ನೋಹ, ದಾನಿಯೇಲ, ಯೋಬ—ಇವರ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಿ
“ನೋಹನೂ ದಾನಿಯೇಲನೂ ಯೋಬನೂ . . . ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರವೇ ಉಳಿಸಿಕೊಳ್ಳುತ್ತಿದ್ದರು.”—ಯೆಹೆ. 14:14, ಪವಿತ್ರ ಗ್ರಂಥ ಭಾಷಾಂತರ.
1, 2. (ಎ) ನೋಹ, ದಾನಿಯೇಲ ಮತ್ತು ಯೋಬನ ಉದಾಹರಣೆಗಳನ್ನು ಪರಿಶೀಲಿಸುವುದರಿಂದ ನಮಗೆ ಹೇಗೆ ಪ್ರೋತ್ಸಾಹ ಸಿಗುತ್ತದೆ? (ಬಿ) ಯೆಹೆಜ್ಕೇಲ 14:14ರಲ್ಲಿರುವ ಮಾತುಗಳನ್ನು ಬರೆದಾಗ ಸನ್ನಿವೇಶ ಹೇಗಿತ್ತು?
ಕಾಯಿಲೆ, ಹಣದ ಸಮಸ್ಯೆ ಅಥವಾ ಹಿಂಸೆಯಂಥ ತೊಂದರೆಗಳನ್ನು ಎದುರಿಸುತ್ತಿದ್ದೀರಾ? ಯೆಹೋವನ ಸೇವೆಯನ್ನು ಕೆಲವೊಮ್ಮೆ ಸಂತೋಷವಾಗಿ ಮಾಡಲು ಕಷ್ಟ ಆಗುತ್ತಿದೆಯಾ? ಹಾಗಾದರೆ ನೋಹ, ದಾನಿಯೇಲ ಮತ್ತು ಯೋಬನ ಉದಾಹರಣೆ ಪರಿಶೀಲಿಸುವುದರಿಂದ ನಿಮಗೆ ಪ್ರೋತ್ಸಾಹ ಸಿಗುತ್ತದೆ. ಅವರು ನಮ್ಮಂತೆಯೇ ಅಪರಿಪೂರ್ಣರಾಗಿದ್ದರು ಮತ್ತು ನಾವಿಂದು ಎದುರಿಸುತ್ತಿರುವಂಥ ಸಮಸ್ಯೆಗಳನ್ನು ಎದುರಿಸಿದರು. ಕೆಲವೊಮ್ಮೆ ಅವರ ಜೀವಕ್ಕೂ ಅಪಾಯ ಬಂದಿತ್ತು. ಆದರೆ ಅವರು ಯೆಹೋವನಿಗೆ ನಿಷ್ಠಾವಂತರಾಗಿ ಉಳಿದರು. ಯೆಹೋವನ ದೃಷ್ಟಿಯಲ್ಲಿ ನಂಬಿಕೆ ಮತ್ತು ವಿಧೇಯತೆ ತೋರಿಸುವುದರಲ್ಲಿ ಅವರು ಅತ್ಯುತ್ತಮ ಮಾದರಿಗಳಾಗಿದ್ದಾರೆ.—ಯೆಹೆಜ್ಕೇಲ 14:12-14 ಓದಿ.
2 ಯೆಹೆಜ್ಕೇಲನು ಈ ಲೇಖನದ ಮುಖ್ಯ ವಚನದಲ್ಲಿರುವ ಮಾತುಗಳನ್ನು ಕ್ರಿ.ಪೂ. 612ರಲ್ಲಿ ಬಾಬೆಲಿನಲ್ಲಿದ್ದಾಗ ಬರೆದನು.a (ಯೆಹೆ. 1:1; 8:1) ಕ್ರಿ.ಪೂ. 607ರಲ್ಲಿ ಯೆರೂಸಲೇಮ್ ನಾಶವಾಗುವ ಕೇವಲ ಐದು ವರ್ಷಗಳ ಮುಂಚೆ ಇದನ್ನು ಬರೆದನು. ಆ ಸಮಯದಲ್ಲಿ ನೋಹ, ದಾನಿಯೇಲ, ಯೋಬನಂತೆ ಯೆರೂಸಲೇಮಿನಲ್ಲಿ ಕೆಲವೇ ಮಂದಿ ನಂಬಿಕೆ, ವಿಧೇಯತೆ ತೋರಿಸಿ ನಾಶನದಿಂದ ಪಾರಾದರು. (ಯೆಹೆ. 9:1-5) ಪಾರಾದವರಲ್ಲಿ ಯೆರೆಮೀಯ, ಬಾರೂಕ, ಎಬೆದ್ಮೆಲೆಕ ಮತ್ತು ರೆಕಾಬ್ಯರೂ ಇದ್ದರು.
3. ನಾವು ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?
3 ಅದೇ ರೀತಿ ಇಂದು ಯೆಹೋವನು ಯಾರನ್ನು ನೋಹ, ದಾನಿಯೇಲ ಮತ್ತು ಯೋಬನಂತೆ ನೀತಿವಂತರೆಂದು ಎಣಿಸುತ್ತಾನೋ ಅವರು ಮಾತ್ರ ಈ ದುಷ್ಟ ಲೋಕದ ಅಂತ್ಯವನ್ನು ಪಾರಾಗುವರು. (ಪ್ರಕ. 7:9, 14) ಆದ್ದರಿಂದ ಯೆಹೋವನು ಯಾಕೆ ಈ ಮೂವರನ್ನು ನೀತಿವಂತರೆಂದು ಪರಿಗಣಿಸಿದನೆಂದು ನೋಡೋಣ. ನಾವು ಪ್ರತಿಯೊಬ್ಬರ ಬಗ್ಗೆ ಚರ್ಚಿಸುವಾಗ (1) ಅವರು ಯಾವ ಸವಾಲುಗಳನ್ನು ಎದುರಿಸಿದರು? (2) ಅವರ ನಂಬಿಕೆ ಮತ್ತು ವಿಧೇಯತೆಯನ್ನು ನಾವು ಹೇಗೆ ಅನುಕರಿಸಬಹುದೆಂದು ನೋಡೋಣ.
900ಕ್ಕಿಂತ ಹೆಚ್ಚು ವರ್ಷ ನಂಬಿಕೆ ಮತ್ತು ವಿಧೇಯತೆ ತೋರಿಸಿದ ನೋಹ!
4, 5. (ಎ) ನೋಹ ಯಾವ ಸವಾಲುಗಳನ್ನು ಎದುರಿಸಿದನು? (ಬಿ) ಆತನ ನಂಬಿಗಸ್ತಿಕೆಯನ್ನು ನಾವು ಯಾಕೆ ಮೆಚ್ಚಲೇಬೇಕು?
4 ನೋಹ ಯಾವ ಸವಾಲುಗಳನ್ನು ಎದುರಿಸಿದನು? ಅವನ ಮುತ್ತಜ್ಜನಾದ ಹನೋಕನ ಸಮಯದಲ್ಲೇ ಜನರು ತುಂಬ ದುಷ್ಟರಾಗಿದ್ದರು, ಯೆಹೋವನ ಬಗ್ಗೆ ‘ಆಘಾತಕರ ಸಂಗತಿಗಳನ್ನು’ ಹೇಳುತ್ತಿದ್ದರು. (ಯೂದ 14, 15) ಸಮಯ ಕಳೆದಂತೆ ಭೂಮಿಯಲ್ಲಿ ಹಿಂಸೆ ಇನ್ನೂ ಹೆಚ್ಚಾಯಿತು. ನೋಹನ ಸಮಯಕ್ಕೆ ಹಿಂಸಾಚಾರ “ಲೋಕವನ್ನು ತುಂಬಿಕೊಂಡಿತ್ತು.” ದುಷ್ಟ ದೇವದೂತರು ಭೂಮಿಗೆ ಬಂದು, ಮಾನವ ದೇಹ ತಾಳಿ, ಸ್ತ್ರೀಯರನ್ನು ಮದುವೆ ಮಾಡಿಕೊಂಡರು. ಅವರಿಗೆ ಹುಟ್ಟಿದ ಮಕ್ಕಳು ತುಂಬ ಕ್ರೂರಿಗಳಾಗಿದ್ದರು. (ಆದಿ. 6:2-4, 11, 12) ಆದರೆ ನೋಹ ಭಿನ್ನನಾಗಿದ್ದನು. ಅವನಿಗೆ “ಯೆಹೋವನ ದಯವು ದೊರಕಿತು.” ಅವನು ತನ್ನ ಸುತ್ತಲಿದ್ದ ಜನರಂತಿರದೆ ಯಾವುದು ಸರಿಯೋ ಅದನ್ನು ಮಾಡಿದನು, “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.”—ಆದಿ. 6:8, 9.
5 ಇದರಿಂದ ನೋಹನ ಬಗ್ಗೆ ಏನು ಗೊತ್ತಾಗುತ್ತದೆ? ಮೊದಲನೇದಾಗಿ, ಜಲಪ್ರಳಯ ಬರುವುದಕ್ಕಿಂತ ಮುಂಚೆ ನೋಹ ಆ ದುಷ್ಟ ಲೋಕದಲ್ಲಿ 70 ಅಥವಾ 80 ವರ್ಷ ಅಲ್ಲ, ಬರೋಬ್ಬರಿ 600 ವರ್ಷ ನಂಬಿಗಸ್ತನಾಗಿದ್ದನು! (ಆದಿ. 7:11) ಎರಡನೇದಾಗಿ, ಆ ಕಾಲದಲ್ಲಿ ನೋಹನನ್ನು ಪ್ರೋತ್ಸಾಹಿಸಲು ಸಭೆಯ ಏರ್ಪಾಡಿರಲಿಲ್ಲ. ಅವನ ಒಡಹುಟ್ಟಿದವರು ಸಹ ಬೆಂಬಲ ಕೊಡಲಿಲ್ಲ ಎಂದು ತೋರುತ್ತದೆ.b
6. ನೋಹನು ಹೇಗೆ ಧೈರ್ಯ ತೋರಿಸಿದನು?
6 ತಾನೊಬ್ಬ ಒಳ್ಳೇ ವ್ಯಕ್ತಿಯಾಗಿದ್ದರೆ ಸಾಕು ಎಂದು ನೋಹ ನೆನಸಲಿಲ್ಲ. ಅವನು ಧೈರ್ಯವಾಗಿ ‘ನೀತಿಯನ್ನು ಸಾರಿದನು.’ (2 ಪೇತ್ರ 2:5) ಹೀಗೆ ಯೆಹೋವನಲ್ಲಿಟ್ಟಿದ್ದ ನಂಬಿಕೆಯ ಬಗ್ಗೆ ಬೇರೆಯವರೊಂದಿಗೆ ಮಾತಾಡಿದನು. “ಈ ನಂಬಿಕೆಯಿಂದಲೇ ಅವನು ಲೋಕವನ್ನು ಖಂಡಿಸಿದನು” ಎಂದು ಅಪೊಸ್ತಲ ಪೌಲನು ನೋಹನ ಬಗ್ಗೆ ಹೇಳಿದ್ದಾನೆ. (ಇಬ್ರಿ. 11:7) ಆಗಿನ ಜನ ನೋಹನನ್ನು ಗೇಲಿಮಾಡಿ ಅವನು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿರಬೇಕು, ಬೆದರಿಕೆಗಳನ್ನೂ ಹಾಕಿರಬಹುದು. ಆದರೆ ನೋಹನು ಅವರ ಬೆದರಿಕೆಗೆ ಹೆದರಲಿಲ್ಲ. (ಜ್ಞಾನೋ. 29:25) ಅವನಲ್ಲಿ ನಂಬಿಕೆ ಇದ್ದದರಿಂದ ಯೆಹೋವನು ಅವನಿಗೆ ಧೈರ್ಯ ಕೊಟ್ಟನು. ಅದೇ ರೀತಿ ಇಂದು ಕೂಡ ತನ್ನ ನಂಬಿಗಸ್ತ ಸೇವಕರೆಲ್ಲರಿಗೆ ಧೈರ್ಯ ಕೊಡುತ್ತಾನೆ.
7. ನಾವೆಯನ್ನು ಕಟ್ಟುವಾಗ ನೋಹನು ಯಾವ ಸವಾಲುಗಳನ್ನು ಎದುರಿಸಿದನು?
7 ಐನೂರಕ್ಕಿಂತ ಹೆಚ್ಚು ವರ್ಷಗಳಿಂದ ನಂಬಿಗಸ್ತನಾಗಿದ್ದ ನೋಹನಿಗೆ ಯೆಹೋವನು ನಾವೆಯನ್ನು ಕಟ್ಟುವಂತೆ ಹೇಳಿದನು. ಇದರಿಂದ ಕೆಲವು ಜನರನ್ನು ಮತ್ತು ಪ್ರಾಣಿಗಳನ್ನು ಪ್ರಳಯದಿಂದ ರಕ್ಷಿಸಬಹುದಿತ್ತು. (ಆದಿ. 5:32; 6:14) ಇಷ್ಟು ದೊಡ್ಡ ನಾವೆಯನ್ನು ಕಟ್ಟುವುದು ನೋಹನಿಗೆ ಸುಲಭ ಆಗಿರಲಿಲ್ಲ. ಜೊತೆಗೆ ಜನರು ತನ್ನನ್ನು ಗೇಲಿ ಮಾಡುತ್ತಾರೆ ಮತ್ತು ತೊಂದರೆ ಕೊಡುತ್ತಾರೆ ಎಂದು ಅವನಿಗೆ ಗೊತ್ತಿತ್ತು. ಆದರೂ ಅವನಲ್ಲಿದ್ದ ನಂಬಿಕೆಯ ಕಾರಣ ಯೆಹೋವನಿಗೆ ವಿಧೇಯತೆ ತೋರಿಸಿದನು. “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.”—ಆದಿ. 6:22.
8. ತನ್ನ ಕುಟುಂಬಕ್ಕೆ ಬೇಕಾದದ್ದನ್ನು ಯೆಹೋವನು ಕೊಡುತ್ತಾನೆ ಎಂಬ ಭರವಸೆ ನೋಹನಿಗಿತ್ತು ಎಂದು ಹೇಗೆ ಹೇಳಬಹುದು?
8 ನೋಹನಿಗೆ ಇನ್ನೊಂದು ಸವಾಲು ಸಹ ಇತ್ತು. ಅವನು ತನ್ನ ಹೆಂಡತಿ ಮಕ್ಕಳ ಅವಶ್ಯಕತೆಗಳನ್ನು ಪೂರೈಸಬೇಕಿತ್ತು. ಜಲಪ್ರಳಯಕ್ಕೆ ಮುಂಚೆ ದವಸಧಾನ್ಯಗಳನ್ನು ಬೆಳೆಸಲು ಜನರು ತುಂಬ ಕಷ್ಟಪಡಬೇಕಾಗಿತ್ತು. ನೋಹನಿಗೂ ಈ ಕಷ್ಟ ಎದುರಾಗಿತ್ತು. (ಆದಿ. 5:28, 29) ಆದರೆ ಅವನು ಮನೆಗೆ ಬೇಕಾದದ್ದನ್ನು ತಂದುಹಾಕುವುದರ ಬಗ್ಗೆಯೇ ಯಾವಾಗಲೂ ಚಿಂತಿಸುತ್ತಾ ಇರಲಿಲ್ಲ. ಅವನ ಜೀವನದಲ್ಲಿ ಯೆಹೋವನ ಸೇವೆಗೆ ಪ್ರಾಮುಖ್ಯತೆ ಕೊಟ್ಟನು. ಸುಮಾರು 40ರಿಂದ 50 ವರ್ಷ ನಾವೆಯನ್ನು ಕಟ್ಟುವುದರಲ್ಲಿ ನಿರತನಾಗಿದ್ದರೂ ನೋಹ ತನ್ನ ಆಧ್ಯಾತ್ಮಿಕತೆ ಕಾಪಾಡಿಕೊಂಡನು. ಜಲಪ್ರಳಯದ ನಂತರ ನೋಹ ಇನ್ನೂ 350 ವರ್ಷ ಬದುಕಿದನು. ಆಗಲೂ ಆಧ್ಯಾತ್ಮಿಕತೆ ಕಾಪಾಡಿಕೊಂಡನು. (ಆದಿ. 9:28) ನಂಬಿಕೆ ಮತ್ತು ವಿಧೇಯತೆ ತೋರಿಸುವುದರಲ್ಲಿ ನೋಹನು ನಿಜವಾಗಲೂ ಅತ್ಯುತ್ತಮ ಮಾದರಿ ಇಟ್ಟನು.
9, 10. (ಎ) ನೋಹನ ನಂಬಿಕೆ ಮತ್ತು ವಿಧೇಯತೆಯನ್ನು ನಾವು ಹೇಗೆ ಅನುಕರಿಸಬಹುದು? (ಬಿ) ನೀವು ಯೆಹೋವನ ನಿಯಮಗಳನ್ನು ಪಾಲಿಸಲು ದೃಢತೀರ್ಮಾನ ಮಾಡಿಕೊಂಡಿದ್ದರೆ ಯೆಹೋವನು ನಿಮಗೆ ಏನು ಕೊಡುತ್ತಾನೆ?
9 ನೋಹನ ನಂಬಿಕೆ ಮತ್ತು ವಿಧೇಯತೆಯನ್ನು ನಾವು ಹೇಗೆ ಅನುಕರಿಸಬಹುದು? ಯೆಹೋವನ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡುವ ಮೂಲಕ, ಸೈತಾನನ ಲೋಕದ ಭಾಗವಾಗದಿರುವ ಮೂಲಕ ಮತ್ತು ನಮ್ಮ ಜೀವನದಲ್ಲಿ ಯೆಹೋವನಿಗೆ ಪ್ರಥಮ ಸ್ಥಾನ ಕೊಡುವ ಮೂಲಕ ನಾವು ನೋಹನನ್ನು ಅನುಕರಿಸಬಹುದು. (ಮತ್ತಾ. 6:33; ಯೋಹಾ. 15:19) ಆದರೆ ಇದನ್ನು ಮಾಡುವಾಗ ಲೋಕದ ಜನರು ನಮ್ಮನ್ನು ಇಷ್ಟಪಡುವುದಿಲ್ಲ. ಲೈಂಗಿಕ ಸಂಬಂಧ ಮತ್ತು ವಿವಾಹದ ಬಗ್ಗೆ ದೇವರ ನಿಯಮಗಳನ್ನು ನಾವು ಪಾಲಿಸಲು ಪ್ರಯತ್ನಿಸುವುದರಿಂದ ಜನರು ನಮ್ಮ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ವಾರ್ತಾಮಾಧ್ಯಮದಲ್ಲಿ ಹೇಳಬಹುದು. (ಮಲಾಕಿಯ 3:17, 18 ಓದಿ.) ಆದರೆ ನೋಹನಂತೆ ನಾವು ಸಹ ಜನರಿಗೆ ಹೆದರುವುದಿಲ್ಲ. ನಾವು ದೇವರಿಗೆ ಭಯಪಡುತ್ತೇವೆ. ಅಂದರೆ ನಮಗೆ ಯೆಹೋವನ ಮೇಲೆ ಆಳವಾದ ಗೌರವ ಇದೆ ಮತ್ತು ಆತನ ಮನಸ್ಸಿಗೆ ನೋವು ಮಾಡಲು ನಾವು ಬಯಸುವುದಿಲ್ಲ. ಆತನು ಮಾತ್ರ ನಮಗೆ ನಿತ್ಯಜೀವ ಕೊಡಬಲ್ಲನು ಎಂದು ನಮಗೆ ಗೊತ್ತಿದೆ.—ಲೂಕ 12:4, 5.
10 ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಬೇರೆಯವರು ಗೇಲಿಮಾಡಿದರೂ, ಟೀಕಿಸಿದರೂ ದೇವರ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನೇ ನಾನು ಮಾಡುತ್ತೇನಾ? ಕುಟುಂಬದ ಅವಶ್ಯಕತೆಯನ್ನು ಪೂರೈಸಲು ಕಷ್ಟವಾದಾಗಲೂ ಯೆಹೋವನು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಾನೆ ಎಂದು ನಂಬುತ್ತೇನಾ?’ ನೋಹನಂತೆ ನೀವೂ ಯೆಹೋವನಲ್ಲಿ ಭರವಸೆ ಇಟ್ಟು ಆತನಿಗೆ ವಿಧೇಯರಾದರೆ ನಿಮಗೆ ಬೇಕಾದದ್ದನ್ನು ಕೊಡುವನೆಂದು ನಂಬಿಕೆಯಿಂದ ಇರಬಹುದು.—ಫಿಲಿ. 4:6, 7.
ದುಷ್ಟ ನಗರದಲ್ಲಿದ್ದರೂ ನಂಬಿಕೆ ಮತ್ತು ವಿಧೇಯತೆ ತೋರಿಸಿದ ದಾನಿಯೇಲ!
11. ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ಬಾಬೆಲಿನಲ್ಲಿ ಯಾವ ದೊಡ್ಡ ಸವಾಲುಗಳನ್ನು ಎದುರಿಸಿದರು? (ಲೇಖನದ ಆರಂಭದ ಚಿತ್ರ ನೋಡಿ.)
11 ದಾನಿಯೇಲ ಯಾವ ಸವಾಲುಗಳನ್ನು ಎದುರಿಸಿದನು? ಅವನು ಸುಳ್ಳು ದೇವರುಗಳು ಮತ್ತು ಮಾಟಮಂತ್ರ ತುಂಬಿದ್ದ ಬಾಬೆಲಿನಲ್ಲಿ ಜೀವಿಸಬೇಕಾಗಿತ್ತು. ಅಲ್ಲಿನ ಜನರು ಯೆಹೂದ್ಯರನ್ನು ದ್ವೇಷಿಸುತ್ತಿದ್ದರು. ಯೆಹೂದ್ಯರನ್ನೂ ಅವರ ದೇವರಾದ ಯೆಹೋವನನ್ನೂ ಅಪಹಾಸ್ಯ ಮಾಡುತ್ತಿದ್ದರು. (ಕೀರ್ತ. 137:1, 3) ಇದರಿಂದ ಯೆಹೋವನನ್ನು ಪ್ರೀತಿಸುತ್ತಿದ್ದ ದಾನಿಯೇಲನಿಗೆ ಮತ್ತು ಇತರ ಯೆಹೂದ್ಯರಿಗೆ ತುಂಬ ನೋವಾಗಿರಬೇಕು. ಅಷ್ಟೇ ಅಲ್ಲ, ಅನೇಕರು ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯನ ಒಂದೊಂದು ಹೆಜ್ಜೆಯನ್ನೂ ಗಮನಿಸುತ್ತಿದ್ದರು. ಯಾಕೆಂದರೆ ಇವರು ಬಾಬೆಲಿನ ರಾಜನ ಕೆಳಗೆ ಕೆಲಸ ಮಾಡಲು ತರಬೇತಿ ಪಡೆಯುತ್ತಿದ್ದರು. ರಾಜನು ತಿನ್ನುತ್ತಿದ್ದ ಆಹಾರವನ್ನು ಇವರೂ ತಿನ್ನಬೇಕಿತ್ತು. ಆದರೆ ಇದರಲ್ಲಿ ಯೆಹೋವನು ತನ್ನ ಜನರಿಗೆ ತಿನ್ನಬಾರದೆಂದು ಹೇಳಿದ್ದ ಆಹಾರ ಪದಾರ್ಥಗಳೂ ಇದ್ದವು. “ದಾನಿಯೇಲನು ತಾನು ರಾಜನ ಭೋಜನಪದಾರ್ಥಗಳನ್ನು ತಿಂದು . . . ತನ್ನನ್ನು ಅಶುದ್ಧಮಾಡಿಕೊಳ್ಳಬಾರದೆಂದು” ನಿಶ್ಚಯಿಸಿಕೊಂಡಿದ್ದನು.—ದಾನಿ. 1:5-8, 14-17.
12. (ಎ) ದಾನಿಯೇಲನು ಎಂಥ ವ್ಯಕ್ತಿಯಾಗಿದ್ದನು? (ಬಿ) ಯೆಹೋವನಿಗೆ ದಾನಿಯೇಲನ ಬಗ್ಗೆ ಯಾವ ಅನಿಸಿಕೆ ಇತ್ತು?
12 ದಾನಿಯೇಲನಿಗೆ ಇನ್ನೊಂದು ಸವಾಲು ಸಹ ಇತ್ತು. ಮೇಲ್ನೋಟಕ್ಕೆ ಇದೊಂದು ಸವಾಲಾಗಿ ಕಂಡಿರಲಿಕ್ಕಿಲ್ಲ. ಅವನು ತುಂಬ ಬುದ್ಧಿವಂತನಾಗಿದ್ದರಿಂದ ರಾಜನು ಅವನಿಗೆ ವಿಶೇಷ ಸುಯೋಗಗಳನ್ನು ಕೊಟ್ಟನು. (ದಾನಿ. 1:19, 20) ಆಗ ದಾನಿಯೇಲ ಅಹಂಕಾರಿಯಾಗಲಿಲ್ಲ, ತಾನು ಹೇಳಿದ್ದೇ ಸರಿ ಅಂದುಕೊಳ್ಳಲಿಲ್ಲ. ದೀನನಾಗಿದ್ದನು ಮತ್ತು ತನ್ನ ಇತಿಮಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು. ತನ್ನೆಲ್ಲಾ ಯಶಸ್ಸಿಗೆ ಯೆಹೋವನೇ ಕಾರಣ ಎಂದು ಹೇಳುತ್ತಿದ್ದನು. (ದಾನಿ. 2:30) ಸ್ವಲ್ಪ ಯೋಚಿಸಿ ನೋಡಿ. ಯೆಹೋವನು ನೋಹ ಮತ್ತು ಯೋಬನ ಜೊತೆ ದಾನಿಯೇಲನ ಬಗ್ಗೆಯೂ ತಿಳಿಸಿದ್ದಾನೆ. ಈ ಮೂವರ ನಂಬಿಕೆಯನ್ನೂ ಅನುಕರಿಸಬೇಕೆಂದು ಆತನು ಹೇಳಿದ್ದಾನೆ. ನೋಹ ಮತ್ತು ಯೋಬನ ಬಗ್ಗೆ ಹೇಳಬೇಕಾದರೆ, ಅವರು ಅಷ್ಟರಲ್ಲಾಗಲೇ ಜೀವನಪೂರ್ತಿ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿ ಮುಗಿಸಿದ್ದರು. ಆದರೆ ದಾನಿಯೇಲ ಆಗಿನ್ನೂ ಯುವಕ! ಯೆಹೋವನಿಗೆ ದಾನಿಯೇಲನಲ್ಲಿ ಎಂಥ ನಂಬಿಕೆ ಇತ್ತೆಂದು ಇದರಿಂದ ಗೊತ್ತಾಗುತ್ತದೆ. ದಾನಿಯೇಲನು ಸಹ ಆ ನಂಬಿಕೆಯನ್ನು ಉಳಿಸಿಕೊಂಡನು. ಜೀವನಪೂರ್ತಿ ನಂಬಿಗಸ್ತನಾಗಿದ್ದನು, ದೇವರಿಗೆ ವಿಧೇಯತೆ ತೋರಿಸಿದನು. ಅವನಿಗೆ ಸುಮಾರು 100 ವರ್ಷ ಇದ್ದಾಗ ಒಬ್ಬ ದೇವದೂತನು, “ದಾನಿಯೇಲನೇ, ಅತಿಪ್ರಿಯನೇ” ಎಂದು ಪ್ರೀತಿಯಿಂದ ಮಾತಾಡಿಸಿದನು.—ದಾನಿ. 10:11.
13. ಯೆಹೋವನು ದಾನಿಯೇಲನಿಗೆ ಉನ್ನತ ಸ್ಥಾನ ಸಿಗುವಂತೆ ಮಾಡಲು ಒಂದು ಕಾರಣ ಏನಿರಬಹುದು?
13 ಯೆಹೋವನ ಅನುಗ್ರಹದಿಂದ ದಾನಿಯೇಲನು ದೊಡ್ಡ ಅಧಿಕಾರಿಯಾದನು. ಮೊದಲು ಬಾಬೆಲ್ ಸಾಮ್ರಾಜ್ಯ, ನಂತರ ಮೇದ್ಯ-ಪಾರಸಿಯ ಸಾಮ್ರಾಜ್ಯದ ಕೆಳಗೆ ಉನ್ನತ ಸ್ಥಾನದಲ್ಲಿದ್ದನು. (ದಾನಿ. 1:21; 6:1, 2) ದಾನಿಯೇಲನು ತನ್ನ ಜನರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಯೆಹೋವನು ಅವನಿಗೆ ಈ ಸ್ಥಾನಮಾನ ಸಿಗುವಂತೆ ಮಾಡಿರಬೇಕು. ಹಿಂದೆ ಐಗುಪ್ತದಲ್ಲಿ ಯೋಸೇಫನಿಗೆ, ಪಾರಸಿಯದಲ್ಲಿ ಎಸ್ತೇರ್ ಮತ್ತು ಮೊರ್ದೆಕೈಗೂ ಇದೇ ಕಾರಣಕ್ಕೆ ದೊಡ್ಡ ಸ್ಥಾನಗಳು ಸಿಗುವಂತೆ ಮಾಡಿದ್ದನು.c (ದಾನಿ. 2:48) ಯೆಹೋವನು ತಮಗೆ ಸಹಾಯ ಮಾಡಲು ದಾನಿಯೇಲನನ್ನು ಉಪಯೋಗಿಸುತ್ತಿದ್ದಾನೆ ಎಂದು ನೋಡುವಾಗ ಯೆಹೆಜ್ಕೇಲ ಮತ್ತು ಇತರ ಯೆಹೂದಿ ಬಂದಿವಾಸಿಗಳಿಗೆ ಹೇಗನಿಸಿರಬೇಕು? ಖಂಡಿತ ತುಂಬ ಪ್ರೋತ್ಸಾಹ ಸಿಕ್ಕಿರಬೇಕು.
14, 15. (ಎ) ನಮ್ಮ ಸನ್ನಿವೇಶ ಹೇಗೆ ದಾನಿಯೇಲನ ಸನ್ನಿವೇಶದಂತೆ ಇದೆ? (ಬಿ) ದಾನಿಯೇಲನ ಹೆತ್ತವರಿಂದ ಇಂದಿನ ಹೆತ್ತವರು ಯಾವ ಪಾಠ ಕಲಿಯಬಹುದು?
14 ದಾನಿಯೇಲನ ನಂಬಿಕೆ ಮತ್ತು ವಿಧೇಯತೆಯನ್ನು ನಾವು ಹೇಗೆ ಅನುಕರಿಸಬಹುದು? ಇವತ್ತು ಈ ಲೋಕದಲ್ಲಿ ಅನೈತಿಕತೆ ಮತ್ತು ಸುಳ್ಳಾರಾಧನೆ ತುಂಬಿತುಳುಕುತ್ತಿದೆ. ಜನರು “ದೆವ್ವಗಳ ವಾಸಸ್ಥಳ” ಎಂದು ಕರೆಯಲಾಗುವ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಹತೋಟಿಯಲ್ಲಿ ಇದ್ದಾರೆ. (ಪ್ರಕ. 18:2) ಆದರೆ ನಾವು ಆ ರೀತಿ ಇಲ್ಲದಿರುವುದನ್ನು ನೋಡಿ ಜನ ನಮ್ಮನ್ನು ಗೇಲಿ ಮಾಡಬಹುದು. (ಮಾರ್ಕ 13:13) ಆಗ ನಾವು ದಾನಿಯೇಲನಂತೆ ಯೆಹೋವ ದೇವರಿಗೆ ಇನ್ನಷ್ಟು ಹತ್ತಿರ ಆಗಬೇಕು. ನಾವು ದೀನರಾಗಿದ್ದು ಯೆಹೋವನಲ್ಲಿ ನಂಬಿಕೆ ಇಟ್ಟು ಆತನ ಮಾತನ್ನು ಕೇಳಿ ನಡೆದರೆ ಆತನಿಗೆ ಅತಿಪ್ರಿಯರಾಗಿರುತ್ತೇವೆ.—ಹಗ್ಗಾ. 2:7.
15 ಇಂದಿನ ಹೆತ್ತವರು ದಾನಿಯೇಲನ ಹೆತ್ತವರಿಂದ ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ದಾನಿಯೇಲನು ಯೆಹೂದದಲ್ಲಿ ಚಿಕ್ಕ ಹುಡುಗನಾಗಿದ್ದಾಗ ಅವನ ಸುತ್ತಲಿದ್ದ ಜನರು ತುಂಬ ಕೆಟ್ಟವರಾಗಿದ್ದರು. ಆದರೂ ಅವನು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಂಡನು. ಅವನಾಗಿಯೇ ಬೆಳೆಸಿಕೊಂಡನಾ? ಇಲ್ಲ. ಅವನ ಹೆತ್ತವರು ಅವನಿಗೆ ಯೆಹೋವನ ಬಗ್ಗೆ ಕಲಿಸಿರಬೇಕು. (ಜ್ಞಾನೋ. 22:6) ದಾನಿಯೇಲನ ಹೆಸರಿನ ಅರ್ಥ “ದೇವರು ನನ್ನ ನ್ಯಾಯಾಧಿಪತಿ.” ಅವನಿಗೆ ಈ ಹೆಸರನ್ನು ಇಡುವ ಮೂಲಕ ಅವನ ಹೆತ್ತವರು ತಮಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರಿಸಿದರು. (ದಾನಿ. 1:6) ಹೆತ್ತವರೇ, ಯೆಹೋವನ ಬಗ್ಗೆ ನಿಮ್ಮ ಮಕ್ಕಳಿಗೆ ತಾಳ್ಮೆಯಿಂದ ಕಲಿಸಿ. ಪ್ರಯತ್ನ ಬಿಡಬೇಡಿ. (ಎಫೆ. 6:4) ಅವರೊಂದಿಗೆ ಪ್ರಾರ್ಥಿಸಿ, ಅವರಿಗಾಗಿ ಪ್ರಾರ್ಥಿಸಿ. ಯೆಹೋವನು ಯಾವುದನ್ನು ಸರಿ ಅನ್ನುತ್ತಾನೋ ಅದನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ. ಆಗ ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು.—ಕೀರ್ತ. 37:5.
ಕಷ್ಟದಲ್ಲೂ ಸುಖದಲ್ಲೂ ನಂಬಿಕೆ ಮತ್ತು ವಿಧೇಯತೆ ತೋರಿಸಿದ ಯೋಬ!
16, 17. (ಎ) ಯೋಬ ಶ್ರೀಮಂತನಾಗಿದ್ದರಿಂದ, ಎಲ್ಲರಿಂದಲೂ ಅವನಿಗೆ ಗೌರವ ಸಿಗುತ್ತಿದ್ದರಿಂದ ಅವನು ಯಾವ ಸವಾಲನ್ನು ಎದುರಿಸಬೇಕಾಗಿತ್ತು? (ಬಿ) ಅವನಿಗೆ ಕಷ್ಟಗಳು ಬಂದಾಗ ಯಾವ ಸವಾಲನ್ನು ಎದುರಿಸಬೇಕಾಗಿತ್ತು?
16 ಯೋಬ ಯಾವ ಸವಾಲುಗಳನ್ನು ಎದುರಿಸಿದನು? ಯೋಬನು ಜೀವನದಲ್ಲಿ ದೊಡ್ಡ ಏರುಪೇರುಗಳನ್ನು ನೋಡಿದನು. ಆರಂಭದಲ್ಲಿ “ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವಾಸ್ತ್ಯವುಳ್ಳವನಾಗಿದ್ದನು.” (ಯೋಬ 1:3) ತುಂಬ ಶ್ರೀಮಂತನಾಗಿದ್ದನು ಮತ್ತು ಅನೇಕರಿಗೆ ಅವನ ಪರಿಚಯವಿತ್ತು. ಅವನ ಮೇಲೆ ತುಂಬ ಗೌರವ ಇತ್ತು. (ಯೋಬ 29:7-16) ಇಷ್ಟೆಲ್ಲಾ ಇದ್ದರೂ ತಾನು ಬೇರೆಯವರಿಗಿಂತ ಶ್ರೇಷ್ಠ, ತನಗೆ ದೇವರು ಬೇಕಿಲ್ಲ ಅಂತ ಯೋಬ ನೆನಸಲಿಲ್ಲ. ಆದ್ದರಿಂದಲೇ ಯೆಹೋವನು ಅವನನ್ನು “ನನ್ನ ದಾಸ” ಎಂದು ಕರೆದನು. ಅಲ್ಲದೇ “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ” ಎಂದನು.—ಯೋಬ 1:8.
17 ಆದರೆ ಇದ್ದಕ್ಕಿದ್ದಂತೆ ಯೋಬನ ಜೀವನದಲ್ಲಿ ಎಲ್ಲಾ ತಲೆಕೆಳಗಾಯಿತು. ಅವನ ಹತ್ತಿರ ಇದ್ದ ಎಲ್ಲವನ್ನೂ ಅವನು ಕಳಕೊಂಡನು. ಸಾಯಬೇಕು ಅನ್ನುವಷ್ಟರ ಮಟ್ಟಿಗೆ ಅವನಿಗೆ ದುಃಖವಾಯಿತು. ಅವನಿಗೆ ಬಂದ ಆ ಕಷ್ಟಗಳಿಗೆಲ್ಲ ಸೈತಾನನೇ ಕಾರಣ ಎಂದು ಅವನಿಗೆ ಗೊತ್ತಿರಲಿಲ್ಲ. ಯೋಬನು ಒಬ್ಬ ಸ್ವಾರ್ಥಿ, ದೇವರು ಅವನನ್ನು ಆಶೀರ್ವದಿಸುತ್ತಾ ಇರುವುದರಿಂದ ಆತನ ಆರಾಧನೆ ಮಾಡುತ್ತಿದ್ದಾನೆ ಎಂದು ಸೈತಾನ ಆಪಾದಿಸಿದನು. (ಯೋಬ 1:9, 10 ಓದಿ.) ಯೆಹೋವನು ಇದನ್ನು ತುಂಬ ಗಂಭೀರವಾಗಿ ತೆಗೆದುಕೊಂಡನು. ಸೈತಾನ ಒಬ್ಬ ಮಹಾ ಸುಳ್ಳುಗಾರ ಎಂದು ರುಜುಪಡಿಸಲು ಯೆಹೋವನು ಏನು ಮಾಡಿದನು? ಯೋಬನು ತನ್ನ ನಿಷ್ಠೆಯನ್ನು ರುಜುಪಡಿಸಲು ಮತ್ತು ಯೆಹೋವನನ್ನು ನಿಸ್ವಾರ್ಥ ಪ್ರೀತಿಯಿಂದ ಆರಾಧಿಸುತ್ತಾನೆಂದು ತೋರಿಸಲು ಯೋಬನಿಗೊಂದು ಅವಕಾಶ ಕೊಟ್ಟನು.
18. (ಎ) ಯೋಬನ ಬಗ್ಗೆ ನಿಮಗೆ ತುಂಬ ಇಷ್ಟವಾಗುವ ವಿಷಯ ಯಾವುದು? (ಬಿ) ಯೋಬನ ವಿಷಯದಲ್ಲಿ ಯೆಹೋವನು ನಡಕೊಂಡ ರೀತಿಯಿಂದ ನಾವು ಯೆಹೋವನ ಬಗ್ಗೆ ಏನು ಕಲಿಯಬಹುದು?
18 ಸೈತಾನ ಯೋಬನ ಮೇಲೆ ಪುನಃ ಪುನಃ ಕ್ರೂರವಾಗಿ ಆಕ್ರಮಣ ಮಾಡಿದನು ಮತ್ತು ಇದೆಲ್ಲಾ ದೇವರ ಕೈಯಿಂದಲೇ ಆಗುತ್ತಿದೆ ಅನ್ನುವ ಹಾಗೆ ತೋರಿಸಿದನು. (ಯೋಬ 1:13-21) ನಂತರ ಯೋಬನ ಸ್ನೇಹಿತರೆಂದು ಹೇಳಿಕೊಂಡು ಬಂದವರು ಗಾಯದ ಮೇಲೆ ಬರೆ ಎಳೆಯುವ ರೀತಿ ಅವನ ಹತ್ತಿರ ಮಾತಾಡಿದರು. ಅವನು ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ದೇವರು ಅವನಿಗೆ ಶಿಕ್ಷೆ ಕೊಡುತ್ತಿದ್ದಾನೆ ಅಂದರು. (ಯೋಬ 2:11; 22:1, 5-10) ಇಷ್ಟೆಲ್ಲಾ ಆದರೂ ಯೋಬನು ಯೆಹೋವನಿಗೆ ನಿಷ್ಠೆ ತೋರಿಸಿದನು. ಯೋಬ ದುಡುಕಿ ಕೆಲವೊಂದು ವಿಷಯಗಳನ್ನು ಹೇಳಿದನು ನಿಜ. (ಯೋಬ 6:1-3) ಆದರೆ ಮನಸ್ಸಿಗೆ ತುಂಬ ನೋವಾಗಿದ್ದ ಕಾರಣ ಅವನು ಹೀಗೆ ಮಾತಾಡಿದನೆಂದು ಯೆಹೋವನು ಅರ್ಥಮಾಡಿಕೊಂಡನು. ಸೈತಾನ ಒಬ್ಬ ರೌಡಿಯಂತೆ ಯೋಬನನ್ನು ನೆಲಕ್ಕೆ ದೊಬ್ಬಿ ಒದೆಯುತ್ತಾ ಹೀನಾಯ ಮಾತುಗಳಿಂದ ಕೊಲ್ಲುತ್ತಿದ್ದಂತೆ ಇತ್ತಾದರೂ ಯೋಬ ದೇವರನ್ನು ದೂರ ಮಾಡಲಿಲ್ಲ. ಇದನ್ನು ಯೆಹೋವನು ಗಮನಿಸಿದನು. ಹಾಗಾಗಿ, ಈ ಎಲ್ಲಾ ಕಷ್ಟಕಾಲ ಮುಗಿದ ಮೇಲೆ ಯೆಹೋವನು ಯೋಬನಿಗೆ ಅವನ ಹತ್ತಿರ ಮೊದಲು ಇದ್ದದ್ದಕ್ಕಿಂತ ಎರಡು ಪಟ್ಟು ಹೆಚ್ಚು ಕೊಟ್ಟನು, ಅವನ ಆಯಸ್ಸಿಗೆ 140 ವರ್ಷ ಸೇರಿಸಿದನು. (ಯಾಕೋ. 5:11) ಯೋಬನು ಈ ಸಮಯದಲ್ಲೂ ಪೂರ್ಣ ಹೃದಯದಿಂದ ದೇವರ ಸೇವೆಯನ್ನು ಮುಂದುವರಿಸಿದನು. ಇದು ನಮಗೆ ಹೇಗೆ ಗೊತ್ತು? ಹೇಗೆಂದರೆ, ಈ ಲೇಖನದ ಮುಖ್ಯ ವಚನವಾದ ಯೆಹೆಜ್ಕೇಲ 14:14ನ್ನು ಯೋಬನು ಸತ್ತು ಅನೇಕ ಶತಮಾನಗಳು ಕಳೆದ ಮೇಲೆ ಬರೆಯಲಾಯಿತು.
19, 20. (ಎ) ಯೋಬನು ತೋರಿಸಿದ ನಂಬಿಕೆ ಮತ್ತು ವಿಧೇಯತೆಯನ್ನು ನಾವು ಹೇಗೆ ಅನುಕರಿಸಬಹುದು? (ಬಿ) ಯೆಹೋವನಂತೆ ನಾವು ಹೇಗೆ ಬೇರೆಯವರಿಗೆ ಅನುಕಂಪ ತೋರಿಸಬಹುದು?
19 ಯೋಬನ ನಂಬಿಕೆ ಮತ್ತು ವಿಧೇಯತೆಯನ್ನು ನಾವು ಹೇಗೆ ಅನುಕರಿಸಬಹುದು? ನಮ್ಮ ಸನ್ನಿವೇಶ ಹೇಗೇ ಇರಲಿ, ಜೀವನದಲ್ಲಿ ನಮಗೆ ಯೆಹೋವನೇ ಅತಿ ಪ್ರಾಮುಖ್ಯ ವ್ಯಕ್ತಿ ಎಂದು ತೋರಿಸಬೇಕು. ನಾವು ಆತನಲ್ಲಿ ಸಂಪೂರ್ಣ ಭರವಸೆ ಇಟ್ಟು ಪೂರ್ಣ ಹೃದಯದಿಂದ ಆತನ ಮಾತಿಗೆ ಕಿವಿಗೊಡಬೇಕು. ಹೀಗೆ ಮಾಡಲು ನಮಗೆ ಯೋಬನಿಗಿಂತ ಹೆಚ್ಚಿನ ಕಾರಣಗಳಿವೆ. ಯಾಕೆಂದರೆ ನಮಗೆ ಸೈತಾನ ಮತ್ತು ಅವನು ಉಪಯೋಗಿಸುವ ಕುತಂತ್ರಗಳ ಬಗ್ಗೆ ಹೆಚ್ಚು ತಿಳಿದಿದೆ. (2 ಕೊರಿಂ. 2:11) ಬೈಬಲಿನಿಂದ, ಮುಖ್ಯವಾಗಿ ಯೋಬ ಪುಸ್ತಕದಿಂದ, ದೇವರು ಯಾಕೆ ಕಷ್ಟಸಂಕಟಗಳನ್ನು ಅನುಮತಿಸುತ್ತಾನೆ ಎಂದು ಗೊತ್ತಾಗಿದೆ. ದೇವರ ರಾಜ್ಯ ಯೇಸು ಕ್ರಿಸ್ತನು ಆಳುತ್ತಿರುವ ನಿಜ ಸರ್ಕಾರ ಎಂದು ನಮಗೆ ದಾನಿಯೇಲನ ಪ್ರವಾದನೆಯಿಂದ ತಿಳಿದಿದೆ. (ದಾನಿ. 7:13, 14) ಈ ಸರ್ಕಾರ ಬೇಗನೆ ಇಡೀ ಲೋಕದ ಮೇಲೆ ಆಳ್ವಿಕೆ ಮಾಡಿ ಎಲ್ಲಾ ಕಷ್ಟಸಂಕಟಗಳನ್ನು ತೆಗೆದುಹಾಕಲಿದೆ ಎಂದು ನಮಗೆ ಗೊತ್ತು.
20 ನಮ್ಮ ಸಹೋದರರು ಕಷ್ಟಪಡುತ್ತಿರುವಾಗ ನಾವು ಅನುಕಂಪ ತೋರಿಸಬೇಕೆಂದು ಸಹ ಯೋಬನ ವೃತ್ತಾಂತದಿಂದ ಕಲಿಯುತ್ತೇವೆ. ಅವರು ಸಹ ಯೋಬನಂತೆ ದುಡುಕಿ ಏನಾದರೂ ಹೇಳಿಬಿಡಬಹುದು. (ಪ್ರಸಂ. 7:7) ಆದರೆ ನಾವು ಅವರ ಬಗ್ಗೆ ಕೆಟ್ಟದಾಗಿ ನೆನಸಬಾರದು, ಏನೋ ತಪ್ಪುಮಾಡಿದ್ದಾರೆ ಎಂದು ಅಪವಾದ ಹಾಕಬಾರದು. ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಮಾಡಿದರೆ ನಾವು ಕನಿಕರ ತೋರಿಸುವ ನಮ್ಮ ಪ್ರೀತಿಯ ತಂದೆಯಾದ ಯೆಹೋವನಂತೆ ಇರುತ್ತೇವೆ.—ಕೀರ್ತ. 103:8.
ಯೆಹೋವನು “ನಿಮ್ಮನ್ನು ಬಲಪಡಿಸುವನು”
21. ಒಂದನೇ ಪೇತ್ರ 5:10ರಲ್ಲಿರುವ ಮಾತುಗಳು ನೋಹ, ದಾನಿಯೇಲ ಮತ್ತು ಯೋಬನ ಅನುಭವವನ್ನು ಯಾಕೆ ನೆನಪಿಗೆ ತರುತ್ತವೆ?
21 ನೋಹ, ದಾನಿಯೇಲ ಮತ್ತು ಯೋಬ ಬೇರೆ ಬೇರೆ ಸಮಯದಲ್ಲಿ, ಬೇರೆ ಬೇರೆ ಸನ್ನಿವೇಶದಲ್ಲಿ ಜೀವಿಸಿದ ವ್ಯಕ್ತಿಗಳು. ಆದರೂ ತಮಗೆ ಬಂದ ಎಲ್ಲಾ ಸವಾಲುಗಳನ್ನು ತಾಳಿಕೊಂಡರು. ಅವರ ಅನುಭವ ನಮಗೆ ಪೇತ್ರನ ಈ ಮಾತುಗಳನ್ನು ನೆನಪಿಗೆ ತರುತ್ತದೆ: “ಸಕಲ ಅಪಾತ್ರ ದಯೆಯ ದೇವರು ನೀವು ಸ್ವಲ್ಪಕಾಲ ಕಷ್ಟವನ್ನು ಅನುಭವಿಸಿದ ಬಳಿಕ ನಿಮ್ಮ ತರಬೇತಿಯನ್ನು ತಾನೇ ಪೂರ್ಣಗೊಳಿಸಿ ನಿಮ್ಮನ್ನು ದೃಢಪಡಿಸುವನು, ನಿಮ್ಮನ್ನು ಬಲಪಡಿಸುವನು.”—1 ಪೇತ್ರ 5:10.
22. ಮುಂದಿನ ಲೇಖನದಲ್ಲಿ ನಾವು ಏನನ್ನು ತಿಳಿದುಕೊಳ್ಳಲಿದ್ದೇವೆ?
22 ಒಂದನೇ ಪೇತ್ರ 5:10ರಲ್ಲಿರುವ ಮಾತುಗಳು ಇಂದು ಯೆಹೋವನ ಜನರಾಗಿರುವ ನಮಗೂ ಅನ್ವಯಿಸುತ್ತವೆ. ಏನೇ ಕಷ್ಟ ಬಂದರೂ ನಮಗೆ ಬೇಕಾದ ಬಲ ಕೊಟ್ಟು ದೃಢಪಡಿಸುವೆನೆಂದು ಯೆಹೋವನು ಆಶ್ವಾಸನೆ ಕೊಟ್ಟಿದ್ದಾನೆ. ನಮ್ಮೆಲ್ಲರಿಗೂ ಯೆಹೋವನು ಕೊಡುವ ಬಲ ಬೇಕು. ಆ ಬಲದಿಂದ ನಾವು ದೃಢವಾಗಿ ನಿಂತು ಆತನಿಗೆ ನಂಬಿಗಸ್ತರಾಗಿರಲು ಸಾಧ್ಯ. ಇದೇ ಕಾರಣಕ್ಕೆ ನಾವು ನೋಹ, ದಾನಿಯೇಲ, ಯೋಬನ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಲು ಬಯಸುತ್ತೇವೆ. ಈ ವ್ಯಕ್ತಿಗಳಿಗೆ ಯೆಹೋವನ ಬಗ್ಗೆ ಚೆನ್ನಾಗಿ ಗೊತ್ತಿದ್ದರಿಂದ ಅವರು ಆತನಿಗೆ ನಂಬಿಗಸ್ತರಾಗಿ ಉಳಿದರು. ದೇವರು ಅವರಿಂದ ಏನು ಬಯಸುತ್ತಾನೋ ಅದನ್ನು ಅವರು ‘ಸಂಪೂರ್ಣವಾಗಿ ಅರ್ಥಮಾಡಿಕೊಂಡರು.’ (ಜ್ಞಾನೋ. 28:5, ನೂತನ ಲೋಕ ಭಾಷಾಂತರ) ನಾವು ಸಹ ಅದನ್ನೇ ಮಾಡಬೇಕು. ಇದರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.
a ಯೆಹೆಜ್ಕೇಲನನ್ನು ಕ್ರಿ.ಪೂ. 617ರಲ್ಲಿ ಬಾಬೆಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಹೋಗಿ ‘ಆರನೆಯ ವರುಷದಲ್ಲಿ’ ಅಂದರೆ ಕ್ರಿ.ಪೂ. 612ರಲ್ಲಿ ಯೆಹೆಜ್ಕೇಲ 8:1–19:14ರಲ್ಲಿರುವ ಮಾತುಗಳನ್ನು ಅವನು ಬರೆದನು.
b ನೋಹನ ತಂದೆ ಲೆಮೆಕನಿಗೆ ದೇವರಲ್ಲಿ ನಂಬಿಕೆಯಿತ್ತು. ಆದರೆ ಜಲಪ್ರಳಯ ಬರುವುದಕ್ಕೆ ಐದು ವರ್ಷಗಳ ಮುಂಚೆಯೇ ತೀರಿಕೊಂಡನು. ಪ್ರಳಯ ಬಂದಾಗ ನೋಹನ ತಾಯಿ ಮತ್ತು ಒಡಹುಟ್ಟಿದವರು ಬದುಕಿರುತ್ತಿದ್ದರೆ ಖಂಡಿತ ನಾಶವಾಗಿರುತ್ತಾರೆ.
c ಯೆಹೋವನು ಹನನ್ಯ, ಮೀಶಾಯೇಲ ಮತ್ತು ಅಜರ್ಯನಿಗೂ ದೊಡ್ಡ ಸ್ಥಾನ ಸಿಗುವಂತೆ ಮಾಡಿರಬೇಕು. ಅವರು ಸಹ ತಮ್ಮ ಅಧಿಕಾರವನ್ನು ಉಪಯೋಗಿಸಿ ಯೆಹೂದ್ಯರಿಗೆ ಸಹಾಯ ಮಾಡಬೇಕೆನ್ನುವುದು ಯೆಹೋವನ ಉದ್ದೇಶವಾಗಿ ಇದ್ದಿರಬೇಕು.—ದಾನಿ. 2:49.