666 ಕೇವಲ ಒಂದು ಒಗಟಲ್ಲ
‘ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡಿಸಕೂಡದು. ಆ ಗುರುತು ಯಾವದಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ. ಇದರಲ್ಲಿ ಜ್ಞಾನವು ಅಡಕವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ; ಅದು ಒಬ್ಬ ಮನುಷ್ಯನ ಸಂಖ್ಯೆಯಾಗಿದೆ; ಅದರ ಸಂಖ್ಯೆಯು ಆರುನೂರಅರುವತ್ತಾರು.’—ಪ್ರಕಟನೆ 13:17, 18.
ಬೈಬಲಿನ ಪ್ರಮುಖ ವಿಷಯಗಳಲ್ಲಿ ‘ಕಾಡು ಮೃಗದ’ ಗುರುತು ಅಥವಾ ಹೆಸರಿನ—666 ಎಂಬ ಸಂಖ್ಯೆ—ಕುರಿತಾದ ಪ್ರವಾದನೆಯಷ್ಟು ಆಸಕ್ತಿಯನ್ನು ಹಾಗೂ ಚಿಂತೆಯನ್ನು ಕೆರಳಿಸಿರುವ ವಿಷಯಗಳು ತೀರ ಕೆಲವೇ. ಟೆಲಿವಿಷನ್ ಮತ್ತು ಇಂಟರ್ನೆಟ್ನಲ್ಲಿ ಹಾಗೂ ಚಲನಚಿತ್ರಗಳು, ಪುಸ್ತಕಗಳು, ಮತ್ತು ಪತ್ರಿಕೆಗಳಲ್ಲಿ ಕಾಡು ಮೃಗದ ಗುರುತು ಕೊನೆಮೊದಲಿಲ್ಲದ ಊಹಾಪೋಹಗಳಿಗೆ ತುತ್ತಾಗಿರುವ ಒಂದು ವಿಷಯವಸ್ತುವಾಗಿ ಪರಿಣಮಿಸಿದೆ.
ಈ 666 ಎಂಬ ಸಂಖ್ಯೆಯು ಬೈಬಲಿನ ಕ್ರಿಸ್ತವಿರೋಧಿಯ ಗುರುತಾಗಿದೆ ಎಂದು ಕೆಲವರು ನಂಬುತ್ತಾರೆ. ಇತರರು, ಇದು ಒಬ್ಬ ವ್ಯಕ್ತಿಯು ಮೃಗದ ದಾಸನಾಗಿದ್ದಾನೆ ಎಂದು ಗುರುತಿಸುವಂಥ ಅಂಕೀಯ ಸಂಕೇತವಿರುವ ಹಚ್ಚೆ ಅಥವಾ ದೇಹದೊಳಗೆ ಸೇರಿಸಲ್ಪಟ್ಟಿರುವ ಇಲೆಕ್ಟ್ರಾನಿಕ್ ಮೈಕ್ರೋಚಿಪ್ನಂಥ ಒಂದು ರೀತಿಯ ಕಡ್ಡಾಯಭರಿತ ಗುರುತನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ. 666 ಎಂಬ ಸಂಖ್ಯೆಯು ಕ್ಯಾಥೊಲಿಕ್ ಪೋಪ್ ಪ್ರಭುತ್ವದ ಗುರುತಾಗಿದೆ ಎಂಬುದು ಇನ್ನೂ ಅನೇಕರ ನಂಬಿಕೆ. ವಿಕೇರಿಯಸ್ ಫಿಲಿ ಡೇಈ (ದೇವಕುಮಾರನ ಪ್ರತಿನಿಧಿ) ಎಂಬ ಪೋಪ್ನ ಅಧಿಕೃತ ಬಿರುದಿನ ಒಂದು ರೂಪದಲ್ಲಿರುವ ಅಕ್ಷರಗಳ ಸ್ಥಾನದಲ್ಲಿ ರೋಮನ್ ಸಂಖ್ಯೆಗಳನ್ನು ಉಪಯೋಗಿಸಿ, ಕೌಶಲದಿಂದ ಆ ಸಂಖ್ಯೆಗಳ ಲೆಕ್ಕಾಚಾರ ಮಾಡುವಲ್ಲಿ, 666 ಎಂಬ ಸಂಖ್ಯೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ರೋಮನ್ ಚಕ್ರವರ್ತಿ ಡಯಕ್ಲೀಷನ್ನ ಲ್ಯಾಟಿನ್ ಹೆಸರಿನಿಂದ ಮತ್ತು ನೀರೊ ಕೈಸರನ ಹೆಸರಿನ ಹೀಬ್ರು ಭಾಷಾಂತರದಿಂದ ಅದೇ ಸಂಖ್ಯೆಯನ್ನು ಪಡೆಯಸಾಧ್ಯವಿದೆ ಎಂದು ಇನ್ನಿತರರು ಪ್ರತಿಪಾದಿಸುತ್ತಾರೆ.a
ಆದರೂ, ಈ ಊಹಿತ ಹಾಗೂ ಕಲ್ಪಿತ ಅರ್ಥವಿವರಣೆಗಳು, ಮೃಗದ ಗುರುತಿನ ಕುರಿತು ಸ್ವತಃ ಬೈಬಲ್ ಏನು ಹೇಳುತ್ತದೋ ಅದಕ್ಕಿಂತ ತೀರ ಭಿನ್ನವಾಗಿವೆ. ಇದನ್ನು ನಾವು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ. ಯಾರು ಮೃಗದ ಗುರುತನ್ನು ಹೊಂದಿರುತ್ತಾರೋ ಅವರು, ದೇವರು ಸದ್ಯದ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವಾಗ ಆತನ ಕೋಪಕ್ಕೆ ತುತ್ತಾಗುವರು ಎಂದು ಬೈಬಲು ಪ್ರಕಟಪಡಿಸುತ್ತದೆ. (ಪ್ರಕಟನೆ 14:9-11; 19:20) ಆದುದರಿಂದ, 666ರ ಅರ್ಥವನ್ನು ತಿಳಿದುಕೊಳ್ಳುವುದರಲ್ಲಿ, ಕೇವಲ ಕುತೂಹಲವನ್ನು ಕೆರಳಿಸುವಂಥ ಒಗಟನ್ನು ಬಗೆಹರಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಸಂತೋಷಕರವಾಗಿಯೇ, ಪ್ರೀತಿಯ ಸಾಕಾರರೂಪವಾಗಿರುವ ಹಾಗೂ ಆಧ್ಯಾತ್ಮಿಕ ಬೆಳಕಿನ ಮೂಲನಾಗಿರುವ ಯೆಹೋವ ದೇವರು, ಈ ಪ್ರಮುಖ ವಿಚಾರದಲ್ಲಿ ತನ್ನ ಸೇವಕರನ್ನು ಅಂಧಕಾರದಲ್ಲಿಟ್ಟಿಲ್ಲ.—2 ತಿಮೊಥೆಯ 3:16; 1 ಯೋಹಾನ 1:5; 4:8.
[ಪಾದಟಿಪ್ಪಣಿ]
a ಸಂಖ್ಯಾಶಾಸ್ತ್ರದ ಕುರಿತಾದ ಹೆಚ್ಚಿನ ಚರ್ಚೆಗಾಗಿ, ಸೆಪ್ಟೆಂಬರ್ 8, 2002ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯನ್ನು ನೋಡಿ.