ನೀವು ಹೆಚ್ಚು ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳಬಲ್ಲಿರೊ?
ವಿವೇಚನಾಶಕ್ತಿಯು “ಮನಸ್ಸಿನ ಶಕ್ತಿ ಅಥವಾ ಸಾಮರ್ಥ್ಯವಾಗಿದ್ದು, ಇದರಿಂದ ಅದು ಒಂದು ವಿಷಯವನ್ನು ಇನ್ನೊಂದು ವಿಷಯದಿಂದ ಪ್ರತ್ಯೇಕಿಸುತ್ತದೆ.” ಇದು “ವಿಮರ್ಶನ ಶಕ್ತಿಯ ತೀಕ್ಷ್ಣತೆ” ಅಥವಾ “ವಿಷಯಗಳ ಯಾ ಕಲ್ಪನೆಗಳ ಭಿನ್ನತೆಯನ್ನು ಗ್ರಹಿಸುವ ಶಕ್ತಿ” ಯಾಗಿರಲೂ ಸಾಧ್ಯವಿದೆ. ಹಾಗೆಂದು ವೆಬ್ಸ್ಟರ್ಸ್ ಯೂನಿವರ್ಸಲ್ ಡಿಕ್ಷನರಿಯು ಹೇಳುತ್ತದೆ. ಸ್ಪಷ್ಟವಾಗಿಗಿಯೇ, ವಿವೇಚನಾಶಕ್ತಿಯು ಅಪೇಕ್ಷಿಸತಕ್ಕ ಗುಣವಾಗಿದೆ. ಇದರ ಮೌಲ್ಯವನ್ನು ಸೊಲೊಮೋನನ ಮಾತುಗಳಲ್ಲಿ ಕಾಣಸಾಧ್ಯವಿದೆ: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. . . . ವಿವೇಕವು [“ವಿವೇಚನಾಶಕ್ತಿಯು,” NW] ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ . . . ತಪ್ಪಿಸಿಕೊಳ್ಳುವಿ.”—ಜ್ಞಾನೋಕ್ತಿ 2:10-12.
ಹೌದು, ಇಂದು ಸಮೃದ್ಧವಾಗಿ ಅಸ್ತಿತ್ವದಲ್ಲಿರುವ “ದುರ್ಮಾರ್ಗ” ವನ್ನು ಪ್ರತಿರೋಧಿಸಲು, ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು. ಮತ್ತು ಅದು ಇತರ ಅನೇಕ ಪ್ರಯೋಜನಗಳನ್ನು ತರುತ್ತದೆ. ಉದಾಹರಣೆಗೆ, ‘ನೀವು ಸ್ವಲ್ಪವೂ ಅರ್ಥಮಾಡಿಕೊಳ್ಳುವುದೇ ಇಲ್ಲ’ ಎಂದು ಮಕ್ಕಳು ಹೇಳುವುದನ್ನು ಹೆತ್ತವರು ಅನೇಕವೇಳೆ ಕೇಳುತ್ತಾರೆ. ಸ್ವಲ್ಪಮಟ್ಟಿಗೆ ವಿವರವಾಗಿ ಪರೀಕ್ಷಿಸುವುದರಿಂದ, ತಮ್ಮ ಮಕ್ಕಳಿಗೆ ತೊಂದರೆಯನ್ನುಂಟುಮಾಡುತ್ತಿರುವ ಭಾವನೆಗಳು ಮತ್ತು ವಿವಾದಗಳನ್ನು ಹೇಗೆ ಹೊರಸೆಳೆಯಬೇಕೆಂದು ವಿವೇಚಿಸುವ ಹೆತ್ತವರಿಗೆ ತಿಳಿದಿರುತ್ತದೆ. (ಜ್ಞಾನೋಕ್ತಿ 20:5) ವಿವೇಚಿಸುವ ಒಬ್ಬ ಪತಿಯು ತನ್ನ ಪತ್ನಿಗೆ ಕಿವಿಗೊಡುತ್ತಾನೆ ಮತ್ತು ನಿರ್ಣಯಗಳನ್ನು ಮಾಡಲು ಆತುರದಿಂದ ಹಾರುವುದಕ್ಕೆ ಬದಲಾಗಿ, ಅವಳ ಆಲೋಚನೆ ಮತ್ತು ಭಾವನೆಗಳ ಒಳನೋಟವನ್ನು ಪಡೆದುಕೊಳ್ಳುತ್ತಾನೆ. ಪತ್ನಿಯು ತನ್ನ ಪತಿಯೊಂದಿಗೆ ಅದೇ ರೀತಿ ವರ್ತಿಸುತ್ತಾಳೆ. ಹೀಗೆ, “ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ [“ವಿವೇಚನಾಶಕ್ತಿ,” NW] ಆಧಾರ.”—ಜ್ಞಾನೋಕ್ತಿ 24:3.
ಸನ್ನಿವೇಶಗಳನ್ನು ಯಶಸ್ವಿಕರವಾಗಿ ನಿರ್ವಹಿಸಲು ವಿವೇಚನಾಶಕ್ತಿಯು ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುತ್ತದೆ. ಜ್ಞಾನೋಕ್ತಿ 17:27 ಹೇಳುವುದು: “ಹಿಡಿದು ಮಾತಾಡುವವನು ಜ್ಞಾನಿ. ಶಾಂತಾತ್ಮನು ವಿವೇಕಿ [“ವಿವೇಚನಾಶಕ್ತಿಯುಳ್ಳವನು,” NW].” ವಿವೇಚಿಸುವ ಒಬ್ಬ ವ್ಯಕ್ತಿಯು, ಆಲೋಚಿಸದೆ ಪ್ರತಿಯೊಂದು ಸನ್ನಿವೇಶದೊಳಗೆ ಮುನ್ನುಗ್ಗುವ ಉದ್ರೇಕ ಸ್ವಭಾವದವನಾಗಿರುವುದಿಲ್ಲ. ತನ್ನನ್ನು ಸಿಕ್ಕಿಸಿಕೊಳ್ಳುವ ಮೊದಲು ಅವನು, ಸಾಧ್ಯವಿರುವ ಪರಿಣಾಮಗಳನ್ನು ಜಾಗರೂಕತೆಯಿಂದ ಪರ್ಯಾಲೋಚಿಸುತ್ತಾನೆ. (ಲೂಕ 14:28, 29) ತನ್ನ ಮಾತುಗಳನ್ನು ಜಾಗರೂಕತೆಯಿಂದ ಆರಿಸಿಕೊಳ್ಳುವಂತೆ ಅವನನ್ನು ಮುನ್ನಡೆಸುವ “ವಿವೇಚನೆಯ ಬಾಯಿ”ಯ ಕಾರಣದಿಂದ, ಅವನು ಇತರರೊಂದಿಗೆ ಹೆಚ್ಚು ಸಮಾಧಾನಕರ ಸಂಬಂಧಗಳನ್ನು ಸಹ ಅನುಭವಿಸುತ್ತಾನೆ. (ಜ್ಞಾನೋಕ್ತಿ 10:19; 12:8, NW) ಆದರೆ, ಅತ್ಯಂತ ಪ್ರಾಮುಖ್ಯವಾಗಿ, ವಿವೇಚಿಸುವ ವ್ಯಕ್ತಿಯೊಬ್ಬನು ತನ್ನ ಸ್ವಂತ ಪರಿಮಿತಿಗಳನ್ನು ನಮ್ರವಾಗಿ ಗ್ರಹಿಸಿಕೊಳ್ಳುತ್ತಾನೆ ಮತ್ತು ಮಾರ್ಗದರ್ಶನೆಗಾಗಿ ಮನುಷ್ಯರೆಡೆಗೆ ನೋಡುವುದಕ್ಕೆ ಬದಲಾಗಿ ದೇವರೆಡೆಗೆ ನೋಡುತ್ತಾನೆ. ಇದು ಯೆಹೋವನನ್ನು ಸಂತೋಷಪಡಿಸುವಂತಹದ್ದಾಗಿದೆ, ಮತ್ತು ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಇನ್ನೊಂದು ಕಾರಣವಾಗಿದೆ.—ಜ್ಞಾನೋಕ್ತಿ 2:1-9; ಯಾಕೋಬ 4:6.
ಇಸ್ರಾಯೇಲಿನ ವಿವೇಚನಾಶಕ್ತಿಯ ಕೊರತೆ
ವಿವೇಚನಾಶಕ್ತಿಯನ್ನು ಪ್ರಯೋಗಿಸಲು ತಪ್ಪಿಹೋಗುವುದರ ಅಪಾಯವನ್ನು, ಇಸ್ರಾಯೇಲಿನ ಆರಂಭದ ಇತಿಹಾಸದಲ್ಲಿನ ಘಟನೆಯೊಂದರಲ್ಲಿ ಕಾಣಸಾಧ್ಯವಿದೆ. ಆ ಸಮಯದ ಕಡೆಗೆ ಮನಸ್ಸು ತಿರುಗಿಸುತ್ತಾ, ಪ್ರೇರಿತ ಕೀರ್ತನೆಗಾರನು ಹೇಳಿದ್ದು: “ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತ ಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿ ಬಿದ್ದರು.”—ಕೀರ್ತನೆ 106:7.
ಮೋಶೆಯು ಇಸ್ರಾಯೇಲನ್ನು ಐಗುಪ್ತದಿಂದ ಹೊರಗೆ ಮುನ್ನಡೆಸಿದಾಗ, ಆ ಬಲಿಷ್ಠ ಲೋಕಶಕ್ತಿಯ ಮೇಲೆ ಹತ್ತು ಬಾಧೆಗಳನ್ನು ಬರಮಾಡುವ ಮೂಲಕ, ತನ್ನ ಜನರನ್ನು ಬಿಡುಗಡೆಗೊಳಿಸುವ ತನ್ನ ಶಕ್ತಿ ಮತ್ತು ದೃಢನಿಶ್ಚಯವನ್ನು ಯೆಹೋವನು ಅದಾಗಲೇ ತೋರಿಸಿದ್ದನು. ಫರೋಹನು ಇಸ್ರಾಯೇಲ್ಯರನ್ನು ಹೋಗಲು ಅನುಮತಿಸಿದ ಬಳಿಕ, ಮೋಶೆ ಅವರನ್ನು ಕೆಂಪು ಸಮುದ್ರದ ತೀರಕ್ಕೆ ನಡೆಸಿದನು. ಹಾಗಿದ್ದರೂ, ಐಗುಪ್ತದ ಸೈನ್ಯಗಳು ಅವರನ್ನು ಬೆನ್ನಟ್ಟಿ ಅವರ ಹಿಂದೆ ಹೋದವು. ಇಸ್ರಾಯೇಲ್ಯರು ಸಿಕ್ಕಿಬಿದ್ದರು ಮತ್ತು ಅವರು ಹೊಸದಾಗಿ ಕಂಡುಕೊಂಡಂತಹ ಸ್ವಾತಂತ್ರ್ಯವು ತೀರ ಅಲ್ಪಕಾಲ ಉಳಿಯುತ್ತದೋ ಎಂಬಂತೆ ತೋರಿತು. ಆದುದರಿಂದ ಬೈಬಲ್ ವೃತ್ತಾಂತವು ಹೇಳುವುದು: “ಇಸ್ರಾಯೇಲ್ಯರು ಕಣ್ಣೆತ್ತಿ ತಮ್ಮ ಹಿಂದೆ ಹೊರಟುಬಂದಿದ್ದ ಐಗುಪ್ತ್ಯರನ್ನು ಕಂಡು ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು.” ಮತ್ತು ಅವರು ಮೋಶೆಯ ಕಡೆಗೆ ತಿರುಗಿಕೊಂಡು ಹೇಳಿದ್ದು: “ಯಾಕೆ ನಮಗೆ ಈ ಪ್ರಕಾರ ಮಾಡಿ ಐಗುಪ್ತದೇಶದಿಂದ ಕರಕೊಂಡು ಬಂದಿ? . . . ನಾವು ಅರಣ್ಯದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವದೇ ವಾಸಿಯಲ್ಲವೇ.”—ವಿಮೋಚನಕಾಂಡ 14:10-12.
ಯೆಹೋವನ ಶಕ್ತಿಯ ಹತ್ತು ಪ್ರಮುಖ ಪ್ರದರ್ಶನಗಳನ್ನು ಅವರು ಈಗಾಗಲೇ ನೋಡಿದ್ದರೆಂಬುದನ್ನು ನಾವು ಜ್ಞಾಪಿಸಿಕೊಳ್ಳುವ ವರೆಗೆ, ಅವರ ಭಯವು ಗ್ರಾಹ್ಯವೆಂದು ತೋರಬಹುದು. ಸುಮಾರು 40 ವರ್ಷಗಳ ಬಳಿಕ ಮೋಶೆಯು ಅವರಿಗೆ ಜ್ಞಾಪಿಸಿದ ವಿಷಯವನ್ನು ಅವರು ಸಾಕ್ಷಾತ್ತಾಗಿ ತಿಳಿದಿದ್ದರು: “ಭುಜಬಲವನ್ನೂ ಶಿಕ್ಷಾಹಸ್ತವನ್ನೂ ಮಹಾಭೀತಿಗಳನ್ನೂ ಮಹತ್ಕಾರ್ಯಗಳನ್ನೂ ಉತ್ಪಾತಗಳನ್ನೂ ಪ್ರಯೋಗಿಸಿ ನಮ್ಮನ್ನು ಬಿಡಿಸಿ ಐಗುಪ್ತದೇಶದಿಂದ ಕರತಂದ”ನು. (ಧರ್ಮೋಪದೇಶಕಾಂಡ 26:8) ಆದುದರಿಂದ, ಕೀರ್ತನೆಗಾರನು ಬರೆದಂತೆ, ಇಸ್ರಾಯೇಲ್ಯರು ಮೋಶೆಯ ಮಾರ್ಗದರ್ಶನಕ್ಕೆ ವಿರುದ್ಧವಾಗಿ ತಿರುಗಿಕೊಂಡಾಗ, “ಅವರು ಯಾವುದೇ ಸೂಕ್ಷ್ಮಪರಿಜ್ಞಾನವನ್ನು ತೋರಿಸಲಿಲ್ಲ.” ಆದರೂ, ತನ್ನ ವಾಗ್ದಾನಕ್ಕೆ ಸರಿಯಾಗಿ ಯೆಹೋವನು, ಐಗುಪ್ತದ ಸೇನಾಬಲಗಳ ಮೇಲೆ ದಿಗ್ಭಮ್ರೆಗೊಳಿಸುವ ಅಪಜಯವನ್ನು ಉಂಟುಮಾಡಿದನು.—ವಿಮೋಚನಕಾಂಡ 14:19-31.
ಸಂದೇಹ ಅಥವಾ ಅನಿರ್ಧಾರದಿಂದ ನಾವು ಪರೀಕ್ಷೆಗಳನ್ನು ಎದುರುಗೊಳ್ಳುತ್ತಿದ್ದಲ್ಲಿ, ನಮ್ಮ ನಂಬಿಕೆಯೂ ತದ್ರೀತಿಯಲ್ಲಿ ತಡವರಿಸಸಾಧ್ಯವಿದೆ. ನಮ್ಮನ್ನು ಬಹುಶಃ ವಿರೋಧಿಸುತ್ತಿರುವ ಯಾವನೇ ಒಬ್ಬನಿಗಿಂತ ಯೆಹೋವನು ಎಷ್ಟು ಹೆಚ್ಚು ಸರ್ವೋತ್ತಮನಾಗಿದ್ದಾನೆ ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ವಿಷಯಗಳನ್ನು ಯಾವಾಗಲೂ ಯಥಾದೃಷ್ಟಿಯಿಂದ ನೋಡಲು ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು. ಯೆಹೋವನು ಈಗಾಗಲೇ ನಮಗಾಗಿ ಮಾಡಿರುವ ವಿಷಯಗಳನ್ನು ಮನಸ್ಸಿನಲ್ಲಿಡುವಂತೆ ಸಹ ವಿವೇಚನಾಶಕ್ತಿಯು ನಮಗೆ ಸಹಾಯ ಮಾಡುವುದು. ಆತನು “ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡು” ವಾತನಾಗಿದ್ದಾನೆ ಎಂಬ ವಾಸ್ತವಾಂಶವನ್ನು ಎಂದಿಗೂ ಮರೆಯದಿರುವಂತೆ ಇದು ನಮಗೆ ಸಹಾಯ ಮಾಡುವುದು.—ಕೀರ್ತನೆ 145:18-20.
ಆತ್ಮಿಕ ವಿವೇಚನಾಶಕ್ತಿಯನ್ನು ಪಡೆದುಕೊಳ್ಳುವುದು
ವಿವೇಚನಾಶಕ್ತಿಯು ವಯಸ್ಸಿಗನುಗುಣವಾಗಿ ಸ್ವಯಂಚಾಲಿತವಾಗಿ ಬರುವುದಿಲ್ಲ. ಅದನ್ನು ಬೆಳೆಸಿಕೊಳ್ಳಬೇಕು. ತನ್ನ ವಿವೇಚನಾಶಕ್ತಿಗಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದುಕೊಂಡ ಜ್ಞಾನಿಯಾದ ಅರಸ ಸೊಲೊಮೋನನು ಹೇಳಿದ್ದು: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು [“ವಿವೇಚನಾಶಕ್ತಿಯನ್ನು,” NW] ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ.” (ಜ್ಞಾನೋಕ್ತಿ 3:13, 14) ಸೊಲೊಮೋನನು ತನ್ನ ವಿವೇಚನಾಶಕ್ತಿಯನ್ನು ಎಲ್ಲಿ ಪಡೆದುಕೊಂಡನು? ಯೆಹೋವನಿಂದಲೆ. ಅವನಿಗೆ ಯಾವ ಆಶೀರ್ವಾದದ ಅಪೇಕ್ಷೆಯಿದೆಯೆಂದು ಯೆಹೋವನು ಸೊಲೊಮೋನನನ್ನು ಕೇಳಿದಾಗ, ಸೊಲೊಮೋನನು ಉತ್ತರಿಸಿದ್ದು: ‘ನಿನ್ನ ಪ್ರಜೆಗಳನ್ನು ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದಕ್ಕೂ ನನಗೆ ವಿವೇಕವನ್ನು ದಯಪಾಲಿಸು.’ (1 ಅರಸು 3:9) ಹೌದು, ಸೊಲೊಮೋನನು ತನ್ನ ಸಹಾಯಕನೋಪಾದಿ ಯೆಹೋವನ ಕಡೆಗೆ ನೋಡಿದನು. ಅವನು ವಿವೇಚನಾಶಕ್ತಿಗಾಗಿ ಕೇಳಿಕೊಂಡನು, ಮತ್ತು ಯೆಹೋವನು ಅವನಿಗೆ ಅದನ್ನು ಅಸಾಮಾನ್ಯವಾದ ಪ್ರಮಾಣದಲ್ಲಿ ಕೊಟ್ಟನು. ಫಲಿತಾಂಶವೇನು? “ಸೊಲೊಮೋನನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದದ್ದು.”—1 ಅರಸು 4:30, NW.
ವಿವೇಚನಾಶಕ್ತಿಗಾಗಿರುವ ನಮ್ಮ ಅನ್ವೇಷಣೆಯಲ್ಲಿ ನಾವು ಎಲ್ಲಿಗೆ ಹೋಗಬೇಕೆಂಬುದನ್ನು ಸೊಲೊಮೋನನ ಅನುಭವವು ನಮಗೆ ತೋರಿಸುತ್ತದೆ. ಸೊಲೊಮೋನನಂತೆ ನಾವು ಯೆಹೋವನ ಕಡೆಗೆ ನೋಡಬೇಕು. ಹೇಗೆ? ಹೌದು, ಆತನ ಆಲೋಚನೆಯೊಳಗೆ ನಮಗೆ ಒಳನೋಟವನ್ನು ಕೊಡುವ ತನ್ನ ವಾಕ್ಯವಾದ ಬೈಬಲನ್ನು ಯೆಹೋವನು ನಮಗೆ ಒದಗಿಸಿದ್ದಾನೆ. ನಾವು ಬೈಬಲನ್ನು ಓದುವಾಗ, ಆತ್ಮಿಕ ವಿವೇಚನಾಶಕ್ತಿಯ ಮೂಲಾಧಾರವನ್ನು ಒದಗಿಸುವ ಜ್ಞಾನದ ಅಮೂಲ್ಯ ಸಮಾಚಾರವನ್ನು ನಾವು ಅಗೆಯುತ್ತಿದ್ದೇವೆ. ನಮ್ಮ ಬೈಬಲ್ ವಾಚನದಿಂದ ನಾವು ಸಂಗ್ರಹಿಸುವ ಸಮಾಚಾರದ ಕುರಿತು ಧ್ಯಾನಿಸತಕ್ಕದ್ದು. ತದನಂತರ, ಸರಿಯಾದ ನಿರ್ಣಯಗಳನ್ನು ಮಾಡಲು ಅದನ್ನು ಉಪಯೋಗಿಸಸಾಧ್ಯವಿದೆ. ಸಕಾಲದಲ್ಲಿ, ನಾವು “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿ”ದ್ದು, “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು [ಅಥವಾ, ಎರಡನ್ನೂ ವಿವೇಚಿಸಲು] ತಿಳಿ” ಯಶಕ್ತರಾಗಿ ಪರಿಣಮಿಸುವಷ್ಟರ ಮಟ್ಟಿಗೆ ನಮ್ಮ ಗ್ರಾಹ್ಯ ಶಕ್ತಿಗಳು ವಿಕಸಿಸಲ್ಪಡುತ್ತವೆ.—1 ಕೊರಿಂಥ 14:20; ಇಬ್ರಿಯ 5:14; ಹೋಲಿಸಿರಿ 1 ಕೊರಿಂಥ 2:10.
ಆಸಕ್ತಿಕರವಾಗಿ, ಯೆಹೋವನು ಸೊಲೊಮೋನನಿಗೆ ಕೊಟ್ಟ ವಿವೇಚನಾಶಕ್ತಿಯಿಂದ ನಾವು ಇನ್ನೂ ಪ್ರಯೋಜನ ಪಡೆಯಬಲ್ಲೆವು. ಹೇಗೆ? ವಾಸ್ತವವಾಗಿ ದೈವಿಕವಾಗಿ ಪ್ರೇರಿತವಾದ ಜ್ಞಾನದ ಹೊರಮೇರೆಗಳಾಗಿದ್ದ ಜ್ಞಾನೋಕ್ತಿಗಳ ರೂಪದಲ್ಲಿ ಜ್ಞಾನವನ್ನು ವ್ಯಕ್ತಪಡಿಸುವುದರಲ್ಲಿ ಸೊಲೊಮೋನನು ಪ್ರವೀಣನಾದನು. ಬೈಬಲಿನ ಜ್ಞಾನೋಕ್ತಿಗಳ ಪುಸ್ತಕದಲ್ಲಿ, ಈ ನಾಣ್ಣುಡಿಗಳಲ್ಲಿ ಅನೇಕ ನಾಣ್ಣುಡಿಗಳು ಸಂರಕ್ಷಿಸಲ್ಪಟ್ಟಿವೆ. ಆ ಪುಸ್ತಕವನ್ನು ಅಭ್ಯಾಸಿಸುವುದು, ಸೊಲೊಮೋನನ ವಿವೇಚನಾಶಕ್ತಿಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಮತ್ತು ನಾವು ಸ್ವತಃ ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ.
ನಮ್ಮ ಬೈಬಲ್ ಅಭ್ಯಾಸದಲ್ಲಿ ನಮಗೆ ಸಹಾಯ ಮಾಡಲಿಕ್ಕಾಗಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಂತಹ ಬೈಬಲ್ ಅಭ್ಯಾಸದ ಸಹಾಯಕಗಳನ್ನು ನಾವು ಉಪಯೋಗಿಸಬಲ್ಲೆವು. 116 ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಕಾವಲಿನಬುರುಜು ಪತ್ರಿಕೆಯು, ಪ್ರಾಮಾಣಿಕ ಹೃದಯದ ಜನರಿಗೆ ಯೆಹೋವನ ರಾಜ್ಯವನ್ನು ಪ್ರಕಟಿಸುತ್ತಿದೆ. ಎಚ್ಚರ! ಪತ್ರಿಕೆ ಮತ್ತು ಅದರ ಪೂರ್ವದ ಪತ್ರಿಕೆಗಳು, 1919 ರಿಂದ ಲೋಕಸನ್ನಿವೇಶಗಳ ಕುರಿತು ವ್ಯಾಖ್ಯಾನಿಸುತ್ತಿವೆ. ಈ ಎರಡು ಪತ್ರಿಕೆಗಳು ಬೈಬಲ್ ಸತ್ಯತೆಗಳನ್ನು ಪರಿಶೀಲಿಸುತ್ತವೆ ಮತ್ತು ದೋಷಗಳು ಕ್ರೈಸ್ತಪ್ರಪಂಚದಿಂದ ಕಲಿಸಲ್ಪಟ್ಟವುಗಳಾಗಿರಲಿ ನಮ್ಮ ಸ್ವಂತ ಆಲೋಚನಾ ವಿಧಾನಗಳಲ್ಲಿ ಕಂಡುಕೊಳ್ಳಲ್ಪಟ್ಟವುಗಳಾಗಿರಲಿ, ಅವುಗಳನ್ನು ನಾವು ವಿವೇಚಿಸುವಂತೆ ನಮಗೆ ಸಹಾಯ ಮಾಡುವ ಪ್ರಗತಿಪರ ಆತ್ಮಿಕ ಜ್ಞಾನೋದಯವನ್ನು ಒದಗಿಸುತ್ತವೆ.—ಜ್ಞಾನೋಕ್ತಿ 4:18.
ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಇನ್ನೊಂದು ಸಹಾಯವು ಸರಿಯಾದ ಸಹವಾಸವಾಗಿದೆ. ರಾಜ ಸೊಲೊಮೋನನ ಜ್ಞಾನೋಕ್ತಿಗಳಲ್ಲಿ ಒಂದು ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ರಾಜ ಸೊಲೊಮೋನನ ಮಗನಾದ ರೆಹಬ್ಬಾಮನು ತನ್ನ ಜೀವಿತದಲ್ಲಿ ಈ ಜ್ಞಾನೋಕ್ತಿಯನ್ನು ಪ್ರಮುಖವಾದ ಸಂಧಿಸಮಯದಲ್ಲಿ ಜ್ಞಾಪಿಸಿಕೊಳ್ಳಲಿಲ್ಲ ಎಂಬುದು ಲಜ್ಜಾಸ್ಪದವಾಗಿದೆ. ಅವನ ತಂದೆಯ ಮರಣದ ಬಳಿಕ, ತಮ್ಮ ಹೊರೆಗಳನ್ನು ಹಗುರಗೊಳಿಸುವಂತೆ ತಗಾದೆಮಾಡಲು ಇಸ್ರಾಯೇಲ್ನ ಕುಲಗಳು ಅವನ ಬಳಿಗೆ ಬಂದವು. ಮೊದಲಾಗಿ, ರೆಹಬ್ಬಾಮನು ಹಿರಿಯ ಜನರ ಸಲಹೆ ಕೇಳಿದನು, ಮತ್ತು ಅವನು ತನ್ನ ಪ್ರಜೆಗಳಿಗೆ ಕಿವಿಗೊಡುವಂತೆ ಅವರು ಅವನನ್ನು ಪ್ರೋತ್ಸಾಹಿಸಿದಾಗ ಈ ಜನರು ವಿವೇಚನಾಶಕ್ತಿಯನ್ನು ತೋರಿಸಿದರು. ತದನಂತರ ಅವನು ಯೌವನಸ್ಥರ ಬಳಿಗೆ ಹೋದನು. ಇಸ್ರಾಯೇಲ್ಯರಿಗೆ ಬೆದರಿಕೆಗಳಿಂದ ಉತ್ತರ ಕೊಡುವಂತೆ ರೆಹಬ್ಬಾಮನನ್ನು ಉತ್ತೇಜಿಸುತ್ತಾ, ಇವರು ಅನನುಭವವನ್ನು ಮತ್ತು ವಿವೇಚನಾಶಕ್ತಿಯ ಕೊರತೆಯನ್ನು ತೋರಿಸಿದರು. ರೆಹಬ್ಬಾಮನು ಯೌವನಸ್ಥರ ಮಾತಿಗೆ ಕಿವಿಗೊಟ್ಟನು. ಫಲಿತಾಂಶವೇನು? ಇಸ್ರಾಯೇಲ್ ದಂಗೆಯೆದಿತ್ದು, ಮತ್ತು ರೆಹಬ್ಬಾಮನು ತನ್ನ ರಾಜ್ಯದ ಬಹುಭಾಗವನ್ನು ಕಳೆದುಕೊಂಡನು.—1 ಅರಸು 12:1-17.
ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುವುದರ ಒಂದು ಅತ್ಯಾವಶ್ಯಕವಾದ ಭಾಗವು, ಪವಿತ್ರಾತ್ಮದ ಸಹಾಯವನ್ನು ಹುಡುಕುವುದೇ ಆಗಿದೆ. ಐಗುಪ್ತದ ಬಂದಿವಾಸದಿಂದ ಇಸ್ರಾಯೇಲ್ಯರ ಬಿಡುಗಡೆಯ ಬಳಿಕ, ಅವರೊಂದಿಗಿನ ಯೆಹೋವನ ವ್ಯವಹರಿಸುವಿಕೆಗಳನ್ನು ಪುನರ್ವಿಮರ್ಶಿಸುತ್ತಾ, ಬೈಬಲ್ ಬರಹಗಾರನಾದ ನೆಹೆಮೀಯನು ಹೇಳಿದ್ದು: “ಅವರನ್ನು ವಿವೇಕಯುತರಾಗಿ ಮಾಡಲು ನೀನು ನಿನ್ನ ಒಳ್ಳೆಯ ಆತ್ಮವನ್ನು ಕೊಟ್ಟಿ.” (ನೆಹೆಮೀಯ 9:20, NW) ನಮ್ಮನ್ನು ವಿವೇಕಯುತರಾಗಿ ಮಾಡಲು ಯೆಹೋವನ ಆತ್ಮವು ಸಹ ಸಹಾಯ ಮಾಡಬಲ್ಲದು. ನಿಮಗೆ ವಿವೇಚನಾಶಕ್ತಿಯನ್ನು ಕೊಡುವಂತೆ ನೀವು ಯೆಹೋವನ ಆತ್ಮಕ್ಕಾಗಿ ಪ್ರಾರ್ಥಿಸುವಾಗ, ದೃಢಭರವಸೆಯಿಂದ ಪ್ರಾರ್ಥಿಸಿರಿ; ಏಕೆಂದರೆ ಯೆಹೋವನು “ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.”—ಯಾಕೋಬ 1:5; ಮತ್ತಾಯ 7:7-11; 21:22.
ವಿವೇಚನಾಶಕ್ತಿ ಮತ್ತು ಒಳನೋಟ
ಅಪೊಸ್ತಲ ಪೌಲನು ಜನಾಂಗಗಳ ಜನರಿಗೆ ಸತ್ಯವನ್ನು ಸಾರಿದಾಗ ಅವನು ವಿವೇಚನಾಶಕ್ತಿಯನ್ನು ತೋರಿಸಿದನು. ಉದಾಹರಣೆಗೆ, ಒಮ್ಮೆ ಅಥೇನೆಯಲಿದ್ಲಾಗ್ದ, ಅವನು ಪಟ್ಟಣದಲ್ಲಿ “ಹಾದುಹೋಗುತ್ತಿದ್ದಾಗ” ಅವರ ಪೂಜ್ಯಭಾವದ ವಸ್ತುಗಳನ್ನು “ಜಾಗರೂಕವಾಗಿ ಪರಿಶೀಲಿಸು” ತ್ತಿದ್ದನು. ಪೌಲನು ವಿಗ್ರಹಗಳಿಂದ ಆವರಿಸಲ್ಪಟ್ಟಿದ್ದನು, ಮತ್ತು ಅವನ ಮನಸ್ಸು ಅವನೊಳಗೆ ಕುದಿಯಿತು. ಈಗ ಅವನಿಗೆ ಒಂದು ನಿರ್ಧಾರವನ್ನು ಮಾಡಲಿಕ್ಕಿತ್ತು. ಅವನು ಸುರಕ್ಷಿತವಾದ ಜೀವನಪಥವನ್ನು ಬೆನ್ನಟ್ಟುತ್ತಾ ಸುಮ್ಮನಿರಬೇಕೊ? ಅಥವಾ ಹಾಗೆ ಮಾಡುವುದು ಅಪಾಯಕರವಾಗಿರಸಾಧ್ಯವಿದ್ದಾಗ್ಯೂ, ಅಷ್ಟು ಕುದಿಯುವಂತಹದ್ದಾಗಿ ಅವನು ಕಂಡುಕೊಂಡ ವ್ಯಾಪಕವಾಗಿ ಹಬ್ಬಿದ್ದ ವಿಗ್ರಹಾರಾಧನೆಯ ಕುರಿತು ಮಚ್ಚುಮರೆಯಿಲ್ಲದೆ ಅವನು ಮಾತಾಡಬೇಕೊ?
ಪೌಲನು ವಿವೇಚನಾಶಕ್ತಿಯಿಂದ ಕ್ರಿಯೆಗೈದನು. “ತಿಳಿಯದ ದೇವರಿಗೆ” ಎಂಬ ಸ್ಮಾರಕ ಲೇಖನವನ್ನು ಹೊಂದಿದ್ದ ಒಂದು ಬಲಿಪೀಠವು ಅವನ ಕಣ್ಣಿಗೆಬಿತ್ತು. ಜಾಣ್ಮೆಯಿಂದ, ವಿಗ್ರಹಗಳಿಗೆ ಅವರು ಸಲ್ಲಿಸುತ್ತಿದ್ದ ಆರಾಧನೆಯನ್ನು ಪೌಲನು ಮನಗಂಡನು ಮತ್ತು ತದನಂತರ “ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರ” ವಿಷಯವನ್ನು ಪರಿಚಯಿಸಲಿಕ್ಕಾಗಿ, ಆ ಬಲಿಪೀಠವನ್ನು ಒಂದು ಮಾರ್ಗದೋಪಾದಿ ಉಪಯೋಗಿಸಿದನು. ಹೌದು, ಯಾರ ಕುರಿತು ಅವರು ತಿಳಿದಿರಲಿಲ್ಲವೊ ಆತನು ಯೆಹೋವ ದೇವರಾಗಿದ್ದನು! ಹೀಗೆ ಪೌಲನು, ಆ ವಿಷಯದ ಮೇಲಿನ ಅವರ ಸಂವೇದನಾಶೀಲತೆಯನ್ನು ಗಮನಿಸಿದನು ಮತ್ತು ಒಂದು ಅಮೋಘವಾದ ಸಾಕ್ಷಿಯನ್ನು ಕೊಡಲು ಶಕ್ತನಾಗಿದ್ದನು. ಯಾವ ಫಲಿತಾಂಶದೊಂದಿಗೆ? “ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಇನ್ನು ಕೆಲವರೂ” ಒಳಗೊಂಡು ಅನೇಕ ಜನರು ಸತ್ಯವನ್ನು ಆದರದಿಂದ ಸ್ವೀಕರಿಸಿದರು. (ಅ. ಕೃತ್ಯಗಳು 17:16-34) ಪೌಲನು ವಿವೇಚನಾಶಕ್ತಿಯ ಎಂತಹ ಒಂದು ಉದಾಹರಣೆಯಾಗಿದ್ದನು!
ಪ್ರಶ್ನಾರಹಿತವಾಗಿ, ವಿವೇಚನಾಶಕ್ತಿಯು ಸುಲಭವಾಗಿ ಅಥವಾ ಸಹಜವಾಗಿ ಬರುವುದಿಲ್ಲ. ಆದರೆ ತಾಳ್ಮೆ, ಪ್ರಾರ್ಥನೆ, ಶ್ರದ್ಧಾಪೂರ್ವಕವಾದ ಪ್ರಯತ್ನ, ಬುದ್ಧಿವಂತ ಸಹವಾಸ, ಬೈಬಲಿನ ಅಧ್ಯಯನ ಮತ್ತು ಅದರ ಕುರಿತಾದ ಧ್ಯಾನ, ಹಾಗೂ ಯೆಹೋವನ ಪವಿತ್ರಾತ್ಮದ ಮೇಲೆ ಅವಲಂಬನೆಯಿಂದಾಗಿ, ನೀವು ಸಹ ಇದನ್ನು ಬೆಳೆಸಿಕೊಳ್ಳಬಲ್ಲಿರಿ.