ಅಧ್ಯಾಯ 2
ದೇವರ ಜ್ಞಾನವನ್ನು ಪ್ರಕಟಿಸುವ ಗ್ರಂಥ
1, 2. ನಮ್ಮ ಸೃಷ್ಟಿಕರ್ತನ ಮಾರ್ಗದರ್ಶನೆ ನಮಗೇಕೆ ಅವಶ್ಯ?
ನಮ್ಮ ಪ್ರೀತಿಯ ಸೃಷ್ಟಿಕರ್ತನು ಮಾನವ ಕುಲಕ್ಕಾಗಿ ಉಪದೇಶ ಮತ್ತು ಮಾರ್ಗದರ್ಶನದ ಒಂದು ಗ್ರಂಥವನ್ನು ಒದಗಿಸುವನೆಂಬುದು ತೀರ ನ್ಯಾಯಸಮ್ಮತ. ಮತ್ತು ಮಾನವರಿಗೆ ಮಾರ್ಗದರ್ಶನ ಆವಶ್ಯಕವೆಂದು ನೀವು ಒಪ್ಪುವುದಿಲ್ಲವೆ?
2 2,500ಕ್ಕೂ ಹೆಚ್ಚು ವರ್ಷಗಳಿಗೆ ಹಿಂದೆ, ಪ್ರವಾದಿಯೂ ಇತಿಹಾಸಗಾರನೂ ಆಗಿದ್ದ ಒಬ್ಬನು ಬರೆದುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಇಂದು, ಆ ಹೇಳಿಕೆಯ ಸತ್ಯತೆಯು ಎಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿದೆ. ಹೀಗೆ, ಇತಿಹಾಸಗಾರ ವಿಲ್ಯಮ್ ಏಚ್. ಮೆಕ್ನೀಲ್ ಗಮನಿಸುವುದು: “ಈ ಗ್ರಹಮುಖದಲ್ಲಿ ಮಾನವನ ಸಾಹಸವು ಸಮಾಜದ ಸ್ಥಾಪಿತ ವ್ಯವಸ್ಥೆಯ ಬಹುಮಟ್ಟಿಗೆ ಅವಿಚ್ಛಿನ್ನವಾದ ವಿಪತ್ತುಗಳ ಮತ್ತು ತೊಡಕುಗಳ ಶ್ರೇಣಿಯಾಗಿದೆ.”
3, 4. (ಎ) ಬೈಬಲಿನ ಅಧ್ಯಯನವನ್ನು ನಾವು ಹೇಗೆ ಸಮೀಪಿಸಬೇಕು? (ಬಿ) ಬೈಬಲಿನ ಪರೀಕ್ಷೆಯಲ್ಲಿ ನಾವು ಹೇಗೆ ಮುಂದುವರಿಯುವೆವು?
3 ವಿವೇಕಯುಕ್ತ ಮಾರ್ಗದರ್ಶನೆಯ ನಮ್ಮ ಸಕಲ ಆವಶ್ಯಕತೆಗಳನ್ನು ಬೈಬಲು ಪೂರೈಸುತ್ತದೆ. ಬೈಬಲನ್ನು ಮೊದಲಾಗಿ ಪರೀಕ್ಷಿಸುವಾಗ ಅನೇಕರು ಕಂಗೆಟ್ಟುಹೋಗುತ್ತಾರೆ, ನಿಜ. ಅದೊಂದು ದೊಡ್ಡ ಗ್ರಂಥ, ಮತ್ತು ಅದರ ಕೆಲವು ಭಾಗಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಒಂದು ಬೆಲೆಬಾಳುವ ಬಾಧ್ಯತೆಯನ್ನು ಪಡೆಯುವರೆ ನೀವು ಮಾಡಲೇಬೇಕಾದ ಸಂಗತಿಗಳನ್ನು ನಮೂದಿಸಿರುವ ಒಂದು ಉಯಿಲು ನಿಮಗೆ ಕೊಡಲ್ಪಟ್ಟಿರುವಲ್ಲಿ, ಅದನ್ನು ಜಾಗರೂಕತೆಯಿಂದ ಪರಿಶೀಲಿಸಲು ನೀವು ಸಮಯವನ್ನು ತೆಗೆದುಕೊಳ್ಳುವುದಿಲ್ಲವೆ? ಆ ದಾಖಲೆಯ ಕೆಲವು ಭಾಗಗಳನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಕಷ್ಟಕರವಾಗಿ ಕಂಡುಬರುವಲ್ಲಿ, ಅಂತಹ ಸಂಗತಿಗಳ ಅನುಭವವಿರುವ ಒಬ್ಬನಿಂದ ನೀವು ಸಹಾಯವನ್ನು ಕೇಳಿಕೊಳ್ಳುವುದು ಸಂಭಾವ್ಯ. ಹಾಗಾದರೆ ತದ್ರೀತಿಯ ಮನೋಭಾವದಿಂದ ಬೈಬಲನ್ನೂ ಏಕೆ ಸಮೀಪಿಸಬಾರದು? (ಅ. ಕೃತ್ಯಗಳು 17:11) ಒಂದು ಪ್ರಾಪಂಚಿಕ ಬಾಧ್ಯತೆಗಿಂತಲೂ ಹೆಚ್ಚಿನದ್ದು ವಿವಾದಕ್ಕೊಳಗಾಗಿದೆ. ಹಿಂದಿನ ಅಧ್ಯಾಯದಲ್ಲಿ ನಾವು ಕಲಿತಂತೆ, ದೇವರ ಜ್ಞಾನವು ನಿತ್ಯಜೀವಕ್ಕೆ ನಡೆಸಬಲ್ಲದು.
4 ದೇವರ ಜ್ಞಾನವನ್ನು ಪ್ರಕಟಿಸುವ ಆ ಗ್ರಂಥವನ್ನು ನಾವು ಪರೀಕ್ಷಿಸೋಣ. ನಾವು ಪ್ರಥಮವಾಗಿ ಬೈಬಲಿನ ಒಂದು ಸಂಕ್ಷಿಪ್ತ ಸಮೀಕ್ಷೆಯನ್ನು ಕೊಡುವೆವು. ಆ ಬಳಿಕ, ತಿಳಿವಳಿಕೆಯುಳ್ಳ ಅನೇಕ ಜನರು ಅದು ದೇವರ ಪ್ರೇರಿತವಾದ ವಾಕ್ಯವೆಂದು ನಂಬುವುದಕ್ಕೆ ಕಾರಣಗಳನ್ನು ಚರ್ಚಿಸುವೆವು.
ಬೈಬಲಿನಲ್ಲಿ ಅಡಕವಾಗಿರುವ ಸಂಗತಿ
5. (ಎ) ಹೀಬ್ರು ಶಾಸ್ತ್ರಗಳಲ್ಲಿ ಏನು ಸೇರಿದೆ? (ಬಿ) ಗ್ರೀಕ್ ಶಾಸ್ತ್ರಗಳಲ್ಲಿ ಏನು ಅಡಕವಾಗಿದೆ?
5 ಬೈಬಲಿನ, ಅನೇಕ ವೇಳೆ ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎಂದು ಕರೆಯಲ್ಪಡುವ ಎರಡು ವಿಭಾಗಗಳಲ್ಲಿ 66 ಪುಸ್ತಕಗಳಿವೆ. ಬೈಬಲಿನ ಮೂವತ್ತೊಂಬತ್ತು ಪುಸ್ತಕಗಳು ಪ್ರಧಾನವಾಗಿ ಹೀಬ್ರುವಿನಲ್ಲಿಯೂ, 27 ಪುಸ್ತಕಗಳು ಗ್ರೀಕ್ನಲ್ಲಿಯೂ ಬರೆಯಲ್ಪಟ್ಟವು. ಆದಿಕಾಂಡದಿಂದ ಮಲಾಕಿಯದ ವರೆಗಿನ ಪುಸ್ತಕಗಳಿರುವ ಹೀಬ್ರು ಶಾಸ್ತ್ರಗಳು ಸೃಷ್ಟಿ ಹಾಗೂ ಮಾನವ ಇತಿಹಾಸದ ಮೊದಲಿನ 3,500 ವರ್ಷಗಳನ್ನು ಆವರಿಸುತ್ತವೆ. ಬೈಬಲಿನ ಈ ಭಾಗವನ್ನು ಪರೀಕ್ಷಿಸುವಾಗ ನಾವು, ಇಸ್ರಾಯೇಲ್ಯರೊಂದಿಗೆ—ಸಾ.ಶ.ಪೂ. 16 ನೆಯ ಶತಮಾನದಲ್ಲಿ ರಾಷ್ಟ್ರವಾಗಿ ಅವರ ಜನನದಿಂದ ಹಿಡಿದು ಸಾ.ಶ.ಪೂ. 5 ನೆಯ ಶತಮಾನದೊಳಗಿನ ತನಕ—ದೇವರ ವ್ಯವಹಾರಗಳ ಕುರಿತು ಕಲಿಯುತ್ತೇವೆ.a ಮತ್ತಾಯದಿಂದ ಪ್ರಕಟನೆಯ ವರೆಗಿನ ಪುಸ್ತಕಗಳು ಅಡಕವಾಗಿರುವ ಗ್ರೀಕ್ ಶಾಸ್ತ್ರಗಳು, ಸಾ.ಶ. ಒಂದನೆಯ ಶತಮಾನದಲ್ಲಿ ಯೇಸು ಕ್ರಿಸ್ತನ ಮತ್ತು ಅವನ ಶಿಷ್ಯರ ಬೋಧನೆಗಳು ಮತ್ತು ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತವೆ.
6. ನಾವು ಇಡೀ ಬೈಬಲನ್ನು ಏಕೆ ಅಭ್ಯಸಿಸಬೇಕು?
6 ಕೆಲವರು, “ಹಳೆಯ ಒಡಂಬಡಿಕೆ” ಯೆಹೂದ್ಯರಿಗೆಂದೂ, “ಹೊಸ ಒಡಂಬಡಿಕೆ” ಕ್ರೈಸ್ತರಿಗೆಂದೂ ವಾದಿಸುತ್ತಾರೆ. ಆದರೆ 2 ತಿಮೊಥೆಯ 3:16 ಕ್ಕನುಸಾರ, “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು . . . ಉಪಯುಕ್ತವಾಗಿದೆ.” ಆದಕಾರಣ, ಶಾಸ್ತ್ರಗಳ ಯೋಗ್ಯವಾದ ಒಂದು ಅಧ್ಯಯನದಲ್ಲಿ ಇಡೀ ಬೈಬಲು ಸೇರಿರಬೇಕು. ವಾಸ್ತವವಾಗಿ, ಬೈಬಲಿನ ಈ ಎರಡು ಭಾಗಗಳು ಪರಸ್ಪರ ಪೂರಕವಾಗಿದ್ದು, ಮೊತ್ತದಲ್ಲಿ ಒಂದೇ ಮುಖ್ಯ ವಿಷಯವನ್ನು ವಿಕಾಸಗೊಳಿಸಲು ಹೊಂದಿಕೆಯಿಂದ ಸಂಮಿಳಿತವಾಗುತ್ತವೆ.
7. ಬೈಬಲಿನ ಮುಖ್ಯ ವಿಷಯವೇನು?
7 ನೀವು ಪ್ರಾಯಶಃ ಅನೇಕ ವರ್ಷಗಳಿಂದ ಧಾರ್ಮಿಕ ಆರಾಧನೆಗಳಲ್ಲಿ ಉಪಸ್ಥಿತರಾಗಿದ್ದೀರಿ ಮತ್ತು ಬೈಬಲು ಗಟ್ಟಿಯಾಗಿ ಓದಲ್ಪಡುವುದನ್ನು ಕೇಳಿದ್ದೀರಿ. ಅಥವಾ ನೀವಾಗಿಯೇ ಅದರಿಂದ ಎತ್ತಿಕೆಗಳನ್ನು ಓದಿರಬಹುದು. ಆದರೆ ಬೈಬಲಿನಲ್ಲಿ ಆದಿಕಾಂಡದಿಂದ ಪ್ರಕಟನೆಯ ವರೆಗೆ ಏಕೋದ್ದೇಶದ ಒಂದು ಮುಖ್ಯ ವಿಷಯವಿದೆಯೆಂಬುದು ನಿಮಗೆ ಗೊತ್ತಿತ್ತೊ? ಹೌದು, ಒಂದು ಸಮರಸವಾದ ಮುಖ್ಯ ವಿಷಯವು ಬೈಬಲಿನಲ್ಲಿ ಹರಡಿಕೊಂಡಿದೆ. ಆ ಮುಖ್ಯ ವಿಷಯವೇನು? ಮಾನವ ಕುಲವನ್ನು ಆಳಲು ದೇವರಿಗಿರುವ ಹಕ್ಕಿನ ನಿರ್ದೋಷೀಕರಣ ಮತ್ತು ತನ್ನ ರಾಜ್ಯದ ಮೂಲಕ ಆತನ ಪ್ರೀತಿಯ ಉದ್ದೇಶದ ಕೈಗೂಡಿಸುವಿಕೆಯೇ. ದೇವರು ಈ ಉದ್ದೇಶವನ್ನು ಹೇಗೆ ನೆರವೇರಿಸುವನೆಂದು ನಾವು ತರುವಾಯ ನೋಡುವೆವು.
8. ದೇವರ ವ್ಯಕ್ತಿತ್ವದ ಕುರಿತು ಬೈಬಲು ಏನು ಪ್ರಕಟಪಡಿಸುತ್ತದೆ?
8 ದೇವರ ಉದ್ದೇಶವನ್ನು ತಿಳಿಯಪಡಿಸುವದಲ್ಲದೆ, ಬೈಬಲು ಆತನ ವ್ಯಕ್ತಿತ್ವವನ್ನೂ ಪ್ರಕಟಪಡಿಸುತ್ತದೆ. ದೃಷ್ಟಾಂತಕ್ಕೆ, ದೇವರಿಗೆ ಅನಿಸಿಕೆಗಳಿವೆ ಮತ್ತು ನಾವು ಮಾಡುವ ಆಯ್ಕೆಗಳು ಆತನಿಗೆ ಸಂಬಂಧಪಡುತ್ತವೆ ಎಂದು ನಾವು ಬೈಬಲಿನಿಂದ ಅರಿಯುತ್ತೇವೆ. (ಕೀರ್ತನೆ 78:40, 41; ಜ್ಞಾನೋಕ್ತಿ 27:11; ಯೆಹೆಜ್ಕೇಲ 33:11) ದೇವರು, “ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು,” ಎಂದು ಕೀರ್ತನೆ 103:8-14 ಹೇಳುತ್ತದೆ. ‘ನಾವು ಬರಿಯ ಮಣ್ಣಿನಿಂದ ಮಾಡಲ್ಪಟ್ಟವರೆಂದೂ ಮರಣದಲ್ಲಿ ಅಲ್ಲಿಗೆ ಹಿಂದಿರುಗುವವರೆಂದೂ ಜ್ಞಾಪಿಸಿಕೊಳ್ಳುತ್ತಾ’ ಆತನು ನಮ್ಮೊಂದಿಗೆ ಕನಿಕರದಿಂದ ವರ್ತಿಸುತ್ತಾನೆ. (ಆದಿಕಾಂಡ 2:7; 3:19) ಆತನು ಎಂತಹ ಅದ್ಭುತಕರವಾದ ಗುಣಗಳನ್ನು ಪ್ರದರ್ಶಿಸುತ್ತಾನೆ! ನೀವು ಆರಾಧಿಸಬಯಸುವುದು ಈ ರೀತಿಯ ದೇವರನ್ನಲ್ಲವೆ?
9. ಬೈಬಲು ನಮಗೆ ದೇವರ ಮಟ್ಟಗಳ ಸ್ಫುಟವಾದ ನೋಟವನ್ನು ಹೇಗೆ ಕೊಡುತ್ತದೆ, ಮತ್ತು ಅಂತಹ ಜ್ಞಾನದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
9 ದೇವರ ಮಟ್ಟಗಳ ಒಂದು ಸ್ಪಷ್ಟವಾದ ನೋಟವನ್ನು ಬೈಬಲು ಕೊಡುತ್ತದೆ. ಇವುಗಳನ್ನು ಕೆಲವು ಸಲ ನಿಯಮಗಳಾಗಿ ಹೇಳಲಾಗಿದೆ. ಆದರೂ ಹೆಚ್ಚು ಬಾರಿ, ಇವುಗಳು ವಸ್ತುಪಾಠಗಳ ಮೂಲಕ ಕಲಿಸಲ್ಪಡುವ ಮೂಲತತ್ತ್ವಗಳಲ್ಲಿ ಪ್ರತಿಬಿಂಬಿತವಾಗುತ್ತವೆ. ಪೂರ್ವಕಾಲದ ಇಸ್ರಾಯೇಲಿನ ಇತಿಹಾಸದಲ್ಲಿನ ಕೆಲವು ನಿರ್ದಿಷ್ಟ ಘಟನೆಗಳನ್ನು ದೇವರು ನಮ್ಮ ಪ್ರಯೋಜನಕ್ಕಾಗಿ ಬರೆಯಿಸಿಟ್ಟನು. ದೇವರ ಉದ್ದೇಶಕ್ಕೆ ಹೊಂದಿಕೆಯಾಗಿ ಜನರು ಕೆಲಸಮಾಡುವಾಗ ಏನಾಗುತ್ತದೆ ಎಂಬುದನ್ನು ಹಾಗೂ ಅವರು ತಮ್ಮ ಸ್ವಂತ ಮಾರ್ಗದಲ್ಲಿ ಹೋಗುವಾಗ ಬರುವ ದುಃಖಕರವಾದ ಪರಿಣಾಮವನ್ನು ಈ ಯಥಾರ್ಥ ವೃತ್ತಾಂತಗಳು ತೋರಿಸುತ್ತವೆ. (1 ಅರಸು 5:4; 11:4-6; 2 ಪೂರ್ವಕಾಲವೃತ್ತಾಂತ 15:8-15) ಇಂತಹ ವಾಸ್ತವ ಜೀವಿತ ವೃತ್ತಾಂತಗಳ ಓದುವಿಕೆಯು ನಮ್ಮ ಹೃದಯಗಳನ್ನು ಸ್ಪರ್ಶಿಸುವುದು ನಿಸ್ಸಂದೇಹ. ದಾಖಲಿಸಲ್ಪಟ್ಟ ಆ ಘಟನೆಗಳನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸುವಲ್ಲಿ, ನಾವು ಅವುಗಳಲ್ಲಿ ಒಳಗೂಡಿರುವ ಜನರೊಂದಿಗೆ ಗುರುತಿಸಿಕೊಳ್ಳಬಲ್ಲೆವು. ಹೀಗೆ, ನಾವು ಉತ್ತಮ ಮಾದರಿಗಳಿಂದ ಪ್ರಯೋಜನ ಹೊಂದಿ, ತಪ್ಪುಗಾರರನ್ನು ಸಿಕ್ಕಿಸಿಹಾಕಿದ ಗುಂಡಿಗಳಿಂದ ತಪ್ಪಿಸಿಕೊಳ್ಳಬಲ್ಲೆವು. ಆದರೂ, ಈ ಅತಿ ಮುಖ್ಯ ಪ್ರಶ್ನೆಗೆ ಒಂದು ಉತ್ತರವು ಬೇಕಾಗಿದೆ: ನಾವು ಬೈಬಲಿನಲ್ಲಿ ಓದುವ ಸಂಗತಿಯು ನಿಜವಾಗಿಯೂ ದೇವಪ್ರೇರಿತವೆಂದು ನಮಗೆ ಹೇಗೆ ಖಾತರಿಯಾಗಿರಬಲ್ಲದು?
ನೀವು ಬೈಬಲಿನಲ್ಲಿ ಭರವಸವಿಡಬಲ್ಲಿರೊ?
10. (ಎ) ಬೈಬಲು ಸದ್ಯೋಚಿತವಲ್ಲವೆಂದು ಕೆಲವರಿಗನಿಸುವುದೇಕೆ? (ಬಿ) 2 ತಿಮೊಥೆಯ 3:16, 17, ಬೈಬಲಿನ ಕುರಿತು ನಮಗೇನು ಹೇಳುತ್ತದೆ?
10 ಸಲಹೆ ನೀಡುವ ಅನೇಕ ಪುಸ್ತಕಗಳು ಸಲಹೆಯ ಸಂಬಂಧದಲ್ಲಿ ಕೆಲವೇ ವರುಷಗಳಲ್ಲಿ ಹಳೆಯದಾಗುತ್ತವೆ ಎಂಬುದನ್ನು ನೀವು ಪ್ರಾಯಶಃ ಗಮನಿಸಿದ್ದೀರಿ. ಬೈಬಲಿನ ವಿಷಯದಲ್ಲೇನು? ಅದು ಬಹಳ ಹಳೆಯದು, ಮತ್ತು ಅದರ ಕೊನೆಯ ಪದಗಳನ್ನು ಬರೆದಂದಿನಿಂದ ಬಹುಮಟ್ಟಿಗೆ 2,000 ವರುಷಗಳು ಗತಿಸಿಹೋಗಿವೆ. ಆದಕಾರಣ ನಮ್ಮ ಆಧುನಿಕ ಯುಗಕ್ಕೆ ಅದು ಅನ್ವಯಿಸುವುದಿಲ್ಲವೆಂದು ಕೆಲವರ ಅನಿಸಿಕೆ. ಆದರೆ ಬೈಬಲು ದೇವರಿಂದ ಪ್ರೇರಿತವಾಗಿರುವುದಾದರೆ, ಅದರ ಮಹಾ ವಯಸ್ಸಿನ ಹೊರತೂ, ಅದರ ಸಲಹೆಯು ಸದಾ ಸದ್ಯೋಚಿತವಾಗಿರಬೇಕು. ಶಾಸ್ತ್ರಗಳು ಇನ್ನೂ “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತ” ವಾಗಿರಬೇಕು. “ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17.
11-13. ಬೈಬಲು ನಮ್ಮ ದಿನಗಳಿಗೆ ಪ್ರಾಯೋಗಿಕವೆಂದು ನಾವೇಕೆ ಹೇಳಬಲ್ಲೆವು?
11 ಸೂಕ್ಷ್ಮ ಪರೀಕ್ಷೆಯು, ಬೈಬಲ್ ಮೂಲತತ್ತ್ವಗಳನ್ನು ಮೊದಲಾಗಿ ಬರವಣಿಗೆಗೆ ಹಾಕಿದಾಗ ಅವು ಎಷ್ಟು ಪೂರ್ಣವಾಗಿ ಅನ್ವಯಿಸಿದವೊ ಅಷ್ಟೇ ಪೂರ್ಣವಾಗಿ ಇಂದು ಅನ್ವಯಿಸುತ್ತವೆಂದು ಪ್ರಕಟಪಡಿಸುತ್ತದೆ. ಉದಾಹರಣೆಗೆ, ಮನುಷ್ಯ ಪ್ರಕೃತಿಯ ಸಂಬಂಧದಲ್ಲಿ, ಬೈಬಲು ಮಾನವ ಕುಲದ ಪ್ರತಿಯೊಂದು ಸಂತತಿಗೆ ಅನ್ವಯಿಸುವ ಸೂಕ್ಷ್ಮ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ನಾವು ಮತ್ತಾಯ ಪುಸ್ತಕದ 5 ರಿಂದ 7 ನೆಯ ಅಧ್ಯಾಯಗಳಲ್ಲಿ ಕಂಡುಬರುವ, ಯೇಸುವಿನ ಪರ್ವತ ಪ್ರಸಂಗದಲ್ಲಿ ಸುಲಭವಾಗಿ ನೋಡಬಲ್ಲೆವು. ಈ ಪ್ರಸಂಗವು ಭಾರತದ ಮಾಜಿ ನಾಯಕ, ಮೋಹನ್ದಾಸ್ ಕೆ. ಗಾಂಧಿಯವರನ್ನು ಎಷ್ಟು ಮನಃಸ್ಪರ್ಶಿಸಿತೆಂದರೆ ಅವರು ಒಬ್ಬ ಬ್ರಿಟಿಷ್ ಅಧಿಕಾರಿಗೆ ಹೀಗೆ ಹೇಳಿದರಂತೆ: “ಈ ಪರ್ವತ ಪ್ರಸಂಗದಲ್ಲಿ ಕ್ರಿಸ್ತನು ಕೊಟ್ಟಂತಹ ಬೋಧನೆಗಳಲ್ಲಿ ನಿಮ್ಮ ದೇಶವೂ ನನ್ನದೂ ಒಟ್ಟುಗೂಡುವುದಾದರೆ, ನಾವು ನಮ್ಮ ದೇಶಗಳ ಸಮಸ್ಯೆಗಳನ್ನು ಮಾತ್ರವಲ್ಲ, ಇಡಿಯ ಜಗತ್ತಿನದ್ದನ್ನು ಬಗೆಹರಿಸಿರುವೆವು.”
12 ಯೇಸುವಿನ ಬೋಧನೆಗಳಿಂದ ಜನರು ಮನಃಸ್ಪರ್ಶಿತರಾಗುವುದು ಆಶ್ಚರ್ಯವಲ್ಲ! ಪರ್ವತ ಪ್ರಸಂಗದಲ್ಲಿ ಅವನು ನಿಜ ಸಂತೋಷಕ್ಕೆ ಮಾರ್ಗವನ್ನು ನಮಗೆ ತೋರಿಸಿದನು. ವಿವಾದಗಳನ್ನು ಬಗೆಹರಿಸುವ ವಿಧವನ್ನು ಅವನು ವಿವರಿಸಿದನು. ಪ್ರಾರ್ಥನೆಯನ್ನು ಹೇಗೆ ಮಾಡಬೇಕೆಂಬುದಕ್ಕೆ ಯೇಸು ಮಾಹಿತಿಯನ್ನು ಒದಗಿಸಿದನು. ಪ್ರಾಪಂಚಿಕ ಆವಶ್ಯಕತೆಗಳ ಕಡೆಗೆ ಇರಬೇಕಾದ ಅತಿ ವಿವೇಕದ ಮನೋಭಾವವನ್ನು ಅವನು ತೋರಿಸಿ, ಇತರರ ಕಡೆಗಿನ ಯೋಗ್ಯಸಂಬಂಧಗಳ ವಿಷಯದಲ್ಲಿ ಸುವರ್ಣ ನಿಯಮವನ್ನು ಕೊಟ್ಟನು. ಈ ಪ್ರಸಂಗದಲ್ಲಿ ಒಳಗೊಂಡಿದ್ದ ವಿಷಯಗಳಲ್ಲಿ, ಧಾರ್ಮಿಕ ವಂಚನೆಗಳನ್ನು ಹೇಗೆ ಗುರುತಿಸುವುದು ಮತ್ತು ಸುಭದ್ರ ಭವಿಷ್ಯವನ್ನು ಹೊಂದುವ ವಿಧಗಳೂ ಸೇರಿವೆ.
13 ಪರ್ವತ ಪ್ರಸಂಗದಲ್ಲಿ ಮತ್ತು ಬೈಬಲಿನ ಇತರ ಪುಟಗಳಲ್ಲೆಲ್ಲ, ನಮ್ಮ ಜೀವನದ ವೈಯಕ್ತಿಕ ಸನ್ನಿವೇಶವನ್ನು ಉತ್ತಮಗೊಳಿಸಲು ನಾವು ಏನು ಮಾಡಬೇಕು ಮತ್ತು ಯಾವುದನ್ನು ವರ್ಜಿಸಬೇಕು ಎಂಬುದನ್ನು ಅದು ಸ್ಪಷ್ಟವಾಗಿ ತಿಳಿಸುತ್ತದೆ. ಅದರ ಸಲಹೆಯು ಎಷ್ಟು ಪ್ರಾಯೋಗಿಕವೆಂದರೆ, ಒಬ್ಬ ಶಿಕ್ಷಕನು ಹೀಗೆ ಹೇಳುವಂತೆ ಪ್ರಚೋದಿಸಲ್ಪಟ್ಟನು: “ಸ್ನಾತಕ ಮತ್ತು ಪ್ರವೀಣ ಪದವಿಗಳಿದ್ದ ಹೈಸ್ಕೂಲ್ ಸಲಹೆಗಾರನಾಗಿದ್ದು, ಮಾನಸಿಕ ಆರೋಗ್ಯ ಮತ್ತು ಮನಶ್ಶಾಸ್ತ್ರದ ಸಂಬಂಧದಲ್ಲಿ ಅನೇಕಾನೇಕ ಪುಸ್ತಕಗಳನ್ನು ಓದಿದವನಾಗಿದ್ದರೂ, ಯಶಸ್ವಿಯಾದ ವಿವಾಹವಿರುವಿಕೆ, ಹರೆಯದ ಅಪರಾಧವನ್ನು ತಡೆಹಿಡಿಯುವುದು ಮತ್ತು ಮಿತ್ರರನ್ನು ಸಂಪಾದಿಸಿಕೊಂಡು ಅದನ್ನು ಮುಂದುವರಿಸುವ ವಿಧ—ಇಂತಹ ವಿಷಯಗಳ ಮೇಲೆ ಬೈಬಲಿನ ಸಲಹೆಯು ನಾನು ಕಾಲೇಜಿನಲ್ಲಿ ಓದಿದ್ದ ಅಥವಾ ಅಧ್ಯಯನ ಮಾಡಿದ್ದ ಯಾವುದಕ್ಕಿಂತಲೂ ಎಷ್ಟೋ ಹೆಚ್ಚು ಶ್ರೇಷ್ಠವಾಗಿದೆಯೆಂದು ಕಂಡುಹಿಡಿದೆ.” ಪ್ರಾಯೋಗಿಕ ಮತ್ತು ಸದ್ಯೋಚಿತವಾಗಿರುವುದಕ್ಕೆ ಕೂಡಿಸಲ್ಪಟ್ಟು, ಬೈಬಲು ಭರವಸಯೋಗ್ಯವೂ ಆಗಿದೆ.
ನಿಷ್ಕೃಷ್ಟ ಮತ್ತು ವಿಶ್ವಾಸಾರ್ಹ
14. ಬೈಬಲು ವೈಜ್ಞಾನಿಕವಾಗಿ ನಿಷ್ಕೃಷ್ಟವೆಂದು ಯಾವುದು ತೋರಿಸುತ್ತದೆ?
14 ಬೈಬಲು ವಿಜ್ಞಾನದ ಒಂದು ಪಠ್ಯ ಪುಸ್ತಕವಲ್ಲದಿದ್ದರೂ, ಅದು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ. ದೃಷ್ಟಾಂತಕ್ಕೆ, ಭೂಮಿಯು ಚಪ್ಪಟೆಯೆಂದು ಹೆಚ್ಚಿನ ಜನರು ನಂಬುತ್ತಿದ್ದ ಒಂದು ಸಮಯದಲ್ಲಿ, ಪ್ರವಾದಿ ಯೆಶಾಯನು ಅದನ್ನು “ವೃತ್ತ” (ಹೀಬ್ರು, ಚುಗ್, ಇಲ್ಲಿ “ಗೋಳ” ಎಂಬರ್ಥವನ್ನೀಯುತ್ತದೆ) ವೆಂದು ಸೂಚಿಸಿದನು. (ಯೆಶಾಯ 40:22) ಒಂದು ಗೋಳಾಕೃತಿಯ ಭೂಮಿಯ ವಿಚಾರವು, ಯೆಶಾಯನ ದಿನಗಳ ಬಳಿಕ ಸಾವಿರಾರು ವರ್ಷಗಳ ತನಕ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರಲಿಲ್ಲ. ಇದಲ್ಲದೆ, 3,000 ವರ್ಷಗಳಿಗೂ ಹೆಚ್ಚು ಹಿಂದೆ ಬರೆಯಲ್ಪಟ್ಟಿದ್ದ ಯೋಬ 26:7, ದೇವರು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ,” ಎಂದು ಹೇಳುತ್ತದೆ. ಒಬ್ಬ ಬೈಬಲ್ ವಿದ್ವಾಂಸನು ಹೇಳುವುದು: “ಭೂಮಿಯು ಶೂನ್ಯಾಕಾಶದಲ್ಲಿ ಆಧಾರವಿಲ್ಲದೆ ತೂಗಾಡುತ್ತದೆಂಬ ಖಗೋಳ ವಿಜ್ಞಾನವು ತೋರಿಸಿದ ಸತ್ಯವು ಯೋಬನಿಗೆ ಹೇಗೆ ಗೊತ್ತಿತ್ತು ಎಂಬುದು, ಪವಿತ್ರ ಶಾಸ್ತ್ರದ ದೈವಪ್ರೇರಣೆಯನ್ನು ಅಲ್ಲಗಳೆಯುವವರು ಸುಲಭವಾಗಿ ಬಗೆಹರಿಸದಿರುವ ಒಂದು ಪ್ರಶ್ನೆಯಾಗಿದೆ.”
15. ಬೈಬಲಿನ ವರದಿಸುವ ಶೈಲಿಯಿಂದಾಗಿ ಅದರಲ್ಲಿ ಭರವಸೆ ಹೇಗೆ ಬಲಗೊಳ್ಳುತ್ತದೆ?
15 ಬೈಬಲಿನಲ್ಲಿ ಕಂಡುಬರುವ ವರದಿಸುವ ಶೈಲಿಯೂ ಈ ಪುರಾತನ ಗ್ರಂಥದಲ್ಲಿ ನಮ್ಮ ಭರವಸೆಯನ್ನು ಬಲಪಡಿಸುತ್ತದೆ. ಮಿಥ್ಯೆಗಳಿಗೆ ಅಸದೃಶವಾಗಿ, ಬೈಬಲಿನಲ್ಲಿ ಸೇರಿರುವ ಘಟನೆಗಳು ನಿರ್ದಿಷ್ಟ ಜನರಿಗೆ ಮತ್ತು ತಾರೀಖುಗಳಿಗೆ ಸಂಬಂಧಿತವಾಗಿವೆ. (1 ಅರಸು 14:25; ಯೆಶಾಯ 36:1; ಲೂಕ 3:1, 2) ಮತ್ತು ಪೂರ್ವಕಾಲದ ಇತಿಹಾಸಕಾರರು ತಮ್ಮ ರಾಜರ ವಿಜಯಗಳನ್ನು ಹೆಚ್ಚು ಕಡಮೆ ಸದಾ ಅತಿಶಯಿಸುತ್ತಾ, ಅವರ ಪರಾಜಯ ಮತ್ತು ದೋಷಗಳನ್ನು ಅಡಗಿಸಿಟ್ಟಿರುವಾಗ, ಬೈಬಲ್ ಲೇಖಕರು ತಮ್ಮ ಸ್ವಂತ ಘೋರ ಪಾಪಗಳ ವಿಷಯದಲ್ಲಿ ಸಹ ಯಥಾರ್ಥರು ಮತ್ತು ಪ್ರಾಮಾಣಿಕರಾಗಿದ್ದರು.—ಅರಣ್ಯಕಾಂಡ 20:7-13; 2 ಸಮುವೇಲ 12:7-14; 24:10.
ಒಂದು ಪ್ರವಾದನಾ ಗ್ರಂಥ
16. ಬೈಬಲು ದೇವರಿಂದ ಪ್ರೇರಿತವೆಂಬುದಕ್ಕೆ ಅತ್ಯಂತ ಬಲವಾದ ರುಜುವಾತೇನು?
16 ನೆರವೇರಿದ ಪ್ರವಾದನೆಯು ಬೈಬಲು ದೇವರಿಂದ ಪ್ರೇರಿತವೆಂಬುದಕ್ಕೆ ನಿರ್ಧಾರಕವಾದ ರುಜುವಾತನ್ನು ಕೊಡುತ್ತದೆ. ಸವಿವರವಾಗಿ ನೆರವೇರಿರುವ ಅನೇಕ ಪ್ರವಾದನೆಗಳು ಬೈಬಲಿನಲ್ಲಿ ಅಡಕವಾಗಿವೆ. ಬರಿಯ ಮಾನವರು ಇದಕ್ಕೆ ಜವಾಬ್ದಾರರಾಗಿರುವುದು ಅಸಾಧ್ಯವೆಂಬುದು ವ್ಯಕ್ತ. ಹಾಗಾದರೆ ಈ ಪ್ರವಾದನೆಗಳ ಹಿಂದುಗಡೆ ಏನಿದೆ? “ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ” ಅಥವಾ ದೇವರ ಕಾರ್ಯಕಾರಿ ಶಕ್ತಿಯಿಂದ “ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು” ಎಂದು ಬೈಬಲು ತಾನೇ ಹೇಳುತ್ತದೆ. (2 ಪೇತ್ರ 1:21) ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
17. ಬಾಬೆಲಿನ ಪತನವನ್ನು ಯಾವ ಪ್ರವಾದನೆಗಳು ಮುಂತಿಳಿಸಿದವು, ಮತ್ತು ಇವು ಹೇಗೆ ನೆರವೇರಿದವು?
17 ಬಾಬೆಲಿನ ಪತನ. ಮೇದ್ಯಯ ಮತ್ತು ಪಾರಸಿಯರ ಮೂಲಕ ಬಾಬೆಲಿನ ಪತನವನ್ನು ಯೆಶಾಯ ಮತ್ತು ಯೆರೆಮೀಯ ಇಬ್ಬರೂ ಮುಂತಿಳಿಸಿದರು. ಗಮನಾರ್ಹವಾಗಿ, ಈ ಘಟನೆಯ ಕುರಿತ ಯೆಶಾಯನ ಪ್ರವಾದನೆಯು, ಅದು ನಾಶವಾಗುವುದಕ್ಕೆ ಸುಮಾರು 200 ವರುಷಗಳಿಗೆ ಮೊದಲು ಬಾಬೆಲ್ ತನ್ನ ಅಧಿಕಾರದ ಪರಮಾಂಕದಲ್ಲಿದ್ದಾಗ ದಾಖಲಿಸಲ್ಪಟ್ಟಿತು! ಪ್ರವಾದನೆಯ ಈ ಕೆಳಗಿನ ಅಂಶಗಳು ಈಗ ಐತಿಹಾಸಿಕ ದಾಖಲೆಯ ವಿಷಯಗಳು: ಯೂಫ್ರೆಟೀಸ್ ನದಿಯ ನೀರುಗಳನ್ನು ಒಂದು ಕೃತಕ ಸರೋವರಕ್ಕೆ ತಿರುಗಿಸಿ ಬಿಟ್ಟು ಅದನ್ನು ಒಣಗಿಸಿದ್ದು (ಯೆಶಾಯ 44:27; ಯೆರೆಮೀಯ 50:38); ಬಾಬೆಲಿನ ನದೀದ್ವಾರಗಳಲ್ಲಿ ಅಸಡ್ಡೆಯ ನ್ಯೂನ ಭದ್ರತೆ (ಯೆಶಾಯ 45:1); ಮತ್ತು ಕೋರೆಷ ಎಂಬ ಹೆಸರಿನ ಪ್ರಭುವಿನಿಂದ ವಿಜಯ.—ಯೆಶಾಯ 44:28.
18. ‘ಗ್ರೀಸಿನ ರಾಜನ’ ಏಳುಬೀಳುಗಳಲ್ಲಿ ಬೈಬಲ್ ಪ್ರವಾದನೆ ಹೇಗೆ ನೆರವೇರಿತು?
18 ‘ಗ್ರೀಸಿನ ರಾಜ’ನ ಏಳುಬೀಳುಗಳು. ಒಂದು ದರ್ಶನದಲ್ಲಿ ದಾನಿಯೇಲನು ಒಂದು ಹೋತವು ಒಂದು ಟಗರನ್ನು ಹೊಡೆದು ಹಾಕಿ ಅದರ ಎರಡು ಕೊಂಬುಗಳನ್ನು ಮುರಿದು ಹಾಕುವುದನ್ನು ನೋಡಿದನು. ಬಳಿಕ ಹೋತದ ದೊಡ್ಡ ಕೊಂಬು ಮುರಿಯಲ್ಪಟ್ಟು ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದು ಬಂದವು. (ದಾನಿಯೇಲ 8:1-8) ದಾನಿಯೇಲನಿಗೆ ವಿವರಿಸಲಾದದ್ದು: “ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ. ಆ ಹೋತವು ಗ್ರೀಕ್ ರಾಜ್ಯ, ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ. ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವದಿಲ್ಲ.” (ದಾನಿಯೇಲ 8:20-22) ಈ ಪ್ರವಾದನೆಗನುಸಾರ, ಸುಮಾರು ಎರಡು ಶತಮಾನಗಳ ಬಳಿಕ, ‘ಗ್ರೀಸಿನ ರಾಜ,’ ಮಹಾ ಅಲೆಗ್ಸಾಂಡರನು ಎರಡು ಕೊಂಬುಗಳ ಮೇದ್ಯಯ-ಪಾರಸಿಯ ಸಾಮ್ರಾಜ್ಯವನ್ನು ಉರುಳಿಸಿದನು. ಸಾ.ಶ.ಪೂ. 323 ರಲ್ಲಿ ಅಲೆಗ್ಸಾಂಡರನು ಸತ್ತನು, ಮತ್ತು ಅವನ ಸ್ಥಾನವನ್ನು ಕ್ರಮೇಣ ಅವನ ನಾಲ್ಕು ಮಂದಿ ಸೇನಾಪತಿಗಳು ಭರ್ತಿಮಾಡಿದರು. ಆದರೂ ಈ ರಾಜ್ಯಗಳಲ್ಲಿ ಯಾವುದೂ ಅಲೆಗ್ಸಾಂಡರನ ಸಾಮ್ರಾಜ್ಯದ ಶಕ್ತಿಗೆ ಸಮಾನವಾಗಿರಲಿಲ್ಲ.
19. ಯೇಸು ಕ್ರಿಸ್ತನಲ್ಲಿ ಯಾವ ಪ್ರವಾದನೆಗಳು ನೆರವೇರಿದವು?
19 ಯೇಸು ಕ್ರಿಸ್ತನ ಜೀವನ. ಹೀಬ್ರು ಶಾಸ್ತ್ರಗಳಲ್ಲಿ, ಯೇಸುವಿನ ಜನನ, ಶುಶ್ರೂಷೆ, ಮರಣ ಮತ್ತು ಪುನರುತ್ಥಾನಗಳಲ್ಲಿ ನೆರವೇರಿದ ಹಲವಾರು ಪ್ರವಾದನೆಗಳಿವೆ. ಉದಾಹರಣೆಗೆ, 700 ವರ್ಷಗಳಿಗೂ ಮುಂಚಿತವಾಗಿ, ಮೆಸ್ಸೀಯನು, ಅಥವಾ ಕ್ರಿಸ್ತನು ಬೇತ್ಲೆಹೇಮಿನಲ್ಲಿ ಜನಿಸುವನೆಂದು ಮೀಕನು ಮುಂತಿಳಿಸಿದನು. (ಮೀಕ 5:2; ಲೂಕ 2:4-7) ಮೆಸ್ಸೀಯನಿಗೆ ಹೊಡೆಯಲಾಗುವುದು ಮತ್ತು ಅವನ ಮೇಲೆ ಉಗುಳಲಾಗುವುದೆಂದು ಮೀಕನ ಸಮಕಾಲೀನನಾದ ಯೆಶಾಯನು ಮುಂತಿಳಿಸಿದನು. (ಯೆಶಾಯ 50:6; ಮತ್ತಾಯ 26:67) ಜೆಕರ್ಯನು ಐನೂರು ವರ್ಷಗಳಿಗೆ ಮುಂಚಿತವಾಗಿ, ಮೆಸ್ಸೀಯನನ್ನು 30 ಬೆಳ್ಳೀನಾಣ್ಯಗಳಿಗೆ ಒಪ್ಪಿಸಿಕೊಡಲಾಗುವುದೆಂದು ಪ್ರವಾದಿಸಿದನು. (ಜೆಕರ್ಯ 11:12; ಮತ್ತಾಯ 26:15) ಒಂದು ಸಾವಿರ ವರ್ಷಗಳಿಗೂ ಮುಂಚಿತವಾಗಿ, ಮೆಸ್ಸೀಯನಾದ ಯೇಸುವಿನ ಮರಣದೊಂದಿಗೆ ಜೊತೆಗೂಡಿದ ಪರಿಸ್ಥಿತಿಗಳನ್ನು ದಾವೀದನು ಮುಂತಿಳಿಸಿದನು. (ಕೀರ್ತನೆ 22:7, 8, 18; ಮತ್ತಾಯ 27:35, 39-43) ಮತ್ತು ಸುಮಾರು ಐದು ಶತಮಾನಗಳಿಗೆ ಮುಂಚಿತವಾಗಿ, ಮೆಸ್ಸೀಯನು ಯಾವಾಗ ತೋರಿಬರುವನೆಂಬುದನ್ನು ಹಾಗೂ ಅವನ ಶುಶ್ರೂಷೆಯ ಅವಧಿಯನ್ನು ಮತ್ತು ಮರಣದ ಸಮಯವನ್ನು ದಾನಿಯೇಲನ ಪ್ರವಾದನೆಯು ಪ್ರಕಟಪಡಿಸಿತು. (ದಾನಿಯೇಲ 9:24-27) ಇವು ಯೇಸು ಕ್ರಿಸ್ತನಲ್ಲಿ ನೆರವೇರಿದ ಪ್ರವಾದನೆಗಳ ಕೇವಲ ಒಂದು ಗುಣಪರೀಕ್ಷಾ ಪಟ್ಟಿಯಾಗಿದೆ. ಅವನ ಕುರಿತು ಎಷ್ಟೋ ಹೆಚ್ಚಿನದನ್ನು ಮುಂದೆ ಓದುವುದನ್ನು ನೀವು ಪ್ರತಿಫಲದಾಯಕವಾಗಿ ಕಂಡುಕೊಳ್ಳುವಿರಿ.
20. ಬೈಬಲಿನ ನೆರವೇರಿದ ಪ್ರವಾದನೆಯ ಪರಿಪೂರ್ಣ ದಾಖಲೆಯು ನಮಗೆ ಯಾವ ಭರವಸೆಯನ್ನು ಕೊಡಬೇಕು?
20 ಇನ್ನೂ ಅನೇಕ ದೂರವ್ಯಾಪ್ತಿಯ ಬೈಬಲ್ ಪ್ರವಾದನೆಗಳು ಆಗಲೇ ನೆರವೇರಿವೆ. ‘ಆದರೆ ಇದು ನನ್ನ ಜೀವನವನ್ನು ಹೇಗೆ ಪ್ರಭಾವಿಸುತ್ತದೆ?’ ಎಂದು ನೀವು ಕೇಳಬಹುದು. ಒಳ್ಳೆಯದು, ಯಾವನೋ ಒಬ್ಬನು ನಿಮ್ಮೊಂದಿಗೆ ಅನೇಕ ವರ್ಷಕಾಲ ಸತ್ಯವನ್ನಾಡಿರುವಲ್ಲಿ, ಅವನು ಯಾವುದೋ ಹೊಸ ವಿಷಯವನ್ನು ಹೇಳುವಾಗ ನೀವು ಥಟ್ಟನೆ ಅವನನ್ನು ಸಂಶಯಿಸುವಿರೊ? ಇಲ್ಲ! ದೇವರು ಬೈಬಲಿನಾದ್ಯಂತ ಸತ್ಯವನ್ನು ಹೇಳಿದ್ದಾನೆ. ಇದು ನಿಮ್ಮಲ್ಲಿ, ಬರಲಿರುವ ಭೂಪ್ರಮೋದವನದ ಕುರಿತ ಪ್ರವಾದನೆಗಳಂತಹ ಬೈಬಲಿನ ವಾಗ್ದಾನಗಳ ಮೇಲೆ ನಿಮ್ಮ ಭರವಸೆಯನ್ನು ಬೆಳೆಸಬಾರದೊ? ‘ದೇವರು ಸುಳ್ಳಾಡಲಾರನು’ ಎಂದು ಬರೆದ, ಯೇಸುವಿನ ಪ್ರಥಮ ಶತಮಾನದ ಶಿಷ್ಯರಲ್ಲೊಬ್ಬನಾಗಿದ್ದ ಪೌಲನಂತಹದೇ ಭರವಸೆ ನಮ್ಮಲ್ಲಿರಬಲ್ಲದು ನಿಶ್ಚಯ. (ತೀತ 1:2) ಇದಲ್ಲದೆ, ನಾವು ಶಾಸ್ತ್ರಗಳನ್ನು ಓದಿ, ಅವುಗಳ ಬುದ್ಧಿವಾದವನ್ನು ಅನ್ವಯಿಸಿಕೊಳ್ಳುವಾಗ, ಮನುಷ್ಯರಿಗೆ ಸ್ವತಃ ಸಾಧಿಸಲಾಗದ ವಿವೇಕವನ್ನು ನಾವು ಪ್ರಯೋಗಿಸುತ್ತಿರುತ್ತೇವೆ, ಏಕೆಂದರೆ ನಿತ್ಯಜೀವಕ್ಕೆ ನಡೆಸುವ ದೇವರ ಜ್ಞಾನವನ್ನು ಪ್ರಕಟಪಡಿಸುವ ಗ್ರಂಥವು ಬೈಬಲಾಗಿದೆ.
ದೇವರ ಜ್ಞಾನಕ್ಕಾಗಿ “ಹಂಬಲವನ್ನು ಕಲ್ಪಿಸಿಕೊಳ್ಳಿರಿ”
21. ನೀವು ಬೈಬಲಿನಿಂದ ಕಲಿಯುವ ಕೆಲವು ವಿಷಯಗಳು ಕಂಗೆಡಿಸುವವುಗಳಾಗಿ ತೋರುವಲ್ಲಿ, ನೀವೇನು ಮಾಡಬೇಕು?
21 ಬೈಬಲನ್ನು ಅಭ್ಯಸಿಸುವಾಗ, ನಿಮಗೆ ಈ ಹಿಂದೆ ಕಲಿಸಲಾಗಿರುವುದಕ್ಕಿಂತ ಭಿನ್ನವಾದ ಸಂಗತಿಗಳನ್ನು ನೀವು ಕಲಿಯುವುದು ಸಂಭಾವ್ಯ. ನಿಮ್ಮ ಆದರದ ಕೆಲವು ಧಾರ್ಮಿಕ ಪದ್ಧತಿಗಳು ದೇವರನ್ನು ಮೆಚ್ಚಿಸುವುದಿಲ್ಲವೆಂದು ಸಹ ನೀವು ಕಂಡುಕೊಳ್ಳಬಹುದು. ಈ ಸ್ವಚ್ಛಂದ ಜಗತ್ತಿನಲ್ಲಿ ಸಾಮಾನ್ಯವಾಗಿರುವ ಒಪ್ಪು ತಪ್ಪುಗಳ ಮಟ್ಟಗಳಿಗಿಂತ ಹೆಚ್ಚು ಉನ್ನತವಾದ ಮಟ್ಟಗಳು ದೇವರಿಗೆ ಇವೆಯೆಂದು ನೀವು ತಿಳಿದುಕೊಳ್ಳುವಿರಿ. ಇದು ಮೊದಲಲ್ಲಿ ಕಂಗೆಡಿಸುವಂತಹದ್ದಾಗಿ ತೋರಬಹುದು. ಆದರೆ ತಾಳಿಕೊಳ್ಳಿ! ದೇವರ ಜ್ಞಾನವನ್ನು ಕಂಡುಹಿಡಿಯಲು ಶಾಸ್ತ್ರಗಳನ್ನು ಜಾಗರೂಕತೆಯಿಂದ ಪರೀಕ್ಷಿಸಿರಿ. ಬೈಬಲಿನ ಬುದ್ಧಿವಾದವು, ನಿಮ್ಮ ಆಲೋಚನೆಗಳು ಮತ್ತು ವರ್ತನೆಗಳಲ್ಲಿ ಹೊಂದಿಸಿಕೊಳ್ಳುವುದನ್ನು ಕೇಳಿಕೊಳ್ಳಬಹುದೆಂಬುದಕ್ಕೆ ಅವಕಾಶ ಕೊಡಿರಿ.
22. ನೀವು ಬೈಬಲನ್ನು ಏಕೆ ಕಲಿಯುತ್ತಿದ್ದೀರಿ, ಮತ್ತು ಇದನ್ನು ಇತರರು ತಿಳಿಯುವಂತೆ ನೀವು ಹೇಗೆ ಸಹಾಯ ಮಾಡಬಲ್ಲಿರಿ?
22 ಸದ್ಭಾವನೆಯ ಮಿತ್ರರು ಮತ್ತು ಸಂಬಂಧಿಗಳು ನಿಮ್ಮ ಬೈಬಲ್ ಅಧ್ಯಯನವನ್ನು ವಿರೋಧಿಸಬಹುದು, ಆದರೆ ಯೇಸು ಹೇಳಿದ್ದು: “ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.” (ಮತ್ತಾಯ 10:32, 33) ಕೆಲವರು, ನೀವು ಒಂದು ಕುಪಂಥದಲ್ಲಿ ಸಿಕ್ಕಿಕೊಳ್ಳುವಿರಿ ಅಥವಾ ಮತಾಂಧರಾಗಿ ಪರಿವರ್ತನೆ ಹೊಂದುವಿರಿ ಎಂದು ಭಯಪಡಬಹುದು. ಆದರೂ ವಾಸ್ತವವಾಗಿ, ನೀವು ದೇವರ ಮತ್ತು ಆತನ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದೀರಿ, ಅಷ್ಟೆ. (1 ತಿಮೊಥೆಯ 2:3, 4) ಇದನ್ನು ಇತರರು ಅರ್ಥಮಾಡಿಕೊಳ್ಳುವಂತೆ ಸಹಾಯಿಸಲು, ನೀವು ಕಲಿಯುತ್ತಿರುವ ವಿಷಯಗಳ ಕುರಿತು ಅವರೊಡನೆ ಮಾತಾಡುವಾಗ ವಾದಶೀಲರಾಗಿರದೆ, ವಿವೇಚಿಸುವವರಾಗಿರಿ. (ಫಿಲಿಪ್ಪಿ 4:5) ಬೈಬಲಿನ ಜ್ಞಾನವು ಜನರಿಗೆ ನಿಜವಾಗಿಯೂ ಲಾಭದಾಯಕವೆಂಬ ರುಜುವಾತನ್ನು ಅನೇಕರು ನೋಡುವಾಗ, ಅವರನ್ನು “ವಾಕ್ಯೋಪದೇಶವಿಲ್ಲದೆ” ಜಯಿಸಲಾಗುತ್ತದೆಂಬುದನ್ನು ನೆನಪಿಡಿರಿ.—1 ಪೇತ್ರ 3:1, 2.
23. ದೇವರ ಜ್ಞಾನಕ್ಕಾಗಿ ನೀವು ಹೇಗೆ “ಹಂಬಲವನ್ನು ಕಲ್ಪಿಸಿ” ಕೊಳ್ಳಬಲ್ಲಿರಿ?
23 ಬೈಬಲು ನಮ್ಮನ್ನು ಪ್ರೋತ್ಸಾಹಿಸುವುದು: “ನವಜಾತ ಶಿಶುಗಳಂತೆ ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಕಲ್ಪಿಸಿಕೊಳ್ಳಿರಿ.” (1 ಪೇತ್ರ 2:2, NW) ಒಂದು ಶಿಶು ಅದರ ತಾಯಿಯಿಂದ ಪೋಷಣೆಯ ಮೇಲೆ ಹೊಂದಿಕೊಂಡಿದ್ದು, ಆ ಆವಶ್ಯಕತೆಯನ್ನು ಪೂರೈಸುವಂತೆ ಪಟ್ಟುಹಿಡಿಯುತ್ತದೆ. ತದ್ರೀತಿ, ನಾವು ದೇವರಿಂದ ಬರುವ ಜ್ಞಾನದ ಮೇಲೆ ಹೊಂದಿಕೊಂಡಿದ್ದೇವೆ. ನಿಮ್ಮ ಅಧ್ಯಯನವನ್ನು ಮುಂದುವರಿಸುವ ಮೂಲಕ ಆತನ ವಾಕ್ಯಕ್ಕಾಗಿ “ಹಂಬಲವನ್ನು ಕಲ್ಪಿಸಿಕೊಳ್ಳಿರಿ.” ಹೌದು, ಬೈಬಲನ್ನು ಪ್ರತಿದಿನ ಓದುವುದನ್ನು ನಿಮ್ಮ ಗುರಿಯಾಗಿರಿಸಿರಿ. (ಕೀರ್ತನೆ 1:1-3) ಇದು ನಿಮಗೆ ಪುಷ್ಕಲ ಆಶೀರ್ವಾದಗಳನ್ನು ತರುವುದು, ಏಕೆಂದರೆ ದೇವರ ನಿಯಮಗಳ ಕುರಿತು ಕೀರ್ತನೆ 19:11 ಹೇಳುವುದು: “ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.”
[ಪಾದಟಿಪ್ಪಣಿಗಳು]
a ಸಾ.ಶ.ಪೂ. ಎಂದರೆ “ಸಾಮಾನ್ಯ ಶಕಕ್ಕೆ ಪೂರ್ವ.” ಇದು ಕ್ರಿ.ಪೂ. (“ಕ್ರಿಸ್ತ ಪೂರ್ವ”) ಎಂಬುದಕ್ಕಿಂತ ಹೆಚ್ಚು ನಿಷ್ಕೃಷ್ಟ. ಸಾ.ಶ. ಎಂಬುದು, “ಸಾಮಾನ್ಯ ಶಕ” ವನ್ನು, ಅನೇಕ ವೇಳೆ ಆ್ಯನೊ ಡಾಮಿನಿ, ಎಂದರೆ “ನಮ್ಮ ಸ್ವಾಮಿಯ ವರ್ಷದಲ್ಲಿ” ಎಂಬ ಅರ್ಥವಿರುವ ಕ್ರಿ.ಶ. ವನ್ನು ಸೂಚಿಸುತ್ತದೆ.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಬೈಬಲು ಯಾವ ವಿಧಗಳಲ್ಲಿ ಇನ್ನಾವ ಗ್ರಂಥಕ್ಕಿಂತಲೂ ಅದ್ವಿತೀಯವಾಗಿದೆ?
ಬೈಬಲಿನ ಮೇಲೆ ನೀವೇಕೆ ಭರವಸವಿಡಬಲ್ಲಿರಿ?
ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆ ಎಂಬುದನ್ನು ನಿಮಗೆ ಯಾವುದು ರುಜುಪಡಿಸುತ್ತದೆ?
[ಪುಟ 14ರಲ್ಲಿರುವ ಚೌಕ]
ನಿಮ್ಮ ಬೈಬಲನ್ನು ಸದುಪಯೋಗಿಸಿರಿ
ಬೈಬಲಿನೊಂದಿಗೆ ಪರಿಚಿತರಾಗುವ ವಿಷಯವು ಕಷ್ಟಕರವಾಗಿರಬೇಕೆಂದಿಲ್ಲ. ಬೈಬಲಿನ ಪುಸ್ತಕಗಳ ಕ್ರಮ ಮತ್ತು ಸ್ಥಾನವನ್ನು ತಿಳಿದುಕೊಳ್ಳಲು, ಅದರ ಪರಿವಿಡಿಯನ್ನು ಉಪಯೋಗಿಸಿರಿ.
ಸುಲಭ ಪರಾಮರ್ಶೆಗಾಗಿ, ಬೈಬಲಿನ ಪುಸ್ತಕಗಳಲ್ಲಿ ಅಧ್ಯಾಯಗಳು ಮತ್ತು ವಚನಗಳಿವೆ. ಅಧ್ಯಾಯ ವಿಭಜನೆಗಳು 13 ನೆಯ ಶತಮಾನದಲ್ಲಿ ಕೂಡಿಸಲ್ಪಟ್ಟವು, ಮತ್ತು 16 ನೆಯ ಶತಮಾನದ ಫ್ರೆಂಚ್ ಮುದ್ರಣಕಾರನೊಬ್ಬನು, ಗ್ರೀಕ್ ಶಾಸ್ತ್ರಗಳನ್ನು ಸದ್ಯದ ದಿನದ ವಚನಗಳಾಗಿ ವಿಭಾಗಿಸಿದನೆಂದು ವ್ಯಕ್ತವಾಗುತ್ತದೆ. ಅಧ್ಯಾಯ ಮತ್ತು ವಚನ ಇವೆರಡೂ ಅಂಕೆಗಳು ಇದ್ದ ಪ್ರಥಮ ಪೂರ್ತಿ ಬೈಬಲು, 1553 ರಲ್ಲಿ ಪ್ರಕಟವಾದ ಒಂದು ಫ್ರೆಂಚ್ ಆವೃತ್ತಿಯಾಗಿತ್ತು.
ಈ ಪುಸ್ತಕದಲ್ಲಿ ಶಾಸ್ತ್ರವಚನಗಳು ಉದಾಹರಿಸಲ್ಪಡುವಾಗ, ಮೊದಲನೆಯ ಅಂಕೆಯು ಅಧ್ಯಾಯವನ್ನೂ ಮುಂದಿನದ್ದು ವಚನವನ್ನೂ ಸೂಚಿಸುತ್ತವೆ. ಉದಾಹರಣೆಗೆ, ಉಲ್ಲೇಖವಾದ “ಜ್ಞಾನೋಕ್ತಿ 2:5” ಎಂದರೆ ಜ್ಞಾನೋಕ್ತಿಗಳು ಪುಸ್ತಕ, 2 ನೆಯ ಅಧ್ಯಾಯ, 5 ನೆಯ ವಚನ. ಉದಾಹರಿಸಿದ ಶಾಸ್ತ್ರಗಳನ್ನು ತೆರೆದು ನೋಡುವ ಮೂಲಕ, ಬೈಬಲ್ ವಚನಗಳನ್ನು ಕಂಡುಹಿಡಿಯುವುದು ನಿಮಗೆ ಬೇಗನೆ ಸಲೀಸಾಗಿ ಕಂಡುಬರುವುದು.
ಬೈಬಲಿನೊಂದಿಗೆ ಪರಿಚಿತರಾಗುವ ಅತ್ಯುತ್ತಮ ಮಾರ್ಗವು ಅದನ್ನು ಪ್ರತಿದಿನ ಓದುವುದೇ. ಮೊದಮೊದಲು, ಇದು ಒಂದು ಪಂಥಾಹ್ವಾನವಾಗಿ ತೋರಬಹುದು. ಆದರೆ ನೀವು ಪ್ರತಿದಿನ ಅವುಗಳ ಉದ್ದದ ಮೇಲೆ ಹೊಂದಿಕೊಂಡು, ಮೂರರಿಂದ ಐದು ಅಧ್ಯಾಯಗಳನ್ನು ಓದುವಲ್ಲಿ, ನೀವು ಪೂರ್ತಿ ಬೈಬಲನ್ನು ಒಂದು ವರ್ಷದಲ್ಲಿ ಓದಿ ಮುಗಿಸುವಿರಿ. ಇಂದೇ ಏಕೆ ಆರಂಭಿಸಬಾರದು?
[ಪುಟ 19ರಲ್ಲಿರುವ ಚೌಕ]
ಬೈಬಲ್—ಅದ್ವಿತೀಯವಾದ ಒಂದು ಗ್ರಂಥ
• ಬೈಬಲು “ದೈವಪ್ರೇರಿತ.” (2 ತಿಮೊಥೆಯ 3:16) ಮಾತುಗಳನ್ನು ಬರೆದದ್ದು ಮನುಷ್ಯರಾದರೂ, ಅವರ ಆಲೋಚನೆಗಳನ್ನು ನಿರ್ದೇಶಿಸಿದವನು ದೇವರು. ಹೀಗೆ, ಬೈಬಲು ವಾಸ್ತವವಾಗಿ, “ದೇವರ ವಾಕ್ಯ.”—1 ಥೆಸಲೊನೀಕ 2:13.
• ಬೈಬಲನ್ನು 16 ಶತಮಾನಗಳ ಅವಧಿಯಲ್ಲಿ, ನಾನಾ ಬಗೆಯ ಹಿನ್ನೆಲೆಗಳಿದ್ದ ಸುಮಾರು 40 ಲೇಖನದಾತರು ಬರೆದರು. ಹಾಗಿದ್ದರೂ, ಪೂರ್ತಿಗೊಳಿಸಲ್ಪಟ್ಟ ಬೈಬಲು ಆದಿಯಿಂದ ಅಂತ್ಯದ ತನಕ ಸಮರಸವಾಗಿದೆ.
• ಬೈಬಲು ಬೇರೆ ಯಾವ ಗ್ರಂಥಕ್ಕೂ ಹೆಚ್ಚಾದ ವಾಗ್ಯುದ್ಧವನ್ನು ಪಾರಾಗಿದೆ. ಮಧ್ಯ ಯುಗಗಳಲ್ಲಿ, ಶಾಸ್ತ್ರಗಳ ಕೇವಲ ಒಂದು ಪ್ರತಿಯಿದ್ದುದಕ್ಕಾಗಿ ಜನರನ್ನು ಕಂಬದ ಮೇಲೆ ಸುಡಲಾಯಿತು.
• ಬೈಬಲು ಜಗತ್ತಿನಲ್ಲಿ ಅತ್ಯಧಿಕ ಮಾರಾಟವಾಗಿರುವ ಗ್ರಂಥ. ಅದನ್ನು, ಪೂರ್ತಿಯಾಗಿ ಅಥವಾ ಆಂಶಿಕವಾಗಿ, 2,000ಕ್ಕೂ ಹೆಚ್ಚಿನ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಕೋಟ್ಯಂತರ ಪ್ರತಿಗಳು ಮುದ್ರಿಸಲಾಗಿವೆ, ಮತ್ತು ಅದರ ಒಂದು ಪ್ರತಿಯಾದರೂ ಕಂಡುಬರದ ಸ್ಥಳ ಭೂಮಿಯ ಮೇಲಿಲ್ಲ.
• ಬೈಬಲಿನ ಅತಿ ಹಳೆಯ ಭಾಗ ಸಾ.ಶ.ಪೂ. 16 ನೆಯ ಶತಮಾನದ್ದು. ಇದು ಹಿಂದೂಗಳ ಋಗ್ವೇದ (ಸುಮಾರು ಸಾ.ಶ.ಪೂ. 900 ರಲ್ಲಿ ಪೂರ್ಣಗೊಳಿಸಲ್ಪಟ್ಟಿತು), ಅಥವಾ ಬೌದ್ಧರ “ತ್ರಿಪಿಟಕ” (ಸಾ.ಶ.ಪೂ. ಐದನೆಯ ಶತಮಾನ), ಅಥವಾ ಇಸ್ಲಾಮಿನ ಕುರಾನ್ (ಸಾ.ಶ. ಏಳನೆಯ ಶತಮಾನ), ಹಾಗೂ ಶಿಂಟೋ ಧರ್ಮದ ನಿಹೋಂಗಿ (ಸಾ.ಶ. 720) ಗೋಚರವಾಗುವುದಕ್ಕಿಂತ ಮುಂಚಿತವಾಗಿದೆ.
[ಪುಟ 20ರಲ್ಲಿ ಇಡೀ ಪುಟದ ಚಿತ್ರ]