ಮುಖಪುಟ ಲೇಖನ | ಜೀವನ ಮತ್ತು ಮರಣ ಇದರ ಬಗ್ಗೆ ಬೈಬಲಿನ ದೃಷ್ಟಿಕೋನ
ಸಾವು-ಬದುಕಿನ ಬಗ್ಗೆ ಬೈಬಲ್ ಏನು ಹೇಳುತ್ತದೆ?
ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ಸೃಷ್ಟಿಯ ಬಗ್ಗೆ ತಿಳಿಸಲಾಗಿದೆ. ಮೊದಲನೇ ಮಾನವನಾದ ಆದಾಮನಿಗೆ ದೇವರು, “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ” ಎಂದು ಹೇಳಿದನು. (ಆದಿಕಾಂಡ 2:16, 17) ಈ ಮಾತುಗಳಿಂದ ನಮಗೆ ಏನು ಗೊತ್ತಾಗುತ್ತೆ? ದೇವರ ಮಾತನ್ನು ಕೇಳಿದ್ದರೆ ಆದಾಮ ಸಾಯುತ್ತಿರಲಿಲ್ಲ, ಏದೆನ್ ತೋಟದಲ್ಲಿ ಸದಾಕಾಲ ಬದುಕಿರುತ್ತಿದ್ದ.
ಆದರೆ ಅವನು ದೇವರ ಮಾತನ್ನು ಕೇಳಲಿಲ್ಲ. ದೇವರು, ತಿನ್ನಬಾರದು ಅಂತ ಹೇಳಿದ್ದ ಹಣ್ಣನ್ನು ತನ್ನ ಹೆಂಡತಿ ಹವ್ವ ಕೊಟ್ಟಾಗ ತಿಂದುಬಿಟ್ಟ. (ಆದಿಕಾಂಡ 3:1-6) ಅವನು ಮಾಡಿದ ತಪ್ಪಿನ ಪರಿಣಾಮಗಳನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ಅದಕ್ಕಾಗಿಯೇ ಬೈಬಲ್ ಬರಹಗಾರನಾದ ಅಪೊಸ್ತಲ ಪೌಲ, “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಎಂದನು. (ರೋಮನ್ನರಿಗೆ 5:12) ಆ “ಒಬ್ಬ ಮನುಷ್ಯ” ಆದಾಮನಾಗಿದ್ದಾನೆ. ಆದರೆ ಆ ಪಾಪ ಏನಾಗಿದೆ ಮತ್ತು ಅದರಿಂದ ಸಾವು ಯಾಕೆ ಬಂತು?
ಆದಾಮನು ಬೇಕುಬೇಕೆಂದೇ ದೇವರಿಗೆ ಅವಿಧೇಯನಾದನು ಅಥವಾ ದೇವರ ನಿಯಮವನ್ನು ಮುರಿದನು. ಇದೇ ಅವನು ಮಾಡಿದ ಪಾಪ. (1 ಯೋಹಾನ 3:4) ದೇವರು ಆದಾಮನಿಗೆ ಈ ಮೊದಲೇ ತಿಳಿಸಿದಂತೆ ಪಾಪಕ್ಕೆ ಶಿಕ್ಷೆ ಸಾವಾಗಿತ್ತು. ಆದಾಮ ಮತ್ತು ಅವನ ಸಂತತಿಯವರು ಎಲ್ಲಿಯವರೆಗೆ ದೇವರಿಗೆ ವಿಧೇಯರಾಗಿ ಇರುತ್ತಿದ್ದರೋ ಅಲ್ಲಿಯವರೆಗೆ ಅವರು ಪಾಪಿಗಳಾಗುತ್ತಿರಲಿಲ್ಲ ಮತ್ತು ಸಾವು ಅವರ ಹತ್ತಿರ ಕೂಡ ಸುಳಿಯುತ್ತಿರಲಿಲ್ಲ. ದೇವರು ಮನುಷ್ಯರನ್ನು ಸೃಷ್ಟಿಸಿದ್ದು ಸದಾಕಾಲ ಜೀವಿಸಲಿಕ್ಕೆ, ಸಾಯಲಿಕ್ಕಲ್ಲ.
ಬೈಬಲ್ ಹೇಳುವಂತೆ, ಸಾವು ‘ಎಲ್ಲರಲ್ಲಿಯೂ ವ್ಯಾಪಿಸಿದೆ.’ ಆದರೆ ಪ್ರಶ್ನೆ ಏನೆಂದರೆ ನಾವು ಸತ್ತ ಮೇಲೆ ನಮ್ಮಲ್ಲಿರುವ ಯಾವುದಾದರೂ ಒಂದು ಅಂಶ ಜೀವಿಸುತ್ತಾ? ಅನೇಕರು ಇದಕ್ಕೆ ‘ಹೌದು’ ಅನ್ನುತ್ತಾರೆ, ಆತ್ಮಕ್ಕೆ ಸಾವೇ ಇಲ್ಲ ಅಂತ ನೆನಸುತ್ತಾರೆ. ಇದು ನಿಜ ಆಗಿದ್ದರೆ ದೇವರು ಆದಾಮನಿಗೆ ಸುಳ್ಳು ಹೇಳಿದಂತೆ ಆಗುತ್ತದೆ. ಅದು ಹೇಗೆ? ನಾವು ಸತ್ತ ಮೇಲೂ ಯಾವುದೋ ಒಂದು ರೂಪದಲ್ಲಿ ಜೀವಿಸುತ್ತೇವೆ ಅನ್ನೋದು ನಿಜಾನೇ ಆದರೆ ಮರಣ ಅನ್ನೋದು ಶಿಕ್ಷೆ ಆಗುತ್ತಿರಲಿಲ್ಲ. ಆದರೆ ‘ದೇವರು ಸುಳ್ಳಾಡಲಾರ’ ಎಂದು ಬೈಬಲ್ ಹೇಳುತ್ತದೆ. (ಇಬ್ರಿಯ 6:18) ನಿಜ ಏನೆಂದರೆ ಸುಳ್ಳು ಹೇಳಿದ್ದು ಸೈತಾನ. ಅವನು ಹವ್ವಳಿಗೆ “ನೀವು ಹೇಗೂ ಸಾಯುವುದಿಲ್ಲ” ಅಂದ.—ಆದಿಕಾಂಡ 3:4.
ಅಮರ ಆತ್ಮದ ಬೋಧನೆ ಸುಳ್ಳಾಗಿದ್ದರೆ ಸತ್ಯ ಏನು? ಸತ್ತ ಮೇಲೆ ನಮಗೆ ಏನಾಗುತ್ತೆ?
ಸತ್ಯ ಏನು ಅಂತ ಬೈಬಲ್ ತಿಳಿಸುತ್ತೆ
ಆದಿಕಾಂಡ ಪುಸ್ತಕ “ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು” ಎನ್ನುತ್ತದೆ. “ಬದುಕುವ ಪ್ರಾಣಿ” ಎಂಬುದಕ್ಕಿರುವ ಹೀಬ್ರು ಪದ ನೆಫೆಷ್a ಆಗಿದೆ. ಇದರ ಅರ್ಥ “ಉಸಿರಾಡುವ ಜೀವಿ.”—ಆದಿಕಾಂಡ 2:7.
ಹಾಗಾಗಿ ಬೈಬಲ್ ಸ್ಪಷ್ಟವಾಗಿ ತಿಳಿಸುವುದೇನೆಂದರೆ ದೇವರು ಅಮರ ಆತ್ಮವನ್ನಿಟ್ಟು ಮನುಷ್ಯರನ್ನು ಸೃಷ್ಟಿಸಿಲ್ಲ. ಬದಲಿಗೆ ಅವರು “ಬದುಕುವ ಪ್ರಾಣಿ” ಆಗಿದ್ದಾರೆ. ಆದ್ದರಿಂದ “ಅಮರ ಆತ್ಮ” ಎಂಬುದನ್ನು ಬೈಬಲಿನಲ್ಲಿ ನೀವೆಷ್ಟೇ ಹುಡುಕಿದರೂ ಸಿಗುವುದಿಲ್ಲ.
ಅಮರ ಆತ್ಮ ಇದೆ ಅಂತ ಬೈಬಲ್ ಹೇಳುವುದಿಲ್ಲ ಅಂದಮೇಲೆ ಅನೇಕ ಧರ್ಮಗಳು ಅದನ್ನು ಏಕೆ ಬೋಧಿಸುತ್ತವೆ ಎಂಬ ಪ್ರಶ್ನೆ ನಿಮಗೆ ಬರಬಹುದು? ಇದಕ್ಕೆ ಉತ್ತರ ತಿಳಿದುಕೊಳ್ಳಬೇಕು ಅಂದರೆ ಪ್ರಾಚೀನ ಈಜಿಪ್ಟಿನವರ ಕಾಲಕ್ಕೆ ಹೋಗಬೇಕು.
ವಿಧರ್ಮಿ ಬೋಧನೆಯ ಪ್ರಭಾವ
“ಮೊದಲು ಅಮರ ಆತ್ಮದ ಬೋಧನೆಯನ್ನು ಸಮರ್ಥಿಸಿದವರು” ಈಜಿಪ್ಟಿನವರು ಎಂದು ಕ್ರಿ.ಪೂ. 5ನೇ ಶತಮಾನದ ಗ್ರೀಕ್ ಇತಿಹಾಸಗಾರ ಹೆರಾಡಟಸ್ ಹೇಳಿದ್ದಾನೆ. ಪ್ರಾಚೀನ ಬಾಬೆಲಿನವರು ಕೂಡ ಅಮರ ಆತ್ಮವನ್ನು ನಂಬುತ್ತಿದ್ದರು. ಕ್ರಿ.ಪೂ. 332ರಲ್ಲಿ ಮಹಾ ಅಲೆಗ್ಸಾಂಡರನು ಮಧ್ಯಪೂರ್ವ ದೇಶಗಳನ್ನು ಆಕ್ರಮಿಸಿದ ಸಮಯದಲ್ಲಿ ಗ್ರೀಕ್ ತತ್ವಜ್ಞಾನಿಗಳಿಂದಾಗಿ ಅಮರ ಆತ್ಮದ ಬೋಧನೆ ಜನಪ್ರಿಯವಾಗಿತ್ತು. ಬಲುಬೇಗನೆ ಇದು ಗ್ರೀಕ್ ಸಾಮ್ರಾಜ್ಯದಲ್ಲೆಲ್ಲಾ ಹರಡಿತು.
“ಅಮರ ಆತ್ಮ” ಎಂಬುದನ್ನು ಬೈಬಲಿನಲ್ಲಿ ನೀವೆಷ್ಟೇ ಹುಡುಕಿದರೂ ಸಿಗುವುದಿಲ್ಲ
ಕ್ರಿ.ಶ. ಮೊದಲನೇ ಶತಮಾನದಲ್ಲಿ ಎಸ್ಸೀನ್ಸ್ ಮತ್ತು ಫರಿಸಾಯರೆಂಬ ಎರಡು ಪ್ರಾಮುಖ್ಯ ಯೆಹೂದಿ ಪಂಗಡಗಳಿದ್ದವು. ಅವು, ಒಬ್ಬ ವ್ಯಕ್ತಿ ಸತ್ತ ನಂತರ ಅವನ ಆತ್ಮ ದೇಹದಿಂದ ಬೇರೆಯಾಗಿ ಬದುಕುತ್ತದೆ ಎಂದು ಬೋಧಿಸುತ್ತಿದ್ದವು. ದ ಜ್ಯೂವಿಷ್ ಎನ್ಸೈಕ್ಲೊಪೀಡಿಯ ಹೇಳುವುದು, “ಯೆಹೂದಿಗಳು ಅಮರ ಆತ್ಮದ ನಂಬಿಕೆಯನ್ನು ಗ್ರೀಕರ ಪ್ರಭಾವದಿಂದ ಮತ್ತು ಮುಖ್ಯವಾಗಿ ಪ್ಲೇಟೋನ ತತ್ವದಿಂದ ಕಲಿತರು.” ಮೊದಲನೇ ಶತಮಾನದ ಯೆಹೂದಿ ಇತಿಹಾಸಗಾರ ಜೋಸಿಫಸನು ಸಹ ಈ ಬೋಧನೆ “ಗ್ರೀಕರ ನಂಬಿಕೆಯಾಗಿದೆ” ಎಂದು ಹೇಳಿದನೇ ಹೊರತು ಬೈಬಲಿಗೆ ಹೊಂದಿಕೆಯಲ್ಲಿದೆ ಎಂದು ಹೇಳಲಿಲ್ಲ. ಇವುಗಳು ಗ್ರೀಕರ ಪುರಾಣದ ಕಥೆಗಳಾಗಿವೆ ಎಂದು ಅವನು ಹೇಳಿದನು.
ಗ್ರೀಕ್ ಸಂಸ್ಕೃತಿಯು ಎಲ್ಲಾ ಕಡೆ ಹಬ್ಬುತ್ತಿದ್ದಂತೆ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರು ಸಹ ಈ ವಿಧರ್ಮಿ ಬೋಧನೆಗಳನ್ನು ಅಂಗೀಕರಿಸಿದರು. “ಒಂದಾನೊಂದು ಕಾಲದಲ್ಲಿ ನಮ್ಮ ಆತ್ಮವು ಉತ್ತಮ ಸ್ಥಳದಲ್ಲಿತ್ತು ಮತ್ತು ಈಗ ಅದು ಈ ದುಷ್ಟ ಲೋಕದಲ್ಲಿ ಬದುಕುತ್ತಿದೆ ಎನ್ನುವ ಪ್ಲೇಟೋವಿನ ಊಹೆಯನ್ನು ಸುಲಭವಾಗಿ ಕ್ರೈಸ್ತ ಧರ್ಮದ ಬೋಧನೆಯೊಳಗೆ ಸೇರಿಸಲಾಯಿತು” ಎಂದು ಇತಿಹಾಸಗಾರ ಯೋನ ಲೆಂಡರಿನ್ ಹೇಳಿದ್ದಾರೆ. ಹೀಗೆ ಅಮರ ಆತ್ಮವೆಂಬ ವಿಧರ್ಮಿ ಬೋಧನೆ “ಕ್ರೈಸ್ತ” ಚರ್ಚುಗಳಲ್ಲಿ ಹರಡಿ ಅವರ ಒಂದು ಪ್ರಾಮುಖ್ಯ ನಂಬಿಕೆಯಾಯಿತು.
‘ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು’
ಮೊದಲನೇ ಶತಮಾನದಲ್ಲಿ ಅಪೊಸ್ತಲ ಪೌಲನು “ಮುಂದಣ ಸಮಯಗಳಲ್ಲಿ ಕೆಲವರು ಮೋಸಕರವಾದ ಪ್ರೇರಿತ ಮಾತುಗಳಿಗೂ ದೆವ್ವಗಳ ಬೋಧನೆಗಳಿಗೂ ಗಮನಕೊಟ್ಟು ನಂಬಿಕೆಯಿಂದ ಬಿದ್ದುಹೋಗುವರೆಂದು ದೇವಪ್ರೇರಿತ ಮಾತು ಖಚಿತವಾಗಿ ಹೇಳುತ್ತದೆ” ಎಂದು ಎಚ್ಚರಿಸಿದನು. (1 ತಿಮೊಥೆಯ 4:1) ಆ ಮಾತುಗಳು ನೂರಕ್ಕೆ ನೂರು ಸತ್ಯವಾದವು! ಅಮರ ಆತ್ಮದ ನಂಬಿಕೆ ‘ದೆವ್ವಗಳ ಬೋಧನೆಗೆ’ ಒಂದು ಉದಾಹರಣೆಯಾಗಿದೆ. ಇದು ಬೈಬಲಿನ ಬೋಧನೆಗೆ ಅನುಸಾರವಾಗಿಲ್ಲ, ಬದಲಿಗೆ ಪ್ರಾಚೀನ ವಿಧರ್ಮಿ ಧರ್ಮಗಳು ಮತ್ತು ತತ್ವಜ್ಞಾನದಿಂದ ಬಂದಿದೆ.
ಆದರೆ ಸಂತೋಷದ ವಿಷಯ ಏನೆಂದರೆ ‘ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು’ ಎಂದು ಯೇಸು ಹೇಳಿದನು. (ಯೋಹಾನ 8:32) ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡು ನಾವು ದೇವರಿಗೆ ಅಗೌರವ ತರುವಂಥ ಬೋಧನೆಗಳು ಮತ್ತು ಆಚಾರಗಳನ್ನು ಬಿಟ್ಟುಬಿಟ್ಟಿದ್ದೇವೆ. ದೇವರ ವಾಕ್ಯದಲ್ಲಿರುವ ಸತ್ಯವು ನಮ್ಮನ್ನು ಸಾವಿಗೆ ಸಂಬಂಧಪಟ್ಟ ಸಂಪ್ರದಾಯಗಳು ಮತ್ತು ಮೂಢನಂಬಿಕೆಗಳ ಬಂಧನದಿಂದ ಬಿಡುಗಡೆ ಮಾಡಿದೆ.—“ಸತ್ತವರು ಎಲ್ಲಿದ್ದಾರೆ?” ಎಂಬ ಚೌಕವನ್ನು ನೋಡಿ.
ನಮ್ಮ ಸೃಷ್ಟಿಕರ್ತನು ನಮ್ಮನ್ನು 70 ಅಥವಾ 80 ವರ್ಷ ಬದುಕಿ ಆಮೇಲೆ ಬೇರೆ ಯಾವುದೋ ಸ್ಥಳದಲ್ಲಿ ಶಾಶ್ವತವಾಗಿ ಇರಲು ಸೃಷ್ಟಿಸಿಲ್ಲ. ನಾವು ದೇವರ ಮಾತನ್ನು ಕೇಳುತ್ತಾ ಈ ಭೂಮಿಯಲ್ಲೇ ಸದಾಕಾಲ ಜೀವಿಸಬೇಕು ಅನ್ನೋದೇ ಆತನ ಉದ್ದೇಶ. ಇದು ದೇವರಿಗೆ ಮನುಷ್ಯರ ಮೇಲಿರುವ ಅಪಾರ ಪ್ರೀತಿಯ ಪುರಾವೆಯಾಗಿದೆ. ಆತನ ಉದ್ದೇಶ ಎಂದಿಗೂ ವಿಫಲವಾಗುವುದಿಲ್ಲ, ಖಂಡಿತ ನೆರವೇರುತ್ತದೆ. (ಮಲಾಕಿಯ 3:6) ಆದ್ದರಿಂದಲೇ, ಕೀರ್ತನೆಗಾರನು “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಹೇಳಿದನು.—ಕೀರ್ತನೆ 37:29.
a ಕೆಲವೊಂದು ಬೈಬಲ್ ಭಾಷಾಂತರಗಳಲ್ಲಿ ಉದಾಹರಣೆಗೆ, ಪವಿತ್ರ ಬೈಬಲ್ನಲ್ಲಿ ನೆಫೆಷ್ ಎಂಬ ಪದಕ್ಕೆ “ಜೀವಾತ್ಮ” ಎಂದು ಹಾಕಲಾಗಿದೆ. ಆದರೆ ಪವಿತ್ರ ಗ್ರಂಥದಲ್ಲಿ “ಜೀವಿಸುವ ವ್ಯಕ್ತಿ” ಎಂದು, ಪರಿಶುದ್ಧ ಬೈಬಲ್ನಲ್ಲಿ “ಮನುಷ್ಯನು ಸಜೀವಿಯಾದನು” ಎಂದು ಭಾಷಾಂತರಿಸಲಾಗಿದೆ.