ಅಧ್ಯಾಯ ಇಪ್ಪತ್ತಾರು
“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು”
1. ಯೆಶಾಯ 33:24ರ ಮಾತುಗಳು ಏಕೆ ಸಾಂತ್ವನದಾಯಕವಾಗಿವೆ?
“ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು” ಅಪೊಸ್ತಲ ಪೌಲನು ಹೇಳಿದನು. (ರೋಮಾಪುರ 8:22) ವೈದ್ಯಕೀಯ ರಂಗದಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ, ರೋಗ ಮತ್ತು ಮರಣವು ಮನುಷ್ಯನ ಬೆಂಬಿಡದೆ ಬಾಧಿಸುತ್ತಿದೆ. ಹಾಗಾದರೆ, ಯೆಶಾಯನ ಪ್ರವಾದನೆಯ ಈ ಭಾಗವನ್ನು ಶಿಖರಕ್ಕೇರಿಸುವ ಈ ವಾಗ್ದಾನವು ಎಷ್ಟು ಅದ್ಭುತಕರವಾಗಿದೆ! ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದ’ ಸಮಯವನ್ನು ಒಂದಿಷ್ಟು ಊಹಿಸಿನೋಡಿರಿ. (ಯೆಶಾಯ 33:24) ಈ ವಾಗ್ದಾನವು ಯಾವಾಗ ಮತ್ತು ಹೇಗೆ ನೆರವೇರುವುದು?
2, 3. (ಎ) ಯಾವ ವಿಧದಲ್ಲಿ ಇಸ್ರಾಯೇಲ್ ಜನಾಂಗವು ರೋಗಗ್ರಸ್ಥವಾಗಿದೆ? (ಬಿ) ದೇವರು ನೀಡುವ ಶಿಕ್ಷೆಯ ‘ಕೋಲಾಗಿ’ ಅಶ್ಶೂರವು ಹೇಗೆ ಕಾರ್ಯಮಾಡುತ್ತದೆ?
2 ದೇವರ ಒಡಂಬಡಿಕೆಯ ಜನರು ಆತ್ಮಿಕ ರೋಗಕ್ಕೆ ತುತ್ತಾಗಿರುವ ಸಮಯದಲ್ಲಿ ಯೆಶಾಯನು ಇದನ್ನು ಬರೆಯುತ್ತಿದ್ದಾನೆ. (ಯೆಶಾಯ 1:5, 6) ಅವರು ಧರ್ಮಭ್ರಷ್ಟತೆ ಹಾಗೂ ಅನೈತಿಕತೆಯಲ್ಲಿ ಎಷ್ಟು ಮುಳುಗಿಹೋಗಿದ್ದಾರೆಂದರೆ, ಅವರು ಯೆಹೋವ ದೇವರಿಂದ ಬರುವ ಕಠಿನವಾದ ಶಿಕ್ಷೆಗೆ ಗುರಿಯಾಗಲೇಬೇಕು. ಆ ಶಿಕ್ಷೆಯನ್ನು ನೀಡಲು, ಯೆಹೋವನು ಅಶ್ಶೂರವನ್ನು ತನ್ನ ‘ಕೋಲಾಗಿ’ ಉಪಯೋಗಿಸುತ್ತಾನೆ. (ಯೆಶಾಯ 7:17; 10:5, 15) ಹೀಗೆ, ಇಸ್ರಾಯೇಲಿನ ಹತ್ತು ಗೋತ್ರಗಳ ಉತ್ತರ ರಾಜ್ಯವು, ಸಾ.ಶ.ಪೂ. 740ರಲ್ಲಿ ಅಶ್ಶೂರಕ್ಕೆ ಶರಣಾಗತವಾಗುತ್ತದೆ. (2 ಅರಸುಗಳು 17:1-18; 18:9-11) ಕೆಲವೇ ವರ್ಷಗಳ ನಂತರ, ಅಶ್ಶೂರರ ರಾಜ ಸನ್ಹೇರೀಬನು ದಕ್ಷಿಣ ರಾಜ್ಯವಾದ ಯೆಹೂದದ ಮೇಲೆ ದಂಡೆತ್ತಿ ಬರುತ್ತಾನೆ. (2 ಅರಸುಗಳು 18:13; ಯೆಶಾಯ 36:1) ಈ ಅಶ್ಶೂರವೆಂಬ ಪ್ರಚಂಡ ಶಕ್ತಿಯು ದಂಡೆತ್ತಿಬಂದು ದೇಶದಲ್ಲೆಲ್ಲಾ ಹಬ್ಬಿಕೊಂಡಾಗ, ಯೆಹೂದದ ಸರ್ವನಾಶವನ್ನು ಮಾಡಿಯೇ ತೀರುವುದೆಂದು ತೋರುತ್ತದೆ.
3 ದೇವಜನರಿಗೆ ಶಿಕ್ಷೆವಿಧಿಸುವ ಅಧಿಕಾರವನ್ನು ದುರುಪಯೋಗಿಸಿದ ಅಶ್ಶೂರವು, ಲೋಕ ಸಾಮ್ರಾಜ್ಯವಾಗಿ ಮೆರೆಯುವ ತನ್ನ ಮಹದಾಸೆಯನ್ನು ಈಗ ಬೆನ್ನಟ್ಟುತ್ತಿದೆ. (ಯೆಶಾಯ 10:7-11) ತನ್ನ ಜನರನ್ನು ಇಷ್ಟು ಕ್ರೂರವಾಗಿ ನಡೆಸಿಕೊಂಡ ಅಶ್ಶೂರವನ್ನು ಯೆಹೋವನು ದಂಡಿಸದೆ ಬಿಡುವನೊ? ಈ ಜನಾಂಗದ ಆತ್ಮಿಕ ಅನಾರೋಗ್ಯವು ಎಂದಾದರೂ ಗುಣವಾಗುವುದೊ? ಯೆಶಾಯ 33ನೆಯ ಅಧ್ಯಾಯದಲ್ಲಿ, ಯೆಹೋವನು ಈ ಪ್ರಶ್ನೆಗಳಿಗೆ ನೀಡಿದ ಉತ್ತರಗಳನ್ನು ನಾವು ಓದುತ್ತೇವೆ.
ಸೂರೆಮಾಡಿದವನು ಸೂರೆಯಾಗುವನು
4, 5. (ಎ) ಅಶ್ಶೂರದ ಸ್ಥಿತಿಯು ಹೇಗೆ ತಲೆಕೆಳಗಾಗಲಿದೆ? (ಬಿ) ಯೆಹೋವನ ಜನರ ಪರವಾಗಿ ಯಾವ ರೀತಿಯ ಪ್ರಾರ್ಥನೆಯನ್ನು ಯೆಶಾಯನು ಮಾಡುತ್ತಾನೆ?
4 ಪ್ರವಾದನೆಯು ಆರಂಭಿಸುವುದು: “ಸೂರೆಯಾಗದಿದ್ದರೂ ಸೂರೆಮಾಡಿದಿ, ಬಾಧೆಪಡದಿದ್ದರೂ ಬಾಧಿಸಿದಿ; ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ! ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು.” (ಯೆಶಾಯ 33:1) ಸೂರೆಮಾಡಿದ ಅಶ್ಶೂರವನ್ನೇ ಸಂಬೋಧಿಸಿ ಯೆಶಾಯನು ಮಾತಾಡುತ್ತಾನೆ. ತನ್ನ ಅಧಿಕಾರದ ತುತ್ತತುದಿಯಲ್ಲಿರುವ ಆ ಆಕ್ರಮಣಕಾರಿ ರಾಷ್ಟ್ರವನ್ನು ಸದೆಬಡಿಯುವುದು ಅಸಾಧ್ಯವಾದದ್ದಾಗಿ ತೋರುತ್ತದೆ. ಅದು ‘ಸೂರೆಯಾಗದಿದ್ದರೂ ಸೂರೆಮಾಡಿದೆ’ ಮಾತ್ರವಲ್ಲ, ಯೆಹೂದದ ಪಟ್ಟಣಗಳನ್ನು ಅದು ಹಾಳುಗೆಡುಹಿದೆ ಮತ್ತು ಒಂದಿನಿತೂ ಭಯವಿಲ್ಲದೆ ಯೆಹೋವನ ಆಲಯದಿಂದಲೂ ಸಿರಿಸಂಪತ್ತನ್ನು ಕೊಳ್ಳೆಹೊಡೆದಿದೆ! (2 ಅರಸುಗಳು 18:14-16; 2 ಪೂರ್ವಕಾಲವೃತ್ತಾಂತ 28:21) ಆದರೆ ಈಗ ಪರಿಸ್ಥಿತಿಯು ತಲೆಕೆಳಗಾಗುವುದು. ‘ನೀನು ಸೂರೆಯಾಗುವಿ’ ಎಂದು ಯೆಶಾಯನು ಧೈರ್ಯದಿಂದ ಸಾರಿಹೇಳುತ್ತಾನೆ. ನಂಬಿಗಸ್ತರಿಗೆ ಈ ಪ್ರವಾದನೆಯು ಎಷ್ಟೊಂದು ಸಾಂತ್ವನವನ್ನು ನೀಡುತ್ತದೆ!
5 ಆ ಭಯಂಕರವಾದ ಸಮಯದಲ್ಲಿ, ಯೆಹೋವನ ನಿಷ್ಠಾವಂತ ಆರಾಧಕರು ಆತನ ಸಹಾಯಕ್ಕಾಗಿ ಎದುರುನೋಡುತ್ತಾರೆ. ಯೆಶಾಯನು ಪ್ರಾರ್ಥಿಸುವುದು: “ಯೆಹೋವನೇ, ನಮ್ಮನ್ನು ಕರುಣಿಸು! ನಿನ್ನನ್ನು ಕಾದುಕೊಂಡಿದ್ದೇವೆ; ಪ್ರತಿ ಮುಂಜಾನೆಯೂ ನಮಗೆ ಭುಜಬಲವಾಗಿಯೂ ಇಕ್ಕಟ್ಟಿನಲ್ಲಿ ನಮಗೆ ರಕ್ಷಣೆಯಾಗಿಯೂ ಇರು. ಭೋರ್ಗರೆಯುವ ಶಬ್ದಕ್ಕೆ ಜನಾಂಗಗಳು ಓಡುವವು; ನೀನು ಏಳುವಾಗ ರಾಜ್ಯಗಳು ದಿಕ್ಕಾಪಾಲಾಗುವವು.” (ಯೆಶಾಯ 33:2, 3) ಯೆಹೋವನು ಈ ಹಿಂದೆ ಎಷ್ಟೋ ಸಾರಿ ತನ್ನ ಜನರನ್ನು ಕಾಪಾಡಿದಂತೆಯೇ ಈಗಲೂ ಕಾಪಾಡಬೇಕೆಂದು ಯೆಶಾಯನು ಪ್ರಾರ್ಥಿಸುತ್ತಾನೆ. (ಕೀರ್ತನೆ 44:3; 68:1) ಈ ಪ್ರಾರ್ಥನೆಯನ್ನು ಮಾಡಿದ ಕೂಡಲೇ, ಯೆಹೋವನು ಅದಕ್ಕೆ ನೀಡಿದ ಉತ್ತರವನ್ನೂ ಯೆಶಾಯನು ಮುಂತಿಳಿಸಿಬಿಡುತ್ತಾನೆ!
6. ಅಶ್ಶೂರಕ್ಕೆ ಏನು ಸಂಭವಿಸುವುದು, ಮತ್ತು ಇದು ಏಕೆ ಸೂಕ್ತವಾದದ್ದಾಗಿದೆ?
6 “ಇತರರು ಮಿಡತೆಗಳಂತೆ ಕೊಳ್ಳೆಮಾಡುವರು; ಶಲಭಗಳಂತೆ ಅದರ [ಅಶ್ಶೂರರ] ಮೇಲೆ ಹಾರಿಬೀಳುವರು.” (ಯೆಶಾಯ 33:4) ಧ್ವಂಸಮಾಡುವ ಕೀಟಗಳ ಆಕ್ರಮಣದ ಬಗ್ಗೆ ಯೆಹೂದದ ನಿವಾಸಿಗಳಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಈಗಲಾದರೊ ಯೆಹೂದದ ವೈರಿಗಳು ಈ ಧ್ವಂಸಕ್ಕೆ ಗುರಿಯಾಗುವರು. ಈ ಭಾರೀ ಸೋಲಿನಿಂದ ಅಶ್ಶೂರವು ತಲೆತಗ್ಗಿಸಿಕೊಳ್ಳುವುದು ಮತ್ತು ಅದರ ಸೈನಿಕರು ಕೊಳ್ಳೆಯನ್ನು ಬಿಟ್ಟು ತಮ್ಮ ಜೀವಗಳಿಗಾಗಿ ಓಡಿಹೋಗುವಂತೆ ಒತ್ತಾಯಿಸಲ್ಪಡುವರು. ಆ ಕೊಳ್ಳೆಯನ್ನೆಲ್ಲಾ ಯೆಹೂದದ ನಿವಾಸಿಗಳೇ ಅನುಭೋಗಿಸುವರು! ಕ್ರೂರತೆಗೆ ಹೆಸರುವಾಸಿಯಾಗಿರುವ ಅಶ್ಶೂರವು ಸ್ವತಃ ಸೂರೆಯಾಗುವುದು ತೀರ ಸೂಕ್ತವಾದದ್ದು.—ಯೆಶಾಯ 37:36.
ಆಧುನಿಕ ದಿನದ ಅಶ್ಶೂರ
7. (ಎ) ಆತ್ಮಿಕ ರೋಗಕ್ಕೆ ತುತ್ತಾಗಿದ್ದ ಇಸ್ರಾಯೇಲ್ ಜನಾಂಗಕ್ಕೆ ಇಂದು ಯಾರನ್ನು ಹೋಲಿಸಬಹುದು? (ಬಿ) ಕ್ರೈಸ್ತಪ್ರಪಂಚವನ್ನು ನಾಶಮಾಡಲು ಯೆಹೋವನು ಯಾರನ್ನು ‘ಕೋಲಾಗಿ’ ಉಪಯೋಗಿಸುವನು?
7 ಯೆಶಾಯನ ಪ್ರವಾದನೆಯು ನಮ್ಮ ದಿನಗಳಿಗೆ ಹೇಗೆ ಅನ್ವಯಿಸುತ್ತದೆ? ಆತ್ಮಿಕ ರೋಗಕ್ಕೆ ತುತ್ತಾಗಿರುವ ಇಸ್ರಾಯೇಲ್ ಜನಾಂಗವನ್ನು ಅಪನಂಬಿಗಸ್ತ ಕ್ರೈಸ್ತಪ್ರಪಂಚಕ್ಕೆ ಹೋಲಿಸಸಾಧ್ಯವಿದೆ. ಇಸ್ರಾಯೇಲನ್ನು ಶಿಕ್ಷಿಸಲು ಹೇಗೆ ಯೆಹೋವನು ಅಶ್ಶೂರವನ್ನು ಒಂದು ‘ಕೋಲಿನಂತೆ’ ಬಳಸಿದನೊ, ಹಾಗೆಯೇ ಕ್ರೈಸ್ತಪ್ರಪಂಚವನ್ನು ಮತ್ತು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲನ್ನು’ ಶಿಕ್ಷಿಸಲು ಕೂಡ ಆತನು ಒಂದು ‘ಕೋಲನ್ನು’ ಉಪಯೋಗಿಸುವನು. (ಯೆಶಾಯ 10:5; ಪ್ರಕಟನೆ 18:2-8) ಆ “ಕೋಲು” ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳಾಗಿರುವವು. ಪ್ರಕಟನೆಯ ಪುಸ್ತಕದಲ್ಲಿ ಈ ಸಂಸ್ಥೆಯನ್ನು, ಹತ್ತು ಕೊಂಬುಗಳುಳ್ಳ ಏಳು ತಲೆಗಳ ರಕ್ತವರ್ಣದ ಮೃಗವಾಗಿ ಚಿತ್ರಿಸಲಾಗಿದೆ.—ಪ್ರಕಟನೆ 17:3, 15-17.
8. (ಎ) ಇಂದು ಯಾರನ್ನು ಸನ್ಹೇರೀಬನಿಗೆ ಹೋಲಿಸಸಾಧ್ಯವಿದೆ? (ಬಿ) ಈ ಆಧುನಿಕ ದಿನದ ಸನ್ಹೇರೀಬನು ಯಾರ ಮೇಲೆ ದಾಳಿಮಾಡುವ ಧೈರ್ಯ ತೋರಿಸುವನು, ಮತ್ತು ಇದರ ಪರಿಣಾಮವೇನಾಗಿರುವುದು?
8 ಆಧುನಿಕ ದಿನದ ಅಶ್ಶೂರವು ಸುಳ್ಳು ಧರ್ಮದ ರಾಜ್ಯದೊಳಗೆ ಕ್ರೋಧಾವೇಶದಿಂದ ನುಗ್ಗುವಾಗ, ಅದನ್ನು ತಡೆಯಲು ಸಾಧ್ಯವೇ ಇಲ್ಲವೆಂಬಂತೆ ತೋರುವುದು. ಸನ್ಹೇರೀಬನಂತಹ ಮನೋಭಾವವನ್ನು ತೋರಿಸುತ್ತಾ, ಪಿಶಾಚನಾದ ಸೈತಾನನು ದಂಡನೆಗೆ ಅರ್ಹರಾದ ಧರ್ಮಭ್ರಷ್ಟ ಸಂಸ್ಥೆಗಳನ್ನು ಮಾತ್ರವಲ್ಲ ಸತ್ಯ ಕ್ರೈಸ್ತರನ್ನು ಸಹ ತಾಕುವಷ್ಟು ಧೈರ್ಯವನ್ನು ಪ್ರದರ್ಶಿಸುವನು. ಯೆಹೋವನ ಅಭಿಷಿಕ್ತ ಆತ್ಮಿಕ ಪುತ್ರರ ಶೇಷವರ್ಗದೊಂದಿಗೆ, ಸೈತಾನನ ಲೋಕದ ಒಂದು ಭಾಗವಾಗಿರುವ ಮಹಾ ಬಾಬೆಲಿನಿಂದ ಹೊರಬಂದಿರುವ ಲಕ್ಷಾಂತರ ಜನರು ಯೆಹೋವನ ರಾಜ್ಯವನ್ನು ಬೆಂಬಲಿಸುತ್ತಾರೆ. ತನಗೆ ಮರ್ಯಾದೆ ಸಲ್ಲಿಸಲು ನಿರಾಕರಿಸುವ ಸತ್ಯ ಕ್ರೈಸ್ತರ ಮೇಲೆ ಕೋಪಗೊಂಡವನಾಗಿ, “ಈ ಪ್ರಪಂಚದ ದೇವರು” ಅಂದರೆ ಸೈತಾನನು ಅವರ ಮೇಲೆ ಸಿಡಿದೇಳುವನು. (2 ಕೊರಿಂಥ 4:4; ಯೆಹೆಜ್ಕೇಲ 38:10-16) ಈ ಆಕ್ರಮಣವು ಭೀಭತ್ಸವಾಗಿರುವುದು ಎಂಬುದರಲ್ಲಿ ಸಂದೇಹವೇ ಇಲ್ಲ, ಆದರೂ ಯೆಹೋವನ ಜನರು ಭಯದಿಂದ ಮುದುಡಿಕೊಳ್ಳಬೇಕಾಗಿಲ್ಲ. (ಯೆಶಾಯ 10:24, 25) ತಾನು ‘ಸಂಕಟದಲ್ಲಿ ರಕ್ಷಣೆಯಾಗಿರುವೆನು’ ಎಂಬ ಆಶ್ವಾಸನೆಯನ್ನು ಅವರು ದೇವರಿಂದಲೇ ಪಡೆದುಕೊಂಡಿದ್ದಾರೆ. ಆತನು ಹಸ್ತಕ್ಷೇಪಮಾಡಿ, ಸೈತಾನನ ಮೇಲೆ ಮತ್ತು ಅವನ ಗುಂಪಿನ ಮೇಲೆ ನಾಶನವನ್ನು ಬರಮಾಡುವನು. (ಯೆಹೆಜ್ಕೇಲ 38:18-23) ಪುರಾತನ ಕಾಲದಂತೆಯೇ ಈಗಲೂ ದೇವಜನರನ್ನು ಸೂರೆಮಾಡಲು ಪ್ರಯತ್ನಿಸುವವರು ಸ್ವತಃ ಸೂರೆಯಾಗುವರು! (ಹೋಲಿಸಿ ಜ್ಞಾನೋಕ್ತಿ 13:22ಬಿ.) ಯೆಹೋವನ ನಾಮವು ಪವಿತ್ರೀಕರಿಸಲ್ಪಡುವುದು, ಮತ್ತು ಬದುಕಿ ಉಳಿದವರು ‘ಜ್ಞಾನವನ್ನೂ ತಿಳುವಳಿಕೆಯನ್ನೂ [ಮತ್ತು] ಯೆಹೋವನ ಮೇಲಣ ಭಯಭಕ್ತಿಯನ್ನು’ ಕೋರಿದ್ದಕ್ಕಾಗಿ ಬಹುಮಾನಿಸಲ್ಪಡುವರು.—ಓದಿ ಯೆಶಾಯ 33:5, 6.
ಅಪನಂಬಿಗಸ್ತರಿಗೊಂದು ಎಚ್ಚರಿಕೆ
9. (ಎ) ಯೆಹೂದದ “ಸಿಂಹವೀರರು” ಮತ್ತು “ಸಮಾಧಾಯಕ ರಾಯಭಾರಿಗಳು” ಏನು ಮಾಡುವರು? (ಬಿ) ಯೆಹೂದದ ಶಾಂತಿಸಂಧಾನಗಳಿಗೆ ಅಶ್ಶೂರವು ಹೇಗೆ ಪ್ರತಿಕ್ರಿಯಿಸುವುದು?
9 ಯೆಹೂದದಲ್ಲಿರುವ ಅಪನಂಬಿಗಸ್ತರ ಗತಿ ಏನಾಗಿರುವುದು? ಅಶ್ಶೂರವು ವಿಧಿಸಲಿರುವ ದಂಡನೆಯ ಬಗ್ಗೆ ಯೆಶಾಯನು ಕರಾಳವಾದ ಚಿತ್ರವನ್ನು ಮೂಡಿಸುತ್ತಾನೆ. (ಓದಿ ಯೆಶಾಯ 33:7.) ಅಶ್ಶೂರವು ಮುಂದಕ್ಕೆ ಹೆಜ್ಜೆಯಿಟ್ಟಂತೆ, ಯೆಹೂದದ ಮಿಲಿಟರಿ “ಸಿಂಹವೀರರು” ಭಯದಿಂದ ಕೂಗಿಕೊಳ್ಳುತ್ತಾರೆ. ಯುದ್ಧದ ಸಾಕಾರವಾಗಿರುವ ಅಶ್ಶೂರದೊಂದಿಗೆ ಶಾಂತಿಸಂಧಾನವನ್ನು ಮಾಡಲಿಕ್ಕಾಗಿ ಕಳುಹಿಸಲ್ಪಟ್ಟ “ಸಮಾಧಾಯಕ ರಾಯಭಾರಿಗಳು” ಅಪಹಾಸ್ಯಕ್ಕೂ ಅವಮಾನಕ್ಕೂ ಗುರಿಯಾಗುತ್ತಾರೆ. ತಾವು ಅನುಭವಿಸಿದ ಸೋಲಿಗಾಗಿ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ. (ಹೋಲಿಸಿ ಯೆರೆಮೀಯ 8:15.) ಕ್ರೂರ ಅಶ್ಶೂರವು ದಯೆತೋರಿಸದು. (ಓದಿ ಯೆಶಾಯ 33:8, 9.) ಯೆಹೂದದ ನಿವಾಸಿಗಳೊಂದಿಗೆ ಅದು ಮಾಡಿಕೊಂಡಿರುವ ಒಪ್ಪಂದಗಳನ್ನು ಅದು ದಯೆದಾಕ್ಷಿಣ್ಯವಿಲ್ಲದೆ ಕಡೆಗಣಿಸಿಬಿಡುವುದು. (2 ಅರಸುಗಳು 18:14-16) ಈ ಅಶ್ಶೂರವು ಯೆಹೂದದ ಪಟ್ಟಣಗಳನ್ನು ‘ತಿರಸ್ಕರಿಸಿ,’ ಅವುಗಳನ್ನು ತುಚ್ಛವಾಗಿ ಕಾಣುತ್ತದೆ ಮಾತ್ರವಲ್ಲ ಮಾನವ ಜೀವಕ್ಕೆ ಯಾವ ಬೆಲೆಯನ್ನೂ ಕೊಡುವುದಿಲ್ಲ. ಈ ಸನ್ನಿವೇಶವು ಎಷ್ಟು ಸಂದಿಗ್ಧವಾಗಿರುವುದೆಂದರೆ, ಸ್ವತಃ ದೇಶವೇ ಗೋಳಿಡುವಂತಿರುವುದು. ಯೆಹೂದದ ನಾಶನಕ್ಕಾಗಿ ಲೆಬನೋನ್, ಶಾರೋನ್, ಬಾಷಾನ್ ಮತ್ತು ಕಾರ್ಮೆಲ್ ದೇಶಗಳು ಗೋಳಿಡುವವು.
10. (ಎ) ಯಾವ ರೀತಿಯಲ್ಲಿ ಕ್ರೈಸ್ತಪ್ರಪಂಚದ “ಸಿಂಹವೀರರು” ನಿಷ್ಪ್ರಯೋಜಕವಾಗಿರುವರು? (ಬಿ) ಕ್ರೈಸ್ತಪ್ರಪಂಚವು ಸಂಕಟವನ್ನು ಅನುಭವಿಸುವ ದಿನದಲ್ಲಿ ನಿಜ ಕ್ರೈಸ್ತರನ್ನು ಯಾರು ರಕ್ಷಿಸುವರು?
10 ನಿಕಟ ಭವಿಷ್ಯತ್ತಿನಲ್ಲಿ ರಾಷ್ಟ್ರಗಳು ಧರ್ಮದ ಮೇಲೆ ದಾಳಿಯನ್ನು ಆರಂಭಿಸುವಾಗ, ತದ್ರೀತಿಯ ಪರಿಸ್ಥಿತಿಗಳು ವಿಕಸಿಸುವವು ಎಂಬುದರಲ್ಲಿ ಸಂದೇಹವಿಲ್ಲ. ಈ ವಿನಾಶಕಾರಿ ಪಡೆಗಳನ್ನು ಎದುರಿಸುವುದು ಯೆಹೆಜ್ಕೇಲನ ದಿನದಲ್ಲಿ ಹೇಗೆ ವ್ಯರ್ಥವಾಗಿತ್ತೊ ಹಾಗೆಯೇ ಈಗಲೂ ಇರುವುದು. ಕ್ರೈಸ್ತಪ್ರಪಂಚದ “ಸಿಂಹವೀರರು” ಅಂದರೆ ಅದರ ರಾಜಕಾರಣಿಗಳು, ಹಣಕಾಸಿನ ನಿರ್ವಾಹಕರು ಮತ್ತು ಇತರ ಪ್ರಭಾವಶಾಲಿ ಜನರು, ಕಷ್ಟಕಾಲದಲ್ಲಿ ಅದಕ್ಕೆ ನೆರವನ್ನು ನೀಡಲಾರರು. ಕ್ರೈಸ್ತಪ್ರಪಂಚದ ಕಾರ್ಯಕಲಾಪಗಳನ್ನು ಸಂರಕ್ಷಿಸಲಿಕ್ಕಾಗಿ ಮಾಡಲ್ಪಟ್ಟ ರಾಜಕೀಯ ಹಾಗೂ ಆರ್ಥಿಕ ‘ಒಪ್ಪಂದಗಳು’ ರದ್ದುಗೊಳಿಸಲ್ಪಡುವವು. (ಯೆಶಾಯ 28:15-18) ರಾಯಭಾರಿಗಳು ತಮ್ಮ ವ್ಯವಹಾರಕೌಶಲದಿಂದ ನಾಶನವನ್ನು ತಳ್ಳಿಹಾಕಲು ಮಾಡುವ ಪ್ರಯಾಸಗಳು ಜಯಸಾಧಿಸಲಾರವು. ಕ್ರೈಸ್ತಪ್ರಪಂಚದ ಸ್ವತ್ತುಗಳು ಮತ್ತು ಬಂಡವಾಳವು ಕಿತ್ತುಕೊಳ್ಳಲ್ಪಟ್ಟ ಕಾರಣ ಇಲ್ಲವೆ ನಾಶಗೊಳಿಸಲ್ಪಟ್ಟ ಕಾರಣ, ವ್ಯಾಪಾರವು ಸ್ಥಗಿತಗೊಳ್ಳುವುದು. ಕ್ರೈಸ್ತಪ್ರಪಂಚದೊಂದಿಗೆ ಆಗಲೂ ಸೌಹಾರ್ದವನ್ನು ಕಾಪಾಡಿಕೊಂಡಿರುವ ಕೆಲವರು, ದೂರ ನಿಂತುಕೊಂಡು ಅದರ ನಾಶನಕ್ಕಾಗಿ ದುಃಖಿಸುವರು, ಅಷ್ಟೇ. (ಪ್ರಕಟನೆ 18:9-19) ಆ ಸಮಯದಲ್ಲಿ ಸುಳ್ಳು ಕ್ರೈಸ್ತತ್ವದೊಂದಿಗೆ ಸತ್ಯ ಕ್ರೈಸ್ತತ್ವವೂ ಅಳಿದುಹೋಗುವುದೊ? ಇಲ್ಲ, ಸ್ವತಃ ಯೆಹೋವನೇ ಈ ಆಶ್ವಾಸನೆಯನ್ನು ನೀಡುತ್ತಾನೆ: “ಯೆಹೋವನು ಹೀಗನ್ನುತ್ತಾನೆ—ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು, ಕೂಡಲೆ ಉನ್ನತೋನ್ನತನಾಗುವೆನು.” (ಯೆಶಾಯ 33:10) ಕೊನೆಗೆ ಯೆಹೋವನು, ಹಿಜ್ಕೀಯನಂತಹ ನಂಬಿಗಸ್ತರ ಪರವಾಗಿ ಹಸ್ತಕ್ಷೇಪಮಾಡಿ, ಅಶ್ಶೂರದ ಪ್ರಗತಿಯನ್ನು ತಡೆಯುವನು.—ಕೀರ್ತನೆ 12:5.
11, 12. (ಎ) ಯೆಶಾಯ 33:11-14ರ ಮಾತುಗಳು ಯಾವಾಗ ಮತ್ತು ಹೇಗೆ ನೆರವೇರುವವು? (ಬಿ) ಯೆಹೋವನ ಮಾತುಗಳು ನಮ್ಮ ದಿನಕ್ಕೆ ಯಾವ ಎಚ್ಚರಿಕೆಯನ್ನು ನೀಡುತ್ತವೆ?
11 ಇಂತಹ ಸಂರಕ್ಷಣೆಯನ್ನು ಅಪನಂಬಿಗಸ್ತರು ಅನುಭವಿಸಲಾರರು. ಯೆಹೋವನು ಹೇಳುವುದು: “ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರುವಿರಿ; ನಿಮ್ಮ ಬುಸುಗುಟ್ಟುವಿಕೆಯು ನಿಮ್ಮನ್ನೇ ನುಂಗುವ ಜ್ವಾಲೆಯಾಗುವದು. ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು; ಕತ್ತರಿಸಿದ ಮುಳ್ಳುಕಂಪೆಗೆ ಬೆಂಕಿಹಚ್ಚಿದಂತಾಗುವವು. ದೂರಸ್ಥರೇ, ನಾನು ನಡಿಸಿದ್ದನ್ನು ಕೇಳಿರಿ; ಸಮೀಪಸ್ಥರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ. ಚೀಯೋನಿನ ಪಾಪಿಗಳು ಹೆದರುತ್ತಾರೆ, ಆ ಭ್ರಷ್ಟರು ನಡುಕಕ್ಕೆ ಒಳಗಾಗಿ—ನಮ್ಮಲ್ಲಿ ಯಾರು ನುಂಗುವ ಕಿಚ್ಚಿನ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುತ್ತಾರೆ.” (ಯೆಶಾಯ 33:11-14) ಯೆಹೂದವು ಬಾಬೆಲೆಂಬ ಹೊಸ ವೈರಿಯನ್ನು ಎದುರಿಸುವ ಸಮಯಕ್ಕೆ ಈ ಮಾತುಗಳು ಅನ್ವಯಿಸುತ್ತವೆ. ಹಿಜ್ಕೀಯನ ಮರಣದ ನಂತರ, ಯೆಹೂದವು ಪುನಃ ತನ್ನ ದುಷ್ಟತನಕ್ಕೆ ಹಿಂದಿರುಗುತ್ತದೆ. ಮುಂದಿನ ಕೆಲವು ದಶಕಗಳಲ್ಲಿ ಯೆಹೂದದ ಪರಿಸ್ಥಿತಿಯು ಎಷ್ಟು ಕೀಳ್ಮಟ್ಟಕ್ಕೆ ಇಳಿಯುತ್ತದೆಂದರೆ, ಇಡೀ ಜನಾಂಗವು ದೇವರ ಕೋಪಾಗ್ನಿಗೆ ತುತ್ತಾಗಬೇಕಾಗುತ್ತದೆ.—ಧರ್ಮೋಪದೇಶಕಾಂಡ 32:22.
12 ದೇವರ ನ್ಯಾಯತೀರ್ಪನ್ನು ದೂರತೊಲಗಿಸಲು ಅವಿಧೇಯರು ಹೂಡಿದ ದುಷ್ಟ ಯೋಜನೆಗಳು ಮತ್ತು ಒಳಸಂಚುಗಳು, ಕೂಳೆಯಷ್ಟು ನಿಷ್ಪ್ರಯೋಜಕವಾಗಿವೆ. ಈ ಜನಾಂಗವು ವ್ಯಕ್ತಪಡಿಸುವ ದುರಹಂಕಾರದ ದಂಗೆಕೋರ ಮನೋಭಾವವು ತಾನೇ, ಅದರ ನಾಶನಕ್ಕೆ ಕಾರಣವಾಗುವ ಘಟನೆಗಳಿಗೆ ಆರಂಭ ಹೆಜ್ಜೆಯಾಗಿರುವುದು. (ಯೆರೆಮೀಯ 52:3-11) ದುಷ್ಟರು ‘ಸುಟ್ಟ ಸುಣ್ಣದ ಹಾಗಿರುವರು’ ಅಂದರೆ, ಸಂಪೂರ್ಣವಾಗಿ ನಾಶವಾಗುವರು! ತಮ್ಮನ್ನು ಪೂರ್ತಿಯಾಗಿ ಆವರಿಸಲಿರುವ ಈ ನಾಶನದ ಬಗ್ಗೆ ಯೋಚಿಸಿದಂತೆ, ಯೆಹೂದದ ದಂಗೆಕೋರ ನಿವಾಸಿಗಳು ಭಯದ ಕಾರಣ ಸಂಕಟವನ್ನು ಅನುಭವಿಸುತ್ತಾರೆ. ಅಪನಂಬಿಗಸ್ತ ಯೆಹೂದವನ್ನು ಉದ್ದೇಶಿಸಿ ಯೆಹೋವನಾಡಿದ ಮಾತುಗಳು, ಇಂದು ಕ್ರೈಸ್ತಪ್ರಪಂಚದ ಸದಸ್ಯರ ಸನ್ನಿವೇಶವನ್ನು ಚಿತ್ರಿಸುತ್ತವೆ. ಅವರು ದೇವರ ಎಚ್ಚರಿಕೆಗೆ ಕಿವಿಗೊಡದಿರುವ ಕಾರಣ, ಅವರ ಮುಂದೆ ಕರಾಳವಾದ ಒಂದು ಭವಿಷ್ಯತ್ತು ಇದೆ.
“ಸನ್ಮಾರ್ಗದಲ್ಲಿ ನಡೆ”ಯುತ್ತಿರುವುದು
13. “ಸನ್ಮಾರ್ಗದಲ್ಲಿ ನಡೆ”ಯುವವನಿಗೆ ಯಾವ ವಾಗ್ದಾನವು ಕೊಡಲ್ಪಟ್ಟಿದೆ, ಮತ್ತು ಅದು ಯೆರೆಮೀಯನ ವಿಷಯದಲ್ಲಿ ಹೇಗೆ ನೆರವೇರಿತು?
13 ವ್ಯತ್ಯಾಸವನ್ನು ತೋರ್ಪಡಿಸುತ್ತಾ, ಯೆಹೋವನು ಮುಂದೆ ಹೇಳುವುದು: “ಸನ್ಮಾರ್ಗದಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚಮುಟ್ಟದಂತೆ ಕೈ ಒದರಿ ಕೊಲೆಯ ಮಾತಿಗೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣುಮುಚ್ಚಿಕೊಳ್ಳುವವನೇ ಉನ್ನತಸನ್ನಿಧಾನದಲ್ಲಿ ವಾಸಿಸುವನು; ಇವನಿಗೆ ಆಶ್ರಯವು ಗಿರಿದುರ್ಗ, ಅನ್ನವು ಉಚಿತವಾಗಿ ಒದಗುವದು, ನೀರೂ ನಿಸ್ಸಂದೇಹ.” (ಯೆಶಾಯ 33:15, 16) ಇದೇ ವಿಷಯವನ್ನು ಮುಂದೆ ತಿಳಿಯಪಡಿಸುತ್ತಾ ಅಪೊಸ್ತಲ ಪೇತ್ರನು ಹೇಳಿದ್ದು: “ಕರ್ತನು [“ಯೆಹೋವನು,” NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.” (2 ಪೇತ್ರ 2:9) ಇಂತಹ ರಕ್ಷಣೆಯನ್ನು ಯೆರೆಮೀಯನು ಅನುಭವಿಸಿದ್ದನು. ಬಾಬೆಲು ಮುತ್ತಿಗೆ ಹಾಕಿದ ಸಮಯದಲ್ಲಿ, ಜನರು “ಅನ್ನವನ್ನು ತೂಕದ ಪ್ರಕಾರ ಬೆದರಿನಿಂದ ತಿನ್ನ”ಬೇಕಿತ್ತು. (ಯೆಹೆಜ್ಕೇಲ 4:16) ಕೆಲವು ಸ್ತ್ರೀಯರು ತಮ್ಮ ಮಕ್ಕಳ ಮಾಂಸವನ್ನೇ ತಿನ್ನಬೇಕಾದ ಪರಿಸ್ಥಿತಿಯು ಅಲ್ಲಿತ್ತು. (ಪ್ರಲಾಪಗಳು 2:20) ಅಂತಹ ಸಂದರ್ಭದಲ್ಲೂ ಯೆರೆಮೀಯನ ಸುರಕ್ಷತೆಯ ಬಗ್ಗೆ ಯೆಹೋವನು ಕಾಳಜಿವಹಿಸಿದನು.
14. ಯಾವ ವಿಧದಲ್ಲಿ ಇಂದು ಕ್ರೈಸ್ತರು “ಸನ್ಮಾರ್ಗದಲ್ಲಿ ನಡೆ”ಯುತ್ತಾ ಇರಬಹುದು?
14 ತದ್ರೀತಿಯಲ್ಲಿ ಇಂದು ಕ್ರೈಸ್ತರು, ಪ್ರತಿದಿನವೂ ಯೆಹೋವನ ಮಟ್ಟಗಳಿಗನುಸಾರ ಜೀವಿಸುತ್ತಾ ‘ಸನ್ಮಾರ್ಗದಲ್ಲಿ ನಡೆಯಬೇಕು.’ (ಕೀರ್ತನೆ 15:1-5) ಅವರು ‘ಯಥಾರ್ಥವಾದದ್ದನ್ನು ನುಡಿದು,’ ಸುಳ್ಳಾಡುವುದರಿಂದ ಹಾಗೂ ಅಸತ್ಯದಿಂದ ದೂರವಿರಬೇಕು. (ಜ್ಞಾನೋಕ್ತಿ 3:32) ಅನೇಕ ದೇಶಗಳಲ್ಲಿ ಮೋಸ ಹಾಗೂ ಲಂಚಗಾರಿಕೆಯು ಸರ್ವಸಾಮಾನ್ಯವಾದ ವಿಷಯವಾಗಿದ್ದರೂ, ‘ಸನ್ಮಾರ್ಗದಲ್ಲಿ ನಡೆಯುವವರು’ ಅದನ್ನು ಕಂಡು ಅಸಹ್ಯಪಟ್ಟುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿಯೂ ಕ್ರೈಸ್ತರು ‘ಒಳ್ಳೇ ಮನಸ್ಸಾಕ್ಷಿಯನ್ನು’ ಹೊಂದಿದ್ದು, ಯಾವುದೇ ಮೋಸ ಇಲ್ಲವೆ ವಂಚನೆಯಿಂದ ದೂರವಿರುವಂತೆ ಎಚ್ಚರವಹಿಸಬೇಕು. (ಇಬ್ರಿಯ 13:18; 1 ತಿಮೊಥೆಯ 6:9, 10) ಮತ್ತು ‘ಕೊಲೆಯ ಮಾತಿಗೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣುಮುಚ್ಚಿಕೊಳ್ಳುವವನು’ ಸಂಗೀತ ಮತ್ತು ಮನೋರಂಜನೆಯನ್ನೂ ಅತಿಜಾಗ್ರತೆಯಿಂದ ಆರಿಸಿಕೊಳ್ಳುವನು. (ಕೀರ್ತನೆ 119:37) ಇಂತಹ ಮಟ್ಟಗಳಿಗನುಸಾರ ಜೀವಿಸುವ ತನ್ನ ಆರಾಧಕರನ್ನು, ಯೆಹೋವನು ನ್ಯಾಯತೀರ್ಪಿನ ದಿನದಂದು ರಕ್ಷಿಸಿ ಪೋಷಿಸುವನು.—ಚೆಫನ್ಯ 2:3.
ರಾಜನನ್ನು ಕಣ್ಣಾರೆ ಕಾಣುವುದು
15. ಯಾವ ವಾಗ್ದಾನವು ನಂಬಿಗಸ್ತ ಯೆಹೂದಿ ಪರದೇಶವಾಸಿಗಳಿಗೆ ಬಲವನ್ನು ನೀಡುವುದು?
15 ಭವಿಷ್ಯತ್ತಿನ ಈ ಉಜ್ವಲ ನೋಟವನ್ನು ಯೆಶಾಯನು ಈಗ ಸಾದರಪಡಿಸುತ್ತಾನೆ: “ನೀವು ಭೂಷಿತರಾಜನನ್ನು ಕಣ್ಣಾರೆ ದರ್ಶನ ಮಾಡುವಿರಿ, ಅತಿವಿಸ್ತಾರವಾದ ಸ್ವದೇಶವನ್ನು ಕಣ್ಣು ತುಂಬಾ ನೋಡುವಿರಿ. ಆಗ ನೀವು [ಹಿಂದಿನ] ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ—[ಕಪ್ಪವನ್ನು] ಲೆಕ್ಕಿಸಿದವನು ಎಲ್ಲಿ, ತೂಕಮಾಡಿದವನು ಎಲ್ಲಿ, ಬುರುಜುಗಳನ್ನು ಗಣಿಸಿದವನು ಎಲ್ಲಿ ಅಂದುಕೊಳ್ಳುವಿರಿ. ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನೂ ನೀವು ಗ್ರಹಿಸಲಾರದ ತೊದಲುಮಾತುಗಳನ್ನೂ ಆಡುವ ಆ ಕ್ರೂರಜನರನ್ನು ಕಾಣದೆ ಇರುವಿರಿ.” (ಯೆಶಾಯ 33:17-19) ಬಾಬೆಲಿನಲ್ಲಿ ದೀರ್ಘ ಸಮಯದ ಪರದೇಶವಾಸವನ್ನು ಅನುಭವಿಸಲಿರುವ ನಂಬಿಗಸ್ತ ಯೆಹೂದ್ಯರು ಆ ಸಮಯಾವಧಿಯಲ್ಲಿ, ಭಾವೀ ಮೆಸ್ಸೀಯ ರಾಜನ ಮತ್ತು ಅವನ ರಾಜ್ಯದ ಕುರಿತಾದ ವಾಗ್ದಾನವನ್ನು ದೂರದಿಂದಲೇ ನೋಡಿ, ಅದರಿಂದ ಸಾಕಷ್ಟು ಬಲಹೊಂದುವರು. (ಇಬ್ರಿಯ 11:13) ಮೆಸ್ಸೀಯನ ರಾಜ್ಯವು ಒಂದು ವಾಸ್ತವಿಕತೆಯಾದಾಗ, ಬಾಬೆಲಿನ ಪೀಡನೆಯು ಕೇವಲ ಗತಕಾಲದ ಸ್ಮರಣೆಯಾಗಿ ಉಳಿಯುವುದು. ಅಶ್ಶೂರದ ದಾಳಿಯಿಂದ ಬದುಕಿ ಉಳಿದವರು ಸಂತೋಷದಿಂದ ಹೀಗೆ ಕೇಳುವರು: “ನಮ್ಮನ್ನು ದುಡಿಸಿದ, ದಂಡಿಸಿದ ಹಾಗೂ ಕಪ್ಪಕಾಣಿಕೆಯನ್ನು ಲೆಕ್ಕಿಸಿದ ಆ ಪೀಡಕನ ಅಧಿಕಾರಿಗಳೆಲ್ಲಿ?”—ಯೆಶಾಯ 33:18, ಮೋಫೆಟ್.
16. ಯಾವ ಸಮಯದಿಂದ ದೇವಜನರು ಮೆಸ್ಸೀಯ ರಾಜನನ್ನು “ನೋಡ”ಸಾಧ್ಯವಾಗಿದೆ, ಮತ್ತು ಇದರ ಪರಿಣಾಮವೇನು?
16 ತಾವು ಬಾಬೆಲಿನ ಸೆರೆವಾಸದಿಂದ ಬಿಡುಗಡೆ ಹೊಂದಿ ಪುನಸ್ಸ್ಥಾಪಿಸಲ್ಪಡುವರೆಂಬ ಖಾತ್ರಿಯನ್ನು ಯೆಶಾಯನ ಮಾತುಗಳು ಯೆಹೂದಿ ಪರದೇಶವಾಸಿಗಳಿಗೆ ನೀಡುತ್ತವಾದರೂ, ಪ್ರವಾದನೆಯ ಈ ಭಾಗದ ಸಂಪೂರ್ಣ ನೆರವೇರಿಕೆಯನ್ನು ಅನುಭವಿಸಲು ವ್ಯಕ್ತಿಗತ ಯೆಹೂದ್ಯರು ಪುನರುತ್ಥಾನದ ವರೆಗೂ ಕಾಯಬೇಕು. ಹಾಗಾದರೆ, ಇಂದಿನ ದೇವರ ಸೇವಕರ ಕುರಿತೇನು? 1914ರಿಂದ, ಯೆಹೋವನ ಜನರು ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನ ಆತ್ಮಿಕ ಸೌಂದರ್ಯವನ್ನು ‘ನೋಡಲು’ ಇಲ್ಲವೆ ಗ್ರಹಿಸಲು ಶಕ್ತರಾಗಿದ್ದಾರೆ. (ಕೀರ್ತನೆ 45:2; 118:22-26) ಈ ಕಾರಣ, ಅವರು ಸೈತಾನನ ದುಷ್ಟ ವ್ಯವಸ್ಥೆಯ ದಬ್ಬಾಳಿಕೆ ಹಾಗೂ ನಿಯಂತ್ರಣದಿಂದ ಬಿಡುಗಡೆ ಹೊಂದಿದ್ದಾರೆ. ದೇವರ ರಾಜ್ಯದ ಪೀಠವಾಗಿರುವ ಚೀಯೋನಿನಲ್ಲಿ ಅವರು ನಿಜವಾದ ಆತ್ಮಿಕ ಭದ್ರತೆಯನ್ನು ಅನುಭವಿಸುತ್ತಾರೆ.
17. (ಎ) ಚೀಯೋನಿನ ಬಗ್ಗೆ ಯಾವ ವಾಗ್ದಾನಗಳು ಮಾಡಲ್ಪಟ್ಟಿವೆ? (ಬಿ) ಚೀಯೋನಿನ ಬಗ್ಗೆ ಯೆಹೋವನು ಮಾಡಿರುವ ವಾಗ್ದಾನಗಳು, ಮೆಸ್ಸೀಯ ರಾಜ್ಯ ಮತ್ತು ಭೂಮಿಯ ಮೇಲಿರುವ ಅದರ ಬೆಂಬಲಿಗರ ಮೇಲೆ ಹೇಗೆ ನೆರವೇರಿವೆ?
17 ಯೆಶಾಯನು ಮುಂದುವರಿಸಿ ಹೇಳುವುದು: “ನಮ್ಮ ಉತ್ಸವಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ; ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ. ಅಲ್ಲಿ ಯೆಹೋವನು ಘನಹೊಂದಿದವನಾಗಿ ಹುಟ್ಟುಗೋಲಿನ ದೋಣಿ ಹೋಗದ, ಘನನಾವೆಯೂ ಸಂಚರಿಸದ ವಿಸ್ತೀರ್ಣನದೀನದಗಳಂತೆ ನಮ್ಮೊಂದಿಗಿರುವನು.” (ಯೆಶಾಯ 33:20, 21) ದೇವರ ಮೆಸ್ಸೀಯ ರಾಜ್ಯವನ್ನು ಕಿತ್ತುಹಾಕಲು ಇಲ್ಲವೆ ನಾಶಪಡಿಸಲು ಸಾಧ್ಯವೇ ಇಲ್ಲವೆಂದು ಯೆಶಾಯನ ಮಾತುಗಳು ನಮಗೆ ಆಶ್ವಾಸನೆ ನೀಡುತ್ತವೆ. ಇಂತಹ ಸಂರಕ್ಷಣೆಯು ಇಂದು ಭೂಮಿಯ ಮೇಲಿರುವ ಎಲ್ಲ ನಂಬಿಗಸ್ತ ರಾಜ್ಯ ಬೆಂಬಲಿಗರಿಗೂ ನೀಡಲ್ಪಡುತ್ತದೆ. ಅನೇಕರು ತೀವ್ರವಾದ ಪರೀಕ್ಷೆಗಳಿಗೆ ಗುರಿಯಾದರೂ, ಒಂದು ಸಭೆಯೋಪಾದಿ ಅವರನ್ನು ನಾಶಮಾಡುವ ಪ್ರಯತ್ನಗಳು ಸಫಲವಾಗಲಾರವು ಎಂಬ ಆಶ್ವಾಸನೆ ದೇವರ ರಾಜ್ಯದ ಪ್ರಜೆಗಳಿಗಿದೆ. (ಯೆಶಾಯ 54:17) ಹೇಗೆ ಒಂದು ಕಾಲುವೆಯು ಪಟ್ಟಣವೊಂದನ್ನು ರಕ್ಷಿಸುತ್ತದೊ ಹಾಗೆಯೇ ಯೆಹೋವನು ತನ್ನ ಜನರನ್ನು ರಕ್ಷಿಸುವನು. ತಮ್ಮ ವಿರುದ್ಧ ಬರುವ ವೈರಿ, “ಹುಟ್ಟುಗೋಲಿನ ದೋಣಿ” ಇಲ್ಲವೆ “ಘನನಾವೆ”ಯಂತಿದ್ದರೂ, ನಾಶನಕ್ಕೆ ಗುರಿಯಾಗುವನು!
18. ಯಾವ ಹೊಣೆಯನ್ನು ಯೆಹೋವನು ವಹಿಸಿಕೊಳ್ಳುತ್ತಾನೆ?
18 ಹಾಗಾದರೆ, ದೇವರ ರಾಜ್ಯವನ್ನು ಬೆಂಬಲಿಸುವವರು, ದೈವಿಕ ರಕ್ಷಣೆಯ ಬಗ್ಗೆ ಇಷ್ಟು ಭರವಸೆಯುಳ್ಳವರಾಗಿರಲು ಏಕೆ ಸಾಧ್ಯ? ಯೆಶಾಯನು ವಿವರಿಸುವುದು: “ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು.” (ಯೆಶಾಯ 33:22) ತನ್ನ ಪರಮಾಧಿಕಾರವನ್ನು ಅಂಗೀಕರಿಸುವ ಜನರಿಗೆ ಸಂರಕ್ಷಣೆ ಹಾಗೂ ನಿರ್ದೇಶನವನ್ನು ನೀಡುವ ಹೊಣೆಗಾರಿಕೆಯನ್ನು ಯೆಹೋವನು ವಹಿಸಿಕೊಳ್ಳುತ್ತಾನೆ. ಯೆಹೋವನಿಗೆ ನಿಯಮಗಳನ್ನು ಮಾಡುವ ಅಧಿಕಾರ ಮಾತ್ರವಲ್ಲ ಅವುಗಳನ್ನು ಜಾರಿಗೆ ತರುವ ಅಧಿಕಾರವೂ ಇದೆ ಎಂಬುದನ್ನು ಅಂಗೀಕರಿಸುವ ಜನರು, ಮೆಸ್ಸೀಯ ರಾಜನ ಮೂಲಕ ಆತನ ಆಳ್ವಿಕೆಗೆ ಸ್ವಇಚ್ಛೆಯಿಂದ ಅಧೀನರಾಗುತ್ತಾರೆ. ಯೆಹೋವನು ನೀತಿನ್ಯಾಯಗಳನ್ನು ಪ್ರೀತಿಸುವವನಾಗಿರುವ ಕಾರಣ, ತನ್ನ ಮಗನ ಮೂಲಕ ಆತನು ನಡಿಸುವ ಆಳ್ವಿಕೆಯು, ಆತನ ಆರಾಧಕರಿಗೆ ಒಂದು ಹೊರೆಯಾಗಿರುವುದಿಲ್ಲ. ಬದಲಿಗೆ, ಆತನ ಅಧಿಕಾರಕ್ಕೆ ಅಧೀನರಾಗುವ ಮೂಲಕ ಅವರು ‘ವೃದ್ಧಿಯನ್ನು’ ಅನುಭವಿಸುವರು. (ಯೆಶಾಯ 48:17) ಆತನೆಂದಿಗೂ ತನ್ನ ನಿಷ್ಠಾವಂತರ ಕೈಬಿಡನು.—ಕೀರ್ತನೆ 37:28.
19. ಯೆಹೋವನ ನಂಬಿಗಸ್ತ ಜನರನ್ನು ವಿರೋಧಿಸುವವರ ನಿಷ್ಪ್ರಯೋಜಕತೆಯನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ?
19 ಯೆಹೋವನ ನಂಬಿಗಸ್ತ ಜನರ ವಿರುದ್ಧ ಕ್ರಿಯೆಗೈಯುವವರಿಗೆ ಯೆಶಾಯನು ಹೇಳುವುದು: “ನಿನ್ನ ಹಗ್ಗಗಳು ಸಡಲಿ ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು, ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ; ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆಮಾಡಿದರು.” (ಯೆಶಾಯ 33:23) ಯೆಹೋವನ ವಿರುದ್ಧ ಬರುವ ಪ್ರತಿಯೊಬ್ಬ ವೈರಿಯು, ಸಡಿಲವಾದ ಹಗ್ಗಗಳು, ಅಸ್ಥಿರವಾದ ಸ್ತಂಭ ಮತ್ತು ಪಠವಿಲ್ಲದ ಯುದ್ಧ ಹಡಗಿನಂತೆ ನಿಷ್ಪ್ರಯೋಜಕವಾಗಿರುವನು. ದೇವರ ವೈರಿಗಳು ನಾಶವಾದಾಗ ದೊರೆಯುವ ಕೊಳ್ಳೆಯು ಎಷ್ಟು ಹೇರಳವಾಗಿರುವುದೆಂದರೆ, ದುರ್ಬಲರು ಕೂಡ ಆ ಕೊಳ್ಳೆಯಲ್ಲಿ ಪಾಲಿಗರಾಗುವರು. ಹೀಗೆ, ರಾಜನಾದ ಯೇಸು ಕ್ರಿಸ್ತನ ಮೂಲಕ ಯೆಹೋವನು ಬರಲಿರುವ ‘ಮಹಾ ಸಂಕಟದಲ್ಲಿ’ ತನ್ನ ವೈರಿಗಳ ಮೇಲೆ ಖಂಡಿತವಾಗಿಯೂ ಜಯಸಾಧಿಸುವನೆಂಬ ಭರವಸೆ ನಮಗಿರಸಾಧ್ಯವಿದೆ.—ಪ್ರಕಟನೆ 7:14.
ಗುಣಪಡಿಸುವಿಕೆ
20. ದೇವಜನರು ಯಾವ ರೀತಿಯ ಗುಣಪಡಿಸುವಿಕೆಗೆ ಗುರಿಯಾಗುವರು, ಮತ್ತು ಯಾವಾಗ?
20 ಯೆಶಾಯನ ಪ್ರವಾದನೆಯ ಈ ಭಾಗವು, ಒಂದು ಹೃದಯೋಲ್ಲಾಸಕರವಾದ ವಾಗ್ದಾನದೊಂದಿಗೆ ಕೊನೆಗೊಳ್ಳುತ್ತದೆ: “ಚೀಯೋನಿನ ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.” (ಯೆಶಾಯ 33:24) ಯೆಶಾಯನು ಇಲ್ಲಿ ಉಲ್ಲೇಖಿಸುವ ಅಸ್ವಸ್ಥತೆಯು ಮುಖ್ಯವಾಗಿ ಆತ್ಮಿಕವಾದದ್ದು, ಏಕೆಂದರೆ ಅದು ‘ಪಾಪಕ್ಕೆ’ ಸಂಬಂಧಿಸಲ್ಪಟ್ಟಿದೆ. ಈ ಮಾತುಗಳ ಪ್ರಥಮ ನೆರವೇರಿಕೆಯಲ್ಲಿ ಇಸ್ರಾಯೇಲ್ಯರು ಬಾಬೆಲಿನ ಸೆರೆವಾಸದಿಂದ ಬಿಡುಗಡೆ ಹೊಂದಿದ ಬಳಿಕ ಆತ್ಮಿಕವಾಗಿ ಗುಣಹೊಂದುವುದೆಂದು ಯೆಹೋವನು ವಾಗ್ದಾನಿಸುತ್ತಾನೆ. (ಯೆಶಾಯ 35:5, 6; ಯೆರೆಮೀಯ 33:6; ಹೋಲಿಸಿ ಕೀರ್ತನೆ 103:1-5.) ಹಿಂದಿರುಗುತ್ತಿರುವ ಯೆಹೂದ್ಯರು ತಮ್ಮ ಹಿಂದಿನ ಪಾಪಗಳಿಗಾಗಿ ಕ್ಷಮೆಯನ್ನು ಪಡೆದು, ಯೆರೂಸಲೇಮಿನಲ್ಲಿ ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುವರು.
21. ಇಂದು ಯಾವ ವಿಧಗಳಲ್ಲಿ ಯೆಹೋವನ ಆರಾಧಕರು ಆತ್ಮಿಕ ಗುಣಪಡಿಸುವಿಕೆಯನ್ನು ಅನುಭವಿಸುತ್ತಿದ್ದಾರೆ?
21 ಯೆಶಾಯನ ಪ್ರವಾದನೆಗೆ ಆಧುನಿಕ ನೆರವೇರಿಕೆಯೂ ಇದೆ. ಯೆಹೋವನ ಆಧುನಿಕ ಜನರು ಕೂಡ ಆತ್ಮಿಕ ಗುಣಪಡಿಸುವಿಕೆಗೆ ಒಳಗಾಗಿದ್ದಾರೆ. ಆತ್ಮದ ಅಮರತ್ವ, ತ್ರಯೈಕ್ಯ ಮತ್ತು ನರಕಾಗ್ನಿ ಎಂಬಂತಹ ಸುಳ್ಳು ಬೋಧನೆಗಳಿಂದ ಅವರು ಬಿಡುಗಡೆ ಹೊಂದಿದ್ದಾರೆ. ಅವರಿಗೆ ಸಿಗುವ ನೈತಿಕ ಮಾರ್ಗದರ್ಶನವು, ಅವರನ್ನು ಅನೈತಿಕ ಆಚರಣೆಗಳಿಂದ ದೂರವಿರಿಸುತ್ತದೆ ಮಾತ್ರವಲ್ಲ ಸರಿಯಾದ ನಿರ್ಣಯಗಳನ್ನು ಮಾಡುವಂತೆಯೂ ಸಹಾಯ ನೀಡುತ್ತದೆ. ಮತ್ತು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಕಾರಣ, ಅವರು ದೇವರ ಮುಂದೆ ಶುದ್ಧವಾದ ನಿಲುವನ್ನು ಪಡೆದಿರುವುದರ ಜೊತೆಗೆ ಶುದ್ಧವಾದ ಮನಸ್ಸಾಕ್ಷಿಯನ್ನೂ ಹೊಂದಿರುತ್ತಾರೆ. (ಕೊಲೊಸ್ಸೆ 1:13, 14; 1 ಪೇತ್ರ 2:24; 1 ಯೋಹಾನ 4:10) ಈ ಆತ್ಮಿಕ ಗುಣಪಡಿಸುವಿಕೆಗೆ ಭೌತಿಕ ಪ್ರಯೋಜನಗಳೂ ಇವೆ. ಉದಾಹರಣೆಗೆ, ಅನೈತಿಕ ಕಾರ್ಯಗಳಿಂದ ಮತ್ತು ತಂಬಾಕುವಿನ ಸೇವನೆಯಿಂದ ದೂರವಿರುವ ಮೂಲಕ, ಕ್ರೈಸ್ತರು ರತಿರವಾನಿತ ರೋಗಗಳಿಂದ ಮತ್ತು ಕೆಲವು ಬಗೆಯ ಕ್ಯಾನ್ಸರ್ಗಳಿಂದ ರಕ್ಷಿಸಲ್ಪಡುತ್ತಾರೆ.—1 ಕೊರಿಂಥ 6:18; 2 ಕೊರಿಂಥ 7:1.
22, 23. (ಎ) ಯೆಶಾಯ 33:24, ಭವಿಷ್ಯತ್ತಿನಲ್ಲಿ ಯಾವ ಮಹತ್ತರವಾದ ನೆರವೇರಿಕೆಯನ್ನು ಕಾಣುವುದು? (ಬಿ) ಇಂದಿನ ಸತ್ಯಾರಾಧಕರ ದೃಢನಿರ್ಧಾರವು ಏನಾಗಿದೆ?
22 ಅರ್ಮಗೆದೋನಿನ ಬಳಿಕ ದೇವರ ಹೊಸ ಲೋಕದಲ್ಲಿ ಯೆಶಾಯ 33:24ರ ಮಾತುಗಳು ಇನ್ನೂ ಮಹತ್ತರವಾದ ವಿಧದಲ್ಲಿ ನೆರವೇರುವವು. ಮೆಸ್ಸೀಯ ರಾಜ್ಯದ ಆಳ್ವಿಕೆಯಲ್ಲಿ, ಮಾನವರು ಆತ್ಮಿಕ ಗುಣಪಡಿಸುವಿಕೆಯೊಂದಿಗೆ ಮಹಾ ಶಾರೀರಿಕ ಗುಣಪಡಿಸುವಿಕೆಯನ್ನೂ ಅನುಭವಿಸುವರು. (ಪ್ರಕಟನೆ 21:3, 4) ಸೈತಾನನ ವ್ಯವಸ್ಥೆಯು ನಾಶವಾದ ನಂತರ, ಯೇಸು ಭೂಮಿಯಲ್ಲಿದ್ದಾಗ ಮಾಡಿದಂತಹ ಅದ್ಭುತಕಾರ್ಯಗಳು ಒಂದು ದೊಡ್ಡ ಪ್ರಮಾಣದಲ್ಲಿ ನೆರವೇರುವುದರಲ್ಲಿ ಯಾವ ಸಂದೇಹವೂ ಇಲ್ಲ. ಕುರುಡರು ನೋಡುವರು, ಕಿವುಡರು ಆಲಿಸುವರು, ಕುಂಟರು ನಡೆದಾಡುವರು! (ಯೆಶಾಯ 35:5, 6) ಆಗ, ಮಹಾ ಸಂಕಟದಿಂದ ಪಾರಾದವರೆಲ್ಲರೂ ಈ ಭೂಮಿಗೆ ಪರದೈಸಿನ ರೂಪವನ್ನು ನೀಡುವ ಮಹಾನ್ ಕೆಲಸದಲ್ಲಿ ಭಾಗವಹಿಸಸಾಧ್ಯವಾಗುವುದು.
23 ತದನಂತರ, ಪುನರುತ್ಥಾನವು ಆರಂಭವಾದಾಗ, ಜೀವದಿಂದೆಬ್ಬಿಸಲ್ಪಡುವ ಎಲ್ಲರೂ ಒಳ್ಳೆಯ ಆರೋಗ್ಯವನ್ನು ಪಡೆದಿರುವರು. ಆದರೆ ಪ್ರಾಯಶ್ಚಿತ್ತ ಯಜ್ಞದ ಮೌಲ್ಯವು ಅಧಿಕ ವಿಸ್ತಾರವಾಗಿ ಅನ್ವಯಿಸಲ್ಪಟ್ಟಾಗ, ಹೆಚ್ಚಿನ ಶಾರೀರಿಕ ಪ್ರಯೋಜನಗಳು ಹಿಂಬಾಲಿಸಿ ಬರುವವು. ಮಾನವವರ್ಗವು ಪರಿಪೂರ್ಣತೆಯನ್ನು ಸಾಧಿಸುವ ವರೆಗೆ ಇದು ಮುಂದುವರಿಯುವುದು. ಆಗ ನೀತಿವಂತರು ಪೂರ್ಣಾರ್ಥದಲ್ಲಿ ‘ಜೀವಿತರಾಗಿ ಏಳುವರು.’ (ಪ್ರಕಟನೆ 20:5, 6) ಆ ಸಮಯದಲ್ಲಿ, ಆತ್ಮಿಕ ಹಾಗೂ ಶಾರೀರಿಕ ವಿಧದಲ್ಲಿ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಎಂತಹ ಉತ್ತೇಜನದಾಯಕ ವಾಗ್ದಾನ! ಅದರ ನೆರವೇರಿಕೆಯನ್ನು ಅನುಭವಿಸುವವರಲ್ಲಿ ತಾವೂ ಒಬ್ಬರಾಗಿರುವ ದೃಢನಿರ್ಧಾರವನ್ನು ಎಲ್ಲ ಸತ್ಯಾರಾಧಕರು ಇಂದೇ ಮಾಡಲಿ!
[ಪುಟ 344ರಲ್ಲಿರುವ ಚಿತ್ರ]
ಯೆಶಾಯನು ದೃಢಭರವಸೆಯಿಂದ ಯೆಹೋವನಲ್ಲಿ ಪ್ರಾರ್ಥಿಸುತ್ತಾನೆ
[ಪುಟ 353ರಲ್ಲಿರುವ ಚಿತ್ರಗಳು]
ಪ್ರಾಯಶ್ಚಿತ್ತ ಯಜ್ಞದ ಕಾರಣ, ಯೆಹೋವನ ಜನರು ಆತನ ಮುಂದೆ ಶುದ್ಧವಾದ ನಿಲುವನ್ನು ಪಡೆದಿದ್ದಾರೆ
[ಪುಟ 354ರಲ್ಲಿರುವ ಚಿತ್ರ]
ಹೊಸ ಲೋಕದಲ್ಲಿ, ಮಹಾ ಶಾರೀರಿಕ ಗುಣಪಡಿಸುವಿಕೆಯು ಆಗುವುದು