ಶಾಂತಿ ನೀವು ಹೇಗೆ ಪಡಕೊಳ್ಳಬಹುದು?
ಅಶಾಂತಿ ತುಂಬಿರುವ ಈ ಲೋಕದಲ್ಲಿ ಶಾಂತಿ-ನೆಮ್ಮದಿಯಿಂದ ಇರಲು ನಾವು ತುಂಬನೇ ಕಷ್ಟ ಪಡಬೇಕು. ನಮಗೆ ಸ್ವಲ್ಪ ಮಟ್ಟಿಗಿನ ಶಾಂತಿ ಇದ್ದರೂ ಕೆಲವೊಮ್ಮೆ ಅದನ್ನು ಉಳಿಸಿಕೊಳ್ಳಲೂ ಒದ್ದಾಡಬೇಕಾಗುತ್ತದೆ. ನಿಜವಾದ ಮತ್ತು ಶಾಶ್ವತವಾದ ಶಾಂತಿಯನ್ನು ಪಡಕೊಳ್ಳಲು ನಾವೇನು ಮಾಡಬೇಕು ಎಂದು ದೇವರ ವಾಕ್ಯ ತಿಳಿಸುತ್ತದೆ? ಆ ಶಾಂತಿ ಬೇರೆಯವರಿಗೂ ಸಿಗಲು ನಾವು ಹೇಗೆ ಸಹಾಯ ಮಾಡಬಹುದು?
ನಿಜ ಶಾಂತಿ ಪಡಕೊಳ್ಳಲು ನಾವೇನು ಮಾಡಬೇಕು?
ನಾವು ಸುರಕ್ಷಿತವಾಗಿದ್ದರೆ ಮತ್ತು ಮನಸ್ಸಿನಲ್ಲಿ ಕಳವಳ ಇಲ್ಲದಿದ್ದರೆ ನಿಜ ಶಾಂತಿ ಸಿಕ್ಕಿದೆ ಎಂದು ಅರ್ಥ. ಬೇರೆಯವರ ಜೊತೆ ನಮಗೆ ಆಪ್ತ ಸ್ನೇಹ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಶಾಶ್ವತವಾದ ಶಾಂತಿ ಬೇಕಾದರೆ ದೇವರೊಟ್ಟಿಗೆ ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಇದನ್ನು ಹೇಗೆ ಮಾಡುವುದು?
ಯೆಹೋವನ ನೀತಿಯುತ ಆಜ್ಞೆಗಳನ್ನು ಮತ್ತು ತತ್ವಗಳನ್ನು ನಾವು ಪಾಲಿಸುವಾಗ ನಮಗೆ ಆತನಲ್ಲಿ ನಂಬಿಕೆಯಿದೆ ಮತ್ತು ಆತನೊಂದಿಗೆ ಶಾಂತಿ ಸಂಬಂಧ ಇಟ್ಟುಕೊಳ್ಳಲು ಬಯಸುತ್ತೇವೆಂದು ತೋರಿಸಿಕೊಡುತ್ತೇವೆ. (ಯೆರೆ. 17:7, 8; ಯಾಕೋ. 2:22, 23) ಆಗ ಯೆಹೋವನು ನಮಗೆ ಹತ್ತಿರವಾಗುತ್ತಾನೆ ಮತ್ತು ಶಾಂತಿ-ಸಮಾಧಾನವನ್ನು ನಮಗೆ ಕೊಡುತ್ತಾನೆ. ಯೆಶಾಯ 32:17, “[ನೀತಿಯಿಂದ] ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು [ನೀತಿಯ] ನಿತ್ಯಪರಿಣಾಮವಾಗಿರುವವು” ಎಂದು ಹೇಳುತ್ತದೆ. ನಾವು ಮನಃಪೂರ್ವಕವಾಗಿ ಯೆಹೋವನ ಮಾತನ್ನು ಕೇಳಿ ಅದರಂತೆ ನಡೆದರೆ ನಮಗೆ ನಿಜವಾದ ಶಾಂತಿ ಸಿಗುತ್ತದೆ.—ಯೆಶಾ. 48:18, 19.
ನಮ್ಮ ಸ್ವರ್ಗೀಯ ತಂದೆ ಕೊಟ್ಟಿರುವ ಒಂದು ಬೆಲೆಬಾಳುವ ಉಡುಗೊರೆಯಿಂದಲೂ ನಮಗೆ ಶಾಂತಿ ಸಿಗುತ್ತದೆ. ಆ ಉಡುಗೊರೆ ಪವಿತ್ರಾತ್ಮವೇ ಆಗಿದೆ.—ಅ. ಕಾ. 9:31.
ಶಾಂತಿಯನ್ನು ಪಡಕೊಳ್ಳಲು ಪವಿತ್ರಾತ್ಮ ಸಹಾಯ ಮಾಡುತ್ತದೆ
ಅಪೊಸ್ತಲ ಪೌಲನು ಶಾಂತಿಯನ್ನು ‘ಪವಿತ್ರಾತ್ಮದಿಂದ ಉಂಟಾಗುವ ಫಲದ’ ಮೂರನೇ ಅಂಶವಾಗಿ ಪಟ್ಟಿಮಾಡಿದ್ದಾನೆ. (ಗಲಾ. 5:22, 23) ಪವಿತ್ರಾತ್ಮದಿಂದ ನಿಜ ಶಾಂತಿ ಉಂಟಾಗುತ್ತದೆ. ಹಾಗಾಗಿ ನಾವು ನಿಜ ಶಾಂತಿಯನ್ನು ಪಡಕೊಳ್ಳಲು ಪವಿತ್ರಾತ್ಮವು ನಮ್ಮನ್ನು ಪ್ರಭಾವಿಸುವಂತೆ ಬಿಟ್ಟುಕೊಡಬೇಕು. ಮುಂದಿನ ಎರಡು ವಿಧಗಳಲ್ಲಿ ಪವಿತ್ರಾತ್ಮ ನಮ್ಮನ್ನು ಪ್ರಭಾವಿಸುವಂತೆ ನಾವು ಬಿಟ್ಟುಕೊಡಬೇಕು.
ಮೊದಲನೆಯ ವಿಧ, ನಾವು ಬೈಬಲನ್ನು ಪ್ರತಿದಿನ ಓದಬೇಕು. (ಕೀರ್ತ. 1:2, 3) ಬೈಬಲಿನಲ್ಲಿರುವ ಸಂದೇಶವನ್ನು ನಾವು ಧ್ಯಾನಿಸುತ್ತಾ ಇರುವುದಾದರೆ ಅನೇಕ ವಿಷಯಗಳಲ್ಲಿ ಯೆಹೋವನ ಯೋಚನೆ ಏನಾಗಿದೆ ಎಂದು ಅರ್ಥಮಾಡಿಕೊಳ್ಳಲು ಪವಿತ್ರಾತ್ಮವು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ಯೆಹೋವನು ಹೇಗೆ ಶಾಂತಿಯಿಂದ ಇರುತ್ತಾನೆ ಮತ್ತು ಶಾಂತಿ ಅನ್ನುವುದು ಆತನಿಗೆ ಯಾಕೆ ಪ್ರಾಮುಖ್ಯವಾಗಿದೆ ಎಂದು ಗೊತ್ತಾಗುತ್ತದೆ. ದೇವರ ವಾಕ್ಯದಲ್ಲಿರುವ ಅಂಥ ಪಾಠಗಳನ್ನು ಅನ್ವಯಿಸಿಕೊಂಡಾಗ ನಾವಿನ್ನೂ ಹೆಚ್ಚು ಶಾಂತಿಯನ್ನು ಪಡಕೊಳ್ಳುತ್ತೇವೆ.—ಜ್ಞಾನೋ. 3:1, 2.
ಎರಡನೆಯ ವಿಧ, ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. (ಲೂಕ 11:13) ನಾವು ಯೆಹೋವನ ಸಹಾಯಕ್ಕಾಗಿ ಬೇಡಿಕೊಂಡರೆ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು” ಎಂದು ಆತನು ಮಾತು ಕೊಟ್ಟಿದ್ದಾನೆ. (ಫಿಲಿ. 4:6, 7) ಯೆಹೋವನ ಪವಿತ್ರಾತ್ಮಕ್ಕಾಗಿ ನಾವು ಯಾವಾಗಲೂ ಪ್ರಾರ್ಥಿಸಿದರೆ ನಮ್ಮ ದೇವರು ತನ್ನ ಆಪ್ತ ಸ್ನೇಹಿತರಿಗೆ ಮಾತ್ರ ಕೊಡುವಂಥ ಮನಶ್ಶಾಂತಿಯನ್ನು ನಮಗೆ ಕೊಡುತ್ತಾನೆ.—ರೋಮ. 15:13.
ಅನೇಕರು ಬೈಬಲಿನ ಸಲಹೆಗಳನ್ನು ಅನ್ವಯಿಸಿ ಅಗತ್ಯವಿದ್ದ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ಶಾಂತಿ ಸಿಕ್ಕಿದೆ, ಯೆಹೋವನೊಂದಿಗೆ ಮತ್ತು ಇತರರೊಂದಿಗೆ ಶಾಂತಿಯಿಂದ ಇದ್ದಾರೆ. ಹೇಗೆ?
ಅವರು ಹೇಗೆ ಶಾಂತಿಯನ್ನು ಪಡಕೊಂಡರು?
ಇಂದು ಕ್ರೈಸ್ತ ಸಭೆಯಲ್ಲಿರುವ ಕೆಲವರು ಒಂದು ಸಮಯದಲ್ಲಿ ‘ಕೋಪಿಷ್ಠರು’ ಆಗಿದ್ದರು. ಆದರೆ ಈಗ ಅವರು ಬೇರೆಯವರ ಹತ್ತಿರ ದಯೆ, ತಾಳ್ಮೆ ಮತ್ತು ಶಾಂತಿ-ಸಮಾಧಾನದಿಂದ ನಡಕೊಳ್ಳುತ್ತಾರೆ.a ತುಂಬ ಕಾಳಜಿ ತೋರಿಸುತ್ತಾರೆ. (ಜ್ಞಾನೋ. 29:22) ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿಯು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು, ಇತರರೊಂದಿಗೆ ಶಾಂತಿಯಿಂದ ನಡಕೊಳ್ಳಲು ಹೇಗೆ ಕಲಿತರೆಂದು ನೋಡೋಣ.
ಡೇವಿಡ್ರವರ ಮನೋಭಾವ ಸರಿಯಿಲ್ಲದ ಕಾರಣ ಅವರು ಮಾತಾಡುತ್ತಿದ್ದ ವಿಧ ಸರಿಯಿರಲಿಲ್ಲ. ಸತ್ಯ ಕಲಿಯುವ ಮುಂಚೆ ಅವರು ಯಾವಾಗಲೂ ಬೇರೆಯವರನ್ನು ದೂರುತ್ತಾ ಇರುತ್ತಿದ್ದರು ಮತ್ತು ತಮ್ಮ ಹೆತ್ತವರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಒರಟಾಗಿ ಮಾತಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ತಾವು ಹೀಗಿರುವುದು ಸರಿಯಲ್ಲ, ಬದಲಾವಣೆ ಮಾಡಿಕೊಳ್ಳಬೇಕು ಅಂತ ಅರ್ಥಮಾಡಿಕೊಂಡರು. ಶಾಂತಿ-ಸಮಾಧಾನದಿಂದ ನಡಕೊಳ್ಳಲು ಕಲಿತರು. ಹೇಗೆ ಕಲಿತರು? ಅವರು ಹೇಳುವುದು: “ಬೈಬಲ್ ತತ್ವಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳೋಕೆ ಆರಂಭಿಸಿದೆ. ಇದರಿಂದ ನನಗೆ ನನ್ನ ಕುಟುಂಬದವರ ಮೇಲೆ ಗೌರವ ಹೆಚ್ಚಾಯಿತು, ಅವರಿಗೂ ನನ್ನ ಮೇಲೆ ಗೌರವ ಹೆಚ್ಚಾಯಿತು.”
ರೇಚಲ್ ಹುಟ್ಟಿ ಬೆಳೆದ ರೀತಿ ಅವರ ಸ್ವಭಾವದ ಮೇಲೆ ಪ್ರಭಾವ ಬೀರಿತು. ಅವರು ತಿಳಿಸುವುದು: “ನಮ್ಮ ಮನೆಯವರೆಲ್ಲರಿಗೂ ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ ಇರುತ್ತಿತ್ತು. ಸಹಜವಾಗಿ ನನಗೂ ಆ ಸ್ವಭಾವ ಬಂತು. ಈಗಲೂ ನನಗೆ ಕೋಪ ಬರುತ್ತೆ. ಆದರೆ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ತುಂಬ ಪ್ರಯತ್ನಿಸುತ್ತೇನೆ.” ಶಾಂತಿಯಿಂದ ನಡಕೊಳ್ಳಲು ಅವರು ಹೇಗೆ ಕಲಿತರು? “ನಾನು ಯಾವಾಗಲೂ ಯೆಹೋವನಿಗೆ ಪ್ರಾರ್ಥನೆ ಮಾಡುತ್ತೇನೆ, ಸಹಾಯಕ್ಕಾಗಿ ಬೇಡಿಕೊಳ್ಳುತ್ತೇನೆ” ಎಂದು ಹೇಳುತ್ತಾರೆ.
ನಾವು ಬೈಬಲ್ ತತ್ವಗಳನ್ನು ಅನ್ವಯಿಸಿಕೊಂಡರೆ ಮತ್ತು ಪವಿತ್ರಾತ್ಮದ ಸಹಾಯಕ್ಕಾಗಿ ದೇವರ ಹತ್ತಿರ ಬೇಡಿಕೊಂಡರೆ ಶಾಂತಿಯನ್ನು ಪಡಕೊಳ್ಳುತ್ತೇವೆ ಅನ್ನುವುದಕ್ಕೆ ತುಂಬ ಉದಾಹರಣೆಗಳಿವೆ. ಅದರಲ್ಲಿ ಡೇವಿಡ್ ಮತ್ತು ರೇಚಲ್ರದ್ದು ಎರಡು ಉದಾಹರಣೆಯಷ್ಟೆ. ದ್ವೇಷ, ಹಗೆತನ ತುಂಬಿರುವ ಈ ಲೋಕದಲ್ಲಿದ್ದರೂ ನಮಗೆ ಮನಶ್ಶಾಂತಿ ಇರುತ್ತದೆ, ನಮ್ಮ ಕುಟುಂಬದವರೊಂದಿಗೆ, ಜೊತೆ ಕ್ರೈಸ್ತರೊಂದಿಗೆ ಶಾಂತಿಯಿಂದ ನಡಕೊಳ್ಳಲು ಸಾಧ್ಯವಾಗುತ್ತದೆ ಎಂದು ನೋಡಿದೆವು. ಆದರೆ ಅವರ ಜೊತೆ ಮಾತ್ರವಲ್ಲ ‘ನಾವು ಎಲ್ಲರೊಂದಿಗೆ ಶಾಂತಿಶೀಲರಾಗಿರಬೇಕೆಂದು’ ಯೆಹೋವನು ಬಯಸುತ್ತಾನೆ. (ರೋಮ. 12:18) ಆ ರೀತಿ ಇರಲು ಸಾಧ್ಯನಾ? ನಾವು ಶಾಂತಿಯಿಂದಿರಲು ಪ್ರಯತ್ನಿಸಿದರೆ ನಮಗೆ ಯಾವ ಪ್ರಯೋಜನಗಳು ಸಿಗುತ್ತವೆ?
ಬೇರೆಯವರ ಜೊತೆ ಶಾಂತಿಯಿಂದ ನಡಕೊಳ್ಳಿ
ನಾವು ಜನರಿಗೆ ಶಾಂತಿ ಸಮಾಧಾನದಿಂದ ಜೀವಿಸುವ ಪರಿಸ್ಥಿತಿಯ ಬಗ್ಗೆ ಸಾರುತ್ತೇವೆ. ಇನ್ನೊಂದು ಅರ್ಥದಲ್ಲಿ ಆ ಪರಿಸ್ಥಿತಿಯಲ್ಲಿ ಜೀವಿಸಲು ಅವರನ್ನು ಆಮಂತ್ರಿಸುತ್ತೇವೆ. (ಯೆಶಾ. 9:6, 7; ಮತ್ತಾ. 24:14) ಸಂತೋಷಕರವಾಗಿ ಅನೇಕ ಜನರು ನಮ್ಮ ಸಂದೇಶಕ್ಕೆ ಒಳ್ಳೆ ಪ್ರತಿಕ್ರಿಯೆ ತೋರಿಸಿದ್ದಾರೆ. ಇದರಿಂದಾಗಿ, ತಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ನೋಡಿ ಅವರಿಗೆ ನಿರಾಶೆ ಆಗಲ್ಲ ಅಥವಾ ಕೋಪ ಬರಲ್ಲ. ಬದಲಿಗೆ ತಮ್ಮ ಭವಿಷ್ಯದ ಬಗ್ಗೆ ನಿಜವಾದ ನಿರೀಕ್ಷೆ ಇರುತ್ತದೆ ಮತ್ತು “ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನ” ಪಡುತ್ತಾರೆ.—ಕೀರ್ತ. 34:14.
ಆದರೆ ಎಲ್ಲರೂ ನಮ್ಮ ಸಂದೇಶಕ್ಕೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಲ್ಲ. ಕೆಲವರು ಆರಂಭದಲ್ಲೇ ಒಳ್ಳೆಯ ರೀತಿ ಪ್ರತಿಕ್ರಿಯಿಸಲ್ಲ. (ಯೋಹಾ. 3:19) ಆದರೆ ಪವಿತ್ರಾತ್ಮದ ಸಹಾಯದಿಂದ ನಾವು ಅವರಿಗೆ ಸಮಾಧಾನದಿಂದ ಮತ್ತು ಗೌರವದಿಂದ ಸುವಾರ್ತೆ ಸಾರುತ್ತೇವೆ. ಈ ರೀತಿ ನಾವು ಮತ್ತಾಯ 10:11-13ರಲ್ಲಿ ಯೇಸು ಕೊಟ್ಟ ಸಲಹೆಗಳನ್ನು ಪಾಲಿಸುತ್ತೇವೆ. ಅವನು ಹೇಳಿದ್ದು: “ನೀವು ಒಂದು ಮನೆಯೊಳಗೆ ಹೋಗುವಾಗ ಮನೆಯವರನ್ನು ವಂದಿಸಿರಿ; ಆ ಮನೆಯು ಯೋಗ್ಯವಾಗಿರುವಲ್ಲಿ ನೀವು ಹಾರೈಸುವ ಶಾಂತಿಯು ಅದರ ಮೇಲೆ ಬರಲಿ; ಅದು ಯೋಗ್ಯವಲ್ಲದಿದ್ದರೆ ನಿಮ್ಮ ಶಾಂತಿಯು ನಿಮಗೇ ಹಿಂದಿರುಗಲಿ.” ಈ ಸಲಹೆಯನ್ನು ಪಾಲಿಸಿದರೆ ನಾವು ಅಲ್ಲಿಂದ ಬರುವಾಗ ನಮ್ಮೊಳಗೆ ಶಾಂತಿ ಇರುತ್ತದೆ ಮತ್ತು ಮುಂದೆ ಯಾವತ್ತಾದರೂ ಆ ವ್ಯಕ್ತಿ ಕೇಳಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತೇವೆ.
ಸರಕಾರಿ ಅಧಿಕಾರಿಗಳ ಹತ್ತಿರವೂ ನಾವು ಗೌರವದಿಂದ ಮಾತಾಡುವುದಕ್ಕೆ ಶಾಂತ ಸ್ವಭಾವ ಸಹಾಯ ಮಾಡುತ್ತದೆ. ಅವರಲ್ಲಿ ಕೆಲವರು ನಮ್ಮ ಕೆಲಸವನ್ನು ವಿರೋಧಿಸುವವರೂ ಇರಬಹುದು. ಉದಾಹರಣೆಗೆ ಆಫ್ರಿಕದ ಒಂದು ದೇಶದಲ್ಲಿ ಯೆಹೋವನ ಸಾಕ್ಷಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಹಾಗಾಗಿ ರಾಜ್ಯ ಸಭಾಗೃಹಗಳನ್ನು ಕಟ್ಟಲು ನಮ್ಮ ಸಹೋದರರಿಗೆ ಅನುಮತಿ ಸಿಗಲಿಲ್ಲ. ಈ ಸಮಸ್ಯೆಯನ್ನು ಶಾಂತಿಯಿಂದ ಬಗೆಹರಿಸಲು ಒಬ್ಬ ಸಹೋದರರನ್ನು ಲಂಡನ್ನಲ್ಲಿದ್ದ ಆಫ್ರಿಕದ ಆ ದೇಶದ ರಾಯಭಾರಿಯ ಹತ್ತಿರ ಹೋಗಿ ಮಾತಾಡಲು ನೇಮಿಸಲಾಯಿತು. ಆ ಸಹೋದರ ಮುಂಚೆ ಆಫ್ರಿಕದ ಆ ದೇಶದಲ್ಲಿ ಮಿಷನರಿಯಾಗಿ ಸೇವೆ ಮಾಡಿದ್ದರು. ಆ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ಶಾಂತಿಯಿಂದ ನಡೆಯುತ್ತದೆ ಎಂದು ಈ ಸಹೋದರ ರಾಯಭಾರಿಗೆ ತಿಳಿಸಬೇಕಿತ್ತು. ಅವರ ಭೇಟಿಯ ಉದ್ದೇಶ ನೆರವೇರಿತಾ?
“ನಾನು ರಾಯಭಾರಿಯ ಆಫೀಸಿಗೆ ಹೋದಾಗ, ಅಲ್ಲಿದ್ದ ರಿಸೆಪ್ಷನಿಸ್ಟ್ ಹಾಕಿದ್ದ ಬಟ್ಟೆಯಿಂದ ಆಕೆ ನಾನು ಕಲಿತ ಭಾಷೆಯ ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದವಳಾಗಿದ್ದಾಳೆ ಎಂದು ಗೊತ್ತಾಯಿತು. ಹಾಗಾಗಿ ನಾನು ಆ ಭಾಷೆಯಲ್ಲೇ ಅವಳನ್ನು ವಂದಿಸಿದೆ. ಅವಳಿಗೆ ತುಂಬ ಆಶ್ಚರ್ಯ ಆಯಿತು. ‘ನನ್ನಿಂದ ಏನು ಸಹಾಯ ಆಗಬೇಕಿತ್ತು?’ ಎಂದು ಕೇಳಿದಳು. ನಾನು ಆಗ ತುಂಬ ವಿನಯದಿಂದ ‘ರಾಯಭಾರಿಯನ್ನು ನೋಡಬೇಕಿತ್ತು’ ಅಂತ ಹೇಳಿದೆ. ಅವಳು ರಾಯಭಾರಿಗೆ ಫೋನ್ ಮಾಡಿ ತಿಳಿಸಿದಳು. ಅವರು ನನ್ನನ್ನು ನೋಡಲು ಬಂದರು. ಅವರ ಬುಡಕಟ್ಟು ಜನಾಂಗದ ಭಾಷೆಯಲ್ಲೇ ನನ್ನನ್ನು ವಂದಿಸಿದರು. ಇದಾದ ಮೇಲೆ ನಾನು, ಸಾಕ್ಷಿಗಳು ಎಷ್ಟು ಶಾಂತಿಯಿಂದ ಕೆಲಸ ಮಾಡುತ್ತಾರೆ ಎಂದು ವಿವರಿಸುವಾಗ ಅವರು ತುಂಬ ಗಮನಕೊಟ್ಟು ಕೇಳಿಸಿಕೊಂಡರು” ಎಂದು ಆ ಸಹೋದರ ಹೇಳುತ್ತಾರೆ.
ಆ ಸಹೋದರ ಗೌರವದಿಂದ ವಿವರಿಸಿದ್ದನ್ನು ನೋಡಿ ರಾಯಭಾರಿಗೆ ಸಾಕ್ಷಿಗಳ ಕೆಲಸದ ಮೇಲಿದ್ದ ತಪ್ಪಭಿಪ್ರಾಯ ಮತ್ತು ಪೂರ್ವಗ್ರಹ ಬಹಳಷ್ಟು ಕಡಿಮೆಯಾಯಿತು. ಸ್ವಲ್ಪ ಸಮಯ ಆದ ಮೇಲೆ, ಆಫ್ರಿಕದ ಆ ದೇಶದ ಸರಕಾರವು ರಾಜ್ಯ ಸಭಾಗೃಹವನ್ನು ಕಟ್ಟಬಾರದೆಂದು ಮಾಡಿದ್ದ ನಿಷೇಧವನ್ನು ತೆಗೆದುಬಿಟ್ಟಿತು. ಶಾಂತಿಯಿಂದ ಸಮಸ್ಯೆ ಬಗೆಹರಿದಿದ್ದನ್ನು ನೋಡಿ ನಮ್ಮ ಸಹೋದರರು ಎಷ್ಟು ಸಂತೋಷಪಟ್ಟಿರಬೇಕು! ಇತರರ ಜೊತೆ ಗೌರವದಿಂದ ನಡಕೊಂಡರೆ ಅನೇಕ ಪ್ರಯೋಜನಗಳನ್ನು ಪಡಕೊಳ್ಳುತ್ತೇವೆ ಎಂದು ಇದರಿಂದ ಗೊತ್ತಾಗುತ್ತದೆ. ಆ ಪ್ರಯೋಜನಗಳಲ್ಲಿ ಶಾಂತಿಯೂ ಒಂದು.
ಶಾಶ್ವತವಾದ ಶಾಂತಿಯನ್ನು ಆನಂದಿಸಿ
ಇಂದು ಯೆಹೋವನ ಜನರು ಶಾಂತಿಯ ವಾತಾವರಣ ತುಂಬಿರುವ ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿದ್ದಾರೆ. ನಿಮ್ಮ ಜೀವನದಲ್ಲಿ ಪವಿತ್ರಾತ್ಮದ ಫಲದ ಈ ಅಂಶವನ್ನು ಬೆಳೆಸಿಕೊಂಡರೆ ಆ ಶಾಂತಿಯ ವಾತಾವರಣವನ್ನು ಇನ್ನೂ ಹೆಚ್ಚಿಸುತ್ತೀರಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಯೆಹೋವನ ಮೆಚ್ಚಿಕೆಯನ್ನು ಪಡೆಯುತ್ತೀರಿ. ಜೊತೆಗೆ ಹೊಸ ಲೋಕದಲ್ಲಿ ಹೇರಳವಾಗಿ ಶಾಂತಿಯನ್ನು ಪಡಕೊಳ್ಳುತ್ತೀರಿ. ಆ ಶಾಂತಿ ಶಾಶ್ವತವಾಗಿರುತ್ತದೆ.—2 ಪೇತ್ರ 3:13, 14.
a ಪವಿತ್ರಾತ್ಮದಿಂದ ಉಂಟಾಗುವ ಫಲದ ಅಂಶವಾದ ದಯೆಯ ಬಗ್ಗೆ ಈ ಸರಣಿಯ ಇನ್ನೊಂದು ಲೇಖನದಲ್ಲಿ ನೋಡಲಿದ್ದೇವೆ.