ಅಧ್ಯಯನ ಲೇಖನ 52
ನಿರುತ್ಸಾಹನಾ ಮೆಟ್ಟಿ ನಿಲ್ಲೋಕೆ ನಿಮಗಾಗುತ್ತೆ!
“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.”—ಕೀರ್ತ. 55:22.
ಗೀತೆ 38 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು
ಕಿರುನೋಟa
1. ನಮಗೆ ನಿರುತ್ಸಾಹ ಆದಾಗ ಏನೆಲ್ಲಾ ಆಗುತ್ತೆ?
ಪ್ರತಿದಿನ ನಮಗೆ ಸಮಸ್ಯೆಗಳು ಬರ್ತಾ ಇರುತ್ತೆ ಮತ್ತು ನಮ್ಮ ಕೈಯಲ್ಲಿ ಆದಷ್ಟು ಅದನ್ನ ಸಹಿಸ್ಕೊಳ್ತೇವೆ. ಆದ್ರೆ ನಮಗೆ ತುಂಬ ನಿರುತ್ಸಾಹ ಆದಾಗ ಸಮಸ್ಯೆಗಳನ್ನ ಎದುರಿಸೋಕೆ ಕಷ್ಟ ಆಗುತ್ತೆ. ನಿರುತ್ಸಾಹ ಅನ್ನೋದು ಕರೆಯದೇ ಇದ್ರೂ ಬರುವಂಥ ಅತಿಥಿ. ಅದು ನಮ್ಮಲ್ಲಿರೋ ಆತ್ಮವಿಶ್ವಾಸ, ಧೈರ್ಯ ಮತ್ತು ಸಂತೋಷವನ್ನ ಕಿತ್ಕೊಳ್ಳುತ್ತೆ. ಜ್ಞಾನೋಕ್ತಿ 24:10 ರಲ್ಲಿ ಹೀಗಿದೆ: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.” ನಿಜ, ಇಲ್ಲಿ ಹೇಳಿರೋ ತರ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಎದುರಿಸೋಕೆ ನಮಗಿರುವಂಥ ಶಕ್ತಿಯನ್ನ ನಿರುತ್ಸಾಹ ಬತ್ತಿಸಿ ಬಿಡುತ್ತೆ.
2. (ಎ) ಯಾವೆಲ್ಲ ಕಾರಣಗಳಿಂದ ನಮಗೆ ನಿರುತ್ಸಾಹ ಆಗಬಹುದು? (ಬಿ) ಈ ಲೇಖನದಲ್ಲಿ ನಾವು ಏನನ್ನ ನೋಡ್ತೇವೆ?
2 ನಮಗೆ ಅನೇಕ ಕಾರಣಗಳಿಂದ ನಿರುತ್ಸಾಹ ಕಾಡಬಹುದು. ನಮ್ಮ ಸ್ವಂತ ಬಲಹೀನತೆ ಅಥ್ವಾ ನಾವು ಮಾಡಿರೋ ತಪ್ಪು ಅಥ್ವಾ ನಮಗಿರೋ ಗಂಭೀರ ಕಾಯಿಲೆ ನಿರುತ್ಸಾಹದಿಂದ ಕುಗ್ಗಿಹೋಗುವಂತೆ ಮಾಡಿಬಿಡಬಹುದು. ಯೆಹೋವನ ಸೇವೇಲಿ ನಮಗೆ ಇಷ್ಟವಾದ ನೇಮಕ ಸಿಗದೇ ಇದ್ದಾಗ ಅಥ್ವಾ ನಮ್ಮ ಟೆರಿಟೊರಿಯಲ್ಲಿರೋ ಹೆಚ್ಚಿನ ಜನ ಸುವಾರ್ತೆಗೆ ಆಸಕ್ತಿ ತೋರಿಸ್ದೇ ಇದ್ದಾಗ ನಮಗೆ ನಿರಾಶೆ ಆಗಬಹುದು. ಈ ಲೇಖನದಲ್ಲಿ, ನಿರುತ್ಸಾಹನಾ ಮೆಟ್ಟಿನಿಲ್ಲೋಕೆ ನಾವೇನು ಮಾಡ್ಬೇಕು ಅಂತ ನೋಡ್ತೇವೆ.
ನಮ್ಮಲ್ಲಿ ಕುಂದು-ಕೊರತೆಗಳಿದ್ದಾಗ
3. ಯಾವ ವಿಷ್ಯಾನ ನಾವು ಮನಸ್ಸಲ್ಲಿಟ್ರೆ ನಮ್ಮ ಬಗ್ಗೆ ನಾವೇ ತಪ್ಪಾಗಿ ಯೋಚ್ನೆ ಮಾಡಲ್ಲ?
3 ನಾವು ತಪ್ಪು ಮಾಡೋದ್ರಿಂದ ಮತ್ತು ನಮ್ಮಲ್ಲಿ ಕುಂದು-ಕೊರತೆಗಳು ಇರೋದ್ರಿಂದ ನಾವು ತುಂಬ ಕೆಟ್ಟವ್ರು ಅಥ್ವಾ ಯಾವ್ದಕ್ಕೂ ಲಾಯಕ್ಕಿಲ್ಲ ಅನ್ನೋ ಯೋಚ್ನೆ ಬರಬಹುದು. ಯೆಹೋವ ನಮ್ಮನ್ನ ಹೊಸಲೋಕಕ್ಕೆ ಸೇರಿಸ್ಕೊಳ್ಳಲ್ಲ ಅಂತಾನೂ ಅನಿಸಬಹುದು. ಆದ್ರೆ ಈ ರೀತಿ ಯೋಚಿಸೋದು ಸರಿಯಲ್ಲ. ಯಾವ ವಿಷ್ಯಾನ ನಾವು ಮನಸ್ಸಲ್ಲಿಟ್ರೆ ನಮ್ಮ ಬಗ್ಗೆ ನಾವೇ ತಪ್ಪಾಗಿ ಯೋಚ್ನೆ ಮಾಡಲ್ಲ? ಯೇಸು ಕ್ರಿಸ್ತನನ್ನ ಬಿಟ್ಟು ಬೇರೆ ಎಲ್ಲಾ ಮನುಷ್ಯರೂ ‘ಪಾಪಿಗಳಾಗಿದ್ದಾರೆ’ ಅಂತ ಬೈಬಲ್ ಹೇಳುತ್ತೆ. (ರೋಮ. 3:23) ಯೆಹೋವ ನಮ್ಮಲ್ಲಿರೋ ಕುಂದು-ಕೊರತೆನ ಹುಡುಕ್ತಾ ಕೂರಲ್ಲ ಅಥ್ವಾ ತಪ್ಪೇ ಮಾಡ್ಬಾರದು ಅಂತ ಹೇಳಲ್ಲ. ಆತ ನಮ್ಮನ್ನ ತುಂಬ ಪ್ರೀತಿ ಮಾಡೋ ಅಪ್ಪ. ನಮ್ಮ ವಿಷ್ಯದಲ್ಲಿ ತಾಳ್ಮೆ ತೋರಿಸ್ತಾನೆ. ನಾವು ಬಲಹೀನತೆ, ಕುಂದು-ಕೊರತೆಗಳಿಂದ ಹೊರಬರೋಕೆ ಎಷ್ಟು ಹೋರಾಟ ಮಾಡ್ತಾ ಇದ್ದೀವಿ ಮತ್ತು ನಮ್ಮ ಬಗ್ಗೆನೇ ನಾವು ತಪ್ಪಾಗಿ ಯೋಚ್ನೆ ಮಾಡ್ದೇ ಇರೋಕೆ ಎಷ್ಟು ಪ್ರಯತ್ನ ಹಾಕ್ತಾ ಇದ್ದೀವಿ ಅನ್ನೋದನ್ನ ಆತ ನೋಡ್ತಾನೆ. ನಮ್ಮ ಈ ಹೋರಾಟದಲ್ಲಿ ಸಹಾಯ ಮಾಡೋಕೆ ಆತ ಸಿದ್ಧನಿರ್ತಾನೆ.—ರೋಮ. 7:18, 19.
4-5. ಒಂದನೇ ಯೋಹಾನ 3:19, 20 ರಲ್ಲಿರೋ ಯಾವ ಮಾತಿಂದ ಇಬ್ರು ಸಹೋದರಿಯರಿಗೆ ನಿರುತ್ಸಾಹನಾ ಮೆಟ್ಟಿನಿಲ್ಲೋಕೆ ಸಾಧ್ಯವಾಯ್ತು?
4 ದೀಪಿಕಾ ಮತ್ತು ಮಾನಸ ಉದಾಹರಣೆ ನೋಡಿ.b ಚಿಕ್ಕವಳಿದ್ದಾಗ ದೀಪಿಕಾಗೆ ಪ್ರೀತಿ ವಾತ್ಸಲ್ಯನೇ ಸಿಗಲಿಲ್ಲ. ಮನೆಯವ್ರಿಗೆ ಅವಳನ್ನ ಕಂಡ್ರೆ ಅಷ್ಟಕ್ಕಷ್ಟೇ. ಅವಳ ಬಗ್ಗೆ ಒಂದೊಳ್ಳೆ ಮಾತೂ ಹೇಳ್ತಿರಲಿಲ್ಲ. ಹಾಗಾಗಿ ಅವಳು ದೊಡ್ಡವಳಾಗ್ತಾ ಹೋದಂತೆ ತನ್ನ ಬಗ್ಗೆನೇ ಕೀಳಾಗಿ ಯೋಚಿಸಿದಳು. ಒಂದು ಸಣ್ಣ ತಪ್ಪು ಮಾಡಿದಾಗ್ಲೂ ತಾನು ಯಾವ್ದಕ್ಕೂ ಪ್ರಯೋಜನ ಇಲ್ಲ ಅಂತ ಯೋಚಿಸ್ತಿದ್ದಳು. ಮಾನಸಗೂ ಇದೇ ಸಮಸ್ಯೆ. ಅವಳ ಸಂಬಂಧಿಕರು ಅವಳಿಗೆ ತುಂಬಾ ಅವಮಾನ ಮಾಡ್ತಿದ್ರು. ಇದ್ರಿಂದ ತಾನು ಯಾವ್ದಕ್ಕೂ ಲಾಯಕ್ಕಿಲ್ಲ ಅನ್ನೋ ಭಾವನೆ ಅವಳಲ್ಲಿ ಹುಟ್ಕೊಳ್ತು. ಸತ್ಯಕ್ಕೆ ಬಂದ ಮೇಲೂ ಯೆಹೋವನ ಸಾಕ್ಷಿ ಆಗೋಕೆ ತನಗೆ ಯೋಗ್ಯತೆ ಇಲ್ಲ ಅಂತ ಅವಳಿಗೆ ಅನಿಸ್ತಿತ್ತು.
5 ಆದ್ರೂ ಆ ಸಹೋದರಿಯರು ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸ್ಲಿಲ್ಲ. ಯಾಕೆ? ಯಾಕಂದ್ರೆ, ಅವರು ತಮ್ಮ ಚಿಂತೆಗಳನ್ನ, ಅನಿಸಿಕೆಗಳನ್ನ ಯೆಹೋವನಿಗೆ ಪ್ರಾರ್ಥನೆಯಲ್ಲಿ ಹೇಳ್ಕೊಂಡ್ರು. (ಕೀರ್ತ. 55:22) ಅವ್ರಿಬ್ರೂ ಒಂದು ಪ್ರಾಮುಖ್ಯ ಸತ್ಯನೂ ಅರ್ಥ ಮಾಡಿಕೊಂಡ್ರು. ಜೀವ್ನದಲ್ಲಿ ಹಿಂದೆ ನಡೆದಿರೋ ವಿಷ್ಯಗಳಿಂದ ನಮ್ಮ ಬಗ್ಗೆನೇ ನಾವು ತಪ್ಪಾಗಿ ಯೋಚ್ನೆ ಮಾಡ್ತೀವಿ ಅನ್ನೋದು ಯೆಹೋವನಿಗೆ ಅರ್ಥ ಆಗುತ್ತೆ, ನಾವು ನಮ್ಮ ಬಗ್ಗೆ ತಪ್ಪಾಗಿ ಯೋಚಿಸಿದ್ರೂ ಯೆಹೋವ ನಮ್ಮಲ್ಲಿರೋ ಒಳ್ಳೇದನ್ನ ನೋಡ್ತಾನೆ ಅನ್ನೋದು ಅವ್ರಿಬ್ರಿಗೆ ಗೊತ್ತಾಯ್ತು.—1 ಯೋಹಾನ 3:19, 20 ಓದಿ.
6. ಒಬ್ಬ ವ್ಯಕ್ತಿ ಹಿಂದೆ ಮಾಡಿದ ತಪ್ಪನ್ನ ಪುನಃ ಮಾಡ್ದಾಗ ಅವ್ನಿಗೆ ಯಾವ ಯೋಚ್ನೆ ಬರಬಹುದು?
6 ಒಬ್ಬ ವ್ಯಕ್ತಿ ತನಗಿರೋ ಕೆಟ್ಟ ಚಟವನ್ನ ಬಿಡ್ಬೇಕು ಅಂತ ತುಂಬ ಪ್ರಯತ್ನ ಮಾಡ್ತಿದ್ದಾನೆ ಅಂತ ನೆನಸಿ. ಆದ್ರೆ ಅದೇ ತಪ್ಪನ್ನ ಪುನಃ ಮಾಡಿಬಿಡುತ್ತಾನೆ, ಆಗ ಅವನಿಗೆ ನಿರುತ್ಸಾಹ ಆಗುತ್ತೆ. ನಾವು ತಪ್ಪು ಮಾಡಿದಾಗ ಸ್ವಲ್ಪ ಮಟ್ಟಿಗೆ ಮನಸ್ಸು ಚುಚ್ಚೋದು ಸಹಜನೇ. (2 ಕೊರಿಂ. 7:10) ಆದ್ರೆ ನಾವು ಅದ್ರ ಬಗ್ಗೆನೇ ತುಂಬಾ ಯೋಚಿಸ್ತಾ, ನಮ್ಮನ್ನೇ ಖಂಡಿಸ್ಕೊಳ್ತಾ ‘ನಾನು ಯಾವ್ದಕ್ಕೂ ಲಾಯಕ್ಕಿಲ್ಲ, ಯೆಹೋವ ನನ್ನನ್ನ ಕ್ಷಮಿಸಲ್ಲ’ ಅಂತ ಯೋಚ್ನೆ ಮಾಡ್ಬಾರದು. ಯಾಕಂದ್ರೆ ಅದು ನಿಜ ಅಲ್ಲ ಮತ್ತು ಅಂಥ ಯೋಚ್ನೆ ಇದ್ರೆ ನಾವು ಯೆಹೋವನ ಸೇವೆ ಮಾಡೋದನ್ನೇ ನಿಲ್ಲಿಸಿಬಿಡೋ ಅಪಾಯನೂ ಇರುತ್ತೆ. ಜ್ಞಾನೋಕ್ತಿ 24:10 ರಲ್ಲಿ ನಾವೇನು ಓದಿದ್ವಿ ಅಂತ ನೆನಪಿಸ್ಕೊಳ್ಳಿ. ನಮಗೆ ನಿರುತ್ಸಾಹ ಆದಾಗ ನಮ್ಮಲ್ಲಿರೋ ಶಕ್ತಿನೂ ಬತ್ತಿ ಹೋಗ್ಬಿಡುತ್ತೆ ಅಂತ ಅದು ಹೇಳುತ್ತೆ. ಹಾಗಾಗಿ ನಿರುತ್ಸಾಹದಿಂದ ಕುಗ್ಗಿಹೋಗೋ ಬದ್ಲಿಗೆ ಪ್ರಾರ್ಥನೆಯಲ್ಲಿ ಯೆಹೋವನ ಹತ್ರ ಕ್ಷಮೆ ಕೇಳಬೇಕು. (ಯೆಶಾ. 1:18) ನೀವು ಮಾಡಿದ ತಪ್ಪಿಗೆ ಮನದಾಳದಿಂದ ಪಶ್ಚಾತ್ತಾಪಪಡುವಾಗ ಮತ್ತು ಬದಲಾವಣೆ ಮಾಡ್ಕೊಳ್ಳೋಕೆ ಪ್ರಯತ್ನ ಹಾಕುವಾಗ ಯೆಹೋವ ನಿಮ್ಮನ್ನ ಕ್ಷಮಿಸ್ತಾನೆ. ಇದ್ರ ಜೊತೆಗೆ ಹಿರಿಯರ ಹತ್ರನೂ ಮಾತಾಡ್ಬೇಕು. ಯೆಹೋವನೊಟ್ಟಿಗೆ ಪುನಃ ಒಂದು ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೆ ಅವ್ರು ನಿಮಗೆ ತಾಳ್ಮೆಯಿಂದ ಸಹಾಯ ಮಾಡ್ತಾರೆ.—ಯಾಕೋ. 5:14, 15.
7. ಸರಿಯಾಗಿರೋದನ್ನ ಮಾಡೋಕೆ ನಾವು ಹೋರಾಡ್ವಾಗ ಸೋತುಹೋದ್ರೆ ನಮ್ಮ ಬಗ್ಗೆ ನಾವೇ ಯಾಕೆ ತಪ್ಪಾಗಿ ಯೋಚಿಸಬಾರದು?
7 ಫ್ರಾನ್ಸ್ನಲ್ಲಿರೋ ಶೇನ್-ಲೂಕ್ ಅನ್ನೋ ಹಿರಿಯ ಬಲಹೀನತೆಗಳ ವಿರುದ್ಧ ಹೋರಾಡುವವ್ರಿಗೆ ಈ ಕಿವಿಮಾತನ್ನ ಹೇಳ್ತಾರೆ: “ತಪ್ಪೇ ಮಾಡದ ವ್ಯಕ್ತಿಯಲ್ಲ, ತಪ್ಪು ಮಾಡಿದ್ರೂ ತಿದ್ದಿ ನಡೆಯುವ ವ್ಯಕ್ತಿ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರ್ತಾನೆ.” (ರೋಮ. 7:21-25) ಹಾಗಾಗಿ ನೀವು ತಪ್ಪು ಮಾಡ್ದಾಗ ಅಥ್ವಾ ನಿಮ್ಮ ಬಲಹೀನತೆಗಳ ವಿರುದ್ಧ ಹೋರಾಡುವಾಗ ಸೋತುಹೋದ್ರೆ ನಿಮ್ಮ ಬಗ್ಗೆ ನೀವೇ ತಪ್ಪಾಗಿ ಯೋಚಿಸ್ಬೇಡಿ. ಯಾಕಂದ್ರೆ ‘ನಾನು ಸಾಚಾ’ ಅಂತ ಯೆಹೋವನ ಮುಂದೆ ಹೇಳ್ಕೊಳ್ಳೋಕೆ ಯಾರಿಗೂ ಸಾಧ್ಯ ಇಲ್ಲ. ಎಲ್ರೂ ತಪ್ಪು ಮಾಡೋದ್ರಿಂದ, ಎಲ್ರಿಗೂ ಯೆಹೋವನ ಅಪಾತ್ರ ದಯೆ ಬೇಕೇಬೇಕು. ಅದನ್ನ ಆತ ವಿಮೋಚನಾ ಮೌಲ್ಯದ ಮೂಲಕ ಕೊಡ್ತಾನೆ.—ಎಫೆ. 1:7; 1 ಯೋಹಾ. 4:10.
8. ನಮಗೆ ನಿರುತ್ಸಾಹ ಆದಾಗ ಯಾರ ಸಹಾಯ ಪಡ್ಕೊಳ್ಳಬೇಕು?
8 ನಮ್ಮ ಸಹೋದರ-ಸಹೋದರಿಯರ ಸಹಾಯ ಕೇಳ್ಬೇಕು. ನಾವು ಮಾತಾಡುವಾಗ ಅವ್ರು ಗಮನಕೊಟ್ಟು ಕೇಳ್ತಾರೆ, ಅಷ್ಟೇ ಅಲ್ಲ ನಮಗೆ ಬೇಕಾದ ಉತ್ತೇಜನವನ್ನೂ ಕೊಡ್ತಾರೆ. (ಜ್ಞಾನೋ. 12:25; 1 ಥೆಸ. 5:14) ನೈಜೀರಿಯದ ಸಹೋದರಿ ಜಾಯ್ ನಿರುತ್ಸಾಹದಿಂದ ಕುಗ್ಗಿಹೋಗಿದ್ರು. ಆಕೆ ಹೀಗೆ ಹೇಳ್ತಾರೆ: “ಸಹೋದರ-ಸಹೋದರಿಯರು ಇಲ್ದೇ ಇದ್ದಿದ್ರೆ ನನ್ನ ಗತಿ ಏನಾಗ್ತಿತ್ತೋ. ಯೆಹೋವ ನನ್ನ ಪ್ರಾರ್ಥನೆಗಳಿಗೆ ಉತ್ರ ಕೊಟ್ಟಿದ್ದಾರೆ ಅನ್ನೋದಕ್ಕೆ ಈ ಸಹೋದರ-ಸಹೋದರಿಯರೇ ಸಾಕ್ಷಿ. ಬೇರೆಯವ್ರು ನಿರುತ್ಸಾಹದಲ್ಲಿ ಇರುವಾಗ್ಲೂ ಅವ್ರನ್ನ ಹೇಗೆ ಬಲಪಡಿಸಬಹುದು ಅಂತ ಕಲಿತಿದ್ದೀನಿ.” ಒಂದು ವಿಷ್ಯ ನೆನಪಿಟ್ಕೊಳ್ಳಿ. ನಮಗೆ ನಿರುತ್ಸಾಹ ಆದಾಗೆಲ್ಲಾ ನಮ್ಮ ಸಹೋದರ-ಸಹೋದರಿಯರಿಗೆ ಗೊತ್ತಾಗುತ್ತೆ ಅಂತ ಹೇಳಕ್ಕಾಗಲ್ಲ. ಹಾಗಾಗಿ ನಾವೇ ಒಂದು ಹೆಜ್ಜೆ ಮುಂದೆ ಹೋಗ್ಬೇಕು. ಅನುಭವಸ್ಥ ಸಹೋದರ-ಸಹೋದರಿಯರ ಹತ್ರ ಮಾತಾಡ್ಬೇಕು ಮತ್ತು ಅವ್ರ ಸಹಾಯ ಪಡ್ಕೊಳ್ಳಬೇಕು.
ನಮಗೆ ಕಾಯಿಲೆಗಳಿದ್ದಾಗ
9. ಕೀರ್ತನೆ 41:3 ಮತ್ತು 94:19 ನೇ ವಚನಗಳಿಂದ ನಮಗೆ ಯಾವ ಉತ್ತೇಜನ ಸಿಗುತ್ತೆ?
9 ಯೆಹೋವನ ಸಹಾಯ ಪಡ್ಕೋಬೇಕು. ನಮಗೆ ಕಾಯಿಲೆ ಇದ್ದಾಗ ಅದ್ರಲ್ಲೂ ತುಂಬಾ ಸಮ್ಯದಿಂದ ನರಳ್ತಿದ್ರೆ ನಾವು ಅದ್ರ ಬಗ್ಗೆನೇ ಯೋಚ್ನೆ ಮಾಡ್ತಾ ತುಂಬ ಕುಗ್ಗಿಹೋಗಿಬಿಡ್ತೀವಿ. ಯೆಹೋವ ನಮ್ಮನ್ನ ಇವತ್ತು ಅದ್ಭುತವಾಗಿ ವಾಸಿ ಮಾಡದಿದ್ರೂ ಆತ ನಮ್ಮನ್ನ ಸಂತೈಸ್ತಾನೆ ಮತ್ತು ನಮಗಿರೋ ಕಾಯಿಲೆಯನ್ನ ತಾಳ್ಕೊಳ್ಳೋಕೆ ಬೇಕಾದ ಶಕ್ತಿ ಕೊಡ್ತಾನೆ. (ಕೀರ್ತನೆ 41:3; 94:19 ಓದಿ.) ನಮಗೆ ಸಹಾಯ ಮಾಡೋಕೆ ಆತ ನಮ್ಮ ಸಹೋದರ-ಸಹೋದರಿಯರನ್ನ ಪ್ರೇರಿಸಬಹುದು. ಉದಾಹರಣೆಗೆ, ನಮ್ಮ ಮನೇಲಿ ಏನಾದ್ರೂ ಕೆಲ್ಸ ಇದ್ರೆ ಅವ್ರೇ ಬಂದು ಸಹಾಯ ಮಾಡೋಕೆ ಅಥ್ವಾ ನಮಗೆ ಬೇಕಾದ ವಸ್ತುಗಳನ್ನ ಖರೀದಿ ಮಾಡಿ ತಂದ್ಕೊಡೋಕೆ ಅಥ್ವಾ ನಮ್ಮ ಜೊತೆ ಕೂತು ನಮಗೋಸ್ಕರ ಪ್ರಾರ್ಥನೆ ಮಾಡೋಕೆ ಯೆಹೋವ ಅವ್ರನ್ನು ಪ್ರಚೋದಿಸ್ಬಹುದು. ಅಷ್ಟೇ ಅಲ್ಲ, ಯೆಹೋವನು ತನ್ನ ವಾಕ್ಯದಲ್ಲಿರೋ ಸಾಂತ್ವನ ಕೊಡುವಂಥ ವಚನಗಳನ್ನ ನಮ್ಮ ಮನಸ್ಸಿಗೆ ತರಬಹುದು. ಉದಾಹರಣೆಗೆ ಯಾವ್ದೇ ಕಾಯಿಲೆ, ನೋವು ಇರದಂಥ ಹೊಸಲೋಕದಲ್ಲಿ ಜೀವಿಸೋ ನಿರೀಕ್ಷೆ ಬಗ್ಗೆ ಇರೋ ವಚನಗಳನ್ನ ನಮ್ಮ ಮನಸ್ಸಿಗೆ ತರಬಹುದು.—ರೋಮ. 15:4.
10. ಇಸಾಂಗ್ಗೆ ನಿರುತ್ಸಾಹದಿಂದ ಹೊರಬರೋಕೆ ಯಾವ್ದು ಸಹಾಯ ಮಾಡ್ತು?
10 ನೈಜೀರಿಯದಲ್ಲಿರೋ ಸಹೋದರ ಇಸಾಂಗ್ಗೆ ಒಂದು ದುರಂತದಿಂದಾಗಿ ಲಕ್ವ ಹೊಡೀತು. ಅವ್ರಿಗೆ ಇನ್ಯಾವತ್ತೂ ನಡೆಯೋಕಾಗಲ್ಲ ಅಂತ ಡಾಕ್ಟರ್ ಹೇಳಿಬಿಟ್ರು. ಆಗ ಹೇಗನಿಸ್ತು ಅಂತ ಸಹೋದರ ಹೀಗೆ ಹೇಳ್ತಾರೆ: “ಆಕಾಶನೇ ತಲೆಮೇಲೆ ಬಿದ್ದಂಗೆ ಅನಿಸ್ತು. ನನ್ನ ಮನಸ್ಸು ಮುರಿದೋಯ್ತು.” ಅವ್ರಿಗೆ ಆ ನಿರುತ್ಸಾಹದಿಂದ ಹೊರಗೆ ಬರೋಕೆ ಯಾವ್ದು ಸಹಾಯ ಮಾಡ್ತು? ‘ನಾನೂ ನನ್ನ ಪತ್ನಿ ಯೆಹೋವನಿಗೆ ಪ್ರಾರ್ಥನೆ ಮಾಡೋದನ್ನ, ಬೈಬಲ್ ಓದೋದನ್ನ ಯಾವತ್ತಿಗೂ ನಿಲ್ಲಿಸಲಿಲ್ಲ. ಅಷ್ಟೇ ಅಲ್ಲ, ನಮಗೆ ಈಗ ಸಿಗ್ತಿರೋ ಆಶೀರ್ವಾದಗಳ ಬಗ್ಗೆ ಮತ್ತು ಹೊಸಲೋಕದಲ್ಲಿ ದೇವರು ಕೊಡೋ ಜೀವ್ನದ ಬಗ್ಗೆ ನಾವು ಯೋಚಿಸಿದ್ವಿ’ ಅಂತ ಅವ್ರು ಹೇಳ್ತಾರೆ.
11. ಗಂಭೀರ ಕಾಯಿಲೆ ಇದ್ದಾಗ್ಲೂ ಸಿಂಡಿಗೆ ಸಂತೋಷವಾಗಿ ಇರಲು ಹೇಗೆ ಸಾಧ್ಯವಾಯ್ತು?
11 ಮೆಕ್ಸಿಕೊದಲ್ಲಿ ಇರುವ ಸಿಂಡಿ ಅನ್ನೋ ಸಹೋದರಿಗೆ ಒಂದು ಗಂಭೀರ ಕಾಯಿಲೆ ಬಂತು. ಜೀವ ಮತ್ತು ಮರಣದ ಮಧ್ಯೆ ಹೋರಾಡುವಂಥ ಪರಿಸ್ಥಿತಿ ಎದುರಾಯ್ತು. ಈ ಸಮಸ್ಯೆಯನ್ನ ಅವರು ಹೇಗೆ ತಾಳ್ಕೊಂಡ್ರು? ಅವ್ರಿಗೆ ಚಿಕಿತ್ಸೆ ನಡಿತಿದ್ದಾಗ ಪ್ರತಿದಿನ ಒಬ್ರಿಗಾದ್ರೂ ಸಾಕ್ಷಿ ಕೊಡ್ಬೇಕು ಅನ್ನೋ ಗುರಿ ಇಟ್ರು. ಆಕೆ ಹೀಗೆ ಬರಿತಾರೆ: “ಈ ರೀತಿ ನಾನು ಸಾಕ್ಷಿ ಕೊಡ್ತಾ ಇದ್ದಿದ್ರಿಂದ ನನ್ನ ಗಮನ ಎಲ್ಲಾ ಅದ್ರ ಮೇಲಿತ್ತೇ ಹೊರತು ನನ್ನ ಆಪರೇಷನ್, ನನಗಿರೋ ಕಾಯಿಲೆ, ನನ್ನ ನೋವಿನ ಮೇಲಿರಲಿಲ್ಲ. ನಾನು ಡಾಕ್ಟರ್ಗಳ ಹತ್ರ, ನರ್ಸ್ಗಳ ಹತ್ರ ಮಾತಾಡ್ವಾಗ ಅವ್ರ ಕುಟುಂಬದ ಬಗ್ಗೆ ವಿಚಾರಿಸ್ತಿದ್ದೆ. ನಂತ್ರ ಇಷ್ಟು ಕಷ್ಟದ ಕೆಲ್ಸ ಯಾಕೆ ಆರಿಸ್ಕೊಂಡ್ರಿ ಅಂತ ಕೇಳ್ತಿದ್ದೆ. ಆಗ ಅವ್ರಿಗೆ ಯಾವ ವಿಷ್ಯದ ಬಗ್ಗೆ ಮಾತಾಡೋಕೆ ಆಸಕ್ತಿ ಇದೆ ಅನ್ನೋದನ್ನ ಕಂಡುಹಿಡಿಯೋಕೆ ಆಗ್ತಿತ್ತು. ‘ಯಾವ ಪೇಶಂಟ್ ಕೂಡ ನೀವು ಹೇಗಿದ್ದೀರ ಅಂತ ನಮ್ಮನ್ನ ಕೇಳೋದೇ ಇಲ್ಲ, ಆದ್ರೆ ನೀವು ನಮ್ಮನ್ನ ಕೇಳಿದ್ರಿ, ತುಂಬಾ ಥ್ಯಾಂಕ್ಸ್’ ಅಂತ ಅನೇಕರು ಹೇಳಿದ್ರು. ಇನ್ನು ಕೆಲವ್ರು ತಮ್ಮ ಅಡ್ರೆಸ್, ಫೋನ್ ನಂಬರ್ ಕೊಟ್ರು. ಈ ಕಷ್ಟದ ಸಮ್ಯದಲ್ಲಿ ಯೆಹೋವ ನಂಗೆ ಶಕ್ತಿ ಕೊಡ್ತಾನೆ ಅಂತ ಗೊತ್ತಿತ್ತು. ಆದ್ರೆ ಇಷ್ಟು ಸಂತೋಷನೂ ಕೊಡ್ತಾನೆ ಅಂತ ನೆನಸೇ ಇರಲಿಲ್ಲ!”—ಜ್ಞಾನೋ. 15:15.
12-13. (ಎ) ಕಾಯಿಲೆ ಇರೋರು, ವಯಸ್ಸಾದವರು ಹೇಗೆ ಸುವಾರ್ತೆ ಸಾರ್ತಾರೆ? (ಬಿ) ಇದ್ರಿಂದ ಯಾವ ಪ್ರತಿಫಲ ಸಿಗುತ್ತೆ?
12 ಕಾಯಿಲೆ ಬಂದಿರೋರಿಗೆ, ವಯಸ್ಸಾದವ್ರಿಗೆ ಹೆಚ್ಚು ಸೇವೆ ಮಾಡಕ್ಕಾಗ್ತಿಲ್ಲ ಅನ್ನೋ ನಿರುತ್ಸಾಹ ಇರುತ್ತೆ. ಆದ್ರೆ ಇಂಥ ಸನ್ನಿವೇಶದಲ್ಲಿ ಇರೋರು ಸಹ ಚೆನ್ನಾಗಿ ಸಾಕ್ಷಿ ಕೊಟ್ಟಿದ್ದಾರೆ. ಅಮೆರಿಕದ ಸಹೋದರಿ ಲಾರೆಲ್ ಅನ್ನುವವರು ಸುಮಾರು 37 ವರ್ಷ ಒಂದು ಮೆಷಿನ್ ಒಳಗೆ ಮಲಗೇ ಇರಬೇಕಿತ್ತು. ಆ ಮೆಷಿನ್ ಇಲ್ಲದೆ ಅವ್ರಿಗೆ ಉಸಿರಾಡೋಕೆ ಆಗ್ತಿರಲಿಲ್ಲ. ಆಗಲೇ ಅವ್ರಿಗೆ ಕ್ಯಾನ್ಸರ್ ಬಂತು, ತುಂಬ ಆಪರೇಷನ್ಗಳಾಯ್ತು. ಚರ್ಮದ ಕಾಯಿಲೆನೂ ಬಂತು. ಆದ್ರೆ ಇಂಥ ಕಷ್ಟದ ಸನ್ನಿವೇಶದಲ್ಲೂ ಅವ್ರು ಸುವಾರ್ತೆ ಸಾರಿದ್ರು. ಅವ್ರನ್ನ ನೋಡಿಕೊಳ್ಳೋಕೆ ಆಸ್ಪತ್ರೆಯಿಂದ ಬರ್ತಿದ್ದ ನರ್ಸ್ಗಳಿಗೆ, ಅಟೆಂಡೆಂಟ್ಗಳಿಗೆ ಸುವಾರ್ತೆ ಸಾರಿದ್ರು. ಇದ್ರಿಂದ ಕಡಿಮೆ ಅಂದ್ರೂ 17 ಜನ ಸತ್ಯಕ್ಕೆ ಬಂದ್ರು!c
13 ಮನೆಯಿಂದ ಮತ್ತು ಆಸ್ಪತ್ರೆಯಿಂದ ಹೊರಗೆ ಹೋಗಕ್ಕಾಗದಿರೋ ಸಹೋದರ-ಸಹೋದರಿಯರಿಗೆ ಫ್ರಾನ್ಸ್ನಲ್ಲಿರೋ ಹಿರಿಯರಾದ ಸಹೋದರ ರಿಚರ್ಡ್ ಒಂದೊಳ್ಳೆ ಸಲಹೆ ಕೊಡ್ತಾರೆ. ಅವ್ರು ಹೀಗೆ ಹೇಳ್ತಾರೆ: “ಈ ನಮ್ಮ ಸಹೋದರ-ಸಹೋದರಿಯರು ಒಂದು ಟೇಬಲ್ ಮೇಲೆ ಪುಸ್ತಕಗಳು, ಪತ್ರಿಕೆಗಳನ್ನ ಇಟ್ರೆ ಚೆನ್ನಾಗಿರುತ್ತೆ. ಯಾಕಂದ್ರೆ ಇದನ್ನ ನೋಡುವಂಥ ಜನ ಏನದು ಅಂತ ಕುತೂಹಲದಿಂದ ಕೇಳ್ತಾರೆ. ಆಗ ಅವ್ರು ತಮ್ಮ ಮಾತನ್ನ ಆರಂಭಿಸಬಹುದು. ಮನೆಮನೆ ಸೇವೆ ಮಾಡೋಕೆ ಆಗದಿರೋ ನಮ್ಮ ಪ್ರೀತಿಯ ಸಹೋದರ-ಸಹೋದರಿಯರು ಈ ರೀತಿ ಸಾರೋದ್ರಿಂದ ಅವ್ರಿಗೆ ಪ್ರೋತ್ಸಾಹ ಸಿಗುತ್ತೆ.” ಇಂಥ ಸಹೋದರ-ಸಹೋದರಿಯರು ಪತ್ರ ಮತ್ತು ಫೋನ್ ಮೂಲಕನೂ ಸುವಾರ್ತೆ ಸಾರಬಹುದು.
ನಮಗೆ ಇಷ್ಟ ಆಗಿರೋ ನೇಮಕ ಸಿಗದಿರುವಾಗ
14. ರಾಜ ದಾವೀದನಿಂದ ನಾವ್ಯಾವ ಪಾಠ ಕಲಿಬಹುದು?
14 ಸಭೆಯಲ್ಲಿ ಅಥ್ವಾ ಸರ್ಕಿಟಲ್ಲಿ ನಮಗೆ ಇಷ್ಟವಾದ ನೇಮಕ ಸಿಗ್ದೇ ಇರೋಕೆ ಹಲವಾರು ಕಾರಣಗಳು ಇರಬಹುದು. ಉದಾಹರಣೆಗೆ ನಮಗೆ ತುಂಬ ವಯಸ್ಸಾಗಿರಬಹುದು, ಆರೋಗ್ಯ ಸಮಸ್ಯೆ ಇರಬಹುದು ಅಥ್ವಾ ಇನ್ನು ಬೇರೆ ಕಾರಣಗಳು ಇರಬಹುದು. ಇಂಥ ಸನ್ನಿವೇಶ ಬಂದ್ರೆ ಏನು ಮಾಡ್ಬೇಕು ಅನ್ನೋದನ್ನ ನಾವು ರಾಜ ದಾವೀದನಿಂದ ಕಲಿಬೇಕು. ಅವ್ನಿಗೆ ದೇವರ ಆಲಯವನ್ನ ಕಟ್ಬೇಕು ಅಂತ ತುಂಬ ಆಸೆ ಇತ್ತು. ಆದ್ರೆ ಆಲಯ ಕಟ್ಟೋಕೆ ಯೆಹೋವ ಅವನನ್ನ ಆರಿಸಲಿಲ್ಲ. ಆಗ ದಾವೀದ ಕುಗ್ಗಿಹೋಗಲಿಲ್ಲ, ಬದ್ಲಿಗೆ ಯೆಹೋವ ಆರಿಸಿದ ವ್ಯಕ್ತಿಗೆ ಸಂಪೂರ್ಣ ಬೆಂಬಲ ಕೊಟ್ಟನು. ಅಷ್ಟೇ ಅಲ್ಲ, ದೇವರ ಆಲಯಕ್ಕಾಗಿ ಬೆಳ್ಳಿ-ಬಂಗಾರವನ್ನ ಉದಾರವಾಗಿ ಕೊಟ್ಟನು. ಅವನ ತರ ನಾವಿರಬೇಕು!—2 ಸಮು. 7:12, 13; 1 ಪೂರ್ವ. 29:1, 3-5.
15. ಸಹೋದರ ಓಯೆಗ್ ತಮಗಿದ್ದ ನಿರುತ್ಸಾಹವನ್ನ ಹೇಗೆ ಮೆಟ್ಟಿನಿಂತ್ರು?
15 ಫ್ರಾನ್ಸ್ನಲ್ಲಿರೋ ಸಹೋದರ ಓಯೆಗ್ಗೆ ತುಂಬ ಆರೋಗ್ಯ ಸಮಸ್ಯೆ ಇದ್ದಿದ್ರಿಂದ ಹಿರಿಯರಾಗಿ ಮಾಡ್ತಿದ್ದ ಸೇವೆ ನಿಲ್ಲಿಸಬೇಕಾಗಿ ಬಂತು. ಅವ್ರಿಗೆ ಎಷ್ಟು ಕಾಯಿಲೆ ಇತ್ತಂದ್ರೆ ಮನೇಲಿ ಚಿಕ್ಕಪುಟ್ಟ ಕೆಲ್ಸ ಮಾಡೋಕೂ ಕಷ್ಟ ಆಗ್ತಿತ್ತು. ಅವ್ರು ಹೀಗೆ ಬರಿತಾರೆ: “ಮೊದ್ಲಿಗೆ ನನ್ಗೆ ‘ನಾನು ಯಾವ್ದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸ್ತು, ತುಂಬ ನಿರುತ್ಸಾಹ ಕಾಡ್ತು. ಆದ್ರೆ ಸಮ್ಯ ಹೋದ ಹಾಗೆ ‘ನನ್ನ ಕೈಯಲ್ಲಿ ಹೆಚ್ಚು ಕೆಲ್ಸ ಮಾಡೋಕೆ ಆಗ್ತಿಲ್ಲವಲ್ಲಾ’ ಅನ್ನೋ ಯೋಚ್ನೆ ಮಾಡೋದು ಒಳ್ಳೇದಲ್ಲ ಅಂತ ಅರ್ಥಮಾಡ್ಕೊಂಡೆ. ಆಗ ನನ್ನ ಕೈಯಲ್ಲಿ ಆದಷ್ಟು ಯೆಹೋವನ ಸೇವೆ ಮಾಡ್ತಾ ಸಂತೋಷವಾಗಿರೋಕೆ ಸಾಧ್ಯವಾಯ್ತು. ಯಾವತ್ತಿಗೂ ನಾನು ಕುಗ್ಗಿಹೋಗಬಾರದು ಅಂತ ನಿರ್ಧರಿಸಿದೆ. ಹೇಗೆ ಗಿದ್ಯೋನ ಮತ್ತು ಅವನ 300 ಸೈನಿಕರಿಗೆ ಸುಸ್ತಾಗಿದ್ರೂ ಅವ್ರು ಬಿಟ್ಟುಕೊಡಲಿಲ್ಲವೋ ಅದೇ ತರ ನಾನೂ ಬಿಟ್ಟುಕೊಡಲ್ಲ.”—ನ್ಯಾಯ. 8:4.
16. ದೇವದೂತರಿಂದ ನಾವೇನು ಕಲಿಬಹುದು?
16 ನಂಬಿಗಸ್ತ ದೇವದೂತರಿಂದ್ಲೂ ನಾವು ಕಲಿಬಹುದು. ರಾಜ ಅಹಾಬ ಆಳ್ತಿದ್ದ ಸಮ್ಯದಲ್ಲಿ ಯೆಹೋವನು ದೇವದೂತರನ್ನ ಕರೆಸಿ ದುಷ್ಟ ಅಹಾಬನನ್ನು ಮೂರ್ಖನಾಗಿ ಮಾಡೋದು ಹೇಗೆ ಅಂತ ಸಲಹೆಗಳನ್ನ ಕೇಳಿದನು. ಆಗ ಅನೇಕ ದೇವದೂತರು ಬೇರೆಬೇರೆ ಸಲಹೆ ಕೊಟ್ರು. ಆದ್ರೆ ದೇವರು ಅದ್ರಲ್ಲಿ ಒಬ್ಬ ದೇವದೂತನ ಸಲಹೆ ಚೆನ್ನಾಗಿದೆ ಅಂತ ಹೇಳಿ ಅದೇ ತರ ಆಗುತ್ತೆ ಅಂತ ಹೇಳಿದನು. (1 ಅರ. 22:19-22) ಆಗ ಉಳಿದ ದೇವದೂತರು ನಿರುತ್ಸಾಹದಿಂದ ‘ನಾನ್ಯಾಕೆ ಹೇಳೋಕೆ ಹೋದೆ’ ಅಂತ ನೆನಸಿರ್ತಾರಾ? ಖಂಡಿತ ಇಲ್ಲ. ಯಾಕಂದ್ರೆ ದೇವದೂತರಿಗೆ ತುಂಬ ದೀನತೆ ಇದೆ, ಎಲ್ಲ ಮಹಿಮೆ ಯೆಹೋವನಿಗೆ ಹೋಗ್ಬೇಕು ಅಂತ ಬಯಸ್ತಾರೆ.—ನ್ಯಾಯ. 13:16-18; ಪ್ರಕ. 19:10.
17. ಯೆಹೋವನ ಸೇವೇಲಿ ನಮಗಿಷ್ಟ ಆಗಿರೋ ನೇಮಕ ಸಿಗ್ದೇ ಇರುವಾಗ ನಿರುತ್ಸಾಹ ಆದ್ರೆ ನಾವೇನು ಮಾಡ್ಬೇಕು?
17 ಯೆಹೋವನ ಸಾಕ್ಷಿಗಳಲ್ಲಿ ಒಬ್ರಾಗಿ ಇರೋದು ಮತ್ತು ಆತನ ರಾಜ್ಯದ ಬಗ್ಗೆ ಸಾರೋದೇ ದೊಡ್ಡ ಸುಯೋಗ ಅನ್ನೋದನ್ನ ನಾವು ಯಾವತ್ತೂ ಮರೆಯಬಾರದು. ಇವತ್ತು ನಮಗಿರೋ ನೇಮಕಗಳು ನಾಳೆ ಇಲ್ಲದೆ ಹೋಗ್ಬಹುದು. ನೆನಪಿಡಿ, ಯೆಹೋವನ ದೃಷ್ಟಿಯಲ್ಲಿ ನಮ್ಮನ್ನ ಅಮೂಲ್ಯರನ್ನಾಗಿ ಮಾಡೋದು ನಮಗಿರೋ ನೇಮಕ ಅಲ್ಲ, ನಮ್ಮ ದೀನತೆ. ಅಷ್ಟೇ ಅಲ್ಲ ನಮ್ಮಲ್ಲಿ ದೀನತೆ ಇದ್ರೆ ಸಹೋದರ-ಸಹೋದರಿಯರೂ ಇಷ್ಟಪಡ್ತಾರೆ. ಹಾಗಾಗಿ ಆದಷ್ಟು ದೀನರಾಗಿ ಇರೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಳ್ಳಿ. ಅಷ್ಟೇ ಅಲ್ಲ ಬೈಬಲಲ್ಲಿ ತುಂಬ ದೀನತೆ ತೋರಿಸಿದಂಥ ವ್ಯಕ್ತಿಗಳ ಉದಾಹರಣೆಗಳಿವೆ. ಅವನ್ನು ಓದಿ ಧ್ಯಾನಿಸಿ. ಯಾವ ರೀತಿಯಲ್ಲೆಲ್ಲ ಸಹೋದರ-ಸಹೋದರಿಯರ ಸೇವೆ ಮಾಡೋಕೆ ಆಗುತ್ತೋ ಅದನ್ನ ಮನಸಾರೆ ಮಾಡಿ.—ಕೀರ್ತ. 138:6; 1 ಪೇತ್ರ 5:5.
ಟೆರಿಟೊರಿಯಲ್ಲಿರೋ ಜನ ಆಸಕ್ತಿ ತೋರಿಸದೇ ಇರುವಾಗ
18-19. ಜನ ಸುವಾರ್ತೆಗೆ ಆಸಕ್ತಿ ತೋರಿಸ್ದೇ ಇರುವಾಗ್ಲೂ ನಾವು ಸಂತೋಷ ಕಳ್ಕೊಳ್ಳದೇ ಇರೋಕೆ ಏನು ಮಾಡ್ಬಹುದು?
18 ನಿಮ್ಮ ಟೆರಿಟೊರಿಯಲ್ಲಿ ಇರೋ ಜನ ಆಸಕ್ತಿ ತೋರಿಸ್ದೇ ಇರುವಾಗ ಅಥ್ವಾ ಮನೆಮನೆ ಸೇವೆಲಿ ಹೆಚ್ಚಿನ ಜನ ಸಿಗ್ದೇ ಇರುವಾಗ ನಿಮ್ಗೆ ನಿರಾಸೆ ಆಗುತ್ತಾ? ಇಂಥ ಸಮ್ಯದಲ್ಲಿ ಹುರುಪು ಕಳ್ಕೊಳ್ಳದೇ ಇರೋಕೆ ಅಥ್ವಾ ಇನ್ನೂ ಹೆಚ್ಚು ಸಂತೋಷವಾಗಿ ಇರೋಕೆ ಯಾವ್ದು ಸಹಾಯ ಮಾಡುತ್ತೆ? “ಸೇವೇಲಿ ಸಂತೋಷ ಪಡ್ಕೊಳ್ಳೋಕೆ ಉಪಾಯಗಳು” ಅನ್ನೋ ಚೌಕದಲ್ಲಿರೋ ಸಲಹೆಗಳು ಸಹಾಯ ಮಾಡ್ಬಹುದು. ಅಷ್ಟೇ ಅಲ್ಲ ಸೇವೆ ಬಗ್ಗೆ ಸರಿಯಾದ ಮನೋಭಾವ ಇರೋದು ತುಂಬ ಮುಖ್ಯ. ಅದ್ರರ್ಥ ಏನು?
19 ದೇವರ ಹೆಸ್ರ ಬಗ್ಗೆ, ಆತನ ರಾಜ್ಯದ ಬಗ್ಗೆ ಸಾರೋದೇ ಮುಖ್ಯ. ಇದನ್ನ ಮನಸ್ಸಲ್ಲಿಡಬೇಕು. ಕೆಲವ್ರು ಮಾತ್ರ ಜೀವದ ದಾರಿಯನ್ನ ಆರಿಸಿಕೊಳ್ತಾರೆ ಅಂತ ಯೇಸು ಸ್ಪಷ್ಟವಾಗಿ ಹೇಳಿದ. (ಮತ್ತಾ. 7:13, 14) ನಾವು ಸೇವೆ ಮಾಡುವಾಗ ಯೆಹೋವ, ಯೇಸು ಮತ್ತು ದೇವದೂತರ ಜೊತೆ ಕೆಲ್ಸ ಮಾಡೋ ಅವಕಾಶ ಸಿಗುತ್ತೆ. (ಮತ್ತಾ. 28:19, 20; 1 ಕೊರಿಂ. 3:9; ಪ್ರಕ. 14:6, 7) ಯೆಹೋವ ಯೋಗ್ಯರಾದ ಜನ್ರನ್ನ ತನ್ನ ಕಡಗೆ ಸೆಳಿತಾನೆ. (ಯೋಹಾ. 6:44) ಹಾಗಾಗಿ ಈ ಸಲ ಒಬ್ಬ ವ್ಯಕ್ತಿ ನಮ್ಮ ಸಂದೇಶಕ್ಕೆ ಆಸಕ್ತಿ ತೋರಿಸ್ದೇ ಇದ್ರೂ ಮುಂದಿನ ಸಲ ಆಸಕ್ತಿ ತೋರಿಸಬಹುದು.
20. ನಿರುತ್ಸಾಹವನ್ನ ಮೆಟ್ಟಿನಿಲ್ಲೋ ವಿಷ್ಯದಲ್ಲಿ ಯೆರೆಮೀಯ 20:7ಬಿ-9 ನಮಗೇನು ಕಲಿಸುತ್ತೆ?
20 ಪ್ರವಾದಿ ಯೆರೆಮೀಯನಿಂದ ಕೂಡ ನಾವು ಕಲಿಬಹುದು. ಅವನು ಸಾರ್ತಿದ್ದ ಟೆರಿಟೊರಿಯಲ್ಲಿ ಜನ ತುಂಬ ವಿರೋಧಿಸ್ತಿದ್ರು. “ಹಗಲೆಲ್ಲಾ” ಅವ್ನನ್ನ ಗೇಲಿ ಮಾಡ್ತಾ, ಅವಮಾನ ಮಾಡ್ತಿದ್ರು. (ಯೆರೆಮೀಯ 20:7ಬಿ-9 ಓದಿ.) ಒಂದು ಸಂದರ್ಭದಲ್ಲಂತೂ ಎಷ್ಟು ನಿರುತ್ಸಾಹ ಆಯ್ತಂದ್ರೆ ಸಾರೋದನ್ನೇ ನಿಲ್ಲಿಸಬಿಡಬೇಕು ಅಂತ ಅವ್ನಿಗೆ ಅನಿಸ್ತು. ಆದ್ರೆ ಅವನದನ್ನ ಮುಂದುವರಿಸಿದ. ಯಾಕಂದ್ರೆ “ಯೆಹೋವನ ವಾಕ್ಯ” ಅವನೊಳಗೆ ಬೆಂಕಿಯಂತೆ ಉರಿತಿತ್ತು. ಅದನ್ನ ಒಳಗೇ ಇಟ್ಕೊಳ್ಳೋಕೆ ಆಗಲಿಲ್ಲ. ನಾವು ಪ್ರತಿದಿನ ಬೈಬಲನ್ನ ಓದಿ ಅದ್ರ ಬಗ್ಗೆ ಧ್ಯಾನಿಸಬೇಕು. ಆಗ ನಮಗೂ ಅದನ್ನ ಒಳಗೇ ಇಟ್ಕೊಳ್ಳೋಕೆ ಆಗಲ್ಲ. ಸೇವೆಯನ್ನ ಮಾಡ್ತಾ ಮುಂದುವರಿಯುತ್ತೇವೆ. ಆಗ ಸಂತೋಷನೂ ಸಿಗುತ್ತೆ ಮತ್ತು ಆಸಕ್ತಿ ಇರೋ ಜನ ಸಿಕ್ರೂ ಸಿಗಬಹುದು.—ಯೆರೆ. 15:16.
21. ನಿರುತ್ಸಾಹ ಆಗೋಕೆ ಯಾವ್ದೇ ಕಾರಣ ಇದ್ರೂ ಅದನ್ನ ಹೇಗೆ ಮೆಟ್ಟಿ ನಿಲ್ಲಬಹುದು?
21 ಆರಂಭದಲ್ಲಿ ತಿಳಿಸಲಾದ ದೀಪಿಕಾ ಹೀಗೆ ಹೇಳ್ತಾಳೆ: “ನಿರುತ್ಸಾಹ ಅನ್ನೋದು ಸೈತಾನ ನಮ್ಮ ವಿರುದ್ಧ ಬಳಸೋ ಅಸ್ತ್ರ.” ಆದ್ರೆ ಸೈತಾನ ಆಗ್ಲಿ ಅವನ ಅಸ್ತ್ರ ಆಗ್ಲಿ ಯೆಹೋವನ ಮುಂದೆ ನಿಲ್ಲಲ್ಲ. ನಿಮಗೆ ಯಾವುದೇ ಕಾರಣದಿಂದ ನಿರುತ್ಸಾಹ ಆಗಿರ್ಲಿ ಯೆಹೋವನ ಸಹಾಯಕ್ಕಾಗಿ ಬೇಡ್ಕೊಳ್ಳಿ. ಆತ ನಿಮ್ಮ ಬಲಹೀನತೆಯನ್ನ ಮೆಟ್ಟಿ ನಿಲ್ಲೋಕೆ ಸಹಾಯ ಮಾಡ್ತಾನೆ. ನಿಮ್ಗೆ ಕಾಯಿಲೆ ಬಂದಾಗ ಅದನ್ನ ತಾಳ್ಕೊಳ್ಳೋಕೆ ಶಕ್ತಿ ಕೊಡ್ತಾನೆ. ನಿಮಗಿಷ್ಟ ಆಗಿರೋ ನೇಮಕ ಸಿಗ್ದೇ ಇರುವಾಗ್ಲೂ ಸಂತೋಷ ಕಳ್ಕೊಳ್ದೇ ಇರೋಕೆ ಆತ ಸಹಾಯ ಮಾಡ್ತಾನೆ. ಅಷ್ಟೇ ಅಲ್ಲ, ಸೇವೆ ಬಗ್ಗೆ ಸರಿಯಾದ ಮನೋಭಾವ ಇಟ್ಕೊಳ್ಳೋಕೂ ಸಹಾಯ ಮಾಡ್ತಾನೆ. ಹಾಗಾಗಿ ನಿಮ್ಮ ಪ್ರೀತಿಯ ತಂದೆಗೆ ಪ್ರಾರ್ಥನೆ ಮಾಡಿ ಮತ್ತು ನಿಮ್ಮೆಲ್ಲ ಯೋಚ್ನೆಗಳನ್ನ ಆತನ ಹತ್ರ ಮುಕ್ತವಾಗಿ ಹೇಳ್ಕೊಳ್ಳಿ. ಆತನ ಸಹಾಯದಿಂದ ನಿಮಗಿರೋ ನಿರುತ್ಸಾಹನಾ ಮೆಟ್ಟಿನಿಲ್ಲೋಕೆ ಖಂಡಿತ ಆಗುತ್ತೆ.
ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನ ಲಾಲಿಸು
a ನಮ್ಮೆಲ್ರಿಗೂ ಒಂದಲ್ಲ ಒಂದು ಸಮ್ಯದಲ್ಲಿ ನಿರುತ್ಸಾಹ ಕಾಡುತ್ತೆ. ಈ ಲೇಖನದಲ್ಲಿ, ನಾವು ನಿರುತ್ಸಾಹದಿಂದ ಕುಗ್ಗಿಹೋದಾಗ ಏನು ಮಾಡ್ಬೇಕು ಅನ್ನೋದಕ್ಕೆ ಕೆಲವು ಸಲಹೆಗಳಿವೆ. ಅಷ್ಟೇ ಅಲ್ಲ, ನಾವು ಯೆಹೋವನ ಸಹಾಯದಿಂದ ನಿರುತ್ಸಾಹವನ್ನ ಮೆಟ್ಟಿನಿಲ್ಲೋಕೆ ಸಾಧ್ಯ ಅನ್ನೋದನ್ನೂ ಕಲಿತೇವೆ.
b ಕೆಲವು ಹೆಸ್ರುಗಳನ್ನ ಬದಲಾಯಿಸಲಾಗಿದೆ.
c ಸಹೋದರಿ ಲಾರೆಲ್ ನಿಸ್ಬೆತ್ರ ಜೀವನಕಥೆ 1993 ಜನವರಿ 22 ರ ಇಂಗ್ಲಿಷ್ ಎಚ್ಚರ! ಪತ್ರಿಕೆಯಲ್ಲಿದೆ.
d ಚಿತ್ರ ವಿವರಣೆ: ಒಬ್ಬ ಸಹೋದರಿಗೆ ನಿರುತ್ಸಾಹ ಆದಾಗ ಅವಳು ಹಿಂದೆ ತಾನು ಮಾಡಿದ ಸೇವೆ ಬಗ್ಗೆ ನೆನಪಿಸ್ಕೊಳ್ತಾಳೆ ಮತ್ತು ಯೆಹೋವನಿಗೆ ಪ್ರಾರ್ಥಿಸ್ತಾಳೆ. ಮುಂಚೆ ಮಾಡಿದ ಮತ್ತು ಈಗ ಮಾಡ್ತಿರೋ ಸೇವೆಯನ್ನ ದೇವರು ಮರೆಯಲ್ಲ ಅನ್ನೋದನ್ನ ಮನಸ್ಸಲ್ಲಿ ಇಡ್ತಾಳೆ.