ಯೆಹೋವನ ವಾಕ್ಯವು ಸಜೀವವಾದದ್ದು
ಯೆಶಾಯ ಪುಸ್ತಕದ ಮುಖ್ಯಾಂಶಗಳು—I
ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂದು ಯೆಹೋವ ದೇವರು ಕೊಟ್ಟ ಕರೆಗೆ, ಆಮೋಚನ ಮಗನಾದ ಯೆಶಾಯನು ಓಗೊಡುತ್ತಾ ಉತ್ತರಿಸಿದ್ದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾಯ 1:1; 6:8) ಆ ಸಂದರ್ಭದಲ್ಲಿ ಯೆಶಾಯನು ಒಬ್ಬ ಪ್ರವಾದಿಯಾಗಿ ಸೇವೆಸಲ್ಲಿಸುವ ನೇಮಕವನ್ನು ಪಡೆದನು. ಒಬ್ಬ ಪ್ರವಾದಿಯಾಗಿ ಅವನು ನಡೆಸಿದ ಕೆಲಸಗಳು ಬೈಬಲಿನಲ್ಲಿ ಅವನ ಹೆಸರನ್ನು ಹೊಂದಿರುವ ಒಂದು ಪುಸ್ತಕದಲ್ಲಿ ದಾಖಲಾಗಿವೆ.
ಪ್ರವಾದಿ ಯೆಶಾಯನೇ ಬರೆದ ಈ ಯೆಶಾಯನ ಪುಸ್ತಕದಲ್ಲಿ, 46 ವರ್ಷಗಳ ಕಾಲ ಅಂದರೆ, ಸುಮಾರು ಸಾ.ಶ.ಪೂ. 778ರಿಂದ ಸಾ.ಶ.ಪೂ. 732ರ ನಂತರದ ಸ್ವಲ್ಪ ಸಮಯದವರೆಗೆ ಸಂಬಂಧಿಸಿದ ಘಟನೆಗಳು ದಾಖಲಿಸಲ್ಪಟ್ಟಿವೆ. ಈ ಪುಸ್ತಕವು ಯೆಹೂದ, ಇಸ್ರಾಯೇಲ್ ಮತ್ತು ಸುತ್ತಣ ಜನಾಂಗದವರಿಗಾಗಿ ದೈವೋಕ್ತಿಗಳನ್ನು ಹೊಂದಿರುವುದಾದರೂ ಅದರ ಮುಖ್ಯವಿಷಯವು ಕೇವಲ ನ್ಯಾಯತೀರ್ಪು ಒಂದೇ ಅಲ್ಲ. ಅದರ ಬದಲು, ‘ಯೆಹೋವನಿಂದ ರಕ್ಷಣೆ’ ಎಂಬುದೇ ಆಗಿದೆ. (ಯೆಶಾಯ 25:9) ವಾಸ್ತವದಲ್ಲಿ, ಯೆಶಾಯ ಎಂಬ ಹೆಸರಿನ ಅರ್ಥವೇ, “ರಕ್ಷಣೆಯು ಯೆಹೋವನದ್ದೇ” ಎಂದಾಗಿದೆ. ಈ ಲೇಖನವು ಯೆಶಾಯ 1:1–35:10ರ ವರೆಗಿನ ಅಧ್ಯಾಯಗಳ ಮುಖ್ಯಾಂಶಗಳನ್ನು ಚರ್ಚಿಸುತ್ತದೆ.
“ಒಂದು ಶೇಷ ಮಾತ್ರ ತಿರುಗಿಕೊಳ್ಳುವದು”
ಯೆಶಾಯ ಪುಸ್ತಕದ ಮೊದಲ 5 ಅಧ್ಯಾಯಗಳಲ್ಲಿ ದಾಖಲಾಗಿರುವ ಪ್ರವಾದನಾತ್ಮಕ ಸಂದೇಶವು ಯೆಶಾಯನಿಗೆ, ಅವನು ಪ್ರವಾದಿಯಾಗಿ ನೇಮಿಸಲ್ಪಡುವ ಮುಂಚೆ ದೊರೆಯಿತೊ ಅಥವಾ ನಂತರ ದೊರೆಯಿತೊ ಎಂಬುದನ್ನು ಬೈಬಲ್ ಹೇಳುವುದಿಲ್ಲ. (ಯೆಶಾಯ 6:6-9) ಆದರೆ ಯೆಹೂದ ಮತ್ತು ಯೆರೂಸಲೇಮಿನಲ್ಲಿರುವವರು “ಅಂಗಾಲಿನಿಂದ ನಡುನೆತ್ತಿಯ ತನಕ” ಆಧ್ಯಾತ್ಮಿಕವಾಗಿ ಅಸ್ವಸ್ಥರಾಗಿದ್ದಾರೆ ಎಂಬುದಂತೂ ಸುಸ್ಪಷ್ಟ. (ಯೆಶಾಯ 1:6) ವಿಗ್ರಹಾರಾಧನೆಯು ವ್ಯಾಪಕವಾಗಿದೆ. ಮುಖಂಡರು ಭ್ರಷ್ಟರಾಗಿದ್ದಾರೆ. ಹೆಂಗಸರು ಗರ್ವಿಷ್ಟರಾಗಿದ್ದಾರೆ. ಜನರು ಸತ್ಯ ದೇವರನ್ನು, ಆತನು ಅಂಗೀಕರಿಸುವ ರೀತಿಯಲ್ಲಿ ಸೇವಿಸುತ್ತಿಲ್ಲ. ಆದಕಾರಣವೇ ಯೆಶಾಯನಿಗೆ, ಜ್ಞಾನವನ್ನು ತಿಳಿಯದ ಹಾಗೂ ಬಯಸದ ಜನರಿಗೆ ಮತ್ತೆ ಮತ್ತೆ ಹೋಗಿ ಮಾತಾಡುವ ನೇಮಕವನ್ನು ಕೊಡಲಾಯಿತು.
ಇಸ್ರಾಯೇಲ್ ಮತ್ತು ಸಿರಿಯದ ಜಂಟಿ ಪಡೆಗಳು ಯೆಹೂದದ ಮೇಲೆ ದಾಳಿಮಾಡುವ ಬೆದರಿಕೆಯನ್ನು ಹಾಕುತ್ತವೆ. ಯೆಶಾಯನನ್ನು ಮತ್ತವನ ಮಕ್ಕಳನ್ನು “ಗುರುತುಗಳಾಗಿಯೂ ಅದ್ಭುತಗಳಾಗಿಯೂ” ಉಪಯೋಗಿಸುವ ಮೂಲಕ, ಸಿರಿಯ-ಇಸ್ರಾಯೇಲಿನ ಮೈತ್ರಿಕೂಟವು ಯಶಸ್ಸನ್ನು ಕಾಣದು ಎಂದು ಯೆಹೋವನು ಯೆಹೂದಕ್ಕೆ ಆಶ್ವಾಸನೆಕೊಡುತ್ತಾನೆ. (ಯೆಶಾಯ 8:18) ಹಾಗಿದ್ದರೂ, ಬಾಳುವ ಶಾಂತಿಯು ಕೇವಲ “ಸಮಾಧಾನದ ಪ್ರಭು”ವಿನ ಮೂಲಕ ಮಾತ್ರ ಬರುವುದು. (ಯೆಶಾಯ 9:6, 7) ಯೆಹೋವನು ತನ್ನ ‘ಕೋಪವೆಂಬ ಕೋಲಾಗಿ’ ಬಳಸುವ ಅಶ್ಶೂರ ಜನಾಂಗದಿಂದಲೂ ಲೆಕ್ಕವನ್ನು ಕೇಳುವನು. ಕಟ್ಟಕಡೆಗೆ ಯೆಹೂದವು ಬಂದಿವಾಸಕ್ಕೆ ಹೋಗುವುದು. ಆದರೆ “ಅವರಲ್ಲಿ ಉಳಿದ ಒಂದು ಶೇಷ ಮಾತ್ರ ತಿರುಗಿಕೊಳ್ಳುವದು.” (ಯೆಶಾಯ 10:5, 21, 22) ಸಾಂಕೇತಿಕವಾದ ‘ಇಷಯನ ಬುಡದಿಂದ ಬಂದ ಒಂದು ಚಿಗುರಿನ’ ಆಳ್ವಿಕೆಯಡಿ ನಿಜ ನ್ಯಾಯವು ಸ್ಥಾಪಿಸಲ್ಪಡುವುದು.—ಯೆಶಾಯ 11:1.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
1:8, 9—ಚೀಯೋನ್ ನಗರಿಯು, ಯಾವ ಅರ್ಥದಲ್ಲಿ “ದ್ರಾಕ್ಷೇತೋಟದ ಮಂಚಿಕೆಯಂತೆಯೂ ಸವುತೆಯ ಹೊಲದ ಗುಡಸಲಿನ ಹಾಗೂ” ಉಳಿದಿರುವುದು? ಇದರರ್ಥವು, ಅಶ್ಶೂರವು ದಾಳಿಮಾಡುವ ಸಮಯದಲ್ಲಿ ಯೆರೂಸಲೇಮ್ ನಗರವು ಸುಲಭವಾಗಿ ಭೇದಿಸಸಾಧ್ಯವಿರುವಂಥ ಅಂದರೆ, ದ್ರಾಕ್ಷಾತೋಟದಲ್ಲಿರುವ ಮಂಚಿಕೆಯಂತೆ ಯಾ ಸೌತೆಯ ಹೊಲದಲ್ಲಿ ಸುಲಭವಾಗಿ ಕುಸಿದು ಬೀಳಬಹುದಾದ ಗುಡಿಸಲಿನಂತೆ ಕಾಣುವುದು. ಆದರೆ ಯೆಹೋವನು ಅವಳ ಸಹಾಯಕ್ಕೆ ಬರುವುದರಿಂದ ಸೊದೋಮ್ ಗೊಮೋರಕ್ಕೆ ಸಂಭವಿಸಿದ ದುರ್ಗತಿ ಅವಳಿಗೆ ಬರುವುದಿಲ್ಲ.
1:18ಎ—“ಬನ್ನಿರಿ, ವಾದಿಸುವ” [“ವಿಷಯಗಳನ್ನು ಸರಿಪಡಿಸಿಕೊಳ್ಳೋಣ,” NW] ಎಂಬ ಮಾತುಗಳ ಅರ್ಥವೇನು? ವಿಷಯಗಳನ್ನು ಚರ್ಚಿಸಿ ತದನಂತರ ರಾಜಿಮಾಡಿಕೊಳ್ಳುವ ಮೂಲಕ ಪರಸ್ಪರ ಒಪ್ಪಂದಕ್ಕೆ ಬರಲು ಇದೊಂದು ಆಮಂತ್ರಣವಲ್ಲ. ಅದರ ಬದಲಿಗೆ ಈ ವಚನವು ನೀತಿಯ ನ್ಯಾಯಧೀಶನಾದ ಯೆಹೋವನು, ಇಸ್ರಾಯೇಲ್ಯರು ತಮ್ಮನ್ನೇ ಪರಿವರ್ತಿಸಿ ಶುದ್ಧೀಕರಿಸುವಂತೆ ಅವರಿಗೊಂದು ಅವಕಾಶಕೊಡುತ್ತಿರುವ ಸನ್ನಿವೇಶಕ್ಕೆ ಸೂಚಿಸುತ್ತಿದೆ.
6:8ಎ—ಇಲ್ಲಿ “ನಮಗೋಸ್ಕರ” ಎಂಬ ಸರ್ವನಾಮವನ್ನು ಏಕೆ ಬಳಸಲಾಗಿದೆ? ಬಹುವಚನ ರೂಪದಲ್ಲಿರುವ ಈ ಸರ್ವನಾಮವು ಯೆಹೋವನೊಂದಿಗೆ ಇನ್ನೊಬ್ಬ ವ್ಯಕ್ತಿಯಿರುವುದನ್ನು ಸೂಚಿಸುತ್ತದೆ ಮತ್ತು ನಿಸ್ಸಂದೇಹವಾಗಿ ಇವನು, ಯೆಹೋವನ ‘ಒಬ್ಬನೇ ಮಗನು’ ಆಗಿದ್ದಾನೆ.—ಯೋಹಾನ 1:14; 3:16.
6:11—“ಇದು ಎಂದಿನ ತನಕ?” ಎಂದು ಯೆಶಾಯನು ಕೇಳುವಾಗ ಅವನೇನನ್ನು ಸೂಚಿಸುತ್ತಿದ್ದನು? ಪ್ರತಿಕ್ರಿಯೆ ತೋರಿಸದಿದ್ದ ಆ ಜನರಿಗೆ ಯೆಹೋವನ ಸಂದೇಶಗಳನ್ನು ಎಷ್ಟರ ವರೆಗೆ ತಿಳಿಸುತ್ತಿರಬೇಕೆಂದು ಯೆಶಾಯನು ಕೇಳುತ್ತಿರಲ್ಲಿಲ್ಲ. ಬದಲಿಗೆ, ಜನರ ಆಧ್ಯಾತ್ಮಿಕ ಅಸ್ವಸ್ಥ ಸ್ಥಿತಿಯು ಇನ್ನೆಷ್ಟರವರೆಗೆ ದೇವರ ಹೆಸರಿಗೆ ಅಗೌರವ ತರಲಿದೆ ಎಂಬುದನ್ನು ಅವನು ತಿಳಿದುಕೊಳ್ಳಲು ಬಯಸಿದನು.
7:3, 4—ದುಷ್ಟ ಅರಸನಾದ ಆಹಾಜನನ್ನು ಯೆಹೋವನು ಏಕೆ ರಕ್ಷಿಸಿದನು? ಸಿರಿಯ ಮತ್ತು ಇಸ್ರಾಯೇಲಿನ ಅರಸರು, ಯೆಹೂದದ ರಾಜನಾದ ಆಹಾಜನನ್ನು ಪಟ್ಟದಿಂದ ಕೆಳಗುರುಳಿಸಿ, ಅವನ ಸ್ಥಾನದಲ್ಲಿ ದಾವೀದನ ಸಂತತಿಯವನಲ್ಲದ ಟಾಬೇಲನ ಮಗನನ್ನಿರಿಸಿ, ಅವನನ್ನು ಅವರ ಕೈಗೊಂಬೆಯಾಗಿಡಲು ಸಂಚು ಹೂಡಿದ್ದರು. ಸೈತಾನನ ಈ ತಂತ್ರವು, ಯೆಹೋವನು ದಾವೀದನೊಂದಿಗೆ ಮಾಡಿದ ರಾಜ್ಯದ ಒಡಂಬಡಿಕೆಯ ಕಾರ್ಯಾಚರಣೆಗೆ ವಿಘ್ನವನ್ನು ತರಲಿತ್ತು. ಆದುದರಿಂದಲೇ, ವಾಗ್ದಾತ್ತ “ಸಮಾಧಾನದ ಪ್ರಭು” ಯಾವ ವಂಶಾವಳಿಯಿಂದ ಬರಲಿದ್ದನೊ ಆ ವಂಶಾವಳಿಯನ್ನು ಕಾಪಾಡಲಿಕ್ಕಾಗಿ ಯೆಹೋವನು ಆಹಾಜನನ್ನು ರಕ್ಷಿಸಿದನು.—ಯೆಶಾಯ 9:6.
7:9—ಎಫ್ರಾಯೀಮ್ಯರು 65 ವರ್ಷಗಳೊಳಗೆ ‘ಭಂಗಪಟ್ಟದ್ದು’ ಹೇಗೆ? ಹತ್ತು ಕುಲದ ಯೆಹೂದ ರಾಜ್ಯದಿಂದ ಜನರನ್ನು ಗಡೀಪಾರುಮಾಡಿ ಅನ್ಯದೇಶಿಯರನ್ನು ಅವರ ಸ್ಥಾನದಲ್ಲಿ ಭರ್ತಿಮಾಡುವ ಕೆಲಸವು, ಯೆಶಾಯನು ಈ ಪ್ರವಾದನೆಯನ್ನು ನುಡಿದ ಸ್ವಲ್ಪದರಲ್ಲೇ ಅಂದರೆ, “ಇಸ್ರಾಯೇಲ್ಯರ ಅರಸನಾದ ಪೆಕಹನ ಕಾಲದಲ್ಲಿ” ನಡೆಯಿತು. (2 ಅರಸುಗಳು 15:29) ಈ ಕೆಲಸವು ಸನ್ಹೇರೀಬನ ಮಗನೂ ಉತ್ತರಾಧಿಕಾರಿಯೂ ಆದ ಅಶ್ಶೂರದ ಅರಸನಾದ ಏಸರ್ಹದ್ದೋನಿನ ಕಾಲದಲ್ಲೂ ಮುಂದುವರಿಯಿತು. (2 ಅರಸುಗಳು 17:6; ಎಜ್ರ 4:1, 2; ಯೆಶಾಯ 37:37, 38) ಹೀಗೆ ಜನರನ್ನು ಸತತವಾಗಿ ಸಮಾರ್ಯದಿಂದ ಇನ್ನೊಂದೆಡೆಗೆ ಮತ್ತು ಬೇರೆ ಸ್ಥಳಗಳಿಂದ ಸಮಾರ್ಯಕ್ಕೆ ಸ್ಥಳಾಂತರಿಸುವ ಕೆಲಸವು ಯೆಶಾಯ 7:9ರಲ್ಲಿ ತಿಳಿಸಲ್ಪಟ್ಟ 65 ವರ್ಷಕಾಲ ನಡೆಯಿತು.
11:1, 10—ಯೇಸು ಕ್ರಿಸ್ತನು “ಇಷಯನ ಬುಡದಿಂದ ಒಂದು ಚಿಗುರು” ಹಾಗೂ ಅದೇ ಸಮಯದಲ್ಲಿ “ಇಷಯನ ಬೇರು” (NIBV) ಆಗಿರುವುದು ಹೇಗೆ? (ರೋಮಾಪುರ 15:12, NW) ಯೇಸು, ಇಷಯನ ಮಗನಾದ ದಾವೀದನ ಮೂಲಕ ಹುಟ್ಟಿದ್ದರಿಂದ ಅವನು ಇಷಯನ ವಂಶಜನಾಗಿದ್ದನು. ಹೀಗೆ ಅವನು ಅಕ್ಷರಾರ್ಥದಲ್ಲಿ “ಇಷಯನ ಬುಡದಿಂದ ಒಂದು ಚಿಗುರು” ಅಗಿದ್ದನು. (ಮತ್ತಾಯ 1:1-6; ಲೂಕ 3:23-32) ಆದರೆ ಯೇಸು ರಾಜ್ಯಾಧಿಕಾರವನ್ನು ಪಡೆದುಕೊಳ್ಳುವುದು, ತನ್ನ ಪೂರ್ವಿಕರೊಂದಿಗಿನ ಸಂಬಂಧವನ್ನು ಬದಲಾಯಿಸುತ್ತದೆ. ವಿಧೇಯ ಮಾನವಕುಲಕ್ಕೆ ನಿತ್ಯ ಜೀವವನ್ನು ಕೊಡುವ ಶಕ್ತಿ ಮತ್ತು ಅಧಿಕಾರವು ಯೇಸುವಿಗೆ ಕೊಡಲ್ಪಟ್ಟಿರುವ ಕಾರಣ ಅವನು ಅವರ “ನಿತ್ಯನಾದ ತಂದೆ” ಆಗುತ್ತಾನೆ. (ಯೆಶಾಯ 9:6) ಹೀಗೆ ಅವನು ಇಷಯನನ್ನು ಸೇರಿಸಿ ಅವನ ಪೂರ್ವಿಕರ “ಬೇರು” ಸಹ ಆಗುತ್ತಾನೆ.
ನಮಗಾಗಿರುವ ಪಾಠಗಳು:
1:3. ಸೃಷ್ಟಿಕರ್ತನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೊ ಅದರ ಪ್ರಕಾರ ಜೀವಿಸಲು ನಿರಾಕರಿಸುವುದಾದರೆ ನಾವು ಎತ್ತು ಅಥವಾ ಒಂದು ಕತ್ತೆಗಿಂತಲೂ ಕಡೆಯಾಗುತ್ತೇವೆ. ಅದರ ಬದಲಿಗೆ, ಯೆಹೋವನು ನಮಗೋಸ್ಕರ ಏನೆಲ್ಲಾ ಮಾಡಿದ್ದಾನೊ ಅದಕ್ಕಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುವುದು ನಾವು ವಿವೇಚನೆಯಿಲ್ಲದೆ ವರ್ತಿಸುವುದರಿಂದ ಮತ್ತು ಯೆಹೋವನನ್ನು ಬಿಟ್ಟುಹೋಗುವುದರಿಂದ ನಮ್ಮನ್ನು ತಡೆಯುವುದು.
1:11-13. ಕಪಟಾಚಾರದ ಧಾರ್ಮಿಕ ಆಚರಣೆಗಳು ಮತ್ತು ಕಾಟಾಚಾರದ ಪ್ರಾರ್ಥನೆಗಳು ಯೆಹೋವನಿಗೆ ಬೇಸರವನ್ನು ತರುತ್ತವೆ. ನಮ್ಮ ಕ್ರಿಯೆಗಳು ಮತ್ತು ನಮ್ಮ ಪ್ರಾರ್ಥನೆಗಳು ಯೋಗ್ಯವಾದ ಹೃದಯಪ್ರೇರಣೆಯಿಂದ ಮಾಡಲ್ಪಡಬೇಕು.
1:25-27; 2:2; 4:2, 3. ಪಶ್ಚಾತ್ತಾಪಪಟ್ಟ ಜನಶೇಷವು ಯೆರೂಸಲೇಮಿಗೆ ಹಿಂತಿರುಗುವಾಗ ಮತ್ತು ಸತ್ಯ ಆರಾಧನೆಯು ಅಲ್ಲಿ ಪುನಸ್ಸ್ಥಾಪಿಸಲ್ಪಟ್ಟಾಗ ಯೆಹೂದದ ನಿರ್ಜನಾವಸ್ಥೆ ಮತ್ತು ದಾಸತ್ವವು ಕೊನೆಗೊಳ್ಳಲಿತ್ತು. ಪಶ್ಚಾತ್ತಾಪಪಡುವ ತಪ್ಪಿತಸ್ಥರನ್ನು ಯೆಹೋವನು ಕರುಣಿಸುತ್ತಾನೆ.
2:2-4. ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ನಾವು ಅನೇಕ ಜನಾಂಗಗಳ ಜನರು ಶಾಂತಿಯ ಮಾರ್ಗಗಳನ್ನು ಕಲಿಯುವಂತೆ ಮತ್ತು ಪರಸ್ಪರ ಸಮಾಧಾನದಿಂದಿರುವಂತೆ ಸಹಾಯಮಾಡುತ್ತೇವೆ.
4:4. ಯೆಹೋವನು ನೈತಿಕ ಮಲಿನತೆ ಮತ್ತು ರಕ್ತಾಪರಾಧವನ್ನು ತೆಗೆದುಹಾಕುವನು ಇಲ್ಲವೆ ತೊಳೆದುಹಾಕುವನು.
5:11-13. ಒಬ್ಬನು ಮನೋರಂಜನೆಯ ಆಯ್ಕೆಮಾಡುವಾಗ ಸಂಯಮ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳದೇ ಇದ್ದರೆ, ಅವನು ಜ್ಞಾನದ ಪ್ರಕಾರ ನಡೆದುಕೊಳ್ಳಲು ನಿರಾಕರಿಸುತ್ತಿದ್ದಾನೆ.—ರೋಮಾಪುರ 13:13.
5:21-23. ಕ್ರೈಸ್ತ ಹಿರಿಯರು ಅಥವಾ ಮೇಲ್ವಿಚಾರಕರು ‘ತಮ್ಮಲ್ಲಿ ತಾವೇ ಜ್ಞಾನಿಗಳೆಂದು ಭಾವಿಸಿಕೊಳ್ಳದಂತೆ’ ನೋಡಿಕೊಳ್ಳಬೇಕು. ಅವರು “ಮದ್ಯ” ಸೇವಿಸುವುದರಲ್ಲಿಯೂ ಮಿತಭಾವವನ್ನು ತೋರಿಸಬೇಕು ಮತ್ತು ಸಭೆಯಲ್ಲಿ ಭೇದಭಾವ ತೋರಿಸಬಾರದು.
11:3ಎ. ಯೆಹೋವನ ಭಯದಲ್ಲಿ ಆನಂದವಿದೆ ಎಂಬುದನ್ನು ಯೇಸುವಿನ ಮಾದರಿ ಮತ್ತು ಅವನ ಬೋಧನೆಗಳು ತೋರಿಸುತ್ತವೆ.
‘ಯೆಹೋವನು ಯಾಕೋಬ್ಯರನ್ನು ಕನಿಕರಿಸುವನು’
ಯೆಶಾಯ 13ರಿಂದ 23ನೇ ಅಧ್ಯಾಯಗಳು ಜನಾಂಗಗಳ ವಿರುದ್ಧವಾದ ದೈವೋಕ್ತಿಗಳಾಗಿವೆ. ಹಾಗಿದ್ದರೂ, ಇಸ್ರಾಯೇಲಿನ ಎಲ್ಲಾ ಕುಲದವರನ್ನು ಸ್ವದೇಶಕ್ಕೆ ಹಿಂದಿರುಗುವಂತೆ ಮಾಡುವ ಮೂಲಕ ‘ಯೆಹೋವನು ಯಾಕೋಬ್ಯರನ್ನು ಕನಿಕರಿಸುವನು.’ (ಯೆಶಾಯ 14:1) 24ರಿಂದ 27ನೇ ಅಧ್ಯಾಯಗಳಲ್ಲಿ ಯೆಹೂದದ ನಿರ್ಜನಾವಸ್ಥೆಯ ಕುರಿತಾದ ಸಂದೇಶದೊಂದಿಗೆ ಅದರ ಪುನಸ್ಸ್ಥಾಪನೆಯ ವಾಗ್ದಾನವೂ ಇದೆ. ಸಿರಿಯದೊಂದಿಗೆ ಮೈತ್ರಿಸಂಬಂಧವನ್ನು ಬೆಳಸಿದ್ದ ಕಾರಣ, “ಕುಡುಕರಾದ ಎಫ್ರಾಯೀಮ್ಯರ [ಇಸ್ರಾಯೇಲ್ಯರ]” ಕಡೆಗೆ ಮತ್ತು ಯೆಹೂದದ ‘ಯಾಜಕ ಪ್ರವಾದಿಗಳು’ ಸಹ ಅಶ್ಶೂರದೊಂದಿಗೆ ಮೈತ್ರಿಸಂಬಂಧವನ್ನು ಬಯಸಿದ ಕಾರಣ ಯೆಹೋವನು ಅವರ ಮೇಲೆ ತನ್ನ ರೋಷವನ್ನು ವ್ಯಕ್ತಪಡಿಸುತ್ತಾನೆ. (ಯೆಶಾಯ 28:1, 7) ಸಂರಕ್ಷಣೆಗಾಗಿ ‘ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿದ್ದ’ ‘ಅರೀಯೇಲಿಗೆ’ ಅಂದರೆ, ಯೆರೂಸಲೇಮಿಗೆ ದುರ್ಗತಿಯು ಘೋಷಿಸಲ್ಪಟ್ಟಿದೆ. (ಯೆಶಾಯ 29:1; 30:1, 2) ಹಾಗಿದ್ದರೂ, ಯೆಹೋವನಲ್ಲಿ ನಂಬಿಕೆ ವ್ಯಕ್ತಪಡಿಸುವ ಜನರಿಗೆ ರಕ್ಷಣೆಯು ಮುಂತಿಳಿಸಲ್ಪಟ್ಟಿದೆ.
‘ಪ್ರಾಯದ ಸಿಂಹವು, ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವ’ ಹಾಗೆ, ಯೆಹೋವನು “ಚೀಯೋನ್ ಪರ್ವತ”ವನ್ನು ಕಾಯುವನು. (ಯೆಶಾಯ 31:4) “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು” ಎಂಬ ವಾಗ್ದಾನವೂ ಈ ಪುಸ್ತಕದಲ್ಲಿದೆ. (ಯೆಶಾಯ 32:1) ಅಶ್ಶೂರ್ಯರು ಯೆಹೂದಕ್ಕೆ ಒಡ್ಡಿದ ಬೆದರಿಕೆಯಿಂದಾಗಿ “ಸಮಾಧಾಯಕ ರಾಯಭಾರಿಗಳು” ಸಹ ಘೋರವಾಗಿ ಅಳುತ್ತಾರಾದರೂ, ತನ್ನ ಜನರನ್ನು ವಾಸಿಮಾಡಲಾಗುವುದು ಅಂದರೆ ಅವರ “ಪಾಪವು ಪರಿಹಾರವಾಗುವದು” ಎಂದು ಯೆಹೋವನು ವಾಗ್ದಾನಿಸುತ್ತಾನೆ. (ಯೆಶಾಯ 33:7, 22-24) ‘ಯೆಹೋವನು ಸಕಲಜನಾಂಗಗಳಲ್ಲಿ ಕೋಪಮಾಡಿ ಅವುಗಳ ಸೈನ್ಯದ ಮೇಲೆ ರೋಷಗೊಂಡಿದ್ದಾನೆ.’ (ಯೆಶಾಯ 34:2) ಆದರೆ, ಯೆಹೂದವು ನಿರ್ಜನಾವಸ್ಥೆಯಲ್ಲಿಯೇ ಉಳಿಯದು. “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.”—ಯೆಶಾಯ 35:1.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
13:17—ಮೇದ್ಯರು ಬೆಳ್ಳಿಯನ್ನು ಲಕ್ಷಿಸದೆ ಬಂಗಾರವನ್ನು ಪ್ರೀತಿಸದಿದ್ದದ್ದು ಯಾವ ವಿಧದಲ್ಲಿ? ಮೇದ್ಯಪಾರಸಿಯರಿಗೆ ತಮ್ಮ ವಿಜಯದಿಂದ ಬರುವ ಮಹಿಮೆಯು ಯುದ್ಧದ ಕೊಳ್ಳೆಗಿಂತ ಎಷ್ಟೋ ಹೆಚ್ಚು ಮಹತ್ವದ್ದಾಗಿತ್ತು. ಈ ಸಂಗತಿಯು ಕೋರೆಷನ ವಿಷಯದಲ್ಲಿ ಸತ್ಯವಾಗಿತ್ತು. ಅವನು, ಯೆಹೋವನ ದೇವಾಲಯದಿಂದ ನೆಬೂಕದ್ನೆಚ್ಚರನು ದೋಚಿದ ಬೆಳ್ಳಿಬಂಗಾರದ ಪಾತ್ರೆಗಳನ್ನು, ತಾಯ್ನಾಡಿಗೆ ಹಿಂತಿರುಗುತ್ತಿದ್ದ ಬಂದಿವಾಸಿಗಳಿಗೆ ಕೊಟ್ಟು ಕಳುಹಿಸಿದನು.
14:1, 2—ಯೆಹೋವನ ಜನರು, “ಯಾರಿಗೆ ಸೆರೆಯಾಗಿದ್ದರೋ ಅವರನ್ನು ಸೆರೆಹಿಡಿಯುವರು” ಮತ್ತು “ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು” ಎಂಬ ಮಾತು ಹೇಗೆ ನೆರವೇರಿತು? ಇದು, ಮೇದ್ಯಪಾರಸಿಯರಡಿ ಬಾಬೆಲಿನಲ್ಲಿ ಉನ್ನತ ಸ್ಥಾನವನ್ನು ಪಡೆದ ದಾನಿಯೇಲನ ವಿಷಯದಲ್ಲಿ, ಪಾರಸಿಯ ರಾಣಿಯಾದ ಎಸ್ತೇರಳ ವಿಷಯದಲ್ಲಿ ಮತ್ತು ಪಾರಸಿಯ ಸಾಮ್ರಾಜ್ಯದ ಪ್ರಧಾನಮಂತ್ರಿಯಾಗಿ ನೇಮಿಸಲ್ಪಟ್ಟ ಮೊರ್ದೆಕೈಯ ವಿಷಯದಲ್ಲಿ ನೆರವೇರಿತು.
20:2-5—ಯೆಶಾಯನು ಮೂರು ವರ್ಷಗಳ ವರೆಗೆ ನಿಜವಾಗಿಯೂ ಪೂರ್ತಿ ಬೆತ್ತಲೆಯಾಗಿ ತಿರುಗಾಡಿದನೊ? ಪ್ರಾಯಶಃ ಯೆಶಾಯನು ತನ್ನ ಮೇಲಂಗಿಯನ್ನು ತೆಗೆದು, ಕೇವಲ ಅಲ್ಪ ಬಟ್ಟೆಗಳನ್ನು ತೊಟ್ಟು ತಿರುಗಾಡುತ್ತಿದ್ದನು.
21:1—ಯಾವ ಪ್ರದೇಶವನ್ನು “ಕಡಲಡವಿ” ಎಂದು ಸೂಚಿಸಲಾಗಿದೆ? ಬಾಬೆಲಿನ ಸಮೀಪ ಯಾವ ಸಮುದ್ರವೂ ಇರದಿದ್ದರೂ ಅದನ್ನು “ಕಡಲಡವಿ” ಎಂದು ಸೂಚಿಸಲಾಗಿದೆ. ಇದಕ್ಕೆ ಕಾರಣವೇನೆಂದರೆ ಪ್ರತಿ ವರ್ಷ ಯೂಫ್ರೇಟೀಸ್ ಹಾಗೂ ಟೈಗ್ರಿಸ್ ನದಿಗಳ ನೀರು ತುಂಬಿಹರಿದು ಈ ಪ್ರದೇಶಕ್ಕೆ ನೆರೆಬರುತ್ತಿತ್ತು. ಈ ನೆರೆಯು ಜವುಗು “ಕಡಲನ್ನು” ಉಂಟುಮಾಡುತ್ತಿತ್ತು.
24:13-16—ಯೆಹೂದ್ಯರು, “ಎಣ್ಣೆಯ ಮರವನ್ನು ಬಡಿದ ಮೇಲೆಯೂ ದ್ರಾಕ್ಷೆಯ ಸುಗ್ಗಿಯು ತೀರಿದನಂತರವೂ ನಿಲ್ಲುವ ಉಳಿಗಾಯ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಶೇಷ” ಆಗಿರುವುದು ಹೇಗೆ? ಸುಗ್ಗಿಯ ಬಳಿಕವೂ ಹೇಗೆ ಕೆಲವು ದ್ರಾಕ್ಷೆಗಳು ಬಳ್ಳಿಯಲ್ಲೇ ಉಳಿದುಹೋಗುತ್ತವೊ ಅಥವಾ ಹೇಗೆ ಕೆಲವು ಹಣ್ಣುಗಳು ಮರದಲ್ಲೇ ಉಳಿಯುತ್ತವೊ ಹಾಗೆಯೇ ಯೆರೂಸಲೇಮ್ ಮತ್ತು ಯೆಹೂದದ ನಾಶನವನ್ನು ಕೇವಲ ಕೆಲವರೇ ಪಾರಾಗಲಿದ್ದರು. ಈ ಬದುಕಿ ಉಳಿದವರನ್ನು ‘ಮೂಡಣಕ್ಕೆ [ಪೂರ್ವ ದಿಕ್ಕಿನ ಬಾಬೆಲಿಗೆ]’ ಇಲ್ಲವೆ “ಕರಾವಳಿ [ಭೂಮದ್ಯ ಸಾಗರ]” ಪ್ರದೇಶಕ್ಕೆ, ಹೀಗೆ ಎಲ್ಲಿಗೂ ಗಡೀಪಾರು ಮಾಡಿದರೂ ಅವರು ಯೆಹೋವನನ್ನು ನಿಶ್ಚಯವಾಗಿಯೂ ಘನಪಡಿಸುವರು.
24:21—“ಆಕಾಶಮಂಡಲದ ದೂತಸೈನ್ಯ” ಮತ್ತು ‘ಭೂಮಂಡಲದ ನೆಲದೊಡೆಯರು’ ಯಾರಾಗಿದ್ದಾರೆ? “ಆಕಾಶಮಂಡಲದ ದೂತಸೈನ್ಯ,” ದುಷ್ಟಾತ್ಮ ಪಡೆಗಳನ್ನು ಸೂಚಿಸುತ್ತಿರಬೇಕು. ಮತ್ತು ‘ಭೂಮಂಡಲದ ನೆಲದೊಡೆಯರು’ ಎಂಬುದು, ಈ ದೆವ್ವಗಳು ಯಾರ ಮೇಲೆ ಪ್ರಬಲವಾದ ಪ್ರಭಾವವನ್ನು ಬೀರುತ್ತವೊ ಆ ಭೂಅಧಿಪತಿಗಳಿಗೆ ಸೂಚಿಸುತ್ತದೆ.—1 ಯೋಹಾನ 5:19.
25:7—‘ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕು ಮತ್ತು ಸಕಲ ದೇಶೀಯರ ಮೇಲೆ ಹಾಕಿರುವ ತೆರೆ’ ಯಾವುದಾಗಿದೆ? ಈ ಹೋಲಿಕೆಯು, ಮಾನವಕುಲದ ಅತ್ಯಂತ ದೊಡ್ಡ ವೈರಿಗಳಾದ ಪಾಪ ಮತ್ತು ಮರಣವನ್ನು ಸೂಚಿಸುತ್ತದೆ.
ನಮಗಾಗಿರುವ ಪಾಠಗಳು:
13:20-22; 14:22, 23; 21:1-9. ಬಾಬೆಲಿನ ವಿಷಯದಲ್ಲಾದಂತೆ ಯೆಹೋವನ ಪ್ರವಾದನಾತ್ಮಕ ವಾಕ್ಯವು ಸದಾ ನೆರವೇರುವುದು.
17:7, 8. ಇಸ್ರಾಯೇಲಿನಲ್ಲಿ ಹೆಚ್ಚಿನವರು ಕಿವಿಗೊಡದಿದ್ದರೂ ಕೆಲವರು ಯೆಹೋವನನ್ನು ಲಕ್ಷಿಸಿದರು. ತದ್ರೀತಿಯಲ್ಲಿ ಕ್ರೈಸ್ತಪ್ರಪಂಚಕ್ಕೆ ಸೇರಿದವರಲ್ಲಿ ಕೆಲವರು ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾರೆ.
28:1-6. ಇಸ್ರಾಯೇಲನ್ನು ಅಶ್ಶೂರ್ಯವು ನಾಶಮಾಡುವುದಾದರೂ ನಂಬಿಗಸ್ತ ವ್ಯಕ್ತಿಗಳು ಬದುಕಿ ಉಳಿಯುವಂತೆ ದೇವರು ನೋಡಿಕೊಳ್ಳುವನು. ಯೆಹೋವನ ನ್ಯಾಯತೀರ್ಪುಗಳು ನೀತಿವಂತರನ್ನು ನಿರೀಕ್ಷಾಹೀನರನ್ನಾಗಿ ಮಾಡುವುದಿಲ್ಲ.
28:23-29. ಯೆಹೋವನು ಯಥಾರ್ಥ ಜನರನ್ನು ಅವರ ನಿರ್ದಿಷ್ಟ ಅಗತ್ಯತೆಗಳು ಹಾಗೂ ಸನ್ನಿವೇಶಗಳಿಗನುಸಾರ ತಿದ್ದುತ್ತಾನೆ.
30:15. ನಮಗೆ ಯೆಹೋವನಿಂದ ರಕ್ಷಣೆ ಬೇಕಾದರೆ ನಾವು ‘ಸುಮ್ಮನಿದ್ದು,’ ಅಂದರೆ ಮಾನವ ಯೋಜನೆಗಳ ಮೂಲಕ ರಕ್ಷಣೆಯನ್ನು ಪಡೆಯಲು ಪ್ರಯತ್ನಿಸುವುದರಿಂದ ದೂರವಿರುವ ಮೂಲಕ ನಂಬಿಕೆಯನ್ನು ತೋರಿಸುವುದು ಅಗತ್ಯ. “ಶಾಂತರಾಗಿ ಭರವಸದಿಂದಿರುವ” ಅಂದರೆ ಭಯಪಡದಿರುವ ಮೂಲಕ, ನಮ್ಮನ್ನು ರಕ್ಷಿಸಲು ಯೆಹೋವನಿಗಿರುವ ಸಾಮರ್ಥ್ಯದಲ್ಲಿ ನಾವು ಭರವಸೆಯನ್ನೂ ವ್ಯಕ್ತಪಡಿಸುತ್ತೇವೆ.
30:20, 21. ಯೆಹೋವನು ತನ್ನ ಪ್ರೇರಿತ ವಾಕ್ಯವಾದ ಬೈಬಲಿನ ಮೂಲಕ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಏನನ್ನು ಹೇಳುತ್ತಾನೊ ಅದನ್ನು ಮಾಡುವುದರಿಂದ ನಾವು ಆತನನ್ನು ‘ಕಣ್ಣಾರೆ ಕಾಣುತ್ತೇವೆ’ ಮತ್ತು ಆತನ ರಕ್ಷಣೆಯ ಮಾತು ನಮ್ಮ ‘ಕಿವಿಗೆ ಬೀಳುತ್ತದೆ.’—ಮತ್ತಾಯ 24:45.
ಯೆಶಾಯನ ಪ್ರವಾದನೆ ದೇವರ ವಾಕ್ಯದಲ್ಲಿ ನಮ್ಮ ಭರವಸೆಯನ್ನು ಬಲಗೊಳಿಸುತ್ತದೆ
ಯೆಶಾಯ ಪುಸ್ತಕದಲ್ಲಿರುವ ದೇವರ ಸಂದೇಶಕ್ಕೆ ನಾವೆಷ್ಟು ಕೃತಜ್ಞರು! ಈಗಾಗಲೇ ನೆರವೇರಿರುವ ಪ್ರವಾದನೆಗಳು ‘ಯೆಹೋವನ ಬಾಯಿಂದ ಹೊರಟ ಮಾತು ಆತನ ಇಷ್ಟಾರ್ಥವನ್ನು ನೆರವೇರಿಸಿ ಆತನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ಆತನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ’ ಎಂಬ ವಿಷಯದಲ್ಲಿ ನಮ್ಮ ಭರವಸೆಯನ್ನು ಬಲಗೊಳಿಸುತ್ತವೆ.—ಯೆಶಾಯ 55:11.
ಯೆಶಾಯ 9:7; 11:1-5, 10 ಮೊದಲಾದ ವಚನಗಳಲ್ಲಿ ಕಂಡುಬರುವ ಮೆಸ್ಸೀಯನ ಕುರಿತಾದ ಪ್ರವಾದನೆಗಳ ಬಗ್ಗೆ ಏನು? ಇವು, ಯೆಹೋವನು ನಮ್ಮ ರಕ್ಷಣೆಗಾಗಿ ಮಾಡಿರುವ ಏರ್ಪಾಡುಗಳಲ್ಲಿ ನಮಗಿರುವ ನಂಬಿಕೆಯನ್ನು ಬಲಗೊಳಿಸುವುದಿಲ್ಲವೇ? ಈ ಪುಸ್ತಕದಲ್ಲಿರುವ ಪ್ರವಾದನೆಗಳ ಪ್ರಧಾನ ನೆರವೇರಿಕೆಗಳು ನಮ್ಮ ದಿನಗಳಲ್ಲಿ ನಡೆಯುತ್ತಿವೆ ಅಥವಾ ಇನ್ನು ಕೆಲವು ಭವಿಷ್ಯತ್ತಿನಲ್ಲಿ ನೆರವೇರಲಿವೆ. (ಯೆಶಾಯ 2:2-4; 11:6-9; 25:6-8; 32:1, 2) ನಿಶ್ಚಯವಾಗಿಯೂ ಯೆಶಾಯನ ಪುಸ್ತಕವು “ದೇವರ ವಾಕ್ಯವು ಸಜೀವವಾದದ್ದು” ಎಂಬುದಕ್ಕೆ ಪುರಾವೆಯನ್ನು ಕೂಡಿಸುತ್ತದೆ!—ಇಬ್ರಿಯ 4:12. (w06 12/01)
[ಪುಟ 12ರಲ್ಲಿರುವ ಚಿತ್ರ]
ಯೆಶಾಯನು ಮತ್ತವನ ಮಕ್ಕಳು ಇಸ್ರಾಯೇಲಿನಲ್ಲಿ “ಗುರುತುಗಳಾಗಿಯೂ ಅದ್ಭುತಗಳಾಗಿಯೂ” ಇದ್ದರು
[ಪುಟ 13ರಲ್ಲಿರುವ ಚಿತ್ರ]
ಯೆರೂಸಲೇಮ್ “ದ್ರಾಕ್ಷೇತೋಟದಲ್ಲಿರುವ ಗುಡಸಲಿನ” ಹಾಗೆ ಆಗಲಿತ್ತು
[ಪುಟ 14ರಲ್ಲಿರುವ ಚಿತ್ರ]
ಜನಾಂಗಗಳವರು ತಮ್ಮ “ಕತ್ತಿಗಳನ್ನು ಗುಳಗಳನ್ನಾಗಿ” ಮಾಡುವಂತೆ ಹೇಗೆ ಸಹಾಯಮಾಡಲಾಗುತ್ತಿದೆ?