ಸಂಪೂರ್ಣ ಹೃದಯದಿಂದ ನೀತಿಯನ್ನು ಪ್ರೀತಿಸಿರಿ
“ನೀನು ನೀತಿಯನ್ನು ಪ್ರೀತಿಸಿದಿ.”—ಇಬ್ರಿ. 1:9.
1. “ನೀತಿಮಾರ್ಗದಲ್ಲಿ” ನಡೆಯಲು ನಮಗೆ ಯಾವುದು ನೆರವಾಗುವುದು?
ಯೆಹೋವನು ತನ್ನ ವಾಕ್ಯ ಮತ್ತು ಪವಿತ್ರಾತ್ಮದ ಮೂಲಕ ತನ್ನ ಜನರನ್ನು “ನೀತಿಮಾರ್ಗದಲ್ಲಿ” ಮುನ್ನಡೆಸುತ್ತಿದ್ದಾನೆ. (ಕೀರ್ತ. 23:3) ಆದರೂ ನಾವು ಅಪರಿಪೂರ್ಣರಾದ ಕಾರಣ ಆ ಮಾರ್ಗದಿಂದ ದೂರಸರಿಯುವ ಪ್ರವೃತ್ತಿ ನಮ್ಮಲ್ಲಿದೆ. ಪುನಃ ಸರಿಯಾದ ಮಾರ್ಗಕ್ಕೆ ಹಿಂತಿರುಗಬೇಕಾದರೆ ದೃಢಸಂಕಲ್ಪ ಅಗತ್ಯ. ಇದರಲ್ಲಿ ಯಶಸ್ವಿಯಾಗಲು ಯಾವುದು ನೆರವಾಗುವುದು? ಯೇಸುವಿನಂತೆ ನಾವು ನೀತಿಯನ್ನು ಪ್ರೀತಿಸಬೇಕು.—ಇಬ್ರಿಯ 1:9 ಓದಿ.
2. “ನೀತಿಮಾರ್ಗ” ಅಂದರೇನು?
2 “ನೀತಿಮಾರ್ಗ” ಅಂದರೇನು? ಇದು ಯೆಹೋವನ ನೀತಿಯ ಮಟ್ಟಕ್ಕೆ ಅನುಸಾರವಾದ ಜೀವನಮಾರ್ಗವೇ. ಹೀಬ್ರು ಮತ್ತು ಗ್ರೀಕ್ನಲ್ಲಿ ನೀತಿ ಎಂಬುದು ನೈತಿಕ ಮೂಲತತ್ತ್ವಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವುದಕ್ಕೆ ಸೂಚಿಸುತ್ತದೆ. ಯೆಹೋವನು “ನೀತಿಯ ನಿವಾಸವಾದ” ಕಾರಣ ಆತನ ಆರಾಧಕರು ತಾವು ಅನುಸರಿಸಬೇಕಾದ ನೀತಿಯ ಮಾರ್ಗ ಯಾವುದೆಂದು ಖಚಿತಪಡಿಸಲಿಕ್ಕಾಗಿ ಆತನೆಡೆಗೆ ನೋಡಲು ಹರ್ಷಿಸುತ್ತಾರೆ.—ಯೆರೆ. 50:7, NIBV.
3. ದೇವರ ನೀತಿಯ ಕುರಿತು ನಾವು ಹೆಚ್ಚನ್ನು ಹೇಗೆ ಕಲಿಯಬಲ್ಲೆವು?
3 ದೇವರ ನೀತಿಯ ಮಟ್ಟಗಳಿಗನುಸಾರ ನಡೆಯಲು ನಾವು ಸಂಪೂರ್ಣ ಹೃದಯದಿಂದ ಪ್ರಯತ್ನಿಸುವಲ್ಲಿ ಮಾತ್ರ ಆತನನ್ನು ಪೂರ್ಣವಾಗಿ ಮೆಚ್ಚಿಸುವವರಾಗುವೆವು. (ಧರ್ಮೋ. 32:4) ಇದಕ್ಕಾಗಿ ಮೊದಲು ನಾವು ದೇವರ ವಾಕ್ಯವಾದ ಬೈಬಲಿನಿಂದ ಯೆಹೋವನ ಕುರಿತು ನಮ್ಮಿಂದಾದುದೆಲ್ಲವನ್ನು ಕಲಿಯಬೇಕು. ನಾವು ಆತನ ಕುರಿತು ಹೆಚ್ಚೆಚ್ಚನ್ನು ಕಲಿಯುತ್ತಾ ದಿನದಿನವೂ ಆತನಿಗೆ ಆಪ್ತರಾದಂತೆ ಆತನ ನೀತಿಯನ್ನು ಹೆಚ್ಚೆಚ್ಚು ಪ್ರೀತಿಸುವವರಾಗುವೆವು. (ಯಾಕೋ. 4:8) ಜೀವನದಲ್ಲಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾಗಿರುವಾಗ ದೇವಪ್ರೇರಿತ ವಾಕ್ಯದ ಮಾರ್ಗದರ್ಶನವನ್ನು ಕೂಡ ನಾವು ಸ್ವೀಕರಿಸಬೇಕು.
ದೇವರ ನೀತಿಯನ್ನು ಹುಡುಕಿರಿ
4. ದೇವರ ನೀತಿಯನ್ನು ಹುಡುಕಲು ನಾವೇನು ಮಾಡಬೇಕು?
4 ಮತ್ತಾಯ 6:33 ಓದಿ. ದೇವರ ನೀತಿಯನ್ನು ಹುಡುಕುವುದೆಂದರೆ ಕೇವಲ ರಾಜ್ಯಸಂದೇಶವನ್ನು ಸಾರುವುದಕ್ಕೆ ಹೆಚ್ಚು ಸಮಯವನ್ನು ಕೊಡುವುದಷ್ಟೇ ಅಲ್ಲ. ನಮ್ಮ ಪವಿತ್ರ ಸೇವೆಯನ್ನು ಯೆಹೋವನು ಸ್ವೀಕರಿಸಬೇಕಾದರೆ ನಮ್ಮ ದಿನನಿತ್ಯದ ನಡವಳಿಕೆಯು ಆತನ ಉನ್ನತ ಮಟ್ಟಗಳಿಗೆ ಹೊಂದಿಕೆಯಲ್ಲಿರಬೇಕು. ಹಾಗಾದರೆ ಯೆಹೋವನ ನೀತಿಯನ್ನು ಹುಡುಕುವವರೆಲ್ಲರೂ ಏನು ಮಾಡಬೇಕು? ಅವರು “ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.”—ಎಫೆ. 4:24.
5. ನಿರುತ್ಸಾಹವನ್ನು ಜಯಿಸಲು ನಮಗೆ ಯಾವುದು ಸಹಾಯಮಾಡುವುದು?
5 ದೇವರ ನೀತಿಯ ಮಟ್ಟಗಳಿಗೆ ಅನುಸಾರವಾಗಿ ಜೀವಿಸಲು ಪ್ರಯತ್ನಿಸುವಾಗ ನಮ್ಮಲ್ಲಿರುವ ಬಲಹೀನತೆಗಳಿಂದಾಗಿ ಕೆಲವೊಮ್ಮೆ ನಾವು ನಿರುತ್ಸಾಹಗೊಳ್ಳಬಹುದು. ಶಕ್ತಿಗುಂದಿಸುವ ನಿರುತ್ಸಾಹವನ್ನು ಜಯಿಸಲು ಮತ್ತು ನೀತಿಯನ್ನು ಪ್ರೀತಿಸಿ ಅಭ್ಯಾಸಿಸಲು ನಮಗೆ ಯಾವುದು ಸಹಾಯಮಾಡುತ್ತದೆ? (ಜ್ಞಾನೋ. 24:10) ‘ಪೂರ್ಣ ಆಶ್ವಾಸನೆಯಲ್ಲಿ ಯಥಾರ್ಥ ಹೃದಯದಿಂದ’ ನಾವು ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸಬೇಕು. (ಇಬ್ರಿ. 10:19-22) ನಾವು ಅಭಿಷಿಕ್ತ ಕ್ರೈಸ್ತರಾಗಿರಲಿ ಅಥವಾ ಭೂನಿರೀಕ್ಷೆಯುಳ್ಳವರಾಗಿರಲಿ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ಮತ್ತು ನಮ್ಮ ಶ್ರೇಷ್ಠ ಮಹಾ ಯಾಜಕನಾದ ಅವನ ಸೇವೆಗಳಲ್ಲಿ ನಂಬಿಕೆಯನ್ನಿಡುತ್ತೇವೆ. (ರೋಮ. 5:8; ಇಬ್ರಿ. 4:14-16) ಯೇಸುವಿನ ಸುರಿದ ರಕ್ತದಿಂದ ಸಿಗುವ ಪ್ರಯೋಜನವನ್ನು ಈ ಪತ್ರಿಕೆಯ ಮೊತ್ತಮೊದಲ ಸಂಚಿಕೆಯಲ್ಲೇ ದೃಷ್ಟಾಂತಿಸಲಾಯಿತು. (1 ಯೋಹಾ. 1:6, 7) ಆ ಲೇಖನ ತಿಳಿಸಿದ್ದು: “ಬೆಳಕಿನಲ್ಲಿ ಒಂದು ಕಡುಗೆಂಪು ಬಣ್ಣದ ವಸ್ತುವನ್ನು ಕೆಂಪು ಗಾಜಿನ ಮೂಲಕ ನೋಡುವಾಗ ಆ ಕಡುಗೆಂಪು ವಸ್ತು ಬಿಳಿಯಾಗಿ ಕಾಣಿಸುತ್ತದೆ. ಅದೇ ರೀತಿ ನಮ್ಮ ಪಾಪಗಳು ಕಡುಗೆಂಪಾಗಿದ್ದರೂ ದೇವರು ವೀಕ್ಷಿಸುವಂತೆ ನಾವು ಅವನ್ನು ಕ್ರಿಸ್ತನ ರಕ್ತದ ಮೌಲ್ಯದ ಆಧಾರದಲ್ಲಿ ವೀಕ್ಷಿಸುವುದಾದರೆ ಅವು ಬಿಳುಪಾಗಿ ಕಾಣಿಸುವವು.” (ಜುಲೈ 1879, ಪು. 6 ಇಂಗ್ಲಿಷ್) ಯೆಹೋವನು ತನ್ನ ಪ್ರಿಯ ಪುತ್ರನ ವಿಮೋಚನಾ ಮೌಲ್ಯ ಯಜ್ಞದ ಮೂಲಕ ನಮಗಾಗಿ ಮಾಡಿರುವ ಈ ಏರ್ಪಾಡು ಎಷ್ಟೊಂದು ಅದ್ಭುತಕರ!—ಯೆಶಾ. 1:18.
ಆಧ್ಯಾತ್ಮಿಕ ರಕ್ಷಾಕವಚವನ್ನು ಪರೀಕ್ಷಿಸಿ ನೋಡಿ
6. ನಮ್ಮ ಆಧ್ಯಾತ್ಮಿಕ ರಕ್ಷಾಕವಚವನ್ನು ಪರೀಕ್ಷಿಸುವುದು ಬಹುಮುಖ್ಯ ಏಕೆ?
6 ನಾವು ಎಲ್ಲ ಸಮಯದಲ್ಲೂ “ನೀತಿಯ ಎದೆಕವಚವನ್ನು” ಧರಿಸಿರಬೇಕು. ಏಕೆಂದರೆ ದೇವರು ಕೊಟ್ಟಿರುವ ಆಧ್ಯಾತ್ಮಿಕ ರಕ್ಷಾಕವಚದ ಒಂದು ಪ್ರಾಮುಖ್ಯ ಭಾಗ ಅದು. (ಎಫೆ. 6:11, 14) ನಾವು ಯೆಹೋವನಿಗೆ ಇತ್ತೀಚೆಗೆ ಸಮರ್ಪಿಸಿಕೊಂಡಿರಲಿ ಅಥವಾ ದಶಕಗಳಿಂದ ಆತನ ಸೇವೆ ಮಾಡುತ್ತಿರಲಿ ಪ್ರತಿದಿನವೂ ನಮ್ಮ ಆಧ್ಯಾತ್ಮಿಕ ರಕ್ಷಾಕವಚವನ್ನು ಪರೀಕ್ಷಿಸುವುದು ಬಹುಮುಖ್ಯ. ಏಕೆ? ಏಕೆಂದರೆ ಪಿಶಾಚನೂ ಅವನ ದೆವ್ವಗಳೂ ಭೂಮಿಗೆ ದೊಬ್ಬಲ್ಪಟ್ಟಿದ್ದಾರೆ. (ಪ್ರಕ. 12:7-12) ಇದರಿಂದ ಸೈತಾನನು ಬಹಳ ಕ್ರೋಧಿತನಾಗಿದ್ದಾನೆ ಮಾತ್ರವಲ್ಲ ತನಗಿರುವ ಸಮಯ ಕೊಂಚವೆಂದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ದೇವಜನರ ಮೇಲೆ ತನ್ನ ಆಕ್ರಮಣಗಳನ್ನು ಇನ್ನಷ್ಟು ತೀವ್ರಗೊಳಿಸಿದ್ದಾನೆ. ಹೀಗಿರಲಾಗಿ “ನೀತಿಯ ಎದೆಕವಚವನ್ನು” ಧರಿಸುವುದರ ಮಹತ್ವವನ್ನು ನೀವು ಮನಗಾಣುತ್ತೀರೋ?
7. ‘ನೀತಿಯ ಎದೆಕವಚದ’ ಅಗತ್ಯವನ್ನು ನಾವು ಮನಗಂಡಲ್ಲಿ ಹೇಗೆ ನಡಕೊಳ್ಳುವೆವು?
7 ಎದೆಕವಚವು ಶಾರೀರಿಕ ಹೃದಯವನ್ನು ಕಾಪಾಡುವಂತೆಯೇ ನೀತಿಯು ಸಾಂಕೇತಿಕ ಹೃದಯವನ್ನು ಕಾಪಾಡುತ್ತದೆ. ಅಪರಿಪೂರ್ಣ ಪ್ರವೃತ್ತಿಯಿಂದಾಗಿ ನಮ್ಮ ಸಾಂಕೇತಿಕ ಹೃದಯವು ವಂಚಕವೂ ತೀರಾ ಕೆಟ್ಟದ್ದೂ ಆಗಿದೆ. (ಯೆರೆ. 17:9) ನಮ್ಮ ಹೃದಯಕ್ಕೆ ಕೆಟ್ಟದ್ದನ್ನು ಮಾಡುವ ಪ್ರವೃತ್ತಿಯಿರುವುದರಿಂದ ಅದಕ್ಕೆ ತರಬೇತು ಮತ್ತು ಶಿಸ್ತು ಅತ್ಯಾವಶ್ಯಕ. (ಆದಿ. 8:21) ‘ನೀತಿಯ ಎದೆಕವಚದ’ ಅಗತ್ಯವನ್ನು ನಾವು ಮನಗಂಡಲ್ಲಿ ನಾವೇನು ಮಾಡುವೆವು? ದೇವರು ದ್ವೇಷಿಸುವ ಸಂಗತಿಗಳ ರುಚಿನೋಡಲಿಕ್ಕೋ ದುರ್ನಡತೆಯಲ್ಲಿ ಒಳಗೂಡುವ ಬಗ್ಗೆ ಕನಸುಕಾಣಲಿಕ್ಕೋ ಕ್ಷಣಮಾತ್ರಕ್ಕೂ ನಮ್ಮ ‘ನೀತಿಯ ಎದೆಕವಚವನ್ನು’ ತೆಗೆದು ಬದಿಗಿಡೆವು. ಟಿವಿ ನೋಡುವುದರಲ್ಲೇ ಗಂಟೆಗಟ್ಟಲೆ ಕಳೆಯುತ್ತಾ ಅಮೂಲ್ಯ ಸಮಯವನ್ನು ಪೋಲುಮಾಡೆವು. ಬದಲಾಗಿ ಯೆಹೋವನಿಗೆ ಮೆಚ್ಚುಗೆಯಾದದ್ದನ್ನೇ ಮಾಡಲು ಶ್ರಮಿಸುತ್ತಾ ಇರುವೆವು. ಒಂದುವೇಳೆ ಶಾರೀರಿಕ ದುರಾಲೋಚನೆಗೆ ಕ್ಷಣಿಕವಾಗಿ ಬಿಟ್ಟುಕೊಡುವ ಮೂಲಕ ಎಡವಿಬಿದ್ದರೂ ಯೆಹೋವನ ಸಹಾಯದಿಂದ ಪುನಃ ಎದ್ದುನಿಲ್ಲುವೆವು.—ಜ್ಞಾನೋಕ್ತಿ 24:16 ಓದಿ.
8. “ನಂಬಿಕೆಯೆಂಬ ದೊಡ್ಡ ಗುರಾಣಿ” ನಮಗೇಕೆ ಬೇಕು?
8 ಆಧ್ಯಾತ್ಮಿಕ ರಕ್ಷಾಕವಚದ ಭಾಗಗಳಲ್ಲಿ “ನಂಬಿಕೆಯೆಂಬ ದೊಡ್ಡ ಗುರಾಣಿ” ಕೂಡ ಇದೆ. ಅದು “ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು” ನಮ್ಮನ್ನು ಶಕ್ತರನ್ನಾಗಿಸುತ್ತದೆ. (ಎಫೆ. 6:16) ಫಲಿತಾಂಶವಾಗಿ ಯೆಹೋವನ ಮೇಲಣ ನಂಬಿಕೆ ಹಾಗೂ ಹೃತ್ಪೂರ್ವಕ ಪ್ರೀತಿಯು ನೀತಿಯನ್ನು ನಡೆಸಲು ಮತ್ತು ನಿತ್ಯಜೀವದ ಮಾರ್ಗದಲ್ಲಿ ಉಳಿಯಲು ನಮಗೆ ಸಹಾಯಮಾಡುತ್ತದೆ. ನಾವು ಯೆಹೋವನನ್ನು ಎಷ್ಟು ಹೆಚ್ಚು ಪ್ರೀತಿಸಲು ಕಲಿಯುತ್ತೇವೋ ಆತನ ನೀತಿಯ ಮೌಲ್ಯವನ್ನು ಅಷ್ಟೇ ಹೆಚ್ಚಾಗಿ ಮಾನ್ಯಮಾಡುವೆವು. ಆದರೆ ನಮ್ಮ ಮನಸ್ಸಾಕ್ಷಿಯ ಕುರಿತೇನು? ನೀತಿಯನ್ನು ಪ್ರೀತಿಸಲು ಅದು ನಮಗೆ ಹೇಗೆ ಸಹಾಯಮಾಡುತ್ತದೆ?
ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿ
9. ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದು ನಮಗೆ ಹೇಗೆ ಪ್ರಯೋಜನಕರ?
9 ದೀಕ್ಷಾಸ್ನಾನ ಹೊಂದಿದಾಗ ನಾವು “ಒಳ್ಳೇ ಮನಸ್ಸಾಕ್ಷಿಗಾಗಿ” ಯೆಹೋವನಿಗೆ ಬೇಡಿಕೊಂಡೆವು. (1 ಪೇತ್ರ 3:21) ವಿಮೋಚನಾ ಮೌಲ್ಯದಲ್ಲಿ ನಾವು ನಂಬಿಕೆಯಿಟ್ಟ ಕಾರಣ ಯೇಸುವಿನ ರಕ್ತವು ನಮ್ಮ ಪಾಪಗಳನ್ನು ಪರಿಹರಿಸುತ್ತದೆ ಮತ್ತು ಈ ಮೂಲಕ ನಾವು ದೇವರ ಮುಂದೆ ಶುದ್ಧ ನಿಲುವನ್ನು ಪಡೆಯುತ್ತೇವೆ. ಆದರೆ ಇದೇ ಶುದ್ಧ ನಿಲುವಲ್ಲಿ ಉಳಿಯಲು ನಾವು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಬೇಕು. ನಮ್ಮ ಮನಸ್ಸಾಕ್ಷಿ ಕೆಲವೊಮ್ಮೆ ನಮ್ಮನ್ನು ದೋಷಿ ಎಂದು ಹೇಳುವಲ್ಲಿ ಅಥವಾ ಎಚ್ಚರಿಕೆ ಕೊಡುವಲ್ಲಿ ಅದು ಸರಿಯಾಗಿ ಕೆಲಸಮಾಡುತ್ತಿದೆ ಎಂದರ್ಥ. ನಮ್ಮ ಮನಸ್ಸಾಕ್ಷಿಯ ಅಂತಹ ಚುಚ್ಚುವಿಕೆಗಳು ಸೂಚಿಸುತ್ತವೇನೆಂದರೆ ಅದು ಯೆಹೋವನ ನೀತಿಮಾರ್ಗದ ವಿಷಯದಲ್ಲಿ ಜಡವಾಗಿಲ್ಲ, ಕಾರ್ಯನಡಿಸುತ್ತಿದೆ ಎಂದು. (1 ತಿಮೊ. 4:2) ಆದರೆ ನೀತಿಯನ್ನು ಪ್ರೀತಿಸುವವರಿಗೆ ಅದು ಇನ್ನೊಂದು ವಿಧದಲ್ಲೂ ಸಹಾಯಮಾಡುತ್ತದೆ. ಹೇಗೆ?
10, 11. (ಎ) ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ನಾವೇಕೆ ಕಿವಿಗೊಡಬೇಕು ಎಂಬುದಕ್ಕೆ ಒಂದು ಅನುಭವವನ್ನು ತಿಳಿಸಿ. (ಬಿ) ನೀತಿಗಾಗಿ ಪ್ರೀತಿಯು ನಮಗೆ ಮಹಾ ಸಂತೋಷವನ್ನು ತರುತ್ತದೆ ಏಕೆ?
10 ನಾವು ತಪ್ಪು ಮಾಡುವಾಗ ಮನಸ್ಸಾಕ್ಷಿ ನಮ್ಮನ್ನು ಖಂಡಿಸಬಹುದು ಅಥವಾ ಕಾಡಬಹುದು. ಒಬ್ಬ ಯುವಕನ ಉದಾಹರಣೆಯನ್ನು ಪರಿಗಣಿಸಿರಿ. ಅವನು ‘ನೀತಿಮಾರ್ಗವನ್ನು’ ತೊರೆದು ಕಾಮಪ್ರಚೋದಕ ಚಿತ್ರಗಳನ್ನು ನೋಡುವ ಚಟಕ್ಕೆ ಮತ್ತು ಗಾಂಜಾ ಸೇವಿಸುವ ಚಾಳಿಗೆ ಬಲಿಬಿದ್ದನು. ಕೂಟಗಳಿಗೆ ಹೋದಾಗ ಅವನಲ್ಲಿ ದೋಷಿಭಾವನೆ ಮತ್ತು ಕ್ಷೇತ್ರಸೇವೆ ಮಾಡುವಾಗ ತಾನು ಕಪಟಿ ಎಂಬ ಭಾವನೆ ಅವನಿಗೆ ಬಂತು. ಆದ್ದರಿಂದ ಅವನು ಕ್ರೈಸ್ತ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿಬಿಟ್ಟ. ಅವನಂದದ್ದು: “ನನ್ನ ದುಷ್ಕೃತ್ಯಗಳಿಗೆ ನನ್ನ ಮನಸ್ಸಾಕ್ಷಿಯು ನನ್ನನ್ನೇ ಹೊಣೆಗಾರನಾಗಿ ಹಿಡಿಯುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ.” ಅವನು ಮತ್ತೂ ಹೇಳಿದ್ದು: “ಆ ನನ್ನ ಬುದ್ಧಿಹೀನತೆ ಸುಮಾರು ನಾಲ್ಕು ವರ್ಷ ಮುಂದುವರಿಯಿತು.” ತದನಂತರ ಅವನಿಗೆ ತಾನು ಸತ್ಯಕ್ಕೆ ಹಿಂತಿರುಗಬೇಕೆಂದು ಅನಿಸಿತು. ಯೆಹೋವನು ತನ್ನ ಪ್ರಾರ್ಥನೆಯನ್ನು ಕೇಳುತ್ತಾನೋ ಇಲ್ಲವೋ ಎಂದು ಅವನು ನೆನಸಿದರೂ ಕೊನೆಗೂ ಪ್ರಾರ್ಥಿಸಿ ಕ್ಷಮೆಗಾಗಿ ಬೇಡಿಕೊಂಡನು. ಅದಾದ ಮೇಲೆ ಹತ್ತು ನಿಮಿಷದೊಳಗೆ ಅವನ ತಾಯಿ ಅವನನ್ನು ಭೇಟಿಮಾಡಲು ಬ0ದಳು, ಪುನಃ ಕೂಟಗಳಿಗೆ ಹಾಜರಾಗುವಂತೆ ಅವನನ್ನು ಪ್ರೋತ್ಸಾಹಿಸಿದಳು. ಅದರಂತೆ ಅವನು ರಾಜ್ಯ ಸಭಾಗೃಹಕ್ಕೆ ಹೋಗಿ ಹಿರಿಯರೊಬ್ಬರ ಬಳಿ ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿದನು. ಸಮಯಾನಂತರ ದೀಕ್ಷಾಸ್ನಾನ ಪಡೆದನು. ತನ್ನ ಜೀವವನ್ನು ಕಾಪಾಡಿದ್ದಕ್ಕಾಗಿ ಅವನೀಗ ಯೆಹೋವನಿಗೆ ಋಣಿಯಾಗಿದ್ದಾನೆ.
11 ಸರಿಯಾದದ್ದನ್ನು ಮಾಡುವುದರಿಂದ ಸಿಗಬಲ್ಲ ಮಹಾ ಸಂತೋಷವನ್ನು ನಾವು ನಿಶ್ಚಯವಾಗಿ ಅನುಭವಿಸಿದ್ದೇವೆ. ನೀತಿಯನ್ನು ಪ್ರೀತಿಸಿ ಹೆಚ್ಚು ಪೂರ್ಣವಾಗಿ ಅದನ್ನು ನಡೆಸಲು ಕಲಿತಂತೆ ನಮ್ಮ ಸ್ವರ್ಗೀಯ ತಂದೆಗೆ ಮೆಚ್ಚಿಕೆಯಾದದ್ದನ್ನೇ ಮಾಡುವುದರಲ್ಲಿ ಇನ್ನಷ್ಟು ಹರ್ಷಿಸುವೆವು. ಸ್ವಲ್ಪ ಯೋಚಿಸಿ! ಮಾನವರೆಲ್ಲರೂ ತಮ್ಮ ಮನಸ್ಸಾಕ್ಷಿಯಿಂದ ಕೇವಲ ಆನಂದವನ್ನೇ ಅನುಭವಿಸುವ ದಿನ ಬರಲಿದೆ; ಆಗ ಅವರು ದೇವರ ಗುಣಗಳನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವರು. ಆದ್ದರಿಂದ ನಾವೀಗಲೇ ಹೃದಯದಾಳದಲ್ಲಿ ನೀತಿಗಾಗಿ ಪ್ರೀತಿಯನ್ನು ಬೇರೂರಿಸುತ್ತಾ ಯೆಹೋವನಿಗೆ ಅತ್ಯುಲ್ಲಾಸವನ್ನು ತರೋಣ.—ಜ್ಞಾನೋ. 23:15, 16.
12, 13. ನಮ್ಮ ಮನಸ್ಸಾಕ್ಷಿಯನ್ನು ಹೇಗೆ ತರಬೇತುಗೊಳಿಸಬಲ್ಲೆವು?
12 ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸಲು ಏನು ಮಾಡಬಲ್ಲೆವು? ಬೈಬಲ್ ಮತ್ತು ಬೈಬಲಾಧಾರಿತ ಪ್ರಕಾಶನಗಳ ಅಧ್ಯಯನ ಮಾಡುವಾಗ ನಾವು ಇದನ್ನು ನೆನಪಿನಲ್ಲಿಡುವುದು ಪ್ರಾಮುಖ್ಯ, ಏನೆಂದರೆ “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ.” (ಜ್ಞಾನೋ. 15:28) ಹೀಗೆ ವಿವೇಚಿಸುವುದು ಅಂದರೆ ಧ್ಯಾನಿಸುವುದು ಉದ್ಯೋಗದ ಕುರಿತ ಪ್ರಶ್ನೆಗಳು ಎದುರಾದಾಗ ಪ್ರಯೋಜನಕರ. ಅದು ಹೇಗೆಂದು ಪರಿಗಣಿಸಿ. ಕೆಲವು ನಿರ್ದಿಷ್ಟ ಉದ್ಯೋಗಗಳು ಬೈಬಲಿನಲ್ಲಿರುವ ವಿಷಯಕ್ಕೆ ವಿರುದ್ಧವಾಗಿದ್ದಲ್ಲಿ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ ಮಾರ್ಗದರ್ಶನವನ್ನು ನಮ್ಮಲ್ಲಿ ಹೆಚ್ಚಿನವರು ಆ ಕೂಡಲೆ ಅನ್ವಯಿಸುತ್ತೇವೆ. ಆದರೆ ಉದ್ಯೋಗ ಸಂಬಂಧಿತ ಪ್ರಶ್ನೆಗೆ ನೇರವಾದ ಸ್ಪಷ್ಟ ಉತ್ತರ ಇರದಿದ್ದಲ್ಲಿ ಆಗೇನು? ಆಗ ನಾವು ಬೈಬಲ್ ಮೂಲತತ್ತ್ವಗಳನ್ನು ಗಮನಿಸಿ, ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು.a ಅದರಲ್ಲಿ, ಬೇರೆಯವರ ಮನಸ್ಸಾಕ್ಷಿಗಳನ್ನು ನೋಯಿಸಬಾರದಂಥ ಮೂಲತತ್ತ್ವಗಳೂ ಸೇರಿವೆ. (1 ಕೊರಿಂ. 10:31-33) ದೇವರೊಂದಿಗಿನ ನಮ್ಮ ಸಂಬಂಧದ ಕುರಿತ ಮೂಲತತ್ತ್ವಗಳಿಗೆ ನಾವು ವಿಶೇಷ ಗಮನಕೊಡಬೇಕು. ಯೆಹೋವನು ನಮಗೆ ನೈಜನಾಗಿದ್ದಲ್ಲಿ ಮುಖ್ಯವಾಗಿ ನಮ್ಮನ್ನು ಹೀಗೆ ಕೇಳಿಕೊಳ್ಳುವೆವು: ‘ಈ ಉದ್ಯೋಗವನ್ನು ಮಾಡುವ ಮೂಲಕ ನಾನು ಯೆಹೋವನನ್ನು ನೋಯಿಸಿ, ಕರಕರೆಗೊಳಿಸುತ್ತೇನೋ?’—ಕೀರ್ತ. 78:40, 41.
13 ಕಾವಲಿನಬುರುಜು ಅಧ್ಯಯನಕ್ಕೆ ಅಥವಾ ಸಭಾ ಬೈಬಲ್ ಅಧ್ಯಯನಕ್ಕೆ ತಯಾರಿಸುವಾಗ ಅದರಲ್ಲಿರುವ ಮಾಹಿತಿಯನ್ನು ಧ್ಯಾನಿಸುವ ಅಗತ್ಯವನ್ನು ಮನಸ್ಸಿನಲ್ಲಿಡಬೇಕು. ನಾವು ಅವಸರದಿಂದ ಉತ್ತರಕ್ಕೆ ಅಡಿಗೆರೆ ಹಾಕಿ ಮುಂದಿನ ಪ್ಯಾರಕ್ಕೆ ದೌಡಾಯಿಸುತ್ತೇವೋ? ಇಂಥ ಅಧ್ಯಯನಗಳು ನಮ್ಮಲ್ಲಿ ನೀತಿಗಾಗಿ ಪ್ರೀತಿಯನ್ನು ಗಾಢಗೊಳಿಸುವುದಿಲ್ಲ, ಸೂಕ್ಷ್ಮಗ್ರಾಹಿ ಮನಸ್ಸಾಕ್ಷಿಯನ್ನು ಬೆಳೆಸುವುದೂ ಇಲ್ಲ. ನಾವು ನೀತಿಯನ್ನು ಪ್ರೀತಿಸುವವರಾಗಬೇಕಾದರೆ ದೇವರ ಲಿಖಿತ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಮತ್ತು ಓದಿದ್ದನ್ನು ಧ್ಯಾನಿಸಬೇಕು. ಸಂಪೂರ್ಣ ಹೃದಯದಿಂದ ನೀತಿಯನ್ನು ಪ್ರೀತಿಸಲು ಕಲಿಯಲಿಕ್ಕಾಗಿ ಈ ರೀತಿಯ ಪ್ರಯತ್ನ ಬೇಕೇ ಬೇಕು!
ನೀತಿಗಾಗಿ ಹಸಿವೆ ಮತ್ತು ಬಾಯಾರಿಕೆ
14. ಪವಿತ್ರ ಸೇವೆಯ ವಿಷಯದಲ್ಲಿ ನಮಗೆ ಯಾವ ಮನೋಭಾವ ಇರಬೇಕೆಂಬುದು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಅಪೇಕ್ಷೆ?
14 ಪವಿತ್ರ ಸೇವೆಯನ್ನು ಮಾಡುವಾಗ ನಾವು ಸಂತೋಷದಿಂದ ಇರಬೇಕೆಂಬುದೇ ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಅಪೇಕ್ಷೆ. ನಮ್ಮ ಸಂತೋಷಕ್ಕೆ ಯಾವುದು ನೆರವಾಗುವುದು? ನೀತಿಗಾಗಿ ಪ್ರೀತಿಯೇ. ಯೇಸು ಪರ್ವತ ಪ್ರಸಂಗದಲ್ಲಿ ಅಂದದ್ದು: “ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ ಇರುವವರು ಸಂತೋಷಿತರು; ಅವರು ತೃಪ್ತರಾಗುವರು.” (ಮತ್ತಾ. 5:6) ಈ ಮಾತುಗಳು ನೀತಿಯನ್ನು ಪ್ರೀತಿಸಬಯಸುವವರಿಗೆ ಯಾವ ಮಹತ್ವಾರ್ಥದಲ್ಲಿವೆ?
15, 16. ಆಧ್ಯಾತ್ಮಿಕ ಹಸಿವು, ಬಾಯಾರಿಕೆಯನ್ನು ಯಾವ ವಿಧಗಳಲ್ಲಿ ತೃಪ್ತಿಗೊಳಿಸಲಾಗುವುದು?
15 ನಾವು ಜೀವಿಸುವ ಲೋಕವು ಕೆಡುಕನಿಂದ ಆಳಲ್ಪಡುತ್ತಿದೆ. (1 ಯೋಹಾ. 5:19) ಯಾವುದೇ ದೇಶದ ವಾರ್ತಾಪತ್ರಿಕೆಯನ್ನು ಕೈಗೆತ್ತಿಕೊಳ್ಳಿ. ಹಿಂದೆಂದೂ ಕೇಳರಿಯದ ಕ್ರೌರ್ಯ ಮತ್ತು ಹಿಂಸಾಚಾರದ ವರದಿಗಳೇ ಕಾಣಸಿಗುತ್ತವೆ. ಮನುಷ್ಯನು ಮನುಷ್ಯನ ಮೇಲೆ ನಡೆಸುವ ನಿರ್ದಯಕೃತ್ಯಗಳು ನೀತಿವಂತ ವ್ಯಕ್ತಿಯನ್ನು ತುಂಬ ಕಳವಳಗೊಳಿಸಿವೆ. (ಪ್ರಸಂ. 8:9) ನೀತಿಯನ್ನು ಕಲಿಯಲು ಅಪೇಕ್ಷಿಸುವ ಜನರ ಆಧ್ಯಾತ್ಮಿಕ ಹಸಿವು, ಬಾಯಾರಿಕೆಯನ್ನು ಯೆಹೋವನು ಮಾತ್ರ ತೃಪ್ತಿಗೊಳಿಸಶಕ್ತನೆಂದು ಆತನನ್ನು ಪ್ರೀತಿಸುವ ನಮಗೆ ತಿಳಿದಿದೆ. ಭಕ್ತಿಹೀನರು ಶೀಘ್ರದಲ್ಲೇ ನಿರ್ಮೂಲವಾಗುವರು. ನಿಯಮಭಂಜಕ ಜನರಿಂದಲೂ ಅವರ ಹೇಯಕೃತ್ಯಗಳಿಂದಲೂ ಉಂಟಾಗುವ ಕಳವಳವನ್ನು ನೀತಿಪ್ರಿಯರು ಇನ್ನು ಮುಂದೆ ಅನುಭವಿಸರು. (2 ಪೇತ್ರ 2:7, 8) ಇದೆಂಥ ಉಪಶಮನವಾಗಿರುವುದು!
16 ಯೆಹೋವನ ಸೇವಕರೂ ಯೇಸು ಕ್ರಿಸ್ತನ ಹಿಂಬಾಲಕರೂ ಆದ ನಮಗೆ ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ ಇರುವವರೆಲ್ಲರೂ “ತೃಪ್ತರಾಗುವರು” ಎಂದು ತಿಳಿದಿದೆ. ‘ನೀತಿಯು ವಾಸವಾಗಿರುವ’ ನೂತನ ಆಕಾಶ ಮತ್ತು ನೂತನ ಭೂಮಿ ಎಂಬ ದೇವರ ಏರ್ಪಾಡಿನ ಮೂಲಕ ಅವರು ಸಂಪೂರ್ಣವಾಗಿ ತೃಪ್ತರಾಗುವರು. (2 ಪೇತ್ರ 3:13) ಆದ್ದರಿಂದ ಈ ಸೈತಾನನ ಲೋಕದಲ್ಲಿ ದಬ್ಬಾಳಿಕೆ ಮತ್ತು ಹಿಂಸಾಚಾರವು ನೀತಿಯ ಮೇಲೆ ಮೇಲುಗೈ ಸಾಧಿಸಿರುವುದರಿಂದ ನಾವು ಆಶ್ಚರ್ಯಪಡದಿರೋಣ, ನಿರಾಶೆಹೊಂದದಿರೋಣ. (ಪ್ರಸಂ. 5:8) ಇಂದು ನಡೆಯುತ್ತಿರುವ ಎಲ್ಲವನ್ನೂ ಮಹೋನ್ನತ ದೇವರಾದ ಯೆಹೋವನು ಗಮನಿಸುತ್ತಿದ್ದಾನೆ, ಅತಿ ಶೀಘ್ರದಲ್ಲೇ ಆತನು ನೀತಿಪ್ರಿಯರನ್ನು ಸಂರಕ್ಷಿಸುವನು.
ನೀತಿಯನ್ನು ಪ್ರೀತಿಸುವುದರ ಪ್ರಯೋಜನ
17. ನೀತಿಯನ್ನು ಪ್ರೀತಿಸುವುದರಿಂದ ಸಿಗುವ ಕೆಲವು ಪ್ರಯೋಜನಗಳು ಯಾವುವು?
17 ನೀತಿಮಾರ್ಗವನ್ನು ಅನುಸರಿಸುವುದರಿಂದ ಸಿಗುವ ಒಂದು ಮುಖ್ಯ ಪ್ರಯೋಜನವನ್ನು ಕೀರ್ತನೆ 146:8 ಒತ್ತಿಹೇಳುತ್ತದೆ. ಕೀರ್ತನೆಗಾರನು ಹಾಡಿದ್ದು: “ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ.” ತುಸು ಯೋಚಿಸಿರಿ! ನಾವು ನೀತಿಯನ್ನು ಪ್ರೀತಿಸುವ ಕಾರಣ ವಿಶ್ವದ ಪರಮಾಧಿಕಾರಿಯೇ ನಮ್ಮನ್ನು ಪ್ರೀತಿಸುತ್ತಾನೆ! ನಾವು ನಮ್ಮ ಜೀವನದಲ್ಲಿ ದೇವರ ರಾಜ್ಯವನ್ನು ಪ್ರಥಮವಾಗಿಟ್ಟರೆ ಯೆಹೋವನು ಪ್ರೀತಿಯಿಂದ ನಮ್ಮ ಆವಶ್ಯಕತೆಗಳನ್ನು ಪೂರೈಸುವನೆಂಬ ಭರವಸೆ ನಮಗಿದೆ. (ಕೀರ್ತನೆ 37:25; ಜ್ಞಾನೋಕ್ತಿ 10:3 ಓದಿ.) ಕಟ್ಟಕಡೆಗೆ ಇಡೀ ಭೂಮಿಯನ್ನು ನೀತಿಪ್ರಿಯರೇ ಆನಂದಿಸುವರು. (ಜ್ಞಾನೋ. 13:22) ನೀತಿಯನ್ನು ನಡೆಸಿದ್ದಕ್ಕಾಗಿ ದೇವಜನರಲ್ಲಿ ಹೆಚ್ಚಿನವರು ಸುಂದರ ಭೂಪರದೈಸಿನಲ್ಲಿ ನಿರಂತರ ಜೀವನ ಮತ್ತು ಹರ್ಷಾನಂದವನ್ನು ಪ್ರತಿಫಲವಾಗಿ ಪಡೆಯುವರು. ಇಂದು ಕೂಡ ದೇವರ ನೀತಿಯನ್ನು ಪ್ರೀತಿಸುವವರಿಗೆ ಮನಶ್ಶಾಂತಿ ಎಂಬ ಪ್ರತಿಫಲವಿದೆ. ಇದು ಅವರ ಕುಟುಂಬ ಮತ್ತು ಸಭೆಗಳ ಐಕ್ಯಕ್ಕೆ ನೆರವಾಗುತ್ತದೆ.—ಫಿಲಿ. 4:6, 7.
18. ಯೆಹೋವನ ದಿನಕ್ಕಾಗಿ ನಾವು ಕಾಯುತ್ತಿರುವಾಗ ಏನನ್ನು ಮಾಡುತ್ತಾ ಇರಬೇಕು?
18 ಯೆಹೋವನ ಮಹಾ ದಿನಕ್ಕಾಗಿ ಕಾಯುತ್ತಿರುವಾಗ ನಾವು ಆತನ ನೀತಿಯನ್ನು ಹುಡುಕುತ್ತಾ ಇರಬೇಕು. (ಚೆಫ. 2:2, 3) ಹೀಗಿರಲಾಗಿ ನಾವು ಯೆಹೋವ ದೇವರ ನೀತಿಯುತ ಮಾರ್ಗಗಳಿಗೆ ಯಥಾರ್ಥ ಪ್ರೀತಿಯನ್ನು ತೋರಿಸೋಣ. ಇದರಲ್ಲಿ ನಮ್ಮ ಸಾಂಕೇತಿಕ ಹೃದಯವನ್ನು ಕಾಪಾಡಲು “ನೀತಿಯ ಎದೆಕವಚವನ್ನು” ಯಾವಾಗಲೂ ಧರಿಸಿಕೊಂಡಿರುವುದೂ ಸೇರಿದೆ. ಒಳ್ಳೇ ಮನಸ್ಸಾಕ್ಷಿಯನ್ನೂ ನಾವು ಕಾಪಾಡಿಕೊಳ್ಳಬೇಕು. ಇದು ನಮಗೆ ಆನಂದ ತರುತ್ತದೆ ಮತ್ತು ನಮ್ಮ ದೇವರ ಹೃದಯವನ್ನು ಸಂತೋಷಪಡಿಸುತ್ತದೆ.—ಜ್ಞಾನೋ. 27:11.
19. ಏನು ಮಾಡಲು ನಾವು ದೃಢಸಂಕಲ್ಪದಿಂದ ಇರಬೇಕು? ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
19 “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವ. 16:9) ಈ ಮಾತುಗಳು ಅಸ್ಥಿರತೆ, ಹಿಂಸಾಚಾರ, ದುಷ್ಟತನ ಹೆಚ್ಚಾಗುತ್ತಿರುವ ಈ ತೊಂದರೆಗ್ರಸ್ತ ಲೋಕದಲ್ಲಿ ನೀತಿಯನ್ನು ನಡೆಸುವ ನಮಗೆ ಎಷ್ಟೊಂದು ಸಾಂತ್ವನಕರ! ನಮ್ಮ ನೀತಿಮಾರ್ಗವು ದೇವರಿಂದ ವಿಮುಖವಾಗಿರುವ ಜನಸಮೂಹವನ್ನು ತಬ್ಬಿಬ್ಬುಗೊಳಿಸಬಹುದು ನಿಜ. ಆದರೆ ಯೆಹೋವನ ನೀತಿಗೆ ದೃಢವಾಗಿ ಅಂಟಿಕೊಳ್ಳುವ ಮೂಲಕ ಸ್ವತಃ ನಾವು ತುಂಬ ಪ್ರಯೋಜನ ಹೊಂದುತ್ತೇವೆ. (ಯೆಶಾ. 48:17; 1 ಪೇತ್ರ 4:4) ಆದಕಾರಣ ಸಂಪೂರ್ಣ ಹೃದಯದಿಂದ ನೀತಿಯನ್ನು ಪ್ರೀತಿಸುತ್ತಾ ಅದನ್ನು ನಡೆಸುವುದರಲ್ಲೇ ಸದಾ ಆನಂದಿಸಲು ದೃಢಸಂಕಲ್ಪದಿಂದಿರೋಣ. ಸಂಪೂರ್ಣ ಹೃದಯದಿಂದ ಅದನ್ನು ಮಾಡಲು ನಾವು ಅಧರ್ಮವನ್ನು ಸಹ ದ್ವೇಷಿಸಬೇಕು. ಇದರ ಅರ್ಥವೇನೆಂದು ಮುಂದಿನ ಲೇಖನ ತೋರಿಸುವುದು.
[ಪಾದಟಿಪ್ಪಣಿ]
a ಉದ್ಯೋಗದ ಪ್ರಶ್ನೆಗಳಿಗೆ ಸಂಬಂಧಿಸಿದ ಬೈಬಲ್ ಮೂಲತತ್ತ್ವಗಳ ಚರ್ಚೆಗಾಗಿ 1999, ಏಪ್ರಿಲ್ 15ರ ಕಾವಲಿನಬುರುಜು ಪುಟ 28-30 ನೋಡಿ.
ಹೇಗೆ ಉತ್ತರಿಸುವಿರಿ?
• ನೀತಿಯನ್ನು ಪ್ರೀತಿಸಲು ವಿಮೋಚನಾ ಮೌಲ್ಯಕ್ಕಾಗಿ ಗಣ್ಯತೆ ಏಕೆ ಅಗತ್ಯ?
• “ನೀತಿಯ ಎದೆಕವಚವನ್ನು” ನಾವು ಧರಿಸುವುದು ಏಕೆ ಪ್ರಾಮುಖ್ಯ?
• ನಮ್ಮ ಮನಸ್ಸಾಕ್ಷಿಯನ್ನು ನಾವು ಹೇಗೆ ತರಬೇತುಗೊಳಿಸಬೇಕು?
[ಪುಟ 26ರಲ್ಲಿರುವ ಚಿತ್ರ]
ಶಿಕ್ಷಿತ ಮನಸ್ಸಾಕ್ಷಿಯು ಉದ್ಯೋಗ ಸಂಬಂಧಿತ ಪ್ರಶ್ನೆಗಳನ್ನು ಬಗೆಹರಿಸಲು ಸಹಾಯಕರ