ಅಧ್ಯಾಯ ಐದು
ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ
ವಿಮೋಚನಾ ಮೌಲ್ಯವೆಂದರೇನು?
ಅದು ಒದಗಿಸಲ್ಪಟ್ಟದ್ದು ಹೇಗೆ?
ಅದು ನಿಮಗೆ ಯಾವ ಪ್ರಯೋಜನಗಳನ್ನು ತರಬಲ್ಲದು?
ನೀವು ಅದಕ್ಕೆ ಕೃತಜ್ಞರಾಗಿದ್ದೀರೆಂದು ಹೇಗೆ ತೋರಿಸಬಲ್ಲಿರಿ?
1, 2. (ಎ) ಒಂದು ಉಡುಗೊರೆಯು ನಿಮಗೆ ವೈಯಕ್ತಿಕವಾಗಿ ಯಾವಾಗ ತುಂಬ ಮೌಲ್ಯವುಳ್ಳದ್ದಾಗುತ್ತದೆ? (ಬಿ) ವಿಮೋಚನಾ ಮೌಲ್ಯವು ನೀವು ಪಡೆಯಸಾಧ್ಯವಿರುವವುಗಳಲ್ಲೇ ಅತ್ಯಮೂಲ್ಯವಾದ ಉಡುಗೊರೆಯಾಗಿದೆ ಎಂದು ಏಕೆ ಹೇಳಬಹುದು?
ನೀವು ಇದುವರೆಗೆ ಪಡೆದಿರುವ ಉಡುಗೊರೆಗಳಲ್ಲಿ ಅತ್ಯುತ್ತಮವಾದದ್ದು ಯಾವುದು? ಒಂದು ಉಡುಗೊರೆ ಮಹತ್ವಪೂರ್ಣ ಆಗಿರಬೇಕಾದರೆ ಅದು ದುಬಾರಿಯಾದದ್ದೇ ಆಗಿರಬೇಕೆಂದಿರುವುದಿಲ್ಲ. ಏಕೆಂದರೆ ಅದರ ನಿಜ ಮೌಲ್ಯವು ಹಣದಿಂದ ನಿರ್ಧರಿಸಲ್ಪಡುವುದಿಲ್ಲ. ಇದಕ್ಕೆ ಬದಲಾಗಿ, ಅದು ನಿಮಗೆ ಸಂತೋಷವನ್ನು ತರುವಲ್ಲಿ ಇಲ್ಲವೆ ನಿಮ್ಮ ಜೀವನದಲ್ಲಿದ್ದ ಒಂದು ನಿಜವಾದ ಕೊರತೆಯನ್ನು ನೀಗಿಸುವಲ್ಲಿ, ಆಗ ಅದು ನಿಮಗೆ ವೈಯಕ್ತಿಕವಾಗಿ ತುಂಬ ಮೌಲ್ಯವುಳ್ಳದ್ದಾಗಿರುತ್ತದೆ.
2 ನೀವು ಎಂದಾದರೂ ಪಡೆಯಸಾಧ್ಯವಿರುವವುಗಳಲ್ಲೇ ಹೆಚ್ಚು ಪ್ರಧಾನವಾಗಿ ಕಂಡುಬರುವ ಒಂದು ಉಡುಗೊರೆಯಿದೆ. ಇದು ದೇವರು ಮಾನವಕುಲಕ್ಕೆ ಕೊಟ್ಟ ಉಡುಗೊರೆಯಾಗಿದೆ. ಯೆಹೋವನು ನಮಗೆ ಅನೇಕ ವಿಷಯಗಳನ್ನು ಕೊಟ್ಟಿದ್ದಾನೆ. ಆದರೆ ಆತನು ನಮಗೆ ಕೊಟ್ಟಿರುವ ಅತಿಶ್ರೇಷ್ಠ ಉಡುಗೊರೆಯು ತನ್ನ ಪುತ್ರನಾದ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯವಿರುವ ಯಜ್ಞವೇ ಆಗಿದೆ. (ಮತ್ತಾಯ 20:28) ನಾವು ಈ ಅಧ್ಯಾಯದಲ್ಲಿ ನೋಡಲಿರುವಂತೆ, ಈ ವಿಮೋಚನಾ ಮೌಲ್ಯವು ನಾವು ಪಡೆಯಸಾಧ್ಯವಿರುವುದರಲ್ಲೇ ಅತ್ಯಮೂಲ್ಯವಾದ ಉಡುಗೊರೆಯಾಗಿದೆ, ಏಕೆಂದರೆ ಅದು ನಿಮಗೆ ಅಪರಿಮಿತವಾದ ಸಂತೋಷವನ್ನು ತಂದು, ನಿಮ್ಮ ಅತಿ ಮಹತ್ವಪೂರ್ಣ ಅಗತ್ಯಗಳನ್ನು ಪೂರೈಸಬಲ್ಲದು. ಈ ವಿಮೋಚನಾ ಮೌಲ್ಯವು ನಿಜವಾಗಿಯೂ ನಿಮ್ಮ ಕಡೆಗಿರುವ ಯೆಹೋವನ ಪ್ರೀತಿಯ ಅತಿಶ್ರೇಷ್ಠ ಅಭಿವ್ಯಕ್ತಿಯಾಗಿದೆ.
ವಿಮೋಚನಾ ಮೌಲ್ಯವೆಂದರೇನು?
3. ವಿಮೋಚನಾ ಮೌಲ್ಯವೆಂದರೇನು, ಮತ್ತು ಈ ಅಮೂಲ್ಯ ಉಡುಗೊರೆಯನ್ನು ಮಾನ್ಯಮಾಡಲಿಕ್ಕಾಗಿ ನಾವೇನನ್ನು ಅರ್ಥಮಾಡಿಕೊಳ್ಳುವುದು ಆವಶ್ಯಕ?
3 ಸರಳವಾಗಿ ಹೇಳುವುದಾದರೆ, ವಿಮೋಚನಾ ಮೌಲ್ಯವು ಮಾನವಕುಲವನ್ನು ಪಾಪ ಮತ್ತು ಮರಣದಿಂದ ವಿಮೋಚಿಸಲಿಕ್ಕಾಗಿ ಅಥವಾ ರಕ್ಷಿಸಲಿಕ್ಕಾಗಿ ಯೆಹೋವನು ಉಪಯೋಗಿಸುವ ಮಾಧ್ಯಮವಾಗಿದೆ. (ಎಫೆಸ 1:7) ಈ ಬೈಬಲ್ ಬೋಧನೆಯನ್ನು ಅರ್ಥಮಾಡಿಕೊಳ್ಳಲು ಏದೆನ್ ತೋಟದಲ್ಲಿ ಏನು ಸಂಭವಿಸಿತೊ ಅದನ್ನು ಪುನರ್ವಿಮರ್ಶಿಸುವುದು ಆವಶ್ಯಕ. ಆದಾಮನು ಪಾಪಮಾಡಿದಾಗ ಏನನ್ನು ಕಳೆದುಕೊಂಡನು ಎಂಬುದನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ಮಾತ್ರ ವಿಮೋಚನಾ ಮೌಲ್ಯವು ನಮಗೇಕೆ ಅಷ್ಟೊಂದು ಅಮೂಲ್ಯವಾದ ಉಡುಗೊರೆಯಾಗಿದೆ ಎಂಬುದನ್ನು ಮಾನ್ಯಮಾಡಲು ಶಕ್ತರಾಗುವೆವು.
4. ಪರಿಪೂರ್ಣ ಮಾನವ ಜೀವವು ಆದಾಮನಿಗೆ ಯಾವ ಅರ್ಥದಲ್ಲಿತ್ತು?
4 ಆದಾಮನನ್ನು ಸೃಷ್ಟಿಸಿದಾಗ ಯೆಹೋವನು ಅವನಿಗೆ ನಿಜವಾಗಿಯೂ ಅಮೂಲ್ಯವಾದದ್ದೇನನ್ನೊ ಕೊಟ್ಟನು. ಅದು ಪರಿಪೂರ್ಣ ಮಾನವ ಜೀವವೇ ಆಗಿತ್ತು. ಇದು ಆದಾಮನಿಗೆ ಯಾವ ಅರ್ಥದಲ್ಲಿತ್ತೆಂಬುದನ್ನು ತುಸು ಪರಿಗಣಿಸಿರಿ. ಪರಿಪೂರ್ಣ ದೇಹ ಮತ್ತು ಮನಸ್ಸು ಅವನಿಗಿದ್ದುದರಿಂದ, ಅವನೆಂದಿಗೂ ಕಾಯಿಲೆ ಬೀಳುವ, ವೃದ್ಧನಾಗುವ ಇಲ್ಲವೆ ಸಾಯುವ ಸಾಧ್ಯತೆ ಇರಲಿಲ್ಲ. ಪರಿಪೂರ್ಣ ಮಾನವನಾಗಿದ್ದುದರಿಂದ ಅವನಿಗೆ ಯೆಹೋವನೊಂದಿಗೆ ಒಂದು ವಿಶೇಷವಾದ ಸಂಬಂಧವಿತ್ತು. ಆದಾಮನು “ದೇವರ ಮಗನು” ಆಗಿದ್ದನು ಎನ್ನುತ್ತದೆ ಬೈಬಲು. (ಲೂಕ 3:38) ಹಾಗಾದರೆ ಆದಾಮನಿಗೆ ಯೆಹೋವ ದೇವರೊಂದಿಗಿದ್ದ ಆಪ್ತವಾದ ಸಂಬಂಧವು, ಪ್ರೀತಿಸುವ ತಂದೆಯೊಂದಿಗೆ ಒಬ್ಬ ಪುತ್ರನಿಗಿರುವಂಥ ರೀತಿಯ ಸಂಬಂಧವಾಗಿತ್ತು. ಯೆಹೋವನು ತನ್ನ ಭೂಪುತ್ರನಾಗಿದ್ದ ಆದಾಮನೊಂದಿಗೆ ಮಾತಾಡಿ, ಅವನಿಗೆ ತೃಪ್ತಿದಾಯಕವಾದ ಕಾರ್ಯನೇಮಕಗಳನ್ನು ಕೊಟ್ಟು, ಅವನಿಂದ ಏನು ಅಪೇಕ್ಷಿಸಲ್ಪಟ್ಟಿದೆ ಎಂಬುದನ್ನು ತಿಳಿಯಪಡಿಸಿದನು.—ಆದಿಕಾಂಡ 1:28-30; 2:16, 17.
5. ಆದಾಮನನ್ನು “ದೇವಸ್ವರೂಪದಲ್ಲಿ” ನಿರ್ಮಿಸಲಾಯಿತೆಂದು ಬೈಬಲ್ ಹೇಳುವಾಗ ಅದರ ಅರ್ಥವೇನು?
5 ಆದಾಮನನ್ನು “ದೇವಸ್ವರೂಪದಲ್ಲಿ” ಉಂಟುಮಾಡಲಾಗಿತ್ತು. (ಆದಿಕಾಂಡ 1:27) ಇದರರ್ಥ ಆದಾಮನು ತೋರಿಕೆಯಲ್ಲಿ ದೇವರನ್ನು ಹೋಲುತ್ತಿದ್ದನು ಎಂದಾಗಿರಲಿಲ್ಲ. ನಾವು ಈ ಪುಸ್ತಕದ 1ನೆಯ ಅಧ್ಯಾಯದಲ್ಲಿ ಕಲಿತಂತೆ, ಯೆಹೋವನು ಅದೃಶ್ಯ ಆತ್ಮಜೀವಿಯಾಗಿದ್ದಾನೆ. (ಯೋಹಾನ 4:24) ಆದಕಾರಣ ಯೆಹೋವನಿಗೆ ರಕ್ತಮಾಂಸಗಳಿರುವ ಶರೀರವಿಲ್ಲ. ಹೀಗೆ ದೇವರ ಸ್ವರೂಪದಲ್ಲಿ ಮಾಡಲ್ಪಟ್ಟನೆಂಬುದರ ಅರ್ಥ, ಆದಾಮನನ್ನು ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿಯನ್ನು ಸೇರಿಸಿ, ದೇವರಲ್ಲಿರುವಂಥ ಇತರ ಗುಣಗಳುಳ್ಳವನಾಗಿ ಸೃಷ್ಟಿಸಲಾಯಿತು ಎಂದಾಗಿದೆ. ಆದಾಮನು ಇನ್ನೊಂದು ಪ್ರಧಾನ ವಿಧದಲ್ಲಿ ತನ್ನ ಪಿತನಂತಿದ್ದನು; ಅವನಲ್ಲಿ ಇಚ್ಛಾಸ್ವಾತಂತ್ರ್ಯವಿತ್ತು. ಈ ಕಾರಣದಿಂದಲೇ ಆದಾಮನು ಒಂದು ಯಂತ್ರದಂತೆ ಇರಲಿಲ್ಲ. ಒಂದು ಯಂತ್ರವು ಯಾವುದಕ್ಕಾಗಿ ವಿನ್ಯಾಸಿಸಲ್ಪಟ್ಟಿದೆಯೊ ಅಥವಾ ಏನನ್ನು ಮಾಡಲಿಕ್ಕಾಗಿ ಪ್ರೋಗ್ರಾಮ್ ಮಾಡಲ್ಪಟ್ಟಿದೆಯೊ ಅದನ್ನು ಮಾತ್ರ ಮಾಡಶಕ್ತವಾಗಿರುತ್ತದೆ. ಆದಾಮನಾದರೊ ಸರಿ ಮತ್ತು ತಪ್ಪುಗಳ ಮಧ್ಯೆ ಆಯ್ಕೆಗಳನ್ನು ಮಾಡುತ್ತ, ವೈಯಕ್ತಿಕ ನಿರ್ಣಯಗಳನ್ನು ಮಾಡಶಕ್ತನಾಗಿದ್ದನು. ಅವನು ಯೆಹೋವನಿಗೆ ವಿಧೇಯನಾಗುವ ಆಯ್ಕೆಯನ್ನು ಮಾಡುತ್ತಿದ್ದಲ್ಲಿ ಭೂಪರದೈಸಿನಲ್ಲಿ ಸದಾಕಾಲ ಬದುಕಿರುತ್ತಿದ್ದನು.
6. ಆದಾಮನು ದೇವರಿಗೆ ಅವಿಧೇಯನಾದಾಗ ಅವನು ಏನನ್ನು ಕಳೆದುಕೊಂಡನು, ಮತ್ತು ಅವನ ಸಂತಾನವನ್ನು ಇದು ಹೇಗೆ ಬಾಧಿಸಿತು?
6 ಆದಕಾರಣ, ಆದಾಮನು ದೇವರಿಗೆ ಅವಿಧೇಯನಾಗಿ ಮರಣಶಿಕ್ಷೆಗೊಳಗಾದಾಗ, ಅವನು ತುಂಬ ದುಬಾರಿಯಾದ ಬೆಲೆಯನ್ನು ತೆತ್ತನು. ತನ್ನ ಪಾಪಕ್ಕಾಗಿ ಅವನು ತನ್ನ ಪರಿಪೂರ್ಣ ಮಾನವ ಜೀವ ಮತ್ತು ಅದರೊಂದಿಗಿನ ಎಲ್ಲ ಆಶೀರ್ವಾದಗಳನ್ನು ಕಳೆದುಕೊಳ್ಳಬೇಕಾಯಿತು. (ಆದಿಕಾಂಡ 3:17-19) ಆದಾಮನು ಈ ಅಮೂಲ್ಯ ಜೀವವನ್ನು ಸ್ವತಃ ಕಳೆದುಕೊಂಡನು ಮಾತ್ರವಲ್ಲ, ದುಃಖಕರವಾಗಿ ಅವನ ಭಾವೀ ಸಂತಾನಕ್ಕೂ ಅದು ಸಿಗದಂತೆ ಮಾಡಿದನು. ದೇವರ ವಾಕ್ಯವು ಹೇಳುವುದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಹೌದು, ನಾವೆಲ್ಲರೂ ಆದಾಮನಿಂದ ಪಾಪವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ಆದುದರಿಂದಲೇ ಅವನು ತನ್ನನ್ನೂ ತನ್ನ ಸಂತಾನವನ್ನೂ ಪಾಪ ಮತ್ತು ಮರಣದ ದಾಸತ್ವಕ್ಕೆ ‘ಮಾರಿದನು’ ಎಂದು ಬೈಬಲ್ ಹೇಳುತ್ತದೆ. (ರೋಮಾಪುರ 7:14) ಆದಾಮಹವ್ವರು ಬೇಕುಬೇಕೆಂದೇ ದೇವರಿಗೆ ಅವಿಧೇಯರಾಗಲು ಆಯ್ದುಕೊಂಡದ್ದರಿಂದ, ಅವರಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ ಅವರ ಸಂತಾನಕ್ಕೆ ಮತ್ತು ಆ ಸಂತಾನದಲ್ಲಿ ಸೇರಿರುವ ನಮಗೆ ಯಾವುದೇ ನಿರೀಕ್ಷೆ ಇದೆಯೆ?
7, 8. ವಿಮೋಚನಾ ಮೌಲ್ಯಕ್ಕೆ ಮೂಲಭೂತವಾಗಿ ಯಾವ ಎರಡು ಅರ್ಥಗಳಿವೆ?
7 ಯೆಹೋವನು ವಿಮೋಚನಾ ಮೌಲ್ಯವೆಂಬ ಮಾಧ್ಯಮದ ಮೂಲಕ ಮಾನವಕುಲದ ರಕ್ಷಣೆಗೆ ಬಂದನು. ಸಾಮಾನ್ಯವಾಗಿ ವಿಮೋಚನಾ ಮೌಲ್ಯವೆಂದರೆ ಮನಸ್ಸಿಗೆ ಏನು ಬರುತ್ತದೆ? ವಿಮೋಚನಾ ಮೌಲ್ಯಕ್ಕೆ ಮೂಲಭೂತವಾಗಿ ಎರಡು ಅರ್ಥಗಳಿವೆ. ಒಂದನೆಯದಾಗಿ, ಬಿಡುಗಡೆಮಾಡಲು ಅಥವಾ ಒಂದು ವಸ್ತುವನ್ನು ಹಿಂದೆ ಕೊಳ್ಳಲು ತೆರುವ ಬೆಲೆ ಅದಾಗಿದೆ. ಒಬ್ಬ ಯುದ್ಧಕೈದಿಯನ್ನು ಬಿಡುಗಡೆಮಾಡಲು ತೆರುವ ಹಣಕ್ಕೆ ಹೋಲಿಸಬಹುದು. ಎರಡನೆಯದಾಗಿ, ಒಂದು ವಿಮೋಚನಾ ಮೌಲ್ಯವು ಯಾವುದಕ್ಕೊ ತಗಲಿರುವ ಖರ್ಚನ್ನು ಭರ್ತಿಮಾಡುವ ಅಥವಾ ಅದಕ್ಕೆ ತೆರುವ ಬೆಲೆಯಾಗಿದೆ. ಇದು, ಆಗಿರುವಂಥ ಹಾನಿಗೆ ನಷ್ಟಭರ್ತಿ ಮಾಡಲು ತೆರುವ ದಂಡಕ್ಕೆ ಸಮಾನವಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಅಪಘಾತಕ್ಕೆ ಕಾರಣನಾದರೆ, ಅವನು ಹಾನಿಗೊಳಗಾದ ವಸ್ತುವಿನ ಬೆಲೆಗೆ ಪೂರ್ತಿಯಾಗಿ ಅನುರೂಪವಾದ ಅಥವಾ ಸಮಾನವಾದ ಮೊತ್ತವನ್ನು ತೆರಬೇಕಾಗುತ್ತಿತ್ತು.
8 ಹಾಗಾದರೆ ಆದಾಮನು ನಮ್ಮೆಲ್ಲರಿಗೆ ಉಂಟುಮಾಡಿದ ಭಾರೀ ನಷ್ಟವನ್ನು ತುಂಬಿಸಿ, ಪಾಪ ಮತ್ತು ಮರಣದ ದಾಸತ್ವದಿಂದ ನಮ್ಮನ್ನು ಬಿಡಿಸಲು ಹೇಗೆ ಸಾಧ್ಯವಾದೀತು? ಬನ್ನಿರಿ, ಯೆಹೋವನು ಒದಗಿಸಿದ ವಿಮೋಚನಾ ಮೌಲ್ಯವನ್ನು ಮತ್ತು ಇದು ನಿಮಗೆ ಯಾವ ಪ್ರಯೋಜನಗಳನ್ನು ತರಬಲ್ಲದೆಂಬುದನ್ನು ನಾವು ಪರಿಗಣಿಸೋಣ.
ಯೆಹೋವನು ವಿಮೋಚನಾ ಮೌಲ್ಯವನ್ನು ಒದಗಿಸಿದ ವಿಧ
9. ಯಾವ ವಿಧದ ವಿಮೋಚನಾ ಮೌಲ್ಯವು ಅಗತ್ಯವಾಗಿತ್ತು?
9 ನಷ್ಟವಾಗಿ ಹೋದದ್ದು ಪರಿಪೂರ್ಣ ಮಾನವ ಜೀವವಾಗಿದ್ದರಿಂದ, ಯಾವುದೇ ಅಪರಿಪೂರ್ಣ ಜೀವವು ಅದಕ್ಕೆ ವಿಮೋಚನಾ ಮೌಲ್ಯ ಕೊಡಲು ಸಾಧ್ಯವಿರಲಿಲ್ಲ. (ಕೀರ್ತನೆ 49:7, 8) ಆವಶ್ಯಕವಾಗಿದ್ದ ಸಂಗತಿಯು, ನಷ್ಟವಾದುದಕ್ಕೆ ಸಮಾನವಾಗಿರುವ ವಿಮೋಚನಾ ಮೌಲ್ಯವಾಗಿತ್ತು. ಇದು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ” ಎಂಬುದಾಗಿ ದೇವರ ವಾಕ್ಯದಲ್ಲಿ ಕಂಡುಬರುವ ಪರಿಪೂರ್ಣ ನ್ಯಾಯದ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿದೆ. (ಧರ್ಮೋಪದೇಶಕಾಂಡ 19:21) ಹಾಗಾದರೆ ಆದಾಮನು ಕಳೆದುಕೊಂಡ ಪರಿಪೂರ್ಣ ಮಾನವ ಪ್ರಾಣ ಅಥವಾ ಜೀವದ ಮೌಲ್ಯವನ್ನು ಯಾವುದು ಮಾತ್ರ ಭರ್ತಿಮಾಡುವುದು? ಇಲ್ಲಿ ಬೇಕಾಗಿದ್ದ “ಅನುರೂಪವಾದ ವಿಮೋಚನಾ ಮೌಲ್ಯವು,” (NW) ಇನ್ನೊಂದು ಪರಿಪೂರ್ಣ ಮಾನವ ಜೀವವೇ ಆಗಿತ್ತು.—1 ತಿಮೊಥೆಯ 2:6.
10. ಯೆಹೋವನು ವಿಮೋಚನಾ ಮೌಲ್ಯವನ್ನು ಒದಗಿಸಿದ್ದು ಹೇಗೆ?
10 ಯೆಹೋವನು ಈ ವಿಮೋಚನಾ ಮೌಲ್ಯವನ್ನು ಹೇಗೆ ಒದಗಿಸಿದನು? ಆತನು ತನ್ನ ಪರಿಪೂರ್ಣ ಆತ್ಮಜೀವಿ ಪುತ್ರರಲ್ಲಿ ಒಬ್ಬನನ್ನು ಈ ಭೂಮಿಗೆ ಕಳುಹಿಸಿದನು. ಆದರೆ ಯೆಹೋವನು ಗೊತ್ತುಗುರಿಯಿಲ್ಲದೆ ಆ ಆತ್ಮಜೀವಿಗಳಲ್ಲಿ ಯಾರೋ ಒಬ್ಬನನ್ನು ಕಳುಹಿಸಿಕೊಡಲಿಲ್ಲ. ಆತನು ತನಗೆ ಅತಿ ಪ್ರಿಯನಾಗಿದ್ದ ತನ್ನ ಒಬ್ಬನೇ ಮಗನನ್ನು ಕಳುಹಿಸಿಕೊಟ್ಟನು. (1 ಯೋಹಾನ 4:9, 10) ಈ ಪುತ್ರನು ಸಿದ್ಧಮನಸ್ಸಿನಿಂದ ತನ್ನ ಸ್ವರ್ಗೀಯ ನಿವಾಸವನ್ನು ಬಿಟ್ಟುಬಂದನು. (ಫಿಲಿಪ್ಪಿ 2:7) ನಾವು ಈ ಪುಸ್ತಕದ ಹಿಂದಿನ ಅಧ್ಯಾಯದಲ್ಲಿ ಕಲಿತಂತೆ, ಯೆಹೋವನು ಅದ್ಭುತ ರೀತಿಯಲ್ಲಿ ಈ ಪುತ್ರನ ಜೀವವನ್ನು ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದನು. ದೇವರ ಪವಿತ್ರಾತ್ಮದ ಮೂಲಕ ಯೇಸು ಪರಿಪೂರ್ಣ ಮನುಷ್ಯನಾಗಿ ಹುಟ್ಟಿದ ಕಾರಣ ಅವನು ಪಾಪಶಿಕ್ಷೆಗೆ ಒಳಗಾಗಿರಲಿಲ್ಲ.—ಲೂಕ 1:35.
11. ಒಬ್ಬನೇ ಮನುಷ್ಯನು ಕೋಟ್ಯಂತರ ಮಂದಿಗಾಗಿ ಹೇಗೆ ವಿಮೋಚನಾ ಮೌಲ್ಯವಾಗಿರಸಾಧ್ಯವಿತ್ತು?
11 ಆದರೆ ಕೇವಲ ಒಬ್ಬನೇ ಮನುಷ್ಯನು ಅನೇಕರಿಗಾಗಿ, ವಾಸ್ತವದಲ್ಲಿ ಕೋಟ್ಯಂತರ ಮನುಷ್ಯರಿಗಾಗಿ ಹೇಗೆ ವಿಮೋಚನಾ ಮೌಲ್ಯವಾಗಿರಸಾಧ್ಯವಿತ್ತು? ಒಳ್ಳೇದು, ಮೊದಲಾಗಿ ಕೋಟ್ಯಂತರ ಸಂಖ್ಯೆಯಲ್ಲಿ ಮನುಷ್ಯರು ಪಾಪಿಗಳಾದದ್ದಾದರೂ ಹೇಗೆ? ಆದಾಮನು ಪಾಪಮಾಡಿ ಪರಿಪೂರ್ಣ ಮಾನವ ಜೀವವೆಂಬ ಅಮೂಲ್ಯ ಸ್ವತ್ತನ್ನು ಕಳೆದುಕೊಂಡನೆಂಬುದನ್ನು ಜ್ಞಾಪಿಸಿಕೊಳ್ಳಿ. ಆದಕಾರಣ, ಅವನು ಅದನ್ನು ತನ್ನ ಸಂತಾನಕ್ಕೆ ದಾಟಿಸಲಾರದೆ ಹೋದನು. ಅದರ ಬದಲು ಅವನು ಕೇವಲ ಪಾಪ ಹಾಗೂ ಮರಣವನ್ನು ದಾಟಿಸಶಕ್ತನಾದನು. ಬೈಬಲು ಯಾರನ್ನು “ಕಡೇ ಆದಾಮನು” ಎಂದು ಕರೆಯುತ್ತದೊ ಆ ಯೇಸುವಾದರೊ ಪರಿಪೂರ್ಣ ಮಾನವ ಜೀವವುಳ್ಳವನಾಗಿದ್ದನು ಮಾತ್ರವಲ್ಲ, ಅವನು ಪಾಪವನ್ನೇ ಮಾಡಲಿಲ್ಲ. (1 ಕೊರಿಂಥ 15:45) ಒಂದು ಅರ್ಥದಲ್ಲಿ, ಯೇಸು ನಮ್ಮನ್ನು ರಕ್ಷಿಸಲಿಕ್ಕಾಗಿ ಆದಾಮನ ಸ್ಥಾನವನ್ನು ತುಂಬಿದನು. ದೇವರಿಗೆ ಪರಿಪೂರ್ಣ ವಿಧೇಯತೆಯನ್ನು ತೋರಿಸುತ್ತಾ ತನ್ನ ಪರಿಪೂರ್ಣ ಜೀವವನ್ನು ಯಜ್ಞಾರ್ಪಿಸುವ ಅಥವಾ ತ್ಯಾಗಮಾಡುವ ಮೂಲಕ, ಯೇಸು ಆದಾಮನು ಮಾಡಿದ ಪಾಪಕ್ಕೆ ಬೆಲೆಯನ್ನು ತೆತ್ತನು. ಹೀಗೆ ಯೇಸು ಆದಾಮನ ಸಂತತಿಗೆ ನಿರೀಕ್ಷೆಯನ್ನು ಒದಗಿಸಿದನು.—ರೋಮಾಪುರ 5:19; 1 ಕೊರಿಂಥ 15:21, 22.
12. ಯೇಸುವಿನ ಕಷ್ಟಾನುಭವದಿಂದ ಏನು ರುಜುಮಾಡಲ್ಪಟ್ಟಿತು?
12 ತನ್ನ ಮರಣಕ್ಕೆ ಮುಂಚಿತವಾಗಿ ಯೇಸು ಸಹಿಸಿಕೊಂಡ ಕಷ್ಟವನ್ನು ಬೈಬಲು ವಿವರವಾಗಿ ವರ್ಣಿಸುತ್ತದೆ. ಅವನಿಗೆ ಚಡಿಯೇಟುಗಳನ್ನು ನೀಡಲಾಯಿತು, ಅವನನ್ನು ಕ್ರೂರವಾದ ರೀತಿಯಲ್ಲಿ ಶೂಲಕ್ಕೇರಿಸಲಾಯಿತು, ಮತ್ತು ಯಾತನಾಕಂಬದ ಮೇಲೆ ಅವನು ದಾರುಣವಾದ ನೋವುಭರಿತ ಮರಣವನ್ನು ಅನುಭವಿಸಿದನು. (ಯೋಹಾನ 19:1, 16-18, 30; ಪರಿಶಿಷ್ಟದ 205-6ನೇ ಪುಟಗಳು) ಆದರೆ ಯೇಸು ಏಕೆ ಅಷ್ಟೊಂದು ಕಷ್ಟಾನುಭವಕ್ಕೆ ಒಳಗಾಗಬೇಕಿತ್ತು? ಈ ಪುಸ್ತಕದ ಮುಂದಿನ ಅಧ್ಯಾಯವೊಂದರಲ್ಲಿ ನಾವು ನೋಡಲಿರುವಂತೆ, ಪರೀಕ್ಷೆಗಳು ಬರುವಾಗ ಯಾವ ಮಾನವ ಸೇವಕನಾದರೂ ಯೆಹೋವನಿಗೆ ನಂಬಿಗಸ್ತನಾಗಿ ಉಳಿಯುವನೊ ಎಂಬ ವಿಷಯದಲ್ಲಿ ಸೈತಾನನು ಸವಾಲನ್ನೊಡ್ಡಿದ್ದಾನೆ. ಆದುದರಿಂದ, ಬಹಳಷ್ಟು ಕಷ್ಟಾನುಭವಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವ ಮೂಲಕ ಯೇಸು, ಸೈತಾನನ ಸವಾಲಿಗೆ ಕೊಡಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಉತ್ತರವನ್ನು ಕೊಟ್ಟನು. ಇಚ್ಛಾಸ್ವಾತಂತ್ರ್ಯವಿರುವ ಪರಿಪೂರ್ಣ ಮನುಷ್ಯನೊಬ್ಬನು ಪಿಶಾಚನು ಏನೇ ಮಾಡಿದರೂ ದೇವರಿಗೆ ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲನೆಂದು ಯೇಸು ರುಜುಪಡಿಸಿದನು. ತನ್ನ ಪ್ರಿಯ ಪುತ್ರನ ನಂಬಿಗಸ್ತಿಕೆಯಲ್ಲಿ ಯೆಹೋವನು ಎಷ್ಟೊಂದು ಆನಂದಿಸಿದ್ದಿರಬೇಕು!—ಜ್ಞಾನೋಕ್ತಿ 27:11.
13. ವಿಮೋಚನಾ ಮೌಲ್ಯವನ್ನು ಹೇಗೆ ತೆರಲಾಯಿತು?
13 ಈ ವಿಮೋಚನಾ ಮೌಲ್ಯವನ್ನು ಹೇಗೆ ತೆರಲಾಯಿತು? ಸಾ.ಶ. 33ರ ನೈಸಾನ್ ಎಂಬ ಯೆಹೂದಿ ತಿಂಗಳ 14ನೇ ದಿನದಂದು ಪರಿಪೂರ್ಣನೂ ಪಾಪರಹಿತನೂ ಆದ ತನ್ನ ಪುತ್ರನು ವಧಿಸಲ್ಪಡುವಂತೆ ದೇವರು ಅನುಮತಿಸಿದನು. ಹೀಗೆ ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು “ಒಂದೇ ಸಲ ಎಲ್ಲಾ ಕಾಲಕ್ಕೂ” ಯಜ್ಞಾರ್ಪಿಸಿದನು. (ಇಬ್ರಿಯ 10:10, NIBV) ಯೇಸು ಸತ್ತ ಬಳಿಕ ಮೂರನೆಯ ದಿನದಂದು ಯೆಹೋವನು ಅವನನ್ನು ಆತ್ಮಜೀವಿಯಾಗಿ ಎಬ್ಬಿಸಿದನು. ಆದಾಮನ ಸಂತತಿಗೆ ವಿನಿಮಯವಾಗಿ, ವಿಮೋಚನಾ ಮೌಲ್ಯವಾಗಿ ಅರ್ಪಿಸಲ್ಪಟ್ಟ ತನ್ನ ಪರಿಪೂರ್ಣ ಮಾನವ ಜೀವದ ಬೆಲೆಯನ್ನು ಯೇಸು ದೇವರಿಗೆ ಸಮರ್ಪಿಸಿದನು. (ಇಬ್ರಿಯ 9:24) ಯೇಸುವಿನ ಈ ಯಜ್ಞದ ಬೆಲೆಯನ್ನು ಯೆಹೋವನು, ಮಾನವಕುಲವನ್ನು ಪಾಪ ಮತ್ತು ಮರಣದ ದಾಸತ್ವದಿಂದ ಬಿಡಿಸಲು ಅಗತ್ಯವಾಗಿದ್ದ ವಿಮೋಚನಾ ಮೌಲ್ಯವಾಗಿ ಅಂಗೀಕರಿಸಿದನು.—ರೋಮಾಪುರ 3:23, 24.
ನಿಮಗೆ ಈ ವಿಮೋಚನಾ ಮೌಲ್ಯವು ಯಾವ ಪ್ರಯೋಜನಗಳನ್ನು ತರಬಲ್ಲದು?
14, 15. ‘ಪಾಪ ಪರಿಹಾರ’ ಬೇಕಾದರೆ ನಾವೇನು ಮಾಡತಕ್ಕದ್ದು?
14 ನಾವು ಪಾಪಭರಿತ ಸ್ಥಿತಿಯಲ್ಲಿರುವುದಾದರೂ, ಈ ವಿಮೋಚನಾ ಮೌಲ್ಯದ ಕಾರಣ ಬೆಲೆಕಟ್ಟಲಾಗದ ಆಶೀರ್ವಾದಗಳನ್ನು ಪಡೆಯಬಲ್ಲೆವು. ದೇವರ ಈ ಅತಿಶ್ರೇಷ್ಠ ಉಡುಗೊರೆಯಿಂದ ಈಗ ಸಿಗುತ್ತಿರುವ ಮತ್ತು ಮುಂದಕ್ಕೆ ಸಿಗಲಿರುವ ಕೆಲವು ಪ್ರಯೋಜನಗಳನ್ನು ನಾವು ಪರಿಗಣಿಸೋಣ.
15 ಪಾಪಗಳ ಕ್ಷಮಾಪಣೆ. ಬಾಧ್ಯತೆಯಾಗಿ ಬಂದಿರುವ ಅಪರಿಪೂರ್ಣತೆಯ ಕಾರಣ ಸರಿಯಾದುದನ್ನು ಮಾಡುವುದು ನಮಗೊಂದು ನಿಜ ಹೋರಾಟವೇ ಸರಿ. ನಾವೆಲ್ಲರೂ ನಡೆನುಡಿಗಳಲ್ಲಿ ಪಾಪಮಾಡುತ್ತೇವೆ. ಆದರೆ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಮುಖೇನ ನಾವು ‘ಪಾಪ ಪರಿಹಾರ’ವನ್ನು ಇಲ್ಲವೆ ಕ್ಷಮಾಪಣೆಯನ್ನು ಪಡೆಯಬಲ್ಲೆವು. (ಕೊಲೊಸ್ಸೆ 1:13, 14) ಆದರೆ ಆ ಕ್ಷಮಾಪಣೆಯನ್ನು ಪಡೆಯಬೇಕಾದರೆ ನಾವು ನಿಜವಾಗಿಯೂ ಪಶ್ಚಾತ್ತಾಪ ಪಟ್ಟವರಾಗಿರಬೇಕು. ನಾವು ಯೆಹೋವನ ಪುತ್ರನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಮಗಿರುವ ನಂಬಿಕೆಯ ಆಧಾರದ ಮೇರೆಗೆ ಆತನ ಬಳಿ ದೀನಭಾವದಿಂದ ಪಾಪಕ್ಷಮೆಯನ್ನು ಕೋರಲೂಬೇಕು.—1 ಯೋಹಾನ 1:8, 9.
16. ನಾವು ದೇವರನ್ನು ಶುದ್ಧ ಮನಸ್ಸಾಕ್ಷಿಯಿಂದ ಆರಾಧಿಸುವಂತೆ ಯಾವುದು ಸಾಧ್ಯಗೊಳಿಸುತ್ತದೆ, ಮತ್ತು ಅಂತಹ ಮನಸ್ಸಾಕ್ಷಿಯನ್ನು ಹೊಂದುವುದರ ಮೌಲ್ಯವೇನು?
16 ದೇವರ ಮುಂದೆ ಶುದ್ಧವಾದ ಮನಸ್ಸಾಕ್ಷಿ. ಅಪರಾಧಿ ಪ್ರಜ್ಞೆಯಿರುವ ಮನಸ್ಸಾಕ್ಷಿ ನಮ್ಮನ್ನು ಸುಲಭವಾಗಿ ನಿರೀಕ್ಷಾಹೀನತೆಗೆ ನಡಿಸಿ ನಮ್ಮಲ್ಲಿ ಅಯೋಗ್ಯರೆಂಬ ಭಾವನೆಯನ್ನು ಉಂಟುಮಾಡಬಲ್ಲದು. ಆದರೆ ವಿಮೋಚನಾ ಮೌಲ್ಯವು ಸಾಧ್ಯಮಾಡಿರುವ ಕ್ಷಮಾಪಣೆಯಿಂದಾಗಿ, ನಾವು ಅಪರಿಪೂರ್ಣರಾಗಿದ್ದರೂ ಶುದ್ಧವಾದ ಮನಸ್ಸಾಕ್ಷಿಯಿಂದ ತನ್ನನ್ನು ಆರಾಧಿಸುವಂತೆ ಯೆಹೋವನು ದಯೆಯಿಂದ ನಮ್ಮನ್ನು ಶಕ್ತಗೊಳಿಸುತ್ತಾನೆ. (ಇಬ್ರಿಯ 9:13, 14) ಇದು ನಾವು ಯೆಹೋವನೊಂದಿಗೆ ವಾಕ್ಸರಳತೆಯುಳ್ಳವರಾಗುವಂತೆ ಮಾಡುತ್ತದೆ. ಆದಕಾರಣ, ನಾವು ಪ್ರಾರ್ಥನೆಯಲ್ಲಿ ಆತನನ್ನು ಯಾವುದೇ ಅಂಜಿಕೆಯಿಲ್ಲದೆ ಸಮೀಪಿಸಬಲ್ಲೆವು. (ಇಬ್ರಿಯ 4:14-16) ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದು ಮನಶ್ಶಾಂತಿಯನ್ನು ಕೊಡುತ್ತದೆ, ಆತ್ಮಗೌರವವನ್ನು ವರ್ಧಿಸುತ್ತದೆ ಮತ್ತು ಸಂತೋಷವನ್ನು ತರುತ್ತದೆ.
17. ಯೇಸು ನಮಗಾಗಿ ಸತ್ತ ಕಾರಣ ಯಾವ ಆಶೀರ್ವಾದಗಳು ಸಾಧ್ಯಗೊಳಿಸಲ್ಪಡುತ್ತವೆ?
17 ಪರದೈಸ್ ಭೂಮಿಯಲ್ಲಿ ನಿತ್ಯಜೀವದ ನಿರೀಕ್ಷೆ. “ಪಾಪವು ಕೊಡುವ ಸಂಬಳ ಮರಣ,” ಎನ್ನುತ್ತದೆ ರೋಮಾಪುರ 6:23. ಅದೇ ವಚನ ಕೂಡಿಸಿ ಹೇಳುವುದು: “ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” ಈ ಪುಸ್ತಕದ 3ನೆಯ ಅಧ್ಯಾಯದಲ್ಲಿ, ಬರಲಿರುವ ಭೂಪರದೈಸಿನ ಆಶೀರ್ವಾದಗಳನ್ನು ನಾವು ಚರ್ಚಿಸಿದೆವು. (ಪ್ರಕಟನೆ 21:3, 4) ಪರಿಪೂರ್ಣ ಆರೋಗ್ಯದಲ್ಲಿ ನಿತ್ಯಜೀವದ ಸಮೇತ ಆ ಭಾವೀ ಆಶೀರ್ವಾದಗಳೆಲ್ಲವೂ ಸಾಧ್ಯಗೊಳಿಸಲ್ಪಟ್ಟಿರುವುದು ಯೇಸು ನಮಗಾಗಿ ಸತ್ತ ಕಾರಣವೇ. ಆ ಆಶೀರ್ವಾದಗಳನ್ನು ಪಡೆಯಲಿಕ್ಕಾಗಿ, ನಾವು ಆ ವಿಮೋಚನಾ ಮೌಲ್ಯದ ಉಡುಗೊರೆಗಾಗಿ ನಮ್ಮ ಕೃತಜ್ಞತೆಯನ್ನು ತೋರಿಸುವುದು ಆವಶ್ಯಕ.
ನಿಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಬಲ್ಲಿರಿ?
18. ವಿಮೋಚನಾ ಮೌಲ್ಯದ ಉಡುಗೊರೆಗಾಗಿ ನಾವು ಯೆಹೋವನಿಗೆ ಏಕೆ ಕೃತಜ್ಞರಾಗಿರಬೇಕು?
18 ನಾವು ಆ ವಿಮೋಚನಾ ಮೌಲ್ಯಕ್ಕಾಗಿ ಯೆಹೋವನಿಗೆ ಏಕೆ ಬಹಳವಾಗಿ ಕೃತಜ್ಞರಾಗಿರಬೇಕು? ನಮಗೆ ಉಡುಗೊರೆಯನ್ನು ಕೊಡುವ ವ್ಯಕ್ತಿಯು ಆ ಉಡುಗೊರೆಗಾಗಿ ಸಮಯ, ಪ್ರಯತ್ನ ಮತ್ತು ಹಣವನ್ನು ತ್ಯಾಗಮಾಡಿರುವಲ್ಲಿ, ಆ ಉಡುಗೊರೆ ವಿಶೇಷವಾಗಿ ಅಮೂಲ್ಯವಾದುದಾಗುತ್ತದೆ. ಆ ಉಡುಗೊರೆಯು, ಅದನ್ನು ಕೊಡುತ್ತಿರುವ ವ್ಯಕ್ತಿಗೆ ನಮ್ಮ ಕಡೆಗಿರುವ ಸಾಚಾ ಪ್ರೀತಿಯ ಅಭಿವ್ಯಕ್ತಿ ಆಗಿರುವಾಗಲಂತೂ ನಮ್ಮ ಹೃದಯ ತುಂಬಿಬರುತ್ತದೆ. ವಿಮೋಚನಾ ಮೌಲ್ಯವು ಸಕಲ ಉಡುಗೊರೆಗಳಲ್ಲೇ ಅತ್ಯಮೂಲ್ಯವಾದ ಉಡುಗೊರೆಯಾಗಿದೆ, ಏಕೆಂದರೆ ಇದನ್ನು ಒದಗಿಸಲು ದೇವರು ಅತಿ ದೊಡ್ಡ ತ್ಯಾಗವನ್ನು ಮಾಡಿರುತ್ತಾನೆ. “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು” ಎನ್ನುತ್ತದೆ ಯೋಹಾನ 3:16. ಆ ವಿಮೋಚನಾ ಮೌಲ್ಯವು ಯೆಹೋವನಿಗೆ ನಮ್ಮ ಮೇಲಿರುವ ಪ್ರೀತಿಯ ಅತಿ ಎದ್ದುಕಾಣುವ ಸಾಕ್ಷ್ಯವಾಗಿದೆ. ಇದು ಯೇಸುವಿನ ಪ್ರೀತಿಯ ಪುರಾವೆಯೂ ಆಗಿದೆ, ಏಕೆಂದರೆ ಅವನು ನಮಗೋಸ್ಕರ ತನ್ನ ಜೀವವನ್ನು ಮನಃಪೂರ್ವಕವಾಗಿ ಕೊಟ್ಟನು. (ಯೋಹಾನ 15:13) ಆದುದರಿಂದ ವಿಮೋಚನಾ ಮೌಲ್ಯದ ಈ ಉಡುಗೊರೆಯು, ಯೆಹೋವನು ಮತ್ತು ಆತನ ಪುತ್ರನು ನಮ್ಮಲ್ಲಿ ಒಬ್ಬೊಬ್ಬರನ್ನೂ ವ್ಯಕ್ತಿಪರವಾಗಿ ಪ್ರೀತಿಸುತ್ತಾರೆಂಬುದನ್ನು ನಮಗೆ ಮನಗಾಣಿಸಬೇಕು.—ಗಲಾತ್ಯ 2:20.
19, 20. ವಿಮೋಚನಾ ಮೌಲ್ಯವೆಂಬ ದೇವರ ಉಡುಗೊರೆಗೆ ನೀವು ಕೃತಜ್ಞರಾಗಿದ್ದೀರೆಂದು ಯಾವ ವಿಧಗಳಲ್ಲಿ ತೋರಿಸಬಲ್ಲಿರಿ?
19 ಹಾಗಾದರೆ ನೀವು ಈ ವಿಮೋಚನಾ ಮೌಲ್ಯದ ಉಡುಗೊರೆಗಾಗಿ ಕೃತಜ್ಞರೆಂಬುದನ್ನು ಹೇಗೆ ತೋರಿಸಬಲ್ಲಿರಿ? ಮೊತ್ತಮೊದಲು, ಆ ಮಹಾ ದಾನಿಯಾದ ಯೆಹೋವನ ಕುರಿತು ಹೆಚ್ಚನ್ನು ತಿಳಿಯಲು ಪ್ರಯತ್ನಿಸಿರಿ. (ಯೋಹಾನ 17:3) ಈ ಪ್ರಕಾಶನದ ಸಹಾಯದಿಂದ ಮಾಡಲ್ಪಡುವ ಒಂದು ಬೈಬಲ್ ಅಧ್ಯಯನವು, ಆತನ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು ನಿಮಗೆ ನೆರವು ನೀಡುವುದು. ನೀವು ಯೆಹೋವನ ಜ್ಞಾನದಲ್ಲಿ ಹೆಚ್ಚುತ್ತ ಹೋದಂತೆ ಆತನ ಕಡೆಗೆ ನಿಮಗಿರುವ ಪ್ರೀತಿಯು ಇನ್ನಷ್ಟು ಗಾಢವಾಗುವುದು. ಇದಕ್ಕೆ ಪ್ರತಿಯಾಗಿ, ಆ ಪ್ರೀತಿಯು ನೀವು ಯೆಹೋವನನ್ನು ಮೆಚ್ಚಿಸ ಬಯಸುವಂತೆ ಮಾಡುವುದು.—1 ಯೋಹಾನ 5:3.
20 ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿದೆಯೆಂದು ತೋರಿಸಿರಿ. “ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು” ಎಂದು ಯೇಸುವಿನ ಕುರಿತು ಹೇಳಲಾಗಿದೆ. (ಯೋಹಾನ 3:36) ನಮಗೆ ಯೇಸುವಿನಲ್ಲಿ ನಂಬಿಕೆಯಿದೆಯೆಂದು ನಾವು ಹೇಗೆ ತೋರಿಸಬಲ್ಲೆವು? ಇಂತಹ ನಂಬಿಕೆಯನ್ನು ಮಾತುಗಳಲ್ಲಿ ಮಾತ್ರ ತೋರಿಸಲಾಗುವುದಿಲ್ಲ. “ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ” ಎನ್ನುತ್ತದೆ ಯಾಕೋಬ 2:26. ಹೌದು, ನಿಜ ನಂಬಿಕೆಯು ‘ಕ್ರಿಯೆಗಳಿಂದ,’ ನಮ್ಮ ಕಾರ್ಯಗಳಿಂದ ತೋರಿಸಲ್ಪಡುತ್ತದೆ. ನಮಗೆ ಯೇಸುವಿನಲ್ಲಿ ನಂಬಿಕೆಯಿದೆ ಎಂದು ತೋರಿಸುವ ಒಂದು ವಿಧವು, ಸಾಧ್ಯವಾಗುವಷ್ಟರ ಮಟ್ಟಿಗೆ ಅವನನ್ನು ಅನುಕರಿಸುವ ಮೂಲಕವೇ ಆಗಿದೆ. ನಮ್ಮ ಮಾತುಗಳಲ್ಲಿ ಮಾತ್ರವಲ್ಲ, ಬದಲಾಗಿ ನಮ್ಮ ಕ್ರಿಯೆಗಳಲ್ಲೂ ನಾವು ಅವನನ್ನು ಅನುಕರಿಸುವೆವು.—ಯೋಹಾನ 13:15.
21, 22. (ಎ) ಕರ್ತನ ಸಂಧ್ಯಾ ಭೋಜನದ ವಾರ್ಷಿಕ ಆಚರಣೆಗೆ ನಾವೇಕೆ ಹಾಜರಿರಬೇಕು? (ಬಿ) ಆರನೆಯ ಮತ್ತು ಏಳನೆಯ ಅಧ್ಯಾಯಗಳಲ್ಲಿ ಏನನ್ನು ವಿವರಿಸಲಾಗುವುದು?
21 ಕರ್ತನ ಸಂಧ್ಯಾ ಭೋಜನದ ವಾರ್ಷಿಕ ಆಚರಣೆಗೆ ಹಾಜರಾಗಿರಿ. ಸಾ.ಶ. 33ರ ನೈಸಾನ್ 14ರ ಸಾಯಂಕಾಲ, ಬೈಬಲು ಯಾವುದನ್ನು “ಕರ್ತನ ಭೋಜನ” ಎಂದು ಕರೆಯುತ್ತದೊ ಆ ವಿಶೇಷ ಆಚರಣೆಯನ್ನು ಯೇಸು ಆರಂಭಿಸಿದನು. (1 ಕೊರಿಂಥ 11:20; ಮತ್ತಾಯ 26:26-28) ಈ ಆಚರಣೆಯನ್ನು ಕ್ರಿಸ್ತನ ಮರಣದ ಜ್ಞಾಪಕವೆಂದೂ ಕರೆಯಲಾಗುತ್ತದೆ. ಪರಿಪೂರ್ಣ ಮಾನವನಾಗಿ ತನ್ನ ಮರಣದ ಮೂಲಕ ತನ್ನ ಜೀವವನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟೆನೆಂಬುದನ್ನು ತನ್ನ ಅಪೊಸ್ತಲರು ಮತ್ತು ಅವರ ಬಳಿಕ ಎಲ್ಲ ಸತ್ಯ ಕ್ರೈಸ್ತರು ಮನಸ್ಸಿನಲ್ಲಿಡಲು ಸಹಾಯಮಾಡುವ ಸಲುವಾಗಿ ಯೇಸು ಈ ಆಚರಣೆಯನ್ನು ಸ್ಥಾಪಿಸಿದನು. ಈ ಆಚರಣೆಯ ಬಗ್ಗೆ ಯೇಸು ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ [“ಇದನ್ನು ಮಾಡುತ್ತ ಇರಿ,” NW].” (ಲೂಕ 22:19) ಈ ಜ್ಞಾಪಕಾಚರಣೆಯು, ವಿಮೋಚನಾ ಮೌಲ್ಯದ ಸಂಬಂಧದಲ್ಲಿ ಯೆಹೋವನು ಮತ್ತು ಯೇಸು ಕ್ರಿಸ್ತನು—ಇವರಿಬ್ಬರೂ ತೋರಿಸಿದ ಮಹಾ ಪ್ರೀತಿಯನ್ನು ನಮಗೆ ನೆನಪು ಹುಟ್ಟಿಸುತ್ತದೆ. ನಾವು ಯೇಸು ಕ್ರಿಸ್ತನ ಮರಣದ ಆ ಜ್ಞಾಪಕಾಚರಣೆಗೆ ಹಾಜರಾಗುವ ಮೂಲಕ ಆ ವಿಮೋಚನಾ ಮೌಲ್ಯಕ್ಕೆ ನಮ್ಮ ಕೃತಜ್ಞತೆಯನ್ನು ತೋರಿಸಬಲ್ಲೆವು.a
22 ಯೆಹೋವನ ವಿಮೋಚನಾ ಮೌಲ್ಯದ ಒದಗಿಸುವಿಕೆಯು ಒಂದು ಅಮೂಲ್ಯ ಉಡುಗೊರೆಯೆಂಬುದು ನಿಶ್ಚಯ. (2 ಕೊರಿಂಥ 9:14, 15) ಈ ಬೆಲೆಕಟ್ಟಲಾಗದ ಉಡುಗೊರೆ ಮೃತರಿಗೂ ಪ್ರಯೋಜನ ತರಬಲ್ಲದು. ಅದು ಹೇಗೆಂಬುದನ್ನು ಆರನೆಯ ಮತ್ತು ಏಳನೆಯ ಅಧ್ಯಾಯಗಳು ವಿವರಿಸುವವು.
a ಕರ್ತನ ಸಂಧ್ಯಾ ಭೋಜನದ ಅರ್ಥದ ಕುರಿತು ಹೆಚ್ಚಿನ ಮಾಹಿತಿಗಾಗಿ, ಪರಿಶಿಷ್ಟದ 206-9ನೇ ಪುಟಗಳನ್ನು ನೋಡಿ.