ಯುವ ಜನರು ಪ್ರಶ್ನಿಸುವುದು . . .
ನಾನು ಸಹ ಹಚ್ಚೆಹಾಕಿಸಿಕೊಳ್ಳಬೇಕೊ?
“ಹಚ್ಚೆಯ ಕೆಲವು ಡಿಸೈನ್ಗಳು ತುಂಬ ಆಕರ್ಷಕವಾಗಿರುತ್ತವೆ. ಅವು ತುಂಬ ಕಲಾತ್ಮಕವಾಗಿವೆ.”—ಜೇಲೇನ್.a
“ಸುಮಾರು ಎರಡು ವರ್ಷಗಳಿಂದ ನನ್ನ ಪ್ರಥಮ ಹಚ್ಚೆಯ ಬಗ್ಗೆ ನಾನು ಕನಸು ಕಾಣುತ್ತಿದ್ದೆ.”—ಮಶೆಲ್.
ಹಚ್ಚೆಯ ವಿನ್ಯಾಸಗಳು ಎಲ್ಲಾ ಕಡೆಗಳಲ್ಲೂ ಕಣ್ಣಿಗೆ ಬೀಳುತ್ತವೆ ಅಥವಾ ಹಾಗೆ ತೋರುತ್ತದೆ. ರಾಕ್ ಸಂಗೀತಗಾರರು, ಕ್ರೀಡಾಪಟುಗಳು, ಫ್ಯಾಷನ್ ರೂಪದರ್ಶಿಗಳು ಮತ್ತು ಚಲನಚಿತ್ರ ತಾರೆಗಳು ಇವುಗಳನ್ನು ಪ್ರದರ್ಶಿಸುತ್ತಾ ಮೆರೆಯುತ್ತಿರುತ್ತಾರೆ. ಅನೇಕ ಮಂದಿ ಹದಿವಯಸ್ಕರು ಇವರನ್ನು ನಕಲುಮಾಡುತ್ತಾ ತಮ್ಮ ಭುಜಗಳು, ಕೈಗಳು, ಸೊಂಟಗಳು ಮತ್ತು ಕಣಕಾಲುಗಳ ಮೇಲೆ ಹಾಕಿಸಿಕೊಂಡಿರುವ ಹಚ್ಚೆಗಳನ್ನು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಾರೆ. ಆ್ಯಂಡ್ರೂ ವಾದಿಸುವುದು: “ಹಚ್ಚೆಯ ವಿನ್ಯಾಸಗಳು ಸೂಪರ್ ಆಗಿರುತ್ತವೆ. ಹಚ್ಚೆಹಾಕಿಸಿಕೊಳ್ಳುವುದು ಅಥವಾ ಹಾಕಿಸಿಕೊಳ್ಳದಿರುವುದು ಒಬ್ಬನ ವೈಯಕ್ತಿಕ ಆಯ್ಕೆಯಾಗಿದೆ.”
ವರ್ಲ್ಡ್ ಬುಕ್ ಎನ್ಸೈಕ್ಲಪೀಡೀಯ ಹೇಳುವುದು: “ಹಚ್ಚೆಹಾಕಿಸಿಕೊಳ್ಳುವುದು ಅಂದರೆ, ದೇಹದ ಮೇಲೆ ಶಾಶ್ವತವಾದ ವಿನ್ಯಾಸಗಳನ್ನು ಮಾಡಿಕೊಳ್ಳುವ ರೂಢಿಯಾಗಿದೆ. ಚೂಪಾದ ಕಡ್ಡಿ, ಮೂಳೆ ಅಥವಾ ಸೂಜಿಯನ್ನು ನೈಸರ್ಗಿಕ ಬಣ್ಣಗಳನ್ನು ಹೊಂದಿರುವ ವರ್ಣದ್ರವ್ಯಗಳಲ್ಲಿ ಅದ್ದಿ, ಅದರಿಂದ ಚರ್ಮದ ಮೇಲೆ ಚಿಕ್ಕ ಚಿಕ್ಕ ತೂತುಗಳನ್ನು ಮಾಡುವ ಮೂಲಕ ಹಚ್ಚೆಯನ್ನು ಹಾಕಲಾಗುತ್ತದೆ.”
ನಿಷ್ಕೃಷ್ಟವಾದ ಸಂಖ್ಯೆಯನ್ನು ಸಂಗ್ರಹಿಸುವುದು ಕಷ್ಟಕರವಾಗಿರುವುದಾದರೂ, ಅಮೆರಿಕದಲ್ಲಿರುವ 15ರಿಂದ 25 ವರ್ಷ ಪ್ರಾಯದವರೆಲ್ಲರಲ್ಲಿ 25 ಪ್ರತಿಶತ ಮಂದಿ ಹಚ್ಚೆಹಾಕಿಸಿಕೊಂಡಿದ್ದಾರೆ ಎಂದು ಒಂದು ಮೂಲವು ಅಂದಾಜುಮಾಡುತ್ತದೆ. ಸ್ಯಾಂಡೀ ಹೇಳುವುದು: “ಹೀಗೆ ಮಾಡುವುದು ತುಂಬ ಜನಪ್ರಿಯವಾಗಿದೆ.” ಹಚ್ಚೆಹಾಕಿಸಿಕೊಳ್ಳುವುದು ಕೆಲವು ಯುವ ಜನರಿಗೆ ಏಕೆ ಇಷ್ಟೊಂದು ಆಕರ್ಷಣೀಯವಾಗಿರುತ್ತದೆ?
ಏಕೆ ಇಷ್ಟೊಂದು ಜನಪ್ರಿಯವಾಗಿವೆ?
ಕೆಲವರ ದೃಷ್ಟಿಕೋನದಲ್ಲಿ ಹಚ್ಚೆಯು, ಮನಸೆಳೆಯುವಂಥ ಪ್ರಣಯಾತ್ಮಕ ಭಾವಾಭಿನಯವನ್ನು ಮಾಡುವ ಒಂದು ವಿಧವಾಗಿದೆ. ಮಶೆಲ್ ಹೇಳುವುದು: “ನನ್ನ ಅಣ್ಣನು ಯಾರ ಜೊತೆ ಪ್ರಣಯ ವ್ಯವಹಾರ ನಡೆಸುತ್ತಿದ್ದನೋ ಆ ಹುಡುಗಿಯ ಹೆಸರನ್ನು ತನ್ನ ಕಣಕಾಲಿನ ಮೇಲೆ ಹಚ್ಚೆಹಾಕಿಸಿಕೊಂಡಿದ್ದನು.” ಈಗ ಈ ಹಚ್ಚೆಯಿಂದ ಸಮಸ್ಯೆಯೇನು? “ಈಗ ಅವನು ಅವಳನ್ನು ಬಿಟ್ಟುಬಿಟ್ಟಿದ್ದಾನೆ.” ಟೀನ್ ಪತ್ರಿಕೆಗನುಸಾರ, “ಈ ಮುಂಚೆ ಹಾಕಿಸಿಕೊಂಡಿರುವ ಹಚ್ಚೆಯನ್ನು ತೆಗೆಸಿಹಾಕುವುವವರಲ್ಲಿ 30 ಪ್ರತಿಶತ ಮಂದಿ, ತಮ್ಮ ಮಾಜಿ ಪ್ರಿಯಕರನ ಹೆಸರನ್ನು ತೆಗೆಸಿಹಾಕಲು ಬಯಸುವಂಥ ಹದಿಪ್ರಾಯದ ಹುಡುಗಿಯರಾಗಿರುತ್ತಾರೆ ಎಂದು ವೈದ್ಯರು ಅಂದಾಜುಮಾಡುತ್ತಾರೆ.”
ಕೆಲವು ಯುವ ಜನರು ಹಚ್ಚೆಯನ್ನು ಕಲಾತ್ಮಕ ಕೃತಿಗಳಾಗಿ ಪರಿಗಣಿಸುತ್ತಾರೆ. ಇನ್ನಿತರರು ಅದನ್ನು ಸ್ವತಂತ್ರ ಮನೋಭಾವದ ಸಂಕೇತವೆಂದು ಪರಿಗಣಿಸುತ್ತಾರೆ. “ನನ್ನ ಬದುಕು ನನ್ನ ಮುಷ್ಟಿಯಲ್ಲಿದೆ” ಎಂದು ಜೋಸೀ ಘೋಷಿಸಿದಳು. ನಂತರ ಅವಳು ಮುಂದುವರಿಸುತ್ತಾ ಹೇಳಿದ್ದು, ಹಚ್ಚೆಹಾಕಿಸಿಕೊಳ್ಳುವುದು “ಇಷ್ಟರ ತನಕ ನಾನು ಮಾಡಿರುವಂಥ ಒಂದೇ ಒಂದು ವೈಯಕ್ತಿಕ ನಿರ್ಣಯವಾಗಿದೆ.” ಕೆಲವು ಯುವ ಜನರಿಗೆ ಹಚ್ಚೆಹಾಕಿಸಿಕೊಳ್ಳುವುದು ಹೊಸ ಹೊಸ ವಿಷಯಗಳನ್ನು ಪ್ರಯೋಗಿಸಿ ನೋಡಲು, ಅಂದರೆ ತಮ್ಮ ಹೊರತೋರಿಕೆಯ ಮೇಲೆ ತಮಗೆ ಹಿಡಿತವಿದೆ ಎಂದು ಭಾವಿಸಲು ಅನುಕೂಲಮಾಡಿಕೊಡುತ್ತದೆ. ಹಚ್ಚೆಯ ವಿನ್ಯಾಸಗಳು ದಂಗೆಕೋರ ಸ್ವಭಾವ ಅಥವಾ ಸಂಪ್ರದಾಯಬದ್ಧವಲ್ಲದ ಜೀವನ ಶೈಲಿಗಳ ಸಂಕೇತವಾಗಿಯೂ ಕಾರ್ಯನಡಿಸುತ್ತವೆ. ಹೀಗಿರುವುದರಿಂದ, ಕೆಲವು ಹಚ್ಚೆಗಳಲ್ಲಿ ಅಶ್ಲೀಲ ನುಡಿಗಳು ಮತ್ತು ಚಿತ್ರಗಳನ್ನು ಅಥವಾ ಉದ್ರೇಕಕಾರಿ ಗುರಿನುಡಿಗಳು ಇರುತ್ತವೆ.
ಇಷ್ಟಾದರೂ, ಯುವ ಜನರಲ್ಲಿ ಹೆಚ್ಚಿನವರು ಕೇವಲ ಒಂದು ಗೀಳಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಅಷ್ಟೆ. ಆದರೆ ಎಲ್ಲರೂ ಹಚ್ಚೆಹಾಕಿಸಿಕೊಳ್ಳುತ್ತಿದ್ದಾರೆ ಎಂದ ಮಾತ್ರಕ್ಕೆ ನೀವು ಸಹ ಹಾಕಿಸಿಕೊಳ್ಳಬೇಕೆಂದಿದೆಯೋ?
ಹಚ್ಚೆಹಾಕುವ ಪುರಾತನ ಕಲೆ
ಹಚ್ಚೆಹಾಕಿಸಿಕೊಳ್ಳುವುದು ನಿಶ್ಚಯವಾಗಿಯೂ ಒಂದು ಆಧುನಿಕ ರೂಢಿಯೇನಲ್ಲ. ಕ್ರಿಸ್ತನ ಕಾಲಾವಧಿಗಿಂತ ನೂರಾರು ವರ್ಷಗಳಷ್ಟು ಹಿಂದಿನ ಸಮಯಾವಧಿಗೆ ಸೇರಿರುವ, ಅನೇಕ ಹಚ್ಚೆವಿನ್ಯಾಸಗಳಿರುವ ಈಜಿಪ್ಶಿಯನ್ ಹಾಗೂ ಲಿಬಿಯನ್ ಮಮಿಗಳು ಕಂಡುಕೊಳ್ಳಲ್ಪಟ್ಟಿವೆ. ಹಚ್ಚೆಗಳಿರುವ ಮಮಿಗಳು ದಕ್ಷಿಣ ಅಮೆರಿಕದಲ್ಲಿಯೂ ಕಂಡುಕೊಳ್ಳಲ್ಪಟ್ಟಿವೆ. ಹಚ್ಚೆಗಳಲ್ಲಿದ್ದ ಚಿತ್ರಗಳಲ್ಲಿ ಅನೇಕವು, ವಿಧರ್ಮಿ ದೇವದೇವತೆಗಳ ಆರಾಧನೆಗೆ ನೇರವಾಗಿ ಸಂಬಂಧಿಸಿದವುಗಳಾಗಿದ್ದವು. ಸಂಶೋಧಕರಾಗಿರುವ ಸ್ಟೀವ್ ಗಿಲ್ಬರ್ಟ್ರವರಿಗನುಸಾರ, “ಭಾವರೂಪದ ಬದಲಾಗಿ ಯಾವುದೋ ಒಂದು ವಸ್ತುವನ್ನು ಚಿತ್ರಿಸುವಂಥ ಅತಿ ಪುರಾತನ ಹಚ್ಚೆಯು ಬೇಸ್ ದೇವನನ್ನು ಪ್ರತಿನಿಧಿಸುತ್ತದೆ. ಈಜಿಪ್ಶಿಯನ್ ದಂತಕಥೆಯಲ್ಲಿ, ಬೇಸ್ ಎಂಬುವವನು ಪಾನವಿಲಾಸಿಯಾದ ಕಾಮಪ್ರೇರಕ ದೇವನಾಗಿದ್ದಾನೆ.”
ಗಮನಾರ್ಹವಾದ ಸಂಗತಿಯೇನೆಂದರೆ, ದೇವಜನರು ತಮ್ಮ ಮೇಲೆ ಹಚ್ಚೆಹಾಕಿಸಿಕೊಳ್ಳುವುದನ್ನು ಮೋಶೆಯ ಧರ್ಮಶಾಸ್ತ್ರವು ನಿಷೇಧಿಸಿತು. ಯಾಜಕಕಾಂಡ 19:28 ಹೇಳಿದ್ದು: “ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನು ಯೆಹೋವನು.” ಐಗುಪ್ತರಂತಹ ವಿಧರ್ಮಿ ಆರಾಧಕರು, ಎದೆ ಹಾಗೂ ಕೈಗಳ ಮೇಲೆ ತಮ್ಮ ದೇವದೇವತೆಗಳ ಹೆಸರುಗಳನ್ನು ಅಥವಾ ಸಂಕೇತಗಳನ್ನು ಹಚ್ಚೆಹಾಕಿಸಿಕೊಂಡರು. ಹಚ್ಚೆವಿನ್ಯಾಸಗಳ ಕುರಿತಾದ ಯೆಹೋವನ ನಿಷೇಧಕ್ಕನುಸಾರ ಕ್ರಿಯೆಗೈಯುವ ಮೂಲಕ ಇಸ್ರಾಯೇಲ್ಯರು ತಮ್ಮನ್ನು ಇತರ ಜನಾಂಗಗಳಿಂದ ಭಿನ್ನರಾಗಿ ತೋರ್ಪಡಿಸಿಕೊಳ್ಳಸಾಧ್ಯವಿತ್ತು.—ಧರ್ಮೋಪದೇಶಕಾಂಡ 14:1, 2.
ಇಂದು ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲದಿರುವುದಾದರೂ, ಹಚ್ಚೆಹಾಕಿಸಿಕೊಳ್ಳುವ ವಿಷಯದಲ್ಲಿ ಅದು ಹಾಕಿದಂಥ ನಿಷೇಧವು ಈಗಲೂ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. (ಎಫೆಸ 2:14; ಕೊಲೊಸ್ಸೆ 2:14, 15) ನೀವು ಒಬ್ಬ ಕ್ರೈಸ್ತರಾಗಿರುವಲ್ಲಿ, ವಿಧರ್ಮಿ ಆರಾಧನೆ ಅಥವಾ ಸುಳ್ಳು ಆರಾಧನೆಯನ್ನು ಜ್ಞಾಪಕಕ್ಕೆ ತರುವಂಥ ಗುರುತುಗಳನ್ನು ನೀವು ನಿಮ್ಮ ದೇಹದ ಮೇಲೆ ತಾತ್ಕಾಲಿಕವಾಗಿಯೂ ಮಾಡಿಕೊಳ್ಳಲು ನಿಶ್ಚಯವಾಗಿ ಬಯಸದಿರುವಿರಿ.—2 ಕೊರಿಂಥ 6:15-18.
ಆರೋಗ್ಯಾಪಾಯಗಳು
ಈ ವಿಷಯದಲ್ಲಿ ನೀವು ಪರಿಗಣಿಸಬೇಕಾದ ಆರೋಗ್ಯ ಅಂಶಗಳೂ ಇವೆ. ಚರ್ಮಶಾಸ್ತ್ರದ ಸಹಾಯಕ ಪ್ರೊಫೆಸರರಾಗಿರುವ ಡಾ. ರಾಬರ್ಟ್ ಟಾಮ್ಸಿಕ್ ಹೇಳಿಕೆ ನೀಡುವುದು: “ನೀವೇನು ಮಾಡುತ್ತಿದ್ದೀರೆಂದರೆ, ಚರ್ಮವನ್ನು ಸೀಳಿ, ಆ ಜಾಗದಲ್ಲಿ ವರ್ಣದ್ರವ್ಯದಿಂದ ಕೂಡಿರುವ ಪದಾರ್ಥವನ್ನು ತುಂಬಿಸುತ್ತಿದ್ದೀರಿ. ಸೂಜಿಯು ಕೇವಲ ಚರ್ಮದ ಮೇಲ್ಮೈಗೇ ಚುಚ್ಚಲ್ಪಡುವುದಾದರೂ, ಚರ್ಮದ ಮೇಲೆ ತೂತನ್ನು ಮಾಡಿದಾಗೆಲ್ಲಾ, ನೀವು ಬ್ಯಾಕ್ಟೀರಿಯ ಅಥವಾ ವೈರಸ್ನ ಸೋಂಕನ್ನು ಅಂಟಿಸಿಕೊಳ್ಳುವ ಅಪಾಯದಲ್ಲಿರುತ್ತೀರಿ. ಒಟ್ಟಿನಲ್ಲಿ [ಹಚ್ಚೆಯನ್ನು ಹಾಕಿಸಿಕೊಳ್ಳುವುದು] ಅಪಾಯಕರ ಕೆಲಸವಾಗಿದೆ ಎಂಬುದೇ ನನ್ನ ಅನಿಸಿಕೆ.” ಡಾ. ಟಾಮ್ಸಿಕ್ ಮುಂದುವರಿಸುತ್ತಾ ಹೇಳುವುದು: “ಒಮ್ಮೆ ಆ ವರ್ಣದ್ರವ್ಯವು ಚರ್ಮದ ಒಳಗೆ ಹೋದಮೇಲೆ ಅದರಿಂದ ಯಾವುದೇ ಸೋಂಕು ಉಂಟಾಗದಿರುವುದಾದರೂ, ಚರ್ಮವನ್ನು ಕೆಂಪುಗೊಳಿಸಿ, ಅದನ್ನು ಊದಿಸಿ, ಚರ್ಮವು ಒಣಗಿ ಗರಿಗರಿಯಾಗಿ ಉದುರುವಂತೆ ಮಾಡುವ ಮತ್ತು ಕೆರೆತವನ್ನು ಉಂಟುಮಾಡುವಂಥ ಅಲರ್ಜಿಗಳು, ಚರ್ಮದ ಉರಿಯೂತ ಮತ್ತು ಅಲರ್ಜಿಯ ರಾಸಾಯನಿಕ ಕ್ರಿಯೆಗಳನ್ನು ಸಾಧ್ಯಗೊಳಿಸುವ ಅಪಾಯವಂತೂ ಯಾವಾಗಲೂ ಇದ್ದೇ ಇರುತ್ತದೆ.”
ಹಚ್ಚೆಗಳು ಶಾಶ್ವತವಾಗಿ ಇರುವ ಉದ್ದೇಶದಿಂದ ಹಾಕಲ್ಪಡುತ್ತವಾದರೂ, ಇವುಗಳನ್ನು ತೆಗೆಯಲಿಕ್ಕಾಗಿರುವ ಪ್ರಯತ್ನಗಳಲ್ಲಿ ಬೇರೆ ಬೇರೆ ವಿಧಾನಗಳು ಉಪಯೋಗಿಸಲ್ಪಡುತ್ತವೆ: ಲೇಸರ್ ಸಹಾಯದಿಂದ ತೆಗೆಯುವುದು (ಹಚ್ಚೆಯನ್ನು ಸುಟ್ಟುಬಿಡುವುದು), ಶಸ್ತ್ರಚಿಕಿತ್ಸೆಯಿಂದ ತೆಗೆಯುವುದು (ಹಚ್ಚೆಯನ್ನು ಕತ್ತರಿಸಿ ತೆಗೆಯುವುದು), ಡರ್ಮಬ್ರೇಸನ್ (ಹೊರಚರ್ಮ ಮತ್ತು ಒಳಚರ್ಮವನ್ನು ಕೆರೆದು ತೆಗೆಯಲಿಕ್ಕಾಗಿ ಒಂದು ತಂತಿಯ ಬ್ರಷ್ನಿಂದ ಚರ್ಮವನ್ನು ಉಜ್ಜುವುದು), ಸಾಲಬ್ರೇಸನ್ (ಹಚ್ಚೆಹಾಕಲ್ಪಟ್ಟಿರುವ ಚರ್ಮವನ್ನು ನೆನೆಸಲಿಕ್ಕಾಗಿ ಉಪ್ಪಿನ ದ್ರಾವಣವನ್ನು ಉಪಯೋಗಿಸುವುದು), ಮತ್ತು ಕಲೆಗಟ್ಟಿಸುವಿಕೆ (ಆಮ್ಲ ದ್ರಾವಣದ ಸಹಾಯದಿಂದ ಹಚ್ಚೆಯನ್ನು ಇಲ್ಲವಾಗಿಸಿ, ಅದರ ಜಾಗದಲ್ಲಿ ಕಲೆಯನ್ನು ಮಾಡುವುದು). ಈ ವಿಧಾನಗಳು ತುಂಬ ದುಬಾರಿಯಾಗಿವೆ ಮತ್ತು ತುಂಬ ನೋವುಭರಿತವಾಗಿರಸಾಧ್ಯವಿದೆ. “ಮೊದಲ ಬಾರಿ ಹಚ್ಚೆಯನ್ನು ಹಾಕಿಸಿಕೊಳ್ಳುವುದಕ್ಕಿಂತಲೂ ಲೇಸರ್ ಚಿಕಿತ್ಸೆಯ ಮೂಲಕ ಆ ಹಚ್ಚೆಯನ್ನು ತೆಗೆಸಿಹಾಕುವುದು ಅತ್ಯಧಿಕ ನೋವುಭರಿತವಾಗಿರುತ್ತದೆ” ಎಂದು ಟೀನ್ ಪತ್ರಿಕೆಯು ತಿಳಿಸುತ್ತದೆ.
ಇತರರು ಏನು ನೆನಸುವರು?
ಅನೇಕರು ಹಚ್ಚೆಯ ವಿಷಯದಲ್ಲಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಕಾರಣ, ನೀವು ಹಚ್ಚೆಯನ್ನು ಹಾಕಿಸಿಕೊಳ್ಳುವುದರ ಕುರಿತು ಇತರರಿಗೆ ಹೇಗನಿಸುತ್ತದೆ ಎಂಬುದರ ಕುರಿತು ಸಹ ನೀವು ಗಂಭೀರವಾಗಿ ಆಲೋಚಿಸಬೇಕು. (1 ಕೊರಿಂಥ 10:29-33) ಟೈವಾನ್ನಲ್ಲಿನ ಲೀ ಎಂಬ ಸ್ತ್ರೀಯು, ತಟ್ಟನೆ ಮನಸ್ಸಿಗೆ ಬಂದ ಆಲೋಚನೆಗನುಸಾರ ತನ್ನ 16ರ ಪ್ರಾಯದಲ್ಲಿ ಒಂದು ಹಚ್ಚೆಯನ್ನು ಹಾಕಿಸಿಕೊಂಡಳು. ಈಗ ಅವಳು ಆಫೀಸಿನಲ್ಲಿ ಕೆಲಸಮಾಡುತ್ತಿರುವ 21 ವರ್ಷ ಪ್ರಾಯದ ಸ್ತ್ರೀಯಾಗಿದ್ದಾಳೆ. “ನನ್ನ ಜೊತೆ ಕೆಲಸಗಾರರು ನನ್ನ ಹಚ್ಚೆಯನ್ನೇ ದಿಟ್ಟಿಸಿ ನೋಡುವಾಗ ನನಗೆ ತುಂಬ ಕಷ್ಟವೆನಿಸುತ್ತದೆ” ಎಂದು ಲೀ ಒಪ್ಪಿಕೊಳ್ಳುತ್ತಾಳೆ. ಬ್ರಿಟಿಷ್ ಮಾನಸಿಕ ಆರೋಗ್ಯದ ಕೆಲಸಗಾರರಾಗಿರುವ ಥಿಯೊಡೋರ್ ಡಾಲ್ರಿಂಪಲ್ ಹೇಳುವುದೇನೆಂದರೆ, ಅನೇಕ ಜನರಿಗೆ ಹಚ್ಚೆಗಳು, “ಒಬ್ಬ ಪುರುಷನು . . . ಹಿಂಸಾತ್ಮಕ, ಪಾಶವೀಯ, ಸಮಾಜವಿರೋಧಿ ಹಾಗೂ ಪಾತಕಿಗಳಂಥ ಕೀಳುಸಂಸ್ಕೃತಿಗೆ ಸೇರಿದವನಾಗಿದ್ದಾನೆ ಎಂಬುದರ ದೃಶ್ಯ ಸಂಕೇತವಾಗಿವೆ.”
ಅಮೆರಿಕನ್ ಡಿಮೊಗ್ರ್ಯಾಫಿಕ್ಸ್ ಪತ್ರಿಕೆಯಲ್ಲಿನ ಒಂದು ಲೇಖನವು ತದ್ರೀತಿಯಲ್ಲಿ ಹೇಳಿಕೆ ನೀಡಿದ್ದು: “ಅಧಿಕಾಂಶ ಅಮೆರಿಕನರು, ದೇಹದ ಮೇಲೆ ದೃಷ್ಟಿಗೋಚರವಾದ ಕಲಾಕೃತಿಯನ್ನು ಮಾಡಿಸಿಕೊಳ್ಳುವುದನ್ನು ತುಂಬ ಅಪಾಯಕರವಾಗಿರುವುದಾಗಿ ಪರಿಗಣಿಸುತ್ತಾರೆ ಎಂಬುದು ಸುಸ್ಪಷ್ಟ. ‘ದೃಷ್ಟಿಗೋಚರವಾದ ಹಚ್ಚೆಗಳನ್ನು ಹಾಕಿಸಿಕೊಂಡಿರುವ ಜನರು, . . . ಈ ರೀತಿಯ ಸ್ವಅಭಿವ್ಯಕ್ತಿಯು ಅವರ ಜೀವನವೃತ್ತಿಯಲ್ಲಿ ಅಥವಾ ವೈಯಕ್ತಿಕ ಸಂಬಂಧಗಳಲ್ಲಿ ವಿಘ್ನಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎಂಬುದನ್ನು ಮನಗಾಣಬೇಕು’ ಎಂಬ ಹೇಳಿಕೆಯನ್ನು [ಯುವ ಜನರಲ್ಲಿ] ಎಂಬತ್ತೈದು ಪ್ರತಿಶತದಷ್ಟು ಮಂದಿ ಸಮ್ಮತಿಸುತ್ತಾರೆ.”
ಒಂದು ಹಚ್ಚೆಯನ್ನು ಹಾಕಿಸಿಕೊಳ್ಳುವ ಆಯ್ಕೆಯು, ಒಬ್ಬ ಕ್ರೈಸ್ತರಾಗಿದ್ದೇವೆ ಎಂಬ ನಿಮ್ಮ ಪ್ರತಿಪಾದನೆಗೆ ಇಂಬುಕೊಡುವುದೋ ಅಥವಾ ಅದನ್ನು ಕುಗ್ಗಿಸುವುದೋ ಎಂಬುದನ್ನು ಸಹ ಪರಿಗಣಿಸಿರಿ. ಇದು ಇತರರನ್ನು “ಎಡವಿಹಾಕಲು ಕಾರಣ”ವಾಗಸಾಧ್ಯವಿದೆಯೋ? (2 ಕೊರಿಂಥ 6:3, NW) ಕೆಲವು ಯುವ ಜನರು ದೇಹದ ಗುಪ್ತ ಭಾಗಗಳಲ್ಲಿ ಹಚ್ಚೆಹಾಕಿಸಿಕೊಂಡಿದ್ದಾರೆ ಎಂಬುದೇನೋ ನಿಜ. ಈ ಗುಪ್ತ ಹಚ್ಚೆಗಳ ಬಗ್ಗೆ ಅವರ ಹೆತ್ತವರಿಗೂ ಗೊತ್ತಿಲ್ಲದಿರಬಹುದು. ಆದರೆ ಜೋಕೆ! ತುರ್ತುಪರಿಸ್ಥಿತಿಯ ಕಾರಣ ವೈದ್ಯರ ಬಳಿ ಹೋಗಬೇಕಾಗುವಾಗ ನಿಮ್ಮ ಗುಟ್ಟು ರಟ್ಟಾದೀತು! ಮೂರ್ಖತನದ ಮೋಸಗೊಳಿಸುವಿಕೆಯನ್ನು ದೂರಮಾಡುತ್ತಾ, ‘ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳುವುದು’ ಉತ್ತಮ.—ಇಬ್ರಿಯ 13:18.
ಎಲ್ಲಾ ಗೀಳುಗಳಂತೆಯೇ ಹಚ್ಚೆಹಾಕಿಸಿಕೊಳ್ಳುವ ಗೀಳು ಸಹ ಕಾಲಕಳೆದಂತೆ ಮಾಸಿಹೋಗಬಹುದು. ಒಂದು ಜೊತೆ ಜೀನ್ಸ್ ಆಗಲಿ, ಒಂದು ಶರ್ಟ್ ಆಗಲಿ, ಒಂದು ಡ್ರೆಸ್ ಆಗಲಿ ಅಥವಾ ಒಂದು ಜೊತೆ ಪಾದರಕ್ಷೆಗಳಾಗಲಿ—ಇವುಗಳಲ್ಲಿ ಯಾವುದನ್ನು ನೀವು ಎಷ್ಟೇ ಪ್ರೀತಿಸುತ್ತೀರಾದರೂ, ನಿಮ್ಮ ಉಳಿದ ಜೀವಮಾನವೆಲ್ಲಾ ಅದನ್ನೇ ಹಾಕಿಕೊಳ್ಳುವ ಶಪಥವನ್ನು ನೀವು ಮಾಡುವಿರೋ? ಖಂಡಿತವಾಗಿಯೂ ಇಲ್ಲ ಅಲ್ಲವೆ! ಸ್ಟೈಲ್, ಕಟ್ ಮತ್ತು ಬಣ್ಣಗಳು ಬದಲಾಗುತ್ತಾ ಇರುತ್ತವೆ. ಆದರೂ, ಒಂದು ಉಡುಪಿಗೆ ಅಸದೃಶವಾಗಿ ಹಚ್ಚೆಗಳನ್ನು ತೆಗೆಸಿಹಾಕುವುದು ತುಂಬ ಕಷ್ಟಕರ. ಅಷ್ಟುಮಾತ್ರವಲ್ಲ, ನೀವು 16ರ ಪ್ರಾಯದಲ್ಲಿದ್ದಾಗ ಯಾವುದು “ಸೂಪರ್” ಆಗಿ ಕಂಡುಬರುತ್ತದೋ ಅದು, ನೀವು 30ರ ಪ್ರಾಯದವರಾಗಿರುವಾಗ ಅಷ್ಟೇನೂ ಆಕರ್ಷಣೀಯವಾಗಿ ಕಂಡುಬರದಿರಬಹುದು.
ತಮ್ಮ ತೋರಿಕೆಗೆ ಶಾಶ್ವತವಾದ ಬದಲಾವಣೆಗಳನ್ನು ಮಾಡಿರುವಂಥ ಅನೇಕರು ಈಗ ಅದರ ಕುರಿತು ವಿಷಾದಿಸುತ್ತಾರೆ. ಆಮೀ ಹೇಳುವುದು: “ಯೆಹೋವನ ಕುರಿತು ತಿಳಿದುಕೊಳ್ಳುವುದಕ್ಕೆ ಮೊದಲು ನಾನು ಹಚ್ಚೆಹಾಕಿಸಿಕೊಂಡೆ. ಈಗ ನಾನು ಅದನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾ ಇರುತ್ತೇನೆ. ಸಭೆಯಲ್ಲಿರುವ ಇತರರು ಆಕಸ್ಮಿಕವಾಗಿ ಅದನ್ನು ನೋಡುವಾಗ, ನನಗೆ ತುಂಬ ಮುಜುಗರವಾಗುತ್ತದೆ.” ಇದರಿಂದ ಯಾವ ಪಾಠವನ್ನು ಕಲಿಯಬಹುದು? ಹಚ್ಚೆಯನ್ನು ಹಾಕಿಸಿಕೊಳ್ಳುವ ಮೊದಲು ಹತ್ತು ಸಲ ಯೋಚಿಸಿ ನೋಡಿ. ಮುಂದೆ ನೀವು ವಿಷಾದಿಸಬಹುದಾದಂಥ ಒಂದು ನಿರ್ಣಯವನ್ನು ಎಂದೂ ಮಾಡಬೇಡಿ.(g03 9/22)
[ಪಾದಟಿಪ್ಪಣಿ]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 22ರಲ್ಲಿರುವ ಚಿತ್ರ]
ಅನೇಕವೇಳೆ ಹಚ್ಚೆಗಳು ದಂಗೆಕೋರ ಜೀವನ ಶೈಲಿಯೊಂದಿಗೆ ಸಂಬಂಧಿಸಿರುತ್ತವೆ
[ಪುಟ 22ರಲ್ಲಿರುವ ಚಿತ್ರ]
ಸಮಯಾನಂತರ ಅನೇಕರು ಹಚ್ಚೆಹಾಕಿಸಿಕೊಂಡದ್ದರ ಕುರಿತು ವಿಷಾದಿಸುತ್ತಾರೆ
[ಪುಟ 23ರಲ್ಲಿರುವ ಚಿತ್ರ]
ಹಚ್ಚೆಯನ್ನು ಹಾಕಿಸಿಕೊಳ್ಳುವ ಮೊದಲು ಹತ್ತು ಸಲ ಯೋಚಿಸಿ ನೋಡಿ