ನಿಮಗೆ ನೆನಪಿದೆಯೆ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಪ್ರಾಯೋಗಿಕ ಮೌಲ್ಯವುಳ್ಳದ್ದಾಗಿ ನೀವು ಕಂಡುಕೊಂಡಿದ್ದೀರೊ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಂದ ನಿಮ್ಮ ಜ್ಞಾಪಕಶಕ್ತಿಯನ್ನು ಏಕೆ ಪರೀಕ್ಷಿಸಬಾರದು?
◻ “ಕರ್ತನ ದಿನ” ಮತ್ತು “ಯೆಹೋವ ದಿನ”ದ ನಡುವಿನ ವ್ಯತ್ಯಾಸವೇನು? (ಪ್ರಕಟನೆ 1:10; ಯೋವೇಲ 2:11)
“ಕರ್ತನ ದಿನ”ದಲ್ಲಿ, ಪ್ರಕಟನೆ ಪುಸ್ತಕದ 1ರಿಂದ 22ನೆಯ ಅಧ್ಯಾಯಗಳಲ್ಲಿ ವರ್ಣಿಸಲ್ಪಟ್ಟಿರುವ 16 ದರ್ಶನಗಳ ನೆರವೇರಿಕೆ ಮತ್ತು ಯೇಸು ತನ್ನ ಸಾನ್ನಿಧ್ಯದ ಸೂಚನೆಯ ಕುರಿತಾಗಿ ತನ್ನ ಶಿಷ್ಯರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಹೇಳಿದಂತಹ ಮೂಲಭೂತ ಘಟನೆಗಳ ನೆರವೇರಿಕೆಯು ಸೇರಿದೆ. ಕರ್ತನ ದಿನದ ಪರಾಕಾಷ್ಠೆಯಲ್ಲಿ, ಆತನು ಸೈತಾನನ ಭ್ರಷ್ಟ ಲೋಕದ ಮೇಲೆ ತನ್ನ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ, ಯೆಹೋವನ ಆ ಭಯಪ್ರೇರಕ ದಿನವು ಸ್ಫೋಟಿಸುತ್ತದೆ. (ಮತ್ತಾಯ 24:3-14; ಲೂಕ 21:11)—12/15, ಪುಟ 11.
◻ ಮಾಕಾರ್ಯಾಸ್ ಬೈಬಲಿನ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳು ಯಾವುವು?
ಮಾಕಾರ್ಯಾಸ್ ಬೈಬಲಿನಲ್ಲಿ ಯೆಹೋವ ಎಂಬ ಹೆಸರು 3,500ಕ್ಕಿಂತಲೂ ಹೆಚ್ಚು ಬಾರಿ ಕಂಡುಬರುತ್ತದೆ. ರಷ್ಯನ್ ಧಾರ್ಮಿಕ ಸಾಹಿತ್ಯದ ಒಬ್ಬ ಪಂಡಿತನು ಹೇಳಿದ್ದು: “ಭಾಷಾಂತರವು ಹೀಬ್ರು ಗ್ರಂಥಪಾಠಕ್ಕೆ ಅಂಟಿಕೊಂಡಿದೆ, ಮತ್ತು ಭಾಷಾಂತರದ ಭಾಷೆಯು ಶುದ್ಧವಾದದ್ದೂ ವಿಷಯಕ್ಕೆ ಯೋಗ್ಯವಾದದ್ದೂ ಆಗಿದೆ.”—12/15, ಪುಟ 27.
◻ ನಮಗೆ ಬಿಡುಗಡೆಯನ್ನು ತರುವುದೆಂದು ಯೇಸು ಹೇಳಿದ “ಸತ್ಯ” ಯಾವುದು? (ಯೋಹಾನ 8:32)
“ಸತ್ಯ” ಎಂದು ಹೇಳುವ ಮೂಲಕ ಯೇಸು, ಬೈಬಲಿನಲ್ಲಿ ಸುರಕ್ಷಿತವಾಗಿಡಲ್ಪಟ್ಟಿರುವ ದೈವಿಕವಾಗಿ ಪ್ರೇರಿತಗೊಂಡಿರುವ—ವಿಶೇಷವಾಗಿ ದೇವರ ಚಿತ್ತದ ಕುರಿತಾದ—ಮಾಹಿತಿಯನ್ನು ಅರ್ಥೈಸಿದನು.—1/1, ಪುಟ 3.
◻ ಆಧುನಿಕ ದಿನದ ಯೇಹು ಮತ್ತು ಯೆಹೋನಾದಾಬರು ಯಾರಾಗಿದ್ದಾರೆ?
ಯೇಹು, ಯೇಸುವನ್ನು ಚಿತ್ರಿಸುತ್ತಾನೆ. ಅವನು ಭೂಮಿಯಲ್ಲಿ, “ದೇವರ ಇಸ್ರಾಯೇಲ್ಯ”ರಾದ ಅಭಿಷಿಕ್ತ ಕ್ರೈಸ್ತರಿಂದ ಪ್ರತಿನಿಧಿಸಲ್ಪಡುತ್ತಾನೆ. (ಗಲಾತ್ಯ 6:16; ಪ್ರಕಟನೆ 12:17) ಯೇಹುವನ್ನು ಎದುರುಗೊಳ್ಳಲಿಕ್ಕಾಗಿ ಯೆಹೋನಾದಾಬನು ಬಂದಂತೆಯೇ, ಜನಾಂಗಗಳಿಂದ ಒಂದು “ಮಹಾ ಸಮೂಹವು” ಯೇಸುವಿನ ಭೂಪ್ರತಿನಿಧಿಗಳನ್ನು ಬೆಂಬಲಿಸಲು ಬಂದಿದೆ. (ಪ್ರಕಟನೆ 7:9, 10; 2 ಅರಸುಗಳು 10:15)—1/1, ಪುಟ 13.
◻ ‘ದೇವರೊಂದಿಗೆ ನಡೆಯುವುದರ’ ಅರ್ಥವೇನು? (ಆದಿಕಾಂಡ 5:24; 6:9)
ಹಾಗೆ ಮಾಡಿದವರು—ಹನೋಕನು ಮತ್ತು ನೋಹನಂತಹವರು—ದೇವರಲ್ಲಿ ಬಲವಾದ ನಂಬಿಕೆಯ ಪ್ರಮಾಣವನ್ನು ನೀಡಿದ ವಿಧದಲ್ಲಿ ತಮ್ಮನ್ನು ನಡೆಸಿಕೊಂಡರೆಂಬುದನ್ನು ಇದು ಅರ್ಥೈಸುತ್ತದೆ. ಯೆಹೋವನು ಅವರಿಗೆ ಆಜ್ಞಾಪಿಸಿದ್ದನ್ನು ಅವರು ಮಾಡಿದರಲ್ಲದೆ, ಮಾನವಕುಲದೊಂದಿಗಿನ ಆತನ ವ್ಯವಹಾರಗಳಿಂದ ಆತನ ಕುರಿತು ಅವರು ತಿಳಿದುಕೊಂಡಿದ್ದ ವಿಷಯಕ್ಕನುಗುಣವಾಗಿ ಅವರು ತಮ್ಮ ಜೀವಿತಗಳನ್ನು ಕ್ರಮಪಡಿಸಿಕೊಂಡರು.—1/15, ಪುಟ 13.
◻ ಒಬ್ಬ ವ್ಯಕ್ತಿಯು ತನ್ನ ಮರಣದ ಸಂಭವನೀಯತೆಗಾಗಿ ಮುಂದಾಗಿಯೇ ಯೋಜಿಸಬೇಕು ಏಕೆ?
ಒಂದರ್ಥದಲ್ಲಿ, ಅಂತಹ ಏರ್ಪಾಡುಗಳನ್ನು ಮಾಡುವುದು ನಿಮ್ಮ ಕುಟುಂಬಕ್ಕೆ ಒಂದು ಉಡುಗೊರೆಯಾಗಿದೆ. ಅದು ಪ್ರೀತಿಯನ್ನು ತೋರಿಸುತ್ತದೆ. ನೀವು ಇನ್ನುಮುಂದೆ ಅವರೊಂದಿಗೆ ಇಲ್ಲದಿರುವಾಗಲೂ, ನೀವು ‘ನಿಮ್ಮ ಮನೆಯವರನ್ನು ಸಂರಕ್ಷಿಸ’ಲು ಬಯಸುತ್ತೀರಿ ಎಂಬುದನ್ನು ಅದು ರುಜುಪಡಿಸುತ್ತದೆ. (1 ತಿಮೊಥೆಯ 5:8)—1/15, ಪುಟ 22.
◻ “ಹಳೇ ಒಡಂಬಡಿಕೆ”ಯು ಏನನ್ನು ಪೂರೈಸಿತು? (2 ಕೊರಿಂಥ 3:14)
ಅದು ಹೊಸ ಒಡಂಬಡಿಕೆಯನ್ನು ಮುನ್ಚಿತ್ರಿಸಿತು ಮತ್ತು ಅದರ ಸತತವಾದ ಯಜ್ಞಗಳಿಂದಾಗಿ, ಪಾಪ ಮತ್ತು ಮರಣದಿಂದ ವಿಮೋಚಿಸಲ್ಪಡುವ ಮನುಷ್ಯನ ತೀವ್ರ ಅಗತ್ಯವನ್ನು ಪ್ರದರ್ಶಿಸಿತು. ಅದು “ಕ್ರಿಸ್ತನ ಕಡೆಗೆ ನಡೆಸುವ ಖಾಸಗಿ ಶಿಕ್ಷಕ” (NW) ಆಗಿತ್ತು. (ಗಲಾತ್ಯ 3:24)—2/1, ಪುಟ 14.
◻ ಹೊಸ ಒಡಂಬಡಿಕೆಯು ಯಾವ ವಿಧಗಳಲ್ಲಿ ನಿತ್ಯದ್ದಾಗಿದೆ? (ಇಬ್ರಿಯ 13:20)
ಮೊದಲನೆಯದಾಗಿ, ಧರ್ಮಶಾಸ್ತ್ರದೊಡಂಬಡಿಕೆಗೆ ಅಸದೃಶವಾಗಿ ಅದು ಎಂದಿಗೂ ಸ್ಥಾನಪಲ್ಲಟಗೊಳಿಸಲ್ಪಡದು. ಎರಡನೆಯದಾಗಿ, ಅದರ ಕಾರ್ಯಾಚರಣೆಯ ಫಲಿತಾಂಶಗಳು ಶಾಶ್ವತವಾದವುಗಳಾಗಿರುವವು. ಮತ್ತು ಮೂರನೆಯದಾಗಿ, ದೇವರ ರಾಜ್ಯದ ಪ್ರಜೆಗಳು ಸಹಸ್ರ ವರ್ಷದ ಸಮಯದಲ್ಲಿ ಹೊಸ ಒಡಂಬಡಿಕೆಯ ಏರ್ಪಾಡಿನಿಂದ ಪ್ರಯೋಜನ ಪಡೆದುಕೊಳ್ಳುತ್ತಾ ಇರುವರು.—2/1, ಪುಟ 22.
◻ ಕೃತಜ್ಞರಾಗಿರುವುದರಿಂದ ಯಾವ ಪ್ರಯೋಜನಗಳು ಫಲಿಸುತ್ತವೆ?
ಹೃದಯದಾಳದಿಂದ ಕೃತಜ್ಞನಾಗಿರುವ ಕಾರಣ ಒಬ್ಬ ವ್ಯಕ್ತಿಯು ಅನುಭವಿಸುವ ಹೃದಯೋಲ್ಲಾಸವು, ಅವನ ಸಂತೋಷ ಹಾಗೂ ಶಾಂತಿಗೆ ನೆರವನ್ನೀಯುತ್ತದೆ. (ಜ್ಞಾನೋಕ್ತಿ 15:13, 15ನ್ನು ಹೋಲಿಸಿರಿ.) ಕೃತಜ್ಞತೆಯು ಒಂದು ಸಕಾರಾತ್ಮಕ ಗುಣವಾಗಿರುವುದರಿಂದ, ಅದು ಕೋಪ, ಹೊಟ್ಟೆಕಿಚ್ಚು ಹಾಗೂ ಅಸಮಾಧಾನದಂಥ ನಕಾರಾತ್ಮಕ ಭಾವನೆಗಳಿಂದ ಒಬ್ಬನನ್ನು ಕಾಪಾಡುತ್ತದೆ.—2/15, ಪುಟ 4.
◻ ಆತ್ಮಜನಿತರು ಯಾವ ಒಡಂಬಡಿಕೆಗಳಲ್ಲಿ ತೆಗೆದುಕೊಳ್ಳಲ್ಪಟ್ಟಿದ್ದಾರೆ?
ಆತ್ಮಿಕ ಇಸ್ರಾಯೇಲಿನ ಸದಸ್ಯರೊಂದಿಗೆ ಯೆಹೋವನು ಮಾಡುವಂತಹ ಹೊಸ ಒಡಂಬಡಿಕೆ, ಮತ್ತು ಯೇಸು ತನ್ನ ಹೆಜ್ಜೆಜಾಡಿನ ಅಭಿಷಿಕ್ತ ಹಿಂಬಾಲಕರೊಂದಿಗೆ ಮಾಡುವ ರಾಜ್ಯಕ್ಕಾಗಿರುವ ಒಡಂಬಡಿಕೆ. (ಲೂಕ 22:20, 28-30)—2/15, ಪುಟ 16.
◻ ಯಾವ ಮೂರು ದೊಡ್ಡ ಹಬ್ಬಗಳಿಗೆ ಹಾಜರಾಗುವಂತೆ ಇಸ್ರಾಯೇಲ್ಯರು ಆಜ್ಞಾಪಿಸಲ್ಪಟ್ಟಿದ್ದರು?
ನೈಸಾನ್ 14ರ ಪಸ್ಕದ ಬಳಿಕ ಆ ಕೂಡಲೆ ಹಿಂಬಾಲಿಸಿ, ಹುಳಿಯಿಲ್ಲದ ರೊಟ್ಟಿಗಳ ಹಬ್ಬ; ನೈಸಾನ್ 16ರಿಂದ ಆರಂಭಿಸಿ 50ನೆಯ ದಿನದಂದು, ವಾರಗಳ ಹಬ್ಬ; ಏಳನೆಯ ತಿಂಗಳಿನಲ್ಲಿ ಫಲಸಂಗ್ರಹದ ಹಬ್ಬ, ಅಥವಾ ಪರ್ಣಶಾಲೆಗಳ ಹಬ್ಬ. (ಧರ್ಮೋಪದೇಶಕಾಂಡ 16:1-15)—3/1, ಪುಟಗಳು 8, 9.
◻ ಕ್ರೈಸ್ತ ಕೂಡಿಬರುವಿಕೆಗಳಿಗೆ ಹಾಜರಾಗುವುದು ಒಂದು ಸುಯೋಗವಾಗಿದೆ ಏಕೆ?
ಯೇಸು ಹೇಳಿದ್ದು: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” (ಮತ್ತಾಯ 18:20; 28:20) ಅಲ್ಲದೆ, ಆತ್ಮಿಕ ಉಣಿಸುವಿಕೆಯು ನಡೆಯುವ ಒಂದು ಪ್ರಮುಖ ವಿಧವು, ಸಭಾ ಕೂಟಗಳು ಹಾಗೂ ಸಮ್ಮೇಳನಗಳು ಮತ್ತು ಅಧಿವೇಶನಗಳಂತಹ ದೊಡ್ಡ ಕೂಡಿಬರುವಿಕೆಗಳ ಮೂಲಕವಾಗಿದೆ. (ಮತ್ತಾಯ 24:45)—3/1, ಪುಟ 14.
◻ ನಿಮ್ರೋದ ಎಂಬ ಹೆಸರಿನ ಮೂಲವೇನು?
ನಿಮ್ರೋದ ಎಂಬ ಹೆಸರು ಜನ್ಮತಃ ಕೊಡಲ್ಪಟ್ಟದ್ದಲ್ಲ ಎಂಬುದು ಹಲವಾರು ವಿದ್ವಾಂಸರ ಅಭಿಪ್ರಾಯವಾಗಿದೆ. ಅದಕ್ಕೆ ಬದಲಾಗಿ, ಅವನ ದಂಗೆಕೋರ ಸ್ವಭಾವವು ಗೊತ್ತಾದ ಮೇಲೆ ಅದಕ್ಕೆ ಸರಿಹೊಂದಲು ಕೊಡಲ್ಪಟ್ಟಿದ್ದ ಒಂದು ಹೆಸರು ಎಂದು ಅದನ್ನು ಪರಿಗಣಿಸಲಾಗುತ್ತದೆ.—3/15, ಪುಟ 25.
◻ ಕುಟುಂಬವು ಮಾನವ ಸಮಾಜಕ್ಕೆ ಎಷ್ಟು ಪ್ರಾಮುಖ್ಯವಾದದ್ದಾಗಿದೆ?
ಕುಟುಂಬವು ಒಂದು ಮಾನವ ಆವಶ್ಯಕತೆಯಾಗಿದೆ. ಕುಟುಂಬ ಏರ್ಪಾಡು ಶಿಥಿಲವಾದಂತೆ, ಸಮುದಾಯಗಳು ಹಾಗೂ ರಾಷ್ಟ್ರಗಳ ಬಲವು ದುರ್ಬಲಗೊಳ್ಳುತ್ತದೆ ಎಂದು ಇತಿಹಾಸವು ತೋರಿಸುತ್ತದೆ. ಆದುದರಿಂದ, ಸಮಾಜದ ಸ್ಥಿರತೆಯ ಮೇಲೆ ಮತ್ತು ಮಕ್ಕಳ ಹಿತಕ್ಷೇಮದ ಮೇಲೆ ಹಾಗೂ ಭಾವೀ ಸಂತತಿಗಳ ಮೇಲೆ ಅದು ನೇರವಾದ ಪರಿಣಾಮವನ್ನು ಬೀರುತ್ತದೆ.—4/1, ಪುಟ 6.
◻ ಬೈಬಲ್ ದೇವರ ವಾಕ್ಯವಾಗಿದೆಯೆಂಬುದಕ್ಕೆ ಮೂರು ರುಜುವಾತುಗಳು ಯಾವುವು?
(1) ಅದು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ, (2) ಆಧುನಿಕ ಜೀವನಕ್ಕೆ ಪ್ರಾಯೋಗಿಕವಾಗಿರುವ ಅನಂತಕಾಲಿಕ ಮೂಲತತ್ವಗಳನ್ನು ಅದು ಒಳಗೊಂಡಿದೆ, ಮತ್ತು (3) ಐತಿಹಾಸಿಕ ವಾಸ್ತವಾಂಶಗಳಿಂದ ರುಜುಪಡಿಸಲ್ಪಟ್ಟಿರುವಂತೆ, ಅದು ನೆರವೇರಿಸಲ್ಪಟ್ಟಿರುವ ನಿರ್ದಿಷ್ಟ ಪ್ರವಾದನೆಗಳನ್ನು ಒಳಗೊಂಡಿದೆ.—4/1, ಪುಟ 15.