ನಾನು ನನ್ನ ಸಹೋದರನಿಂದ ಸಾಲ ತೆಗೆದುಕೊಳ್ಳಬಹುದೊ?
ಸೈಮನನ ಕೊನೆಯ ಮಗು ಅಸ್ವಸ್ಥವಾಗಿರುವುದರಿಂದ, ಔಷಧದ ಅಗತ್ಯ ತುರ್ತಾಗಿದೆ. ಆದರೆ ಸೈಮನ್ ತುಂಬ ಬಡವನಾಗಿರುವ ಕಾರಣ, ಅದನ್ನು ಖರೀದಿಸುವ ಸಾಮರ್ಥ್ಯ ಅವನಿಗಿಲ್ಲ. ಇಂತಹ ಸನ್ನಿವೇಶದಲ್ಲಿ ಅವನು ಏನು ತಾನೇ ಮಾಡಸಾಧ್ಯವಿದೆ? ಮೈಕಲ್ ಎಂಬ ಜೊತೆ ಕ್ರೈಸ್ತನೊಬ್ಬನು, ಸೈಮನನಿಗಿಂತ ಆರ್ಥಿಕವಾಗಿ ಅನುಕೂಲ ಸ್ಥಿತಿಯಲ್ಲಿದ್ದಾನೆ. ಬಹುಶಃ ಮೈಕಲ್ ಅವನಿಗೆ ಒಂದಿಷ್ಟು ಹಣವನ್ನು ಸಾಲವಾಗಿ ಕೊಟ್ಟಾನು. ಆದರೆ ಆ ಸಾಲವನ್ನು ಹಿಂದಿರುಗಿಸುವ ಸಾಮರ್ಥ್ಯ ತನಗಿಲ್ಲವೆಂದು ಸ್ವತಃ ಸೈಮನನಿಗೇ ಗೊತ್ತಿದೆ.a
ಸೈಮನ್, ಮೈಕಲ್ನ ಬಳಿಗೆ ಹೋಗಿ ಹಣಕೇಳಿದಾಗ, ಮೈಕಲ್ ಉಭಯ ಸಂಕಟದಲ್ಲಿ ಸಿಕ್ಕಿಕೊಳ್ಳುತ್ತಾನೆ. ಹಣದ ಅಗತ್ಯವು ತುರ್ತಾಗಿದೆಯೆಂದು ಮೈಕಲ್ ಗ್ರಹಿಸಿದರೂ, ಆ ಹಣವನ್ನು ಹಿಂದಿರುಗಿಸಲು ಸೈಮನ್ ಅಶಕ್ತನಾಗಿದ್ದಾನೆಂದು ಅವನಿಗೆ ಗೊತ್ತು. ಏಕೆಂದರೆ, ತನ್ನ ಕುಟುಂಬವನ್ನು ಪೋಷಿಸಲೂ ಸೈಮನ್ ತುಂಬ ಹೆಣಗಾಡುತ್ತಾನೆಂದು ಮೈಕಲ್ಗೆ ಚೆನ್ನಾಗಿ ಗೊತ್ತು. ಹಾಗಾದರೆ ಮೈಕಲ್ ಏನು ಮಾಡತಕ್ಕದ್ದು?
ಅನೇಕ ದೇಶಗಳಲ್ಲಿ, ಜನರು ಇದ್ದಕ್ಕಿದ್ದಂತೆ ತಮ್ಮ ಕೆಲಸಗಳನ್ನು ಕಳೆದುಕೊಂಡಾಗ, ಅವರಲ್ಲಿ ಹಣವಾಗಲಿ ಇಲ್ಲವೆ ವೈದ್ಯಕೀಯ ಖರ್ಚನ್ನು ಭರ್ತಿಮಾಡಲಿಕ್ಕಾಗಿರುವ ವಿಮೆಯಾಗಲಿ ಇರುವುದಿಲ್ಲ. ಬ್ಯಾಂಕಿನ ಸಾಲಗಳು ದೊರೆಯದೆ ಇರಬಹುದು ಇಲ್ಲವೆ ಬಡ್ಡಿಯ ದರವು ಬಹಳ ದುಬಾರಿಯಾಗಿರಬಹುದು. ಇಂತಹ ಸಮಯದಲ್ಲಿ ಒಂದು ತುರ್ತಿನ ಸನ್ನಿವೇಶವು ಎದುರುಗೊಳ್ಳುವಾಗ, ಒಬ್ಬ ಮಿತ್ರನಿಂದ ಸಾಲವನ್ನು ತೆಗೆದುಕೊಳ್ಳುವುದೊಂದೇ ಪರಿಹಾರವಾಗಿದ್ದೀತು. ಸಾಲಕ್ಕಾಗಿ ವಿನಂತಿಸಿಕೊಳ್ಳುವ ಮುಂಚೆ, ಪರಿಗಣಿಸಬೇಕಾದ ಕೆಲವು ಪ್ರಾಮುಖ್ಯ ವಿಷಯಗಳಿವೆ.
ಕಷ್ಟನಷ್ಟಗಳನ್ನು ಗುಣಿಸಿ ನೋಡಿ
ಶಾಸ್ತ್ರವಚನಗಳು ಸಾಲಕೊಡುವವನಿಗೆ ಹಾಗೂ ಸಾಲಗಾರನಿಗೆ ಮಾರ್ಗದರ್ಶನವನ್ನು ಒದಗಿಸುತ್ತವೆ. ಅದಕ್ಕೆ ಕಿವಿಗೊಡುವ ಮೂಲಕ, ನಾವು ಅನೇಕ ಅಪಾರ್ಥಗಳನ್ನು ಮತ್ತು ಮನೋವೇದನೆಗಳನ್ನು ದೂರಮಾಡಬಲ್ಲೆವು.
ದೃಷ್ಟಾಂತಕ್ಕೆ, ಹಣವನ್ನು ಸಾಲವಾಗಿ ಪಡೆದುಕೊಳ್ಳುವ ವಿಷಯವನ್ನು ನಾವು ಲಘುವಾಗಿ ಎಣಿಸಬಾರದೆಂದು ಬೈಬಲ್ ನಮಗೆ ಮರುಜ್ಞಾಪಿಸುತ್ತದೆ. ರೋಮಿನಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಪ್ರೇರೇಪಿಸಿದ್ದು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ಧರ್ಮಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.” (ರೋಮಾಪುರ 13:8) ಹಾಗಾದರೆ, ಪ್ರೀತಿಯು ಕ್ರೈಸ್ತನೊಬ್ಬನಿಗೆ ಇರಬೇಕಾದ ಏಕೈಕ ಸಾಲವಾಗಿದೆ. ಆದಕಾರಣ, ‘ಸಾಲದ ಅಗತ್ಯ ನಮಗೆ ನಿಜವಾಗಿಯೂ ಇದೆಯೊ?’ ಎಂದು ನಾವು ಮೊದಲಾಗಿ ನಮ್ಮನ್ನೇ ಕೇಳಿಕೊಳ್ಳಬಹುದು.
ಉತ್ತರವು ಹೌದಾಗಿರುವಲ್ಲಿ, ಸಾಲ ತೆಗೆದುಕೊಳ್ಳುವುದರ ಪರಿಣಾಮಗಳನ್ನು ಪರಿಗಣಿಸುವುದು ಸೂಕ್ತವಾಗಿರುವುದು. ಪ್ರಾಮುಖ್ಯವಾದ ನಿರ್ಣಯಗಳನ್ನು ಮಾಡಲು, ಜಾಗರೂಕವಾದ ಪರಿಗಣನೆ ಮತ್ತು ಯೋಜನೆಯು ಅಗತ್ಯವೆಂದು ಯೇಸು ಕ್ರಿಸ್ತನು ತೋರಿಸಿಕೊಟ್ಟನು. ಅವನು ತನ್ನ ಶಿಷ್ಯರನ್ನು ಕೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?” (ಲೂಕ 14:28) ಒಬ್ಬ ಸಹೋದರನಿಂದ ಸಾಲ ತೆಗೆದುಕೊಳ್ಳುವುದರ ಕುರಿತು ಯೋಚಿಸುವಾಗಲೂ ಈ ತತ್ವವು ಅನ್ವಯಿಸುತ್ತದೆ. ಒಂದು ಸಾಲದ ಖರ್ಚನ್ನು ಲೆಕ್ಕಮಾಡುವುದು, ಅದನ್ನು ಹೇಗೆ ಮತ್ತು ಯಾವಾಗ ಹಿಂದಿರುಗಿಸುವೆವು ಎಂಬುದನ್ನು ಮೊದಲೇ ಯೋಚಿಸುವುದನ್ನು ಅರ್ಥೈಸುತ್ತದೆ.
ಸಾಲವನ್ನು ಹೇಗೆ ಮತ್ತು ಯಾವಾಗ ಹಿಂದಿರುಗಿಸಲಾಗುವುದೆಂದು ತಿಳಿದುಕೊಳ್ಳುವ ಹಕ್ಕು ಸಾಲಕೊಡುವವನಿಗಿದೆ. ವಿಷಯಗಳನ್ನು ಜಾಗರೂಕವಾಗಿ ತೂಗಿನೋಡುವ ಮೂಲಕ, ನಾವು ಅವನಿಗೆ ನಿರ್ದಿಷ್ಟವಾದ ಉತ್ತರಗಳನ್ನು ನೀಡಲು ಶಕ್ತರಾಗಿರುವೆವು. ಸಾಲವನ್ನು ಸರಿಯಾದ ಸಮಯದೊಳಗೆ ಹಿಂದಿರುಗಿಸುವ ಸಾಧ್ಯತೆಯ ಕುರಿತು ನಾವು ಯೋಚಿಸಿದ್ದೇವೊ? “ನಾನು ಸಾಧ್ಯವಾದಷ್ಟು ಬೇಗನೆ ನಿಮ್ಮ ಹಣವನ್ನು ಹಿಂದಿರುಗಿಸುವೆನು. ನೀವು ನನ್ನನ್ನು ನಂಬಬಹುದು” ಎಂದು ನಮ್ಮ ಸಹೋದರನಿಗೆ ಹೇಳುವುದು, ನಿಶ್ಚಯವಾಗಿಯೂ ತುಂಬ ಸುಲಭ. ಆದರೆ, ನಾವು ಇಂತಹ ವಿಷಯಗಳನ್ನು ಹೆಚ್ಚು ಜವಾಬ್ದಾರಿಯುತ ವಿಧದಲ್ಲಿ ನಿರ್ವಹಿಸಬಾರದೊ? ನಾವು ಆರಂಭದಿಂದಲೆ ಆ ಸಾಲವನ್ನು ಹಿಂದಿರುಗಿಸಲು ದೃಢನಿಶ್ಚಯ ಮಾಡಿರಬೇಕು, ಯಾಕಂದರೆ ಅದು ಯೆಹೋವನ ಹೇಳಿಕೆ. “ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು” ಎಂದು ಕೀರ್ತನೆ 37:21 ಹೇಳುತ್ತದೆ.
ನಾವು ಸಾಲವನ್ನು ಹೇಗೆ ಮತ್ತು ಯಾವಾಗ ಹಿಂದಿರುಗಿಸುವೆವು ಎಂಬುದರ ಕುರಿತು ಯೋಚಿಸುವಾಗ, ನಾವು ಮಾಡಿಕೊಳ್ಳುತ್ತಿರುವ ಗಂಭೀರವಾದ ವಚನಬದ್ಧತೆಯ ಕುರಿತು ಸ್ವತಃ ಜ್ಞಾಪಿಸಿಕೊಳ್ಳುತ್ತೇವೆ. ಇದು, ಅನಗತ್ಯವಾಗಿ ಸಾಲಮಾಡುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ನಾವು ಸಾಲಮಾಡುವುದರಿಂದ ದೂರವಿರುವುದಾದರೆ, ಅನೇಕ ಪ್ರಯೋಜನಗಳಿವೆ. ಜ್ಞಾನೋಕ್ತಿ 22:7 ಎಚ್ಚರಿಸುವುದು: “ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.” ಹಣಕೊಡುವವನು ಮತ್ತು ಅದನ್ನು ತೆಗೆದುಕೊಳ್ಳುವವನು ಆತ್ಮಿಕ ಸಹೋದರರಾಗಿದ್ದರೂ, ಸಾಲವು ಒಂದಿಷ್ಟು ಮಟ್ಟಿಗೆ ಅವರ ಸಂಬಂಧವನ್ನು ಬಾಧಿಸಬಹುದು. ಸಾಲಗಳ ವಿಷಯದಲ್ಲಿ ಉಂಟಾದ ಮನಸ್ತಾಪಗಳು, ಕೆಲವು ಸಭೆಗಳ ಶಾಂತಿಯನ್ನು ಭಂಗಮಾಡಿವೆ.
ಹಣದ ಅಗತ್ಯ ಏಕಿದೆ ಎಂಬುದನ್ನು ವಿವರಿಸಿರಿ
ಸಾಲತೆಗೆದುಕೊಂಡ ಹಣವನ್ನು ನಾವು ಹೇಗೆ ಉಪಯೋಗಿಸಲಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾಲಕೊಡುವವನಿಗಿದೆ. ಈ ಸಾಲವಲ್ಲದೆ, ನಾವು ಇತರರಿಂದಲೂ ಸಾಲತೆಗೆದುಕೊಳ್ಳುತ್ತಿದ್ದೇವೊ? ಹಾಗಿರುವಲ್ಲಿ, ನಾವು ಆ ವಿಷಯವನ್ನು ಸ್ಪಷ್ಟವಾಗಿ ತಿಳಿಸಬೇಕು, ಏಕೆಂದರೆ ಸಾಲವನ್ನು ಹಿಂದಿರುಗಿಸುವ ನಮ್ಮ ಸಾಮರ್ಥ್ಯದ ಮೇಲೆ ಅದು ಪ್ರಭಾವಬೀರುತ್ತದೆ.
ವ್ಯಾಪಾರಕ್ಕಾಗಿ ತೆಗೆದುಕೊಳ್ಳುವ ಸಾಲ ಮತ್ತು ಒಂದು ತುರ್ತಿನ ಸನ್ನಿವೇಶಕ್ಕಾಗಿ ಪಡೆದುಕೊಳ್ಳುವ ಸಾಲದ ಮಧ್ಯೆ ವ್ಯತ್ಯಾಸವನ್ನು ಉಂಟುಮಾಡುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಒಂದು ವ್ಯಾಪಾರಕ್ಕಾಗಿ ಹಣವನ್ನು ಸಾಲವಾಗಿ ಕೊಡುವ ಶಾಸ್ತ್ರೀಯ ಹಂಗು ಒಬ್ಬ ಸಹೋದರನಿಗೆ ಇರುವುದಿಲ್ಲ. ಆದರೆ, ಆಹಾರ, ಬಟ್ಟೆಬರೆ, ಇಲ್ಲವೆ ಅತ್ಯಾವಶ್ಯಕ ವೈದ್ಯಕೀಯ ಆರೈಕೆಯೆಂಬಂತಹ ಮೂಲಭೂತ ಆವಶ್ಯಕತೆಗಳಿಗಾಗಿ ಹಣಪಾವತಿ ಮಾಡಲು ಒಬ್ಬ ಸಹೋದರನು ಅಶಕ್ತನಾಗಿರುವಾಗ, ಅಂದರೆ ಅವನು ತನ್ನ ಸಂಪಾದನೆಯನ್ನು ವ್ಯರ್ಥವಾಗಿ ಖರ್ಚುಮಾಡದೆ ಇದ್ದಾಗ, ಅವನು ಬಹುಶಃ ಸಹಾಯ ಮಾಡುವನು. ಈ ವಿಷಯದಲ್ಲಿ ಮುಚ್ಚುಮರೆಯಿಲ್ಲದೆ ಸತ್ಯವನ್ನೇ ಆಡುವುದು, ಮನಸ್ತಾಪಗಳನ್ನು ದೂರವಿಡಲು ಸಹಾಯಮಾಡುವುದು.—ಎಫೆಸ 4:25.
ಅದನ್ನು ಬರವಣಿಗೆಯಲ್ಲಿ ಹಾಕಿರಿ
ಮುಂದೆ ಆಗಬಹುದಾದ ಮನಸ್ತಾಪಗಳನ್ನು ತಡೆಯಲು, ಒಪ್ಪಂದದ ಒಂದು ಲಿಖಿತ ದಾಖಲೆಯು ಅತ್ಯಾವಶ್ಯಕ ಹೆಜ್ಜೆಯಾಗಿದೆ. ಒಪ್ಪಂದವನ್ನು ಬರೆದಿಡದಿದ್ದಲ್ಲಿ, ನಿರ್ದಿಷ್ಟವಾದ ವಿವರಗಳನ್ನು ಮರೆತುಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ಎರವಲಾಗಿ ಪಡೆದುಕೊಳ್ಳುವ ಮೊತ್ತವನ್ನು ಮತ್ತು ಅದನ್ನು ಹಿಂದಿರುಗಿಸಲಿರುವ ಸಮಯವನ್ನು ಬರೆದಿಡಬೇಕಾಗಿದೆ. ಹಣಕೊಡುವವನು ಮತ್ತು ಅದನ್ನು ತೆಗೆದುಕೊಳ್ಳುವವನು ಆ ಒಪ್ಪಂದಕ್ಕೆ ಸಹಿಹಾಕಿ, ಪ್ರತಿಯೊಬ್ಬರಲ್ಲಿಯೂ ಒಂದು ವೈಯಕ್ತಿಕ ಪ್ರತಿಯಿರುವುದು ಯೋಗ್ಯವಾಗಿದೆ. ಹಣಕಾಸಿನ ವ್ಯವಹಾರಗಳು ದಾಖಲೆಯ ರೂಪದಲ್ಲಿರಬೇಕೆಂದು ಬೈಬಲು ಸೂಚಿಸುತ್ತದೆ. ಬಬಿಲೋನ್ಯರು ಯೆರೂಸಲೇಮನ್ನು ನಾಶಪಡಿಸಲು ಇನ್ನು ಸ್ವಲ್ಪ ಸಮಯವಿದ್ದಾಗ, ಯೆರೆಮೀಯನು ತನ್ನ ಸಂಬಂಧಿಕನೊಬ್ಬನಿಂದ ಜಮೀನನ್ನು ಕೊಂಡುಕೊಳ್ಳುವಂತೆ ಯೆಹೋವನು ಅವನಿಗೆ ಹೇಳಿದನು. ಆ ಕಾರ್ಯವಿಧಾನದ ವಿಮರ್ಶೆಯಿಂದ ನಾವು ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ.
ಯೆರೆಮೀಯನು ಹೇಳಿದ್ದು: “ಆಗ ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಆನಾತೋತಿನಲ್ಲಿರುವ ಹೊಲವನ್ನು ನಾನು ಕೊಂಡುಕೊಂಡು ಅದರ ಕ್ರಯವಾಗಿ ಹದಿನೇಳು ತೊಲ ಬೆಳ್ಳಿಯನ್ನು ತೂಕಮಾಡಿ ಅವನಿಗೆ ಕೊಟ್ಟೆನು. ಪತ್ರಕ್ಕೆ ರುಜುಹಾಕಿ ಮುಚ್ಚಿ ಮುಚ್ಚಳಕ್ಕೆ ಸಾಕ್ಷಿಗಳನ್ನು ಹಾಕಿಸಿ ತ್ರಾಸಿನಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು. ಆ ಮೇಲೆ ನಾನು ಕ್ರಯಪತ್ರವನ್ನು, ಅಂದರೆ ಚಕ್ಕುಬಂದಿಷರತ್ತುಗಳಿಂದೊಡಗೂಡಿ ಮುಚ್ಚಿದ್ದ ಪತ್ರವನ್ನೂ ಮುಚ್ಚಳದ ಪತ್ರವನ್ನೂ ತೆಗೆದುಕೊಂಡು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮ ಕಾರಾಗೃಹದ ಅಂಗಳದಲ್ಲಿ ಕೂತಿದ್ದ ಎಲ್ಲಾ ಯೆಹೂದ್ಯರ ಎದುರಿನಲ್ಲಿ ಆ ಕ್ರಯಪತ್ರವನ್ನು ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆನು.” (ಯೆರೆಮೀಯ 32:9-12) ಮೇಲಿನ ಉದಾಹರಣೆಯು, ಒಂದು ಸಾಲವನ್ನಲ್ಲ, ಬದಲಾಗಿ ಖರೀದಿಯನ್ನು ಒಳಗೊಳ್ಳುವುದಾದರೂ, ಹಣಕಾಸಿನ ವ್ಯವಹಾರಗಳನ್ನು ಸ್ಪಷ್ಟವಾದ ರೀತಿಯಲ್ಲಿ ನಿರ್ವಹಿಸುವುದರ ಮಹತ್ವವನ್ನು ತೋರಿಸುತ್ತದೆ.—ಮೇ 1, 1973ರ ವಾಚ್ಟವರ್ ಪತ್ರಿಕೆಯ, ಪುಟಗಳು 287-8ನ್ನು ನೋಡಿರಿ.
ತೊಂದರೆಗಳು ಏಳುವಲ್ಲಿ, ಅವುಗಳನ್ನು ಮತ್ತಾಯ 18:15-17ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಸಲಹೆಗನುಸಾರ ಬಗೆಹರಿಸಲು ಕ್ರೈಸ್ತರು ಪ್ರಯತ್ನಿಸಬೇಕು. ಇಂತಹ ವಿಷಯಗಳಲ್ಲಿ ಸಹಾಯವನ್ನು ನೀಡಲು ಪ್ರಯತ್ನಿಸಿರುವ ಒಬ್ಬ ಹಿರಿಯನು ಹೇಳುವುದು: “ಬಹುಮಟ್ಟಿಗೆ ಎಲ್ಲ ವಿದ್ಯಮಾನಗಳಲ್ಲಿ, ಒಂದು ಲಿಖಿತ ಒಪ್ಪಂದವು ಇರಲೇ ಇಲ್ಲ. ಆದಕಾರಣ, ಸಾಲವು ಹೇಗೆ ಹಿಂದಿರುಗಿಸಲ್ಪಡುವುದೆಂಬ ವಿಷಯದಲ್ಲಿ ಎರಡೂ ಪಕ್ಷದವರಿಗೆ ಸ್ಪಷ್ಟವಾದ ತಿಳುವಳಿಕೆ ಇರಲಿಲ್ಲ. ಈ ವಿಷಯಗಳನ್ನು ಬರವಣಿಗೆಯಲ್ಲಿ ಹಾಕುವುದು, ಅಪನಂಬಿಕೆಯ ಚಿಹ್ನೆಯಲ್ಲ, ಪ್ರೀತಿಯ ಚಿಹ್ನೆಯಾಗಿದೆ ಎಂದು ನಾನು ಮನಗಂಡಿದ್ದೇನೆ.”
ಒಮ್ಮೆ ನಾವು ಒಪ್ಪಂದವನ್ನು ಮಾಡಿದ ಮೇಲೆ, ನಮ್ಮ ಮಾತನ್ನು ನಡೆಸಿಕೊಡಲು ನಾವು ಖಂಡಿತವಾಗಿಯೂ ಶ್ರಮಿಸಬೇಕು. ಯೇಸು ಪ್ರೋತ್ಸಾಹಿಸಿದ್ದು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು.” (ಮತ್ತಾಯ 5:37) ಆದರೆ ಮುಂಗಾಣದ ಸಮಸ್ಯೆಯೊಂದು, ಸಾಲವನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸುವುದರಿಂದ ನಮ್ಮನ್ನು ತಡೆಯುವಲ್ಲಿ, ನಾವು ಕೂಡಲೇ ಅದನ್ನು ಸಾಲಕೊಟ್ಟವನಿಗೆ ವಿವರಿಸಬೇಕು. ಆಗ ಅವನು, ಸಾಲವನ್ನು ಚಿಕ್ಕ ಚಿಕ್ಕ ಕಂತುಗಳಲ್ಲಿ ಹಿಂದಿರುಗಿಸುವ ಅವಕಾಶವನ್ನು ನಮಗೆ ನೀಡಬಹುದು.
ಆದರೂ, ಅನಾನುಕೂಲ ಪರಿಸ್ಥಿತಿಗಳು, ನಮ್ಮ ಜವಾಬ್ದಾರಿಗಳಿಂದ ನಾವು ತಪ್ಪಿಸಿಕೊಳ್ಳುವಂತೆ ಅನುಮತಿಸುವುದಿಲ್ಲ. ಯೆಹೋವನಿಗೆ ಭಯಪಡುವ ವ್ಯಕ್ತಿಯು, ತನ್ನ ಮಾತನ್ನು ನಡೆಸಿಕೊಡಲು ತನ್ನಿಂದಾಗುವ ಎಲ್ಲ ಪ್ರಯತ್ನವನ್ನೂ ಮಾಡುವನು. (ಕೀರ್ತನೆ 15:4) ವಿಷಯಗಳು ನಾವು ಎಣಿಸಿದಂತೆ ಘಟಿಸದಿದ್ದರೂ, ನಮ್ಮ ಸಾಲಗಳನ್ನು ಹಿಂದಿರುಗಿಸಲು ನಾವು ತ್ಯಾಗಗಳನ್ನು ಮಾಡಲು ಸಿದ್ಧರಾಗಿರಬೇಕು. ಏಕೆಂದರೆ ಅದು ನಮ್ಮ ಕ್ರೈಸ್ತ ಜವಾಬ್ದಾರಿಯಾಗಿದೆ.
ಹಣಕೊಡುವ ವಿಷಯದಲ್ಲಿ ಜಾಗರೂಕರಾಗಿರಿ
ಹಣತೆಗೆದುಕೊಳ್ಳುವವನು ಮಾತ್ರ ವಿಷಯಗಳನ್ನು ಜಾಗರೂಕವಾಗಿ ತೂಗಿನೋಡಬೇಕೆಂದಿಲ್ಲ. ಹಣವನ್ನು ಸಾಲವಾಗಿ ಕೊಡುವ ಸಹೋದರನೂ ಅದರ ಕುರಿತು ಯೋಚಿಸಬೇಕು. ಹಣಕೊಡುವ ಮೊದಲು, ವಿಷಯಗಳನ್ನು ಜಾಗರೂಕವಾಗಿ ಮತ್ತು ವಾಸ್ತವಿಕವಾಗಿ ಪರಿಗಣಿಸಲು ಸಮಯವನ್ನು ತೆಗೆದುಕೊಳ್ಳುವುದು ವಿವೇಕಪ್ರದವಾಗಿದೆ. ಬೈಬಲು ಎಚ್ಚರಿಕೆ ನೀಡುತ್ತಾ ಹೇಳುವುದು: “ಕೈಮೇಲೆ ಕೈಹಾಕಿ ಸಾಲಕ್ಕೆ ಹೊಣೆಯಾಗುವವರಲ್ಲಿ ನೀನೂ ಒಬ್ಬನಾಗಬೇಡ.”—ಜ್ಞಾನೋಕ್ತಿ 22:26.
ಹಣಕೊಡಲು ಒಪ್ಪಿಕೊಳ್ಳುವ ಮುಂಚೆ, ಆ ಸಾಲವನ್ನು ಹಿಂದಿರುಗಿಸಲು ಆ ಸಹೋದರನು ಅಶಕ್ತನಾಗುವಲ್ಲಿ ಏನು ಸಂಭವಿಸುವುದೆಂಬುದನ್ನು ಪರಿಗಣಿಸಿರಿ. ಆಗ ನೀವು ಗಂಭೀರವಾದ ಹಣಕಾಸಿನ ಸಮಸ್ಯೆಗಳಲ್ಲಿ ಸ್ವತಃ ಸಿಕ್ಕಿಕೊಳ್ಳುವಿರೊ? ಆ ಸಹೋದರನ ಉದ್ದೇಶಗಳು ಒಳ್ಳೆಯವುಗಳಾಗಿದ್ದರೂ, ಪರಿಸ್ಥಿತಿಗಳು ಬದಲಾಗಬಲ್ಲವು ಇಲ್ಲವೆ ಅವನ ಲೆಕ್ಕಾಚಾರವು ತಪ್ಪಾಗಬಲ್ಲದು. ಯಾಕೋಬ 4:13, 14 ನಮಗೆಲ್ಲರಿಗೂ ತಿಳಿಸುವುದು: “ನಾಳೆ ಏನಾಗುವದೋ ನಿಮಗೆ ತಿಳಿಯದು. . . . ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆಹೋಗುವ ಹಬೆಯಂತಿರುತ್ತೀರಿ.”—ಹೋಲಿಸಿ ಪ್ರಸಂಗಿ 9:11.
ವಿಶೇಷವಾಗಿ ವ್ಯಾಪಾರಕ್ಕಾಗಿ ತೆಗೆದುಕೊಳ್ಳುವ ಸಾಲದ ವಿಷಯದಲ್ಲಿ, ಸಾಲಗಾರನ ಪ್ರತಿಷ್ಠೆಯನ್ನು ಪರಿಗಣಿಸುವುದು ವಿವೇಕಪ್ರದವಾಗಿದೆ. ಅವನು ನಂಬಿಕೆಗೆ ಅರ್ಹನೂ ವಿಶ್ವಾಸಯೋಗ್ಯನೂ ಎಂಬ ಹೆಸರುವುಳ್ಳವನೊ, ಅಥವಾ ಹಣಕಾಸಿನ ವಿಷಯಗಳನ್ನು ನಿರ್ವಹಿಸುವುದರಲ್ಲಿ ಅವನು ಅಸಮರ್ಥನಾಗಿದ್ದಾನೊ? ಅವನು ಸಭೆಯಲ್ಲಿರುವ ವಿಭಿನ್ನ ವ್ಯಕ್ತಿಗಳ ಹತ್ತಿರ ಹಣ ಕೇಳುವ ಪ್ರವೃತ್ತಿಯುಳ್ಳವನಾಗಿದ್ದಾನೊ? ಈ ಕೆಳಗಿನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.
ಕೆಲವೊಮ್ಮೆ ಸಾಲವು, ಸಾಲಗಾರನಿಗೆ ಯಾವ ಪ್ರಯೋಜನವನ್ನೂ ತರಲಿಕ್ಕಿಲ್ಲ. ಸುಲಭವಾಗಿ ಅದು ಒಂದು ಹೊರೆಯಾಗಿ ಪರಿಣಮಿಸಿ, ಅವನ ಆನಂದವನ್ನು ಕಸಿದುಕೊಳ್ಳಬಲ್ಲದು. ಅಂತಹ ಒಬ್ಬ ಸಹೋದರನು ನಮ್ಮ “ಸೇವಕ”ನಾಗುವಂತೆ ನಾವು ಬಯಸುತ್ತೇವೊ? ಒಂದು ಸಾಲವು ನಮ್ಮ ಸಂಬಂಧವನ್ನು ಬಾಧಿಸಿ, ಅವನು ಹಣವನ್ನು ಹಿಂದಿರುಗಿಸಲು ಅಶಕ್ತನಾಗಿರುವಲ್ಲಿ ನಮ್ಮ ಮನಸ್ಸಿನಲ್ಲಿ ಕಳವಳವನ್ನು ಇಲ್ಲವೆ ಪೇಚಾಟವನ್ನೂ ಉಂಟುಮಾಡಬಲ್ಲದೊ?
ನಿಜವಾದೊಂದು ಅಗತ್ಯವಿರುವಲ್ಲಿ, ನಾವು ಹಣವನ್ನು ಸಾಲವಾಗಿ ಕೊಡುವುದಕ್ಕಿಂತಲೂ ಸ್ವಲ್ಪವೇ ಹಣವನ್ನು ಉಡುಗೊರೆಯಾಗಿ ಕೊಡುವುದನ್ನು ಪರಿಗಣಿಸಸಾಧ್ಯವಿದೆಯೊ? ನಮ್ಮ ಸಹೋದರನು ಅಗತ್ಯದಲ್ಲಿರುವುದನ್ನು ನಾವು ನೋಡುವಾಗ, ಸಹಾನುಭೂತಿಯುಳ್ಳವರಾಗಿರುವಂತೆ ಶಾಸ್ತ್ರವಚನಗಳು ನಮ್ಮನ್ನು ಉತ್ತೇಜಿಸುತ್ತವೆ. “ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 37:21) ಅಗತ್ಯದಲ್ಲಿರುವ ಸಹೋದರರಿಗೆ ಪ್ರಾಯೋಗಿಕ ಸಹಾಯವನ್ನು ನೀಡಲು, ನಮ್ಮಿಂದ ಸಾಧ್ಯವಾದುದನ್ನು ಮಾಡುವಂತೆ ಪ್ರೀತಿಯು ನಮ್ಮನ್ನು ಪ್ರೇರಿಸಬೇಕು.—ಯಾಕೋಬ 2:15, 16.
ನಿಮ್ಮ ಹೆಜ್ಜೆಗಳನ್ನು ಜಾಗರೂಕವಾಗಿ ಪರಿಗಣಿಸಿರಿ
ಸಾಲಗಳು, ಘರ್ಷಣೆಯ ಒಂದು ಸಂಭಾವ್ಯ ಮೂಲವಾಗಿರುವುದರಿಂದ, ಅವುಗಳನ್ನು ಸುಲಭವಾದ ಆಯ್ಕೆ ಎಂದು ವೀಕ್ಷಿಸುವುದಕ್ಕಿಂತಲೂ ಕೊನೆಯ ಉಪಾಯದಂತೆ ನಾವು ವೀಕ್ಷಿಸಬೇಕು. ಈಗಾಗಲೇ ಗಮನಿಸಿದಂತೆ, ಸಾಲಗಾರನು ಸಾಲಕೊಡುವವನಿಂದ ಏನನ್ನೂ ಮುಚ್ಚುಮರೆಮಾಡದೆ, ಸಾಲವನ್ನು ಹೇಗೆ ಮತ್ತು ಯಾವಾಗ ಹಿಂದಿರುಗಿಸಲಾಗುವುದು ಎಂಬುದನ್ನು ಬರವಣಿಗೆಯಲ್ಲಿ ಹಾಕಬೇಕು. ಮತ್ತು ನಿಜವಾದ ತೊಂದರೆಯ ಸಮಯದಲ್ಲಿ, ಉಡುಗೊರೆಯೇ ಅತ್ಯುತ್ತಮವಾದ ಪರಿಹಾರವಾಗಿರಬಹುದು.
ಸೈಮನ್ ವಿನಂತಿಸಿಕೊಂಡ ಹಣವನ್ನು ಮೈಕಲ್ ಸಾಲದ ರೂಪದಲ್ಲಿ ಅವನಿಗೆ ಕೊಡಲಿಲ್ಲ. ಬದಲಿಗೆ, ಒಂದಿಷ್ಟು ಕಡಿಮೆ ಮೊತ್ತವನ್ನು ಉಡುಗೊರೆಯಾಗಿ ನೀಡಿದನು. ತನ್ನ ಮಗುವಿನ ಔಷಧಿಗೆ ಮೈಕಲ್ ನೀಡಿದ ಸಹಾಯಕ್ಕಾಗಿ ಸೈಮನ್ ತುಂಬ ಆಭಾರಿಯಾಗಿದ್ದನು. ಮತ್ತು ಒಂದು ಪ್ರಾಯೋಗಿಕವಾದ ರೀತಿಯಲ್ಲಿ ಸಹೋದರ ಪ್ರೀತಿಯನ್ನು ತೋರಿಸಲು ಶಕ್ತನಾದುದಕ್ಕೆ ಮೈಕಲ್ ಸಂತೋಷಿಸಿದನು. (ಜ್ಞಾನೋಕ್ತಿ 14:21; ಅ. ಕೃತ್ಯಗಳು 20:35) ರಾಜ್ಯದಾಳಿಕೆಯಲ್ಲಿ ಕ್ರಿಸ್ತನು “ಮೊರೆಯಿಡುವ ಬಡವರನ್ನೂ . . . ಉದ್ಧರಿಸಿ,” ಯಾರೊಬ್ಬರೂ “ನಾನು ರೋಗಗ್ರಸ್ಥನಲ್ಲ” ಎಂದು ಹೇಳುವ ಸಮಯಕ್ಕಾಗಿ ಮೈಕಲ್ ಮತ್ತು ಸೈಮನ್ ಎದುರುನೋಡುತ್ತಾರೆ. (ಕೀರ್ತನೆ 72:12; ಯೆಶಾಯ 33:24) ಅಲ್ಲಿಯ ತನಕ, ನಾವು ನಮ್ಮ ಸಹೋದರನಿಂದ ಸಾಲತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಮ್ಮನ್ನು ಕಂಡುಕೊಳ್ಳುವುದಾದರೆ, ನಮ್ಮ ಹೆಜ್ಜೆಗಳನ್ನು ನಾವು ಜಾಗರೂಕವಾಗಿ ಪರಿಗಣಿಸೋಣ.
[ಪಾದಟಿಪ್ಪಣಿ]
a ಇಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.
[ಪುಟ 25 ರಲ್ಲಿರುವ ಚಿತ್ರ]
ಸಾಲದ ಒಪ್ಪಂದಗಳನ್ನು ಬರವಣಿಗೆಯಲ್ಲಿ ಹಾಕುವುದು, ಅಪನಂಬಿಕೆಯ ಚಿಹ್ನೆಯಲ್ಲ, ಪ್ರೀತಿಯ ಚಿಹ್ನೆಯಾಗಿದೆ