ಸಮರ್ಪಿತರು—ಯಾರಿಗೆ?
“ಯೆಹೋವನು ನುಡಿದಿರುವ ಎಲ್ಲವನ್ನು ಮಾಡಲು ಮತ್ತು ವಿಧೇಯರಾಗಿರಲು ನಾವು ಸಿದ್ಧರು.”—ವಿಮೋಚನಕಾಂಡ 24:7, NW.
1, 2. (ಎ) ಯಾವ ವಿಷಯಕ್ಕೆ ಕೆಲವು ಜನರು ದೃಢ ನಿಷ್ಠೆಯುಳ್ಳವರಾಗಿದ್ದಾರೆ? (ಬಿ) ಸಮರ್ಪಣೆಯು ಧಾರ್ಮಿಕ ಸದಸ್ಯತ್ವ ಇರುವವರಿಗೆ ಮಾತ್ರ ಸೀಮಿತವಾಗಿದೆಯೊ?
ಫೆಬ್ರವರಿ 1945 ರಲ್ಲಿ, ಜಪಾನ್ನ ಯಾಟಾಬೆ ಫ್ಲೈಯಿಂಗ್ ಕೋರ್ಸ್ನ ಜೀರೋ ಫೈಟರ್ ವಿಮಾನದ ಚಾಲಕರು, ಒಂದು ಸಭಾಂಗಣದಲ್ಲಿ ಸೇರಿದರು. ಅವರಲ್ಲಿ ಪ್ರತಿಯೊಬ್ಬನಿಗೆ, ಅವನು ಕಾಮಿಕಾಜಿ ಆಕ್ರಮಣ ದಳದ ಒಬ್ಬ ಸದಸ್ಯನಾಗುವನೊ ಎಂದು ಬರೆಯಲು, ಕಾಗದದ ಒಂದು ತುಂಡು ಕೊಡಲಾಯಿತು. ಆ ಸಮಯದಲ್ಲಿ ಉಪಸ್ಥಿತನಾಗಿದ್ದ ಒಬ್ಬ ಅಧಿಕಾರಿಯು ಹೇಳುವುದು, “ರಾಷ್ಟ್ರೀಯ ಮುಗ್ಗಟ್ಟಿನ ಒಂದು ಸಮಯದಲ್ಲಿ ಅದು ನನ್ನನ್ನು ಅರ್ಪಿಸಿಕೊಳ್ಳುವ ಕರೆಯಾಗಿತ್ತು ಎಂದು ನಾನು ನೆನಸಿದೆ. ನನ್ನನ್ನು ದೊರಕಿಸಿಕೊಳ್ಳಲು ಭಾವನಾತ್ಮಕವಾಗಿ ಒತ್ತಾಯಿಸಲ್ಪಟ್ಟ ನಂತರ, ಆ ನಿಯೋಗಕ್ಕಾಗಿ ನಾನು ನನ್ನನ್ನು ನೀಡಿಕೊಂಡೆ.” ಒಂದು ಓಕಾ (ಒಂದು ಸ್ಯುಇಸೈಡ್ ರಾಕೆಟ್ ವಿಮಾನ) ವನ್ನು ನಿರ್ವಹಿಸುವಂತೆ ಹಾಗೂ ನಡೆಸುವಂತೆ ಮತ್ತು ಅದನ್ನು ವೈರಿಯ ಸಮರ ನೌಕೆಗೆ ಢಿಕ್ಕಿ ಹೊಡೆಯುವಂತೆ ಅವನು ತರಬೇತಿ ಪಡೆದನು. ಆದರೆ, ಹಾಗೆ ಮಾಡುವ ಮತ್ತು ಹೀಗೆ ತನ್ನ ದೇಶ ಹಾಗೂ ಚಕ್ರವರ್ತಿಗಾಗಿ ಸಾಯುವ ಒಂದು ಅವಕಾಶವನ್ನು ಪಡೆಯುವ ಮೊದಲೆ, ಯುದ್ಧವು ಕೊನೆಗೊಂಡಿತು. ಯುದ್ಧದಲ್ಲಿ ಜಪಾನ್ ಸೋಲನ್ನೊಪ್ಪಿದಾಗ, ಚಕ್ರವರ್ತಿಯಲ್ಲಿದ್ದ ಅವನ ನಂಬಿಕೆಯು ನುಚ್ಚು ನೂರಾಯಿತು.
2 ಒಂದು ಸಮಯದಲ್ಲಿ, ಜಪಾನ್ನಲ್ಲಿ ಅನೇಕರು, ಅವರು ಯಾರನ್ನು ಒಬ್ಬ ಜೀವಂತ ದೇವರೆಂದು ನಂಬಿದರೊ, ಆ ಚಕ್ರವರ್ತಿಗೆ ದೃಢನಿಷ್ಠೆಯುಳ್ಳವರಾಗಿದ್ದರು. ಇತರ ದೇಶಗಳಲ್ಲಿ, ಭಕ್ತಿಯ ಇತರ ವಸ್ತುಗಳು ಇದ್ದವು ಮತ್ತು ಇನ್ನೂ ಅಸ್ತಿತ್ವದಲ್ಲಿವೆ. ಲಕ್ಷಾಂತರ ಜನರು, ಅನೇಕ ವೇಳೆ ವಿಗ್ರಹಗಳಿಂದ ಪ್ರತಿನಿಧಿಸಲ್ಪಡುವ ಮರಿಯಳಿಗೆ, ಬುದ್ಧನಿಗೆ, ಅಥವಾ ಇತರ ದೇವರುಗಳಿಗೆ ನಿಷ್ಠೆಯುಳ್ಳವರಾಗಿದ್ದಾರೆ. ಭಾವೋದ್ರೇಕಕಾರಿ ವಾಗ್ಮಿತೆಯಿಂದ ಪ್ರಭಾವಿತರಾಗಿ, ಕೆಲವರು ತಾವು ಕಷ್ಟಪಟ್ಟು ದುಡಿದ ಹಣವನ್ನು ಟಿವಿ ಸೌವಾರ್ತಿಕರಿಗೆ ನೀಡುತ್ತಾರೆ. ಇದು ಭಕ್ತಿಗೆ ಸರಿಸಮಾನವಾಗಿರುವ ಮನಃಪೂರ್ವಕವಾದ ಬೆಂಬಲವಾಗಿರುತ್ತದೆ. ಯುದ್ಧದ ನಂತರ, ನಿರಾಶೆಗೊಂಡ ಜಪಾನಿಯರು, ತಮ್ಮ ಜೀವಿತಗಳನ್ನು ಸಮರ್ಪಿಸಬಹುದಾದ ಒಂದು ಹೊಸ ವಸ್ತುವನ್ನು ಹುಡುಕಿದರು. ಕೆಲವರಿಗೆ, ಕೆಲಸವು ಆ ವಸ್ತುವಾಗಿ ಪರಿಣಮಿಸಿತು. ಪೂರ್ವದಲ್ಲಾಗಲಿ ಪಶ್ಜಿಮದಲ್ಲಾಗಲಿ, ಅನೇಕರು ಐಶ್ವರ್ಯಗಳನ್ನು ಶೇಖರಿಸುವುದಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಯುವ ಜನರು, ತಾವು ಯಾರ ಜೀವನ ಶೈಲಿಗಳನ್ನು ಅನುಕರಿಸುತ್ತಾರೊ, ಅಂತಹ ಸಂಗೀತಗಾರರ ಮೇಲೆ ತಮ್ಮ ಜೀವನವನ್ನು ಕೇಂದ್ರೀಕರಿಸುತ್ತಾರೆ. ತಮ್ಮ ಸ್ವಂತ ಬಯಕೆಗಳನ್ನು ತಮ್ಮ ಭಕ್ತಿಯ ವಸ್ತುವನ್ನಾಗಿ ಮಾಡುತ್ತಾ, ಅನೇಕರು ಇಂದು ಆತ್ಮಾರಾಧಕರಾಗಿದ್ದಾರೆ. (ಫಿಲಿಪ್ಪಿ 3:19; 2 ತಿಮೊಥೆಯ 3:2) ಆದರೆ ಇಂತಹ ವಿಷಯಗಳು ಯಾ ಜನರು ನಿಜವಾಗಿಯೂ ಒಬ್ಬ ವ್ಯಕ್ತಿಯ ಪೂರ್ಣ ಹೃದಯದ ಭಕ್ತಿಗೆ ಅರ್ಹರೊ?
3. ಭಕ್ತಿಯ ಕೆಲವು ವಸ್ತುಗಳು ಅಯೋಗ್ಯವಾಗಿ ಪರಿಣಮಿಸಿವೆ ಹೇಗೆ?
3 ವಾಸ್ತವಿಕತೆಯನ್ನು ಎದುರಿಸುವಾಗ, ವಿಗ್ರಹಾರಾಧಕರು ಅನೇಕ ವೇಳೆ ಭ್ರಮನಿರಸನಗೊಳ್ಳುತ್ತಾರೆ. ತಮ್ಮ ವಿಗ್ರಹಗಳು “ಮನುಷ್ಯರ ಕೈಕೆಲಸ” ಕ್ಕಿಂತ ಹೆಚ್ಚೇನೂ ಅಲ್ಲವೆಂದು ಆರಾಧಕರು ಗ್ರಹಿಸುವಾಗ, ವಿಗ್ರಹಗಳಿಗಾಗಿರುವ ಭಕ್ತಿಯು ಆಶಾಭಂಗದಲ್ಲಿ ಫಲಿಸುತ್ತದೆ. (ಕೀರ್ತನೆ 115:4) ಪ್ರಧಾನ ಸೌವಾರ್ತಿಕರನ್ನೊಳಗೊಂಡ ಅಪನಿಂದೆಗಳು ಬಯಲುಗೊಳಿಸಲ್ಪಡುವಾಗ, ಪ್ರಾಮಾಣಿಕ ಜನರು ಆಶಾಭಂಗಗೊಳ್ಳುತ್ತಾರೆ. “ನೀರ್ಗುಳ್ಳೆ” ಯಂತಹ ಆರ್ಥಿಕ ಪರಿಸ್ಥಿತಿಯು ಬಿರಿದಾಗ, ಕೆಲಸದಿಂದ ತೆಗೆದುಹಾಕಲ್ಪಡುವವರ ಪಟ್ಟಿಯಲ್ಲಿ ತಮ್ಮನ್ನು ಕಂಡುಕೊಂಡಾಗ, ಕಾರ್ಮಿಕರು ಮಾನಸಿಕ ಅಸ್ವಸ್ಥತೆಗಳನ್ನು ಅನುಭವಿಸಿದರು. ಇತ್ತೀಚಿನ ವ್ಯಾಪಾರದ ಕುಸಿತವು ಧನದ ಆರಾಧಕರಿಗೆ ಬಲವಾದ ಏಟನ್ನು ಕೊಟ್ಟಿತು. ಬಹಳಷ್ಟು ಹಣಮಾಡುವ ನಿರೀಕ್ಷೆಯಿಂದ ತೆಗೆದುಕೊಳ್ಳಲ್ಪಟ್ಟ ಸಾಲಗಳು, ಅವುಗಳನ್ನು ಹಿಂದಿರುಗಿಸಲು ಶಕ್ತರಾಗುವ ಕಡಿಮೆ ಪ್ರತೀಕ್ಷೆಗಳಿಂದ ಒಂದು ಹೊರೆಯಾಗಿ ಪರಿಣಮಿಸಿದವು. (ಮತ್ತಾಯ 6:24, ಪಾದಟಿಪ್ಪಣಿ) ಮೂರ್ತೀಕರಿಸಲ್ಪಟ್ಟ ರಾಕ್ ತಾರೆಗಳು ಮತ್ತು ಇತರ ಮನೋರಂಜಕರು ಮರಣ ಹೊಂದುವಾಗ ಯಾ ಜನಪ್ರಿಯತೆಯ ವಿಷಯದಲ್ಲಿ ಬಾಡಿ ಹೋಗುವಾಗ, ಅವರ ಆರಾಧಕರು ತೊರೆಯಲ್ಪಟ್ಟವರಾಗುತ್ತಾರೆ. ಮತ್ತು ಆತ್ಮ ಸುಖಾನುಭವದ ಪಥದಲ್ಲಿ ನಡೆದಿರುವವರು, ಅನೇಕ ವೇಳೆ ಕಹಿಯಾದ ಫಲವನ್ನು ಕೊಯ್ಯುತ್ತಾರೆ.—ಗಲಾತ್ಯ 6:7.
4. ಅಯೋಗ್ಯವಾದ ವಿಷಯಗಳಿಗೆ ತಮ್ಮ ಜೀವಿತಗಳನ್ನು ಸಮರ್ಪಿಸುವಂತೆ ಜನರನ್ನು ಯಾವುದು ಪ್ರೇರೇಪಿಸುತ್ತದೆ?
4 ತಮ್ಮನ್ನು ಇಂತಹ ನಿರರ್ಥಕತೆಗೆ ಸಮರ್ಪಿಸಿಕೊಳ್ಳುವಂತೆ ಜನರನ್ನು ಯಾವುದು ಪ್ರೇರೇಪಿಸುತ್ತದೆ? ಬಹಳಷ್ಟು ಮಟ್ಟಿಗೆ ಅದು ಪಿಶಾಚನಾದ ಸೈತಾನನ ಕೆಳಗಿರುವ ಲೋಕದ ಆತ್ಮವಾಗಿದೆ. (ಎಫೆಸ 2:2, 3) ಈ ಆತ್ಮದ ಪ್ರಭಾವವು ವಿಭಿನ್ನ ವಿಧಗಳಲ್ಲಿ ತೋರಿಬರುತ್ತದೆ. ವ್ಯಕ್ತಿಯೊಬ್ಬನು ತನ್ನ ಪೂರ್ವಜರಿಂದ ಸಾಗಿಸಲ್ಪಟ್ಟಿರುವ ಕುಟುಂಬದ ಸಂಪ್ರದಾಯದಿಂದ ನಿಯಂತ್ರಿಸಲ್ಪಟ್ಟಿರಬಹುದು. ಶಿಕ್ಷಣ ಮತ್ತು ಪಾಲನೆಯು, ಆಲೋಚನೆಯನ್ನು ಪ್ರಬಲವಾಗಿ ಪ್ರಭಾವಿಸಬಹುದು. ಕೆಲಸದ ಸ್ಥಳದ ವಾತಾವರಣವು, “ಸಾಂಘಿಕ ಯೋಧ” ರನ್ನು ಕಾರ್ಯವ್ಯಸನಕ್ಕೆ ತಳ್ಳಬಹುದು, ಅದು ಜೀವಕ್ಕೆ ಬೆದರಿಕೆಯನ್ನೊಡ್ಡುವಂತಹದ್ದಾಗಿರಬಹುದು. ಹೆಚ್ಚಿನ ವಿಷಯಗಳಿಗಾಗಿರುವ ಒಂದು ಬಯಕೆಯು, ಲೋಕದ ಪ್ರಾಪಂಚಿಕ ಮನೋಭಾವದಿಂದ ಹುಟ್ಟುತ್ತದೆ. ತಮ್ಮ ಸ್ವಂತ ಸ್ವಾರ್ಥ ಬಯಕೆಗಳಿಗೆ ತಮ್ಮನ್ನು ಮೀಸಲಾಗಿಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಾ, ಅನೇಕರ ಹೃದಯಗಳು ಭ್ರಷ್ಟಗೊಳ್ಳುತ್ತವೆ. ಈ ಬೆನ್ನಟ್ಟುವಿಕೆಗಳು ಇಂತಹ ಭಕ್ತಿಗೆ ಅರ್ಹವಾಗಿವೆಯೊ ಇಲ್ಲವೊ ಎಂಬುದನ್ನು ಪರಿಶೀಲಿಸಲು ಅವರು ತಪ್ಪಿಹೋಗುತ್ತಾರೆ.
ಒಂದು ಸಮರ್ಪಿತ ಜನಾಂಗ
5. 3,500 ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಯೆಹೋವನಿಗೆ ಯಾವ ಸಮರ್ಪಣೆಯು ಮಾಡಲಾಗಿತ್ತು?
5 3,500 ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಜನರ ಒಂದು ಜನಾಂಗವು ಭಕ್ತಿಯ ಹೆಚ್ಚು ಅರ್ಹವಾದ ಒಂದು ವಸ್ತುವನ್ನು ಕಂಡುಕೊಂಡಿತು. ತಮ್ಮನ್ನು ಅವರು ಸಾರ್ವಭೌಮ ದೇವರಾದ ಯೆಹೋವನಿಗೆ ಸಮರ್ಪಿಸಿಕೊಂಡರು. ಒಂದು ಗುಂಪಿನೋಪಾದಿ ಇಸ್ರಾಯೇಲ್ ಜನಾಂಗವು, ಸೀನಾಯಿಯ ಮರುಭೂಮಿಯಲ್ಲಿ ದೇವರಿಗೆ ತನ್ನ ಸಮರ್ಪಣೆಯನ್ನು ಘೋಷಿಸಿತು.
6. ಇಸ್ರಾಯೇಲ್ಯರಿಗೆ ದೇವರ ನಾಮದ ಮಹತ್ವವು ಏನಾಗಿರಲಿತ್ತು?
6 ಈ ವಿಧದಲ್ಲಿ ಕ್ರಿಯೆಗೈಯುವಂತೆ ಇಸ್ರಾಯೇಲ್ಯರನ್ನು ಯಾವುದು ಪ್ರೇರೇಪಿಸಿತು? ಐಗುಪ್ತದಲ್ಲಿ ಅವರು ದಾಸತ್ವದಲಿದ್ಲಾಗ್ದ, ಅವರನ್ನು ಸ್ವಾತಂತ್ರ್ಯಕ್ಕೆ ನಡೆಸುವಂತೆ ಯೆಹೋವನು ಮೋಶೆಯನ್ನು ನಿಯೋಜಿಸಿದನು. ತನ್ನನ್ನು ಕಳುಹಿಸಿದ್ದ ದೇವರನ್ನು ತಾನು ಹೇಗೆ ವರ್ಣಿಸಬೇಕೆಂದು ಮೋಶೆಯು ಕೇಳಿದನು, ಮತ್ತು ದೇವರು ತನ್ನನ್ನು ಹೀಗೆ ಬಹಿರಂಗಪಡಿಸಿಕೊಂಡನು, “ನಾನು ಏನಾಗಿ ಪರಿಣಮಿಸಲು ಬಯಸುವೆನೋ, ಅಂತೆಯೇ ಪರಿಣಮಿಸುವೆನು.” ಇಸ್ರಾಯೇಲ್ ಪುತ್ರರಿಗೆ, “ಪರಿಣಮಿಸುವೆನು ಎಂಬಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ,” ಎಂದು ಹೇಳುವಂತೆ ಆತನು ಮೋಶೆಯನ್ನು ನಿರ್ದೇಶಿಸಿದನು. (ವಿಮೋಚನಕಾಂಡ 3:13, 14, NW) ತನ್ನ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ಯೆಹೋವನು ಯಾವುದು ಅಗತ್ಯವಾಗಿದೆಯೊ ಅದಾಗಿ ಪರಿಣಮಿಸುತ್ತಾನೆಂದು, ಈ ಅಭಿವ್ಯಕ್ತಿಯು ಸೂಚಿಸಿತು. ಆತನು, ಇಸ್ರಾಯೇಲ್ಯರ ಪೂರ್ವಜರಿಗೆ ಎಂದೂ ತಿಳಿದಿದ್ದಿರದ ವಿಧದಲ್ಲಿ, ವಾಗ್ದಾನಗಳನ್ನು ನೆರವೇರಿಸುವವನೋಪಾದಿ ತನ್ನನ್ನು ಪ್ರಕಟಪಡಿಸಿಕೊಳ್ಳಲಿದ್ದನು.—ವಿಮೋಚನಕಾಂಡ 6:2, 3.
7, 8. ಯೆಹೋವನು ತಮ್ಮ ಭಕ್ತಿಗೆ ಅರ್ಹನಾದ ದೇವರಾಗಿದ್ದನೆಂಬ ವಿಷಯದಲ್ಲಿ ಇಸ್ರಾಯೇಲ್ಯರಿಗೆ ಯಾವ ಸಾಕ್ಷ್ಯಗಳಿದ್ದವು?
7 ಇಸ್ರಾಯೇಲ್ಯರು ಹತ್ತು ಬಾಧೆಗಳಿಂದ ಉಂಟಾದ ಐಗುಪ್ತ ದೇಶದ ಮತ್ತು ಅದರ ಜನರ ಸಂಕಟವನ್ನು ನೋಡಿದರು. (ಕೀರ್ತನೆ 78:44-51) ಆಗ, ಸ್ತ್ರೀಯರನ್ನು ಮತ್ತು ಮಕ್ಕಳನ್ನು ಸೇರಿಸಿ, ಬಹುಶಃ ಸುಮಾರು ಮೂವತ್ತು ಲಕ್ಷಕ್ಕಿಂತಲೂ ಹೆಚ್ಚಿನವರು, ಗಂಟುಮೂಟೆ ಕಟ್ಟಿ ಗೋಷೆನ್ ಸೀಮೆಯಿಂದ ಒಂದೇ ರಾತ್ರಿಯಲ್ಲಿ ನಿರ್ಗಮಿಸಿದರು. ವಸ್ತುತಃ ಅದೇ ಒಂದು ಗಮನಾರ್ಹವಾದ ಕಾರ್ಯವಾಗಿತ್ತು. (ವಿಮೋಚನಕಾಂಡ 12:37, 38) ಮುಂದೆ, ಕೆಂಪು ಸಮುದ್ರದ ಬಳಿಯಲ್ಲಿ, ಇಸ್ರಾಯೇಲ್ಯರು ದಾಟಿಹೋಗುವಂತೆ ಸಮುದ್ರವನ್ನು ವಿಭಾಗಿಸುವ ಮೂಲಕ ಮತ್ತು ತದನಂತರ ಬೆನ್ನಟ್ಟಿ ಬರುತ್ತಿದ್ದ ಐಗುಪ್ತ್ಯರನ್ನು ಮುಳುಗಿಸಲು ಅದನ್ನು ಮುಚ್ಚುವ ಮೂಲಕ, ಫರೋಹನ ಸೈನಿಕ ದಳಗಳಿಂದ ತನ್ನ ಜನರನ್ನು ಆತನು ರಕ್ಷಿಸಿದಾಗ, ತಾನು “ಒಬ್ಬ ಯುದ್ಧಶೂರನು” ಎಂದು ಯೆಹೋವನು ಪ್ರಕಟಿಸಿದನು. ಪರಿಣಾಮವಾಗಿ, “ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿ . . . ನಂಬಿಕೆಯಿಟ್ಟರು.”—ವಿಮೋಚನಕಾಂಡ 14:31; 15:3; ಕೀರ್ತನೆ 136:10-15.
8 ದೇವರ ನಾಮವು ಏನನ್ನು ಅರ್ಥೈಸುತ್ತದೆ ಎಂಬ ವಿಷಯದಲ್ಲಿ ಸಾಕ್ಷ್ಯದ ಕೊರತೆ ಇನ್ನೂ ಇದೆಯೋ ಎಂಬಂತೆ, ಇಸ್ರಾಯೇಲ್ಯರು ಆಹಾರ ಮತ್ತು ನೀರಿನ ಅಭಾವದ ಕುರಿತು ಯೆಹೋವನ ಮತ್ತು ಆತನ ಪ್ರತಿನಿಧಿಯಾದ ಮೋಶೆಯ ವಿರುದ್ಧ ಗುಣುಗುಟ್ಟಿದರು. ಯೆಹೋವನು ಲಾವಕ್ಕಿಯನ್ನು ಕಳುಹಿಸಿದನು, ಮನ್ನವನ್ನು ಸುರಿಸಿದನು, ಮತ್ತು ಮೆರೀಬಾದಲ್ಲಿ ಬಂಡೆಯಿಂದ ನೀರು ಹರಿದು ಬರುವಂತೆ ಮಾಡಿದನು. (ವಿಮೋಚನಕಾಂಡ 16:2-5, 12-15, 31; 17:2-7) ಅಮಾಲೇಕ್ಯರ ಆಕ್ರಮಣದಿಂದಲೂ ಯೆಹೋವನು ಇಸ್ರಾಯೇಲ್ಯರನ್ನು ಕಾಪಾಡಿದನು. (ವಿಮೋಚನಕಾಂಡ 17:8-13) ಯೆಹೋವನು ನಂತರ ಮೋಶೆಗೆ ಏನನ್ನು ಘೋಷಿಸಿದನೊ, ಅದನ್ನು ಯಾವ ವಿಧದಲ್ಲೂ ಇಸ್ರಾಯೇಲ್ಯರು ನಿರಾಕರಿಸುವಂತಿರಲಿಲ್ಲ, “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು.” (ವಿಮೋಚನಕಾಂಡ 34:6, 7) ನಿಶ್ಚಯವಾಗಿಯೂ, ಅವರ ಭಕ್ತಿಗೆ ತಾನೊಬ್ಬ ಅರ್ಹನಾದ ವ್ಯಕ್ತಿಯೆಂದು ಯೆಹೋವನು ರುಜುಪಡಿಸಿದನು.
9. ಆತನನ್ನು ಸೇವಿಸಲಿಕ್ಕಾಗಿ ತಮ್ಮ ಸಮರ್ಪಣೆಯನ್ನು ವ್ಯಕ್ತಪಡಿಸುವ ಅವಕಾಶವನ್ನು ಯೆಹೋವನು ಇಸ್ರಾಯೇಲ್ಯರಿಗೆ ಏಕೆ ನೀಡಿದನು, ಮತ್ತು ಅವರು ಹೇಗೆ ಪ್ರತಿಕ್ರಿಯಿಸಿದರು?
9 ಐಗುಪ್ತದಿಂದ ಅವರನ್ನು ತಾನು ಬಿಡಿಸಿದ್ದ ಕಾರಣ ಇಸ್ರಾಯೇಲ್ಯರ ಒಡೆತನದ ಹಕ್ಕು ಯೆಹೋವನಿಗೆ ಇತ್ತಾದರೂ, ದಯೆ ಮತ್ತು ಕರುಣೆಯುಳ್ಳ ದೇವರೋಪಾದಿ ಆತನು, ಸ್ವಇಷ್ಟದಿಂದ ಆತನನ್ನು ಸೇವಿಸುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಲು ಅವಕಾಶವನ್ನು ಅವರಿಗೆ ನೀಡಿದನು. (ಧರ್ಮೋಪದೇಶಕಾಂಡ 7:7, 8; 30:15-20) ತನ್ನ ಮತ್ತು ಇಸ್ರಾಯೇಲ್ಯರ ನಡುವಿನ ಒಡಂಬಡಿಕೆಗಾಗಿ ಷರತ್ತುಗಳನ್ನೂ ಆವನು ಸ್ಥಾಪಿಸಿದನು. (ವಿಮೋಚನಕಾಂಡ 19:3-8; 20:1–23:33) ಈ ಷರತ್ತುಗಳು ಮೋಶೆಯ ಮೂಲಕ ತಿಳಿಸಲ್ಪಟ್ಟಾಗ, ಇಸ್ರಾಯೇಲ್ಯರು ಘೋಷಿಸಿದ್ದು: “ಯೆಹೋವನು ನುಡಿದಿರುವ ಎಲ್ಲವನ್ನು ಮಾಡಲು ಮತ್ತು ವಿಧೇಯರಾಗಿರಲು ನಾವು ಸಿದ್ಧರು.” (ವಿಮೋಚನಕಾಂಡ 24:3-7, NW) ತಮ್ಮ ಸ್ವಂತ ಇಚ್ಛಾಸ್ವಾತಂತ್ರ್ಯದಿಂದ, ಅವರು ಸಾರ್ವಭೌಮ ಕರ್ತನಾದ ಯೆಹೋವನಿಗೆ ಸಮರ್ಪಿತವಾದ ಒಂದು ಜನಾಂಗವಾದರು.
ಗಣ್ಯತೆಯು ಸಮರ್ಪಣೆಗೆ ನಡೆಸುತ್ತದೆ
10. ಯೆಹೋವನಿಗೆ ನಮ್ಮ ಸಮರ್ಪಣೆಯು ಯಾವುದರ ಮೇಲೆ ಆಧರಿಸಿರಬೇಕು?
10 ಸೃಷ್ಟಿಕರ್ತನಾದ ಯೆಹೋವನು, ನಮ್ಮ ಪೂರ್ಣ ಹೃದಯದ ಭಕ್ತಿಗೆ ಅರ್ಹನಾಗಿರುತ್ತಾ ಮುಂದುವರಿದಿದ್ದಾನೆ. (ಮಲಾಕಿಯ 3:6; ಮತ್ತಾಯ 22:37; ಪ್ರಕಟನೆ 4:11) ಹಾಗಿದ್ದರೂ, ನಮ್ಮ ಸಮರ್ಪಣೆಯು ಅವಿಚಾರಿತ ನಂಬಿಕೆ, ಕ್ಷಣಿಕವಾದ ಭಾವನೆಗಳು, ಅಥವಾ ಇತರರ—ಹೆತ್ತವರಿಂದ ಸಹ—ಒತ್ತಯಾದ ಮೇಲೆ ಆಧರಿತವಾಗಿರಬಾರದು. ಅದು ಯೆಹೋವನ ಕುರಿತಾದ ಸತ್ಯದ ನಿಷ್ಕೃಷ್ಟವಾದ ಜ್ಞಾನ ಮತ್ತು ಯೆಹೋವನು ನಮಗಾಗಿ ಏನನ್ನು ಮಾಡಿರುವನೊ ಅದಕ್ಕಾಗಿರುವ ಗಣ್ಯತೆಯ ಮೇಲೆ ಆಧರಿಸಿರಬೇಕು. (ರೋಮಾಪುರ 10:2; ಕೊಲೊಸ್ಸೆ 1:9, 10; 1 ತಿಮೊಥೆಯ 2:4) ಸ್ವಇಷ್ಟದಿಂದ ತಮ್ಮ ಸಮರ್ಪಣೆಯನ್ನು ವ್ಯಕ್ತಪಡಿಸುವ ಅವಕಾಶವನ್ನು ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಂತೆಯೇ, ಸ್ವಇಷ್ಟದಿಂದ ನಮ್ಮನ್ನು ಸಮರ್ಪಿಸಿಕೊಳ್ಳುವ ಮತ್ತು ಆ ಸಮರ್ಪಣೆಯನ್ನು ಬಹಿರಂಗಪಡಿಸುವ ಅವಕಾಶವನ್ನು ಆತನು ನಮಗೆ ಕೊಡುತ್ತಾನೆ.—1 ಪೇತ್ರ 3:21.
11. ಬೈಬಲಿನ ನಮ್ಮ ಅಧ್ಯಯನವು ಯೆಹೋವನ ಕುರಿತು ಏನನ್ನು ಪ್ರಕಟಿಸಿದೆ?
11 ಬೈಬಲಿನ ಅಧ್ಯಯನದ ಮುಖಾಂತರ, ನಾವು ದೇವರನ್ನು ಒಬ್ಬ ವ್ಯಕ್ತಿಯಂತೆ ತಿಳಿಯುತ್ತೇವೆ. ಸೃಷ್ಟಿಯಲ್ಲಿ ಪ್ರತಿಬಿಂಬಿಸಲ್ಪಟ್ಟಂತೆ ಆತನ ಗುಣಗಳನ್ನು ವಿವೇಚಿಸಲು ಆತನ ವಾಕ್ಯವು ನಮಗೆ ಸಹಾಯ ಮಾಡುತ್ತದೆ. (ಕೀರ್ತನೆ 19:1-4) ಆತನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಒಂದು ರಹಸ್ಯಮಯ ತ್ರಯೈಕ್ಯವಲ್ಲವೆಂದು ಆತನ ವಾಕ್ಯದಿಂದ ನಾವು ನೋಡಬಲ್ಲೆವು. ಆತನು ಯುದ್ಧಗಳಲ್ಲಿ ಅಪಜಯ ಹೊಂದಿ, ಹೀಗೆ ತನ್ನ ದೇವತ್ವವನ್ನು ತ್ಯಜಿಸಬೇಕಾಗಿಲ್ಲ. (ವಿಮೋಚನಕಾಂಡ 15:11; 1 ಕೊರಿಂಥ 8:5, 6; ಪ್ರಕಟನೆ 11:17, 18) ತನ್ನ ವಾಗ್ದಾನಗಳನ್ನು ಆತನು ನೆರವೇರಿಸಿರುವುದರಿಂದ, ಯೆಹೋವ ಎಂಬ ಆತನ ಸುಂದರವಾದ ನಾಮವು ಏನನ್ನು ಪ್ರತಿನಿಧಿಸುತ್ತದೆ ಎಂಬುದರ ಕುರಿತು ನಾವು ಮರುಜ್ಞಾಪಿಸಲ್ಪಡುತ್ತೇವೆ. ಆತನು ಮಹಾ ಉದ್ದೇಶಕನಾಗಿದ್ದಾನೆ. (ಆದಿಕಾಂಡ 2:4, ಪಾದಟಿಪ್ಪಣಿ; ಕೀರ್ತನೆ 83:18; ಯೆಶಾಯ 46:9-11) ಬೈಬಲನ್ನು ಅಭ್ಯಸಿಸುವ ಮೂಲಕ, ಆತನು ಎಷ್ಟು ನಂಬಿಗಸ್ತನು ಮತ್ತು ವಿಶ್ವಾಸಾರ್ಹನೆಂದು ನಾವು ಸ್ಪಷ್ಟವಾಗಿಗಿ ಅರ್ಥಮಾಡಿಕೊಳ್ಳುತ್ತೇವೆ.—ಧರ್ಮೋಪದೇಶಕಾಂಡ 7:9; ಕೀರ್ತನೆ 19:7, 9; 111:7.
12. (ಎ) ಯೆಹೋವನೆಡೆಗೆ ನಮ್ಮನ್ನು ಯಾವುದು ಆಕರ್ಷಿಸುತ್ತದೆ? (ಬಿ) ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ನಿಜ ಜೀವನ ಅನುಭವಗಳು, ಯೆಹೋವನನ್ನು ಸೇವಿಸಲು ಒಬ್ಬನು ಬಯಸುವಂತೆ ಹೇಗೆ ಪ್ರೇರೇಪಿಸುತ್ತವೆ? (ಸಿ) ಯೆಹೋವನನ್ನು ಸೇವಿಸುವುದರ ಕುರಿತು ನಿಮಗೆ ಹೇಗನಿಸುತ್ತದೆ?
12 ಯೆಹೋವನ ಕಡೆಗೆ ನಮ್ಮನ್ನು ವಿಶೇಷವಾಗಿ ಆಕರ್ಷಿಸುವ ವಿಷಯವು ಆತನ ಪ್ರೀತಿಪರ ವ್ಯಕ್ತಿತ್ವವಾಗಿದೆ. ಮನುಷ್ಯರೊಂದಿಗೆ ನಿರ್ವಹಿಸುವಲ್ಲಿ ಆತನು ಎಷ್ಟು ಪ್ರೀತಿಪರನು, ಕ್ಷಮಿಸುವಾತನು, ಮತ್ತು ಕರುಣೆಯುಳ್ಳವನು ಆಗಿದ್ದಾನೆಂಬುದನ್ನು ಬೈಬಲ್ ಪ್ರದರ್ಶಿಸುತ್ತದೆ. ಯೋಬನು ತನ್ನ ಸಮಗ್ರತೆಯನ್ನು ನಂಬಿಗಸ್ತಿಕೆಯಿಂದ ಕಾಪಾಡಿಕೊಂಡ ಬಳಿಕ, ಯೋಬನು ಏಳಿಗೆ ಹೊಂದುವಂತೆ ಆತನು ಹೇಗೆ ಮಾಡಿದನೆಂಬುದರ ಕುರಿತು ಯೋಚಿಸಿರಿ. “ಕರ್ತನು [“ಯೆಹೋವನು,” NW] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು” ಯೋಬನ ಅನುಭವವು ಎತ್ತಿತೋರಿಸುತ್ತದೆ. (ಯಾಕೋಬ 5:11, ಯೋಬ 42:12-17) ದಾವೀದನು ವ್ಯಭಿಚಾರ ಮಾಡಿದಾಗ ಮತ್ತು ಕೊಲೆಗೈದಾಗ, ಅವನೊಂದಿಗೆ ಯೆಹೋವನು ಹೇಗೆ ವ್ಯವಹರಿಸಿದನು ಎಂಬುದರ ಕುರಿತು ಯೋಚಿಸಿರಿ. ಹೌದು, ಪಾಪಿಯು ಆತನನ್ನು ‘ಕುಗ್ಗಿದ ಮತ್ತು ಜಜ್ಜಿಹೋದ ಮನಸ್ಸಿ’ ನಿಂದ ಸಮೀಪಿಸುವಾಗ, ಗಂಭೀರವಾದ ಪಾಪಗಳನ್ನೂ ಕ್ಷಮಿಸಲು ಯೆಹೋವನು ಸಿದ್ಧನಾಗಿದ್ದಾನೆ. (ಕೀರ್ತನೆ 51:3-11, 17) ಮೊದಲು ದೇವರ ಜನರ ದೃಢಸಂಕಲ್ಪದ ಹಿಂಸಕನಾಗಿದ್ದ ತಾರ್ಸದ ಸೌಲನೊಂದಿಗೆ ಯೆಹೋವನು ವ್ಯವಹರಿಸಿದ ವಿಧದ ಕುರಿತು ಯೋಚಿಸಿರಿ. ಈ ಉದಾಹರಣೆಗಳು, ದೇವರ ಕರುಣೆಯನ್ನು ಮತ್ತು ಪಶ್ಚಾತಾಪ್ತಪಡುವವರನ್ನು ಉಪಯೋಗಿಸುವ ಆತನ ಉದಾರ ಸ್ವಇಷ್ವವನ್ನು ಎತ್ತಿತೋರಿಸುತ್ತವೆ. (1 ಕೊರಿಂಥ 15:9; 1 ತಿಮೊಥೆಯ 1:15, 16) ಈ ಪ್ರೀತಿಪರ ದೇವರನ್ನು ಸೇವಿಸುವುದಕ್ಕೆ ತನ್ನ ಜೀವವನ್ನೇ ಈಡು ಮಾಡಸಾಧ್ಯವಿತ್ತೆಂದು ಪೌಲನಿಗೆ ಅನಿಸಿತು. (ರೋಮಾಪುರ 14:8) ನಿಮಗೂ ಹಾಗೆಯೇ ಅನಿಸುತ್ತದೊ?
13. ಸಹೃದಯವುಳ್ಳ ಜನರು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ, ಯೆಹೋವನ ಕಡೆಯಿಂದ ಪ್ರೀತಿಯ ಯಾವ ಮಹಾ ಅಭಿವ್ಯಕ್ತಿಯು ಒತ್ತಾಯಿಸುತ್ತದೆ?
13 ಇಸ್ರಾಯೇಲ್ಯರಿಗೆ ಯೆಹೋವನು ಐಗುಪ್ತದಲಿನ್ಲ ದಾಸತ್ವದಿಂದ ರಕ್ಷಣೆಯನ್ನು ಒದಗಿಸಿದನು, ಮತ್ತು ಪಾಪ ಹಾಗೂ ಮರಣದ ದಾಸತ್ವದಿಂದ ನಮ್ಮನ್ನು ರಕ್ಷಿಸುವ ಒಂದು ವಿಧಾನ—ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞ—ವನ್ನು ಆತನು ಸಿದ್ಧಗೊಳಿಸಿದ್ದಾನೆ. (ಯೋಹಾನ 3:16) ಪೌಲನು ಹೇಳುವುದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾಪುರ 5:8) ಈ ಪ್ರೀತಿಪರ ಏರ್ಪಾಡು ಸಹೃದಯವುಳ್ಳವರನ್ನು ಯೇಸು ಕ್ರಿಸ್ತನ ಮುಖಾಂತರ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಒತ್ತಾಯಿಸುತ್ತದೆ. “ಕ್ರಿಸ್ತನ ಪ್ರೀತಿಯು ನಮಗೆ ಒತ್ತಯಾಮಾಡುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡೆವು. ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.”—2 ಕೊರಿಂಥ 5:14, 15; ರೋಮಾಪುರ 8:35-39.
14. ನಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸುವಂತೆ ನಮ್ಮನ್ನು ಪ್ರೇರೇಪಿಸುವುದರಲ್ಲಿ ಆತನ ವ್ಯವಹಾರಗಳ ಜ್ಞಾನ ಮಾತ್ರ ಸಾಕೊ? ವಿವರಿಸಿರಿ.
14 ಆದರೂ, ಯೆಹೋವನ ವ್ಯಕ್ತಿತ್ವದ ಮತ್ತು ಮಾನವಜಾತಿಯೊಂದಿಗಿನ ಆತನ ವ್ಯವಹಾರಗಳ ಕುರಿತಾದ ಜ್ಞಾನವಿರುವುದು ಸಾಲದು. ಯೆಹೋವನಿಗಾಗಿ ವೈಯಕ್ತಿಕ ಗಣ್ಯತೆಯನ್ನು ಬೆಳೆಸಬೇಕು. ಅದನ್ನು ಹೇಗೆ ಮಾಡಸಾಧ್ಯವಿದೆ? ನಮ್ಮ ಜೀವಿತಗಳಲ್ಲಿ ದೇವರ ವಾಕ್ಯವನ್ನು ಅನ್ವಯಿಸುವ ಮೂಲಕ ಮತ್ತು ಅದರಲ್ಲಿ ಕಂಡುಕೊಳ್ಳಲ್ಪಡುವ ತತ್ವಗಳು ನಿಜವಾಗಿಯೂ ಪರಿಣಾಮಕಾರಿಯಾಗಿವೆ ಎಂದು ನೇರವಾದ ಅನುಭವದ ಮುಖಾಂತರ ಗ್ರಹಿಸುವ ಮೂಲಕವೇ. (ಯೆಶಾಯ 48:17) ಸೈತಾನನ ಆಳಿಕೆಯ ಕೆಳಗಿರುವ ಈ ದುಷ್ಟ ಲೋಕದ ಕೆಸರಿನಿಂದ ಯೆಹೋವನು ನಮ್ಮನ್ನು ರಕ್ಷಿಸಿದ್ದಾನೆಂದು ನಮಗೆ ಅನಿಸಬೇಕು. (ಹೋಲಿಸಿ 1 ಕೊರಿಂಥ 6:11.) ಸರಿಯಾದದ್ದನ್ನು ಮಾಡುವ ನಮ್ಮ ಹೋರಾಟದಲ್ಲಿ, ಯೆಹೋವನ ಮೇಲೆ ಆತುಕೊಳ್ಳಲು ನಾವು ಕಲಿಯುತ್ತೇವೆ, ಮತ್ತು ಯೆಹೋವನು “ಪ್ರಾರ್ಥನೆಯನ್ನು ಕೇಳುವ” ಜೀವಂತ ದೇವರಾಗಿದ್ದಾನೆಂಬ ಅನುಭವವು ಸ್ವತಃ ನಮಗಾಗುತ್ತದೆ. (ಕೀರ್ತನೆ 62:8; 65:2) ಬೇಗನೆ ಆತನಿಗೆ ಬಹಳ ನಿಕಟವಾಗಿದ್ದೇವೆಂದು ನಮಗೆ ಅನಿಸುತ್ತದೆ ಮತ್ತು ಆತನಲ್ಲಿ ನಮ್ಮ ಅತ್ಯಂತ ಆಂತರಿಕ ಅನಿಸಿಕೆಗಳನ್ನು ಹೇಳಲು ಶಕ್ತರಾಗುತ್ತೇವೆ. ಯೆಹೋವನಿಗಾಗಿ ಪ್ರೀತಿಯ ಆದರಣೀಯ ಅನಿಸಿಕೆಯು ನಮ್ಮಲ್ಲಿ ಬೆಳೆಯುತ್ತದೆ. ಇದು ನಿಸ್ಸಂದೇಹವಾಗಿ ನಮ್ಮ ಜೀವಿತಗಳನ್ನು ಆತನಿಗೆ ಸಮರ್ಪಿಸಿಕೊಳ್ಳುವಂತೆ ನಮ್ಮನ್ನು ನಡೆಸುವುದು.
15. ಹಿಂದೆ ಐಹಿಕ ಕೆಲಸಕ್ಕೆ ಸಮರ್ಪಿತನಾಗಿದ್ದ ಒಬ್ಬ ಪುರುಷನಿಗೆ, ಯೆಹೋವನನ್ನು ಸೇವಿಸುವಂತೆ ಯಾವುದು ಪ್ರಚೋದಿಸಿತು?
15 ಈ ಪ್ರೀತಿಪರ ದೇವರಾದ ಯೆಹೋವನನ್ನು ಅನೇಕರು ಅರಿತಿದ್ದಾರೆ, ಮತ್ತು ಆತನನ್ನು ಸೇವಿಸುವುದಕ್ಕೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡಿದ್ದಾರೆ. ಯಶಸ್ವಿಕರವಾದ ಒಂದು ವ್ಯಾಪಾರವಿದ್ದ ಒಬ್ಬ ಇಲೆಕ್ಟ್ರಿಶಿಯನ್ನ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಅವನು ಬೆಳಗ್ಗೆ ಕೆಲಸಮಾಡುವುದನ್ನು ಆರಂಭಿಸಿ, ಇಡೀ ಹಗಲು ಮತ್ತು ರಾತ್ರಿಯ ಉದ್ದಕ್ಕೂ ಕೆಲಸಮಾಡಿ, ಮರುದಿನ ಬೆಳಗ್ಗೆ ಐದು ಗಂಟೆಗೆ ಮನೆಗೆ ಬರುತ್ತಿದ್ದ ಸಮಯಗಳೂ ಇದ್ದವು. ಒಂದು ತಾಸಿನ ವರೆಗೆ ವಿಶ್ರಮಿಸಿದ ಬಳಿಕ, ಮುಂದಿನ ಕೆಲಸಕ್ಕಾಗಿ ಅವನು ಹೊರಗೆ ಹೋಗುತ್ತಿದ್ದನು. “ನನ್ನ ಕೆಲಸಕ್ಕೆ ನಾನು ಸಮರ್ಪಿತನಾಗಿದ್ದೆ,” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ಅವನ ಹೆಂಡತಿ ಬೈಬಲನ್ನು ಅಭ್ಯಸಿಸಲು ತೊಡಗಿದಾಗ, ಆಕೆಯನ್ನು ಅವನು ಜೊತೆಗೊಂಡನು. ಅವನು ಹೇಳುವುದು: “ಆ ಸಮಯದ ತನಕ ನನಗೆ ಗೊತ್ತಿದ್ದ ದೇವರುಗಳು, ನಮಗೆ ಪ್ರಯೋಜನವಾಗುವಂತೆ ಏನನ್ನೂ ಮಾಡದೆ ಕೇವಲ ಸೇವಿಸಲ್ಪಡಲಿಕ್ಕಾಗಿ ಕಾದುಕೊಂಡಿದ್ದರು. ಆದರೆ ಯೆಹೋವನು ಆರಂಭಿಕ ಹೆಜ್ಜೆಯನ್ನು ತೆಗೆದುಕೊಂಡು, ಮಹಾ ವೈಯಕ್ತಿಕ ನಷ್ಟವನ್ನನುಭವಿಸುತ್ತಾ ತನ್ನ ಏಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದನು.” (1 ಯೋಹಾನ 4:10, 19) ಹತ್ತು ತಿಂಗಳೊಳಗೆ, ಈ ಪುರುಷನು ಯೆಹೋವನಿಗೆ ಸಮರ್ಪಿತನಾದನು. ಅದರ ತರುವಾಯ, ಜೀವಂತ ದೇವರನ್ನು ಸೇವಿಸುವುದರ ಕಡೆಗೆ ಅವನು ಮನಸ್ಸನ್ನು ಕೇಂದ್ರೀಕರಿಸಿದನು. ಅವನು ಪೂರ್ಣ ಸಮಯ ಶುಶ್ರೂಷೆಯನ್ನು ಆಯ್ದುಕೊಂಡನು ಮತ್ತು ಅಗತ್ಯವು ಹೆಚ್ಚಾಗಿದ್ದಲ್ಲಿ ಸೇವೆ ಸಲ್ಲಿಸಲು ಮನೆಯನ್ನು ಬದಲಾಯಿಸಿದನು. ಅಪೊಸ್ತಲರಂತೆ ಅವನು, ‘ಎಲ್ಲ ವಿಷಯಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದನು.’ (ಮತ್ತಾಯ 19:27) ಎರಡು ತಿಂಗಳುಗಳ ಬಳಿಕ, ವಿದ್ಯುತ್ತಿನ ಕೆಲಸದಲ್ಲಿ ಅವನು ಸಹಾಯ ಮಾಡಬಹುದೆಂಬ ಕಾರಣದಿಂದ, ಅವನು ಮತ್ತು ಅವನ ಹೆಂಡತಿ, ಅವರು ಜೀವಿಸುತ್ತಿದ್ದ ದೇಶದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಬ್ರಾಂಚ್ ನಲ್ಲಿ ಸೇವೆ ಸಲ್ಲಿಸಲು ಕರೆಯಲ್ಪಟ್ಟರು. 20 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಅವನು ತಾನು ಪ್ರೀತಿಸುವ ಕೆಲಸವನ್ನು ತನಗಾಗಿ ಅಲ್ಲ, ಯೆಹೋವನಿಗಾಗಿ ಮಾಡುತ್ತಾ, ಬ್ರಾಂಚ್ ನಲ್ಲಿ ದುಡಿಯುತ್ತಿದ್ದಾನೆ.
ನಿಮ್ಮ ಸಮರ್ಪಣೆಯನ್ನು ಬಹಿರಂಗಗೊಳಿಸಿರಿ
16. ಯೆಹೋವನಿಗೆ ಒಂದು ಸಮರ್ಪಣೆಯನ್ನು ಮಾಡುವುದರಲ್ಲಿ ಒಬ್ಬನು ತೆಗೆದುಕೊಳ್ಳುವ ಕೆಲವು ಹೆಜ್ಜೆಗಳಾವುವು?
16 ಬೈಬಲನ್ನು ಸ್ವಲ್ಪ ಸಮಯ ಅಭ್ಯಸಿಸಿದ ಬಳಿಕ, ಯುವ ಜನರು ಮತ್ತು ವೃದ್ಧರು ಏಕಸಮಾನವಾಗಿ, ಯೆಹೋವನನ್ನು ಮತ್ತು ಆತನು ಅವರಿಗಾಗಿ ಮಾಡಿರುವುದನ್ನು ಗಣ್ಯಮಾಡುವರು. ತಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಂತೆ ಇದು ಅವರನ್ನು ಪ್ರೇರೇಪಿಸಬೇಕು. ಇವರಲ್ಲಿ ನೀವು ಒಬ್ಬರಾಗಿರಬಹುದು. ನಿಮ್ಮನ್ನು ನೀವು ಯೆಹೋವನಿಗೆ ಹೇಗೆ ಸಮರ್ಪಿಸಿಕೊಳ್ಳಬಲ್ಲಿರಿ? ಬೈಬಲಿನಿಂದ ನಿಷ್ಕೃಷ್ಟವಾದ ಜ್ಞಾನವನ್ನು ತೆಗೆದುಕೊಂಡ ಬಳಿಕ, ಆ ಜ್ಞಾನಕ್ಕನುಸಾರ ನೀವು ಕಾರ್ಯಮಾಡತಕ್ಕದ್ದು ಮತ್ತು ಯೆಹೋವನಲ್ಲಿ ಹಾಗೂ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡತಕ್ಕದ್ದು. (ಯೋಹಾನ 17:3) ಪಶ್ಚಾತಾಪ್ತಪಟ್ಟು ಯಾವುದೇ ಗತಕಾಲದ ಪಾಪಪೂರ್ಣ ಮಾರ್ಗದಿಂದ ತಿರುಗಿಕೊಳ್ಳಿರಿ. (ಅ. ಕೃತ್ಯಗಳು 3:19) ಆಗ ಯೆಹೋವನಿಗೆ ಪ್ರಾರ್ಥನೆಯ ಗಂಭೀರ ಮಾತುಗಳಲ್ಲಿ ಅಭಿವ್ಯಕ್ತಿಸುತ್ತಾ, ನೀವು ಸಮರ್ಪಣೆಯ ಹೆಜ್ಜೆಯನ್ನು ತಲಪುವಿರಿ. ನಿಸ್ಸಂದೇಹವಾಗಿ, ಈ ಪ್ರಾರ್ಥನೆಯು ನಿಮ್ಮ ಮನಸ್ಸಿನ ಮೇಲೆ ಬಾಳುವ ಒಂದು ಪರಿಣಾಮವನ್ನು ಬೀರುವುದು, ಯಾಕೆಂದರೆ ಇದು ಯೆಹೋವನೊಂದಿಗೆ ಒಂದು ಹೊಸ ಸಂಬಂಧದ ಆರಂಭವಾಗಿರುವುದು.
17. (ಎ) ಹೊಸದಾಗಿ ಸಮರ್ಪಿಸಿಕೊಂಡವರೊಂದಿಗೆ ಹಿರಿಯರು ಏಕೆ ತಯಾರಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ? (ಬಿ) ಒಬ್ಬನ ಸಮರ್ಪಣೆಯ ಬಳಿಕ ಕೂಡಲೆ ಯಾವ ಪ್ರಾಮುಖ್ಯ ಹೆಜ್ಜೆಯನ್ನು ತೆಗೆದುಕೊಳ್ಳತಕ್ಕದ್ದು, ಮತ್ತು ಯಾವ ಉದ್ದೇಶಕ್ಕಾಗಿ?
17 ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದಲ್ಲಿ ಪ್ರವೇಶಿಸಲಿಕ್ಕಾಗಿದ್ದ ಷರತ್ತುಗಳನ್ನು ಮೋಶೆಯು ಇಸ್ರಾಯೇಲ್ಯರಿಗೆ ವಿವರಿಸಿದಂತೆಯೇ, ಇತ್ತೀಚೆಗೆ ಒಂದು ಸಮರ್ಪಣೆಯನ್ನು ಮಾಡಿರುವವರಿಗೆ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಹಿರಿಯರು, ಅದರಲ್ಲಿ ಏನು ಒಳಗೊಂಡಿದೆ ಎಂದು ನಿಕರವಾಗಿ ಪರಿಶೀಲಿಸಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬನು ಬೈಬಲಿನ ಮೂಲಭೂತ ಬೋಧನೆಗಳನ್ನು ಪೂರ್ಣವಾಗಿ ತಿಳಿದುಕೊಂಡಿದ್ದಾನೆಂದು ಮತ್ತು ಒಬ್ಬ ಯೆಹೋವನ ಸಾಕ್ಷಿಯಾಗಿರುವುದರಲ್ಲಿ ಏನು ಒಳಗೊಂಡಿದೆ ಎಂಬ ಅರಿವು ಅವನಿಗಿದೆಯೆಂದು ದೃಢಪಡಿಸಲು, ಅವರು ತಯಾರಿಸಿದ ಪ್ರಶ್ನೆಗಳನ್ನು ಬಳಸುತ್ತಾರೆ. ಅನಂತರ, ಸಮರ್ಪಣೆಯನ್ನು ಬಹಿರಂಗಗೊಳಿಸುವ ಒಂದು ಆಚರಣೆಯು ಅತ್ಯಂತ ಸೂಕ್ತವಾಗಿದೆ. ಹೊಸದಾಗಿ ಸಮರ್ಪಿಸಿಕೊಂಡ ವ್ಯಕ್ತಿಯೊಬ್ಬನು, ಯೆಹೋವನೊಂದಿಗೆ ಈ ಸುಯೋಗಿತ ಸಂಬಂಧದೊಳಗೆ ತಾನು ಬಂದಿದ್ದೇನೆಂದು ಇತರರಿಗೆ ತಿಳಿಯಪಡಿಸಲು ಆತುರ ಉಳ್ಳವನಾಗಿದ್ದಾನೆಂಬುದು ಸ್ವಾಭಾವಿಕ. (ಹೋಲಿಸಿ ಯೆರೆಮೀಯ 9:24.) ಇದು ಸಮರ್ಪಣೆಯ ಸಂಕೇತವಾಗಿ ನೀರಿನ ದೀಕ್ಷಾಸ್ನಾನವನ್ನು ಪಡೆಯುವ ಮೂಲಕ ಯೋಗ್ಯವಾಗಿ ಮಾಡಲಾಗುತ್ತದೆ. ನೀರಿನಲ್ಲಿ ನಿಮಜ್ಜನ ಪಡೆದು ನಂತರ ಮೇಲೇಳುವುದು, ತನ್ನ ಹಿಂದಿನ ಸ್ವಾರ್ಥಪರ ಜೀವನ ಮಾರ್ಗವನ್ನು ಅವನು ತ್ಯಜಿಸುತ್ತಾನೆ ಎಂಬುದನ್ನು ಮತ್ತು ದೇವರ ಚಿತ್ತವನ್ನು ಮಾಡುವ ಜೀವಿತದ ಹೊಸ ಮಾರ್ಗಕ್ಕೆ ಮೇಲೆಬ್ಬಿಸಲ್ಪಡುತ್ತಾನೆ ಎಂಬುದನ್ನು ಸಂಕೇತಿಸುತ್ತದೆ. ಇದೊಂದು ಮತ ಸಂಸ್ಕಾರವಲ್ಲ, ಅಥವಾ ವ್ಯಕ್ತಿಯೊಬ್ಬನು ನೀರಿನಿಂದ ಶುದ್ಧಗೊಳಿಸಲ್ಪಡುತ್ತಾನೆಂದು ಭಾವಿಸಲ್ಪಡುವ ಮಿಸೋಗಿ ಎಂಬ ಷಿಂಟೊ ಸಂಸ್ಕಾರದಂತಹ ಮತಾಚರಣೆಯಲ್ಲ.a ಬದಲಿಗೆ, ದೀಕ್ಷಾಸ್ನಾನವು ಪ್ರಾರ್ಥನೆಯಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಒಂದು ಸಮರ್ಪಣೆಯ ಬಹಿರಂಗ ಘೋಷಣೆಯಾಗಿದೆ.
18. ನಮ್ಮ ಸಮರ್ಪಣೆಯು ವ್ಯರ್ಥವಾಗಿರುವುದಿಲ್ಲವೆಂದು ನಾವು ಏಕೆ ಭರವಸೆಯುಳ್ಳವರಾಗಿರಬಲ್ಲೆವು?
18 ಯೆಹೋವನೊಂದಿಗೆ ತಾನು ಈಗ ಪಡೆದಿರುವ ಬಾಳುವ ಸಂಬಂಧದ ಕುರಿತು ಮರುಜ್ಞಾಪಿಸುತ್ತಾ, ಗಂಭೀರವಾದ ಈ ಸಂದರ್ಭವು ದೇವರ ಹೊಸ ಸೇವಕನಿಗೆ ಮರೆಯಲಾಗದಂತಹ ಒಂದು ಅನುಭವವಾಗಿದೆ. ಆ ಕಾಮಿಕಾಜಿ ವಿಮಾನಚಾಲಕನು ತನ್ನ ದೇಶ ಹಾಗೂ ಚಕ್ರವರ್ತಿಗೆ ಮಾಡಿದ ಸಮರ್ಪಣೆಗೆ ಅಸದೃಶವಾಗಿ, ಯೆಹೋವನಿಗೆ ಮಾಡಿರುವ ಈ ಸಮರ್ಪಣೆಯು ವ್ಯರ್ಥವಾಗಿರುವುದಿಲ್ಲ, ಯಾಕೆಂದರೆ ಆತನು ಮಾಡಬೇಕೆಂದು ಉದ್ದೇಶಿಸುವ ಎಲ್ಲವನ್ನು ನೆರವೇರಿಸುವ, ಅನಂತ ಸರ್ವಶಕ್ತ ದೇವರಾಗಿದ್ದಾನೆ. ಆತನೊಬ್ಬನೇ ನಮ್ಮ ಪೂರ್ಣ ಹೃದಯದ ಭಕ್ತಿಗೆ ಅರ್ಹನಾಗಿದ್ದಾನೆ.—ಯೆಶಾಯ 55:9-11.
19. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
19 ಹಾಗಿದ್ದರೂ, ಸಮರ್ಪಣೆಯಲ್ಲಿ ಹೆಚ್ಚಿನದು ಒಳಗೊಂಡಿದೆ. ಉದಾಹರಣೆಗೆ, ಸಮರ್ಪಣೆಯು ನಮ್ಮ ಅನುದಿನದ ಜೀವಿತವನ್ನು ಹೇಗೆ ಪ್ರಭಾವಿಸುತ್ತದೆ? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್, ಇವರಿಂದ ಪ್ರಕಾಶಿಸಲ್ಪಟ್ಟ ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್, ಎಂಬ ಪುಸ್ತಕ, ಪುಟಗಳು 194-5ನ್ನು ನೋಡಿರಿ.
ನೀವು ಜ್ಞಾಪಿಸಿಕೊಳ್ಳುತ್ತೀರೊ?
◻ ಲೋಕದಲ್ಲಿ ಸಂಭವಿಸುವಂತೆ ಸಮರ್ಪಣೆಯು ಏಕೆ ನಿರಾಶೆಯಲ್ಲಿ ಕೊನೆಗೊಂಡಿದೆ?
◻ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಇಸ್ರಾಯೇಲ್ಯರನ್ನು ಯಾವುದು ಪ್ರೇರೇಪಿಸಿತು?
◻ ಇಂದು ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವಂತೆ ಯಾವುದು ನಮ್ಮನ್ನು ಪ್ರೇರೇಪಿಸುತ್ತದೆ?
◻ ನಮ್ಮನ್ನು ನಾವು ದೇವರಿಗೆ ಹೇಗೆ ಸಮರ್ಪಿಸಿಕೊಳ್ಳುತ್ತೇವೆ?
◻ ನೀರಿನ ದೀಕ್ಷಾಸ್ನಾನದ ಮಹತ್ವವೇನು?
[ಪುಟ 10 ರಲ್ಲಿರುವ ಚಿತ್ರ]
ಸೀನಾಯಿಯಲ್ಲಿ ಇಸ್ರಾಯೇಲ್ ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತದೆ