ಭಾಗ 3
ಶ್ರೇಷ್ಠ ವಿವೇಕದ ಅದ್ವಿತೀಯ ಮೂಲ
1, 2. ನಾವು ಬೈಬಲನ್ನು ಏಕೆ ಪರೀಕ್ಷಿಸಬೇಕು?
1 ಬೈಬಲು ಆ ಶ್ರೇಷ್ಠ ವಿವೇಕದ ದಾಖಲೆಯೆ? ಜೀವಿತದ ಉದ್ದೇಶಕ್ಕೆ ಸಂಬಂಧಿತವಾದ ಆ ಪ್ರಾಮುಖ್ಯ ಪ್ರಶ್ನೆಗಳಿಗೆ ಅದು ಸತ್ಯವಾದ ಉತ್ತರಗಳನ್ನು ನಮಗೆ ಕೊಡಬಲ್ಲದೊ?
2 ಬೈಬಲು ನಮ್ಮ ಪರೀಕ್ಷೆಗೆ ಅರ್ಹತೆಯುಳ್ಳದ್ದೆಂಬುದು ನಿಶ್ಚಯ. ಇದಕ್ಕೆ ಒಂದು ಕಾರಣವು, ಒಟ್ಟಗೂಡಿಸಲ್ಪಟ್ಟಿರುವ ಗ್ರಂಥಗಳಲ್ಲಿ ಅದು ಅತಿ ಅಸಾಧಾರಣವಾದ, ಬೇರೆ ಯಾವುದಕ್ಕಿಂತಲೂ ಅತಿ ವಿಭಿನ್ನವಾದ ಗ್ರಂಥವಾಗಿರುವುದೇ. ಈ ಕೆಳಗಣ ನಿಜತ್ವಗಳನ್ನು ಪರಿಗಣಿಸಿರಿ.
ಅತಿ ಪ್ರಾಚೀನವಾದ, ಅತಿ ಹೆಚ್ಚು ವ್ಯಾಪಕವಾಗಿ ಹಂಚಲ್ಪಟ್ಟಿರುವ ಗ್ರಂಥ
3, 4. ಬೈಬಲು ಎಷ್ಟು ಹಳೆಯದ್ದಾಗಿದೆ?
3 ಬರೆಯಲ್ಪಟ್ಟಿರುವ ಗ್ರಂಥಗಳಲ್ಲಿ ಬೈಬಲು ಅತಿ ಹಳೆಯದ್ದು, ಅದರ ಭಾಗಗಳು ಸುಮಾರು 3,500 ವರ್ಷಗಳ ಹಿಂದೆ ರಚಿಸಲ್ಪಟ್ಟವು. ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಇನ್ನಾವ ಗ್ರಂಥಕ್ಕಿಂತಲೂ ಅದು ಅನೇಕ ಶತಮಾನಗಳಷ್ಟು ಹಳೆಯದು. ಅದರಲ್ಲಿರುವ 66 ಪುಸ್ತಕಗಳಲ್ಲಿ ಮೊದಲನೆಯದ್ದು, ಬುದ್ಧ ಮತ್ತು ಕನ್ಫ್ಯೂಷಿಯಸರಿಗಿಂತ ಸುಮಾರು ಒಂದು ಸಾವಿರ ವರ್ಷಗಳಷ್ಟು ಮತ್ತು ಮಹಮ್ಮದನಿಗಿಂತ ಸುಮಾರು ಎರಡು ಸಾವಿರ ವರ್ಷಗಳಷ್ಟು ಮೊದಲು ಬರೆಯಲ್ಪಟ್ಟಿತು.
4 ಬೈಬಲಿನಲ್ಲಿ ದಾಖಲಿಸಿರುವ ಇತಿಹಾಸವು ಮಾನವ ಕುಟುಂಬದ ಆರಂಭಕ್ಕೆ ಹೋಗಿ, ನಾವು ಇಲ್ಲಿ ಭೂಮಿಯ ಮೇಲೆ ಬಂದಿರುವುದು ಹೇಗೆಂದು ವಿವರಿಸುತ್ತದೆ. ಮನುಷ್ಯರು ಸೃಷ್ಟಿಸಲ್ಪಡುವುದಕ್ಕೆ ಹಿಂದಿನ ಸಮಯಕ್ಕೂ ಅದು ನಮ್ಮನ್ನು ಕರೆದೊಯ್ದು, ಭೂರಚನೆಯ ಕುರಿತ ನಿಜತ್ವಗಳನ್ನು ನಮಗೆ ಕೊಡುತ್ತದೆ.
5. ಪುರಾತನ ಲೌಕಿಕ ಬರಹಗಳಿಗೆ ಹೋಲಿಸುವಾಗ ಬೈಬಲಿನ ಎಷ್ಟು ಪುರಾತನ ಹಸ್ತಪ್ರತಿಗಳು ಅಸ್ತಿತ್ವದಲ್ಲಿವೆ?
5 ಇತರ ಧಾರ್ಮಿಕ ಗ್ರಂಥಗಳ, ಮತ್ತು ಧಾರ್ಮಿಕವಲ್ಲದ ಪುಸ್ತಕಗಳದ್ದು ಸಹ, ಕೇವಲ ಕೆಲವೇ ಹಳೆಯ ಹಸ್ತಪ್ರತಿಗಳು ಅಸ್ತಿತ್ವದಲ್ಲಿವೆ. ಬೈಬಲಿನ ಅಥವಾ ಅದರ ಭಾಗಗಳ ಹೀಬ್ರು ಮತ್ತು ಗ್ರೀಕ್ ಭಾಷೆಗಳ 11,000 ಹಸ್ತಲಿಖಿತ ಪ್ರತಿಗಳು ಅಸ್ತಿತ್ವದಲ್ಲಿವೆ, ಮತ್ತು ಇವುಗಳಲ್ಲಿ ಕೆಲವು ಆದ್ಯ ಬರೆವಣಿಗೆಯ ಸಮಯಕ್ಕೆ ಸಮೀಪದವುಗಳಾಗಿವೆ. ಬೈಬಲಿನ ವಿರುದ್ಧವಾಗಿ ಭಾವಿಸಸಾಧ್ಯವಿರುವ ಭೀಕರ ಆಕ್ರಮಣಗಳಲ್ಲಿ ಅತಿ ಏಕಾಗ್ರತೆಯ ಆಕ್ರಮಣಗಳು ಪ್ರಯತ್ನಿಸಲ್ಪಟ್ಟಿದ್ದರೂ ಇವು ಪಾರಾಗಿ ಉಳಿದಿವೆ.
6. ಬೈಬಲನ್ನು ಎಷ್ಟು ವ್ಯಾಪಕವಾಗಿ ಹಂಚಲಾಗಿದೆ?
6 ಅಲ್ಲದೆ, ಬೈಬಲು ಇತಿಹಾಸದಲ್ಲಿ ಅತಿ ವ್ಯಾಪಕವಾಗಿ ಎಷ್ಟೋ ಅಧಿಕ ಪ್ರಮಾಣದಲ್ಲಿ ಹಂಚಲ್ಪಟ್ಟಿರುವ ಪುಸ್ತಕ. ಸುಮಾರು 300 ಕೋಟಿ ಬೈಬಲುಗಳು ಅಥವಾ ಅದರ ಭಾಗಗಳು ಸುಮಾರು ಎರಡು ಸಾವಿರ ಭಾಷೆಗಳಲ್ಲಿ ಹಂಚಲ್ಪಟ್ಟಿವೆ. ಮಾನವ ಕುಟುಂಬದಲ್ಲಿ 98 ಪ್ರತಿಶತ ಜನರಿಗೆ ಅವರ ಸ್ವಂತ ಭಾಷೆಗಳಲ್ಲಿ ಬೈಬಲು ಲಭ್ಯವೆಂದು ಹೇಳಲಾಗುತ್ತದೆ. ಈ ಪ್ರಚಾರ ಸಂಖ್ಯೆಯ ಹತ್ತಿರಕ್ಕೆ ಇನ್ನಾವ ಪುಸ್ತಕವೂ ಬರುವುದಿಲ್ಲ.
7. ಬೈಬಲಿನ ನಿಷ್ಕೃಷ್ಟತೆಯ ಬಗ್ಗೆ ಏನು ಹೇಳಸಾಧ್ಯವಿದೆ?
7 ಇದಕ್ಕೆ ಕೂಡಿಸಿ, ಇನ್ನಾವ ಪುರಾತನ ಪುಸ್ತಕವೂ ನಿಷ್ಕೃಷ್ಟತೆಯಲ್ಲಿ ಬೈಬಲಿಗೆ ಸದೃಶವಾಗಿರುವುದಿಲ್ಲ. ವಿಜ್ಞಾನಿಗಳು, ಇತಿಹಾಸಗಾರರು, ಭೂಸಂಶೋಧನಗಾರರು, ಭೂಗೋಳಶಾಸ್ತ್ರಜ್ಞರು, ಭಾಷಾ ನಿಪುಣರು, ಮತ್ತು ಇತರರು ಬೈಬಲ್ ವೃತ್ತಾಂತಗಳನ್ನು ಎಡೆಬಿಡದೆ ಸಮರ್ಥಿಸುತ್ತಾರೆ.
ವೈಜ್ಞಾನಿಕ ನಿಷ್ಕೃಷ್ಟತೆ
8. ವಿಜ್ಞಾನದ ವಿಷಯಗಳಲ್ಲಿ ಬೈಬಲು ಎಷ್ಟು ನಿಷ್ಕೃಷ್ಟವಾಗಿದೆ?
8 ದೃಷ್ಟಾಂತಕ್ಕೆ, ಬೈಬಲನ್ನು ವಿಜ್ಞಾನದ ಪಠ್ಯಪುಸ್ತಕವಾಗಿ ಬರೆಯಲಿಲ್ಲವಾದರೂ, ವೈಜ್ಞಾನಿಕ ಸಂಗತಿಗಳೊಂದಿಗೆ ವ್ಯವಹರಿಸುವಾಗ ಅದು ನಿಜ ವಿಜ್ಞಾನದೊಂದಿಗೆ ಸಾಮರಸ್ಯದಿಂದಿದೆ. ಆದರೆ ಪವಿತ್ರವೆಂದೆಣಿಸಲ್ಪಡುವ ಇತರ ಪುರಾತನ ಪುಸ್ತಕಗಳಲ್ಲಿ ವೈಜ್ಞಾನಿಕ ಮಿಥ್ಯೆಗಳು, ಅನಿಷ್ಕೃಷ್ಟತೆಗಳು, ಮತ್ತು ಮುಚ್ಚುಮರೆಯಿಲ್ಲದ ಅಸತ್ಯಗಳು ಸೇರಿಕೊಂಡಿವೆ. ಬೈಬಲಿನ ವೈಜ್ಞಾನಿಕ ನಿಷ್ಕೃಷ್ಟತೆಗಳ ಅನೇಕ ಉದಾಹರಣೆಗಳಲ್ಲಿ ಕೇವಲ ನಾಲ್ಕನ್ನೇ ಗಮನಿಸಿರಿ:
9, 10. ತನ್ನ ಸಮಯದ ಅವೈಜ್ಞಾನಿಕ ವೀಕ್ಷಣಗಳನ್ನು ಪ್ರತಿಬಿಂಬಿಸುವ ಬದಲಾಗಿ, ಭೂಮಿಯ ಆಧಾರದ ಕುರಿತು ಬೈಬಲು ಏನು ಹೇಳಿತು?
9 ಭೂಮಿ ಬಾಹ್ಯಾಕಾಶದಲ್ಲಿ ಹಿಡಿಯಲ್ಪಟ್ಟಿರುವ ವಿಧ. ಪುರಾತನ ಕಾಲದಲ್ಲಿ ಬೈಬಲು ಬರೆಯಲ್ಪಡುತ್ತಿದ್ದಾಗ, ಭೂಮಿಯು ಬಾಹ್ಯಾಕಾಶದಲ್ಲಿ ಎತ್ತಿ ಹಿಡಿಯಲ್ಪಟ್ಟಿರುವ ವಿಧದ ಕುರಿತು ಹೆಚ್ಚು ಊಹಾಪೋಹಗಳಿದ್ದವು. ಒಂದು ದೊಡ್ಡ ಕಡಲಾಮೆಯ ಮೇಲೆ ನಿಂತಿದ್ದ ನಾಲ್ಕು ಆನೆಗಳ ಮೇಲೆ ಭೂಮಿಯು ಆಧಾರಿಸಲ್ಪಟ್ಟಿತ್ತೆಂದು ಕೆಲವರು ನಂಬಿದರು. ಸಾ.ಶ.ಪೂ. ನಾಲ್ಕನೆಯ ಶತಮಾನದ ಗ್ರೀಕ್ ತತ್ವಜ್ಞಾನಿ ಮತ್ತು ವಿಜ್ಞಾನಿಯಾಗಿದ್ದ ಅರಿಸ್ಟಾಟಲನು, ಭೂಮಿಯು ಶೂನ್ಯಾಕಾಶದಲ್ಲಿ ತೂಗುವುದು ಎಂದಿಗೂ ಸಾಧ್ಯವಿಲ್ಲದ ವಿಷಯವೆಂದು ಕಲಿಸಿದನು. ಬದಲಾಗಿ, ಆಕಾಶಸ್ಥ ಕಾಯಗಳು, ಒಂದು ಗೋಳವು ಇನ್ನೊಂದರೊಳಗೆ ನೆಲಸಿದ್ದ, ಘನವಾದ ಪಾರದರ್ಶಕ ಗೋಳಗಳ ಮೇಲ್ಮೈಗೆ ನಾಟಿಸಲ್ಪಟ್ಟಿದ್ದವೆಂದು ಅವನು ಕಲಿಸಿದನು. ಭೂಮಿಯು ಅತಿ ಒಳಗಿನ ಗೋಳದ ಮೇಲಿತ್ತು, ಮತ್ತು ಅತಿ ಹೊರಗಿನ ಮೈಯ ಗೋಳವು ನಕ್ಷತ್ರಗಳನ್ನು ಹಿಡಿದಿತ್ತು ಎಂದು ಊಹಿಸಲಾಗುತ್ತಿತ್ತು.
10 ಆದರೂ, ಅದರ ಬರೆವಣಿಗೆಯ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕಾಲ್ಪನಿಕ, ಅವೈಜ್ಞಾನಿಕ ವೀಕ್ಷಣಗಳನ್ನು ಪ್ರತಿಬಿಂಬಿಸುವ ಬದಲಾಗಿ ಬೈಬಲು (ಸುಮಾರು ಸಾ.ಶ.ಪೂ. 1473 ನೆಯ ವರ್ಷದಲ್ಲಿ) ಸರಳವಾಗಿ ಹೀಗೆಂದಿತು: “[ದೇವರು] ಭೂಮಿಯನ್ನು ಶೂನ್ಯದ ಮೇಲೆ ತೂಗಹಾಕಿದ್ದಾನೆ.” (ಯೋಬ 26:7, NW) ಮೂಲ ಹೀಬ್ರು ಭಾಷೆಯಲ್ಲಿ, ಇಲ್ಲಿ ಹೇಳಲ್ಪಟ್ಟಿರುವ “ಶೂನ್ಯ” ಎಂಬ ಪದಕ್ಕೆ “ಯಾವ ವಸ್ತುವೂ ಇಲ್ಲ” ಎಂಬ ಅರ್ಥವಿದ್ದು, ಇದು ಬೈಬಲಿನಲ್ಲಿ ಇಲ್ಲಿ ಒಂದು ಬಾರಿ ಮಾತ್ರ ಬರುತ್ತದೆ. ಅದು ನೀಡುವ ಶೂನ್ಯಾಕಾಶದಿಂದ ಆವೃತವಾಗಿರುವ ಭೂಮಿಯ ಚಿತ್ರವನ್ನು ವಿದ್ವಾಂಸರು, ಅದರ ಸಮಯಕ್ಕೆ ಒಂದು ಗಮನಾರ್ಹವಾದ ದೂರದೃಷ್ಟಿಯೆಂದು ಮಾನ್ಯ ಮಾಡುತ್ತಾರೆ. ತಿಯೊಲಾಜಿಕಲ್ ವರ್ಡ್ಬುಕ್ ಆಫ್ ದಿ ಓಲ್ಡ್ ಟೆಸ್ಟಮೆಂಟ್ ಹೇಳುವುದು: “ಯೋಬ 26:7 ಆಗಿನ ಜ್ಞಾತ ಲೋಕವನ್ನು ಆಕಾಶದಲ್ಲಿ ತೂಗಹಾಕಿದ್ದಾಗಿ ಗಮನಾರ್ಹವಾಗಿ ಚಿತ್ರಿಸಿ, ಹೀಗೆ ಭಾವೀ ವೈಜ್ಞಾನಿಕ ಕಂಡುಹಿಡಿತವನ್ನು ಪೂರ್ವ ನಿರೀಕ್ಷಣೆ ಮಾಡುತ್ತದೆ.”
11, 12. ಯೋಬ 26:7 ರ ಸತ್ಯವನ್ನು ಮಾನವರು ಯಾವಾಗ ಗ್ರಹಿಸತೊಡಗಿದರು?
11 ಬೈಬಲಿನ ಈ ನಿಷ್ಕೃಷ್ಟ ಹೇಳಿಕೆ ಅರಿಸ್ಟಾಟಲ್ಗಿಂತ 1,100 ವರ್ಷಗಳಿಗೂ ಹೆಚ್ಚು ಪೂರ್ವದ್ದು. ಆದರೂ, ಅರಿಸ್ಟಾಟಲ್ನ ವೀಕ್ಷಣಗಳು ವಾಸ್ತವವೆಂದು ಅವನ ಮರಣಾನಂತರ ಸುಮಾರು 2,000 ವರ್ಷಗಳ ವರೆಗೆ ಕಲಿಸಲ್ಪಟ್ಟಿತು! ಕೊನೆಗೆ, ಸಾ.ಶ. 1687 ರಲ್ಲಿ, ಸರ್ ಐಸಕ್ ನ್ಯೂಟನ್, ಭೂಮಿಯು ಇತರ ಆಕಾಶಸ್ಥ ಕಾಯಗಳ ಸಂಬಂಧವುಳ್ಳದ್ದಾಗಿ ಆಕಾಶದಲ್ಲಿ ಪರಸ್ಪರ ಆಕರ್ಷಣೆಯ ಮೂಲಕ, ಅಂದರೆ ಗುರುತ್ವಾಕರ್ಷಣದ ಮೂಲಕ, ಇಡಲ್ಪಟ್ಟಿದೆ ಎಂಬ ತಮ್ಮ ಕಂಡುಹಿಡಿತವನ್ನು ಪ್ರಕಟಪಡಿಸಿದರು. ಆದರೆ ಇದು, ಲಲಿತವಾದ ಸರಳತೆಯಿಂದ ಭೂಮಿಯು “ಶೂನ್ಯದ ಮೇಲೆ” ತೂಗಹಾಕಲ್ಪಟ್ಟಿದೆ ಎಂದು ಬೈಬಲು ಹೇಳಿ ಹತ್ತಿರ ಹತ್ತಿರ 3,200 ವರ್ಷಗಳು ಕಳೆದ ಬಳಿಕವೇ.
12 ಹೌದು, ಸುಮಾರು 3,500 ವರ್ಷಗಳ ಹಿಂದೆಯೇ, ಭೂಮಿಗೆ ಯಾವ ದೃಶ್ಯ ಆಧಾರವೂ ಇಲ್ಲವೆಂದು ಸರಿಯಾಗಿಯೇ ಬೈಬಲು ಗಮನಿಸಿತು. ಈ ನಿಜತ್ವವು ಹೆಚ್ಚು ಇತ್ತೀಚೆಗೆ ಗ್ರಹಿಸಲಾದ ಗುರುತ್ವಾಕರ್ಷಣೆ ಮತ್ತು ಚಲನೆ ಎಂಬ ನಿಯಮಗಳಿಗೆ ಹೊಂದಿಕೆಯಾಗಿದೆ. ಒಬ್ಬ ಪಂಡಿತರು ಹೇಳಿದ್ದು: “ಯೋಬನಿಗೆ ಈ ಸತ್ಯ ಗೊತ್ತಿದ್ದದ್ದು ಹೇಗೆ ಎಂಬುದು ಪವಿತ್ರ ಶಾಸ್ತ್ರಗಳ ಪ್ರೇರಣೆಯನ್ನು ಅಲ್ಲಗಳೆಯುವವರು ಸುಲಭವಾಗಿ ಪರಿಹರಿಸದ ಪ್ರಶ್ನೆಯಾಗಿದೆ.”
13. ಶತಮಾನಗಳಿಗೆ ಮೊದಲು ಜನರು ಭೂಮಿಯ ಆಕಾರವು ಹೇಗಿದೆಯೆಂದು ಭಾವಿಸಿದರು, ಆದರೆ ಯಾವುದು ಅವರ ಮನಸ್ಸನ್ನು ಬದಲಾಯಿಸಿತು?
13 ಭೂಮಿಯ ಆಕಾರ. ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಹೇಳಿದ್ದು: “ಮನುಷ್ಯರಿಗೆ ಭೂಮಿಯ ವಿಷಯದಲ್ಲಿ ಅತಿ ಆದಿಯಲ್ಲಿದ್ದ ಜ್ಞಾತ ಆಕಾರವು, ಅದು ವಿಶ್ವದ ಮಧ್ಯದಲ್ಲಿರುವ ಒಂದು ಚಪ್ಪಟೆಯಾದ, ಗಡುಸಾದ ವೇದಿಕೆಯಾಗಿದೆ ಎಂಬುದೇ. . . . ಒಂದು ಗೋಳಾಕಾರದ ಭೂಮಿಯ ಕಲ್ಪನೆಯು ಪುನರುಜ್ಜೀವನದ ಕಾಲದ ತನಕ ವ್ಯಾಪಕವಾಗಿ ಅಂಗೀಕರಿಸಲ್ಪಡಲಿಲ್ಲ.” ಕೆಲವು ಆದಿಕಾಲದ ನಾವಿಕರು ತಾವು ಚಪ್ಪಟೆಯಾದ ಭೂಮಿಯ ಅಂಚಿನಿಂದ ನಾವೆಯೊಂದಿಗೆ ಬಿದ್ದು ಹೋದೇವೆಂದೂ ಸಹ ಭಯಪಟ್ಟರು. ಆದರೆ ಆ ಬಳಿಕ ದಿಕ್ಸೂಚಿ ಮತ್ತು ಇತರ ಅಭಿವೃದ್ಧಿಗಳು ದೀರ್ಘಕಾಲದ ಸಾಗರಯಾನಗಳನ್ನು ಸಾಧ್ಯ ಮಾಡಿದವು. ಇನ್ನೊಂದು ವಿಶ್ವಕೋಶ ವಿವರಿಸುವುದು: ಈ “ಕಂಡುಹಿಡಿತದ ಸಾಗರಯಾನಗಳು, ಲೋಕವು ಗೋಳಾಕಾರದ್ದಾಗಿದೆ, ಅಧಿಕಾಂಶ ಜನರು ನಂಬಿದ್ದಂತೆ ಚಪ್ಪಟೆಯಲ್ಲ ಎಂದು ತೋರಿಸಿದವು.”
14. ಭೂಮಿಯ ಆಕಾರವನ್ನು ಬೈಬಲು ಹೇಗೆ ವರ್ಣಿಸಿತು, ಮತ್ತು ಯಾವಾಗ?
14 ಆದರೂ, ಇಂತಹ ಸಮುದ್ರಯಾನಗಳಿಗಿಂತ ಎಷ್ಟೋ ಹಿಂದೆ, ಸುಮಾರು 2,700 ವರ್ಷಗಳಷ್ಟು ಹಿಂದೆ ಬೈಬಲು ಹೀಗೆ ಹೇಳಿತು: “ಭೂಮಿಯ ವೃತ್ತ ದ ಮೇಲೆ ವಾಸಿಸುವಾತನೊಬ್ಬನು ಇದ್ದಾನೆ.” (ಯೆಶಾಯ 40:22, NW) ಇಲ್ಲಿ “ವೃತ್ತ” ವೆಂದು ಭಾಷಾಂತರಿಸಲಾಗಿರುವ ಹೀಬ್ರು ಪದಕ್ಕೆ, ವಿವಿಧ ಪ್ರಮಾಣ ಗ್ರಂಥಗಳು ಗಮನಿಸುವಂತೆ, “ಗೋಳ” ವೆಂಬ ಅರ್ಥವೂ ಇರಸಾಧ್ಯವಿದೆ. ಇತರ ಬೈಬಲ್ ಭಾಷಾಂತರಗಳು ಈ ಕಾರಣದಿಂದ ಹೀಗೆನ್ನುತ್ತವೆ: “ಭೂಮಿಯ ಗೋಳ” (ಡೂಏ ವರ್ಷನ್) ಮತ್ತು, “ದುಂಡಗಾಗಿರುವ ಭೂಮಿ”—ಮಾಫಟ್.
15. ಭೂಮಿಯ ಕುರಿತ ಅವೈಜ್ಞಾನಿಕ ವೀಕ್ಷಣಗಳಿಂದ ಬೈಬಲು ಏಕೆ ಪ್ರಭಾವಿತವಾಗಲಿಲ್ಲ?
15 ಹೀಗೆ, ಭೂಮಿಯ ಆಧಾರ ಮತ್ತು ಆಕಾರದ ಸಂಬಂಧದಲ್ಲಿ ಆ ಸಮಯದಲ್ಲಿ ಪ್ರಚಲಿತವಾಗಿದ್ದ ಅವೈಜ್ಞಾನಿಕ ವೀಕ್ಷಣಗಳಿಂದ ಬೈಬಲು ಪ್ರಭಾವಿತವಾಗಲಿಲ್ಲ. ಇದಕ್ಕೆ ಕಾರಣವು ಸರಳ: ಬೈಬಲಿನ ಗ್ರಂಥಕರ್ತನು ವಿಶ್ವದ ಕರ್ತನು ಆಗಿದ್ದಾನೆ. ಆತನು ಭೂಮಿಯನ್ನು ಸೃಷ್ಟಿಸಿದನು, ಆದುದರಿಂದ ಅದು ಯಾವುದರ ಮೇಲೆ ತೂಗಿದೆ, ಮತ್ತು ಅದರ ಆಕಾರವೇನೆಂದು ಆತನಿಗೆ ಗೊತ್ತಿರಬೇಕು. ಈ ಕಾರಣದಿಂದ, ಆತನು ಬೈಬಲನ್ನು ಪ್ರೇರಿಸಿದಾಗ, ಅವೈಜ್ಞಾನಿಕ ವೀಕ್ಷಣಗಳು—ಆ ಸಮಯದಲ್ಲಿ ಇತರರಿಂದ ಅವೆಷ್ಟು ನಂಬಲ್ಪಟ್ಟಿದ್ದರೂ—ಅದರಲ್ಲಿ ಸಂಯೋಜಿಸಲ್ಪಡದಂತೆ ನೋಡಿಕೊಂಡನು.
16. ಜೀವಿಸುವ ವಸ್ತುಗಳ ಸಂಯೋಜನೆಯು ಬೈಬಲಿನ ಹೇಳಿಕೆಗೆ ಹೇಗೆ ಸರಿಬೀಳುತ್ತದೆ?
16 ಜೀವಿಸುವ ವಸ್ತುಗಳ ಸಂಯೋಜನೆ. “ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ” ದನು, ಎಂದು ಆದಿಕಾಂಡ 2:7 ಹೇಳುತ್ತದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಜೀವಿಸುವ ವಸ್ತುಗಳನ್ನು ರಚಿಸಿರುವ ಸಕಲ ರಾಸಾಯನಿಕ ಘಟಕಾಂಶಗಳು ಜೀವಿಸದಿರುವ ಪದಾರ್ಥದಲ್ಲಿಯೂ ಇವೆ.” ಹೀಗೆ ಮನುಷ್ಯನನ್ನು ಸೇರಿಸಿ, ಎಲ್ಲ ಜೀವಿಸುವ ಶರೀರಿಗಳನ್ನು ರಚಿಸುವ ಮೂಲ ರಸಾಯನಗಳು ಸಹ ಭೂಮಿಯಲ್ಲೀ ದೊರೆಯುತ್ತವೆ. ಮನುಷ್ಯರನ್ನು ಮತ್ತು ಬೇರೆ ಎಲ್ಲ ಜೀವಿಸುವ ಪ್ರಾಣಿಗಳನ್ನು ಸೃಷ್ಟಿಸುವುದರಲ್ಲಿ ದೇವರು ಬಳಸಿದ ಪದಾರ್ಥವನ್ನು ಗುರುತಿಸುವ ಬೈಬಲಿನ ಹೇಳಿಕೆಯೊಂದಿಗೆ ಇದು ಹೊಂದಿಕೆಯಲ್ಲಿದೆ.
17. ಜೀವಿಸುವ ವಸ್ತುಗಳು ಹೇಗೆ ಅಸ್ತಿತ್ವಕ್ಕೆ ಬಂದವೆಂಬ ವಿಷಯದ ಸತ್ಯವೇನು?
17 “ಅವುಗಳ ಜಾತಿಗನುಸಾರ.” ದೇವರು ಪ್ರಥಮ ಮಾನವ ಜೊತೆಯನ್ನು ಸೃಷ್ಟಿಸಿದನೆಂದೂ ಮತ್ತು ಅವರಿಂದ ಇತರ ಎಲ್ಲ ಮಾನವರು ಅನುವಂಶಿಕವಾಗಿ ಬಂದರೆಂದೂ ಬೈಬಲು ಹೇಳುತ್ತದೆ. (ಆದಿಕಾಂಡ 1:26-28; 3:20) ಮೀನುಗಳು, ಪಕ್ಷಿಗಳು, ಮತ್ತು ಸಸ್ತನಿ ಪ್ರಾಣಿಗಳಂತಹ ಜೀವಿಸುವ ಇತರ ಪ್ರಾಣಿಗಳೂ ಹೀಗೆಯೇ “ಅವುಗಳ ಜಾತಿಗನುಸಾರ” ಬಂದವೆಂದು ಅದು ಹೇಳುತ್ತದೆ. (ಆದಿಕಾಂಡ 1:11, 12, 21, 24, 25) ನೈಸರ್ಗಿಕ ಸೃಷ್ಟಿಯಲ್ಲಿಯೂ ವಿಜ್ಞಾನಿಗಳು ಇದನ್ನೇ ಅಂದರೆ ಪ್ರತಿಯೊಂದು ಜೀವಿಸುವ ಪ್ರಾಣಿ ಅದೇ ಜಾತಿಗೆ ಹುಟ್ಟುಕೊಟ್ಟ ಪ್ರಾಣಿಯಿಂದ ಬರುತ್ತದೆಂದು ಕಂಡುಕೊಂಡಿದ್ದಾರೆ. ಇದಕ್ಕೆ ಅಪವಾದವೇ ಇಲ್ಲ. ಈ ವಿಷಯದಲ್ಲಿ ಭೌತ ವಿಜ್ಞಾನಿ ರೇಮೋ ಅವಲೋಕಿಸುವುದು: “ಜೀವವು ಜೀವವನ್ನುಂಟುಮಾಡುತ್ತದೆ; ಇದು ಯಾವಾಗಲೂ ಪ್ರತಿಯೊಂದು ಜೀವಕಣದಲ್ಲಿಯೂ ಸಂಭವಿಸುತ್ತದೆ. ಆದರೆ ನಿರ್ಜೀವವು ಜೀವವನ್ನು ಹೇಗೆ ಮಾಡಿತು? ಇದು ಜೀವ ವಿಜ್ಞಾನದ ಅತಿ ದೊಡ್ಡ ಉತ್ತರಿಸಲ್ಪಡದಿರುವ ಪ್ರಶ್ನೆಗಳಲ್ಲಿ ಒಂದು, ಮತ್ತು ಇಷ್ಟರ ವರೆಗೆ, ವಿಜ್ಞಾನಿಗಳು ಗೊತ್ತುಗುರಿಯಿಲ್ಲದ ಊಹೆಗಳಿಗಿಂತ ತುಸು ಹೆಚ್ಚಿನದನ್ನು ಮಾತ್ರ ಕೊಡಬಲ್ಲರು. ನಿರ್ಜೀವ ಪದಾರ್ಥವು ಹೇಗೋ ಸಜೀವ ರೀತಿಯಲ್ಲಿ ಸಂಘಟಿಸಿಕೊಳ್ಳಲು ಶಕ್ತವಾಯಿತು. . . . ಆದಿಕಾಂಡದ ಲೇಖಕನು ಅದನ್ನು ಹೇಗೋ ಸರಿಯಾಗಿಯೇ ತಿಳಿಯಪಡಿಸಿದಿರ್ದಬಹುದು.”
ಐತಿಹಾಸಿಕ ನಿಷ್ಕೃಷ್ಟತೆ
18. ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆಯ ವಿಷಯದಲ್ಲಿ ಒಬ್ಬ ನ್ಯಾಯವಾದಿ ಏನು ಹೇಳುತ್ತಾನೆ?
18 ಅಸ್ತಿತ್ವದಲ್ಲಿರುವ ಯಾವುದೇ ಪುಸ್ತಕಗಳಲ್ಲಿ ಅತಿ ನಿಷ್ಕೃಷ್ಟವಾದ ಪುರಾತನ ಇತಿಹಾಸವು ಬೈಬಲಿನಲ್ಲಿದೆ. ಎ ಲಾಯರ್ ಎಕ್ಸ್ಯಾಮಿನ್ಸ್ ದ ಬೈಬಲ್ ಎಂಬ ಪುಸ್ತಕವು ಅದರ ಐತಿಹಾಸಿಕ ನಿಷ್ಕೃಷ್ಟತೆಯನ್ನು ಈ ವಿಧದಲ್ಲಿ ಎತ್ತಿ ತೋರಿಸುತ್ತದೆ: “ಕಾದಂಬರಿಗಳು, ದಂತ ಕಥೆಗಳು ಮತ್ತು ಸುಳ್ಳು ಪುರಾವೆ, ಹೇಳಲ್ಪಟ್ಟಿರುವ ಘಟನೆಗಳನ್ನು ಯಾವುದೋ ದೂರ ಸ್ಥಳದಲ್ಲಿ ಮತ್ತು ಯಾವುದೋ ಅನಿಶ್ಚಿತ ಸಮಯದಲ್ಲಿ ಇಡಲು ಜಾಗರೂಕತೆ ವಹಿಸುವಾಗ ಮತ್ತು ಹೀಗೆ, ಒಳ್ಳೆಯ ಪ್ರತಿವಾದದ ಕುರಿತು, ‘ಪ್ರಕಟನೆಯು ಸಮಯವನ್ನೂ ಸ್ಥಳವನ್ನೂ ಕೊಡಬೇಕು’ ಎಂದು ನ್ಯಾಯವಾದಿಗಳಾದ ನಾವು ಕಲಿತಿರುವ ಪ್ರಥಮ ನಿಯಮಗಳನ್ನು ಉಲ್ಲಂಘಿಸುವಾಗ, ಬೈಬಲಿನ ವೃತ್ತಾಂತಗಳು ಅತ್ಯಂತ ನಿಷ್ಕೃಷ್ಟತೆಯಲ್ಲಿ ಹೇಳಲ್ಪಟ್ಟಿರುವ ವಿಷಯಗಳ ತಾರೀಖು ಮತ್ತು ಸ್ಥಳವನ್ನು ನಮಗೆ ಕೊಡುತ್ತವೆ.”
19. ಬೈಬಲಿನ ಐತಿಹಾಸಿಕ ವಿವರಣೆಗಳ ಬಗ್ಗೆ ಒಂದು ಪ್ರಮಾಣ ಗ್ರಂಥ ಹೇಗೆ ಮಾತಾಡುತ್ತದೆ?
19 ದ ನ್ಯೂ ಬೈಬಲ್ ಡಿಕ್ಷನರಿ ಹೇಳುವುದು: “[ಅಪೊಸ್ತಲರ ಕೃತ್ಯಗಳ ಲೇಖಕನು] ತನ್ನ ವೃತ್ತಾಂತವನ್ನು ಸಮಕಾಲೀನ ಇತಿಹಾಸದ ಚೌಕಟ್ಟಿನಲ್ಲಿ ಇಡುತ್ತಾನೆ; ಅವನ ಪುಟಗಳಲ್ಲಿ ನಗರದ ನ್ಯಾಯಾಧಿಕಾರಿಗಳು, ಪ್ರಾಂತಾಧಿಪತಿಗಳು, ಆಶ್ರಿತ ರಾಜರು, ಮುಂತಾದವರ ಬಗೆಗೆ ತುಂಬ ಉಲ್ಲೇಖಗಳಿವೆ. ಮತ್ತು ಈ ಉಲ್ಲೇಖಗಳು ಹೇಳಲ್ಪಟ್ಟಿರುವ ಸ್ಥಳ ಮತ್ತು ಸಮಯದ ಸಂಬಂಧದಲ್ಲಿ ನಿಷ್ಕೃಷ್ಟವೆಂದು ಪದೇ ಪದೇ ರುಜುವಾಗುತ್ತವೆ.”
20, 21. ಬೈಬಲಿನ ಇತಿಹಾಸದ ಕುರಿತು ಒಬ್ಬ ಬೈಬಲ್ ವಿದ್ವಾಂಸರು ಏನು ಹೇಳುತ್ತಾರೆ?
20 ದಿ ಯೂನಿಯನ್ ಬೈಬಲ್ ಕಂಪ್ಯಾನಿಯನ್ ನಲ್ಲಿ ಬರೆಯುತ್ತಾ ಎಸ್. ಆಸ್ಟಿನ್ ಆ್ಯಲಿಬೋನ್ ಹೇಳುವುದು: “ಸರ್ ಐಸಕ್ ನ್ಯೂಟನ್ . . . ಪುರಾತನ ಬರಹಗಳ ವಿಮರ್ಶಕರೋಪಾದಿ ಶ್ರೇಷ್ಠರಾಗಿದ್ದರು, ಮತ್ತು ಬಹು ಜಾಗರೂಕತೆಯಿಂದ ಪವಿತ್ರ ಶಾಸ್ತ್ರಗಳನ್ನು ಪರೀಕ್ಷಿಸಿದರು. ಈ ವಿಷಯದಲ್ಲಿ ಅವರ ತೀರ್ಪು ಏನು? ಅವರು ಹೇಳುವುದು, ‘ನನಗೆ ಇನ್ನಾವ ಪ್ರಾಪಂಚಿಕ [ಐಹಿಕ] ಇತಿಹಾಸಕ್ಕಿಂತಲೂ ಹೆಚ್ಚಾಗಿ ಹೊಸ ಒಡಂಬಡಿಕೆಯಲ್ಲಿ ವಿಶ್ವಾಸಾರ್ಹತೆಯ ಹೆಚ್ಚು ನಿಶ್ಚಿತ ಗುರುತುಗಳು ಕಂಡುಬರುತ್ತವೆ.’ ಸುವಾರ್ತೆಗಳಲ್ಲಿ ಹೇಳಿರುವಂತೆ, ಯೇಸು ಕ್ರಿಸ್ತನು ಕಲ್ವೇರಿಯಲ್ಲಿ ಸತ್ತನು ಎಂಬುದಕ್ಕೆ ಜೂಲಿಯಸ್ ಸೀಸರನು ಕ್ಯಾಪಿಟಲ್ ಶಾಸನಮಂದಿರದಲ್ಲಿ ಸತ್ತನು ಎಂಬುದಕ್ಕಿಂತ ಹೆಚ್ಚು ಸಾಕ್ಷ್ಯವಿದೆ ಎಂದು ಡಾ. ಜಾನ್ಸನ್ ಹೇಳುತ್ತಾರೆ. ನಮಗೆ ಎಷ್ಟೋ ಹೆಚ್ಚು ಸಾಕ್ಷ್ಯವಿರುವುದು ನಿಶ್ಚಯ.”
21 ಇದೇ ಮೂಲ ಕೂಡಿಸುವುದು: “ಸುವಾರ್ತೆಗಳ ಇತಿಹಾಸವನ್ನು ಸಂಶಯಿಸುತ್ತೇನೆಂದು ಹೇಳುವ ಯಾವನೊಡನೆಯೂ, ಸೀಸರನು ಕ್ಯಾಪಿಟಲ್ನಲ್ಲಿ ಸತ್ತನೆಂಬುದಕ್ಕೆ ಯಾ, III ನೆಯ ಪೋಪ್ ಲಿಯೊ, 800 ರಲ್ಲಿ ಸಮ್ರಾಟ ಷಾರ್ಲ್ಮೇನನನ್ನು ಪಶ್ಚಿಮ ರೋಮ್ ಸಾಮ್ರಾಜ್ಯದ ಸಮ್ರಾಟನಾಗಿ ಅಭಿಷೇಕ ಮಾಡಿದನೆಂದು ನಂಬಲು ಯಾವ ಕಾರಣವಿದೆಯೆಂದು ಕೇಳಿರಿ. . . . ಇಂಗ್ಲೆಂಡಿನ I ನೆಯ ಚಾರ್ಲ್ಸ್ ಎಂಬ ಮನುಷ್ಯನು ಎಂದೋ ಜೀವಿಸಿದ್ದನು ಮತ್ತು ಅವನಿಗೆ ಶಿರಚ್ಛೇದನವಾಯಿತು, ಮತ್ತು ಅವನ ಬದಲಿಗೆ ಆಲಿವರ್ ಕ್ರಾಮೆಲ್ವ್ ಆಳುವವನಾದನು ಎಂಬುದು ನಿನಗೆ ಹೇಗೆ ಗೊತ್ತು ಎಂದು ಅವನನ್ನು ಕೇಳಿರಿ. . . . ಗುರುತ್ವಾಕರ್ಷಣದ ನಿಯಮದ ಕಂಡುಹಿಡಿತಕ್ಕೆ ಪ್ರಶಸ್ತಿಯು ಸರ್ ಐಸಕ್ ನ್ಯೂಟನ್ಗೆ ಕೊಡಲಾಗುತ್ತದೆ . . . ಈ ಪುರುಷರ ಕುರಿತು ಈಗ ತಾನೆ ಮಾಡಲ್ಪಟ್ಟ ಪ್ರತಿಪಾದನೆಗಳನ್ನೆಲ್ಲ ನಾವು ನಂಬುತ್ತೇವೆ; ಅವುಗಳ ಸತ್ಯತೆಯ ಐತಿಹಾಸಿಕ ಪುರಾವೆ ನಮಗಿರುವುದರಿಂದಲೇ ನಾವು ನಂಬುತ್ತೇವೆ. . . . ಇಲ್ಲಿ ಕೊಡಲ್ಪಟ್ಟಂತಹ ರೀತಿಯ ರುಜುವಾತನ್ನು ಮುಂದಿಟ್ಟ ಮೇಲೆಯೂ ಯಾವನಾದರೂ ಈ ಪ್ರತಿಪಾದನೆಗಳನ್ನು ನಂಬಲು ನಿರಾಕರಿಸುವಲ್ಲಿ, ಅವರು ಮೂಢತೆಯ ವಕ್ರರೆಂದು ಯಾ ಆಶಾರಹಿತರಾದ ಅಜ್ಞಾನಿಗಳೆಂದು ನಾವು ಅವರನ್ನು ತ್ಯಜಿಸುತ್ತೇವೆ.”
22. ಬೈಬಲಿನ ವಿಶ್ವಾಸಾರ್ಹತೆಯನ್ನು ಅಂಗೀಕರಿಸಲು ಕೆಲವರು ನಿರಾಕರಿಸುವುದೇಕೆ?
22 ಬಳಿಕ ಈ ಮೂಲವು ಮುಕ್ತಾಯಗೊಳಿಸುವುದು: “ಹಾಗಾದರೆ, ಪವಿತ್ರ ಶಾಸ್ತ್ರಗಳ ವಿಶ್ವಾಸಾರ್ಹತೆಯ ಕುರಿತು ಈಗ ಮುಂದಿಟ್ಟ ಹೇರಳವಾದ ಪುರಾವೆಯ ಎದುರಿನಲ್ಲಿಯೂ, ತಮಗೆ ಮಂದಟ್ಟಾಗಿರುವುದಿಲ್ಲವೆಂದು ಹೇಳುವವರ ವಿಷಯ ನಾವೇನು ಹೇಳೋಣ? . . . ದೋಷವಿರುವುದು ಹೃದಯದಲ್ಲಿ, ತಲೆಯಲ್ಲಲ್ಲ ಎಂದು ತೀರ್ಮಾನಿಸಲು, ಅವರ ಹೆಮ್ಮೆಯನ್ನು ತಗ್ಗಿಸುವ ಮತ್ತು ಅವರು ಪ್ರತ್ಯೇಕ ರೀತಿಯ ಜೀವಿತವನ್ನು ನಡೆಸುವಂತೆ ಅವರನ್ನು ಬಲಾತ್ಕರಿಸುವ ವಿಚಾರವನ್ನು ಅವರು ನಂಬಲಿಚ್ಫಿಸುವುದಿಲ್ಲ ಎಂದು ತೀರ್ಮಾನಿಸಲು ನಮಗೆ ನಿಶ್ಚಯವಾಗಿಯೂ ಕಾರಣವಿದೆ.”
ಆಂತರಿಕ ಹೊಂದಿಕೆ ಮತ್ತು ಯಥಾರ್ಥತೆ
23, 24. ಬೈಬಲಿನ ಆಂತರಿಕ ಹೊಂದಿಕೆ ಅಷ್ಟೊಂದು ಅಸಾಮಾನ್ಯವೇಕೆ?
23 ಅನೇಕ ವಿವಿಧ ಲೇಖಕರು ಬರೆಯಲು ಸಹಾಯ ಮಾಡಿರುವ ಒಂದು ಗ್ರಂಥವು ರೋಮನ್ ಸಾಮ್ರಾಜ್ಯದ ಸಮಯದಲ್ಲಿ ಬರೆಯಲ್ಪಡಲಾರಂಭವಾಗುತ್ತದೆ, ಮಧ್ಯ ಯುಗಗಳಲ್ಲಿ ಅದನ್ನು ಮುಂದುವರಿಸಲಾಗುತ್ತದೆ ಮತ್ತು ಈ ಇಪ್ಪತ್ತನೆಯ ಶತಮಾನದಲ್ಲಿ ಅದನ್ನು ಮುಗಿಸಲಾಗುತ್ತದೆ ಎಂದು ಭಾವಿಸಿರಿ. ಲೇಖಕರು ಸೈನಿಕ, ರಾಜ, ಯಾಜಕ, ಬೆಸ್ತ, ಗೊಲ್ಲ, ಮತ್ತು ವೈದ್ಯ ವೃತ್ತಿಯಷ್ಟು ವಿವಿಧ ವೃತ್ತಿಯವರಾಗಿರುವಲ್ಲಿ, ನೀವು ಯಾವ ಫಲಿತಾಂಶವನ್ನು ನಿರೀಕ್ಷಿಸುವಿರಿ? ಅದು ಸಾಮರಸ್ಯವುಳ್ಳದ್ದೂ ಸಮನಿತ್ವವೂ ಆಗಿರುವುದೆಂದು ನೀವು ನಿರೀಕ್ಷಿಸುವಿರೊ? ‘ಪ್ರಯಾಸದಿಂದ!’ ಎಂದು ನೀವು ಹೇಳೀರಿ. ಒಳ್ಳೆಯದು, ಬೈಬಲನ್ನು ಈ ಸನ್ನಿವೇಶಗಳಲ್ಲಿ ಬರೆಯಲಾಯಿತು. ಆದರೂ, ಅದರ ಸಂಪೂರ್ಣತೆಯಲ್ಲಿ ಅದು ಹೊಂದಿಕೆಯಲ್ಲಿದೆ, ಅದರ ಸರ್ವಸಾಮಾನ್ಯವಾದ ಚಿಂತನಾರೂಪದಲ್ಲಿ ಮಾತ್ರವಲ್ಲ, ಅತಿ ಸೂಕ್ಷ್ಮ ವಿವರಗಳಲ್ಲಿ ಕೂಡ.
24 ಬೈಬಲು, 1,600 ವರ್ಷಗಳ ಅವಧಿಯಲ್ಲಿ, ಸುಮಾರು 40 ವಿವಿಧ ಲೇಖಕರು, ಸಾ.ಶ.ಪೂ. 1513 ರಲ್ಲಿ ಆರಂಭಿಸಿ, ಸಾ.ಶ. 98 ರಲ್ಲಿ ಬರೆದು ಮುಗಿಸಿದ 66 ಪುಸ್ತಕಗಳ ಒಂದು ಸಂಗ್ರಹವಾಗಿದೆ. ಲೇಖಕರು ವಿವಿಧ ಸಾಮಾಜಿಕ ಸ್ಥಾನ ಮತ್ತು ಕಸಬುಗಳಿಂದ ಬಂದರು, ಮತ್ತು ಅನೇಕರಿಗೆ ಇತರರೊಂದಿಗೆ ಯಾವ ಸಂಪರ್ಕವೂ ಇರಲಿಲ್ಲ. ಆದರೂ ಇದರ ಫಲಿತಾಂಶವಾಗಿ ಬಂದ ಗ್ರಂಥವು ಒಂದು ಪ್ರಧಾನ, ಅಂಟಿಕೆಯ ಮುಖ್ಯ ವಿಷಯವನ್ನು, ಒಂದೇ ಮನಸ್ಸು ಉತ್ಪನ್ನ ಮಾಡಿದೆಯೋ ಎಂಬಂತೆ ಅನುಸರಿಸುತ್ತದೆ. ಮತ್ತು ಕೆಲವರ ನಂಬಿಕೆಗೆ ವ್ಯತಿರಿಕ್ತವಾಗಿ, ಬೈಬಲು ಪಾಶ್ಚಾತ್ಯ ನಾಗರಿಕತೆಯ ಉತ್ಪನ್ನವಾಗಿರದೆ ಪೌರ್ವಾತ್ಯರು ಬರೆದದ್ದಾಗಿದೆ.
25. ಬೈಬಲಿನ ಪ್ರಾಮಾಣಿಕತೆ ಮತ್ತು ಯಥಾರ್ಥತೆಯು ಬೈಬಲ್ ಲೇಖಕರ ಯಾವ ವಾದವನ್ನು ಸಮರ್ಥಿಸುತ್ತವೆ?
25 ಪುರಾತನ ಲೇಖಕರಲ್ಲಿ ಬಹುಸಂಖ್ಯಾಕರು ತಮ್ಮ ಸಾಫಲ್ಯ ಮತ್ತು ಸದ್ಗುಣಗಳ ಕುರಿತು ಮಾತ್ರ ಬರೆದರೂ, ಬೈಬಲ್ ಲೇಖಕರು ತಮ್ಮ ಸ್ವಂತ ದೋಷಗಳನ್ನು ಹಾಗೂ ಅವರ ರಾಜರುಗಳ ಮತ್ತು ನಾಯಕರುಗಳ ನ್ಯೂನತೆಗಳನ್ನು ಬಹಿರಂಗವಾಗಿ ಒಪ್ಪಿಕೊಂಡರು. ಅರಣ್ಯಕಾಂಡ 20:1-13 ಮತ್ತು ಧರ್ಮೋಪದೇಶಕಾಂಡ 32:50-52 ಮೋಶೆಯ ಕುಂದುಗಳನ್ನು ದಾಖಲೆ ಮಾಡುತ್ತವೆ, ಮತ್ತು ಆ ಪುಸ್ತಕಗಳನ್ನು ಅವನೇ ಬರೆದನು. ಯೋನ 1:1-3 ಮತ್ತು 4:1 ಯೋನನ ದೌರ್ಬಲ್ಯಗಳನ್ನು ದಾಖಲೆ ಮಾಡುತ್ತವೆ ಮತ್ತು ಅವನೇ ಆ ವೃತ್ತಾಂತಗಳನ್ನು ಬರೆದನು. ಮತ್ತಾಯ 17:18-20; 18:1-6; 20:20-28; ಮತ್ತು 26:56 ರಲ್ಲಿ ಯೇಸುವಿನ ಶಿಷ್ಯರು ತೋರಿಸಿದ ನ್ಯೂನ ಗುಣಗಳು ದಾಖಲೆಯಾಗಿವೆ. ಹೀಗೆ, ಬೈಬಲ್ ಲೇಖಕರ ಪ್ರಾಮಾಣಿಕತೆ ಮತ್ತು ಯಥಾರ್ಥತೆ, ಅದು ದೇವರಿಂದ ಪ್ರೇರಿತವಾದುದೆಂಬ ಅವರ ವಾದಕ್ಕೆ ಆಧಾರವನ್ನು ಒದಗಿಸುತ್ತದೆ.
ಅದರ ಅತ್ಯಂತ ವಿಶಿಷ್ಟ ವೈಶಿಷ್ಟ್ಯ
26, 27. ವೈಜ್ಞಾನಿಕ ಮತ್ತು ಇತರ ವಿಷಯಗಳಲ್ಲಿ ಬೈಬಲು ಅಷ್ಟು ನಿಷ್ಕೃಷ್ಟವೇಕೆ?
26 ವೈಜ್ಞಾನಿಕ, ಐತಿಹಾಸಿಕ ಮತ್ತು ಇತರ ವಿಷಯಗಳಲ್ಲಿ ಅದು ಏಕೆ ಅಷ್ಟು ನಿಷ್ಕೃಷ್ಟವಾಗಿದೆ ಮತ್ತು ಹೊಂದಿಕೆಯುಳ್ಳದ್ದೂ ಪ್ರಾಮಾಣಿಕವೂ ಆಗಿದೆಯೆಂದು ಬೈಬಲು ತಾನೇ ತಿಳಿಯಪಡಿಸುತ್ತದೆ. ಪರಮಾತ್ಮನಾದ ಸರ್ವಶಕ್ತ ದೇವರು, ವಿಶ್ವಕರ್ತೃವಾದ ಸೃಷ್ಟಿಕರ್ತನು ಬೈಬಲಿನ ಗ್ರಂಥಕರ್ತನೆಂದು ಅದು ತೋರಿಸುತ್ತದೆ. ಆತನು ಮಾನವ ಬೈಬಲ್ ಲೇಖಕರನ್ನು ಕೇವಲ ತನ್ನ ಲಿಪಿಕಾರರನ್ನಾಗಿ, ತನ್ನ ಬಲಾಢ್ಯವಾದ ಕ್ರಿಯಾಶೀಲ ಶಕ್ತಿಯಿಂದ ಅವರನ್ನು ಪ್ರಚೋದಿಸಿ, ತಾನು ಪ್ರೇರಿಸಿದ್ದನ್ನು ಅವರು ಬರೆಯುವಂತೆ ಮಾಡಿದನು.
27 ಅಪೊಸ್ತಲ ಪೌಲನು ಬೈಬಲಿನಲ್ಲಿ ಹೇಳುವುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು.” ಮತ್ತು ಅಪೊಸ್ತಲ ಪೌಲನು ಹೀಗೆಯೂ ಹೇಳಿದನು: “ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು” ಅಂಗೀಕರಿಸಿದ್ದೀರಿ.—2 ತಿಮೊಥೆಯ 3:16, 17; 1 ಥೆಸಲೊನೀಕ 2:13.
28. ಹಾಗಾದರೆ, ಬೈಬಲು ಎಲ್ಲಿಂದ ಬರುತ್ತದೆ?
28 ಹೀಗೆ, ಬೈಬಲು ಒಬ್ಬನೇ ಗ್ರಂಥಕರ್ತನ—ದೇವರ—ಮನಸ್ಸಿನಿಂದ ಬರುತ್ತದೆ. ಮತ್ತು ಆತನಲ್ಲಿರುವ ಭಯಭಕ್ತಿ ಹುಟ್ಟಿಸುವ ಶಕ್ತಿಯಿಂದಾಗಿ, ಬರೆಯಲ್ಪಟ್ಟಿದ್ದ ವಿಷಯದ ಸಮಗ್ರತೆಯು ನಮ್ಮ ದಿನಗಳ ವರೆಗೆ ಸುರಕ್ಷಿತವಾಗಿ ಉಳಿಯುವಂತೆ ಖಚಿತ ಮಾಡುವುದು ಆತನಿಗೆ ಒಂದು ಸರಳವಾದ ವಿಷಯವಾಗಿತ್ತು. ಇದರ ಕುರಿತು ಬೈಬಲ್ ಹಸ್ತಪ್ರತಿಗಳ ಪ್ರಮುಖ ಪರಿಣತರಾದ ಸರ್ ಫ್ರೆಡ್ರಿಕ್ ಕೆನ್ಯನ್ 1940 ರಲ್ಲಿ ಹೇಳಿದ್ದು: “ಶಾಸ್ತ್ರಗ್ರಂಥವು ವಾಸ್ತವವಾಗಿ ಬರೆಯಲ್ಪಟ್ಟಿದ್ದಂತೆಯೇ ನಮಗೆ ದೊರೆತಿದೆ ಎಂಬ ವಿಷಯದಲ್ಲಿ ಸಂದೇಹಕ್ಕೆ ಇದ್ದ ಅಂತಿಮ ಅಸ್ತಿವಾರವೂ ಈಗ ತೆಗೆದುಹಾಕಲ್ಪಟ್ಟಿದೆ.”
29. ಸಂಪರ್ಕಿಸಲು ದೇವರಿಗಿರುವ ಸಾಮರ್ಥ್ಯವನ್ನು ಹೇಗೆ ಚಿತ್ರಿಸಬಹುದು?
29 ರೇಡಿಯೊ ಮತ್ತು ಟೆಲಿವಿಷನ್ ಸಂಕೇತಗಳನ್ನು ಅಂತರಿಕ್ಷದ ಸಾವಿರಾರು ಕಿಲೊಮೀಟರ್ಗಳ ದೂರದಿಂದ—ಚಂದ್ರನಿಂದ ಸಹ—ಭೂಮಿಗೆ ಕಳುಹಿಸುವ ಸಾಮರ್ಥ್ಯ ಮನುಷ್ಯರಿಗಿದೆ. ಬಾಹ್ಯಾಕಾಶ ಪರಿಶೋಧನೆಗಳು ಕೋಟಿಗಟ್ಟಲೆ ಕಿಲೊಮೀಟರ್ ದೂರದ ಗ್ರಹಗಳಿಂದ ಭೌತ ಸಂಬಂಧವಾದ ಮಾಹಿತಿ ಮತ್ತು ಚಿತ್ರಗಳನ್ನು ಭೂಮಿಗೆ ಹಿಂದೆ ಕಳುಹಿಸಿವೆ. ಹಾಗಾದರೆ, ಮಾನವನ ಸೃಷ್ಟಿಕರ್ತನು, ರೇಡಿಯೊ ತರಂಗಗಳ ಸೃಷ್ಟಿಕರ್ತನು, ಕಡಿಮೆ ಪಕ್ಷ ಅಷ್ಟಾದರೂ ಮಾಡಬಲ್ಲನೆಂಬುದು ನಿಶ್ಚಯ. ವಾಸ್ತವವಾಗಿ, ತನ್ನ ಸರ್ವಶಕ್ತಿಯನ್ನು ಉಪಯೋಗಿಸಿ ಪದಗಳನ್ನು ಮತ್ತು ಚಿತ್ರಗಳನ್ನು, ಬೈಬಲನ್ನು ದಾಖಲೆ ಮಾಡಲು ತಾನು ಆರಿಸಿಕೊಂಡವರ ಮನಗಳಿಗೆ ರವಾನಿಸುವುದು ಆತನಿಗೆ ಸುಲಭ ಸಂಗತಿಯಾಗಿತ್ತು.
30. ಮಾನವರಿಗಾಗಿ ತನ್ನ ಉದ್ದೇಶವೇನೆಂಬುದನ್ನು ಅವರು ಕಂಡುಹಿಡಿಯಬೇಕೆಂದು ದೇವರು ಬಯಸುತ್ತಾನೊ?
30 ಇದಲ್ಲದೆ, ಭೂಮಿಯ ಮತ್ತು ಅದರಲ್ಲಿರುವ ಜೀವದ ವಿಷಯದಲ್ಲಿ, ಮಾನವಕುಲದಲ್ಲಿ ದೇವರಿಗಿರುವ ಅಭಿರುಚಿಗೆ ರುಜುವಾತನ್ನು ಕೊಡುವ ಅನೇಕ ಸಂಗತಿಗಳಿವೆ. ಆದುದರಿಂದ, ತಾನು ಯಾರೆಂದೂ, ಮಾನವರಿಗಾಗಿರುವ ತನ್ನ ಉದ್ದೇಶವೇನೆಂದೂ ಅವರು ಕಂಡುಹಿಡಿಯಲು ಸಹಾಯಿಸುವಂತೆ, ಈ ವಿಷಯಗಳನ್ನು ಸ್ಪಷ್ಟವಾಗಿ ಒಂದು ಗ್ರಂಥದಲ್ಲಿ—ಒಂದು ಕಾಯಂ ದಾಖಲೆಯಲ್ಲಿ—ದೇವರು ತಿಳಿಯಪಡಿಸುವನೆಂಬುದು ಗ್ರಾಹ್ಯ.
31. ದಾಖಲೆ ಮಾಡಲ್ಪಟ್ಟಿರುವ ಒಂದು ಪ್ರೇರಿತ ಸಂದೇಶವು ಬಾಯಿಮಾತಿನಿಂದ ಒಪ್ಪಿಸಲ್ಪಟ್ಟ ಮಾಹಿತಿಗಿಂತ ಎಷ್ಟೋ ಹೆಚ್ಚು ಶ್ರೇಷ್ಠವೇಕೆ?
31 ಮನುಷ್ಯರು ಕೇವಲ ಬಾಯಿಮಾತಿನಿಂದ ವರ್ಗಾಯಿಸಿದ ಮಾಹಿತಿಗೆ ಹೋಲಿಕೆಯಾಗಿ ದೇವರು ಕರ್ತೃವಾಗಿ ಕೊಟ್ಟ ಗ್ರಂಥದ ಶ್ರೇಷ್ಠತೆಯನ್ನೂ ಪರಿಗಣಿಸಿರಿ. ಬಾಯಿಮಾತು, ಜನರು ಸಂದೇಶದ ಭಾವಾರ್ಥವನ್ನು ಹೇಳುವ ಕಾರಣದಿಂದ ಭರವಸಾರ್ಹವಲ್ಲ, ಮತ್ತು ಅದರ ಅರ್ಥ ಕಾಲಾಂತರದಲ್ಲಿ ವಿಕೃತಗೊಳ್ಳುವುದು. ಅವರು ಬಾಯಿಮಾತಿನಿಂದ ತಮ್ಮ ಸ್ವಂತ ದೃಷ್ಟಿಕೋನಗಳಿಗನುಸಾರ ಆ ಮಾಹಿತಿಯನ್ನು ಪ್ರಸಾರ ಮಾಡುವರು. ಆದರೆ ದೇವಪ್ರೇರಿತವಾದ, ಕಾಯಂ ಲಿಖಿತ ದಾಖಲೆಯು ದೋಷಗಳನ್ನು ಒಳಗೊಂಡಿರುವುದು ಎಷ್ಟೋ ಕಡಿಮೆ ಸಂಭಾವ್ಯ. ಇದಲ್ಲದೆ, ಒಂದು ಪುಸ್ತಕವನ್ನು, ವಿವಿಧ ಭಾಷೆಗಳನ್ನು ಓದುವ ಜನರು ಅದರಿಂದ ಪ್ರಯೋಜನ ಪಡೆಯಸಾಧ್ಯವಾಗುವಂತೆ ಪುನರುತ್ಪತ್ತಿ ಮಾಡುವುದು ಮತ್ತು ಭಾಷಾಂತರಿಸುವುದು ಸಾಧ್ಯ. ಆದುದರಿಂದ ಮಾಹಿತಿಯನ್ನು ಒದಗಿಸಲಿಕ್ಕಾಗಿ ನಮ್ಮ ಸೃಷ್ಟಿಕರ್ತನು ಅಂತಹ ಒಂದು ಮಾಧ್ಯಮವನ್ನು ಉಪಯೋಗಿಸಿದ್ದು ನ್ಯಾಯಸಮ್ಮತವಲ್ಲವೆ? ತಾನು ಹಾಗೆಯೇ ಮಾಡಿದೆನೆಂದು ಸೃಷ್ಟಿಕರ್ತನು ಹೇಳುವುದರಿಂದ ಅದು ನ್ಯಾಯಸಮ್ಮತತೆಗಿಂತಲೂ ಶ್ರೇಷ್ಠವೆಂಬುದು ನಿಶ್ಚಯ.
ನೆರವೇರಿದ ಪ್ರವಾದನೆ
32-34. ಬೇರೆ ಯಾವ ಪುಸ್ತಕದಲ್ಲಿಯೂ ಇಲ್ಲದಿರುವ ಯಾವುದು ಬೈಬಲಿನಲ್ಲಿದೆ?
32 ಇದಕ್ಕೆ ಕೂಡಿಸಿ, ಒಂದು ಅದ್ವಿತೀಯವಾದ ಪ್ರಮುಖ ರೀತಿಯಲ್ಲಿ ದೈವಿಕ ಪ್ರೇರಣೆಯ ಗುರುತನ್ನು ಬೈಬಲು ಹೊಂದಿರುತ್ತದೆ: ಅದು ಗುರಿತಪ್ಪದೆ ನೆರವೇರಿರುವ ಮತ್ತು ನೆರವೇರುತ್ತಾ ಮುಂದುವರಿಯುತ್ತಿರುವ ಪ್ರವಾದನೆಗಳ ಗ್ರಂಥವಾಗಿದೆ.
33 ದೃಷ್ಟಾಂತಕ್ಕೆ, ಪುರಾತನ ತೂರಿನ ನಾಶನ, ಬಾಬೆಲಿನ ಪತನ, ಯೆರೂಸಲೇಮಿನ ಪುನರ್ನಿರ್ಮಾಣ, ಮೇದ್ಯಯ ಪಾರಸಿಯ ಮತ್ತು ಗ್ರೀಸಿನ ರಾಜರುಗಳ ಆರಂಭ ಮತ್ತು ಪತನವನ್ನು ಬೈಬಲಿನಲ್ಲಿ ಸವಿವರವಾಗಿ ಮುಂತಿಳಿಸಲಾಗಿತ್ತು. ಈ ಪ್ರವಾದನೆಗಳು ಎಷ್ಟು ನಿಷ್ಕೃಷ್ಟವಾಗಿದವ್ದೆಂದರೆ, ಘಟನೆಗಳು ನಡೆದ ಬಳಿಕ ಅವುಗಳು ಬರೆಯಲ್ಪಟ್ಟವೆಂದು ಹೇಳಲು ವಿಮರ್ಶಕರು ವ್ಯರ್ಥವಾಗಿ ಪ್ರಯತ್ನಿಸಿದರು.—ಯೆಶಾಯ 13:17-19; 44:27–45:1; ಯೆಹೆಜ್ಕೇಲ 26:3-6; ದಾನಿಯೇಲ 8:1-7, 20-22.
34 ಸಾ.ಶ. 70 ರಲ್ಲಾದ ಯೆರೂಸಲೇಮಿನ ನಾಶನದ ಕುರಿತು ಯೇಸು ಕೊಟ್ಟ ಪ್ರವಾದನೆಗಳು ನಿಷ್ಕೃಷ್ಟವಾಗಿ ನೆರವೇರಿದವು. (ಲೂಕ 19:41-44; 21:20, 21) ಮತ್ತು ಯೇಸು ಮತ್ತು ಅಪೊಸ್ತಲ ಪೌಲನು ಕೊಟ್ಟ “ಕಡೇ ದಿವಸಗಳ” ಕುರಿತ ಪ್ರವಾದನೆಗಳು ನಮ್ಮ ಸ್ವಂತ ಸಮಯದಲ್ಲಿ ವಿವರವಾಗಿ ನೆರವೇರುತ್ತಿವೆ.—2 ತಿಮೊಥೆಯ 3:1-5, 13; ಮತ್ತಾಯ 24; ಮಾರ್ಕ 13; ಲೂಕ 21.
35. ಬೈಬಲ್ ಪ್ರವಾದನೆಯು ಸೃಷ್ಟಿಕರ್ತನಿಂದ ಮಾತ್ರ ಏಕೆ ಬರಬಲ್ಲದು?
35 ಎಷ್ಟೇ ಚುರುಕು ಬುದ್ಧಿಯದ್ದಾಗಿರಲಿ, ಯಾವ ಮಾನವ ಮನಸ್ಸೂ ಭಾವೀ ಘಟನೆಗಳನ್ನು ಇಷ್ಟು ನಿಷ್ಕೃಷ್ಟವಾಗಿ ಮುಂತಿಳಿಸಲಾರದು. ವಿಶ್ವದ ಸರ್ವಶಕ್ತನೂ ಸರ್ವವಿವೇಕಿಯೂ ಆದ ಸೃಷ್ಟಿಕರ್ತನ ಮನಸ್ಸು ಮಾತ್ರ, ನಾವು 2 ಪೇತ್ರ 1:20, 21 ರಲ್ಲಿ ಓದುವಂತೆ, ಮುಂತಿಳಿಸಬಲ್ಲದು: “ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”
ಅದು ಉತ್ತರ ಕೊಡುತ್ತದೆ
36. ಬೈಬಲು ನಮಗೆ ಏನು ಹೇಳುತ್ತದೆ?
36 ಆದುದರಿಂದ, ಅನೇಕ ವಿಧಗಳಲ್ಲಿ ಬೈಬಲು ಪರಮಾತ್ಮನಿಂದ ಪ್ರೇರಿತವಾದ ವಾಕ್ಯವೆಂಬ ರುಜುವಾತನ್ನು ಪಡೆದಿರುತ್ತದೆ. ಈ ಕಾರಣದಿಂದ, ಮನುಷ್ಯರು ಭೂಮಿಯ ಮೇಲೆ ಏಕೆ ಇದ್ದಾರೆ, ಇಷ್ಟು ಕಷ್ಟಾನುಭವ ಏಕೆ ಇದೆ, ನಾವು ಹೋಗುತ್ತಿರುವುದು ಎಲ್ಲಿಗೆ, ಮತ್ತು ಪರಿಸ್ಥಿತಿಗಳು ಹೇಗೆ ಉತ್ತಮಗೊಳ್ಳುವುವು ಎಂದು ಅದು ನಮಗೆ ತಿಳಿಸುತ್ತದೆ. ಮಾನವರನ್ನು ಮತ್ತು ಭೂಮಿಯನ್ನು ಒಂದು ಉದ್ದೇಶಕ್ಕಾಗಿ ಸೃಷ್ಟಿಸಿದ ಒಬ್ಬ ಪರಮ ಶ್ರೇಷ್ಠನಾದ ದೇವರಿದ್ದಾನೆಂದೂ, ಆತನ ಉದ್ದೇಶವು ನೆರವೇರುವುದೆಂದೂ ಅದು ತಿಳಿಯಪಡಿಸುತ್ತದೆ. (ಯೆಶಾಯ 14:24) ಸತ್ಯ ಧರ್ಮವು ಏನೆಂದೂ ಅದನ್ನು ನಾವು ಹೇಗೆ ಕಂಡುಕೊಳ್ಳಬಲ್ಲೆವೆಂದೂ ಬೈಬಲು ತಿಳಿಸುತ್ತದೆ. ಹೀಗೆ, ಜೀವಿತದ ಸಕಲ ಪ್ರಾಮುಖ್ಯ ಪ್ರಶ್ನೆಗಳ ಸಂಬಂಧದಲ್ಲಿ ಸತ್ಯವನ್ನು ಹೇಳಬಲ್ಲ ಶ್ರೇಷ್ಠ ವಿವೇಕದ ಏಕಮಾತ್ರ ಉಗಮವು ಅದಾಗಿದೆ.—ಕೀರ್ತನೆ 146:3; ಜ್ಞಾನೋಕ್ತಿ 3:5; ಯೆಶಾಯ 2:2-4.
37. ಕ್ರೈಸ್ತಪ್ರಪಂಚದ ಬಗ್ಗೆ ಏನು ಕೇಳಲ್ಪಡಬೇಕು?
37 ಬೈಬಲಿನ ವಿಶ್ವಾಸಾರ್ಹತೆ ಮತ್ತು ಸತ್ಯತೆಗಳಿಗೆ ಹೇರಳವಾದ ರುಜುವಾತು ಇರುವುದಾದರೂ, ಅದನ್ನು ಅಂಗೀಕರಿಸುತ್ತೇವೆಂದು ಹೇಳುವ ಎಲ್ಲರೂ ಅದರ ಬೋಧನೆಗಳನ್ನು ಅನುಸರಿಸುತ್ತಾರೆಯೆ? ದೃಷ್ಟಾಂತಕ್ಕೆ, ಕ್ರೈಸ್ತತ್ವವನ್ನು ಆಚರಿಸುತ್ತೇವೆಂದು ವಾದಿಸುವ ಜನಾಂಗಗಳನ್ನು, ಅಂದರೆ, ಕ್ರೈಸ್ತಪ್ರಪಂಚವನ್ನು ಪರಿಗಣಿಸಿರಿ. ಅವರಿಗೆ ಅನೇಕ ಶತಮಾನಗಳಿಂದ ಬೈಬಲಿನೊಳಗೆ ಪ್ರವೇಶವಿತ್ತು. ಆದರೆ ಅವರ ಯೋಚನೆ ಮತ್ತು ವರ್ತನೆಗಳು ನಿಜವಾಗಿಯೂ ದೇವರ ಶ್ರೇಷ್ಠ ವಿವೇಕವನ್ನು ಪ್ರತಿಬಿಂಬಿಸುತ್ತದೆಯೆ?
[ಪುಟ 22 ರಲ್ಲಿರುವ ಚಿತ್ರಗಳು]
ಭೂಮಿಯು ಗುರುತ್ವಾಕರ್ಷಣದ ಮೂಲಕ ಬಾಹ್ಯಾಕಾಶದಲ್ಲಿ ಇತರ ಆಕಾಶಸ್ಥ ಕಾಯಗಳಿಗೆ ಸಂಬಂಧವಿರುವಂತೆ ಇಡಲ್ಪಟ್ಟಿತ್ತು ಎಂದು ಸರ್ ಐಸಕ್ ನ್ಯೂಟನ್ ನಂಬಿದರು
ಭೂಮಿಯು ಶೂನ್ಯಾಕಾಶದಿಂದ ಆವರಿಸಲ್ಪಟ್ಟಿದೆಯೆಂದು ಬೈಬಲು ನೀಡುವ ಚಿತ್ರವು ಅದರ ಸಮಯಕ್ಕೆ ಒಂದು ಗಮನಾರ್ಹವಾದ ದೃಶ್ಯವೆಂಬುದು ವಿದ್ವಾಂಸರಿಂದ ಒಪ್ಪಲ್ಪಟ್ಟಿದೆ
[ಪುಟ 23 ರಲ್ಲಿರುವ ಚಿತ್ರ]
ಕೆಲವು ಆದಿ ನಾವಿಕರು ಚಪ್ಪಟೆಯಾದ ಭೂಮಿಯ ಅಂಚಿನಿಂದ ತಾವು ನಾವೆಯೊಂದಿಗೆ ಬಿದ್ದುಹೋದೇವೆಂದೂ ಭಯಪಟ್ಟರು
[ಪುಟ 24 ರಲ್ಲಿರುವ ಚಿತ್ರ]
ಯೇಸು ಕ್ರಿಸ್ತನು ಅಸ್ತಿತ್ವದಲ್ಲಿದ್ದನು ಎಂಬುದಕ್ಕೆ ಜೂಲಿಯಸ್ ಸೀಸರ್, ಸಮ್ರಾಟ ಷಾರ್ಲ್ಮೇನ್, ಆಲಿವರ್ ಕ್ರಾಮೆಲ್ವ್, ಯಾ III ನೆಯ ಪೋಪ್ ಲಿಯೊ ಅಸ್ತಿತ್ವದಲಿದ್ದರು ಎಂಬುದಕ್ಕಿಂತ ಹೆಚ್ಚು ಪುರಾವೆಯಿದೆ
[ಪುಟ 26 ರಲ್ಲಿರುವ ಚಿತ್ರ]
ಸಾ.ಶ. 70 ರಲ್ಲಾದ ಯೆರೂಸಲೇಮಿನ ನಾಶನದ ಕುರಿತು ಯೇಸು ಕೊಟ್ಟ ಪ್ರವಾದನೆಗಳ ನೆರವೇರಿಕೆಯನ್ನು ರೋಮಿನಲ್ಲಿರುವ ಆರ್ಚ್ ಆಫ್ ಟೈಟಸ್ ದೃಢೀಕರಿಸುತ್ತದೆ