ಲೂಕ
13 ಆ ಸಮಯದಲ್ಲಿ ಅಲ್ಲಿದ್ದ ಕೆಲವರು ಯೇಸು ಹತ್ರ ಬಂದು ‘ಬಲಿಗಳನ್ನ ಅರ್ಪಿಸ್ತಿದ್ದ ಗಲಿಲಾಯದ ಜನ್ರನ್ನ ಪಿಲಾತ ಕೊಂದ’ ಅಂದ್ರು. 2 ಅದಕ್ಕೆ ಯೇಸು “ಅವರು ಬೇರೆ ಗಲಿಲಾಯದ ಜನ್ರಿಗಿಂತ ತುಂಬ ಪಾಪ ಮಾಡಿದಕ್ಕೆ ಸತ್ತರಾ? 3 ಇಲ್ಲ. ನೀವು ಪಶ್ಚಾತ್ತಾಪ ಪಡದಿದ್ರೆ ಅವ್ರ ತರಾನೇ ನಾಶ ಆಗ್ತೀರ.+ 4 ಸಿಲೋವದಲ್ಲಿ ಕೋಟೆ ಬಿದ್ದು ಸತ್ತ 18 ಜನ ಯೆರೂಸಲೇಮಿನ ಬೇರೆ ಜನ್ರಿಗಿಂತ ಹೆಚ್ಚು ಪಾಪ ಮಾಡಿದ್ರು ಅಂತ ನೆನಸ್ತೀರಾ? 5 ಇಲ್ಲ. ನೀವು ಪಶ್ಚಾತ್ತಾಪ ಪಡದಿದ್ರೆ ಅವ್ರ ತರಾನೇ ನಾಶ ಆಗ್ತೀರ” ಅಂದನು.
6 ಆಮೇಲೆ ಈ ಉದಾಹರಣೆ ಹೇಳಿದನು “ಒಬ್ಬ ದ್ರಾಕ್ಷಿತೋಟದಲ್ಲಿ ಅಂಜೂರ ಮರ ನೆಟ್ಟು ಹಣ್ಣಾಗುತ್ತಾ ಅಂತ ಕಾಯ್ತಾ ಇದ್ದ. ಆದ್ರೆ ಆಗಲಿಲ್ಲ.+ 7 ಆಗ ಅವನು ತೋಟಗಾರನಿಗೆ ‘ಮೂರು ವರ್ಷ ಹಣ್ಣಾಗುತ್ತಾ ಅಂತ ಕಾದೆ, ಆದ್ರೆ ಒಂದೂ ಆಗಿಲ್ಲ. ಇದನ್ನ ಕಡಿದು ಬಿಸಾಕು! ಇದ್ರಿಂದ ಈ ಜಾಗ ಯಾಕೆ ಹಾಳಾಗಬೇಕು?’ ಅಂದನು. 8 ಅದಕ್ಕೆ ಆ ತೋಟಗಾರ ‘ಯಜಮಾನ, ಇದೊಂದು ವರ್ಷ ಬಿಡು. ನಾನು ಇದ್ರ ಸುತ್ತ ಅಗೆದು ಗೊಬ್ಬರ ಹಾಕ್ತೀನಿ. 9 ಹಣ್ಣುಬಿಟ್ರೆ ಸರಿ, ಇಲ್ಲಾಂದ್ರೆ ಅದನ್ನ ಕಡಿದು ಬಿಸಾಡು’ ಅಂದನು.”+
10 ಸಬ್ಬತ್ ದಿನ ಯೇಸು ಒಂದು ಸಭಾಮಂದಿರದಲ್ಲಿ ಕಲಿಸ್ತಿದ್ದನು. 11 ಅಲ್ಲಿ 18 ವರ್ಷದಿಂದ ಕೆಟ್ಟ ದೇವದೂತ ಹಿಡಿದಿದ್ದ ಸ್ತ್ರೀ ಇದ್ದಳು. ಅವಳಿಗೆ ಎಷ್ಟು ಹುಷಾರು ಇರ್ಲಿಲ್ಲಾಂದ್ರೆ ಅವಳು ಬಗ್ಗಿಬಿಟ್ಟಿದ್ದಳು, ನೆಟ್ಟಗೆ ನಿಲ್ಲೋಕೆ ಆಗ್ತಿರ್ಲಿಲ್ಲ. 12 ಯೇಸು ಅವಳನ್ನ ನೋಡಿ “ಅಮ್ಮಾ, ನಿನ್ನ ರೋಗ ವಾಸಿ ಆಯ್ತು”+ ಅಂತ ಹೇಳಿ 13 ಅವಳ ಮೇಲೆ ಕೈಗಳನ್ನ ಇಟ್ಟಾಗ ಅವಳು ನೆಟ್ಟಗೆ ನಿಂತು ದೇವರನ್ನ ಹೊಗಳೋಕೆ ಶುರುಮಾಡಿದಳು. 14 ಯೇಸು ಸಬ್ಬತ್ ದಿನದಲ್ಲಿ ವಾಸಿಮಾಡಿದ್ದನ್ನ ನೋಡಿ ಸಭಾಮಂದಿರದ ಅಧಿಕಾರಿಗೆ ತುಂಬ ಕೋಪ ಬಂತು. ಅವನು ಜನ್ರಿಗೆ “ಕೆಲಸ ಮಾಡೋಕೇ ಆರು ದಿನ ಇರೋದು.+ ಆಗ ಬಂದು ವಾಸಿ ಮಾಡಿಸ್ಕೊಳ್ಳಿ. ಸಬ್ಬತ್ ದಿನದಲ್ಲಿ+ ಅಲ್ಲ” ಅಂದ. 15 ಆಗ ಒಡೆಯ “ಕಪಟಿಗಳೇ,+ ನೀವೆಲ್ಲ ಸಬ್ಬತ್ ದಿನದಲ್ಲಿ ನಿಮ್ಮ ಎತ್ತನ್ನ ಇಲ್ಲಾ ಕತ್ತೆನ ಬಿಚ್ಚಿ ನೀರು ಕುಡಿಸೋಕೆ ಕರ್ಕೊಂಡು ಹೋಗಲ್ವಾ?+ 16 ಹಾಗಿರುವಾಗ 18 ವರ್ಷದಿಂದ ಸೈತಾನನ ಕೈಯಲ್ಲಿ ನರಳ್ತಿರೋ ಅಬ್ರಹಾಮನ ವಂಶದವಳಾದ ಈ ಸ್ತ್ರೀಯನ್ನ ಬಿಡಿಸೋದು ತಪ್ಪಾ?” ಅಂತ ಕೇಳಿದನು. 17 ಈ ಮಾತು ಹೇಳಿದಾಗ ವಿರೋಧಿಗಳಿಗೆ ಮುಖಕ್ಕೆ ಹೊಡೆದ ಹಾಗಾಯ್ತು. ಆದ್ರೆ ಜನ ಆತನು ಮಾಡಿದ ಮಹಾನ್ ಕೆಲಸಗಳನ್ನ+ ನೋಡಿ ತುಂಬ ಖುಷಿಪಟ್ರು.
18 ಹಾಗಾಗಿ ಆತನು ಹೀಗಂದನು “ದೇವರ ಆಳ್ವಿಕೆ ಯಾವುದರ ತರ ಇದೆ? ಅದನ್ನ ಯಾವುದಕ್ಕೆ ಹೋಲಿಸಬಹುದು? 19 ದೇವರ ಆಳ್ವಿಕೆಯನ್ನ ಒಂದು ಸಾಸಿವೆ ಕಾಳಿಗೆ ಹೋಲಿಸಬಹುದು. ಒಬ್ಬ ಅದನ್ನ ತಗೊಂಡು ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರ ಆಯ್ತು. ಪಕ್ಷಿಗಳೆಲ್ಲ ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿಕೊಂಡವು.”+
20 ಆತನು ಮತ್ತೆ ಹೀಗಂದ “ದೇವರ ಆಳ್ವಿಕೆಯನ್ನ ಯಾವುದಕ್ಕೆ ಹೋಲಿಸಬಹುದು? 21 ಹಿಟ್ಟನ್ನ ಉಬ್ಬಿಸೋ ಹುಳಿ ತರ ದೇವರ ಆಳ್ವಿಕೆ ಇದೆ. ಒಬ್ಬ ಸ್ತ್ರೀ ಹುಳಿ ತಗೊಂಡು ತುಂಬ* ಹಿಟ್ಟಲ್ಲಿ ಕಲಸಿಟ್ಟಾಗ ಆ ಹಿಟ್ಟೆಲ್ಲ ಹುಳಿ ಆಯ್ತು.”+
22 ಯೇಸು ಯೆರೂಸಲೇಮಿಗೆ ಪ್ರಯಾಣ ಮಾಡ್ತಿದ್ದಾಗ ಒಂದು ಊರಿಂದ ಇನ್ನೊಂದು ಊರಿಗೆ, ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಿ ಜನ್ರಿಗೆ ಕಲಿಸ್ತಾ ಇದ್ದನು. 23 ಆಗ ಒಬ್ಬ “ಸ್ವಾಮಿ, ರಕ್ಷಣೆ ಪಡಿಯೋರು ಸ್ವಲ್ಪ ಜನ ಮಾತ್ರನಾ?” ಅಂತ ಕೇಳಿದ. ಅದಕ್ಕೆ ಯೇಸು 24 “ಇದನ್ನ ನೆನಪಿಡಿ, ಇಕ್ಕಟ್ಟಾದ ಬಾಗಿಲಲ್ಲಿ+ ಹೋಗೋಕೆ ತುಂಬ ಹೆಣಗಾಡಬೇಕು. ಯಾಕಂದ್ರೆ ತುಂಬ ಜನ ಒಳಗೆ ಹೋಗೋಕೆ ಪ್ರಯತ್ನ ಮಾಡ್ತಾರೆ, ಆದ್ರೆ ಆಗಲ್ಲ. 25 ಮನೆ ಯಜಮಾನ ಎದ್ದು ಬಾಗಿಲಿಗೆ ಬೀಗ ಹಾಕಿದ ಮೇಲೆ ನೀವು ಹೊರಗೆ ನಿಂತು ಬಾಗಿಲು ತಟ್ತಾ ‘ಸ್ವಾಮೀ, ಬಾಗಿಲು ತೆರಿ’+ ಅಂತ ಹೇಳ್ತೀರ. ಆದ್ರೆ ಯಜಮಾನ ‘ನೀವು ಎಲ್ಲಿಂದ ಬಂದಿದ್ದೀರ ನಂಗೊತ್ತಿಲ್ಲ’ ಅಂತಾನೆ. 26 ಆಗ ನೀವು ‘ನಿನ್ನ ಜೊತೆ ನಾವು ಊಟಮಾಡಿದ್ವಿ, ಕುಡಿದ್ವಿ. ನೀನು ನಮ್ಮ ಮನೆ ಹತ್ರ ನಮಗೆ ಕಲಿಸ್ತಾ ಇದ್ದೆ’ ಅಂತಿರ.+ 27 ಆದ್ರೆ ಆತನು ‘ನೀವು ಎಲ್ಲಿಂದ ಬಂದ್ರಿ ಅಂತ ನಂಗೊತ್ತಿಲ್ಲ. ದುಷ್ಟ ಕೆಲಸಗಳನ್ನ ಮಾಡುವವ್ರೇ, ಇಲ್ಲಿಂದ ಹೋಗಿ’ ಅಂತಾನೆ. 28 ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲ ಪ್ರವಾದಿಗಳು ದೇವರ ಆಳ್ವಿಕೆಯಲ್ಲಿ ಇರೋದನ್ನ, ನಿಮ್ಮನ್ನ ಹೊರಗೆ ಹಾಕೋದನ್ನ ನೋಡಿ ಜೋರಾಗಿ ಅಳ್ತೀರ, ಗೋಳಾಡ್ತೀರ.+ 29 ಅಷ್ಟೇ ಅಲ್ಲ ಜನ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿಂದ ಬಂದು ದೇವರ ಆಳ್ವಿಕೆಯಲ್ಲಿ ಊಟಕ್ಕೆ ಕೂತ್ಕೊಳ್ತಾರೆ. 30 ನೋಡಿ! ಹಿಂದೆ ಇರೋ ತುಂಬ ಜನ ಮುಂದೆ ಬರ್ತಾರೆ. ಮುಂದೆ ಇರೋ ತುಂಬ ಜನ ಹಿಂದೆ ಹೋಗ್ತಾರೆ”+ ಅಂದನು.
31 ಅದೇ ಸಮಯದಲ್ಲಿ ಸ್ವಲ್ಪ ಜನ ಫರಿಸಾಯರು ಆತನ ಹತ್ರ ಬಂದು “ಇಲ್ಲಿಂದ ಹೋಗಿಬಿಡು, ಹೆರೋದ ನಿನ್ನನ್ನ ಕೊಲ್ಲಬೇಕಂತ ಇದ್ದಾನೆ” ಅಂದ್ರು. 32 ಅದಕ್ಕೆ ಆತನು “ನೀವು ಹೋಗಿ ಆ ನರಿಗೆ ಹೇಳಿ, ‘ಇವತ್ತು, ನಾಳೆ ನಾನು ಕೆಟ್ಟ ದೇವದೂತರನ್ನ ಬಿಡಿಸ್ತೀನಿ, ಮೂರನೇ ದಿನ ನನ್ನ ಕೆಲಸ ಮುಗಿಯುತ್ತೆ.’ 33 ಹಾಗಿದ್ರೂ ಇವತ್ತು, ನಾಳೆ, ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಯಾಕಂದ್ರೆ ಒಬ್ಬ ಪ್ರವಾದಿ ಯೆರೂಸಲೇಮ್+ ಹೊರಗೆ ಕೊಲೆಯಾಗೋದು ಚೆನ್ನಾಗಿರಲ್ಲ. 34 ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನ ನೀನು ಸಾಯಿಸಿದೆ. ನಿನ್ನ ಹತ್ರ ಕಳಿಸಿದವ್ರನ್ನ ಕಲ್ಲೆಸೆದು ಕೊಂದೆ.+ ಕೋಳಿ ತನ್ನ ರೆಕ್ಕೆ ಕೆಳಗೆ ಮರಿಗಳನ್ನ ಸೇರಿಸ್ಕೊಳ್ಳೋ ತರ ನಾನು ನಿನ್ನ ಮಕ್ಕಳನ್ನ ತುಂಬ ಸಲ ಸೇರಿಸ್ಕೊಳ್ಳೋಕೆ ಇಷ್ಟಪಟ್ಟೆ. ಆದ್ರೆ ನಿನಗಿಷ್ಟ ಇರ್ಲಿಲ್ಲ.+ 35 ಹಾಗಾಗಿ ದೇವರಿಗೆ ಈಗ ಈ ಆಲಯ ಬೇಡ.+ ನಾನು ನಿಮಗೆ ಹೇಳ್ತೀನಿ ‘ಯೆಹೋವನ* ಹೆಸರಲ್ಲಿ+ ಬರೋನಿಗೆ ಆಶೀರ್ವಾದ ಸಿಗಲಿ!’ ಅಂತ ನೀವು ಹೇಳೋ ತನಕ ನನ್ನನ್ನ ನೀವು ನೋಡೋದೇ ಇಲ್ಲ” ಅಂದನು.