ದೇವರ ರಾಜ್ಯವು ಏನನ್ನು ಸಾಧಿಸಲಿದೆ?
“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:10.
1. ದೇವರ ರಾಜ್ಯದ ಆಗಮನವಾಗುವಾಗ ಏನು ಸಂಭವಿಸುವುದು?
ದೇವರ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಅದರ ಆಗಮನವು, ದೇವರಿಂದ ಸ್ವತಂತ್ರವಾಗಿರುವ ಮಾನವಾಳ್ವಿಕೆಯನ್ನು ಅಂತ್ಯಗೊಳಿಸುವುದೆಂದು ಅವನಿಗೆ ತಿಳಿದಿತ್ತು. ಈ ಮಾನವಾಳ್ವಿಕೆಯು ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಮತ್ತು ಈ ಎಲ್ಲ ಸಮಯದಲ್ಲಿ, ದೇವರ ಚಿತ್ತವು ಈ ಭೂಮಿಯ ಮೇಲೆ ಪೂರ್ಣ ಮಟ್ಟದಲ್ಲಿ ನೆರವೇರಿಲ್ಲ. (ಕೀರ್ತನೆ 147:19, 20) ದೇವರ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆಯಾದರೂ, ಭೂಮಿಯ ಮೇಲೆ ದೇವರ ಚಿತ್ತವು ಇನ್ನೂ ನೆರವೇರಬೇಕು. ಮಾನವಾಳ್ವಿಕೆಯಿಂದ, ದೇವರ ಸ್ವರ್ಗೀಯ ರಾಜ್ಯದಾಳ್ವಿಕೆಗೆ ಆಗಲಿರುವ ವಿಸ್ಮಯಕಾರಕ ಬದಲಾವಣೆಯ ಸಮಯವು ತುಂಬ ಹತ್ತಿರವಿದೆ.
2. ಮಾನವಾಳ್ವಿಕೆಯಿಂದ ರಾಜ್ಯದಾಳ್ವಿಕೆಗೆ ಆಗಲಿರುವ ಬದಲಾವಣೆಯು ಯಾವಾಗ ನಡೆಯುವುದು?
2 ಈ ಬದಲಾವಣೆಯು, ಯಾವುದನ್ನು ಬೈಬಲ್ “ಮಹಾ ಸಂಕಟ” (NW) ಎಂದು ಕರೆಯುತ್ತದೊ ಆ ಸಮಯದಲ್ಲಿ ನಡೆಯುವುದು. “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ಆ ಸಮಯಾವಧಿಯು ಎಷ್ಟು ದೀರ್ಘವಾಗಿರುವುದೆಂದು ಬೈಬಲ್ ಹೇಳುವುದಿಲ್ಲ. ಆದರೂ ಆ ಅವಧಿಯಲ್ಲಿ ನಡೆಯಲಿರುವ ವಿಪತ್ತುಗಳು, ಈ ಲೋಕವು ಹಿಂದೆಂದೂ ನೋಡಿರದಷ್ಟು ಕೆಟ್ಟದಾದ ವಿಪತ್ತುಗಳಾಗಿರುವವು. ಮಹಾ ಸಂಕಟದ ಆರಂಭದಲ್ಲಿ, ಎಲ್ಲ ಸುಳ್ಳು ಧರ್ಮವು ನಾಶವಾಗುವುದು. ಇದು ಭೂಮಿಯ ಮೇಲಿರುವ ಹೆಚ್ಚಿನ ಜನರಿಗೆ ಒಂದು ದೊಡ್ಡ ಆಘಾತವಾಗಿರುವುದು. ಆದರೆ ಯೆಹೋವನ ಸಾಕ್ಷಿಗಳು ಇದರಿಂದ ಚಕಿತರಾಗಲಿಕ್ಕಿಲ್ಲ, ಯಾಕೆಂದರೆ ಅವರು ಇದನ್ನು ಬಹು ಸಮಯದಿಂದ ನಿರೀಕ್ಷಿಸಿರುವರು. (ಪ್ರಕಟನೆ 17:1, 15-17; 18:1-24) ಅರ್ಮಗೆದ್ದೋನಿನಲ್ಲಿ ದೇವರ ರಾಜ್ಯವು ಸೈತಾನನ ಇಡೀ ವ್ಯವಸ್ಥೆಯನ್ನು ಜಜ್ಜಿಹಾಕುವಾಗ, ಮಹಾ ಸಂಕಟವು ಅಂತ್ಯವಾಗುವುದು.—ದಾನಿಯೇಲ 2:44; ಪ್ರಕಟನೆ 16:14, 16.
3. ಅವಿಧೇಯ ಜನರ ಅಂತ್ಯವನ್ನು ಯೆರೆಮೀಯನು ಹೇಗೆ ವರ್ಣಿಸುತ್ತಾನೆ?
3 ಆಗ, “ದೇವರನ್ನರಿಯದವರಿಗೂ,” ಕ್ರಿಸ್ತನ ಹಸ್ತದಲ್ಲಿರುವ ದೇವರ ಸ್ವರ್ಗೀಯ ರಾಜ್ಯದ ಕುರಿತಾದ “ಸುವಾರ್ತೆಗೆ ಒಳಪಡದವರಿಗೂ” ಏನಾಗುವುದು? (2 ಥೆಸಲೊನೀಕ 1:6-9) ಒಂದು ಬೈಬಲ್ ಪ್ರವಾದನೆಯು ನಮಗನ್ನುವುದು: “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದುಬರುವದು. ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು; ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣಿಡರು, ಭೂಮಿಯ ಮೇಲೆ ಗೊಬ್ಬರವಾಗುವರು.”—ಯೆರೆಮೀಯ 25:32, 33.
ದುಷ್ಟತನದ ಅಂತ್ಯ
4. ಈ ದುಷ್ಟ ವ್ಯವಸ್ಥೆಯನ್ನು ಯೆಹೋವನು ಅಂತ್ಯಗೊಳಿಸುವುದು ನ್ಯಾಯಯುತವಾಗಿದೆ ಏಕೆ?
4 ಯೆಹೋವ ದೇವರು ಸಾವಿರಾರು ವರ್ಷಗಳಿಂದ ದುಷ್ಟತನವನ್ನು ಸಹಿಸಿಕೊಂಡಿದ್ದಾನೆ. ಮಾನವಾಳ್ವಿಕೆಯು ಒಂದು ಅನಾಹುತ ಎಂಬ ಸತ್ಯಸಂಗತಿಯನ್ನು ಕಣ್ಣಾರೆ ನೋಡಲು, ಇದು ಪ್ರಾಮಾಣಿಕ ಹೃದಯದ ಜನರಿಗೆ ಸಾಕಷ್ಟು ದೀರ್ಘವಾದ ಸಮಯವಾಗಿದೆ. ಉದಾಹರಣೆಗೆ, ಕಳೆದ 20ನೆಯ ಶತಮಾನವೊಂದರಲ್ಲೇ, 15 ಕೋಟಿಗಿಂತಲೂ ಹೆಚ್ಚು ಜನರು ಯುದ್ಧಗಳಲ್ಲಿ, ಕ್ರಾಂತಿಗಳಲ್ಲಿ, ಮತ್ತು ಬೇರೆ ರೀತಿಯ ಸಾಮಾಜಿಕ ಗಲಭೆಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆಂದು ಒಂದು ಸುದ್ದಿ ಮೂಲವು ಹೇಳುತ್ತದೆ. ವಿಶೇಷವಾಗಿ IIನೆಯ ವಿಶ್ವ ಯುದ್ಧದ ಸಮಯದಲ್ಲಿ ಮನುಷ್ಯನ ಕ್ರೂರತನವನ್ನು ನೋಡಸಾಧ್ಯವಿತ್ತು. ಆ ಸಮಯದಲ್ಲಿ ಸುಮಾರು ಐದು ಕೋಟಿ ಜನರು ಕೊಲ್ಲಲ್ಪಟ್ಟರು. ಇವರಲ್ಲಿ ಅನೇಕರು, ನಾಸಿ ಶಿಬಿರ ಕೂಟಗಳಲ್ಲಿ ಘೋರ ರೀತಿಯಲ್ಲಿ ಸತ್ತರು. ಬೈಬಲ್ ಮುಂಚೆಯೇ ತಿಳಿಸಿದಂತೆ, ನಮ್ಮ ಸಮಯದಲ್ಲಿ ‘ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.’ (2 ತಿಮೊಥೆಯ 3:1-5, 13) ಇಂದು ಎಲ್ಲೆಲ್ಲೂ, ಅನೈತಿಕತೆ, ಪಾತಕ, ಹಿಂಸಾಚಾರ, ಭ್ರಷ್ಟತೆ ಮತ್ತು ದೇವರ ಮಟ್ಟಗಳ ಕಡೆಗಿನ ತುಚ್ಛಭಾವವು ಹಬ್ಬಿಕೊಂಡಿದೆ. ಆದುದರಿಂದ, ಈ ದುಷ್ಟ ವ್ಯವಸ್ಥೆಯನ್ನು ಅಂತ್ಯಗೊಳಿಸುವ ಯೆಹೋವನ ನಿರ್ಣಯವು ಪೂರ್ಣವಾಗಿ ನ್ಯಾಯಯುತವಾದದ್ದಾಗಿದೆ.
5, 6. ಪ್ರಾಚೀನ ಕಾಲದ ಕಾನಾನಿನಲ್ಲಿದ್ದ ದುಷ್ಟತನವನ್ನು ವರ್ಣಿಸಿರಿ.
5 ಇಂದು ಲೋಕದಲ್ಲಿರುವ ಸ್ಥಿತಿಯು, ಸುಮಾರು 3,500 ವರ್ಷಗಳ ಹಿಂದೆ ಕಾನಾನ್ ದೇಶದಲ್ಲಿದ್ದ ಸ್ಥಿತಿಯಂತೆಯೇ ಇದೆ. ಬೈಬಲ್ ಹೇಳುವುದು: “ಯೆಹೋವನಿಗೆ ಅಸಹ್ಯವಾಗಿರುವ ಹಲವು ಹೇಸಿಗೆಕೆಲಸಗಳನ್ನು ಅವರು ತಮ್ಮ ದೇವತೆಗಳಿಗೋಸ್ಕರ ನಡಿಸುತ್ತಾರಲ್ಲಾ; ತಮ್ಮ ಗಂಡು ಹೆಣ್ಣು ಮಕ್ಕಳನ್ನು ತಮ್ಮ ದೇವತೆಗಳಿಗೋಸ್ಕರ ಬೆಂಕಿಯಲ್ಲಿ ಸುಡುತ್ತಾರಲ್ಲಾ.” (ಧರ್ಮೋಪದೇಶಕಾಂಡ 12:31) ಆದುದರಿಂದ ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಹೀಗೆ ತಿಳಿಸಿದನು: ‘ಆ ಜನಾಂಗಗಳ ದುರ್ನಡತೆಯ ದೆಸೆಯಿಂದ ನಿಮ್ಮ ದೇವರಾದ ಯೆಹೋವನು . . . ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿಬಿಡುತ್ತಾನೆ.’ (ಧರ್ಮೋಪದೇಶಕಾಂಡ 9:5) ಬೈಬಲ್ ಇತಿಹಾಸಕಾರನಾದ ಹೆನ್ರಿ ಏಚ್. ಹ್ಯಾಲಿ ಗಮನಿಸಿದ್ದು: “ಬಾಳನ, ಅಷ್ಟೋರೆತಳ, ಮತ್ತು ಇತರ ಕಾನಾನ್ಯ ದೇವರುಗಳ ಆರಾಧನೆಯಲ್ಲಿ ಅತಿಯಾದ ಕಾಮಕೇಳಿ ಸೇರಿತ್ತು; ಅವರ ದೇವಾಲಯಗಳು ದುಷ್ಟತನದ ಕೇಂದ್ರಗಳಾಗಿದ್ದವು.”
6 ಅವರ ದುಷ್ಟತನವು ಎಲ್ಲಿಯ ವರೆಗೆ ತಲಪಿತ್ತೆಂಬುದನ್ನು ಹ್ಯಾಲಿ ತೋರಿಸಿದರು. ಯಾಕೆಂದರೆ ಇಂತಹ ಒಂದು ಕ್ಷೇತ್ರದಲ್ಲಿ ಅಗೆತಶಾಸ್ತ್ರಜ್ಞರು, “ಬಲಿಯರ್ಪಿಸಲ್ಪಟ್ಟಿದ್ದ ಶಿಶುಗಳ ಕಳೇಬರಗಳಿದ್ದ ಅನೇಕ ಪಾತ್ರೆಗಳನ್ನು ಕಂಡುಕೊಂಡರು.” ಅವರು ಹೇಳಿದ್ದು: “ಆ ಇಡೀ ಕ್ಷೇತ್ರವು ನವಜಾತ ಶಿಶುಗಳಿಗಾಗಿ ಒಂದು ಸಮಾಧಿಯಾಗಿತ್ತು. . . . ತಮ್ಮ ದೇವತೆಗಳ ಸಮ್ಮುಖದಲ್ಲೇ, ಒಂದು ಧಾರ್ಮಿಕ ಸಂಸ್ಕಾರದೋಪಾದಿ ಕಾನಾನ್ಯರು ಅನೈತಿಕ ಸ್ವೇಚ್ಛಾಚಾರದ ಮೂಲಕ, ಮತ್ತು ಅನಂತರ ಅದೇ ದೇವರುಗಳಿಗೆ ಒಂದು ಯಜ್ಞದೋಪಾದಿ ತಮ್ಮ ಚೊಚ್ಚಲು ಮಕ್ಕಳನ್ನು ಕೊಲ್ಲುವ ಮೂಲಕ ಅವುಗಳನ್ನು ಆರಾಧಿಸಿದರು. ದೊಡ್ಡ ಪ್ರಮಾಣದಲ್ಲಿ, ಕಾನಾನ್ ದೇಶವು ರಾಷ್ಟ್ರೀಯ ಮಟ್ಟದಲ್ಲಿ ಸೊದೋಮ್ ಗೊಮೋರ ಪಟ್ಟಣಗಳಂತೆ ಆಗಿತ್ತೆಂದು ತೋರುತ್ತದೆ. . . . ಇಂತಹ ಜುಗುಪ್ಸೆಹುಟ್ಟಿಸುವ ಹೊಲಸು ಹಾಗೂ ಕ್ರೂರ ನಾಗರಿಕತೆಗೆ, ಇನ್ನಷ್ಟು ಕಾಲ ಅಸ್ತಿತ್ವದಲ್ಲಿರುವ ಯಾವ ಹಕ್ಕಾದರೂ ಇತ್ತೊ? . . . ಕಾನಾನ್ಯ ನಗರಗಳ ಅವಶೇಷಗಳನ್ನು ಅಗೆದುನೋಡಿದ ಅಗೆತಶಾಸ್ತ್ರಜ್ಞರು, ದೇವರು ಅವರನ್ನು ಏಕೆ ಈ ಮೊದಲೇ ನಾಶಗೊಳಿಸಲಿಲ್ಲ ಎಂದು ವಿಸ್ಮಯಪಡುತ್ತಾರೆ.”
ದೇಶವನ್ನು ಸ್ವಾಸ್ಥ್ಯವಾಗಿ ಪಡೆಯುವುದು
7, 8. ದೇವರು ಈ ಭೂಮಿಯನ್ನು ಹೇಗೆ ಶುದ್ಧೀಕರಿಸುವನು?
7 ದೇವರು ಕಾನಾನ್ ದೇಶವನ್ನು ಶುದ್ಧೀಕರಿಸಿದಂತೆಯೇ, ಅತಿ ಬೇಗನೆ ಇಡೀ ಭೂಮಿಯನ್ನು ಶುದ್ಧೀಕರಿಸಿ, ತನ್ನ ಚಿತ್ತವನ್ನು ಮಾಡುವವರಿಗೆ ಅದನ್ನು ಕೊಡುವನು. “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ಮತ್ತು ಕೀರ್ತನೆಗಾರನು ಹೇಳುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11) ಸೈತಾನನು ‘ಸಾವಿರ ವರುಷ ತೀರುವ ತನಕ ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ’ ಅವನನ್ನು ತೆಗೆದುಹಾಕಲಾಗುವುದು. (ಪ್ರಕಟನೆ 20:1-3) “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.
8 ಈ ಭೂಮಿಯ ಮೇಲೆ ಜೀವಿಸಲು ಬಯಸುವವರಿಗಿರುವ ಭವ್ಯವಾದ ನಿರೀಕ್ಷೆಯನ್ನು ಚುಟುಕಾಗಿ ತಿಳಿಸುತ್ತಾ ಯೇಸು ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5) “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಮುಂತಿಳಿಸುವ ಕೀರ್ತನೆ 37:29ನ್ನು ಅವನು ಸೂಚಿಸುತ್ತಿದ್ದಿರಬಹುದು. ಏಕೆಂದರೆ, ಪ್ರಾಮಾಣಿಕ ಹೃದಯದ ಜನರು ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸಬೇಕೆಂಬುದು ದೇವರ ಉದ್ದೇಶವಾಗಿದೆಯೆಂದು ಯೇಸುವಿಗೆ ತಿಳಿದಿತ್ತು. ಯೆಹೋವನು ಹೇಳುವುದು: “ನಾನೇ ಕೈ ನೀಡಿ ನನ್ನ ಮಹಾ ಶಕ್ತಿಯಿಂದ ಲೋಕವನ್ನೂ ಭೂಮಿಯ ಮೇಲಣ ಮಾನವರನ್ನೂ ಪಶುಗಳನ್ನೂ ಸೃಷ್ಟಿಸಿದ್ದೇನೆ; ಈ ನನ್ನ ಸೃಷ್ಟಿಯನ್ನು ನನಗೆ ಸರಿತೋಚಿದವನಿಗೇ ಕೊಡಬಲ್ಲೆನು.”—ಯೆರೆಮೀಯ 27:5.
ಅದ್ಭುತಕರವಾದ ಒಂದು ಹೊಸ ಲೋಕ
9. ದೇವರ ರಾಜ್ಯವು ಯಾವ ರೀತಿಯ ಲೋಕವನ್ನು ತರಲಿದೆ?
9 ಅರ್ಮಗೆದ್ದೋನಿನ ನಂತರ, ದೇವರ ರಾಜ್ಯವು ಒಂದು ಅದ್ಭುತಕರವಾದ ‘ನೂತನಭೂಮಂಡಲವನ್ನು’ ಸ್ಥಾಪಿಸುವುದು. ಅದರಲ್ಲಿ “ನೀತಿಯು ವಾಸವಾಗಿರುವದು.” (2 ಪೇತ್ರ 3:13) ದಬ್ಬಾಳಿಕೆಯಿಂದ ಕೂಡಿರುವ ಈ ದುಷ್ಟ ವಿಷಯಗಳ ವ್ಯವಸ್ಥೆಯು ತೆಗೆದುಹಾಕಲ್ಪಡುವಾಗ, ಅರ್ಮಗೆದ್ದೋನಿನಿಂದ ಪಾರಾಗುವವರಿಗೆ ಎಷ್ಟೊಂದು ನೆಮ್ಮದಿ ಸಿಗುವುದು! ಸ್ವರ್ಗೀಯ ರಾಜ್ಯ ಸರಕಾರದ ಅಧೀನದಲ್ಲಿರುವ ನೀತಿಯ ಹೊಸ ಲೋಕವನ್ನು ಪ್ರವೇಶಿಸಿ, ಮುಂದಿರುವ ಅದ್ಭುತಕರವಾದ ಆಶೀರ್ವಾದಗಳು ಮತ್ತು ನಿತ್ಯಜೀವವನ್ನು ಅನುಭವಿಸಲು ಅವರು ಎಷ್ಟೊಂದು ಸಂತೋಷಿಸುವರು!—ಪ್ರಕಟನೆ 7:9-17.
10. ರಾಜ್ಯದಾಳ್ವಿಕೆಯ ಕೆಳಗೆ ಯಾವ ಯಾವ ಕೆಟ್ಟ ಸಂಗತಿಗಳು ಇರುವುದಿಲ್ಲ?
10 ಇನ್ನು ಮುಂದೆ ಜನರು, ಯುದ್ಧ, ಪಾತಕ, ಹಸಿವು ಅಥವಾ ಪರಭಕ್ಷಕ ಪ್ರಾಣಿಗಳ ಭಯದಲ್ಲಿ ಜೀವಿಸರು. “ನಾನು [ನನ್ನ ಜನರೊಂದಿಗೆ] ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ದುಷ್ಟಮೃಗಗಳು ದೇಶದಲ್ಲಿ ಇನ್ನಿರದಂತೆ ಮಾಡುವೆನು; . . . ತೋಟದ ಮರಗಳು ಹಣ್ಣುಬಿಡುವವು; ಹೊಲಗಳು ಒಳ್ಳೆಯ ಬೆಳೆಕೊಡುವವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು.” “ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು; ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ. ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಯೆಹೆಜ್ಕೇಲ 34:25-28; ಮೀಕ 4:3, 4.
11. ಶಾರೀರಿಕ ಅಸ್ವಸ್ಥತೆಗಳು ಇಲ್ಲದೇಹೋಗುವವೆಂದು ನಮಗೆ ಏಕೆ ಭರವಸೆಯಿರಬಲ್ಲದು?
11 ರೋಗರುಜಿನ, ದುಃಖ ಮತ್ತು ಮರಣವು ಸಹ ಅಳಿಸಿಹಾಕಲ್ಪಡುವುದು. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.” (ಯೆಶಾಯ 33:24) “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು . . . ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ.” (ಪ್ರಕಟನೆ 21:4, 5) ಯೇಸು ಭೂಮಿಯ ಮೇಲಿದ್ದಾಗ, ದೇವರು ತನಗೆ ಕೊಟ್ಟಿದ್ದಂತಹ ಶಕ್ತಿಯಿಂದ ಇದೆಲ್ಲವನ್ನೂ ಮಾಡುವ ಸಾಮರ್ಥ್ಯ ತನಗಿದೆಯೆಂಬುದನ್ನು ಅವನು ತೋರಿಸಿದನು. ಪವಿತ್ರಾತ್ಮದ ಸಹಾಯದಿಂದ, ಯೇಸು ದೇಶದಲ್ಲೆಲ್ಲ ಕುಂಟರನ್ನು ಮತ್ತು ಅಸ್ವಸ್ಥರನ್ನು ಗುಣಪಡಿಸುತ್ತಾ ಹೋದನು.—ಮತ್ತಾಯ 15:30, 31.
12. ಸತ್ತವರಿಗಾಗಿ ಯಾವ ನಿರೀಕ್ಷೆಯಿದೆ?
12 ಅಷ್ಟುಮಾತ್ರವಲ್ಲ, ಯೇಸು ಇನ್ನೂ ಹೆಚ್ಚನ್ನು ಮಾಡಿದನು. ಅವನು ಸತ್ತವರನ್ನೂ ಎಬ್ಬಿಸಿದನು. ನಮ್ರ ಜನರು ಯಾವ ರೀತಿಯ ಪ್ರತಿಕ್ರಿಯೆಯನ್ನು ತೋರಿಸಿದರು? ಅವನೊಬ್ಬ 12 ವರ್ಷ ಪ್ರಾಯದ ಹುಡುಗಿಯನ್ನು ಎಬ್ಬಿಸಿದಾಗ, ಅವಳ ಹೆತ್ತವರು “ಬಹಳ ಆಶ್ಚರ್ಯದಿಂದ ಬೆರಗಾದರು.” (ಮಾರ್ಕ 5:43) ಇದು, ಯೇಸು ಆ ರಾಜ್ಯದಾಳ್ವಿಕೆಯ ಸಮಯದಲ್ಲಿ ಭೂಮಿಯ ಮೇಲೆ ಏನನ್ನು ಮಾಡಲಿದ್ದಾನೊ, ಅದರ ಇನ್ನೊಂದು ಉದಾಹರಣೆಯಾಗಿದೆಯಷ್ಟೇ. ಆಗ ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಅ. ಕೃತ್ಯಗಳು 24:15) ಗುಂಪು ಗುಂಪಾಗಿ ಸತ್ತವರು ಎದ್ದುಬಂದು, ತಮ್ಮ ಪ್ರಿಯ ವ್ಯಕ್ತಿಗಳೊಂದಿಗೆ ಅವರ ಪುನರ್ಮಿಲನವಾಗುವಾಗ ಎಷ್ಟೊಂದು ಹರ್ಷೋದ್ಗಾರಗಳು ಇರುವವೆಂಬುದನ್ನು ಮನಸ್ಸಿನಲ್ಲಿ ಸ್ವಲ್ಪ ಕಲ್ಪಿಸಿಕೊಳ್ಳಿ! “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಳ್ಳ”ಲಿಕ್ಕಾಗಿ, ಆ ರಾಜ್ಯದ ಮೇಲ್ವಿಚಾರಣೆಯ ಕೆಳಗೆ ಒಂದು ದೊಡ್ಡ ಶೈಕ್ಷಣಿಕ ಕೆಲಸವು ಸಹ ನಿಸ್ಸಂದೇಹವಾಗಿಯೂ ನಡೆಯಲಿದೆ.—ಯೆಶಾಯ 11:9.
ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವುದು
13. ದೇವರ ಆಳ್ವಿಕೆಯೇ ಯೋಗ್ಯವಾದದ್ದೆಂಬುದು ಹೇಗೆ ರುಜುವಾಗುವುದು?
13 ಸಾವಿರ ವರ್ಷಗಳ ರಾಜ್ಯದಾಳ್ವಿಕೆಯ ಅಂತ್ಯದಲ್ಲಿ, ಮಾನವ ಕುಟುಂಬವು ಪುನಃ ಒಮ್ಮೆ ಮಾನಸಿಕ ಮತ್ತು ದೈಹಿಕ ಪರಿಪೂರ್ಣತೆಯ ಸ್ಥಿತಿಯನ್ನು ತಲಪುವುದು. ಭೂಮಿಯು ಒಂದು ಭೌಗೋಲಿಕ ಏದೆನ್ ತೋಟ, ಅಂದರೆ ಒಂದು ಪ್ರಮೋದವನವಾಗುವುದು. ಶಾಂತಿ, ಸಂತೋಷ, ಭದ್ರತೆ ಮತ್ತು ಪ್ರೀತಿಯಿಂದಿರುವ ಒಂದು ಮಾನವ ಸಮಾಜವು ಅಲ್ಲಿರುವುದು. ದೇವರ ರಾಜ್ಯದಾಳ್ವಿಕೆಗೆ ಮುಂಚೆ ಈ ರೀತಿಯ ಸಂಗತಿಗಳು ಹಿಂದೆಂದೂ ಮಾನವ ಇತಿಹಾಸದಲ್ಲೇ ಸಂಭವಿಸಿರಲಿಲ್ಲ. ಆಗ, ಸಾವಿರಾರು ವರ್ಷಗಳ ವರೆಗೆ ನಡೆದಿರುವ ಮನುಷ್ಯರ ದುಃಖಭರಿತ ಆಳ್ವಿಕೆ ಮತ್ತು ದೇವರ ಸ್ವರ್ಗೀಯ ರಾಜ್ಯದ ಸಾವಿರ ವರ್ಷಗಳ ಆಳ್ವಿಕೆಯಲ್ಲಿರುವ ದೊಡ್ಡ ವ್ಯತ್ಯಾಸವು ಎಷ್ಟು ಸ್ಪಷ್ಟವಾಗಿ ತೋರಿಬರುವುದು! ರಾಜ್ಯದ ಮೂಲಕ ದೇವರ ಆಳ್ವಿಕೆಯು ಪ್ರತಿಯೊಂದು ವಿಧದಲ್ಲೂ ಹೆಚ್ಚು ಶ್ರೇಷ್ಠವಾಗಿದೆಯೆಂಬುದು ಆಗ ರುಜುವಾಗುವುದು. ದೇವರ ಪರಮಾಧಿಕಾರ, ಅಂದರೆ ಆತನು ಆಳುವ ಹಕ್ಕು, ಪೂರ್ಣವಾಗಿ ನಿರ್ದೋಷೀಕರಿಸಲ್ಪಡುವುದು.
14. ಸಾವಿರ ವರ್ಷಗಳು ಅಂತ್ಯಗೊಳ್ಳುವಾಗ ದಂಗೆಕೋರರಿಗೆ ಏನಾಗುವುದು?
14 ಸಾವಿರ ವರ್ಷಗಳ ಅಂತ್ಯದಲ್ಲಿ, ಪರಿಪೂರ್ಣ ಮನುಷ್ಯರು ತಾವು ಯಾರನ್ನು ಸೇವಿಸಲು ಬಯಸುತ್ತೇವೆಂಬ ಆಯ್ಕೆಯನ್ನು ಮಾಡಲು ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಉಪಯೋಗಿಸುವಂತೆ ಯೆಹೋವನು ಬಿಡುವನು. ಆಗ “ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವದು” ಎಂದು ಬೈಬಲ್ ತೋರಿಸುತ್ತದೆ. ಅವನು ಪುನಃ ಒಮ್ಮೆ ಮನುಷ್ಯರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುವನು. ಮತ್ತು ಇವರಲ್ಲಿ ಕೆಲವರು ದೇವರಿಂದ ಸ್ವತಂತ್ರರಾಗಿರುವ ಆಯ್ಕೆಯನ್ನು ಮಾಡುವರು. ‘ಅಪಾಯವು ಎರಡನೆಯ ಸಲ ಉಂಟಾಗದಂತೆ’ ಯೆಹೋವನು ಆಗ ಸೈತಾನನನ್ನು, ಅವನ ದೆವ್ವಗಳನ್ನು ಮತ್ತು ಯೆಹೋವನ ಪರಮಾಧಿಕಾರದ ವಿರುದ್ಧ ದಂಗೆಯೇಳುವವರೆಲ್ಲರನ್ನು ನಾಶಮಾಡಿಬಿಡುವನು. ಆ ಸಮಯದಲ್ಲಿ ನಿತ್ಯವಾಗಿ ನಾಶಗೊಳಿಸಲ್ಪಡುವವರಿಗೆ ತಪ್ಪಿಸಿಕೊಳ್ಳುವ ಅವಕಾಶವು ಕೊಡಲ್ಪಡಲಿಲ್ಲ ಅಥವಾ ಅಪರಿಪೂರ್ಣತೆಯಿಂದಾಗಿ ಅವರು ಆ ತಪ್ಪು ಮಾರ್ಗವನ್ನು ಆಯ್ಕೆಮಾಡಿದರೆಂದು ಆಗ ಯಾರೂ ಆಕ್ಷೇಪಿಸಲಾರರು. ಇಲ್ಲ, ಆಗ ಅವರು ಪರಿಪೂರ್ಣರಾಗಿದ್ದ ಆದಾಮಹವ್ವರಂತಿರುವರು. ಯಾಕೆಂದರೆ ಅವರು ತಮ್ಮ ಸ್ವಂತ ಇಷ್ಟದಿಂದ, ಯೆಹೋವನ ನೀತಿಯ ಆಳ್ವಿಕೆಯ ವಿರುದ್ಧ ದಂಗೆಯೇಳುವ ಆಯ್ಕೆಮಾಡಿದರು.—ಪ್ರಕಟನೆ 20:7-10; ನಹೂಮ 1:9.
15. ನಿಷ್ಠಾವಂತರಿಗೆ ಯೆಹೋವನೊಂದಿಗೆ ಯಾವ ಸಂಬಂಧವಿರುವುದು?
15 ಆದರೆ ಅಧಿಕಾಂಶ ಮಂದಿ, ಯೆಹೋವನ ಪರಮಾಧಿಕಾರವನ್ನು ಸಮರ್ಥಿಸುವವರಾಗಿರುವರು. ಪ್ರತಿಯೊಬ್ಬ ದಂಗೆಕೋರನೂ ನಾಶವಾದ ಬಳಿಕ, ನಿಷ್ಠೆಯ ಕೊನೆಯ ಪರೀಕ್ಷೆಯಿಂದ ಹೊರಬಂದಿರುವ ನೀತಿವಂತರು ಯೆಹೋವನ ಮುಂದೆ ನಿಂತುಕೊಳ್ಳುವರು. ಈ ನಿಷ್ಠಾವಂತರನ್ನು ಯೆಹೋವನು ತನ್ನ ಪುತ್ರಪುತ್ರಿಯರೋಪಾದಿ ಅಂಗೀಕರಿಸುವನು. ಹೀಗೆ ಅವರು, ಆದಾಮಹವ್ವರು ದೇವರ ವಿರುದ್ಧ ದಂಗೆಯೇಳುವ ಮುಂಚೆ ಆತನೊಂದಿಗೆ ಹೊಂದಿದ್ದ ಸಂಬಂಧವನ್ನು ಪುನಃ ಪಡೆಯುವರು. ರೋಮಾಪುರ 8:21 ಸಹ ನೆರವೇರುವುದು: “ಆ ಜಗತ್ತು [ಮಾನವಜಾತಿ] ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “[ದೇವರು] ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.
ನಿತ್ಯಜೀವದ ನಿರೀಕ್ಷೆ
16. ನಿತ್ಯಜೀವದ ಬಹುಮಾನಕ್ಕಾಗಿ ಎದುರುನೋಡುವುದು ತಪ್ಪಲ್ಲವೇಕೆ?
16 ನಂಬಿಗಸ್ತರಿಗೆ ಎಷ್ಟೊಂದು ಅದ್ಭುತಕರವಾದ ಪ್ರತೀಕ್ಷೆಯಿದೆ: ದೇವರು ಎಂದೆಂದಿಗೂ ಅವರ ಮೇಲೆ ಆತ್ಮಿಕ ಮತ್ತು ಭೌತಿಕ ಪ್ರಯೋಜನಗಳ ಸುರಿಮಳೆಗೈಯುವನು! ಆದುದರಿಂದ ಕೀರ್ತನೆಗಾರನು ಹೇಳಿದ್ದು ಸರಿಯಾಗಿಯೇ ಇದೆ: “ನೀನು ಕೈದೆರೆದು ಎಲ್ಲಾ ಜೀವಿಗಳ [ಯೋಗ್ಯವಾಗಿರುವ] ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:16) ಈ ಭೂಮಿಯ ಮೇಲೆ ಜೀವಿಸಲಿರುವವರು ತನ್ನಲ್ಲಿ ನಂಬಿಕೆಯನ್ನಿಡುವುದರ ಜೊತೆಗೆ, ಪ್ರಮೋದವನದಲ್ಲಿ ಜೀವಿಸುವ ಈ ನಿರೀಕ್ಷೆಯನ್ನೂ ಇಟ್ಟುಕೊಳ್ಳುವಂತೆ ಯೆಹೋವನು ಪ್ರೋತ್ಸಾಹಿಸುತ್ತಾನೆ. ಹೌದು, ಯೆಹೋವನ ಪರಮಾಧಿಕಾರದ ವಿವಾದಾಂಶವು ಇದೆಲ್ಲಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದದ್ದಾಗಿದೆ. ಆದರೆ, ನಾವು ಯಾವುದೇ ಬಹುಮಾನವನ್ನು ಪಡೆಯುವ ಪ್ರತೀಕ್ಷೆಯಿಲ್ಲದೆ ತನ್ನ ಸೇವೆಮಾಡಬೇಕೆಂದೂ ಯೆಹೋವನು ಹೇಳುವುದಿಲ್ಲ. ಆದುದರಿಂದ, ಇಡೀ ಬೈಬಲಿನಲ್ಲಿ ದೇವರ ಕಡೆಗಿನ ನಿಷ್ಠೆ ಮತ್ತು ನಿತ್ಯಜೀವದ ನಿರೀಕ್ಷೆಯು, ಬಿಡಿಸಲಾರದಂತಹ ರೀತಿಯಲ್ಲಿ ಒಂದಕ್ಕೊಂದು ಹೆಣೆಯಲ್ಪಟ್ಟಿವೆ. ಇವು, ಒಬ್ಬ ಕ್ರೈಸ್ತನಿಗೆ ದೇವರಲ್ಲಿರುವ ನಂಬಿಕೆಯ ಅತ್ಯಾವಶ್ಯಕ ಭಾಗಗಳಾಗಿವೆ. “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
17. ನಮ್ಮ ನಿರೀಕ್ಷೆಯ ಮೂಲಕ ತಾಳಿಕೊಳ್ಳಲು ಸಹಾಯವನ್ನು ಪಡೆಯುವುದು ತಪ್ಪಲ್ಲವೆಂದು ಯೇಸು ಹೇಗೆ ತೋರಿಸಿದನು?
17 “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು” ಎಂದು ಯೇಸು ಹೇಳಿದನು. (ಯೋಹಾನ 17:3) ದೇವರು ಮತ್ತು ಆತನ ಉದ್ದೇಶಗಳ ಬಗ್ಗೆ ತಿಳಿಯುವುದರಿಂದ ಸಿಗುವ ಬಹುಮಾನವನ್ನು ಅವನು ಇಲ್ಲಿ ತಿಳಿಸಿದನು. ಉದಾಹರಣೆಗಾಗಿ, ಯೇಸು ರಾಜ್ಯವನ್ನು ಪಡೆದವನಾಗಿ ಬರುವಾಗ ತನ್ನನ್ನು ಜ್ಞಾಪಿಸಿಕೊಳ್ಳುವಂತೆ ಒಬ್ಬ ಅಪರಾಧಿಯು ಕೇಳಿಕೊಂಡಾಗ, ಯೇಸು ಹೇಳಿದ್ದು: “ನನ್ನ ಸಂಗಡ ಪರದೈಸಿನಲ್ಲಿರುವಿ.” (ಲೂಕ 23:43) ಆ ಮನುಷ್ಯನಿಗೆ ಬಹುಮಾನ ಸಿಗದಿದ್ದರೂ ಅವನು ನಂಬಿಕೆಯಿಡಬೇಕೆಂದು ಯೇಸು ಹೇಳಲಿಲ್ಲ. ಯಾಕೆಂದರೆ, ಯೆಹೋವನ ಸೇವಕರು, ಭೂಪ್ರಮೋದವನದಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತೆ ಯೆಹೋವನು ಬಯಸುತ್ತಾನೆಂದು ಯೇಸುವಿಗೆ ಗೊತ್ತಿತ್ತು. ಆ ನಿರೀಕ್ಷೆಯೇ ಅವರು ಈ ಲೋಕದಲ್ಲಿ ವಿಭಿನ್ನ ಸಂಕಷ್ಟಗಳನ್ನು ಎದುರಿಸುವಂತೆ ಸಹಾಯಮಾಡುತ್ತದೆ. ಹೀಗೆ, ಬಹುಮಾನಕ್ಕಾಗಿ ಎದುರುನೋಡುವುದು, ಒಬ್ಬ ಕ್ರೈಸ್ತನೋಪಾದಿ ತಾಳಿಕೊಳ್ಳುವುದರಲ್ಲಿ ಒಂದು ಬಹುಮುಖ್ಯವಾದ ಸಹಾಯವಾಗಿದೆ.
ರಾಜ್ಯದ ಭವಿಷ್ಯತ್ತು
18, 19. ರಾಜ ಮತ್ತು ರಾಜ್ಯಕ್ಕೆ ಸಾವಿರ ವರ್ಷದಾಳ್ವಿಕೆಯ ಅಂತ್ಯದಲ್ಲಿ ಏನಾಗುವುದು?
18 ಈ ರಾಜ್ಯವು, ಭೂಮಿಯನ್ನೂ ಅದರ ಮಾನವ ನಿವಾಸಿಗಳನ್ನೂ ಪರಿಪೂರ್ಣತೆಗೇರಿಸಿ, ತನ್ನೊಂದಿಗೆ ಸಮಾಧಾನಮಾಡಿಕೊಳ್ಳಲಿಕ್ಕಾಗಿ ಯೆಹೋವನು ಉಪಯೋಗಿಸಿದ ಒಂದು ಸಹಾಯಕ ಸರಕಾರವಾಗಿದೆ. ಆದುದರಿಂದ, ಆ ಉದ್ದೇಶವು ಪೂರೈಸಲ್ಪಟ್ಟ ನಂತರ, ಅಂದರೆ ಸಾವಿರ ವರ್ಷದಾಳ್ವಿಕೆಯ ನಂತರ ರಾಜನಾದ ಯೇಸು ಕ್ರಿಸ್ತನಿಗೆ ಮತ್ತು 1,44,000 ರಾಜರೂ ಯಾಜಕರೂ ಆಗಿರುವವರಿಗೆ ಯಾವ ಕೆಲಸವಿರುವುದು? “ಆ ಮೇಲೆ ಆತನು ಬೇರೆ ಎಲ್ಲಾ ಧೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ ಕೊಡುವಾಗ ಸಮಾಪ್ತಿ. ಯಾಕಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ.”—1 ಕೊರಿಂಥ 15:24, 25.
19 ಕ್ರಿಸ್ತನು ತನ್ನ ರಾಜ್ಯವನ್ನು ದೇವರಿಗೆ ಒಪ್ಪಿಸಲಿರುವುದಾದರೆ, ಆ ರಾಜ್ಯವು ಸದಾಕಾಲ ಬಾಳುವುದೆಂದು ಕೆಲವು ಶಾಸ್ತ್ರವಚನಗಳು ಹೇಳುವುದೇಕೆ? ಏಕೆಂದರೆ ಆ ರಾಜ್ಯವು ಪೂರೈಸಲಿರುವ ಸಂಗತಿಗಳು ಸದಾಕಾಲ ಬಾಳುವವು. ದೇವರ ಪರಮಾಧಿಕಾರದ ನಿರ್ದೋಷೀಕರಣದಲ್ಲಿ ಕ್ರಿಸ್ತನು ವಹಿಸಿರುವ ಪಾತ್ರಕ್ಕಾಗಿ ಅವನು ಸದಾಕಾಲಕ್ಕೂ ಸನ್ಮಾನಿಸಲ್ಪಡುವನು. ಆದರೆ ಆಗ ಪಾಪಮರಣಗಳು ಸಂಪೂರ್ಣವಾಗಿ ತೆಗೆದುಹಾಕಲ್ಪಟ್ಟು, ಮಾನವಕುಲವು ವಿಮೋಚಿಸಲ್ಪಟ್ಟಿರುವುದರಿಂದ, ಅನಂತರ ಅವನು ಒಬ್ಬ ವಿಮೋಚಕನೋಪಾದಿ ಕೆಲಸಮಾಡುವ ಅಗತ್ಯವಿಲ್ಲ. ರಾಜ್ಯದ ಸಾವಿರ ವರ್ಷದಾಳ್ವಿಕೆಯು ಸಹ ಪೂರ್ಣಗೊಂಡಿರುವುದು. ಆದುದರಿಂದ, ಯೆಹೋವನ ಮತ್ತು ವಿಧೇಯ ಮಾನವಕುಲದ ನಡುವೆ ಒಂದು ಸಹಾಯಕ ಸರಕಾರದ ಅಗತ್ಯ ಇನ್ನಿರುವುದಿಲ್ಲ. ಹೀಗೆ, “ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.”—1 ಕೊರಿಂಥ 15:28.
20. ಕ್ರಿಸ್ತನಿಗೆ ಮತ್ತು 1,44,000 ಮಂದಿಗೆ ಮುಂದೆ ಏನಾಗುವುದೆಂದು ನಾವು ಹೇಗೆ ಕಂಡುಕೊಳ್ಳಬಹುದು?
20 ಸಾವಿರ ವರ್ಷದಾಳಿಕೆಯು ಮುಗಿದ ನಂತರ ಕ್ರಿಸ್ತನು ಮತ್ತು ಅವನ ಜೊತೆ ರಾಜರು ಯಾವ ಕೆಲಸವನ್ನು ಮಾಡುವರು? ಬೈಬಲ್ ಇದರ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ಯೆಹೋವನು, ತನ್ನ ಸೃಷ್ಟಿಯಲ್ಲಿ ಇನ್ನೂ ಹೆಚ್ಚಿನ ಸೇವಾ ಸುಯೋಗಗಳನ್ನು ಅವರಿಗೆ ಕೊಡುವನೆಂಬ ಖಾತ್ರಿ ನಮಗಿರಬಲ್ಲದು. ಇಂದು ನಾವೆಲ್ಲರೂ ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದು, ನಿತ್ಯಜೀವವನ್ನು ಪಡೆಯುವಂತಾಗಲಿ. ಹೀಗೆ, ಭವಿಷ್ಯತ್ತಿನಲ್ಲಿ ಯೆಹೋವನು ಆ ರಾಜನಿಗಾಗಿ ಮತ್ತು ಅವನ ಜೊತೆ ರಾಜರು ಮತ್ತು ಯಾಜಕರಿಗಾಗಿ, ಹಾಗೂ ತನ್ನ ಬೃಹತ್ತಾದ ಇಡೀ ವಿಶ್ವಕ್ಕಾಗಿ ಏನನ್ನು ಕಾದಿರಿಸಿದ್ದಾನೆಂಬುದನ್ನು ನೋಡಲು ಶಕ್ತರಾಗಿರುವೆವು!
ಪುನರ್ವಿಮರ್ಶೆಗಾಗಿ ವಿಷಯಗಳು
• ಮಾನವರ ಮೇಲಿನ ಆಳ್ವಿಕೆಯಲ್ಲಿ ಯಾವ ರೀತಿಯ ಬದಲಾವಣೆಗೆ ನಾವು ಹತ್ತಿರವಾಗುತ್ತಾ ಇದ್ದೇವೆ?
• ದೇವರು ದುಷ್ಟರಿಗೆ ಮತ್ತು ನೀತಿವಂತರಿಗೆ ಹೇಗೆ ತೀರ್ಪು ಮಾಡಲಿರುವನು?
• ಹೊಸ ಲೋಕದಲ್ಲಿ ಯಾವ ಪರಿಸ್ಥಿತಿಗಳು ಇರುವವು?
• ಯೆಹೋವನ ಪರಮಾಧಿಕಾರವು ಹೇಗೆ ಪೂರ್ಣವಾಗಿ ಸಮರ್ಥಿಸಲ್ಪಡುವುದು?
[ಪುಟ 17ರಲ್ಲಿರುವ ಚಿತ್ರಗಳು]
‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು’
[ಪುಟ 18ರಲ್ಲಿರುವ ಚಿತ್ರ]
ನಿಷ್ಠಾವಂತರು ಪುನಃ ಒಮ್ಮೆ ಯೆಹೋವನೊಂದಿಗೆ ಸರಿಯಾದ ಸಂಬಂಧದೊಳಗೆ ಬರುವರು