ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ನವೆಂಬರ್ 4-10
ಬೈಬಲಿನಲ್ಲಿರುವ ರತ್ನಗಳು | 1 ಯೋಹಾನ 1–5
“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿ”
(1 ಯೋಹಾ 2:15, 16) ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸುವುದಾದರೆ ತಂದೆಯ ಪ್ರೀತಿಯು ಅವನಲ್ಲಿ ಇಲ್ಲ. 16 ಏಕೆಂದರೆ ಲೋಕದಲ್ಲಿರುವ ಸರ್ವವೂ—ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ—ಇವು ತಂದೆಯಿಂದ ಉಂಟಾಗದೆ ಲೋಕದಿಂದ ಉಂಟಾದವುಗಳಾಗಿವೆ.
w05 1/1 ಪುಟ 10 ಪ್ಯಾರ 13
ಯೇಸುವಿನ ಮಾದರಿಯನ್ನು ಅನುಸರಿಸಿರಿ
13 ಲೋಕದಲ್ಲಿರುವುದೆಲ್ಲವೂ ಕೆಟ್ಟದ್ದೇನಲ್ಲ ಎಂದು ಕೆಲವರು ತರ್ಕಿಸಬಹುದು. ಇದು ನಿಜವಾಗಿರಬಹುದಾದರೂ, ಈ ಲೋಕವೂ ಅದರ ಆಕರ್ಷಣೆಗಳೂ ಯೆಹೋವನ ಸೇವೆಮಾಡುವುದರಿಂದ ನಮ್ಮನ್ನು ಸುಲಭವಾಗಿಯೇ ಅಪಕರ್ಷಿಸಬಲ್ಲವು. ಅಷ್ಟುಮಾತ್ರವಲ್ಲ ಲೋಕವು ನೀಡುವಂಥ ಯಾವುದೇ ವಿಷಯವು ನಾವು ದೇವರ ಸಮೀಪಕ್ಕೆ ಬರಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿಲ್ಲ. ಆದುದರಿಂದ ನಾವು ಲೋಕದಲ್ಲಿರುವವುಗಳನ್ನು, ಕೆಟ್ಟದ್ದಾಗಿರದಂಥ ವಿಷಯಗಳನ್ನು ಸಹ ಕ್ರಮೇಣ ಪ್ರೀತಿಸಲು ಆರಂಭಿಸುವಲ್ಲಿ ನಾವು ಅಪಾಯಕರ ಮಾರ್ಗದಲ್ಲಿ ಕಾಲಿರಿಸಿದ್ದೇವೆ. (1 ತಿಮೊಥೆಯ 6:9, 10) ಇದಲ್ಲದೆ, ಲೋಕದಲ್ಲಿರುವ ಹೆಚ್ಚಿನದ್ದು ನಿಜವಾಗಿಯೂ ಕೆಟ್ಟದ್ದಾಗಿದೆ ಮತ್ತು ಅದು ನಮ್ಮನ್ನು ಭ್ರಷ್ಟಗೊಳಿಸಸಾಧ್ಯವಿದೆ. ನಾವು ಹಿಂಸಾಚಾರ, ಪ್ರಾಪಂಚಿಕತೆ ಅಥವಾ ಲೈಂಗಿಕ ಅನೈತಿಕತೆಗೆ ಪ್ರಮುಖತೆ ನೀಡುವಂಥ ಚಲನಚಿತ್ರಗಳನ್ನು ಇಲ್ಲವೆ ಟೆಲಿವಿಷನ್ ಕಾರ್ಯಕ್ರಮಗಳನ್ನು ನೋಡುವುದಾದರೆ, ಈ ವಿಚಾರಗಳು ನಮಗೆ ಸ್ವೀಕಾರಾರ್ಹವಾಗಬಹುದು ಮತ್ತು ಇವು ನಮ್ಮನ್ನು ಪ್ರಲೋಭನೆಗೂ ಒಳಪಡಿಸಬಹುದು. ಯಾರ ಮುಖ್ಯ ಅಭಿರುಚಿಯು ತಮ್ಮ ಜೀವನಶೈಲಿಯನ್ನು ಉತ್ತಮಗೊಳಿಸುವುದು ಅಥವಾ ವ್ಯಾಪಾರದ ಅವಕಾಶಗಳನ್ನು ವಿಸ್ತರಿಸುವುದೇ ಆಗಿದೆಯೋ ಅಂಥ ಜನರೊಂದಿಗೆ ನಾವು ಸಹವಾಸಿಸುವಲ್ಲಿ, ಈ ವಿಷಯಗಳು ನಮಗೂ ತುಂಬ ಪ್ರಮುಖವಾದ ವಿಷಯಗಳಾಗಿ ಪರಿಣಮಿಸಸಾಧ್ಯವಿದೆ.—ಮತ್ತಾಯ 6:24; 1 ಕೊರಿಂಥ 15:33.
(1 ಯೋಹಾ 2:17) ಇದಲ್ಲದೆ ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.
w13 8/15 ಪುಟ 27 ಪ್ಯಾರ 18
ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ
18 ‘ಲೋಕದಲ್ಲಿರುವ ವಿಷಯಗಳಿಂದ’ ನಮ್ಮನ್ನು ಕಾಪಾಡಿಕೊಳ್ಳಲು ನೆರವಾಗುವ ಇನ್ನೊಂದು ಸಹಾಯ ಯೋಹಾನನ ಪ್ರೇರಿತ ಮಾತುಗಳಲ್ಲಿದೆ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.” (1 ಯೋಹಾ. 2:17) ಸೈತಾನನ ಲೋಕ ನೋಡಲು ನೈಜವಾಗಿ ಕಾಣುತ್ತದೆ. ಶಾಶ್ವತವಾಗಿ ಇರುತ್ತದೇನೋ ಅನಿಸುತ್ತದೆ. ಆದರೆ ಒಂದು ದಿನ ಅದು ಕಾಣದೆ ಹೋಗುತ್ತದೆ. ಸೈತಾನನ ಲೋಕದಲ್ಲಿರುವ ಎಲ್ಲ ವಿಷಯಗಳು ನಶ್ವರ. ನಾವಿದನ್ನು ನೆನಪಿನಲ್ಲಿಟ್ಟರೆ ಪಿಶಾಚನ ತಂತ್ರೋಪಾಯಗಳಿಂದ ಮೋಸಹೋಗಲ್ಲ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(1 ಯೋಹಾ 2:7, 8) ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಒಂದು ಹೊಸ ಆಜ್ಞೆಯಲ್ಲ, ಆರಂಭದಿಂದಲೇ ನೀವು ಹೊಂದಿದ್ದ ಅದೇ ಹಳೆಯ ಆಜ್ಞೆಯಾಗಿದೆ. ಈ ಹಳೆಯ ಆಜ್ಞೆಯು ನೀವು ಕೇಳಿಸಿಕೊಂಡಿರುವ ವಾಕ್ಯವೇ ಆಗಿದೆ. 8 ಆದರೂ ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಬರೆಯುತ್ತಿದ್ದೇನೆ; ಇದು ಅವನ ವಿಷಯದಲ್ಲಿಯೂ ನಿಮ್ಮ ವಿಷಯದಲ್ಲಿಯೂ ಸತ್ಯವಾಗಿದೆ, ಏಕೆಂದರೆ ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
w13 9/15 ಪುಟ 10 ಪ್ಯಾರ 14
ಯೆಹೋವನ ಮರುಜ್ಞಾಪನಗಳು ವಿಶ್ವಾಸಾರ್ಹ
14 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ, ನಾವು ಪರಸ್ಪರ ಪ್ರೀತಿ ತೋರಿಸಬೇಕೆಂಬ ಮರುಜ್ಞಾಪನಗಳು ತುಂಬಾ ಇವೆ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬುದು ಅತಿ ದೊಡ್ಡ ಆಜ್ಞೆಗಳಲ್ಲಿ ಎರಡನೆಯದು ಎಂದು ಯೇಸು ಹೇಳಿದನು. (ಮತ್ತಾ. 22:39) ತದ್ರೀತಿ, ಯೇಸುವಿನ ಮಲ-ಸಹೋದರ ಯಾಕೋಬನು ಪ್ರೀತಿಯನ್ನು “ರಾಜಯೋಗ್ಯ ಆಜ್ಞೆ” ಎಂದು ಕರೆದನು. (ಯಾಕೋ. 2:8) ಅಪೊಸ್ತಲ ಯೋಹಾನನು ಬರೆದದ್ದು: “ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಒಂದು ಹೊಸ ಆಜ್ಞೆಯಲ್ಲ, ಆರಂಭದಿಂದಲೇ ನೀವು ಹೊಂದಿದ್ದ ಅದೇ ಹಳೆಯ ಆಜ್ಞೆಯಾಗಿದೆ. . . . ಆದರೂ ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಬರೆಯುತ್ತಿದ್ದೇನೆ.” (1 ಯೋಹಾ. 2:7, 8) ಇಲ್ಲಿ ಯೋಹಾನನು “ಹಳೆಯ ಆಜ್ಞೆ” ಎಂದು ಹೇಳಿದ್ದು ಯಾವುದರ ಕುರಿತಾಗಿತ್ತು? ಪ್ರೀತಿಸುವ ಆಜ್ಞೆಯ ಕುರಿತಾಗಿಯೇ. ‘ಆರಂಭದಲ್ಲಿಯೇ’ ಯೇಸು ಈ ಆಜ್ಞೆ ಕೊಟ್ಟದ್ದರಿಂದ ಅದು “ಹಳೆಯ” ಆಜ್ಞೆಯಾಗಿತ್ತು. ಆದರೆ ಅದು “ಹೊಸ” ಆಜ್ಞೆ ಸಹ ಆಗಿದೆ. ಏಕೆಂದರೆ ಅದು ಸ್ವತ್ಯಾಗದ ಪ್ರೀತಿಯನ್ನು ಕೇಳಿಕೊಳ್ಳುತ್ತದೆ. ಶಿಷ್ಯರು ಹೊಸ ವಿಧದ ಪರಿಸ್ಥಿತಿಗಳನ್ನು ಎದುರಿಸಿದಾಗ ಈ ಗುಣವನ್ನು ತೋರಿಸಬೇಕಾಗಬಹುದು. ಕ್ರಿಸ್ತನ ಶಿಷ್ಯರಾದ ನಾವು ಸ್ವಾರ್ಥ ಮನೋಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೊಡಲಾಗುವ ಇಂಥ ಎಚ್ಚರಿಕೆಗಳನ್ನು ಮಾನ್ಯಮಾಡುವುದಿಲ್ಲವೆ? ಸ್ವಾರ್ಥ ಮನೋಭಾವ ಈ ಲೋಕದಲ್ಲಿ ಎದ್ದುಕಾಣುತ್ತದೆ. ಅದು ನೆರೆಯವರ ಕಡೆಗೆ ನಮಗಿರುವ ಪ್ರೀತಿಯನ್ನು ಕಡಿಮೆಗೊಳಿಸಬಲ್ಲದು.
(1 ಯೋಹಾ 5:16, 17) ಯಾವನಾದರೂ ತನ್ನ ಸಹೋದರನು ಮರಣವನ್ನು ಉಂಟುಮಾಡದಂಥ ಪಾಪಮಾಡುತ್ತಿರುವುದನ್ನು ನೋಡಿದರೆ ಅವನು ಬೇಡಿಕೊಳ್ಳುವನು; ಆಗ ದೇವರು ಅವನಿಗೆ, ಅಂದರೆ ಮರಣವನ್ನು ಉಂಟುಮಾಡದಂಥ ಪಾಪವನ್ನು ಮಾಡುತ್ತಿರುವವನಿಗೆ ಜೀವವನ್ನು ದಯಪಾಲಿಸುವನು. ಆದರೆ ಮರಣಕ್ಕೆ ಗುರಿಮಾಡುವಂಥ ಪಾಪವಿದೆ. ಆ ಪಾಪದ ವಿಷಯವಾಗಿ ಬೇಡಿಕೊಳ್ಳುವಂತೆ ನಾನು ಅವನಿಗೆ ಹೇಳುವುದಿಲ್ಲ. 17 ಎಲ್ಲ ಅನೀತಿಯು ಪಾಪವಾಗಿದೆ; ಆದರೂ ಮರಣವನ್ನು ಉಂಟುಮಾಡದಿರುವಂಥ ಪಾಪವುಂಟು.
it-1 ಪುಟ 862 ಪ್ಯಾರ 5
ಕ್ಷಮಾಪಣೆ
ಪ್ರಾರ್ಥಿಸುವಾಗ ಬೇರೆಯವರ ತಪ್ಪು ಪಾಪಗಳನ್ನೂ ಕ್ಷಮಿಸುವಂತೆ ನಾವು ಬೇಡಿಕೊಳ್ಳಬೇಕು. ಉದಾಹರಣೆಗೆ, ಇಸ್ರಾಯೇಲ್ ಜನಾಂಗ ತಪ್ಪು ಮಾಡಿದಾಗ ಮೋಶೆ ಅವರ ತಪ್ಪನ್ನು ಕ್ಷಮಿಸುವಂತೆ ದೇವರಲ್ಲಿ ಬೇಡಿಕೊಂಡ. ಇದನ್ನು ದೇವರು ಕೇಳಿದನು ಸಹ. (ಅರ 14:19, 20) ಸೊಲೊಮೋನ ಕೂಡ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ, ತನ್ನ ಪ್ರಜೆಗಳು ಪಾಪ ಮಾಡಿದಾಗ ಅವರನ್ನು ಕ್ಷಮಿಸುವಂತೆ ಮತ್ತು ಕೆಟ್ಟತನದಿಂದ ಅವರು ತಿರುಗಿಕೊಳ್ಳಲು ಸಹಾಯ ಮಾಡುವಂತೆ ದೇವರ ಹತ್ತಿರ ಬೇಡಿಕೊಂಡ. (1ಅರ 8:30, 33-40, 46-52) ಎಜ್ರ ಸಹ ಸ್ವದೇಶಕ್ಕೆ ಹಿಂದಿರುಗಿದ್ದ ಯೆಹೂದ್ಯರ ಪಾಪಗಳನ್ನು ಕ್ಷಮಿಸುವಂತೆ ಅವರ ಪರವಾಗಿ ಪ್ರಾರ್ಥಿಸಿದ. ಎಜ್ರ ಮನದಾಳದಿಂದ ಪ್ರಾರ್ಥಿಸಿದ್ದರಿಂದ, ಜನರು ತಮ್ಮ ಪಾಪಗಳಿಗೆ ಕ್ಷಮಾಪಣೆ ಪಡೆಯಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಲು ಸಿದ್ಧರಾದರು. (ಎಜ್ರ 9:13–10:4, 10-19, 44) ಆಧ್ಯಾತ್ಮಿಕವಾಗಿ ಅಸ್ವಸ್ಥನಾದವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಳ್ಳಲಿ ಮತ್ತು ಅವರು ಅವನಿಗೋಸ್ಕರ ಪ್ರಾರ್ಥಿಸಲಿ ಅಂತ ಯಾಕೋಬ ಪ್ರೋತ್ಸಾಹಿಸಿದ. ಹೀಗೆ ಮಾಡಿದರೆ, ‘ಒಂದು ವೇಳೆ ಅವನು ಪಾಪ ಮಾಡಿರುವುದಾದರೆ ಅದು ಕ್ಷಮಿಸಲ್ಪಡುತ್ತೆ’ ಅಂತ ಸಹ ಹೇಳಿದ. (ಯಾಕೋ 5:14-16) ಆದರೂ “ಮರಣಕ್ಕೆ ಗುರಿಮಾಡುವಂಥ” ಪಾಪ ಒಂದಿದೆ. ಅದು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಮಾಡುವ ಪಾಪ. ಬೇಕುಬೇಕಂತಲೇ ಮಾಡುವ ಈ ಪಾಪಕ್ಕೆ ಕ್ಷಮೆಯೇ ಇಲ್ಲ. ಈ ರೀತಿ ಪಾಪ ಮಾಡಿದವರಿಗಾಗಿ ಕ್ರೈಸ್ತರು ಪ್ರಾರ್ಥಿಸಬಾರದು.—1ಯೋಹಾ 5:16; ಮತ್ತಾ12:31; ಇಬ್ರಿ 10:26, 27.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
w04 10/1 ಪುಟ 29
ವಾಚಕರಿಂದ ಪ್ರಶ್ನೆಗಳು
“ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ,” ಎಂದು ಅಪೊಸ್ತಲ ಯೋಹಾನನು ಬರೆದನು.—1 ಯೋಹಾನ 4:18.
ಯೋಹಾನನು ಇಲ್ಲಿ ವಾಕ್ ಸರಳತೆಯ ಬಗ್ಗೆ ಚರ್ಚಿಸುತ್ತಿದ್ದಾನೆ ಎಂಬುದನ್ನು ಪೂರ್ವಾಪರವು ತೋರಿಸುತ್ತದೆ—ವಿಶೇಷವಾಗಿ ದೇವರ ಮೇಲಿರುವ ಪ್ರೀತಿ ಮತ್ತು ಆತನೊಂದಿಗೆ ಹೊಂದಿರುವ ವಾಕ್ ಸರಳತೆಯ ಮಧ್ಯೆ ಇರುವ ಸಂಬಂಧದ ಕುರಿತು ಮಾತಾಡುತ್ತಿದ್ದನು. ಇದನ್ನು ನಾವು 17ನೆಯ ವಚನದಲ್ಲಿ ಏನನ್ನು ಓದುತ್ತೇವೋ ಅದರಿಂದ ಕಂಡುಕೊಳ್ಳಬಹುದು: “ನ್ಯಾಯತೀರ್ಪಿನ ದಿನದಲ್ಲಿ ನಮಗಿರುವ ಧೈರ್ಯ [“ವಾಕ್ ಸರಳತೆ,” NW] ದಲ್ಲಿಯೇ ಆತನ ಪ್ರೀತಿಯು ನಮ್ಮೊಳಗೆ ಸಿದ್ಧಿಗೆ ಬಂತು.” ಒಬ್ಬ ಕ್ರೈಸ್ತನು, ದೇವರನ್ನು ಎಷ್ಟು ಪ್ರೀತಿಸುತ್ತಾನೋ ಮತ್ತು ಅವನ ಮೇಲೆ ದೇವರಿಗಿರುವ ಪ್ರೀತಿಯನ್ನು ಎಷ್ಟು ಗ್ರಹಿಸಿಕೊಳ್ಳುತ್ತಾನೋ ಅಷ್ಟರ ಮಟ್ಟಿಗೆ ಅದು, ಅವನು ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ ಅವನ ವಾಕ್ ಸರಳತೆಯ ಮೇಲೆ ಅಥವಾ ಅದರ ಕೊರತೆಯ ಮೇಲೆ ನೇರವಾದ ಪ್ರಭಾವವನ್ನು ಬೀರುವುದು.
“ಪೂರ್ಣಪ್ರೀತಿ” ಎಂಬ ಅಭಿವ್ಯಕ್ತಿಯು ವಿಶೇಷಾರ್ಥವುಳ್ಳದ್ದಾಗಿದೆ. “ಪೂರ್ಣ”ವೆಂಬುದು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ ಯಾವಾಗಲೂ ಪರಿಪೂರ್ಣತೆಯನ್ನು ಸಂಪೂರ್ಣವಾದ ರೀತಿಯಲ್ಲಿ ಅರ್ಥೈಸುವುದಿಲ್ಲ, ಅಂದರೆ ಅದರ ಅತಿ ಉಚ್ಚ ಮಟ್ಟದಲ್ಲಿ ಅಲ್ಲ, ಬದಲಿಗೆ ಸಂಬಂಧಿತ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ, ತನ್ನ ಪರ್ವತಪ್ರಸಂಗದಲ್ಲಿ ಯೇಸು ಹೇಳಿದ್ದು: “ಪರಲೋಕದಲ್ಲಿರುವ ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ,” ಅಥವಾ ಪೂರ್ಣರಾಗಿರ್ರಿ. ತನ್ನ ಹಿಂಬಾಲಕರು ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುವುದಾದರೆ ಅವರ ಪ್ರೀತಿಯು ಅಪೂರ್ಣವಾಗಿರುವುದು, ಕೊರತೆಯುಳ್ಳದ್ದಾಗಿರುವುದು, ದೋಷವುಳ್ಳದ್ದಾಗಿರುವುದು ಎಂದು ಯೇಸು ಅವರಿಗೆ ಹೇಳುತ್ತಿದ್ದನು. ಅವರು ವೈರಿಗಳನ್ನೂ ಪ್ರೀತಿಸುವ ಮೂಲಕ ತಮ್ಮ ಪ್ರೀತಿಯನ್ನು ಪೂರ್ಣವಾಗಿಸಬೇಕು, ಅಥವಾ ಸಂಪೂರ್ಣ ಮಟ್ಟಕ್ಕೆ ತರಬೇಕು. ತದ್ರೀತಿಯಲ್ಲಿ, ಯೋಹಾನನು “ಪೂರ್ಣಪ್ರೀತಿ”ಯ ಬಗ್ಗೆ ಬರೆದಾಗ, ಅವನು ಪೂರ್ಣಹೃದಯದ, ಪೂರ್ತಿಯಾಗಿ ಬೆಳೆದ, ಮತ್ತು ಜೀವನದ ಎಲ್ಲಾ ವೈಶಿಷ್ಟ್ಯಗಳನ್ನು ಆವರಿಸುವ ದೇವರ ಪ್ರೀತಿಯ ಬಗ್ಗೆ ಮಾತಾಡುತ್ತಿದ್ದನು.—ಮತ್ತಾಯ 5:46-48; 19:20, 21.
ಒಬ್ಬ ಕ್ರೈಸ್ತನು ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ, ತಾನು ಪಾಪಿ ಮತ್ತು ಅಪರಿಪೂರ್ಣನು ಎಂಬ ಪ್ರಜ್ಞೆ ಅವನಿಗಿರುತ್ತದೆ. ಆದರೂ, ಅವನಿಗೆ ದೇವರ ಮೇಲೆ ಇರುವ ಪ್ರೀತಿ ಮತ್ತು ದೇವರು ಅವನ ಮೇಲೆ ಪ್ರೀತಿಯನ್ನಿಟ್ಟಿದ್ದಾನೆ ಎಂಬ ಪ್ರಜ್ಞೆಯು ಪೂರ್ತಿಯಾಗಿ ಬೆಳೆದಿರುವುದಾದರೆ, ಅವನು ಖಂಡನೆಯ ಅಥವಾ ನಿರಾಕರಣೆಯ ಭೀತಿಯಿಂದ ನಿರ್ಬಂಧಿತನಾಗುವುದಿಲ್ಲ. ಬದಲಿಗೆ, ಅವನು ತನ್ನ ಹೃದಯದಲ್ಲಿ ಏನಿದೆಯೋ ಅದನ್ನು ವ್ಯಕ್ತಪಡಿಸುವುದರಲ್ಲಿ ಮತ್ತು ಯೇಸು ಕ್ರಿಸ್ತನ ಮೂಲಕ ದೇವರು ಪ್ರೀತಿಯಿಂದ ಒದಗಿಸಿರುವ ಈಡು ಯಜ್ಞದ ಮೇಲಾಧಾರಿಸಿ ಕ್ಷಮಾಪಣೆಯನ್ನು ಯಾಚಿಸುವುದರಲ್ಲಿ ಅವನಿಗೆ ವಾಕ್ ಸರಳತೆಯಿರುತ್ತದೆ. ತನ್ನ ಬಿನ್ನಹಗಳು ದೇವರಿಂದ ಸ್ವೀಕಾರಾರ್ಹವಾಗಿ ಆಲಿಸಲ್ಪಡುತ್ತವೆ ಎಂಬ ದೃಢವಿಶ್ವಾಸ ಅವನಿಗಿರುತ್ತದೆ.
ಒಬ್ಬನು “ಪೂರ್ಣಪ್ರೀತಿ”ಯುಳ್ಳವನಾಗಿ ಖಂಡಿಸಲ್ಪಡುವ ಅಥವಾ ನಿರಾಕರಿಸಲ್ಪಡುವ ಹೆದರಿಕೆಯನ್ನು ‘ಹೊರಡಿಸಿಬಿಡುವುದು’ ಹೇಗೆ? “ಯಾವನಾದರೂ ಆತನ [ದೇವರ] ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ” ಎಂದು ಅಪೊಸ್ತಲ ಯೋಹಾನನು ಹೇಳಿದನು. (1 ಯೋಹಾನ 2:5) ಇದನ್ನು ಪರಿಗಣಿಸಿ: ನಾವು ಪಾಪಿಗಳಾಗಿರುವಾಗಲೇ ದೇವರು ನಮ್ಮನ್ನು ಪ್ರೀತಿಸಿರುವುದಾದರೆ, ನಾವು ನಿಜವಾಗಿಯೂ ಪಶ್ಚಾತ್ತಾಪಪಡುವುದಾದರೆ ಮತ್ತು ಶ್ರದ್ಧೆಯಿಂದ “ಆತನ ವಾಕ್ಯವನ್ನು ಕೈಕೊಂಡು ನಡೆದರೆ” ಆತನು ನಮ್ಮನ್ನು ಇನ್ನು ಹೆಚ್ಚಾಗಿ ಪ್ರೀತಿಸುವನಲ್ಲವೇ? (ರೋಮಾಪುರ 5:8; 1 ಯೋಹಾನ 4:10) ವಾಸ್ತವದಲ್ಲಿ, ನಾವು ನಂಬಿಗಸ್ತರಾಗಿ ಉಳಿಯುವಷ್ಟು ಕಾಲ, ಅಪೊಸ್ತಲ ಪೌಲನು ದೇವರ ಬಗ್ಗೆ ಏನು ಹೇಳಿದನೋ ಅದೇ ದೃಢವಿಶ್ವಾಸವನ್ನು ನಾವು ಹೊಂದಿರಬಲ್ಲೆವು: “ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?”—ರೋಮಾಪುರ 8:32.
ನಮ್ಮ ಕ್ರೈಸ್ತ ಜೀವನ
w06 11/1 ಪುಟ 18 ಪ್ಯಾರ 10
ನಿಮ್ಮ ನಂಬಿಕೆಯನ್ನು ನಿಮ್ಮ ಜೀವನರೀತಿಯ ಮೂಲಕ ರುಜುಪಡಿಸಿರಿ
10 ಕ್ರೈಸ್ತ ದಂಪತಿಗಳು ವಾಸ್ತವಿಕ ನೋಟವುಳ್ಳವರೂ ವಿವೇಚನಾಶೀಲರೂ ಆಗಿರಲು ಬಯಸುತ್ತಾರೆ ಮತ್ತು ಇದಕ್ಕಾಗಿ ಬೈಬಲ್ ಅವರಿಗೆ ಸಹಾಯ ನೀಡಬಲ್ಲದು. ವಿವಾಹದಿನವು ಮಹತ್ವಪೂರ್ಣ ಸಂದರ್ಭವಾಗಿರುವುದಾದರೂ, ಅದು ನಿತ್ಯಜೀವದ ನಿರೀಕ್ಷೆಯಿರುವ ಇಬ್ಬರು ಕ್ರೈಸ್ತರ ವೈವಾಹಿಕ ಜೀವನದ ಕೇವಲ ಆರಂಭವಾಗಿದೆ ಎಂಬುದನ್ನು ಅವರು ತಿಳಿದಿರುತ್ತಾರೆ. ಅವರು ಒಂದು ದೊಡ್ಡ ವಿವಾಹದೌತಣವನ್ನು ಏರ್ಪಡಿಸಲೇಬೇಕೆಂದಿಲ್ಲ. ಒಂದುವೇಳೆ ಅವರು ವಿವಾಹದ ಗೋಷ್ಠಿಯನ್ನು ಏರ್ಪಡಿಸಲು ಇಷ್ಟಪಡುವಲ್ಲಿ, ಅದಕ್ಕಾಗುವ ಖರ್ಚುವೆಚ್ಚ ಮತ್ತು ಅದು ಯಾವ ರೀತಿಯಲ್ಲಿ ಇರಬೇಕೆಂಬುದನ್ನು ಪರಿಗಣಿಸಬಯಸುವರು. (ಲೂಕ 14:28) ಅವರ ಕ್ರೈಸ್ತ ಸಹಬಾಳ್ವೆಯಲ್ಲಿ ಪತಿಯು ಶಾಸ್ತ್ರಾಧಾರಿತವಾಗಿ ಶಿರಸ್ಸಾಗಿರುವನು. (1 ಕೊರಿಂಥ 11:3; ಎಫೆಸ 5:22, 23) ಆದುದರಿಂದ, ವಿವಾಹದ ರಿಸೆಪ್ಷನ್ಗೆ ಪ್ರಮುಖ ಹೊಣೆಗಾರನು ವರನಾಗಿರುತ್ತಾನೆ. ಆದರೂ, ವಿವಾಹದೌತಣಕ್ಕೆ ಯಾರನ್ನು ಆಮಂತ್ರಿಸಬೇಕು ಅಥವಾ ಎಷ್ಟು ಮಂದಿಯನ್ನು ಆಮಂತ್ರಿಸಸಾಧ್ಯವಿದೆ ಎಂಬ ವಿಷಯದಲ್ಲಿ ಅವನು ತನ್ನ ಕೈಹಿಡಿಯುವವಳನ್ನು ಪ್ರೀತಿಯಿಂದ ವಿಚಾರಿಸುವನು. ಅವರ ಎಲ್ಲ ಬಂಧುಮಿತ್ರರನ್ನು ಆಮಂತ್ರಿಸಲು ಸಾಧ್ಯವಿರಲಿಕ್ಕಿಲ್ಲ ಇಲ್ಲವೆ ಅದು ಪ್ರಾಯೋಗಿಕವೂ ಆಗಿರಲಿಕ್ಕಿಲ್ಲ. ಆದಕಾರಣ, ಕೆಲವು ನ್ಯಾಯಸಮ್ಮತ ನಿರ್ಣಯಗಳನ್ನು ಮಾಡಬೇಕಾದೀತು. ಕೆಲವು ಜೊತೆಕ್ರೈಸ್ತರಿಗೆ ಕರೆಕೊಡದಿರುವಲ್ಲಿ, ಆ ಕ್ರೈಸ್ತರು ಬೇಸರ ಮಾಡಿಕೊಳ್ಳದೆ ಅದು ಏಕೆಂಬುದಕ್ಕೆ ವಿವೇಚನಾಶಕ್ತಿಯನ್ನು ಉಪಯೋಗಿಸುವರು ಎಂಬ ಭರವಸೆ ಅವರಿಗಿರಬೇಕು.—ಪ್ರಸಂಗಿ 7:9.
ನವೆಂಬರ್ 11-17
ಬೈಬಲಿನಲ್ಲಿರುವ ರತ್ನಗಳು | 2 ಯೋಹಾನ 1–ಯೂದ
“ನಾವು ಸತ್ಯದಲ್ಲೇ ಉಳಿಯಲಿಕ್ಕಾಗಿ ಹೋರಾಡಬೇಕು”
(ಯೂದ 3) ಪ್ರಿಯರೇ, ನಾವು ಸಮಾನವಾಗಿ ಹೊಂದಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯಲು ನಾನು ಸಕಲ ಪ್ರಯತ್ನವನ್ನು ಮಾಡುತ್ತಿದ್ದೆನಾದರೂ ಪವಿತ್ರ ಜನರಿಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಗಾಗಿ ನೀವು ಕಠಿನ ಹೋರಾಟವನ್ನು ಮಾಡುವಂತೆ ನಿಮಗೆ ಬುದ್ಧಿಹೇಳಿ ಬರೆಯುವುದು ಅಗತ್ಯವೆಂದು ನನಗೆ ತೋರಿತು.
w04 9/15 ಪುಟ 11-12 ಪ್ಯಾರ 8-9
‘ಕರ್ತನಲ್ಲಿ ಶಕ್ತಿಯನ್ನು ಪಡೆದುಕೊಳ್ಳುತ್ತಾ ಮುಂದುವರಿಯಿರಿ’
8 ಸೈತಾನನ ಯೋಚನೆಗಳ ಬಗ್ಗೆ ನಾವು ಅಜ್ಞಾನಿಗಳೇನಲ್ಲ, ಏಕೆಂದರೆ ಶಾಸ್ತ್ರವಚನಗಳು ನಮಗೆ ಅವನ ಮೂಲಭೂತ ತಂತ್ರೋಪಾಯಗಳನ್ನು ಬಯಲುಪಡಿಸುತ್ತವೆ. (2 ಕೊರಿಂಥ 2:11) ನೀತಿವಂತನಾಗಿದ್ದ ಯೋಬನ ವಿರುದ್ಧ ಪಿಶಾಚನು ಗುರುತರವಾದ ಆರ್ಥಿಕ ಸಮಸ್ಯೆಗಳನ್ನು, ಪ್ರಿಯರ ಮರಣವನ್ನು, ಕುಟುಂಬದ ವಿರೋಧವನ್ನು, ಶಾರೀರಿಕ ಕಷ್ಟಾನುಭವವನ್ನು, ಹಾಗೂ ಸುಳ್ಳು ಸ್ನೇಹಿತರಿಂದ ನಿರಾಧಾರವಾದ ಟೀಕೆಯನ್ನು ಉಪಯೋಗಿಸಿದನು. ಯೋಬನು ಖಿನ್ನತೆಯನ್ನು ಅನುಭವಿಸಿದನು ಮತ್ತು ದೇವರು ತನ್ನನ್ನು ತೊರೆದುಬಿಟ್ಟಿದ್ದಾನೆ ಎಂಬ ಅನಿಸಿಕೆಯೂ ಅವನಿಗಾಯಿತು. (ಯೋಬ 10:1, 2) ಇಂದು ಸೈತಾನನು ನೇರವಾಗಿ ಇಂಥ ಸಮಸ್ಯೆಗಳನ್ನು ಉಂಟುಮಾಡದಿರಬಹುದಾದರೂ, ಇಂಥ ಕಷ್ಟತೊಂದರೆಗಳು ಅನೇಕ ಕ್ರೈಸ್ತರನ್ನು ಬಾಧಿಸುತ್ತಿವೆ, ಮತ್ತು ಸೈತಾನನು ಇವುಗಳನ್ನು ತನ್ನ ಪ್ರಯೋಜನಕ್ಕಾಗಿ ಬಳಸಿಕೊಳ್ಳಸಾಧ್ಯವಿದೆ.
9 ಈ ಅಂತ್ಯಕಾಲದಲ್ಲಿ ಆಧ್ಯಾತ್ಮಿಕ ಅಪಾಯಗಳು ತೀವ್ರಗತಿಯಲ್ಲಿ ಹೆಚ್ಚಿವೆ. ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಆಧ್ಯಾತ್ಮಿಕ ಗುರಿಗಳ ಸ್ಥಾನವನ್ನು ತೆಗೆದುಕೊಳ್ಳುತ್ತಿರುವಂಥ ಒಂದು ಲೋಕದಲ್ಲಿ ನಾವು ಬದುಕುತ್ತಿದ್ದೇವೆ. ವಾರ್ತಾಮಾಧ್ಯಮವು ನಿಷಿದ್ಧ ಲೈಂಗಿಕತೆಯನ್ನು ಒಂದು ಮನೋವೇದನೆಯ ಬದಲಾಗಿ ಸಂತೋಷದ ಮೂಲವಾಗಿ ಸತತವಾಗಿ ಚಿತ್ರಿಸುತ್ತದೆ. ಮತ್ತು ಹೆಚ್ಚೆಚ್ಚು ಜನರು ‘ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರಾಗಿ’ ಪರಿಣಮಿಸಿದ್ದಾರೆ. (2 ತಿಮೊಥೆಯ 3:1-5) ‘ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನಾವು ಹೋರಾಟವನ್ನು’ ನಡೆಸದಿದ್ದರೆ, ಈ ರೀತಿಯ ಆಲೋಚನೆಯು ನಮ್ಮ ಆಧ್ಯಾತ್ಮಿಕ ಸಮತೋಲನಕ್ಕೆ ಬೆದರಿಕೆಯನ್ನು ಒಡ್ಡಸಾಧ್ಯವಿದೆ.—ಯೂದ 3.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಯೂದ 4) ನಮ್ಮ ದೇವರ ಅಪಾತ್ರ ದಯೆಯನ್ನು ನೆವಮಾಡಿಕೊಂಡು ಸಡಿಲು ನಡತೆಯನ್ನು ನಡಿಸುವವರೂ ನಮ್ಮ ಏಕೈಕ ಒಡೆಯನು ಮತ್ತು ಕರ್ತನು ಆಗಿರುವ ಯೇಸು ಕ್ರಿಸ್ತನಿಗೆ ಅಪನಂಬಿಗಸ್ತರೂ ಆಗಿರುವ ಕೆಲವು ಭಕ್ತಿಹೀನ ಜನರು ನಮ್ಮ ಮಧ್ಯೆ ನುಸುಳಿದ್ದಾರೆ; ಇಂಥವರು ಬಹಳ ಸಮಯಕ್ಕೆ ಮುಂಚೆಯೇ ಈ ನ್ಯಾಯತೀರ್ಪಿಗೆ ಶಾಸ್ತ್ರಗ್ರಂಥದಿಂದ ನೇಮಿತರಾಗಿದ್ದಾರೆ.
(ಯೂದ 12) ಇವರು ನಿಮ್ಮ ಪ್ರೇಮಭೋಜನಗಳಲ್ಲಿ ನಿಮ್ಮೊಂದಿಗೆ ಭೋಜನಮಾಡುವಾಗ ನೀರಿನೊಳಗಿರುವ ಅಗೋಚರವಾದ ಬಂಡೆಗಳು, ಭಯರಹಿತವಾಗಿ ಸ್ವತಃ ತಮ್ಮನ್ನೇ ಉಣಿಸಿಕೊಳ್ಳುವ ಕುರುಬರು, ಗಾಳಿಯಿಂದ ಅತ್ತಿತ್ತ ಬಡಿಸಿಕೊಂಡು ಹೋಗುವ ನೀರಿಲ್ಲದ ಮೋಡಗಳು, ತಕ್ಕಕಾಲದಲ್ಲಿ ಹಣ್ಣುಬಿಡದೆ ಎರಡು ಬಾರಿ ಸತ್ತು ಬೇರುಸಹಿತ ಕಿತ್ತು ಬಿದ್ದಿರುವ ಮರಗಳು.
it-2 ಪುಟ 279
ಪ್ರೇಮಭೋಜನಗಳು
ಈ ಪ್ರೇಮಭೋಜನಗಳು ಅಂದರೆ ಏನು ಅಂತ ಬೈಬಲ್ ವಿವರಿಸುವುದಿಲ್ಲ. ಇದನ್ನು ಜನ ಎಷ್ಟು ಸಲ ಏರ್ಪಡಿಸುತ್ತಿದ್ದರು ಅಂತ ಸಹ ತಿಳಿಸುವುದಿಲ್ಲ. (ಯೂದ 12) ಅಷ್ಟೇ ಅಲ್ಲ, ಯೇಸು ಆಗಲಿ ಅಥವಾ ಅವನ ಅಪೊಸ್ತಲರಾಗಲಿ ಇವುಗಳನ್ನು ಏರ್ಪಡಿಸುವಂತೆ ಹೇಳಲಿಲ್ಲ. ಹಾಗಾಗಿ ಇದನ್ನು ಮಾಡಲೇಬೇಕು ಅಂತೇನಿಲ್ಲ. ಈ ಪ್ರೇಮಭೋಜನಗಳು ಐಶ್ವರ್ಯವಂತ ಕ್ರೈಸ್ತರು ಏರ್ಪಡಿಸುತ್ತಿದ್ದ ಭೋಜನಗಳು ಆಗಿದ್ದವು ಅಂತ ಕೆಲವರು ಹೇಳುತ್ತಾರೆ. ಆ ಊಟಕ್ಕೆ ಬಡ ಕ್ರೈಸ್ತರನ್ನು ಆಮಂತ್ರಿಸುತ್ತಿದ್ದರು. ಅಲ್ಲಿ, ಅನಾಥರು, ವಿಧವೆಯರು ಮತ್ತು ಬಡವರು ಎಲ್ಲರು ಸೇರಿ ಪ್ರೀತಿ ಐಕ್ಯತೆಯಿಂದ ಭೋಜನವನ್ನು ಆನಂದಿಸುತ್ತಿದ್ದರು.
it-2 ಪುಟ 816
ಬಂಡೆ
ಸ್ಪಿಲಾಸ್ ಎಂಬ ಗ್ರೀಕ್ ಪದದ ಅರ್ಥ ನೀರಿನೊಳಗೆ ಇರುವ ಬಂಡೆ. ಇದು ಕಣ್ಣಿಗೆ ಕಾಣಲ್ಲ. ಯೂದ ಈ ಪದವನ್ನು, ಕೆಟ್ಟ ಉದ್ದೇಶದಿಂದ ಸಭೆಯೊಳಗೆ ನುಸುಳಿರುವ ಕೆಲವು ಜನರನ್ನು ಸೂಚಿಸಲು ಬಳಸಿದ್ದಾನೆ. ನೀರಿನೊಳಗೆ ಇರುವ ಬಂಡೆಗಳು ಹಡಗುಗಳಿಗೆ ಯಾವ ರೀತಿ ಅಪಾಯಕಾರಿ ಆಗಿದ್ದವೋ ಅದೇ ರೀತಿ ಆ ಜನರು ಸಹ ಸಭೆಯಲ್ಲಿದ್ದ ಬೇರೆ ಕ್ರೈಸ್ತರಿಗೆ ಅಪಾಯಕಾರಿ ಆಗಿದ್ದರು. ಇಂಥವರು ‘ನಿಮ್ಮ ಪ್ರೇಮಭೋಜನಗಳಲ್ಲಿ ನಿಮ್ಮೊಂದಿಗೆ ಭೋಜನಮಾಡುವಾಗ ನೀರಿನೊಳಗಿರುವ ಅಗೋಚರವಾದ ಬಂಡೆಗಳಂತೆ’ ಇದ್ದಾರೆ ಅಂತ ಯೂದ ಹೇಳಿದ.—ಯೂದ 12.
(ಯೂದ 14, 15) ಹೌದು, ಆದಾಮನಿಗೆ ಏಳನೆಯ ತಲೆಯವನಾದ ಹನೋಕನು ಇಂಥವರ ವಿಷಯದಲ್ಲಿ ಸಹ ಪ್ರವಾದಿಸುತ್ತಾ, “ಇಗೋ, ಯೆಹೋವನು ಅಸಂಖ್ಯಾತರಾದ ತನ್ನ ಪವಿತ್ರ ದೂತರೊಂದಿಗೆ 15 ಎಲ್ಲರ ವಿರುದ್ಧ ನ್ಯಾಯತೀರ್ಪನ್ನು ವಿಧಿಸುವುದಕ್ಕೂ ಭಕ್ತಿಹೀನ ಜನರೆಲ್ಲರೂ ಭಕ್ತಿಹೀನವಾದ ರೀತಿಯಲ್ಲಿ ನಡಿಸಿದ ಭಕ್ತಿಹೀನ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಹೀನ ಪಾಪಿಗಳು ಆತನಿಗೆ ವಿರುದ್ಧವಾಗಿ ನುಡಿದ ಆಘಾತಕರ ಸಂಗತಿಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೂ ಬಂದನು” ಎಂದು ಹೇಳಿದನು.
‘ದೇವರನ್ನು ಮೆಚ್ಚಿಸಿದವನು’
ಹನೋಕನು ಏನೆಂದು ಪ್ರವಾದಿಸಿದನು? “ಇಗೋ, ಯೆಹೋವನು ಅಸಂಖ್ಯಾತರಾದ ತನ್ನ ಪವಿತ್ರ ದೂತರೊಂದಿಗೆ ಎಲ್ಲರ ವಿರುದ್ಧ ನ್ಯಾಯತೀರ್ಪನ್ನು ವಿಧಿಸುವುದಕ್ಕೂ ಭಕ್ತಿಹೀನ ಜನರೆಲ್ಲರೂ ಭಕ್ತಿಹೀನವಾದ ರೀತಿಯಲ್ಲಿ ನಡಿಸಿದ ಭಕ್ತಿಹೀನ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಹೀನ ಪಾಪಿಗಳು ಆತನಿಗೆ ವಿರುದ್ಧವಾಗಿ ನುಡಿದ ಆಘಾತಕರ ಸಂಗತಿಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೂ ಬಂದನು” ಎಂದು ಅವನು ಪ್ರವಾದಿಸಿದನು. (ಯೂದ 14, 15) ಇಲ್ಲಿ ಹನೋಕನು, ಪ್ರವಾದನೆಯಲ್ಲಿ ತಿಳಿಸಲಾಗಿರುವ ವಿಷಯಗಳು ನಡೆದೇ ಹೋಗಿವೆಯೋ ಎಂಬಂತೆ ಭೂತ ಕಾಲದಲ್ಲಿ ಹೇಳಿರುವುದನ್ನು ನೀವು ಗಮನಿಸಬಹುದು. ತದನಂತರದ ಅನೇಕ ಪ್ರವಾದನೆಗಳನ್ನೂ ಅದೇ ರೀತಿಯಲ್ಲಿ ಹೇಳಲಾಗಿದೆ. ಆ ವಿಷಯಗಳು ಸಂಭವಿಸುವುದು ಎಷ್ಟು ಖಂಡಿತವಾಗಿತ್ತೆಂದರೆ ಪ್ರವಾದಿ ಅವುಗಳನ್ನು ಈಗಾಗಲೇ ನಡೆದು ಹೋಗಿವೆಯೋ ಎಂಬಂತೆ ಹೇಳಿದನು.—ಯೆಶಾಯ 46:10.
‘ದೇವರನ್ನು ಮೆಚ್ಚಿಸಿದವನು’
ದೇವರು ಈ ಲೋಕವನ್ನು ನೋಡುವ ರೀತಿಯಲ್ಲೇ ನಾವೂ ನೋಡುತ್ತಿದ್ದೇವಾ ಎಂದು ನಮ್ಮನ್ನೇ ಕೇಳಿಕೊಳ್ಳುವಂತೆ ಹನೋಕನ ನಂಬಿಕೆ ನಮ್ಮನ್ನು ಪ್ರೇರೇಪಿಸುತ್ತದೆ. ಹನೋಕನು ಪ್ರಕಟಿಸಿದ ನ್ಯಾಯತೀರ್ಪು ಇಂದು ಸಹ ತುಂಬ ಪ್ರಾಮುಖ್ಯ. ಈ ತೀರ್ಪು ಹನೋಕನ ಸಮಯದಲ್ಲಿದ್ದ ಲೋಕಕ್ಕೆ ಅನ್ವಯಸಿದಂತೆಯೇ ಈಗಿನ ಲೋಕಕ್ಕೂ ಅನ್ವಯಿಸುತ್ತದೆ. ಹನೋಕನ ಎಚ್ಚರಿಕೆಗೆ ಸರಿಯಾಗಿ, ನೋಹನ ದಿನಗಳಲ್ಲಿ ದೇವರು ಭಕ್ತಿಹೀನ ಲೋಕವನ್ನು ನಾಶಮಾಡಲು ದೊಡ್ಡ ಜಲಪ್ರಳಯವನ್ನು ತಂದನು. ಅದು ಮುಂದೆ ಬರಲಿರುವ ನಾಶನಕ್ಕೆ ಕೈತೋರಿಸುತ್ತಿತ್ತು. (ಮತ್ತಾಯ 24:38, 39; 2 ಪೇತ್ರ 2:4-6) ಇಂದು ಸಹ, ಈಗಿನ ಭಕ್ತಿಹೀನ ಲೋಕಕ್ಕೆ ನೀತಿಯ ತೀರ್ಪನ್ನು ತರಲು ದೇವರು ತನ್ನ ಪವಿತ್ರ ದೂತರೊಂದಿಗೆ ಸಿದ್ಧನಾಗಿ ನಿಂತಿದ್ದಾನೆ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಹನೋಕನು ಪ್ರಕಟಿಸಿದ ಎಚ್ಚರಿಕೆಯನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು ಮತ್ತು ಇದನ್ನು ಇತರರಿಗೂ ಹೇಳಬೇಕು. ನಮ್ಮ ಕುಟುಂಬದವರು, ಸ್ನೇಹಿತರು ನಮಗೆ ವಿರುದ್ಧವಾದ ನಿರ್ಣಯ ಮಾಡಬಹುದು. ಹಾಗಾಗಿ, ಕೆಲವೊಮ್ಮೆ ನಮಗೂ ಒಂಟಿ ಭಾವನೆ ಕಾಡಬಹುದು. ಆದರೆ ನೆನಪಿಡಿ, ಯೆಹೋವನು ಹನೋಕನ ಕೈಬಿಡಲಿಲ್ಲ, ತನ್ನ ಈಗಿನ ನಂಬಿಗಸ್ತ ಸೇವಕರ ಕೈಯನ್ನೂ ಬಿಡುವುದಿಲ್ಲ.
ನವೆಂಬರ್ 18-24
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 1-3
“ನಿನ್ನ ಕೃತ್ಯಗಳನ್ನು ಬಲ್ಲೆನು”
(ಪ್ರಕಟನೆ 1:20) ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳು ಮತ್ತು ಚಿನ್ನದ ಏಳು ದೀಪಸ್ತಂಭಗಳ ಪವಿತ್ರ ರಹಸ್ಯವೇನೆಂದರೆ, ಆ ಏಳು ನಕ್ಷತ್ರಗಳ ಅರ್ಥ ಏಳು ಸಭೆಗಳ ದೂತರು ಮತ್ತು ಆ ಏಳು ದೀಪಸ್ತಂಭಗಳ ಅರ್ಥ ಏಳು ಸಭೆಗಳು.
w12 10/15 ಪುಟ 14 ಪ್ಯಾರ 8
ನೀವು ಎಂಥ ಮನೋಭಾವ ತೋರಿಸುತ್ತೀರಿ?
8 ಇಂಥ ಮನೋಭಾವ ನಮ್ಮಲ್ಲಿರದಂತೆ ನೋಡಿಕೊಳ್ಳಲು ಸಾಧ್ಯವಿದೆ. ಹೇಗೆ? ಯೇಸುವಿನ ಕೈಯಲ್ಲಿ “ಏಳು ನಕ್ಷತ್ರಗಳು” ಇವೆಯೆಂದು ಬೈಬಲ್ ಹೇಳುತ್ತದೆ. ಆ “ನಕ್ಷತ್ರಗಳು” ಅಭಿಷಿಕ್ತ ಮೇಲ್ವಿಚಾರಕರನ್ನು ಸೂಚಿಸುತ್ತವೆ. ವಿಶಾಲಾರ್ಥದಲ್ಲಿ ಅವುಗಳು ಸಭೆಗಳಲ್ಲಿರುವ ಎಲ್ಲ ಹಿರಿಯರನ್ನು ಸೂಚಿಸುತ್ತವೆ. ಯೇಸುವಿಗೆ ತನ್ನ ಕೈಯಲ್ಲಿರುವ ಆ ‘ನಕ್ಷತ್ರಗಳನ್ನು’ ಯೋಗ್ಯ ವಿಧದಲ್ಲಿ ಮುನ್ನಡೆಸುವುದು ಹೇಗೆಂದು ಗೊತ್ತು. ಈ ವಿಷಯವನ್ನು ನೆನಪಿನಲ್ಲಿಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಅಗೌರವ ತೋರಿಸದಿರುವಂತೆ ನಮಗೆ ಸಹಾಯ ಮಾಡುತ್ತದೆ. (ಪ್ರಕ. 1:16, 20) ಹೌದು, ಕ್ರೈಸ್ತ ಸಭೆಯ ಶಿರಸ್ಸಾದ ಯೇಸುವಿಗೆ ಹಿರಿಯ ಮಂಡಳಿಯ ಮೇಲೆ ಪೂರ್ಣ ನಿಯಂತ್ರಣವಿದೆ. ಒಂದುವೇಳೆ ಯಾವ ಹಿರಿಯನಾದರೂ ತಪ್ಪು ಮಾಡಿದರೆ ಅದು ಯೇಸುವಿನ ಕಣ್ಣಿಗೆ ಮರೆಯಾಗಿರುವುದಿಲ್ಲ. ಏಕೆಂದರೆ ಆತನ ‘ಕಣ್ಣುಗಳು ಅಗ್ನಿಜ್ವಾಲೆಯಂತಿವೆ.’ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಿಧದಲ್ಲಿ ಖಂಡಿತ ಆತನು ಆ ಹಿರಿಯನಿಗೆ ತಿದ್ದುಪಾಟನ್ನು ಕೊಡುವನು. (ಪ್ರಕ. 1:14) ಆ ವರೆಗೆ ನಾವು ಪವಿತ್ರಾತ್ಮದಿಂದ ನೇಮಿತರಾದವರಿಗೆ ಯೋಗ್ಯ ಗೌರವ ತೋರಿಸಬೇಕು. ಏಕೆಂದರೆ ಪೌಲ ಬರೆದದ್ದು: “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು.”—ಇಬ್ರಿ. 13:17.
(ಪ್ರಕಟನೆ 2:1, 2) “ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ: ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು ಚಿನ್ನದ ಏಳು ದೀಪಸ್ತಂಭಗಳ ಮಧ್ಯೆ ನಡೆದಾಡುವವನು ಹೇಳುವುದೇನೆಂದರೆ, 2 ‘ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರಯಾಸವನ್ನೂ ತಾಳ್ಮೆಯನ್ನೂ ನಾನು ಬಲ್ಲೆನು; ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳಲಾರೆ ಮತ್ತು ಅಪೊಸ್ತಲರಲ್ಲದಿದ್ದರೂ ತಾವು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷೆಗೆ ಒಳಪಡಿಸಿ ಅವರು ಸುಳ್ಳುಗಾರರೆಂದು ಕಂಡುಕೊಂಡಿ.
w12 4/15 ಪುಟ 29 ಪ್ಯಾರ 11
ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ
11 ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು ಏಷ್ಯಾ ಮೈನರ್ನ ಏಳು ಸಭೆಗಳನ್ನು ಪರಿಶೀಲಿಸುವ ದರ್ಶನ ಪ್ರಕಟನೆ 2 ಮತ್ತು 3ನೆಯ ಅಧ್ಯಾಯಗಳಲ್ಲಿ ದಾಖಲೆಯಾಗಿದೆ. ಕ್ರಿಸ್ತನು ಸಭೆಯ ಸಾಮಾನ್ಯ ಆಗುಹೋಗುಗಳನ್ನು ಮಾತ್ರವಲ್ಲ ನಿರ್ದಿಷ್ಟ ಸನ್ನಿವೇಶವನ್ನೂ ನೋಡುತ್ತಾನೆಂದು ಆ ದರ್ಶನ ತಿಳಿಸುತ್ತದೆ. ಅವನು ಸಭೆಗಳಿಗೆ ಪ್ರಶಂಸೆಯನ್ನೂ ಅಗತ್ಯವಿದ್ದಾಗ ಸಲಹೆಯನ್ನೂ ಕೊಟ್ಟನು. ಕೆಲವು ಬಾರಿ ಸಭೆಯಲ್ಲಿದ್ದ ವ್ಯಕ್ತಿಗಳ ಕುರಿತೂ ಮಾತಾಡಿದನು. ಇದೇನನ್ನು ಸೂಚಿಸುತ್ತದೆ? ಆ ಏಳು ಸಭೆಗಳು 1914 ರ ನಂತರದ ಅಭಿಷಿಕ್ತ ಕ್ರೈಸ್ತರನ್ನು ಸೂಚಿಸುತ್ತವೆ. ಕ್ರಿಸ್ತನು ಆ ಸಲಹೆಯನ್ನು ಮುಖ್ಯವಾಗಿ ಅಭಿಷಿಕ್ತರಿಗೆ ಕೊಟ್ಟಿರುವುದಾದರೂ ಇಂದು ಭೂವ್ಯಾಪಕವಾಗಿರುವ ದೇವಜನರ ಎಲ್ಲ ಸಭೆಗಳು ಅದರಿಂದ ಪ್ರಯೋಜನ ಪಡೆಯಬಲ್ಲವು. ಹಾಗಿರುವುದರಿಂದ ಯೆಹೋವನು ಇಂದು ತನ್ನ ಪುತ್ರನ ಮೂಲಕ ತನ್ನ ಜನರನ್ನು ಕ್ರಿಯಾಶೀಲವಾಗಿ ಮುನ್ನಡೆಸುತ್ತಿದ್ದಾನೆ ಎಂದು ಹೇಳಸಾಧ್ಯವಿದೆ. ಆ ಮಾರ್ಗದರ್ಶನದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
w01 1/15 ಪುಟ 20-21 ಪ್ಯಾರ 20
ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕುವುದು
20 ಯೆಹೋವನ ಪ್ರಗತಿಪರ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಚೆಯನ್ನಿಡಲಿಕ್ಕಾಗಿ, “ಸಭೆಗೆ ತಲೆ”ಯಾಗಿರುವ ಯೇಸು ಕ್ರಿಸ್ತನಿಗೆ ದೇವರು ನೇಮಿಸಿರುವ ಪಾತ್ರವನ್ನು ಅಂಗೀಕರಿಸುವ ಅಗತ್ಯವಿದೆ. (ಎಫೆಸ 5:22, 23) ಯೆಶಾಯ 55:4 ರಲ್ಲಿ ತಿಳಿಸಲ್ಪಟ್ಟಿರುವ ವಿಷಯವು ಸಹ ಗಮನಾರ್ಹವಾದದ್ದಾಗಿದೆ. ಅಲ್ಲಿ ನಮಗೆ ಹೀಗೆ ಹೇಳಲಾಗಿದೆ: “ಇಗೋ, ನಾನು [ಯೆಹೋವನು] ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” ನಾಯಕತ್ವವನ್ನು ಹೇಗೆ ವಹಿಸಬೇಕೆಂಬುದು ಖಂಡಿತವಾಗಿಯೂ ಯೇಸುವಿಗೆ ತಿಳಿದಿದೆ. ಅವನಿಗೆ ತನ್ನ ಕುರಿಗಳ ಮತ್ತು ಅವರ ಕೃತ್ಯಗಳ ಕುರಿತು ಚೆನ್ನಾಗಿ ತಿಳಿದಿದೆ. ವಾಸ್ತವದಲ್ಲಿ, ಅವನು ಏಷಿಯ ಮೈನರ್ನಲ್ಲಿರುವ ಏಳು ಸಭೆಗಳನ್ನು ಪರೀಕ್ಷಿಸಿದಾಗ, ಐದು ಬಾರಿ ಅವನು ಹೇಳಿದ್ದು: ‘ನಾನು ನಿನ್ನ ಕೃತ್ಯಗಳನ್ನು ಬಲ್ಲೆನು.’ (ಪ್ರಕಟನೆ 2:2, 19; 3:1, 8, 15) ಯೇಸುವಿಗೆ ನಮ್ಮ ಆವಶ್ಯಕತೆಗಳು ಏನೆಂಬುದು ಸಹ ತಿಳಿದಿದೆ. ಮತ್ತು ಅವನ ತಂದೆಯಾಗಿರುವ ಯೆಹೋವನಿಗೂ ಅವು ತಿಳಿದಿವೆ. ಮಾದರಿ ಪ್ರಾರ್ಥನೆಯನ್ನು ಕಲಿಸುವುದಕ್ಕೆ ಮುಂಚೆ ಯೇಸು ಹೇಳಿದ್ದು: “ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ.”—ಮತ್ತಾಯ 6:8-13.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಪ್ರಕಟನೆ 1:7) ಇಗೋ, ಅವನು ಮೇಘಗಳೊಂದಿಗೆ ಬರುತ್ತಾನೆ ಮತ್ತು ಪ್ರತಿಯೊಬ್ಬರ ಕಣ್ಣು ಅವನನ್ನು ಕಾಣುವುದು, ಅವನನ್ನು ಇರಿದವರು ಸಹ ಅವನನ್ನು ಕಾಣುವರು; ಭೂಮಿಯಲ್ಲಿರುವ ಎಲ್ಲ ಕುಲಗಳವರು ಅವನ ನಿಮಿತ್ತ ದುಃಖದಿಂದ ಎದೆಬಡಿದುಕೊಳ್ಳುವರು. ಹೌದು, ಆಮೆನ್.
kr-E ಪುಟ 226 ಪ್ಯಾರ 10
ದೇವರ ರಾಜ್ಯ ತನ್ನ ಶತ್ರುಗಳನ್ನು ನಾಶಮಾಡುವುದು
10 ನ್ಯಾಯತೀರ್ಪಿನ ಘೋಷಣೆ. ದೇವರ ರಾಜ್ಯದ ಶತ್ರುಗಳೆಲ್ಲಾ ಈ ಘಟನೆಯನ್ನು ನೋಡುತ್ತಾರೆ. ಇದು ಅವರಲ್ಲಿರುವ ತಳಮಳವನ್ನು, ಸಂಕಟವನ್ನು ಇನ್ನೂ ಹೆಚ್ಚಿಸುತ್ತೆ. “ಅವರು ಮನುಷ್ಯಕುಮಾರನು ಮೇಘಗಳಲ್ಲಿ ಮಹಾ ಶಕ್ತಿಯಿಂದಲೂ ಮಹಿಮೆಯಿಂದಲೂ ಬರುವುದನ್ನು ಕಾಣುವರು” ಅಂತ ಯೇಸು ಹೇಳಿದ. (ಮಾರ್ಕ 13:26) ಜನರು ಇದನ್ನು ನೋಡುವಾಗ, ಯೇಸು ನ್ಯಾಯತೀರ್ಪಿನ ಘೋಷಣೆ ಮಾಡಲು ಬರುತ್ತಿದ್ದಾನೆಂದು ಗೊತ್ತಾಗುತ್ತೆ. ಇದೇ ಪ್ರವಾದನೆಯ ಇನ್ನೊಂದು ಭಾಗ ಕಡೇ ದಿವಸಗಳ ಬಗ್ಗೆ ಮಾತಾಡುತ್ತೆ. ಅಲ್ಲಿ ಯೇಸು, ನ್ಯಾಯತೀರ್ಪಿನ ಘೋಷಣೆಯ ಸಮಯದಲ್ಲಿ ಏನೆಲ್ಲಾ ನಡೆಯುತ್ತೆ ಎಂಬ ಮಾಹಿತಿಯನ್ನು ಕೊಟ್ಟಿದ್ದಾನೆ. ಈ ಮಾಹಿತಿಯನ್ನು ನಾವು, ಆಡು ಮತ್ತು ಕುರಿಗಳ ದೃಷ್ಟಾಂತದಲ್ಲಿ ನೋಡಬಹುದು. (ಮತ್ತಾಯ 25:31-33, 46 ಓದಿ.) ದೇವರ ರಾಜ್ಯವನ್ನು ಬೆಂಬಲಿಸುವ ನೀತಿಯುತ ಜನರನ್ನು ‘ಕುರಿಗಳ’ ಗುಂಪಿಗೆ ಸೇರಿಸಲಾಗುವುದು. ಇವರು ತಮ್ಮ ‘ತಲೆಯನ್ನು ಮೇಲಕ್ಕೆತ್ತುವರು, ಏಕೆಂದರೆ ತಮ್ಮ ಬಿಡುಗಡೆ ಸಮೀಪವಿದೆ’ ಅಂತ ಅವರು ಗ್ರಹಿಸುವರು. (ಲೂಕ 21:28) ಆದರೆ ದೇವರ ರಾಜ್ಯದ ವಿರೋಧಿಗಳನ್ನು ‘ಆಡುಗಳ’ ಗುಂಪಿಗೆ ಸೇರಿಸಲಾಗುವುದು. ಇವರು “ಗೋಳಾಡುತ್ತಾ ಎದೆಬಡಿದುಕೊಳ್ಳುವರು” ಯಾಕೆಂದರೆ, “ಇವರು ನಿತ್ಯಛೇದನಕ್ಕೆ ಹೋಗುವರು.”—ಮತ್ತಾ. 24:30; ಪ್ರಕ. 1:7.
(ಪ್ರಕಟನೆ 2:7) ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಿಸುವವನಿಗೆ ನಾನು ದೇವರ ಪರದೈಸಿನಲ್ಲಿರುವ ಜೀವವೃಕ್ಷದಿಂದ ತಿನ್ನುವುದಕ್ಕೆ ಕೊಡುವೆನು.’
w09 1/15 ಪುಟ 31 ಪ್ಯಾರ 1
ಪ್ರಕಟನೆ ಪುಸ್ತಕದ ಮುಖ್ಯಾಂಶಗಳು—I
2:7—“ದೇವರ ಪರದೈಸ” ಏನಾಗಿದೆ? ಈ ಮಾತುಗಳು ಅಭಿಷಿಕ್ತ ಕ್ರೈಸ್ತರಿಗೆ ಸಂಬೋಧಿಸಲ್ಪಟ್ಟಿರುವುದರಿಂದ, ಇಲ್ಲಿ ತಿಳಿಸಲ್ಪಟ್ಟಿರುವ ಪರದೈಸವು ಪರದೈಸದಂಥ ಸ್ವರ್ಗೀಯ ಕ್ಷೇತ್ರವನ್ನು ಅಂದರೆ ಸ್ವತಃ ದೇವರ ಸನ್ನಿಧಿಯನ್ನು ಸೂಚಿಸುತ್ತಿರಬೇಕು. ನಂಬಿಗಸ್ತ ಅಭಿಷಿಕ್ತರಿಗೆ “ಜೀವದಾಯಕ ವೃಕ್ಷದ ಹಣ್ಣನ್ನು” ತಿನ್ನುವ ಬಹುಮಾನವು ಕೊಡಲ್ಪಡುವುದು. ಅವರು ಅಮರತ್ವವನ್ನು ಪಡೆದುಕೊಳ್ಳುವರು.—1 ಕೊರಿಂ. 15:53.
ನವೆಂಬರ್ 25–ಡಿಸೆಂಬರ್ 1
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 4–6
“ನಾಲ್ಕು ಕುದುರೆ ಸವಾರರ ಸವಾರಿ”
(ಪ್ರಕಟನೆ 6:2) ನಾನು ನೋಡಿದಾಗ, ಇಗೋ ಒಂದು ಬಿಳೀ ಕುದುರೆಯು ಕಾಣಿಸಿತು ಮತ್ತು ಅದರ ಮೇಲೆ ಕುಳಿತುಕೊಂಡಿದ್ದವನ ಬಳಿ ಒಂದು ಬಿಲ್ಲು ಇತ್ತು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು ಮತ್ತು ಅವನು ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು ಹೋದನು.
wp17.3-E ಪುಟ 4 ಪ್ಯಾರ 3
ನಾಲ್ಕು ಕುದುರೆ ಸವಾರರು—ಅವರು ಯಾರು?
ಬಿಳೀ ಬಣ್ಣದ ಕುದುರೆ ಸವಾರ ಯಾರು? ಇದಕ್ಕೆ ಉತ್ತರ ಇದೇ ಪ್ರಕಟನೆ ಪುಸ್ತಕದಲ್ಲಿ ಇದೆ. ಇದರಲ್ಲಿ ಈ ಸವಾರನ ಹೆಸರು “ದೇವರ ವಾಕ್ಯ” ಅಂತ ತಿಳಿಸಲಾಗಿದೆ. (ಪ್ರಕಟನೆ 19:11-13) “ವಾಕ್ಯ” ಎಂಬ ಬಿರುದು ಯೇಸು ಕ್ರಿಸ್ತನದು. ಯಾಕೆಂದರೆ ಯೇಸು ದೇವರ ಪ್ರತಿನಿಧಿಯಾಗಿ ಕೆಲಸಮಾಡುತ್ತಾನೆ. (ಯೋಹಾನ 1:1, 14) ಅದು ಅಲ್ಲದೇ ಅವನನ್ನು “ರಾಜರ ರಾಜನು ಮತ್ತು ಕರ್ತರ ಕರ್ತನು” ಎಂದೂ ಕರೆಯಲಾಗಿದೆ. ಜೊತೆಗೆ ‘ನಂಬಿಗಸ್ತನು, ಸತ್ಯವಂತನು’ ಅಂತ ಸಹ ವರ್ಣಿಸಲಾಗಿದೆ. (ಪ್ರಕಟನೆ 19:16) ಹಾಗಾಗಿ ಯೇಸು ನೀತಿಗಾಗಿ ಹೋರಾಡುವ ರಾಜನಾಗಿದ್ದಾನೆ. ಈ ಅಧಿಕಾರವನ್ನು ಯೇಸು ಕೆಟ್ಟ ರೀತಿಯಲ್ಲಿ ದುರುಪಯೋಗಿಸುವುದಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಕೆಲವು ಪ್ರಶ್ನೆಗಳಂತೂ ನಮ್ಮ ಮನಸ್ಸಿಗೆ ಬಂದೇ ಬರುತ್ತವೆ.
wp17.3-E ಪುಟ 4 ಪ್ಯಾರ 5
ನಾಲ್ಕು ಕುದುರೆ ಸವಾರರು—ಅವರು ಯಾರು?
ಕುದುರೆ ಸವಾರರು ತಮ್ಮ ಸವಾರಿಯನ್ನು ಯಾವಾಗ ಆರಂಭಿಸಿದರು? ಮೊದಲ ಸವಾರನಾದ ಯೇಸು, ತನ್ನ ಸವಾರಿಯನ್ನು ಸ್ವರ್ಗದಲ್ಲಿ ರಾಜನಾದಾಗ ಆರಂಭಿಸಿದನು. (ಪ್ರಕಟನೆ 6:2) ಯೇಸು ಸ್ವರ್ಗದಲ್ಲಿ ಯಾವಾಗ ರಾಜನಾದನು? ಯೇಸು ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋದ ತಕ್ಷಣ ರಾಜನಾಗಲಿಲ್ಲ. ಅದಕ್ಕಾಗಿ ಯೇಸು ಸ್ವಲ್ಪ ಸಮಯ ಕಾಯಬೇಕಿತ್ತು. (ಇಬ್ರಿಯ 10:12, 13) ಯೇಸು, ಸ್ವರ್ಗದಲ್ಲಿ ಕಾಯುವ ಸಮಯ ಯಾವಾಗ ಕೊನೆಗೊಂಡಿತು? ಅವನ ಆಳ್ವಿಕೆ ಯಾವಾಗ ಆರಂಭವಾಯಿತು? ಇದನ್ನು ಅರ್ಥಮಾಡಿಕೊಳ್ಳಲು ಯೇಸು ತನ್ನ ಹಿಂಬಾಲಕರಿಗೆ ಕೆಲವು ಸೂಚನೆಗಳನ್ನು ಕೊಟ್ಟನು. ತನ್ನ ಆಳ್ವಿಕೆಯ ಆರಂಭದಲ್ಲಿ ಯುದ್ಧ, ಆಹಾರದ ಕೊರತೆ ಮತ್ತು ಕಾಯಿಲೆಗಳಂತ ಸಮಸ್ಯೆಗಳು ಜಾಸ್ತಿಯಾಗುತ್ತವೆ ಅಂತ ಹೇಳಿದನು. (ಮತ್ತಾಯ 24:3, 7; ಲೂಕ 21:10, 11) 1914 ರಲ್ಲಿ ಮೊದಲನೇ ಮಹಾಯುದ್ಧ ಆರಂಭವಾದಾಗ ಬೈಬಲ್ ಹೇಳುವ ಕಷ್ಟಕರವಾದ ‘ಕಠಿನ ಕಾಲಗಳಿಗೆ’ ಮಾನವ ಸಂತತಿ ಕಾಲಿಟ್ಟಿತು ಎಂಬುದು ಸ್ಪಷ್ಟವಾಯಿತು.—2 ತಿಮೊಥೆಯ 3:1-5.
(ಪ್ರಕಟನೆ 6:4-6) ಆಗ ಅಗ್ನಿವರ್ಣದ ಮತ್ತೊಂದು ಕುದುರೆಯು ಹೊರಟುಬಂತು; ಅದರ ಮೇಲೆ ಕುಳಿತುಕೊಂಡಿದ್ದವನಿಗೆ ಮನುಷ್ಯರು ಒಬ್ಬರು ಇನ್ನೊಬ್ಬರನ್ನು ಹತಿಸಬೇಕೆಂದು ಭೂಮಿಯಿಂದ ಶಾಂತಿಯನ್ನು ತೆಗೆದುಹಾಕಲು ಅನುಮತಿಯು ಕೊಡಲ್ಪಟ್ಟಿತು; ಅವನಿಗೆ ಒಂದು ದೊಡ್ಡ ಕತ್ತಿಯನ್ನು ಕೊಡಲಾಯಿತು. 5 ಅವನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ!” ಎಂದು ಹೇಳುವುದನ್ನು ನಾನು ಕೇಳಿದೆನು. ಆಗ ಇಗೋ, ಒಂದು ಕಪ್ಪು ಕುದುರೆಯು ಕಾಣಿಸಿತು; ಅದರ ಮೇಲೆ ಕುಳಿತುಕೊಂಡಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು. 6 ಆಗ ಆ ನಾಲ್ಕು ಜೀವಿಗಳ ಮಧ್ಯದಿಂದಲೋ ಎಂಬಂತೆ ಒಂದು ಧ್ವನಿಯನ್ನು ನಾನು ಕೇಳಿದೆನು. ಅದು, “ಒಂದು ದಿನಾರಿಗೆ ಒಂದು ಕ್ವಾರ್ಟ್ ಗೋದಿ; ಒಂದು ದಿನಾರಿಗೆ ಮೂರು ಕ್ವಾರ್ಟ್ಜವೆಗೋದಿ; ಆಲೀವ್ ಎಣ್ಣೆಯನ್ನೂ ದ್ರಾಕ್ಷಾಮದ್ಯವನ್ನೂ ಕೆಡಿಸಬೇಡ” ಎಂದು ಹೇಳಿತು.
wp17.3-E ಪುಟ 5 ಪ್ಯಾರ 2
ನಾಲ್ಕು ಕುದುರೆ ಸವಾರರು—ಅವರು ಯಾರು?
ಕೆಂಪು ಬಣ್ಣದ ಕುದುರೆ ಸವಾರ ಯುದ್ಧವನ್ನು ಸೂಚಿಸುತ್ತಾನೆ. ವಚನದಲ್ಲಿ ಹೇಳುವ ಹಾಗೆ ಅವನು ಬರೀ ಕೆಲವು ದೇಶಗಳಿಂದ ಅಲ್ಲ ಬದಲಿಗೆ ಇಡೀ ಭೂಮಿಯಿಂದ ಶಾಂತಿಯನ್ನು ತೆಗೆದುಹಾಕುತ್ತಾನೆ. 1914 ರಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಮಹಾಯುದ್ಧ ಪ್ರಾರಂಭವಾಯಿತು. ಇದರ ಹಿಂದೆಯೇ ಎರಡನೇ ಮಹಾಯುದ್ಧ ಸಹ ಆಯಿತು. ಅಂದಿನಿಂದ ಇಲ್ಲಿಯವರೆಗೆ ಆದ ಯುದ್ಧಗಳಲ್ಲಿ ಪ್ರಾಣ ಕಳಕೊಂಡವರ ಸಂಖ್ಯೆ ಸುಮಾರು 10 ಕೋಟಿಗಿಂತ ಹೆಚ್ಚು! ಅಷ್ಟೇ ಅಲ್ಲ, ಈ ಯುದ್ಧಗಳಲ್ಲಿ ಹಾನಿಗೆ ಒಳಗಾದವರ ಸಂಖ್ಯೆ ಇದಕ್ಕಿಂತ ಜಾಸ್ತಿ.
wp17.3-E ಪುಟ 5 ಪ್ಯಾರ 4-5
ನಾಲ್ಕು ಕುದುರೆ ಸವಾರರು—ಅವರು ಯಾರು?
“ಅವನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ!” ಎಂದು ಹೇಳುವುದನ್ನು ನಾನು ಕೇಳಿದೆನು. ಆಗ ಇಗೋ, ಒಂದು ಕಪ್ಪು ಕುದುರೆಯು ಕಾಣಿಸಿತು; ಅದರ ಮೇಲೆ ಕುಳಿತುಕೊಂಡಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು. ಆಗ ಆ ನಾಲ್ಕು ಜೀವಿಗಳ ಮಧ್ಯದಿಂದಲೋ ಎಂಬಂತೆ ಒಂದು ಧ್ವನಿಯನ್ನು ನಾನು ಕೇಳಿದೆನು. ಅದು, “ಒಂದು ದಿನಾರಿಗೆ ಒಂದು ಕ್ವಾರ್ಟ್ ಗೋದಿ; ಒಂದು ದಿನಾರಿಗೆ ಮೂರು ಕ್ವಾರ್ಟ್ಜವೆಗೋದಿ; ಆಲೀವ್ ಎಣ್ಣೆಯನ್ನೂ ದ್ರಾಕ್ಷಾಮದ್ಯವನ್ನೂ ಕೆಡಿಸಬೇಡ” ಎಂದು ಹೇಳಿತು.”—ಪ್ರಕಟನೆ 6:5, 6.
ಕಪ್ಪು ಬಣ್ಣದ ಕುದುರೆ ಸವಾರ ಬರಗಾಲವನ್ನು ಸೂಚಿಸುತ್ತಾನೆ. ಒಂದನೇ ಶತಮಾನದಲ್ಲಿ ಒಂದು ದಿನಾರು ನಾಣ್ಯವನ್ನು ಇಡೀ ದಿನದ ಕೂಲಿಯಾಗಿ ಕೊಡುತ್ತಿದ್ದರು. (ಮತ್ತಾಯ 20:2) ಇಷ್ಟು ದುಡ್ಡಲ್ಲಿ ಜನರು ಆಲಿವ್ ಎಣ್ಣೆ, ದ್ರಾಕ್ಷಾಮದ್ಯವನ್ನು ಸಹ ಆರಾಮಾಗಿ ಕೊಂಡುಕೊಳ್ಳಬಹುದಿತ್ತು. ಆಗಿನ ಕಾಲದಲ್ಲಿ ಈ ವಸ್ತುಗಳು ಬಡವರಿರಲಿ, ಶ್ರೀಮಂತರಿರಲಿ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತಿತ್ತು. ಆದರೆ ಬರಗಾಲದ ಸಮಯದಲ್ಲಿ, ಒಂದು ದಿನಾರಿಗೆ ಒಂದು ಕ್ವಾರ್ಟ್ (1.08 ಲೀ) ಗೋದಿ ಸಿಗುತ್ತೆ ಅಥವಾ ಮೂರು ಕ್ವಾರ್ಟ್ (3.24 ಲೀ) ಜವೆ ಗೋದಿ ಸಿಗುತ್ತೆ ಅಂತ ವಚನದಲ್ಲಿ ಹೇಳಲಾಗಿದೆ. ಒಂದು ದಿನಾರು ನಾಣ್ಯಕ್ಕೆ ಅಂತ ಸಹ ವಚನದಲ್ಲಿದೆ. ಇಲ್ಲಿ ಹೇಳುವಷ್ಟು ಹಣದಿಂದ ಬರಗಾಲದಲ್ಲಿ ಒಂದು ದೊಡ್ಡ ಕುಟುಂಬದ ಹೊಟ್ಟೆಯನ್ನು ತುಂಬಿಸಲು ಆಗುತ್ತಾ? ಖಂಡಿತ ಇಲ್ಲ. ಪ್ರತಿದಿನದ ಆಹಾರದ ಅವಶ್ಯಕತೆಗಳನ್ನು ಪೂರೈಸಲು ಸಹ ತುಂಬ ಜಾಗರೂಕತೆಯಿಂದ ಮಿತವಾಗಿ ಹಣ ಖರ್ಚು ಮಾಡುವ ಕಾಲ ಬರುತ್ತೆ ಅಂತ ಎಚ್ಚರಿಸಲಾಗಿದೆ.
(ಪ್ರಕಟನೆ 6:8) ನಾನು ನೋಡಿದೆನು ಮತ್ತು ಇಗೋ, ಒಂದು ನಸುಬಿಳಿಚಾದ ಕುದುರೆಯು ಕಾಣಿಸಿತು; ಅದರ ಮೇಲೆ ಕುಳಿತುಕೊಂಡಿದ್ದವನಿಗೆ ಮೃತ್ಯು ಎಂಬ ಹೆಸರಿತ್ತು. ಹೇಡೀಸ್ ಅವನನ್ನು ಬಹಳ ಹತ್ತಿರದಿಂದ ಹಿಂಬಾಲಿಸುತ್ತಾ ಇತ್ತು. ಒಂದು ಉದ್ದವಾದ ಕತ್ತಿಯಿಂದಲೂ ಆಹಾರದ ಕೊರತೆಯಿಂದಲೂ ಮಾರಕ ವ್ಯಾಧಿಯಿಂದಲೂ ಭೂಮಿಯ ಕಾಡುಮೃಗಗಳಿಂದಲೂ ಕೊಲ್ಲಲು ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಅವರಿಗೆ ಅಧಿಕಾರವು ಕೊಡಲ್ಪಟ್ಟಿತು.
wp17.3-E ಪುಟ 5 ಪ್ಯಾರ 8-10
ನಾಲ್ಕು ಕುದುರೆ ಸವಾರರು—ಅವರು ಯಾರು?
ನಸುಬಿಳಿಚು ಬಣ್ಣದ (ಕಾಯಿಲೆ ಬಂದಂತೆ ಕಾಣುವ ಬಣ್ಣದ) ಕುದುರೆ ಸವಾರನು ಕಾಯಿಲೆಗಳಿಂದ ಆಗುವ ಮರಣವನ್ನು ಸೂಚಿಸುತ್ತಾನೆ. 1914 ರ ನಂತರ, ಸ್ಪ್ಯಾನಿಷ್ ಫ್ಲೂ ಎಂಬ ಕಾಯಿಲೆ, ಸುಮಾರು 50 ಕೋಟಿ ಅಂದರೆ ಆಗಿನ ಲೋಕದ ಜನ ಸಂಖ್ಯೆಯ 33.3% ಜನರನ್ನು ಬಾಧಿಸಿತು. ಆ ಕಾಯಿಲೆ ಕೋಟಿಗಟ್ಟಲೆ ಜನರನ್ನು ನುಂಗಿಬಿಟ್ಟಿತು.
ಆದರೆ ಸ್ಪ್ಯಾನಿಷ್ ಫ್ಲೂ ಎಂಬ ಕಾಯಿಲೆ ಒಂದು ಆರಂಭವಾಗಿತ್ತು ಅಷ್ಟೇ. ವರದಿಗಳ ಪ್ರಕಾರ 20 ನೇ ಶತಮಾನದಲ್ಲಿ ಕೋಟ್ಯಾಂತರ ಜನರು ಸ್ಮಾಲ್ ಪಾಕ್ಸ್ ಎಂಬ ಕಾಯಿಲೆಗೆ ತುತ್ತಾದರು. ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೊಂದು ಅಭಿವೃದ್ಧಿ ಆಗಿದ್ದರೂ, ಇಂದಿನ ತನಕ ಏಡ್ಸ್, ಟಿ.ಬಿ ಮತ್ತು ಮಲೇರಿಯದಂಥ ರೋಗಗಳಿಂದ ಅನೇಕ ಜನ ಸಾಯುತ್ತಲೇ ಇದ್ದಾರೆ.
ಯುದ್ಧ, ಬರಗಾಲ ಅಥವಾ ಕಾಯಿಲೆ ಈ ಮೂರು ವಿಷಯಗಳು ಸಾವಿಗೆ ನಡೆಸುತ್ತವೆ. ಸತ್ತವರಿಂದ ಸಮಾಧಿಗಳಂತೂ ತುಂಬುತ್ತಲೇ ಇವೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಪ್ರಕಟನೆ 4:4) ಇದಲ್ಲದೆ ಆ ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಸಿಂಹಾಸನಗಳಿವೆ ಮತ್ತು ಆ ಸಿಂಹಾಸನಗಳ ಮೇಲೆ ಬಿಳೀ ಮೇಲಂಗಿಗಳನ್ನು ಧರಿಸಿಕೊಂಡಿರುವ ಇಪ್ಪತ್ತನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿರುವುದನ್ನು ನಾನು ನೋಡಿದೆನು ಹಾಗೂ ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.
(ಪ್ರಕಟನೆ 4:6) ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರದಂತಿದ್ದದ್ದು ತೋರಿತು. ಸಿಂಹಾಸನದ ಮಧ್ಯದಲ್ಲಿಯೂ ಸಿಂಹಾಸನದ ಸುತ್ತಲೂ ನಾಲ್ಕು ಜೀವಿಗಳಿವೆ; ಅವು ಮುಂದೆಯೂ ಹಿಂದೆಯೂ ಕಣ್ಣುಗಳಿಂದ ತುಂಬಿವೆ.
ಯೆಹೋವನ ದಿವ್ಯ ಸಿಂಹಾಸನದ ಶೋಭೆ
8 ಪುರಾತನ ದೇವದರ್ಶನದ ಗುಡಾರದಲ್ಲಿ ಸೇವೆ ಮಾಡಲು ಯಾಜಕರನ್ನು ನೇಮಿಸಲಾಗಿತ್ತು ಎಂದು ಯೋಹಾನನು ತಿಳಿದಿದ್ದನು. ಆದುದರಿಂದ ಅವನು ಅನಂತರ ವಿವರಿಸಿದ್ದನ್ನು ಕಾಣುವಾಗ ಅವನಿಗೆ ಆಶ್ಚರ್ಯವಾಗಿದ್ದಿರಬಹುದು: “ಮತ್ತು ಸಿಂಹಾಸನದ ಸುತ್ತಲೂ ಇಪ್ಪತ್ತನಾಲ್ಕು ಸಿಂಹಾಸನಗಳಿವೆ, ಮತ್ತು ಈ ಸಿಂಹಾಸನಗಳ ಮೇಲೆ ಬಿಳಿಯ ಹೊರಗಣ ವಸ್ತ್ರಗಳನ್ನು ಧರಿಸಿಕೊಂಡಿದ್ದ ಇಪ್ಪತ್ತನಾಲ್ಕು ಹಿರಿಯರು ಕೂತಿರುವುದನ್ನು, ಮತ್ತು ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿರುವುದನ್ನು ಕಂಡೆನು.” (ಪ್ರಕಟನೆ 4:4, NW) ಹೌದು, ಯಾಜಕರ ಬದಲಾಗಿ ಅಲ್ಲಿ ಸಿಂಹಾಸನಾರೂಢರಾಗಿದ್ದ ಮತ್ತು ರಾಜರಂತೆ ಕಿರೀಟಧಾರಿಗಳಾಗಿದ್ದ 24 ಹಿರಿಯರಿದ್ದಾರೆ. ಈ ಹಿರಿಯರು ಯಾರು? ಪುನರುತ್ಥಾನಗೊಂಡ, ಮತ್ತು ಈಗ ಯೆಹೋವನು ಅವರಿಗೆ ವಚನಿಸಿದ ಸ್ವರ್ಗೀಯ ಪದವಿಗಳಲ್ಲಿ ಆಸೀನರಾಗಿರುವ ಕ್ರೈಸ್ತ ಸಭೆಯ ಅಭಿಷಿಕ್ತರೇ ಹೊರತು ಬೇರೆ ಯಾರೂ ಅಲ್ಲ. ಅದನ್ನು ನಾವು ಹೇಗೆ ಬಲ್ಲೆವು?
ಯೆಹೋವನ ದಿವ್ಯ ಸಿಂಹಾಸನದ ಶೋಭೆ
19 ಈ ಜೀವಿಗಳು ಏನನ್ನು ಚಿತ್ರಿಸುತ್ತವೆ? ಇನ್ನೊಬ್ಬ ಪ್ರವಾದಿಯಾದ ಯೆಹೆಜ್ಕೇಲನಿಂದ ವರದಿಸಲ್ಪಟ್ಟ ದರ್ಶನವೊಂದು ಉತ್ತರವನ್ನು ಕಂಡುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ದಿವ್ಯ ರಥವೊಂದರ ಮೇಲೆ ಸಿಂಹಾಸನಾರೂಢನಾಗಿರುವ ಯೆಹೋವನನ್ನು ಯೆಹೆಜ್ಕೇಲನು ಕಂಡನು, ಯೋಹಾನನಿಂದ ವಿವರಿಸಲ್ಪಟ್ಟವುಗಳಿಗೆ ಸಮಾನವಾಗಿರುವ ಲಕ್ಷಣಗಳು ಇರುವ ಜೀವಿಗಳು ಅದರೊಂದಿಗೆ ಇದ್ದವು. (ಯೆಹೆಜ್ಕೇಲ 1:5-11, 22-28) ಅನಂತರ, ಪುನಃ ಅದೇ ರಥ ಸಿಂಹಾಸನದೊಂದಿಗೆ ಜೀವಿಗಳು ಇರುವುದನ್ನು ಯೆಹೆಜ್ಕೇಲನು ಕಂಡನು. ಆದಾಗ್ಯೂ, ಈ ಬಾರಿ ಅವನು ಈ ಜೀವಿಗಳನ್ನು ಕೆರೂಬಿಯರು ಎಂದು ಸೂಚಿಸಿದನು. (ಯೆಹೆಜ್ಕೇಲ 10:9-15) ಯೋಹಾನನು ಕಂಡ ನಾಲ್ಕು ಜೀವಿಗಳು ದೇವರ ಬಹು ಕೆರೂಬಿಯರನ್ನು—ಅವನ ಆತ್ಮ ಸಂಸ್ಥೆಯಲ್ಲಿ ಉನ್ನತ ಪದವಿಯ ಜೀವಿಗಳು—ಪ್ರತಿನಿಧಿಸತಕ್ಕದ್ದು. ಯೆಹೋವನಿಗೆ ಅಷ್ಟೊಂದು ಹತ್ತಿರವಾಗಿ ಕೆರೂಬಿಯರು ಇರುವುದನ್ನು ಕಾಣುವುದು ಅಸಾಮಾನ್ಯ ಎಂದು ಯೋಹಾನನು ಎಣಿಸಲಿಕ್ಕಿಲ್ಲ, ಯಾಕಂದರೆ ಪುರಾತನ ದೇವದರ್ಶನದ ಗುಡಾರದ ಏರ್ಪಾಡಿನಲ್ಲಿ ಚಿನ್ನದ ಎರಡು ಕೆರೂಬಿಯರು ಯೆಹೋವನ ಸಿಂಹಾಸನವನ್ನು ಪ್ರತಿನಿಧಿಸುವ ಒಡಂಬಡಿಕೆಯ ಆವರಣದ ಮೇಲೆ ಪ್ರದರ್ಶಿಸಲ್ಪಟ್ಟಿದ್ದರು. ಈ ಕೆರೂಬಿಯರ ಮಧ್ಯದಿಂದ ಯೆಹೋವನ ವಾಣಿಯು ಜನಾಂಗಕ್ಕೆ ಆಜ್ಞೆಗಳನ್ನು ಹೊರಡಿಸುತ್ತಿತ್ತು.—ವಿಮೋಚನಕಾಂಡ 25:22; ಕೀರ್ತನೆ 80:1.
(ಪ್ರಕಟನೆ 5:5) ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳುವುದನ್ನು ನಿಲ್ಲಿಸು. ನೋಡು! ಸುರುಳಿಯನ್ನೂ ಅದರ ಏಳು ಮುದ್ರೆಗಳನ್ನೂ ಬಿಚ್ಚುವುದಕ್ಕೋಸ್ಕರ ಯೆಹೂದ ಕುಲದ ಸಿಂಹವೂ ದಾವೀದನ ಬುಡವೂ ಆಗಿರುವವನು ಜಯಹೊಂದಿದ್ದಾನೆ” ಎಂದು ಹೇಳಿದನು.
“ಯೆಹೂದ ಕುಲದ ಸಿಂಹ”
5 ಸಿಂಹ ಅಂದ ಕೂಡಲೇ ನಮ್ಮ ಮನಸ್ಸಿನ ಮುಂದೆ ಧೈರ್ಯದ ಚಿತ್ರಣ ಮೂಡುತ್ತದೆ. ಪ್ರಾಯದ ಸಿಂಹದೆದುರು ನೀವೆಂದಾದರೂ ಮುಖಾಮುಖಿ ನಿಂತಿದ್ದೀರೋ? ಹಾಗೇನಾದರೂ ನಿಂತಿರುವಲ್ಲಿ ಖಂಡಿತ ನೀವು ಮೃಗಾಲಯದಲ್ಲಿನ ಬೋನಿನಾಚೆ ಸುರಕ್ಷಿತ ಸ್ಥಳದಲ್ಲಿ ನಿಂತಿದ್ದಿರಬೇಕು. ಆದರೆ ಅಂಥ ಅನುಭವವೂ ಎದೆಯಲ್ಲಿ ನಡುಕವನ್ನು ಹುಟ್ಟಿಸುತ್ತದೆ. ಈ ಬಲಾಢ್ಯ ಜೀವಿಯ ಮುಖವನ್ನು ನೀವು ನೋಡುವಲ್ಲಿ ಅದು ಕೂಡ ನಿಮ್ಮನ್ನೇ ದಿಟ್ಟಿಸಿನೋಡುತ್ತದೆ. ಸಿಂಹವೊಂದು ಯಾವುದಕ್ಕಾದರೂ ಹೆದರಿ ಓಡಿಹೋಗಿದ್ದನ್ನು ನೀವೆಂದಾದರೂ ಕೇಳಿದ್ದುಂಟೋ? “ಯಾವದಕ್ಕೂ ಹೆದರಿ ಓರೆಯಾಗದ ಮೃಗರಾಜನಾದ ಸಿಂಹ,” ಎಂದು ಬೈಬಲ್ ಸಹ ತಿಳಿಸುತ್ತದೆ. (ಜ್ಞಾನೋಕ್ತಿ 30:30) ಯೇಸುವಿನಲ್ಲೂ ಅಂಥದ್ದೇ ಧೈರ್ಯವಿದೆ.
6 ಅವನು ಧೈರ್ಯದಿಂದ ಸತ್ಯದ ಪರವಾಗಿ ನಿಂತನು, ನ್ಯಾಯವನ್ನು ಎತ್ತಿಹಿಡಿದನು ಮತ್ತು ವಿರೋಧವನ್ನು ಎದುರಿಸಿದನು. ಯೇಸು ಸಿಂಹದಂತೆ ಧೈರ್ಯ ತೋರಿಸಿದ ಈ ಮೂರು ಕ್ಷೇತ್ರಗಳನ್ನು ನಾವೀಗ ಚರ್ಚಿಸೋಣ. ಅಷ್ಟೇ ಅಲ್ಲ, ನಾವೆಲ್ಲರೂ ಸ್ವಭಾವತಃ ಧೈರ್ಯಶಾಲಿಗಳು ಆಗಿರಲಿ ಇಲ್ಲದಿರಲಿ ಧೈರ್ಯವನ್ನು ತೋರಿಸುವುದರಲ್ಲಿ ಯೇಸುವನ್ನು ಹೇಗೆ ಅನುಕರಿಸಬಹುದು ಎಂಬುದನ್ನೂ ನೋಡೋಣ.