ಅನುಕರಿಸಲಿಕ್ಕಾಗಿ ದೈನ್ಯದ ಮಾದರಿಗಳು
“ನಿನ್ನ ಕೃಪಾಕಟಾಕ್ಷವು [ದೈನ್ಯವು, NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.”—ಕೀರ್ತನೆ 18:35.
1. ವಾಚ್ ಟವರ್ ಸೊಸೈಟಿಯ ಒಬ್ಬ ಮಾಜಿ ಅಧ್ಯಕ್ಷರಲ್ಲಿ ದೈನ್ಯದ ಯಾವ ರುಜುವಾತನ್ನು ಕಾಣಸಾಧ್ಯವಿತ್ತು?
ಆರು ಅಡಿಗಿಂತಲೂ ಹೆಚ್ಚು ಎತ್ತರ ಮತ್ತು 90 ಕಿಲೊಗ್ರಾಮ್ಗಳಿಗಿಂತಲೂ ಹೆಚ್ಚು ಭಾರವಿದ್ದ ಜೋಸೆಫ್ ಎಫ್. ರಥರ್ಫರ್ಡರಿಗೆ ಗಂಭೀರವಾದ ಸಮಕ್ಷಮವಿತ್ತು. ಪ್ರಭಾವಯುಕ್ತವಾದ ಧ್ವನಿಯೂ ಅವರಿಗಿತ್ತು, ಅವರದನ್ನು ಯೆಹೋವನ ನಾಮವನ್ನು ಹಿಂದೆಂದೂ ಜ್ಞಾತವಾಗದ ರೀತಿಯಲ್ಲಿ ಪ್ರಸಿದ್ಧಪಡಿಸಲು ಉಪಯೋಗಿಸಿದರು ಮಾತ್ರವೇ ಅಲ್ಲ, ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರ ಧರ್ಮವು “ಒಂದು ಪಾಶ ಮತ್ತು ತಂತ್ರ” ಎಂದು ಕರೆದು ಅವರ ಕಪಟತನವನ್ನು ಬಯಲುಪಡಿಸಲೂ ಉಪಯೋಗಿಸಿದರು. ಆದರೆ ಅವರ ಭಾಷಣಗಳು ಅಷ್ಟು ಪ್ರಭಾವಿತವಾಗಿದ್ದಾಗ್ಯೂ, ಮುಖ್ಯಕಾರ್ಯಾಲಯದ ಬೆತೆಲ್ ಕುಟುಂಬದೊಂದಿಗೆ ಅವರು ಪ್ರಾರ್ಥಿಸುವಾಗ, ತಂದೆಯೊಂದಿಗೆ ಮಾತನಾಡುವ ಚಿಕ್ಕ ಬಾಲಕನಂತೆ ಧ್ವನಿಸುತ್ತಿದ್ದು, ತನ್ನ ನಿರ್ಮಾರ್ಣಿಕನೊಂದಿಗೆ ಅವರ ಆಪ್ತ ಸಂಬಂಧ ಮತ್ತು ಅವರ ದೈನ್ಯ ಎರಡಕ್ಕೂ ರುಜುವಾತನ್ನೀಯುತ್ತಿತ್ತು. ಹೌದು, ಒಂದು ಚಿಕ್ಕ ಮಗುವು ಹೇಗೋ ಹಾಗೆ ಅವರು ದೀನರಾಗಿದ್ದರು.—ಮತ್ತಾಯ 18:3, 4.
2. ಯಾವ ವಿಶಿಷ್ಟ ಸಂಬಂಧದಲ್ಲಿ ಯೆಹೋವನ ಸೇವಕರು ಲೋಕದ ವ್ಯಕ್ತಿಗಳೊಂದಿಗೆ ಗಮನಾರ್ಹ ವೈದೃಶ್ಯದಲ್ಲಿ ನಿಲ್ಲುತ್ತಾರೆ?
2 ಯೆಹೋವ ದೇವರ ನಿಜ ಸೇವಕರೆಲ್ಲರೂ ದೀನರೆಂಬುದು ನಿಸ್ಸಂಶಯ. ಈ ವಿಷಯದಲ್ಲಿ ಅವರು, ಲೋಕದ ಜನರೊಂದಿಗೆ, ಗಮನಾರ್ಹ ರೀತಿಯಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಲೋಕವು ದುರಹಂಕಾರದ ವ್ಯಕ್ತಿಗಳಿಂದ ತುಂಬಿದೆ. ಉಚ್ಚರೂ ಪ್ರಬಲರೂ, ಧನಿಕರೂ ವಿದ್ಯಾವಂತರೂ, ಮತ್ತು ಅನೇಕ ಬಡವರು ಮತ್ತು ಬೇರೆ ರೀತಿಯಲ್ಲಿ ಪ್ರತಿಕೂಲ ಸ್ಥಿತಿಯಲ್ಲಿ ಸಿಕ್ಕಿರುವವರು ಸಹ ದುರಹಂಕಾರವುಳ್ಳವರಾಗಿರುತ್ತಾರೆ.
3. ದುರಹಂಕಾರದ ಫಲಗಳ ಕುರಿತು ಏನು ಹೇಳ ಸಾಧ್ಯವಿದೆ?
3 ದುರಹಂಕಾರವು ಬಹಳಷ್ಟು ಜಗಳ ಮತ್ತು ದುರವಸ್ಥೆಯನ್ನು ಉಂಟುಮಾಡುತ್ತದೆ. ನಿಶ್ಚಯವಾಗಿ ವಿಶ್ವದ ಎಲ್ಲಾ ಸಂಕಟವು ಉಂಟಾದದ್ದು, ಒಬ್ಬ ನಿರ್ದಿಷ್ಟ ದೇವದೂತನು ನಿರ್ಮಾಣಿಕನಾದ ಯೆಹೋವ ದೇವರಿಗೆ ಅದ್ವಿತೀಯವಾಗಿ ಸಲ್ಲತಕ್ಕ ರೀತಿಯಲ್ಲಿ ಆರಾಧಿಸಲ್ಪಡ ಬಯಸುತ್ತಾ, ದುರಹಂಕಾರಿಯಾಗಿ ಪರಿಣಮಿಸಿದ್ದರಿಂದಲೇ. (ಮತ್ತಾಯ 4:9, 10) ಅದಲ್ಲದೆ, ತನ್ನನ್ನು ಪಿಶಾಚನೂ ಸೈತಾನನೂ ಆಗಿ ಮಾಡಿದ ಆತನು, ಮೊದಲನೆಯ ಸ್ತ್ರೀಯಾದ ಹವ್ವಳ ದುರಹಂಕಾರಕ್ಕೆ ಅಪ್ಪೀಲು ಮಾಡುವುದರ ಮೂಲಕ ಮೋಸಗೊಳಿಸುವುದರಲ್ಲಿ ಯಶಸ್ವಿಯಾದನು. ನಿಷಿದ್ಧವಾದ ಹಣ್ಣನ್ನು ತಿನ್ನುವಲ್ಲಿ, ಅವಳು ಒಳ್ಳೇಯದರ ಮತ್ತು ಕೆಟ್ಟದರ ಭೇದವನ್ನು ಅರಿತವಳಾಗಿ, ದೇವರಂತೆ ಆಗುವಳೆಂದು ಆತನು ವಚನಕೊಟ್ಟನು. ಅವಳು ನಮ್ರಳಾಗಿದ್ದಲ್ಲಿ, “ದೇವರಂತೆ ಆಗುವುದು ನನಗೇಕೆ ಬೇಕು?” ಎಂದು ಉತ್ತರಿಸುತ್ತಿದ್ದಳು. (ಆದಿಕಾಂಡ 3:4, 5) ಮಾನವ ಕುಲವು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ನೈತಿಕವಾಗಿ ಇರುವ ಕೀಳಾದ ಸ್ಥಿತಿಯನ್ನು ನಾವು ಪರಿಗಣಿಸುವಲ್ಲಿ, ಮಾನವರು ದುರಹಂಕಾರಿಗಳಾಗಿರುವುದು ಅದೆಷ್ಟು ಅಕ್ಷಮ್ಯವು! ಯೆಹೋವನು “ಗರ್ವ, ಅಹಂಭಾವ” ವನ್ನು ಹಗೆಮಾಡುತ್ತಾನೆಂದು ನಾವು ಓದುವದರಲ್ಲೇನೂ ಆಶ್ಚರ್ಯವಿಲ್ಲ! (ಜ್ಞಾನೋಕ್ತಿ 8:13) ದೇವರ ವಾಕ್ಯವಾದ ಬೈಬಲ್ನಲ್ಲಿ ಕಂಡುಬರುವ ದೈನ್ಯದ ಮಾದರಿಗಳು ದುರಹಂಕಾರಿಗಳೆಲ್ಲರೊಂದಿಗೆ ಗಮನಾರ್ಹ ವೈದೃಶ್ಯದಲ್ಲಿವೆ.
ಯೆಹೋವ ದೇವರು ದೀನನಾಗಿದ್ದಾನೆ
4. ಯೆಹೋವನು ದೀನನಾಗಿದ್ದಾನೆಂದು ಯಾವ ಶಾಸ್ತ್ರ ವಚನಗಳು ತೋರಿಸುತ್ತವೆ?
4 ಯೆಹೋವ ದೇವರು—ಮಹೋನ್ನತನು, ವಿಶ್ವದ ಪರಮಾಧಿಕಾರಿ, ಶಾಶ್ವತ ರಾಜನು—ದೀನನಾಗಿರುತ್ತಾನೆ. (ಆದಿಕಾಂಡ 14:22) ಅದು ಹಾಗಿರ ಶಕ್ಯವೋ? ಖಂಡಿತವಾಗಿಯೂ ಹೌದು! ಕೀರ್ತನೆ 18:35 ರಲ್ಲಿ ದಾಖಲೆಯಾದ ಪ್ರಕಾರ, ದಾವೀದನು ಹೇಳಿದ್ದು: “ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು [ದೈನ್ಯ, NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” ಯೆಹೋವನ ದೈನ್ಯವೇ ದಾವೀದನಾದ ತನ್ನನ್ನು ದೊಡ್ಡಸ್ತಿಕೆಯವನನ್ನಾಗಿ ಮಾಡಿತು ಎಂಬ ಪ್ರಶಸ್ತಿಯನ್ನು ರಾಜ ದಾವೀದನು ಕೊಟ್ಟಿದ್ದಾನೆ. ಅನಂತರ ಪುನಃ, ಯೆಹೋವನು “ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ [ತಗ್ಗಿನಡೆಯುತ್ತಾನೆ, NW]” ಎಂದು ಕೀರ್ತನೆ 113:6 ರಲ್ಲಿ ನಾವು ಓದುತ್ತೇವೆ. ಇತರ ಭಾಷಾಂತರಗಳು “ಮುಂದಕ್ಕೆ ಬಗ್ಗಿ ನೋಡುತ್ತಾನೆ,” (ನ್ಯೂ ಇಂಟರ್ನ್ಯಾಷನಲ್ ವರ್ಷನ್) “ಅಷ್ಟು ಕೆಳಗೆ ನೋಡಲು ದೊಡ್ಡ ಮನಸ್ಸು ಮಾಡುತ್ತಾನೆ,” ಎಂದು ಹೇಳುತ್ತವೆ.—ದ ನ್ಯೂ ಇಂಗ್ಲಿಷ್ ಬೈಬಲ್.
5. ಯೆಹೋವನ ನಮ್ರತೆಗೆ ಯಾವ ಘಟನೆಗಳು ಸಾಕ್ಷಿಕೊಡುತ್ತವೆ?
5 ದುಷ್ಟ ನಗರಗಳಾದ ಸೊದೋಮ್ ಮತ್ತು ಗೊಮೋರಗಳನ್ನು ನಾಶಮಾಡಲು ಉದ್ದೇಶಿಸಿದಾಗ ಆತನ ನೀತಿಯನ್ನು ಪ್ರಶ್ನಿಸಲು ಅಬ್ರಹಾಮನಿಗೆ ಅನುಮತಿಸುತ್ತಾ, ಅವನೊಂದಿಗೆ ವ್ಯವಹಾರ ಮಾಡಿದ ರೀತಿಯಲ್ಲಿ ಯೆಹೋವ ದೇವರು ನಿಶ್ಚಯವಾಗಿ ತಗ್ಗುತನ ತೋರಿಸಿದನು.a (ಆದಿಕಾಂಡ 18:23-32) ಮತ್ತು ಇಸ್ರಾಯೇಲ್ ಜನಾಂಗವನ್ನು—ಒಮ್ಮೆ ವಿಗ್ರಹಾರಾಧನೆಗಾಗಿ ಮತ್ತೊಮ್ಮೆ ದಂಗೆಗಾಗಿ—ನಾಶಮಾಡುವ ತನ್ನ ಮನಸ್ಸನ್ನು ವ್ಯಕ್ತಪಡಿಸಿದಾಗ, ಮೋಶೆಯು ಪ್ರತಿ ಸಲ, ತಾನು ಇನ್ನೊಬ್ಬ ಮನುಷ್ಯನ ಸಂಗಡ ಮಾತಾಡುತ್ತಾನೋ ಎಂಬಂತೆ ಯೆಹೋವನೊಂದಿಗೆ ವಿವೇಚನೆ ಮಾಡಿದನು. ಪ್ರತಿ ಸಲ ಯೆಹೋವನು ಸಮ್ಮತಿ ಸೂಚಕವಾಗಿ ಪ್ರತಿಕ್ರಿಯಿಸಿದನು. ಆತನ ಜನರಾದ ಇಸ್ರಾಯೇಲ್ಯರ ಸಂಬಂಧದಲ್ಲಿ ಮೋಶೆಯ ವಿಜ್ಞಾಪನೆಗಳನ್ನು ಅನುಗ್ರಹಿಸುವುದು ಆತನಲ್ಲಿದ್ದ ದೈನ್ಯವನ್ನು ತೋರಿಸಿಕೊಟ್ಟಿತು. (ವಿಮೋಚನಕಾಂಡ 32:9-14; ಅರಣ್ಯಕಾಂಡ 14:11-20) ವ್ಯಕ್ತಿಯಿಂದ ವ್ಯಕ್ತಿಗೋ ಎಂಬಂತೆ ಮಾನವರೊಂದಿಗೆ ದೈನ್ಯದಿಂದ ವ್ಯವಹರಿಸಿದ ಯೆಹೋವನ ಇತರ ಮಾದರಿಗಳು, ನ್ಯಾಯಸ್ಥಾಪಕರು 6:36-40 ಮತ್ತು ಯೋನ 4:9-11 ರಲ್ಲಿ ದಾಖಲೆಯಾಗಿರುವ ಪ್ರಕಾರ, ಗಿದ್ಯೋನ್ ಮತ್ತು ಯೋನರೊಂದಿಗೆ ಆತನ ಸಂಬಂಧಗಳಲ್ಲಿ ಕಾಣಲ್ಪಡುತ್ತವೆ.
6. ಯೆಹೋವನ ಯಾವ ಗುಣಲಕ್ಷಣವು ಆತನ ದೈನ್ಯವನ್ನು ಇನ್ನಷ್ಟು ಪ್ರಕಟಪಡಿಸುತ್ತದೆ?
6 ವಾಸ್ತವಾಗಿ, ಕಡಿಮೆ ಪಕ್ಷ ಒಂಬತ್ತು ಸಲ, ಯೆಹೋವನು “ದೀರ್ಘಶಾಂತನು” ಎಂದು ಹೇಳಲಾಗಿದೆ.b ಅಸಂಪೂರ್ಣ ಮಾನವ ಜೀವಿಗಳೊಂದಿಗೆ ಸಹಸ್ರಾರು ವರ್ಷಗಳಿಂದ ವ್ಯವಹರಿಸುವಲ್ಲಿ ಯೆಹೋವನು ದೀರ್ಘಶಾಂತನು, ಮಂದ ಕ್ರೋಧಿ ಆಗಿರುವುದು ಆತನ ದೀನಭಾವಕ್ಕೆ ಇನ್ನೊಂದು ರುಜುವಾತಾಗಿರುತ್ತದೆ. ಅಹಂಕಾರಿಗಳಾದ ಜನರು ತಾಳ್ಮೆ ತಪ್ಪುವವರೂ, ಶೀಘ್ರಕೋಪಿಗಳೂ ಆಗಿದ್ದು, ದೀರ್ಘಶಾಂತರಿಗಿಂತ ಎಷ್ಟೋ ಬೇರೆಯಾಗಿದ್ದಾರೆ. ಅಸಂಪೂರ್ಣ ಮಾನವರ ದುರಹಂಕಾರವನ್ನು ಯೆಹೋವನ ದೈನ್ಯವು ಹೇಗೆ ಅಸಂಬದ್ಧವನ್ನಾಗಿ ಮಾಡುತ್ತದೆ! ‘ದೇವರ ಪ್ರಿಯ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಕರಿಸುವವರಾಗಿರು’ ವಂತೆ ನಮಗೆ ಹೇಳಲ್ಪಟ್ಟಿರುವುದರಿಂದ, ಆತನು ದೀನನಾಗಿರುವಂತೆ ನಾವೂ ದೀನರಾಗಿ ಇರತಕ್ಕದ್ದು.—ಎಫೆಸ 5:1.
ಕ್ರಿಸ್ತನ ದೈನ್ಯದ ಮಾದರಿ
7, 8. ಯೇಸು ಕ್ರಿಸ್ತನ ದೀನಭಾವದ ಕುರಿತು ಶಾಸ್ತ್ರವಚನಗಳು ಏನು ಹೇಳುತ್ತವೆ?
7 ನಮಗೆ ಅನುಕರಿಸಲಿಕ್ಕಿರುವ ದೈನ್ಯದ ಅತ್ಯಂತ ಗಮನಾರ್ಹ ಮಾದರಿಗಳಲ್ಲಿ ಎರಡನೆಯದು 1 ಪೇತ್ರ 2:21 ರಲ್ಲಿ ತಿಳಿಸಲ್ಪಟ್ಟಿದೆ: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ನಿಮಗೋಸ್ಕರ ಬಾಧೆಯನ್ನು ಅನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” ಮನುಷ್ಯನಾಗಿ ಭೂಮಿಗೆ ಬರುವ ಬಹಳ ಮುಂಚಿತವಾಗಿಯೇ, ಜೆಕರ್ಯ 9:9 ರಲ್ಲಿ ಅವನ ಕುರಿತು ಹೀಗೆ ಪ್ರವಾದಿಸಲ್ಪಟ್ಟಿತ್ತು: “ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು; ಸುರಕ್ಷಿತನು; ಶಾಂತಗುಣವುಳ್ಳವ [ದೀನ, NW] ನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.” ಯೇಸು ಅಹಂಕಾರವುಳ್ಳವನಾಗಿದ್ದಲ್ಲಿ, ಒಂದು ಭಕ್ತಿಯ ಕ್ರಿಯೆಗಾಗಿ ವಿನಿಮಯದಲ್ಲಿ ಪಿಶಾಚನ ನೀಡಿಕೆಯಾದ ಲೋಕದ ರಾಜ್ಯಗಳನ್ನೆಲ್ಲಾ ಸ್ವೀಕರಿಸಶಕ್ತನಾಗಿದ್ದನು. (ಮತ್ತಾಯ 4:9, 10) ತನ್ನ ಬೋಧನೆಗಾಗಿ ಎಲ್ಲಾ ಪ್ರಶಸ್ತಿಯನ್ನು ಯೆಹೋವನಿಗೆ ವಹಿಸಿಕೊಡುವ ಮೂಲಕ ಸಹ ಅವನು ದೈನ್ಯವನ್ನು ತೋರಿಸುತ್ತಾ, ಅಂದದ್ದು: “ನೀವು ಮನುಷ್ಯಕುಮಾರನನ್ನು ಎತ್ತರದಲ್ಲಿಟ್ಟಾಗ ಇವನೇ ಆತನೆಂದೂ ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನೆಂದೂ ನನ್ನ ವಿಷಯವಾಗಿ ನಿಮಗೆ ತಿಳಿಯುವದು.”—ಯೋಹಾನ 8:28.
8 ಅವನು ತನ್ನನ್ನು ಆಲಿಸುವವರಿಗೆ ಯುಕ್ತವಾಗಿಯೇ ಹೀಗನ್ನಶಕ್ತನಾಗಿದ್ದನು: “ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.” (ಮತ್ತಾಯ 11:29) ಮತ್ತು ಮನುಷ್ಯನಾಗಿ ಅವರೊಂದಿಗಿದ್ದ ಆ ಕಡೆಯ ಸಂಜೆಯಲ್ಲಿ ತನ್ನ ಅಪೊಸ್ತಲರ ಪಾದಗಳನ್ನು ತೊಳೆದ ಮೂಲಕ ದೈನ್ಯದ ಎಂಥ ಒಂದು ಉತ್ತಮ ಮಾದರಿಯನ್ನು ಆತನಿಟ್ಟನು! (ಯೋಹಾನ 13:3-5) ಯೇಸು ಕ್ರಿಸ್ತನನ್ನು ಒಂದು ಮಾದರಿಯಾಗಿ ಉದಾಹರಿಸುತ್ತಾ, ಅಪೊಸ್ತಲ ಪೌಲನು ಫಿಲಿಪ್ಪಿ 2:3-8 ರಲ್ಲಿ, ಕ್ರೈಸ್ತರಿಗೆ “ದೀನಭಾವ” ಉಳ್ಳವರಾಗಿರುವಂತೆ ಅತಿ ತಕ್ಕದಾಗಿಯೇ ಬುದ್ಧಿವಾದ ನೀಡುತ್ತಾನೆ: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲೆನ್ಲು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ತನ್ನ ಜೀವಿತದ ಮಹಾನ್ ಸಂಕಟವನ್ನು ಎದುರಿಸಿದಾಗ, ಅವನು ದೀನಭಾವದಿಂದ ತನ್ನ ತಂದೆಗೆ ಪ್ರಾರ್ಥಿಸಿದ್ದು: “ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” (ಮತ್ತಾಯ 26:39) ನಿಶ್ಚಯವಾಗಿ, ಆತನ ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ಹಿಂಬಾಲಿಸುತ್ತಾ, ಯೇಸು ಕ್ರಿಸ್ತನನ್ನು ನಾವು ಅನುಕರಿಸುವವರಾಗಿರಬೇಕಾದರೆ, ನಾವು ದೀನರಾಗಿರಲೇ ಬೇಕು.
ಅಪೊಸ್ತಲ ಪೌಲನು—ದೈನ್ಯದ ಒಂದು ಉತ್ತಮ ಮಾದರಿ
9-12. ಅಪೊಸ್ತಲ ಪೌಲನು ಯಾವ ರೀತಿಗಳಲ್ಲಿ ದೈನ್ಯದ ಒಂದು ಉತ್ತಮ ಮಾದರಿಯನ್ನಿಟ್ಟನು?
9 ಅಪೊಸ್ತಲ ಪೌಲನು ಬರೆದದ್ದು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1) ಅಪೊಸ್ತಲ ಪೌಲನು ದೀನಭಾವವುಳ್ಳವನಾಗಿರುವ ಮೂಲಕ ಯೇಸು ಕ್ರಿಸ್ತನನ್ನು ಅನುಸರಿಸಿ, ಆ ಮೂಲಕ ನಮಗೆ ಅನುಕರಿಸಲು ದೈನ್ಯದ ಇನ್ನೊಂದು ಮಾದರಿಯನ್ನಿಟ್ಟನೋ? ಅತಿ ಖಂಡಿತವಾಗಿಯೂ ಅವನಿಟ್ಟನು. ಪ್ರಥಮತಃ, ತಾನು ಯೇಸು ಕ್ರಿಸ್ತನ ದಾಸನು ಎಂಬದನ್ನು ದೈನ್ಯದಿಂದ ಅವನು ಅಂಗೀಕರಿಸಿದನು. (ಫಿಲಿಪ್ಪಿ 1:1) ‘ಬಹು ನಮ್ರತೆಯಿಂದಲೂ ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೆನು. ಇದರಲ್ಲಿ ಯೆಹೂದ್ಯರ ಒಳಸಂಚುಗಳಿಂದ ಕಷ್ಟಗಳನ್ನು ಸಹಿಸುತ್ತಿದ್ದೆನು’ ಎಂಬುದರ ಕುರಿತು ಅವನು ಎಫೆಸದ ಹಿರಿಯರಿಗೆ ತಿಳಿಸಿದನು. (ಅ. ಕೃತ್ಯಗಳು 20:17-19) ಅವನು ದೀನನಾಗಿ ಇರದಿದ್ದಲ್ಲಿ, ರೋಮಾಪುರ 7:18, 19 ರಲ್ಲಿ ಕಂಡುಬರುವ ಮಾತುಗಳನ್ನು ಅವನೆಂದೂ ಬರೆಯುತ್ತಿರಲಿಲ್ಲ: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. . . . ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.”
10 ಒಂದನೆಯ ಕೊರಿಂಥ 2:3 ರಲ್ಲಿ ದಾಖಲೆಯಾದ ಪ್ರಕಾರ, ಪೌಲನು ಕೊರಿಂಥದ ಕ್ರೈಸ್ತರಿಗೆ ಏನನ್ನು ಬರೆದನೋ ಅದು ಸಹ ಪೌಲನ ದೈನ್ಯವನ್ನು ಸೂಚಿಸುತ್ತದೆ: “ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ ಭಯಪಡುವವನೂ ಬಹು ನಡುಗುವವನೂ ಆಗಿದ್ದೆನು.” ಕ್ರೈಸ್ತನಾಗುವ ಮುಂಚೆ ತನ್ನ ಹಿಂದಣ ಮಾರ್ಗಕ್ರಮಕ್ಕೆ ದೈನ್ಯದಿಂದ ಸೂಚಿಸುತ್ತಾ, ಅವನು ಬರೆದದ್ದು: “ಮೊದಲು ದೂಷಕನೂ ಹಿಂಸಕನೂ ಬಲಾತ್ಕಾರಿಯೂ ಆದ ನನ್ನನ್ನು . . . ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು. . . . ಆ ಪಾಪಿಗಳಲ್ಲಿ ನಾನೇ ಮುಖ್ಯನು.”—1 ತಿಮೊಥೆಯ 1:13, 15.
11 ತನ್ನ ಪ್ರಯತ್ನಗಳಲ್ಲಿ ದೊರೆತ ಎಲ್ಲಾ ಸಾಫಲ್ಯವು ಯೆಹೋವ ದೇವರಿಗೆ ಸೇರಿದುದೆಂದು ತಿಳಿಸಿರುವುದು ಅವನ ದೈನ್ಯವನ್ನು ಇನ್ನಷ್ಟು ಸೂಚಿಸುತ್ತದೆ. ತನ್ನ ಶುಶ್ರೂಷೆಯ ಕುರಿತು ಅವನು ಬರೆದದ್ದು: “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳಿಸುತ್ತಾ ಬಂದವನು ದೇವರು. ಹೀಗಿರಲಾಗಿ ನೆಡುವವನಾಗಲಿ ನೀರುಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳಸುವ ದೇವರೇ ವಿಶೇಷವಾದವನು.” (1 ಕೊರಿಂಥ 3:6, 7) ಎಫೆಸ 6:18-20 ರಲ್ಲಿ ನಾವು ಓದುವ ಪ್ರಕಾರ, ಅವನು ಒಂದು ಒಳ್ಳೇ ಸಾಕ್ಷಿಯನ್ನು ಕೊಡಲಾಗುವಂತೆ ಸಹೋದರರು ಅವನಿಗಾಗಿ ಪ್ರಾರ್ಥಿಸುವಂತೆಯೂ ಅವನು ಕೇಳಿಕೊಂಡನು: “ನನಗೋಸ್ಕರ ಸಹ ಪ್ರಾರ್ಥನೆ ಮಾಡಿರಿ. ನಾನು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಾರ್ಥವನ್ನು ಭಯವಿಲ್ಲದೆ ತಿಳಿಸುವದಕ್ಕೆ ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.”
12 ಬೇರೆ ಅಪೊಸ್ತಲರೊಂದಿಗೆ ಅವನು ಸಹಕರಿಸಿದ ರೀತಿಯಲ್ಲಿ ಸಹ ಪೌಲನು ತನ್ನ ದೈನ್ಯವನ್ನು ತೋರಿಸಿದನು: “ಯಾಕೋಬ ಕೇಫ ಯೋಹಾನರು . . . ನನಗೂ ಬಾರ್ನಬನಿಗೂ ಬಲಗೈಕೊಟ್ಟು—ನೀವು ಅನ್ಯಜನರ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.” (ಗಲಾತ್ಯ 2:9) ಅದಲ್ಲದೆ ನಾಲ್ಕು ಮಂದಿ ಯುವ ಪುರುಷರ ಜೊತೆಗೆ ಮಂದಿರಕ್ಕೆ ಹೋಗಿ, ಅವರು ಒಂದು ನಿರ್ದಿಷ್ಟ ವ್ರತವನ್ನು ಪೂರೈಸುವಾಗ ಅವರ ವೆಚ್ಚಗಳನ್ನು ಪಾವತಿಮಾಡುವುದರ ಮೂಲಕ ಯೆರೂಸಲೇಮಿನ ಸಭೆಯ ಹಿರಿಯರೊಂದಿಗೆ ಸಹಕರಿಸಲು ತನಗಿರುವ ಸಿದ್ಧಮನಸ್ಸನ್ನು ಅವನು ತೋರಿಸಿದನು.—ಅ. ಕೃತ್ಯಗಳು 21:23-26.
13. ಪೌಲನ ದೈನ್ಯವನ್ನು ಅಷ್ಟು ಗಮನಾರ್ಹವಾಗಿ ಯಾವುದು ಮಾಡಿತು?
13 ಯೆಹೋವ ದೇವರಿಂದ ಎಷ್ಟು ಮಹತ್ತಾಗಿ ಅವನು ಉಪಯೋಗಿಸಲ್ಪಟ್ಟನು ಎಂಬದನ್ನು ನಾವು ಗಮನಿಸುವಾಗ, ಪೌಲನ ದೈನ್ಯವು ಇನ್ನೂ ಹೆಚ್ಚು ಗಮನಾರ್ಹವು. ಉದಾಹರಣೆಗೆ, “ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ” ಇದ್ದನು ಎಂದು ನಾವು ಓದುತ್ತೇವೆ. (ಅ. ಕೃತ್ಯಗಳು 19:11, 12) ಅದಕ್ಕಿಂತಲೂ ಹೆಚ್ಚಾಗಿ, ಅವನಿಗೆ ಅಲೌಕಿಕ ದರ್ಶನಗಳೂ ರಹಸ್ಯಗಳೂ ಕೊಡಲ್ಪಟ್ಟವು. (2 ಕೊರಿಂಥ 12:1-7) ಕ್ರೈಸ್ತ ಗ್ರೀಕ್ ಶಾಸ್ತ್ರದ (ನಿಜವಾಗಿ ಪತ್ರಗಳಾದ) 27 ಪುಸ್ತಕಗಳಲ್ಲಿ 14ನ್ನು ಬರೆಯಲು ಅವನು ಪ್ರೇರಿಸಲ್ಪಟ್ಟದ್ದನ್ನು ಸಹ ನಾವು ಅಸಡ್ಡೆಮಾಡಬಾರದು. ಇವೆಲ್ಲವೂ ಆತನನ್ನು ಅಹಂಕಾರಿಯಾಗಿ ಮಾಡಲಿಲ್ಲ. ಅವನು ದೀನನಾಗಿಯೇ ಉಳಿದನು.
ಆಧುನಿಕ ದಿನದ ಮಾದರಿಗಳು
14-16. (ಎ) ವಾಚ್ಟವರ್ ಸೊಸೈಟಿಯ ಮೊದಲನೆಯ ಅಧ್ಯಕ್ಷರು ಹೇಗೆ ದೈನ್ಯದ ಒಂದು ಉತ್ತಮ ಮಾದರಿಯಾಗಿದ್ದರು? (ಬಿ) ಅವರ ಉದಾಹರಣೆಯು ಯಾರ ಗಮನಾರ್ಹ ಮಾದರಿಯೊಂದಿಗೆ ವೈದೃಶ್ಯದಲ್ಲಿ ನಿಲ್ಲುತ್ತದೆ?
14 ಇಬ್ರಿಯರಿಗೆ 13:7 ರಲ್ಲಿ, ಅಪೊಸ್ತಲ ಪೌಲನ ಬುದ್ಧಿವಾದವನ್ನು ನಾವು ಓದುತ್ತೇವೆ: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” ಈ ಸೂತ್ರಕ್ಕೆ ಹೊಂದಿಕೆಯಲ್ಲಿ, ಆಧುನಿಕ ದಿನದ ಮಾದರಿಯಾದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೊದಲನೆಯ ಅಧ್ಯಕ್ಷರಾದ ಚಾರ್ಲ್ಸ್ ಟೇಜ್ ರಸ್ಸಲ್ರನ್ನು ಆಧುನಿಕ-ದಿನದ ಉದಾಹರಣೆಯಾಗಿ ತೆಗೆದುಕೊಂಡು, ಅವರ ನಂಬಿಕೆಯನ್ನು ನಾವು ಅನುಕರಿಸಬಹುದು. ಅವರು ಒಬ್ಬ ನಮ್ರ ಪುರುಶರಾಗಿದ್ದರೋ? ಖಂಡಿತವಾಗಿಯೂ ಆಗಿದ್ದರು! ಚೆನ್ನಾಗಿ ಅವಲೋಕಿಸಲ್ಪಟ್ಟ ಪ್ರಕಾರ, ಸುಮಾರು 3000 ಪುಟಗಳಿರುವ ಆರು ಸಂಪುಟಗಳ ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಅವರ ಪುಸ್ತಕದ ಬರವಣಿಗೆಯಲ್ಲಿ ಒಮ್ಮೆಯಾದರೂ ಅವರು ತಮ್ಮನ್ನು ಸೂಚಿಸಿ ಬರೆದಿರಲಿಲ್ಲ. ಇಂದು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಕಾಶನಗಳು ತಮ್ಮ ಲೇಖನಗಳ ಬರಹಗಾರರನ್ನು ಗುರುತಿಸದಿರುವುದರ ಮೂಲಕ ಮನುಷ್ಯರ ಕಡೆಗೆ ಗಮನವನ್ನು ಸೆಳೆಯದಿರುವ ಈ ಸೂತ್ರವನ್ನು ಅನುಸರಿಸುತ್ತವೆ.
15 ರಸ್ಸಲರು ಒಮ್ಮೆ ವಾಚ್ ಟವರ್ ನಲ್ಲಿ, ಅವರ ವಿರೋಧಕರು ಉಪಯೋಗಿಸಿದ, ಆದರೆ ತಾವು ಸ್ಪಷ್ಟವಾಗಿಗಿ ತಿರಸ್ಕರಿಸಿದ್ದ “ರಸ್ಸೆಲ್ವಾದ” ಮತ್ತು “ರಸ್ಸೇಲ್ಯ” ಎಂಬಂಥ ಹೆಸರುಗಳ ವಿಷಯ ತನಗೆ ಗೊತ್ತೇ ಇಲ್ಲವೆಂದು ಬರೆದರು. ಅವರು ಬರೆದದ್ದು: “ನಮ್ಮ ಕೆಲಸ . . . ದೀರ್ಘ ಸಮಯದಿಂದ ಚದರಿರುವ ಸತ್ಯದ ಅವಶೇಷಗಳನ್ನು ತಂದು ಕರ್ತನ ಜನರಿಗೆ ಅವನ್ನು ನೀಡುವುದೇ ಆಗಿರುತ್ತದೆ—ಹೊಸದಾಗಿ ಅಲ್ಲ, ನಮ್ಮ ಸ್ವಂತದ್ದಾಗಿ ಅಲ್ಲ, ಕರ್ತನವುಗಳಾಗಿಯೇ. ನಮ್ಮ ದೀನ ತಲಾಂತುಗಳನ್ನುಪಯೋಗಿಸಲು ಕರ್ತನು ಮೆಚ್ಚಿರುವ ಈ ಕೆಲಸವು ಒಂದು ಪುನರ್ರಚನೆ, ಕ್ರಮಪಡಿಸುವಿಕೆ, ಸರಿಹೊಂದಿಸುವಿಕೆಯ ಕೆಲಸವಾಗಿದೆಯಲ್ಲದೆ ಸಕ್ವಲ್ಪನೆಯಿಂದ ಉತ್ಪತ್ತಿಯಾದ ಕೆಲಸವಲ್ಲ.” ನಿಜವಾಗಿಯೂ ಅವರು, 1 ಕೊರಿಂಥ 3:5-7 ರಲ್ಲಿ ಕಂಡುಬರುವ ಅಪೊಸ್ತಲ ಪೌಲನ ಮನೋಭಾವನೆಯನ್ನು ವ್ಯಕ್ತಪಡಿಸಿದರು.
16 ಅವರ ಮನೋಭಾವವು ಚಾರ್ಲ್ಸ್ ಡಾರ್ವಿನ್ನಿಗಿಂತ ತೀರ ವಿರುದ್ಧವಾದದ್ದಾಗಿತ್ತು. ಡಾರ್ವಿನ್ 1859 ರಲ್ಲಿ, ತನ್ನ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕದ ಮೊದಲ ಆವೃತ್ತಿಯಲ್ಲಿ, ವಿಕಾಸದ ಕುರಿತು ಅವನಿಗಿಂತ ಮುಂಚಿನವರು ಏನಂದಿದ್ದರೋ ಅದನ್ನು ಅಲಕ್ಷಿಸುತ್ತಾ, ಪದೇ ಪದೇ “ನನ್ನ” ಕಲ್ಪನೆಯೆಂದು ನಿರ್ದೇಶಿಸಿದ್ದನು. ಆ ಶತಮಾನದ ಒಬ್ಬ ಖ್ಯಾತ ಲೇಖಕ, ಸಾಮ್ಯುವೆಲ್ ಬಟ್ಲರ್, ವಿಕಾಸವಾದದ ಆಧಾರಕಲ್ಪನೆಯನ್ನು ಮುಂಚೆ ಬೇರೆ ಅನೇಕರು ಮುಂದಕ್ಕೆ ತಂದಿದ್ದರೆಂದು ತೋರಿಸುತ್ತಾ, ಅದು ಡಾರ್ವಿನನ ಉತ್ಪತ್ತಿ ಎಷ್ಟು ಮಾತ್ರಕ್ಕೂ ಅಲ್ಲವೆಂದು ಡಾರ್ವಿನ್ನನ್ನು ನಿಂದಿಸಿದನು.
17. ಸಹೋದರ ರಥರ್ಫರ್ಡರ ದೈನ್ಯದ ಹೆಚ್ಚಿನ ಉದಾಹರಣೆಗಳಾವುವು?
17 ಆಧುನಿಕ ಸಮಯಗಳಲ್ಲಿ ಯೆಹೋವನು ಮಹತ್ತಾಗಿ ಉಪಯೋಗಿಸಿದ ಇನ್ನೊಬ್ಬ ನಂಬಿಗಸ್ತ ದೇವರ ಸೇವಕರು, ಪ್ರಾರಂಭದಲ್ಲೇ ತಿಳಿಸಿರುವ ಜೋಸೆಫ್ ಎಫ್. ರಥರ್ಫರ್ಡ್ ಆಗಿದ್ದರು. ಅವರು ಬೈಬಲ್ ಸತ್ಯದ ಮತ್ತು ವಿಶೇಷವಾಗಿ ಯೆಹೋವನ ಹೆಸರಿನ ಧೀರ ಸಮರ್ಥಕರಾಗಿದ್ದರು. ಅವರು ಜಡ್ಜ್ ರಥರ್ಫರ್ಡ್ ಎಂದು ವ್ಯಾಪಕವಾಗಿ ಖ್ಯಾತರಾಗಿದ್ದರೂ, ಹೃದಯದಲ್ಲಿ ಒಬ್ಬ ದೀನರಾದ ಪುರುಷರಾಗಿದ್ದರು. ಉದಾಹರಣೆಗೆ, 1925 ರಲ್ಲಿ ಕ್ರೈಸ್ತರು ಏನನ್ನು ನಿರೀಕ್ಷಿಸ ಸಾಧ್ಯವಿದೆ ಎಂಬದರ ಕುರಿತು ಒಮ್ಮೆ ಅವರು ಕೆಲವು ಅಧಿಕಾರಯುಕ್ತ ಹೇಳಿಕೆಗಳನ್ನಿತ್ತರು. ಘಟನೆಗಳು ಅವರ ನಿರೀಕ್ಷಣೆಗಳನ್ನು ಬೆಂಬಲಿಸಲು ತಪ್ಪಿದಾಗ, ಅವರು ದೈನ್ಯದಿಂದ ತಮ್ಮ ವಿವೇಚನಾ ಶಕ್ತಿಯ ಕೊರತೆಯನ್ನು ಬ್ರೂಕ್ಲಿನ್ ಬೆತೆಲ್ ಕುಟುಂಬಕ್ಕೆ ವ್ಯಕ್ತಪಡಿಸಿದರು. ಕೆಲವು ವಿವೇಚನೆಯಿಲ್ಲದ ಹೇಳಿಕೆಯಿಂದಾಗಿ ಜೊತೆ ಕ್ರೈಸ್ತನೊಬ್ಬನನ್ನು ನೋಯಿಸಿದ್ದಕ್ಕಾಗಿ, ಬಹಿರಂಗವಾಗಿ ಮತ್ತು ಖಾಸಗಿಯಾಗಿ ಎರಡರಲ್ಲೂ, ಸಹೋದರ ರಥರ್ಫರ್ಡರು ಮತ್ತಾಯ 5:23, 24ರ ಭಾವದಲ್ಲಿ ಕ್ಷಮೆ ಯಾಚಿಸಿರುವುದನ್ನು ತಾನು ಪದೇ ಪದೇ ಕೇಳಿದ್ದೇನೆಂದು ಅವರೊಂದಿಗೆ ಬಹಳ ಆಪ್ತ ಸಹವಾಸದಲ್ಲಿದ್ದ ಒಬ್ಬ ಅಭಿಷಿಕ್ತ ಕ್ರೈಸ್ತರು ಸಾಕ್ಷಿಯಿತ್ತರು. ಅಧಿಕಾರ ಸ್ಥಾನದಲ್ಲಿರುವ ಒಬ್ಬನಿಗೆ ತನ್ನ ಅಧೀನದಲ್ಲಿರುವವರೊಂದಿಗೆ ಕ್ಷಮೆ ಯಾಚಿಸುವುದಕ್ಕೆ ನಮ್ರತೆಯು ಬೇಕಾಗುತ್ತದೆ. ಸಹೋದರ ರಥರ್ಫರ್ಡರು, ಸಭೆಯಲ್ಲಿ, ಸಂಚಾರ ಸೇವೆಯಲ್ಲಿ ಅಥವಾ ಸೊಸೈಟಿಯ ಬ್ರಾಂಚ್ಗಳಲ್ಲೊಂದರಲ್ಲಿರುವ ಎಲ್ಲಾ ಮೇಲ್ವಿಚಾರಕರಿಗೆ ಒಂದು ಉತ್ತಮ ಉದಾಹರಣೆಯನ್ನು ಇಟ್ಟಿದ್ದಾರೆ.
18. ಸೊಸೈಟಿಯ ತೃತೀಯ ಅಧ್ಯಕ್ಷರು ಮನಸ್ಸಿನ ದೀನ ಸ್ಥಿತಿಯನ್ನು ಪ್ರಕಟಿಸುವ ಯಾವ ಹೇಳಿಕೆಯನ್ನು ಕೊಟ್ಟರು?
18 ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ತೃತೀಯ ಅಧ್ಯಕ್ಷರಾದ ನೇತನ್ ಎಚ್. ನಾರ್ ರವರು ಸಹ, ಯೆಹೋವನ ಜನರಲ್ಲಿ ಪ್ರಮುಖರಾಗಿದ್ದರೂ ತನ್ನ ಸ್ಥಾನದ ನಿಮಿತ್ತ ತಾನು ಮೇಲೇರಿಸಲ್ಪಟ್ಟಿಲ್ಲವೆಂಬ ಭಾವವನ್ನು ತೋರಿಸಿದರು. ಸಂಸ್ಥಾಪನಾ ಸಾಮರ್ಥ್ಯದಲ್ಲಿ ಮತ್ತು ಬಹಿರಂಗ ಭಾಷಣ ಕೊಡುವುದರಲ್ಲಿ ಅವರು ಅತಿಶಯಿಸಿದ್ದರೂ, ಇತರರು ಮಾಡುತ್ತಿದ್ದ ವಿಷಯಗಳಿಗಾಗಿ ಅವರಿಗೆ ಬಹಳ ಗೌರವವಿತ್ತು. ಹೀಗೆ, ಅವರೊಮ್ಮೆ ಬರವಣಿಗೆಯ ವಿಭಾಗದ ಒಬ್ಬ ಸದಸ್ಯನನ್ನು ಅವನ ಆಫೀಸಿನಲ್ಲಿ ಭೇಟಿಯಾಗಿ, ಅಂದದ್ದು: “ಅತ್ಯಂತ ಮಹತ್ವದ ಹಾಗೂ ಅತಿ ಕಷ್ಟದ ಕೆಲಸವು ನಡಿಯುತ್ತಿರುವದು ಇಲ್ಲಿಯೇ. ಆದುದರಿಂದಲೇ ನಾನದರಲ್ಲಿ ಅಷ್ಟು ಸ್ವಲ್ಪವನ್ನು ಮಾಡುತ್ತೇನೆ.” ಹೌದು, ಅವರು ಫಿಲಿಪ್ಪಿ 2:3 ರ ಬುದ್ಧಿವಾದವನ್ನು, ಅಂದರೆ ‘ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತ ಶ್ರೇಷ್ಠರೆಂದು ಎಣಿಸಬೇಕು’ ಎಂಬದನ್ನು ನಮ್ರತೆಯಿಂದ ಅನ್ವಯಿಸುತ್ತಿದ್ದರು. ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆಮಾಡುವುದು ಪ್ರಾಮುಖ್ಯವೆಂದು ಅವರು ಗಣ್ಯಮಾಡಿದ್ದರೂ, ಬೇರೆ ಕೆಲಸಗಳು ಸಹ ಪ್ರಾಮುಖ್ಯವಾಗಿದ್ದವು. ಆ ರೀತಿಯಲ್ಲಿ ಭಾವಿಸಿಕೊಳ್ಳುವುದು ಮತ್ತು ಅದನ್ನು ಅಷ್ಟು ಸ್ಪಷ್ಟವಾಗಿಗಿ ವ್ಯಕ್ತಪಡಿಸುವುದು ಅವರಿಂದ ದೈನ್ಯವನ್ನು ಕೇಳಿಕೊಂಡಿತ್ತು. ಅವರು ಎಲ್ಲರಿಗೆ, ವಿಶೇಷವಾಗಿ ಮೇಲ್ವಿಚಾರದ ಪ್ರಮುಖ ಸ್ಥಾನದಲ್ಲಿರಬಹುದಾದವರಿಗೆ, ಅನುಕರಿಸಲು ಇನ್ನೊಂದು ಉತ್ತಮ ಮಾದರಿಯಾಗಿ ಇದ್ದರು.
19, 20. (ಎ) ಸೊಸೈಟಿಯ ನಾಲ್ಕನೆಯ ಅಧ್ಯಕ್ಷರು ದೈನ್ಯದ ಯಾವ ಮಾದರಿಯನ್ನು ಇಟ್ಟರು? (ಬಿ) ನಾವು ದೈನ್ಯವನ್ನು ಅಭ್ಯಾಸಿಸುವ ವಿಷಯದಲ್ಲಿ ಮುಂದಿನ ಲೇಖನವು ಯಾವ ಸಹಾಯವನ್ನು ಕೊಡುವುದು?
19 ಸೊಸೈಟಿಯ ನಾಲ್ಕನೆಯ ಅಧ್ಯಕ್ಷರಾದ ಫ್ರೆಡ್ ಡಬ್ಲ್ಯೂ. ಫ್ರಾನ್ಜ್ ಸಹ ದೈನ್ಯದ ಒಂದು ಒಳ್ಳೇ ಉದಾಹರಣೆಯಾಗಿದ್ದರು. ಸುಮಾರು 32 ವರ್ಷಗಳ ತನಕ ಸೊಸೈಟಿಯ ಉಪಾಧ್ಯಕ್ಷರೋಪಾದಿ, ಅವರು ಪತ್ರಿಕೆಗಳಿಗಾಗಿ ಮತ್ತು ಅಧಿವೇಶನ ಕಾರ್ಯಕ್ರಮಗಳಿಗಾಗಿ ಬಹಳಷ್ಟು ಬರೆವಣಿಗೆಯನ್ನು ಮಾಡುತ್ತಿದ್ದರು; ಆದರೂ ಈ ಸಂಬಂಧದಲ್ಲಿ ಅವರು ಎಂದಿಗೂ ಪ್ರಸಿದ್ಧಿಯನ್ನು ಪಡೆಯಲು ಹವಣಿಸದೆ ತಮ್ಮನ್ನು ಯಾವಾಗಲೂ ಹಿನ್ನೆಲೆಯಲ್ಲೇ ಇಟ್ಟುಕೊಂಡರು. ತುಲನಾತ್ಮಕವಾದ ಒಂದು ಪುರಾತನ ಮಾದರಿಯನ್ನು ಉದಾಹರಿಸಬಹುದು. ಯೋವಾಬನು ರಬ್ಬಾದಲ್ಲಿ ಅಮ್ಮೋನಿಯರನ್ನು ಸೋಲಿಸಿದಾಗ, ಆ ವಿಜಯಕ್ಕಾಗಿ ಕೀರ್ತಿಯು ದಾವೀದನಿಗೆ ಸಿಗುವಂತೆ ಅವನು ಖಚಿತ ಮಾಡಿಕೊಂಡನು.—2 ಸಮುವೇಲ 12:26-28.
20 ನಿಜವಾಗಿಯೂ, ಗತಕಾಲದ ಮತ್ತು ಈಗಿನ ಅನೇಕ ಉದಾಹರಣೆಗಳು ದೀನರಾಗಿರಲಿಕ್ಕೆ ಪ್ರಬಲವಾದ ಕಾರಣಗಳನ್ನು ನಮಗೆ ಕೊಡುತ್ತವೆ. ಆದರೂ, ನಾವು ದೀನರಾಗಿರುವುದಕ್ಕೆ ಇನ್ನೂ ಅನೇಕಾನೇಕ ಕಾರಣಗಳು ಇವೆ, ಮತ್ತು ಇವು ಹಾಗೂ ನಾವು ದೀನರಾಗಿರುವುದಕ್ಕಾಗಿ ಸಹಾಯಕಗಳು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವುವು.
[ಅಧ್ಯಯನ ಪ್ರಶ್ನೆಗಳು]
a “ತಗ್ಗಿನಡೆ” ಎಂಬದು “ಶ್ರೇಷ್ಠತೆಯ ಸೋಗನ್ನು ಧರಿಸು” ಎಂಬರ್ಥದಲ್ಲಿ ಆಗಿಂದಾಗ್ಗೆ ಉಪಯೋಗಿಸಲ್ಪಡುತ್ತದೆ. ಆದರೆ ಅದರ ಮುಖ್ಯ ಅರ್ಥವು—ಮತ್ತು ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ನಲ್ಲಿ ಅದರ ಅರ್ಥವು—“ಸಡಿಲಿಸು,” “ತನ್ನ ಅಂತಸ್ತಿನ ಸುಯೋಗಗಳನ್ನು ಬಿಟ್ಟು ಕೊಡುವುದು” ಎಂದಾಗಿದೆ.—ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿ ನೋಡಿರಿ.
b ವಿಮೋಚನಕಾಂಡ 34:6; ಅರಣ್ಯಕಾಂಡ 14:18; ನೆಹೆಮೀಯ 9:17; ಕೀರ್ತನೆ 86:15; 103:8; 145:8; ಯೋವೇಲ 2:13; ಯೋನ 4:2; ನಹೂಮ 1:3.
ನಿಮಗೆ ನೆನಪಿದೆಯೇ?
▫ ದುರಹಂಕಾರದ ಫಲಗಳು ಯಾವುದಾಗಿರುತ್ತವೆ?
▫ ದೈನ್ಯದ ಅತ್ಯುತ್ತಮ ಮಾದರಿಯನ್ನಿಟ್ಟವನು ಯಾರು?
▫ ದೈನ್ಯದ ಎರಡನೆಯ ಮಹತ್ತಾದ ಮಾದರಿಯು ಯಾರೆಂದು ಯಾವುದು ತೋರಿಸುತ್ತದೆ?
▫ ಅಪೊಸ್ತಲ ಪೌಲನು ದೈನ್ಯದ ಯಾವ ಉತ್ತಮ ಉದಾಹರಣೆಯನ್ನು ಇಟ್ಟನು?
▫ ಆಧುನಿಕ ದಿನದ ದೈನ್ಯದ ಯಾವ ಪ್ರಾಮುಖ್ಯ ಮಾದರಿಗಳು ನಮಗಿವೆ?
[ಪುಟ 15 ರಲ್ಲಿರುವ ಚಿತ್ರ]
ಯೇಸು ದೈನ್ಯದ ಒಂದು ಉತ್ತಮ ಪ್ರದರ್ಶನವನ್ನು ಕೊಟ್ಟನು
[ಪುಟ 16 ರಲ್ಲಿರುವ ಚಿತ್ರ]
ಪೌಲನು ದೈನ್ಯದ ಒಂದು ಉತ್ತಮ ಮಾದರಿಯನ್ನಿಟ್ಟನು
[ಪುಟ 17 ರಲ್ಲಿರುವ ಚಿತ್ರ]
ಸಹೋದರ ರಸ್ಸಲರು ತಾವು ಬರೆದ ವಿಷಯಗಳಿಗಾಗಿ ತಮಗೆ ಪ್ರಶಸ್ತಿಯನ್ನು ಕೊಟ್ಟುಕೊಳ್ಳಲಿಲ್ಲ