ಸದಾಕಾಲ ಜೀವಿಸಬೇಕೆಂದೇ ಸೃಷ್ಟಿಸಲ್ಪಟ್ಟಿದ್ದೇವೆ
ಸಂತೋಷದ ಜೀವನ ನಡೆಸಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಯಾವುದೇ ಕಾಯಿಲೆಗಳಿಲ್ಲದೆ, ಸಂತೋಷದಿಂದ ಶಾಶ್ವತವಾಗಿ ಬದುಕುವ ಅವಕಾಶ ಸಿಕ್ಕಿದರೆ ಹೇಗಿರುತ್ತೆ ಎಂದು ಸ್ವಲ್ಪ ಚಿತ್ರಿಸಿಕೊಳ್ಳಿ. ನಮ್ಮ ಪ್ರಿಯ ಜನರೊಂದಿಗೆ ಸಮಯ ಕಳೆಯಬಹುದು, ನಮಗಿಷ್ಟ ಆಗೋ ಎಲ್ಲಾ ಜಾಗಗಳಿಗೆ ಹೋಗಬಹುದು ಮತ್ತು ನಾವು ಆಸೆಪಟ್ಟ ವಿಷಯಗಳನ್ನೆಲ್ಲಾ ಕಲಿಯಲು ಸಮಯ ಸಿಗುತ್ತೆ.
ಈ ರೀತಿ ಸದಾಕಾಲ ಬದುಕಬೇಕೆಂದು ಆಸೆ ಪಡೋದು ತಪ್ಪಾ? ಖಂಡಿತ ತಪ್ಪಲ್ಲ. ಯಾಕಂದ್ರೆ, ದೇವರು ನಮ್ಮಲ್ಲಿ ಆ ಆಸೆ ಇಟ್ಟಿದ್ದಾನೆ ಎಂದು ಬೈಬಲ್ ತಿಳಿಸುತ್ತೆ. (ಪ್ರಸಂಗಿ 3:11) ಅಷ್ಟೇ ಅಲ್ಲ,“ದೇವರು ಪ್ರೀತಿಯಾಗಿದ್ದಾನೆ” ಎಂದು ಸಹ ಬೈಬಲ್ ತಿಳಿಸುತ್ತೆ. (1 ಯೋಹಾನ 4:8) ಹಾಗಾದರೆ ನಮ್ಮನ್ನು ಅಷ್ಟೊಂದು ಪ್ರೀತಿಸಿ, ಈ ರೀತಿ ಆಸೆ ನಮ್ಮಲ್ಲಿ ಇಟ್ಟ ದೇವರೇ ಅದನ್ನು ನೀರುಪಾಲು ಮಾಡಲು ಬಯಸುತ್ತಾನಾ?
ಸಾವು ನಮ್ಮ ಮಿತ್ರನಲ್ಲ. ಬೈಬಲ್ ಸಾವನ್ನು ಕರೆಯದೇ ಮನೆ ಬಾಗಿಲಿಗೆ ಬರೋ “ಶತ್ರು” ಥರ ಇದೆ ಎಂದು ಹೇಳುತ್ತೆ. (1 ಕೊರಿಂಥ 15:26) ಕೆಲವರನ್ನು ಇದು ಬೇಗಾನೇ ಭೇಟಿ ಮಾಡುತ್ತೆ. ಇನ್ನು ಕೆಲವರನ್ನು ತಡವಾಗಿ ಭೇಟಿ ಮಾಡುತ್ತೆ. ಆದರೆ, ಯಾರನ್ನೂ ಭೇಟಿಮಾಡದೆ ಅಂತು ಬಿಡಲ್ಲ. ಇದರ ಬಗ್ಗೆ ಯೋಚಿಸೋಕೂ ಕೆಲವರಿಗೆ ಇಷ್ಟ ಇಲ್ಲ, ಭಯನೂ ಆಗುತ್ತೆ. ನಮಗೆಲ್ಲಾ ಶತ್ರುವಾಗಿರೋ ಈ ಸಾವನ್ನು ಸೋಲಿಸಲು ಸಾಧ್ಯಾನಾ?
ಭರವಸೆಯಿಡಲು ಆಧಾರ
ನಿಮಗೆ ಗೊತ್ತಾ, ನಾವು ಸಾಯಬೇಕು ಅನ್ನೋದು ದೇವರ ಉದ್ದೇಶನೇ ಆಗಿರಲಿಲ್ಲ. ದೇವರ ಉದ್ದೇಶ ಮಾನವರು ಇದೇ ಭೂಮಿಯಲ್ಲಿ ಶಾಶ್ವತವಾಗಿ ಬದುಕಬೇಕು ಎಂದಾಗಿತ್ತು. ಇದಕ್ಕೆ ಬೈಬಲಿನ ಆದಿಕಾಂಡ ಪುಸ್ತಕ ಆಧಾರ ನೀಡುತ್ತೆ. ಯೆಹೋವ ದೇವರು ಮೊದಲು, ಮಾನವರು ಸಂತೋಷವಾಗಿ ಜೀವಿಸಲು ಏನೆಲ್ಲಾ ಬೇಕೋ ಅದೆಲ್ಲಾ ಸಿಗುವ ರೀತಿ ಭೂಮಿಯನ್ನು ಸೃಷ್ಟಿಸಿದನು. ನಂತರ, ಮೊದಲ ಮಾನವನಾದ ಆದಾಮನನ್ನು ಸೃಷ್ಟಿಸಿ, ಏದೆನ್ ಎಂಬ ಸುಂದರ ತೋಟವನ್ನೇ ಮನೆಯಾಗಿ ಕೊಟ್ಟನು. ‘ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಿ ಅದು ಬಹು ಒಳ್ಳೇದಾಗಿದೆ’ ಎಂದನು.—ಆದಿಕಾಂಡ 1:26, 31.
ದೇವರು ಆದಾಮನನ್ನು ತನ್ನ ಸ್ವರೂಪದಲ್ಲಿ ಅಂದರೆ, ಕುಂದುಕೊರತೆ ಇಲ್ಲದ ಹಾಗೆ ಸೃಷ್ಟಿ ಮಾಡಿದನು. (ಧರ್ಮೋಪದೇಶಕಾಂಡ 32:4) ಆದಾಮನ ಹೆಂಡತಿ ಹವ್ವಳಲ್ಲೂ ಯಾವುದೇ ಕುಂದುಕೊರತೆ ಇರಲಿಲ್ಲ. ಅವರಿಬ್ಬರ ಮನಸ್ಸು ಮತ್ತು ದೇಹ ಪರಿಪೂರ್ಣವಾಗಿತ್ತು, ಯಾವುದೇ ಲೋಪ ಇರಲಿಲ್ಲ. ಯೆಹೋವನು ಅವರಿಗೆ “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ ಅಂದನು.”—ಆದಿಕಾಂಡ 1:28.
ಇಲ್ಲಿ, ‘ಇಡೀ ಭೂಮಿಯನ್ನು ತುಂಬಿಕೊಳ್ಳಿರಿ’ ಎಂದು ಆದಾಮ-ಹವ್ವರಿಗೆ ಹೇಳಿದ್ದರ ಬಗ್ಗೆ ಮೊದಲು ನೋಡೋಣ. ಇದನ್ನು ಮಾಡಲು ತುಂಬ ಸಮಯ ಬೇಕಿತ್ತು. ಆದಾಮ-ಹವ್ವರಿಗೆ ಮಕ್ಕಳು ಹುಟ್ಟಿ, ಆ ಮಕ್ಕಳಿಗೆ ಮಕ್ಕಳು ಹುಟ್ಟಿ, ಹೀಗೆ ದೇವರ ಉದ್ದೇಶದಂತೆ ಇಡೀ ಭೂಮಿಯನ್ನು ತುಂಬಿಸಲು, ಕೇವಲ 100-150 ವರ್ಷ ಸಾಕಾಗುತ್ತಿರಲಿಲ್ಲ. (ಯೆಶಾಯ 45:18) ಈ ಕೆಲಸ ಕೊಟ್ಟಿದ್ದು ದೇವರೇ. ಹಾಗಾಗಿ, ಆದಾಮ-ಹವ್ವರ ಸಂತತಿ ಭೂಮಿಯಲ್ಲಿ ತುಂಬುವುದನ್ನು ನೋಡಲು, ಅವರಿಗೆ ದೀರ್ಘಾಯಸ್ಸನ್ನೂ ದೇವರು ಕೊಟ್ಟಿರಬೇಕಲ್ವಾ? ಕೊಟ್ಟಿಲ್ಲಾ ಅಂದರೆ ದೇವರು ಹೇಳಿದ ಮಾತುಗಳಿಗೆ ಅರ್ಥನೇ ಇರುತ್ತಿರಲಿಲ್ಲ.
ಈಗ, ‘ಪ್ರಾಣಿ, ಪಕ್ಷಿಗಳ ಮೇಲೆ ದೊರೆತನ ಮಾಡಿರಿ’ ಎಂದು ಹೇಳಿದ್ದರ ಬಗ್ಗೆ ನೋಡೋಣ. ದೇವರು, ಈಗಾಗಲೇ ಪ್ರಾಣಿಗಳಿಗೆ ಹೆಸರಿಡುವಂತೆ ಆದಾಮನಿಗೆ ಹೇಳಿದ್ದನು. (ಆದಿಕಾಂಡ 2:19) ಇದು ತುಂಬ ಸಮಯ ಹಿಡಿಯುವ ಕೆಲಸ. ಆದರೆ, ಪ್ರಾಣಿಗಳ ಮೇಲೆ ‘ದೊರೆತನ’ ಮಾಡಬೇಕಾದರೆ ಅದಕ್ಕಿಂತ ಜಾಸ್ತಿ ಸಮಯ ಬೇಕಿತ್ತು. ಯಾಕಂದ್ರೆ ಆದಾಮ, ಪ್ರಾಣಿಗಳ ಬಗ್ಗೆ ಚೆನ್ನಾಗಿ ತಿಳಿಯಬೇಕಿತ್ತು.
ಇದರಿಂದ ಒಂದು ವಿಷಯ ಗೊತ್ತಾಗುತ್ತೆ. ಅದೇನಂದರೆ, ದೇವರು ಹೇಳಿದ ಈ ಕೆಲಸಗಳನ್ನು ಪೂರೈಸಬೇಕಂದ್ರೆ, ಆದಾಮ-ಹವ್ವ ದೀರ್ಘಕಾಲ ಬದುಕಬೇಕಿತ್ತು. ಆದಾಮ ಹೆಚ್ಚು ವರ್ಷಗಳು ಬದುಕಿದ್ದನು ಸಹ.
ಭೂಮಿಯನ್ನು ಒಂದು ಸುಂದರ ತೋಟವಾಗಿ ಮಾಡಿ, ಅದರಲ್ಲಿ ಮಾನವರು ಸದಾ ಜೀವಿಸಬೇಕು ಎಂಬುದೇ ದೇವರ ಉದ್ದೇಶ
ಅವರು ದೀರ್ಘಕಾಲ ಬದುಕಿದ್ದರು
ಆ ಕಾಲದಲ್ಲಿ ಜನರು ತುಂಬಾ ವರ್ಷಗಳು ಬದುಕುತ್ತಿದ್ದರು ಎಂದು ಬೈಬಲ್ ತಿಳಿಸುತ್ತೆ. ಉದಾಹರಣೆಗೆ, ಆದಾಮ ‘ಒಟ್ಟು ಒಂಭೈನೂರ ಮೂವತ್ತು ವರುಷ ಬದುಕಿದ್ದನು.’ ಅಷ್ಟೇ ಅಲ್ಲ, ಬೈಬಲ್ನಲ್ಲಿ ಈ ರೀತಿ 900ಕ್ಕಿಂತ ಹೆಚ್ಚು ವರ್ಷಗಳು ಬದುಕಿದ್ದ ಆರು ಜನರ ಬಗ್ಗೆ ಇದೆ. ಅವರ ಹೆಸರುಗಳು, ಸೇತ, ಎನೋಷ, ಕೇನಾನ, ಯೆರೆದ, ಮೆತೂಷೆಲಹ ಮತ್ತು ನೋಹ. ಇವರೆಲ್ಲರೂ ನೋಹನ ದಿನಗಳಲ್ಲಿ ಬಂದ ಜಲಪ್ರಳಯಕ್ಕೆ ಮುಂಚೆ ಹುಟ್ಟಿದ್ದರು. ಜಲಪ್ರಳಯದ ಸಮಯದಲ್ಲಿ ನೋಹನಿಗೆ ಈಗಾಗಲೇ 600 ವರ್ಷ ಆಗಿತ್ತು! (ಆದಿಕಾಂಡ 5:5-27; 7:6; 9:29) ಈ ಆರು ಜನರು, ಇಷ್ಟೊಂದು ವರ್ಷ ಬದುಕಲು ಹೇಗೆ ಸಾಧ್ಯ?
ಇವರೆಲ್ಲರೂ ಪರಿಪೂರ್ಣ ಮಾನವರಾಗಿದ್ದ ಆದಾಮ-ಹವ್ವರ ಮೊದ-ಮೊದಲ ತಲೆಮಾರಿನಲ್ಲಿ ಹುಟ್ಟಿದವರು. ಈ ಕಾರಣದಿಂದಾಗಿಯೇ, ಇವರು ಅಷ್ಟೊಂದು ವರ್ಷ ಬದುಕಿದ್ದಿರಬಹುದು. ಆದರೆ ಪರಿಪೂರ್ಣತೆಗೂ, ದೀರ್ಘಕಾಲ ಜೀವಿಸುವುದಕ್ಕೂ ಏನು ಸಂಬಂಧ? ಸಾವನ್ನು ಸೋಲಿಸುವುದು ಹೇಗೆ? ಉತ್ತರ ತಿಳಿದುಕೊಳ್ಳಲು, ನಾವ್ಯಾಕೆ ವಯಸ್ಸಾಗಿ ಸಾಯುತ್ತೇವೆ ಎಂದು ಮೊದಲು ಅರ್ಥಮಾಡಿಕೊಳ್ಳಬೇಕು.