ಜೀವದ ಓಟದಲ್ಲಿ ನೀವು ಹೇಗೆ ಓಡುತ್ತಾ ಇದ್ದೀರಿ?
“ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂದು ನಿಮಗೆ ತಿಳಿಯದೋ? ನೀವೂ ಬಿರುದನ್ನು ಪಡೆಯಬೇಕೆಂತಲೇ ಓಡಿರಿ.”—1 ಕೊರಿಂಥ 9:24.
1. ನಮ್ಮ ಕ್ರೈಸ್ತ ಮಾರ್ಗಕ್ರಮವನ್ನು ಬೈಬಲ್ ಯಾವುದಕ್ಕೆ ಹೋಲಿಸಿದೆ?
ನಿತ್ಯ ಜೀವಕ್ಕಾಗಿ ನಮ್ಮ ಹುಡುಕಾಟವನ್ನು ಬೈಬಲ್ ಒಂದು ಓಟಕ್ಕೆ ಹೋಲಿಸುತ್ತದೆ. ತನ್ನ ಜೀವಿತದ ಅಂತ್ಯದ ಸುಮಾರಿಗೆ, ಅಪೊಸ್ತಲ ಪೌಲನು ತನ್ನ ಕುರಿತು ಅಂದದ್ದು: “ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.” ತನ್ನ ಜತೆ ಕ್ರೈಸ್ತರು ಸಹ ಅದನ್ನೇ ಮಾಡುವಂತೆ ಪ್ರೇರೇಪಿಸಿದಾಗ ಅವನಂದದ್ದು: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.”—2 ತಿಮೊಥೆಯ 4:7; ಇಬ್ರಿಯ 12:1.
2. ಜೀವಕ್ಕಾಗಿ ಓಟದಲ್ಲಿ ಯಾವ ಪ್ರೋತ್ಸಾಹನೀಯ ಪ್ರಾರಂಭವನ್ನು ನಾವು ನೋಡುತ್ತೇವೆ?
2 ಆ ಹೋಲಿಕೆಯು ಸರಿಯಾದದ್ದು ಯಾಕಂದರೆ ಒಂದು ಓಟದಲ್ಲಿ ಒಂದು ಆರಂಭ, ಗೊತ್ತುಮಾಡಿದ ಮಾರ್ಗಕ್ರಮ, ಮತ್ತು ಮುಗಿಸುವ ಗೆರೆ ಅಥವಾ ಗುರಿಮುಟ್ಟುವಿಕೆಯು ಅಡಕವಾಗಿದೆ. ಜೀವದ ಕಡೆಗೆ ನಮ್ಮ ಆತ್ಮಿಕ ಪ್ರಗತಿಯ ಕಾರ್ಯವಿಧಾನದ ಸಂಬಂಧದಲ್ಲೂ ಇದೇ ರೀತಿ ಇದೆ. ನಾವು ನೋಡಿದ ಪ್ರಕಾರ, ಪ್ರತಿ ವರ್ಷ ನೂರಾರು ಸಾವಿರ ಜನರು ಜೀವದ ಓಟದಲ್ಲಿ ಆಶಾಜನಕ ಆರಂಭವನ್ನು ಮಾಡುತ್ತಿದ್ದಾರೆ. ಉದಾಹರಣೆಗೆ, ಕಳೆದ ಐದು ವರ್ಷಗಳಲ್ಲಿ, 13,36,429 ಜನರು ಸಮರ್ಪಣೆ ಮತ್ತು ನೀರಿನ ದೀಕ್ಷಾಸ್ನಾನದ ಮೂಲಕ ವಿಧಿವತ್ತಾಗಿ ಓಟದಲ್ಲಿ ಆರಂಭವನ್ನು ಮಾಡಿದ್ದಾರೆ. ಅಂಥ ಹುರುಪಿನ ಪ್ರಾರಂಭವು ಅತ್ಯಂತ ಪ್ರೋತ್ಸಾಹನೀಯವು. ಆದರೂ ಪ್ರಾಮುಖ್ಯವಾದ ವಿಷಯವು ಏನಂದರೆ ಗುರಿಮುಟ್ಟುವ ಗೆರೆಯನ್ನು ತಲಪುವ ತನಕ ಆ ಓಟದಲ್ಲಿ ಉಳಿಯುವದೇ. ನೀವಿದನ್ನು ಮಾಡುತ್ತಿದ್ದೀರೋ?
ಜೀವದ ಓಟ
3, 4. (ಎ) ಓಟದ ಗತಿಯನ್ನು ಮುಂದುವರಿಸುವ ಮಹತ್ವವನ್ನು ಪೌಲನು ಹೇಗೆ ತೋರಿಸಿದ್ದಾನೆ? (ಬಿ) ಕೆಲವರು ಪೌಲನ ಸಲಹೆಯನ್ನು ಪಾಲಿಸಲು ತಪ್ಪಿದ್ದು ಹೇಗೆ?
3 ಓಟದಲ್ಲಿ ಉಳಿಯುವ ಮಹತ್ವವನ್ನು ಒತ್ತಿಹೇಳುವುದಕ್ಕಾಗಿ, ಪೌಲನು ಪ್ರಬೋಧಿಸಿದ್ದು: “ರಂಗಸ್ಥಾನದಲ್ಲಿ ಓಡುವುದಕ್ಕೆ ಗೊತ್ತಾದವರೆಲ್ಲರು ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು [ಬಹುಮಾನವನ್ನು, NW] ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವು ಬಿರುದನ್ನು [ಬಹುಮಾನವನ್ನು, NW] ಪಡೆಯಬೇಕೆಂತಲೇ ಓಡಿರಿ.”—1 ಕೊರಿಂಥ 9:24.
4 ಪುರಾತನ ಕ್ರೀಡೆಗಳಲ್ಲಿ ಒಬ್ಬನು ಮಾತ್ರವೇ ಬಹುಮಾನವನ್ನು ಪಡೆಯುತ್ತಿದ್ದನೆಂಬದು ನಿಜ. ಆದರೆ ಜೀವದ ಓಟದಲ್ಲಾದರೋ, ಪ್ರತಿಯೊಬ್ಬನು ಬಹುಮಾನಕ್ಕೆ ಅರ್ಹತೆಯುಳ್ಳವನಾಗಿದ್ದಾನೆ. ಗುರಿಮುಟ್ಟುವ ತನಕ ಆ ಮಾರ್ಗದಲ್ಲಿ ಉಳಿಯುವುದು ಮಾತ್ರ ಆವಶ್ಯಕ! ಸಂತೋಷಕರವಾಗಿ, ಅನೇಕರು, ಅಪೊಸ್ತಲ ಪೌಲನಂತೆ, ತಮ್ಮ ಜೀವಮಾನದ ಕೊನೆಯ ತನಕ ನಂಬಿಗಸ್ತಿಕೆಯಿಂದ ಓಡಿದ್ದಾರೆ. ಮತ್ತು ಲಕ್ಷಾಂತರ ಜನರು ಓಡುವುದನ್ನು ಮುಂದರಿಸುತ್ತಾ ಇದ್ದಾರೆ. ಆದರೆ ಕೆಲವರಾದರೋ ಗುರಿಮುಟ್ಟುವ ಗೆರೆಯೆಡೆಗೆ ಮುಂದೊತ್ತಲು ಅಥವಾ ಅಭಿವೃದ್ಧಿ ಮಾಡಲು ತಪ್ಪಿದ್ದಾರೆ. ಬದಲಿಗೆ, ಬೇರೆ ವಿಷಯಗಳು ತಮಗೆ ತಡೆಯಾಗುವಂತೆ ಅವರು ಬಿಟ್ಟುಕೊಟ್ಟದ್ದರಿಂದ ಅವರು ಓಟದಿಂದ ಹೊರಬಿದ್ದರು ಅಥವಾ ಯಾವುದೇ ಒಂದು ರೀತಿಯಲ್ಲಿ ಆಯೋಗ್ಯರಾಗಿ ಪರಿಣಮಿಸಿದರು. (ಗಲಾತ್ಯ 5:7) ಇದು ನಮಗೆಲ್ಲರಿಗೆ ಜೀವದೋಟದಲ್ಲಿ ನಾವು ಹೇಗೆ ಓಡುತ್ತಾ ಇದ್ದೇವೆ ಎಂದು ಪರೀಕ್ಷಿಸಿಕೊಳ್ಳಲು ಕಾರಣವನ್ನು ಕೊಡತಕ್ಕದ್ದು.
5. ಜೀವದೋಟವನ್ನು ಒಂದು ಸ್ಪರ್ಧಾತ್ಮಕ ಆಟಕ್ಕೆ ಪೌಲನು ಹೋಲಿಸುತ್ತಿದ್ದನೋ? ವಿವರಿಸಿರಿ.
5 ಪ್ರಶ್ನೆಯು ಕೇಳಲ್ಪಡಬಹುದು: “ಒಬ್ಬನು ಮಾತ್ರ ಬಹುಮಾನವನ್ನು ಹೊಂದುತ್ತಾನೆ” ಎಂದು ಪೌಲನು ಹೇಳಿದಾಗ ಅವನ ಮನಸ್ಸಿನಲ್ಲೇನಿತ್ತು? ಆರಂಭದಲ್ಲಿ ಗಮನಿಸಿದ ಪ್ರಕಾರ, ಜೀವದೋಟದಲ್ಲಿ ಪ್ರಾರಂಭ ಮಾಡಿದವರೆಲ್ಲರಲ್ಲಿ, ಒಬ್ಬನು ಮಾತ್ರವೇ ನಿತ್ಯಜೀವದ ಬಹುಮಾನವನ್ನು ಹೊಂದುತ್ತಾನೆ ಎಂಬರ್ಥವನ್ನು ಅವನು ಮಾಡಿರಲಿಲ್ಲ. ವಿಷಯವು ಹಾಗಿರ ಸಾಧ್ಯವಿಲ್ಲವೆಂಬದು ವ್ಯಕ್ತ, ಯಾಕಂದರೆ ಎಲ್ಲಾ ರೀತಿಯ ಜನರು ರಕ್ಷಣೆಯನ್ನು ಪಡೆಯಬೇಕೆಂಬದು ದೇವರ ಚಿತ್ತವಾಗಿದೆ ಎಂದು ಅವನು ಪದೇ ಪದೇ ಸ್ಪಷ್ಟಪಡಿಸಿದ್ದನು. (ರೋಮಾಪುರ 5:18; 1 ತಿಮೊಥೆಯ 2:3, 4; 4:10; ತೀತ 2:11) ಇಲ್ಲ, ಜೀವದೋಟವು, ಯಾವುದರಲ್ಲಿ ಪ್ರತಿ ಪಾಲಿಗನು ಬೇರೆ ಎಲ್ಲರನ್ನು ಸೋಲಿಸಲು ಪ್ರಯತ್ನಿಸುತ್ತಾನೋ ಆ ಒಂದು ಸ್ಪರ್ಧೆ ಎಂದವನು ಹೇಳಿರಲಿಲ್ಲ. ಆ ಕಾಲದಲ್ಲಿ ಒಲಿಂಪಿಕ್ ಕ್ರೀಡೆಗಳಿಗಿಂತಲೂ ಹೆಚ್ಚು ಪ್ರತಿಷ್ಠೆಯದೆಂದು ಹೇಳಲಾದ ಅವರ ಇಸ್ಮ್ತಿಯನ್ ಆಟಗಳಲ್ಲಿ, ಪ್ರತಿಸ್ಪರ್ಧಿಗಳ ನಡುವೆ ಆ ರೀತಿಯ ಸ್ಪರ್ಧಾತ್ಮಕ ಭಾವವು ನೆಲೆಸಿತ್ತೆಂದು ಕೊರಿಂಥದವರಿಗೆ ತೀರಾ ಚೆನ್ನಾಗಿ ತಿಳಿದಿತ್ತು. ಹೀಗಿರಲಾಗಿ, ಪೌಲನ ಮನಸ್ಸಿನಲ್ಲಿ ಇದದ್ದೇನ್ದು?
6. ಓಟಗಾರ ಮತ್ತು ಓಟದ ಕುರಿತಾದ ಪೌಲನ ಚರ್ಚೆಯ ಬಗ್ಗೆ ಪೂರ್ವಾಪರ ವಚನಗಳು ಏನನ್ನು ಪ್ರಕಟಿಸುತ್ತವೆ?
6 ಓಟಗಾರನ ದೃಷ್ಟಾಂತವನ್ನು ಉದಾಹರಿಸಿದರಲ್ಲಿ, ಪೌಲನು ರಕ್ಷಣೆಗಾಗಿ ತನ್ನ ಸ್ವಂತ ಪ್ರತೀಕ್ಷೆಗಳನ್ನು ಮುಖ್ಯವಾಗಿ ಚರ್ಚಿಸುತ್ತಿದ್ದನು. ಇದಕ್ಕೆ ಮುಂಚಿನ ವಚನಗಳಲ್ಲಿ, ಅವನು ಹೇಗೆ ಕಷ್ಟಪಟ್ಟು ದುಡಿದಿದ್ದನು ಮತ್ತು ಅನೇಕ ರೀತಿಗಳಲ್ಲಿ ತನ್ನನ್ನು ಪರಿಶ್ರಮಕ್ಕೆ ಗುರಿಪಡಿಸಿದ್ದನೆಂದು ಅವನು ವಿವರಿಸಿದ್ದಾನೆ. (1 ಕೊರಿಂಥ 9:19-22) ಅನಂತರ, 23 ನೆಯ ವಚನದಲ್ಲಿ ಅವನಂದದ್ದು: “ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.” ಅಪೊಸ್ತಲನಾಗುವುದಕ್ಕೆ ತಾನು ಆರಿಸಲ್ಪಟ್ಟವನು ಎಂಬ ಕಾರಣ ಮಾತ್ರದಿಂದ ಮತ್ತು ಇತರರಿಗೆ ಸಾರುವುದರಲ್ಲಿ ಅನೇಕ ವರ್ಷಗಳನ್ನು ಕಳೆದವನೆಂಬ ಕಾರಣದಿಂದ ತನ್ನ ರಕ್ಷಣೆಯು ಖಾತರಿಯಲ್ಲ ಎಂದು ಅವನು ಮನಗಂಡಿದ್ದನು. ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗುವುದಕ್ಕಾಗಿ, ಸುವಾರ್ತೆಗೋಸ್ಕರ ತನ್ನ ಕೈಲಾದದ್ದೆಲ್ಲವನ್ನು ಮಾಡುತ್ತಾ ಮುಂದರಿಯಲೇ ಬೇಕಿತ್ತು. ಎಲ್ಲಿ “ಒಬ್ಬನು ಮಾತ್ರವೇ ಬಹುಮಾನವನ್ನು ಹೊಂದು” ತಿದ್ತನ್ದೋ ಆ ಇಸ್ಮ್ತಿಯನ್ ಆಟಗಳ ಒಂದು ಕಾಲೋಟದಲ್ಲಿ ಅವನು ಓಡುತ್ತಿದ್ದರೆ ಹೇಗೊ ಹಾಗೆ, ಅಷ್ಟೇ ಪ್ರಯಾಸಪಟ್ಟು, ಜಯಿಸುವ ಪೂರ್ಣ ಹೇತುವುಳ್ಳವನಾಗಿ ಅವನು ಓಡಬೇಕಿತ್ತು.—1 ಕೊರಿಂಥ 9:24ಎ.
7. “ಬಹುಮಾನವನ್ನು ಪಡೆಯಬೇಕೆಂತಲೇ ಓಡು” ವುದಕ್ಕೆ ಯಾವುದರ ಅಗತ್ಯವಿದೆ?
7 ಇದರಿಂದ ನಾವು ಹೆಚ್ಚನ್ನು ಕಲಿಯಬಲ್ಲೆವು. ಓಟದಲ್ಲಿ ಭಾಗಿಗಳಾಗುವ ಪ್ರತಿಯೊಬ್ಬನು ಜಯಿಸಲು ಬಯಸುತ್ತಾನಾದರೂ, ಯಾರು ಜಯಿಸಲು ಪೂರ್ಣ ನಿರ್ಧಾರವನ್ನು ಮಾಡಿದ್ದಾರೋ ಅವರಿಗೆ ಮಾತ್ರವೇ ಹಾಗೆ ಮಾಡುವ ಪ್ರತೀಕ್ಷೆಯು ಇದೆ. ಆದುದರಿಂದ, ಆ ಓಟದಲ್ಲಿ ಕೇವಲ ಭಾಗಿಗಳಾಗಿರುವ ಕಾರಣ ನಾವು ಸಂತೃಪ್ತರಾಗಿರಬಾರದು. ನಾವು ‘ಸತ್ಯದಲ್ಲಿ ಇರುವ’ ಕಾರಣ ಎಲ್ಲವೂ ಒಳ್ಳೇದಾಗುವುದು ಎಂದು ನಾವು ಭಾವಿಸಬಾರದು. ನಾವು ಕ್ರೈಸ್ತರು ಎಂಬ ಹೆಸರನ್ನು ಧರಿಸಬಹುದು, ಆದರೆ ನಾವು ಕ್ರೈಸ್ತರು ಎಂದು ರುಜುಪಡಿಸುವ ಸತ್ವವು ನಮ್ಮಲ್ಲಿದೆಯೇ? ಉದಾಹರಣೆಗೆ, ಕ್ರೈಸ್ತನೊಬ್ಬನು ಮಾಡಲೇಬೇಕೆಂದು ನಮಗೆ ಗೊತ್ತಿರುವ ವಿಷಯಗಳಾದ—ಕ್ರೈಸ್ತ ಕೂಟಗಳಿಗೆ ಹಾಜರಾಗುವುದು, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದು ಮುಂತಾದವುಗಳನ್ನು ನಾವು ಮಾಡುತ್ತೇವೋ? ಹಾಗಿದ್ದರೆ ಅದು ಪ್ರಶಂಸನೀಯವು, ಮತ್ತು ಅಂಥ ಅತ್ಯುತ್ತಮ ಹವ್ಯಾಸಗಳಲ್ಲಿ ನಾವು ಬಿಡದೆ ಮುಂದರಿಯಲು ಪ್ರಯಾಸಪಡಬೇಕು. ಆದರೂ, ನಾವೇನನ್ನು ಮಾಡುತ್ತೇವೋ ಅದರಿಂದ ನಾವು ಹೆಚ್ಚು ಪ್ರಯೋಜನ ಹೊಂದಬಲ್ಲೆವೆಂಬದು ಶಕ್ಯವೂ? ಉದಾಹರಣೆಗೆ, ಕೂಟಗಳಲ್ಲಿ ಉತ್ತರಿಸುವ ಮೂಲಕ ಅದಕ್ಕೇನಾದರೂ ನೆರವನ್ನೀಯಲು ನಾವು ಯಾವಾಗಲೂ ತಯಾರಿದ್ದೇವೋ? ನಾವೇನನ್ನು ಕಲಿಯುತ್ತೇವೋ ಅದನ್ನು ನಮ್ಮ ವೈಯಕ್ತಿಕ ಜೀವನಕ್ಕೆ ಅನ್ವಯಿಸಲು ಪ್ರಯತ್ನಿಸುತ್ತೇವೋ? ಕ್ಷೇತ್ರದಲ್ಲಿ ನಾವು ಎದುರಿಸುವ ತಡೆಗಟ್ಟುಗಳ ಮಧ್ಯೆಯೂ ಒಂದು ಪೂರ್ಣವಾದ ಸಾಕ್ಷಿಯನ್ನು ಕೊಡುವಂತೆ ನಾವು ನಮ್ಮ ನಿಪುಣತೆಗಳನ್ನು ಪ್ರಗತಿಮಾಡುವ ಕಡೆಗೆ ಗಮನ ಕೊಡುತ್ತೇವೋ? ಆಸಕ್ತ ಜನರನ್ನು ಪುನರ್ಭೇಟಿ ಮಾಡುವ ಮತ್ತು ಮನೆ ಬೈಬಲಭ್ಯಾಸಗಳನ್ನು ನಡಿಸುವ ಪಂಥಾಹ್ವಾನವನ್ನು ಸ್ವೀಕರಿಸಲು ನಾವು ಸಿದ್ಧ ಮನಸ್ಕರೋ? “ನೀವೂ ಬಹುಮಾನವನ್ನು ಪಡೆಯಬೇಕೆಂತಲೇ ಓಡಿರಿ,” ಎಂದು ಪ್ರೇರೇಪಿಸುತ್ತಾನೆ ಪೌಲನು.—1 ಕೊರಿಂಥ 9:24ಬಿ.
ಎಲ್ಲಾ ವಿಷಯಗಳಲ್ಲಿ ಆತ್ಮಸಂಯಮ ತೋರಿಸಿರಿ
8. ‘ಎಲ್ಲಾ ವಿಷಯಗಳಲ್ಲಿ ಆತ್ಮಸಂಯಮದಿಂದಿರುವಂತೆ’ ಜತೆ ಕ್ರೈಸ್ತರನ್ನು ಪ್ರಚೋದಿಸಲು ಪೌಲನನ್ನು ಯಾವುದು ಪ್ರೇರಿಸಿರಬಹುದು?
8 ನಿಧಾನಗೊಂಡು, ಮಾರ್ಗತಪ್ಪಿಹೋದ ಅಥವಾ ಜೀವದೋಟವನ್ನು ಬಿಟ್ಟುಕೊಟ್ಟ ಅನೇಕರನ್ನು ಪೌಲನು ತನ್ನ ಜೀವಮಾನದಲ್ಲಿ ಕಂಡಿದ್ದನು. (1 ತಿಮೊಥೆಯ 1:19, 20; ಇಬ್ರಿಯ 2:1) ಆದುದರಿಂದಲೇ ಅವನು ತನ್ನ ಜತೆ ಕ್ರೈಸ್ತರಿಗೆ ಅವರು ಒಂದು ಶ್ರಮಭರಿತ ಹಾಗೂ ಸದಾ ಮುಂದರಿಯುವ ಸ್ಪರ್ಧೆಯಲ್ಲಿದ್ದಾರೆಂಬದನ್ನು ಪದೇ ಪದೇ ನೆನಪು ಹುಟ್ಟಿಸಿದನು. (ಎಫೆಸ 6:12; 1 ತಿಮೊಥೆಯ 6:12) ಅವನು ಓಟಗಾರನ ದೃಷ್ಟಾಂತವನ್ನು ಒಂದು ಹೆಜ್ಜೆ ಮುಂದೆ ತಕ್ಕೊಂಡು, ಅಂದದ್ದು: “ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ಮಿತವಾಗಿ [ಆತ್ಮಸಂಯಮದಿಂದ, NW] ಇರುತ್ತಾರೆ.” (1 ಕೊರಿಂಥ 9:25ಎ) ಇದನ್ನು ಹೇಳಿದ್ದರಲ್ಲಿ ಪೌಲನು, ಕೊರಿಂಥದ ಕ್ರೈಸ್ತರಿಗೆ ಚೆನ್ನಾಗಿ ಪರಿಚಯವಿದ್ದ ಒಂದು ವಿಷಯಕ್ಕೆ, ಅಂದರೆ, ಇಸ್ಮ್ತಿಯನ್ ಆಟಗಳಲ್ಲಿ ಸ್ಪರ್ಧಿಗಳಿಂದ ಅನುಸರಿಸಲ್ಪಡುತ್ತಿದ್ದ ಅತಿಕಟ್ಟುನಿಟ್ಟಿನ ತರಬೇತಿಗೆ ಅಪ್ರತ್ಯಕ್ಷವಾಗಿ ಸೂಚಿಸುತ್ತಿದ್ದನು.
9, 10. (ಎ) ಇಸ್ಮ್ತಿಯನ್ ಆಟಗಳಲ್ಲಿ ಸ್ಪರ್ಧಿಗಳನ್ನು ಒಂದು ಮೂಲವು ಹೇಗೆ ವರ್ಣಿಸುತ್ತದೆ? (ಬಿ) ವರ್ಣನೆಯ ವಿಷಯದಲ್ಲಿ ವಿಶಿಷ್ಠ ಗಮನಾರ್ಹವಾದದ್ದು ಯಾವುದು?
9 ತರಬೇತಿಯಲ್ಲಿರುವ ಒಬ್ಬ ಸ್ಪರ್ಧಿಯ ಸ್ಫುಟವಾದ ವರ್ಣನೆಯು ಇಲ್ಲಿದೆ:
“ತೃಪ್ತಿಯಿಂದ ಮತ್ತು ಯಾವ ಗೊಣಗಾಟವೂ ಇಲ್ಲದೆ ತನ್ನ ಹತ್ತು ತಿಂಗಳ ತರಬೇತಿನ ನಿಯಮಗಳಿಗೆ ಮತ್ತು ನಿರ್ಬಂಧಗಳಿಗೆ ಅವನು ತನ್ನನ್ನು ಅಧೀನಪಡಿಸುತ್ತಾನೆ, ಅದರ ಹೊರತು ಅವನು ಸ್ಪರ್ಧಿಸದಿರುವುದೇ ಲೇಸು. . . . ಅವನು ತನ್ನ ಚಿಕ್ಕ ತೊಂದರೆಗಳಲ್ಲಿ, ಮತ್ತು ಬಳಲಿಕೆಗಳಲ್ಲಿ, ರಿಕತ್ತೆಗಳಲ್ಲಿ ಹೆಮ್ಮೆಪಡುತ್ತಾನೆ, ಮತ್ತು ತನ್ನ ಸಾಫಲ್ಯದ ಸಂಭವವನ್ನು ಕೊಂಚ ಮಟ್ಟಿಗಾದರೂ ಕಡಿಮೆಗೊಳಿಸಬಹುದಾದ ಯಾವುದೇ ವಿಷಯವನ್ನು ಕಟ್ಟುನಿಟ್ಟಿನಿಂದ ವರ್ಜಿಸುವುದನ್ನು ಒಂದು ಗೌರವದ ವಿಷಯವಾಗಿ ಎಣಿಸುತ್ತಾನೆ. ಬೇರೆ ಪುರುಷರು ಇಷ್ಟಬಂದ ಹಾಗೆ ತಿನ್ನುತ್ತಿರುವದನ್ನು, ತಾನು ಪ್ರಯಾಸದಿಂದ ಏದುಸಿರು ಬಿಡುವಾಗ ಅವರು ವಿಶ್ರಮಿಸುವುದನ್ನು, ಹಾಯಾಗಿ ಸ್ನಾನಮಾಡುವುದನ್ನು, ಸುಖವಾಗಿ ಜೀವವನ್ನು ಆನಂದಿಸುವುದನ್ನು ಅವನು ಕಾಣುತ್ತಾನೆ; ಆದರೆ ಅಸೂಯಾಪರ ಯೋಚನೆ ಸಹ ಅವನಿಗೆ ಅಪೂರ್ವ, ಯಾಕಂದರೆ ಅವನ ಹೃದಯವು ಬಹುಮಾನದಲ್ಲಿ ನೆಟ್ಟಿದೆ, ಮತ್ತು ತೀವ್ರ ತರಬೇತು ಅತ್ಯಾವಶ್ಯಕವು. ಯಾವುದೇ ಬಿಂದುವಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಶಿಸ್ತಿನ ಕಟುತ್ವವನ್ನು ಕಡಿಮೆಗೊಳಿಸಿದರೆ, ಅವನಿಗಿರುವ ಅವಕಾಶಗಳು ಕಳೆದೇ ಹೋಗುವುವು ಎಂದವನಿಗೆ ಗೊತ್ತು.”—ದ ಎಕ್ಸ್ಪೊಸಿಟರ್ಸ್ ಬೈಬಲ್, ಸಂಪುಟ 5, ಪುಟ 674.
10 ತರಬೇತಿನ ಕೆಳಗಿರುವವನು, ಸ್ವಾರ್ಥ ತ್ಯಾಗದ ಅಂಥ ಕಟ್ಟುನಿಟ್ಟಿನ ದಿನಚರ್ಯೆಯನ್ನು ಪಾಲಿಸುವುದನ್ನು “ಒಂದು ಗೌರವದ ವಿಷಯವಾಗಿ ಎಣಿಸುತ್ತಾನೆ” ಎಂಬದು ವಿಶಿಷ್ಠ ರಸಕರ ಅವಲೋಕನೆಯು. ವಾಸ್ತವದಲ್ಲಿ, ಇತರರು ಆನಂದಿಸುತ್ತಿರುವ ನೆಮ್ಮದಿ ಮತ್ತು ಆರಾಮದೆಡೆಗೆ “ಅಸೂಯಾಪರ ಯೋಚನೆ ಸಹ ಅವನಿಗೆ ಅಪೂರ್ವ” ವಾಗಿದೆ. ಇದರಿಂದ ನಾವೇನನ್ನಾದರೂ ಕಲಿಯ ಬಲ್ಲೆವೋ? ನಿಶ್ಚಯವಾಗಿಯೂ ಹೌದು.
11. ಜೀವದೋಟದಲ್ಲಿ ಭಾಗವಹಿಸಿರುವಾಗ ಯಾವ ಅಯೋಗ್ಯ ನೋಟದ ವಿರುದ್ಧ ನಾವು ನಮ್ಮನ್ನು ಕಾದುಕೊಳ್ಳಬೇಕು?
11 “ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡು ಹಿಡಿಯುವವರು ಸ್ವಲ್ಪ ಜನ” ಎಂಬ ಯೇಸುವಿನ ಮಾತುಗಳನ್ನು ಜ್ಞಾಪಕಕ್ಕೆ ತನ್ನಿರಿ. (ಮತ್ತಾಯ 7:13, 14) ‘ಬಿಕ್ಕಟ್ಟಾದ ದಾರಿ’ ಯಲ್ಲಿ ನೀವು ಪಯಣ ಮಾಡಲು ಪ್ರಯತ್ನಿಸುವಾಗ, ಆ ಬೇರೊಂದು ದಾರಿಯಲ್ಲಿ ಆನಂದಿಸುವಂತೆ ತೋರುವ ಜನರ ಸ್ವಾತಂತ್ರ್ಯ ಮತ್ತು ನೆಮ್ಮದಿಯ ವಿಷಯದಲ್ಲಿ ನೀವು ಅಸೂಯೆ ಪಡುತ್ತೀರೋ? ಬೇರೆಯವರು ಮಾಡುತ್ತಿರುವ ಕೆಲವು ವಿಷಯಗಳನ್ನು, ಯಾವುವು ತಮ್ಮಲ್ಲಿ ತಾವೇ ಅಷ್ಟು ಕೆಟ್ಟದ್ದಾಗಿ ತೋರುವುದಿಲ್ಲವೋ ಅವನ್ನು, ನೀವು ಕಳಕೊಳ್ಳುತ್ತಿರುವಂಥ ಅನಿಸಿಕೆ ನಿಮಗಾಗುತ್ತದೋ? ನಾವು ಈ ಮಾರ್ಗವನ್ನು ತಕ್ಕೊಳ್ಳಲಿಕ್ಕೆ ಕಾರಣವೇನೆಂಬದನ್ನು ನಾವು ಮನಸ್ಸಿನಲ್ಲಿಡಲು ತಪ್ಪುವುದಾದರೆ, ಈ ರೀತಿಯ ಅನಿಸಿಕೆ ನಮಗಾಗುವುದು ಸುಲಭ. “ಅವರು ಬಾಡಿಹೋಗುವ ಜಯಮಾಲಿಕೆಯನ್ನು [ಕಿರೀಟವನ್ನು, NW] ಹೊಂದುವದಕ್ಕೆ ಸಾಧನೆಮಾಡುತ್ತಾರೆ. ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದದಕ್ಕೆ ಸಾಧನೆಮಾಡುವವರಾಗಿದ್ದೇವೆ,” ಅಂದಿದ್ದಾನೆ ಪೌಲನು.—1 ಕೊರಿಂಥ 9:25ಬಿ.
12. ಜನರು ಹುಡುಕಿರುವ ಮಹಿಮೆ ಮತ್ತು ಕೀರ್ತಿಯು, ಇಸ್ಮ್ತಿಯನ್ ಆಟಗಳಲ್ಲಿ ನೀಡಲ್ಪಟ್ಟ ನಾಶವಾಗುವ ಕಿರೀಟದಂತಿದೆ ಎಂದು ಹೇಳಬಹುದೇಕೆ?
12 ಇಸ್ತ್ಮಿಯನ್ ಆಟಗಳಲ್ಲಿ ಜಯಶಾಲಿಯಾದವನಿಗೆ, ಪ್ರಾಯಶಃ ಕೆಲವೇ ದಿನಗಳಲ್ಲಿ ಅಥವಾ ವಾರಗಳಲ್ಲಿ ಬಾಡಿಹೋಗುವ ಇಸ್ತ್ಮಿಯನ್ ಪೀತದಾರಿನ ಅಥವಾ ಅಂಥ ಬೇರೆ ಸಸ್ಯದ ಕಿರೀಟವು ದೊರೆಯುತ್ತಿತ್ತು. ಆದರೆ ಆಟಗಾರರು ಸ್ಪರ್ಧಿಸುತ್ತಿದ್ದದ್ದು ಆ ನಶ್ವರ ಕಿರೀಟಕ್ಕಾಗಿ ಅಲ್ಲ, ಬದಲಾಗಿ ಅದರೊಂದಿಗೆ ಬರುವ ಮಹಿಮೆ, ಗೌರವ ಮತ್ತು ಕೀರ್ತಿಗಾಗಿ. ಜಯಶಾಲಿಯು ಮನೆಗೆ ಹಿಂದಿರುಗಿದಾಗ, ಆತನು ವಿಜೇತ ವೀರನಾಗಿ ಸ್ವಾಗತಿಸಲ್ಪಡುತ್ತಿದ್ದನೆಂದು ಒಂದು ಮೂಲವು ವಿವರಿಸುತ್ತದೆ. ಅವನ ಮೆರವಣಿಗೆಯು ಹಾದುಹೋಗುವುದಕ್ಕಾಗಿ ಪಟ್ಟಣದ ಗೋಡೆಗಳನ್ನು ಆಗಾಗ್ಯೆ ಕೆಡವಿಹಾಕಲಾಗುತ್ತಿತ್ತು. ಅವನ ಸನ್ಮಾನಕ್ಕಾಗಿ ಪ್ರತಿಮೆಗಳನ್ನು ಕಟ್ಟಿಸಲಾಗುತ್ತಿತ್ತು. ಆದರೂ ಇದೆಲ್ಲದರ ಮಧ್ಯೆ, ಅವನ ಮಹಿಮೆಯು ಇನ್ನೂ ನಾಶವಾಗುವಂಥದ್ದಾಗಿತ್ತು. ಆ ವಿಜೇತ ವೀರರು ಯಾರೆಂದು ಏನಾದರೂ ತಿಳಿದಿರುವವರು ಇಂದು ಕೊಂಚ ಜನ ಮತ್ತು ಹೆಚ್ಚಿನವರಿಗೆ ನಿಜವಾಗಿ ಆ ಕುರಿತು ಪರಿವೆಯೂ ಇಲ್ಲ. ಯಾರು ಲೋಕದಲ್ಲಿ ಅಧಿಕಾರ, ಕೀರ್ತಿ, ಮತ್ತು ಐಶ್ವರ್ಯವನ್ನು ಗಳಿಸಲಿಕ್ಕಾಗಿ ತಮ್ಮ ಸಮಯ, ಶಕ್ತಿ ಮತ್ತು ಆರೋಗ್ಯವನ್ನು, ಕುಟುಂಬದ ಸಂತೋಷವನ್ನು ಸಹ ತ್ಯಾಗಮಾಡುತ್ತಾರೋ, ಆದರೆ ದೇವರೆಡೆಗೆ ಐಶ್ವರ್ಯವಂತರಾಗಿರುವುದಿಲ್ಲವೋ, ಅವರ ಪ್ರಾಪಂಚಿಕ “ಕಿರೀಟ” ವು ಅವರ ಜೀವದಂತೆ, ಕೇವಲ ಗತಿಸಿಹೋಗುವುದನ್ನು ಅವರು ಕಾಣುವರು.—ಮತ್ತಾಯ 6:19, 20; ಲೂಕ 12:16-21.
13. ಜೀವದೋಟದಲ್ಲಿರುವವನ ಜೀವನ ಮಾರ್ಗವು ಒಬ್ಬ ಆಟಗಾರನಿಗಿಂತ ಹೇಗೆ ಬೇರೆಯಾಗಿದೆ?
13 ಅಂಗಸಾಧನೆಯ ಆಟದಲ್ಲಿ ಸ್ಪರ್ಧಿಸುವವರು, ಮೇಲೆ ವಿವರಿಸಿದಂತಹ ತರಬೇತಿನ ಕಟ್ಟುನಿಟ್ಟಿನ ಆವಶ್ಯಕತೆಗಳನ್ನು ಸ್ವೀಕರಿಸಲು ಸಿದ್ಧರಾಗಿರಬಹುದು, ಆದರೆ ಒಂದು ಸೀಮಿತ ಸಮಯದ ತನಕ ಮಾತ್ರವೇ. ಒಮ್ಮೆ ಕ್ರೀಡೆಗಳು ಮುಗಿದವೆಂದರೆ, ಅವರು ತಮ್ಮ ಸಾಧಾರಣ ಜೀವಿತದ ದಿನಚರ್ಯೆಗೆ ಹಿಂತಿರುಗುತ್ತಾರೆ. ತಮ್ಮ ನೈಪುಣ್ಯಗಳನ್ನು ಉಳಿಸಿಕೊಳ್ಳಲು ಅವರಿನ್ನೂ ಆಗಿಂದಾಗ್ಯೆ ತರಬೇತು ಮಾಡುತ್ತಿರಬಹುದು, ಆದರೆ ತೀವ್ರ ಸ್ವಾರ್ಥ ತ್ಯಾಗದ ಅದೇ ಮಾರ್ಗಕ್ರಮವನ್ನು ಅವರು ಇನ್ನು ಮುಂದೆ, ಕಡಿಮೆಪಕ್ಷ ಮುಂದಿನ ಸ್ಪರ್ಧೆಯು ಬರುವ ತನಕ, ಅನುಸರಿಸಲಾರರು. ಜೀವದ ಓಟದಲ್ಲಿರುವವರ ವಿಷಯದಲ್ಲಿ ಹಾಗಿರುವುದಿಲ್ಲ. ಅವರಿಗೆ ತರಬೇತು ಮತ್ತು ಆತ್ಮ ತ್ಯಾಗವು ಒಂದು ಜೀವಿತದ ಮಾರ್ಗವಾಗಿರಬೇಕು.—1 ತಿಮೊಥೆಯ 6:6-8.
14, 15. ಜೀವದೋಟದಲ್ಲಿ ಸ್ಪರ್ಧಿಸುವವನು ಆತ್ಮ ಸಂಯಮವನ್ನು ಎಡೆಬಿಡದೆ ತೋರಿಸಬೇಕು ಏಕೆ?
14 ಶಿಷ್ಯರ ಮತ್ತು ಇತರರ ಒಂದು ಗುಂಪಿಗೆ ಯೇಸು ಕ್ರಿಸ್ತನು ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ,” “ಅವನು ತನ್ನನ್ನು ನಿರಾಕರಿಸಿ (ಅಥವಾ, “ಅವನು ತನಗೆ ‘ಬೇಡ’ ಅಂದುಕೊಂಡು,” ಚಾರ್ಲ್ಸ್ ಬಿ. ವಿಲ್ಯಮ್ಸ್ ಭಾಷಾಂತರ) ತನ್ನ ಶಿಲುಬೆಯನ್ನು ಹೊತ್ತುಕೊಂಡು [ಎಡೆಬಿಡದೆ, NW] ನನ್ನ ಹಿಂದೆ ಬರಲಿ.” (ಮಾರ್ಕ 8:34) ಈ ಆಮಂತ್ರಣವನ್ನು ನಾವು ಸ್ವೀಕರಿಸುವಾಗ, ನಾವು “ಎಡೆಬಿಡದೆ” ಹಾಗೆ ಮಾಡಲು ಸಿದ್ಧರಾಗಿರಬೇಕು, ಆತ್ಮತ್ಯಾಗದಲ್ಲಿ ಏನಾದರೊಂದು ವಿಶೇಷ ಪ್ರಶಸ್ತಿಯಿರುವ ಕಾರಣದಿಂದಲ್ಲ, ಬದಲಿಗೆ, ಎಚ್ಚರ ತಪ್ಪಿದ ಒಂದು ಕ್ಷಣವು, ಒಳ್ಳೇ ನಿರ್ಣಯದಲ್ಲಿ ಒಂದು ಚಿಕ್ಕ ತಪ್ಪು, ಕಟ್ಟಲ್ಪಟ್ಟ ಎಲ್ಲವನ್ನು ಕೆಡವಿಹಾಕಬಹುದು, ನಮ್ಮ ನಿತ್ಯ ಹಿತವನ್ನು ಗಂಡಾಂತರಕ್ಕೆ ಹಾಕಲೂಬಹುದು. ಆತ್ಮಿಕ ಪ್ರಗತಿಯು ಸಾಮಾನ್ಯವಾಗಿ ನಿಧಾನ ಗತಿಯಲ್ಲಿ ಮಾಡಲ್ಪಡುತ್ತದೆ, ಆದರೆ ನಾವು ಎಡೆಬಿಡದೆ ಕಾದುಕೊಂಡಿರದೆ ಇದ್ದರೆ, ಅದು ಎಷ್ಟು ಕ್ಷಿಪ್ರವಾಗಿ ತೊಡೆದು ಹಾಕಲ್ಪಡುವುದು!
15 ಅದಲ್ಲದೆ, ನಾವು “ಎಲ್ಲಾ ವಿಷಯಗಳಲ್ಲಿ” ಆತ್ಮ ಸಂಯಮ ಉಳ್ಳವರಾಗಿರಬೇಕೆಂದು ಪೌಲನು ಪ್ರೇರಿಸಿದ್ದಾನೆ, ಅಂದರೆ, ಜೀವಿತದ ಎಲ್ಲಾ ಭಾಗಗಳಲ್ಲಿ ನಾವದನ್ನು ಹೊಂದಿಕೆಯಾಗಿ ನಡಿಸತಕ್ಕದ್ದು. ಇದು ಸುಜ್ಞಾನದ ಮಾತು ಯಾಕಂದರೆ ತರಬೇತು ಹೊಂದುವವನು ಒಂದು ಅತಿರೇಕ ಲೋಲುಪತೆಯವನಾದರೆ ಯಾ ಸ್ವೇಚ್ಛಾಚಾರದ ಜೀವನ ನಡಿಸಿದರೆ, ಅವನು ಸಹಿಸಿಕೊಳ್ಳುವ ಎಲ್ಲಾ ದೈಹಿಕ ಶ್ರಮ ಮತ್ತು ಬಳಲಿಕೆಯ ಪ್ರಯೋಜನವಾದರೂ ಏನು? ಅದೇ ರೀತಿ ನಮ್ಮ ಜೀವದೋಟದಲ್ಲೂ ಇದೆ, ಎಲ್ಲಾ ವಿಷಯಗಳಲ್ಲಿ ನಾವು ಆತ್ಮ ಸಂಯಮವನ್ನು ತೋರಿಸಬೇಕು. ಒಬ್ಬ ವ್ಯಕ್ತಿಯು ಕುಡಿಕತನ ಮತ್ತು ವ್ಯಭಿಚಾರ ಮುಂತಾದವುಗಳಲ್ಲಿ ತನ್ನನ್ನು ಹತೋಟಿಯಲ್ಲಿಡಬಹುದು, ಆದರೆ ಅವನು ಗರ್ವಿಷ್ಟನೂ ಜಗಳಾಡುವವನೂ ಆಗಿದ್ದರೆ ಅದರ ಮೌಲ್ಯವು ಕುಂದಿಹೋಗುವುದು. ಅಥವಾ, ಅವನು ದೀರ್ಘ ಶಾಂತನೂ ಇತರರಿಗೆ ದಯೆ ತೋರಿಸುವವನೂ ಆಗಿದ್ದರೂ, ತನ್ನ ಖಾಸಗಿ ಜೀವಿತದಲ್ಲಿ ಯಾವುದೋ ಗುಪ್ತ ಪಾಪಕ್ಕೆ ಎಡೆಗೊಡುವುದಾದರೆ ಆಗೇನು? ಆತ್ಮ ಸಂಯಮವು ಪೂರ್ಣ ಪ್ರಯೋಜನಕಾರಿಯಾಗಬೇಕಾದರೆ, ಅದನ್ನು “ಎಲ್ಲಾ ವಿಷಯಗಳಲ್ಲಿ” ತೋರಿಸಲೇ ಬೇಕಾಗಿದೆ.—ಯಾಕೋಬ 2:10, 11 ಹೋಲಿಸಿರಿ.
“ಗುರಿಗೊತ್ತಿಲ್ಲದೆ” ಓಡದಿರ್ರಿ
16. “ಅನಿಶ್ಚಯದಿಂದ” ಓಡುವುದಲ್ಲ ಎಂಬದರ ಅರ್ಥವೇನು?
16 ಜೀವದೋಟದಲ್ಲಿ ಯಶಸ್ವಿಯಾಗಲು ಬೇಕಾದ ಕಠಿಣ ಪರಿಶ್ರಮಗಳನ್ನು ಗಮನಿಸುತ್ತಾ, ಪೌಲನು ಮತ್ತೂ ಹೇಳಿದ್ದು: “ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ [ಅನಿಶ್ಚಯದಿಂದ, NW] ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ. ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ.” (1 ಕೊರಿಂಥ 9:26) “ಅನಿಶ್ಚಯದಿಂದ” ಎಂಬ ಪದದ ಅಕ್ಷರಾರ್ಥವು “ಅಪ್ರತ್ಯಕ್ಷವಾಗಿ” (ಕಿಂಗ್ಡಂ ಇಂಟರ್ಲಿನಿಯರ್), “ಅವಲೋಕಿಸಲ್ಪಡದೆ, ಗುರುತಿಸಿಲ್ಲದೆ” (ಲ್ಯಾಂಗ್ಸ್ ಕಾಮೆಂಟ್ರಿ) ಎಂದಾಗಿದೆ. ಹೀಗೆ, “ಅನಿಶ್ಚಯದಿಂದ ಓಡದೆ” ಅಂದರೆ, ಓಟಗಾರನು ಎಲ್ಲಿಗೆ ಓಡುತ್ತಿದ್ದಾನೆ ಎಂಬದು ಪ್ರತಿಯೊಬ್ಬ ಪ್ರೇಕ್ಷಕನಿಗೆ ಅತಿ ಪ್ರತ್ಯಕ್ಷವಾಗಿ ತೋರಿಬರಬೇಕು. ದ ಆ್ಯಂಕರ್ ಬೈಬಲ್ ಇದನ್ನು, “ಅಡ್ಡಾದಿಡಿಯ್ಡಾದ ಮಾರ್ಗದಲ್ಲಿ ಅಲ್ಲ” ಎಂದು ತರ್ಜುಮೆ ಮಾಡಿದೆ. ಸಮುದ್ರ ತೀರದಲ್ಲಿ ಒಂದು ಜೋಡಿ ಹೆಜ್ಜೆಗುರುತುಗಳು, ಮೇಲೆ ಕೆಳಗೆ ತಿರುವು ಮುರುವಾಗಿ, ಆಗಿಂದಾಗ್ಯೆ ವೃತ್ತಾಕಾರದಲ್ಲಿ ಬಳಸುತ್ತಾ, ಕೆಲವು ಸಲ ಹಿಂದೆಯೂ ಹೋಗಿರುವುದು ನಿಮ್ಮ ಕಣ್ಣಿಗೆ ಬಿದ್ದರೆ, ಆ ವ್ಯಕ್ತಿಯು ಯಾವ ದಿಕ್ಕಿಗೆ ಓಡುತ್ತಾನೆಂಬದು ಅವನಿಗೆ ಗೊತ್ತಿರುವ ವಿಚಾರವನ್ನಂತೂ ಬಿಡಿ, ಅವನು ಓಡುತ್ತಿದ್ದನೆಂದು ನೀವು ನೆನಸುವುದು ಕೂಡಾ ಇಲ್ಲ. ಆದರೆ ಹೆಜ್ಜೆಗುರುತುಗಳ ಒಂದು ಜೋಡಿಯು ಒಂದು ಉದ್ದವಾದ, ನೇರ ಸಾಲಿನಲ್ಲಿದ್ದು, ಪ್ರತಿಯೊಂದು ಹೆಜ್ಜೆಗುರುತು ಹಿಂದಿನದ್ದಕ್ಕಿಂತ ಮುಂದಿದ್ದು, ಎಲ್ಲವೂ ಸರಿಸಮ ಅಂತರದಲ್ಲಿರುವುದನ್ನು ನೀವು ನೋಡಿದ್ದಾದರೆ, ತಾನು ಎಲ್ಲಿಗೆ ಹೋಗುತ್ತಿದ್ದಾನೆಂದು ಸರಿಯಾಗಿ ತಿಳಿದಿರುವ ಒಬ್ಬ ವ್ಯಕ್ತಿಯ ಹೆಜ್ಜೆಗುರುತುಗಳು ಅವೆಂದು ನೀವು ತೀರ್ಮಾನಿಸುವಿರಿ.
17. (ಎ)ತಾನು “ಅನಿಶ್ಚಯದಿಂದ” ಓಡಲಿಲವ್ಲೆಂದು ಪೌಲನು ತೋರಿಸಿದ್ದು ಹೇಗೆ? (ಬಿ) ಈ ವಿಷಯದಲ್ಲಿ ನಾವು ಪೌಲನನ್ನು ಹೇಗೆ ಅನುಸರಿಸಬಹುದು?
17 ಪೌಲನು ಓಡಿದ್ದು “ಅನಿಶ್ಚಯದಿಂದಲ್ಲ” ಎಂದು ಅವನ ಜೀವಿತವು ಸ್ಪಷ್ಟವಾಗಿಗಿ ತೋರಿಸುತ್ತದೆ. ಅವನೊಬ್ಬ ಕ್ರೈಸ್ತ ಶುಶ್ರೂಷಕನು ಮತ್ತು ಅಪೊಸ್ತಲನಾಗಿದ್ದನು ಎಂದು ರುಜುಪಡಿಸುವುದಕ್ಕೆ ಹೇರಳ ರುಜುವಾತು ಅವನಲ್ಲಿತ್ತು. ಅವನಲ್ಲಿ ಏಕಮಾತ್ರ ಧ್ಯೇಯವಿತ್ತು, ಮತ್ತು ಅದನ್ನು ಗಳಿಸಲು ಅವನು ತನ್ನ ಜೀವಮಾನವಿಡೀ ಪರಿಶ್ರಮದಿಂದ ದುಡಿಸಿಕೊಂಡನು. ಖ್ಯಾತಿ, ಅಧಿಕಾರ, ಐಶ್ವರ್ಯ, ಅಥವಾ ಸುಖಭೋಗಗಳು ಇವುಗಳಲ್ಲಿ ಯಾವುದನ್ನಾದರೂ ಗಳಿಸಿಕೊಳ್ಳುವ ಶಕ್ಯತೆ ಪ್ರಾಯಶಃ ಅವನಿಗಿದ್ದರೂ ಅವನೆಂದೂ ಅವುಗಳಿಂದ ಸೆಳೆಯಲ್ಪಡಲಿಲ್ಲ. (ಅ.ಕೃತ್ಯಗಳು 20:24; 1 ಕೊರಿಂಥ 9:2; 2 ಕೊರಿಂಥ 3:2, 3; ಫಿಲಿಪ್ಪಿ 3:8, 13, 14) ನಿಮ್ಮ ಜೀವಿತ ಮಾರ್ಗವನ್ನು ನೀವು ಹಿನ್ನೋಡುವಾಗ, ಯಾವ ರೀತಿಯ ಹೆಜ್ಜೆಯ ಸಾಲುಗಳನ್ನು ನೀವು ನೋಡುತ್ತೀರಿ? ಒಂದು ಸ್ಪಷ್ಟವಾಗಿದ ಗುರಿಯೆಡೆಗೆ ನಡೆದ ನೇರವಾದ ಸಾಲನ್ನೋ ಅಥವಾ ಗುರಿ ತಪ್ಪಿ ಅಲೆದಾಡಿರುವುದನ್ನೋ? ಜೀವದೋಟದಲ್ಲಿ ನೀವು ಸ್ಪರ್ಧಿಸುತ್ತಿದ್ದೀರೆಂಬದಕ್ಕೆ ರುಜುವಾತು ಅಲ್ಲಿದೆಯೇ? ನಾವೀ ಓಟದಲ್ಲಿರುವುದು ಕೇವಲ ಪ್ರಯತ್ನರಹಿತ ಚಲನೆಗಳಿಗೋ ಎಂಬಂತೆ ಅಲ್ಲ, ಬದಲಿಗೆ ಗುರಿಯ ಕೊನೆಯ ಗೆರೆಯನ್ನು ಮುಟ್ಟುವುದಕ್ಕಾಗಿ.
18. (ಎ) ನಮ್ಮ ಪಾಲಿನಲ್ಲಿ “ಗಾಳಿಯನ್ನು ಗುದ್ದುವುದು” ಯಾವುದಕ್ಕೆ ಹೋಲಿಕೆಯಾಗಿರುವುದು? (ಬಿ) ಅದು ಅನುಸರಿಸಲು ಅಪಾಯಕರ ಮಾರ್ಗವಾಗಿದೆಯೇಕೆ?
18 ಇನ್ನೊಂದು ಅಂಗಸಾಧನೆಯ ಘಟನೆಯೊಂದಿಗೆ ಹೋಲಿಕೆ ಮಾಡುತ್ತಾ, ಪೌಲನು ಮತ್ತೂ ಅಂದದ್ದು: “ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ.” (1 ಕೊರಿಂಥ 9:26ಬಿ) ಜೀವಕ್ಕಾಗಿ ನಮ್ಮ ಸ್ಪರ್ಧೆಯಲ್ಲಿ ಸೈತಾನ, ಲೋಕ ಮತ್ತು ನಮ್ಮ ಸ್ವಂತ ಅಸಂಪೂರ್ಣತೆಯು ಸೇರಿರುವ ಅನೇಕ ವೈರಿಗಳು ನಮಗಿದ್ದಾರೆ. ಪುರಾತನ ಮುಷ್ಟಿಕಾಳಗದ ಜಟ್ಟಿಯಂತೆ, ಒಳ್ಳೇಗುರಿಯ ಗುದ್ದುಗಳಿಂದ ನಾವು ಅವರನ್ನು ಹೊಡೆಯ ಶಕ್ತರಾಗಿರಬೇಕು. ಸಂತೋಷಕರವಾಗಿ, ಯೆಹೋವ ದೇವರು ಈ ಹೋರಾಟದಲ್ಲಿ ನಮ್ಮನ್ನು ತರಬೇತು ಮಾಡುತ್ತಾನೆ ಮತ್ತು ನಮಗೆ ಸಹಾಯ ಮಾಡುತ್ತಾನೆ. ತನ್ನ ವಾಕ್ಯದಲ್ಲಿ, ಬೈಬಲಾಧಾರಿತ ಪ್ರಕಾಶನಗಳಲ್ಲಿ, ಮತ್ತು ಕ್ರೈಸ್ತ ಕೂಟಗಳಲ್ಲಿ ಆತನು ಸೂಚನೆಗಳನ್ನು ಒದಗಿಸುತ್ತಾನೆ. ಆದರೆ ನಾವು ಬೈಬಲನ್ನು ಮತ್ತು ಪ್ರಕಾಶನಗಳನ್ನು ಓದಿ, ಕೂಟಗಳಿಗೆ ಹಾಜರಾದರೂ, ನಾವು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕದಿದ್ದರೆ, ನಮ್ಮ ಪ್ರಯತ್ನಗಳನ್ನು ವ್ಯರ್ಥಮಾಡುವವರಾಗಿ, “ಗಾಳಿಯನ್ನು ಗುದ್ದು” ವವರಾಗುವುದಿಲ್ಲವೇ? ಹಾಗೆ ಮಾಡುವುದು ನಮ್ಮನ್ನು ಒಂದು ಅತಿ ಅಪಾಯಕರವಾದ ಸ್ಥಾನದಲ್ಲಿ ಹಾಕುತ್ತದೆ. ನಾವೊಂದು ಹೋರಾಟವನ್ನು ನಡಿಸುತ್ತೇವೆ ಎಂದು ನಾವೆಣಿಸುತ್ತೇವೆ ಮತ್ತು ಹೀಗೆ ಸುರಕ್ಷೆಯ ತಪ್ಪುಭಾವನೆಯನ್ನು ಪಡೆಯುತ್ತೇವೆ, ಆದರೆ ನಾವು ನಮ್ಮ ವೈರಿಗಳನ್ನು ಸೋಲಿಸುವುದಿಲ್ಲ. ಆದುದರಿಂದಲೇ ಶಿಷ್ಯ ಯಾಕೋಬನು ಬುದ್ಧಿಹೇಳಿದ್ದು: “ವಾಕ್ಯದ ಪ್ರಕಾರ ನಡೆಯುವವರಾಗಿರಿ. ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ.” “ಗಾಳಿಯನ್ನು ಗುದ್ದುವದು” ನಮ್ಮ ಶತ್ರುಗಳನ್ನು ಹೇಗೆ ದುರ್ಬಲಗೊಳಿಸದೋ ಹಾಗೆಯೇ “ಕೇಳುವವರು ಮಾತ್ರವೇ ಆಗಿರುವ” ಮೂಲಕ ನಾವು ದೇವರ ಚಿತ್ತವನ್ನು ಮಾಡುತ್ತೇವೆಂಬ ಭರವಸೆಯನ್ನು ಕೊಡದು.—ಯಾಕೋಬ 1:22; 1 ಸಮುವೇಲ 15:22; ಮತ್ತಾಯ 7:24, 25.
19. ನಾವು ಹೇಗಾದರೂ ಅಯೋಗ್ಯರಾಗಿ ಪರಿಣಮಿಸದಂತೆ ಹೇಗೆ ನಿಶ್ಚಯ ಮಾಡಿಕೊಳ್ಳಬಹುದು?
19 ಕೊನೆಗೆ ಪೌಲನು ನಮಗೆ ತನ್ನ ಸಾಫಲ್ಯದ ಗುಟ್ಟನ್ನು ತಿಳಿಸಿದ್ದಾನೆ: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) ಅದೇ ರೀತಿ ನಾವು ಸಹ ನಮ್ಮ ಅಸಂಪೂರ್ಣ ಶರೀರವು ನಮ್ಮ ಮೇಲೆ ಸ್ವಾಮ್ಯ ವಹಿಸುವಂತೆ ಬಿಡುವ ಬದಲಿಗೆ ನಾವು ಅದರ ಮೇಲೆ ಸ್ವಾಮಿತ್ವವನ್ನು ಗಳಿಸಬೇಕು. ಮಾಂಸಿಕ ಪ್ರವೃತ್ತಿಗಳನ್ನು, ಹಂಬಲಿಕೆಗಳನ್ನು ಮತ್ತು ಅಭಿಲಾಷೆಗಳನ್ನು ಕಿತ್ತುಹಾಕಬೇಕು. (ರೋಮಾಪುರ 8:5, 8; ಯಾಕೋಬ 1:14, 15) ಹಾಗೆ ಮಾಡುವುದು ನೋವನ್ನು ತರಬಹುದು ಯಾಕಂದರೆ “ಜಜ್ಜಿ” ಎಂದು ಭಾಷಾಂತರಗೊಂಡ ಪದದ ಅಕ್ಷರಾರ್ಥವು ‘ಕಣ್ಣಿನ ಕೆಳಗೆ ಹೊಡೆ’ ಎಂದಾಗಿದೆ. (ಕಿಂಗ್ಡಂ ಇಂಟರ್ಲಿನಿಯರ್) ಪಾಪಪೂರ್ಣ ಶರೀರದ ಅಭಿಲಾಷೆಗಳಿಗೆ ಬಿಟ್ಟುಕೊಟ್ಟು ಸಾಯುವುದಕ್ಕಿಂತ, ಪೆಟ್ಟಿನಿಂದ ಕಪ್ಪುಗಟ್ಟಿದ ಕಣ್ಣನ್ನು ಸಹಿಸಿಕೊಂಡೋ ಎಂಬಂತೆ ಜೀವಿಸುವುದು ಲೇಸಾಗಿರದೇ?—ಹೋಲಿಸಿರಿ ಮತ್ತಾಯ 5:28, 29; 18:9; 1 ಯೋಹಾನ 2:15-17.
20. ಜೀವದೋಟದಲ್ಲಿ ನಾವು ಹೇಗೆ ಓಡುತ್ತಾ ಇದ್ದೇವೆ ಎಂದು ಪರೀಕ್ಷಿಸುವುದು ಈಗ ವಿಶೇಷ ಜರೂರಿಯದ್ದೇಕೆ?
20 ಇಂದು ನಾವು ಓಟದ ಕೊನೆಯ ಗೆರೆಗೆ ಸಮೀಪಿಸುತ್ತಾ ಇದ್ದೇವೆ. ಬಹುಮಾನಗಳು ಕೊಡಲ್ಪಡುವ ಸಮಯವು ಈಗ ಹತ್ತಿರವಾಗಿದೆ. ಅಭಿಷಿಕ್ತ ಕ್ರೈಸ್ತರಿಗೆ “ದೇವರು ಕ್ರಿಸ್ತ ಯೇಸುವಿನ ಮೂಲಕವಾಗಿ ಕೊಟ್ಟ ಮೇಲಣ ಕರೆಯ ಬಹುಮಾನ” ಇರುವುದು. (ಫಿಲಿಪ್ಪಿ 3:14, NW) ಮಹಾ ಸಮೂಹದವರಿಗೆ, ಒಂದು ಪರದೈಸ ಭೂಮಿಯಲ್ಲಿ ನಿತ್ಯ ಜೀವವು ಅದಾಗಿದೆ. ಇಷ್ಟೆಲ್ಲಾ ಪಣವು ಮುಂದಿರಲಾಗಿ, ನಾವು “ಅಯೋಗ್ಯರೆನಿಸಿಕೊಳ್ಳದೆ” ಇರುವಂಥ ನಿರ್ಣಯವನ್ನು ಪೌಲನಂತೆ ಮಾಡೋಣ. ನಮ್ಮಲ್ಲಿ ಪ್ರತಿಯೊಬ್ಬನು ಈ ಅಪ್ಪಣೆಯನ್ನು ಹೃದಯಕ್ಕೆ ತಕ್ಕೊಳ್ಳುವಂಥಾಗಲಿ: “ನೀವೂ ಬಿರುದನ್ನು [ಬಹುಮಾನವನ್ನು, NW] ಪಡಕೊಳ್ಳಬೇಕೆಂತಲೇ ಓಡಿರಿ.”—1 ಕೊರಿಂಥ 9:24, 27.
ನೀವು ನೆನಪಿಸಬಲ್ಲಿರೋ?
▫ ಕ್ರೈಸ್ತನ ಜೀವಿತವನ್ನು ಒಂದು ಓಟಕ್ಕೆ ಹೋಲಿಸುವುದೇಕೆ ಯೋಗ್ಯವು?
▫ ಜೀವದೋಟವು ಹೇಗೆ ಕಾಲೋಟಕ್ಕಿಂತ ಬೇರೆಯಾಗಿದೆ?
▫ ನಾವು ಎಡೆಬಿಡದೆ ಮತ್ತು “ಎಲ್ಲಾ ವಿಷಯಗಳಲ್ಲಿ” ಆತ್ಮ ಸಂಯಮವನ್ನು ತೋರಿಸಬೇಕು ಏಕೆ?
▫ ಒಬ್ಬನು “ಅನಿಶ್ಚಯದಿಂದ” ಓಡದಿರುವುದು ಹೇಗೆ?
▫ ಕೇವಲ “ಗಾಳಿಯನ್ನು ಗುದ್ದುವುದು” ಏಕೆ ಅಪಾಯಕಾರಿಯು?
[ಪುಟ 16 ರಲ್ಲಿರುವ ಚಿತ್ರ]
ವಿಜೇತನ ಕಿರೀಟ, ಹಾಗೂ ಮಹಿಮೆ ಮತ್ತು ಗೌರವವು, ಬಾಡಿಹೋಗುವಂತಹದ್ದಾಗಿದೆ