ನಾವು ಸಾರಲೇಬೇಕಾದಂಥ ಸಂದೇಶ
ಯೆಹೋವನು, “ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು” ಎಂದು ಹೇಳುವ ಮೂಲಕ ನಮಗೆ ಒಂದು ಜವಾಬ್ದಾರಿಯನ್ನೂ ಮಹಾ ಸುಯೋಗವನ್ನೂ ಕೊಟ್ಟಿದ್ದಾನೆ. (ಯೆಶಾ. 43:12) ನಾವು ಕೇವಲ ವಿಶ್ವಾಸಿಗಳಷ್ಟೇ ಅಲ್ಲ. ನಾವು ದೇವರ ಪ್ರೇರಿತ ವಾಕ್ಯದಲ್ಲಿರುವ ಮಹತ್ವಭರಿತ ಸತ್ಯಗಳಿಗೆ ಬಹಿರಂಗವಾಗಿ ಸಾಕ್ಷ್ಯವನ್ನು ನೀಡುವ ಸಾಕ್ಷಿಗಳಾಗಿದ್ದೇವೆ. ನಮ್ಮೀ ದಿನಗಳಲ್ಲಿ ನಾವು ತಿಳಿಯಪಡಿಸುವಂತೆ ಯೆಹೋವನು ಆದೇಶ ನೀಡಿರುವ ಸಂದೇಶವು ಯಾವುದು? ಅದು ಯೆಹೋವ ದೇವರ ಮೇಲೆ, ಯೇಸು ಕ್ರಿಸ್ತನ ಮೇಲೆ ಮತ್ತು ಮೆಸ್ಸೀಯ ಸಂಬಂಧಿತ ರಾಜ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ.
“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು”
ಕ್ರೈಸ್ತ ಶಕಕ್ಕೆ ಎಷ್ಟೋ ಮುಂಚೆ, ಯೆಹೋವನು ನಂಬಿಗಸ್ತನಾಗಿದ್ದ ಅಬ್ರಹಾಮನಿಗೆ, “ಭೂಮಿಯ ಎಲ್ಲಾ ಜನಾಂಗಗಳು” ತಮ್ಮನ್ನೇ ಆಶೀರ್ವದಿಸಿಕೊಳ್ಳಲಿಕ್ಕಾಗಿರುವ ಒಂದು ಏರ್ಪಾಡಿನ ಕುರಿತು ತಿಳಿಸಿದನು. (ಆದಿ. 22:18) ಸಕಲ ಮಾನವರು ಪೂರೈಸಬೇಕಾದ ಒಂದು ಮೂಲಭೂತ ಆವಶ್ಯಕತೆಯ ವಿಷಯದಲ್ಲಿ ಹೀಗೆ ಬರೆಯುವಂತೆ ಸಹ ಆತನು ಸೊಲೊಮೋನನನ್ನು ಪ್ರೇರಿಸಿದನು: “[“ಸತ್ಯ,” NW] ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂ. 12:13) ಆದರೆ ಎಲ್ಲಾ ಜನಾಂಗಗಳಲ್ಲಿರುವ ಜನರು ಈ ಸಂಗತಿಗಳ ಕುರಿತು ಹೇಗೆ ತಾನೇ ಅರಿತುಕೊಂಡಾರು?
ದೇವರ ವಾಕ್ಯವನ್ನು ನಂಬಿದಂಥ ಕೆಲವು ಜನರು ಎಲ್ಲ ಕಾಲಗಳಲ್ಲಿಯೂ ಇದ್ದರೆಂಬುದು ನಿಜವಾದರೂ, ಸರ್ವ ಜನಾಂಗಗಳಿಗೆ ನಿಜವಾಗಿಯೂ ತಲಪಬೇಕಾಗಿದ್ದ ಸುವಾರ್ತೆಯ ತೀವ್ರವಾದ ಭೂವ್ಯಾಪಕ ಸಾಕ್ಷಿಯು “ಕರ್ತನ ದಿನ”ಕ್ಕಾಗಿ ಕಾದಿರಿಸಲ್ಪಟ್ಟಿತ್ತು ಎಂದು ಬೈಬಲ್ ತೋರಿಸುತ್ತದೆ. ಇದು 1914 ರಲ್ಲಿ ಆರಂಭವಾಯಿತು. (ಪ್ರಕ. 1:10) ಈ ಸಮಯದ ಕುರಿತು, ದೇವದೂತರ ಮೇಲ್ವಿಚಾರಣೆಯ ಕೆಳಗೆ ಒಂದು ಮಹತ್ವದ ಘೋಷಣೆಯು, “ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ” ಮಾಡಲ್ಪಡುವುದೆಂದು ಪ್ರಕಟನೆ 14:6, 7 ಮುಂತಿಳಿಸಿತು. “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ,” ಎಂದು ಅವರನ್ನು ಪ್ರೋತ್ಸಾಹಿಸಲಾಗುವುದು. ಈ ಸಂದೇಶವನ್ನು ತಿಳಿಯಪಡಿಸುವುದು ದೇವರ ಚಿತ್ತವಾಗಿದೆ. ಮತ್ತು ಈ ಕಾರ್ಯದಲ್ಲಿ ಭಾಗವಹಿಸುವ ಸುಯೋಗ ನಮಗಿದೆ.
“ಸತ್ಯದೇವರು.” “ನೀವು ನನ್ನ ಸಾಕ್ಷಿ” ಎಂದು ಯೆಹೋವನು ಪ್ರಕಟಿಸಿದಾಗ, ದೇವತ್ವದ ಕುರಿತಾದ ವಾದಾಂಶವು ಚರ್ಚಿಸಲ್ಪಡುತ್ತಿದ್ದ ಹಿನ್ನೆಲೆಯಲ್ಲಿ ಆತನು ಇದನ್ನು ಹೇಳಿದನು. (ಯೆಶಾ. 43:10) ತಿಳಿಯಪಡಿಸಲೇಬೇಕಾದ ಆ ಸಂದೇಶವು, ಜನರಿಗೆ ಒಂದು ಧರ್ಮವಿರಬೇಕು ಅಥವಾ ಅವರು ಒಬ್ಬ ದೇವರಲ್ಲಿ ನಂಬಿಕೆಯಿಡಬೇಕು ಎಂಬುದಷ್ಟೇ ಆಗಿರುವುದಿಲ್ಲ. ಬದಲಿಗೆ, ಭೂಪರಲೋಕಗಳ ಸೃಷ್ಟಿಕರ್ತನು ಮಾತ್ರ ಒಬ್ಬನೇ ಸತ್ಯದೇವರಾಗಿದ್ದಾನೆ ಎಂದು ಜನರು ಕಲಿಯುವಂಥ ಅವಕಾಶವು ಅವರಿಗೆ ಕೊಡಲ್ಪಡುವುದು ಆವಶ್ಯಕವಾಗಿದೆ. (ಯೆಶಾ. 45:5, 18, 21, 22; ಯೋಹಾ. 17:3) ಸತ್ಯದೇವರು ಮಾತ್ರ ಭರವಸಾರ್ಹವಾದ ರೀತಿಯಲ್ಲಿ ಭವಿಷ್ಯತ್ತನ್ನು ಮುಂತಿಳಿಸಶಕ್ತನಾಗಿದ್ದಾನೆ. ಗತಕಾಲದಲ್ಲಿ ಯೆಹೋವನ ಮಾತುಗಳ ನೆರವೇರಿಕೆಯು, ಭಾವೀ ಸಮಯಗಳ ಕುರಿತು ಆತನು ಮಾಡಿರುವ ವಾಗ್ದಾನಗಳೆಲ್ಲವು ನೆರವೇರುವವು ಎಂಬ ಭರವಸೆಗೆ ಬಲವಾದ ಆಧಾರವನ್ನು ಒದಗಿಸುತ್ತದೆಂದು ತೋರಿಸುವುದು ನಮಗಿರುವ ಸುಯೋಗವಾಗಿದೆ.—ಯೆಹೋ. 23:14; ಯೆಶಾ. 55:10, 11.
ನಾವು ಯಾರಿಗೆ ಸಾಕ್ಷಿ ನೀಡುತ್ತೇವೋ ಅಂಥವರಲ್ಲಿ ಅನೇಕರು ಬೇರೆ ದೇವತೆಗಳನ್ನು ಆರಾಧಿಸುತ್ತಾರೆ ಇಲ್ಲವೆ ಯಾವುದೇ ದೇವರನ್ನು ಆರಾಧಿಸುವುದಿಲ್ಲ ಎಂದು ಹೇಳುತ್ತಾರೆ. ಹೀಗಿರುವುದರಿಂದ, ಅವರು ಕಿವಿಗೊಡುವಂತೆ ಮಾಡಲಿಕ್ಕಾಗಿ, ಪರಸ್ಪರ ಆಸಕ್ತಿಯಿರುವ ಯಾವುದೊ ಸಂಗತಿಯಿಂದ ನಾವು ಪ್ರಾರಂಭಿಸುವ ಅಗತ್ಯವಿರಬಹುದು. ಅಪೊಸ್ತಲರ ಕೃತ್ಯಗಳು 17:22-31 ರಲ್ಲಿ ದಾಖಲಿಸಲ್ಪಟ್ಟಿರುವ ಮಾದರಿಯಿಂದ ನಾವು ಪ್ರಯೋಜನ ಪಡೆಯಬಲ್ಲೆವು. ಇಲ್ಲಿ ಅಪೊಸ್ತಲ ಪೌಲನು ಸಮಯೋಚಿತ ಜಾಣ್ಮೆಯಿಂದ ಮಾತಾಡಿದರೂ, ಭೂಪರಲೋಕಗಳ ಸೃಷ್ಟಿಕರ್ತನಾದ ದೇವರಿಗೆ ಎಲ್ಲರೂ ಉತ್ತರವಾದಿಗಳಾಗಿದ್ದಾರೆ ಎಂಬುದನ್ನು ಅವನು ಸ್ಪಷ್ಟವಾಗಿ ತಿಳಿಸಿದನೆಂಬುದನ್ನು ಗಮನಿಸಿರಿ.
ದೇವರ ನಾಮವನ್ನು ಪ್ರಸಿದ್ಧಪಡಿಸುವುದು. ಸತ್ಯದೇವರನ್ನು ಆತನ ಹೆಸರಿನಿಂದ ಗುರುತಿಸಲು ಮರೆಯದಿರಿ. ಯೆಹೋವನಿಗೆ ಆತನ ಹೆಸರು ತುಂಬ ಪ್ರಿಯವಾಗಿದೆ. (ವಿಮೋ. 3:15; ಯೆಶಾ. 42:8) ಜನರು ಆ ಹೆಸರನ್ನು ತಿಳಿಯಬೇಕೆಂಬುದೇ ಆತನ ಅಪೇಕ್ಷೆ. ತನ್ನ ಮಹಿಮಾಭರಿತ ಹೆಸರನ್ನು ಬೈಬಲಿನಲ್ಲಿ 7,000ಕ್ಕೂ ಹೆಚ್ಚು ಬಾರಿ ಒಳಗೂಡಿಸುವಂತೆ ಆತನು ಮಾಡಿದನು. ಜನರಿಗೆ ಇದರ ಪರಿಚಯವಾಗುವಂತೆ ಮಾಡುವುದು ನಮಗಿರುವ ಜವಾಬ್ದಾರಿಯಾಗಿದೆ.—ಧರ್ಮೋ. 4:35.
ಸರ್ವ ಮಾನವಕುಲದ ಭವಿಷ್ಯತ್ತಿನ ಜೀವನ ಪ್ರತೀಕ್ಷೆಗಳು, ಅವರು ಯೆಹೋವನನ್ನು ತಿಳಿದುಕೊಂಡು ನಂಬಿಕೆಯಿಂದ ಆತನ ಹೆಸರನ್ನು ಹೇಳಿಕೊಳ್ಳುವುದರ ಮೇಲೆ ಆಧಾರಿಸಿವೆ. (ಯೋವೇ. 2:32; ಮಲಾ. 3:16; 2 ಥೆಸ. 1:8) ಆದರೂ, ಹೆಚ್ಚಿನ ಜನರಿಗೆ ಯೆಹೋವನು ಯಾರೆಂಬುದು ತಿಳಿದಿಲ್ಲ. ಬೈಬಲಿನ ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುವಂಥ ಅನೇಕಾನೇಕರೂ ಇದರಲ್ಲಿ ಸೇರಿದ್ದಾರೆ. ಅವರ ಬಳಿ ಒಂದು ಬೈಬಲ್ ಇದ್ದು, ಅವರು ಅದನ್ನು ಓದುವುದಾದರೂ, ಅನೇಕ ಆಧುನಿಕ ಭಾಷಾಂತರಗಳಿಂದ ದೇವರ ಹೆಸರು ತೆಗೆಯಲ್ಪಟ್ಟಿರುವುದರಿಂದ, ಆತನ ವೈಯಕ್ತಿಕ ಹೆಸರು ಅವರಿಗೆ ಗೊತ್ತಿರದೇ ಇರಬಹುದು. ಯೆಹೋವ ಎಂಬ ಹೆಸರಿನ ಪರಿಚಯವು ಕೆಲವರಿಗಾಗಿರಲು ಒಂದು ಕಾರಣವು, ಅವರ ಧಾರ್ಮಿಕ ನಾಯಕರು ಆ ಹೆಸರನ್ನು ಉಪಯೋಗಿಸಬಾರದೆಂದು ಅವರಿಗೆ ಹೇಳಿರುವುದೇ ಆಗಿದೆ.
ಹಾಗಾದರೆ, ನಾವು ಜನರಿಗೆ ದೇವರ ಹೆಸರಿನ ಪರಿಚಯವನ್ನು ಹೇಗೆ ಮಾಡಿಸಬಹುದು? ಬೈಬಲಿನಲ್ಲಿ—ಸಾಧ್ಯವಿರುವಲ್ಲಿ ಅವರ ಸ್ವಂತ ಪ್ರತಿಯಲ್ಲಿ—ದೇವರ ಹೆಸರನ್ನು ತೋರಿಸಿಕೊಡುವಷ್ಟು ಪರಿಣಾಮಕಾರಿಯಾದ ಮಾರ್ಗವು ಬೇರೊಂದಿಲ್ಲ. ಕೆಲವು ಭಾಷಾಂತರಗಳಲ್ಲಿ, ಆ ಹೆಸರು ಸಾವಿರಾರು ಬಾರಿ ಕಂಡುಬರುತ್ತದೆ. ಇತರ ಭಾಷಾಂತರಗಳಲ್ಲಿ ಅದು ಕೀರ್ತನೆ 83:18 ಅಥವಾ ವಿಮೋಚನಕಾಂಡ 6:3-6 ರಲ್ಲಿ ಕಂಡುಬರಬಹುದು ಅಥವಾ ವಿಮೋಚನಕಾಂಡ 3:14, 15 ಇಲ್ಲವೆ 6:3 ರ ಪಾದಟಿಪ್ಪಣಿಯಲ್ಲಿ ಅದು ಕಂಡುಬರಬಹುದು. ಅನೇಕ ಭಾಷಾಂತರಗಳಲ್ಲಿ, ಮೂಲಭಾಷೆಯ ಗ್ರಂಥಪಾಠಗಳಲ್ಲಿ ದೇವರ ವೈಯಕ್ತಿಕ ಹೆಸರು ಕಂಡುಬರುವ ಸ್ಥಳಗಳಲ್ಲಿ, “ಕರ್ತನು” ಮತ್ತು “ದೇವರು” ಎಂಬ ಬದಲಿ ಅಭಿವ್ಯಕ್ತಿಗಳನ್ನು ವಿಶಿಷ್ಟ ಅಚ್ಚುಮೊಳೆಗಳನ್ನು ಉಪಯೋಗಿಸಿ ಮುದ್ರಿಸಲಾಗಿದೆ. ಆಧುನಿಕ ಭಾಷಾಂತರಕಾರರು ದೇವರ ವೈಯಕ್ತಿಕ ಹೆಸರನ್ನು ಪೂರ್ತಿಯಾಗಿ ತೆಗೆದುಹಾಕಿರುವಲ್ಲಿ, ಏನು ಮಾಡಲಾಗಿದೆ ಎಂಬುದನ್ನು ಜನರಿಗೆ ತಿಳಿಯಪಡಿಸಲಿಕ್ಕಾಗಿ ನೀವು ಯಾವುದಾದರೊಂದು ಹಳೆಯ ಬೈಬಲ್ ಭಾಷಾಂತರವನ್ನು ಉಪಯೋಗಿಸುವ ಅಗತ್ಯವಿರಬಹುದು. ಕೆಲವು ದೇಶಗಳಲ್ಲಿ, ಧಾರ್ಮಿಕ ಗೀತೆಗಳಲ್ಲಿ ಅಥವಾ ಸಾರ್ವಜನಿಕ ಕಟ್ಟಡಗಳ ಮೇಲೆ ಈ ದೈವಿಕ ನಾಮವು ಕಂಡುಬರುವುದನ್ನು ನೀವು ಸೂಚಿಸಬಹುದು.
ಬೇರೆ ದೇವರುಗಳನ್ನು ಆರಾಧಿಸುವವರಿಗೆ ಸಹ, ಯೆರೆಮೀಯ 10:10-13 ನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ. ಅದು ದೇವರ ಹೆಸರನ್ನು ತಿಳಿಸುತ್ತದೆ ಮಾತ್ರವಲ್ಲ ಆತನು ಯಾರೆಂಬುದನ್ನೂ ಸ್ಪಷ್ಟವಾಗಿ ವಿವರಿಸುತ್ತದೆ.
ಕ್ರೈಸ್ತಪ್ರಪಂಚವು ಮಾಡುವಂತೆ, “ದೇವರು” ಮತ್ತು “ಕರ್ತನು” ಎಂಬ ಬಿರುದಿನ ಮರೆಯಲ್ಲಿ ಯೆಹೋವನ ಹೆಸರನ್ನು ಅಡಗಿಸಿಡಬೇಡಿರಿ. ಆದರೆ, ಪ್ರತಿಯೊಂದು ಸಂಭಾಷಣೆಯ ಆರಂಭದಲ್ಲಿಯೇ ಆ ಹೆಸರನ್ನು ಉಪಯೋಗಿಸಬೇಕೆಂಬುದು ಇದರ ಅರ್ಥವಲ್ಲ. ಹಾಗೆ ಆರಂಭಿಸುವಲ್ಲಿ, ಪೂರ್ವಾಭಿಪ್ರಾಯದ ಕಾರಣ ಕೆಲವರು ಚರ್ಚೆಯನ್ನು ಅಲ್ಲಿಗೇ ನಿಲ್ಲಿಸಿಬಿಟ್ಟಾರು. ಸಂಭಾಷಣೆಗಾಗಿ ಒಂದು ತಳಪಾಯವನ್ನು ಹಾಕಿದ ಬಳಿಕ, ಆ ದೈವಿಕ ನಾಮವನ್ನು ಉಪಯೋಗಿಸಲು ಹಿಂಜರಿಯಬೇಡಿರಿ.
ಬೈಬಲು ದೇವರ ವೈಯಕ್ತಿಕ ಹೆಸರನ್ನು, “ಕರ್ತನು” ಮತ್ತು “ದೇವರು” ಎಂಬ ಪದಗಳನ್ನು ಉಪಯೋಗಿಸಿರುವ ಒಟ್ಟು ಸಂಖ್ಯೆಗಿಂತ ಹೆಚ್ಚು ಬಾರಿ ಉಪಯೋಗಿಸಿರುವುದು ಗಮನಾರ್ಹವಾದ ವಿಷಯವಾಗಿದೆ. ಹಾಗಿದ್ದರೂ, ಬೈಬಲ್ ಲೇಖಕರು ಆ ದೈವಿಕ ನಾಮವನ್ನು ಪ್ರತಿಯೊಂದು ವಾಕ್ಯದಲ್ಲಿ ಸೇರಿಸಲು ಪ್ರಯತ್ನಿಸಲಿಲ್ಲ. ಅವರು ಅದನ್ನು ಸ್ವಭಾವಸಿದ್ಧವಾಗಿ, ಯಥಾರ್ಥವಾಗಿ ಮತ್ತು ಗೌರವಪೂರ್ವಕವಾಗಿ ಒಳಗೂಡಿಸಿ ಬರೆದರು. ಅದು ಅನುಸರಿಸಲು ಯೋಗ್ಯವಾದ ನಮೂನೆಯಾಗಿದೆ.
ಆ ಹೆಸರಿನಿಂದ ಗುರುತಿಸಲ್ಪಟ್ಟ ವ್ಯಕ್ತಿ. ದೇವರಿಗೊಂದು ವೈಯಕ್ತಿಕ ಹೆಸರಿದೆ ಎಂಬ ವಾಸ್ತವಾಂಶವೇ ಪ್ರಾಮುಖ್ಯವಾದ ಸತ್ಯವಾಗಿರುವುದಾದರೂ, ಅದು ಆತನ ಪರಿಚಯಮಾಡಿಕೊಳ್ಳುವುದರಲ್ಲಿ ಕೇವಲ ಪ್ರಥಮ ಹೆಜ್ಜೆಯಾಗಿದೆ.
ಯೆಹೋವನನ್ನು ಪ್ರೀತಿಸಿ, ನಂಬಿಕೆಯಿಂದ ಆತನ ಹೆಸರನ್ನು ಹೇಳಿಕೊಳ್ಳಬೇಕಾದರೆ, ಆತನು ಯಾವ ರೀತಿಯ ದೇವರು ಎಂಬುದನ್ನು ಜನರು ತಿಳಿಯುವ ಅಗತ್ಯವಿದೆ. ಯೆಹೋವನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ತನ್ನ ಹೆಸರನ್ನು ತಿಳಿಯಪಡಿಸಿದಾಗ, ಆತನು “ಯೆಹೋವ” ಎಂಬ ಹೆಸರನ್ನು ಪುನಃ ಪುನಃ ಹೇಳುವುದಕ್ಕಿಂತ ಹೆಚ್ಚಿನದನ್ನು ಮಾಡಿದನು. ಆತನು ತನ್ನ ಪ್ರಮುಖ ಗುಣಗಳಲ್ಲಿ ಕೆಲವಕ್ಕೆ ಗಮನವನ್ನು ಸೆಳೆದನು. (ವಿಮೋ. 34:6, 7) ಅದು ನಾವು ಅನುಕರಿಸಲಿಕ್ಕಾಗಿರುವ ಒಂದು ಮಾದರಿಯಾಗಿದೆ.
ನೀವು ಹೊಸ ಆಸಕ್ತರಿಗೆ ಸಾಕ್ಷಿ ನೀಡುತ್ತಿರುವಾಗ ಆಗಲಿ, ಸಭೆಯಲ್ಲಿ ಭಾಷಣಗಳನ್ನು ಕೊಡುತ್ತಿರುವಾಗ ಆಗಲಿ, ರಾಜ್ಯದ ಆಶೀರ್ವಾದಗಳ ಕುರಿತು ಮಾತಾಡುವಾಗ, ಇಂತಹ ವಾಗ್ದಾನಗಳನ್ನು ಮಾಡುವ ದೇವರ ವಿಷಯದಲ್ಲಿ ಇವು ಏನನ್ನು ಸೂಚಿಸುತ್ತವೆ ಎಂಬುದನ್ನು ತೋರಿಸಿರಿ. ಆತನ ಆಜ್ಞೆಗಳಿಗೆ ಸೂಚಿಸುವಾಗ, ಅವು ಪ್ರತಿಬಿಂಬಿಸುವ ವಿವೇಕ ಮತ್ತು ಪ್ರೀತಿಯನ್ನು ಒತ್ತಿಹೇಳಿರಿ. ದೇವರು ಅಪೇಕ್ಷಿಸುವ ವಿಷಯಗಳು ನಮ್ಮ ಮೇಲೆ ಸಂಕಷ್ಟಗಳ ಹೊರೆಯನ್ನು ಹೇರುವ ಬದಲು, ನಮಗೆ ಪ್ರಯೋಜನವಾಗುವ ರೀತಿಯಲ್ಲಿ ರೂಪಿಸಲ್ಪಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿರಿ. (ಯೆಶಾ. 48:17, 18; ಮೀಕ 6:8) ಯೆಹೋವನ ಶಕ್ತಿಯ ಪ್ರತಿಯೊಂದು ಪ್ರದರ್ಶನವು ಆತನ ವ್ಯಕ್ತಿತ್ವ, ಆತನ ಮಟ್ಟಗಳು, ಆತನ ಉದ್ದೇಶಗಳ ಕುರಿತು ಯಾವುದಾದರೊಂದು ವಿಷಯವನ್ನು ಹೇಗೆ ತಿಳಿಯಪಡಿಸುತ್ತದೆಂಬುದನ್ನು ತೋರಿಸಿರಿ. ಯೆಹೋವನು ತನ್ನ ಗುಣಗಳನ್ನು ಪ್ರದರ್ಶಿಸುವ ವಿಧದಲ್ಲಿ ತೋರಿಸುವ ಸಮತೆಗೆ ಗಮನ ಸೆಳೆಯಿರಿ. ಯೆಹೋವನ ಕುರಿತು ನೀವು ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದನ್ನು ಜನರು ಕೇಳಿಸಿಕೊಳ್ಳಲಿ. ಯೆಹೋವನಿಗಾಗಿ ನಿಮ್ಮಲ್ಲಿರುವ ಪ್ರೀತಿಯು, ಅಂತಹ ಪ್ರೀತಿಯನ್ನು ಇತರರಲ್ಲಿ ಮೂಡಿಸಲು ಸಹಾಯಮಾಡಬಲ್ಲದು.
ನಮ್ಮ ದಿನಗಳಿಗಾಗಿರುವ ತುರ್ತಿನ ಸಂದೇಶವು, ಎಲ್ಲ ಜನರು ದೇವರಿಗೆ ಭಯಪಡುವಂತೆ ಪ್ರೋತ್ಸಾಹಿಸುತ್ತದೆ. ನಾವು ಏನು ಹೇಳುತ್ತೇವೊ ಅದರ ಮೂಲಕ ನಾವು ಇಂತಹ ದೇವಭಯವನ್ನು ಹುರಿದುಂಬಿಸಲು ಪ್ರಯತ್ನಿಸಬೇಕು. ಈ ಭಯವು ಹಿತಕರವಾದ ಭಯವಾಗಿದೆ, ಯೆಹೋವನಿಗೆ ತೋರಿಸುವ ಗೌರವಪೂರ್ವಕವಾದ ಭಯವಾಗಿದೆ, ಆತನಿಗಾಗಿ ಗಾಢವಾದ ಪೂಜ್ಯಭಾವನೆಯಿರುವ ಭಯವಾಗಿದೆ. (ಕೀರ್ತ. 89:7) ಇದರಲ್ಲಿ, ಯೆಹೋವನು ಪರಮ ನ್ಯಾಯಾಧಿಪತಿಯಾಗಿದ್ದಾನೆ ಮತ್ತು ನಮ್ಮ ಭಾವೀ ಜೀವನದ ಪ್ರತೀಕ್ಷೆಗಳು ಆತನ ಮೆಚ್ಚಿಕೆಯನ್ನು ನಾವು ಪಡೆದುಕೊಳ್ಳುವುದರ ಮೇಲೆ ಹೊಂದಿಕೊಂಡಿವೆಯೆಂಬ ಪ್ರಜ್ಞೆಯು ಒಳಗೂಡಿದೆ. (ಲೂಕ 12:5; ರೋಮಾ. 14:12) ಆದಕಾರಣ, ಇಂತಹ ಭಯವು ಆತನ ಕಡೆಗೆ ನಮಗಿರುವ ಆಳವಾದ ಪ್ರೀತಿಯೊಂದಿಗೆ, ಮತ್ತು ಹೀಗೆ, ಆತನನ್ನು ಮೆಚ್ಚಿಸಲು ನಮಗಿರುವ ತೀವ್ರಾಪೇಕ್ಷೆಯೊಂದಿಗೆ ಹೆಣೆಯಲ್ಪಟ್ಟಿದೆ. (ಧರ್ಮೋ. 10:12, 13) ದೇವಭಯವು ನಾವು ಕೆಟ್ಟದ್ದನ್ನು ದ್ವೇಷಿಸುವಂತೆಯೂ, ದೇವರ ಆಜ್ಞೆಗಳಿಗೆ ವಿಧೇಯರಾಗುವಂತೆಯೂ ಸಂಪೂರ್ಣ ಹೃದಯದಿಂದ ಆತನನ್ನು ಆರಾಧಿಸುವಂತೆಯೂ ನಮ್ಮನ್ನು ಪ್ರೇರಿಸುತ್ತದೆ. (ಧರ್ಮೋ. 5:29; 1 ಪೂರ್ವ. 28:9; ಜ್ಞಾನೋ. 8:13) ದೇವರನ್ನು ಸೇವಿಸುತ್ತಿರುವ ಸಮಯದಲ್ಲೇ ಲೋಕದ ವಿಷಯಗಳನ್ನೂ ಪ್ರೀತಿಸುವುದರಿಂದ ಇದು ನಮ್ಮನ್ನು ಕಾಪಾಡುತ್ತದೆ.—1 ಯೋಹಾ. 2:15-17.
ದೇವರ ಹೆಸರು—“ಬಲವಾದ ಬುರುಜು.” ಯೆಹೋವನನ್ನು ನಿಜವಾಗಿಯೂ ಪರಿಚಯಮಾಡಿಕೊಳ್ಳುವವರು ಮಹಾ ಸಂರಕ್ಷಣೆಯನ್ನು ಅನುಭವಿಸುತ್ತಾರೆ. ಅವರು ಆತನ ವೈಯಕ್ತಿಕ ಹೆಸರನ್ನು ಉಪಯೋಗಿಸುತ್ತಾರೆಂಬ ಕಾರಣದಿಂದ ಅಥವಾ ಆತನ ಗುಣಗಳಲ್ಲಿ ಕೆಲವನ್ನು ಪಟ್ಟಿಮಾಡಬಲ್ಲರೆಂಬ ಕಾರಣದಿಂದ ಮಾತ್ರ ಇಂತಹ ಸಂರಕ್ಷಣೆಯನ್ನು ಅನುಭವಿಸುವುದಿಲ್ಲ. ಅವರು ಯೆಹೋವನಲ್ಲಿ ಭರವಸೆಯಿಡುವುದರಿಂದಲೇ ಇದನ್ನು ಅನುಭವಿಸುತ್ತಾರೆ. ಅವರ ಕುರಿತಾಗಿ ಜ್ಞಾನೋಕ್ತಿ 18:10 ಹೇಳುವುದು: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.”
ಇತರರು ಯೆಹೋವನಲ್ಲಿ ಭರವಸೆಯಿಡುವಂತೆ ಪ್ರೋತ್ಸಾಹಿಸಲು ನಿಮಗಿರುವ ಸಂದರ್ಭಗಳ ಸದುಪಯೋಗವನ್ನು ಮಾಡಿರಿ. (ಕೀರ್ತ. 37:3; ಜ್ಞಾನೋ. 3:5, 6) ಇಂತಹ ಭರವಸೆಯು, ಯೆಹೋವನಲ್ಲಿಯೂ ಆತನ ವಾಗ್ದಾನಗಳಲ್ಲಿಯೂ ನಂಬಿಕೆಯನ್ನು ತೋರಿಸುತ್ತದೆ. (ಇಬ್ರಿ. 11:6) ಜನರು ಯೆಹೋವನನ್ನು ವಿಶ್ವ ಪರಮಾಧಿಕಾರಿಯಾಗಿ ತಿಳಿದು, ಆತನ ಮಾರ್ಗಗಳನ್ನು ಪ್ರೀತಿಸಿ, ನಿಜ ರಕ್ಷಣೆಯು ಆತನೊಬ್ಬನಿಂದಲೇ ಬರುತ್ತದೆಂದು ಸಂಪೂರ್ಣವಾಗಿ ನಂಬುವ ಕಾರಣದಿಂದ ‘ಯೆಹೋವನ ನಾಮವನ್ನು ಹೇಳಿಕೊಳ್ಳುವಲ್ಲಿ,’ ಆಗ ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುವಂತೆ, ಅವರು ರಕ್ಷಣೆಯನ್ನು ಹೊಂದುವರು. (ರೋಮಾ. 10:13, 14) ನೀವು ಇತರರಿಗೆ ಬೋಧಿಸುವಾಗ, ಜೀವನದ ಪ್ರತಿಯೊಂದು ಅಂಶದಲ್ಲಿ ಆ ರೀತಿಯ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ.
ಅನೇಕ ಜನರು ತಡೆಯಲಸಾಧ್ಯವಾದಂಥ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವುಗಳಿಗೆ ಪರಿಹಾರವಿರುವಂತೆ ಅವರಿಗೆ ಕಾಣಲಿಕ್ಕಿಲ್ಲ. ಅವರು ಯೆಹೋವನ ಮಾರ್ಗಗಳನ್ನು ಕಲಿತುಕೊಳ್ಳುವಂತೆ, ಆತನಲ್ಲಿ ಭರವಸೆಯಿಡುವಂತೆ ಮತ್ತು ಅವರು ಏನನ್ನು ಕಲಿಯುತ್ತಾರೋ ಅದನ್ನು ಅನ್ವಯಿಸಿಕೊಳ್ಳುವಂತೆ ಪ್ರೋತ್ಸಾಹಿಸಿರಿ. (ಕೀರ್ತ. 25:5) ದೇವರ ಸಹಾಯಕ್ಕಾಗಿ ಅವರು ಕಟ್ಟಾಸಕ್ತಿಯಿಂದ ಪ್ರಾರ್ಥಿಸುವಂತೆ ಮತ್ತು ಆತನ ಆಶೀರ್ವಾದಗಳಿಗಾಗಿ ಆತನಿಗೆ ಉಪಕಾರ ಸಲ್ಲಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ. (ಫಿಲಿ. 4:6, 7) ಅವರು ಬೈಬಲಿನಲ್ಲಿರುವ ಕೆಲವು ಹೇಳಿಕೆಗಳನ್ನು ಕೇವಲ ಓದುವುದರಿಂದಲ್ಲ, ಬದಲಾಗಿ ತಮ್ಮ ಸ್ವಂತ ಜೀವಿತಗಳಲ್ಲಿ ಆತನ ವಾಗ್ದಾನಗಳ ನೆರವೇರಿಕೆಯನ್ನು ಅನುಭವಿಸಿರುವ ಮೂಲಕವೂ ಯೆಹೋವನ ಪರಿಚಯಮಾಡಿಕೊಂಡಿರುವಲ್ಲಿ, ಯೆಹೋವನ ಹೆಸರು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದರಿಂದ ಬರುವ ಭದ್ರತೆಯಲ್ಲಿ ಆನಂದಿಸತೊಡಗುವರು.—ಕೀರ್ತ. 34:8; ಯೆರೆ. 17:7, 8.
ಸತ್ಯ ದೇವರಾದ ಯೆಹೋವನಿಗೆ ಭಯಪಡುವುದರಲ್ಲಿ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗುವುದರಲ್ಲಿರುವ ವಿವೇಕವನ್ನು ಜನರು ಗಣ್ಯಮಾಡುವಂತೆ ಸಹಾಯಮಾಡಲು ಪ್ರತಿಯೊಂದು ಸಂದರ್ಭವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ.
“ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವುದು
ಯೇಸು ಕ್ರಿಸ್ತನು ತನ್ನ ಪುನರುತ್ಥಾನದ ನಂತರ ಮತ್ತು ಸ್ವರ್ಗಕ್ಕೆ ಹಿಂದಿರುಗುವ ಮೊದಲು ತನ್ನ ಶಿಷ್ಯರಿಗೆ ಈ ಆದೇಶವನ್ನು ಕೊಟ್ಟನು: “ನೀವು . . . ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.” (ಅ. ಕೃ. 1:8) ನಮ್ಮ ದಿನಗಳಲ್ಲಿ ದೇವರ ನಿಷ್ಠಾವಂತ ಸೇವಕರನ್ನು, “ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವವರೆಂದು ವರ್ಣಿಸಲಾಗುತ್ತದೆ. (ಪ್ರಕ. 12:17) ಆದರೆ ಈ ಸಾಕ್ಷಿಯನ್ನು ಕೊಡುವುದರಲ್ಲಿ ನಿಮಗೆ ಎಷ್ಟು ಶ್ರದ್ಧೆಯಿದೆ?
ಯೇಸುವನ್ನು ನಂಬುತ್ತೇವೆಂದು ಯಥಾರ್ಥವಾಗಿ ಹೇಳಿಕೊಳ್ಳುವಂಥ ಅನೇಕ ಜನರಿಗೆ, ಅವನ ಮಾನವಪೂರ್ವ ಅಸ್ತಿತ್ವದ ಕುರಿತು ಏನೂ ತಿಳಿದಿರುವುದಿಲ್ಲ. ಅವನು ಭೂಮಿಯಲ್ಲಿದ್ದಾಗ ನಿಜವಾದ ಮನುಷ್ಯನಾಗಿದ್ದನೆಂಬುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅವನು ದೇವರ ಮಗನಾಗಿದ್ದನು ಎಂಬುದರ ಅರ್ಥವನ್ನು ಅವರು ಗ್ರಹಿಸುವುದಿಲ್ಲ. ದೇವರ ಉದ್ದೇಶಗಳ ನೆರವೇರಿಕೆಯಲ್ಲಿ ಅವನ ಪಾತ್ರದ ಕುರಿತು ಅವರಿಗೆ ತೀರ ಕೊಂಚ ತಿಳಿದಿರುತ್ತದೆ. ಅವನು ಈಗ ಏನು ಮಾಡುತ್ತಿದ್ದಾನೆಂಬುದು ಅವರಿಗೆ ತಿಳಿದಿಲ್ಲ; ಅಷ್ಟುಮಾತ್ರವಲ್ಲ, ಭವಿಷ್ಯತ್ತಿನಲ್ಲಿ ಅವನು ಮಾಡಲಿರುವ ಸಂಗತಿಗಳು ಅವರ ಜೀವನಗಳ ಮೇಲೆ ಹೇಗೆ ಪರಿಣಾಮ ಬೀರುವವು ಎಂಬುದನ್ನೂ ಅವರು ಗ್ರಹಿಸಿರುವುದಿಲ್ಲ. ಯೆಹೋವನ ಸಾಕ್ಷಿಗಳು ಯೇಸುವಿನಲ್ಲಿ ನಂಬಿಕೆಯಿಡುವುದಿಲ್ಲವೆಂದೂ ಅವರು ತಪ್ಪಾಗಿ ಆಲೋಚಿಸಬಹುದು. ಈ ವಿಷಯಗಳ ಕುರಿತಾದ ಸತ್ಯವನ್ನು ತಿಳಿಯಪಡಿಸಲು ಪ್ರಯತ್ನಿಸುವುದು ನಮಗಿರುವ ಸುಯೋಗವಾಗಿದೆ.
ಇನ್ನು ಕೆಲವರು, ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ಯೇಸು ಎಂಬ ಒಬ್ಬ ವ್ಯಕ್ತಿಯು ಜೀವಿಸಿದ್ದನೆಂಬುದನ್ನೂ ನಂಬುವುದಿಲ್ಲ. ಕೆಲವರು ಯೇಸುವನ್ನು ಒಬ್ಬ ಮಹಾನ್ ಪುರುಷನಾಗಿ ಮಾತ್ರ ವೀಕ್ಷಿಸುತ್ತಾರೆ. ಅನೇಕರು ಅವನು ದೇವರ ಪುತ್ರನೆಂಬ ವಿಚಾರವನ್ನೇ ಅಲ್ಲಗಳೆಯುತ್ತಾರೆ. ಈ ಕಾರಣದಿಂದ, ಇಂತಹ ಜನರ ಮಧ್ಯೆ “ಯೇಸು ಕ್ರಿಸ್ತನ ವಿಷಯವಾದ ಸಾಕ್ಷಿ” ನೀಡುವಿಕೆಯು, ಅಧಿಕ ಪ್ರಯತ್ನ, ತಾಳ್ಮೆ ಮತ್ತು ಸಮಯೋಚಿತ ಜಾಣ್ಮೆಯನ್ನು ಕೇಳಿಕೊಳ್ಳುತ್ತದೆ.
ನಿಮ್ಮ ಕೇಳುಗರ ದೃಷ್ಟಿಕೋನವು ಏನೇ ಆಗಿರಲಿ, ನಿತ್ಯಜೀವಕ್ಕಾಗಿರುವ ದೇವರ ಏರ್ಪಾಡಿನಿಂದ ಅವರು ಪ್ರಯೋಜನ ಪಡೆಯಬೇಕಾದರೆ, ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಅವರು ಪಡೆದುಕೊಳ್ಳುವ ಆವಶ್ಯಕತೆಯಿದೆ. (ಯೋಹಾ. 17:3) ದೇವರ ಸ್ಪಷ್ಟವಾಗಿ ವ್ಯಕ್ತಪಡಿಸಲ್ಪಟ್ಟಿರುವ ಚಿತ್ತವೇನಂದರೆ, ಬದುಕಿರುವ ಸರ್ವರೂ, “ಯೇಸು ಕ್ರಿಸ್ತನನ್ನು ಬಹಿರಂಗವಾಗಿ ಕರ್ತನೆಂದು ಒಪ್ಪಿಕೊಂಡು” ಅವನ ಅಧಿಕಾರಕ್ಕೆ ಅಧೀನರಾಗಿರಬೇಕು ಎಂಬುದೇ. (ಫಿಲಿ. 2:9-11, NW) ಆದಕಾರಣ, ನಾವು ಬಲವಾದ ಆದರೆ ತಪ್ಪು ಅಭಿಪ್ರಾಯಗಳುಳ್ಳ ಅಥವಾ ವಿಪರೀತ ಪೂರ್ವಾಭಿಪ್ರಾಯಗಳುಳ್ಳ ಜನರನ್ನು ಸಂಧಿಸುವಾಗ ಈ ಚರ್ಚಾ ವಿಷಯದಿಂದ ದೂರವಿರಲು ಸಾಧ್ಯವಾಗುವುದಿಲ್ಲ. ಆದರೆ ಕೆಲವರ ವಿಷಯದಲ್ಲಿ, ಆರಂಭದ ಭೇಟಿಯಲ್ಲಿ ಕೂಡ ನಾವು ಯೇಸು ಕ್ರಿಸ್ತನ ವಿಷಯದಲ್ಲಿ ಧಾರಾಳವಾಗಿ ಮಾತಾಡಬಲ್ಲೆವಾದರೂ, ಬೇರೆಯವರ ವಿಷಯದಲ್ಲಿ ನಮ್ಮ ಕೇಳುಗರು ಅವನ ಕುರಿತು ಸರಿಯಾಗಿ ಯೋಚಿಸತೊಡಗಲು ಅವರಿಗೆ ಸಹಾಯಮಾಡಲಿಕ್ಕಾಗಿ, ನಾವು ಜಾಗರೂಕತೆಯ ಹೇಳಿಕೆಗಳನ್ನು ಮಾಡುವುದು ಆವಶ್ಯಕವಾಗಿದ್ದೀತು. ಮುಂದಿನ ಭೇಟಿಗಳಲ್ಲಿ, ಆ ವಿಷಯವಸ್ತುವಿನ ಕುರಿತು ಇನ್ನೂ ಹೆಚ್ಚಿನ ಅಂಶಗಳನ್ನು ಪರಿಚಯಮಾಡಿಸುವ ವಿಧಗಳ ಬಗ್ಗೆಯೂ ನಾವು ಯೋಚಿಸಬೇಕಾಗಬಹುದು. ಆದರೂ, ಒಬ್ಬ ವ್ಯಕ್ತಿಯೊಂದಿಗೆ ನಾವು ಮನೆ ಬೈಬಲ್ ಅಧ್ಯಯನವನ್ನು ನಡೆಸುವ ತನಕ, ಒಳಗೂಡಿರುವ ಎಲ್ಲ ವಿಷಯಗಳನ್ನು ಚರ್ಚಿಸಲು ಸಾಧ್ಯವಿರಲಿಕ್ಕಿಲ್ಲ.—1 ತಿಮೊ. 2:3-7.
ದೇವರ ಉದ್ದೇಶದಲ್ಲಿ ಯೇಸುವಿಗಿರುವ ಮಹತ್ವದ ಪಾತ್ರ. ಯೇಸು “ಮಾರ್ಗ”ವಾಗಿರುವುದರಿಂದಲೂ ‘ಅವನ ಮೂಲಕ ಹೊರತು ಯಾವನೂ ತಂದೆಯ ಬಳಿಗೆ ಹೋಗುವುದಿಲ್ಲ’ವಾದುದರಿಂದಲೂ, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಹೊರತು ದೇವರೊಂದಿಗೆ ಅಂಗೀಕೃತ ಸಂಬಂಧಕ್ಕೆ ಬರುವುದು ಅಸಾಧ್ಯವೆಂಬುದನ್ನು ಜನರು ಅರ್ಥಮಾಡಿಕೊಳ್ಳುವಂತೆ ನಾವು ಸಹಾಯಮಾಡುವ ಅಗತ್ಯವಿದೆ. (ಯೋಹಾ. 14:6) ಯೆಹೋವನು ತನ್ನ ಜ್ಯೇಷ್ಠಪುತ್ರನಿಗೆ ಕೊಟ್ಟಿರುವ ಈ ಮಹತ್ವದ ಪಾತ್ರವನ್ನು ಒಬ್ಬನು ಮನಗಾಣದಿದ್ದರೆ, ಅವನು ಬೈಬಲನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಆದರೆ ಹಾಗೇಕೆ? ಯೆಹೋವನು ತನ್ನ ಸಕಲ ಉದ್ದೇಶಗಳ ಪೂರೈಕೆಯಲ್ಲಿ ಈ ಪುತ್ರನನ್ನು ಅತಿ ಪ್ರಮುಖ ವ್ಯಕ್ತಿಯಾಗಿ ಮಾಡಿರುವುದರಿಂದಲೇ. (ಕೊಲೊ. 1:17-20) ಬೈಬಲ್ ಪ್ರವಾದನೆಗಳು ಈ ನಿಜತ್ವದ ಮೇಲೆ ಕೇಂದ್ರೀಕರಿಸುತ್ತವೆ. (ಪ್ರಕ. 19:10) ಸೈತಾನನ ದಂಗೆ ಮತ್ತು ಆದಾಮನ ಪಾಪವು ಎಬ್ಬಿಸಿದ ಸಕಲ ಸಮಸ್ಯೆಗಳಿಗೆ ಯೇಸು ಕ್ರಿಸ್ತನ ಮೂಲಕವೇ ಪರಿಹಾರವು ಒದಗಿಸಲ್ಪಡುತ್ತದೆ.—ಇಬ್ರಿ. 2:5-9, 14, 15.
ಕ್ರಿಸ್ತನ ಪಾತ್ರವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಒಬ್ಬ ವ್ಯಕ್ತಿಯು, ಮಾನವರು ತೀರ ಶೋಚನೀಯ ಸ್ಥಿತಿಯಲ್ಲಿದ್ದಾರೆಂಬುದನ್ನು ಮತ್ತು ಅದರಿಂದ ತಾವಾಗಿಯೇ ತಮ್ಮನ್ನು ಬಿಡಿಸಿಕೊಳ್ಳಲಾರರೆಂಬುದನ್ನು ಗ್ರಹಿಸಬೇಕು. ನಾವೆಲ್ಲರೂ ಜನ್ಮತಃ ಪಾಪಿಗಳಾಗಿದ್ದೇವೆ. ಇದು ನಮ್ಮ ಜೀವಮಾನಕಾಲದಲ್ಲಿ ವಿವಿಧ ವಿಧಗಳಲ್ಲಿ ನಮ್ಮ ಮೇಲೆ ಪರಿಣಾಮ ಬೀರಬಹುದು. ಆದರೆ ಇಂದೊ ಮುಂದೊ ಇದು ಮರಣವನ್ನು ಫಲಿಸುತ್ತದೆ. (ರೋಮಾ. 3:23; 5:12) ನೀವು ಯಾರಿಗೆ ಸಾಕ್ಷಿ ನೀಡುತ್ತೀರೊ ಅವರೊಂದಿಗೆ ಆ ನಿಜತ್ವದ ಮೇಲೆ ತರ್ಕಬದ್ಧವಾಗಿ ಮಾತಾಡಿರಿ. ಆ ಬಳಿಕ, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಯೆಹೋವನು ಆ ಒದಗಿಸುವಿಕೆಯಲ್ಲಿ ನಂಬಿಕೆಯನ್ನಿಡುವವರಿಗೆ ಪಾಪ ಮತ್ತು ಮರಣದಿಂದ ಬಿಡುಗಡೆಯ ಸಾಧ್ಯತೆಯನ್ನು ಪ್ರೀತಿಪೂರ್ವಕವಾಗಿ ಮಾಡಿದ್ದಾನೆ ಎಂಬುದನ್ನು ತೋರಿಸಿರಿ. (ಮಾರ್ಕ 10:45; ಇಬ್ರಿ. 2:9) ಇದು ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ಅನುಭವಿಸುವ ಮಾರ್ಗವನ್ನು ಅವರಿಗೆ ತೆರೆಯುತ್ತದೆ. (ಯೋಹಾ. 3:16, 36) ಇನ್ನಾವ ವಿಧದಲ್ಲಿಯೂ ಇದು ಸಾಧ್ಯವಿಲ್ಲ. (ಅ. ಕೃ. 4:12) ಖಾಸಗಿಯಾಗಿ ಆಗಲಿ ಸಭೆಯಲ್ಲಾಗಲಿ, ಬೋಧಕರಾದ ನೀವು ಈ ನಿಜತ್ವಗಳನ್ನು ಕೇವಲ ತಿಳಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿರಿ. ನಮ್ಮ ವಿಮೋಚಕನೋಪಾದಿ ಕ್ರಿಸ್ತನ ಪಾತ್ರಕ್ಕೆ ಕೃತಜ್ಞರಾಗಿರುವ ಮನೋಭಾವವನ್ನು ನಿಮ್ಮ ಕೇಳುಗರಲ್ಲಿ ದೀನಭಾವದಿಂದಲೂ ತಾಳ್ಮೆಯಿಂದಲೂ ಬೆಳೆಸಿರಿ. ಈ ಒದಗಿಸುವಿಕೆಗೆ ತೋರಿಸಲ್ಪಡುವ ಕೃತಜ್ಞತೆಯು, ಒಬ್ಬನ ಮನೋಭಾವ, ವರ್ತನೆ ಮತ್ತು ಜೀವನದಲ್ಲಿನ ಗುರಿಗಳ ಮೇಲೆ ಮಹತ್ತಾದ ಪರಿಣಾಮವನ್ನು ಬೀರಬಲ್ಲದು.—2 ಕೊರಿಂ. 5:14, 15.
ಯೇಸು ತನ್ನ ಜೀವವನ್ನು ಯಜ್ಞವಾಗಿ ಕೊಟ್ಟದ್ದು ಒಂದೇ ಬಾರಿ ಎಂಬುದು ನಿಜ. (ಇಬ್ರಿ. 9:27) ಆದರೆ, ಈಗ ಅವನು ಕ್ರಿಯಾಶೀಲನಾದ ಮಹಾಯಾಜಕನೋಪಾದಿ ಸೇವೆಮಾಡುತ್ತಿದ್ದಾನೆ. ಇದು ಏನನ್ನು ಅರ್ಥೈಸುತ್ತದೆಂದು ತಿಳಿಯಲು ಇತರರಿಗೆ ಸಹಾಯಮಾಡಿರಿ. ಅವರ ಸುತ್ತಮುತ್ತಲೂ ಇರುವ ಜನರು ತೋರಿಸುವ ನಿರ್ದಯೆಯ ಕಾರಣ ಅವರು ಒತ್ತಡ, ನಿರಾಶೆ, ಕಷ್ಟಾನುಭವ ಅಥವಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೊ? ಯೇಸು ಮಾನವನಾಗಿದ್ದಾಗ ಇವೆಲ್ಲವನ್ನೂ ಅನುಭವಿಸಿದನು. ಆದಕಾರಣ ನಮ್ಮ ಅನಿಸಿಕೆಗಳು ಅವನಿಗೆ ಅರ್ಥವಾಗುತ್ತವೆ. ಅಪರಿಪೂರ್ಣತೆಯ ಕಾರಣ, ದೇವರ ಕರುಣೆಯ ಅಗತ್ಯವು ನಮಗಿದೆಯೆಂದು ನಮಗನಿಸುತ್ತದೊ? ಯೇಸುವಿನ ಯಜ್ಞದ ಆಧಾರದ ಮೇಲೆ ನಾವು ಕ್ಷಮಾಪಣೆಗಾಗಿ ದೇವರಿಗೆ ಪ್ರಾರ್ಥಿಸುವಲ್ಲಿ, ಯೇಸು ನಮಗೆ “ತಂದೆಯ ಬಳಿಯಲ್ಲಿ . . . ಸಹಾಯಕನು” ಆಗಿ ಕಾರ್ಯನಡಿಸುತ್ತಾನೆ. ಸಹಾನುಭೂತಿಯಿಂದ ಅವನು “ನಮಗೋಸ್ಕರ ಬೇಡುವವನಾಗಿದ್ದಾನೆ.” (1 ಯೋಹಾ. 2:1, 2; ರೋಮಾ. 8:34) ನಾವು ಯೇಸುವಿನ ಯಜ್ಞದ ಆಧಾರದ ಮೇಲೆ ಮತ್ತು ಮಹಾಯಾಜಕನೋಪಾದಿ ಅವನು ಸಲ್ಲಿಸುವ ಸೇವೆಯ ಮೂಲಕ, ಸರಿಯಾದ ಸಮಯಕ್ಕೆ ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ ಯೆಹೋವನ “ಕೃಪಾಸನದ ಮುಂದೆ” ಬರಶಕ್ತರಾಗುತ್ತೇವೆ. (ಇಬ್ರಿ. 4:15, 16) ನಾವು ಅಪರಿಪೂರ್ಣರಾಗಿರುವುದಾದರೂ, ಮಹಾಯಾಜಕನೋಪಾದಿ ಯೇಸು ಒದಗಿಸುವ ಸಹಾಯವು, ನಾವು ಒಂದು ಶುದ್ಧ ಮನಸ್ಸಾಕ್ಷಿಯಿಂದ ದೇವರನ್ನು ಸೇವಿಸಲು ನಮ್ಮನ್ನು ಸಮರ್ಥರನ್ನಾಗಿ ಮಾಡುತ್ತದೆ.—ಇಬ್ರಿ. 9:13, 14.
ಇದಕ್ಕೆ ಕೂಡಿಸಿ, ಕ್ರೈಸ್ತ ಸಭೆಯ ಶಿರಸ್ಸಾಗಿರಲಿಕ್ಕಾಗಿ ದೇವರಿಂದ ನೇಮಿಸಲ್ಪಟ್ಟ ಯೇಸುವು ಮಹಾ ಅಧಿಕಾರವನ್ನು ನಿರ್ವಹಿಸುತ್ತಾನೆ. (ಮತ್ತಾ. 28:18; ಎಫೆ. 1:22, 23) ಆ ಸ್ಥಾನದಲ್ಲಿರುವ ಅವನು ದೇವರ ಚಿತ್ತಾನುಸಾರವಾಗಿ ಅಗತ್ಯವಿರುವ ಮಾರ್ಗದರ್ಶನವನ್ನು ಒದಗಿಸುತ್ತಾನೆ. ನೀವು ಇತರರಿಗೆ ಬೋಧಿಸುವಾಗ, ಸಭೆಯ ಶಿರಸ್ಸು ಯೇಸು ಕ್ರಿಸ್ತನೇ ಹೊರತು ಇನ್ನಾವ ಮಾನವನೂ ಅಲ್ಲವೆಂದು ಅವರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿರಿ. (ಮತ್ತಾ. 23:10) ನೀವು ಆಸಕ್ತರನ್ನು ಸಂಪರ್ಕಿಸಿದ ಆರಂಭದ ಭೇಟಿಯಿಂದಲೇ, ನಾವು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ವಿಷಯಗಳ ಸಹಾಯದಿಂದ ಎಲ್ಲಿ ಬೈಬಲಿನ ಅಧ್ಯಯನವನ್ನು ಮಾಡುತ್ತೇವೊ ಅಂತಹ ಸ್ಥಳಿಕ ಸಭಾ ಕೂಟಗಳಿಗೆ ಅವರನ್ನು ಆಮಂತ್ರಿಸಿರಿ. ಯೇಸುವಿನ ತಲೆತನವನ್ನು ಅವರು ಅರಿತುಕೊಳ್ಳುವಂತೆ, ಆ “ಆಳು” ಯಾರೆಂಬುದನ್ನು ಮಾತ್ರವಲ್ಲ, ಯಜಮಾನನು ಯಾರೆಂಬುದನ್ನೂ ಅವರಿಗೆ ವಿವರಿಸಿರಿ. (ಮತ್ತಾ. 24:45-47) ಅವರಿಗೆ ಹಿರಿಯರ ಪರಿಚಯಮಾಡಿಸಿರಿ, ಮತ್ತು ಈ ಹಿರಿಯರಲ್ಲಿರಬೇಕಾದ ಶಾಸ್ತ್ರೀಯ ಅರ್ಹತೆಗಳ ಕುರಿತು ಅವರಿಗೆ ವಿವರಿಸಿರಿ. (1 ತಿಮೊ. 3:1-7; ತೀತ 1:5-9) ಸಭೆಯು ಹಿರಿಯರ ಸ್ವತ್ತಲ್ಲವೆಂದೂ ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುವಂತೆ ಅವರು ನಮಗೆ ಸಹಾಯಮಾಡುತ್ತಾರೆಂದೂ ತಿಳಿಸಿರಿ. (ಅ. ಕೃ. 20:28; ಎಫೆ. 4:16; 1 ಪೇತ್ರ 5:2, 3) ಕ್ರಿಸ್ತನ ತಲೆತನದ ಕೆಳಗೆ ಕಾರ್ಯನಡಿಸುತ್ತಿರುವ ಸುವ್ಯವಸ್ಥಿತವಾದ, ಲೋಕವ್ಯಾಪಕ ಸಂಸ್ಥೆಯೊಂದಿದೆ ಎಂಬುದನ್ನು ಈ ಆಸಕ್ತರು ನೋಡುವಂತೆ ಸಹಾಯಮಾಡಿರಿ.
ತನ್ನ ಮರಣಕ್ಕೆ ತುಸು ಮುಂಚೆ, ಯೇಸು ಯೆರೂಸಲೇಮನ್ನು ಪ್ರವೇಶಿಸಿದಾಗ ಅವನ ಶಿಷ್ಯರು, “ಕರ್ತನ [“ಯೆಹೋವನ,” NW] ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ” ಎಂದು ಕೊಂಡಾಡಿದರೆಂದು ಸುವಾರ್ತಾ ಪುಸ್ತಕಗಳಿಂದ ನಮಗೆ ತಿಳಿದುಬರುತ್ತದೆ. (ಲೂಕ 19:38) ಜನರು ಬೈಬಲನ್ನು ಹೆಚ್ಚು ಗಾಢವಾಗಿ ಅಧ್ಯಯನ ಮಾಡಿದಂತೆ, ಯೆಹೋವನು ಈಗ ಎಲ್ಲಾ ಜನಾಂಗಗಳ ಜನರನ್ನು ಬಾಧಿಸುವಂಥ ಆಳುವ ಅಧಿಕಾರವನ್ನು ಯೇಸುವಿಗೆ ವಹಿಸಿ ಕೊಟ್ಟಿದ್ದಾನೆಂಬುದನ್ನು ತಿಳಿದುಕೊಳ್ಳುತ್ತಾರೆ. (ದಾನಿ. 7:13, 14) ನೀವು ಸಭೆಯಲ್ಲಿ ಭಾಷಣಗಳನ್ನು ಕೊಡುವಾಗ ಇಲ್ಲವೆ ಅಧ್ಯಯನಗಳನ್ನು ನಡೆಸುವಾಗ, ಯೇಸುವಿನ ಆಳ್ವಿಕೆಯು ನಮ್ಮೆಲ್ಲರಿಗೆ ಯಾವ ಅರ್ಥದಲ್ಲಿರಬೇಕು ಎಂಬುದನ್ನು ಗ್ರಹಿಸಲು ಮತ್ತು ಅದಕ್ಕಾಗಿ ಕೃತಜ್ಞರಾಗಿರಲು ಜನರಿಗೆ ಸಹಾಯಮಾಡಿರಿ.
ನಾವು ನಿಜವಾಗಿಯೂ ಯೇಸು ಕ್ರಿಸ್ತನು ರಾಜನಾಗಿದ್ದಾನೆಂದು ನಂಬಿ, ಮನಃಪೂರ್ವಕವಾಗಿ ಅವನ ಆಳ್ವಿಕೆಗೆ ಅಧೀನರಾಗುತ್ತೇವೊ ಎಂಬುದನ್ನು ನಮ್ಮ ಜೀವನ ರೀತಿಯು ತೋರಿಸುತ್ತದೆಂಬುದನ್ನು ಒತ್ತಿಹೇಳಿರಿ. ಯೇಸು ಅರಸನಾಗಿ ಅಭಿಷೇಕಿಸಲ್ಪಟ್ಟ ಬಳಿಕ, ತನ್ನ ಹಿಂಬಾಲಕರು ಮಾಡುವಂತೆ ಅವನು ನೇಮಿಸಿದ ಕೆಲಸದ ಕಡೆಗೆ ಗಮನವನ್ನು ಸೆಳೆಯಿರಿ. (ಮತ್ತಾ. 24:14; 28:18-20) ಜೀವನದಲ್ಲಿ ಇಡಬೇಕಾದ ಆದ್ಯತೆಗಳ ಬಗ್ಗೆ ಅದ್ಭುತ ಆಲೋಚನಾಕರ್ತನಾದ ಯೇಸು ಏನು ಹೇಳಿದನೊ ಅದರ ಕುರಿತು ಚರ್ಚಿಸಿರಿ. (ಯೆಶಾ. 9:6, 7; ಮತ್ತಾ. 6:19-34) ತನ್ನ ಹಿಂಬಾಲಕರು ಯಾವ ಮನೋಭಾವವನ್ನು ತೋರಿಸುವರೆಂದು ಶಾಂತಿಯ ಪ್ರಭು ಹೇಳಿರುತ್ತಾನೊ ಅದಕ್ಕೆ ಗಮನ ಹರಿಸಿರಿ. (ಮತ್ತಾ. 20:25-27; ಯೋಹಾ. 13:35) ಇತರರು ತಮ್ಮಿಂದ ಸಾಧ್ಯವಿರುವಷ್ಟು ಕೆಲಸವನ್ನು ಮಾಡುತ್ತಿದ್ದಾರೊ ಇಲ್ಲವೊ ಎಂಬ ವಿಷಯದಲ್ಲಿ ನೀವು ತೀರ್ಪುಮಾಡದಂತೆ ಜಾಗ್ರತೆ ವಹಿಸಿರಿ. ಆದರೆ ಅದೇ ಸಮಯದಲ್ಲಿ ಕ್ರಿಸ್ತನ ರಾಜತ್ವಕ್ಕೆ ಅಧೀನತೆ ತೋರಿಸುವ ವಿಷಯದಲ್ಲಿ ಅವರ ವರ್ತನೆಗಳು ಏನನ್ನು ಸೂಚಿಸುತ್ತವೆಂಬುದನ್ನು ಪರಿಗಣಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ. ನೀವು ಹಾಗೆ ಮಾಡುವಾಗ, ನೀವೂ ಅದೇ ರೀತಿಯಲ್ಲಿ ವರ್ತಿಸುವ ಅಗತ್ಯವನ್ನು ಒಪ್ಪಿಕೊಳ್ಳಿರಿ.
ಕ್ರಿಸ್ತನನ್ನು ಅಸ್ತಿವಾರವಾಗಿ ಹಾಕುವುದು. ಒಬ್ಬ ಕ್ರೈಸ್ತ ಶಿಷ್ಯನನ್ನು ಮಾಡುವ ಕೆಲಸವನ್ನು ಬೈಬಲು, ಅಸ್ತಿವಾರವಾಗಿರುವ ಯೇಸು ಕ್ರಿಸ್ತನ ಮೇಲೆ ಕಟ್ಟುವ ಒಂದು ಕಟ್ಟಡ ರಚನೆಗೆ ಹೋಲಿಸುತ್ತದೆ. (1 ಕೊರಿಂ. 3:10-15) ಇದನ್ನು ಸಾಧಿಸಲು, ಬೈಬಲು ಯೇಸುವನ್ನು ವರ್ಣಿಸುವ ರೀತಿಯಲ್ಲಿ ಜನರು ಅವನನ್ನು ತಿಳಿಯುವಂತೆ ಸಹಾಯಮಾಡಿರಿ. ಅವರು ನಿಮ್ಮನ್ನು, ತಾವು ಹಿಂಬಾಲಿಸಬೇಕಾದ ವ್ಯಕ್ತಿಯೋಪಾದಿ ನೋಡದಂತೆ ಜಾಗ್ರತೆ ವಹಿಸಿ. (1 ಕೊರಿಂ. 3:4-7) ಅವರ ಗಮನವನ್ನು ಯೇಸು ಕ್ರಿಸ್ತನ ಕಡೆಗೆ ತಿರುಗಿಸಿರಿ.
ಅಸ್ತಿವಾರವು ಸ್ಥಿರವಾಗಿ ಹಾಕಲ್ಪಟ್ಟಿರುವಲ್ಲಿ, ಕ್ರಿಸ್ತನು “ತನ್ನ ಹೆಜ್ಜೆಯ ಜಾಡಿನಲ್ಲಿ ನಡೆ”ಯುವಂತೆ ನಮಗೋಸ್ಕರ ಮಾದರಿಯನ್ನಿಟ್ಟನೆಂಬುದನ್ನು ವಿದ್ಯಾರ್ಥಿಗಳು ಮನಗಾಣುವರು. (1 ಪೇತ್ರ 2:21) ಅದರ ಮೇಲೆ ಕಟ್ಟುವ ಸಲುವಾಗಿ, ವಿದ್ಯಾರ್ಥಿಗಳು ಸುವಾರ್ತಾ ಪುಸ್ತಕಗಳನ್ನು ಕೇವಲ ಸತ್ಯವಾಗಿರುವ ಇತಿಹಾಸವಾಗಿ ಪರಿಗಣಿಸುವುದಕ್ಕೆ ಬದಲಾಗಿ, ಅನುಸರಿಸತಕ್ಕ ಮಾದರಿಯಾಗಿ ಪರಿಗಣಿಸುವಂತೆ ಪ್ರೋತ್ಸಾಹಿಸಿರಿ. ಯೇಸುವಿನ ಸ್ವಭಾವಲಕ್ಷಣಗಳಾಗಿದ್ದ ಮನೋಭಾವಗಳನ್ನೂ ಗುಣಗಳನ್ನೂ ಮನಸ್ಸಿಗೆ ತೆಗೆದುಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ. ತನ್ನ ತಂದೆಯ ವಿಷಯದಲ್ಲಿ ಯೇಸುವಿಗೆ ಯಾವ ಅನಿಸಿಕೆಯಿತ್ತು, ಅವನು ಶೋಧನೆಗಳು ಮತ್ತು ಪರೀಕ್ಷೆಗಳನ್ನು ಹೇಗೆ ಸಹಿಸಿಕೊಂಡನು, ದೇವರಿಗೆ ಅಧೀನತೆಯನ್ನು ಹೇಗೆ ತೋರಿಸಿದನು, ಮತ್ತು ಬೇರೆ ಬೇರೆ ಸನ್ನಿವೇಶಗಳ ಕೆಳಗೆ ಜನರೊಂದಿಗೆ ಹೇಗೆ ವರ್ತಿಸಿದನು ಎಂಬುದನ್ನು ಅವರು ಗಮನಿಸುವಂತೆ ಅವರನ್ನು ಉತ್ತೇಜಿಸಿರಿ. ಯೇಸುವಿನ ಜೀವಿತವು ಯಾವ ಚಟುವಟಿಕೆಯಿಂದ ತುಂಬಿತ್ತೋ ಅದರ ಕುರಿತು ಒತ್ತಿಹೇಳಿರಿ. ಹಾಗೆ ಮಾಡುವಲ್ಲಿ, ವಿದ್ಯಾರ್ಥಿಯು ತನ್ನ ಜೀವನದಲ್ಲಿ ನಿರ್ಣಯಗಳನ್ನೂ ಪರೀಕ್ಷೆಗಳನ್ನೂ ಎದುರಿಸುವಾಗ ಸ್ವತಃ ಹೀಗೆ ಕೇಳಿಕೊಳ್ಳುವನು: ‘ಈ ಸನ್ನಿವೇಶದಲ್ಲಿ ಯೇಸುವಿದ್ದಿದ್ದರೆ ಏನು ಮಾಡುತ್ತಿದ್ದನು? ನಾನು ಅನುಸರಿಸುವ ಮಾರ್ಗವು, ಅವನು ನನಗಾಗಿ ಏನು ಮಾಡಿದ್ದಾನೊ ಅದಕ್ಕೆ ಗಣ್ಯತೆಯನ್ನು ತೋರಿಸುವುದೊ?’
ನೀವು ಸಭೆಯ ಮುಂದೆ ಮಾತಾಡುವಾಗ, ನಿಮ್ಮ ಸಹೋದರರಿಗೆ ಈಗಾಗಲೇ ಯೇಸುವಿನಲ್ಲಿ ನಂಬಿಕೆಯಿರುವ ಕಾರಣ, ಅವನ ಕಡೆಗೆ ವಿಶೇಷ ಗಮನವನ್ನು ಸೆಳೆಯುವ ಆವಶ್ಯಕತೆಯಿಲ್ಲವೆಂಬ ತೀರ್ಮಾನಕ್ಕೆ ಬರಬೇಡಿರಿ. ನೀವು ಆ ನಂಬಿಕೆಯ ಮೇಲೆ ಕಟ್ಟುವಲ್ಲಿ, ನಿಮ್ಮ ಮಾತು ಹೆಚ್ಚು ಅರ್ಥವತ್ತಾಗುವುದು. ನೀವು ಕೂಟಗಳ ಕುರಿತಾಗಿ ಮಾತಾಡುವಾಗ, ಅದನ್ನು ಸಭೆಯ ಶಿರಸ್ಸಿನೋಪಾದಿ ಯೇಸುವಿನ ಪಾತ್ರಕ್ಕೆ ಜೋಡಿಸಿರಿ. ನೀವು ಕ್ಷೇತ್ರ ಶುಶ್ರೂಷೆಯ ಕುರಿತು ಚರ್ಚಿಸುವಾಗ, ಯೇಸು ತನ್ನ ಶುಶ್ರೂಷೆಯನ್ನು ನಡೆಸಿದಾಗ ತೋರಿಸಿದ ಮನೋಭಾವಕ್ಕೆ ಗಮನ ಸೆಳೆಯಿರಿ, ಮತ್ತು ಜನರನ್ನು ಉಳಿಸಿ ನೂತನ ಲೋಕಕ್ಕೆ ಕೊಂಡೊಯ್ಯಲು ಅರಸನಾದ ಕ್ರಿಸ್ತನು ಈಗ ಮಾಡುತ್ತಿರುವ ವಿಷಯಗಳ ಬೆಳಕಿನಲ್ಲಿ ಆ ಶುಶ್ರೂಷೆಯನ್ನು ಪ್ರಸ್ತುತಪಡಿಸಿರಿ.
ಕೇವಲ ಯೇಸುವಿನ ಕುರಿತಾದ ಮೂಲಭೂತ ನಿಜತ್ವಗಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ ಎಂಬುದು ಸುವ್ಯಕ್ತ. ನಿಜ ಕ್ರೈಸ್ತರಾಗಬೇಕಾದರೆ, ಜನರು ಅವನಲ್ಲಿ ನಂಬಿಕೆಯನ್ನಿಟ್ಟು ಅವನನ್ನು ನಿಜವಾಗಿಯೂ ಪ್ರೀತಿಸಬೇಕು. ಅಂತಹ ಪ್ರೀತಿಯು ನಿಷ್ಠೆಯ ವಿಧೇಯತೆಯನ್ನು ಪ್ರಚೋದಿಸುತ್ತದೆ. (ಯೋಹಾ. 14:15, 21) ಅದು ವಿರೋಧದ ಮಧ್ಯೆ ಜನರು ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂತೆ, ತಮ್ಮ ಜೀವಮಾನಕಾಲವೆಲ್ಲಾ ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುತ್ತಾ ಹೋಗುವಂತೆ, “ಅಸ್ತಿವಾರದ ಮೇಲೆ ಬಲವಾಗಿ ಬೇರೂರಿರುವ ಹಾಗೂ ನೆಲೆಗೊಂಡಿರುವ” ಪ್ರೌಢ ಕ್ರೈಸ್ತರಾಗಿ ಪರಿಣಮಿಸುವಂತೆ ಮಾಡುತ್ತದೆ. (ಎಫೆ. 3:17, NW) ಇಂತಹ ಜೀವನ ಮಾರ್ಗವು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವ ಯೆಹೋವನಿಗೆ ಮಹಿಮೆಯನ್ನು ತರುತ್ತದೆ.
“ರಾಜ್ಯದ ಈ ಸುವಾರ್ತೆ”
ಯೇಸು ತನ್ನ ಸಾನ್ನಿಧ್ಯ ಹಾಗೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಸೂಚನೆಯ ವಿಷಯದಲ್ಲಿ ವಿವರಣೆ ನೀಡುತ್ತಿದ್ದಾಗ, “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು” ಎಂದು ಮುಂತಿಳಿಸಿದನು.—ಮತ್ತಾ. 24:14.
ವಾಸ್ತವದಲ್ಲಿ ಇಷ್ಟು ವಿಸ್ತಾರವಾದ ಪರಿಗಣನೆಯು ಕೊಡಲ್ಪಡಬೇಕಾದ ಈ ಸಂದೇಶವು ಯಾವುದು? “ನಿನ್ನ ರಾಜ್ಯವು ಬರಲಿ” ಎಂದು ದೇವರಿಗೆ ಪ್ರಾರ್ಥಿಸಲು ಯೇಸು ನಮಗೆ ಬೋಧಿಸಿದ ರಾಜ್ಯದ ಕುರಿತಾದ ಸಂದೇಶವೇ ಇದು. (ಮತ್ತಾ. 6:10) ಪ್ರಕಟನೆ 11:15 ಇದನ್ನು, “ರಾಜ್ಯಾಧಿಕಾರವು ನಮ್ಮ ಕರ್ತನಿಗೂ [ಯೆಹೋವನಿಗೂ] ಆತನು ಅಭಿಷೇಕಿಸಿದವನಿಗೂ ಉಂಟಾಯಿತು,” ಎಂದು ಹೇಳಿ ವರ್ಣಿಸುತ್ತದೆ; ಏಕೆಂದರೆ ಇದರ ಆಳಿಕೆಯ ಅಧಿಕಾರವು ಯೆಹೋವನಿಂದ ಬಂದದ್ದಾಗಿದ್ದು, ಅರಸನಾದ ಕ್ರಿಸ್ತನಿಗೆ ಕೊಡಲ್ಪಡುತ್ತದೆ. ಆದರೂ, ನಮ್ಮ ದಿನದಲ್ಲಿ ಪ್ರಕಟಿಸಲ್ಪಡುವುದೆಂದು ಯೇಸು ಹೇಳಿದ ಸಂದೇಶವು, ಅವನ ಶಿಷ್ಯರು ಒಂದನೆಯ ಶತಮಾನದಲ್ಲಿ ಸಾರಿದುದಕ್ಕಿಂತ ಹೆಚ್ಚು ವಿಸ್ತೃತವಾಗಿರುತ್ತದೆಂಬುದನ್ನು ಗಮನಿಸಿರಿ. ಆ ಸಮಯದಲ್ಲಿ ಶಿಷ್ಯರು, “ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ” ಎಂದು ಜನರಿಗೆ ಹೇಳಿದರು. (ಲೂಕ 10:9) ಅಂದರೆ, ರಾಜನಾಗಲು ಅಭಿಷಿಕ್ತನಾಗಿದ್ದ ಯೇಸು ಆಗ ಅವರ ಮಧ್ಯದಲ್ಲಿದ್ದನು. ಆದರೆ ಮತ್ತಾಯ 24:14 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ದೇವರ ಉದ್ದೇಶಗಳ ನೆರವೇರಿಕೆಯಲ್ಲಿ ಇನ್ನೊಂದು ಪ್ರಮುಖ ಘಟನೆಯ ಲೋಕವ್ಯಾಪಕ ಪ್ರಕಟನೆಯನ್ನು ಮುಂತಿಳಿಸಿದನು.
ಇದರ ಒಂದು ದರ್ಶನವನ್ನು ಪ್ರವಾದಿಯಾದ ದಾನಿಯೇಲನಿಗೆ ಕೊಡಲಾಗಿತ್ತು. ಅವನು, “ಮನುಷ್ಯಕುಮಾರನಂತಿರುವ” ಯೇಸು ಕ್ರಿಸ್ತನಿಗೆ, “ಮಹಾವೃದ್ಧನು” ಅಂದರೆ ಯೆಹೋವ ದೇವರು, ‘ಸಕಲಜನಾಂಗ ಕುಲಭಾಷೆಗಳವರು ಸೇವಿಸಲೆಂದು ದೊರೆತನ ಘನತೆ ರಾಜ್ಯವನ್ನು’ ಕೊಡುವುದನ್ನು ನೋಡಿದನು. (ದಾನಿ. 7:13, 14) ಸಾರ್ವತ್ರಿಕ ವೈಶಿಷ್ಟ್ಯದ ಆ ಸಂಭವವು, ಸ್ವರ್ಗದಲ್ಲಿ 1914ನೆಯ ವರ್ಷದಲ್ಲಿ ನಡೆಯಿತು. ಆ ಬಳಿಕ, ಪಿಶಾಚನನ್ನೂ ಅವನ ದೆವ್ವಗಳನ್ನೂ ಭೂಮಿಗೆ ದೊಬ್ಬಲಾಯಿತು. (ಪ್ರಕ. 12:7-10) ಹೀಗೆ ಹಳೆಯ ವಿಷಯಗಳ ವ್ಯವಸ್ಥೆಯು ತನ್ನ ಕಡೇ ದಿವಸಗಳನ್ನು ಪ್ರವೇಶಿಸಿತು. ಆದರೆ ಅದು ಸಂಪೂರ್ಣವಾಗಿ ತೆಗೆದುಹಾಕಲ್ಪಡುವ ಮೊದಲು, ಯೆಹೋವನ ಮೆಸ್ಸೀಯ ರಾಜನು ಈಗ ತನ್ನ ಸ್ವರ್ಗೀಯ ಸಿಂಹಾಸನದಿಂದ ಆಳುತ್ತಿದ್ದಾನೆ ಎಂಬ ಭೌಗೋಳಿಕ ಘೋಷಣೆಯು ಮಾಡಲ್ಪಡುತ್ತಿದೆ. ಎಲ್ಲಾ ಕಡೆಗಳಲ್ಲಿರುವ ಜನರಿಗೆ ಇದನ್ನು ತಿಳಿಸಲಾಗುತ್ತಿದೆ. ಇದಕ್ಕೆ ಅವರು ತೋರಿಸುವ ಪ್ರತಿಕ್ರಿಯೆಯು, “ಮನುಷ್ಯರ ರಾಜ್ಯದಲ್ಲಿ” ಸರ್ವೋನ್ನತನನ್ನು ಪ್ರಭುವಾಗಿ ಪರಿಗಣಿಸುವ ಅವರ ಮನೋಭಾವಕ್ಕೆ ರುಜುವಾತನ್ನು ಕೊಡುತ್ತದೆ.—ದಾನಿ. 4:32.
ಹೆಚ್ಚು ವಿಷಯಗಳು, ಹೌದು, ಎಷ್ಟೋ ಹೆಚ್ಚು ವಿಷಯಗಳು ಇನ್ನೂ ಬರಲಿಕ್ಕಿವೆ! “ನಿನ್ನ ರಾಜ್ಯವು ಬರಲಿ” ಎಂದು ನಾವು ಇನ್ನೂ ಬೇಡುತ್ತಿದ್ದೇವೆ. ಆದರೆ ನಾವು ಹಾಗೆ ಪ್ರಾರ್ಥಿಸುವುದು, ದೇವರ ರಾಜ್ಯದ ಸ್ಥಾಪನೆಯು ಇನ್ನೂ ಭವಿಷ್ಯತ್ತಿನಲ್ಲಿ ನಡೆಯಲಿದೆ ಎಂಬ ಕಲ್ಪನೆಯಿಂದಲ್ಲ. ಬದಲಿಗೆ, ಆ ಸ್ವರ್ಗೀಯ ರಾಜ್ಯವು ದಾನಿಯೇಲ 2:44 ಮತ್ತು ಪ್ರಕಟನೆ 21:2-4 ರಂತಹ ಪ್ರವಾದನೆಗಳನ್ನು ನೆರವೇರಿಸಲು ನಿರ್ಣಾಯಕ ರೀತಿಯ ಕ್ರಮವನ್ನು ಕೈಕೊಳ್ಳಲಿದೆ ಎಂಬ ವಿಚಾರದಿಂದಲೇ. ಅದು ಈ ಭೂಮಿಯನ್ನು, ದೇವರನ್ನೂ ನೆರೆಯವರನ್ನೂ ಪ್ರೀತಿಸುವಂಥ ಜನರಿಂದ ತುಂಬಿರುವ ಪರದೈಸಾಗಿ ಮಾರ್ಪಡಿಸುವುದು. ನಾವು “ರಾಜ್ಯದ ಈ ಸುವಾರ್ತೆ”ಯನ್ನು ಸಾರುವಾಗ, ಈ ಭಾವೀ ಪ್ರತೀಕ್ಷೆಗಳಿಗೆ ಸೂಚಿಸುತ್ತೇವೆ. ಆದರೆ ಯೆಹೋವನು ಈಗಾಗಲೇ ತನ್ನ ಕುಮಾರನಿಗೆ ಆಳುವ ಪೂರ್ಣಾಧಿಕಾರವನ್ನು ಸಹ ವಹಿಸಿಕೊಟ್ಟಿದ್ದಾನೆಂದೂ ನಾವು ಭರವಸೆಯಿಂದ ಪ್ರಕಟಿಸುತ್ತೇವೆ. ಆ ರಾಜ್ಯದ ಕುರಿತು ಸಾಕ್ಷಿ ನೀಡುವಾಗ ನೀವು ಈ ಸುವಾರ್ತೆಯನ್ನು ಒತ್ತಿಹೇಳುತ್ತೀರೊ?
ರಾಜ್ಯದ ಬಗ್ಗೆ ವಿವರಿಸುವುದು. ದೇವರ ರಾಜ್ಯವನ್ನು ಪ್ರಕಟಿಸುವ ನಮ್ಮ ನೇಮಕವನ್ನು ನಾವು ಹೇಗೆ ಪೂರೈಸಬಲ್ಲೆವು? ಬೇರೆ ಬೇರೆ ವಿಷಯವಸ್ತುಗಳ ಕುರಿತು ಸಂಭಾಷಣೆಗಳನ್ನು ಆರಂಭಿಸುವ ಮೂಲಕ ನಾವು ಆಸಕ್ತಿಯನ್ನು ಕೆರಳಿಸಬಹುದಾದರೂ, ನಮ್ಮ ಸಂದೇಶವು ದೇವರ ರಾಜ್ಯದ ಕುರಿತಾಗಿದೆ ಎಂಬುದನ್ನು ನಾವು ಅವರಿಗೆ ಬೇಗನೆ ಸ್ಪಷ್ಟಪಡಿಸಬೇಕು.
ಈ ಕೆಲಸದ ಒಂದು ಪ್ರಮುಖ ಅಂಶವು, ರಾಜ್ಯವನ್ನು ಸೂಚಿಸುವಂಥ ಶಾಸ್ತ್ರವಚನಗಳನ್ನು ಓದುವುದು ಅಥವಾ ಉಲ್ಲೇಖಿಸುವುದಾಗಿದೆ. ನೀವು ರಾಜ್ಯಕ್ಕೆ ಸೂಚಿಸುವಾಗ, ನೀವು ಯಾರೊಂದಿಗೆ ಮಾತಾಡುತ್ತೀರೊ ಅವರಿಗೆ ರಾಜ್ಯ ಅಂದರೇನು ಎಂಬುದು ಅರ್ಥವಾಗುತ್ತಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ. ದೇವರ ರಾಜ್ಯವು ಒಂದು ಸರಕಾರವಾಗಿದೆ ಎಂದು ಕೇವಲ ಹೇಳುವುದಕ್ಕಿಂತ ಹೆಚ್ಚಿನದ್ದನ್ನು ನೀವು ಮಾಡಬೇಕಾಗಬಹುದು. ಕೆಲವರಿಗೆ, ಅದೃಶ್ಯವಾಗಿರುವಂಥ ಒಂದು ವಿಷಯವನ್ನು ಒಂದು ಸರಕಾರವಾಗಿ ಪರಿಗಣಿಸಲು ಕಷ್ಟವಾದೀತು. ನೀವು ಅವರೊಂದಿಗೆ ಬೇರೆ ಬೇರೆ ವಿಧಗಳಲ್ಲಿ ತರ್ಕಬದ್ಧವಾಗಿ ಮಾತಾಡಬಹುದು. ಉದಾಹರಣೆಗೆ, ಗಾಳಿಯು ಅದೃಶ್ಯವಾಗಿರುವುದೇನೊ ನಿಜವಾಗಿದ್ದರೂ ಅದು ನಮ್ಮ ಜೀವಿತಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. ಗಾಳಿಯನ್ನು ನಿಯಂತ್ರಿಸುವವನನ್ನು ನಾವು ನೋಡಲು ಸಾಧ್ಯವಿಲ್ಲವಾದರೂ, ಆತನಿಗೆ ಮಹಾ ಶಕ್ತಿಯಿದೆಯೆಂಬುದು ಸುವ್ಯಕ್ತ. ಬೈಬಲು ಆತನನ್ನು “ಸರ್ವಯುಗಗಳ ಅರಸನು” ಎಂದು ಸೂಚಿಸುತ್ತದೆ. (1 ತಿಮೊ. 1:17) ಅಥವಾ ನೀವು ಹೀಗೆ ಹೇಳಿ ತರ್ಕಿಸಬಹುದು: ದೊಡ್ಡ ದೇಶವೊಂದರ ರಾಜಧಾನಿಗೆ ಅನೇಕರು ವೈಯಕ್ತಿಕವಾಗಿ ಭೇಟಿ ನೀಡಿರುವುದೂ ಇಲ್ಲ, ಅಥವಾ ತಮ್ಮನ್ನು ಆಳುವ ವ್ಯಕ್ತಿಯನ್ನು ವ್ಯಕ್ತಿಪರವಾಗಿ ನೋಡಿರುವುದೂ ಇಲ್ಲ. ಇವುಗಳ ಕುರಿತು ಅವರು ವಾರ್ತಾ ವರದಿಗಳ ಮೂಲಕ ತಿಳಿಯುತ್ತಾರೆ. ತದ್ರೀತಿಯಲ್ಲಿ, 2,200ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗಿರುವ ಬೈಬಲು ದೇವರ ರಾಜ್ಯದ ಕುರಿತು ತಿಳಿಸುತ್ತದೆ; ಅಧಿಕಾರವು ಯಾರಿಗೆ ವಹಿಸಲ್ಪಟ್ಟಿದೆ ಮತ್ತು ರಾಜ್ಯವು ಏನು ಮಾಡುತ್ತಿದೆ ಎಂಬುದನ್ನು ಅದು ನಮಗೆ ತಿಳಿಸುತ್ತದೆ. ಬೇರೆ ಯಾವುದೇ ನಿಯತಕಾಲಿಕ ಪತ್ರಿಕೆಗಳಿಗಿಂತಲೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತಿರುವ ಕಾವಲಿನಬುರುಜು ಪತ್ರಿಕೆಯು, ಅದರ ಮುಖಪುಟದಲ್ಲಿ ಹೇಳಲ್ಪಟ್ಟಿರುವಂತೆ, “ಯೆಹೋವನ ರಾಜ್ಯವನ್ನು ಪ್ರಕಟಿಸುತ್ತದೆ” ಮತ್ತು ಇದಕ್ಕಾಗಿಯೇ ಮೀಸಲಾಗಿಡಲ್ಪಟ್ಟಿದೆ.
ಈ ರಾಜ್ಯವು ಏನಾಗಿದೆ ಎಂಬುದನ್ನು ಜನರು ತಿಳಿಯುವಂತೆ ಸಹಾಯಮಾಡಲಿಕ್ಕಾಗಿ, ಸರಕಾರಗಳು ಒದಗಿಸುವಂತೆ ಅವರು ಅಪೇಕ್ಷಿಸುವ ಈ ಮುಂದಿನ ಕೆಲವು ವಿಷಯಗಳನ್ನು ನೀವು ತಿಳಿಸಬಹುದು: ಆರ್ಥಿಕ ಭದ್ರತೆ, ಶಾಂತಿ, ಪಾತಕದಿಂದ ಮುಕ್ತಿ, ಎಲ್ಲ ಕುಲಸಂಬಂಧಿತ ಗುಂಪುಗಳೊಂದಿಗೆ ನಿಷ್ಪಕ್ಷಪಾತದ ವ್ಯವಹಾರ, ವಿದ್ಯಾಭ್ಯಾಸ ಮತ್ತು ಆರೋಗ್ಯಾರೈಕೆ. ಮಾನವಕುಲದ ಈ ಅಪೇಕ್ಷೆಗಳೂ ಇತರ ಎಲ್ಲ ಹಿತಕರವಾದ ಅಪೇಕ್ಷೆಗಳೂ ದೇವರ ರಾಜ್ಯದ ಮುಖಾಂತರ ಮಾತ್ರ ಪೂರ್ಣವಾಗಿ ತೃಪ್ತಿಗೊಳಿಸಲ್ಪಡುವವು ಎಂಬುದನ್ನು ತೋರಿಸಿರಿ.—ಕೀರ್ತ. 145:16.
ಯಾವುದರಲ್ಲಿ ಯೇಸು ಕ್ರಿಸ್ತನು ಅರಸನಾಗಿ ಆಳುತ್ತಾನೊ ಆ ರಾಜ್ಯದ ಪ್ರಜೆಗಳಾಗಿರುವ ಅಪೇಕ್ಷೆಯನ್ನು ಜನರಲ್ಲಿ ಪ್ರಚೋದಿಸಲು ಪ್ರಯತ್ನಿಸಿರಿ. ಅವನು ಮಾಡಿದ ಅದ್ಭುತಗಳನ್ನು, ಅವು ಸ್ವರ್ಗೀಯ ಅರಸನೋಪಾದಿ ಅವನು ಮಾಡಲಿರುವ ಕೆಲಸಗಳ ಪೂರ್ವಪ್ರದರ್ಶನಗಳಾಗಿದ್ದವೆಂದು ಹೇಳಿರಿ. ಅವನು ತೋರಿಸಿದಂಥ ಆಕರ್ಷಕವಾದ ಗುಣಗಳ ಬಗ್ಗೆ ಅನೇಕಾವರ್ತಿ ಮಾತಾಡಿರಿ. (ಮತ್ತಾ. 8:2, 3; 11:28-30) ಅವನು ನಮಗಾಗಿ ತನ್ನ ಜೀವವನ್ನು ಒಪ್ಪಿಸಿಕೊಟ್ಟನೆಂದೂ ಆ ಬಳಿಕ ದೇವರು ಅವನನ್ನು ಸ್ವರ್ಗದಲ್ಲಿ ಅಮರ ಜೀವಿತಕ್ಕಾಗಿ ಎಬ್ಬಿಸಿದನೆಂದೂ ವಿವರಿಸಿರಿ. ಅಲ್ಲಿಂದಲೇ ಅವನು ಅರಸನಾಗಿ ಆಳುತ್ತಿದ್ದಾನೆ.—ಅ. ಕೃ. 2:29-35.
ದೇವರ ರಾಜ್ಯವು ಈಗ ಸ್ವರ್ಗದಿಂದ ಆಳ್ವಿಕೆ ನಡೆಸುತ್ತಿದೆಯೆಂಬುದನ್ನು ಒತ್ತಿಹೇಳಿರಿ. ಆದರೂ, ಹೆಚ್ಚಿನ ಜನರು ಅಂತಹ ಆಳ್ವಿಕೆಯಲ್ಲಿ ಇರತಕ್ಕದ್ದೆಂದು ನಿರೀಕ್ಷಿಸುವಂಥ ಪರಿಸ್ಥಿತಿಗಳನ್ನು ಈಗ ಅನುಭವಿಸುತ್ತಿಲ್ಲವೆಂಬುದೂ ನಿಮಗೆ ಗೊತ್ತಿರಲಿ. ಇದನ್ನು ಒಪ್ಪಿಕೊಳ್ಳುತ್ತಾ, ಯೇಸು ಕ್ರಿಸ್ತನು ಅದರ ಪುರಾವೆ ಏನಾಗಿರುವುದೆಂದು ಹೇಳಿದನೆಂಬುದು ಅವರಿಗೆ ಗೊತ್ತಿದೆಯೆ ಎಂದು ಕೇಳಿರಿ. ಬಳಿಕ, ಮತ್ತಾಯ 24ನೆಯ ಅಧ್ಯಾಯ, ಮಾರ್ಕ 13ನೆಯ ಅಧ್ಯಾಯ ಅಥವಾ ಲೂಕ 21ನೆಯ ಅಧ್ಯಾಯಗಳಲ್ಲಿ ಕಂಡುಬರುವ ಸಂಘಟಿತ ಸೂಚನೆಯ ಭಾಗಗಳಲ್ಲಿ ಕೆಲವನ್ನು ಎತ್ತಿತೋರಿಸಿರಿ. ತದನಂತರ, ಸ್ವರ್ಗದಲ್ಲಿನ ಕ್ರಿಸ್ತನ ಸಿಂಹಾಸನಾರೋಹಣವು ಭೂಮಿಯ ಮೇಲೆ ಇಂತಹ ಪರಿಸ್ಥಿತಿಗಳಿಗೆ ಏಕೆ ನಡಿಸಬಹುದೆಂದು ಕೇಳಿರಿ. ಪ್ರಕಟನೆ 12:7-10, 12 ಕ್ಕೆ ಗಮನ ಸೆಳೆಯಿರಿ.
ದೇವರ ರಾಜ್ಯವು ಏನು ಮಾಡುತ್ತಿದೆಯೆಂಬುದರ ವಾಸ್ತವಿಕ ರುಜುವಾತಾಗಿ ಮತ್ತಾಯ 24:14 ನ್ನು ಓದಿರಿ, ಮತ್ತು ಈಗ ನಡೆಯುತ್ತಿರುವ ಬೈಬಲ್ ಶಿಕ್ಷಣದ ಭೌಗೋಳಿಕ ಕಾರ್ಯಕ್ರಮವನ್ನು ವರ್ಣಿಸಿರಿ. (ಯೆಶಾ. 54:13) ಯೆಹೋವನ ಸಾಕ್ಷಿಗಳಿಗೆ ಪ್ರಯೋಜನವನ್ನು ತರುವಂಥ ವಿವಿಧ ಶಾಲೆಗಳ ಕುರಿತು ಹೇಳಿರಿ ಮತ್ತು ಅವೆಲ್ಲವೂ ಬೈಬಲಾಧಾರಿತವೆಂದೂ ಎಲ್ಲವೂ ಉಚಿತವಾಗಿ ನಡೆಸಲ್ಪಡುತ್ತವೆಂದೂ ಜನರಿಗೆ ತಿಳಿಸಿರಿ. ನಾವು ಮನೆಯಿಂದ ಮನೆಗೆ ಹೋಗಿ ನಡೆಸುವ ಶುಶ್ರೂಷೆಯಲ್ಲದೆ, 230ಕ್ಕೂ ಹೆಚ್ಚು ದೇಶಗಳಲ್ಲಿ ಒಬ್ಬೊಬ್ಬ ವ್ಯಕ್ತಿಗೂ ಕುಟುಂಬಗಳಿಗೂ ಮನೆಯಲ್ಲೇ ಬೈಬಲಿನ ಉಚಿತ ಶಿಕ್ಷಣವನ್ನು ಕೊಡುತ್ತೇವೆಂದು ತಿಳಿಸಿರಿ. ಯಾವ ಮಾನವ ಸರಕಾರವು ತನ್ನ ಪ್ರಜೆಗಳಿಗೆ ಮಾತ್ರವಲ್ಲ ಭೂಮಿಯಾದ್ಯಂತವಿರುವ ಜನರಿಗೂ ಇಂತಹ ಬ್ರಹತ್ಪ್ರಮಾಣದ ಶಿಕ್ಷಣ ಕಾರ್ಯಕ್ರಮವನ್ನು ಒದಗಿಸಬಲ್ಲದು? ಜನರು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಬರುವಂತೆಯೂ, ಸಮ್ಮೇಳನಗಳು ಮತ್ತು ಅಧಿವೇಶನಗಳಿಗೆ ಹಾಜರಾಗಿ, ಈ ಶಿಕ್ಷಣವು ಜನರ ಜೀವಿತಗಳನ್ನು ಹೇಗೆ ಪ್ರಭಾವಿಸುತ್ತಿದೆ ಎಂಬುದರ ರುಜುವಾತನ್ನು ನೋಡುವಂತೆಯೂ ಅವರನ್ನು ಆಮಂತ್ರಿಸಿರಿ.—ಯೆಶಾ. 2:2-4; 32:1, 17; ಯೋಹಾ. 13:35.
ಆದರೆ ಮನೆಯವನು ತನ್ನ ಸ್ವಂತ ಜೀವನವನ್ನು ಅದು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಗ್ರಹಿಸುವನೊ? ನಿಮ್ಮ ಭೇಟಿಯ ಉದ್ದೇಶವನ್ನು ನೀವು ಜಾಣ್ಮೆಯಿಂದ, ದೇವರ ರಾಜ್ಯದ ಪ್ರಜೆಗಳೋಪಾದಿ ಜೀವವನ್ನು ಆರಿಸಿಕೊಳ್ಳುವ ಸಂದರ್ಭವು ಎಲ್ಲರಿಗೂ ತೆರೆದಿದೆ ಎಂಬುದನ್ನು ಚರ್ಚಿಸುವುದೇ ಆಗಿದೆ ಎಂದು ಸೂಚಿಸಬಹುದು. ಅದು ಹೇಗೆ? ದೇವರು ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಕಲಿತು, ಈಗ ಅದಕ್ಕನುಸಾರವಾಗಿ ಜೀವಿಸುವ ಮೂಲಕವೇ.—ಧರ್ಮೋ. 30:19, 20; ಪ್ರಕ. 22:17.
ರಾಜ್ಯವನ್ನು ಪ್ರಥಮವಾಗಿಡಲು ಇತರರಿಗೆ ಸಹಾಯಮಾಡುವುದು. ಒಬ್ಬ ವ್ಯಕ್ತಿಯು ರಾಜ್ಯ ಸಂದೇಶವನ್ನು ಅಂಗೀಕರಿಸಿದ ಬಳಿಕವೂ ಅವನು ಮಾಡಬೇಕಾದ ಅನೇಕ ತೀರ್ಮಾನಗಳಿವೆ. ತನ್ನ ಸ್ವಂತ ಜೀವಿತದಲ್ಲಿ ಅವನು ದೇವರ ರಾಜ್ಯಕ್ಕೆ ಯಾವ ಆದ್ಯತೆಯನ್ನು ಕೊಡುವನು? ಯೇಸು ತನ್ನ ಶಿಷ್ಯರನ್ನು, “ನೀವು ಮೊದಲು ದೇವರ ರಾಜ್ಯಕ್ಕಾಗಿ . . . ತವಕಪಡಿರಿ [“ರಾಜ್ಯವನ್ನು ಹುಡುಕುತ್ತಾ ಇರಿ,” NW]” ಎಂದು ಪ್ರೋತ್ಸಾಹಿಸಿದನು. (ಮತ್ತಾ. 6:33) ಜೊತೆಕ್ರೈಸ್ತರು ಹಾಗೆ ಮಾಡುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು? ಸ್ವತಃ ನಾವೇ ಒಳ್ಳೆಯ ಮಾದರಿಯನ್ನಿಡುವ ಮೂಲಕ ಮತ್ತು ಲಭ್ಯವಿರುವ ಅವಕಾಶಗಳನ್ನು ಚರ್ಚಿಸುವ ಮೂಲಕ. ಕೆಲವೊಮ್ಮೆ, ಒಬ್ಬನು ತನಗಿರುವ ಸಾಧ್ಯತೆಗಳನ್ನು ಪರಿಗಣಿಸಿದ್ದಾನೊ ಎಂದು ಕೇಳುವ ಮೂಲಕ ಮತ್ತು ಇತರರು ಈ ವಿಷಯದಲ್ಲಿ ಏನು ಮಾಡುತ್ತಾರೆಂಬುದನ್ನು ತೋರಿಸಲು ನಿಮಗೆ ಗೊತ್ತಿರುವ ಅನುಭವಗಳನ್ನು ಅವನೊಂದಿಗೆ ಹಂಚಿಕೊಳ್ಳುವ ಮೂಲಕ. ಒಬ್ಬನಿಗೆ ಯೆಹೋವನಲ್ಲಿರುವ ಪ್ರೀತಿಯನ್ನು ಇನ್ನಷ್ಟು ಆಳಗೊಳಿಸುವಂಥ ರೀತಿಯಲ್ಲಿ ಬೈಬಲ್ ವೃತ್ತಾಂತಗಳನ್ನು ಚರ್ಚಿಸುವ ಮೂಲಕ. ರಾಜ್ಯದ ನಿಜತ್ವವನ್ನು ಒತ್ತಿಹೇಳುವ ಮೂಲಕ. ರಾಜ್ಯ ಘೋಷಣೆಯ ಕೆಲಸವು ನಿಜವಾಗಿಯೂ ಎಷ್ಟು ಪ್ರಾಮುಖ್ಯವಾಗಿದೆಯೆಂಬುದಕ್ಕೆ ಪ್ರಾಧಾನ್ಯ ಕೊಡುವ ಮೂಲಕ. ಅನೇಕವೇಳೆ, ಏನು ಮಾಡುವ ಅಗತ್ಯವಿದೆ ಎಂಬುದನ್ನು ಜನರಿಗೆ ಹೇಳುವ ಮೂಲಕವಾಗಿ ಅಲ್ಲ, ಬದಲಾಗಿ ಅದನ್ನು ಮಾಡುವ ಬಯಕೆಯನ್ನು ಅವರಲ್ಲಿ ಪ್ರಚೋದಿಸುವ ಮೂಲಕವೇ ಅತಿ ಹೆಚ್ಚಿನ ಒಳಿತನ್ನು ಸಾಧಿಸಸಾಧ್ಯವಿದೆ.
ನಾವೆಲ್ಲರೂ ಪ್ರಕಟಿಸಬೇಕಾದ ಅತ್ಯಾವಶ್ಯಕ ಸಂದೇಶವು, ಪ್ರಧಾನವಾಗಿ ಯೆಹೋವ ದೇವರ, ಯೇಸು ಕ್ರಿಸ್ತನ ಮತ್ತು ರಾಜ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆಂಬುದರಲ್ಲಿ ಸಂದೇಹವೇ ಇಲ್ಲ. ಈ ವಿಷಯಗಳ ಕುರಿತಾದ ಮಹತ್ವಭರಿತ ಸತ್ಯಗಳು ನಮ್ಮ ಬಹಿರಂಗ ಸಾಕ್ಷಿಕಾರ್ಯದಲ್ಲಿ, ನಮ್ಮ ಸಭೆಗಳಲ್ಲಿ ಮತ್ತು ನಮ್ಮ ವೈಯಕ್ತಿಕ ಜೀವನಗಳಲ್ಲಿ ಒತ್ತಿಹೇಳಲ್ಪಡಬೇಕು. ನಾವು ಅದನ್ನು ಮಾಡುವಾಗ, ನಮ್ಮ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ನಾವು ನಿಜವಾಗಿಯೂ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೆಂಬುದನ್ನು ನಾವು ತೋರಿಸಿಕೊಡುತ್ತೇವೆ.