ನೀವು ಯೇಸುವಿಗೆ ಪ್ರಾರ್ಥಿಸಬೇಕೊ?
ಯೇಸುವಿಗೆ ಪ್ರಾರ್ಥಿಸುವುದು ಯುಕ್ತವೆಂದು ಕೆಲವು ಜನರು ಎಣಿಸುತ್ತಾರೆ. ಜರ್ಮನಿಯಲ್ಲಿ ಅನೇಕರು ಮಕ್ಕಳಾಗಿದ್ದಾಗ, ತಮ್ಮ ಭೋಜನಗಳ ಮೊದಲು ತಮ್ಮ ಕೈಗಳನ್ನು ಮಡಿಸಿ ಯೇಸು ಕ್ರಿಸ್ತನಿಗೆ ಉಪಕಾರ ಸಲ್ಲಿಸಬೇಕೆಂದು ಕಲಿಸಲ್ಪಟ್ಟಿದ್ದಾರೆ.
ಬೈಬಲಿಗನುಸಾರ, ಯೇಸು ನಿಶ್ಚಯವಾಗಿಯೂ ಪರಲೋಕದಲ್ಲಿ ಬಹಳ ಉನ್ನತವಾದೊಂದು ಸ್ಥಾನದಲ್ಲಿದ್ದಾನೆ. ಹಾಗಾದರೆ ಆ ವಿಷಯವು, ನಾವು ಅವನಿಗೆ ಪ್ರಾರ್ಥಿಸಬೇಕೆಂಬುದನ್ನು ಅರ್ಥೈಸುತ್ತದೊ? ಯೇಸುವಿಗಾಗಿರುವ ಪ್ರೀತಿಯಿಂದಾಗಿ ಅವನಿಗೆ ಪ್ರಾರ್ಥಿಸುವವರಲ್ಲಿ ನೀವು ಒಬ್ಬರಾಗಿರಬಹುದು, ಆದರೆ ಯೇಸು ತಾನೇ ಇಂತಹ ಪ್ರಾರ್ಥನೆಗಳ ಕುರಿತು ಏನು ನೆನಸುತ್ತಾನೆ?
ಪ್ರಥಮವಾಗಿ, ಈ ಪ್ರಶ್ನೆಗಳು ಏಳುವುದಾದರೂ ಏಕೆ? ಏಕೆಂದರೆ ಯೆಹೋವ ದೇವರು “ಪ್ರಾರ್ಥನೆಯನ್ನು ಕೇಳು” ವವನಾಗಿದ್ದಾನೆಂದು ಬೈಬಲ್ ಹೇಳುತ್ತದೆ. ಹಾಗಾದರೆ, ಪ್ರಾಚೀನ ಸಮಯಗಳಲ್ಲಿ ಇಸ್ರಾಯೇಲ್ಯರಂತಹ ದೇವರ ಸೇವಕರು, ಸರ್ವಶಕ್ತನಾದ ಯೆಹೋವ ದೇವರಿಗೆ ಮಾತ್ರ ಪ್ರಾರ್ಥಿಸಿದರೆಂಬ ವಿಷಯವು ಆಶ್ಚರ್ಯಕರವೇನೂ ಅಲ್ಲ.—ಕೀರ್ತನೆ 5:1, 2; 65:2.
ಮಾನವಜಾತಿಯನ್ನು ಪಾಪ ಮತ್ತು ಮರಣದಿಂದ ಬಿಡಿಸಲು ದೇವರ ಮಗನಾದ ಯೇಸು ಭೂಮಿಗೆ ಬಂದಾಗ, ವಿಷಯಗಳು ಬದಲಾದವೊ? ಇಲ್ಲ, ಪ್ರಾರ್ಥನೆಗಳು ಇನ್ನೂ ಯೆಹೋವನಿಗೆ ನಿರ್ದೇಶಿಸಲ್ಪಟ್ಟಿದ್ದವು. ಭೂಮಿಯಲ್ಲಿರುವಾಗ ಸ್ವತಃ ಯೇಸು ಅನೇಕ ಬಾರಿ ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥಿಸಿದನು, ಮತ್ತು ತದ್ರೀತಿಯಲ್ಲಿ ಮಾಡುವಂತೆ ಅವನು ಇತರರಿಗೆ ಕಲಿಸಿದನು. ಮಾದರಿ ಪ್ರಾರ್ಥನೆ—ಕೆಲವೊಮ್ಮೆ ಕರ್ತನ ಪ್ರಾರ್ಥನೆ ಯಾ ನಮ್ಮ ತಂದೆಯೇ ಎಂಬುದಾಗಿ ಕರೆಯಲ್ಪಡುವ ಪ್ರಾರ್ಥನೆ—ಯ ಕುರಿತು ಸ್ವಲ್ಪ ಯೋಚಿಸಿರಿ, ಅದು ಲೋಕದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಪ್ರಾರ್ಥನೆಗಳಲ್ಲಿ ಒಂದಾಗಿದೆ. ತನಗೆ ಪ್ರಾರ್ಥಿಸುವಂತೆ ಯೇಸು ನಮಗೆ ಕಲಿಸಲಿಲ್ಲ; ನಮಗೆ ಈ ಮಾದರಿಯನ್ನು ಅವನು ಕೊಟ್ಟನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.”—ಮತ್ತಾಯ 6:6, 9; 26:39, 42.
ಪ್ರಾರ್ಥನೆಯು ನಿಜವಾಗಿ ಏನಾಗಿದೆ ಎಂಬುದನ್ನು ಪರೀಕ್ಷಿಸುವ ಮೂಲಕ ನಾವೀಗ ವಿಷಯವನ್ನು ಅಧಿಕ ಸಮಗ್ರವಾಗಿ ಗಮನಿಸೋಣ.
ಪ್ರಾರ್ಥನೆಯು ಏನಾಗಿದೆ?
ಪ್ರತಿಯೊಂದು ಪ್ರಾರ್ಥನೆಯು ಆರಾಧನೆಯ ಒಂದು ರೂಪವಾಗಿದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೀಗೆ ಹೇಳುತ್ತಾ ಇದನ್ನು ದೃಢಪಡಿಸುತ್ತದೆ: “ಪ್ರಾರ್ಥನೆಯು ಆರಾಧನೆಯ ಒಂದು ರೂಪವಾಗಿದೆ, ಅದರಲ್ಲಿ ವ್ಯಕ್ತಿಯೊಬ್ಬನು ದೇವರಿಗೆ ಭಕ್ತಿಯನ್ನು, ಉಪಕಾರವನ್ನು, ಪಾಪ ನಿವೇದನೆಯನ್ನು, ಯಾ ಬಿನ್ನಹವನ್ನು ಸಲ್ಲಿಸಬಹುದು.”
ಒಂದು ಸಂದರ್ಭದಲ್ಲಿ ಯೇಸು ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನಿಗೆ (ಯೆಹೋವನಿಗೆ, NW) ಅಡಬ್ಡಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” ಆರಾಧನೆ—ಆದಕಾರಣ ಪ್ರಾರ್ಥನೆಗಳು ಸಹ—ತನ್ನ ತಂದೆಯಾದ ಯೆಹೋವ ದೇವರಿಗೆ ಮಾತ್ರ ಸಂಬೋಧಿಸಲ್ಪಡತಕ್ಕದ್ದು ಎಂಬ ಮೂಲಭೂತ ಸತ್ಯಕ್ಕೆ ಯೇಸು ಅಂಟಿಕೊಂಡಿದ್ದನು.—ಲೂಕ 4:8; 6:12.
ನಮ್ಮ ಪ್ರಾರ್ಥನೆಗಳಲ್ಲಿ ಯೇಸುವನ್ನು ಮಾನ್ಯಮಾಡುವುದು
ಮಾನವಜಾತಿಗಾಗಿ ಯೇಸು ಪ್ರಾಯಶ್ಚಿತ್ತ ಬಲಿಯೋಪಾದಿ ಮರಣ ಹೊಂದಿ, ದೇವರ ಮೂಲಕ ಪುನರುತ್ಥಾನಗೊಳಿಸಲ್ಪಟ್ಟನು, ಮತ್ತು ಒಂದು ಶ್ರೇಷ್ಠವಾದ ಸ್ಥಾನಕ್ಕೆ ಏರಿಸಲ್ಪಟ್ಟನು. ನೀವು ಕಲ್ಪಿಸಿಕೊಳ್ಳಬಹುದಾದ ರೀತಿಯಲ್ಲಿ, ಇದೆಲ್ಲವೂ ಸ್ವೀಕಾರಾರ್ಹವಾದ ಪ್ರಾರ್ಥನೆಗಳ ಸಂಬಂಧದಲ್ಲಿ ಒಂದು ಬದಲಾವಣೆಯನ್ನು ಖಂಡಿತವಾಗಿಯೂ ತಂದಿತು. ಯಾವ ವಿಧದಲ್ಲಿ?
ಪ್ರಾರ್ಥನೆಯ ಮೇಲೆ ಯೇಸುವಿನ ಸ್ಥಾನವು ಬೀರುವ ಮಹಾ ಪ್ರಭಾವವನ್ನು ಅಪೊಸ್ತಲ ಪೌಲನು ಈ ರೀತಿಯಲ್ಲಿ ವರ್ಣಿಸುತ್ತಾನೆ: “ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡಬ್ಡಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.”—ಫಿಲಿಪ್ಪಿ 2:9-11.
ಎಲ್ಲರೂ “ಯೇಸುವಿನ ಹೆಸರಿನಲ್ಲಿ ಅಡಬ್ಡಿದ್ದು” ಎಂಬ ಪದಗಳು, ನಾವು ಅವನಿಗೆ ಪ್ರಾರ್ಥಿಬೇಕೆಂಬುದನ್ನು ಅರ್ಥೈಸುತ್ತವೊ? ಇಲ್ಲ. ಇಲ್ಲಿ ಒಳಗೊಂಡಿರುವ ಗ್ರೀಕ್ ಪದಗುಚ್ಚವು “ಯಾವ ಹೆಸರಿನಲ್ಲಿ ಅಡ್ಡಬೀಳುವವರೆಲ್ಲ ಐಕ್ಯರಾಗುತ್ತಾರೊ ಆ ಹೆಸರನ್ನು ಸೂಚಿಸುತ್ತದೆ; ಹೀಗೆ ಐಕ್ಯರಾದ ಎಲ್ಲರು (πᾶν γόνυ) ಆರಾಧಿಸುತ್ತಾರೆ. ಯೇಸು ಪಡೆದಿರುವ ಹೆಸರು ಎಲ್ಲರನ್ನು ಐಕಮತ್ಯದ ಆರಾಧನೆಗೆ ಪ್ರೇರೇಪಿಸುತ್ತದೆ.” (ಎ ಗ್ರ್ಯಾಮರ್ ಆಫ್ ದಿ ಇಡಿಯಮ್ ಆಫ್ ದ ನ್ಯೂ ಟೆಸ್ಟಮೆಂಟ್, ಜಿ. ಬಿ. ವೈನರ್ ಅವರಿಂದ) ಒಂದು ಪ್ರಾರ್ಥನೆಯು ಸ್ವೀಕಾರಾರ್ಹವಾಗಿರಬೇಕಾದರೆ, ಅದು “ಯೇಸುವಿನ ಹೆಸರಿನಲ್ಲಿ” ಸಾದರಗೊಳಿಸಲ್ಪಡಬೇಕು ನಿಶ್ಚಯ, ಆದರೆ ಅದು ಯೆಹೋವ ದೇವರಿಗೆ ಸಂಬೋಧಿಸಲ್ಪಡುತ್ತದೆ ಮತ್ತು ಆತನ ಮಹಿಮೆಗೆ ಕಾರ್ಯಮಾಡುತ್ತದೆ. ಈ ಕಾರಣಕ್ಕಾಗಿ ಪೌಲನು ಹೇಳುವುದು: “ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.”—ಫಿಲಿಪ್ಪಿ 4:6.
ಮಾರ್ಗವೊಂದು ಗಮ್ಯಸ್ಥಾನಕ್ಕೆ ನಡೆಸುವಂತೆಯೇ, ಸರ್ವಶಕ್ತನ ಕಡೆಗೆ ನಡೆಸುವ “ಮಾರ್ಗವು” ಯೇಸುವಾಗಿದ್ದಾನೆ. “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ” ವೆಂದು ಯೇಸು ಅಪೊಸ್ತಲರಿಗೆ ಕಲಿಸಿದನು. (ಯೋಹಾನ 14:6) ಹೀಗೆ, ನಾವು ನಮ್ಮ ಪ್ರಾರ್ಥನೆಗಳನ್ನು ಯೇಸುವಿನ ಮುಖಾಂತರ ದೇವರಿಗೆ ಸಾದರಪಡಿಸಬೇಕೇ ಹೊರತು ನೇರವಾಗಿ ಯೇಸುವಿಗಲ್ಲ.a
‘ಆದರೆ, ಶಿಷ್ಯನಾದ ಸೆಫ್ತನನು ಮತ್ತು ಅಪೊಸ್ತಲನಾದ ಯೋಹಾನನು—ಈ ಇಬ್ಬರೂ—ಪರಲೋಕದಲ್ಲಿದ್ದ ಯೇಸುವಿನೊಂದಿಗೆ ಮಾತಾಡಿದರೆಂದು ಬೈಬಲ್ ವರದಿಸುವುದಿಲ್ಲವೆ?’ ಎಂದು ಕೆಲವರು ಕೇಳಬಹುದು. ಅದು ಸತ್ಯವಾಗಿದೆ. ಆದರೆ, ಈ ಘಟನೆಗಳು, ಪ್ರಾರ್ಥನೆಗಳನ್ನು ಒಳಗೊಳ್ಳಲಿಲ್ಲ ಯಾಕೆಂದರೆ ಸೆಫ್ತನನು ಮತ್ತು ಯೋಹಾನನು—ಇಬ್ಬರೂ—ಯೇಸುವನ್ನು ದರ್ಶನದಲ್ಲಿ ಕಂಡರು ಮತ್ತು ಅವನೊಂದಿಗೆ ನೇರವಾಗಿ ಮಾತಾಡಿದರು. (ಅ. ಕೃತ್ಯಗಳು 7:56, 59; ಪ್ರಕಟನೆ 1:17-19; 22:20) ದೇವರೊಂದಿಗೆ ಕೇವಲ ಮಾತಾಡುವುದು ಕೂಡ ಒಂದು ಪ್ರಾರ್ಥನೆಯಾಗಿರುವುದಿಲ್ಲ ಎಂಬುದನ್ನು ಜ್ಞಾಪಕದಲ್ಲಿಡಿ. ಏದೆನ್ನಲ್ಲಿ ಅವರ ಪಾಪವನ್ನು ಅನುಸರಿಸಿ ದೇವರು ಅವರನ್ನು ನ್ಯಾಯವಿಚಾರಿಸಿದಾಗ, ತಮ್ಮ ಮಹಾ ಪಾಪಕ್ಕಾಗಿ ನೆವಗಳನ್ನು ನೀಡುತ್ತಾ, ಆದಾಮ ಮತ್ತು ಹವ್ವರು ದೇವರೊಡನೆ ಮಾತಾಡಿದರು. ಆ ರೀತಿಯಲ್ಲಿ ಆತನೊಡನೆ ಅವರ ಮಾತುಕತೆಯು ಒಂದು ಪ್ರಾರ್ಥನೆಯಾಗಿರಲಿಲ್ಲ. (ಆದಿಕಾಂಡ 3:8-19) ಆದಕಾರಣ, ನಾವು ನಿಜವಾಗಿಯೂ ಯೇಸುವಿಗೆ ಪ್ರಾರ್ಥಿಸಬೇಕೆಂಬುದರ ಪ್ರಮಾಣವಾಗಿ ಯೇಸುವಿನೊಡನೆ ಸೆಫ್ತನನ ಯಾ ಯೋಹಾನನ ಮಾತುಕತೆಯನ್ನು ಉದ್ಧರಿಸುವುದು ತಪ್ಪಾಗಿರುವುದು.
ಯೇಸುವಿನ ನಾಮವನ್ನು ಹೇಗೆ ‘ಹೇಳಿಕೊಳ್ಳಲಾಗುತ್ತದೆ’?
ಯೇಸುವಿಗೆ ಪ್ರಾರ್ಥಿಸುವುದು ಯುಕ್ತವಾಗಿದೆ ಎಂದು ಇನ್ನೂ ಎಣಿಸುತ್ತಾ, ನಿಮ್ಮಲ್ಲಿ ಬಳಸಾಡುವ ಸಂದೇಹಗಳಿವೆಯೊ? ಒಬ್ಬಾಕೆ ಹೆಂಗಸು ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ಬರೆದದ್ದು: “ದುರದೃಷ್ಟದಿಂದ, ಪ್ರಥಮ ಕ್ರೈಸ್ತರು ಯೇಸುವಿಗೆ ಪ್ರಾರ್ಥಿಸಲಿಲ್ಲ ಎಂಬ ವಿಷಯದ ಕುರಿತು ನನಗಿನ್ನೂ ಮನವರಿಕೆಯಾಗಿರುವುದಿಲ್ಲ.” 1 ಕೊರಿಂಥ 1:2 ರಲ್ಲಿರುವ ಪೌಲನ ಮಾತುಗಳು ಆಕೆಯ ಮನಸ್ಸಿನಲ್ಲಿದ್ದವು. ಅಲ್ಲಿ ಅವನು ಉಲ್ಲೇಖಿಸಿದ್ದು, “ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರು (ನಾಮವನ್ನು ಹೇಳಿಕೊಳ್ಳುವವರು, NW).” ಆದರೆ ಮೂಲಭೂತ ಭಾಷೆಯಲ್ಲಿ “ಹೇಳಿಕೊಳ್ಳು” ಎಂಬ ಅಭಿವ್ಯಕ್ತಿಯು ಪ್ರಾರ್ಥನೆಯ ಬದಲು ಇತರ ವಿಷಯಗಳನ್ನು ಅರ್ಥೈಸಬಲ್ಲದೆಂಬುದನ್ನು ಒಬ್ಬನು ಗಮನಿಸಬೇಕು.
ಕ್ರಿಸ್ತನ ಹೆಸರು ಎಲ್ಲೆಡೆಯಲ್ಲಿಯೂ ಹೇಗೆ ‘ಹೇಳಿಕೊಳ್ಳಲಾಯಿತು’? ಒಂದು ವಿಧವು ಹೇಗಂದರೆ, ನಜರೇತಿನ ಯೇಸುವಿನ ಹಿಂಬಾಲಕರು ಅವನ ಹೆಸರಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡುತ್ತಾ, ಬಹಿರಂಗವಾಗಿ ಅವನನ್ನು ಮೆಸ್ಸೀಯನಾಗಿ ಮತ್ತು “ಲೋಕರಕ್ಷಕ” ನಾಗಿ ಅಂಗೀಕರಿಸಿದರು. (1 ಯೋಹಾನ 4:14; ಅ. ಕೃತ್ಯಗಳು 3:6; 19:5) ಆದುದರಿಂದ, ದಿ ಇಂಟರ್ಪ್ರೆಟರ್ಸ್ ಬೈಬಲ್ ಹೇಳುವುದೇನೆಂದರೆ, “ನಮ್ಮ ಕರ್ತನ ಹೆಸರಿನ ಮೇಲೆ ಹೇಳಿಕೊಳ್ಳುವುದು” ಎಂಬ ಪದಗುಚ್ಚದ ಅರ್ಥವು “. . . ಅವನಿಗೆ ಪ್ರಾರ್ಥಿಸುವುದಕ್ಕೆ ಬದಲು ಅವನ ಪ್ರಭುತ್ವವನ್ನು ಒಪ್ಪಿಕೊಳ್ಳುವುದು ಎಂದಾಗಿದೆ.”
ಕ್ರಿಸ್ತನನ್ನು ಸ್ವೀಕರಿಸುವುದು ಮತ್ತು ಸುರಿಸಲ್ಪಟ್ಟ ಅವನ ರಕ್ತದಲ್ಲಿ ನಂಬಿಕೆಯನ್ನಿಡುವುದು—ಇದು ಪಾಪಗಳ ಕ್ಷಮಾಪಣೆಯನ್ನು ಸಾಧ್ಯಗೊಳಿಸುತ್ತದೆ—ಕೂಡ “ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರನ್ನು ಹೇಳಿಕೊಳ್ಳು” ವುದನ್ನು ಅರ್ಥೈಸುತ್ತದೆ. (ಅ. ಕೃತ್ಯಗಳು 10:43ನ್ನು 22:16 ರೊಂದಿಗೆ ಹೋಲಿಸಿರಿ.) ಅವನ ಮುಖಾಂತರ ನಾವು ದೇವರಿಗೆ ಪ್ರಾರ್ಥಿಸುವಾಗಲೆಲ್ಲ ನಾವು ಯೇಸುವಿನ ಹೆಸರನ್ನು ಅಕ್ಷರಾರ್ಥಕವಾಗಿ ಹೇಳುತ್ತೇವೆ. ಆದುದರಿಂದ, ನಾವು ಯೇಸುವಿನ ಹೆಸರಿನ ಮೇಲೆ ಹೇಳಿಕೊಳ್ಳಬಲ್ಲೆವೆಂದು ತೋರಿಸುವಾಗ, ನಾವು ಅವನಿಗೆ ಪ್ರಾರ್ಥಿಸಬೇಕೆಂದು ಬೈಬಲ್ ಸೂಚಿಸುವುದಿಲ್ಲ.—ಎಫೆಸ 5:20; ಕೊಲೊಸ್ಸೆ 3:17.
ಯೇಸು ನಮಗಾಗಿ ಮಾಡಬಲ್ಲ ವಿಷಯ
ಯೇಸು ಸ್ಪಷ್ಟವಾಗಿಗಿ ತನ್ನ ಶಿಷ್ಯರಿಗೆ ವಾಗ್ದಾನಿಸಿದ್ದು: “ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು.” ಇದು ಅವನಿಗೆ ಪ್ರಾರ್ಥಿಸುವುದನ್ನು ಅವಶ್ಯಪಡಿಸುತ್ತದೊ? ಇಲ್ಲ. ಬೇಡಿಕೆಯು ಯೆಹೋವ ದೇವರಿಗೆ ಸಂಬೋಧಿಸಲ್ಪಡುತ್ತದೆ—ಆದರೆ ಯೇಸುವಿನ ಹೆಸರಿನಲ್ಲಿ. (ಯೋಹಾನ 14:13, 14; 15:16) ಆತನ ಮಗನಾದ ಯೇಸು ನಮ್ಮ ಪರವಾಗಿ ಅವನ ಮಹಾ ಶಕ್ತಿ ಮತ್ತು ಅಧಿಕಾರವನ್ನು ಪ್ರಯೋಗಿಸಲೆಂದು ನಾವು ದೇವರಿಗೆ ಮನವಿಮಾಡುತ್ತೇವೆ.
ಇಂದು ಯೇಸು ತನ್ನ ಸತ್ಯ ಹಿಂಬಾಲಕರೊಂದಿಗೆ ಹೇಗೆ ಸಂಸರ್ಗ ಮಾಡುತ್ತಾನೆ? ಅಭಿಷಿಕ್ತ ಕ್ರೈಸ್ತರ ಸಭೆಯ ಬಗ್ಗೆ ಪೌಲನು ನೀಡಿದ ವರ್ಣನೆಯು ಒಂದು ದೃಷ್ಟಾಂತದೋಪಾದಿ ಕೆಲಸಮಾಡಬಹುದು. ಅದನ್ನು ಒಂದು ದೇಹಕ್ಕೆ ಮತ್ತು ಯೇಸು ಕ್ರಿಸ್ತನನ್ನು ಶಿರಸ್ಸಿಗೆ ಅವನು ಹೋಲಿಸಿದನು. ಆತ್ಮಿಕ ದೇಹದ ಸದಸ್ಯರ ಅಗತ್ಯಗಳನ್ನು “ಶಿರಸ್ಸು” “ಕೀಲುನರಗಳ” ಅಥವಾ ತನ್ನ ಸಭೆಗೆ ಆತ್ಮಿಕ ಪೋಷಣೆ ಮತ್ತು ನಿರ್ದೇಶನವನ್ನು ಒದಗಿಸಲಿಕ್ಕಾಗಿರುವ ವಿಧಾನಗಳ ಮತ್ತು ಏರ್ಪಾಡುಗಳ ಮೂಲಕ ಸರಬರಾಯಿ ಮಾಡುತ್ತಾನೆ. (ಕೊಲೊಸ್ಸೆ 2:19) ತದ್ರೀತಿಯಲ್ಲಿ, ಯೇಸು ಇಂದು “ಮನುಷ್ಯರಲ್ಲಿ ದಾನಗಳನ್ನು” ಯಾ ಆತ್ಮಿಕವಾಗಿ ಅರ್ಹರಾಗಿರುವ ಪುರುಷರನ್ನು ಸಭೆಯಲ್ಲಿ ನಾಯಕತ್ವವನ್ನು ವಹಿಸಲು, ಅಗತ್ಯವಾದಾಗ ತಿದ್ದುಪಾಟ್ಟನ್ನು ಸಹ ವಿಧಿಸಲು ಬಳಸುತ್ತಾನೆ. ಸಭೆಯ ಸದಸ್ಯರಿಗೆ ನೇರವಾಗಿ ಯೇಸುವಿನೊಡನೆ ಸಂಸರ್ಗ ಮಾಡುವ ಯಾ ಅವನಿಗೆ ಪ್ರಾರ್ಥಿಸುವ ಯಾವ ಏರ್ಪಾಡೂ ಇರುವುದಿಲ್ಲ, ಆದರೆ ಅವರು ಖಂಡಿತವಾಗಿ—ಹೌದು,—ಯೇಸುವಿನ ತಂದೆಯಾದ ಯೆಹೋವ ದೇವರಿಗೆ ಪ್ರಾರ್ಥಿಸಲೇಬೇಕು.—ಎಫೆಸ 4:8-12, NW.
ನೀವು ಯೇಸುವನ್ನು ಹೇಗೆ ಗೌರವಿಸುತ್ತೀರಿ?
ಮಾನವರ ರಕ್ಷಣೆಯ ಕುರಿತು, ಎಂತಹ ಪ್ರಾಮುಖ್ಯವಾದ ಪಾತ್ರವನ್ನು ಯೇಸು ವಹಿಸುತ್ತಾನೆ! ಅಪೊಸ್ತಲ ಪೇತ್ರನು ಘೋಷಿಸಿದ್ದು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅ. ಕೃತ್ಯಗಳು 4:12) ಯೇಸುವಿನ ಹೆಸರಿನ ಮಹತ್ವದ ಅರಿವು ನಿಮಗಿದೆಯೆ?
ಪ್ರಾರ್ಥನೆಗಳನ್ನು ವೈಯಕ್ತಿಕವಾಗಿ ಯೇಸುವಿಗೆ ನಿರ್ದೇಶಿಸದೆ ಇರುವುದರಿಂದ, ನಾವು ಅವನ ಸ್ಥಾನವನ್ನು ಕೆಳಮಟ್ಟಕ್ಕೆ ಇಳಿಸುತ್ತಿಲ್ಲ. ಬದಲಿಗೆ, ಅವನ ಹೆಸರಿನಲ್ಲಿ ನಾವು ಪ್ರಾರ್ಥಿಸುವಾಗ ಯೇಸು ಗೌರವಿಸಲ್ಪಡುತ್ತಾನೆ. ವಿಧೇಯರಾಗಿರುವ ಮೂಲಕ ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸುವಂತೆಯೇ, ಅವನ ಆಜೆಗ್ಞಳಿಗೆ—ವಿಶೇಷವಾಗಿ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಹೊಸ ಆಜೆಗ್ಞೆ—ವಿಧೇಯತೆ ತೋರಿಸುವ ಮೂಲಕ ನಾವು ಯೇಸು ಕ್ರಿಸ್ತನನ್ನು ಗೌರವಿಸುತ್ತೇವೆ.—ಯೋಹಾನ 5:23; 13:34.
ಸ್ವೀಕಾರಾರ್ಹವಾದ ಪ್ರಾರ್ಥನೆಗಳು
ಸ್ವೀಕಾರಾರ್ಹವಾದ ಪ್ರಾರ್ಥನೆಗಳನ್ನು ಸಲ್ಲಿಸಲು ನೀವು ಬಯಸುತ್ತೀರೊ? ಹಾಗಾದರೆ ಅವುಗಳನ್ನು ಯೆಹೋವ ದೇವರಿಗೆ ನಿರ್ದೇಶಿಸಿರಿ ಮತ್ತು ಆತನ ಮಗನಾದ ಯೇಸುವಿನ ಹೆಸರಿನಲ್ಲಿ ಹಾಗೆ ಮಾಡಿರಿ. ದೇವರ ಚಿತ್ತದ ಜ್ಞಾನವನ್ನು ಪಡೆಯಿರಿ ಮತ್ತು ನಿಮ್ಮ ಪ್ರಾರ್ಥನೆಗಳು ಆ ತಿಳಿವಳಿಕೆಯನ್ನು ಪ್ರತಿಬಿಂಬಿಸಲಿ. (1 ಯೋಹಾನ 3:21, 22; 5:14) ಕೀರ್ತನೆ 66:20ರ ಮಾತುಗಳಿಂದ ಬಲವನ್ನು ಪಡೆಯಿರಿ: “ಆತನು ನನ್ನ ಬಿನ್ನಹವನ್ನು ತಿರಸ್ಕರಿಸಲಿಲ್ಲ; ನನ್ನ ಮೇಲಿನ ತನ್ನ ದಯೆಯನ್ನು ತಪ್ಪಿಸಿಬಿಡಲಿಲ್ಲ. ದೇವರಿಗೆ ಸ್ತೋತ್ರವಾಗಲಿ.”
ನಾವು ನೋಡಿರುವಂತೆ, ಪ್ರಾರ್ಥನೆಗಳು ಸಂಪೂರ್ಣವಾಗಿ ಸರ್ವಶಕ್ತ ದೇವರಿಗೆ ಸೇರಿರುವ ಆರಾಧನೆಯ ಒಂದು ವಿಧವಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆಗಳನ್ನು ಯೆಹೋವ ದೇವರಿಗೆ ಸಂಬೋಧಿಸುವ ಮೂಲಕ, “ಪರಲೋಕದಲ್ಲಿರುವ ನಮ್ಮ ತಂದೆಯೇ” ಎಂಬುದಾಗಿ ಪ್ರಾರ್ಥಿಸಬೇಕೆಂಬ ಯೇಸುವಿನ ನಿರ್ದೇಶನವನ್ನು ನಾವು ಮನಸ್ಸಿಗೆ ತೆಗೆದುಕೊಂಡಿದ್ದೇವೆಂದು ಸೂಚಿಸುತ್ತೇವೆ.—ಮತ್ತಾಯ 6:9.
[ಅಧ್ಯಯನ ಪ್ರಶ್ನೆಗಳು]
a ಕೆಲವರು ಯೇಸುವಿಗೆ ಪ್ರಾರ್ಥಿಸಬಹುದು ಯಾಕೆಂದರೆ ಅವನು ದೇವರಾಗಿದ್ದಾನೆಂದು ಅವರು ನಂಬುತ್ತಾರೆ. ಯೇಸು ದೇವರ ಮಗ ನಾಗಿದ್ದನು, ಮತ್ತು ಸ್ವತಃ ಅವನೇ ತನ್ನ ತಂದೆಯಾದ ಯೆಹೋವನನ್ನು ಆರಾಧಿಸಿದನು. (ಯೋಹಾನ 20:17) ಈ ವಿಷಯದ ವಿಸ್ತೃತ ಚರ್ಚೆಗಾಗಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ, ಇವರ ಮೂಲಕ ಪ್ರಕಾಶಿಸಲ್ಪಟ್ಟ ನೀವು ತ್ರಯೈಕ್ಯವನ್ನು ನಂಬಬೇಕೋ? ನೋಡಿರಿ.