ಎಲೀಷನು ಅಗ್ನಿಮಯ ರಥರಥಾಶ್ವಗಳನ್ನು ನೋಡಿದನು! ನೀವು?
ಸಿರಿಯದ ರಾಜನು ದೇವಪ್ರವಾದಿ ಎಲೀಷನನ್ನು ಎಲ್ಲೆಲ್ಲಿಯೂ ಹುಡುಕುತ್ತಾ ಇದ್ದನು. ಎಲೀಷನು ದೋತಾನಿನಲ್ಲಿದ್ದಾನೆ ಎನ್ನುವುದನ್ನು ತಿಳಿದುಕೊಂಡು ರಾತ್ರಿಯಲ್ಲಿ ಕುದುರೆಗಳನ್ನು, ಯುದ್ಧರಥಗಳಿಂದ ಕೂಡಿದ ಸೈನ್ಯವನ್ನು ಕಳುಹಿಸಿದನು. ಸೂರ್ಯ ಮೂಡುವಷ್ಟರಲ್ಲಿ ಅವರು ಆ ಪಟ್ಟಣವನ್ನು ಮುತ್ತಿಗೆಹಾಕಿದ್ದರು.—2 ಅರ. 6:13, 14.
ಎಲೀಷನ ಸೇವಕ ಎದ್ದು ಹೊರಗೆ ಹೋದಾಗ ಸೈನ್ಯವನ್ನು ಕಂಡು ತನ್ನ ಧಣಿಗೆ: “ಅಯ್ಯೋ, ಸ್ವಾಮೀ, ಏನು ಮಾಡೋಣ” ಎಂದನು ಹೆದರುತ್ತಾ. ಆಗ ಎಲೀಷನು ಅವನಿಗೆ “ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಹೇಳಿದನು. ನಂತರ ಪ್ರವಾದಿ ಹೀಗೆ ಪ್ರಾರ್ಥಿಸಿದನು: “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ.” ಆಗ “ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು.” (2 ಅರ. 6:15-17) ಈ ಘಟನೆಯಿಂದ ಮತ್ತು ಎಲೀಷನ ಜೀವನದಲ್ಲಿ ನಡೆದ ಇತರ ಘಟನೆಗಳಿಂದ ನಾವೇನನ್ನು ಕಲಿಯಬಹುದು?
ಸಿರಿಯದ ಸೈನ್ಯ ಆಕ್ರಮಣ ಮಾಡಿದಾಗ ಎಲೀಷನು ಹೆದರದೆ ಶಾಂತವಾಗಿದ್ದನು. ಯಾಕೆಂದರೆ ಅವನು ಯೆಹೋವನಲ್ಲಿ ಭರವಸೆ ಇಟ್ಟಿದ್ದನು ಮತ್ತು ಆತನ ಸಂರಕ್ಷಣಾ ಶಕ್ತಿಯನ್ನು ಕಣ್ಣಾರೆ ಕಂಡನು. ಈ ರೀತಿ ಅದ್ಭುತಗಳು ನಮ್ಮೀ ಕಾಲದಲ್ಲಿ ಆಗಲ್ಲವಾದರೂ ನಮಗೆ ಗೊತ್ತಿದೆ, ಇಂದೂ ಕೂಡ ಯೆಹೋವನು ತನ್ನ ಸೇವಕರನ್ನು ಒಂದು ಗುಂಪಾಗಿ ಸಂರಕ್ಷಿಸುತ್ತಿದ್ದಾನೆ. ಒಂದರ್ಥದಲ್ಲಿ ಅಗ್ನಿಮಯವಾದ ರಥರಥಾಶ್ವಗಳು ನಮ್ಮ ಸುತ್ತಲಿದ್ದು ನಮ್ಮನ್ನು ಸಂರಕ್ಷಿಸುತ್ತಿವೆ. ಅವುಗಳನ್ನು ನಂಬಿಕೆಯ ಕಣ್ಣುಗಳಿಂದ ‘ನೋಡಿದರೆ’ ಮತ್ತು ದೇವರಲ್ಲಿ ಸಂಪೂರ್ಣ ಭರವಸೆ ಇಟ್ಟರೆ, ನಾವು “ಸುರಕ್ಷಿತ”ರಾಗಿರುತ್ತೇವೆ. ಯೆಹೋವನ ಆಶೀರ್ವಾದಗಳಿಗೂ ಪಾತ್ರರಾಗುತ್ತೇವೆ. (ಕೀರ್ತ. 4:8) ಈಗ ನಾವು ಎಲೀಷನ ಜೀವನದಲ್ಲಾದ ಇತರ ಘಟನೆಗಳಿಂದ ಹೇಗೆ ಪ್ರಯೋಜನ ಪಡೆಯಬಹುದೆಂದು ನೋಡೋಣ.
ಎಲೀಷ ಎಲೀಯನ ಸೇವಕನಾಗುತ್ತಾನೆ
ಒಂದುಸಾರಿ ಎಲೀಷ ಹೊಲವನ್ನು ಉಳುತ್ತಿರುವಾಗ ಪ್ರವಾದಿ ಎಲೀಯನು ಹತ್ತಿರ ಬಂದು ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಅದರರ್ಥ ಏನಂತ ಎಲೀಷನಿಗೆ ಗೊತ್ತಿತ್ತು. ಹಾಗಾಗಿ ಅವನು ಔತಣ ಏರ್ಪಡಿಸಿ, ತನ್ನ ತಂದೆ-ತಾಯಿಗೆ ವಿದಾಯ ಹೇಳಿ ಎಲೀಯನೊಂದಿಗೆ ಹೊರಟನು. (1 ಅರ. 19:16, 19-21) ಎಲೀಷನು ತನ್ನಿಂದಾದಷ್ಟು ಪೂರ್ಣವಾಗಿ ದೇವರ ಸೇವೆಮಾಡಲು ತನ್ನನ್ನೇ ಸಿದ್ಧಮನಸ್ಸಿನಿಂದ ಕೊಟ್ಟುಕೊಂಡಿದ್ದರಿಂದ ಯೆಹೋವನ ಕೈಯಲ್ಲಿ ಸಾಧನವಾಗಿ ಉಪಯೋಗಿಸಲ್ಪಟ್ಟನು. ಕಾಲಾನಂತರ ಪ್ರವಾದಿಯಾಗಿ ಎಲೀಯನ ಸ್ಥಾನಭರ್ತಿಮಾಡಿದನು.
ಎಲೀಷನು ಆರು ವರ್ಷ ಎಲೀಯನ ಸೇವಕನಾಗಿ ಕೆಲಸಮಾಡಿದ್ದಿರಬೇಕು. ಆ ಸಮಯದಲ್ಲಿ ‘ಎಲೀಯನ ಕೈಗೆ ನೀರು ಕೊಡುತ್ತಿದ್ದವನು’ ಎಲೀಷನೇ. (2 ಅರ. 3:11) ಆ ಕಾಲದಲ್ಲಿ ಯಜಮಾನನ ಊಟವಾದ ನಂತರ ಸೇವಕನು ಕೈ ತೊಳೆಯಲು ನೀರು ಹಾಕುತ್ತಿದ್ದನು. ಹೀಗೆ, ಎಲೀಷನು ಮಾಡುತ್ತಿದ್ದ ಕೆಲಸಗಳಲ್ಲಿ ಕೆಲವಾದರೂ ಇಂಥ ಕೀಳಾದ ಕೆಲಸಗಳಾಗಿದ್ದವು. ಹಾಗಿದ್ದರೂ ಎಲೀಯನಿಗೆ ಸೇವಕನಾಗಿರುವುದನ್ನು ಒಂದು ಸುಯೋಗವಾಗಿ ಅವನು ನೋಡಿದನು.
ಇಂದು ಸಹ ಅನೇಕ ಕ್ರೈಸ್ತರು ಬೇರೆಬೇರೆ ವಿಧದ ಪೂರ್ಣಸಮಯದ ಸೇವೆಯನ್ನು ಮಾಡುತ್ತಾರೆ. ಹಾಗೆ ಮಾಡಲು ಅವರನ್ನು ಪ್ರಚೋದಿಸಿರುವುದು ಅವರ ನಂಬಿಕೆ ಮತ್ತು ಆದಷ್ಟು ಹೆಚ್ಚು ಶಕ್ತಿಯನ್ನು ಯೆಹೋವನ ಸೇವೆ ಮಾಡಲು ಬಳಸಬೇಕೆಂಬ ಅವರ ಕಡುಬಯಕೆ. ಅವುಗಳಲ್ಲಿ ಕೆಲವು ಸೇವೆಗಳನ್ನು ಮಾಡಲು ಅವರು ಮನೆ ಬಿಟ್ಟು ಬರಬೇಕಾಗಬಹುದು. ಉದಾಹರಣೆಗೆ, ಬೆತೆಲ್ ಸೇವೆ, ಕಟ್ಟಡ ನಿರ್ಮಾಣಕಾರ್ಯ ಇತ್ಯಾದಿ. ಅನೇಕರು ಇದನ್ನು ಕೀಳಾಗಿ ಕಾಣಬಹುದು. ಆದರೆ ಯಾವುದೇ ಕ್ರೈಸ್ತನು ಅಂಥ ಸೇವೆಯನ್ನು ಮೌಲ್ಯವಿಲ್ಲದ್ದಾಗಿ, ತುಚ್ಛವಾಗಿ ವೀಕ್ಷಿಸಬಾರದು. ಯಾಕೆಂದರೆ ಯೆಹೋವನಿಗೆ ಅದು ಬಹು ಅಮೂಲ್ಯ.—ಇಬ್ರಿ. 6:10.
ಎಲೀಷ ತನ್ನ ನೇಮಕಕ್ಕೆ ಅಂಟಿಕೊಂಡಿದ್ದ
ದೇವರು “ಎಲೀಯನನ್ನು ಸುಳಿಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಸೇರಿಸುವ” ಮುಂಚೆ ಗಿಲ್ಗಾಲಿನಿಂದ ಬೇತೇಲಿಗೆ ಹೋಗುವಂತೆ ಹೇಳಿದನು. ಆಗ ಎಲೀಯನು ಎಲೀಷನಿಗೆ ತನ್ನೊಂದಿಗೆ ಬರದೆ ಅಲ್ಲೇ ಇರುವಂತೆ ಕೇಳಿಕೊಂಡನು. ಆಗ ಎಲೀಷನು “ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ” ಎಂದು ಉತ್ತರಕೊಟ್ಟನು. ಹಾಗಾಗಿ ಎಲೀಯನು ಅವನನ್ನು ಕರೆದುಕೊಂಡು ಹೋದನು. ನಂತರ ಎರಡು ಸಂದರ್ಭಗಳಲ್ಲಿ ತನ್ನೊಂದಿಗೆ ಬರದಂತೆ ಎಲೀಯನು ಕೇಳಿಕೊಂಡರೂ ಎಲೀಷನು ಬಿಟ್ಟುಕೊಡಲಿಲ್ಲ. (2 ಅರ. 2:1-6) ರೂತಳು ಅತ್ತೆ ನೊವೊಮಿಗೆ ಅಂಟಿಕೊಂಡಿದ್ದಂತೆಯೇ ಎಲೀಷ ಎಲೀಯನನ್ನು ಅಂಟಿಕೊಂಡಿದ್ದನು. (ರೂತ. 1:8, 16, 17) ಯಾಕೆ? ಯಾಕೆಂದರೆ ಎಲೀಯನ ಸೇವೆ ಮಾಡುವುದನ್ನು ಎಲೀಷನು ದೇವರು ಕೊಟ್ಟ ನೇಮಕವೆಂದು ತಿಳಿದು ಗೌರವಿಸಿದನು.
ನಮ್ಮೆಲ್ಲರಿಗೆ ಎಲೀಷ ಉತ್ತಮ ಮಾದರಿ. ದೇವರ ಸಂಘಟನೆಯಲ್ಲಿ ಯಾವುದೇ ಸುಯೋಗ ಸಿಗಲಿ, ಅದು ನಾವು ಯೆಹೋವನಿಗೆ ಸಲ್ಲಿಸುತ್ತಿರುವ ಸೇವೆ ಎಂದು ಮನಸ್ಸಿನಲ್ಲಿಟ್ಟರೆ ಖಂಡಿತ ಅದನ್ನು ತುಂಬ ಅಮೂಲ್ಯವಾಗಿ ನೋಡುತ್ತೇವೆ. ಅದಕ್ಕಿಂತ ದೊಡ್ಡದು ಬೇರೆ ಯಾವುದೂ ಇರಲ್ಲ.—ಕೀರ್ತ. 65:4; 84:10.
“ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತೀ ಹೇಳು”
ಎಲೀಯ ಮತ್ತು ಎಲೀಷ ಪ್ರಯಾಣಿಸುತ್ತಿರುವಾಗ, ಎಲೀಯನು ಅವನಿಗೆ: “ನಿನ್ನನ್ನು ಬಿಟ್ಟು ಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತೀ ಹೇಳು” ಎಂದು ಕೇಳಿದನು. ವರ್ಷಗಳ ಹಿಂದೆ ಸೊಲೊಮೋನನು ಕೇಳಿಕೊಂಡಂತೆಯೇ ಆಧ್ಯಾತ್ಮಿಕ ದೃಷ್ಟಿಕೋನದಿಂದ ಎಲೀಷನು, “ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು” ಎಂದು ಬೇಡಿಕೊಂಡನು. (1 ಅರ. 3:5, 9; 2 ಅರ. 2:9) ಇಸ್ರಾಯೇಲಿನಲ್ಲಿ ಒಬ್ಬ ವ್ಯಕ್ತಿಯ ಚೊಚ್ಚಲ ಮಗನಿಗೆ ಆಸ್ತಿಯಲ್ಲಿ ಎರಡು ಪಾಲು ಸಿಗುತ್ತಿತ್ತು. (ಧರ್ಮೋ. 21:15-17) ಹಾಗಾಗಿ ಎಲೀಷನು ಎಲೀಯನ ಆಧ್ಯಾತ್ಮಿಕ ಬಾಧ್ಯಸ್ಥನಾಗಿ ಗುರುತಿಸಲ್ಪಡುವಂತೆ ಕೇಳಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೆ ‘ಯೆಹೋವನ ಗೌರವವನ್ನು ಕಾಪಾಡುವದರಲ್ಲಿ ಆಸಕ್ತನಾಗಿದ್ದ’ ಎಲೀಯನಲ್ಲಿದ್ದಂಥ ಅದೇ ಧೈರ್ಯ ತನ್ನಲ್ಲೂ ಬರಬೇಕೆಂದು ಬಯಸುತ್ತಿದ್ದನು.—1 ಅರ. 19:13, 14.
ತನ್ನ ಸೇವಕನ ಕೋರಿಕೆಗೆ ಎಲೀಯ ಹೇಗೆ ಪ್ರತಿಕ್ರಿಯಿಸಿದನು? “ನೀನು ದುರ್ಲಭವಾದದ್ದನ್ನು ಕೇಳಿಕೊಂಡಿ; ಆದರೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವದಾದರೆ ಅದು ದೊರಕುವದು; ಇಲ್ಲವಾದರೆ ದೊರಕುವದಿಲ್ಲ” ಅಂದನು. (2 ಅರ. 2:10) ಎಲೀಯನು ಕೊಟ್ಟ ಉತ್ತರದಲ್ಲಿ ಎರಡು ಅರ್ಥಗಳಿದ್ದವು. ಒಂದು, ಎಲೀಷನು ಕೇಳಿದ್ದು ಸಿಗಬೇಕೋ ಇಲ್ಲವೋ ಅನ್ನುವುದು ಯೆಹೋವನ ಕೈಯಲ್ಲಿದೆ. ಇನ್ನೊಂದು, ಎಲೀಷನಿಗೆ ತಾನು ಕೇಳಿದ್ದು ಸಿಗಬೇಕಾದರೆ ಅವನು ಏನೇ ಆದರೂ ಎಲೀಯನೊಟ್ಟಿಗೇ ಇರುವ ಧೃಢನಿರ್ಧಾರವನ್ನು ಕಾಪಾಡಿಕೊಳ್ಳಬೇಕಿತ್ತು.
ಎಲೀಷನು ಏನನ್ನು ನೋಡಿದನು?
ಎಲೀಯನಲ್ಲಿರುವ ಆತ್ಮದಲ್ಲಿ ಎರಡು ಭಾಗ ಕೊಡುವಂತೆ ಎಲೀಷನು ಕೇಳಿದ್ದಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? “ಅವರು ಮಾತಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಳಿಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಹೋದನು. ಎಲೀಷನು ಅದನ್ನು ನೋಡುತ್ತಾ” ಇದ್ದನು ಎಂದು ಬೈಬಲ್ ಹೇಳುತ್ತದೆ.a ಎಲೀಷನಿಗೆ ಯೆಹೋವನು ಕೊಟ್ಟ ಉತ್ತರ ಇದೇ ಆಗಿತ್ತು! ಎಲೀಯನು ಹೋಗುವುದನ್ನು ಎಲೀಷನು ಕಣ್ಣಾರೆ ಕಾಣುವ ಅವಕಾಶವನ್ನು ಯೆಹೋವನು ಕೊಟ್ಟನು. ಅವನಿಗೆ ಎಲೀಯನಲ್ಲಿರುವ ಆತ್ಮದಲ್ಲಿ ಎರಡು ಪಾಲು ಸಿಕ್ಕಿತು. ಅವನು ಪ್ರವಾದಿಯ ಆಧ್ಯಾತ್ಮಿಕ ಬಾಧ್ಯಸ್ಥನಾದನು.—2 ಅರ. 2:11-14.
ಎಲೀಯನು ಹೋಗುವಾಗ ಬಿದ್ದ ಅವನ ಕಂಬಳಿಯನ್ನು ಎಲೀಷನು ಎತ್ತಿಕೊಂಡು ಹಾಕಿಕೊಂಡನು. ಆ ಕಂಬಳಿ ಎಲೀಷನು ಯೆಹೋವನ ಪ್ರವಾದಿಯಾಗಿದ್ದಾನೆಂದು ಸೂಚಿಸುತ್ತಿತ್ತು. ನಂತರ ಅವನು ಯೊರ್ದನ್ ನದಿಯ ನೀರನ್ನು ಎರಡು ಭಾಗ ಮಾಡಿದ್ದು ಅವನನ್ನು ಪ್ರವಾದಿಯಾಗಿ ನೇಮಿಸಲಾಗಿದೆ ಎನ್ನುವುದಕ್ಕೆ ಇನ್ನೊಂದು ರುಜುವಾತಾಗಿತ್ತು.
ಸುಳಿಗಾಳಿಯ ಮುಖಾಂತರವಾಗಿ ಎಲೀಯನು ಏರಿಹೋಗಿದ್ದನ್ನು ನೋಡಿದ್ದು ಎಲೀಷನ ಮೇಲೆ ತುಂಬ ಪ್ರಭಾವ ಬೀರಿರಬೇಕು. ಅವನೇನು ಪ್ರತಿದಿನ ಅಗ್ನಿಮಯವಾದ ರಥರಥಾಶ್ವಗಳನ್ನು ನೋಡುತ್ತಿರಲಿಲ್ಲ! ತಾನು ಕೇಳಿಕೊಂಡಿದ್ದನ್ನು ಯೆಹೋವನು ಕೊಟ್ಟನು ಎನ್ನುವುದನ್ನು ಅವನು ಈ ಮೂಲಕ ತಿಳುಕೊಂಡನು. ಇಂದು ನಾವು ಪ್ರಾರ್ಥಿಸುವಾಗ ಅಗ್ನಿಯಿಂದ ಕೂಡಿದ ರಥರಥಾಶ್ವಗಳ ದರ್ಶನ ನಮಗಾಗುವುದಿಲ್ಲವಾದರೂ ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ತನ್ನ ಅಪಾರ ಶಕ್ತಿಯನ್ನು ಬಳಸುವನು ಎಂಬ ಭರವಸೆ ನಮಗಿರಸಾಧ್ಯ. ಯೆಹೋವನು ತನ್ನ ಸಂಘಟನೆಯ ಭೂಭಾಗವನ್ನು ಆಶೀರ್ವದಿಸುತ್ತಿರುವುದನ್ನು ನಾವು ನೋಡುವುದು, ಆತನ ಸ್ವರ್ಗೀಯ ರಥ ರಭಸದಿಂದ ಸಾಗುವುದನ್ನು ‘ಕಂಡಂತೆ’.—ಯೆಹೆ. 10:9-13.
ಎಲೀಷ ಅನೇಕ ಸನ್ನಿವೇಶಗಳಲ್ಲಿ ಯೆಹೋವನ ಮಹಾನ್ ಶಕ್ತಿಯನ್ನು ಅನುಭವಿಸಿ ನೋಡಿದನು. ದೇವರ ಪವಿತ್ರಾತ್ಮ ಶಕ್ತಿಯಿಂದ ಈ ಪ್ರವಾದಿ 16 ಅದ್ಭುತಕಾರ್ಯಗಳನ್ನು ಮಾಡಿದನು. ಅಂದರೆ ಎಲೀಯ ಮಾಡಿದ್ದರ ಎರಡು ಪಟ್ಟು!b ಎಲೀಷನು ಎರಡನೇ ಸಾರಿ ಅಗ್ನಿಮಯ ರಥರಥಾಶ್ವಗಳನ್ನು ಕಂಡದ್ದು ದೋತಾನಿನಲ್ಲಿ, ಲೇಖನದ ಆರಂಭದಲ್ಲಿ ತಿಳಿಸಿದ ಸನ್ನಿವೇಶದಲ್ಲಿ.
ಎಲೀಷ ಯೆಹೋವನಲ್ಲಿ ಭರವಸೆಯಿಟ್ಟನು
ದೋತಾನಿನಲ್ಲಿ ವೈರಿಗಳಿಂದ ಸುತ್ತುವರಿದಾಗಲೂ ಎಲೀಷ ಶಾಂತನಾಗಿ ಉಳಿದನು. ಯಾಕೆ? ಯಾಕೆಂದರೆ ಯೆಹೋವನಲ್ಲಿ ಅವನು ಬಲವಾದ ನಂಬಿಕೆ ಇಟ್ಟಿದ್ದನು. ನಮ್ಮಲ್ಲೂ ಅಂಥ ನಂಬಿಕೆ ಇರಬೇಕು. ಅದಕ್ಕಾಗಿ ನಾವು ಯೆಹೋವನ ಪವಿತ್ರಾತ್ಮ ಶಕ್ತಿಗಾಗಿ ಪ್ರಾರ್ಥಿಸೋಣ. ಆಗ ಪವಿತ್ರಾತ್ಮದ ಫಲದ ಅಂಶವಾಗಿರುವ ನಂಬಿಕೆಯನ್ನು ಮತ್ತು ಇನ್ನಿತರ ಗುಣಗಳನ್ನು ತೋರಿಸಲು ಆಗುತ್ತೆ.—ಲೂಕ 11:13; ಗಲಾ. 5:22, 23.
ದೋತಾನಿನಲ್ಲಾದ ಘಟನೆ ಕೂಡ ಎಲೀಷನಿಗೆ ಯೆಹೋವನಲ್ಲಿ ಮತ್ತು ಆತನ ಅದೃಶ್ಯ ದೇವದೂತ ಸೈನ್ಯದಲ್ಲಿ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿತು. ದೇವದೂತರ ಸೈನ್ಯ ಪಟ್ಟಣವನ್ನೂ ಶತ್ರುಗಳನ್ನೂ ಸುತ್ತುವರಿದಿದ್ದನ್ನು ಪ್ರವಾದಿ ನೋಡಿದನು. ಶತ್ರುಗಳನ್ನು ಕುರುಡರನ್ನಾಗಿ ಮಾಡುವ ಮೂಲಕ ದೇವರು ಎಲೀಷನನ್ನು ಮತ್ತವನ ಸೇವಕನನ್ನು ಅದ್ಭುತಕರವಾಗಿ ರಕ್ಷಿಸಿದನು. (2 ಅರ. 6:17-23) ಆ ಕ್ಲಿಷ್ಟಕರ ಸನ್ನಿವೇಶದಲ್ಲಿ ಇತರ ಸಂದರ್ಭಗಳಂತೆಯೇ ಎಲೀಷನು ಯೆಹೋವನಲ್ಲಿ ಸಂಪೂರ್ಣ ಭರವಸೆ ಇಟ್ಟನು.
ಎಲೀಷನಂತೆ ನಾವೂ ಯೆಹೋವನಲ್ಲಿ ಭರವಸೆಯಿಡೋಣ. (ಜ್ಞಾನೋ. 3:5, 6) ಹಾಗೆ ಮಾಡುವಾಗ ದೇವರೇ “ನಮ್ಮನ್ನು ಕಟಾಕ್ಷಿಸಿ ಆಶೀರ್ವದಿಸು”ತ್ತಾನೆ. (ಕೀರ್ತ. 67:1) ಅಗ್ನಿಮಯ ರಥರಥಾಶ್ವಗಳು ನಮ್ಮ ಸುತ್ತಲಿಲ್ಲ ನಿಜ. ಆದರೆ ಬರಲಿರುವ “ಮಹಾ ಸಂಕಟ”ದಲ್ಲಿ ಯೆಹೋವನು ನಮ್ಮ ಲೋಕವ್ಯಾಪಕ ಸಹೋದರ ಬಳಗವನ್ನು ಖಂಡಿತ ಕಾಪಾಡುವನು. (ಮತ್ತಾ. 24:21; ಪ್ರಕ. 7:9, 14) ಅಲ್ಲಿಯವರೆಗೂ “ದೇವರು ನಮ್ಮ ಆಶ್ರಯ” ಎನ್ನುವುದನ್ನು ಮರೆಯದಿರೋಣ.—ಕೀರ್ತ. 62:8.
a ಯೆಹೋವನು ಮತ್ತು ದೇವದೂತರು ವಾಸಿಸುವ ಸ್ಥಳವಾಗಿರುವ ಅಕ್ಷರಾರ್ಥ ಸ್ವರ್ಗಕ್ಕೆ ಎಲೀಯನು ಏರಿಹೋಗಲಿಲ್ಲ. 1997, ಸೆಪ್ಟೆಂಬರ್ 15ರ ಕಾವಲಿನಬುರುಜು, ಪುಟ 15 ನೋಡಿ.
b 2005, ಆಗಸ್ಟ್ 1ರ ಕಾವಲಿನಬುರುಜು, ಪುಟ 10ನ್ನು ನೋಡಿ.