ಅಧ್ಯಾಯ 89
ಯೂದಾಯದೊಳಗೆ ಒಂದು ಕರುಣೆಯ ನಿಯೋಗ
ಕೆಲವು ವಾರಗಳ ಮೊದಲು, ಯೆರೂಸಲೇಮಿನಲ್ಲಿ ಪ್ರತಿಷ್ಠೆಯ ಹಬ್ಬದ ಸಮಯದಲ್ಲಿ ಯೆಹೂದ್ಯರು ಯೇಸುವನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದುದರಿಂದ ಅವನು ಉತ್ತರಕ್ಕೆ, ಪ್ರಾಯಶಃ ಗಲಿಲಾಯ ಸಮುದ್ರದಿಂದ ಬಹುದೂರದಲ್ಲಿರದ ಪ್ರದೇಶದಲ್ಲಿ ಸಂಚರಿಸಿದನು.
ಇತ್ತೀಚೆಗೆ ಅವನು ಪುನಃ ಯೆರೂಸಲೇಮಿನ ಕಡೆಗೆ ದಕ್ಷಿಣಕ್ಕೆ ಹೋಗುತ್ತಿದ್ದನು, ದಾರಿಯಲ್ಲಿ ಯೊರ್ದನ್ ಹೊಳೆಯ ಪೂರ್ವದ ಪ್ರಾಂತ್ಯದಲ್ಲಿರುವ ಪೆರಿಯದ ಗ್ರಾಮಗಳಲ್ಲಿ ಸಾರುತ್ತಾ ಹೋದನು. ಐಶ್ವರ್ಯವಂತನ ಮತ್ತು ಲಾಜರನ ಸಾಮ್ಯವನ್ನು ಹೇಳಿಯಾದ ಮೇಲೆ, ಅವನು ಗಲಿಲಾಯದಲ್ಲಿದ್ದಾಗ ಕಲಿಸಿದ ವಿಷಯಗಳನ್ನು ತನ್ನ ಶಿಷ್ಯರಿಗೆ ಪುನಃ ಕಲಿಸತೊಡಗಿದನು.
ಉದಾಹರಣೆಗೆ, ದೇವರ “ಚಿಕ್ಕವರಲ್ಲಿ ಒಬ್ಬನಿಗೆ” ತೊಡಕನ್ನೊಡ್ಡುವದಕ್ಕಿಂತ, ಒಬ್ಬ ವ್ಯಕ್ತಿಯು “ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವದೇ” ಹೆಚ್ಚು ಪ್ರಯೋಜನಕಾರಿ ಎಂದವನು ಹೇಳುತ್ತಾನೆ. ಕ್ಷಮೆಯನ್ನು ನೀಡುವದರ ಅಗತ್ಯತೆಯನ್ನು ಅವನು ಒತ್ತಿಹೇಳುತ್ತಾ, ವಿವರಿಸುವದು: “ಅವನು [ಸಹೋದರನು] ದಿನಕ್ಕೆ ಏಳು ಸಾರಿ ನಿನಗೆ ತಪ್ಪು ಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು—ನನಗೆ ಪಶ್ಚಾತ್ತಾಪವಾಯಿತು ಎಂದು ಹೇಳಿದರೆ ಅವನಿಗೆ ಕ್ಷಮಿಸು.”
ಶಿಷ್ಯರು “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಹೇಳಲು, ಯೇಸುವು ಉತ್ತರಿಸುವದು: “ಸಾಸಿವೇ ಕಾಳಷ್ಟು ನಂಬಿಕೆ ನಿಮಗಿದ್ದರೆ ನೀವು ಈ ಅತ್ತೀಮರಕ್ಕೆ—ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವದು.” ಆದುದರಿಂದ ಕೊಂಚ ವಿಶ್ವಾಸವು ಕೂಡ ಮಹತ್ತಾದ ಸಂಗತಿಗಳನ್ನು ಪೂರೈಸಬಲ್ಲದು.
ಅನಂತರ, ಪರಾತ್ಪರ ದೇವರ ಸೇವಕನ ಯೋಗ್ಯ ಮನೋಭಾವವನ್ನು ಉದಾಹರಿಸುತ್ತಾ ಯೇಸುವು ಒಂದು ನೈಜ ಜೀವಿತದ ಸನ್ನಿವೇಶವನ್ನು ವರ್ಣಿಸುತ್ತಾನೆ. “ನಿಮ್ಮಲ್ಲಿ ಯಾವನಿಗಾದರೂ ಉಳುವ ಅಥವಾ ಕುರಿಮೇಯಿಸುವ ಆಳಿರಲಾಗಿ,” ಯೇಸುವು ಅವಲೋಕಿಸುವದು, “ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ—ನೀನು ತಟ್ಟನೆ ಬಂದು ಊಟಕ್ಕೆ ಕೂತುಕೋ ಎಂದು ಹೇಳಾನೇ? ಹಾಗೆ ಹೇಳದೆ—ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು. ನಾನು ಊಟಮಾಡಿ ಕುಡಿಯುವ ತನಕ ನಡುಕಟ್ಟಿಕೊಂಡು ನನಗೆ ಸೇವೆ ಮಾಡು; ಆ ಮೇಲೆ ನೀನು ಊಟಮಾಡಿ ಕುಡಿ ಎಂದು ಹೇಳುವನಲ್ಲವೇ. ತನ್ನ ಅಪ್ಪಣೆಯಂತೆ ನಡೆದ ಆಳಿಗೆ—ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ. ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ—ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ.” ಈ ರೀತಿಯಲ್ಲಿ, ದೇವರ ಸೇವಕರು ದೇವರನ್ನು ಸೇವಿಸುವದರ ಮೂಲಕ ತಾವು ಆತನಿಗೆ ಅನುಗ್ರಹ ತೋರಿಸುತ್ತೇವೆಂದು ಎಂದೂ ಭಾವಿಸಕೂಡದು. ಬದಲಿಗೆ, ಅವನ ಮನೆವಾರ್ತೆಯ ನಂಬಿಗಸ್ತ ಸದಸ್ಯರೋಪಾದಿ ಅವನನ್ನು ಆರಾಧಿಸಲು ತಮಗಿರುವ ಸುಯೋಗವನ್ನು ಅವರು ಯಾವಾಗಲೂ ನೆನಪಿಸತಕ್ಕದ್ದು.
ಈ ಉದಾಹರಣೆಯನ್ನು ಯೇಸುವು ಕೊಟ್ಟ ಸ್ವಲ್ಪ ಸಮಯದೊಳಗೆ ಒಬ್ಬ ದೂತನು ಆಗಮಿಸುತ್ತಾನೆ. ಯೂದಾಯದ ಬೇಥಾನ್ಯದಲ್ಲಿ ವಾಸಿಸುತ್ತಿದ್ದ ಲಾಜರನ ಸಹೋದರಿಯರಾದ ಮಾರ್ಥಳು ಮತ್ತು ಮರಿಯಳು, ಇವರಿಂದ ಕಳುಹಿಸಲ್ಪಟ್ಟಿದ್ದನು. “ಸ್ವಾಮೀ, ನಿನ್ನ ಪ್ರಿಯ ಮಿತ್ರನು ಅಸ್ವಸ್ಥನಾಗಿದ್ದಾನೆ” ಎಂದು ದೂತನು ಹೇಳಿದನು.
ಯೇಸುವು ಉತ್ತರಿಸುವದು: “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು.” ತಾನಿದ್ದ ಸ್ಥಳದಲ್ಲಿ ಅವನು ಎರಡು ದಿನ ಇನ್ನೂ ನಿಂತಾದ ಮೇಲೆ, ಅವನು ತನ್ನ ಶಿಷ್ಯರಿಗೆ ಹೇಳುವದು: “ತಿರಿಗಿ ಯೂದಾಯಕ್ಕೆ ಹೋಗೋಣ.” ಆದರೆ, ಅವರು ಅವನಿಗೆ ನೆನಪಿಸಿದ್ದು: “ಗುರುವೇ, ಯೆಹೂದ್ಯರು ಆಗಲೇ ನಿನ್ನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು; ತಿರಿಗಿ ಅಲ್ಲಿಗೇ ಹೋಗುತ್ತಿಯಾ?”
“ಹಗಲಿಗೆ ಹನ್ನೆರಡು ತಾಸು ಉಂಟಲ್ಲವೇ?” ಯೇಸುವು ಪ್ರತ್ಯುತ್ತರವಾಗಿ ಕೇಳುತ್ತಾನೆ. “ಒಬ್ಬನು ಹಗಲಲ್ಲಿ ತಿರುಗಾಡಿದರೆ ಈ ಲೋಕದ ಬೆಳಕು ಕಾಣಿಸುವದರಿಂದ ಅವನು ಎಡವುವದಿಲ್ಲ; ರಾತ್ರಿಯಲ್ಲಿ ತಿರುಗಾಡಿದರೆ ಅವನಿಗೆ ಬೆಳಕಿಲ್ಲದರ್ದಿಂದ ಎಡವುವನು.”
“ಹಗಲಿನ ತಾಸುಗಳು” ಇಲ್ಲವೆ ಸಮಯದ ಕುರಿತು ಯೇಸುವು ಹೇಳಿರುವದರ ಬಹುತೇಕ ಅರ್ಥವು ಯೇಸುವಿನ ಐಹಿಕ ಶುಶ್ರೂಷೆಗಾಗಿ ದೇವರು ಅನುಮತಿಸಿದ ಸಮಯವು ಇನ್ನೂ ಮುಗಿದಿರಲಿಲ್ಲ ಇಲ್ಲವೆ ಅವು ಮುಗಿಯುವ ತನಕ ಯಾರೂ ಯಾವ ಹಾನಿಯನ್ನು ಮಾಡಸಾಧ್ಯವಿರಲಿಲ್ಲ ಎಂದಾಗಿತ್ತು. ಅವನಿಗೆ ಇನ್ನು ಉಳಿದಿರುವ ಕೊಂಚವೇ “ಹಗಲಿನ ಬೆಳಕಿನ” ಪೂರ್ಣ ಪ್ರಯೋಜನದ ಬಳಕೆಯನ್ನು ಮಾಡುವ ಅಗತ್ಯವಿತ್ತು, ಯಾಕಂದರೆ ಅನಂತರ “ರಾತ್ರಿಯು” ಬರುತ್ತದೆ, ಆಗ ಅವನ ವೈರಿಗಳು ಅವನನ್ನು ಕೊಲ್ಲಲಿಕ್ಕಿದ್ದರು.
ಯೇಸುವು ಕೂಡಿಸುವದು: “ನನ್ನ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.”
ಲಾಜರನು ನಿದ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಾನೆ ಮತ್ತು ಅವನು ಅಲ್ಲಿಂದ ಗುಣಮುಖನಾಗುತ್ತಾನೆ ಎನ್ನುವದರ ಒಂದು ನಿರ್ಧಾರಾತ್ಮಕ ಸೂಚನೆ ಇದಾಗಿದೆ ಎಂದು ಎಣಿಸಿ, ಶಿಷ್ಯರು ಪ್ರತಿಕ್ರಿಯಿಸುವದು: “ಸ್ವಾಮೀ, ಅವನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು.”
ಅನಂತರ ಯೇಸುವು ಅವರಿಗೆ ನೇರವಾಗಿ ಹೇಳುವದು: “ಲಾಜರನು ಸತ್ತುಹೋದನು; ಮತ್ತು ನಾನು ಅಲ್ಲಿ ಇಲ್ಲದೆ ಇದ್ದದ್ದಕ್ಕೆ ನಾನು ನಿಮ್ಮ ನಿಮಿತ್ತವಾಗಿ ಸಂತೋಷ ಪಡುತ್ತೇನೆ. ಯಾಕಂದರೆ ಅದರಿಂದ ನೀವು ನಂಬುವದಕ್ಕೆ ಮಾರ್ಗವಾಯಿತು; ಆದರೆ ಅವನ ಬಳಿಗೆ ಹೋಗೋಣ.”
ಯೂದಾಯದಲ್ಲಿ ಯೇಸುವನ್ನು ಕೊಲ್ಲುವ ಸಾಧ್ಯತೆ ಇರುವದನ್ನು ಅರ್ಥೈಸಿಕೊಂಡರೂ, ಅವನನ್ನು ಬೆಂಬಲಿಸ ಬಯಸಿ, ತೋಮನು ಅವನ ಜತೆ ಶಿಷ್ಯರಿಗೆ ಪ್ರೋತ್ಸಾಹಿಸುವದು: “ನಾವು ಸಹ ಹೋಗಿ ಆತನೊಡನೆ ಸಾಯೋಣ.” ಆದುದರಿಂದ ಅವರ ಜೀವದ ಅಪಾಯದ ಎದುರಿನಲ್ಲಿಯೂ, ಶಿಷ್ಯರು ಯೇಸುವಿನೊಂದಿಗೆ ಯೂದಾಯಕ್ಕೆ ಈ ಕರುಣೆಯ ನಿಯೋಗದಲ್ಲಿ ಜೊತೆಯಲ್ಲಿ ಹೋಗುತ್ತಾರೆ. ಲೂಕ 13:22; 17:1-10; ಯೋಹಾನ 10:22, 31, 40-42; 11:1-16.
▪ ಇತ್ತೀಚೆಗೆ ಯೇಸುವು ಎಲ್ಲಿ ಪ್ರಚಾರ ಮಾಡುತ್ತಿದ್ದನು?
▪ ಯಾವ ಬೋಧನೆಗಳನ್ನು ಯೇಸುವು ಪುನರಾವರ್ತಿಸಿದನು, ಮತ್ತು ಯಾವ ವಿಷಯವನ್ನು ಉದಾಹರಿಸಲು ಯಾವ ನೈಜ ಜೀವನದ ಸನ್ನಿವೇಶವನ್ನು ಅವನು ವಿವರಿಸುತ್ತಾನೆ?
▪ ಯಾವ ಸುದ್ದಿಯನ್ನು ಯೇಸುವು ಪಡೆದನು, ಮತ್ತು “ಹಗಲಿನ ಬೆಳಕು” ಮತ್ತು “ರಾತ್ರಿ” ಎಂಬುದರ ಅವನ ಅರ್ಥವೇನಾಗಿತ್ತು?
▪ ತೋಮನು ‘ನಾವು ಸಹ ಹೋಗಿ ಆತನೊಡನೆ ಸಾಯೋಣ’ ಎಂದು ಹೇಳಿದಾಗ, ಅವನ ಅರ್ಥವೇನಾಗಿತ್ತು?