ಕ್ಷಮಿಸುವವರಾಗಿರುವುದು ಏಕೆ?
ಯೆಹೂದಿ ಪಂಡಿತ ಮತ್ತು ಬರಹಗಾರನಾದ ಜೋಸೆಫ್ ಜೇಕಬ್ಸ್, ಒಮ್ಮೆ ಕ್ಷಮಾಪಣೆಯನ್ನು “ಎಲ್ಲ ನೈತಿಕ ಪಾಠಗಳಲ್ಲಿ ಅತ್ಯಂತ ಉನ್ನತ ಹಾಗೂ ಅತ್ಯಂತ ಕಠಿನ” ವಾದ ಗುಣವೆಂದು ವರ್ಣಿಸಿದನು. ನಿಶ್ಚಯವಾಗಿಯೂ, “ನಾನು ನಿನ್ನನ್ನು ಕ್ಷಮಿಸುತ್ತೇನೆ” ಎಂಬ ಪದಗಳನ್ನು ಹೇಳುವುದು ಬಹಳ ಕಷ್ಟಕರವೆಂದು ಅನೇಕರು ಕಂಡುಕೊಳ್ಳುತ್ತಾರೆ.
ಕ್ಷಮಾಪಣೆಯು, ಹಣಕ್ಕೆ ಸಮಾನವಾಗಿದೆ ಎಂದು ತೋರುತ್ತದೆ. ಅದನ್ನು ಇತರರ ಮೇಲೆ ಮುಕ್ತವಾಗಿ ಹಾಗೂ ದಯಾಪರವಾಗಿ ವ್ಯಯಿಸಸಾಧ್ಯವಿದೆ ಅಥವಾ ಸ್ವತಃ ಒಬ್ಬನಿಗಾಗಿ ಜೀನತನದಿಂದ ಕೂಡಿಡಸಾಧ್ಯವಿದೆ. ಮೊದಲಿನದು ದೈವಿಕ ಮಾರ್ಗವಾಗಿದೆ. ಕ್ಷಮಾಪಣೆಯ ಸಂಬಂಧದಲ್ಲಿ ನಾವು ವ್ಯಯಮಾಡುವ ಉದಾರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಏಕೆ? ಏಕೆಂದರೆ ದೇವರು ಇದನ್ನು ಉತ್ತೇಜಿಸುತ್ತಾನೆ ಮತ್ತು ಒಂದು ಕ್ಷಮಿಸದ, ಪ್ರತೀಕಾರದ ಆತ್ಮವು ವಿಷಯಗಳನ್ನು ಕೇವಲ ಹೆಚ್ಚು ಕೆಟ್ಟದ್ದಾಗಿ ಮಾಡಬಹುದು.
ಅನೇಕ ವೇಳೆ ಕೇಳಿಬರುವ ಮಾತುಗಳಿವು: “ನಾನು ಕೋಪಿಸಿಕೊಳ್ಳುವುದಿಲ್ಲ; ಆದರೆ ಸೇಡು ತೀರಿಸಿಕೊಳ್ಳುತ್ತೇನೆ!” ದುಃಖಕರವಾಗಿ ಇದು, ಇಂದು ಅನೇಕರ ಜೀವಿತಗಳಲ್ಲಿ ಒಂದು ಮಾರ್ಗದರ್ಶಕ ತತ್ವವಾಗಿದೆ. ಉದಾಹರಣೆಗೆ ಒಬ್ಬಾಕೆ ಸ್ತ್ರೀಯು, ಏಳು ವರ್ಷಗಳಿಗಿಂತಲೂ ಹೆಚ್ಚು ಸಮಯ ತನ್ನ ಅತಿಗ್ತೆಯೊಂದಿಗೆ ಮಾತಾಡಲು ನಿರಾಕರಿಸಿದಳು, ಯಾಕೆಂದರೆ, ಆ ಸ್ತ್ರೀಯು ಹೇಳುವಂತೆ, “ಅವಳು ನನಗೆ ನಂಬಲಾಗದಂತಹ ಮೋಸವನ್ನು ಮಾಡಿದಳು ಮತ್ತು ನಾನು ಅವಳನ್ನು ಎಂದಿಗೂ ಕ್ಷಮಿಸಲು ಶಕ್ತಳಾಗಿಲ್ಲ.” ಆದರೆ ಇಂತಹ ಮೌನ ವರ್ತನೆಯನ್ನು ಆಪಾದಿತನಿಂದ ಒಂದು ಕ್ಷಮೆಯನ್ನು ಹೊಂಚಿವಿಚಾರಿಸುವ ಸಲುವಾಗಿ ಒಂದು ಮೀಟುಗೋಲಿನಂತೆ ಯಾ ದಂಡಿಸುವ ಸಲುವಾಗಿ ಒಂದು ಶಸ್ತ್ರದಂತೆ ಬಳಸಿದಾಗ, ಅದು ಸೇಡಿಗಾಗಿರುವ ಬಯಕೆಯನ್ನು ವಿರಳವಾಗಿ ಈಡೇರಿಸುತ್ತದೆ. ಬದಲಿಗೆ, ಅದು ಸಮಗ್ರವಾದೊಂದು ದ್ವೇಷವು ಬೆಳೆಯುವಂತೆ ಅನುಮತಿಸುತ್ತಾ, ಸುಮ್ಮನೆ ವಾಗ್ವಾದವನ್ನು ಲಂಬಿಸಬಹುದು. ಕ್ಲೇಶದ ಈ ಚಕ್ರವು ಮುರಿಯಲ್ಪಡದಿದ್ದರೆ, ಪ್ರತೀಕಾರದ ಶಕ್ತಿಶಾಲಿ ಹಿಡಿತಗಳು, ಸಂಬಂಧಗಳನ್ನು ಮತ್ತು ಒಬ್ಬನ ಆರೋಗ್ಯವನ್ನು ಸಹ ಧ್ವಂಸಗೊಳಿಸಬಲ್ಲವು.
ಕ್ಷಮಿಸಲಾರದ ಮನೋವೃತ್ತಿಯ ಹಾನಿ
ವ್ಯಕ್ತಿಯೊಬ್ಬನು ಕ್ಷಮಿಸಲಾರದವನಾಗಿದ್ದರೆ, ಫಲಿಸುವ ಘರ್ಷಣೆಯು ಒತ್ತಡವನ್ನು ಸೃಷ್ಟಿಸುತ್ತದೆ. ಫಲಸ್ವರೂಪವಾಗಿ, ಒತ್ತಡವು ಗಂಭೀರವಾದ ಕಾಯಿಲೆಗಳಿಗೆ ನಡೆಸಬಲ್ಲದು. ಡಾ. ವಿಲಿಯಮ್ ಎಸ್. ಸ್ಯಾಡ್ಲರ್ ಬರೆದದ್ದು: “ಚಿಂತೆ, ಭಯ, ಘರ್ಷಣೆ, . . . ಅಹಿತಕರವಾದ ಆಲೋಚನೆ ಮತ್ತು ಅಶುದ್ಧವಾದ ಜೀವಿತಕ್ಕೆ ನೇರವಾಗಿ ಸಂಬಂಧಿಸಿರುವ ಮಾನವ ರೋಗ ಮತ್ತು ಕಷ್ಟಾನುಭವದ ಬೆರಗುಗೊಳಿಸುವ ದೊಡ್ಡ ಪ್ರತಿಶತವನ್ನು ಒಬ್ಬ ವೈದ್ಯನು ಗಣ್ಯಮಾಡುವಷ್ಟು ಸಂಪೂರ್ಣವಾಗಿ ಬೇರೆ ಯಾರೂ ಗಣ್ಯಮಾಡಸಾಧ್ಯವಿಲ್ಲ.” ನಿಜವಾಗಿಯೂ, ಹಾಗಾದರೆ, ಭಾವನಾತ್ಮಕ ಸಂಕ್ಷೋಭೆಯು ಎಷ್ಟು ಹಾನಿಯನ್ನುಂಟುಮಾಡುತ್ತದೆ? ಒಂದು ವೈದ್ಯಕೀಯ ಪ್ರಕಾಶನವು ಉತ್ತರಿಸುವುದು: “ಒಬ್ಬ ವೈದ್ಯನ ಬಳಿಗೆ ಹೋದ ಮೂರನೆಯ ಎರಡು ಭಾಗ ರೋಗಿಗಳಿಗೆ ಮಾನಸಿಕ ಒತ್ತಡದಿಂದ ಉಂಟಾದ ಯಾ ಹೆಚ್ಚಿಸಲ್ಪಟ್ಟ ಲಕ್ಷಣಗಳು ಇದ್ದವೆಂದು ಅಂಕೆಸಂಖ್ಯೆಗಳು . . . ಸೂಚಿಸಿದವು.”
ಹೌದು, ಕಡುಪು, ತೀವ್ರ ಅಸಮಾಧಾನ, ಮತ್ತು ದ್ವೇಷ ಖಂಡಿತವಾಗಿಯೂ ಹಾನಿಕಾರಕವಾಗಿರದೆ ಇರುವುದಿಲ್ಲ. ಈ ಕಟುವಾದ ಭಾವನೆಗಳು ಒಂದು ಕಾರಿನ ಒಡಲನ್ನು ಕ್ರಮೇಣ ಸವೆಯಿಸುವ ಕಿಲುಬಿನಂತಿವೆ. ಕಾರಿನ ಹೊರಭಾಗವು ಸುಂದರವಾಗಿ ಕಾಣಬಹುದಾದರೂ, ಬಣ್ಣದ ಕೆಳಗೆ ಒಂದು ನಾಶಕಾರಕ ಪ್ರಕ್ರಿಯೆಯು ಕಾರ್ಯನಡೆಸುತ್ತಾ ಇದೆ.
ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ಕರುಣೆಗೆ ಆಧಾರವು ಇರುವಾಗ ಕ್ಷಮಿಸಲು ನಿರಾಕರಿಸುವುದು ನಮ್ಮನ್ನು ಆತ್ಮಿಕವಾಗಿಯೂ ಹಾನಿಗೊಳಿಸಬಲ್ಲದು. ಯೆಹೋವ ದೇವರ ದೃಷ್ಟಿಯಲ್ಲಿ ನಾವು ಯೇಸುವಿನ ದೃಷ್ಟಾಂತದಲ್ಲಿದ್ದ ದಾಸನಂತೆ ಆಗಬಹುದು. ಆ ದಾಸನ ಬಹುದೊಡ್ಡ ಸಾಲವನ್ನು ಅವನ ಯಜಮಾನನು ಮನ್ನಿಸಿದನು. ಆದರೂ, ತನ್ನ ಜೊತೆ ದಾಸನು ತುಲನಾತ್ಮಕವಾಗಿ ಒಂದು ಅತಿ ಅಲ್ಪ ಸಾಲವನ್ನು ಮನ್ನಿಸುವಂತೆ ಅವನಲ್ಲಿ ಬೇಡಿಕೊಂಡಾಗ, ಅವನು ಕಠೋರನೂ ಕ್ಷಮಿಸಲಾರದವನೂ ಆದನು. ಅದೇ ರೀತಿಯಲ್ಲಿ ನಾವು ಕ್ಷಮಿಸಲು ಮನಸ್ಸಿಲ್ಲದವರಾಗಿದ್ದರೆ, ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸಲು ನಿರಾಕರಿಸುವನು ಎಂದು ಯೇಸು ಸ್ಪಷ್ಟಪಡಿಸಿದನು. (ಮತ್ತಾಯ 18:21-35) ಆದುದರಿಂದ ನಾವು ಕ್ಷಮಿಸದವರಾಗಿದ್ದರೆ, ಯೆಹೋವನ ಮುಂದೆ ಇರುವ ನಮ್ಮ ಶುದ್ಧವಾದ ಮನಸ್ಸಾಕ್ಷಿಯನ್ನು ಮತ್ತು ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಯನ್ನು ಸಹ ನಾವು ಕಳೆದುಕೊಳ್ಳಬಹುದು. (ಹೋಲಿಸಿ 2 ತಿಮೊಥೆಯ 1:3.) ಹಾಗಾದರೆ ನಾವು ಏನು ಮಾಡಬಲ್ಲೆವು?
ಕ್ಷಮಿಸಲು ಕಲಿಯಿರಿ
ನಿಜವಾದ ಕ್ಷಮಾಪಣೆಯು ಹೃದಯದಿಂದ ಉದ್ಭವಿಸುತ್ತದೆ. ಅದು ಅಪರಾಧಿಯ ತಪ್ಪನ್ನು ಕ್ಷಮಿಸುವುದನ್ನು ಮತ್ತು ಪ್ರತೀಕಾರಕ್ಕಾಗಿರುವ ಯಾವುದೇ ಬಯಕೆಯನ್ನು ತ್ಯಜಿಸಿಬಿಡುವುದನ್ನು ಒಳಗೊಳ್ಳುತ್ತದೆ. ಹೀಗೆ, ಅಂತಿಮ ನ್ಯಾಯ ಮತ್ತು ಸಂಭಾವ್ಯ ಪ್ರತೀಕಾರವು ಯೆಹೋವನ ಕೈಗಳಲ್ಲಿ ಬಿಡಲ್ಪಡುತ್ತದೆ.—ರೋಮಾಪುರ 12:19.
“ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿ” ಇರುವುದರಿಂದ, ಕ್ಷಮಿಸಬೇಕಾದ ಸಮಯದಲ್ಲೂ ಹೃದಯವು ಯಾವಾಗಲೂ ಕ್ಷಮಾಪಣೆಯ ಕಡೆಗೆ ಬಾಗುವ ಪ್ರವೃತ್ತಿಯನ್ನು ಹೊಂದಿರುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. (ಯೆರೆಮೀಯ 17:9) ಯೇಸು ತಾನೇ ಹೇಳಿದ್ದು: “ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.”—ಮತ್ತಾಯ 15:19.
ಕೃತಜ್ಞತಾಸೂಚಕವಾಗಿ, ನಮ್ಮ ಹೃದಯವು ಸರಿಯಾದದ್ದನ್ನು ಮಾಡಲಿಕ್ಕಾಗಿ ತರಬೇತುಗೊಳಿಸಲ್ಪಡಬಲ್ಲದು. ಹಾಗಿದ್ದರೂ, ನಮಗೆ ಬೇಕಾದ ತರಬೇತಿಯು ಉನ್ನತವಾದೊಂದು ಮೂಲದಿಂದ ಬರಬೇಕು. ನಾವು ಅದನ್ನು ಏಕಾಂಗಿಯಾಗಿ ಮಾಡಸಾಧ್ಯವಿಲ್ಲ. (ಯೆರೆಮೀಯ 10:23) ದೈವಿಕವಾಗಿ ಪ್ರೇರಿತನಾದ ಕೀರ್ತನೆಗಾರನು ಇದನ್ನು ಗುರುತಿಸಿದನು ಮತ್ತು ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದನು. ಪ್ರಾರ್ಥನೆಯಲ್ಲಿ ಅವನು ಯೆಹೋವನನ್ನು ಬೇಡಿಕೊಂಡನು: “ನಿನ್ನ ನಿಬಂಧನೆಗಳನ್ನು ನನಗೆ ಉಪದೇಶಿಸು. ನಿನ್ನ ನೇಮಗಳ ದಾರಿಯನ್ನು ತಿಳಿಯಪಡಿಸು.”—ಕೀರ್ತನೆ 119:26, 27.
ಇನ್ನೊಂದು ಕೀರ್ತನೆಗನುಸಾರ, ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ಯೆಹೋವನ ‘ದಾರಿಯನ್ನು ತಿಳಿದುಕೊಂಡನು.’ ಅದನ್ನು ಅವನು ಸಾಕ್ಷಾತ್ತಾಗಿ ಅನುಭವಿಸಿದನು ಮತ್ತು ಅದರಿಂದ ಕಲಿತನು. ಆದಕಾರಣ, ಅವನು ಹೀಗೆ ಹೇಳಶಕ್ತನಾದನು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.”—ಕೀರ್ತನೆ 103:8, 13.
ರಾಜ ದಾವೀದನು ಕಲಿತಂತೆ ನಾವು ಕಲಿಯಬೇಕು. ಪ್ರಾರ್ಥನಾಪೂರ್ವಕವಾಗಿ ಕ್ಷಮಾಪಣೆಯ ಕುರಿತಾದ ದೇವರ ಪರಿಪೂರ್ಣ ಮಾದರಿಯನ್ನು, ಅಷ್ಟೇ ಅಲ್ಲದೆ ಆತನ ಮಗನ ಮಾದರಿಯನ್ನು ಅಭ್ಯಸಿಸಿರಿ. ಹೀಗೆ, ಹೃದಯದಿಂದ ಕ್ಷಮಿಸುವುದನ್ನು ನಾವು ಕಲಿಯಬಲ್ಲೆವು.
ಆದರೂ, ಕೆಲವರು ಸರಿಯಾಗಿಯೇ ಕೇಳಬಹುದು: ಗಂಭೀರವಾದ ಪಾಪಗಳ ಕುರಿತೇನು? ಎಲ್ಲ ಪಾಪಗಳು ಕ್ಷಮಿಸಲ್ಪಡಬೇಕೊ?
ಒಂದು ಸಮತೂಕವನ್ನು ಹುಡುಕುವುದು
ವ್ಯಕ್ತಿಯೊಬ್ಬನು ಘೋರವಾಗಿ ಅನ್ಯಾಯಕ್ಕೆ ಗುರಿಯಾದಾಗ, ವೇದನೆಯು ಅಪರಿಮಿತವಾಗಿರಬಲ್ಲದು. ಒಬ್ಬನು ಗಂಭೀರವಾದೊಂದು ಪಾಪದ ನಿಷ್ಕಪಟ ಬಲಿಯಾಗಿರುವುದಾದರೆ, ಇದು ವಿಶೇಷವಾಗಿ ಸತ್ಯವಾಗಿದೆ. ‘ಪಾಪಕರವಾಗಿ ನನ್ನನ್ನು ವಂಚಿಸಿದ ಮತ್ತು ನೋವನ್ನುಂಟುಮಾಡಿದ ಯಾರಾದರೊಬ್ಬರನ್ನು ನಾನು ಹೇಗೆ ಕ್ಷಮಿಸಬಲ್ಲೆ?’ ಎಂದು ಸಹ ಕೆಲವರು ಆಶ್ಚರ್ಯಗೊಳ್ಳಬಹುದು. ಬಹಿಷ್ಕಾರಕ್ಕೆ ಯೋಗ್ಯವಾಗಿರುವ ಒಂದು ಘೋರ ಪಾಪದ ವಿಷಯದಲ್ಲಿ, ಮತ್ತಾಯ 18:15-17 ರಲ್ಲಿರುವ ಸಲಹೆಯನ್ನು ಬಲಿಯಾದ ವ್ಯಕ್ತಿಯು ಅನ್ವಯಿಸಬೇಕಾಗಬಹುದು.
ಯಾವುದೇ ವಿದ್ಯಮಾನದಲ್ಲಿ, ಹೆಚ್ಚಿನದು ತಪ್ಪಿತಸ್ಥನ ಮೇಲೆ ಅವಲಂಬಿಸಬಹುದು. ತಪ್ಪುಕೃತ್ಯದಂದಿನಿಂದ, ಯಥಾರ್ಥವಾದ ಪಶ್ಚಾತಾಪ್ತದ ಯಾವುದೇ ಸೂಚನೆಗಳಿವೆಯೊ? ಪಾಪಿಯು ಬದಲಾಗಿದ್ದಾನೊ, ಬಹುಶಃ ನಿಜವಾದ ಪರಿವರ್ತನೆಗಳನ್ನು ಮಾಡಲು ಪ್ರಯತ್ನಿಸಿದ್ದಾನೊ? ಯೆಹೋವನ ದೃಷ್ಟಿಯಲ್ಲಿ ಇಂತಹ ಪಶ್ಚಾತಾಪ್ತವು—ನಿಜವಾಗಿಯೂ ಅತಿ ಭೀಕರವಾದ ಪಾಪಗಳ ವಿಷಯದಲ್ಲಿಯೂ ಸಹ—ಕ್ಷಮಾಪಣೆಗೆ ಒಂದು ಕೀಲಿ ಕೈಯಾಗಿದೆ. ಉದಾಹರಣೆಗೆ, ಇಸ್ರಾಯೇಲಿನ ಇತಿಹಾಸದಲ್ಲಿ ಅತ್ಯಂತ ದುಷ್ಟ ರಾಜರಲ್ಲಿ ಒಬ್ಬನಾಗಿದ್ದ ಮನಸ್ಸೆಯನ್ನು ಯೆಹೋವನು ಕ್ಷಮಿಸಿದನು. ಯಾವ ಆಧಾರದ ಮೇಲೆ? ದೇವರು ಹಾಗೆ ಮಾಡಿದನು ಯಾಕೆಂದರೆ, ಮನಸ್ಸೆ ಅಂತಿಮವಾಗಿ ತನ್ನನ್ನು ದೀನನಾಗಿಸಿಕೊಂಡನು ಮತ್ತು ತನ್ನ ನೀಚ ಮಾರ್ಗಗಳ ವಿಷಯದಲ್ಲಿ ಪಶ್ಚಾತಾಪ್ತಪಟ್ಟನು.—2 ಪೂರ್ವಕಾಲವೃತ್ತಾಂತ 33:12, 13.
ಬೈಬಲಿನಲ್ಲಿ ಅಪ್ಪಟವಾದ ಪಶ್ಚಾತಾಪ್ತವು, ಮನೋವೃತ್ತಿಯಲ್ಲಿ ಒಂದು ಯಥಾರ್ಥವಾದ ಬದಲಾವಣೆಯನ್ನು, ಮಾಡಲಾದ ಯಾವುದೇ ತಪ್ಪುಗಳಿಗಾಗಿ ಹೃರ್ತ್ಪೂವಕ ವಿಷಾದವನ್ನು ಒಳಗೊಳ್ಳುತ್ತದೆ. ಸೂಕ್ತವಾದಲ್ಲಿ ಮತ್ತು ಸಾಧ್ಯವಾದಲ್ಲಿ, ಪಶ್ಚಾತಾಪ್ತವು ಪಾಪಕ್ಕೆ ಬಲಿಯಾದ ವ್ಯಕ್ತಿಗೆ ಪ್ರತಿದಾನ ಮಾಡುವ ಪ್ರಯತ್ನದೊಂದಿಗೆ ಜೊತೆಸೇರಿರುವುದು. (ಲೂಕ 19:7-10; 2 ಕೊರಿಂಥ 7:11) ಅಂತಹ ಪಶ್ಚಾತಾಪ್ತವು ಇರದಿದ್ದಲ್ಲಿ, ಯೆಹೋವನು ಕ್ಷಮಿಸುವುದಿಲ್ಲ.a ಇನ್ನೂ ಹೆಚ್ಚಾಗಿ, ಒಮ್ಮೆ ಆತ್ಮಿಕವಾಗಿ ಪ್ರಬೋಧಿಸಲ್ಪಟ್ಟವರು ಆದರೆ ಈಗ ಉದ್ದೇಶಪೂರ್ವಕವಾಗಿ, ಪಶ್ಚಾತಾಪ್ತಪಡದೆ ತಪ್ಪನ್ನು ಆಚರಿಸುವವರಿಗೆ ಕ್ರೈಸ್ತರು ಕ್ಷಮೆ ನೀಡುವಂತೆ ದೇವರು ಅಪೇಕ್ಷಿಸುವುದಿಲ್ಲ. (ಇಬ್ರಿಯ 10:26-31) ವಿಪರೀತವಾದ ವಿದ್ಯಮಾನಗಳಲ್ಲಿ, ಕ್ಷಮಾಪಣೆಯು ಸರಿಯಾಗಿಯೇ ಅನುಚಿತವಾಗಿರಬಹುದು.—ಕೀರ್ತನೆ 139:21, 22; ಯೆಹೆಜ್ಕೇಲ 18:30-32.
ಕ್ಷಮಾಪಣೆಯು ಸಾಧ್ಯವಿರಲಿ ಇಲ್ಲದಿರಲಿ, ಗಂಭೀರ ಪಾಪಕ್ಕೆ ಬಲಿಯಾದ ಒಬ್ಬ ವ್ಯಕ್ತಿಯು ಇನ್ನೊಂದು ಪ್ರಶ್ನೆಯನ್ನು ಪರಿಗಣಿಸಲು ಬಯಸಬಹುದು: ವಿಷಯವನ್ನು ಸಂಪೂರ್ಣವಾಗಿ ಪರಿಹರಿಸುವ ತನಕ ತೀಕ್ಷೈವಾದ ನೋವು ಮತ್ತು ಕೋಪದ ಅನಿಸಿಕೆಯೊಂದಿಗೆ, ತೀವ್ರವಾದ ಭಾವನಾತ್ಮಕ ಸಂಕ್ಷೋಭೆಯಲ್ಲಿ ನಾನು ಉಳಿಯಬೇಕೊ? ಒಂದು ಉದಾಹರಣೆಯನ್ನು ಪರಿಗಣಿಸಿರಿ. ತನ್ನ ಸೇನಾಪತಿಯಾದ ಯೋವಾಬನು “ತನಗಿಂತ [ಯೋವಾಬ] ಉತ್ತಮರೂ ನೀತಿವಂತರೂ ಆದ ಇಬ್ಬರು ಮನುಷ್ಯರನ್ನು”—ಅಬ್ನೇರನನ್ನು ಮತ್ತು ಅಮಾಸನನ್ನು ಕೊಂದಾಗ, ರಾಜ ದಾವೀದನು ತೀಕ್ಷೈವಾದ ನೋವನ್ನು ಅನುಭವಿಸಿದನು. (1 ಅರಸು 2:32) ದಾವೀದನು ತನ್ನ ಕೋಪವನ್ನು ಮೌಖಿಕವಾಗಿ ಮತ್ತು ನಿಸ್ಸಂದೇಹವಾಗಿ ಯೆಹೋವನಿಗೆ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದನು. ಸಕಾಲದಲ್ಲಿಯಾದರೊ, ದಾವೀದನ ಅನಿಸಿಕೆಗಳ ಶುದ್ಧವಾದ ತೀಕ್ಷೈತೆಯು ಪ್ರಾಯಶಃ ಶಾಂತವಾಯಿತು. ತನ್ನ ದಿನಗಳ ಅಂತ್ಯದ ವರೆಗೆ ಅವನು ಕೋಪದಿಂದ ಆಳಲ್ಪಡಲಿಲ್ಲ. ಯೋವಾಬನ ಸಂಗಡ ಕೆಲಸಮಾಡುವುದನ್ನೂ ದಾವೀದನು ಮುಂದುವರಿಸಿದನು, ಆದರೆ ಈ ಪಶ್ಚಾತಾಪ್ತಪಡದ ಕೊಲೆಗಾರನನ್ನು ಅವನು ಸುಮ್ಮನೆ ಕ್ಷಮಿಸಲಿಲ್ಲ. ಕೊನೆಯಲ್ಲಿ ನ್ಯಾಯವು ಆಚರಿಸಲ್ಪಡುವಂತೆ ದಾವೀದನು ನೋಡಿಕೊಂಡನು.—2 ಸಮುವೇಲ 3:28-39; 1 ಅರಸು 2:5, 6.
ಇತರರ ಗಂಭೀರವಾದ ಪಾಪಗಳಿಂದ ನೋಯಿಸಲ್ಪಟ್ಟವರು ತಮ್ಮ ಆರಂಭಿಕ ಕೋಪವನ್ನು ಜಯಿಸುವ ಮುಂಚೆ, ಸ್ವಲ್ಪ ಸಮಯ ಮತ್ತು ಪ್ರಯತ್ನದ ಅಗತ್ಯವಿರಬಹುದು. ತಪ್ಪಿತಸ್ಥನು ತನ್ನ ತಪ್ಪನ್ನು ಅಂಗೀಕರಿಸಿ ಪಶ್ಚಾತಾಪ್ತಪಡುವಾಗ, ಗುಣಹೊಂದುವ ಪ್ರಕ್ರಿಯೆಯು ಅಧಿಕ ಸರಳವಾಗಿರಬಹುದು. ಹಾಗಿದ್ದರೂ, ಪಾಪದ ಒಬ್ಬ ನಿಷ್ಕಪಟ ಬಲಿಯು—ತಪ್ಪಿತಸ್ಥನ ಕಾರ್ಯಗತಿಯು ಏನೇ ಆಗಿರಲಿ—ಯೆಹೋವನ ನ್ಯಾಯ ಮತ್ತು ವಿವೇಕದ ಕುರಿತಾದ ಅವನ ಜ್ಞಾನದಲ್ಲಿ ಮತ್ತು ಕ್ರೈಸ್ತ ಸಭೆಯಲ್ಲಿ ಸಾಂತ್ವನ ಮತ್ತು ಸಮಾಧಾನವನ್ನು ಕಂಡುಕೊಳ್ಳಲು ಶಕ್ತನಾಗಿರಬೇಕು.
ನೀವು ಒಬ್ಬ ಪಾಪಿಯನ್ನು ಕ್ಷಮಿಸುವಾಗ, ನೀವು ಪಾಪವನ್ನು ಮನ್ನಿಸುತ್ತಿದ್ದೀರಿ ಎಂಬುದನ್ನು ಇದು ಅರ್ಥೈಸುವುದಿಲ್ಲ ಎಂಬ ವಿಷಯವನ್ನು ಸಹ ಗ್ರಹಿಸಿರಿ. ಕ್ರೈಸ್ತನಿಗೆ, ಕ್ಷಮಿಸುವುದೆಂದರೆ ವಿಷಯವನ್ನು ಭರವಸೆಯಿಂದ ಯೆಹೋವನ ಕೈಗಳಲ್ಲಿ ಬಿಡುವುದಾಗಿದೆ. ಇಡೀ ವಿಶ್ವದ ನೀತಿವಂತ ನ್ಯಾಯಧೀಶನು ಆತನಾಗಿದ್ದಾನೆ, ಮತ್ತು ಸರಿಯಾದ ಸಮಯದಲ್ಲಿ ಆತನು ನ್ಯಾಯವನ್ನು ನಿರ್ವಹಿಸುವನು. ಮೋಸದ “ಜಾರರಿಗೂ ವ್ಯಭಿಚಾರಿಗಳಿಗೂ” ನ್ಯಾಯ ತೀರಿಸುವುದನ್ನು ಅದು ಒಳಗೊಳ್ಳುವುದು.—ಇಬ್ರಿಯ 13:4.
ಕ್ಷಮಿಸುವುದರ ಪ್ರಯೋಜನಗಳು
ಕೀರ್ತನೆಗಾರನಾದ ದಾವೀದನು ಹಾಡಿದ್ದು: “ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವವನೂ [ಕ್ಷಮಿಸಲು ಸಿದ್ಧನು, NW] ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ.” (ಕೀರ್ತನೆ 86:5) ನೀವು ಯೆಹೋವನಂತೆ, “ಕ್ಷಮಿಸಲು ಸಿದ್ಧ” ರಾಗಿದ್ದೀರೊ? ಪ್ರಯೋಜನಗಳು ಹೇರಳವಾಗಿವೆ.
ಪ್ರಥಮವಾಗಿ, ಇತರರನ್ನು ಕ್ಷಮಿಸುವುದು ಒಳ್ಳೆಯ ಸಂಬಂಧಗಳನ್ನು ಪ್ರವರ್ತಿಸುತ್ತದೆ. ಬೈಬಲು ಕ್ರೈಸ್ತರನ್ನು ಉತ್ತೇಜಿಸುವುದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.”—ಎಫೆಸ 4:32.
ಎರಡನೆಯದಾಗಿ, ಕ್ಷಮಾಪಣೆಯು ಶಾಂತಿಯನ್ನು ತರುತ್ತದೆ. ಇದು ಕೇವಲ ಜೊತೆ ಮಾನವರೊಂದಿಗಿರುವ ಶಾಂತಿಯಲ್ಲ, ಆದರೆ ಆಂತರಿಕ ಶಾಂತಿಯನ್ನು ಸಹ ಅದು ತರುತ್ತದೆ.—ರೋಮಾಪುರ 14:19; ಕೊಲೊಸ್ಸೆ 3:13-15.
ಮೂರನೆಯದಾಗಿ, ಇತರರನ್ನು ಕ್ಷಮಿಸುವುದು, ಸ್ವತಃ ನಾವೇ ಕ್ಷಮಾಪಣೆಯ ಅಗತ್ಯವುಳ್ಳವರಾಗಿದ್ದೇವೆ ಎಂಬುದನ್ನು ಜ್ಞಾಪಿಸಿಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ. ಹೌದು, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
ಕೊನೆಯದಾಗಿ, ಇತರರನ್ನು ಕ್ಷಮಿಸುವುದು, ದೇವರ ಮೂಲಕ ನಮ್ಮ ಪಾಪಗಳು ಕ್ಷಮಿಸಲ್ಪಡುವಂತೆ ದಾರಿಯನ್ನು ಸ್ವಚ್ಛಗೊಳಿಸುತ್ತದೆ. ಯೇಸು ಹೇಳಿದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.”—ಮತ್ತಾಯ 6:14.
ಯೇಸುವಿನ ಮರಣದ ಮಧ್ಯಾಹ್ನದಂದು, ಅವನ ಮನಸ್ಸನ್ನು ತುಂಬಿರಬಹುದಾಗಿದ್ದ ಅನೇಕ ವಿಷಯಗಳನ್ನು ಊಹಿಸಿರಿ. ತನ್ನ ಶಿಷ್ಯರ ಕುರಿತು, ಸಾರುವ ಕೆಲಸ, ಮತ್ತು ವಿಶೇಷವಾಗಿ ಯೆಹೋವನ ಕಡೆಗೆ ತನ್ನ ಸಮಗ್ರತೆಯ ಕುರಿತು ಅವನು ಚಿಂತಿತನಾಗಿದ್ದನು. ಆದರೂ, ಯಾತನಾ ಕಂಭದ ಮೇಲೆ ತೀವ್ರವಾಗಿ ಕಷ್ಟಾನುಭವಿಸುತ್ತಿರುವಾಗಲೂ, ಅವನು ಯಾವ ವಿಷಯದ ಕುರಿತು ಮಾತಾಡಿದನು? ತನ್ನ ಕೊನೆಯ ಮಾತುಗಳಲ್ಲಿ “ತಂದೆಯೇ, ಅವರಿಗೆ ಕ್ಷಮಿಸು” ಎಂಬ ಮಾತುಗಳಿದ್ದವು. (ಲೂಕ 23:34) ಹೃದಯದಿಂದ ಒಬ್ಬರನ್ನೊಬ್ಬರು ಕ್ಷಮಿಸುವ ಮೂಲಕ ನಾವು ಯೇಸುವಿನ ಪರಿಪೂರ್ಣ ಮಾದರಿಯನ್ನು ಅನುಕರಿಸಬಲ್ಲೆವು.
[ಅಧ್ಯಯನ ಪ್ರಶ್ನೆಗಳು]
a ಕ್ಷಮೆಯನ್ನು ನೀಡಬೇಕೊ ಇಲ್ಲವೊ ಎಂದು ನಿರ್ಧರಿಸುವಾಗ, ಯೆಹೋವನು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಉದಾಹರಣೆಗೆ, ತಪ್ಪಿತಸ್ಥನು ದೇವರ ಮಟ್ಟಗಳ ಕುರಿತು ಅರಿವಿಲ್ಲದವನಾಗಿದ್ದರೆ, ಅಂತಹ ಅಜ್ಞಾನವು ಪಾಪದ ಹೊರೆಯನ್ನು ಕಡಿಮೆಗೊಳಿಸಬಹುದು. ತನ್ನನ್ನು ಗಲ್ಲಿಗೇರಿಸುವವರನ್ನು ಕ್ಷಮಿಸುವಂತೆ ಯೇಸು ತನ್ನ ತಂದೆಯನ್ನು ಕೇಳಿಕೊಂಡಾಗ, ಯೇಸು ಸ್ಪಷ್ಟವಾಗಿಗಿ ಅವನನ್ನು ಮರಣಕ್ಕೆ ಒಪ್ಪಿಸಿದ ರೋಮನ್ ಸೈನಿಕರ ಕುರಿತು ಮಾತಾಡುತ್ತಾ ಇದ್ದನು. ಅವನು ನಿಜವಾಗಿಯೂ ಯಾರಾಗಿದ್ದನೆಂಬುದರ ಕುರಿತು ಅರಿವಿಲ್ಲದವರಾಗಿ ‘ತಾವು ಏನು ಮಾಡುತ್ತಿದ್ದೇವೆಂಬುದನ್ನು ಅವರು ಅರಿಯದವರಾಗಿದ್ದರು.’ ಹಾಗಿದ್ದರೂ, ಆ ವಧೆಯ ಹಿಂದೆ ಇದ್ದ ಧಾರ್ಮಿಕ ನಾಯಕರು ಅತಿ ಹೆಚ್ಚಿನ ದೋಷವನ್ನು ಹೊಂದಿದ್ದರು—ಮತ್ತು ಅವರಲ್ಲಿ ಅನೇಕರಿಗೆ, ಕ್ಷಮಾಪಣೆಯು ಸಾಧ್ಯವಿರಲಿಲ್ಲ.—ಯೋಹಾನ 11:45-53; ಹೋಲಿಸಿ ಅ. ಕೃತ್ಯಗಳು 17:30.
[ಪುಟ 5 ರಲ್ಲಿರುವ ಚಿತ್ರಗಳು]
ಕ್ಷಮಿಸದ ದಾಸನ ಕುರಿತಾದ ಯೇಸುವಿನ ದೃಷ್ಟಾಂತದ ಮುಖ್ಯ ಅಂಶವನ್ನು ನೀವು ಗ್ರಹಿಸಿದಿರೊ?
[ಪುಟ 7 ರಲ್ಲಿರುವ ಚಿತ್ರಗಳು]
ಇತರರನ್ನು ಕ್ಷಮಿಸುವುದು ಒಳ್ಳೆಯ ಸಂಬಂಧಗಳನ್ನು ಪ್ರವರ್ತಿಸುತ್ತದೆ ಮತ್ತು ಸಂತೋಷವನ್ನು ತರುತ್ತದೆ