದಕ್ಷಿಣ ಆಫ್ರಿಕದಲ್ಲಿರುವ ಸಹೋದರಿ ಎರಿನ್ ಹೇಳುವುದು: “ನಾವು ಮಕ್ಕಳಾಗಿದ್ದಾಗ ಬೈಬಲ್ ಅಧ್ಯಯನ, ಕೂಟಗಳು, ಸೇವೆಗೆ ಹೊರಟಾಗ ‘ಹೋಗಬೇಕಲ್ಲಾ’ ಎಂದು ಎಷ್ಟೋ ಸಲ ಗೊಣಗುತ್ತಾ ಇದ್ದದ್ದು ಇದೆ. ಕೆಲವೊಮ್ಮೆ ಕುಟುಂಬ ಆರಾಧನೆ ನಡೆಯುತ್ತಿರುವಾಗ ಎದ್ದು ಹೋಗಲು ಏನಾದರೂ ನೆಪ ಕೊಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೂ ಇದೆ. ಆದರೆ ಅಪ್ಪಅಮ್ಮ ಮಾತ್ರ ಯಾವ ಕಾರಣಕ್ಕೂ ಒಪ್ಪುತ್ತಿರಲಿಲ್ಲ. ಅವರು ಕೊಟ್ಟ ಆ ತರಬೇತಿ ನನ್ನ ಆಧ್ಯಾತ್ಮಿಕ ರೂಢಿಯನ್ನು ತಪ್ಪಿಸದಿರಲು ಸಹಾಯ ಮಾಡಿದೆ. ಅಪ್ಪಿತಪ್ಪಿ ಒಂಚೂರು ಅಡಚಣೆಯಾದರೂ ಆ ರೂಢಿಯನ್ನು ಪುನಃ ಶುರು ಮಾಡಲು ತವಕದಿಂದಿರುತ್ತೇನೆ. ಇದಕ್ಕೆ ಕಾರಣ ಅಪ್ಪಅಮ್ಮ ಪಾಲಿಸುತ್ತಿದ್ದ ಕಟ್ಟುನಿಟ್ಟಿನ ರೂಢಿ. ನಾವು ಹೇಳಿದ್ದಕ್ಕೆಲ್ಲಾ ಅಪ್ಪಅಮ್ಮ ಸೈ ಅಂದಿದ್ದರೆ ಕೂಟಗಳನ್ನು ಅಥವಾ ಬೇರೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ತಪ್ಪಿಸುವುದರಲ್ಲಿ ಏನೂ ತೊಂದರೆಯಿಲ್ಲ ಎಂಬ ಭಾವನೆ ನನಗೆ ಈಗ ಇರುತ್ತಿತ್ತು.”
ದೀನರಾಗಿರಿ
8. (ಎ) ಯೇಸು ತನ್ನ ದೀನತೆಯನ್ನು ಹೇಗೆ ತೋರಿಸಿದನು? (ಬಿ) ಯೇಸುವಿನ ದೀನತೆ ಆತನ ಶಿಷ್ಯರಿಗೆ ಹೇಗೆ ಸಹಾಯಮಾಡಿತು?
8 ಯೇಸು ಪರಿಪೂರ್ಣ ವ್ಯಕ್ತಿಯಾಗಿದ್ದರೂ ದೀನನಾಗಿದ್ದನು. ತನಗೆ ಯೆಹೋವನ ಸಹಾಯ ಬೇಕೆಂದು ಶಿಷ್ಯರಿಗೆ ಹೇಳಿದನು. (ಯೋಹಾನ 5:19 ಓದಿ.) ಇದರಿಂದಾಗಿ ಅವರಿಗೆ ಯೇಸುವಿನ ಮೇಲಿದ್ದ ಗೌರವ ಕಡಿಮೆ ಆಯಿತಾ? ಇಲ್ಲ. ಆತನು ಯೆಹೋವನ ಮೇಲೆ ಎಷ್ಟು ಹೆಚ್ಚು ಹೊಂದಿಕೊಂಡನೋ ಯೇಸುವಿನ ಮೇಲೆ ಶಿಷ್ಯರಿಗಿದ್ದ ಭರವಸೆ ಅಷ್ಟು ಹೆಚ್ಚಾಯಿತು. ಮುಂದೆ ಅವರು ಆತನ ದೀನತೆಯನ್ನು ಅನುಕರಿಸಿದರು.—ಅ. ಕಾ. 3:12, 13, 16.
9. ನಿಮ್ಮ ತಪ್ಪುಗಳನ್ನು ಒಪ್ಪಿ ಕ್ಷಮೆ ಕೇಳಿದರೆ ಹದಿಪ್ರಾಯದ ನಿಮ್ಮ ಮಕ್ಕಳಿಗೆ ಹೇಗೆ ಸಹಾಯವಾಗುತ್ತದೆ?
9 ನಾವು ಯೇಸುವಿನಂತೆ ಪರಿಪೂರ್ಣರಲ್ಲ. ತಪ್ಪುಗಳನ್ನು ಮಾಡುತ್ತೇವೆ. ಹಾಗಾಗಿ ದೀನರಾಗಿರಿ. ನಿಮ್ಮಿಂದ ಮಾಡಲು ಆಗದೇ ಇರುವ ಅನೇಕ ವಿಷಯಗಳಿವೆ ಎಂದು ಅರ್ಥಮಾಡಿಕೊಳ್ಳಿ. ತಪ್ಪುಗಳನ್ನು ಮಾಡಿದಾಗ ಒಪ್ಪಿಕೊಳ್ಳಿ. (1 ಯೋಹಾ. 1:8) ಆಗ ಹದಿಪ್ರಾಯದ ನಿಮ್ಮ ಮಕ್ಕಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಕಲಿಯುತ್ತಾರೆ ಮತ್ತು ನಿಮ್ಮ ಮೇಲೆ ಅವರಿಗಿರುವ ಗೌರವ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಬಾಸ್ ಹೇಗಿದ್ದರೆ ಹೆಚ್ಚು ಗೌರವ ಕೊಡುತ್ತೀರಾ? ಅವರು ಮಾಡಿದ ತಪ್ಪನ್ನು ಒಪ್ಪಿಕೊಂಡರೆನಾ? ಅಥವಾ ತಪ್ಪನ್ನು ಮಾಡೇ ಇಲ್ಲ ಎಂದು ಹೇಳಿದರೆನಾ? ಮೂರು ಮಕ್ಕಳಿರುವ ರೋಸ್ಮೇರಿ ಹೇಳುವುದೇನೆಂದರೆ ಅವಳು ಮತ್ತು ಅವಳ ಗಂಡನಿಂದ ಏನಾದರೂ ತಪ್ಪಾದರೆ ಕೂಡಲೇ ಅದನ್ನು ಒಪ್ಪಿಕೊಳ್ಳುತ್ತಿದ್ದರು. ಅವಳು ವಿವರಿಸಿದ್ದು: “ಹಾಗಾಗಿ ನಮ್ಮ ಮಕ್ಕಳಿಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ನಮ್ಮ ಹತ್ತಿರ ಮನಬಿಚ್ಚಿ ಹೇಳಿಕೊಳ್ಳುತ್ತಿದ್ದರು. ಆ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಎಲ್ಲಿ ಸಿಗುತ್ತದೆಂದು ನಮ್ಮ ಮಕ್ಕಳಿಗೆ ಕಲಿಸಿಕೊಟ್ಟೆವು. ಅವರಿಗೆ ಸಹಾಯ ಬೇಕಿದ್ದಾಗಲೆಲ್ಲಾ ನಾವು ಯಾವಾಗಲೂ ಬೈಬಲ್ ಆಧಾರಿತ ಸಾಹಿತ್ಯಗಳಿಂದ ಅದನ್ನು ಕೊಡುತ್ತಿದ್ದೆವು. ಒಟ್ಟಿಗೆ ಪ್ರಾರ್ಥನೆ ಮಾಡುತ್ತಿದ್ದೆವು.”
10. ತನ್ನ ಶಿಷ್ಯರು ಏನು ಮಾಡಬೇಕೆಂದು ಹೇಳುವಾಗಲೂ ಯೇಸು ಹೇಗೆ ದೀನತೆ ತೋರಿಸಿದನು?
10 ತನ್ನ ಶಿಷ್ಯರು ಏನು ಮಾಡಬೇಕೆಂದು ಹೇಳುವ ಅಧಿಕಾರ ಯೇಸುವಿಗಿತ್ತು. ಆದರೆ ಆತನು ದೀನನಾಗಿದ್ದರಿಂದ ಅದನ್ನು ಯಾಕೆ ಮಾಡಬೇಕೆಂದೂ ವಿವರಿಸಿದನು. ಉದಾಹರಣೆಗೆ, ಶಿಷ್ಯರಿಗೆ ‘ಮೊದಲು ರಾಜ್ಯವನ್ನು ಮತ್ತು ದೇವರ ನೀತಿಯನ್ನು ಹುಡುಕುತ್ತಾ ಇರಿ’ ಎಂದು ಮಾತ್ರ ಹೇಳಲಿಲ್ಲ. ಹೀಗೂ ಅಂದನು: “ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.” ತೀರ್ಪು ಮಾಡುವುದನ್ನು ನಿಲ್ಲಿಸು ಎಂದು ಹೇಳಿದಾಗ ಯಾಕೆಂದು ಈ ಕಾರಣ ಕೊಟ್ಟನು: “ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುತ್ತಿರುವ ತೀರ್ಪಿನಿಂದಲೇ ನಿಮಗೂ ತೀರ್ಪಾಗುವುದು.”—ಮತ್ತಾ. 6:31–7:2.
11. ನೀವು ಮಾಡಿರುವ ಒಂದು ನಿರ್ಣಯ ಅಥವಾ ನಿಯಮಕ್ಕೆ ಕಾರಣಗಳೇನೆಂದು ಹದಿಪ್ರಾಯದ ನಿಮ್ಮ ಮಕ್ಕಳಿಗೆ ವಿವರಿಸುವುದು ಯಾಕೆ ವಿವೇಕಯುತ?
11 ನೀವು ಮಾಡಿರುವ ಒಂದು ನಿರ್ಣಯ ಅಥವಾ ನಿಯಮಕ್ಕೆ ಕಾರಣಗಳೇನೆಂದು ಸೂಕ್ತವಾಗಿರುವಾಗ ಹದಿಪ್ರಾಯದ ನಿಮ್ಮ ಮಕ್ಕಳಿಗೆ ವಿವರಿಸಿ. ಅವರಿಗದು ಅರ್ಥವಾದಾಗ ಅದಕ್ಕೆ ಮನಃಪೂರ್ವಕವಾಗಿ ವಿಧೇಯರಾಗುತ್ತಾರೆ. ನಾಲ್ಕು ಮಕ್ಕಳನ್ನು ಬೆಳೆಸಿದ ಬ್ಯಾರಿ ಎಂಬವರು ಹೀಗನ್ನುತ್ತಾರೆ: “ನಿಮ್ಮ ಮಾತಿಗೆ ಕಾರಣಗಳನ್ನು ಕೊಟ್ಟರೆ ಹದಿಪ್ರಾಯದ ನಿಮ್ಮ ಮಕ್ಕಳು ನಿಮ್ಮ ಮೇಲೆ ನಂಬಿಕೆ ಇಡುತ್ತಾರೆ.” ನೀವೊಂದು ನಿರ್ಣಯ ಅಥವಾ ನಿಯಮ ಮಾಡಿರುವುದು ನಿಮ್ಮ ಅಧಿಕಾರ ತೋರಿಸಲಿಕ್ಕಲ್ಲ, ಹಾಗೆ ಮಾಡಲು ಒಳ್ಳೇ ಕಾರಣ ಇರುವುದರಿಂದಲೇ ಎಂದು ನಿಮ್ಮ ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ. ಹದಿಪ್ರಾಯದವರು ಚಿಕ್ಕ ಮಕ್ಕಳಲ್ಲವೆಂದು ನೆನಪಿಡಿ. ಏನು ಮಾಡಬೇಕೆಂದು ಅವರೇ ಯೋಚಿಸಲು ಕಲಿಯುತ್ತಿರುವ ಅಥವಾ ‘ವಿವೇಚನಾಶಕ್ತಿಯನ್ನು’ ಬೆಳೆಸಿಕೊಳ್ಳುವ ವಯಸ್ಸು ಇದು. (ರೋಮ. 12:1) ಹಾಗಾಗಿ ಅವರು ಸ್ವಂತ ನಿರ್ಣಯಗಳನ್ನು ಮಾಡಲು ಬಯಸುತ್ತಾರೆ. ಬ್ಯಾರಿ ವಿವರಿಸುವುದು: “ಹದಿಪ್ರಾಯದವರು ಭಾವನೆಗಳ ಸುಳಿಯಲ್ಲಿ ಸಿಕ್ಕಿಕೊಂಡು ಅಲ್ಲ, ಬದಲಾಗಿ ಸರಿಯಾಗಿ ಯೋಚಿಸಿ ವಿವೇಕಯುತ ನಿರ್ಣಯ ಮಾಡಲು ಕಲಿಯಬೇಕು.” (ಕೀರ್ತ. 119:34) ಹಾಗಾಗಿ ದೀನರಾಗಿರಿ. ನೀವೊಂದು ನಿರ್ಣಯವನ್ನು ಏಕೆ ಮಾಡಿದ್ದೀರೆಂದು ವಿವರಿಸಿ. ಇದು ಅವರಿಗೆ ಸ್ವಂತ ನಿರ್ಣಯಗಳನ್ನು ಮಾಡುವುದು ಹೇಗೆಂದು ಕಲಿಸಿಕೊಡುತ್ತದೆ. ನೀವು ಅವರನ್ನು ಗೌರವಿಸುತ್ತೀರೆಂದು ಅವರಿಗೆ ಗೊತ್ತಾಗುತ್ತದೆ. ಅವರು ದೊಡ್ಡವರಾಗುತ್ತಿರುವುದನ್ನು ನೀವು ಅರ್ಥಮಾಡಿಕೊಳ್ಳುತ್ತಿದ್ದೀರಿ ಎಂದವರಿಗೆ ಗೊತ್ತಾಗುತ್ತದೆ.
ಒಳನೋಟ ಬಳಸಿ
12. ಯೇಸು ಹೇಗೆ ಒಳನೋಟ ಬಳಸಿ ಪೇತ್ರನಿಗೆ ಸಹಾಯಮಾಡಿದನು?
12 ಯೇಸುವಿಗೆ ಒಳನೋಟವಿತ್ತು. ತನ್ನ ಶಿಷ್ಯರಿಗೆ ಯಾವ ಸಹಾಯ ಬೇಕೆಂದು ಆತನಿಗೆ ಅರ್ಥವಾಯಿತು. ಉದಾಹರಣೆಗೆ, ಒಮ್ಮೆ ಯೇಸು ತನ್ನ ಮರಣದ ಬಗ್ಗೆ ಶಿಷ್ಯರಿಗೆ ಹೇಳುತ್ತಿದ್ದಾಗ ಪೇತ್ರನು “ನಿನಗೆ ದಯೆತೋರಿಸಿಕೋ” ಎಂದು ಹೇಳಿದನು. ಪೇತ್ರನು ತನ್ನನ್ನು ಪ್ರೀತಿಸುತ್ತಾನೆಂದು ಗೊತ್ತಿದ್ದರೂ ಅವನ ತರ್ಕ ತಪ್ಪಾಗಿತ್ತೆಂದು ಯೇಸುವಿಗೆ ಗೊತ್ತಿತ್ತು. ಪೇತ್ರ ಮತ್ತು ಇತರ ಶಿಷ್ಯರಿಗೆ ಯೇಸು ಹೇಗೆ ಸಹಾಯಮಾಡಿದನು? ಮೊದಲು ಆತನು ಪೇತ್ರನನ್ನು ತಿದ್ದಿದನು. ನಂತರ, ಯೆಹೋವನ ಚಿತ್ತವನ್ನು ಮಾಡುವುದು ಕಷ್ಟವೆನಿಸುವಾಗ ಅದನ್ನು ಮಾಡಲು ನಿರಾಕರಿಸುವವರಿಗೆ ಏನಾಗುತ್ತದೆಂದು ವಿವರಿಸಿದನು. ತಮ್ಮ ಸ್ವಾರ್ಥ ನೋಡದವರಿಗೆ ಯೆಹೋವನು ಬಹುಮಾನ ಕೊಡುತ್ತಾನೆಂದೂ ಯೇಸು ಹೇಳಿದನು. (ಮತ್ತಾ. 16:21-27) ಹೀಗೆ ಪೇತ್ರನು ಪಾಠ ಕಲಿತನು.—1 ಪೇತ್ರ 2:20, 21.
13, 14. (ಎ) ಹದಿಪ್ರಾಯದ ನಿಮ್ಮ ಮಕ್ಕಳ ನಂಬಿಕೆಯನ್ನು ಬಲಗೊಳಿಸಬೇಕೆಂದು ಹೇಗೆ ಗೊತ್ತಾಗುತ್ತದೆ? (ಬಿ) ನಿಮ್ಮ ಮಗ/ಮಗಳಿಗೆ ನಿಜವಾಗಿಯೂ ಯಾವ ಸಹಾಯ ಬೇಕೆಂದು ಹೇಗೆ ಕಂಡುಹಿಡಿಯಬಹುದು?
13 ಹದಿಪ್ರಾಯದ ನಿಮ್ಮ ಮಕ್ಕಳ ಅಗತ್ಯಗಳೇನೆಂದು ಅರ್ಥಮಾಡಿಕೊಳ್ಳಲು ಒಳನೋಟ ಕೊಡುವಂತೆ ಯೆಹೋವನಿಗೆ ಪ್ರಾರ್ಥನೆ ಮಾಡಿ. (ಕೀರ್ತ. 32:8) ನಿಮ್ಮ ಮಗ/ಮಗಳು ಮುಂಚಿನಷ್ಟು ಸಂತೋಷದಿಂದ ಇಲ್ಲ ಎಂದು ನೀವು ಗಮನಿಸಿರಬಹುದು. ಅಥವಾ ಸಹೋದರರ ಬಗ್ಗೆ ನಕಾರಾತ್ಮಕವಾಗಿ ಮಾತಾಡುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಅಥವಾ ಅವರು ನಿಮ್ಮಿಂದ ಏನೋ ಮುಚ್ಚಿಡುತ್ತಿದ್ದಾರೆಂದು ನಿಮಗನಿಸಬಹುದು. ಹಾಗಂತ ಅವರು ಗುಟ್ಟಾಗಿ ಏನೋ ತಪ್ಪು ಮಾಡುತ್ತಿದ್ದಾರೆಂದು ತಕ್ಷಣ ನೆನಸಬೇಡಿ.b (ಪಾದಟಿಪ್ಪಣಿ ನೋಡಿ.) ಅದೇ ಸಮಯದಲ್ಲಿ ಏನು ಸಮಸ್ಯೆ ಇಲ್ಲ ಅಥವಾ ಸಮಸ್ಯೆ ಎಲ್ಲಾ ತನ್ನಿಂದತಾನೇ ಸರಿಹೋಗುತ್ತದೆಂದು ನೆನಸಿ ಅಲಕ್ಷಿಸಲೂಬೇಡಿ. ಅವರ ನಂಬಿಕೆಯನ್ನು ಬಲಗೊಳಿಸಲು ಅವರಿಗೆ ಸಹಾಯ ಮಾಡಿ.
14 ಹದಿಪ್ರಾಯದ ನಿಮ್ಮ ಮಕ್ಕಳಿಗೆ ಸಹಾಯ ಮಾಡುವುದು ಹೇಗೆಂದು ತಿಳಿಯಲು ದಯೆಯಿಂದ ಮತ್ತು ಗೌರವದಿಂದ ಅವರಿಗೆ ಪ್ರಶ್ನೆಗಳನ್ನು ಕೇಳಿ. ಅದು ಬಾವಿಯಿಂದ ನೀರು ಸೇದಿದ ಹಾಗೆ. ಬೇಗಬೇಗ ಸೇದಿದರೆ ನಿಮಗೆ ಬೇಕಾಗಿರುವಷ್ಟು ನೀರು ಸಿಗುವುದಿಲ್ಲ. ಹಾಗೆಯೇ, ನೀವು ಪ್ರಶ್ನೆಗಳನ್ನು ಕೇಳಿದಾಗ ತಾಳ್ಮೆಗೆಟ್ಟರೆ ಅಥವಾ ನಿಮ್ಮ ಮಗ/ಮಗಳಿಗೆ ಮಾತಾಡಲು ಬಲವಂತ ಮಾಡಿದರೆ ಅವರಿಗೆ ನಿಜವಾಗಲೂ ಹೇಗನಿಸುತ್ತದೆ, ಅವರ ಮನಸ್ಸಿನಲ್ಲಿ ಏನಿದೆಯೆಂದು ನಿಮಗೆ ಕಂಡುಹಿಡಿಯಲು ಆಗುವುದೇ ಇಲ್ಲ. (ಜ್ಞಾನೋಕ್ತಿ 20:5 ಓದಿ.) ಈ ಮುಂಚೆ ತಿಳಿಸಲಾದ ಇಲಾರಿಯ ಹೇಳುವುದೇನೆಂದರೆ ಹದಿಪ್ರಾಯದಲ್ಲಿ ಅವರಿಗೆ ಸಹಪಾಠಿಗಳ ಜೊತೆ ಸಮಯ ಕಳೆಯಲು ತುಂಬ ಮನಸ್ಸಿದ್ದರೂ ಹಾಗೆ ಮಾಡುವುದು ತಪ್ಪೆಂದು ಅವರಿಗೆ ಗೊತ್ತಿತ್ತು. ಅವರಿಗೆ ಯಾವುದೋ ಚಿಂತೆ ಕಾಡುತ್ತಿದೆಯೆಂದು ಅವರ ಹೆತ್ತವರಿಗೆ ತಿಳಿದುಬಂತು. ಇಲಾರಿಯ ಹೀಗನ್ನುತ್ತಾರೆ: “ಒಂದು ದಿನ ಸಾಯಂಕಾಲ ಅವರು ನನಗೆ ‘ನಿನ್ನನ್ನು ನೋಡಿದರೆ ಯಾಕೊ ಬೇಜಾರಾಗಿದ್ದೀ ಅಂತ ತೋರುತ್ತದೆ, ಏನಾಯ್ತು?’ ಎಂದು ಕೇಳಿದರು. ಅಷ್ಟೆ. ನನಗೆ ಅಳು ತಡೆಯಲಿಕ್ಕೇ ಆಗಲಿಲ್ಲ. ಯಾಕೆ ನನಗೆ ಬೇಜಾರಾಗಿತ್ತೆಂದು ವಿವರಿಸಿದೆ. ಸಹಾಯಕ್ಕಾಗಿ ಕೇಳಿದೆ. ಅವರು ನನ್ನನ್ನು ಅಪ್ಪಿಕೊಂಡು ನನ್ನ ಪರಿಸ್ಥಿತಿ ಅವರಿಗೆ ಅರ್ಥವಾಗುತ್ತದೆಂದು ಹೇಳಿ ಸಹಾಯ ಮಾಡುವುದಾಗಿ ಮಾತು ಕೊಟ್ಟರು.” ಇಲಾರಿಯರವರ ಹೆತ್ತವರು ಅವರಿಗೆ ಸಭೆಯಲ್ಲಿ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಲು ತಕ್ಷಣ ಸಹಾಯ ಮಾಡಲಾರಂಭಿಸಿದರು.
15. ಯೇಸು ತನಗಿದ್ದ ಒಳನೋಟವನ್ನು ತೋರಿಸಿದ ಇನ್ನೊಂದು ವಿಧ ಯಾವುದು?
15 ತನ್ನ ಶಿಷ್ಯರಲ್ಲಿರುವ ಒಳ್ಳೇ ಗುಣಗಳಿಗೆ ಗಮನಕೊಡುವ ಮೂಲಕವೂ ಯೇಸು ಒಳನೋಟ ಬಳಸಿದನು. ಉದಾಹರಣೆಗೆ, ಯೇಸು ನಜರೇತಿನವನೆಂದು ನತಾನಯೇಲನಿಗೆ ಗೊತ್ತಾದಾಗ “ನಜರೇತಿನಿಂದ ಏನಾದರೂ ಒಳ್ಳೆಯದು ಬರಸಾಧ್ಯವಿದೆಯೊ?” ಎಂದವನು ಕೇಳಿದನು. (ಯೋಹಾ. 1:46) ಒಂದುವೇಳೆ ನೀವಲ್ಲಿರುತ್ತಿದ್ದರೆ ನತಾನಯೇಲನ ಬಗ್ಗೆ ‘ಇವನು ನಕಾರಾತ್ಮಕವಾಗಿ ಯೋಚಿಸುವವನು, ಪೂರ್ವಗ್ರಹ ಇರುವವನು, ನಂಬಿಕೆ ಇಲ್ಲದವನು’ ಎಂದು ನೆನಸುತ್ತಿದ್ದರಾ? ಆದರೆ ಯೇಸು ಹಾಗೆಲ್ಲಾ ಯೋಚಿಸಲಿಲ್ಲ. ಅವನಿಗೆ ಒಳನೋಟವಿತ್ತು ಮತ್ತು ನತಾನಯೇಲನು ಪ್ರಾಮಾಣಿಕನು ಎಂದು ಗೊತ್ತಿತ್ತು. ಹಾಗಾಗಿ “ಇವನು ನಿಶ್ಚಯವಾಗಿಯೂ ಒಬ್ಬ ಇಸ್ರಾಯೇಲ್ಯನು; ಇವನಲ್ಲಿ ಯಾವ ವಂಚನೆಯೂ ಇಲ್ಲ” ಎಂದನು ಯೇಸು. (ಯೋಹಾ. 1:47) ಜನರ ಮನಸ್ಸಲ್ಲಿ ಏನಿದೆಯೆಂದು ತಿಳಿಯಲು ಯೇಸು ಶಕ್ತನಾಗಿದ್ದನು. ಆ ಸಾಮರ್ಥ್ಯವನ್ನು ಜನರಲ್ಲಿರುವ ಒಳ್ಳೇ ಗುಣಗಳನ್ನು ನೋಡಲು ಬಳಸಿದನು.
16. ಹದಿಪ್ರಾಯದ ನಿಮ್ಮ ಮಕ್ಕಳು ಸುಧಾರಣೆ ಮಾಡುವಂತೆ ನೀವು ಹೇಗೆ ಪ್ರೋತ್ಸಾಹ ಕೊಡಬಹುದು?
16 ಯೇಸುವಿನಂತೆ ನಿಮಗೆ ಜನರ ಮನಸ್ಸಲ್ಲಿ ಏನಿದೆಯೆಂದು ತಿಳಿಯಲು ಸಾಧ್ಯವಿಲ್ಲ ನಿಜ. ಆದರೆ ನೀವು ಒಳನೋಟ ಬಳಸಬಹುದು. ಹದಿಪ್ರಾಯದ ನಿಮ್ಮ ಮಕ್ಕಳ ಒಳ್ಳೇ ಗುಣಗಳನ್ನು ನೋಡಲು ಯೆಹೋವನು ನಿಮಗೆ ಸಹಾಯ ಮಾಡುತ್ತಾನೆ. ನಿಮ್ಮ ಮಗ ಅಥವಾ ಮಗಳಿಂದಾಗಿ ನಿಮ್ಮ ಮನಸ್ಸಿಗೆ ಬೇಜಾರಾದರೂ ಅವರು ಕೆಟ್ಟವರು ಅಥವಾ ‘ಯಾವಾಗಲೂ ಏನಾದರೂ ಒಂದು ಸಮಸ್ಯೆ ಮಾಡುವವರು’ ಎಂದು ಯಾವತ್ತೂ ಹೇಳಬೇಡಿ. ಹಾಗೆ ಯೋಚಿಸಲೂ ಬೇಡಿ. ಬದಲಿಗೆ ಅವರಲ್ಲಿ ಒಳ್ಳೇ ಗುಣಗಳು ಇರುವುದನ್ನು ನೋಡಿದ್ದೀರೆಂದು ಮತ್ತು ಸರಿಯಾದದ್ದನ್ನು ಮಾಡಲು ಅವರಿಗೆ ಮನಸ್ಸಿದೆ ಎಂಬ ವಿಷಯ ನಿಮಗೆ ಗೊತ್ತೆಂದು ಹೇಳಿ. ಅವರೇನಾದರೂ ಸುಧಾರಣೆ ಮಾಡಿರುವಲ್ಲಿ ಅದನ್ನು ಗಮನಿಸಿ ಶಭಾಷ್ ಹೇಳಿ. ಸಾಧ್ಯವಿರುವಾಗೆಲ್ಲಾ ಅವರಿಗೆ ಹೆಚ್ಚು ಜವಾಬ್ದಾರಿಗಳನ್ನು ಕೊಟ್ಟು ಇನ್ನಷ್ಟು ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡಿ. ಯೇಸು ತನ್ನ ಶಿಷ್ಯರೊಟ್ಟಿಗೂ ಇದನ್ನೇ ಮಾಡಿದನು. ನತಾನಯೇಲನನ್ನು (ಇವನೇ ಬಾರ್ತೊಲೊಮಾಯ) ಭೇಟಿಯಾಗಿ ಒಂದೂವರೆ ವರ್ಷದ ನಂತರ ಯೇಸು ಅವನಿಗೆ ಒಂದು ಮುಖ್ಯ ಜವಾಬ್ದಾರಿ ಕೊಟ್ಟನು. ನತಾನಯೇಲನನ್ನು ತನ್ನ ಅಪೊಸ್ತಲನಾಗಿ ಮಾಡಿದನು. ಯೇಸು ಕೊಟ್ಟ ಕೆಲಸವನ್ನು ಅವನು ನಂಬಿಗಸ್ತಿಕೆಯಿಂದ ಮಾಡಿದನು. (ಲೂಕ 6:13, 14; ಅ. ಕಾ. 1:13, 14) ಹದಿವಯಸ್ಸಿನ ನಿಮ್ಮ ಮಕ್ಕಳಲ್ಲಿ ‘ನೀನು ಯಾವುದಕ್ಕೂ ಲಾಯಕ್ಕಿಲ್ಲ’ ಎಂಬ ಭಾವನೆ ಹುಟ್ಟಿಸುವ ಬದಲು ಅವರನ್ನು ಶ್ಲಾಘಿಸಿರಿ, ಪ್ರೋತ್ಸಾಹಿಸಿರಿ. ನಿಮ್ಮನ್ನು ಸಂತೋಷಪಡಿಸಲು ಅವರಿಂದ ಸಾಧ್ಯ ಮತ್ತು ತಮ್ಮ ಸಾಮರ್ಥ್ಯಗಳನ್ನು ಯೆಹೋವನ ಸೇವೆಯಲ್ಲಿ ಬಳಸಿ ಆತನನ್ನು ಸಂತೋಷಪಡಿಸಲು ಸಾಧ್ಯ ಎಂಬ ಭಾವನೆ ಅವರಲ್ಲಿ ಹುಟ್ಟಿಸಿ.
ನಿಮ್ಮ ಮಕ್ಕಳಿಗೆ ತರಬೇತಿ ಕೊಟ್ಟರೆ ನಿಮಗೆ ತುಂಬ ಖುಷಿ ಸಿಗುತ್ತದೆ
17, 18. ಹದಿಪ್ರಾಯದ ನಿಮ್ಮ ಮಕ್ಕಳಿಗೆ ಯೆಹೋವನ ಸೇವೆ ಮಾಡಲು ತರಬೇತಿ ಕೊಡುತ್ತಾ ಇದ್ದರೆ ಫಲಿತಾಂಶ ಏನಾಗಿರುತ್ತದೆ?
17 ಅಪೊಸ್ತಲ ಪೌಲನು ಯಾರಿಗೆ ಯೆಹೋವನ ಬಗ್ಗೆ ಕಲಿಯಲು ಸಹಾಯ ಮಾಡಿದನೋ ಅವರನ್ನು ತುಂಬ ಪ್ರೀತಿಸಿದನು. ತನ್ನ ಮಕ್ಕಳಂತಿದ್ದ ಇವರ ಬಗ್ಗೆ ಆತನಿಗೆ ತುಂಬ ಚಿಂತೆ ಇತ್ತು. ಅವರಲ್ಲಿ ಕೆಲವರು ಯೆಹೋವನ ಸೇವೆ ಮಾಡುವುದನ್ನು ಮುಂದುವರಿಸಲಿಕ್ಕಿಲ್ಲ ಎಂಬ ಯೋಚನೆಯೇ ಅವನ ಮನಸ್ಸಿಗೆ ತುಂಬ ನೋವು ತರುತ್ತಿತ್ತು. (1 ಕೊರಿಂ. 4:15; 2 ಕೊರಿಂ. 2:4) ಅಪೊಸ್ತಲ ಪೌಲನಿಗೆ ಅನಿಸಿದ ಹಾಗೆ ನಿಮಗೂ ಅನಿಸಬಹುದು. ಮೂರು ಮಂದಿ ಮಕ್ಕಳನ್ನು ಬೆಳೆಸಿದ ವಿಕ್ಟರ್ ಹೀಗನ್ನುತ್ತಾರೆ: “ನನ್ನ ಮಕ್ಕಳ ಹದಿಪ್ರಾಯದ ವರ್ಷಗಳು ಅಷ್ಟು ಸುಲಭವಾಗಿರಲಿಲ್ಲ. ಹಾಗಿದ್ದರೂ ನಾವು ಎದುರಿಸಿದ ಸವಾಲುಗಳಿಗಿಂತ ಸಂತೋಷದ ಸಮಯಗಳೇ ಹೆಚ್ಚಿದ್ದವು. ಯೆಹೋವನ ಸಹಾಯದಿಂದಾಗಿ ನಮ್ಮ ಮಕ್ಕಳೊಟ್ಟಿಗೆ ನಮಗೆ ಆಪ್ತ ಸ್ನೇಹಬಂಧವಿತ್ತು.”
18 ಹೆತ್ತವರೇ, ನಿಮ್ಮ ಮಕ್ಕಳ ಮೇಲೆ ನಿಮಗೆ ತುಂಬ ಪ್ರೀತಿ ಇರುವುದರಿಂದ ಅವರಿಗೆ ತರಬೇತಿ ಕೊಡಲು ತುಂಬ ಶ್ರಮಹಾಕುತ್ತೀರಿ. ಯಾವುದೇ ಕಾರಣಕ್ಕೂ ಬಿಟ್ಟು ಕೊಡಬೇಡಿ. ನೀವು ಕೊಟ್ಟ ತರಬೇತಿಯಿಂದಾಗಿ ನಿಮ್ಮ ಮಕ್ಕಳು ಯೆಹೋವನ ಸೇವೆ ಮಾಡುವ ನಿರ್ಣಯ ಮಾಡಿ ನಂಬಿಗಸ್ತಿಕೆಯಿಂದ ಅದನ್ನು ಮುಂದುವರಿಸುವರು. ಆಗ ನಿಮಗೆಷ್ಟು ಖುಷಿಯಾಗಲಿದೆಯೆಂದು ಸ್ವಲ್ಪ ಯೋಚಿಸಿ!—3 ಯೋಹಾ. 4.
a ಈ ಲೇಖನ 13ರಿಂದ 19 ವರ್ಷದ ಮಕ್ಕಳಿರುವ ಹೆತ್ತವರಿಗೆ ಸಹಾಯಮಾಡುತ್ತದೆ.
b ಕಾವಲಿನಬುರುಜು ಸೆಪ್ಟೆಂಬರ್ 1, 2007 ಪುಟ 29, ಪ್ಯಾರ 12 ಮತ್ತು ಯುವಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಸಂಪುಟ 2, ಪುಟ 136-141 ಓದಿದರೆ ಹೆತ್ತವರಿಗೆ ಸಹಾಯವಾಗಬಹುದು.