ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮಾರ್ಚ್ 4-10
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 ಪುಟ 55
ಮಮತೆ
ಸಹೋದರ ಪ್ರೀತಿಯು (ಗ್ರೀಕ್ ಪದ ಫಿ·ಲ·ಡೆಲ್·ಫಿಯ, ಅಕ್ಷರಾರ್ಥ “ಸಹೋದರನ ಮೇಲೆ ಇರುವ ಮಮತೆ”) ಕ್ರೈಸ್ತ ಸಭೆಯಲ್ಲಿರುವ ಪ್ರತಿಯೊಬ್ಬ ಸಹೋದರ-ಸಹೋದರಿಯರಲ್ಲೂ ಇರಬೇಕು. (ರೋಮ 12:10; ಇಬ್ರಿ 13:1; 1ಪೇತ್ರ 3:8 ಸಹ ನೋಡಿ.) ಹಾಗಾಗಿ ಸಭೆಯ ಸದಸ್ಯರ ಮಧ್ಯೆ ಇರುವ ಸಂಬಂಧ ಒಂದು ಕುಟುಂಬದ ಸದಸ್ಯರ ಮಧ್ಯೆ ಇರುವ ಸಂಬಂಧದಂತೆ ಆಪ್ತವಾಗಿರಬೇಕು, ಬಲವಾಗಿರಬೇಕು, ಪ್ರಾಮಾಣಿಕವಾಗಿರಬೇಕು. ಸಭೆಯ ಸದಸ್ಯರು ಈಗಾಗಲೇ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರಿಸುತ್ತಿರುವುದಾದರೂ ಅವರು ಅದನ್ನು ಇನ್ನೂ ಹೆಚ್ಚೆಚ್ಚಾಗಿ ತೋರಿಸಬೇಕು ಎಂದು ಬೈಬಲ್ ಉತ್ತೇಜಿಸುತ್ತದೆ.—1ಥೆಸ 4:9, 10.
“ಕೋಮಲ ಮಮತೆ” ಅನ್ನುವುದಕ್ಕಿರುವ ಗ್ರೀಕ್ ಪದ ಫಿ·ಲೊಸ್ಟರ್·ಗೋಸ್. ಈ ಪದ ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ಜೊತೆ ಇರುವ ಆಪ್ತತೆಯನ್ನು ಸೂಚಿಸುತ್ತದೆ. ಸ್ಟರ್ಗೋ ಎಂಬ ಮೂಲ ಪದವನ್ನು ಒಂದೇ ಕುಟುಂಬ ಸದಸ್ಯರ ಮಧ್ಯೆ ಇರುವ ಸ್ವಾಭಾವಿಕ ಮಮತೆಯನ್ನು ಸೂಚಿಸಲಿಕ್ಕಾಗಿ ಪದೇಪದೇ ಬಳಸಲಾಗಿದೆ. ಈ ಗುಣವನ್ನು ಬೆಳೆಸಿಕೊಳ್ಳುವಂತೆ ಅಪೊಸ್ತಲ ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದನು. (ರೋಮ 12:10) ಅಷ್ಟೇ ಅಲ್ಲ, ಕಡೇ ದಿವಸಗಳಲ್ಲಿ “ಸ್ವಾಭಾವಿಕ ಮಮತೆಯಿಲ್ಲದ” (ಗ್ರೀಕ್ ಪದ ಎಸ್ಟಾರ್·ಗೋಯ್) ಜನರು ಇರುತ್ತಾರೆ ಮತ್ತು ಇಂಥವರು ಮರಣಕ್ಕೆ ಪಾತ್ರರು ಎಂದು ಸಹ ಸೂಚಿಸಿದನು.—2ತಿಮೊ 3:3; ರೋಮ 1:31, 32.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
w11 9/1 ಪುಟ 21-22
ನೀವು ತೆರಿಗೆಗಳನ್ನು ಕಟ್ಟಬೇಕಾ?
ತೆರಿಗೆಗಳನ್ನು ಸಂತೋಷದಿಂದ ಕೊಡುವವರು ಸ್ವಲ್ಪನೇ ಜನ. ತಾವು ಕಟ್ಟುವ ತೆರಿಗೆಯನ್ನು ದುರುಪಯೋಗಿಸಲಾಗುತ್ತದೆ ಅಥವಾ ಭ್ರಷ್ಟಾಚಾರಕ್ಕೆ ಒಳಗಾಗಿ ದುಂದುವ್ಯಯವಾಗುತ್ತದೆ ಎಂದು ಅನೇಕರ ಅನಿಸಿಕೆ. ಇನ್ನು ಕೆಲವರು ತೆರಿಗೆ ಕಟ್ಟದಿರುವುದಕ್ಕೆ ನೈತಿಕ ಕಾರಣ ಕೊಡುತ್ತಾರೆ. ಇದನ್ನು ವಿವರಿಸುತ್ತಾ ಮಧ್ಯಪೂರ್ವದಲ್ಲಿರುವ ಒಂದು ದೇಶದ ನಿವಾಸಿಗಳು ಹೇಳಿದ್ದು: “ನಮ್ಮ ಮಕ್ಕಳನ್ನು ಕೊಲ್ಲುವ ಗುಂಡುಗಳನ್ನು ತಯಾರಿಸಲಿಕ್ಕೆ ನಾವು ಹಣ ಕೊಡುವುದಿಲ್ಲ.”
ಈ ರೀತಿಯ ಹೇಳಿಕೆಗಳನ್ನು ಕೊಟ್ಟಿರುವುದು ಇದೇ ಮೊದಲಲ್ಲ. ಹಿಂದೆ ಮೋಹನ್ ದಾಸ್ ಕರಮ್ಚಂದ್ ಗಾಂಧಿಯವರು ತಮ್ಮ ಮನಸ್ಸಾಕ್ಷಿಯ ನಿಲುವನ್ನು ಹೀಗೆ ತಿಳಿಸಿದ್ದಾರೆ: “ಮಿಲಿಟರಿ ರೂಪದಲ್ಲಿ ಸಂಸ್ಥಾಪಿತವಾಗಿರುವ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವ ಯಾರೇ ಆಗಲಿ ಅದರ ಪಾಪದಲ್ಲಿ ಪಾಲಿಗರು. ತೆರಿಗೆಯನ್ನು ಕಟ್ಟುವ ಮೂಲಕ ಸರ್ಕಾರವನ್ನು ಪೋಷಿಸುವ ದೊಡ್ಡವರಾಗಲಿ ಚಿಕ್ಕವರಾಗಲಿ ಪ್ರತಿಯೊಬ್ಬರೂ ಆ ಪಾಪದಲ್ಲಿ ಪಾಲಿಗರಾಗುತ್ತಾರೆ.”
ಅದೇ ರೀತಿಯಲ್ಲಿ, 19ನೆಯ ಶತಮಾನದ ತತ್ವಜ್ಞಾನಿ ಹೆನ್ರಿ ಡೇವಿಡ್ ಥರೂ ಎಂಬವರು ಯುದ್ಧದ ಖರ್ಚಿಗಾಗಿ ಬಳಸಲಾಗುವ ತೆರಿಗೆಯನ್ನು ಕಟ್ಟಲು ನಿರಾಕರಿಸಿದರು. ತನ್ನ ನಿರಾಕರಣೆಗೆ ನೈತಿಕ ಆಧಾರಗಳನ್ನು ಕೊಡುತ್ತಾ ಅವರು ಪ್ರಶ್ನಿಸಿದ್ದು: “ಒಬ್ಬ ನಾಗರಿಕನು ತನ್ನ ಮನಸ್ಸಾಕ್ಷಿಯನ್ನು ಒಂದು ಕ್ಷಣಕ್ಕಾದರೂ ಅಥವಾ ಸ್ವಲ್ಪ ಮಟ್ಟಿಗಾದರೂ ಕಾನೂನು ರಚಿಸುವವನಿಗೆ ಬಿಟ್ಟುಕೊಡಬೇಕಾ? ಹಾಗೆ ಬಿಟ್ಟುಕೊಟ್ಟರೆ ಪ್ರತಿಯೊಬ್ಬನಲ್ಲಿ ಮನಸ್ಸಾಕ್ಷಿ ಇದ್ದು ಪ್ರಯೋಜನವೇನು?”
ಈ ವಿವಾದಾಂಶ ಕ್ರೈಸ್ತರಿಗೂ ಸಂಬಂಧಿಸುತ್ತದೆ. ಏಕೆಂದರೆ ಅವರಿಗೆ ಎಲ್ಲ ವಿಷಯಗಳಲ್ಲಿ ಶುದ್ಧ ಮನಸ್ಸಾಕ್ಷಿ ಇರಬೇಕೆಂದು ಬೈಬಲು ಸ್ಪಷ್ಟವಾಗಿ ಕಲಿಸುತ್ತದೆ. (2 ತಿಮೊಥೆಯ 1:3) ಸರಕಾರಗಳಿಗೆ ತೆರಿಗೆ ವಸೂಲಿ ಮಾಡುವ ಅಧಿಕಾರವೂ ಇದೆ ಎಂದು ಬೈಬಲ್ ಹೇಳುತ್ತದೆ. ಅದು ಹೇಳುವುದು: “ಪ್ರತಿಯೊಬ್ಬನು ಮೇಲಧಿಕಾರಿಗಳಿಗೆ [ಮಾನವ ಸರ್ಕಾರಗಳಿಗೆ] ಅಧೀನನಾಗಿರಲಿ. ಏಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವುದಿಲ್ಲ; ಇರುವ ಅಧಿಕಾರಿಗಳು ತಮ್ಮ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇರಿಸಲ್ಪಟ್ಟಿದ್ದಾರೆ. ಆದುದರಿಂದ ಆ ಕ್ರೋಧದ ನಿಮಿತ್ತವಾಗಿ ಮಾತ್ರವಲ್ಲದೆ ನಿಮ್ಮ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ನೀವು ಅಧಿಕಾರಿಗಳಿಗೆ ಅಧೀನರಾಗಿರುವ ಅಗತ್ಯವಿದೆ. ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕಟ್ಟುತ್ತೀರಿ; ಏಕೆಂದರೆ ಅವರು ದೇವರ ಸಾರ್ವಜನಿಕ ಸೇವಕರಾಗಿದ್ದು ಇದೇ ಉದ್ದೇಶವನ್ನು ಪೂರೈಸುವುದರಲ್ಲಿ ನಿರತರಾಗಿದ್ದಾರೆ. ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು . . . ಸಲ್ಲಿಸಿರಿ.”—ರೋಮನ್ನರಿಗೆ 13:1, 5-7.
ಈ ಕಾರಣದಿಂದಾಗಿ ಪ್ರಥಮ ಶತಮಾನದ ಕ್ರೈಸ್ತರು ತಮ್ಮ ತೆರಿಗೆಯನ್ನು ಸಿದ್ಧಮನಸ್ಸಿನಿಂದ ಸಲ್ಲಿಸುವುದಕ್ಕೆ ಪ್ರಸಿದ್ಧರಾಗಿದ್ದರು. ಆ ತೆರಿಗೆಯಲ್ಲಿ ದೊಡ್ಡ ಭಾಗ ಮಿಲಿಟರಿ ವ್ಯವಸ್ಥೆಯ ನಿರ್ವಹಣೆಗೆ ಹೋಗುತ್ತಿದ್ದರೂ ಅವರದನ್ನು ಸಲ್ಲಿಸಿದರು. ಇಂದಿನ ಯೆಹೋವನ ಸಾಕ್ಷಿಗಳು ಸಹ ಹಾಗೆಯೇ. ಹಾಗಾದರೆ ಈ ಭಿನ್ನಾಭಿಪ್ರಾಯವನ್ನು ಹೇಗೆ ಬಗೆಹರಿಸಬಹುದು? ತೆರಿಗೆ ಕಟ್ಟಬೇಕಾಗಿ ಬಂದಾಗ ಒಬ್ಬ ಕ್ರೈಸ್ತನು ತನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆಯಬೇಕಾ?
ತೆರಿಗೆಗಳು ಮತ್ತು ಮನಸ್ಸಾಕ್ಷಿ
ಗಮನಾರ್ಹ ವಿಷಯವೇನಂದರೆ ಒಂದನೇ ಶತಮಾನದ ಕ್ರೈಸ್ತರು ಕೊಡಬೇಕಾಗಿದ್ದ ತೆರಿಗೆಯಲ್ಲೊಂದು ಭಾಗವು ಮಿಲಿಟರಿಯ ಖರ್ಚಿಗೆ ಹೋಗುತ್ತಿತ್ತು. ಇದನ್ನು ಮನಸ್ಸಾಕ್ಷಿ ಒಪ್ಪದಿದ್ದ ಕಾರಣವೇ ಮುಂದೆ ಗಾಂಧಿ ಮತ್ತು ಥರೂ ಅವರನ್ನು ತೆರಿಗೆ ಕೊಡದಿರುವಂತೆ ತಡೆದುಹಿಡಿಯಿತು.
ರೋಮನ್ನರು 13 ನೇ ಅಧ್ಯಾಯದಲ್ಲಿರುವ ಆಜ್ಞೆಗೆ ಕ್ರೈಸ್ತರು ವಿಧೇಯರಾದದ್ದು ಬರೇ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕಾರಣದಿಂದ ಮಾತ್ರವಲ್ಲ, ಅದು “[ಅವರ] ಮನಸ್ಸಾಕ್ಷಿಯ” ನಿಮಿತ್ತವಾಗಿಯೂ ಆಗಿತ್ತು. (ರೋಮನ್ನರಿಗೆ 13:5) ಹೌದು, ಒಬ್ಬ ಕ್ರೈಸ್ತನ ಮನಸ್ಸಾಕ್ಷಿಯು ತೆರಿಗೆಯನ್ನು ನಿಜವಾಗಿಯೂ ಕೊಡುವಂತೆ ಅವನನ್ನು ಅವಶ್ಯಪಡಿಸುತ್ತದೆ. ತಾನು ವೈಯಕ್ತಿಕವಾಗಿ ತಿರಸ್ಕರಿಸುವಂಥ ಕೆಲಸಗಳಿಗೆ ಅದು ಬಳಸಲ್ಪಟ್ಟರೂ ಅವನು ತೆರಿಗೆ ಕೊಡುತ್ತಾನೆ. ಈ ವಿಷಯವನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮ ಮನಸ್ಸಾಕ್ಷಿಯ ಬಗ್ಗೆ ಒಂದು ಮುಖ್ಯ ವಿಷಯವನ್ನು ಗುರುತಿಸಬೇಕು. ಅದೇನಂದರೆ ನಮ್ಮ ಕ್ರಿಯೆಗಳು ಸರಿಯಾ ತಪ್ಪಾ ಎಂದು ಹೇಳುವ ಮನಸ್ಸಾಕ್ಷಿಯ ಅಂತರ್ವಾಣಿಯ ಬಗ್ಗೆ ನಾವು ತಿಳಿದಿರಬೇಕು.
ಥರೂ ಗಮನಿಸಿರುವಂತೆ ಎಲ್ಲರಿಗೂ ಒಂದು ಅಂತರ್ವಾಣಿಯಿದೆ ನಿಜ. ಆದರೆ ಆ ವಾಣಿಯು ಯಾವಾಗಲೂ ಭರವಸಾರ್ಹವಾಗಿದೆ ಎಂದು ಹೇಳಸಾಧ್ಯವಿಲ್ಲ. ಯಾಕೆಂದರೆ ದೇವರ ಮೆಚ್ಚಿಗೆಯನ್ನು ಪಡೆಯಬೇಕಾದರೆ ನಮ್ಮ ಮನಸ್ಸಾಕ್ಷಿ ಆತನ ನೈತಿಕ ಮಟ್ಟಕ್ಕೆ ಹೊಂದಿಕೆಯಲ್ಲಿರಬೇಕು. ನಮ್ಮ ಆಲೋಚನೆ ಮತ್ತು ದೃಷ್ಟಿಕೋನವನ್ನು ದೇವರ ಆಲೋಚನೆಗಳಿಗೆ ಹೊಂದಿಸಿಕೊಳ್ಳಬೇಕು. ಏಕೆಂದರೆ ಆತನ ಆಲೋಚನೆಗಳು ನಮ್ಮ ಆಲೋಚನೆಗಳಿಗಿಂತ ಶ್ರೇಷ್ಠವಾಗಿವೆ. (ಕೀರ್ತನೆ 19:7) ಹಾಗಾಗಿ ಮಾನವ ಸರ್ಕಾರಗಳ ಬಗ್ಗೆ ದೇವರ ದೃಷ್ಟಿಕೋನ ಏನೆಂದು ನಾವು ತಿಳಿದುಕೊಳ್ಳಬೇಕು. ಹಾಗಾದರೆ ದೇವರ ದೃಷ್ಟಿಕೋನವೇನು?
ಅಪೊಸ್ತಲ ಪೌಲನು ಮಾನವ ಸರ್ಕಾರಗಳನ್ನು “ದೇವರ ಸಾರ್ವಜನಿಕ ಸೇವಕರು” ಎಂದು ಕರೆದನು. (ರೋಮನ್ನರಿಗೆ 13:6) ಇದರ ಅರ್ಥವೇನು? ಸರ್ಕಾರಿ ಅಧಿಕಾರಿಗಳು ನಿಯಮಬದ್ಧತೆಯನ್ನು ಕಾಪಾಡುತ್ತಾರೆ, ಸಮಾಜಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡುತ್ತಾರೆ ಎಂದೇ ಇದರರ್ಥ. ಅತ್ಯಂತ ಭ್ರಷ್ಟ ಸರ್ಕಾರಗಳು ಸಹ ಅಂಚೆ, ಶಿಕ್ಷಣ, ಅಗ್ನಿಶಾಮಕ ದಳ ಇಂಥ ಸೇವೆಗಳನ್ನು ಕೊಡುತ್ತವೆ ಮತ್ತು ಕಾನೂನು-ಕಾಯಿದೆಗಳನ್ನು ಜಾರಿಗೆ ತರುತ್ತವೆ. ಈ ಮಾನವ ಅಧಿಕಾರಿಗಳ ಕುಂದುಕೊರತೆಗಳ ಬಗ್ಗೆ ದೇವರಿಗೆ ಚೆನ್ನಾಗಿ ಗೊತ್ತಿರುವುದಾದರೂ ಆತನು ಸ್ವಲ್ಪ ಸಮಯಕ್ಕಾಗಿ ಅವರನ್ನು ಸಹಿಸಿಕೊಂಡಿದ್ದಾನೆ. ಮತ್ತು ನಾವು ಆತನ ಏರ್ಪಾಡಿಗೆ ಅಂದರೆ ಮಾನವರನ್ನು ಆಳಲು ಸರ್ಕಾರಗಳಿಗೆ ಅನುಮತಿಸಿರುವ ವಿಷಯಕ್ಕೆ ವಿಧೇಯರಾಗಿ, ತೆರಿಗೆ ಸಲ್ಲಿಸುವಂತೆ ಅಪ್ಪಣೆಕೊಡುತ್ತಾನೆ.
ಆದರೂ ಮಾನವ ಸರ್ಕಾರಗಳು ಆಡಳಿತ ನಡೆಸುವಂತೆ ದೇವರು ಅನುಮತಿಸಿರುವುದು ಸ್ವಲ್ಪ ಸಮಯಕ್ಕಾಗಿ ಅಷ್ಟೇ. ಈ ಎಲ್ಲ ಸರ್ಕಾರಗಳನ್ನು ತೆಗೆದು ತನ್ನ ಸ್ವರ್ಗೀಯ ಸರ್ಕಾರವನ್ನು ಸ್ಥಾಪಿಸುವುದು ದೇವರ ಚಿತ್ತವಾಗಿದೆ. ಶತಮಾನಗಳಿಂದ ಎಲ್ಲಾ ಸರ್ಕಾರಗಳು ಮಾನವರ ಮೇಲೆ ತಂದಿರುವ ಹಾನಿಯನ್ನು ಸರಿಪಡಿಸುವುದೇ ಆತನ ಇಚ್ಛೆ. (ದಾನಿಯೇಲ 2:22; ಮತ್ತಾಯ 6:10) ಅಲ್ಲಿಯ ತನಕ ಕ್ರೈಸ್ತರು ತೆರಿಗೆ ಕಟ್ಟದೆ ಆಗಲಿ, ಇನ್ಯಾವುದೇ ವಿಧಗಳ ಮೂಲಕ ಆಗಲಿ ಅವಿಧೇಯರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ದೇವರು ಅನುಮತಿಸಿಲ್ಲ.
ತೆರಿಗೆ ಕಟ್ಟುವ ಮೂಲಕ ಯುದ್ಧವನ್ನು ಬೆಂಬಲಿಸುವುದು ತಪ್ಪೆಂದು ಗಾಂಧಿಯವರಿಗೆ ಅನಿಸಿದಂತೆ ನಿಮಗೂ ಅನಿಸಿದರೆ ಏನು ಮಾಡಬೇಕು? ನಾವು ಹೆಚ್ಚು ಎತ್ತರದ ಗುಡ್ಡವನ್ನು ಹತ್ತಿ ಒಂದು ಸ್ಥಳವನ್ನು ಅಲ್ಲಿಂದ ನೋಡಿದರೆ ಅದು ಮೊದಲಿಗಿಂತ ಹೆಚ್ಚು ವಿಶಾಲವಾಗಿ, ವಿಸ್ತಾರವಾಗಿ ಕಾಣಿಸುತ್ತದೆ. ಹಾಗೆಯೇ ದೇವರ ದೃಷ್ಟಿಕೋನವು ನಮ್ಮ ದೃಷ್ಟಿಕೋನಕ್ಕಿಂತ ಎಷ್ಟೋ ಉನ್ನತವಾಗಿದೆ. ಆದ್ದರಿಂದ ನಮ್ಮ ಆಲೋಚನೆಗಳನ್ನು ದೇವರ ಆಲೋಚನೆಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬೇಕು. ಪ್ರವಾದಿಯಾದ ಯೆಶಾಯನ ಮೂಲಕ ದೇವರು ಹೇಳಿದ್ದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.”—ಯೆಶಾಯ 55: 8, 9.
ಮಾರ್ಚ್ 11-17
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w89 12/1 ಪುಟ 24 ಪ್ಯಾರ 3
“ನಿಮ್ಮ ಪ್ರೀತಿಯ ಯಥಾರ್ಥತೆಯ ಪರೀಕ್ಷೆ”
ಅನ್ಯಜನಾಂಗಗಳ ಸಹೋದರರು ಯೆರೂಸಲೇಮಿನ ದೇವಜನರ ಕಷ್ಟಗಳಿಗೆ ಸ್ಪಂದಿಸಲು ಪ್ರೇರಿತರಾಗಲೇಬೇಕಿತ್ತು. ಎಷ್ಟೆಂದರೂ ಅವರು ಒಂದು ವಿಶೇಷ ರೀತಿಯಲ್ಲಿ ಯೆರೂಸಲೇಮಿನ ಕ್ರೈಸ್ತ ಸಹೋದರರ “ಹಂಗಿ”ನಲ್ಲಿದ್ದರು. ಅನ್ಯಜನಾಂಗಗಳ ಬಳಿಗೆ ದೇವರ ಸುವಾರ್ತೆಯು ತಲಪಿದ್ದು ಯೆರೂಸಲೇಮಿನಿಂದಲೇ ಅಲ್ಲವೇ? ಇದನ್ನು ಮನಸ್ಸಲ್ಲಿಟ್ಟು ಪೌಲನು ಹೇಳಿದ್ದು: “ಯೆಹೂದಿ ಕ್ರೈಸ್ತರು ತಮ್ಮ ಆಧ್ಯಾತ್ಮಿಕ ನಿಕ್ಷೇಪಗಳನ್ನು ಅನ್ಯಜನಾಂಗಗಳೊಂದಿಗೆ ಪಾಲುಗಾರರಾಗಿರಲಾಗಿ ಅವರ ಭೌತಿಕ ಆವಶ್ಯಕತೆಗಳನ್ನು ಪೂರೈಸುವ ಸ್ಪಷ್ಟವಾದ ಹಂಗು ಅನ್ಯಜನಾಂಗಗಳವರಿಗಿದೆ.”—ರೋಮನ್ನರಿಗೆ 15:27.—ದಿ ನ್ಯೂ ಇಂಗ್ಲಿಷ್ ಬೈಬಲ್.
it-1 ಪುಟ 858 ಪ್ಯಾರ 5
ಮುನ್ನರಿವು, ಪೂರ್ವನಿಶ್ಚಯ
ಮೆಸ್ಸೀಯನು ಅಥವಾ ಕ್ರಿಸ್ತನು ವಾಗ್ದತ್ತ ಸಂತಾನವಾಗಲಿದ್ದನು. ಅವನ ಮೂಲಕವಾಗಿ ಭೂಮಿಯ ಎಲ್ಲಾ ಕುಟುಂಬಗಳು ಆಶೀರ್ವಾದ ಪಡೆಯಲಿದ್ದವು. (ಗಲಾ 3:8, 14) ಈ ‘ಸಂತಾನದ’ ಬಗ್ಗೆ ಮೊದಲಾಗಿ ತಿಳಿಸಿದ್ದು ಏದೆನಿನ ದಂಗೆಯ ನಂತರವಾದರೂ ಹೇಬೆಲ ಜನಿಸುವ ಮುಂಚೆಯೇ ತಿಳಿಸಲಾಗಿತ್ತು. (ಆದಿ 3:15) ಇದಾದ ಸುಮಾರು 4,000 ವರ್ಷದ ನಂತರವೇ ಆ ಮೆಸ್ಸೀಯ “ಸಂತಾನ” ಯಾರೆಂದು ಸ್ಪಷ್ಟವಾಗಿ ಗುರುತಿಸಲಾಯಿತು. ಅದೇ “ಪವಿತ್ರ ರಹಸ್ಯದ” ಬಯಲುಪಡಿಸುವಿಕೆ. ಹಾಗಾಗಿ ಅದನ್ನು “ದೀರ್ಘ ಕಾಲದಿಂದ ಗುಪ್ತವಾಗಿದ್ದ” ವಿಷಯವೆಂದು ಹೇಳಲಾಗಿದೆ.—ರೋಮ 16:25-27; ಎಫೆ 1:8-10; 3:4-11.
ಮಾರ್ಚ್ 18-24
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ಪುಟ 1193 ಪ್ಯಾರ 1
ವಿವೇಕ
ಹೀಗೆ ಲೋಕವು ತನ್ನ ವಿವೇಕದ ಆಧಾರದಲ್ಲಿ ದೇವರು ಕ್ರಿಸ್ತನ ಮೂಲಕ ಮಾಡಿರುವ ಏರ್ಪಾಡನ್ನು ಹುಚ್ಚುಮಾತಾಗಿ ತಳ್ಳಿಬಿಟ್ಟಿತು. ಲೋಕದ ಅಧಿಪತಿಗಳು ವಿವೇಕಿಗಳಾದ ನುರಿತ ಆಡಳಿತಗಾರರು ಆಗಿದ್ದಿರಬಹುದಾದರೂ ‘ಮಹಿಮಾಭರಿತ ಕರ್ತನನ್ನು ಶೂಲಕ್ಕೇರಿಸಿದರು.’ (1ಕೊರಿಂ 1:18; 2:7, 8) ಆದರೆ ದೇವರು ಈಗ ಲೌಕಿಕ ಜ್ಞಾನದಲ್ಲಿ ವಿವೇಕಿಗಳು ಆಗಿರುವವರ ವಿವೇಕವನ್ನು “ಹುಚ್ಚುಮಾತಾಗಿ” ಸಾಬೀತು ಮಾಡಿದ್ದಾನೆ. ಅಲ್ಲದೆ ಅವರು ಯಾರನ್ನು ‘ಬುದ್ಧಿಹೀನರು, ಬಲಹೀನರು, ಕೀಳಾದವರು’ ಎಂದು ಪರಿಗಣಿಸಿದರೊ ಅವರ ಮೂಲಕವೇ ತನ್ನ ಉದ್ದೇಶವನ್ನು ಪೂರೈಸಿ ಲೋಕದ ವಿವೇಕಿಗಳನ್ನು ನಾಚಿಕೆಪಡಿಸಿದ್ದಾನೆ. (1ಕೊರಿಂ 1:19-28) “ಈ ವಿಷಯಗಳ ವ್ಯವಸ್ಥೆಯ ವಿವೇಕ [ಮತ್ತು] ಈ ವಿಷಯಗಳ ಅಧಿಪತಿಗಳ ವಿವೇಕ” ಇಲ್ಲವಾಗಿ ಹೋಗುವುದು ಎಂದು ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರಿಗೆ ನೆನಪಿಸಿದನು. ಆದ್ದರಿಂದ ಅಂಥ ವಿವೇಕವು ಅಪೊಸ್ತಲನ ಆಧ್ಯಾತ್ಮಿಕ ಸಂದೇಶದ ಭಾಗವಾಗಿರಲಿಲ್ಲ. (1ಕೊರಿಂ 2:6, 13) “ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿ ಇರುವ ತತ್ವಜ್ಞಾನ [ಫಿ·ಲೊ·ಸೊ·ಫಿಯಸ್, ಅಕ್ಷರಾರ್ಥ ವಿವೇಕದ ಮೇಲಿರುವ ಪ್ರೇಮ] ಮತ್ತು ನಿರರ್ಥಕವಾದ ಮೋಸಕರ ಮಾತುಗಳ” ಬಲೆಗೆ ಬೀಳದಂತೆ ಕೊಲೊಸ್ಸೆಯ ಕ್ರೈಸ್ತರನ್ನೂ ಅವನು ಎಚ್ಚರಿಸಿದನು.—ಕೊಲೊ 2:8; ಹೋಲಿಸಿ ವಚನಗಳು 20-23.
ಮಾರ್ಚ್ 25-31
ಬೈಬಲಿನಲ್ಲಿರುವ ರತ್ನಗಳು
it-2 ಪುಟ 230
ಕಿಣ್ವ
ಅಪೊಸ್ತಲ ಪೌಲನು ಒಬ್ಬ ಅನೈತಿಕ ಮನುಷ್ಯನನ್ನು ಸಭೆಯಿಂದ ಹೊರಗೆಹಾಕಲು ಕೊರಿಂಥದ ಕ್ರೈಸ್ತ ಸಭೆಗೆ ಅಪ್ಪಣೆ ಕೊಟ್ಟಾಗ ಇದೇ ಉದಾಹರಣೆಯನ್ನು ಬಳಸಿದನು. ಅವನಂದದ್ದು: “ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿ ಮಾಡುತ್ತದೆ ಎಂಬುದು ನಿಮಗೆ ತಿಳಿಯದೊ? ನೀವು ಹುಳಿಯಿಂದ ಮುಕ್ತರಾಗಿರುವುದರಿಂದ ಹೊಸ ಕಣಕವಾಗುವಂತೆ ಹಳೆಯ ಕಿಣ್ವವನ್ನು ತೆಗೆದುಹಾಕಿರಿ. ಏಕೆಂದರೆ ನಮ್ಮ ಪಸ್ಕದ ಕುರಿಯಾಗಿರುವ ಕ್ರಿಸ್ತನು ಯಜ್ಞವಾಗಿ ಅರ್ಪಿಸಲ್ಪಟ್ಟಿದ್ದಾನೆ.” ಪೌಲನು ತಾನು ಯಾವುದನ್ನು “ಕಿಣ್ವ” ಎಂದು ಹೇಳಿದನೆಂದು ಮುಂದಿನ ವಚನದಲ್ಲಿ ಸ್ಪಷ್ಟವಾಗಿ ಹೇಳಿದನು: “ಆದುದರಿಂದ ನಾವು ಹಳೆಯ ಕಿಣ್ವದಿಂದಲ್ಲ ಅಥವಾ ಕೆಟ್ಟತನ ಮತ್ತು ದುಷ್ಟತನ ಎಂಬ ಕಿಣ್ವದಿಂದಲ್ಲ, ಬದಲಾಗಿ ಯಥಾರ್ಥತೆ ಮತ್ತು ಸತ್ಯವೆಂಬ ಹುಳಿಯಿಲ್ಲದ ರೊಟ್ಟಿಗಳಿಂದ ಹಬ್ಬವನ್ನು ಆಚರಿಸೋಣ.” (1ಕೊರಿಂ 5:6-8) ಪೌಲನು ಇಲ್ಲಿ ಪಸ್ಕ ಹಬ್ಬದ ನಂತರ ಕೂಡಲೇ ಹಿಂಬಾಲಿಸಿ ಬರುವ ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಉದಾಹರಣೆ ಕೊಟ್ಟು ವಿವರಿಸುತ್ತಿದ್ದನು. ಹೇಗೆ ಸ್ವಲ್ಪ ಹುಳಿಹಿಟ್ಟು ಇಡೀ ಹಿಟ್ಟಿನ ಮುದ್ದೆಯನ್ನೇ ಬೇಗನೆ ಹುಳಿಮಾಡುತ್ತದೊ ಹಾಗೆಯೇ ಆ ಅನೈತಿಕ ಮನುಷ್ಯನ ಭ್ರಷ್ಟ ಪ್ರಭಾವವನ್ನು ತೆಗೆದು ಹಾಕದಿದ್ದರೆ ಸಭೆಯೆಂಬ ಇಡೀ ದೇಹವು ಯೆಹೋವನ ದೃಷ್ಟಿಯಲ್ಲಿ ಅಶುದ್ಧವಾಗಲಿತ್ತು. ಹಾಗಾಗಿ ಅವರು ಕೂಡಲೇ ಕ್ರಿಯೆಗೈದು ಆ ‘ಕಿಣ್ವವನ್ನು’ ತಮ್ಮ ಮಧ್ಯದಿಂದ ತೆಗೆದುಹಾಕಬೇಕಿತ್ತು. ಹೇಗೆ ಆ ಹಬ್ಬದ ಸಮಯದಲ್ಲಿ ಇಸ್ರಾಯೇಲ್ಯರ ಮನೆಗಳಲ್ಲಿ ಯಾವ ಕಿಣ್ವವೂ ಇರಬಾರದಿತ್ತೊ ಹಾಗೆ.
it-2 ಪುಟ 869-870
ಸೈತಾನ
‘ಒಬ್ಬ ಮನುಷ್ಯನನ್ನು ಶರೀರದ ನಾಶಕ್ಕಾಗಿ ಸೈತಾನನ ವಶಕ್ಕೆ ಒಪ್ಪಿಸಿಕೊಡುವುದು’ ಅನ್ನುವುದರ ಅರ್ಥ ಏನು?
ಕೊರಿಂಥ ಸಭೆಯ ಸದಸ್ಯನೊಬ್ಬನು ತನ್ನ ತಂದೆಯ ಹೆಂಡತಿಯೊಂದಿಗೆ ನೀತಿಗೆಟ್ಟ ಅಗಮ್ಯಗಮನ ನಡೆಸುತ್ತಿದ್ದನು. ಅವನ ಬಗ್ಗೆ ಸಭೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ಅಂಥ ಮನುಷ್ಯನನ್ನು ಶರೀರದ ನಾಶಕ್ಕಾಗಿ ಸೈತಾನನ ವಶಕ್ಕೆ ಒಪ್ಪಿಸಿಕೊಡಿರಿ.” (1ಕೊರಿಂ 5:5) ಇದು, ಆ ಮನುಷ್ಯನೊಂದಿಗಿನ ಎಲ್ಲ ಸಂಬಂಧವನ್ನು ಕಡಿದು ಹಾಕಿ ಅವನನ್ನು ಸಭೆಯಿಂದ ಹೊರಗೆ ಹಾಕಲಿಕ್ಕಾಗಿ ಕೊಟ್ಟ ಆಜ್ಞೆಯಾಗಿತ್ತು. (1ಕೊರಿಂ 5:13) ಸೈತಾನನ ವಶಕ್ಕೆ ಅವನನ್ನು ಒಪ್ಪಿಸಿಕೊಡುವುದರಿಂದ ಅವನು ಸಭೆಯಿಂದ ಹೊರಗೆ, ಸೈತಾನನು ಯಾವುದರ ದೇವನೂ ಅಧಿಪತಿಯೂ ಆಗಿದ್ದಾನೋ ಆ ಲೋಕದೊಳಗೆ ಇರುತ್ತಾನೆ. “ಕಣಕವನ್ನೆಲ್ಲ” ಹುಳಿಮಾಡುವ “ಸ್ವಲ್ಪ ಕಿಣ್ವದಂತೆ” ಸಭೆಯೊಳಗೆ ಈ ಮನುಷ್ಯನು “ಶರೀರ” ಅಂದರೆ ಮಾನವ ಕಿಣ್ವ ಆಗಿರುತ್ತಾನೆ. ಅಗಮ್ಯಗಮನ ಮಾಡುತ್ತಿದ್ದ ಅವನನ್ನು ತನ್ನ ಮಧ್ಯದಿಂದ ತೆಗೆದುಹಾಕುವ ಮೂಲಕ ಆಧ್ಯಾತ್ಮಿಕ ಮನಸ್ಸಿನ ಸಭೆಯು ಆ “ಶರೀರದ ನಾಶ”ವನ್ನು ಮಾಡುತ್ತದೆ. (1ಕೊರಿಂ 5:6, 7) ಪೌಲನು ಹುಮೆನಾಯ ಮತ್ತು ಅಲೆಕ್ಸಾಂದರನನ್ನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೂ ಇದೇ ರೀತಿಯಲ್ಲಿ. ಅವರು ನಂಬಿಕೆಯನ್ನು ಮತ್ತು ಒಳ್ಳೇ ಮನಸ್ಸಾಕ್ಷಿಯನ್ನು ಗಾಳಿಗೆ ತೂರಿ ತಮ್ಮ ನಂಬಿಕೆಯ ವಿಷಯದಲ್ಲಿ ಹಡಗೊಡೆತವನ್ನು ಅನುಭವಿಸಿದ್ದರು.—1ತಿಮೊ 1:20.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ಪುಟ 211
ನಿಯಮ
ದೇವದೂತರಿಗೆ ಆಜ್ಞಾವಿಧಿಗಳು. ದೇವದೂತರು ಮನುಷ್ಯರಿಗಿಂತ ಶ್ರೇಷ್ಠರು. ಆದರೆ ಅವರಿಗೂ ದೇವರು ನಿಯಮಗಳನ್ನು, ಆಜ್ಞೆಗಳನ್ನು ಕೊಟ್ಟಿದ್ದಾನೆ. (ಇಬ್ರಿ 1:7, 14; ಕೀರ್ತ 104:4) ಯೆಹೋವನು ತನ್ನ ಮುಖ್ಯ ಶತ್ರುವಾದ ಸೈತಾನನನ್ನು ಸಹ ಆಜ್ಞಾನಿರ್ಬಂಧಗಳಿಗೆ ಒಳಪಡಿಸಿದ್ದನು. (ಯೋಬ 1:12; 2:6) ಪ್ರಧಾನ ದೇವದೂತನಾದ ಮೀಕಾಯೇಲನು ಸಹ ಶ್ರೇಷ್ಠ ನ್ಯಾಯಾಧಿಪತಿಯಾದ ಯೆಹೋವನ ಸ್ಥಾನವನ್ನು ಅಂಗೀಕರಿಸಿ ಗೌರವಿಸಿದ್ದನು. ಹಾಗಾಗಿ ಪಿಶಾಚನೊಂದಿಗೆ ಮಾಡಿದ ವಾಗ್ವಾದದಲ್ಲಿ “ಯೆಹೋವನು ನಿನ್ನನ್ನು ಖಂಡಿಸಲಿ” ಎಂದು ಉತ್ತರಿಸಿದ್ದನು. (ಯೂದ 9; ಹೋಲಿಸಿ ಜೆಕ 3:2.) ಅದಲ್ಲದೆ ಯೆಹೋವ ದೇವರು ದೇವದೂತರೆಲ್ಲರನ್ನು ಮಹಿಮಾಯುತ ಯೇಸು ಕ್ರಿಸ್ತನ ಅಧಿಕಾರದ ಕೆಳಗೆ ಇಟ್ಟಿದ್ದಾನೆ. (ಇಬ್ರಿ 1:6; 1ಪೇತ್ರ 3:22; ಮತ್ತಾ 13:41; 25:31; ಫಿಲಿ 2:9-11) ಹೀಗೆ ಒಬ್ಬ ಸಂದೇಶವಾಹಕ ದೂತನನ್ನು ಯೇಸು ಕ್ರಿಸ್ತನು ಯೋಹಾನನ ಬಳಿಗೆ ಕಳುಹಿಸಿದನು. (ಪ್ರಕ 1:1) ಆದರೂ 1 ಕೊರಿಂಥ 6:3 ರಲ್ಲಿ ಅಪೊಸ್ತಲ ಪೌಲನು ಕ್ರಿಸ್ತನ ಆಧ್ಯಾತ್ಮಿಕ ಸಹೋದರರನ್ನು ದೇವದೂತರಿಗೂ ತೀರ್ಪುಮಾಡುವವರಾಗಿ ಸೂಚಿಸಿದ್ದಾನೆ. ಯಾಕೆಂದರೆ ಅವರು ಕೆಲವೊಂದು ರೀತಿಯಲ್ಲಿ ದುಷ್ಟಾತ್ಮಗಳಿಗೆ ನ್ಯಾಯತೀರ್ಪು ಮಾಡುವುದರಲ್ಲಿ ಪಾಲುಗಾರರು ಆಗುತ್ತಾರೆ.